Pages

Monday, June 25, 2012

ಅಹಿಂಸಾ ........ಒಂದಷ್ಟು ಚಿಂತನೆ.

" ಅಹಿಂಸಾ, ಸತ್ಯ, ಆಸ್ತೆಯ, ಶೌಚ, ಇಂದ್ರೀಯನಿಗ್ರಹ " ಇವು ಪಂಚ ಮುಖ್ಯ ತತ್ವಗಳು ಎಂದು ಧರ್ಮ ಶಾಸ್ತ್ರಗಳು ಹೇಳುತ್ತವೆ. ಯಾರನ್ನು ಹಿಂಸೆಗೆ ಒಳಪಡಿಸದಿರುವುದು ;   ಸತ್ಯವನ್ನೇ ನುಡಿಯುವುದು ;  ಪರರ   ವಸ್ತುಗಳನ್ನು   ಕದಿಯದಿರುವುದು ;   ದೇಹ ,ಮನಸ್ಸು, ಮತ್ತು ನಾವಾಡುವ ಮಾತಿನಲ್ಲಿ ಪವಿತ್ರತೆಯನ್ನು ಸಾಧಿಸುವುದು ; ಮತ್ತು ಪಂಚೆಂದ್ರಿಯಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವುದು.  ಇವೆ ಆ ಪಂಚ ಮಹಾ ತತ್ವಗಳು.  ಮಹಾಭಾರತದಲ್ಲಿ  ಇದರಲ್ಲಿ ಒಂದಾದ ಅಹಿಂಸೆಯ ಬಗ್ಗೆ ಹೇಳಿದೆ " ಅಹಿಂಸಾ ಪರಮೊಧರ್ಮಃ."  ಅಹಿಂಸೆ ಪರಮ ಪವಿತ್ರ ಧರ್ಮವಾಗಿದೆ. ಈ ತತ್ವವನ್ನು ಪ್ರಪಂಚದ ಎಲ್ಲ ಧರ್ಮಗಳು ಒಪ್ಪಿಕೊಂಡಿವೆ. ಬೌದ್ಧ ಮತ್ತು ಕ್ರೈಸ್ತ ಧರ್ಮಗಳು ತಮ್ಮ ಗ್ರಂಥಗಳಲ್ಲಿ ಈ ವಿಚಾರವನ್ನು ವಿಶೇಷವಾಗಿ ಪ್ರತಿಪಾದಿಸಿದೆ.

ಹಿಂಸೆ ಎಂದರೆ ಕೇವಲ ಒಂದು ಜೀವಕ್ಕೆ ಹಾನಿ ಮಾಡುವುದು ಮಾತ್ರವಾಗುವುದಿಲ್ಲ, ಯಾರೊಬ್ಬರ ಮನಸ್ಸಿಗೆ ನೋವುಂಟು ಮಾಡುವುದು, ಮತ್ತೊಬ್ಬರಿಗೆ ನಮ್ಮ ನಡವಳಿಕೆಯಿಂದ ಆಗಬಹುದಾದ ಮಾನಸಿಕ ಕಿರಿಕಿರಿಯು ಸೇರುತ್ತದೆ.  ಆದ್ದರಿಂದ, ಅಹಿಂಸೆ ಎಂದರೆ ಯಾರೊಬ್ಬರಿಗೂ ಯಾವ ರೀತಿಯಲ್ಲೂ ಹಿಂಸೆಯಾಗದಂತೆ ಬಾಳುವುದೇ ಆಗುತ್ತದೆ.  ಪ್ರಪಂಚದ ಎಲ್ಲಾ  ಧರ್ಮಗಳು ಅಹಿಂಸೆಯ ತತ್ವವನ್ನು  ಪಾಲಿಸಬೇಕೆಂದು ಮತ್ತು ಹಿಂಸಾ ಮಾರ್ಗವನ್ನು ತ್ಯಜಿಸಬೇಕೆಂದು ಹೇಳುತ್ತವೆ.  ಆದರೆ, ಯಾವುದೇ ರೀತಿಯಲ್ಲಿ ಹಿಂಸೆಗೆ ಆಸ್ಪದ ಕೊಡದ ಹಾಗೆ ಜೀವನವನ್ನು ನಡೆಸಲು ಸಾಧ್ಯವೇ?


