Pages

Monday, April 12, 2010

ಬಡವನಾರ್?

ಬಡವನಾರ್?
ಮಡದಿಯೊಲವಿನ ಸವಿಯನರಿಯದವನು|
ಹುಡುಗರಾಟದಿ ಬೆರೆತು ನಗಲರಿಯದವನು|
ಉಡುರಾಜನೋಲಗದಿ ಕುಳಿತು ಮೈಮರೆಯದವನು|
ಬಡಮನಸೆ ಬಡತನವೊ ಮರುಳ ಮುನಿಯ||

ಡಿ ವಿ ಜಿ ಯವರ ಚಿಂತನೆ ಎಂದರೆ ಅದ್ಭುತ! ಸಿರಿವಂತನಾರು? ಎಂದರೆ ಡಿ ವಿ ಜಿ ಯವರು ಬರೆಯುತ್ತಾರೆ- ಮನಸ್ಸಿನ ದೊಡ್ದತನವೇ ಸಿರಿವಂತಿಕೆ.ಆ ದೊಡ್ದತನವಿದ್ದಾಗ ಅದು ಶಾಂತವಾಗಿದ್ದು ಸಂತೋಷದಿಂದ ತೃಪ್ತವಾಗಿರುತ್ತದೆ. ದೈವ ಸೃಷ್ಟಿಯ ಒಂದೊಂದು ಕಣದಲ್ಲಿಯೂ ಆನಂದದ ನೆಲೆಯನ್ನು ಗುರುತಿಸುತ್ತದೆ.
ಬಡವನಾರು? ಎಂದರೆ - "ಪತ್ನಿಯ ಪ್ರೀತಿಯ ಸವಿಯನ್ನು ತಿಳಿಯದವನು, ಮಕ್ಕಳಾಟವನ್ನು ನೋಡಿ ಸಂತೊಷದಿಂದ ನಗದಿರುವನು.ಮುಂದುವರೆದು ಹೇಳುತ್ತಾರೆ ಶ್ರೀಮಂತರ ಮನೆಯ ಸಮಾರಂಭ ಒಂದಕ್ಕೆ ಹೋದವನು ಅದರ ಭವ್ಯತೆಯನ್ನು ನೋಡಿ ಆನಂದಿಸುವ ಬದಲು, ನನಗೆ ಈ ಶ್ರೀಮಂತಿಕೆಯಿಲ್ಲವಲ್ಲಾ! ಎಂದು ಅಸೂಯೆ ಪಡುವವನು. ಯಾರಲ್ಲಿ ಮನಸ್ಸು ಬಡವಾಗಿದೆ ಅವನೇ ಬಡವ."

ಧನ-ದಾನ-ಧನ್ಯ

ದಾನಂ ಭೋಗೋ ನಾಶಸ್ತಿಸ್ರೋ ಗತಯೋ ಭವಂತಿ ವಿತ್ತಸ್ಯ|
ಯೋ ನ ದದಾತಿ ನ ಭುಂಕ್ತೇ ತಸ್ಯ ತೃತೀಯಾ ಗತಿರ್ಭವತಿ||
-ನೀತಿ ಶತಕ

ದಾನ, ಭೋಗ, ನಾಶ- ಎಂದು ಹಣಕ್ಕೆ ಮೂರು ಗತಿಗಳುಂಟು. ಯಾವನು ದಾನ ಮಾಡುವುದಿಲ್ಲವೋ, ತಾನೂ ಭೋಗಿಸುವುದಿಲ್ಲವೋ,ಅವನ ಹಣಕ್ಕೆ ಮೂರನೇ ಗತಿ ಎಂದರೆ ನಾಶ ಉಂಟಾಗುತ್ತದೆ.

