Pages

Tuesday, August 30, 2011

ವೇದಸುಧೆ ಜಾಲತಾಣ

ಗೌರಿ-ಗಣೇಶ ಹಬ್ಬದ ಶುಭ ಸಂದರ್ಭದಲ್ಲಿ ವೇದಸುಧೆಗೆಂದು ಒಂದು ಜಾಲತಾಣ ತೆರೆದಿದ್ದೇನೆ. ( http://vedasudhe.co.cc ). ಇದರಲ್ಲಿ "e-book", "ಪಾಡ್ಕ್ಯಾಸ್ಟ್", ಆಯ್ದ ಲೇಖನಗಳು, ಮುಂತಾದ ಸೌಲಭ್ಯಗಳನ್ನು ನೀಡುವ ಯೋಚನೆ ಇದೆ. ಆ ತಾಣವನ್ನು ಇನ್ನೂ ಅಭಿವೃದ್ಧಿಪಡಿಸಲಾಗುತ್ತಿದೆ. ಈಗಿರುವ ಡಿಸೈನ್ ಚೆನ್ನಾಗಿದೆಯೇ ಅಥವಾ ಅದನ್ನು ಬದಲು ಮಾಡಬೇಕೇ ಎನ್ನುವುದನ್ನು ವೇದಸುಧೆಯ ಓದುಗರಿಗೇ ಬಿಡುತ್ತಿದ್ದೇನೆ. ಹಾಗೆಯೇ ಇನ್ನೇನು ಸೌಲಭ್ಯಗಳನ್ನು ಸೇರಿಸಬಹುದು ಎನ್ನುವುದನ್ನೂ ಓದುಗರು ತಿಳಿಸಬಹುದು. ಈ ತಾಣದ ಸಾಧಕ-ಬಾಧಕ ಕುರಿತು ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ತಿಳಿಸಿ. ಆ ತಾಣದಲ್ಲಿಯೂ ಲೇಖನಗಳನ್ನು ಪೋಸ್ಟ್ ಮಾಡಲಿಚ್ಚಿಸುವವರು ನನಗೊಂದು ಮೇಲ್ ಮಾಡಿದರೆ ಲೇಖಕರ ಹಕ್ಕುಗಳನ್ನು ಕೊಡಲಾಗುತ್ತದೆ.

(ಮೇಲಿನ ತಾಣದ ಸರ್ವರ್ ಇರುವ ಅಮೆರಿಕಾದಲ್ಲಿ ಈಗ ಪ್ರಕೃತಿ ವಿಕೋಪಗಳು ಸಂಭವಿಸುತ್ತಿರುವುದರಿಂದ ಕೆಲವು ವೇಳೆ ತಾಣವು ತೆರೆಯದೇ ಇರಬಹುದು. ಹಾಗಾದಾಗ ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ.)

ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು.

ಧನ್ಯವಾದಗಳೊಂದಿಗೆ,
-Prasanna SP



ಚಿಕ್ಕ ಇಲಿಯ ಬೆನ್ನನೇರಿ !

[ಎಲ್ಲಾ ಓದುಗ, ಸ್ನೇಹಿತ, ಬಂಧು-ಮಿತ್ರ-ಹಿತೈಷಿಗಳಿಗೂ ಸೇರಿದಂತೇ ಸಮಸ್ತರಿಗೂ ಸ್ವರ್ಣಗೌರೀ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.]
ಚಿಕ್ಕ ಇಲಿಯ ಬೆನ್ನನೇರಿ ದೊಡ್ಡಹೊಟ್ಟೆ ಬೆನಕರಾಯ
ಸಿಕ್ಕ ಸಿಕ್ಕ ಭಕ್ತರುಗಳ ಮನೆಗೆ ಧಾವಿಸಿ
ಅಕ್ಕರೆಯಿಂದವರು ಕೊಟ್ಟ ಚಕ್ಕುಲಿಗಳ ಮೆದ್ದು ಮತ್ತೆ
ಚೊಕ್ಕಗೊಳಿಸಿ ಮೋದಕಗಳ ತಿಂದು ವಿರಮಿಸಿ !

ಡರ್ರೆನ್ನುತ ತೇಗಿದಾಗ ಆಗಿಹೋಯ್ತು ರಾತ್ರಿ ಅಲ್ಲಿ
ಸರ್ರನೆದ್ದು ಹೊರಟುಬಿಟ್ಟ ತನ್ನ ಮನೆಕಡೆ
ಗರ್ರೆನ್ನುತ ತಿರುಗಿ ತಿರುಗಿ ಬಿದ್ದುಬಿಡ್ತು ಮೂಷಿಕಣ್ಣ
ಕರ್ರಗಿರುವ ಬಾನಿನಲ್ಲಿ ಚಂದ್ರ ಹಲ್ಬಿಡೆ !

ಬಿದ್ದ ಚಣದಿ ಹೊಟ್ಟೆಯೊಡೆದು ಬೆನವಗಾಯ್ತು ಕಷ್ಟಕಾಲ
ಎದ್ದುಬಿದ್ದು ಹುಡುಕಿ ನಡೆದ ಸೊಂಟಬಂಧಿಯ
ಕದ್ದು ನೋಡಿ ನಗುತಲಿದ್ದ ಮೋಡಸರಿಸಿ ಚಂದಿರಾಮ
ಕ್ರುದ್ಧನಾದ ವಿಘ್ನರಾಜ ಕಂಡು ಸಂದಿಯ !

ನಕ್ಕ ಶಶಿಯ ಸೊಕ್ಕ ಮುರಿಯೆ ಗಣಪ ಬಿಸುಟ ಮುರಿದು ಹಲ್ಲ
ಹೆಕ್ಕಿ ಹರೆಯುತಿದ್ದ ಹಾವ ಹೊಟ್ಟೆ ಕಟ್ಟುತ
ಹಕ್ಕಿಗಧಿಕ ವೇಗದಲ್ಲಿ ಸಾಗುವಾಗ ಹಾದಿಯಲ್ಲಿ
ಬಿಕ್ಕುತಳುವ ತಂಗದಿರನ ಬೆನ್ನ ತಟ್ಟುತ

ವಿಕಟನಿತ್ತ ಶಾಪವನ್ನು ಮರಳಿ ಪಡೆದು ಹರಸುವಂತೆ
ನಿಕಟನಪ್ಪೆನೆನುತ ಬೇಡಿದಾ ಶಶಾಂಕನು
ಪ್ರಕಟಗೊಳುವ ನಿನ್ನ ನೋಡೆ ಭಾದ್ರಪದದ ಚೌತಿಯಲ್ಲಿ
ಮುಕುಟ ಮಸಿಯ ಛಾಯೆಪಡೆಯಲೆಂದ ಸುಮುಖನು

ಅಮ್ಮ ಹಾಲ ಕರೆಯುವಾಗ ನಮ್ಮಕೃಷ್ಣ ಚೊಂಬಿನಲ್ಲಿ
ಸುಮ್ಮನಾಡಿ ನೋಡುತಿದ್ದ ಚಂದ್ರ ಬಿಂಬವ
ಒಮ್ಮೆ ಮಣಿಯು ಕಳೆಯಲಾಗಿ ಕದ್ದ ಕಳ್ಳ ಗೊಲ್ಲನೆಂದು
ಚಿಮ್ಮಿ ಹರಿದ ಸುದ್ದಿ ತಂತು ಹರಿಗಗೌರವ

ಮುರಳಿ ತೆರಳಿ ಕಾಡಿನೆಡೆಗೆ ಬಡಿದು ಜಾಂಬವಂತನನ್ನು
ಕೆರಳಿ ಪಡೆದ ಮಣಿಯನಲ್ಲಿ ವಿಷಯವರಿಯುತ
ತರಳಗೆರಗಿ ಜಾಂಬವಂತ ಪರಿಪರಿಯಲಿ ಪ್ರಾರ್ಥಿಸಲ್ಕೆ
ಕರುಳುಮಿಡಿದು ಜಾಂಬವತಿಯ ಕೈಯ್ಯ ಹಿಡಿಯುತ

ಮಣಿಯ ಕಂಡು ಊರಮಂದಿ ಹುರುಪುಗೊಂಡು ಹಾರಿಕುಣಿದು
ಕಣಿವೆಯೆಲ್ಲ ಮಾರ್ದನಿಸಿತು ಕೃಷ್ಣಜಯಜಯ
ಹೊಣೆಯನಿತ್ತನಾ ಗಣೇಶ ಕೇಳಿದವಗೆ ಮಣಿಯಕಥೆಯ
ಋಣದಿ ಮುಕ್ತಿ ದೋಷವಿಲ್ಲ ಎಲ್ಲ ಸುಖಮಯ
---ವಿ.ಆರ್.ಭಟ್

ವೇದೋಕ್ತ ಜೀವನ ಪಥ: ಮಾನವಧರ್ಮದ ಮೂರು ಅಭಿನ್ನ ಅಂಗಗಳು - ೭:


   ಇನ್ನು ಧರ್ಮದ ಮೂರನೆಯ ಅವಿಚ್ಛಿನ್ನ ಅಂಗ, ವೈದಿಕ ಭಾಷೆಯಲ್ಲಿ ಇದನ್ನು ಉಪಾಸನಾ ಎನ್ನುತ್ತಾರೆ. ಭಕ್ತಿ, ಪೂಜೆ ಇದೆಲ್ಲಾ ಈಚೀಚೆಗೆ ಉದ್ಭವಿಸಿದ ಶಬ್ದಗಳು. ಜೀವಾತ್ಮನು ತನ್ನ ಚಿತ್ತವನ್ನು ಬಾಹ್ಯ ವಿಷಯಗಳಿಂದ ಸರ್ವಥಾ ಬೇರ್ಪಡಿಸಿ, ರೂಪ, ರಸ, ಗಂಧ, ಶಬ್ದ, ಸ್ಪರ್ಷ - ಈ ಐದು ಇಂದ್ರಿಯ ವಿಷಯಗಳಿಂದಲೂ ಅದನ್ನು ಒಳಕ್ಕೆಳೆದುಕೊಂಡು, ಏಕಾತ್ರಗೊಳಿಸಿ ಅದನ್ನು ಪರಮಾತ್ಮನಲ್ಲಿ ನಿಲ್ಲಿಸಿ, ಪ್ರಭುಸಾಮೀಪ್ಯವನ್ನು ಅನುಭವಿಸುವ ಕ್ರಿಯೆಯನ್ನೇ ಉಪಾಸನೆ ಎನ್ನುತ್ತಾರೆ. ವೈದಿಕ ಧರ್ಮದಲ್ಲಿ ಜೀವಂತ ಮೂರ್ತಿಗಳಾದ ತಾಯಿ-ತಂದೆ-ಆಚಾರ್ಯ-ಗುರು-ಹಿರಿಯರು ಇವರ ಪೂಜೆಗೆ, ಅಂದರೆ ಅವರ ಸತ್ಕಾರಕ್ಕೆ ಅವಕಾಶವಿದೆಯೇ ಹೊರತು, ಜಡಧಾತುಗಳ, ಕಲ್ಲು-ಮರಗಳ ವಿಗ್ರಹಗಳನ್ನು ದೇವರೆಂದು ತಿಳಿದು, ಧೂಪ-ದೀಪ-ನೈವೇದ್ಯಾದಿಗಳಿಂದ ಅರ್ಚಿಸುವ ಪದ್ಧತಿಗೆ ಅವಕಾಶವೇ ಇಲ್ಲ. ಪರಮಾತ್ಮನು ಸರ್ವವ್ಯಾಪಕ. ಅದೇ ಕಾರಣದಿಂದ ಸರ್ವಥಾ ನಿರಾಕಾರ. ಅವನು ಅವತಾರವನ್ನು ಎತ್ತುವ ಸಂಭವವಿಲ್ಲ ಎಂದು ಪಾಠಕರು ಮೊದಲೇ ಅರಿತಿದ್ದಾರೆ. ನಿರಾಕಾರನ ಮೂರ್ತಿ ರಚನೆ ಸರ್ವಥಾ ಅಸಂಭವ. ಚಿತ್ತದ ಏಕಾಗ್ರತೆಯ ಸಾಧನೆಗಾಗಿ ಮೂರ್ತಿಪೂಜೆ ಎಂದರೆ, ವ್ಯಾಪ್ಯದಲ್ಲಿ ಮನಸ್ಸನ್ನು ನಿಲ್ಲಿಸಲು ಕಲಿತರೂ, ವ್ಯಾಪಕನ ಧ್ಯಾನಕ್ಕೆ ಅದು ನೆರವಾಗಲಾರದು. ಅಲ್ಲದೆ ಉಪಾಸನೆ ಮಾಡುವುದು ಬೇರೆ ಎಲ್ಲಿಯೂ ಸಿಗದ ಆನಂದವನ್ನು ತುಂಬಿಕೊಳ್ಳುವುದಕ್ಕಾಗಿ. ಹೀಗಿರುವಾಗ, ಸಚ್ಚಿದಾನಂದ ಸ್ವರೂಪನಾದ ಪ್ರಭುವಿಗೆ ಬದಲು ನಿರಾನಂದನಾದ ಪ್ರಕೃತಿಯಲ್ಲಿ, ಪ್ರಾಕೃತ ವಿಗ್ರಹಗಳಲ್ಲಿ ಚಿತ್ತ ನಿಲ್ಲಿಸಲು ಕಲಿತು ಸಾಧಿಸುವುದಾದರೂ ಏನಿದೆ? ಸಚ್ಚಿತ್ಸ್ವರೂಪನಾದ ಜೀವ, ಸತ್ವರೂಪಿಣಿಯಾದ ಪ್ರಕೃತಿಗಿಂತ ಶ್ರೇಷ್ಠನಾಗಿರುವುದರಿಂದ, ವಿಗ್ರಹಗಳ ಮುಂದೆ ತಲೆ ಬಾಗುವುದರಲ್ಲಿ ಆತ್ಮಾಪಮಾನ ಒಂದನ್ನು ಬಿಟ್ಟು ಬೇರಾವ ಮಹತ್ವವಿದೆ?
     ವೇದಗಳಲ್ಲಿ ಮೂರ್ತಿಪೂಜಾ ವಿಧಾನವಿಲ್ಲ. ಅದಕ್ಕೆ ವಿರುದ್ಧವಾಗಿ, ಈ ಕೆಳಗಿನ ಮಂತ್ರದಂತಹ ವಿಚಾರ ಪ್ರಚೋದಕವಾದ ಮಂತ್ರಗಳು ಸಿಕ್ಕುತ್ತವೆ.


ಪ್ರ ತುವಿದ್ಯುಮ್ನಸ್ಯ ಸ್ಥವಿರಸ್ಯ ಘೃಷ್ವೇರ್ದಿವೋ ರರಪ್ಶೇ ಮಹಿಮಾ ಪೃಥಿವ್ಯಾಃ |
ನಾಸ್ಯ ಶತ್ರುರ್ನ ಪ್ರತಿಮಾನಮಸ್ತಿ ನ ಪ್ತತಿಷ್ಠಿಃ ಪುರುಮಾಯಸ್ಯ ಸಹ್ಯೋಃ ||
(ಋಕ್. ೬.೧೮.೧೨.)


     [ಪ್ರ ತುವಿದ್ಯುಮ್ನಸ್ಯ] ಮಹಾವೇಗಯುಕ್ತ ಶಕ್ತಿಸಂಪನ್ನನೂ [ಸ್ಥವಿರಸ್ಯ] ಅನಾದಿಯೂ, {ಘೃಷ್ವೇಃ] ಪರಮಾಣುಗಳಲ್ಲಿ ಚಲನೆ ನೀಡುವವನೂ ಆದ ಪರಮಾತ್ಮನ, [ಮಹಿಮಾ] ಮಹಿಮೆಯು, [ದಿವಃ ಪೃಥಿವ್ಯಾಃ ರರಪ್ಯೇ] ದ್ಯುಲೋಕ, ಪೃಥಿವೀ ಲೋಕಗಳನ್ನು ಮೀರಿಸಿದೆ. [ಅಸ್ಯ ಪುರುಮಾಯ ಸಹ್ಯೋಃ] ಈ ಮಹಾಪ್ರಜ್ಞನೂ, ಸಹನಶೀಲನೂ ಆದ ಪ್ರಭುವಿನ, [ಶತ್ರುಃ] ಶತ್ರುವು, [ನ] ಯಾವನೂ ಇಲ್ಲ. [ಪ್ರತಿಮಾನಂ ನ ಅಸ್ತಿ] ಪ್ರತಿಮಾನವೂ ಇಲ್ಲ. [ಪ್ರತಿಷ್ಠಿಃ ನ] ಆಧಾರವೂ ಇಲ್ಲ.
     ಇಷ್ಟು ಸ್ಪಷ್ಟವಾಗಿ ಪ್ರತಿಮಾರ್ಚನದ ನಿರಾಕರಣ ವೇದಗಳಲ್ಲಿ ಕಂಡುಬರುತ್ತದೆ. ಅಲ್ಲದೆ, ಯ ಏಕ ಇತ್ ತಮುಷ್ನುಹಿ (ಋಕ್.೬.೪೫.೧೬.) - ಯಾವನು ಕೇವಲ ಒಬ್ಬನೇ ಒಬ್ಬನಿದ್ದಾನೋ, ಅವನನ್ನು ಮಾತ್ರ ಸ್ತುತಿಸು.


ಮಾ ಚಿದನ್ಯದ್ ವಿ ಶಂಸತ ಸಖಾಯೋ ಮಾ ರಿಷಣ್ಯತ |
ಇಂದ್ರಮಿತ್ ಸ್ರೋತಾ ವೃಷಣಂ ಸಚಾ ಸುತೇ ಮುಹುರುಕ್ಥಾ ಚ ಶಂಸತ ||
(ಋಕ್. ೮.೧.೧.)


     [ಅನ್ಯತ್ ಚಿತ್] ಬೇರಾವುದನ್ನೂ [ಮಾ ವಿಶಂಸತಾ] ಪ್ರಶಂಸಿಸಬೇಡಿ. [ಸಖಾಯಃ] ಮಿತ್ರರೇ, [ಮಾ ರಿಷಣ್ಯತಾ] ನಾಶ ಹೊಂದಬೇಡಿ. [ಸುತೇ ಸಜಾ] ಈ ಸೃಷ್ಟಿಯಲ್ಲಿ ಒಟ್ಟಾಗಿ [ವೃಷಣಂ ಇಂದ್ರಂ ಇತ್] ಸುಖವರ್ಷಕನಾದ ಇಂದ್ರನನ್ನು, ಸರ್ವಶಕ್ತಿಮಾನ್ ಪ್ರಭುವನ್ನು ಮಾತ್ರ [ಶಂಸತ] ಸ್ತುತಿಸಿರಿ. [ಮುಹುರುಕ್ಥಾ ಚ] ಮತ್ತು ಬಾರಿ ಬಾರಿ ಸ್ತುತಿಪರರಾಗಿ [ಶಂಸತ] ಸ್ತುತಿಸಿರಿ.
    ಈ ರೀತಿ ಕೇವಲ ಒಬ್ಬನೇ ಪ್ರಭುವನ್ನು ಮಾತ್ರ ಸ್ತುತಿಸಿರಿ ಎಂದು ವೇದಗಳು ಸ್ಪಷ್ಟ ಆದೇಶ ನೀಡುತ್ತವೆ.
    ಹೀಗೆ ಜಡಾರ್ಚನೆ ಪರಿತ್ಯಾಜ್ಯ. ಚೇತನೋಪಾಸನೆಯೇ ವೇದೋಕ್ತ ಕ್ರಿಯೆ. ಉಪಾಸನಾ - ಎಂದರೆ ಉಪ+ಆಸನಾ, ಹತ್ತಿರ ಕುಳಿತುಕೊಳ್ಳುವುದು. ಭಗವಂತನ ಸಮೀಪದಲ್ಲಿ ಕುಳಿತುಕೊಳ್ಳುವುದೇ ಭಗವದುಪಾಸನೆ. ಭಗವಂತನೂ ಅನಾದಿ, ಜೀವರಾದ ನಾವೂ ಅನಾದಿ. ಹೀಗಾಗಿ ಅವನೂ, ನಾವೂ ಸಮಕಾಲೀನರು. ಕಾಲದ ದೃಷ್ಟಿಯಿಂದ ನಾವು ಅವನಿಂದ ದೂರವಿಲ್ಲ. ಅವನು ಸರ್ವವ್ಯಾಪಕನಾದ ಕಾರಣ, ನಮ್ಮೊಳಗೂ, ಹೊರಗೂ ಏಕಪ್ರಕಾರವಾಗಿ ವ್ಯಾಪಕನಾಗಿದ್ದೇನೆ. ಆದುದರಿಂದ ದೇಶದ ದೃಷ್ಟಿಯಿಂದಲೂ ಅವನು ನಮ್ಮಿಂದ ದೂರವಿಲ್ಲ. ಹೀಗೆ ಕಾಲ-ದೇಶಗಳ ದೃಷ್ಟಿಯಿಂದ ಉಪಾಸನೆ ನಮಗೆ ಸಹಜವಾಗಿಯೇ ಸಿದ್ಧಿಸಿದೆ. ಆದರೆ. ಸಂಪರ್ಕ ಸಾಧನವಾದ ಮನಸ್ಸು ಸಾಂಸಾರಿಕ ವ್ಯಾಪಾರಗಳಲ್ಲಿ ವ್ಯಾಪ್ರವಾಗಿರುವುದರಿಂದ, ಜ್ಞಾನದ ದೃಷ್ಟಿಯಿಂದ ನಾವು ಪರಮಾತ್ಮನಿಂದ ದೂರವೇ ಇದ್ದೇವೆ. ಈ ಜ್ಞಾನಸಂಬಂಧೀ ದೂರವನ್ನು ದೂರೀಕರಿಸಿ, ಮನಸ್ಸನ್ನು ಅವನಲ್ಲಿ ನಿಲ್ಲಿಸಿ, ಅವನ ಸಾಮೀಪ್ಯವನ್ನನುಭವಿಸುವುದೇ ಉಪಾಸನೆ.
*****************

Saturday, August 27, 2011

ಯಜ್ಞದ ಫಲ

ನಾನು ಮನೆ ವಿಸ್ತರಣೆ ಮಾಡುತ್ತಿರುವ ವಿಚಾರವನ್ನು  ವೇದಸುಧೆಯಲ್ಲಿಯೇ ಈ ಹಿಂದೆ  ಬರೆದಿದ್ದೆ. ವಾಸಮಾಡುತ್ತಾ ಮನೆಯನ್ನು ಕಟ್ಟುವುದೆಂದರೆ ಬಲು ತ್ರಾಸದ ಕೆಲಸ. ಜೊತೆಗೆ ನನ್ನ ಪತ್ನಿಗೆ ಕೈ ನೋವು ಬೇರೆ ಕಾಡುತ್ತಿದೆ.  ಹೇಗೂ ನಾನು ಸ್ವಯಂ ನಿವೃತ್ತಿ  ತೆಗೆದು ಕೊಂಡಿರುವುದರಿಂದ ಮನೆಯನ್ನು ನಿತ್ಯವೂ ಸ್ವಚ್ಛ ಮಾಡುವ ಕೆಲಸವನ್ನು ನಾನು ವಹಿಸಿ ಕೊಂಡಿರುವೆ. ಮನೆ ನಿರ್ಮಾಣದ ಕೆಲಸ ಆರಂಭವಾದ ಸಮಯದಲ್ಲಿ ಅಷ್ಟು ಗೊತ್ತಾಗಲಿಲ್ಲ. ಕೆಲಸ ಮುಂದುವರೆದಂತೆ ಕಟ್ಟಡವನ್ನು ಕ್ಯೂರ್ ಮಾಡುವಾಗ ಹಾಕುವ ನೀರು ವಾಸದ ಮನೆಯ ಆರ್.ಸಿ.ಸಿ ಮತ್ತು ಗೋಡೆಗಳಲ್ಲೆಲ್ಲಾ ಪಸರಿಸಿ ಮನೆಯೆಲ್ಲಾ ಸೀತ ವ್ಯಾಪಿಸಿ ಕೊಂಡು ಮನೆಯ ವಸ್ತುಗಳೆಲ್ಲಾ ದುರ್ಗಂಧ ವ್ಯಾಪಿಸಿ ಬದುಕು ದುಸ್ತರ ವಾಗುತ್ತದೆ. ಈ ನಡುವೆ ಹಾಸನದಲ್ಲಿ ಬಲು ಮಳೆ. ಸೂರ್ಯನ ದರ್ಶನವೇ ಕಷ್ಟ.   ವೇದಸುಧೆಯಲ್ಲಿ  ಇದೆಲ್ಲಾ ಯಾಕೆ ಅಂದ್ರಾ? ನೋಡಿ ಇಲ್ಲೇ ಇರೋದು ಕರ್ಮಯೋಗ.
ಇವತ್ತು  ಬೆಳಿಗ್ಗೆ ಆರು ಗಂಟೆಯಲ್ಲಿ ಆರಂಭಗೊಂಡ ಸ್ವಚ್ಚತೆಯ ಕೆಲಸ ಮುಗಿದು ಸ್ನಾನವಾಗುವಾಗ  ಸೂರ್ಯ ನೆತ್ತಿಗೇರಿದ್ದ. ಮನೆಯಾಕೆ ಏನ್ರೀ ಇನ್ನೂ ಎಷ್ಟು ಹೊತ್ತಿಗೆ ನಿಮ್ಮ  ಅಗ್ನಿಹೋತ್ರ ಮುಗಿದು ಉಪಹಾರ ಮಾಡೋದು? ಎಂದು ತನ್ನ ಆತಂಕ ವ್ಯಕ್ತ ಪಡಿಸಿದಳು. ನಾನು ಸುಮ್ಮನಿದ್ದು  ಅಗ್ನಿಹೊತ್ರಕ್ಕೆ ಸಿದ್ಧ ಗೊಳಿಸಿಕೊಂಡೆ. ಅಗ್ನಿಹೋತ್ರ ಆರಂಭ ವಾಯ್ತು. ಆಗ ಪತ್ನಿಗೆ ಹೇಳಿದೆ. " ಇಲ್ಲಿಯ ವರಗೆ ಮಾಡಿದೆನಲ್ಲಾ! ಅದೇ ಯಜ್ಞ." ಮನೆಯೆಲ್ಲಾ  ಚೊಕ್ಕಟ ವಾಗಿದೆ.. ಮನಸ್ಸಿಗೆ ಆನಂದವಾಗಿದೆ. ಹಿತವಾಗಿದೆ. ಈಗ ಅದರ ಫಲ ಅನುಭವಿಸುವ ಸಮಯ. ನೆಮ್ಮದಿಯಾಗಿ ಕುಳಿತುಕೋ ಎಂದೆ. ೨೦ ನಿಮಿಷದಲ್ಲಿ ಅಗ್ನಿಹೋತ್ರ ಮುಗಿಯಿತು. ಬೆಳಗಿನಿಂದ ಆಗಿದ್ದ ಆಯಾಸವೆಲ್ಲಾ ಪರಿಹಾರವಾಗಿತ್ತು. ಇದಲವ್ವಾ  ನಿಜವಾದ ಯಜ್ಞ? ಎಂದು ಮನೆಯಾಕೆಯನ್ನು ಕೇಳಿದೆ. ಕತ್ತು ಆಡಿಸಿದ್ದು ಕಂಡು ಸಮಾಧಾನವಾಯ್ತು. ಪೂಜೆಯನ್ನು ಮಾಡುವ ಮೊದಲು ಸ್ವಚ್ಚತೆಗೆ ೯೦%  ಸಮಯ ಮೀಸಲಿಟ್ಟು ಆನಂತರ ನಮಗೆ ತೋಚಿದಂತೆ ಪೂಜೆ ಮಾಡಿದರೆ ಮನಸ್ಸಿಗೆ ಆನಂದ ವಾಗುವಿದಿಲ್ಲವೇ? ಅದೇ ಅಲ್ಲವೇ? ಯಜ್ಞ ಮತ್ತು ಯಜ್ಞದ ಫಲ?