ಒಂದು ಉದಾಹರಣೆಯನ್ನು ನೋಡೋಣ.  ಒಬ್ಬ ಕೊಲೆಪಾತಕ ನಮ್ಮ ಮನೆಗೆ ನುಗ್ಗಿದ್ದ ಎಂದೇ ಅಂದುಕೊಳ್ಳೋಣ. ಅವನ ಕೈಯಲ್ಲಿ ಮಾರಕಾಸ್ತ್ರವಿದೆ.  ಅವನು ನಮ್ಮ ಮಗನನ್ನೂ , ಮಗಳನ್ನೂ ಹೊಡೆಯಲು ಅಥವಾ ಅತ್ಯಾಚಾರ ಮಾಡಲು ಮುಂದಾಗಬಹುದು.  ಹೆಂಡತಿ ಮಕ್ಕಳ  ಪ್ರಾಣ ತೆಗೆಯಲು ಮುನ್ನುಗ್ಗಬಹುದು.  ಕೊಲೆಯ ಬೆದರಿಕೆ ಒಡ್ಡಬಹುದು. ಮನೆಯಲ್ಲಿರುವ ಹಣ , ಒಡವೆ ದೋಚಲು ಪ್ರಯತ್ನಿಸಬಹುದು.  ಒಬ್ಬೊಬ್ಬರಾಗಿ ಹಿಂಸೆಗೆ ಒಳಗಾಗಬಹುದು.  ಇಂತಹ ವಿಷಮ ಪರಿಸ್ಥಿತಿಯಲ್ಲಿ ನಾವು ನಮ್ಮ ಕುಟುಂಬದ ಸದಸ್ಯರನ್ನು ರಕ್ಷಿಸಲು ಮುಂದಾಗಬೇಡವೇ ? ನಮ್ಮನ್ನು ರಕ್ಷಿಸಲು ಯಾರು ಇಲ್ಲವೆಂದು ಹೇಳುತ್ತಾ ಕೂರಬೇಕೆ?  ಅಹಿಂಸಾ ಪರಮೋ ಧರ್ಮಃ  ಎಂದು ಕಣ್ಣು ಮುಚ್ಚಿ ಕೂರಬೇಕೆ?  ಅಥವಾ ಅಹಿಂಸಾ ತತ್ವವನ್ನು ಮನೆಯವರಿಗೆಲ್ಲ ಹೇಳಿ ಸಮಾಧಾನ ಪಡಿಸಬೇಕೇ?  ಅಥವಾ ನಮ್ಮ ಕುಟುಂಬದ ಎಲ್ಲಾ ಸದಸ್ಯರೂ  ಒಗ್ಗಟ್ಟಾಗಿ ನಮ್ಮ ಕೈಲಾದ ಮಟ್ಟಿಗೆ ಆ ಪಾತಕಿಯನ್ನ ಎದುರಿಸಬೇಕೆ? ಅವನ ತಪ್ಪಿಗೆ ಶಿಕ್ಷೆಯನ್ನು ಕೊಡಿಸುವಲ್ಲಿ ಶ್ರಮಿಸಬೇಕೆ?  ಪರಿಸ್ಥಿತಿ ವಿಕೋಪಕ್ಕೆ ತಿರುಗಿದರೆ ಆ ಪಾತಕಿಯನ್ನು ಸಾಯಿಸಬೇಕಾದ ಪರಿಸ್ಥಿತಿ ಬಂದಾಗ ಏನು ಮಾಡಬೇಕು?  ಈ ರೀತಿಯ ಹಲವಾರು ಪ್ರಶ್ನೆಗಳು ಸಹಜವಾಗಿ ನಮ್ಮೊಳಗೇ ಹುಟ್ಟಬಹುದು.


ಅಹಿಂಸೆಯನ್ನು ಭೋದಿಸುವ ನಮ್ಮ ಧರ್ಮ ಶಾಸ್ತ್ರಗಳು ಇಂಥ   ವಿಷಮ ಪರಿಸ್ಥಿತಿಯಲ್ಲಿ    ಏನು  ಮಾಡಬೇಕೆಂದು   ತಿಳಿಸಿವೆ.  " ಯಾವುದೇ ವಿಚಾರ ಮಾಡದೆ ಇಂತಹ ಪಾತಕಿಗಳನ್ನು ಶಿಕ್ಷಿಸಲು ಮುಂದಾಗಬೇಕೆಂದು , ದಂಡಿಸಬೇಕೆಂದು ಹೇಳುತ್ತದೆ."  ಮುಂದುವರೆದು  " ಇಂತಹ ದುಷ್ಕೃತ್ಯ ಎಸಗುವ ವ್ಯಕ್ತಿ ಗುರುವಾಗಿರಬಹುದು , ಹಿರಿಯನಾಗಿರಬಹುದು, ಯುವಕನಾಗಿರಬಹುದು, ಅಥವಾ ವಿದ್ಯಾಸಂಪನ್ನನೆ  ಆಗಿರಬಹುದು.  ಆದರೆ ಇಂತಹವರಿಗೆ ಯಾವುದೇ ಕರುಣೆಯನ್ನು ತೋರಿಸಬಾರದು " ಎಂದೇ ಹೇಳುತ್ತದೆ. " ಇಂತಹ ಅನಿವಾರ್ಯ ಸಂಧರ್ಭದಲ್ಲಿ ಪಾತಕಿಯನ್ನು ಕೊಂದರು , ಮಾಡಿದ ಪಾಪ ಕೃತ್ಯಕ್ಕೆ  ಯಾವ ಪಾಪದ ಲೇಶವು ಅಂಟುವುದಿಲ್ಲ "  ಎನ್ನುತ್ತದೆ ಧರ್ಮ ಶಾಸ್ತ್ರಗಳು.    ಇಂದಿನ ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲೂ  " ವಿಶೇಷ ಸಂಧರ್ಭದಲ್ಲಿ ಸ್ವಯಂ ರಕ್ಷಣೆಗಾಗಿ ಅತ್ಯಾಚಾರಿ, ಕೊಲೆಗಡುಕರನ್ನು ಕೊಲ್ಲುವುದು  ಅಪರಾಧವಲ್ಲ " ಎನ್ನುವುದನ್ನು  ಹಲವಾರು ವಿಚಾರಣೆಯ ಸಂಧರ್ಭದಲ್ಲಿ ಸಮರ್ಥಿಸಿದೆ.


