Pages

Thursday, May 23, 2013

ನ್ಯಾಯ ಶಾಸ್ತ್ರ

   
              ವೇದಸುಧೆಯ ಅಭಿಮಾನಿಗಳಲ್ಲಿ ವಿನಂತಿ, ಹಾಸನದ ಜನಮಿತ್ರ ಸ್ಥಳೀಯ ಪತ್ರಿಕೆಯಲ್ಲಿ ಪ್ರತೀ ಭಾನುವಾರ ನಾನು ಬರೆಯುತ್ತಿರುವ "ಎಲ್ಲರಿಗಾಗಿ ವೇದ " ಲೇಖನವನ್ನು  ವೇದಸುಧೆಯಲ್ಲೂ ಪ್ರಕಟಿಸುವುದಾಗಿ ತಿಳಿಸಿದ್ದೆ. ಆದರೆ ಈಗಾಗಲೇ ಅದು 28 ಲೇಖನಗಳಾಗಿದ್ದು  ಪ್ರತೀ ವಾರವೂ ಹೆಚ್ಚುತ್ತಲೇ ಹೋಗುತ್ತದೆ. ಆದ್ದರಿಂದ ಇದುವರಗೆ ಪ್ರಕಟಿಸಿರುವ ಎಲ್ಲಾ  ಲೇಖನಗಳನ್ನೂ ಇದೇ ಬಳಗದ "ವೇದಭಾರತೀ" ಬ್ಲಾಗ್ ನಲ್ಲಿ ಪ್ರಕಟಿಸುತ್ತಿರುವೆ. ಇಂದು ಆರಂಭದ ಎಂಟು ಲೇಖನಗಳು ಪ್ರಕ   ಟವಾಗಿವೆ. ಲೇಖನ ಓದಲು  ವೇದಸುಧೆಯ ತಲೆಬರಹದಡಿ ಕೊಂಡಿ ಇದೆ. ಇಲ್ಲಿಂದಲೇ ವೇದ ಭಾರತಿಯನ್ನು ಪ್ರವೇಶಿಸ ಬಹುದಾಗಿದೆ. ನೀವು ಓದಿ ನಿಮ್ಮ ಅಭಿಪ್ರಾಯ ತಿಳಿಸಿದರೆ ಲೇಖನವನ್ನು ಉತ್ತಮಪಡಿಸಿಕೊಳ್ಳಲು ಸಹಾಯವಾಗುತ್ತದೆ. ನಿಮ್ಮ ಪ್ರಶ್ನೆ ಇದ್ದರೆ ವೇದಾಧ್ಯಾಯೀ ಸುಧಾಕರ ಶರ್ಮರ ಸಹಾಯ ಪಡೆಯುವೆ.

ಕುಸುಮ: 29

“ಎಲ್ಲರಿಗಾಗಿ ವೇದ” - ಚತುರ್ವರ್ಣಗಳು
                    
ಹಿಂದಿನ ಸಂಚಿಕೆಯಲ್ಲಿ ಮನುಷ್ಯರೆಲ್ಲರೂ ಸಮಾನರೆಂಬುದನ್ನು ವೇದ ಮಂತ್ರದ ಆಧಾರದಿಂದ ವಿಚಾರಮಾಡಿದ್ದೇವೆ. ಆದರೂ ವೇದದಲ್ಲಿ  ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ  ನಾಲ್ಕು ವರ್ಣಗಳಿವೆಯಲ್ಲಾ! ಇದು ತಾರತಮ್ಯವಲ್ಲವೇ? ಎಂಬ ಸಂದೇಹವು ಬರಬಹುದು.ಈ ಬಗ್ಗೆ ವಿಚಾರಮಾಡುವಾಗ ಪೂರ್ವಾಗ್ರಹವಿಲ್ಲದೆ ವಿಚಾರಮಾಡಿದರೆ ನಮಗೆ ಉತ್ತರ ಸಿಕ್ಕೀತು. ಭಗವದ್ ಗೀತೆಯಲ್ಲಿ ಶ್ರೀ ಕೃಷ್ಣ ಹೇಳುವ ಮಾತಿನಿಂದಲೇ ಆರಂಭ ಮಾಡೋಣ.
ಚಾತುರ್ವರ್ಣ್ಯಂ  ಮಯಾ ಸೃಷ್ಟಂ ಗುಣಕರ್ಮ ವಿಭಾಗಶ: |
“ಗುಣ ಮತ್ತು ಕರ್ಮಗಳನುಸಾರವಾಗಿ  ಬ್ರಾಹ್ಮಣ , ಕ್ಷತ್ರಿಯ, ವೈಶ್ಯ ಮತ್ತು ಶೂದ್ರ” ಎಂಬ ನಾಲ್ಕು ವರ್ಣಗಳು ನನ್ನಿಂದ ರಚಿಸಲ್ಪಟ್ಟಿವೆ- ಎಂಬುದು ಶ್ರೀ ಕೃಷ್ಣನ ಮಾತು.  ಹಾಗಾದರೆ ವರ್ಣ ಎಂದರೇನು?  ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಈ ವರ್ಣಗಳ ಕರ್ತವ್ಯಗಳೇನು? ಎಂಬ ಬಗ್ಗೆ ವಿಚಾರ ಮಾಡೋಣ.
ವರ್ಣ ಎಂದರೇನು?   