ನಿಮ್ಮೊಡನೆ

ಆತ್ಮೀಯ ವೇದಸುಧೆಯ ಓದುಗರೇ, ಅಭಿಮಾನಿಗಳೇ, ವೇದಸುಧೆ ಬಳಗದ ನನ್ನ ಸಹವರ್ತಿಗಳೇ, ನಿಮಗೆ ಹೀಗೆ ಅಪರೂಪಕ್ಕೊಮ್ಮೆ ವಂದನೆ ಸಲ್ಲಿಸುವ ಮನಸ್ಸಾಯ್ತು, ಅದಕ್ಕೇ ಬರೆಯುತ್ತಿದ್ದೇನೆ.

ಆರಂಭದಲ್ಲಿ ಎಲ್ಲರಿಗೂ ಕ್ಷೇಮವನ್ನು ಬಯಸಿ ಹಾರೈಸುತ್ತೇನೆ.

ಪುಣ್ಯದ ಶ್ರಾವಣ ನೋಡುತ್ತಿದ್ದಂತೆಯೇ ಕಳೆದುಹೋಯ್ತು, ಶುಭದ ಭಾದ್ರಪದ ಬರುತ್ತಿದೆ, ಹಬ್ಬದ ಸಾಲು ಆರಂಭವಾಗಿ ತಿಂಗಳೇ ಕಳೆಯಿತು. ಎಲ್ಲರಿಗೂ ವೇದಸುಧೆಯ ಪರವಾಗಿ ಹಾರ್ದಿಕ ಶಭಾಶಯಗಳು.

ಇಲ್ಲೊಂದು ಆಚಾರ್ಯರುಗಳಿಂದ, ಪ್ರಾಜ್ಞರಿಂದ ರಚಿತವಾದ ಅಷ್ಟಕಗಳೂ ಶತಕಗಳೂ ಮತ್ತು ಸ್ತೋತ್ರಗಳೂ ಇರುವ ಬ್ಲಾಗ್ ಕೊಂಡಿ ಕೊಡುತ್ತಿದ್ದೇನೆ, ದಯವಿಟ್ಟು ಆದಾಗ ಓದಿಕೊಳ್ಳಿ.

http://samskarasaurabha.blogspot.com/

ಮತ್ತು ಮಕ್ಕಳಿಗೆ ಬಾಲ್ಯದಲ್ಲೇ ಉತ್ತಮ ಸಂಸ್ಕಾರ ನೀಡಲು ಪಾಲಕರಿಗೆ ಪೂರಕ ಮಾಹಿತಿಗಳಿಲ್ಲ, ಹಿರಿಯರಿಲ್ಲದ ಎಷ್ಟೋ ಮನೆಗಳಲ್ಲಿ ಇತಿಹಾಸ ಪುರಾಣಗಳ ಸಾಹಸಗಾಥೆಗಳು ಮತ್ತು ಕಥೆಗಳ ಪರಿಚಯ ಇರುವುದಿಲ್ಲ. ಇವನ್ನೆಲ್ಲಾ ಗಮನದಲ್ಲಿಟ್ಟು ಧರ್ಮರಕ್ಷಣ ಸಂಸ್ಥಾನದವರು ಒಂದು ಹೊಸ ವೆಬ್‍ಸೈಟ್ ಮೊನ್ನೆ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ ಬಿಡುಗಡೆ ಮಾಡಿದ್ದಾರೆ. ಅದನ್ನೂ ಕೂಡ ತಮ್ಮೆಲ್ಲರ ಆವಗಾಹನೆಗೆ ತರುತ್ತಿದ್ದೇನೆ :

http://www.balsanskar.com/kannada

ಸದ್ಯ ಹಿಂದಿ, ಕನ್ನಡ, ಮರಾಠಿ, ಆಂಗ್ಲ ಭಾಷೆಗಳಲ್ಲಿ ಲಭ್ಯವಿರುವ ವಿವರಣೆಗಳು ಮುಂಬರುವ ದಿನಗಳಲ್ಲಿ ಭಾರತೀಯ ಹಲವು ಭಾಷೆಗಳಲ್ಲಿ ಕೊಡಮಾಡಲ್ಪಡುತ್ತವೆ.

ನಿಸ್ಪೃಹ ವೇದಿಕೆಯೊಂದು ಜನಸೇವೆಗೆ ನಡೆಸುವ ಇಂತಹ ಕಾರ್ಯಗಳನ್ನು ಮುಕ್ತ ಕಂಠದಿಂದ ಶ್ಲಾಘಿಸಿ, ಈ ಕೊಂಡಿಗಳನ್ನು ತಮ್ಮ ಬಂಧು-ಮಿತ್ರ-ಹಿತೈಷಿ-ಸಜ್ಜನರೆಲ್ಲರಿಗೂ ಮಿಂಚಂಚೆಯ ಮೂಲಕ ತಲ್ಪಿಸುವರೇ ತಮ್ಮೆಲ್ಲರಲ್ಲಿ ಇದನ್ನು ಅಪೇಕ್ಷಿಸಲಾಗಿದೆ.

ಕಾಲಕಾಲಕ್ಕೆ ವೇದಸುಧೆಯ ಮಧುರಸುಧಾರಸವನ್ನು ಪಾನಮಾಡುತ್ತಿದ್ದೀರಿ, ಬರುವ ದಿನಗಳಲ್ಲಿ ಇನ್ನಷ್ಟು ಉತ್ತಮ ಕೃತಿಗಳು, ವಿವರಗಳು ಎಲ್ಲರಿಗೂ ದೊರೆಯಲಿ ಮತ್ತು ಪರಸ್ಪರ ಎಲ್ಲರೂ ಜ್ಞಾತರಾಗಿ, ಇಂತಹ ವಿಷಯಗಳಲ್ಲಿ ಸ್ನಾತಕರಾಗಿ ಭೂಯಃ ಶ್ರೇಯೋಭಾಜನರಾಗಬೇಕೆಂಬುದು ನಮ್ಮೆಲ್ಲರ ಮನದಾಳದ ಅನಿಸಿಕೆಯಾಗಿದೆ. ಈ ದಿಸೆಯಲ್ಲಿ ನಮ್ಮ ಸಂಪಾದಕರಾದ ಶ್ರೀ ಹರಿಹರಪುರ ಶ್ರೀಧರ್ ರವರು ಬಹಳ ಮುತುವರ್ಜಿಯಿಂದ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ನಾವೆಲ್ಲಾ ಆಗಾಗ ಬರಹೋಗುವವರಾದರೂ ನಿರಂತರ ವೇದಸುಧೆಯ ಉಸ್ತುವಾರಿ ಹೊತ್ತ ಅವರಿಗೆ ಪ್ರತ್ಯೇಕವಾಗಿ ಆಭಾರಿಯಾಗಿದ್ದೇನೆ. ಸಾಧ್ಯವಾದರೆ ಈ ಎರಡು ಕೊಂಡಿಗಳನ್ನು ವೇದಸುಧೆ ಬಳಸುವ ಬ್ಲಾಗ್ ಮಾಲಿಕೆಗಳ ಪಟ್ಟಿಯಲ್ಲಿ ಜೋಡಿಸಿ ಓದುಗರಿಗೆ ದಾರಿ ಕಲ್ಪಿಸಲು ಶ್ರೀಧರರಲ್ಲಿ ವಿನಂತಿಸುತ್ತಿದ್ದೇನೆ. ಬಳಗದ ಹಿರಿಯ ಸದಸ್ಯರಾದ ಶ್ರೀ ಸುಧಾಕರ ಶರ್ಮರು ಶೀಘ್ರ ಗುಣಮುಖರಾಗಿ ನಮ್ಮೆಲ್ಲರನ್ನೂ ಸೇರಿಕೊಳ್ಳಲಿ ಎಂಬ ಮಹದಾಸೆ ಇದ್ದರೂ ನಿಧಾನಗತಿಯಲ್ಲಿ ಸುಧಾರಿಸಿಕೊಳ್ಳುತ್ತಿರುವ ಅವರ ಆರೋಗ್ಯದಿಂದ ಕೆಲವು ತಿಂಗಳಲ್ಲಿ ಅವರು ಮರಳಿ ನಮ್ಮೆಲ್ಲರಿಗೆ ಉಪಯುಕ್ತ ಮಾಹಿತಿಗಳನ್ನು ಒದಗಿಸಲಿದ್ದಾರೆ. ’ ವೇದಸುಧೆ ’ ಯಲ್ಲಿ ಮಿಂದ ಎಲ್ಲರಿಗೂ ಭಗವಂತ ಸುಖ, ಶಾಂತಿ, ಸಮೃದ್ಧಿ ದೊರಕಿಸಲಿ, ಎಲ್ಲರೂ ನೆಮ್ಮದಿಯ ಜೀವನ ಸಾಗಿಸುವಂತಾಗಲಿ ಎಂದು ಮತ್ತೊಮ್ಮೆ ಜಗನ್ನಿಯಾಮಕ ಶಕ್ತಿಯಲ್ಲಿ ಪ್ರಾರ್ಥಿಸಿ ಹಾರೈಸಿ ನಿಮ್ಮಿಂದ ಸದ್ಯಕ್ಕೆ ಬೀಳ್ಕೊಳ್ಳುತ್ತಿದ್ದೇನೆ, ನಮಸ್ಕಾರಗಳು.

---ವಿ.ಆರ್.ಭಟ್

Friday, August 26, 2011

ವಿವೇಕ ಚೂಡಾಮಣಿ ಭಾಗ -೯



ಗ್ರಂಥದ ಮುಂದುವರಿದ ಭಾಗ

अतो विचारः कर्तव्यो जिज्ञासोरात्मवस्तुनः |
समासाध्य दयासिन्धुं गुरुं ब्रह्मविदुत्तमम् ||१५ ||

ಅತೋ ವಿಚಾರಃ ಕರ್ತವ್ಯೋ ಜಿಜ್ಞಾಸೋರಾತ್ಮವಸ್ತುನಃ |
(=ಆತ್ಮವಿಚಾರ ಕರ್ತವ್ಯದ ಜಿಜ್ಞಾಸೆಗಾಗಿ )
ಸಮಾಸಾಧ್ಯ ದಯಾಸಿಂಧುಂ ಗುರುಂ ಬ್ರಹ್ಮವಿದುತ್ತಮಮ್ ||೧೫||
(= ಕರುಣಾಳುವೂ, ಬ್ರಹ್ಮಜ್ಞಾನಿಯೂ ಆಗಿರುವ ಗುರುವನ್ನು ಹೊಂದವುದು)

ಆತ್ಮವಿದ್ಯೆಯ ಸಿದ್ಧಿಗಾಗಿ ಗುರುವಿನ ಬಳಿಗೆ ತೆರಳಬೇಕು ಎಂದು ಈ ಹಿಂದಿನ ಶ್ಲೋಕದಲ್ಲಿ ತಿಳಿದೆವು. ಇಂದಿನ ಕಾಲದಲ್ಲಿ ಗುರುಗಳೇನೋ ಸಾಕಷ್ಟು ಇರುವರು. ಗುರುಗಳ ಶಿಷ್ಯರೂ ಅಸಂಖ್ಯರಿದ್ದಾರೆ !. ಎಂತಹವರು ಗುರು ಎನ್ನಿಸಿಕೊಳ್ಳಲು ಅರ್ಹರಾಗುತ್ತಾರೆ ? ಎಂತಹ ಗುರುವಿನ ಶಿಷ್ಯರಾಗಿ ಆತ್ಮಾಭ್ಯಾಸವನ್ನು ಮೊದಲು ಮಾಡಬೇಕು? ಎಂಬ ’ಗೊಂದಲ’ಕ್ಕೆ ಶ್ರೀ ಶಂಕರರು ಮೇಲಿನ ಶ್ಲೋಕದ ಜೊತೆಗೆ ಮುಂದಿನ ಮೂರು ಶ್ಲೋಕಗಳ ಮೂಲಕ ಪರಿಹಾರವನ್ನು ಒದಗಿಸುತ್ತಾರೆ.
ಆಸಕ್ತನು ವಿಚಾರಾಧೀನನಾಗಿ ಆತ್ಮವಸ್ತುವಿನ ಜಿಜ್ಞಾಸೆಯೇ ತನ್ನ ಕರ್ತವ್ಯವೆಂದು ತಿಳಿದು ಯೋಗ್ಯ ಗುರುವನ್ನು ಹೊಂದಬೇಕು ಎಂದು ತಿಳಿಸುತ್ತಾರೆ.
’ದಯಾಸಿಂಧುಂ’ ಎಂದು ಹೇಳುವ ಮೂಲಕ ಅಧಿಕಾರಿಯು ಕರುಣೆಯ ಸಾಗರದಂತಿರಬೇಕು ಎಂದು ಸೂಚಿಸುತ್ತಾರೆ. ಜಾಣರಿಗೆ ಕಲಿಸುವುದು ಕಷ್ಟವೇನಲ್ಲ, ಆದರೆ ದಡ್ಡರಿಗೆ ತಾಳ್ಮೆಯಿಂದ ಮತ್ತು ಕರುಣೆಯಿಂದ ಹೇಳಿಕೊಡುವ ಅಧಿಕಾರಿಯು ಅಗತ್ಯ. ಒಂದು ಹನಿ ನೀರಿಗೂ ಸಮುದ್ರವು ಆಶ್ರಯವನ್ನು ನೀಡುತ್ತದೆ. ತನ್ನ ಒಡಲಿನಲ್ಲಿ ಅಂತಹ ಅದೆಷ್ಟು ಹನಿಗಳನ್ನು ಬಚ್ಚಿಟ್ಟುಕೊಂಡಿರುತ್ತದೆಯೋ ಬಲ್ಲವರಾರು !?. ಅಧಿಕಾರಿಯು ಆತ್ಮವಿದ್ಯಾಸಕ್ತನ ಎಲ್ಲಾ ಅವಗುಣಗಳನ್ನೂ ಮನ್ನಿಸಿ ಉಪದೇಶಿಸುವಂತಹ ಕರುಣಾಳಾಗಿರಬೇಕು ಎಂದು ಹೇಳುತ್ತಾರೆ.
ಮುಂದೆ, ’ಗುರುಂ’ ಎಂದು ಹೇಳುತ್ತಾರೆ. ’ಅಧಿಕಾರಿಯೆಂದರೇ ಗುರು’ ಎನ್ನುವಾಗ ಮತ್ತೊಮ್ಮೆ ’ಗುರುಂ’ ಎಂದು ಹೇಳುವ ಅಗತ್ಯವೇನು ? ಎಂಬ ಪ್ರಶ್ನೆ ಮೂಡುತ್ತದೆ. ’ಗು’ ಶಬ್ದವು ಕತ್ತಲೆ ಅಥವಾ ಅಜ್ಞಾನವನ್ನು ಸೂಚಿಸಿದರೆ ’ರು’ ಶಬ್ದವು ಬೆಳಕು (ಕತ್ತಲೆಯ ನಿರೋಧಕ) ಅಥವಾ ಜ್ಞಾನವನ್ನು ಸೂಚಿಸುತ್ತದೆ. ಕರುಣಾಳುವಾದ ಅಧಿಕಾರಿಯು ತನ್ನ ಉಪದೇಶದ ಮೂಲಕ ಆಸಕ್ತನ ಮನದ (ಹೃದಯಾಂಧಕಾರ) ಗೊಂದಲ, ಅಜ್ಞಾನವನ್ನು ತೊಳೆಯುತ್ತಾನೆ. ಆತ್ಮವಿದ್ಯೆಯ ಅಧಿಕಾರಿಯು ಗುರುವಾಗಿರಬೇಕು ಎಂದು ಹೀಗೆ ಹೇಳುತ್ತಾರೆ.
’ದಯಾಸಿಂಧು’ ಮತ್ತು ’ಗುರುಂ’ ಎಂಬ ಎರಡು ವಿಶೇಷ ಅರ್ಹತೆಗಳನ್ನು ಪಡೆದಿರುವ ಅಧಿಕಾರಿಯು ’ ಬ್ರಹ್ಮ ವಿದುತ್ತಮಮ್’ ಎಂದೆನಿಸಿಕೊಳ್ಳುತ್ತಾನೆ. ಬ್ರಹ್ಮನನ್ನು ತಿಳಿದವರು, ಆತ್ಮಾರ್ಥವನ್ನು ಅರಿತವರೇ ಬ್ರಹ್ಮವಿದುತ್ತಮರು.

ಆಕ್ಷೇಪ : ’ಸ್ವನುಭವೋ’ ಎಂದು ಈ ಮೊದಲೇ ಹೇಳಿರುವುದರಿಂದ ’ಅಧಿಕಾರಿ’ಯ ಉಪದೇಶದ ಅಗತ್ಯವೇನಿದೆ ?

ಸಮಾಧಾನ : ಯಾವುದೇ ಅಧ್ಯಯನ , ಉಪದೇಶಗಳಿಲ್ಲದೆ ಆತ್ಮವಿದ್ಯೆಯನ್ನು ಗಳಿಸುವುದು ಪಾಮರರಿಗೆ ಸಾಧ್ಯವಿಲ್ಲ. ರಾಮಕೃಷ್ಣ ಪರಮಹಂಸರು, ರಮಣ ಮಹರ್ಷಿಗಳಂತೆ ಏನೂ ಓದದೆ, ಯಾವುದನ್ನೂ ಅಭ್ಯಾಸ ಮಾಡದೆ ಸಮ್ಯಕ್ ಜ್ಞಾನವನ್ನು ಪಡೆಯಬಲ್ಲವರು ಜಗಕ್ಕೊಬ್ಬರು, ಯುಗಕ್ಕೊಬ್ಬರು ಎನ್ನಬಹುದು (ಇಲ್ಲಿ ’ ಶತಕೋಟಿ ಜನ್ಮ ಸುಕೃತೈಃ ಪುಣ್ಯೈರ್ವಿನಾಲಭ್ಯತೇ’ ಎಂಬ ಗ್ರಂಥದ ಆರಂಭಿಕ ಶ್ಲೋಕದ ಸಾಲನ್ನು ಮನನ ಮಾಡಬಹುದು). ಎಲ್ಲರೂ ಇಂತಹವರಾಗಲು ಸಾಧ್ಯವಿಲ್ಲವಾದುದರಿಂದ ಗುರೂಪದೇಶ, ಗುರುವಿನ ಆಶ್ರಯ ಅಗತ್ಯವಾದುದಾಗಿರುತ್ತದೆ.
--------------------------------

ಮುಂದಿನ ಶ್ಲೋಕ

मेधावी पुरुषो विद्वान् ऊहापोह विचक्षणः ।
अधिकार्यात्मविद्यायामुक्तलक्षणलक्षितः ॥१६॥

ಮೇಧಾವೀ ಪುರುಷೋ ವಿದ್ವಾನ್ ಊಹಾಪೋಹ ವಿಚಕ್ಷಣಃ |
(= ಮೇಧಾವಿಯೂ(ಚುರುಕು ಬುದ್ಧಿ), ವಿದ್ವಾಂಸನೂ , ನ್ಯಾಯಾನ್ಯಾಯಗಳ ವಿವೇಚನೆಯುಳ್ಳವನು)
ಅಧಿಕಾರ್ಯಾತ್ಮವಿದ್ಯಾಯಾಮುಕ್ತಲಕ್ಷಣಲಕ್ಷಿತಃ ||೧೬||
(= ಅಧಿಕಾರಿಯು ಹೀಗೆ ಹೇಳಿರುವ ಲಕ್ಷಣಗಳಿಂದ ಕೂಡಿರಬೇಕು)

’ದಯಾಸಿಂಧುವಾದ ಗುರು, ಬ್ರಹ್ಮವಿದುತ್ತಮ, ಮೇಧಾವೀ, ವಿದ್ವಾನ್, ಉಹಾಪೋಹ ವಿಚಕ್ಷಣಃ ’ ಇವೆಲ್ಲಾ ಆತ್ಮವಿದ್ಯೆಯ ಅಧಿಕಾರಿಗೆ ಇರಬೇಕಾದ qualifications ಗಳು ಎನ್ನಬಹುದು. ವೇದಾಂತದ ಎಲ್ಲಾ ಮಜಲುಗಳು ಆರಂಭವಾಗುವುದೇ ಅಧಿಕಾರಿಯ ಅರ್ಹತೆಯ ನಿರೂಪಣೆಯಿಂದ. ಅಧಿಕಾರಿಯ ಪೂರ್ವಾರ್ಹತೆಯ ವಿವೇಚನೆಯ ನಂತರ ವೇದಾಂತದ ವಿಚಾರವು ಆರಂಭವಾಗುತ್ತದೆ.
ಆತ್ಮವಿದ್ಯೆಯ ಸಂಪಾದನೆಗಾಗಿ ಆಸಕ್ತನು ಆಶ್ರಯಿಸುವ ಅಧಿಕಾರಿಯು ಮೇಧಾವಿಯಾಗಿರಬೇಕು ಎಂಬಲ್ಲಿ, ’ಶಾಸ್ತ್ರಾರ್ಥಗಳಲ್ಲಿ ಪಾರಂಗತನಾದವನೂ, ಉಪದೇಶಿಸಲ್ಪಟ್ಟ ವಿಚಾರಗಳನ್ನು ಮನೋಗತ ಮಾಡಿಕೊಳ್ಳುವ ಶಕ್ತಿಯುಳ್ಳ ಬುದ್ಧಿವಂತನನ್ನು ’ಮೇಧಾವೀ’ ಎಂಬ ಪದದಿಂದ ಸೂಚಿಸಿರುತ್ತಾರೆ. ’ವಿದ್ವಾನ್ ’(Scholar) ಎಂದರೆ ಕಾವ್ಯ, ಕೋಶ, ವ್ಯಾಕರಣಗಳಲ್ಲಿ ನುರಿತಿರುವವನು ಎಂದು ತಿಳಿಯಬೇಕಾಗುತ್ತದೆ. ’ಊಹಾಪೋಹ ವಿಚಕ್ಷಣಃ’ ಎಂದರೆ ತರ್ಕಮೀಮಾಂಸ ಶಾಸ್ತ್ರಗಳಲ್ಲಿ ಪರಿಣತಿಯನ್ನು ಹೊಂದಿದವನೆಂದು ಹೇಳುತ್ತಾರೆ. *ಪದವಾಕ್ಯಪ್ರಮಾಣಜ್ಞ*(೧) ನಾಗಿರುವುದೇ ಆತ್ಮವಿದ್ಯೆಯ ಅಧಿಕಾರಿಯ ಮುಖ್ಯ ಲಕ್ಷಣ ಎಂದು ಶಂಕರರು ತಿಳಿಸುತ್ತಾರೆ.
’ಉಕ್ತಲಕ್ಷಣ ಲಕ್ಷಿತಃ’ ಎಂದರೆ ಈಗಾಗಲೇ ಸೂಕ್ಷ್ಮವಾಗಿ ಗ್ರಂಥದ ಕೆಲವು ಶ್ಲೋಕಗಳಲ್ಲಿ ಹೇಳಿರುವ ನಾಲ್ಕು ವಿಧವಾದ ಸಾಧನಗಳ (=ಸಾಧನ ಚತುಷ್ಟಯ. ಮುಂದಿನ ಶ್ಲೋಕಗಳಲ್ಲಿ ವಿವರಣೆಗಳು ಬರಲಿದೆ) ಸಂಪನ್ನನೆಂದು ಎಂದು ಅರ್ಥ.
ಶುಭಕಾರ್ಯಕ್ಕೆ ಹೊರಟಾಗ ಎದುರಿಗೆ ಯಾರಾದರೂ ಬರಿದಾದ ಬಿಂದಿಗೆಯನ್ನು ಹಿಡಿದು ಹೊರಟರೆ ಅಪಶಕುನವೆಂದು(ಬೆಕ್ಕು ಅಡ್ಡಬರುವುದು) ಭಾವಿಸಿ ಕೆಲಹೊತ್ತು ತಡೆದು ಮುಂದುವರಿಯುವವರಿದ್ದಾರೆ. ಅವರಿಗೂ ಗೊತ್ತಿರುತ್ತದೆ
’ಬರಿಯ ಬಿಂದಿಗೆಯು ಏನೂ ಮಾಡದೆಂದು’ , ಆದರೂ ಇತರರು ಅನುಸರಿಸುತ್ತಾರೆ ಎಂಬ ಕಾರಣಕ್ಕೆ ’ನಮಗೇಕೆ ಸಲ್ಲದ ಗೊಡವೆ’ ಎಂದು ಅಂಧಾನುಸರಣೆ ಮಾಡುತ್ತಾರೆ. ಇಂತಹವರಿಗೆ ’ಅಪೋಹ’ ವಿರುವುದಿಲ್ಲ. ಅರ್ಥಾನರ್ಥಗಳ ವಿವೇಚನೆಯನ್ನು ಹೊಂದಿರುವುದು ಅಧಿಕಾರಿಯ ಲಕ್ಷಣ ಎಂದು ಹೇಳುತ್ತಾರೆ.
--------------------------------------

ಮುಂದಿನ ಶ್ಲೋಕ

विवेकिनो विरक्तस्य शमादिगुणशालिनः ।
मुमुक्षोरेव हि ब्रह्मजिज्ञासायोग्यता मता ॥१७॥

ವಿವೇಕಿನೋ ವಿರಕ್ತಸ್ಯ ಶಮಾದಿಗುಣಶಾಲಿನಃ |
(= ವಿವೇಕಿಯೂ , ಅನಾಸಕ್ತನೂ(ತಟಸ್ಥ), ಸಹನಾಶೀಲಗುಣವುಳ್ಳವನು)
ಮುಮುಕ್ಷೋರೇವ ಹಿ ಬ್ರಹ್ಮಜಿಜ್ಞಾಸಾಯೋಗ್ಯತಾ ಮತಾ ||೧೭||
(= ಬ್ರಹ್ಮಜಿಜ್ಞಾಸುವಿಗೆ ಮುಮುಕ್ಷುತ್ವವೇ(ಬಂಧನದಿಂದ ಬಿಡುಗಡೆ) ಯೋಗ್ಯವಾದುದು)

ವಿವೇಕಿಯೂ, ವಿರಕ್ತನೂ ಶಮಾದಿಗುಣವುಳ್ಳವನು ಮತ್ತು ಮುಮುಕ್ಷುವಾದ ಅಧಿಕಾರಿಯು ವಿಚಾರಕ್ಕೆ ಯೋಗ್ಯನಾದವನು ಎಂದು ಶಂಕರರು ಸೂಚಿಸುತ್ತಾರೆ. ಈ ಶ್ಲೋಕದಲ್ಲಿ ಹೇಳಿರುವ ಎಲ್ಲಾ ಗುಣಗಳ ವಿವರಣೆಯು ಮುಂದೆ ’ಸಾಧನ ಚತುಷ್ಟಯ’ ಎಂದು ಹತ್ತು-ಹನ್ನೆರೆಡು ಶ್ಲೋಕಗಳಲ್ಲಿ ವಿವರವಾಗಿ ನಿರೂಪಿಸಲಾಗಿದೆ. ಅವುಗಳನ್ನು ಮುಂದೆ ತಿಳಿಯೋಣ.