ಇಂತಹುದೇ ಸಂಧಿಗ್ದದಲ್ಲಿ ಅರ್ಜುನನು ಧರ್ಮರಾಯನನ್ನು ಅಹಿಂಸೆಯ ಬಗ್ಗೆ ಒಂದು ಪ್ರಶ್ನೆಯನ್ನು ಕೇಳುತ್ತಾನೆ.  " ಈ ಪ್ರಪಂಚದಲ್ಲಿ ನಮ್ಮ ಕಣ್ಣಿಗೆ ಕಾಣದ ಕೋಟ್ಯಾಂತರ ಜೀವಿಗಳು, ನಾವು ಊಹೆ ಕೂಡ ಮಾಡಿಕೊಳ್ಳಲಾಗದಂತೆ  ನಮ್ಮ ಕಣ್ಣ ರೆಪ್ಪೆಗೆ ಬಡಿತಕ್ಕೆ ಸಿಕ್ಕಿ ಸಾಯುವಾಗ  ಅಹಿಂಸಾ ತತ್ವ ಎಷ್ಟು ಸಮಂಜಸ? "   ಇಂತಹ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರವನ್ನು ಭಾಗವತ ಹೀಗೆ ಹೇಳುತ್ತದೆ " ಜೀವೋ, ಜೀವಸ್ಯ , ಜೀವನಂ."  ಉಪನಿಷತ್ತು ಹೇಳುತ್ತದೆ "ಜೀವನದಲ್ಲಿ  ಪ್ರತಿಯೊಂದು ಅವಶ್ಯವೇ."


ಈ ಜಗತ್ತಿನಲ್ಲಿ  ಅಹಿಂಸೆಯನ್ನು ಎಲ್ಲರು ಭೋಧಿಸುವವರೆ ಆದರೆ ದುಷ್ಟರನ್ನು ಶಿಕ್ಷಿಸುವವರು ಯಾರು?  ದುಷ್ಟರಿಂದ ಸಾಮಾನ್ಯರಿಗೆ ರಕ್ಷಣೆ  ಹೇಗೆ?  ದುಷ್ಕೃತ್ಯ ಎಸಗುವವರನ್ನು ನಿಗ್ರಹಿಸುವ ಜೊತೆಗೆ ಶಿಷ್ಟರನ್ನು ರಕ್ಷಿಸುವ ಕಾರ್ಯ ಕೂಡಾ ಅಹಿಂಸಾ ತತ್ವದಷ್ಟೇ ಪ್ರಮುಖವಲ್ಲವೇ?  ಈ ಬದುಕಿನಲ್ಲಿ ಕೇವಲ ಒಳ್ಳೆಯತನವಷ್ಟೇ ಮುಖ್ಯವಲ್ಲ , ಜೊತೆಗೆ ಒಳ್ಳೆಯದನ್ನು ಉಳಿಸಿಕೊಳ್ಳಲು  ಹೋರಾಟವನ್ನು ನಡೆಸಬೇಕಾಗುತ್ತದೆ. ಇಂತಹ ಹೋರಾಟದ ಸಂಧರ್ಭದಲ್ಲಿ ಪಲಾಯನವಾದ ಎಂದಿಗೂ ಕೂಡದು.  ಸಮರ್ಥವಾಗಿ ಎದುರಿಸುವ ಮನೋಸ್ತೈರ್ಯ ಹೊಂದಬೇಕಾಗುತ್ತದೆ.  ಕೇವಲ ನೀತಿ ಪಾಠದಿಂದ ಜೀವನ ಸಾಗುವುದಿಲ್ಲ.  ನೀತಿ, ಅನೀತಿಯ ವ್ಯತ್ಸ್ಯಾವನ್ನು ತಿಳಿದು ಯಾವ ಸಂಧರ್ಭಕ್ಕೆ ಯಾವುದು ಅವಶ್ಯಕ ಎಂಬುದರ ನಿರ್ಧಾರ ಮಾಡಬೇಕಾದ ವಿವೇಚನೆ ಮತ್ತು ವಿವೇಕ ಅವಶ್ಯಕ.        ಇದನ್ನೇ ಶ್ರೀ ಕೃಷ್ಣ ಪರಮಾತ್ಮ     ಭಗವಧ್ಗೀತೆಯಲ್ಲಿ   ಅರ್ಜುನನಿಗೆ " ಕರ್ಮದಲ್ಲಿ ಆಕರ್ಮವನ್ನು, ಆಕರ್ಮದಲ್ಲಿ ಕರ್ಮವನ್ನು ಯಾವನು ನೋಡುತ್ತಾನೋ ಅವನೇ ಬುದ್ಧಿವಂತನು, ಅವನೇ ಯುಕ್ತನು, ಮತ್ತು ಸಕಲ ಕರ್ಮಗಳನ್ನು ಮಾಡಿದವನಾಗುತ್ತಾನೆ " ಎಂದು ಬೋಧಿಸಿದ್ದು .