ವರ್ಣ ಮತ್ತು ಈಗ ರೂಢಿಯಲ್ಲಿರುವ ಜಾತಿ ಈ ಎರಡೂ ಪದಗಳು ಒಂದೇ ಎಂಬ ಭಾವನೆ ಜನ ಮಾನಸದಲ್ಲಿ ಉಳಿದು ಬಿಟ್ಟಿದೆ. ಇದಕ್ಕೆ ಪುಷ್ಟಿ ಕೊಡುವಂತೆ ರೂಢಿಯಲ್ಲಿರುವ ಬ್ರಾಹ್ಮಣ ಇತ್ಯಾದಿ ಜನರನ್ನು ಸವರ್ಣೀಯರು ಎಂದು ಕರೆಯುವುದೂ ರೂಢಿಯಲ್ಲಿದೆ. ವೇದದ ಅನುಸಾರ ವರ್ಣ ಪದ ಪ್ರಯೋಗಕ್ಕೂ ಜಾತಿ ಎಂಬ ಪದಕ್ಕೂ ಅರ್ಥ ಅಜಗಜಾಂತರ. ನಿಜವಾಗಿ ಜಾತಿ ಎಂದರೇನು? ಹುಟ್ಟಿನಿಂದ ಬರುವುದು ಜಾತಿ. ನಾವೆಲ್ಲಾ ಮನುಶ್ಯಜಾತಿ ಎಂಬುದಷ್ಟೇ ಸತ್ಯ. ಕಾರಣ ಜಾತಿ ಎಂದರೆ ಹುಟ್ಟಿನಿಂದ ಸಾಯುವವರೆಗೂ ಇರುವಂತಹದ್ದು. ಮನುಶ್ಯನಾಗಿ ಹುಟ್ಟಿದ್ದೇವೆ ಮನುಶ್ಯನಾಗಿ ಸಾಯುತ್ತೇವೆ. ಅಂತೆಯೇ ಆನೆ, ನಾಯಿ ಇತ್ಯಾದಿ ಪ್ರಾಣಿಗಳೂ ಕೂಡ. ಆದರೆ ವರ್ಣ ಎಂದರೆ ನಾವು ಆರಿಸಿಕೊಳ್ಳುವಂತಹದ್ದು. ಉಧಾಹರಣೆಗೆ ಒಬ್ಬ ವಿದ್ಯಾರ್ಥಿ ಓದಿ ವಕೀಲನಾಗುತ್ತಾನೆ, ಗುಮಾಸ್ತನಾಗುತ್ತಾನೆ, ವೈದ್ಯನಾಗುತ್ತಾನೆ. ಇವೆಲ್ಲಾ ಹುಟ್ಟಿನಿಂದ ಬಂದ ಪದವಿಗಳಲ್ಲ. ತಾನು ಆರಿಸಿಕೊಂಡಿದ್ದು.  ಹೀಗೆಯೇ ಒಂದು ಸಾಮಾಜಿಕ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಡೆಸಲು ಮನುಷ್ಯನ ಕರ್ತವ್ಯವನ್ನು  ನಾಲ್ಕು ಭಾಗಗಳಾಗಿ ವಿಂಗಡಿಸಿದರು. ಅದರಲ್ಲಿ ಮೊದಲನೆಯದು  ಜ್ಞಾನಪ್ರಸಾರ, ಎರಡನೆಯ ವಿಭಾಗ ದೇಶದ ರಕ್ಷಣೆ ಮತ್ತು ರಾಜ್ಯಭಾರ, ಮೂರನೆಯದು ಸಂಪನ್ಮೂಲ ಸಂಗ್ರಹ-ವಿತರಣೆ, ನಾಲ್ಕನೆಯದು ಶ್ರಮದ ಕೆಲಸ. ಈ ನಾಲ್ಕೂ ವರ್ಣಗಳೂ ಸಾಮರಸ್ಯದಿಂದ ಕರ್ತವ್ಯನಿರ್ವಹಿಸಿದಾಗ ಮಾತ್ರ ಒಂದು ಸುಂದರ ಸಮಾಜವನ್ನು                    ಕಾಣ  ಬಹುದಾಗಿತ್ತು. ಅಲ್ಲದೆ ಒಂದೇ ಕುಟುಂಬದಲ್ಲಿ ಈ ನಾಲ್ಕೂ ವರ್ಣೀಯರೂ ಇರಬಹುದಾಗಿತ್ತು. ಒಂದು ಕುಟುಂಬದ ಎಲ್ಲಾ ಸದಸ್ಯರೂ ಒಂದೇ ವರ್ಣವನ್ನು ಆರಿಸಿಕೊಳ್ಳಬೇಕೆಂಬ ನಿಯಮವೇನಿರಲಿಲ್ಲ. ಅವರವರ ಗುಣ-ಸ್ವಭಾವಗಳಿಗೆ ತಕ್ಕಂತೆ ಆಯಾ ವರ್ಣವನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವು ಪ್ರತಿಯೊಬ್ಬ ಮನುಶ್ಯನಿಗೂ ಇತ್ತು. ಅಪ್ಪ ಬ್ರಾಹ್ಮಣ ವರ್ಣವನ್ನು ಆರಿಸಿಕೊಂಡಿದ್ದರೆ ಮಕ್ಕಳೆಲ್ಲರೂ ಬ್ರಾಹ್ಮಣ ವರ್ಣವನ್ನೇ ಆರಿಸಿಕೊಳ್ಳಬೇಕೆಂಬ ನಿಯಮವೇನಿರಲಿಲ್ಲ. ಅದು ಅವನ ಇಚ್ಚೆ. ಮಗನಿಗೆ ವ್ಯಾಪಾರ ಮಾಡುವ ಬಗ್ಗೆ ಆಸಕ್ತಿ ಇದ್ದರೆ ಅವನು ವೈಶ್ಯ ವರ್ಣವನ್ನು ಆಯ್ಕೆ ಮಾಡಿಕೊಳ್ಳಬಹುದಿತ್ತು, ಮತ್ತೊಬ್ಬ ಮಗನಿಗೆ ಶ್ರಮದ ಕೆಲಸ ಮಾಡಲು ಇಚ್ಛೆ ಮತ್ತು ಸ್ವಭಾವವಿದ್ದರೆ ಅವನು ಶೂದ್ರ ವರ್ಣವನ್ನು ಆಯ್ಕೆ ಮಾಡಿಕೊಳ್ಳಬಹುದಿತ್ತು. ಒಂದು ಅಂಶವನ್ನು ಸರಿಯಾಗಿ ಗಮನಿಸಬೇಕು. ಶೂದ್ರ ತಂದೆಯ ಮಗ ಶೂದ್ರವರ್ಣವನ್ನೇ ಅಥವಾ ಬ್ರಾಹ್ಮಣ ತಂದೆಯ ಮಗ ಬ್ರಾಹ್ಮಣ ವರ್ಣವನ್ನೇ ಆಯ್ಕೆ ಮಾಡಿಕೊಳ್ಳಬೇಕಾಗಿರಲಿಲ್ಲ. ಅಷ್ಟೇ ಅಲ್ಲ ವೈದ್ಯನ ಮಗನಾಗಿ ಹುಟ್ಟಿದ ಮಾತ್ರಕ್ಕೆ ವೈದ್ಯನಾಗಲು ಸಾಧ್ಯವೇ? ಅವನು MBBS ಓದಿ ನಂತರವಷ್ಟೇ ವೈದ್ಯನಾಗಬೇಕಲ್ಲವೇ? ಅಥವಾ ಅವನು ಓದಿ ಪೋಲೀಸ್ ಅಧಿಕಾರಿಯೂ ಆಗಬಹುದು ಇಲ್ಲವೇ ಕೃಷಿಕನೂ ಆಗಬಹುದಲ್ಲವೇ? ಹಾಗೆಯೇ  ಬ್ರಾಹಣನ ಮನೆಯಲ್ಲಿ ಹುಟ್ಟಿದ ಮಾತ್ರಕ್ಕೆ ಅವನು ಬ್ರಾಹ್ಮಣನಾಗುತ್ತಿರಲಿಲ್ಲ. ಅವನ ಗುಣ ಸ್ವಭಾವಗಳಿಗನುಗುಣವಾಗಿ ಅವನು ಯಾವ ವರ್ಣವನ್ನು  ಆಯ್ಕೆ ಮಾಡಿಕೊಳ್ಳುತ್ತಿದ್ದನೋ ಆ ವರ್ಣ ಅವನದಾಗುತ್ತಿತ್ತು. ಹೀಗೆ ನಾಲ್ಕೂ ವರ್ಣಗಳನ್ನೂ ಅವರವರ ಸ್ವಭಾವಗಳಿಗೆ ತಕ್ಕಂತೆ ಆಯ್ಕೆಮಾಡಿಕೊಳ್ಳುತ್ತಿದ್ದರು. ಈ ನಾಲ್ಕೂ ವರ್ಣಗಳೂ ಒಂದು ಸಮಾಜದ ವ್ಯವಸ್ಥೆಗೆ ಪೂರಕವಾಗಿ ಸಾಮರಸ್ಯದಿಂದ ಕಾರ್ಯನಿರ್ವಹಿಸುತ್ತಿದ್ದವು. ಇನ್ನು ಮುಂದೆ ನಾಲ್ಕೂ ವರ್ಣದ ಕರ್ತವ್ಯಗಳೇನೆಂದು ವಿಚಾರ ಮಾಡೋಣ.