ಅಧಿಕಾರಿಯನ್ನು ಅಥವಾ ಗುರುವನ್ನು ಹೇಗಿದ್ದರೂ ಒಪ್ಪಿಕೊಳ್ಳುವ ಪರಿಪಾಠ ಇಂದು ತುಸು ಹೆಚ್ಚಾಗಿದೆ ಎಂದೇ ಹೇಳಬಹುದು. ’ಶಿಷ್ಯರ ವಿತ್ತವನ್ನು(ದುಡ್ಡನ್ನು, ಸಂಪತ್ತನ್ನು) ಕಸಿಯುವ ಗುರುಗಳು ಹೇರಳವಾಗಿದ್ದಾರೆ , ಆದರೆ ಶಿಷ್ಯರ ಚಿತ್ತವನ್ನು( ಕಲಿಯುವ ಹುಮ್ಮಸ್ಸನ್ನು ತಣಿಸುವ) ಹಿಡಿದಿಟ್ಟುಕೊಳ್ಳುವ, ಹೃದಯವನ್ನು ಕಸಿಯುವ ಗುರುಗಳು ವಿರಳ’ ಎಂಬ ಮಾತೊಂದಿದೆ. ಅಂತಹ ಉತ್ತಮ ಗುರುಗಳನ್ನು ಹುಡುಕಬೇಕಾಗುತ್ತದೆ. ಇಲ್ಲವಾದಲ್ಲಿ ರಾಮಕೃಷ್ಣರಂತೆ, ರಮಣಮಹರ್ಷಿಗಳಂತೆ self thought ಇಟ್ಟುಕೊಂಡು ಮುಂದುವರಿಯಬೇಕಾಗುತ್ತದೆ. ಇದು ಅಸಾಧಾರಣವಾದ ದಾರಿಯಾದ್ದರಿಂದ ಗುರೂಪದೇಶ, ಆಶ್ರಯದ ವಿಚಾರವನ್ನು ಶಂಕರರು ಹೇಳುತ್ತಾರೆ. ಕೆಲವರಿಗೆ ವಿಚಾರವು ಬಹು ಚೆನ್ನಾಗಿ ಗೊತ್ತಿರುತ್ತದೆ, ಆದರೆ ಅದನ್ನು ಆಸಕ್ತರಿಗೆ ತಿಳಿಯುವಂತೆ ಹೇಳುವ ಚತುರತೆ ಇರುವುದಿಲ್ಲ ಅಥವಾ ಅಂತಹ ಕಾರುಣ್ಯವಿರುವುದಿಲ್ಲ ಎಂದು ಹೇಳಬಹುದು. ಒಂದು ವಿಚಾರವನ್ನು ನಾವು ಅರಿತಿದ್ದೇವೆ ಎನ್ನುವುದು ಅದನ್ನು ನಾವು ಹೇಗೆ ಬೇಕಾದರೂ ವಿವರಿಸಬಲ್ಲೆವು ಎನ್ನುವುದರ ಮೂಲಕ ತಿಳಿಯುತ್ತದೆ. ಗುರುವಿಗೆ ಕಲಿಸುವುದರ ಮತ್ತು ಕಲಿಯುವವರ ಬಗೆಗೆ ಪ್ರೀತಿ, ಸಹನೆ ಕಾರುಣ್ಯಗಳು ಇರಬೇಕಾಗುತ್ತದೆ. ಇಲ್ಲಿ ನನ್ನ ಕಾಲೇಜು ದಿನದ ಅನುಭವದ ವಿಷಯವೊಂದನ್ನು ಹೇಳಬಯಸುತ್ತೇನೆ. ನಾನು ಉಜಿರೆಯ ಧ.ಮ. ಕಾಲೇಜಿನಲ್ಲಿ ಕಲಿಯುತ್ತಿದ್ದಾಗ ನಮಗೆ ಜಯಲಕ್ಷ್ಮಿ ( ಅವರು ಬಹಳ ದಪ್ಪಗಿದ್ದಿದ್ದರಿಂದ ತಮ್ಮನ್ನು ತಾವೇ ’ಗಜಲಕ್ಷ್ಮಿ’ ಎಂದು ಕರೆದುಕೊಳ್ಳುತ್ತಿದ್ದರು !) ಎಂಬ ಅಧ್ಯಾಪಕರು ಗಣಿತವನ್ನು ಕಲಿಸುತ್ತಿದ್ದರು. ಅವರು ಟ್ರಿಗ್ನಾಮೆಟ್ರಿ ಹೇಳಿಕೊಡುವಾಗ ನಮ್ಮಲ್ಲಿ ಬಹಳಷ್ಟು ಮಂದಿಗೆ ನಿದ್ದೆಯ ಮಂಪರು ಬರುತ್ತಿತ್ತು.
( ಆ ವಿಷಯವೇ ಹಾಗೇ ಅನ್ನಿ !). ಪಾಠದ ಮಧ್ಯೆ ನಮ್ಮ ಗುರುಗಳು ಆಗಾಗ್ಗೆ ಡಯಾಸನ್ನು ಜೋರಾಗಿ ಕಾಲಲ್ಲಿ ಕುಟ್ಟುವುದೋ ಅಥವಾ cos theta = ’some’ degree ಎಂತಲೋ ಜೋರಾಗಿ ಕಿರುಚುತ್ತಿದ್ದರು. ಹಾಗೇ ಸದ್ದು ಜೋರಾದಾಗ ಮಂಪರುಗಳಿಗೆ ಎಚ್ಚರಿಕೆಯಾಗುತ್ತಿತ್ತು !. ಪಾಠದ ಮಧ್ಯೆ ಅವರು ತೆರೆದ ಮನದಿಂದ ಮಾತನಾಡುತ್ತಿದ್ದರು "ಮಕ್ಕಳೇ, ನಾನೂ ನಿಮ್ಮಂತೆ ಟ್ರಿಗ್ನಾಮೆಟ್ರಿ ಕ್ಲಾಸಿನಲ್ಲಿ ನಿದ್ದೆ ಮಾಡಿಕೊಂಡೇ ಬಂದವಳು. ನನಗೂ ನಿಮ್ಮ ಕಷ್ಟ ಗೊತ್ತಾಗುತ್ತದೆ. ಈ ಪಾಠವೇ ಹೀಗೆ. ಅದಕ್ಕೆ ಆಗಾಗ್ಗೆ ನಿಮ್ಮನ್ನು ಎಚ್ಚರಗೊಳಿಸುತ್ತಿರುತ್ತೇನೆ " ಎಂದು ಹೇಳುತ್ತಿದ್ದರು. ಎಂತಹಾ ಕಾರುಣ್ಯ ನೋಡಿ ನಮ್ಮ ಗುರುಗಳದ್ದು !. ಅವರು ನಿದ್ದೆ ಮಾಡಿ ಕಲಿತಿದ್ದರು ಎನ್ನುವ ಕಾರಣಕ್ಕೆ ನಾವು ಅವರಿಂದ ಏನು ಕಲಿಯುವುದಿದೆ ಎಂದು ಭಾವಿಸಿದ್ದಿದ್ದರೆ ಗಣಿತದಲ್ಲಿ ನಮ್ಮದು ಶೂನ್ಯಸಂಪಾದನೆಯಾಗಿರುತ್ತಿತ್ತು.
ಅವರು ಇಡೀ ಕಾಲೇಜಿಗೆ ಅತ್ಯುತ್ತಮ ಗಣಿತ ಉಪನ್ಯಾಸಕರು ಎನ್ನುವುದು ಹೆಮ್ಮೆಯ ವಿಚಾರವಾಗಿತ್ತು .
’ನೆಚ್ಚಿದ್ದ ಗುರುವೊಬ್ಬರು ಉಪ್ಪಿನಕಾಯಿ ತಿಂದರು’ ಎಂದ ಮಾತ್ರಕ್ಕೆ ಅವರಲ್ಲಿ ಗುರುವಿನ ಲಕ್ಷಣವೇ ಇಲ್ಲ ಎಂದು ತೀರ್ಮಾನಿಸಲು ಸಾಧ್ಯವೆ ?!. ಶಿಷ್ಯನಿಗೆ ಬೇಕಾದ್ದು ಅವರಲ್ಲಿರುವುದು ಮುಖ್ಯವಾಗುತ್ತದೆ.

ಗುರುವಾದವನು ಬ್ರಹ್ಮನಿಷ್ಠ ಅಥವಾ ಬ್ರಹ್ಮಸಂಪ್ರದಾಯದವನಾಗಿರಬೇಕು ಎಂದು ಹೇಳುತ್ತಾರೆ.
( ಸಮ್ಯಕ್ ಪ್ರಕೃಷ್ಟತಯಾ ದಾಯವರೂಪೇಣ ಸಮಾಗತಮ್ ಇತಿ ಸಂಪ್ರದಾಯಃ = ಚೆನ್ನಾಗಿ, ವಿಶೇಷವಾಗಿ ಬಳುವಳಿ ಅಥವಾ ನಮ್ಮಪಾಲಿಗೆ ಬಂದಿರುವುದೇ ಸಂಪ್ರದಾಯ ). ನಿಷ್ಠೆಯಿದ್ದಲ್ಲಿ ಬ್ರಹ್ಮಜ್ಞಾನದ ಹಾದಿ ಸುಗಮವಾಗುತ್ತದೆ. ಯಾವುದೋ ಒಂದು ವಿಚಾರಕ್ಕೆ ಕಟ್ಟುಬಿದ್ದು ಇಡೀ ವ್ಯವಸ್ಥೆಯನ್ನು ಕೀಳಾಗಿ ಅರ್ಥೈಸುವುದು ’ನಿಷ್ಠೆ’ ಎನ್ನುವುದಕ್ಕೆ ವಿರೋಧವಾಗುತ್ತದೆ.
ನಮಗೆ ಆರನೆ ತರಗತಿಯಲ್ಲಿ ’ದಯಾನಂದ ಸರಸ್ವತಿಯವರ’ ಕುರಿತು ಪಾಠವೊಂದಿತ್ತು. ದೇವ ನಿಷ್ಠರಾದ ದಯಾನಂದ ಸರಸ್ವತಿಯವರು ಶಿವರಾತ್ರಿಯ ಜಾಗರಣೆಗೆಂದು ಹೋದ ದೇವಾಲಯದಲ್ಲಿ ಮಧ್ಯರಾತ್ರಿಯ ಒಂದು ಹೊತ್ತಿನಲ್ಲಿ ಶಿವಲಿಂಗದ ಮೇಲೆ ಇಲಿಗಳು ಓಡಾಡಿದುವಂತೆ. ಅದನ್ನು ಕಂಡ ಸರಸ್ವತಿಗಳು ಹೀಗೆ ಹೇಳುತ್ತಾರೆ " ತನ್ನ ಮೈಮೇಲೆ ಓಡಾಡುವ ಇಲಿಗಳನ್ನು ಓಡಿಸಲಾರದ ಈ ಶಿವ ಜಗತ್ತಿನ ಜೀವಕೋಟಿಯನ್ನು ಹೇಗೆ ತಾನೇ ಕಾಪಾಡಿಯಾನು ?" ಎಂದು.
( ದಯಾನಂದರ ಬಗೆಗೆ ಟೀಕೆ ಮಾಡುವ ಅಥವಾ ಖಂಡನೆ ಮಾಡುವ ಯೋಗ್ಯತೆ ನನಗಿಲ್ಲ. ನನ್ನ ವಿಚಾರವೇನಿದ್ದರೂ ಈ ಒಂದು ವಾಕ್ಯದ ಬಗೆಗೆ ಮಾತ್ರ). ಜಗತ್ತಿನ ಜೀವಕೋಟಿಯಲ್ಲಿ ಪಾಪದ ಇಲಿಯೂ ಸೇರಿದೆ ಎನ್ನುವುದು ಸರಸ್ವತಿಗಳಿಗೆ ಏಕೆ ಹೊಳೆಯಲಿಲ್ಲ ? . ದೇವನಿಷ್ಠರಾಗಿದ್ದಾಗ ಜಡವಾದ ಶಿಲೆಯಲ್ಲೇ ಶಿವನನ್ನು ಕಂಡಿದ್ದ ಸರಸ್ವತಿಗಳಿಗೆ ಜೀವವಿರುವ, ಚೈತನ್ಯಪೂರ್ಣವಾದ ಇಲಿಯಲ್ಲಿ ಶಿವನನ್ನು ಕಾಣಲು ಸಾಧ್ಯವಾಗಲಿಲ್ಲವೇ ?!. ಇದಕ್ಕೆ ಸಾರಸಗಟು ವಿಗ್ರಹಾರಾಧನೆಯನ್ನೇ ಅವರು ತಿರಸ್ಕರಿಸಬೇಕಿತ್ತೇ ?. ಈ ನಿಟ್ಟಿನಲ್ಲಿ ನೋಡಿದರೆ ಆರ್ಯಸಮಾಜದಲ್ಲಿ ಸರಸ್ವತಿಗಳ ಭಾವಚಿತ್ರವನ್ನಿಟ್ಟು ಪೂಜಿಸುವುದೂ, ವೇದಗಳನ್ನು ಹೇಳಿಕೊಂಡು ಹವನ (ಬೆಂಕಿಗೆ ತುಪ್ಪ ಸುರಿಯುವುದು ಎನ್ನೋಣವೇ ?) ಮಾಡುವುದೂ ತಪ್ಪೇ ಆಗುತ್ತದೆ !. ಬ್ರಹ್ಮವಿದ್ಯೆಯ
 ಅರಿವಿಗೆ  ನಿಷ್ಠೆ ಎನ್ನುವುದು ಬಹಳ ಮುಖ್ಯವಾದ ಅಂಶವಾಗಿದೆ.

ಆತ್ಮವಿದ್ಯೆಯ ಸಾಧನೆಗೆ ಬೇಕಾದ ಸಾಧನಗಳ ವಿವರಣೆಯನ್ನು ’ಸಾಧನ ಚತುಷ್ಟಯ’ ಎಂಬ ವಿಭಾಗದಲ್ಲಿ ಶಂಕರರು ನಿರೂಪಿಸುತ್ತಾರೆ. ಮುಂದಿನ ಕಂತಿನಲ್ಲಿ ಇದರ ಬಗೆಗೆ ವಿವರವಾಗಿ ತಿಳಿಯೋಣ.

---------------------------------------------------

ಟಿಪ್ಪಣಿ:

೧) ಪದವಾಕ್ಯಪ್ರಮಾಣಜ್ಞ : ಪದಶಾಸ್ತ್ರವೆಂದರೆ ಭಾಷೆಯ ವ್ಯಾಕರಣದ ತಿಳುವಳಿಕೆ ಅಥವಾ ನುಡಿಯರಿಮೆ.
ವಾಕ್ಯಶಾಸ್ತ್ರವೆಂದರೆ ತರ್ಕ ಮತ್ತು ಮೀಮಾಂಸಶಾಸ್ತ್ರಗಳ ಅರಿವು. ಪ್ರಮಾಣವೆಂದರೆ
ನ್ಯಾಯಶಾಸ್ತ್ರಗಳ ತಿಳುವಳಿಕೆ. "ಪದವಾಕ್ಯಪ್ರಮಾಣಜ್ಞ" ಎಂಬುದನ್ನು ಯತಿಗಳ
ಬಿರುದಾವಳಿಯನ್ನು ಹೇಳುವಾಗ ಬಳಸುವುದನ್ನು ಗಮನಿಸಬಹುದು.


ವಂದನೆಗಳೊಂದಿಗೆ..

Tuesday, August 23, 2011

ಗುಡಿಗೆತಂದ ಹೂಗಳೆಲ್ಲಾ

ಇಲ್ಲೆರಡು ಹಾಡುಗಳಿವೆ . ವೇದಸುಧೆಯಲ್ಲಿ ಹಾಕುವುದು ಸೂಕ್ತವೋ ಅಲ್ಲವೋ ಅನ್ನೋ ಅನುಮಾನದಿಂದ ಸುಮ್ಮನಿದ್ದೆ. ಹಾಡು ನನ್ನ ರಚನೆ. ಕು|| ಇನ್ಚರಾ ನಾಗೇಶ್ ಮತ್ತು ಶ್ರೀಮತಿ ಲಲಿತಾ ರಮೇಶ್ ಹಾಡಿದ್ದಾರೆ. ಒಂದು ಕಾರ್ಯಕ್ರಮದಲ್ಲಿ ಹಾಡಿದ್ದರಿಂದ ಸ್ನೇಹಿತ ಮಂಜುನಾಥ್ ನಿರೂಪಿಸಿದ್ದಾರೆ. ವೈಚಾರಿಕವಾಗಿ ಚಿಂತನೆ ಮಾಡುವ ಕೆಲವು ಅಂಶಗಳಿರುವುದರಿಂದ ವೇದಸುಧೆಯಲ್ಲಿ ಪ್ರಕಟಿಸುವುದು ತಪ್ಪಾಗುವುದಿಲ್ಲವೆಂದು ಪ್ರಕಟಿಸಿರುವೆ.




Sunday, August 21, 2011

ಶ್ರೀ ಕೃಷ್ಣಜನ್ಮಾಷ್ಟಮಿ

ವೇದಸುಧೆಯ ಓದುಗರೆಲ್ಲರಿಗೆ ದೇವಮಾನವ ಶ್ರೀಕೃಷ್ಣನ ಜನ್ಮದಿನದ ಶುಭಾಶಯಗಳು.

ಇದೀಗ ಗಮನಿಸಿದೆ. ಇದು ವೇದಸುಧೆಯ 600ನೆಯ ಪೋಸ್ಟ್!

ಎಂದೂ ಮುಗಿಯದು ಹರಿಕಥೆಯು !

ಚಿತ್ರಕೃಪೆ: ಅಂತರ್ಜಾಲ

ಎಂದೂ ಮುಗಿಯದು ಹರಿಕಥೆಯು !


ಮುರಳಿಯ ಮೋಹಕ ನಾದಕೆ ಗೋಕುಲ
ತಲೆದೂಗಿತು ಒಲೆದಾಡುತಲಿ
ತರಳನ ಮೋಡಿಯ ದಾಳಕೆ ವ್ಯಾಕುಲ
ಚಿತ್ತತೊರೆದು ನಲಿದಾಡುತಲಿ

ಹುಟ್ಟಿದ ಮಥುರೆಯ ತೊರೆಯುತಲಲ್ಲಿಗೆ
ಸಟ್ಟನೆ ಸಾಗುತ ಬಂದನವ
ತಟ್ಟಿದ ಎಲ್ಲರ ಹೃದಯವ ಮೆಲ್ಲಗೆ
ಬೆಟ್ಟವನೆತ್ತುತ ಕಂದನವ !!

ಗಡಿಗೆಯನೊಡೆದಾ ಬೆಣ್ಣೆಯಕದ್ದಾ
ಅಡಗಿಸಿ ಗೋಪಿಕೆ
ವಶನಗಳ
ಬೆಡಗಿಯರೆಲ್ಲರ ಹೆಣ್ಣಿಮೆಗೆದ್ದಾ
ಒಡನಾಡುತ ತಿಂದಶನಗಳ

ಜಾವದಿ ಕರೆದಾ ಗೋವುಗಳೆಲ್ಲವ
ಭಾವದಿ ಬಂದವು ಕರುಗಳವು
ಹಾವನು ತುಳಿದಾ ಜೀವಗಳೆಲ್ಲವ
ಸಾವಿನಿಂದ ತಾ ಹೊರಗೆಳೆದೂ

ಎಳೆತನದಲಿ ತಾ ಕುಚೇಲಗೊಲಿದಾ
ಗೆಳೆತನವಾಯಿತು ಹೆಮ್ಮರವು
ಗಳಿಕೆಯ ಹಿಡಿಯವಲಕ್ಕಿಯಪಡೆದಾ
ಅಳಿಸುತ ಬಡತನ ಸುಮ್ಮನವ

ಕರೆಯಲು ಬಂದಾ ಅಕ್ರೂರನ ಮನ
ಒರೆಗೆ ಹಚ್ಚಿ ತಾ ಪರಿಗಣಿಸಿ
ಅರಿವಲಿ ಭಕ್ತಗೆ ತಾ ಭಗವಂತನೇ
ಹೊರಗಡೆ ಬಂಧುವು ಎಂದೆನಿಸಿ

ಒದೆಯುತ ಮಾವನ ವಧಿಸಿದ ಅಳಿಯನು
ಸದೆಬಡಿಯುತ ಚಾಣೂರನನು
ಗದೆಯನು ನೀಡುತ ತಾತನ ಕೂರಿಸಿ
ಬದಲಿಸಿದನು ರಾಜ್ಯಭಾರವನು

ಪಾಂಚಾಲಿಯ ವೇದನೆಯನು ಗ್ರಹಿಸಿದ
ಪಾಂಚಜನ್ಯಧಾರಿಯು ಒಳಗೆ
ಕಾಂಚಾಣದ ಮದ ಹರಿದಾವೇಳೆಗೆ
ವಾಂಛಿತಕ್ಷಯಾಂಬರ ಹೊರಗೆ

ನಡೆಸಿದ ಭಾರತ ತರಿಯುತ ಹಲವರ
ಜಡದೇಹಕೆ ಅಂತ್ಯವ ಕರೆದು
ಗುಡಿಸಿ ಅಧರ್ಮವ ಬಡಿಸಿದ ಗೀತೆಯ
ತಡಮಾಡದೆ ಸತ್ಯವ ತೆರೆದು

ಒಂದೇ ಎರಡೇ ಘಟನೆಯು ಸಾವಿರ
ಎಂದೂ ಮುಗಿಯದು ಹರಿಕಥೆಯು !
ಚಂದದಿ ನೀವಿದ ಕೇಳಿದ ರೀತಿಗೆ
ಅಂದದ ಮಂಗಳ ಸಾರುವೆನು

---ವಿ. ಆರ್.ಭಟ್

Saturday, August 20, 2011

ವೇದೋಕ್ತ ಜೀವನ ಪಥ: ಮಾನವಧರ್ಮದ ಮೂರು ಅಭಿನ್ನ ಅಂಗಗಳು - ೬:


     ಕರ್ಮ ಒಂದು ಬಗೆಯಲ್ಲ, ವೈಯಕ್ತಿಕ, ಪಾರಿವಾರಿಕ, ಸಾಮಾಜಿಕ, ರಾಷ್ಟ್ರೀಯ, ಆರ್ಥಿಕ, ನೈತಿಕ, ಆಧ್ಯಾತ್ಮಿಕ - ಹೀಗೆ ಜೀವನದ ನಾನಾ ಕ್ಷೇತ್ರಗಳನ್ನು ವ್ಯಾಪಿಸಿರುತ್ತದೆ. ಕರ್ಮ, ಪರರಿಗೆ ಕೇಡಾಗದಂತೆ ತನ್ನ ಹಿತಕ್ಕಾಗಿ, ಸರ್ವಮುಖೀ ಉನ್ನತಿಗಾಗಿ ಮಾಡುವ, ಪರರ ಸರ್ವಮುಖೀ ಉನ್ನತಿಗಾಗಿ ನೆರವಾಗಿ ನಿಂತು ಮಾಡುವ, ಎಲ್ಲ ಕ್ಷೇತ್ರಗಳಲ್ಲಿನ ಕರ್ತವ್ಯಗಳೂ ವೇದಗಳ ದೃಷ್ಟಿಯಲ್ಲಿ ಅವಶ್ಯವಾಗಿ ಮಾಡಲ್ಪಡಲೇಬೇಕಾದುದಾಗಿದೆ. ಅದರಲ್ಲಿಯೂ ರಾಷ್ಟ್ರದ ಹಿತ ಎದುರು ನಿಂತಾಗ ತನ್ನ ಹಿತದ ಸ್ವಾರ್ಥವನ್ನೂ ಬಿಟ್ಟು ಕೇವಲ ಪರಾರ್ಥವನ್ನೇ ನೋಡಬೇಕಾಗುವುದು. ಕರ್ತವ್ಯಕ್ಷೇತ್ರದಿಂದ ಸಂನ್ಯಾಸದ ಅಥವಾ ತ್ಯಾಗದ ಹೆಸರಿನಲ್ಲಿ ಓಡಿಹೋಗುವ ಪ್ರಶ್ನೆ ವೈದಿಕ ಧರ್ಮದಲ್ಲಿ ಇಲ್ಲವೇ ಇಲ್ಲ. ಇಂತಹ ಸಮಸ್ತ ಕರ್ತವ್ಯಗಳನ್ನೂ ಒಟ್ಟು ಸೇರಿಸಿ, ವೇದಗಳು ಯಜ್ಞ ಎಂದು ಕರೆಯುತ್ತವೆ ಮತ್ತು ಯಜ್ಞದ ಬಗೆಗೆ ಈ ಸಂದೇಶವನ್ನು ನೀಡುತ್ತದೆ :-


ಯಜ್ಞೋ ಹಿ ತ ಇಂದ್ರ ವರ್ಧನೋ ಭೂದುತ ಪ್ರಿಯಃ ಸುತಸೋಮೋ ಮಿಯೇಧಃ |
ಯಜ್ಞೇನ ಯಜ್ಞಮವ ಯಜ್ಞಿಯಃ ಸನ್ ಯಜ್ಞಸ್ತೇ ವಜ್ರಮಹಿಹತ್ಯ ಆವತ್ ||
(ಋಕ್. ೩.೩೨.೧೨.)

     [ಇಂದ್ರ] ದೇಹಾಧೀಶನಾದ, ಇಂದ್ರಿಯವಾನ್ ಜೀವ! [ಹಿ] ನಿಜವಾಗಿ [ಯಜ್ಞಃ] ಯಜ್ಞವೇ [ತೇ ವರ್ಧನಃ] ನಿನಗೆ ಅಭಿವೃದ್ಧಿಕಾರಕವೂ [ಉತ] ಮತ್ತು [ಪ್ರಿಯಃ] ಪ್ರಿಯಕರವೂ [ಸುತಸೋಮಃ] ಹಿಂಡಲ್ಪಟ್ಟ ಆನಂದರಸವನ್ನುಳ್ಳದ್ದೂ [ಮಿಯೇಧಃ] ಮೈತ್ರಿಯನ್ನು ವರ್ಧಿಸತಕ್ಕುದೂ [ಭೂತ್] ಆಗಿದೆ. [ಯಜ್ಞಿಯಃ ಸನ್ ಯಜ್ಞೇನ] ಯಜ್ಞಕರ್ತೃವಾಗಿ ಸತ್ಕರ್ಮದಿಂದಲೇ [ಯಜ್ಞಂ ಅವ] ಯಜ್ಞವನ್ನು, ಸತ್ಕರ್ಮವನ್ನು ರಕ್ಷಿಸು. [ಅಹಿ ಹತ್ಯೇ] ಕುಟಿಲತನವನ್ನು ನಾಶಮಾಡುವುದರಲ್ಲಿ [ಯಜ್ಞಃ] ಯಜ್ಞವು [ತೇ ವಜ್ರಮ್] ನಿನ್ನ ವಜ್ರಾಯುಧವಾಗಿ [ಆ ಆವತ್] ರಕ್ಷಿಸುತ್ತದೆ.
     ಎಂತಹ ಭವ್ಯ ಆದೇಶ! ಸತ್ಕರ್ಮದಿಂದ ನಮ್ಮ ಆತ್ಮಗಳ ರಕ್ಷಣೆಯೂ ಆಗುತ್ತದೆ. ಯಜ್ಞವನ್ನು ನಾವು ರಕ್ಷಿಸಿದರೆ, ಯಜ್ಞ ನಮ್ಮನ್ನು ರಕ್ಷಿಸುತ್ತದೆ. ಯಜ್ಞ-ಸತ್ಕರ್ಮ, ಧರ್ಮದ ಕ್ರಿಯಾತ್ಮಕ ರೂಪ. ಸತ್ಕರ್ಮದಿಂದ ಪುಷ್ಟೀಕರಿಸಲ್ಪಡದ ಜ್ಞಾನ, ಕೇವಲ ಗ್ರಾಂಥಿಕ ಜ್ಞಾನವಾಗಿ ತಲೆಯಲ್ಲೇ ಉಳಿದುಹೋಗುತ್ತದೆ. ಅದೊಂದು ನಿರರ್ಥಕ ಭಾರವಾಗಿ ಪರಿಣಮಿಸುತ್ತದೆ. ಆದಕಾರಣ, ಜ್ಞಾನವನ್ನು ಸಾರ್ಥಕಪಡಿಸಲು ಸತ್ಕರ್ಮಗಳನ್ನು ಮಾಡುತ್ತಲೇ ಜೀವನ ಪೂರ್ತ ಉಸಿರಾಡಲಿಚ್ಛಿಸಬೇಕು.
*****************

Friday, August 19, 2011

ವಿವೇಕ ಚೂಡಾಮಣಿ ಭಾಗ -೮



ಗ್ರಂಥದ ಮುಂದುವರಿದ ಭಾಗ

अर्थस्य निश्चयो दृष्टो  विचारेण हितोक्तितः।
न स्नानेन न दानेन प्राणायाम शतेनवा ॥१३॥

ಅರ್ಥಸ್ಯ ನಿಶ್ಚಯೋ ದೃಷ್ಟೋ ವಿಚಾರೇಣ ಹಿತೋಕ್ತಿತಃ|
(= ಒಳ್ಳೆಯ ವಚನಗಳನ್ನು ಕೇಳಿ ವಿಚಾರಮಾಡುವುದರಿಂದಲೇ ಆತ್ಮಾರ್ಥ ನಿಶ್ಚಯವು)
ನ ಸ್ನಾನೇನ ನ ದಾನೇನ ಪ್ರಾಣಾಯಾಮ ಶತೇನವಾ ||೧೩||
(=ಸ್ನಾನ, ದಾನ ಮತ್ತು ನೂರಾರು ಪ್ರಾಣಾಯಾಮಗಳಿಂದಲ್ಲ)

ಸದ್ಗುರುಗಳಾದವರ ಒಳ್ಳೆಯ ಮಾತುಗಳನ್ನು , ಉಪದೇಶಗಳನ್ನು ಆಲಿಸುವುದರ ಜೊತೆಗೆ ಅಂತಹ ವಿಚಾರಗಳನ್ನು ಒರೆಗೆ ಹಚ್ಚಿ ತಿಳಿದುಕೊಂಡು ವಿವೆಚನೆಯಿಂದ ನಿರ್ಣಯಿಸಿಕೊಳ್ಳುವ ಆತ್ಮಾರ್ಥವು ಮಿಗಿಲಾದುದು.
ಇಂತಹ ಆತ್ಮಾರ್ಥಜ್ಞಾನವು ಕೇವಲ ಸ್ನಾನ, ದಾನ ಮತ್ತು ನೂರಾರು ಬಾರಿ ಪ್ರಾಣಾಯಾಮಗಳನ್ನು ಮಾಡುವುದರಿಂದ ಸಿದ್ಧಿಸುವುದಿಲ್ಲ ಎಂದು ತಿಳಿಸುತ್ತಾರೆ.

ಆಕ್ಷೇಪ : ’ವಸ್ತುಸಿದ್ಧಿರ್ವಿಚಾರೇಣ’ ಎಂದು ಈಗಾಗಲೇ ತಿಳಿದಿರುವುದರಿಂದ ಸದ್ಗುರುಗಳ ಆಪ್ತವಚನದ ಅಗತ್ಯವಿದೆಯೆ ?

ಸಮಾಧಾನ :  ಹಗ್ಗವನ್ನೇ ಹಾವೆಂದು ತಿಳಿದು ಭ್ರಮೆಯಲ್ಲಿದ್ದಾಗ ವಾಸ್ತವದ ಅರಿವು ತಂತಾನೇ ಮೂಡುವುದು ಕಷ್ಟವಾಗುತ್ತದೆ. ಆಪ್ತರೊಬ್ಬರು ಹಿತವಾದ ಮಾತುಗಳಿಂದ ಸಂದರ್ಭವನ್ನು ವಿವರಿಸಿದಾಗ ಮನಸ್ಸು ತಿಳಿಯಾಗುತ್ತದೆ. ಭ್ರಮೆಯು ತೊಲಗುತ್ತದೆ.

ಶ್ಲೋಕದ ಎರಡನೆಯ ವಾಕ್ಯವನ್ನು ಯೋಗಗುರು ’ಬಾಬಾ ರಾಮದೇವರು ’ ಗಮನಿಸಿದರೆ, ಬಹುಶಃ ಅವರಿಗೆ ಕಡುಕೋಪ ಬರಬಹುದು. ವೇದಾಂತದ ವಿಚಾರವೇ ಹಾಗೆ !. ಅರ್ಜುನನು ಮೀನಿನ ಕಣ್ಣಿಗೆ ಬಾಣವನ್ನು ಹೊಡೆಯುವಾಗ ಆತನ ಗುರಿಯಿದ್ದುದು ಕಣ್ಣಿನೆಡೆಗೆ ಮಾತ್ರ !. ಕಣ್ಣೊಂದನ್ನು ಬಿಟ್ಟು ಆತನಿಗೆ ಬೇರೇನೂ ಕಾಣಿಸುತ್ತಿರಲಿಲ್ಲ. ಮೀನಿನ ಉಳಿದ ಅಂಗಾಗಗಳೆಲ್ಲಾ ಆತನಿಗೆ ನಿರ್ಲಕ್ಷ್ಯ ಅಥವಾ ಮಿಥ್ಯೆ. ಆತನ ಗುರಿಯೊಂದೇ ಸತ್ಯ !. ಹೀಗೆ ಆತ್ಮಜ್ಞಾನದ ಅನ್ವೇಷಣೆಯಲ್ಲಿ ತೊಡಗುವವರಿಗೆ ಅದೊಂದೇ ಪರಮಗುರಿಯಾಗಿರಬೇಕಾಗುತ್ತದೆ. ಉಳಿದುವೆಲ್ಲಾ ಆ ಗುರಿಯನ್ನು ತಲುಪುವ ನಿಟ್ಟಿನಲ್ಲಿ ನಿಮಿತ್ತವಾಗುತ್ತದೆ.
ಸ್ನಾನ, ದಾನಾದಿಗಳು ಮತ್ತು ಪ್ರಾಣಾಯಾಮಗಳಾವುವೂ ಆತ್ಮಜ್ಞಾನಾರ್ಥಿಯ ಪರಮಗುರಿಯಲ್ಲ. ಹಾಗಾಗಿ ಇವುಗಳಿಂದ ಪ್ರಯೋಜನವಿಲ್ಲ ಎಂದು ಹೇಳುತ್ತಾರೆ.

ಆಕ್ಷೇಪ:       ಸ್ನಾನ, ದಾನ ಮತ್ತು ಪ್ರಾಣಾಯಾಮಗಳೆಲ್ಲಾ ಬಳಕೆಗೆ ಬಾರದ್ದೇ ? (ವ್ಯರ್ಥವೇ ?) .
ಸಮಾಧಾನ : ಮತ್ತೊಮ್ಮೆ ’ಚಿತ್ತಸ್ಯ ಶುದ್ಧಯೇ ಕರ್ಮ’ ಎನ್ನುವುದನ್ನು ಮನನ ಮಾಡಿಕೊಳ್ಳಬೇಕಾಗುತ್ತದೆ.

ಸ್ನಾನದಲ್ಲಿ ನಿತ್ಯಸ್ನಾನ (ದಿನವೂ ಮೈತೊಳೆದುಕೊಳ್ಳುವುದು. ಶುಚಿತ್ವಕ್ಕಾಗಿ.), ಸೇತುಸ್ನಾನ (’ಸೇತು ಬಂಧೇತು ರಾಮೇಶಮ್’ ಎಂದು ಕೇಳಿದ್ದೆವೆ. ಗಂಡುಮಗುವನ್ನು ಪಡೆಯಲು ರಾಮೇಶ್ವರದ ಪುಣ್ಯತೀರ್ಥಗಳಲ್ಲಿ ಮೀಯವುದು ಎಂಬ ಶಾಸ್ತ್ರಾರ್ಥವಿದೆ), ಗಂಗಾಸ್ನಾನ (ಗಂಗಾನದಿಯಲ್ಲಿ ಮಿಂದು ಬಂದರೆ ಎಲ್ಲಾ ಪಾಪಗಳೂ ನಿವಾರಣೆ (ಚಿತ್ತಶುದ್ಧಿ!) ಎಂಬ ವಚನವಿದೆ) ಗಳೆಂಬ ಫಲಮೂಲವಾದ ಮೂರು ಪ್ರಸಿದ್ಧ ಕ್ರಿಯೆಗಳಿವೆ. ವಿಚಾರವೇ ಇಲ್ಲದೆ, ಆತ್ಮಶುದ್ಧಿಯೇ ಇಲ್ಲದೆ ಎಷ್ಟು ಕೋಟಿ ತೀರ್ಥಗಳಲ್ಲಿ ಮಿಂದು ಬಂದರೆ ಏನು ಪ್ರಯೋಜನ ?. ಅಜ್ಞಾನವೇ ಎಲ್ಲೆಲ್ಲೂ ಮುಸುಕಿರುವಾಗ ಕತ್ತಲೆಯಲ್ಲದೆ ಬೆಳಕು ಕಾಣುವುದಿಲ್ಲ.  ಕೊಳೆತುಹೋಗುವಷ್ಟು ಸಂಪತ್ತಿದೆ (Tax saving purpose !)   ಎಂದು ದಾನ ಮಾಡುವುದಕ್ಕಿಂತಲೂ ನಿಸ್ವಾರ್ಥ ಭಾವನೆಯಿಂದ ಕೊಡುವ ಚಿಕ್ಕಾಸೇ ಮಿಗಿಲಾದ ದಾನವೆನಿಸಿಕೊಳ್ಳುತ್ತದೆ. ಕರ್ಮಾನುಷ್ಠಾನಕ್ಕಾಗಿ ಮಾಡುವ ಪ್ರಾಣಾಯಾಮವು ಏಕಾಗ್ರತೆ , ಸಹಿಷ್ಣುತೆಗಳಿಗೆ ಮೂಲವಾದರೂ ಕೇವಲ ಅದನ್ನೇ ಹಲವು ನೂರು ಬಾರಿ ಮಾಡುವುದರಿಂದ ಆತ್ಮಾರ್ಥವು ಸಿದ್ಧಿಸುವುದಿಲ್ಲ ಎಂದು ತಿಳಿಸುತ್ತಾರೆ. ಸ್ನಾನ , ದಾನ ಮತ್ತು ಪ್ರಾಣಾಯಾಮಗಳು ನಮ್ಮ ಸುಖ-ಸವಲತ್ತುಗಳನ್ನೇ ಮೇಲಾಗಿಟ್ಟುಕೊಂಡು ನೆಡೆಸುವಂತಹುದಾಗಿರುತ್ತದೆ. ಈಗಿನ ಕಾಲದಲ್ಲಿ ’ಪ್ರಾಣಾಯಾಮ ಮಾಡಿದರೆ ಬಿ.ಪಿ. , ಶುಗರ್ರು, ಹಿಡಿದಲ್ಲಿರುತ್ತೆ’ ಎನ್ನುವ ಮೂಲೋದ್ದೇಶವಿಲ್ಲದೆ ಅದನ್ನು ಆಚರಿಸುವವರು ವಿರಳಾತಿವಿರಳ ಎನ್ನಬಹುದು !.
(ಪ್ರಾಣಾಯಾಮ ಮತ್ತು ಅದರ ಸಮಗ್ರ ವಿಚಾರಗಳು ಅಂತರಜಾಲದಲ್ಲಿ ಸಾಕಷ್ಟು ಲಭ್ಯವಿದೆ. ಆಸಕ್ತರು ಜಾಲಾಡಬಹುದು).

ಹಿತೋಕ್ತಿಗಾಗಿ ಯಾರನ್ನು ಆಶ್ರಯಿಸಬೇಕು ಎನ್ನುವುದನ್ನು ಶಂಕರರು ಮುಂದಿನ ಶ್ಲೋಕದಲ್ಲಿ ನಿರೂಪಿಸುತ್ತಾರೆ.

अधिकारिणमाशास्ते फलसिद्धिर्विशेषतः ।
उपाया देशकालाद्याः सन्तस्यां सहकारिणः॥१४||

ಅಧಿಕಾರಿಣಮಾಶಾಸ್ತೇ ಫಲಸಿದ್ಧಿರ್ವಿಶೇಷತಃ |
(= ಫಲಸಿದ್ಧಿಗಾಗಿ (=ಆತ್ಮವಿದ್ಯೆ) ಗುರುವಿನ ಬಳಿ ಸಾರುವುದು)
ಉಪಾಯಾ ದೇಶಕಾಲಾದ್ಯಾಃ ಸಂತ್ಯಸ್ಯಾಂ ಸಹಕಾರಿಣಃ ||೧೪||
(=ದೇಶ, ಕಾಲ, ಉಪಾಯಗಳು ಫಲಸಿದ್ಧಿಗೆ(=ಅಸ್ಯಾಂ) ಸಹಾಯಕವಾಗುತ್ತದೆ)

 ಆತ್ಮವಿದ್ಯೆಯ ಸಿದ್ಧಿಗಾಗಿ (ಫಲಸಿದ್ಧಿ ಎನ್ನುವುದನ್ನು ವಿಶೇಷವಾಗಿ ಗಮನಿಸಬೇಕು. ಇದು ಫಲಾಪೇಕ್ಷೆಯಲ್ಲ !) ಗುರುವನ್ನೇ ಆಶ್ರಯಿಸಬೇಕು ಮತ್ತು ಅಂತಹ ಸಾಧನೆಗೆ  ಕಾಲ (Time),  ದೇಶ ( Space) ಮತ್ತು ಉಪಾಯ (Method) ಗಳು ನೆರವಿಗೆ ಬರುತ್ತವೆ ಎಂದು ತಿಳಿಸುತ್ತಾರೆ. ಶ್ರೀ ಶಂಕರರು  ದೇಶ, ಕಾಲ, ಉಪಾಯಗಳು ಭಿನ್ನವಾಗಿರುತ್ತವೆ ಎಂಬುದನ್ನು ಒಪ್ಪಿದ್ದಾರೆ ಎಂಬುದು ಇಲ್ಲಿ ತಿಳಿಯುತ್ತದೆ. ಶಂಕರರು ಇದನ್ನು ಹೇಳಿದ ಕಾಲಕ್ಕೂ ಈಗಿನ ಕಾಲಕ್ಕೂ ತಳುಕು ಹಾಕಿದರೆ ದೊಡ್ಡ ವ್ಯತ್ಯಾಸವೇನೂ ಕಂಡುಬರುವುದಿಲ್ಲ. ಇಂತಹ ವಾಕ್ಯಗಳು ವಾಸ್ತವದ ಅರಿವಿನಿಂದ ಮತ್ತು ವಿಶಾಲ ಮನೋಭಾವದಿಂದ (ಉದಾರತೆ) ಬಂದಿರುವುದೆದು ತಿಳಿಯಬಹುದು. ದೇಶ, ಕಾಲೋಪಾಯಗಳು ಸಹಾಯಕವೆಂದು ಹೇಳುತ್ತಾರೆಯೇ ಹೊರತು ಅದನ್ನೇ ಸಾಧನವೆಂದು ನಿರೂಪಿಸುವುದಿಲ್ಲ.  ಉತ್ತಮ ಗುರುವು ದೊರೆಯದಿದ್ದರೆ ದೇಶ, ಕಾಲಗಳೆಲ್ಲಾ ಅಪ್ರಯೋಜಕ ಎನ್ನುವುದು ಸೂಕ್ಷ್ಮ ವಿಚಾರ.

ಇಲ್ಲಿ ಶಂಕರರು ಯಾವುದನ್ನೂ ಸಂಪೂರ್ಣ ನಿರಾಕರಿಸುವುದಿಲ್ಲ. ಯಾವ ಸಾಧನೆಗೆ ಯಾವ ಸಾಧನಗಳು ಅಗತ್ಯ ಎನ್ನುವುದನ್ನು ವಿವರಿಸುತ್ತಾ ಮನುಷ್ಯನು ತನ್ನ ಪರಮಗುರಿಯೆಡೆಗೆ ಹೇಗೆ ಸಾಗಬೇಕು ಎನ್ನುವುದನ್ನು ತಿಳಿಸುತ್ತಾರೆ. ವೇದಾಂತಿಗಳಿಗೆ ಇರಬೇಕಾದ ಮೂಲ ಗುಣವೇ ಇದು !.  "ನಾನು ಯಾವುದನ್ನೂ ನಿರಾಕರಿಸದೇ ನನ್ನನ್ನು ಯಾವುದೂ ನಿರಾಕರಿಸದಿರುವಂತೆ ಆಗಲಿ " (*ನಿರಾಕರೋದನಿರಾಕರಣಮಸ್ತ್ವನಿರಾಕರಣಂ ಮೇ ಅಸ್ತು  - ಛಾಂದೋಗ್ಯ ಉಪನಿಷತ್ತು. ಶಾಂತಿಮಂತ್ರ) ಎನ್ನುವುದನ್ನು ವೇದಾಂತಿಗಳೂ ತಿಳಿದಿರಬೇಕಾಗುತ್ತದೆ. ಕೆಲವು ಸೂಪರ್ ’ಅಹಂ ಬ್ರಹ್ಮಾಸ್ಮಿ’ಗಳಿಗೆ ತಾವು ನಂಬಿರುವ ತತ್ತ್ವವನ್ನು ಬಿಟ್ಟರೆ ಉಳಿದುದೆಲ್ಲವೂ ಸುಳ್ಳು ಎನ್ನುವ ಗುಣವಿರುತ್ತದೆ. ಇದನ್ನು ಶಂಕರರು ತಮ್ಮ ವಿಚಾರಗಳಿಂದಲೇ ಖಂಡಿಸುತ್ತಾರೆ. ’ಗುರಿಗೆ ಏನು ಬೇಕೋ ಅದನ್ನು ನಂಬು, ಉಳಿದ ವಿಚಾರಗಳನ್ನು ಪುರಸ್ಕರಿಸು’ ಎನ್ನುವ ಸೂಚನೆಯನ್ನು ಅಲ್ಲಲ್ಲಿ ನೀಡಿರುತ್ತಾರೆ.  ಅತ್ಮವಿದ್ಯೆಯ ಅರಿವಿಗೆ ಇಯತ್ತಾಪ್ರಮಾಣ ಎನ್ನುವುದು ಅಗತ್ಯ. ’ಇದಕ್ಕೆ ಇಷ್ಟೇ’ ಎನ್ನುವ ಯೋಗ್ಯತಾಸ್ವೀಕಾರದ ಅರಿವು ಆಸಕ್ತನಿಗೆ ಇರಬೇಕಾಗುತ್ತದೆ.  ಉಗುರನ್ನು ಕತ್ತರಿಸಲು ಸಣ್ಣ ’ನಯಿಲ್ ಕಟರ್’ ಸಾಕು, ಕೊಡಲಿಯ ಅಗತ್ಯವೇನೂ ಇಲ್ಲವಲ್ಲಾ !. ನಯಿಲ್ ಕಟರ್ರೂ ಕಬ್ಬಿಣದ್ದೇ, ಕೊಡಲಿಯೂ ಕಬ್ಬಿಣದ್ದೇ "ಇದನ್ನೆ ಅದನ್ನಾಗಿ ಮಾಡೋಣ" ಎನ್ನುವುದು ಗಾಂಪರಗುಂಪಿನ ಮಾತಾಗುತ್ತದೆ. ನಮ್ಮ ಉದ್ದೇಶಕ್ಕೆ, ಗುರಿಗೆ ಏನು ಬೇಕೋ ಅದನ್ನು ಅನುಸರಿಸುವುದು ಉತ್ತಮವಾದುದು . ಯಾವುದಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಗ್ರಹಿಸುವುದರಿಂದ , ನಂಬುವುದರಿಂದ ಗುರಿಯೆಡೆಗೆ ಸಾಗುವುದು ಸುಗಮ ಎಂದು ಸೂಚಿಸಿರುತ್ತಾರೆ.  ರುಚಿಯಾಗಿದೆ ಎಂದು ಸೇರುಗಟ್ಟಲೆ ತಿನ್ನುವುದು ನಂತರ ತಿಂದಿದ್ದು ಅರಗದೆ  ಕಕ್ಕವುದು !.  ಪೌಷ್ಟಿಕವಾದ , ಉತ್ತಮವಾದ ಆಹಾರವನ್ನು ಕೊಂಚವೇ ತಿನ್ನುವುದರಿಂದ ಆರೋಗ್ಯವೂ ಚೆನ್ನಾಗಿರುತ್ತದೆ.

ಆತ್ಮವಿದ್ಯೆಯನ್ನು ತಿಳಿಸಿಕೊಡುವ ಗುರುವು-ಅಧಿಕಾರಿಯು ಹೇಗಿರಬೇಕು? ಆತನ ಲಕ್ಷಣಗಳೇನು ? ಎನ್ನುವುದನ್ನು ಮುಂದಿನ ಕಂತಿನಲ್ಲಿ ತಿಳಿಯೋಣ.

------------------------------------------
ಟಿಪ್ಪಣಿ :

ಛಾಂದೋಗ್ಯ ಉಪನಿಷತ್ತಿನ ಶಾಂತಿಮಂತ್ರ
-------------------------------------------

 आप्यायन्तु ममाङ्गानि वाक्प्राणश्चक्षुः
श्रोत्रमथो बलमिन्द्रियाणि च सर्वाणि ।
सर्वम् ब्रह्मौपनिषदम् माऽहं ब्रह्म
निराकुर्यां मा मा ब्रह्म
निराकरोदनिराकरणमस्त्वनिराकरणम् मेऽस्तु ।
तदात्मनि निरते य उपनिषत्सु धर्मास्ते
मयि सन्तु ते मयि सन्तु ।
ॐ शान्तिः शान्तिः शान्तिः 


ವಂದನೆಗಳೊಂದಿಗೆ.

Wednesday, August 17, 2011

ಯೋಚಿಸಲೊ೦ದಿಷ್ಟು...೩೮

೧. ಪರಿಶ್ರಮ ಮೆಟ್ಟಿಲಿನ೦ತೆ- ಅದೃಷ್ಟ ಲಿಫ್ಟ್ ನ೦ತೆ! ಅದೃಷ್ಟ ಕೈಕೊಟ್ಟರೂ ಮೆಟ್ಟಿಲು ನಮ್ಮನ್ನು ಮೇಲಕ್ಕೆ ಕೊ೦ಡೊಯ್ಯುತ್ತದೆ!-ಅಬ್ದುಲ್ ಕಲಾ೦
೨ . ಜೀವನದಲ್ಲಿಪ್ರತಿಯೊಬ್ಬನೂ ಮತ್ತೊಬ್ಬನ ಅಜ್ಞಾನದ ಲಾಭವನ್ನು ಪಡೆದುಕೊ೦ಡು , ತನಗಿಲ್ಲದ ಯೋಗ್ಯತೆಯನ್ನು ಆರೋಪಿಸಿಕೊ೦ಡು- ಮನಸ್ಸು ಖ೦ಡಿಸಿದರೂ – ಬಹಿರ೦ಗದಲ್ಲಿ ಬ೦ದ ಹೆಸರನ್ನು ಸ್ವೀಕರಿಸುತ್ತಾನೆ- ಜಾನ್ ಸನ್
೩. ನಾವು ನಮ್ಮ ಬಗ್ಗೆ ಏನನ್ನು ಯೋಚಿಸುತ್ತೇವೆಯೋ ಅದೇ ನಮ್ಮ ಅದೃಷ್ಟವನ್ನು ನಿರ್ಧರಿಸುತ್ತದೆ!
೪. ತನ್ನ ಮನಸ್ಸಿಗೆ ಆನ೦ದ ನೀಡುವ ಭೋಗಗಳನ್ನು ಅನುಭವಿಸುವುದರಲ್ಲಿ ಕಷ್ಟ-ಸುಖ, ಲಾಭ –ನಷ್ಟ, ಕೊನೆಗೆ ಧರ್ಮಾಧರ್ಮಗಳ ಬಗ್ಗೆ ಚಿ೦ತಿಸದೆ ಕೆಲಸ ಮಾಡುವವನೇ ರಸಿಕ- ರಾಳ್ಳಪಳ್ಳಿ ಅನ೦ತಕೃಷ್ಣ ಶರ್ಮ
೫. ಒಬ್ಬ ನಾಗರೀಕ ತನ್ನ ಕಾಲ ಮೇಲೆ ನಿಲ್ಲುವ೦ತೆ ಮಾಡುವುದೇ ರಾಜಕೀಯ- ಸ್ವಾಮಿ ರ೦ಗನಾಥಾನ೦ದ
೬. ಯುಧ್ಧದಿ೦ದ ಕೆಟ್ಟವರ ನಾಶವಾಗದು! ಒಳ್ಳೆಯವರ ನಾಶವಾಗುತ್ತದೆ!!- ಸಾಪೋಕ್ಲಿಸ್
೭. ಒಳ್ಳೆಯದಾದ ಶಾ೦ತಿ ಹಾಗೂ ಒಳ್ಳೆಯದಾದ ಯುಧ್ಧ ಎ೦ದೂ ಇರದು- ಬೆ೦ಜಮಿನ್ ಫ್ರಾ೦ಕ್ಲಿನ್
೮. ಆತ್ಮಕ್ಕಿ೦ತ ಮತಧರ್ಮವನ್ನು ಮೆಚ್ಚುವವನು ತನ್ನ ಗು೦ಪು, ಚರ್ಚು,ಮಸೀದಿ ಹಾಗೂ ದೇವಾಲಯಗಳನ್ನು ಹೆಚ್ಚು ಪ್ರೀತಿಸುತ್ತಾನೆ- ಕೊನೆಗೆ ತನ್ನನ್ನೇ ಇತರೆಲ್ಲರಿಗಿ೦ತಲೂ ಹೆಚ್ಚು ಅ೦ದುಕೊಳ್ಳುತ್ತಾನೆ!
೯. ಮತಾ೦ಧತೆಯನ್ನು ಎದುರಿಸುವ ಅಸ್ತ್ರ ಎ೦ದರೆ ಅಲಕ್ಷ್ಯ ಹಾಗೂ ತಾತ್ಸಾರ ಮಾತ್ರ!!
೧೦.ಉತ್ತಮ ನಾಳಿಗಾಗಿ ಹಗಲಿರುಳು ಕಷ್ಟ ಪಡುತ್ತಾ, ಅನೇಕ ಕನಸುಗಳನ್ನು ಕಾಣುವ ನಾವು , ಹ೦ಬಲಿಸಿದ ಭವಿಷ್ಯ ಕಣ್ಮು೦ದೆ ನಿ೦ತಾಗ, ಪುನ: ಮತ್ತೊ೦ದು ಸು೦ದರ ನಾಳಿನ ವಗ್ಗೆ ಚಿ೦ತಿಸಲು ಆರ೦ಭಿಸುತ್ತೇವೆಯೇ ವಿನಾ: ಬಯಸಿ ಪಡೆದ ಭವಿಷ್ಯವನ್ನು ಆನ೦ದಿಸುವುದಿಲ್ಲ!!
೧೧. ನಮ್ಮ ಜೀವನವೊ೦ದು ಖಾಲಿ ಹಾಳೆ ಯ೦ತೆ! ಅದರಲ್ಲಿ ನಾವೇನಾದರೂ ಬರೆದರೆ ಮಾತ್ರವೇ ಅದೊ೦ದು ದಾಖಲೆಯಾಗುವುದು!
೧೨. ವಿಜ್ಞಾನವು ಧರ್ಮದ ಅಧೀನದಲ್ಲಿದ್ದರೆ ಲೋಕೋನ್ನತಿ!- ಡಾ|| ಡಿ.ವೀರೇ೦ದ್ರ ಹೆಗ್ಗಡೆ
೧೩. ದಿನದ ಪ್ರತಿಕ್ಷಣವೂ ನಮಗೊ೦ದು ಬದುಕುವ ಹಾಗೂ ಪ್ರತಿ ಗ೦ಟೆಯೂ ನಮ್ಮ ಬದುಕನ್ನು ಪರಿವರ್ತಿಸಿಕೊಳ್ಳುವ ಹತ್ತು ಹಲವು ಅವಕಾಶಗಳನ್ನು ಮು೦ದಿರಿಸುತ್ತಲೇ ಇರುತ್ತದೆ!!
೧೪.ಪ್ರತಿಯೊ೦ದು ಸೋಲೂ ಒ೦ದು ಪಾಠವೇ.. ಅರಿತುಕೊಳ್ಳುವುದು ಮಾತ್ರ ನಮ್ಮ ಆಯ್ಕೆ! ಪ್ರತಿಯೊ೦ದು ಜಯವೂ ಒ೦ದು ಕನ್ನಡಿಯೇ.. ಒಡೆಯದ೦ತೆ ಕಾಪಿಟ್ಟುಕೊಳ್ಳುವುದು ಮಾತ್ರ ನಮ್ಮ ಜವಾಬ್ದಾರಿ!- ಪ್ರತಿಯೊಬ್ಬ ಸ್ನೇಹಿತನೂ ಒ೦ದು ರತ್ನವೇ... ಸು೦ದರವಾಗಿ ಕಾಣುವ೦ತೆ ಜತನವಾಗಿ ಧರಿಸುವುದು ಮಾತ್ರ ನಮ್ಮ ಕರ್ತವ್ಯ!!!
೧೫. ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಕಣ್ಣೀರನ್ನು ಹಾಗೂ ಕೋಪವನ್ನು ವ್ಯಕ್ತಪಡಿಸಲು ಪದಗಳನ್ನು ಬಳಸಿಕೊಳ್ಳಬಾರದು!!