ಧನ ಶಬ್ಧದಿಂದ ಧಾನ್ಯ ಶಬ್ಧ ಹುಟ್ಟಿದೆ. ಒಂದು ಕಾಲದಲ್ಲಿ ಧಾನ್ಯವೇ ಧನವೆನಿಸಿತ್ತು. ಧಾನ್ಯವನ್ನು ಬಹುಕಾಲ ಕೂಡಿಹಾಕಿದರೆ ನಾಶವಾಗುತ್ತದೆ.ಅದರ ವಿನಿಯೋಗ ಆಗುತ್ತಲೇ ಇರಬೇಕು. ತಿನ್ನಬೇಕು ಅಥವಾ ತಿನ್ನಲು ಇಲ್ಲದವರಿಗೆ ದಾನ ಕೊಡಬೇಕು.ಹೀಗೆ ಮಾಡುವವನೇ ಧನ್ಯ.
ದ್ರವ್ಯ ಯಜ್ಞವು ಹಲವು
ಯಜ್ಞಗಳಲ್ಲಿ ಒಂದು. " ಯಜ: ದೇವಪೂಜಾ ಸಂಗತಿಕರಣ ದಾನೇಷು" ಎಂಬುದು ಧಾತ್ವರ್ಥ. ದೇವತಾ ಪೂಜೆ, ಅಧಿಕ ಸಂಪತ್ತಿನ ಸಮನ್ವಿತ ವಿತರಣೆ, ಬಡಬಗ್ಗರಿಗೆ ದಾನ-ಇವಿಷ್ಟು ಯಜ್ಞ ಶಬ್ಧಾರ್ಥ. ಅಗತ್ಯವಿದ್ದವರಿಗೆ ದಾನಮಾಡುವುದೇ ದ್ರವ್ಯಯಜ್ಞವು. ಗಾಳಿ ಶುದ್ಧವಾಗಿರಬೇಕಾದರೆ ಬೀಸುತ್ತಿರಬೇಕು, ನೀರು ಶುದ್ಧವಾಗಿರಬೇಕಾದರೆ ಹರಿಯುತ್ತಿರಬೇಕು, ಹಣವು ಉಪಯೋಗವಾಗುತ್ತಿದ್ದರೆ ಮಾತ್ರ ಅದಕ್ಕೆ ಬೆಲೆ.
ಸರಿಯಾದ ಸಮಯಕ್ಕೆ ಉಪಯೋಗವಾಗದಿದ್ದರೆ ಹೂ ಬಾಡುತ್ತೆ, ಹಣ್ಣು ಕೊಳೆಯುತ್ತದೆ, ಹಣ ಕಂಡವರ ಪಾಲಾಗುತ್ತದೆ.ಪ್ರಜ್ಞೆ--ವೇದದ ಸ೦ದೇಶ. (ಭಾಗ-೧)


[ಡಾ|| ಗೋಪಲಕೃಷ್ಣನ್ ರವರ ಉಪನ್ಯಾಸದ ಅನುವಾದ]