ಬ್ರಾಹ್ಮಣ ವರ್ಣ:-
ಬ್ರಾಹ್ಮಣಾಸ: ಸೋಮಿನೋ ವಾಚಮಕ್ರತ ಬ್ರಹ್ಮ ಕೃಣ್ವಂತ: ಪರಿವತ್ಸರೀಣಮ್ |
ಅಧ್ವರ್ಯವೋ ಘರ್ಮಿಣ: ಸಿಷ್ವಿದಾನಾ ಆವಿರ್ಭವಂತಿ ಗುಹ್ಯಾ ನ ಕೇ ಚಿತ್ ||
[ಋಕ್ 7.103.8]
ಸೋಮಿನ: = ಬ್ರಹ್ಮಾನಂದದ ಸವಿಯನ್ನು ಕಾಣುವವರು[ಪಂ.ಸುಧಾಕರ ಚತುರ್ವೇದಿಗಳ ವ್ಯಾಖ್ಯೆ]
ಬ್ರಾಹ್ಮಣಾಸ: = ಬ್ರಹ್ಮಜ್ಞಾನಿಗಳು
ಪರಿವತ್ಸರೀಣಮ್ = ವರ್ಷ ಪೂರ್ಣ
ಬ್ರಹ್ಮ ಕೃಣ್ವಂತ: = ಜ್ಞಾನವನ್ನು ಪ್ರಸರಿಸಿಸುತ್ತಾ
ವಾಚಂ ಅಕ್ರತ = ಉಪದೇಶಿಸುತ್ತಾರೆ
ಅಧ್ವರ್ಯ: = ಅಹಿಂಸಕರಾದ
ಘರ್ಮಿಣ: = ತಪಸ್ವಿಗಳು
ಸಿಷ್ಟಿದಾನಾ: = ಶ್ರಮಿಸುತ್ತಾ
ಕೇ  ಚಿತ್ = ಕೆಲವರು
ಗುಹ್ಯಾ: ನ = ಗೂಢವಾಗಿದ್ದವರಂತೆ
ಆವಿರ್ಭವಂತಿ = ಆವಿರ್ಭವಿಸುತ್ತಾರೆ
 ಭಾವಾರ್ಥ:-
ಬ್ರಹ್ಮಾನಂದದ ಸವಿಯನ್ನು ಕಾಣುವ ಬ್ರಹ್ಮಜ್ಞಾನಿಗಳಾದ ಬ್ರಾಹ್ಮಣರು  ನಿರಂತರವಾಗಿ  ಈಶ್ವರೀಯ ಜ್ಞಾನವನ್ನು ಪ್ರಸರಿಸಿಸುತ್ತಾ, ಅಹಿಂಸಕರಾಗಿದ್ದು, ತಪಸ್ವಿಗಳೂ ಆದ ಇವರು ಅವಿರತ ದುಡಿಮೆಯಲ್ಲಿ ವಿಶ್ವಾಸವಿಟ್ಟವರು, ಇಂತಹವರು ಬಯಸದೆಯೂ ಪ್ರಕಟಗೊಳ್ಳುತ್ತಾರೆ. ನಾಲ್ಕು ಶಬ್ಧಗಳಲ್ಲಿ ಬ್ರಾಹ್ಮಣನ ಕರ್ತವ್ಯವನ್ನು ಇಲ್ಲಿ ಹೇಳಿದ್ದರೂ  ಒಂದೊಂದು ಶಬ್ಧವೂ ಅದೆಷ್ಟು ಮಹತ್ವ ಉಳ್ಳದ್ದು ಎಂಬುದನ್ನು ಸ್ವಲ್ಪ ವಿಚಾರಮಾಡೋಣ.ಮೊದಲನೆಯದು….
ನಿರಂತರವಾಗಿ  ಈಶ್ವರೀಯ ಜ್ಞಾನದ ಪ್ರಸಾರ: ಒಬ್ಬ ವ್ಯಕ್ತಿ ನಿಜವಾದ ಬ್ರಾಹ್ಮಣನೆನಿಸಿಕೊಳ್ಳಬೇಕಾದರೆ ಅವನು ನಿರಂತರವಾಗಿ ವೇದ ಜ್ಞಾನದ  ಪ್ರಸಾರಮಾಡಬೇಕು. ಎರಡನೆಯದು…..
ಅಹಿಂಸಕ: ಅವನು ಅಹಿಂಸಕನಾಗಿರಬೇಕು. ಅಹಿಂಸೆ ಎಂಬ ಪದಕ್ಕೆ ಅದೆಷ್ಟು ವಿಶಾಲಾರ್ಥವಿದೆಯೋ! ಕೇವಲ   ಪ್ರಾಣಿ ಹಿಂಸೆ ಮಾಡದವನಿಗೆ ಅಹಿಂಸಕನೆಂದು ಹೇಳಲಾಗದು. ಅವನ ಮಾತಿನಿಂದ, ನಡತೆಯಿಂದ,ಅವನ ವ್ಯವಹಾರದಿಂದ ಯಾರಿಗೂ ನೋವಾಗದಂತೆ ನಡೆಯುವವನನ್ನು ಅಹಿಂಸಕನೆಂದು ಚಿಕ್ಕದಾದ ವಿವರಣೆಯಲ್ಲಿ ಸಧ್ಯಕ್ಕೆ ಅರ್ಥ ಮಾಡಿಕೊಳ್ಳೋಣ. ಅದರ ವ್ಯಾಪ್ತಿ ಇಷ್ಟಕ್ಕೇ ಮುಗಿಯುವುದಿಲ್ಲವಾದರೂ ಇಷ್ಟಾದರೂ ಗುಣಗಳಿದ್ದರೆ ಅವನನ್ನು ಅಹಿಂಸಕನೆಂದು ತಿಳಿಯಬಹುದು.
ತಪಸ್ವಿ: ಅವನು ತಪಸ್ವಿಯಾಗಿರಬೇಕು. ಇಲ್ಲೂ ಈ ಪದದ ವ್ಯಾಪ್ತಿ ಬಲು ದೊಡ್ದದು. ಸಧ್ಯಕ್ಕೆ ಅದರ ಅರ್ಥಗಳಲ್ಲಿ ಒಂದಾದ “ ವ್ರತ ನಿಯಮಾದಿಗಳಿಂದ ದೇಹವನ್ನು ದಂಡಿಸುತ್ತಾ ಧ್ಯಾನ ಮಾಡುವವನು” ಎಂಬ ಅರ್ಥವನ್ನಷ್ಟೇ ತೆಗೆದುಕೊಳ್ಳೋಣ. ಮುಂದಿನದು…..