ಹೆಚ್ ಏನ್ ಪ್ರಕಾಶ್


( ಈ ನನ್ನ ಚಿಂತನವು ಹಾಸನ ಆಕಾಶವಾಣಿ ಕೇಂದ್ರದಿಂದ ದಿನಾಂಕ 27 11 2009 ರಲ್ಲಿ ಬಿತ್ತರಗೊಂಡಿತ್ತು )

ಸಂಧ್ಯಾಕಾಲದಲ್ಲಿರುವವರೊಂದಿಗೆ ಸ್ವಲ್ಪ ಸಮಯ





     ನನ್ನ ಮೊಮ್ಮಗಳು ಚಿ. ಅಕ್ಷಯಳ 6ನೆಯ ವರ್ಷದ ಹುಟ್ಟುಹಬ್ಬವನ್ನು ಕಳೆದ ವಾರ ಬೆಂಗಳೂರಿನ ಮನೆಯಲ್ಲಿ ಸರಳವಾಗಿ ಆಚರಿಸಿದರು. ಆ ಸಂದರ್ಭದಲ್ಲಿ ಯಾವುದಾದರೂ ಸಾಮಾಜಿಕ ಚಟುವಟಿಕೆಗೆ ಧನಸಹಾಯ ಮಾಡಲು ಅಪೇಕ್ಷಿಸಿದ್ದ ಅಳಿಯ ರಾಘವೇಂದ್ರ ಮತ್ತು ಮಗಳು ಬಿಂದು ಮನೆಯ ಸಮೀಪದಲ್ಲಿ ವಿಸ್ತರಣೆಯಾಗುತ್ತಿದ್ದ ದೇವಸ್ಥಾನದ ಕಟ್ಟಡಕ್ಕೆ ಹಣ ನೀಡುವ ಬಗ್ಗೆ ಮಾತನಾಡುತ್ತಿದ್ದರು. ಅದರ ಬದಲು ಯಾವುದಾದರೂ ವೃದ್ಧಾಶ್ರಮದ ನಿವಾಸಿಗಳಿಗೆ ಅವರ ಅಗತ್ಯ ನೋಡಿ ಏನಾದರೂ ಸಹಾಯ ಮಾಡಬಹುದೆಂದು ಕೊಟ್ಟ ಸಲಹೆಯನ್ನು ತಕ್ಷಣ ಒಪ್ಪಿದ ಅವರು ಹಾಸನದಲ್ಲೇ ಇರುವ ವೃದ್ಧಾಶ್ರಮಕ್ಕೆ ಭೇಟಿ ನೀಡಿ ವಿಚಾರಿಸಿ ತಿಳಿಸುವ ಹೊಣೆಯನ್ನು ನನಗೇ ವಹಿಸಿದರು. ಆ ಕಾರಣದಿಂದ ನಾನು ಮಿತ್ರ ಹರಿಹರಪುರ ಶ್ರೀಧರರನ್ನೂ ಕರೆದುಕೊಂಡು ಹಾಸನ ನಗರದ ಜೊರವಲಯದಲ್ಲಿರುವ ಗವೇನಹಳ್ಳಿಯಲ್ಲಿರುವ ವೃದ್ಧಾಶ್ರಮ ಚೈತನ್ಯ ಮಂದಿರಕ್ಕೆ ಭೇಟಿ ನೀಡಿ ಕೆಲವು ಗಂಟೆಗಳ ಕಾಲ ಅಲ್ಲಿದ್ದ ಹಿರಿಯರೊಡನೆ ಕಳೆದೆವು.   
     ಕಾಮಧೇನು ಸಹಕಾರಿ ವಿದ್ಯಾಶ್ರಮದ ಅಂಗ ಸಂಸ್ಥೆ ಚೈತನ್ಯ ಮಂದಿರದಲ್ಲಿ ಈಗ 32 ವೃದ್ಧೆಯರು ಮತ್ತು 10 ವೃದ್ಧರು ಆಶ್ರಯ ಪಡೆದಿದ್ದಾರೆ. ಮೊದಲು 13 ವೃದ್ಧರಿದ್ದು ಅವರ ಪೈಕಿ ಮೂವರು ಕಳೆದ 15 ದಿನಗಳ ಅವಧಿಯಲ್ಲಿ ಇಹಲೋಕ ತ್ಯಜಿಸಿದ ವಿಷಯ ತಿಳಿದು ಮನಸ್ಸು ಭಾರವಾಯಿತು. ವೃದ್ಧಾಶ್ರಮದಲ್ಲಿ ಬಡವರಿಗೆ ಉಚಿತವಾಗಿ ಊಟ, ವಸತಿ, ವೈದ್ಯಕೀಯ ಚಿಕಿತ್ಸೆ, ಇತ್ಯಾದಿ ಅಗತ್ಯದ ಅವಶ್ಯಕತೆಗಳನ್ನು ಪೂರೈಸುತ್ತಿದ್ದಾರೆ. ಆರ್ಥಿಕವಾಗಿ ಅನುಕೂಲವಾಗಿದ್ದು, ಅಸಹಾಯಕತೆ ಹಾಗೂ ಅನಿವಾರ್ಯತೆಯ ಕಾರಣ ಇರಬಯಸುವ ವೃದ್ಧ, ವೃದ್ಧೆಯರಿಗೂ ಇಲ್ಲಿ ಸ್ವಲ್ಪ ಹಣವನ್ನು ಮುಂಗಡವಾಗಿ ಕಟ್ಟಿಸಿಕೊಂಡು ಮಾಸಿಕ ರೂ. 