|
ಚಿದ್ರೂಪಾನಂದ ಸರಸ್ವತಿಸ್ವಾಮೀಜಿಯವರೊಡನೆ ಶ್ರೀದತ್ತಾತ್ರೇಯ ಭಟ್ |
|
ಶ್ರೀಮತೀ ಸ್ವರೂಪರಾಣಿ |
|
ಶ್ರೀಮತಿ ಸ್ವರೂಪರಾಣಿಯವರ ಮನೆಯಲ್ಲಿ ಸ್ವಾಮಿ ಚಿದ್ರೂಪಾನಂದರು |
|
ಮನೆಯೇ ಗ್ರಂಥಾಲಯ |
|
ಸಭೆಯ ಮುಂದಿನ ಸಾಲಿನಲ್ಲಿ ಹಾಸನದ ವೇದಭಾರತೀ ಸದಸ್ಯರು |
|
ನೋಡಲು ಹೋಗಿದ್ದ ನನ್ನದೂ ಒಂದು ಪಾತ್ರ
|
ಆರ್.ಎಸ್.ಎಸ್. ಪ್ರೇರಿತ ಧರ್ಮಜಾಗರಣ ವಿಭಾಗದ ಪ್ರಾಂತ ಸಂಚಾಲಕರಾದ ಶ್ರೀಯುತ ಗ.ರಾ.ಸುರೇಶ್ ನನಗೆ ದೂರವಾಣಿಯಲ್ಲಿ ಮಾತನಾಡಿ ಒಂದು ವಿಶಿಷ್ಠ ಕಾರ್ಯಕ್ರಮದ ಬಗ್ಗೆ ತಿಳಿಸಿದರು. ಕೆ.ಆರ್.ನಗರ ಸಮೀಪದ ಹಂಪಾಪುರದಲ್ಲಿ ಗೋಶಾಲೆಯಲ್ಲೊಂದು ಕೃಷ್ಣನ ವಿಗ್ರಹ ಪ್ರತಿಷ್ಠಾಪನೆ ಮಾಡಲು ಹುಬ್ಬಳ್ಳಿಯ ಆರ್ಷ ವಿದ್ಯಾ ಗುರುಕುಲದ ಪೂಜ್ಯ ಚಿದ್ರೂಪಾನಂದ ಸರಸ್ವತೀ ಸ್ವಾಮೀಜಿಯವರು ಬರುತ್ತಾರೆ, ನೀವೂ ಕಾರ್ಯಕ್ರಮಕ್ಕೆ ಬನ್ನಿ ಎಂದರು. ಅದರ ಮರುದಿನ ಕಾರ್ಯಕ್ರಮ ಸಂಯೋಜಕಿ ಶ್ರೀಮತಿ ಸ್ವರೂಪರಾಣಿಯವರಿಂದ ದೂರವಾಣಿಯಲ್ಲಿ ವಿವರ ಪಡೆದೆ. ನಮ್ಮ ವೇದ ಭಾರತಿಯ ಬಗ್ಗೆಯೂ ತಿಳಿಸಿದೆ. ವೇದಭಾರತಿಯ ಟೀಮ್ ಅಂದು ಬಂದು ಸ್ವಾಮೀಜಿಯವರು ಪುರಪ್ರವೇಶಮಾಡುವಾಗ ಜೊತೆಯಲ್ಲಿದ್ದು ವೇದ ಪಠಣ ಮಾಡಬೇಕೆಂದು ತಿಳಿಸಿದರು. ವೇದಭಾರತಿಯಲ್ಲಿ ಜಾತಿ/ಲಿಂಗ/ವಯಸ್ಸಿನ ಭೇದವಿಲ್ಲದೆ ವೇದಾಧ್ಯಯನ ನಡೆಯುತ್ತಿದೆ ಎಂಬುದು ಅವರಿಗೆ ಸಂತೋಷದ ಸಂಗತಿಯಾಗಿತ್ತು. ಆತ್ಮೀಯವಾಗಿ ಎಲ್ಲರನ್ನೂ ಆಹ್ವಾನಿಸಿದರು. ನಿತ್ಯ ವೇದಾಧ್ಯಯನ ನಡೆಯುತ್ತಿರುವುದರಿಂದ ಚರ್ಚಿಸಿ ನಿರ್ಧರಿಸುವುದು ಕಷ್ಠವೇನಾಗಲಿಲ್ಲ. ಇಂದು ಬೆಳಿಗ್ಗೆ [9.6.2013 ಭಾನುವಾರ] ಹಾಸನದಿಂದ ಒಂದು ಟಾಟಾ ಸುಮೋ ಮತ್ತು ಒಂದು ಕಾರ್ ನಲ್ಲಿ ಹದಿನೈದು ಜನ ಹೊರಟೆವು. ಹಂಪಾಪುರ ತಲುಪಿದಾಗ ಬೆಳಿಗ್ಗೆ 10:30 ಆಗಿತ್ತು. ಆ ಹೊತ್ತಿನಿಂದ ಹಿಂದುರುಗುವ ಸಮಯದ ವರೆಗೂ [ ಮಧ್ಯಾಹ್ನ 2:30] ಒಂದು ಅದ್ಭುತ ಸತ್ಸಂಗದಲ್ಲಿ ನಾವಿದ್ದೆವು ,ಎಂದರೆ ಅನ್ವರ್ಥವಾದೀತು.
ನಾವಿನ್ನೂ ಆರೇಳು ತಿಂಗಳಿನಿಂದ ವೇದಾಭ್ಯಾಸವನ್ನು ಮಾಡುತ್ತಿರುವ ಶಿಶುಗಳು! ಸ್ವಾಮೀಜಿಯವರ ಮುಂದೆ ವೇದ ಪಠಣ ಮಾಡುವಾಗ ತಪ್ಪಾದರೆ!! ನಾವು ಒಂದು ನಿರ್ಧಾರ ಮಾಡಿದೆವು. ನಾವು ವೇದಾಧ್ಯಯನದಲ್ಲಿ ಶಿಶುಗಳೆಂಬುದನ್ನು ಸ್ವಾಮೀಜಿಯವರಲ್ಲಿ ಅರಿಕೆಮಾಡಿಕೊಂಡು ಸಾಮೂಹಿಕವಾಗಿ ಹೇಳಿಬಿಡೋಣ, ಎಂತಲೇ ಗಟ್ಟಿ ನಿರ್ಧಾರದೊಂದಿಗೆ. ಹೋದೆವು. ಸ್ವಾಮೀಜಿಯವರ ಪುರಪ್ರವೇಶವಾದಾಗ ಮೆರವಣಿಗೆಯಲ್ಲಿ ನಾವು ಒಟ್ಟಾಗಿ ವೇದಪಠಿಸುತ್ತಾ ಹೆಜ್ಜೆ ಹಾಕಿದೆವು. ಕಾರ್ಯಕ್ರಮದ ಸ್ಥಳವನ್ನು ತಲುಪಿದಾಗ ಶ್ರೀ ಸುರೇಶರು ಸ್ವಾಮೀಜಿಯವರಿಗೆ ನಮ್ಮ ಪರಿಚಯ ಮಾಡಿಕೊಟ್ಟರು. ಹಾಸನ ವೇದ ಭಾರತಿಯ ಧ್ಯೇಯೋದ್ಧೇಶವನ್ನು ಎರಡು ಮಾತುಗಳಲ್ಲಿ ಅರಿಕೆ ಮಾಡಿಕೊಂಡೆವು.
ಏನು!! ಎಲ್ಲರಿಗಾಗಿ ವೇದ!! ಜಾತಿಭೇದವಿಲ್ಲ!!! ಹೆಂಗಸರೂ ಕಲಿಯುತ್ತಿದ್ದಾರಾ!!!