ದುಡಿಮೆಯಲ್ಲಿ ವಿಶ್ವಾಸವಿಟ್ಟವರು: ಅವನು ಸುಮ್ಮನೆ ಸೋಮಾರಿಯಾಗಿ ಕುಳಿತು ತಿನ್ನುವಂತಿಲ್ಲ. ದುಡಿಮೆಯಲ್ಲಿ ವಿಶ್ವಾಸ ಇಟ್ಟಿರಬೇಕು.
ಮೇಲಿನ ಅಂಶಗಳನ್ನು ಗಣನೆಗೆ ತೆಗೆದುಕೊಂಡಮೇಲೆ, ಇಷ್ಟೂ ಅರ್ಹತೆಗಳಿದ್ದರೆ ಅವನನ್ನು “ಬ್ರಾಹ್ಮಣ” ಎನ್ನಬಹುದು. ಬ್ರಾಹ್ಮಣನ ಕರ್ತವ್ಯಗಳ ಬಗ್ಗೆ ವೇದವು ಇನ್ನೂ ಬಹಳ ವಿಚಾರಗಳನ್ನು ತಿಳಿಸುತ್ತದೆ. ಮುಂದಿನ ಲೇಖನಗಳಲ್ಲಿ ಆ ಬಗ್ಗೆ ವಿಚಾರ ಮಾಡೋಣ.

ಕುಸುಮ: 28


“ಎಲ್ಲರಿಗಾಗಿ ವೇದ”
ಕುಸುಮ: 28                                                                          ದಿನಾಂಕ : 19.5.2013
ವೇದದಲ್ಲಿ ಹೇಳಿರುವ ಸಂಧ್ಯೋಪಾಸನೆ ಬಗ್ಗೆ ಬರೆಯಬೇಕಾಗಿದೆ, ಆದರೆ ಸಂಧ್ಯೋಪಾಸನೆ ಎಂದೊಡನೆ “ಇದು ಜನಿವಾರ ಹಾಕಿಕೊಂಡಿರುವ ಹಿಂದು ಸಮಾಜದ ಒಂದು ವರ್ಗಕ್ಕೆ” ಎಂಬ ಭಾವನೆ ಬರುವುದು ಸಹಜ. ಕಾರಣ ಅದೆಷ್ಟೋ ಶತಮಾನಗಳಿಂದ ಹಿಂದು ಸಮಾಜದಲ್ಲಿ ಜಾತಿ ಪದ್ದತಿ ರೂಢಿಯಲ್ಲಿ ಬಂದು ಬಿಟ್ಟಿದೆ.ಅದು ಹೇಗೆ ಬಂತೋ,ಅದರ ಬಗ್ಗೆ ನಾನು ತಲೆಕೆಡಸಿಕೊಳ್ಳಲಾರೆ. ಆದರೆ ಒಂದು ಮಾತು ಸತ್ಯ.ವೇದದಲ್ಲಿ ಜಾತಿಯ ತಾರತಮ್ಯವಿಲ್ಲ. ವೇದವು ಮನುಕುಲದ ಅಭ್ಯುದಯಕ್ಕಾಗಿ ಎಂದು ವೇದವು ಸಾರಿ ಸಾರಿ ಹೇಳುತ್ತಿದೆ.ಆದರೆ ಕಳೆದ ಮೂರ್ನಾಲ್ಕು ಶತಮಾನಗಳ ಚರಿತ್ರೆಯನ್ನು ಅವಲೋಕಿಸಿದರೆ ಭಾರತದಲ್ಲಿ ಜಾತಿ ಪದ್ದತಿ ಬಲು ಗಟ್ಟಿಯಾಗಿ ಬೇರು ಬಿಟ್ಟಿರುವುದು ನಿಜ. ಮೇಲು-ಕೀಳು ಭಾವನೆಯು ಹಿಂದುಸಮಾಜದಲ್ಲಿ ದೊಡ್ದ ರಾದ್ಧಾಂತವನ್ನೇ ಮಾಡಿಬಿಟ್ಟಿದೆ. ಇದರಿಂದಾಗಿ ಹಿಂದುಸಮಾಜವು ನೂರಾರು ಜಾತಿಗಳಲ್ಲಿ ಹರಿದುಹಂಚಿಹೋಗಿರುವುದು ಸುಳ್ಳಲ್ಲ. ಜಾತಿ ವ್ಯವಸ್ಥೆ ಬಂದ ಪರಿಣಾಮ ಸ್ಪೃಶ್ಯ-ಅಸ್ಪೃಶ್ಯ ಭಾವನೆ, ಜಾತಿಯಕೇರಿಗಳು, ನಡವಳಿಕೆ, ಆಹಾರಪದ್ದತಿ ಎಲ್ಲವೂ ವೆತ್ಯಾಸವಾಗಿ ವೇದಧರ್ಮವು ನಶಿಸಿರುವ ಚಿತ್ರಣ ನಮ್ಮ ಕಣ್ ಮುಂದಿದೆ.ಶ್ರೀಮಂತರು ಮತ್ತು ಮೇಲ್ವರ್ಗದವರು ಬಡವರನ್ನು ಹಿಂದುಳಿದವರನ್ನು  ಅಮಾನುಶವಾಗಿ ನಡೆಸಿಕೊಂಡಿರುವುದು ವೈದಿಕ ಧರ್ಮದ ಅವನತಿಯ ಕನ್ನಡಿಯಾಗಿದೆ.