1500/- ಅನ್ನು ಊಟೋಪಚಾರದ ವೆಚ್ಚವಾಗಿ ಪಡೆದು ಇರಲು ಅನುಕೂಲ ಕಲ್ಪಿಸಿದ್ದಾರೆ. ಅಂತಹ 4-5 ವೃದ್ಧರೂ ಇಲ್ಲಿದ್ದಾರೆ. ಆರು ಶಿಶುಗಳನ್ನೂ ಅಲ್ಲಿ ಪಾಲಿಸಲಾಗುತ್ತಿದೆ. ಮೂರು ಮಕ್ಕಳು 2-3 ವರ್ಷದವರಾಗಿದ್ದರೆ ಮೂರು ಶಿಶುಗಳು ಇನ್ನೂ ಹಾಲು ಕುಡಿಯುವ ಕೆಲವೇ ತಿಂಗಳುಗಳ ಎಳೆ ಕಂದಮ್ಮಗಳು. ಒಂದು ಶಿಶುವಂತೂ ಜನಿಸಿ ಕೇವಲ 2-3 ದಿನಗಳಾಗಿದ್ದು ಸಕಲೇಶಪುರ ತಾಲ್ಲೂಕು ಹುರುಡಿ ಗ್ರಾಮದ ಬಸ್ ನಿಲ್ದಾಣದ ಬಳಿ ಬಿಟ್ಟು ಹೋಗಿದ್ದಾಗಿದ್ದು ಇಲ್ಲಿ ಆಶ್ರಯ ಪಡೆದಿದೆ. ಬೆಳಿಗ್ಗೆ ಮತ್ತು ಸಾಯಂಕಾಲ ಕಾಫಿ, ಟೀ, ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗುತ್ತಿದೆ. ಡಾ. ಗುರುರಾಜ ಹೆಬ್ಬಾರರು ಸಂಸ್ಥೆಯ ಅಧ್ಯಕ್ಷರು ಹಾಗೂ ಬೆನ್ನೆಲುಬಾಗಿದ್ದಾರೆ. ಉತ್ತಮ ಸಹಕಾರಿಗಳು ಅವರೊಡನಿದ್ದಾರೆ. 
     ಗಂಡ ಮತ್ತು ಮಕ್ಕಳು ಇಲ್ಲದ ಕಾರಣ ಅನಿವಾರ್ಯವಾಗಿ ಅಲ್ಲಿರಬೇಕಾಗಿ ಬಂದವರು ಕೆಲವರಾದರೆ, ಕೆಲವರು ಪರಸ್ಪರರಲ್ಲಿನ ಹೊಂದಾಣಿಕೆಯ ಕೊರತೆ, ಅಸಹನಾ ಮನೋಭಾವ, ವೈಯಕ್ತಿಕ ಸ್ವಪ್ರತಿಷ್ಠೆ, ಸ್ವಾಭಿಮಾನ, ಬಡತನ, ಇತ್ಯಾದಿಗಳ ಕಾರಣದಿಂದ ಅಲ್ಲಿರುವುದು ಕೆಲವರನ್ನು ಮಾತನಾಡಿಸಿದಾಗ ತಿಳಿದು ಬಂದ ಸಂಗತಿ. ಹೊಂದಿಕೊಂಡು ಹೋಗದ ಅವರುಗಳ ಸ್ವಭಾವದಿಂದ ವೃದ್ಧಾಶ್ರಮದಲ್ಲೂ ಕಿರಿಕಿರಿಯಾಗುವ ಬಗ್ಗೆ ಸಹ ಗೊತ್ತಾಯಿತು. ಒಬ್ಬ ವೃದ್ಧೆಯನ್ನು ಮಕ್ಕಳ ಬಗ್ಗೆ ಕೇಳಿದಾಗ, "ಮಕ್ಕಳು ಅವ್ರೆ, ಸತ್ತಿಲ್ಲ, ಬದುಕವ್ರೆ" ಎಂದು