Tuesday, August 16, 2011

ಗೂಗಲ್ ಮಾಹಿತಿ

ಹೀಗೇ ಗೂಗಲ್ ನಲ್ಲಿ ಜಾಲಾಡುವಾಗ ಒಂದು ಮಾಹಿತಿ ಸಿಕ್ಕಿತು. http://www.networkedblogs.com/ ನಲ್ಲಿ ವೇದಸುಧೆಯು ಅಧ್ಯಾತ್ಮದ ವಿಚಾರದಲ್ಲಿ ಟಾಪ್-3 ನಲ್ಲಿದೆ
Top 2 Blogs in: Knowledge

Top 3 Blogs in: Adhyatma

ಎಂಬ ಮಾಹಿತಿ.

ಪ್ರಕಟಮಾಡಬೇಕಿನಿಸಿ ಪ್ರಕಟಿಸಿರುವೆ. ಬಗ್ಗೆ ಹೆಚ್ಚಿನ ಅರಿವಿರುವವರು ನಿಮ್ಮ ಅಭಿಪ್ರಾಯ ತಿಳಿಸಬಹುದು. ಅಂತರ್ ಜಾಲದ ಕೊಂಡಿ ಇಲ್ಲಿದೆ.

http://www.networkedblogs.com/topic/Knowlwdge/



Friday, August 12, 2011

ವೇದೋಕ್ತ ಜೀವನ ಪಥ: ಮಾನವಧರ್ಮದ ಮೂರು ಅಭಿನ್ನ ಅಂಗಗಳು - ೫:

ಕೇಳಿರಿ:-


ಅನೃಣಾ ಅಸ್ಮಿನ್ನನೃಣಾಃ ಪರಸ್ಮಿನ ತೃತೀಯೇ ಲೋಕೇ ಅನೃಣಾಃ ಸ್ಯಾಮ |
ಯೇ ದೇವಯಾನಾಃ ಪಿತೃಯಾಣಾಶ್ಚ ಲೋಕಾಃ ಸರ್ವಾನ್ಪಥೋ ಅನೃಣಾ ಆ ಕ್ಷಿಯೇಮ ||
(ಅಥರ್ವ. ೬.೧೧೭.೩.)


     [ಅನೃಣಾಃ ಅಸ್ಮಿನ್] ಋಣರಹಿತರಾಗಿ ಈ ಬ್ರಹ್ಮಚರ್ಯದಲ್ಲಿರೋಣ. [ಪರಸ್ಮಿನ್] ಗಾರ್ಹಸ್ಥ್ಯದಲ್ಲಿಯೂ, [ಅನೃಣಾಃ] ಋಣರಹಿತರಾಗಿರೋಣ. [ತೃತೀಯೇ ಲೋಕೇ] ಮೂರನೆಯದಾದ ವಾನಪ್ರಸ್ಥದಲ್ಲಿಯೂ, [ಅನೃಣಾಃ ಸ್ಯಾಮ] ಋಣರಹಿತರಾಗಿರೋಣ. [ಯೇ ದೇವಯಾನಾಃ] ಯಾವ ಆಧ್ಯಾತ್ಮಿಕ ಗತಿಯ [ಚ] ಮತ್ತು, [ಪಿತೃಯಾಣಾಃ ಲೋಕಃ] ಸಾಂಸಾರಿಕಗತಿಯ ಸ್ಥಿತಿಗತಿಗಳಿವೆಯೋ, [ಸರ್ವಾನ್ ಪಥಃ] ಆ ಎಲ್ಲಾ ಮಾರ್ಗಗಳನ್ನೂ [ಅನೃಣಾಃ ಆ ಕ್ಷಿಯೇಷು] ಋಣರಹಿತರಾಗಿ ಸಂಕ್ರಮಿಸೋಣ.
     ವಾನಪ್ರಸ್ಥ ತೀರಿದ ಮೇಲೆ, ಸಂನ್ಯಾಸ ಸ್ವೀಕರಿಸಲು ಅರ್ಹರಾದವರು ಸಂನ್ಯಾಸಿಗಳು, ದೇವಯಾನ ಮಾರ್ಗಿಗಳಾಗುತ್ತಾರೆ. ಶಕ್ತಿಯಿಲ್ಲದವರು ಹಾಗೆಯೇ ಉಳಿಯುತ್ತಾರೆ. ಯಾವ ದಾರಿಯಲ್ಲೇ ಉಳಿಯಲಿ, ಋಣ ಮಾತ್ರ ಹೊರಬಾರದು. ಬೇರೆಯವರಿಗಾಗಿ ಏನನ್ನೂ ಒಳಿತನ್ನು ಮಾಡದೆ, ತಾನು ಬೇರೆಯವರಿಂದ ಏನನ್ನೂ ಪಡೆಯುವಂತಿಲ್ಲ.
*********************

Wednesday, August 10, 2011

ನಾಗರಪಂಚಮಿ - 'ಪರಿಸರ ಪಂಚಮಿ'ಯಾಗಲಿ


     ನಾಗರಪಂಚಮಿಯಂದು ನಾಗರನಿಗೆ ಹಾಲೆರೆದು, ಧೂಪ, ದೀಪ, ನೈವೇದ್ಯಗಳನ್ನು ಅರ್ಪಿಸುವ ಸಂಪ್ರದಾಯ ಚಾಲನೆಯಲ್ಲಿದೆ. ನಾಗರ ಪಂಚಮಿ ಆಚರಣೆ ಪರಂಪರೆಯಿಂದ ಮುಂದುವರೆಯಲು ಹಲವಾರು ಕಾರಣಗಳಿರಬಹುದು, ಅದಕ್ಕಾಗಿ ಹಲವಾರು ಪುರಾಣಕಥೆಗಳು ಇರಬಹುದು, ಹಲವಾರು ಕ್ಷೇತ್ರಗಳು ನಾಗಪೂಜೆಯ ಕಾರಣಕ್ಕೇ ಪ್ರಸಿದ್ಧವಾಗಿರುವುದೂ ಸತ್ಯ. ಎಲ್ಲಾ ಹಾವುಗಳನ್ನು ಪೂಜಿಸದೆ ನಾಗರವನ್ನೇ ಆಯ್ಕೆ ಮಾಡಿಕೊಳ್ಳಲು ಅದರ ಚುರುಕುತನ, ನಯನ ಮನೋಹರ ರೂಪ, ಹೊಂದಿರುವ ಭಯಂಕರ ವಿಷ ಹಾಗೂ ಭಯ ಸಹ ಕಾರಣವಾಗಿರಬಹುದು. ನಾಗರಹಾವನ್ನು ಕಾಮ ಹಾಗೂ ದ್ವೇಷಕ್ಕೆ ಸಂಕೇತವಾಗಿಯೂ ಬಳಸುತ್ತಿರುವುದು ವೇದ್ಯದ ಸಂಗತಿ.
     ನಾಗರಪಂಚಮಿಯ ಹಬ್ಬದಲ್ಲಿ ಕುಟುಂಬದವರು ಹಬ್ಬದ ಅಡಿಗೆ ಮಾಡಿ, ಹೊಸ ಬಟ್ಟೆಯುಟ್ಟು ಸಂಭ್ರಮಿಸುವುದು, ಸೋದರ-ಸೋದರಿಯರು ಬಾಂಧವ್ಯದ ಬೆಸುಗೆ ಗಟ್ಟಿ ಮಾಡಿಕೊಳ್ಳುವುದು ಒಳ್ಳೆಯದೇ. 'ನಾಗದೇವ'ನಿಗೆ ಸಂತುಷ್ಟಗೊಳಿಸಲು, ಅರಿತೋ, ಅರಿಯದೆಯೋ ತಪ್ಪಾಗಿದ್ದಲ್ಲಿ ತಮಗೆ ಕೇಡಾಗದಿರಲಿ ಎಂಬ ಬೇಡಿಕೆಗಾಗಿ, ಮಕ್ಕಳ ಭಾಗ್ಯ(?)ಕ್ಕಾಗಿ ನಾಗಪೂಜೆಯನ್ನು, ಪ್ರಾಯಶ್ಚಿತ್ತಕಾರ್ಯವನ್ನು ಹಬ್ಬದ ದಿನಗಳಲ್ಲದೆ ಇತರ ದಿನಗಳಲ್ಲೂ ಆಚರಿಸುವವರಿದ್ದಾರೆ.
     ಪ್ರಸ್ತುತ ಆಚರಣೆಯಲ್ಲಿರುವ ಹಾಲೆರೆಯುವ ಪದ್ಧತಿಯಿಂದ ನಾಗದೇವ ಸಂತುಷ್ಟಗೊಳ್ಳುವನೇ ಎಂಬ ಕುರಿತು ವಿಚಾರ ಮಾಡುವುದು ಒಳ್ಳೆಯದು. ಬಸವಣ್ಣನವರ ವಚನ "ಕಲ್ಲ ನಾಗರ ಕಂಡರೆ ಹಾಲನೆರೆವರಯ್ಯಾ, ದಿಟದ ನಾಗರ ಕಂಡರೆ ಕೊಲ್ಲು ಕೊಲ್ಲೆಂಬರಯ್ಯಾ" ಎಂಬುದು ಮಾನವನ ಮನಸ್ಥಿತಿಗೆ ಹಿಡಿದ ಕೈಗನ್ನಡಿ. ಹಾವು ಹಾಲು ಕುಡಿಯುವುದೇ, ಒಂದು ವೇಳೆ ಕುಡಿದರೂ ಅದು ಇಷ್ಟವಾದ ಆಹಾರವೇ ಎಂಬುದು ಸಂದೇಹಾಸ್ಪದ. ಒಂದು ವೇಳೆ ಹಾಲು ಅದಕ್ಕೆ ಇಷ್ಟವಾದ ಆಹಾರವೆಂದೇ ಇಟ್ಟುಕೊಂಡರೂ ಹುತ್ತಕ್ಕೆ ಹಾಲೆರೆದರೆ ಉದ್ದೇಶ ಈಡೇರುವುದೇ? ಎರೆಯುವುದಾದರೆ ಹಾವಿಗೇ ಎರೆಯಲಿ. ವರ್ಷಕ್ಕೊಮ್ಮೆ ಹಾಲೆರೆದರೆ ಉಳಿದ ೩೬೪ ದಿನಗಳಲ್ಲಿ ಅದಕ್ಕೆ ಹಾಲು ಎಲ್ಲಿ ಸಿಗುತ್ತದೆ? ಯೋಚಿಸಬೇಕಾದ ವಿಷಯವಿದಲ್ಲವೇ? ಹಾಲನೆರೆಯುವ ಶೇ. ೯೫ಕ್ಕೂ ಹೆಚ್ಚು ಜನರು ಹಬ್ಬದ ದಿನದಂದು ಹುತ್ತವನ್ನು ಹುಡುಕಿಕೊಂಡು ಹೋಗಿ ಹಾಲು ಎರೆಯುವವರು. ಹುತ್ತಕ್ಕೆ ಹಾಲು ಹಾಕುವುದರಿಂದ ಹುತ್ತಕ್ಕೆ ಹಾನಿಯಾಗುತ್ತದೆ, ಅಲ್ಲಿರಬಹುದಾದ ಹಾವಿನ ಏಕಾಂತಕ್ಕೆ ಭಂಗವಾಗುತ್ತದೆ, ಹಿಂಸೆಯಾಗುತ್ತದೆ, ತೊಂದರೆ ಅನುಭವಿಸುತ್ತದೆಯಲ್ಲವೇ? ಹೀಗೆ ತೊಂದರೆ ಕೊಟ್ಟು 'ನಾಗದೇವ' ಸಂತುಷ್ಟನಾದನೆಂದು ಭಾವಿಸುವುದು ಎಷ್ಟರ ಮಟ್ಟಿಗೆ ಸರಿ? ಸಂಪ್ರದಾಯವಾದಿಗಳು 'ಎಷ್ಟೋ ಪ್ರಶ್ನೆಗಳಿಗೆ ಸಮಂಜಸ ಉತ್ತರ ಸಿಗಲಾರದು ಮತ್ತು ಎಷ್ಟೋ ವಿಷಯಗಳು ತರ್ಕಕ್ಕೆ ನಿಲುಕಲಾರವು' ಎಂದು ಹೇಳುತ್ತಾರಾದರೂ, ಇಂತಹ ಆಚರಣೆ ಕುರಿತು ಪ್ರಶ್ನೆ ಮಾಡಬಾರದು, ತರ್ಕ ಮಾಡಬಾರದು ಎಂಬ ಅವರ ವಾದ ಸರಿಯೆಂದು ತೋರುವುದಿಲ್ಲ. ಅಪ್ಪ ಹಾಕಿದ ಆಲದಮರವೆಂದು ನೇಣು ಹಾಕಿಕೊಳ್ಳಲು ಹೋಗದೆ ಅದರ ನೆರಳಿನಲ್ಲಿ ಬಾಳಬಹುದು.
      ಉದ್ದೇಶ 'ನಾಗದೇವ'ನಿಗೆ ಸಂತುಷ್ಟಗೊಳಿಸಬೇಕು, ಆತನಿಂದ ತೊಂದರೆಯಾಗಬಾರದು ಎಂಬುದೇ ಆಗಿದ್ದಲ್ಲಿ ಹಬ್ಬವನ್ನು ಈರೀತಿ ಆಚರಿಸಬಹುದಲ್ಲವೇ?
೧. ಉರಗಗಳು ನೆಮ್ಮದಿಯಿಂದ ಬಾಳಲು ಅವಕಾಶ ಮಾಡಿಕೊಡಬೇಕು.
೨. ತಮಗೆ ತೊಂದರೆಯಾದಾಗ ಮತ್ತು ಭಯವಾದಾಗ ಮಾತ್ರ ಹಾವುಗಳು ಕಚ್ಚುತ್ತವೆ. ಇಲ್ಲದಿದ್ದಲ್ಲಿ ಅವುಗಳಿಂದ ತೊಂದರೆಯಿಲ್ಲ. ಇಲಿಗಳು, ಕೀಟಗಳನ್ನು ಭಕ್ಷಿಸುವ ಅವು ರೈತಮಿತ್ರರು. ಜನರಲ್ಲಿ ಉರಗಗಳ ಕುರಿತು ಜಾಗೃತಿ ಮೂಡಿಸುವುದಲ್ಲದೆ ಪರಿಸರ ಸಂರಕ್ಷಣೆಯ ಕಡೆಗೆ ಗಮನ ಕೊಡಬೇಕು.
೩. ಹುತ್ತಕ್ಕೆ ಹಾಲೆರೆಯುವ ಬದಲು ಕೆಲವು ವಿಚಾರವಂತ ಮಠಾಧೀಶರು ಮಾಡುತ್ತಿರುವಂತೆ ಮಕ್ಕಳಿಗೆ ಹಾಲು ಹಂಚಬಹುದು.
೪. ಹಾವು ಅಥವ ಪ್ರಾಣಿಗಳ ಚರ್ಮ ಸುಲಿದು ತಯಾರಿಸುವ ಬೆಲ್ಟು, ಇತ್ಯಾದಿಗಳನ್ನು ಕೊಳ್ಳಬಾರದು. ಹಾವು ಬದುಕಿದ್ದಂತೆಯೇ ಹಾವಿನ ಚರ್ಮ ಸುಲಿದು, ಒದ್ದಾಡುತ್ತಿರುವ ಹಾವಿನ ದೇಹವನ್ನು ಎಸೆದು ಹೋಗುವ ಕ್ರೂರಿಗಳ ಕಾರ್ಯಕ್ಕೆ ಇದರಿಂದ ಕಡಿವಾಣ ಹಾಕಬಹುದು.
೫. ಇಂತಹ ಇತರ ಸೂಕ್ತವೆನಿಸುವ ಕಾರ್ಯಗಳನ್ನು ಕೈಗೊಳ್ಳಬಹುದು.
ಇನ್ನು ಮುಂದಾದರೂ ನಾಗರ ಪಂಚಮಿಯನ್ನು 'ಪರಿಸರ ಪಂಚಮಿ'ಯಾಗಿ ಆಚರಿಸಲಿ ಎಂಬುದು ಈ 'ನಾಗರಾಜ'ನ ಆಶಯ!
*************

ಜಿಜ್ಞಾಸೆ

ವೇದಸುಧೆಯ ಆತ್ಮೀಯ ಅಭಿಮಾನಿಗಳೇ,
ಕಥೆ ಕಾದಂಬರಿಗಳನ್ನಾದರೆ ಸಲೀಸಾಗಿ ಓದಿಕೊಂಡು ಹೋಗಿಬಿಡಬಹುದು ,ಆದರೆ ಆತ್ಮಜ್ಞಾನದ ವಿಚಾರ ಹಾಗಲ್ಲ. ಅರ್ಥಮಾಡಿಕೊಂಡು ಓದಲು ಸ್ವಲ್ಪ ತಾಳ್ಮೆಯೂ ಬೇಕು. ಆದರೆ ತಾಳ್ಮೆಯಿಂದ ಅರ್ಥಮಾಡಿಕೊಂಡು ಓದಿದರೆ ಅದರಲ್ಲಿ ಸಿಗುವ ಸಂತೋಷಕ್ಕೆ ಪಾರವಿರುವುದಿಲ್ಲ. ಶ್ರೀ ಸುಧಾಕರ ಶರ್ಮರು ವೇದದ ಹಲವಾರು ಮಂತ್ರಗಳನ್ನು ನಮ್ಮ ನೆಮ್ಮದಿಯಬದುಕಿಗಾಗಿ ನಮ್ಮ ಮನಮುಟ್ಟುವಂತೆ ಮಾಡಿರುವ ಪ್ರವಚನಗಳ ಆಡಿಯೋ ಶರ್ಮರ ಪುಟದಲ್ಲಿದೆ. ಕಳೆದ ಕೆಲವು ದಿನಗಳಿಂದ ಶ್ರೀ ಸುಬ್ರಹ್ಮಣ್ಯರು ಶ್ರೀ ಶಂಕರಾಚಾರ್ಯರ ವಿವೇಕ ಚೂಡಾಮಣಿಬಗ್ಗೆ ಬರೆಯುತ್ತಿದ್ದಾರೆ. ಶಂಕರರ ಕೃತಿಗಳಲ್ಲಿ ಆತ್ಮತತ್ವದ ಬಗ್ಗೆ ಸರಳವಾದ ನಿರೂಪಣೆಯನ್ನು ಕಾಣಬಹುದು. ನಮ್ಮ ಸಮಚಿತ್ತದ ಜೀವನಕ್ಕೆ ಸಹಕಾರಿಯಾಗಬಲ್ಲ ಶಂಕರರ ಕೃತಿಗಳನ್ನು ಓದುವುದು ಮತ್ತು ಅದರ ಬಗ್ಗೆ ಜಿಜ್ಞಾಸೆ ನಡೆಸುವುದು ನಮ್ಮ ನೆಮ್ಮದಿಯ ಜೀವನಕ್ಕೆ ಸಹಕಾರಿಯಾಗಬಲ್ಲದು. ಬನ್ನಿ ಬಗ್ಗೆ ಜಿಜ್ಞಾಸೆ ನಡೆಸೋಣ. ಶ್ರೀ ಸುಧಾಕರ ಶರ್ಮರ ಆರೋಗ್ಯ ಇನ್ನೂ ಉತ್ತಮ ಗೊಳ್ಳಬೇಕಿದೆ. ಶರ್ಮರ ಆರೋಗ್ಯವು ಸುಧಾರಣೆ ಯಾದಮೇಲೆ ಶರ್ಮರು ನಮ್ಮೊಡನೆ ಚರ್ಚೆಗೆ ಸೇರುತ್ತಾರೆ. ಅವರಿಂದ ಉತ್ತಮ ಮಾರ್ಗದರ್ಶನ ದೊರೆಯಬಲ್ಲದು. ಈಗ ನಿಮ್ಮ ಸರದಿ.....

Tuesday, August 9, 2011

ವಿವೇಕ ಚೂಡಾಮಣಿ -ಭಾಗ ೭


ಗ್ರಂಥದ ಮುಂದುವರಿದ ಭಾಗ

चित्तस्य शुद्धये कर्म न तु वस्तूपलब्धये ।
वस्तुसिद्धिर्विचरेण न किज्ञ्चित् कर्मकोटिभिः ॥११॥

ಚಿತ್ತಸ್ಯ ಶುದ್ಧಯೇ ಕರ್ಮ ನ ತು ವಸ್ತೂಪಲಬ್ಧಯೇ |
(=ಚಿತ್ತಶುದ್ಧಿಗಾಗಿ ಕರ್ಮ; ಆತ್ಮವಸ್ತು(ಜ್ಞಾನ)ವನ್ನು ಪಡೆಯಲು ಅಲ್ಲ)


ವಸ್ತುಸಿದ್ಧಿರ್ವಿಚಾರೇಣ ನ ಕಿಂಚಿತ್ ಕರ್ಮಕೋಟಿಭಿಃ ||೧೧||
(=ವೈಚಾರಿಕತೆಯಿಂದ ಜ್ಞಾನ; ಕೋಟಿ ಕರ್ಮಾಚರಣೆಯಿಂದಲ್ಲ)