ಈ ಎಲ್ಲಾ ಸತ್ಯವನ್ನು ಹೊಟ್ಟೆಯಲ್ಲಿಟ್ಟುಕೊಂಡೇ ನಿಜವಾದ ವೇದಧರ್ಮದ ಬಗ್ಗೆ ವಿಚಾರ ಮಾಡೋಣ. ವೇದದಲ್ಲಿ ಮಾನವರೆಲ್ಲರೂ ಸಮಾನರೆಂದು ಸಾರಿ ಸಾರಿ ಹೇಳಿದೆ. ಆ ಮಂತ್ರಗಳ ಬಗ್ಗೆಯೂ ವಿಚಾರ ಮಾಡೋಣ.ವರ್ಣಾಶ್ರಮದ ಬಗ್ಗೆ ವಿವರಿಸಲಾಗಿದೆ. ಅದರ ಬಗ್ಗೆಯೂ ವಿಚಾರ ಮಾಡೋಣ. ವರ್ಣಾಶ್ರಮವೆಂದೊಡನೆ ಬ್ರಾಹ್ಮಣ-ಶೂದ್ರ ಪದಗಳ ಪ್ರಯೋಗವನ್ನು ಮನಸ್ಸಿನಲ್ಲಿಟ್ಟುಕೊಂಡು ಪೂರ್ವಾಗ್ರಹದಿಂದ ಯೋಚಿಸಬಾರದೆಂದು ಮನವಿ ಮಾಡುತ್ತಾ ಮುಂದಿನ ವಿಚಾರಗಳಲ್ಲಿ ಓದುಗರಿಗೆ ಒಪ್ಪಿಗೆ ಇಲ್ಲದಿದ್ದರೆ ಸಕಾರಣವಾಗಿ “ನಾನು ಇದನ್ನು ಒಪ್ಪಲಾರೆ,ಎಂದು ತಿಳಿಸಬಹುದು” ಶ್ರೀ ದಯಾನಂದ ಸರಸ್ವತಿಗಳು ಬರೆದಿರುವ ವೇದಭಾಷ್ಯದ ಆಧಾರದಲ್ಲಿ ಇನ್ನು ಮುಂದೆ ಕೆಲವು ವಿಚಾರಗಳನ್ನು ಹೇಳುತ್ತಾ ಮುಂದುವರೆಯುವೆ.
ಋಗ್ವೇದದ ಒಂದು ಮಂತ್ರ ಹೀಗಿದೆ?

ತೇ ಅಜ್ಯೇಷ್ಠಾ ಅಕನಿಷ್ಠಾಸ ಉದ್ಭಿದೋಮಧ್ಯಮಾಸೋ ಮಹಸಾ ವಿ ವಾವೃಧು: |
ಸುಜಾತಾಸೋ ಜನುಷಾ ಪೃಷ್ನಿಮಾತರೋ ದಿವೋ ಮರ್ಯಾ ಆ ನೋ ಅಚ್ಚಾ ಜಿಗಾತನ ||
[ಋಕ್ ೫.೫೯.೬]
ಅರ್ಥ:-
ಅಜ್ಯೇಷ್ಠಾ: = ಹಿರಿತನವಿಲ್ಲ
ಅಕನಿಷ್ಠಾಸ = ಕನಿಷ್ಠರಲ್ಲ
ಅದ್ಭಿದ: = ಭೂಮಿಯನ್ನು ಸೀಳಿ ಮೇಲೆ ಬಂದವರು
ಅಮಧ್ಯಮಾಸ: = ಮಧ್ಯಮರೂ ಅಲ್ಲ
ಜನುಷಾ = ಹುಟ್ಟಿದಾಗಿನಿಂದಲೂ
ಸುಜಾತಾಸ: = ಉತ್ತಮರು
ಪೃಶ್ನೀಮಾತರ: = ಭೂತಾಯಿಯ ಮಕ್ಕಳು
ದಿವ: =ಇಚ್ಚೆ ಮಾಡುವವರೂ
ಮರ್ಯಾ: = ಮನುಷ್ಯರು
ಸಹಸಾ = ಬಲದಿಂದ
ವಿ ವಾವೃಧು: = ಅತಿಶಯ ವೃದ್ಧಿಹೊಂದುವರು
ತೇ = ಅವರು
ನ: = ನಮ್ಮ
ಅಚ್ಚಾ = ಉತ್ತಮರೀತಿಯಿಂದ
ಆ,  ಜಿಗಾತನ = ಗುಣಗಾನ ಮಾಡುವರು
ಭಾವಾರ್ಥ:-
ಮನುಷ್ಯರಲ್ಲಿ ಯಾರೂ ದೊಡ್ದವರೂ ಅಲ್ಲ, ಚಿಕ್ಕವರೂ ಅಲ್ಲ, ಮಧ್ಯಮರೂ ಅಲ್ಲ.ಹುಟ್ಟಿದಾಗಿನಿಂದ ಎಲ್ಲರೂ ಉತ್ತಮರು. ಭೂಮಿಯನ್ನು ಸೀಳಿ ಮೇಲೆ ಬಂದ ಇವರು ಭೂತಾಯಿಯ ಮಕ್ಕಳು.ಅವರು ತಮ್ಮ ಉತ್ತಮ ಗುಣಸ್ವಭಾವ ನಡವಳಿಕೆಯಿಂದ ಅತಿಶಯವಾದ ವೃದ್ಧಿ ಹೊಂದುವರು.