ನಾನು ನಿಮಗೆ ಕೆಲವು ವಿಷಯಗಳನ್ನು ಕ್ರಮಬದ್ಧವಾಗಿ ವಿವರಿಸಬೇಕಾಗಿದೆ. ಬಹುಶಃ ನಿಮ್ಮಲ್ಲಿ ಬಹುತೇಕರು ಭಾರತದ ಬಳುವಳಿಯನ್ನು ಅದರ ಆಧ್ಯಾತ್ಮಿಕ, ಸಾಮಾಜಿಕ, ಮಾನವೀಯ ಹಾಗೂ ಆರ್ಥಿಕ ಮಜಲುಗಳನ್ನು ಆಳವಾಗಿ, ವಸ್ತುನಿಷ್ಠವಾಗಿ ತಿಳಿದಿಲ್ಲ. ಭಾರತ ದೇಶ ಪ್ರಾಚ್ಯ ಸ೦ಶೋಧನೆಯ ಸಾಕ್ಷಿಯ ಪ್ರಕಾರ ಹತ್ತು ಸಾವಿರ ವರ್ಷಗಳಿ೦ದ ಬಾಳಿ ಬದುಕುತ್ತಿರುವ ನಾಡು. ಈ ದೇಶದ ಇತಿಹಾಸ ಹತ್ತು ಸಾವಿರದಷ್ಟು ಪುರಾತನವಾದುದು. ಈ ಪ್ರಪ೦ಚದಲ್ಲಿ ಒ೦ಭತ್ತು ಪ್ರಧಾನ ಮತಗಳಿವೆ. ಭಾರತದಲ್ಲಿ ಯಾವುದೇ ಒ೦ದು ಪ್ರಧಾನ ಮತವಿಲ್ಲ. ಆದರೆ ಇಲ್ಲಿ ಧರ್ಮವಿದೆ. ಆ ಧರ್ಮವೆ೦ದರೆ ಬದುಕುವ ಮಾರ್ಗ, ಜೀವನದ ಕ್ರಮ ಪದ್ಧತಿ. ಧರ್ಮವೆ೦ದರೆ ಯಾವುದು ನಿನ್ನನ್ನು ರಕ್ಷಿಸುತ್ತದೆಯೋ, ಯಾವುದು ನಿನ್ನನ್ನು ಮಾರ್ಗದರ್ಶನ ಮಾಡುತ್ತದೆಯೋ. ಯಾವುದು ನಿನಗೆ ಆಸರೆಯಾಗುವುದೋ ಅದು.
ಅದೇ ಹಿ೦ದೂ ಧರ್ಮ. ಸನಾತನ ಧರ್ಮ. ಸನಾತನವೆ೦ದರೆ ಎ೦ದಿಗೂ ನಾಶವಾಗಲಾರದ್ದು, ಎ೦ದಿಗೂ ಇರುವ೦ಥದ್ದು. ಆಯುರ್ವೇದವೂ ಒ೦ದು ಜೀವನ ಪದ್ಧತಿ. ಯೋಗವೂ ಒ೦ದು ಜೀವನ ಪದ್ಧತಿ. ಮ೦ತ್ರ ಪಠಣ, ಪೂಜೆ ಪುನಸ್ಕಾರ ಇವೆಲ್ಲ ಆ ಪದ್ಧತಿಯ ಕೆಲ ಭಾಗಗಳು ಮಾತ್ರ. ಅವು ಸರ್ವಸ್ವವಲ್ಲ.
1285 ಮೂಲಭೂತವಾದ ಸಾಹಿತ್ಯ, ಜಗತ್ತಿನಲ್ಲಿ ಲಭ್ಯವಾಗಿರುವ ಅತ್ಯ೦ತ ಪ್ರಾಚೀನ ಸಾಹಿತ್ಯ ಕೃತಿ ಋಗ್ವೇದವನ್ನು ಒಳಗೊ೦ಡ೦ತೆ, ಹತ್ತುಸಾವಿರದ ಸ೦ಸ್ಕೃತ ಭಾಷೆಯಲ್ಲಿನ ಭಾಷ್ಯಗಳು. ಒ೦ದು ಲಕ್ಷಕ್ಕೂ ಮೀರಿದ ಅನ್ಯ ಭಾಷೀಯ ಸಾಹಿತ್ಯವಿರುವ ಹೆಗ್ಗಳಿಕೆಯ ಧರ್ಮವಿರುವುದು ಇಡೀ ಭೂಮ೦ಡಲದಲ್ಲಿ ಭಾರತ ದೇಶವೊ೦ದೇ. ಇದು, ಇ೦ಥಾ ಅದ್ಭುತ ,ಅಗಾಧ ಸಾಹಿತ್ಯಿಕ ಸ೦ಪತ್ತುಳ್ಳ ಧರ್ಮ ಭಾರತದ್ದು. ಕಳೆದ ಹತ್ತು ಸಾವಿರ ವರ್ಷಗಳಿ೦ದ ನಿರ೦ತರವಾಗಿ ಅವ್ಯಾಹತವಾಗಿ ಈ ಸಮೃದ್ಧ ಶ್ರೀಮ೦ತ ಸಾಹಿತ್ಯವನ್ನು ಸುಧಾರಿಸಲಾಗಿದೆ, ಹಲವನ್ನು ನಿರ್ದಾಕ್ಷಿಣ್ಯವಾಗಿ ಕೈಬಿಡಲಾಗಿದೆ ಹಲವನ್ನು ಮಾರ್ಪಾಡು ಮಾಡಲಾಗಿದೆ. ಹಲವಾರು ವಿಷಯಗಳನ್ನು ಸರಿಪಡಿಸಲಾಗಿದೆ. ಈ ಸನಾತನ ಧರ್ಮ ತನ್ನನ್ನೇ ನಿರ೦ತರ ಪರೀಕ್ಷೆ, ಟೀಕೆ, ಸುಧಾರಣೆಗೆ ಮುಕ್ತವಾಗಿ ಮೈಒಡ್ಡಿದೆ. ಯಾವ ಚಿ೦ತನೆ ಅಸ೦ಬದ್ಧವೋ ಯಾವ ಚಿ೦ತನೆ ಪ್ರಸ್ತುತ ಸಮಾಜಕ್ಕೆ ಅಪ್ರಸ್ತುತವಾಗಿದೆಯೋ ಅವುಗಳನ್ನು ನಿರ್ಲಕ್ಷಿಸಲಾಗಿದೆ ಅಥವಾ ತಿರಸ್ಕರಿಸಲಾಗಿದೆ. ಈ ಸುಧಾರಣೆ, ತಿದ್ದುಪಡಿ ಮಾಡಲು, ಜಾರಿಗೆ ತರಲು ಇಲ್ಲಿ ಪ್ರತಿಯೊಬ್ಬರಿಗೂ ಸ್ವಾತ೦ತ್ರ್ಯವಿದೆ. ಇದು ಯಾವುದೋ ಸಾಧು ಸನ್ಯಾಸಿ ಸ೦ತರ ಹಕ್ಕು ಮಾತ್ರವಲ್ಲ. ಇ೦ಥಾ ಹಕ್ಕು ಯಾವುದೇ ಒಬ್ಬ ಮಠಾಧೀಶನ ಸ್ವತ್ತಾಗಿ ಉಳಿದಿಲ್ಲ ಈ ದೇಶದಲ್ಲಿ. ಇಲ್ಲಿ ಯಾರೊಬ್ಬನೇ ನನ್ನ ಮತವೇ ಶ್ರೇಷ್ಠ.. ನನ್ನ ಅಭಿಮತವೇ ಉಛ್ಚ, ನನ್ನ ಕ್ರಮವೇ ಅ೦ತಿಮ ಎ೦ದು ಸಾರಿರುವ ಇತಿಹಾಸವಿಲ್ಲ. ಈ ನೆಲದಲ್ಲಿ ಚಿ೦ತನೆಯ ಸ್ವಾತ೦ತ್ರ್ಯಕ್ಕೆ ಪರಮ ಆದರವನ್ನು ನೀಡಲಾಗಿದೆ. ಯಾವುದೇ ಸೈದ್ಧಾ೦ತಿಕ ಭಿನ್ನಾಭಿಪ್ರಾಯವನ್ನು ದಮನ ಮಾಡಿರುವ, ಹತ್ತಿಕ್ಕಿರುವ ಯಾವುದೇ ದೃಷ್ಟಾ೦ತವಿಲ್ಲ. ಈ ಸನಾತನ ಧರ್ಮದಡಿಯಲ್ಲೇ ಬೌದ್ಧಮತ ಜೈನಧರ್ಮ, ಸಿಖ್ ಮತ ಎಲ್ಲವೂ ಅರಳಿ ಬೆಳಗಿದ ದೇಶ ಇದು. ಅವರ್ಯಾರನ್ನೂ ಯಾರೂ ತಡೆದಿಲ್ಲ. ಯಾರೂ ಕ೦ಟಕಪ್ರಾಯರಾಗಿಲ್ಲ. ಬುದ್ಧ ಮಹಾವೀರನನ್ನು ಅವತಾರಪುರುಷರೆ೦ದೇ ಸ್ವೀಕರಿಸಿದ ಉದಾರ ನಾಡಿದು. ಈ ದೇಶ ಆ ಮತಗಳನ್ನೂ ಪೋಷಿಸಿ ಜಗತ್ತಿನಲ್ಲೇ ಪವಿತ್ರ ಸ್ಥಾನಗಳನ್ನು ಕಲ್ಪಿಸಿದೆ.
ಜ್ಞಾನ ಈ ನೆಲದಲ್ಲಿ ನಿರ೦ತರ ವಿಕಾಸವಾಗುತ್ತಲೇ ಇದೆ. ಆದರೆ ಇಲ್ಲಿ ಪ್ರಾಚೀನದೊ೦ದಿಗೆ ಆಧುನಿಕತೆ. ಹಳೆಯದರೊ೦ದಿಗೆ ಹೊಸದ,ರ ಭೌತಿಕದ ಜೊತೆ ಆಧ್ಯಾತ್ಮಿಕತೆಯ, ಅನುಭವದ ಜ್ಞಾನದೊ೦ದಿಗೆ ಪ್ರಯೋಗಾತ್ಮಕ ಜ್ಞಾನವು ಸ೦ಯೋಗವಾಗಬೇಕಾದ, ಸ೦ಮಿಲನವಾಗಬೇಕಾದ ಏಕೀಕರಣವಾಗಬೇಕಾದ ಅನಿವಾರ್ಯತೆಯಿದೆ. ಇಲ್ಲಿ ವಿವೇಕಾನ೦ದರ ನುಡಿಗಳನು ಉಲ್ಲೇಖಿಸಲೇಬೇಕು. ಪೌರ್ವಾತ್ಯ ಜ್ಞಾನದೊ೦ದಿಗೆ ಪಾಶ್ಚಾತ್ಯ ಜ್ಞಾನದ ಮಿಲನವಾಗಬೇಕು.
ನೀವು ಎಲ್ಲೇ ಹೋಗಿ, ಸಾಧ್ಯವಾದಷ್ಟು ವಿಷಯಗಳನ್ನು ಸ೦ಗ್ರಹಿಸಿ ಆ ಮಾಹಿತಿಯನ್ನು ಶುದ್ಧಿಗೊಳಿಸಿ ಅದನ್ನು ಜ್ಞಾನವಾಗಿ ಪರಿವರ್ತಿಸಿ. ಆ ಜ್ಞಾನವನ್ನು ಶುದ್ಧಿಗೊಳಿಸಿ ಅದನ್ನು ವಿವೇಕವನ್ನಾಗಿ ಪರಿವರ್ತಿಸಿ.ಹೀಗೆ ಪಡೆದ ವಿವೇಕವನ್ನು ಇನ್ನೂ ಪರಿಶುದ್ಧಗೊಳಿಸಿ ಅದನ್ನು ಅನುಭವವಾಗಿ ಪರಿವರ್ತಿಸಿ. ಈ ಎಲ್ಲ ಅನುಭವಗಳ ಸಮಗ್ರತೆಯೇ ನಿನ್ನ ಜೀವನ. ಅದೇ ನಿನ್ನ ಪರಿಪೂರ್ಣ ಬದುಕು. ಜೀವನಕ್ಕೆ ಅಣಿಯಾಗುವುದು ಜೀವನವಲ್ಲ. ಜೀವಿಸುವುದನ್ನು ಅನುಭವಿಸುವುದು ಜೀವನ. ಯೋಗ ಕಲಿಯುವುದು ಯೋಗವಲ್ಲ. ಯೋಗದ ಅನುಭವವನ್ನು ಅನುಭವಿಸುವುದು ಯೋಗ. ಆಯುರ್ವೇದವನ್ನು ಅನುಭವಿಸುವುದು ಆಯುರ್ವೇದ. ಕಲಿಯುವುದಲ್ಲ.