ಕರ್ಮಗಳನ್ನು ಆಚರಿಸುವುದರಿಂದ ಮುಕ್ತಿಯಂತೂ ದೊರೆಯುವುದಿಲ್ಲ ಎಂದಾದಲ್ಲಿ ಅವುಗಳನ್ನು ಆಚರಿಸುವುದಾದರೂ ಏಕೆ ? ಎಂಬ ಪ್ರಶ್ನೆಗೆ ಮೇಲಿನ ಶ್ಲೋಕದ ಮೂಲಕ ಶಂಕರರು ಉತ್ತರವನ್ನು ತಿಳಿಸುತ್ತಾರೆ.
’ಚಿತ್ತಶುದ್ಧಿಗಾಗಿ ಕರ್ಮ’ ಎಂದು ಹೇಳುತ್ತಾರೆ. ಬುದ್ಧಿಗೆ ಆವರಿಸುವ ಭ್ರಮೆ ಅಥವಾ ಅಜ್ಞಾನವನ್ನು ತೊಡೆದುಹಾಕಲು ಕರ್ಮಗಳನ್ನು ಆಚರಿಸಬೇಕು ಎನ್ನುತ್ತಾರೆ. ಮೊದಲು ಅಜ್ಞಾನವನ್ನು ಕಳೆದುಕೊಂಡರೆ ಜ್ಞಾನದ ಮಾರ್ಗ ಯಾವುದು ಎಂದು ತಂತಾನೇ ಕಾಣಿಸುತ್ತದೆ. ಜ್ಞಾನಸಿದ್ಧಿಗೆ ಬೇಕಾಗುವ ಧೃಡತೆ, ಏಕಾಗ್ರತೆ, ಸಹಿಷ್ಣುತೆ ಇತ್ಯಾದಿಗಳು ಮಾಡುವ ಕರ್ಮದಿಂದ ನೆಲೆಗೊಳ್ಳುತ್ತವೆ ಮತ್ತು ಸಾಧನೆಯ ಹಾದಿಗೆ ದಾರಿದೀಪವಾಗುತ್ತದೆ. ಸಮಚಿತ್ತಕ್ಕಾಗಿ ಕರ್ಮವೇ ಹೊರತು ಆತ್ಮವಸ್ತುವನ್ನು ಅಥವಾ ಆತ್ಮಜ್ಞಾನವನ್ನು ಪಡೆಯಲು ಅಲ್ಲ ಎಂದು ಹೇಳುತ್ತಾರೆ.
ಮೇರುಪರ್ವತವನ್ನು ಅಥವಾ ಎವರೆಸ್ಟ್ ಅನ್ನು ಏರಬೇಕೆನ್ನುವವರು ಅದಕ್ಕೆ ಬೇಕಾಗುವ ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಳ್ಳಬೇಕಾಗುತ್ತದೆ. ಕೆಲವು ಏರುವುದಕ್ಕೆ ಮುಂಚೆ ಬೇಕಾದ ತಯಾರಿಗಳು ಮತ್ತು ಕೆಲವು ಏರುವಾಗ ಬೇಕಾಗುವ ತಯಾರಿಗಳು ಇರುತ್ತವೆ. ಶಿಖರವನ್ನು ಏರಬೇಕೆಂದು ಮನಸು ಮಾಡಿದವನು ಮೊದಲು ಧೃಡಾಕಾಯನಾಗಿರಬೇಕಾಗುತ್ತದೆ. ಗರಡಿಮನೆಯ ವ್ಯಾಯಾಮಗಳನ್ನು ಮಾಡಿಕೊಂಡು ಗಟ್ಟಿಮುಟ್ಟಾಗಿರಬೇಕಾಗುತ್ತದೆ. ಇದಕ್ಕೆ ಕೆಲವು ತಿಂಗಳುಗಳು ಬೇಕಾಗುತ್ತದೆ. ಉಸಿರನ್ನು ನಿಯಂತ್ರಿಸಿಕೊಳ್ಳುವ ಸಾಮರ್ಥ್ಯವನ್ನು ಕೆಲವು ವಾರಗಳ ಅಭ್ಯಾಸದಿಂದ ಪಡೆದುಕೊಳ್ಳಬೇಕಾಗುತ್ತದೆ. ಆರೋಗ್ಯದಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಇಷ್ಟೆಲ್ಲಾ ಕರ್ಮಗಳನ್ನು ಏರುವವನು ಮುಂಚೆಯೇ ಮುಗಿಸಿ ಸಿದ್ಧನಾಗಿರಬೇಕಾಗುತ್ತದೆ. ನಂತರ ಪರ್ವತವನ್ನು ಏರುವಾಗ ಈ ಹಿಂದಿನ ಯಾವ ಸಾಧನಗಳು ಬೇಕಾಗುವುದಿಲ್ಲ, ಇಲ್ಲಿ ಬೇರೆಯದೇ ಸಾಧನಗಳು ಬೇಕಾಗುತ್ತವೆ. ಬೆಚ್ಚಗಿನ ಉಣ್ಣೆಯ ಬಟ್ಟೆ, ಆಮ್ಲಜನಕದ ಸಿಲಿಂಡರ್, ಹಿಮನಿರೋಧಕ ಬೂಟುಗಳು, ಕೈ ಗವಸುಗಳು ಇತ್ಯಾದಿ. ಇವೆಲ್ಲಾ ಗರಡಿಮನೆಯ ತಯಾರಿಯಲ್ಲಿ ಬೇಕಾಗುವುದಿಲ್ಲ. ಹೇಗೂ ಹಿಮಾಲಯ ಏರಲೇಬೇಕು ಅದಕ್ಕಾಗಿ ಬೂಟು, ಗವಸು, ಉಣ್ಣೆಯ ಬಟ್ಟೆ ಇವುಗಳನ್ನೆಲ್ಲಾ ಹಾಕಿಕೊಂಡೇ ವ್ಯಾಯಾಮ ಮಾಡುತ್ತೇನೆಂದು ಹೇಳುವವನನ್ನು ಮೂಳನೆನ್ನಬೇಕಾಗುತ್ತದೆ. ಗರಡಿಮನೆಯ ವ್ಯಾಯಾಮವು ಕರ್ಮಕ್ಕೆ ಸಾಧನವಾದರೆ ಏರುವಾಗ ಬೇಕಾಗುವ ವಸ್ತುಗಳು ಜ್ಞಾನಕ್ಕೆ ಸಾಧನಗಳು. ಇವು ಒಂದನ್ನೊಂದು ಸಂಪರ್ಕಿಸುವುದಿಲ್ಲ. ಕೇವಲ ಗಟ್ಟಿಮುಟ್ಟಾದ ದೇಹವನ್ನು ಹೊಂದಿದ ಮಾತ್ರಕ್ಕೆ ಹಿಮಾಲಯವನ್ನು ಏರಿದಂತಾಗುತ್ತದೆಯೇ? ಇಲ್ಲ ; ಅದು ಪರೋಕ್ಷವಾಗಿ ಸಹಾಯ ಮಾಡುತ್ತದೆ ಆದರೆ ಜ್ಞಾನಪ್ರಾಪ್ತಿಯ ಸಾಧನಗಳ ಮುಂದೆ ಅದು ಗೌಣವಾಗುತ್ತದೆ. ಆಮ್ಲಜನಕದ ಸಿಲಿಂಡರ್ ಇಲ್ಲದೆ ಯಾರೂ ಎವರೆಸ್ಟನ್ನು ಏರಲಾರರು !. ಕೆಲವರು ಗರಡಿಮನೆಯಲ್ಲಿ ಪಳಗದೆಯೂ ಸಹ ಆಮ್ಲಜನಕದ ಸಿಲಿಂಡರ್, ಉಣ್ಣೆಯ ಬಟ್ಟೆ, ಇತ್ಯಾದಿ ಸಾಧನಗಳನ್ನಿಟ್ಟುಕೊಂಡು ಮನೋಬಲದಿಂದ (ಮನಸಿನಂತೆ ಮಹಾದೇವ !) ಎವರೆಸ್ಟ್ ಏರಿದರೂ ಏರಬಹುದು !. ಅಂತಹವರು ತುಂಬಾ ವಿರಳ ಎನ್ನಬೇಕಾಗುತ್ತದೆ. ಅಂತಹ ಮನೋಬಲವುಳ್ಳವರು ಆತ್ಮಜ್ಞಾನಕ್ಕೆ ನೇರವಾಗಿ ಅರ್ಹರಾಗುತ್ತಾರೆ.

ವಿಚಾರಮಂಥನದಿಂದ ಮಾತ್ರ ಜ್ಞಾನಪ್ರಾಪ್ತಿಯೇ ಹೊರತು ಹಲವು ಕೋಟಿ ಕರ್ಮಗಳನ್ನು ಆಚರಿಸುವುದರಿಂದಲ್ಲ ಎಂದು ಎರಡನಯೆ ಸಾಲಿನಲ್ಲಿ ಹೇಳುತ್ತಾರೆ. ವಿವೇಕ ಚೂಡಾಮಣಿಯನ್ನು ಓದಿ ಪಡೆಯುವ ಜ್ಞಾನಕ್ಕಿಂತಲೂ ಅಲ್ಲಿರುವ ವಿಚಾರವನ್ನು ಚರ್ಚಿಸಿ, ವಿವೇಚಿಸಿ ಪಡೆಯುವ ಜ್ಞಾನವು ಉನ್ನತಮಟ್ಟದ್ದಾಗಿರುತ್ತದೆ. ತತ್ತ್ವವಿಚಾರದ ಚರ್ಚೆಗಳು ನಡೆದಂತೆಲ್ಲಾ ಆತ್ಮಜ್ಞಾನದ ಒಲವು ಹೆಚ್ಚುತ್ತಾ ಹೋಗುತ್ತದೆ. ವಿವೇಚಿಸದೆ , ವಿಚಾರವಿಲ್ಲದೇ ಮಾಡುವ ಕೋಟಿ ಕರ್ಮಗಳಿಗಿಂತಲೂ ವೈಚಾರಿಕತೆಯಿಂದ ಬರುವ ತಿಳುವಳಿಕೆ ಅಥವಾ ಆತ್ಮಜ್ಞಾನವೇ ಉನ್ನತವಾದುದು ಎಂದು ಶಂಕರರು ತಿಳಿಸುತ್ತಾರೆ.
ಹೀಗೆ ಕರ್ಮ-ಜ್ಞಾನಗಳು ಒಂದನ್ನು ಬಿಟ್ಟು ಮತ್ತೊಂದಿಲ್ಲ. ಚಿತ್ತ ಶುದ್ಧಿಯಾಗದ ಹೊರತು ಜ್ಞಾನಪ್ರಾಪ್ತಿಗೆ ಅವಕಾಶವಿಲ್ಲ. ಅಜ್ಞಾನವನ್ನು ತೊರೆಯಲು ಕರ್ಮಗಳು ಸಹಾಯಕವಾಗುತ್ತವೆ ಆದರೆ ಆತ್ಮಜ್ಞಾನಕ್ಕೆ ಬೇರೆಯದೇ ಆದ ದಾರಿಯನ್ನು ಹುಡುಕಬೇಕಾಗುತ್ತದೆ.
ಅಜ್ಞಾನ ಅಥವಾ ಭ್ರಮೆಯು ಹೇಗೆ ತೋರುತ್ತದೆ ಎನ್ನುವುದನ್ನು ಮುಂದಿನ ಶ್ಲೋಕದಲ್ಲಿ ನಿರೂಪಿಸುತ್ತಾರೆ.

सम्यग् विचारतः सिद्धा रज्जुतत्वावधारणा ।
भ्रान्त्योदितमहासर्पभवदुःखविनाशिनी ॥१२॥

ಸಮ್ಯಗ್ವಿಚಾರತಃ ಸಿದ್ಧಾ ರಜ್ಜುತತ್ವಾವಧಾರಣಾ |
(= ವಿಚಾರದಿಂದ ಜ್ಞಾನ ಎನ್ನುವುದು ಹಾವು-ಹಗ್ಗದ ತತ್ತ್ವದಿಂದ ತಿಳಿಯುತ್ತದೆ)


ಭ್ರಾಂತ್ಯೋದಿತ ಮಹಾಸರ್ಪ ಭವದುಃಖವಿನಾಶಿನೀ ||೧೨||
(= ಮಹಾಸರ್ಪವೆಂಬ ಭ್ರಮೆಯು ನೀಗುತ್ತದೆ)

ಕರ್ಮದಿಂದಲೇ ಮುಕ್ತಿ ಎಂದು ತಿಳಿದು ಆತ್ಮತತ್ತ್ವಾನ್ವೇಷಣೆಯನ್ನೇ ನೆಡೆಸದಿರುವುದು ಹಗ್ಗವನ್ನೇ ಹಾವೆಂದು ಭ್ರಮಿಸಿದಂತೆ ಮತ್ತು ಆತ್ಮಜ್ಞಾನವು ಬಂದೊಡನೆಯೆ ಅಂತಹ ಭ್ರಮೆಯು ತಾನಗೇ ತೊಲಗುವುದು ಎಂದು ಮೇಲಿನ ಶ್ಲೋಕದ ಮೂಲಕ ಹೇಳುತ್ತಾರೆ. ಸರ್ಪ-ರಜ್ಜು (=ಹಗ್ಗ) ತತ್ತ್ವವು ವೇದಾಂತದರ್ಶನದ ಮಹತ್ವದ ಪ್ರಕ್ರಿಯೆಯಾಗಿದೆ. ಭ್ರಮೆಯಲ್ಲಿದ್ದಾಗ ಹಗ್ಗವು ಹಾವಿನ ರೂಪದಲ್ಲಿ ತೋರಬಹುದು. ಕತ್ತಲಲ್ಲಿ ಪಂಜನ್ನು ಹಿಡಿದು ನೆಡೆದು ಹೋದವರನ್ನು ಕೊಳ್ಳಿದೆವ್ವವೆಂದು ಭ್ರಮಿಸಿ ವಾರಗಳ ಕಾಲ ಭಯದಿಂದ ತತ್ತರಿಸುವ ಪ್ರಮೇಯವೂ ಇರುತ್ತದೆ. ಹರೆಯದ ಮಾಯೆಯಲ್ಲಿ ಕತ್ತೆಯೂ (ಕತ್ತೆಗಳಲ್ಲಿ ಕ್ಷಮೆಯಾಚಿಸುತ್ತೇನೆ, ಅದು ನನ್ನ ಇಷ್ಟದ ಪ್ರಾಣಿ) ಸುಂದರವಾಗಿ ಕಾಣುತ್ತದೆ ಎಂಬ ಮಾತಿದೆ. ಕತ್ತಲಿನಲ್ಲಿ ’ಸರ-ಸರ’ ಎಂದು ಸದ್ದಾದಾಗ ಅಲ್ಲಿ ಹಾವಿರುವುದೆಂಬ ಭ್ರಮೆಯಿಂದ ಭಯಗೊಂಡವರು ದೀಪದ ಬೆಳಕಿನಲ್ಲಿ ನೋಡಿದಾಗ ಅದು ಹೆಗ್ಗಣವೋ ಮತ್ತೊಂದೋ ಆಗಿರುವುದು ತಿಳಿದಾಗ ಅವರ ಬುದ್ಧಿಗೆ ಬಡಿದಿದ್ದ ಮಂಕು ತೆರೆಯುತ್ತದೆ. ಆ ಕ್ಷಣಕ್ಕೆ ಹಗ್ಗವೇ ಹಾವಿನಂತೆ ಕಂಡರೂ ವಿಚಾರಿಸಿ, ವಿವೇಚಿಸಿ ನೋಡಿದಾಗ ವ್ಯತ್ಯಾಸವು ತಿಳಿದು ಭ್ರಮೆಯು ಅಳಿಯುತ್ತದೆ. ಚಿತ್ತಶುದ್ಧಿಗಾಗಿ ಕರ್ಮ. ಕರ್ಮದಲ್ಲಿ ಪರಿಪಾಕಗೊಂಡ ನಂತರ ಆತ್ಮತತ್ತ್ವಾನ್ವೇಷಣೆಯ ದಾರಿ. ಈ ದಾರಿಯಲ್ಲಿ ಸಾಗುತ್ತಿದ್ದಂತೆಯೆ ಹಗ್ಗವೇ ಮಾಹಸರ್ಪ ಎಂದು ತಿಳಿದ ಭ್ರಾಂತಿಯು ನೀಗಿ ವಿಚಾರದಿಂದಲೇ ಜ್ಞಾನ ಎಂಬುದು ನಿಕ್ಕಿಯಾಗುತ್ತದೆ.
ಒಂದು ಲೌಕಿಕದ ಉದಾಹರಣೆಯನ್ನು ಇಲ್ಲಿ ನೋಡೋಣ; ಬೊಂಬಾಯಿ ಬೋಂಡವನ್ನು ಮಾಡಲು ಹಿಟ್ಟನ್ನು ಕಲೆಸಿ ಅದನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಟ್ಟುರುತ್ತೇವೆ. ಕಾದಿರುವ ಎಣ್ಣೆಗೆ ಆ ಉಂಡೆಗಳನ್ನು ಹಾಕಿದಾಗ ಅದು ಸದ್ದುಮಾಡಿಕೊಂಡು ಬೇಯುತ್ತದೆ, ಬೆಂದ ನಂತರ ಸುಮ್ಮನಾಗುತ್ತದೆ. ಬೋಂಡದ ಉಂಡೆಯು ಬೇಯುವುದಕ್ಕೆ ಮುಂಚೆಯೂ ಸುಮ್ಮನಿತ್ತು. ಈಗ ಎರಡರ ಗುಣವನ್ನೂ ಒಂದೇ ಎನ್ನಲು ಸಾಧ್ಯವೆ ?!. ಬೇಯದ ಬೋಂಡವು ಕರ್ಮವನ್ನು ಮಾಡಿಲ್ಲದ ಜೀವವಾದರೆ ಬೆಂದಿರುವ ಬೋಂಡವು ಕರ್ಮವನ್ನು ಮೀರಿರುತ್ತದೆ !. ಎಣ್ಣೆಯಲ್ಲಿ ಚೆನ್ನಾಗಿ ಬೆಂದು ( ಕರ್ಮದಲ್ಲಿ ಪರಿಪಾಕಗೊಂಡು) ತೆಪ್ಪಗಾಗಿರುತ್ತದೆ. ಮುಂದೆ ಅದು ಒಬ್ಬರ ಹೊಟ್ಟೆಯನ್ನು ಸೇರಲು ಅರ್ಹತೆಯನ್ನು ಪಡೆದುಕೊಂಡಿರುತ್ತದೆ. (ಕನ್ನಡದ "ಭಕ್ತ ಕುಂಬಾರ" ಚಲನಚಿತ್ರ ನೋಡಿುವವರು , ಚಿತ್ರದಲ್ಲಿ ಕುಂಬಾರನ ಪಾತ್ರ ವಹಿಸಿರುವ ರಾಜಕುಮಾರರು ತಮ್ಮ ಮನೆಯಲ್ಲಿ ಸೇರಿದ್ದ ಸಂತರುಗಳ ತಲೆಯನ್ನು ಕುಟ್ಟಿ ’ಇದು ಬೆಂದಿಲ್ಲ, ಇದು ಅರ್ಧ ಬೆಂದಿದೆ, ಇದು ಮುಕ್ಕಾಲು’ ಎಂದು ಹೇಳುವ ಸನ್ನಿವೇಶವನ್ನು ನೆನೆಪಿಸಿಕೊಳ್ಳಬಹುದು !). ಬೇಸಾಯ ಮಾಡಲು ಕುದುರೆಯು ಬೇಡವಾದರೆ ಏನಂತೆ ? ಟಾಂಗಾ ಗಾಡಿಗಾದರೂ ಬೇಕಲ್ಲವೆ !. ಹೀಗೆ ಮುಕ್ತಿಗೆ ಕರ್ಮವಲ್ಲದಿದ್ದರೂ , ಭ್ರಮೆಯಿಂದ ಹೊರಬರಲು ಮತ್ತು ಚಿತ್ತಶುದ್ಧಿಗಾಗಿ ಕರ್ಮವು ಬೇಕಾಗುತ್ತದೆ ಮತ್ತು ವಿಚಾರದಿಂದಲೇ ಆತ್ಮಜ್ಞಾನ ಎನ್ನುವುದನ್ನು ಶಂಕರರು ತಿಳಿಸುತ್ತಾರೆ.

ಮುಂದಿನ ಕಂತಿನಲ್ಲಿ ಇನ್ನಷ್ಟು ತಿಳಿಯೋಣ.

Friday, August 5, 2011

ವಿವೇಕ ಚೂಡಾಮಣಿ -ಭಾಗ ೬





ಗ್ರಂಥದ ಮುಂದುವರಿದ ಭಾಗ

अतो विमुक्यै प्रयतेत विद्वान् सन्यस्त बाह्यार्थ सुखस्पृहसन् |
संतं महातं समुपेत्य देशिकं तेनोपदिश्टार्थ समाहितात्मा ||८||

ಅತೋ ವಿಮುಕ್ತ್ಯೈ ಪ್ರಯತೇತ ವಿದ್ವಾನ್ ಸನ್ಯಸ್ತ ಬಾಹ್ಯಾರ್ಥ ಸುಖಸ್ಪೃಹಸನ್ |
ಸಂತಂ ಮಹಾತಂ ಸಮುಪೇತ ದೇಶಿಕಂ ತೇನೋಪದಿಷ್ಟಾರ್ಥ ಸಮಾಹಿತಾತ್ಮಾ ||೮||

ದ್ರವ್ಯದಿಂದ, ವಿತ್ತದಿಂದ ಫಲದ ಮೇಲೆ ಬಯಕೆಗಳು ಉಂಟಾಗಿ ಜ್ಞಾನವರ್ಧನೆಗೆ ಅಡಚಣೆಯಾಗುವುದರಿಂದ ತಿಳುವಳಿಕೆಯುಳ್ಳವರು ಜ್ಞಾನಮಾರ್ಗದಿಂದಲೇ ಮುಮುಕ್ಷುತ್ವಕ್ಕೆ ಯತ್ನಿಸಬೇಕು ಎಂದು ಶ್ರೀ ಶಂಕರರು ಹೇಳುತ್ತಾರೆ.
ಮೇಲಿನ ಶ್ಲೋಕದ ಅರ್ಥವನ್ನು ಗಮನಿಸೋಣ.

ಅತೋ ವಿಮುಕ್ತ್ಯೈ ಪ್ರಯತೇತ ವಿದ್ವಾನ್ (= ವಿವೇಕಿಯು ಮುಕ್ತಿಗಾಗಿ ಯತ್ನಿಸಬೇಕು)
ಸನ್ಯಸ್ತ ಬಾಹ್ಯಾರ್ಥ ಸುಖಸ್ಪೃಹಸನ್ (= ಬಾಹ್ಯ ಸುಖಗಳ ಆಸೆಯನ್ನು ಮೊದಲು ಬಿಡಬೇಕು)
ಸಂತಂ ಮಹಾತಂ ಸಮುಪೇತ ದೇಶಿಕಮ್ (=ಮಹಾತ್ಮರಾದ ಗುರುಗಳ ಸಂಗವನ್ನು ಹೊಂದಬೇಕು)
ತೇನೋಪದಿಷ್ಟಾರ್ಥ ಸಮಾಹಿತಾತ್ಮಾ (=ತನ್ನ ಇಷ್ಟಾರ್ಥ ಸಿದ್ಧಿಗಾಗಿ ಯತ್ನಿಸಬೇಕು)

ಕರ್ಮದಿಂದ , ಸಂಪತ್ತಿನಿಂದ ಮುಕ್ತಿಯು ದೊರಕುವುದಿಲ್ಲವಾದ್ದರಿಂದ ತಿಳುವಳಿಕೆಯುಳ್ಳವನು (ವಿದ್ವಾನ್) ಮಹಾತ್ಮರಾದ ಗುರುಗಳ ಸಂಗವನ್ನು ಹೊಂದಿ ಅವರ ಉಪದೇಶ ತತ್ತ್ವಗಳನ್ನು ಅರಿತು ಹೊರಗಿನ ಕ್ಷಣಿಕವಾದ ವಿಷಯಗಳ ಬಗೆಗೆ ಆಸಕ್ತಿಯನ್ನು ಬಿಟ್ಟು ಆತ್ಮಸಾಕ್ಷಾತ್ಕಾರಕ್ಕಾಗಿ ಯತ್ನಿಸಬೇಕು ಎಂಬುದು ಮೇಲಿನ ಶ್ಲೋಕದ ತಿರುಳು.
’ವಿದ್ವಾನ್’ ಎಂದರೆ ಆತ್ಮ ಮತ್ತು ಅನಾತ್ಮಗಳ (ಶಾಶ್ವತ ಮತ್ತು ಅಶಾಶ್ವತ) ವಿವೇಚನೆಯುಳ್ಳವನು ಎಂದು ತಿಳಿಯಬೇಕಾಗುತ್ತದೆ. ಹಾಗಾದರೆ ವಿದ್ವಾಂಸರಲ್ಲದವರಿಗೆ ಮುಕ್ತಿಯಿಲ್ಲವೇ ? ಎಂದರೆ, ಇದೆ !. ’ವಿದ್ವಾನ್’ ಎಂದು ಅನ್ನಿಸಿಕೊಳ್ಳುವವರೆಗೆ ಆತನು ಸಾಧನೆ ಮಾಡಿಕೊಂಡು ಬಂದರೆ ಮುಂದಿನ ಹಾದಿ ಸುಗಮವಾಗುತ್ತದೆ. ಏಳನೇ ತರಗತಿ ಮುಗಿಸಿದ್ದರೆ ಎಂಟಕ್ಕೆ ಸೇರಬಹುದು, ಇಲ್ಲವಾದರೆ ಕಷ್ಟ.
’ಬಾಹ್ಯಾರ್ಥ ಆಸೆಯನ್ನು ಬಿಡು’ ಎಂದರೆ , ಹೊರಗಿನ ವಿಷಯಗಳು (ಪ್ರಾಪಂಚಿಕ ಸುಖಗಳು) ಕ್ಷಣಿಕವಾದುದರಿಂದ ಅವುಗಳಿಂದ ಯಾವತ್ತೂ ನೆಮ್ಮದಿಯಿಲ್ಲ ಅಂತಹ ವಿಷಯಗಳ ಬಗೆಗೆ ಅತಿಯಾದ ಆಸಕ್ತಿಯು ಬೇಡ ’ ಎಂಬ ಅರ್ಥದಲ್ಲಿ ತಿಳಿದುಕೊಳ್ಳಬೇಕಾಗುತ್ತದೆ. ಲಕ್ಷ ರೂಪಾಯಿ ದುಡಿದು ತಂದರೆ ಬದುಕಿನ ಕೊನೆಯವರೆವಿಗೂ ಸಾಲುತ್ತದೆಯೇ ? . ಜಿಪುಣತನ ತೋರಿದರೂ ಒಂದು ವರುಷದಲ್ಲಿ ಮುಗಿಯುತ್ತದೆ. ಇಂತಹ ಅಶಾಶ್ವತ ಸಂಗತಿಗಳಿಗೆ ಮನಗೊಡದೆ
ಅಂತಹ ಆಸೆಗಳನ್ನು(ದುರಾಸೆ) ಬಿಟ್ಟು ವಿವೇಕಿಯಾದ ಗುರುವಿನ (’ದೇಶಿಕ’ ಎಂದರೆ ಇಲ್ಲಿ ಗುರು ಎಂದು ತಿಳಿಯುವುದು ಉತ್ತಮ) ಸಹವಾಸ ಮಾಡಿ ತನ್ನ ಇಷ್ಟಾರ್ಥವನ್ನು (ಆತ್ಮ ಸಾಕ್ಷಾತ್ಕಾರ) ಈಡೇರಿಸಿಕೊಳ್ಳುವುದು ಉತ್ತಮ ಎಂದು ಶ್ರೀ ಶಂಕರರು ತಿಳಿಸುತ್ತಾರೆ.
--------------------------------------------------

ಮುಂದಿನ ಶ್ಲೋಕ

उद्धरेदात्मनात्मानं मग्नं संसारवारिधौ ।
योगारुढत्वमासाद्य सम्यग्दर्शननिष्ठया ॥९॥

ಉದ್ಧರೇದಾತ್ಮನಾತ್ಮಾನಂ ಮಗ್ನಂ ಸಂಸಾರ ವಾರಿಧೌ |
(=ಸಂಸಾರವೆಂಬ ಸಾಗರದಲ್ಲಿ ಮುಳುಗಿರುವವನು(ಮಗ್ನಂ) ತನ್ನನ್ನು ತಾನು ಎಚ್ಚರಗೊಳಿಸಿಕೊಳ್ಳಬೇಕು)
ಯೋಗಾರೂಢತ್ವಮಾಸಾದ್ಯ ಸಮ್ಯಗ್ದರ್ಶನ ನಿಷ್ಠಯಾ ||೯||
(=ಯೋಗನಿಷ್ಠೆಯಿಂದ ಆತ್ಮಜ್ಞಾನ(ಸಮ್ಯಗ್ದರ್ಶನ)ವನ್ನು ಪಡೆಯುವುದು)

ಮೇಲಿನ ಶ್ಲೋಕದ ಮೊದಲೆನೆಯ ಸಾಲು ’ಗೀತೆ’ಯ ವಾಕ್ಯವಾಗಿ ಬಹು ಪ್ರಸಿದ್ಧಿಯಾಗಿದೆ.
"ಉದ್ಧರೇದಾತ್ಮನಾತ್ಮಾನಂ ನಾತ್ಮಾನಮವಸಾದಯೇತ್ |
ಆತ್ಮೈವ ಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನಃ || " ಎಂದು.
(ತನ್ನನ್ನು ತನ್ನಿಂದಲೇ ಉದ್ಧಾರಮಾಡಿಕೊಳ್ಳಬೇಕು, ತನ್ನನ್ನು ಕುಗ್ಗಿಸಿಕೊಳ್ಳಬಾರದು. ಏಕೆಂದರೆ ತಾನೇ ತನ್ನ ಬಂಧು ತಾನೇ ತನ್ನ ಶತ್ರು.)