ಈ ಮಂತ್ರದಲ್ಲಿ ವೇದವು ಎಲ್ಲಾ ಮನುಷ್ಯರನ್ನೂ ಸಮಾನರೆಂದು ಸ್ಪಷ್ಟವಾದ ಪದಗಳಲ್ಲಿ ಹೇಳಿದೆ “ಹುಟ್ಟಿನಿಂದ ಎಲ್ಲರೂ ಉತ್ತಮರೇ, ಅವರ ಗುಣ ಸ್ವಭಾವ, ನಡವಳಿಕೆಯಿಂದ ಏಳಿಗೆಹೊಂದಬಲ್ಲರು” ಭೂಮಾತೆಯ ಮಕ್ಕಳಾದ ಎಲ್ಲರೂ ಹುಟ್ಟಿನಿಂದ ಉತ್ತಮರೇ ಎಂದು ವೇದವು ಸಾರಿ ಹೇಳುತ್ತದೆ.ಮುಂದಿನ ಮಂತ್ರವನ್ನು ನೋಡೋಣ.
ಅಜ್ಯೇಷ್ಠಾಸೋ ಅಕನಿಷ್ಠಾಸ ಏತೇ ಸಂ ಭ್ರಾತರೋ ವಾವೃಧು: ಸೌಭಗಾಯ|
ಯುವಾ ಪಿತಾ ಸ್ವಪಾ ರುದ್ರ ಏಷಾಂ ಸುದುಘಾ ಪೃಶ್ನಿ: ಸುದಿನಾ ಮರುದ್ಭ್ಯ: ||
[ಋಕ್ ೫.೬೦.೫]
ಅರ್ಥ:-
ಸ್ವಪಾ: = ಶ್ರೇಷ್ಠ ಕರ್ಮಠನು
ಯುವಾ = ಯುವಕನು
ರುದ್ರ: = ಅನ್ಯರನ್ನು ರೋದಿಸುವವನು
ಪಿತಾ = ಪಾಲನೆ ಮಾಡುವವನು
ಏಷಾಂ = ಈ ಎಲ್ಲರ
ಸುದುಘಾ = ಇಷ್ಟಾರ್ಥ ಪೂರ್ಣಗೊಳಿಸುವವಳು
ಸುದಿನಾ = ಉತ್ತಮ ದಿನದಿಂದ
ಪೃಶ್ನಿ: = ವಿಶಾಲ ಬುದ್ಧಿಯ ಭೂಮಾತೆ
ಮರುದ್ಭ್ಯ: = ಮನುಶ್ಯರಿಗೆ 
ಅಜ್ಯೇಷ್ಠಾ: = ಹಿರಿತನವಿಲ್ಲದೇ
ಅಕನಿಷ್ಠಾಸ: = ಕಿರಿತನವಿಲ್ಲದೇ
ಏತೇ = ಇವರೆಲ್ಲರೂ
ಭ್ರಾತರ: = ಸೋದರರು
ಸೌಭಗಾಯ = ಸೌಭಾಗ್ಯಪ್ರಾಪ್ತಿಗಾಗಿ
ಸಂ ವಾವೃಧು: = ಚೆನ್ನಾಗಿ ಪ್ರಯತ್ನಿಸುವರು
ಭಾವಾರ್ಥ:-
ಯಾವ ಮನುಷ್ಯನು ಬಾಲ್ಯ ಮತ್ತು ಕೌಮಾರ್ಯಗಳಲ್ಲಿ ವಿದ್ಯಾರ್ಜನೆ ಮಾಡಿಕೊಂಡು ಉತ್ತಮ ಗುಣಕರ್ಮ ಸ್ವಭಾವವನ್ನು ಅಳವಡಿಸಿಕೊಂಡು ಉತ್ತಮ ಗುಣವತೀ ಕನ್ಯೆಯೊಡನೆ ಗೃಹಸ್ಥಾಶ್ರಮವನ್ನು ಸ್ವೀಕರಿಸಿ ಕರ್ಮಾನುಷ್ಠಾನದಲ್ಲಿ ತೊಡಗುತ್ತಾನೋ ಅವನು ಐಶ್ವರ್ಯವನ್ನೂ ಆನಂದವನ್ನೂ ಅನುಭವಿಸುತ್ತಾನೆ.ಇವರಲ್ಲಿ ದೊಡ್ದವ ಚಿಕ್ಕವ ಎಂಬ ಭೇದವಿಲ್ಲ, ಇವರೆಲ್ಲರೂ ಸೋದರರು.
ಇವೆರಡೂ ಮಂತ್ರಗಳು ಒಂದು ವಿಚಾರವನ್ನಂತೂ ಸ್ಪಷ್ಟಪಡಿಸುತ್ತವೆ. ಭೂಮಾತೆಯ ಮಕ್ಕಳಾದ ಎಲ್ಲರೂ ಹುಟ್ಟಿನಿಂದ ಉತ್ತಮರೇ ಆಗಿದ್ದಾರೆ. ಎಲ್ಲರೂ   ಭೂತಾಯಿಯ ಮಕ್ಕಳಾದ ಮೇಲೆ, ಪರಸ್ಪರ ಸೋದರರು. ಯಾರೂ ದೊಡ್ಡವರೂ ಅಲ್ಲ, ಯಾರೂ ಚಿಕ್ಕವರೂ ಅಲ್ಲ. ಆದರೆ ತಮ್ಮ ತಮ್ಮ ಗುಣ ಸ್ವಭಾವದಿಂದ ನಡವಳಿಕೆಯಿಂದ ಯಾರು ಬೇಕಾದರೂ ಏಳಿಗೆಯನ್ನು ಹೊಂದಬಹುದು. ವೇದದ ಕರೆ ಹೀಗಿರುವಾಗ  ಮನುಷ್ಯರಲ್ಲಿ ಮೇಲು-ಕೀಳು ಭವನೆ ವೇದ ವಿರೋಧಿಯಷ್ಟೇ ಅಲ್ಲ, ಅದು ಮನುಷ್ಯತ್ವದ ವಿರೋಧಿಯೂ ಕೂಡ.