ಸಿಡಿಮಿಡಿಗೊಂಡಿದ್ದಳು. ಆರು ವರ್ಷಗಳಿಂದ ಇಲ್ಲಿರುವ ಇನ್ನೊಬ್ಬ ವೃದ್ಧೆ ಹಿಂದೆ ಅಂಗಡಿ ನಡೆಸುತ್ತಿದ್ದು, ಆಕೆ ಕಷ್ಟಪಟ್ಟು ಉಳಿಸಿದ್ದ  1ಲಕ್ಷ ರೂಪಾಯಿ ಇತರರ ಪಾಲಾಯಿತೆಂದು ಹಲುಬಿದ್ದಳು. ಹಾಸನ ನಗರದ ಒಬ್ಬ ಪ್ರತಿಷ್ಠಿತ ವ್ಯಕ್ತಿಯ (ಈಗ ದಿವಂಗತ) ಪತ್ನಿ ಸಹ ಪಾವತಿ ಆಧಾರದ ಮೇಲೆ ಇಲ್ಲಿನ ನಿವಾಸಿಯಾಗಿದ್ದಾರೆ. ಅವರ ಮಕ್ಕಳು ಅಮೆರಿಕಾದಲ್ಲಿದ್ದಾರೆ. ವಿಶೇಷವೆಂದರೆ ವೃದ್ಧಾಶ್ರಮದ ಒಂದು ಕೊಠಡಿಯನ್ನು (ಸುಮಾರು 2.00ಲಕ್ಷ ಇರಬಹುದು) ಅವರೇ ಕಟ್ಟಿಸಿಕೊಟ್ಟಿದ್ದಾರೆ. ಸಿರಸಿ, ತಿಪಟೂರು, ಬೆಂಗಳೂರು, ಇತ್ಯಾದಿ ಹಲವಾರು ಊರುಗಳಿಂದ ಬಂದವರೂ ಇಲ್ಲಿದ್ದಾರೆ, ಇಲ್ಲಿನವರೂ ಇದ್ದಾರೆ. ಹೆಚ್ಚಿನವರಿಗೆ ವಿಧವಾ ವೇತನ, ವೃದ್ಧಾಪ್ಯ ವೇತನಗಳು ಬರುತ್ತಿವೆ. ವಿಳಾಸ ಬದಲಾವಣೆ, ಊರಿನಲ್ಲಿಲ್ಲ, ಇತ್ಯಾದಿ ಕಾರಣಗಳಿಂದ ಬರುತ್ತಿದ್ದ ವೇತನ ನಿಂತು ಹೋಗಿದ್ದನ್ನು ಮತ್ತೆ ಬರುವಂತೆ ಮಾಡಲು ಕೆಲವರು ನಮ್ಮನ್ನು ಕೋರಿದರು. ಮತ್ತೊಮ್ಮೆ ಬರುವುದಾಗಿಯೂ, ವಿವರಗಳನ್ನು ಪಡೆದು ಸಂಬಂಧಿಸಿದವರೊಡನೆ ವ್ಯವಹರಿಸುವುದಾಗಿ ತಿಳಿಸಿದೆವು. ಎಲ್ಲರನ್ನೂ ಪ್ರಾರ್ಥನಾ ಮಂದಿರಕ್ಕೆ ಬರುವಂತೆ ಕೋರಿ ಅಲ್ಲಿ ಒಟ್ಟಿಗೆ ಕೆಲವು ಭಜನೆಗಳನ್ನು ಹಾಡಿದೆವು. ಶ್ರೀಧರ್ ಸಹ ಎರಡು ಭಜನೆಗಳನ್ನು ಹೇಳಿಕೊಟ್ಟು ಹೇಳಿಸಿದರು. ವೃದ್ಧಾಶ್ರಮಗಳ ಅಗತ್ಯ ಬಾರದಂತೆ ಹೊಂದಿಕೊಂಡು ಹೋಗುವ ಮನೋಭಾವವನ್ನು ಎಲ್ಲರಿಗೂ ಕರುಣಿಸುವಂತೆ 'ಸನ್ಮತಿ ದೇ, ಹೇ ಭಗವಾನ್' ಎಂದು ಮನಸ್ಸಿನಲ್ಲೇ ಪ್ರಾರ್ಥಿಸಿದೆವು. ಸ್ವಾರ್ಥ ಇಲ್ಲೂ ಬಿಡಲಿಲ್ಲ, 'ನನಗೆ ದೈನ್ಯತೆಯಿಲ್ಲದೆ ಬಾಳುವ ಅವಕಾಶ, ಅನಾಯಾಸದ ಮರಣ ಬರಲಿ' ಎಂದೂ ಕೇಳಿಕೊಂಡೆ.