ಸಂಸಾರಸಾಗರದಲ್ಲಿ ಮುಳುಗಿರುವವನಿಗೆ ನೆಮ್ಮದಿ ಎನ್ನುವುದು ಮರೀಚಿಕೆಯಾಗಬಹುದು ಅಥವಾ ಸಂಸಾರದಿಂದಲೇ ಯಾವತ್ತೂ ನೆಮ್ಮದಿ ಎನ್ನುವುದು ಸಾಧ್ಯವಾಗದೇ ಇರಬಹುದು. ಆದುದರಿಂದ ಕರ್ಮಬಂಧನಗಳಿಂದ ಬಿಡಿಸಿಕೊಳ್ಳಲು ಮೊದಲು ತನ್ನನ್ನು ತಾನು ಉದ್ಧಾರಮಾಡಿಕೊಳ್ಳಬೇಕು. ತನ್ನ ಪ್ರಜ್ಞೆಯನ್ನು ಎಚ್ಚರಗೊಳಿಸಿಕೊಳ್ಳಬೇಕು. ವೇದಾಂತಯೋಗದಲ್ಲಿ ನಿಷ್ಠೆಯಿರಿಸಿ ಸಮ್ಯಕ್ ದರ್ಶನ(ಆತ್ಮಜ್ಞಾನ)ವನ್ನು ಪಡೆದುಕೊಳ್ಳಬೇಕು ಎಂದು ಹೇಳುತ್ತಾರೆ.
ಸ್ವಾನುಭವಗಳಿಂದ ಪಾಠವನ್ನು ಕಲಿತು ಯಾರು ತನ್ನನ್ನು ತಾನು(ಅಂತರಂಗವನ್ನು) ಅರಿತುಕೊಳ್ಳುತ್ತಾನೋ ಅವನು ಜಾಗೃತವ್ಯಕ್ತಿ ಎನಿಸಿಕೊಳ್ಳುತ್ತಾನೆ. ಮನುಷ್ಯನ ಎಲ್ಲಾ ಏಳು-ಬೀಳುಗಳಿಗೆ ಮೂಲವಾಗಿ ಮನಸ್ಸೇ ಕಾರಣ. ಮನಸ್ಸಿನ ಹೊಯ್ದಾಟಗಳಿಗೆ ಕಡಿವಾಣ ಹಾಕಿ, ಇಂದ್ರಿಯ ವಿಷಯಗಳಲ್ಲಿ ಹತೋಟಿ ಸಾಧಿಸಿ ಸದಾ ಸಾಂಸಾರಿಕ ವಿಷಯಗಳಲ್ಲಿ ಮಗ್ನರಾಗಿರುವುದನ್ನು ಬಿಟ್ಟು ಎಚ್ಚರಗೊಳ್ಳಬೇಕು. ಆತ್ಮಶ್ರದ್ಧೆಯ ವಿಷಯದಲ್ಲಿ ವಿವೇಕಾನಂದರು ಮಿಂಚಿನಂತಹ ಮಾತೊಂದನ್ನು ಹೇಳುತ್ತಾರೆ . " ಯಾರಿಗೆ ದೇವರಲ್ಲಿ ನಂಬಿಕೆಯಿಲ್ಲವೋ ಅವನನ್ನು ನಾಸ್ತಿಕ ಎಂದು ಹಿಂದಿನ ಧರ್ಮಗಳು ಹೇಳುತ್ತಿದ್ದವು, ಆದರೆ ನಾನು ಹೇಳುತ್ತೇನೆ ಯಾರಿಗೆ ಆತ್ಮಶ್ರದ್ಧೆ, ಆತ್ಮವಿಶ್ವಾಸವಿಲ್ಲವೋ ಅವನೇ ನಾಸ್ತಿಕ " ಎಂದು. ವೈದ್ಯರು ಕಾಯಿಲೆಗೆ ಮದ್ದು ಕೊಟ್ಟರೆ ಅದನ್ನು ರೋಗಿಯು ತೆಗೆದುಕೊಳ್ಳದೆ ವೈದ್ಯರೇ ತೆಗೆದುಕೊಂಡರೆ ರೋಗಿಯ ಕಾಯಿಲೆ ಗುಣವಾಗುವುದಿಲ್ಲ. ನಾವೇ ಸಂಸಾರದ ಗೋಜಿನಲ್ಲಿ ( ಸಂಸಾರ ಎಂದಾಕ್ಷಣ ಕೇವಲ ಹೆಂಡತಿ-ಮಕ್ಕಳು ಎಂದು ತಿಳಿಯುವ ಅಗತ್ಯವಿಲ್ಲ) ಸಿಲುಕಿಕೊಂಡಿರುವುದರಿಂದ ಬಿಡಿಸಿಕೊಳ್ಳುವ ಹೊಣೆಯೂ ನಮ್ಮದೇ ಆಗಿದೆ.

’ಯೋಗ’ ಎಂದರೆ ಒಂದುಗೂಡಿಸುವುದು ಎಂದು ಅರ್ಥ. ಜೀವಾತ್ಮನನ್ನು ಪರಮಾತ್ಮನೊಂದಿಗೆ ಒಂದುಗೂಡಿಸುವುದಕ್ಕೆ ಯೋಗ ಎನ್ನುತ್ತೇವೆ. ’ಯೋಗಾರೂಢ ’ ಎಂಬಲ್ಲಿ ಶ್ರೀ ಶಂಕರರು ಪಾತಂಜಲ ಯೋಗವನ್ನಾಗಲೀ ಅಷ್ಟಾಂಗ ಯೋಗವನ್ನಾಗಲೀ ಹೆಸರಿಸದೆ ಕೇವಲ ವೇದಾಂತದ ಶ್ರವಣ-ಮನನ-ಸ್ವಾನುಭವದಿಂದ ಹುಟ್ಟುವ ಜ್ಞಾನಯೋಗವನ್ನು ಪ್ರತಿಪಾದಿಸುತ್ತಾರೆ ಎಂಬುದು ಸದ್ಗುರು ಚಂದ್ರಶೇಖರ ಭಾರತಿಗಳ ಒಕ್ಕಣೆ.
ಹಾಗಾದರೆ ಪಾತಂಜಲ, ಅಷ್ಟಾಂಗ ಮುಂತಾದ ಯೋಗಗಳೆಲ್ಲಾ ಬಳಕೆಗೆ ಬಾರದ್ದೇ ? ಎಂಬ ಪ್ರಶ್ನೆ ಬರುತ್ತದೆ. ’ಅಷ್ಟಾಂಗ, ಪಾತಂಜಲ ಮುಂತಾದ ಯೋಗಗಳನ್ನೆಲ್ಲಾ ಹೇಗಾದರೂ ( ಒಂದಷ್ಟು ಜನ್ಮಗಳಲ್ಲಿ) ಮುಗಿಸಿಕೊಂಡು ಬಂದಿದ್ದರೆ ಮುಂದೆ ವೇದಾಂತ ದರ್ಶನದಲ್ಲಿ ಆತ್ಮಜ್ಞಾನ ಸಿದ್ಧಿಸುತ್ತದೆ’ ಎನ್ನುವ ಅರ್ಥದಲ್ಲಿ ಹೇಳುತ್ತಾರೆ. ಕರ್ಮದಲ್ಲಿ ಪರಿಪಾಕಗೊಂಡಿರುವುದು ತಿಳಿಯುವುದಾದರೂ ಹೇಗೆ ? ಎಂದರೆ, ಅದು ತನ್ನಿಂತಾನೇ ತಿಳಿಯುವಂತಹುದು ಮತ್ತು ಸದ್ಗುರುಗಳಾದವರು ಅಂತಹವರನ್ನು ಗುರುತಿಸುತ್ತಾರೆ ಎಂದು ಹೇಳಬಹುದು. ಹಣ್ಣು ಮಾಗಿದ ನಂತರ ತನ್ನಿಂತಾನೇ ಕೆಳಗೆ ಬೀಳುತ್ತದೆ, ಹಾಗೆಯೇ ಇದೂ ಸಹ ಎನ್ನಬಹುದು. ’ಆರೂಢ’ ಎಂದರೆ ಬಲವಾಗಿ ನೆಲೆಸಿರುವವನು ಎಂದು ಅರ್ಥ. ವೇದಾಂತಯೋಗದಲ್ಲಿ ಅಚಲವಾದ ನಿಷ್ಠೆಯಿರಿಸಿಕೊಳ್ಳುವವನು ಯೋಗಾರೂಢನಾಗುತ್ತಾನೆ. ಅದರಿಂದಲೇ ಆತ್ಮಜ್ಞಾನವನ್ನು ಪಡೆಯುವುದು ತನ್ನನ್ನು ತಾನು ಉದ್ಧರಿಸಿಕೊಂಡಂತೆ ಎಂದು ಹೇಳುತ್ತಾರೆ.
----------------------------------------------

ಮುಂದಿನ ಶ್ಲೋಕ

सन्यस्य सर्वकर्माणि भवबंधविमुक्तये ।
यत्यातां पंडितैर्धिरैः आत्माभ्यास उपस्थितैः ॥१०॥

ಸನ್ಯಸ್ಯ ಸರ್ವಕರ್ಮಾಣಿ ಭವಬಂಧ ವಿಮುಕ್ತಯೇ |
(= ಎಲ್ಲಾ ಕರ್ಮಗಳನ್ನೂ ತ್ಯಜಿಸಿ ಮುಕ್ತಿಗಾಗಿ ಯತ್ನಿಸುವುದು)
ಯತ್ಯತಾಂ ಪಂಡಿತೈರ್ಧೀರೈಃ ಆತ್ಮಾಭ್ಯಾಸ ಉಪಸ್ಥಿತೈಃ ||೧೦||
(=ಧೀರರಾದ ವಿದ್ವಾಂಸರು ಆತ್ಮಾಭ್ಯಾಸದಲ್ಲಿ ನಿರತರಾಗುವುದು)

ಎಲ್ಲಾ ಕರ್ಮಗಳನ್ನೂ ಬಿಟ್ಟುಬಿಡಬೇಕು ಎಂದರೆ , ನಾವೆಲ್ಲಾ ಅವುಗಳನ್ನು ಕಟ್ಟಿಕೊಂಡಿದ್ದೇವೆ ಎಂದೇ ಅರ್ಥ. ಕಟ್ಟಿಕೊಂಡಿರುವವರು ಅದನ್ನು ಅನುಸರಿಸಿ ಅದರಿಂದಲೇ ಜ್ಞಾನವನ್ನು ಪಡೆಯಬೇಕಾಗುತ್ತದೆ. ಪಂಡಿತರು ಅಥವಾ ವಿದ್ವಾಂಸರು ಅವೆಲ್ಲದರಿಂದಲೂ ಹೊರತಾಗಿ ಕೇವಲ ಆತ್ಮತತ್ತ್ವಾನ್ವೇಷಣೆಯಲ್ಲಿ ನಿರತರಾಗಬೇಕಾಗುತ್ತದೆ. ಇಂತಹ ವಿವೇಕಿಗಳಿಗೆ ಮೂಲತಃ ಯಾವ ಕರ್ಮಗಳೂ ಒದಗಿಬಂದಿರುವುದಿಲ್ಲ, ಅಂತಹ ವಿವೇಕಿಗಳು ಜಗಕ್ಕೊಬ್ಬರು , ಯುಗಕ್ಕೊಬ್ಬರು ಎನ್ನಬಹುದು. (ಎಲ್ಲೋ ಒಬ್ಬ ಬುದ್ಧ, ಶಂಕರರಂತಹವರು). ಯಾವ ಕರ್ಮಗಳನ್ನೂ ಅನುಸರಿಸದೆ ಬ್ರಹ್ಮಜ್ಞಾನಿಗಳಾದವರಿದ್ದಾರೆ, ಅನುಸರಿಸಿಯೂ ಆದವರಿದ್ದಾರೆ. ಕರ್ಮವು ಆಚರಿಸುವಂತಹುದು ನಂಬಿಕೆಯ ಮೇಲೆ ನಿಂತಿರುವಂತಹುದು ಆದರೆ ಜ್ಞಾನವು ಹುಡುಕುವುದು ಅಥವಾ ಅನ್ವೇಷಣೆ ಮಾಡುವಂತಹುದು. ಇರುವ ಧರ್ಮಶಾಸ್ತ್ರಗಳಲ್ಲೇ ಅನ್ವೇಷಣೆ ಮಾಡುವಂತಹುದೇ ಹೊರತು ಹೊಸದಾಗಿ ಏನನ್ನೂ ಹುಟ್ಟಿಸುವುದಲ್ಲ. ಕರ್ಮವು comprehension ಆದರೆ ಜ್ಞಾನವು discover ಮಾಡುವಂತಹುದು.
ಸೇಡಿಯಾಪು ಕೃಷ್ಣಭಟ್ಟರೇನೂ(ಪಾಣಿನಿಯೂ ಅಷ್ಟೆ) ಇಲ್ಲದ ಭಾಷೆಗೆ ಸಲ್ಲದ ವ್ಯಾಕರಣವನ್ನು ಬರೆಯಲಿಲ್ಲ. ಇರುವ ಭಾಷೆಯ ನಿಯಮಗಳನ್ನು ಅಧ್ಯಯನ ಮಾಡಿ ಅದಕ್ಕೊಂದು ವ್ಯಾಕರಣ ರೂಪವನ್ನು ಕೊಟ್ಟದ್ದು. ಆಲ್ಬರ್ಟ್ ಐನ್‍ಸ್ಟಿನ್ ಕೂಡಾ ಪ್ರಕೃತಿಯಲ್ಲಿನ ನಿಯಮಗಳನ್ನು ಗಮನಿಸಿ, ಅಧ್ಯಯನ ಮಾಡಿ E=mc square ಎಂಬ ಸೂತ್ರವನ್ನು ಕೊಟ್ಟಿದ್ದೇ ಹೊರತು ಹೊಸತೇನನ್ನೂ ಹುಟ್ಟಿಸಲಿಲ್ಲ.

ಹೀಗೆ ಧೀರರಾದವರು ಸರ್ವಕರ್ಮಗಳನ್ನೂ ತ್ಯಜಿಸಿ ಮುಮುಕ್ಷುತ್ವಕ್ಕಾಗಿ ಯತ್ನಿಸಬೇಕು ಎಂದು ಶ್ರೀ ಶಂಕರರು ಹೇಳುತ್ತಾರೆ.

ಮುಂದಿನ ಕಂತಿನಲ್ಲಿ ಮತ್ತಷ್ಟು ತಿಳಿಯೋಣ.
--------------------------------

ವಂದನೆಗಳೊಂದಿಗೆ..

Adi Sankaracharya’s Sadhana Panchakam

Translated by ಸ್ವಾಮಿ ಚಿನ್ಮಯಾನಂದ

Published by Chinmaya Mission, Mumbai

1. Study the Vedas daily.

Perform diligently the duties (karmas) ordained by them.

Dedicate all those actions (karmas) as worship unto the Lord.

Renounce all desires in the mind.

Wash away the hoards of sins in the bosom.

Recognise that the pleasures of sense-objects (samsar) are riddled with pain.

Seek the Self with consistent endeavour.

Escape from the bondage of ‘home’.

2. Seek companionship with Men of Wisdom.

Be established in firm devotion to the Lord.

Cultivate the virtues such as Shanti etc.,

Eschew all desire-ridden actions.

Take shelter at a Perfect Master (Sat-Guru).

Everyday serve His Lotus feet.

Worship “Om” the Immutable.

Listen in depth, the Upanishadic declarations.

3. Reflect ever upon the meaning of the Upanishadic commandments, and take refuge in the Truth of Brahman.

Avoid perverse arguments but follow the discriminative rationale of the Sruti (Upanishads).

Always be absorbed in the attitude (bhav) – “I am Brahman”.

Renounce pride.

Give up the delusory misconception – “I am the body”.

Give up totally the tendency to argue with wise men.

4. In hunger diseases get treated.

Daily take the medicine of Bhiksha-food.

Beg no delicious food.

Live contentedly upon whatever comes to your lot as ordained by Him.

Endure all the pairs of opposites: heat and cold, and the like.

Avoid wasteful talks.

Be indifferent.

Save yourself from the meshes of other peoples’ kindness.

5. In solitude live joyously.

Quieten your mind in the Supreme Lord.

Realise and see the All-pervading Self every where.

Recognise that the finite Universe is a projection of the Self.

Conquer the effects of the deeds done in earlier lives by the present right action.

Through wisdom become detached from future actions (Agami).

Experience and exhaust “Prarabdha” the fruits of past actions.

Thereafter, live absorbed in the bhav – “I am Brahman” !

ಕೃಪೆ : http://www.astrojyoti.com/



Thursday, August 4, 2011

ವೇದೋಕ್ತ ಜೀವನ ಪಥ: ಮಾನವಧರ್ಮದ ಮೂರು ಅಭಿನ್ನ ಅಂಗಗಳು - ೪:

     ಇನ್ನು ಧರ್ಮದ ಎರಡನೆಯ ಅಭಿನ್ನ ಅಂಗವಾದ ಕರ್ಮದ ಬಗೆಗೆ ಆಲೋಚಿಸೋಣ. ಜ್ಞಾನ, ಧರ್ಮದ ಶಿರಸ್ಸಿದ್ದಂತೆ ಎಂದು ಹೇಳಿದ್ದೇವೆ. ಅದೇ ರೂಪಕವನ್ನು ಮುಂದುವರೆಸಿ, ಕರ್ಮ, ಧರ್ಮದ ಕೈಕಾಲುಗಳಿದ್ದಂತೆ ಎನ್ನಬಹುದು. ಕರ್ಮರಹಿತವಾದ ಜ್ಞಾನ ಕೇವಲ ಸಿದ್ಧಾಂತ ಮಾತ್ರ. ಅದಕ್ಕನುಸಾರವಾದ ಕರ್ಮವಿಲ್ಲದಿದ್ದರೆ ಧರ್ಮ ಕೈಕಾಲಿಲ್ಲದ ಹೆಳವನಂತೆ ಪಂಗುವಾಗಿ ಹೋಗುವುದು. ಆದುದರಿಂದ, ಯಜುರ್ವೇದ ಹೇಳುತ್ತಲಿದೆ:-


ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇಚ್ಛತಂ ಸಮಾಃ |
ಏವಂ ತ್ವಯ ನಾನ್ಯಥೇತೋsಸ್ತಿ ಕರ್ಮ ಲಿಪ್ಯತೇ ನರೇ ||
(ಯಜು.೪೦.೨.)

     [ಇಹ] ಈ ಲೋಕದಲ್ಲಿ [ಕರ್ಮಾಣಿ ಕುರ್ವನ್ ಏವ] ಕರ್ಮಗಳನ್ನು ಮಾಡುತ್ತಲೇ, [ಶತಂ ಸಮಾಃ] ನೂರು ವರ್ಷಗಳವರೆಗೆ, [ಜಿಜೀವಿಷೇತ್] ಜೀವಿಸಲಿಚ್ಛಿಸಬೇಕು. [ತ್ವಯಿ ನರೇ] ಮಾನವನಾದ ನಿನ್ನಲ್ಲಿ [ಏವಂ ಕರ್ಮ ನ ಲಿಪ್ಯತೇ] ಹೀಗೆ ಕರ್ಮ ಅಂಟಿಕೊಳ್ಳುವುದಿಲ್ಲ. [ಇತಃ] ಇಲ್ಲಿಂದ [ಅನ್ಯಥಾ ನ ಅಸ್ತಿ] ಬೇರೆ ಮಾರ್ಗವಿಲ್ಲ.
     ಇದೂ ವೈದಿಕ ಧರ್ಮದ ಅದ್ಭುತ ಸೌಂದರ್ಯವೇ. ನಾವು ವೇದಾಂತಿಗಳು, ನಾವು ನಿಷ್ಕರ್ಮರು, ಕರ್ಮ ಮಾಡಿದರೆ ಜಗತ್ತಿಗಂಟಿಕೊಳ್ಳುವೆವು. ಆದುದರಿಂದ ನಾವು ಯಾವ ಕರ್ಮಕ್ಕೂ ಕೈ ಹಾಕುವುದಿಲ್ಲ - ಎಂದು ಹೇಳುವವರಿಗೆ ವೈದಿಕ ಧರ್ಮದಲ್ಲಿ ಸ್ಥಳವಿಲ್ಲ. ನೈಷ್ಕರ್ಮ ಆಲಸ್ಯದ ಮತ್ತೊಂದು ಹೆಸರು. ಶರೀರ - ಆತ್ಮ ಎರಡೂ ಒಟ್ಟಿಗಿರುವವರೆಗೆ ಭೌತಿಕ ಆವಶ್ಯಕತೆಗಳನ್ನು, ಆಹಾರ-ಪಾನೀಯ-ವಸ್ತ್ರಾದಿಗಳನ್ನು ಪಡೆಯಲೇ ಬೇಕಾಗುತ್ತದೆ. ಅದನ್ನು ಪಡೆಯುವುದಕ್ಕಾಗಿ ಮಾತ್ರ ಸಮಾಜವನ್ನಾಶ್ರಯಿಸುವುದು, ಆದರೆ ಸಮಾಜಕ್ಕಾಗಿ ಏನನ್ನೂ ಮಾಡದಿರುವುದು ಮಹಾಪಾಪ. ಏಕೆಂದರೆ, ಆ ಆಲಸ್ಯವೃತ್ತಿ ಆತ್ಮನ ಮೇಲೆ ಮಹಾನ್ ಋಣದ ಹೊರೆಯನ್ನು ಹೇರುತ್ತದೆ. ಋಣಿಯಾದವನು ಸಮಾಜದ್ರೋಹಿ ಮಾತ್ರವಲ್ಲ, ಆಧ್ಯಾತ್ಮಿಕ ಉನ್ನತಿಗೂ ಅನರ್ಹನಾಗಿ ಹೋಗುತ್ತಾನೆ. ಸಮಾಜದಿಂದ ಪಡೆದ ಮೇಲೆ ಏನಾದರೂ ಕೊಡಲೂ ಬೇಕಾಗುತ್ತದೆ. ನಾವು ಯಾವುದೇ ಆಶ್ರಮದಲ್ಲಿರಲಿ, ಜಗತ್ತಿಗೆ ಹೊರೆಯಾಗಿ, ಋಣಿಗಳಾಗಿ, ಅನ್ನಶತ್ರುಗಳಾಗಿ ಬಾಳಬಾರದು.
****************************

ನಾಗರ ಹಾವೇ ಹಾವೊಳು ಹೂವೇ ಬಾಗಿಲ ಬಿಲದಲಿ ನಿನ್ನಯ ಠಾವೇ !


ನಾಗರ ಹಾವೇ ಹಾವೊಳು ಹೂವೇ ಬಾಗಿಲ ಬಿಲದಲಿ ನಿನ್ನಯ ಠಾವೇ !

ಸೃಷ್ಟಿಕರ್ತ ಬ್ರಹ್ಮನ ಮಗ ಋಷಿ ಕಷ್ಯಪನ ನಾಲ್ಕು ಮಡದಿಯರಲ್ಲಿ ಮೂರನೆಯವಳಾದ ಕದ್ರು ಎಂಬಾಕೆಯಲ್ಲಿ ನಾಗಗಳು ಜನಿಸಿದವು ಎಂಬುದು ಪುರಾಣೋಕ್ತ ಮಾಹಿತಿ. ನಾಗಗಳ ಅಧಿಪತ್ಯವಿರುವುದು ಪಾತಾಳಲೋಕದಲ್ಲಿ ಎಂದೂ ಪುರಾಣಗಳು ಹೇಳುತ್ತವೆ. ಜನಮೇಜಯ ಸರ್ಪಯಾಗವನ್ನೇ ನಡೆಸಿ ಸಹಸ್ರಾರು ನಾಗ ಸಂಕುಲಗಳು ನಶಿಸಿಹೋದರೂ ’ಆಸ್ತಿಕ’ನೆಂಬ ಬ್ರಾಹ್ಮಣ ಕುವರನ ತಡೆಯುವಿಕೆಯಿಂದಾಗಿ ಒಂಬತ್ತು ಪ್ರಮುಖ ನಾಗಗಳು ಮತ್ತು ಅವುಗಳ ವಂಶಗಳು ಉಳಿದುಕೊಂಡವು ಎಂದು ತಿಳಿದುಬರುತ್ತದೆ.


अनन्तं वासुकिं शेषं पद्मनाभं च कम्बलम् ।
शंखपालं धार्तराष्ट्रं तक्षकं कालियं तथा ||

[ ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಮ್|
ಶಂಖಪಾಲಂ ಧಾರ್ತರಾಷ್ಟ್ರಂ ತಕ್ಷಕಂ ಕಾಲಿಯಂ ತಥಾ || ]

ಅನಂತ, ವಾಸುಕಿ, ಶೇಷ, ಪದ್ಮನಾಭ, ಕಂಬಲ, ಶಂಖಪಾಲ, ಧಾರ್ತರಾಷ್ಟ್ರ, ತಕ್ಷಕ ಮತ್ತು ಕಾಲಿಯ ಹೀಗೇ ಒಂಬತ್ತು ಪ್ರಮುಖ ನಾಗಗಳನ್ನು ಹೆಸರಿಸಿದ್ದಾರೆ. ಹೀಗೆ ಉಳಿದುಕೊಂಡ ನಾಗಗಳಲ್ಲಿ ಕಾಲಿಯನನ್ನು ದ್ವಾಪರಯುಗದಲ್ಲಿ ಶ್ರಾವಣ ಮಾಸದ ಶುದ್ಧ ಅಥವಾ ಶುಕ್ಲಪಕ್ಷದ ಪಂಚಮಿಯ ದಿನ ಶ್ರೀಕೃಷ್ಣ ಮರ್ದಿಸಿ ಆತನ ವಿಷದೂಷಣಗಳನ್ನು ನಿಲ್ಲಿಸಿದ ಎಂಬುದೊಂದು ಐತಿಹ್ಯ.

ಹಿಂದೊಮ್ಮೆ ಕ್ಷತ್ರಿಯ ನಾಗಕುಲವೇ ಜಗತ್ತಿನ ಬಹುಭಾಗವನ್ನು ಆಳಿತ್ತು ಎಂಬ ಕಥೆಯೂ ಇದೆ! ಅವುಗಳಲ್ಲಿ ಮೊದಲನೆಯ ರಾಜ ಅನಂತ- ಇದೀಗ ಸುದ್ದಿಯಲ್ಲಿರುವ ಕೇರಳದ ತಿರುವನಂತಪುರವನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡು ಆಳುತ್ತಿದ್ದನಂತೆ. ವಾಸುಕಿ ಕೈಲಾಸದಲ್ಲಿ ನಿಂತು ಆಳಿದರೆ ತಕ್ಷಕ ತಕ್ಷಶಿಲೆಯಲ್ಲಿ ನೆಲೆನಿಂತು ರಾಜ್ಯಭಾರ ನಡೆಸುತ್ತಿದ್ದ. ಇನ್ನುಳಿದಂತೇ ಕಾರ್ಕೋಟಕ, ಪಿಂಗಳ ಮತ್ತು ಐರಾವತ ಹೀಗೇ ಹಲವು ನಾಗಗಳು ಇಂದಿನ ಪಂಜಾಬಿನ ಐರಾವತಿ ಅಥವಾ ರಾವಿ ನದೀ ಮುಖಜ ಭೂ ಪ್ರದೇಶದಲ್ಲಿ ಆಳುತ್ತಿದ್ದರು. ಇಂತಹ ಒಂದು ಪ್ರದೇಶ ಗಂಗಾನದಿಯೆಡೆಯಲ್ಲೂ ಇತ್ತು. ಅಲ್ಲಿಂದಲೇ ಅರ್ಜುನನ ಹೆಂಡತಿಯಾಗಿ ಉಲೂಪಿ ಬಂದಿದ್ದಳು ಎಂದೂ ಪ್ರತೀತಿ ಇದೆ. ಮತ್ಸ್ಯ ಪುರಾಣದ ಹತ್ತನೇ ಅಧ್ಯಾಯದಲ್ಲಿ ನಾಗಗಳ ಬಗ್ಗೆ ವಿಶೇಷ ಮಾಹಿತಿ ದೊರೆಯುತ್ತದೆ. ಆ ಸಮಯದಲ್ಲಿ ಕತ್ತಲೆಯಕಾಲದಲ್ಲಿ ಸುಮಾರು ೧೦೦ ವರ್ಷಗಳ ಕಾಲ ನಾಗಗಳು ಆಳಿದ್ದಾಗಿಯೂ ಅವುಗಳಲ್ಲಿ ಕೆಲವು ಬೌದ್ಧಮತಾವಲಂಬಿಗಳಾಗಿದ್ದರೆಂದೂ ಕ್ರಮೇಣ ಗಂಗಾನದಿಯಲ್ಲಿ ಸ್ನಾನಮಡುತ್ತಾ ಅಶ್ವಮೇಧ ಯಾಗವನ್ನು ಮಾಡಿದ ತರುವಾಯ ಅವರೆಲ್ಲಾ ವೈಷ್ಣವ ಮತವನ್ನು ಸ್ವೀಕರಿಸಿದರು ಎಂದೂ ಆ ಪುರಾಣ ಹೇಳುತ್ತದೆ! ಮಥುರಾ, ಪದ್ಮಾವತಿ, ಕಾಂತಿಪುರ ಮತ್ತು ತಿರುವನಂತಪುರ ಇವು ನಾಗಗಳ ಪ್ರಮುಖ ರಾಜಧಾನಿಗಳಾಗಿದ್ದವು ಎಂಬ ಸಂಗತಿಯೂ ತಿಳಿದುಬರುತ್ತದೆ. ಇಂದಿನ ನಾಗ್ಪುರ್ ಪ್ರದೇಶ ಕೂಡ ನಾಗಗಳಿಗೆ ಸಂಬಂಧಿಸಿದ್ದೇ ಆಗಿತ್ತು ಎಂದೂ ಪುರಾಣೋಕ್ತ ದಾಖಲೆಗಳು ಹೇಳುತ್ತವೆ.