ಅಥರ್ವ ವೇದದ ಒಂದು ಮಂತ್ರವನ್ನು ನೋಡೋಣ.
ಸಮಾನೋ ಮಂತ್ರ: ಸಮಿತಿ: ಸಮಾನೀ
ಸಮಾನಂ ವ್ರತಂ ಸಹಚಿತ್ತಮೇಷಾಮ್
ಸಮಾನೇನ ವೋ ಹವಿಷಾ ಜುಹೋಮಿ
ಸಮಾನಂ ಚೇತೋ ಅಭಿಸಂವಿಶಧ್ವಮ್ ||
[ಅಥರ್ವ ೬.೬೪.೨]
ಅರ್ಥ:-
ಮಂತ್ರ: ಸಮಾನ: = ಮಂತ್ರವು ಸಮಾನವಾಗಿರಲಿ
ಸಮಿತಿ ಸಮಾನೀ = ಸಮಿತಿಯು ಸಮಾನವಾಗಿರಲಿ
ವ್ರತಮ್ ಸಮಾನಮ್ = ವ್ರತವೂ ಸಮಾನವಾಗಿರಲಿ
ಏಷಾ ಚಿತ್ತಂ ಸಹ = ಇವರೆಲ್ಲರ ಚಿತ್ತವೂ ಒಂದೇ ದಿಕ್ಕಿನಲ್ಲಿ ಹರಿಯಲಿ
ವ: = ನಿಮ್ಮೆಲ್ಲರಿಗೂ
ಸಮಾನೇನ ಹವಿಷಾ = ಸಮಾನವಾದ ಖಾದ್ಯ ಪೇಯಗಳನ್ನೇ
ಜುಹೋಮಿ = ದಾನಮಾಡುತ್ತೇನೆ
ಸಮಾನಂ ಚೇತ: = ಸಮಾನವಾದ ಚೈತನ್ಯದಲ್ಲಿಯೇ
ಅಭಿ ಸಂ ವಿಶಧ್ವಂ = ಎಲ್ಲೆಡೆಯಿಂದಲೂ ಪ್ರವೇಶಿಸಿರಿ

ಭಾವಾರ್ಥ :-
ನಿಮ್ಮೆಲ್ಲರ ಮಂತ್ರವು ಸಮಾನವಾಗಿರಲಿ, ನಿಮ್ಮ ಸಮಿತಿಯು ಸಮಾನವಾಗಿರಲಿ, ವ್ರತವೂ ಸಮಾನವಾಗಿರಲಿ,ನಿಮ್ಮೆಲ್ಲರ ಚಿತ್ತವೂ ಒಂದೇ ದಿಕ್ಕಿನಲ್ಲಿ ಹರಿಯಲಿ, ನಿಮ್ಮೆಲ್ಲರಿಗೂ ಸಮಾನವಾದ ಖಾದ್ಯ ಪೇಯಗಳನ್ನೇ ದಾನಮಾಡುತ್ತೇನೆ.ಸಮಾನವಾದ ಚೈತನ್ಯದಿಂದ ಎಲ್ಲೆಡೆಯಿಂದಲೂ ಪ್ರವೇಶಿಸಿರಿ.ವೇದದಲ್ಲಿ ಪುನ: ಪುನ: ಹೇಳಿರುವ ಸಮಾನತೆಯ ಮಾತುಗಳನ್ನು ಗಮನಿಸಿದಾಗ ಭಗವಂತನೆದುರು ಎಲ್ಲರೂ ಸಮಾನರೆಂದು ಭಗವಂತನೇ ಸ್ವತ: ಹೇಳಿದ್ದರೂ ಇತ್ತೀಚೆಗೆ ರೂಢಿಗೆ ಬಂದ ತಾರತಮ್ಯದಿಂದಾಗಿ  ವೇದವನ್ನು ತಿಳಿಯದ ವಿಚಾರವಂತರೆನಿಸಿಕೊಂಡವರೂ ಕೂಡ ಸಮಾಜದಲ್ಲಿರುವ ತಾರತಮ್ಯಕ್ಕೆ ವೇದವನ್ನು ಹೊಣೆಮಾಡುವುದು ಅದೆಷ್ಟು ಸರಿ? ಎಂಬುದನ್ನು ಓದುಗರು ಗಮನಿಸಬೇಕು. ಈಗಲೂ ಸ್ಪೃಶ್ಯಾ-ಅಸ್ಪೃಶ್ಯ, ಮೇಲು-ಕೀಳು ತಾರತಮ್ಯ ಮಾಡುವವರನ್ನು ವೇದ ವಿರೋಧಿಗಳೆಂದು ಹೇಳದೆ ವಿಧಿಯಿಲ್ಲ.