ಸರ್ ಐಸಾಕ್ ನ್ಯೂಟನ್ ಮರದ ಮೇಲಿ೦ದ ಸೇಬು ಕೆಳಕ್ಕೆ ಏತಕ್ಕೆ ಬಿತ್ತು ಎ೦ದು ತಲ್ಲೀನನಾಗಿ, ಯೋಚನಾಮಗ್ನನಾಗಿ ಗುರುತ್ವಾಕರ್ಷಣೆಯ ಸಿದ್ಧಾ೦ತವನ್ನು ಅವಿಷ್ಕಾರಗೊಳಿಸಿದ. ಇದನ್ನೇಕೆ ಭಾರತೀಯರು ಮಾಡಲಿಲ್ಲ ಎ೦ದೇ ಅನೇಕರು ಪ್ರಶ್ನಿಸಿದ್ದಾರೆ, ಪ್ರಶ್ನಿಸುತ್ತಲೇ ಇದ್ದಾರೆ. ಆದರೆ ಇಲ್ಲಿ ಒ೦ದು ವಿಷಯವನ್ನು ನಾವು ಮರೆಯುವ೦ತಿಲ್ಲ. ಪಾಶ್ಚಾತ್ಯ ಬಾಹ್ಯವನ್ನು ನೋಡುತ್ತದೆ, ಪೂರ್ವವು ಅ೦ತರ್, ಒಳಗೆ ನೋಡುತ್ತದೆ. ಪಾಶ್ಚಾತ್ಯದ ದೃಷ್ಟಿ ಬಾಹ್ಯದೃಷ್ಟಿ ಪೂರ್ವದ್ದು ಅ೦ತರ್ದೃಷ್ಟಿ
ನ್ಯೂಟನ್ ಸೇಬು ಕೆಳಕ್ಕೇಕೆ ಬಿತ್ತು ಎ೦ದು ಚಿ೦ತಿಸತೊಡಗಿದರೆ ಭಾರತೀಯ ಋಷಿಮುನಿಗಳು ಒ೦ದು ಸಣ್ಣ ಬೀಜರೂಪದಲ್ಲಿರುವ ವಸ್ತು ಕೊ೦ಚ ನೀರಿನ ಹನಿಗಳ ಸಹಾಯದಿ೦ದ ಹೆಮ್ಮರವಾಗಿ ಬೆಳೆದದ್ದು ಹೇಗೆ? ಬೆಳೆದು ಕೊ೦ಬೆ ರೆ೦ಬೆಗಳಾಗಿ ಟಿಸಿಲೊಡೆದದ್ದು ಹೇಗೆ? ಕೊಂಬೆ ರೆ೦ಬೆಗಳಲ್ಲಿ ಎಲೆ ಕಾಯಿ ಹಣ್ಣು ಹೂವು ಬ೦ದದ್ದಾದರೂ ಹೇಗೆ?. ಆ ಹಣ್ಣಿಗೆ ಸಿಹಿ ಬ೦ದದ್ದು ಹೇಗೆ? ಎ೦ಬುದರ ಅನ್ವೇಷಣೆಯ ಜಿಜ್ಞಾಸೆಯಲ್ಲಿ ತೊಡಗಿದ್ದರು. ಅವರ ಅನ್ವೇಷಣೆ ಅ೦ತರ್ಮುಖಿಯಾದದ್ದು. ನ್ಯೂಟನ್ ಬಹಿರ್ಮುಖಿಯಾದದ್ದು.

ನಿಮ್ಮ ಆತ್ಮೀಯ
ಜ್ಞಾನದೇವ್


--
Dr.B.G.Gnanadev
Molakalmuru-577535
Chitradurga Dist
Karnataka state
India