ಇಂದಿಗೂ ನಾಗವಂಶಿ ಕ್ಷತ್ರಿಯರು ಎನಿಸಿರುವ ಹಲವು ಜನ ರಾಜಸ್ತಾನದ ಕೆಲವು ಭಾಗಗಳು, ಮಧ್ಯಪ್ರದೇಶದ ಕೆಲವುಭಾಗಗಳು ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳಲ್ಲೂ ಕಂಡುಬರುತ್ತವೆ. ಕರ್ನಾಟಕದ ತುಳುನಾಡು ಅಥವಾ ದಕ್ಷಿಣ ಕನ್ನಡ ಮತ್ತು ಕೇರಳದಲ್ಲಿ ಕೆಲಭಾಗಗಳಲ್ಲಿಯೂ ಇವರು ಸಿಗುತ್ತಾರೆ.

ನಾಗಪಂಚಮಿ ಅಥವಾ ನಾಗರಪಂಚಮಿಯನ್ನು ಭಾರತದಲ್ಲಷ್ಟೇ ಅಲ್ಲದೇ ನೇಪಾಳೀಯರೂ ಆಚರಿಸುತ್ತಾರೆ. ಜಗತ್ತಿನಲ್ಲಿ ಪರಿಪೂರ್ಣ ಮತ್ತು ಏಕೈಕ ಸನಾತನ ಧರ್ಮ ಇರುವುದು ನೇಪಾಳದಲ್ಲಿ ಮಾತ್ರ! ಅಂತಹ ನೇಪಾಳದ ಕಠ್ಮಂಡುವಿನಲ್ಲಿ ಒಂದಾನೊಂದು ಕಾಲದಲ್ಲಿ ನಾಗಗಳೇ ತುಂಬಿಕೊಂಡಿದ್ದವಂತೆ! ಜನವಸತಿ ಬೆಳೆದಂತೇ ಜನರಿಗೆ ತೊಂದರೆಯಾಗತೊಡಗಿತು. ಹಾವುಗಳಿಗೂ ಕಷ್ಟಕೋಟಲೆ ಎದುರಾಯಿತು. ಅದನ್ನು ನಿವಾರಿಸಿಕೊಳ್ಳಲು ನೇಪಾಳದ ರಾಜ ನಾಗಗಳಲ್ಲಿ ಪ್ರಾರ್ಥನೆ ಸಲ್ಲಿಸಿ ಅವುಗಳಿಗೇ ಅಂತಲೇ ಕೆಲವು ಜಾಗಗಳನ್ನು ಬಿಟ್ಟುಕೊಟ್ಟ ಎಂಬುದೂ ಕೂಡ ಇನ್ನೊಂದು ಕಥೆ.

ಹಾಗೆ ನೋಡುತ್ತಾ ನೋಡುತ್ತಾ ಹೋದರೆ ನಾಗಗಳು ಮಳೆಯ ದೇವತೆಗಳೆಂದೂ ಮಳೆಯನ್ನು ನಿಯಂತ್ರಿಸುವ ಅಥವಾ ಬರಿಸುವ ತಾಕತ್ತು, ಆ ಅಧಿಕಾರ ನಾಗಗಳಿಗೆ ಮಾತ್ರ ಇದೆಯೆಂಬುದೂ ಅಲ್ಲಿನ ಜನರ ನಂಬಿಕೆ. ಹಾಗಾಗಿ ರಾಜನಾದವನಿಗೆ ತಾಂತ್ರಿಕ ಶಕ್ತಿಯನ್ನು ಕೊಟ್ಟು ಮಳೆ-ಬೆಳೆಗಳು ಸಕಾಲಕ್ಕೆ ಆಗುವಂತೇ ಮಾಡುವುದು ನಾಗಗಳು ಎನ್ನುತ್ತಾರೆ. ನಾಗಪಂಚಮಿಯ ದಿನ ಅಲ್ಲಿನ ಮನೆಗಳಲ್ಲಿ ನಾಗರ ಛಾಯಾಚಿತ್ರಗಳಿಗೆ ಪೂಜೆ ಸಲ್ಲಿಸುತ್ತಾರೆ. ಪ್ರತೀಮನೆಯ ಮುಂಭಾಗದ ಬಾಗಿಲಿನ ಮೇಲೆ ನಾಗನ ಚಿತ್ರ ಅಂಟಿಸಿ ದುಷ್ಟಶಕ್ತಿಗಳು ಬರಗೊಡದಂತೇ ನಾಗನಲ್ಲಿ ಪ್ರಾರ್ಥಿಸುತ್ತಾರೆ. ಭಾರತದಲ್ಲಿ ಇರುವಂತೇ ಅಲ್ಲಿಯೂ ಹಾಲು, ಹೂವು ಹಣ್ಣು ಇತ್ಯಾದಿಗಳಿಂದ ಪೂಜೆ ನಡೆಯುತ್ತದೆ ಎಂಬುದು ಗಮನಾರ್ಹ.


ಇನ್ನು ಭಾರತದಲ್ಲಿ ಅದರಲ್ಲಂತೂ ದಕ್ಷಿಣಭಾರತದಲ್ಲಿ ದ್ರಾವಿಡರು ನಾಗಪೂಜೆ ಇತಿಹಾಸದಲ್ಲೂ ಕಂಡುಬರುತ್ತದೆ. ಇತಿಹಾಸದಲ್ಲಿ ಹೆಸರಿಸಿದ ಪಂಚದ್ರಾವಿಡ ದೇಶಗಳಲ್ಲಿ ನಮ್ಮ ಕರ್ನಾಟಕವೂ ಒಂದು. ಕರ್ನಾಟಕದಲ್ಲಿ ನಾಗರ ಪಂಚಮಿಯಂದು ಕೆಲವೆಡೆ ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳು ತವರಿಗೆ ತೆರಳಿ ತಮ್ಮ ಅಣ್ಣ-ತಮ್ಮಂದಿರಿಗೆ ತನಿ ಎರೆಯುವ ಪದ್ಧತಿ ಇದೆ. ಇದೊಂದು ಮಮತೆ ತುಂಬಿದ, ಅಕ್ಕರೆ ತುಂಬಿದ ಆತ್ಮೀಯತೆಯ ಕೈಂಕರ್ಯ. ಮದುವೆಯಾಗಿ ಹೋದ ತಂಗಿಯೋ ಅಕ್ಕನೋ ತವರಲ್ಲಿ ಇರುವ ತನ್ನ ಸಹೋದರರನ್ನು ಮರೆತಿಲ್ಲಾ ಎಂಬುದನ್ನು ನೆನಪಿಸುವ ಸಲುವಾಗಿಯೂ ಮತ್ತು ಗಂಡನ ಮನೆಗೆ ತೆರಳಿ ಅಲ್ಲಿನ ಕೆಲಸ-ಕಾರ್ಯಗಳಲ್ಲಿ ಸದಾ ತೊಡಗಿಕೊಂಡಿದ್ದ ಆಕೆಗೆ ಕಾಡುವ ತವರಿನ ನೆನಪು ಮರುಕಳಿಸುತ್ತಾ ಆಕೆ ಬೇಸರಗೊಳ್ಳದಿರಲಿ ಎಂಬುದೂ ಕೂಡ ಇದರ ಹಿಂದಿರುವ ಉದ್ದೇಶ.

ಕೆಲವು ಊರುಗಳಲ್ಲಿ ಇದೇ ಸಮಯ ಜೋಕಾಲಿಗಳನ್ನೂ ಕಟ್ಟಿ ಜೀಕುವ ಪರಿಪಾಠವಿದೆ. ಇನ್ನು ಹಲವೆಡೆ ಮದರಂಗಿಯನ್ನು ಹಚ್ಚಿಕೊಳ್ಳುವ ಅಭ್ಯಾಸಕೂಡ ಇದೆ. ಒಟ್ಟಿನಲ್ಲಿ ನಾಗಪಂಚಮಿಯ ಹೆಸರಿನಲ್ಲಿ ಒಂದಷ್ಟು ಸಂತಸವನ್ನು ಪಡೆದುಕೊಳ್ಳುವ ಸಮಯ ಇದಾಗಿದೆ. ಉತ್ತರಕರ್ನಾಟಕದ ಬತ್ತೀಸ್ ಶಿರಾಳ ಮೊದಲಾದ ಕಡೆ ಜೀವಂತ ಹಾವುಗಳನ್ನೇ ಹಿಡಿದು [ಹಾವಾಡಿಗರ ಸಹಾಯದಿಂದ] ಪೂಜಿಸುವ ವೈಖರಿಯೂ ಇದೆ ! ಉತ್ತರ ಕರ್ನಾಟಕದಲ್ಲಿ ಪಂಚಮಿ ಹಬ್ಬ ಪ್ರಮುಖ ಹಬ್ಬಗಳಲ್ಲೊಂದು, ಹಾಗಾಗಿ ೩ ರಿಂದ ೫ ದಿನಗಳ ವರೆಗೆ ಆಚರಿಸಲ್ಪಡುತ್ತದೆ. ಪಂಚಮಿ ಹಬ್ಬಕ್ಕೆ ಕರೆಯಲು ಅಣ್ಣ ಇನ್ನೂ ಬರಲೇ ಇಲ್ಲವಲ್ಲಾ ಎಂಬ ಕಳವಳದಲ್ಲಿ ತಂಗಿ ಹಾಡಿದ ಜಾನಪದ ಗೀತೆ :

ಪಂಚ್ಮಿ ಹಬ್ಬ ಉಳಿದಾವ ದಿನನಾಕ
ಅಣ್ಣ ಬರಲಿಲ್ಲ ಯಾಕ ಕರಿಲಾಕ ?

....... ಎಂಬ ಹಾಡನ್ನು ನಾವು ಕೇಳಿಯೇ ಇದ್ದೇವಷ್ಟೇ ?


ನಾಗ ಸಮೃದ್ಧಿಯ ಸಂಕೇತ. ನಾಗನನ್ನು ತೊರೆದರೆ, ಮರೆತರೆ, ಹೊಡೆದು-ಘಾಸಿಗೊಳಿಸಿ ಅನಾಚಾರ ಮಾಡಿದರೆ, ಹುತ್ತಮೊದಲಾದುವನ್ನು ಕೆಡವಿ ಅಪಚಾರವೆಸಗಿದರೆ ಎದುರಿಗೆ ಕಾಣದೇ ಇದ್ದರೂ ಪರೋಕ್ಷವಾಗಿ ನಾಗದೋಷ ಪ್ರಾಪ್ತವಾಗುತ್ತದೆ ಎಂಬುದು ಜನಜನಿತ ವಿಷಯ. ಸಂತತಿ ಮತ್ತು ಸೌಭಾಗ್ಯ, ಪ್ರಗತಿ-ಅಭಿವೃದ್ಧಿ ಇವನ್ನೆಲ್ಲಾ ಪಡೆಯಲು ನಾಗನ ಕೃಪೆ ಬೇಕೆಂಬುದೂ ಕೂಡ ತಿಳಿದುಬರುವ ಅಂಶವಾಗಿದೆ. ಅದಕ್ಕೆಂತಲೇ ನಾಗಬಲಿ ಅಥವಾ ಆಶ್ಲೇಷಾ ಬಲಿ, ನಾಗಮಂಡಲ, ನಾಗಪ್ರತಿಷ್ಠೆ ಮೊದಲಾದ ಪೂಜಾವಿಧಿಗಳನ್ನು ನಡೆಸುತ್ತಾರೆ. ಸತ್ತ ನಾಗರಹಾವು ಕಂಡರೆ ಅಥವಾ ಎಲ್ಲಿಂದಲೋ ಬಂದ ನಾಗರಹಾವು ಕಾಣುವ ಜಾಗದಲ್ಲೆಲ್ಲೋ ಮರಣಿಸಿದರೆ ಆಗ ಒಬ್ಬ ಕರ್ಮಠ ಬ್ರಾಹ್ಮಣನ ಅಂತ್ಯೇಷ್ಠಿಗಳನ್ನು ನೆರವೇರಿಸಿದ್ದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಅದರ ಅಂತ್ಯಕ್ರಿಯೆಗಳನ್ನು ನಡೆಸುವ ಭಕ್ತರು, ಆಸ್ತಿಕರು ಇದ್ದಾರೆ.

ಒಂದುಕಾಲಘಟ್ಟದಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ತಕ್ಷಕಮೊದಲಾದ ಸರ್ಪಗಳು ಕಾರ್ತಿಕೇಯನನ್ನು ಆಶ್ರಯಿಸಿದವು ಎಂದು ತಿಳಿಯಲ್ಪಟ್ಟಿದೆ. ಅಲ್ಲಿಂದ ಮುಂದಕ್ಕೆ ಸುಬ್ರಹ್ಮಣ್ಯನಿಗೂ ನಾಗಸಂಕುಲಕ್ಕೂ ಅವಿನಾಭಾವ ಸಂಬಂಧವೇರ್ಪಟ್ಟಿದೆ. ನಾಗನ ಇನ್ನೊಂದು ರೂಪವೇ ಸುಬ್ರಹ್ಮಣ್ಯ ಎಂಬಷ್ಟು ಆ ಅನ್ಯೋನ್ಯತೆ ಬೆಳೆದುನಿಂತಿದೆ. ದಕ್ಷೀಣಕನ್ನಡದ ಕುಕ್ಕೆ, ಕೋಲಾರದ ಘಾಟಿ ಹಾಗೂ ಉತ್ತರಕನ್ನಡದ ಮುಗ್ವಾ ಸುಬ್ರಹ್ಮಣ್ಯ ಕ್ಷೇತ್ರಗಳು ನಾಗಗಳ ಅರಾಧನೆಗೆ ವಿಶೇಷ ಆದ್ಯತೆ ನೀಡಿವೆ, ಪ್ರಸಿದ್ಧವಾಗಿವೆ. ಸಂತಾನಹೀನರು ಪೂಜಿಸಿ, ಪ್ರಾರ್ಥಿಸಿ ಮಕ್ಕಳನ್ನು ಪಡೆದ ಸಾಕ್ಷ್ಯಗಳೂ ದೊರೆಯುತ್ತವೆ!

ಇಂದಿನ ದಿನಗಳಲ್ಲಿ ಎಷ್ಟೇ ಜಂಜಡಗಳಿದ್ದರೂ ಹೆಂಗಳೆಯರು ತಮ್ಮ ನೆಮ್ಮದಿಗಾಗಿ ನಾಗರ ಪಂಚಮಿಯ ದಿನ ಹೊತ್ತಾರೆ ಎದ್ದು ಶೌಚಸ್ನಾನಾದಿಗಳನ್ನು ಮುಗಿಸಿ, ಕಡುಬು-ತಂಬಿಟ್ಟು ಮೊದಲಾದ ತಿನಿಸುಗಳನ್ನು ಮಡಿಯಲ್ಲಿ[ಶುಚಿಯಲ್ಲಿ] ಮಾಡಿ, ಅರಿಶಿನ-ಕುಂಕುಮಾದಿ ಮಂಗಳದ್ರವ್ಯಗಳನ್ನೊಡಗೂಡಿದ ಪೂಜಾ ಸಾಮಗ್ರಿಗಳೊಂದಿಗೆ ನಾಗಸ್ಥಾನಗಳಿಗೆ ತೆರಳಿ ಅಲ್ಲಿ ಹಾಲಿನಿಂದ ಅಭಿಷೇಕಮಾಡಿ ಪೂಜೆಗೈದು ನೈವೇದ್ಯ ಅರ್ಪಿಸುವುದು ಕಾಣುತ್ತದೆ. ಕರಾವಳಿ ಜಿಲ್ಲೆಗಳಲ್ಲಿ ಎಳೆಯ ತೆಂಗಿನ ಗರಿಗಳ ಓಲೆಗಳಿಂದ ಹಾವು, ಗಿಳಿ ಮೊದಲಾದ ಆಕೃತಿಗಳನ್ನು ಮಾಡಿ ನಾಗಬನಕ್ಕೆ ಅದನ್ನು ಹಚ್ಚುವುದು ಕಂಡುಬರುವ ಆಚರಣೆ. ಅಲ್ಲಲ್ಲಿ ಅನಾದಿ ಕಾಲದಿ ನಾಗಬನಗಳು ಮರದ ಬೀಳಲುಗಳಿಂದ ದೊಡ್ಡ ದೊಡ್ಡ ಮರಗಳಿಂದ ಅಥವಾ ಬಿದಿರುಮೆಳೆಗಳಿಂದ ಆವೃತವಾಗಿದ್ದು ಮಧ್ಯೆ ವಿರಾಜಿಸುವ ಕಲ್ಲಿನ ಅಪರೂಪದ ನಾಗಾಕೃತಿಗಳು ಕಣ್ಣಿಗೆ ನಾಗರ ಹಬ್ಬವನ್ನು ರಂಜನೀಯವಾಗಿಸುತ್ತವೆ.

ಕರಾವಳಿ ಜಿಲ್ಲೆಗಳಲ್ಲಿ ಈ ದಿನ 'ಸುಳಿರೊಟ್ಟಿ' ಎಂಬ ಸಿಹಿ ತಿನಿಸು ಮಾಡುತ್ತಾರೆ. ನಾದುವ ಹದಕ್ಕಿರುವ ಅಕ್ಕಿ ಹಿಟ್ಟನ್ನು ಅರಿಶಿನ ಕೀಳೆಗಳಲ್ಲಿ ಹಚ್ಚಿ ಅದರಮೇಲೆ ಕಾಯಿಸಿ ಹದಗೊಳಿಸಿದ ಕಾಯಿಬೆಲ್ಲ ಲೇಪಿಸಿ ಅದನ್ನು ಮಡಚಿ ಕಾವಲಿಯಮೇಲೆ ಬೇಯಿಸುವ ಒಂದು ಕ್ರಮ ಇದು. ಅಪ್ಪಟ ಅರಿಶಿನದ ಘಮಘಮ ಅಡಿಗೆಮನೆಯನ್ನು ತುಂಬಿಕೊಳ್ಳುವುದೂ ಅಲ್ಲದೇ ತಿನ್ನುವವರಿಗೆ ಅಮೃತತುಲ್ಯ ಸಂತುಷ್ಟಿಯನ್ನು ನೀಡುತ್ತದೆ.

ಹಬ್ಬಗಳು ಬರುವುದು ಮನುಷ್ಯ ಮನುಷ್ಯರ ಸಂಬಂಧವನ್ನು ಬಳಸಲಿಕ್ಕೆ ಮತ್ತು ಗಟ್ಟಿಗೊಳಿಸಲಿಕ್ಕೆ. ಹಬ್ಬಗಳಿಲ್ಲದೇ ಇದ್ದರೆ ಎಂದಿನಂತೇ ಎಡಬಿಡದ ವ್ಯಾವಹಾರಿಕ, ವ್ಯಾವಸಾಯಿಕ ಒತ್ತಡಗಳ ನಡುವೆ ಬದುಕು ಸಂಪೂರ್ಣ ಯಾಂತ್ರಿಕವಾಗಿಬಿಡುತ್ತದೆ. ಇದನ್ನೆಲ್ಲಾ ನಮ್ಮ ಪೂರ್ವಜರು ಅರಿತಿರಲೂ ಸಾಕು. ಹೀಗಾಗಿ ಮಳೆಗಾಲದಲ್ಲಿ ಉಳಿದೆರಡು ಕಾಲಗಳಿಗೆ ಹೋಲಿಸಿದರೆ ಸ್ವಲ್ಪ ಜಾಸ್ತಿ ಬಿಡುವಿರುವುದರಿಂದ ಹಬ್ಬಗಳ ಸರದಿ ಈ ಕಾಲದಲ್ಲೇ ಜಾಸ್ತಿ ಇರುತ್ತದೆ! ಅದಕ್ಕೆ ಮೇಲುಹೊದಿಕೆಯಾಗಿ ದಕ್ಷಿಣಾಯಣದಲ್ಲಿ ಸ್ವರ್ಗದ ಬಾಗಿಲು ಹಾಕಿ ದೇವತೆಗಳೆಲ್ಲಾ ಭೂಮಿಯಲ್ಲಿ ಸಲ್ಲಿಸುವ ಪೂಜೆಗಳನ್ನು ಸ್ವೀಕರಿಸಲು ಇಲ್ಲಿಗೆ ಬರುತ್ತಾರೆ ಎಂದೂ ಹೇಳಲಾಗಿದೆ.

ನಮಗೆ ತಿಳಿಯದ ಆಳಗಲ ಈ ಬ್ರಹ್ಮಾಂಡದಲ್ಲಿ ಎಲ್ಲೆಲ್ಲಿ ಏನೇನು ಅಡಗಿದೆಯೋ ಅದರ ಪರಿಪೂರ್ಣ ಅರಿವು ಸಾಮಾನ್ಯ ಮನುಷ್ಯರಿಗೆ ಯಾರಿಗೂ ಇರುವುದಿಲ್ಲ. ಬೇರೇ ಲೋಕಗಳು ಇರಲಿಕ್ಕೂ ಸಾಕು ಅವುಗಳಲ್ಲಿ ನಮ್ಮನ್ನು ಜರಾಮರಣ ಚಕ್ರದಲ್ಲಿ ಬಂಧಿಸಿರುವ ಶಕ್ತಿಯ ಆವಾಸವಿರಲೂ ಸಾಕು ಯಾರಿಗೆ ಗೊತ್ತು ? ಅಲ್ಲವೇ ? ನಾಗಗಳು ವಿನಾಕಾರಣ ಕಡಿಯುವುದೂ ಇಲ್ಲ. ಕೆಲವರನ್ನು ಮಾತ್ರ ಅಟ್ಟಿಸಿಕೊಂಡು ಬಂದು ಎಲ್ಲಿದ್ದರೂ ಬಿಡದೇ ಕಚ್ಚುತ್ತವೆ. ಇಂತಹ ವೈಜ್ಞಾನಿಕತೆ ಎಂದು ಕೊಚ್ಚಿಕೊಳ್ಳುವ ದಿನಗಳಲ್ಲೂ ಕೆಲವು ಪ್ರದೇಶಗಳಲ್ಲಿ ಕೆಲವರು ವಿಷ ಸರ್ಪಗಳ ಕಡಿತವನ್ನು ಕೇವಲ ನಮಗೆಲ್ಲಾ ಹೇಳದಿರುವ ಯಾವುದೋ ಮಂತ್ರದಿಂದ ಹೊರತೆಗೆದು ವಾಸಿಮಾಡುವುದು ಚಮತ್ಕಾರದ ವಿಷಯವಾಗಿದೆ! ದೂರದಲ್ಲಿ ಯಾರಿಗೋ ಹಾವು ಕಚ್ಚಿದರೆ ಆತ/ ಆತನ ಕಡೆಯವರು ದೂರವಾಣಿಯ ಮೂಲಕ ಆ ವ್ಯಕ್ತಿಗಳಿಗೆ ತಿಳಿಸಿಬಿಟ್ಟರೆ ಕರವಸ್ತ್ರವೊಂದನ್ನು ಗಂಟುಹಾಕುತ್ತಾ ಬಾಯಲ್ಲಿ ಏನೋ ಮಟಮಣ ಮಟಮಣ ಮಾಡುವ ಅವರು ಹಾವುಕಡಿದವನನ್ನು ಅವರಲ್ಲಿಗೆ ಕರೆದುಕೊಂಡು ಹೋಗುವವರೆಗೂ ಏನೂ ಆಗದಂತೇ ಬಂಧನ ಹಾಕುತ್ತಾರೆ! ನಂತರ ಅವರಲ್ಲಿಗೆ ಹೋದಾಗ ಸ್ವಲ್ಪ ನೀರು ಹೊಡೆದು ಏನೋ ಹೇಳಿಬಿಟ್ಟರೆ ವ್ಯಕ್ತಿ ಮಾಮೂಲಿಯಾಗಿ ಎದ್ದು ಕೂರುತ್ತಾನೆ! ಇದೆಲ್ಲವನ್ನೂ ನೋಡಿದಾಗ ಅನಿಸುವುದು ನಾಗಗಳೂ ಕೂಡ ಯಾವುದೋ ಹೊಸ ಆಯಾಮವುಳ್ಳ ಲೋಕದ ಕನೆಕ್ಷನ್ ಇರುವಂಥವು ಎಂಬುದು!

ಏನೂ ಇರಲಿ ಎಲ್ಲಾ ನಾಗಗಳನ್ನೂ ನಿರಾಶ್ರಿತ ನಾಗಗಳ ಅಧಿಪತಿಯೆನಿಸಿರುವ ನಾಗೇಶ ಶ್ರೀಸುಬ್ರಹ್ಮಣ್ಯನನ್ನು ಧ್ಯಾನಿಸುತ್ತಾ ನಾಗಪಂಚಮಿಯ ಶುಭಸಂದೇಶಗಳನ್ನು ನಿಮಗೆಲ್ಲಾ ಹಂಚುತ್ತಿದ್ದೇನೆ, ಎಲ್ಲರಿಗೂ ಒಳಿತಾಗಲಿ, ಧನ್ಯವಾದ :

सर्पाधीश नमस्तुभ्यम्
नागानां च गणाधिपः ।
सर्वारिष्ट प्रशमनं
भक्तानां अभयप्रदः ॥

ಸರ್ಪಾಧೀಶ ನಮಸ್ತುಭ್ಯಮ್
ನಾಗಾನಾಂ ಚ ಗಣಾಧಿಪಃ |
ಸರ್ವಾರಿಷ್ಟ ಪ್ರಶಮನಂ
ಭಕ್ತಾನಾಂ ಅಭಯಪ್ರದಃ ||

|| ಓಂ ಸ್ವಸ್ತಿ ||
---ವಿ.ಆರ್.ಭಟ್