ಇದೇ ಆಗಬೇಕಾಗಿದ್ದ ಕೆಲಸ, ಎಂದು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಅವರ ಮಾತುಗಳ ವೀಡಿಯೋ ನೋಡಿ
ಇನ್ನು ಕಾರ್ಯಕ್ರಮದ ಸಂಯೋಜಕಿ ಶ್ರೀಮತಿ ಸ್ವರೂಪರಾಣಿಯವರಬಗ್ಗೆ ಹೇಳಲೇ ಬೇಕು. ಸುಮಾರು ಇಪ್ಪತ್ತು ವರ್ಷದ ಮಗ ಸುಭಾಷ್ ಅಕಾಲಿಕ ವಾಗಿ ಅಗಲಿದಾಗ ಆ ದು:ಖವನ್ನು ಸಹಿಸಲಾರದೆ ಐದಾರು ವರ್ಷ ಜೀವಚ್ಛವವಾಗಿ ಹಾಸಿಗೆ ಹಿಡಿದಿದ್ದ ಸ್ವರೂಪರಾಣಿಯವರಿಗೆ ಧೈರ್ಯತುಂಬಿದವರಲ್ಲಿ ಶ್ರೀಯುತ ಗ.ರಾ .ಸುರೇಶರೂ ಒಬ್ಬರು. ಹಿತೈಷಿಗಳ ಆತ್ಮೀಯನುಡಿಗಳು ಸ್ವರೂಪರಾಣಿಯವರನ್ನು ಬದುಕುವಂತೆ ಮಾಡಿತು. ಹೌದು ಮಗನನ್ನು ಕಳೆದುಕೊಂಡ ಮೇಲೆ ಯಾರಿಗಾಗಿ ಬದುಕಬೇಕು? ಹಿತೈಷಿಗಳ ಹೃದಯಸ್ಪರ್ಶೀ ಮಾತುಗಳಿಂದ ಉತ್ತೇಜಿತರಾಗಿ " ಹೌದು ಬದುಕಿದರೆ ಸಾಮಜಕ್ಕೆ ಏನಾದರೂ ಮಗನ ಹೆಸರಲ್ಲಿ ಮಾಡ ಬೇಕು" ಆಗ ಆರಂಭವಾದದ್ದೇ ಸುಭಾಷ್ ಎಂ.ರಾವ್ ಸ್ಮರಣಾರ್ಥ ಚಾರಿಟಬಲ್ ಟ್ರಸ್ಟ್. ಅದರ ಮೂಲಕ ಅವರು ಮಾಡುತ್ತಿರುವ ಸೇವೆ ಅಪಾರ. ಗೋಶಾಲೆ ತೆರೆದರು. ಗೋವಿನ ಮೂತ್ರದಿಂದ ಜೀವ ರಕ್ಷಕ ಔಷಧಿಗಳನ್ನು ತಯಾರಿಸುವ ತರಬೇತಿ ಪಡೆದು ಗೋ ಉತ್ಪನ್ನಗಳನ್ನು ತಯಾರಿಸಲು ಆರಂಭಿಸಿದರು. ವರ್ಷಕ್ಕೊಮ್ಮೆ ವಸತಿ ಸಹಿತ ವೇದಶಿಬಿರ ಆರಂಭಿಸಿದರು. ಕೇವಲ ಕೆಲವು ಗಂಟೆಗಳಲ್ಲಿ ಇಷ್ಟು ಚಟುವಟಿಕೆಗೆಗಳ ಬಗ್ಗೆ ಮಾಹಿತಿ ದೊರೆಯುತು. ಅವರು ಮಾಡುತ್ತಿರುವ ಸೇವಾ ಕೆಲಸಗಳು ಇನ್ನೂ ಅಪಾರ. ವಿವರಗಳನ್ನು ಪಡೆದು ಮತ್ತೊಮ್ಮೆ ಬರೆಯುವೆ. ಇಂದಿನ ಕಾರ್ಯಕ್ರಮದಲ್ಲಿ ಶ್ರೀ ಯುತ ದತ್ತಾತ್ರೇಯ ಭಟ್ ಮತ್ತು ಪೂಜ್ಯ ಸ್ವಾಮೀಜಿಯವರು ಮಾಡಿರುವ ಉಪನ್ಯಾಸಗಳ ವೀಡಿಯೋ ಗಳನ್ನು ಒಂದೆರಡು ದಿನಗಳ ಲ್ಲಿ ಅಳವಡಿಸುವೆ. ನೀವು ವೀಡಿಯೋ ನೋಡಲೇ ಬೆಕೆಂಬುದು ನನ್ನ ಮನವಿ.