     ಸ್ನಾನ ಆದ ನಂತರ ತಮ್ಮ ತಮ್ಮ ಇಷ್ಟದ ದೇವರ ಫೋಟೋಗೆ (ತಮ್ಮ ಮಂಚದ ಬಳಿ ಹಾಕಿಕೊಂಡಿರುವುದು) ಮತ್ತು ಪ್ರಾರ್ಥನಾ ಮಂದಿರದಲ್ಲಿರುವ ದೇವರ ಫೋಟೋಗಳಿಗೆ ಪೂಜೆ ಸಲ್ಲಿಸುವವರು ಸಲ್ಲಿಸುತ್ತಾರೆ. ಸಾಯಂಕಾಲ ಎಲ್ಲರೂ ಒಟ್ಟಿಗೆ ಭಜನೆ ಮಾಡುತ್ತಾರೆ. ಬೆಂಗಳೂರಿನ ರುದ್ರಮ್ಮ ಭಜನೆ ಹೇಳಿಕೊಡುತ್ತಾರೆ. ಟಿ.ವಿ. ಇದೆ. ಕೆಲವು ಧಾರಾವಾಹಿಗಳನ್ನು ನೋಡುತ್ತಾರೆ. ಸಮಾನ ಮನಸ್ಕರು ಗುಂಪು ಕಟ್ಟಿಕೊಂಡು ಮಾತನಾಡುತ್ತಾರೆ. ರಾತ್ರಿ ಊಟ ಆದ ನಂತರ ಮಲಗುತ್ತಾರೆ. ಮಕ್ಕಳ ಹುಟ್ಟು ಹಬ್ಬ, ಮದುವೆ, ಇತ್ಯಾದಿ ಶುಭ ಸಂದರ್ಭಗಳಲ್ಲಿ ಇಲ್ಲಿನ ನಿವಾಸಿಗಳಿಗೆ ಊಟ, ತಿಂಡಿಗಾಗಿ ದಾನ ಕೊಡುವವರ ಸಂಖ್ಯೆಯೂ ಕಡಿಮೆಯೇನಿಲ್ಲ. ಇಚ್ಛುಕರು ರೂ. 5000/- ದಾನ ನೀಡಿದರೆ ಆ ದಿನದ ತಿಂಡಿ ಮತ್ತು ಎರಡು ಊಟಗಳ ವ್ಯವಸ್ಥೆಯಾಗುತ್ತದೆ. ಕೇವಲ ಒಂದು ಹೊತ್ತಿನ ತಿಂಡಿಗಾದರೆ ರೂ.1000/-, ಒಂದು ಹೊತ್ತಿನ ಊಟಕ್ಕಾದರೆ ರೂ. 2000/- ದಾನ ಕೊಡಬಹುದಾಗಿರುತ್ತದೆ.  ಕೆಲವು ಹಸುಗಳನ್ನೂ ಇಲ್ಲಿ ಸಾಕಿದ್ದು ನೋಡಿಕೊಳ್ಳಲು ಒಬ್ಬ ಗೋಪಾಲಕ ಇದ್ದಾರೆ. ಇಳಿ ವಯಸ್ಸಿನಲ್ಲಿ ಜೀವನದ ಸಿಹಿಕಹಿಗಳನ್ನು ಉಂಡು ಸೋತಿರುವ ಇಲ್ಲಿನ ಜೀವಗಳಿಗೆ ಅಗತ್ಯವಾಗಿರುವುದು ಆಧ್ಯಾತ್ಮಿಕ ಚಿಂತನೆ ಮತ್ತು ಪ್ರೀತಿಯ ಮಾತುಗಳು. ಆಗಾಗ್ಗೆ ಇಲ್ಲಿ ಸತ್ಸಂಗಗಳನ್ನು ಏರ್ಪಡಿಸುವ ಬಗ್ಗೆ ಶ್ರೀಧರ್ ಮತ್ತು ನಾನು ಮಾತನಾಡಿಕೊಂಡೆವು. ಮಳೆಗಾಲವಾದ್ದರಿಂದ ಮತ್ತು ಮುಂಬರುವ ಚಳಿಗಾಲದ ಕಾರಣದಿಂದ ಅವರುಗಳಿಗೆ ಸ್ವೆಟರ್‌ಗಳನ್ನು ಒದಗಿಸುವುದು ಸೂಕ್ತವೆಂದು ಅನ್ನಿಸಿ ವ್ಯವಸ್ಥೆ ಮಾಡಲು ಮಗಳಿಗೆ ದೂರವಾಣಿ ಕರೆ ಮಾಡಿದೆ. 
-ಕ.ವೆಂ.ನಾಗರಾಜ್.
- - - - - - - - - - - - - - - - - - - - - - - - - -
ವೃದ್ಧಾಶ್ರಮದ ಕೆಲವು ಫೋಟೋಗಳು:










     . 
        

ಮೂರ್ಖಸ್ಯ ಹೃದಯಂ ಶೂನ್ಯಂ




ಅಪುತ್ರಸ್ಯ ಗ್ರಹಮ್ ಶೂನ್ಯಂ ಸನ್ಮಿತ್ರ ರಹಿತಸ್ಯ ಚ |
ಮೂರ್ಖಸ್ಯ ಹೃದಯಂ ಶೂನ್ಯಂ ಸರ್ವ ಶೂನ್ಯಾ ದರಿದ್ರತಾ ||

ಮಕ್ಕಳಿಲ್ಲದವನ ಮನೆಯು ಶೂನ್ಯ (ಯಾವುದೇ ಸುಖ ಸಂತೋಷಗಳಿರಲಾರದು), ಒಳ್ಳೆಯ ಮಿತ್ರರನ್ನು ಪಡೆಯದವನ ಮನೆಯು ಕೂಡಾ ಶೂನ್ಯವೇ, ಮೂರ್ಖ ಜನರಿಗೆ ಯಾವುದೇ ಭಾವನೆಗಳು ಇರಲಾರದು ಅಂತವರ ಹೃದಯ ಶೂನ್ಯವು, ಇವೆಲ್ಲದಕ್ಕಿಂತಲೂ ಬಡತನ ಎನ್ನುವುದು ಸರ್ವ ಶೂನ್ಯವು. ಬಡತನ ಇದ್ದವರಿಗೆ ಮಕ್ಕಳಿದ್ದರೂ ಕಷ್ಟ, ಮಿತ್ರರಂತು ಸಿಗಲಾರರು.

-ಸದ್ಯೋಜಾತ ಭಟ್ಟ

ನನ್ನ ಮಾತು: ಮಕ್ಕಳಿಲ್ಲದವನ ಮನೆಯು ಶೂನ್ಯ ,ಎಂದಾಗ ಈ ಮಾತನ್ನು ಅಪಾರ್ಥ ಮಾಡುವವರೇ ಹೆಚ್ಚು. ಮಕ್ಕಳಿಲ್ಲ ಎಂದರೆ  ಆ ದಂಪತಿಗಳ ಗರ್ಭದಲ್ಲಿ ಮಕ್ಕಳು ಜನಿಸಿಲ್ಲದ ಮನೆ ಎಂದು ಭಾವಿಸಬೇಕಿಲ್ಲ. ಹಲವರ ಮನೆಯಲ್ಲಿ ತಂದೆತಾಯಿಗಳಿಗೆ ನಾಲ್ಕೈದು ಮಕ್ಕಳಿದ್ದರೂ ಮಕ್ಕಳು ಬೆಳೆದು ದೊಡ್ಡವರಾದಾಗ ತಂದೆತಾಯಿಯನ್ನು ತಬ್ಬಲಿ ಮಾಡಿ ಹೊರದೇಶದಲ್ಲೋ ದೂರದ ಊರಲ್ಲೋ ಇದ್ದುಕೊಂಡು ಸ್ವಂತ ಮನೆಯಲ್ಲಿ ತಂದೆ ಯಾಯಿ ಇಬ್ಬರೇ ಇರುವ ಹಲವು ಮನೆಗಳನ್ನು ನಾವು ಕಾಣಬಹುದು. ಅಷ್ಟೇಕೇ? ಮಕ್ಕಳು ಅಮೇರಿಕಾ ದೇಶದಲ್ಲಿದ್ದಾರೆ. ಕೋಟ್ಯಾಧಿಪತಿಗಳು. ತಂದೆ ತಾಯಿಗೆ ವೃದ್ಧ್ಹಾಶ್ರಮವೇ ಗತಿ!. ಈ ಬಗ್ಗೆ ತರ್ಕ ಮಾಡಿ ಈವ್ಯವಸ್ಥೆಯನ್ನೇ ಸರಿ ಎಂದು ಮಾತನಾಡುವವರಿದ್ದಾರೆ.  ಆ ಬಗ್ಗೆ ನನ್ನ ನಿಲುವು ಬದಲಾಗದು.


ಇರಲಿ.
ಅಂತೆಯೇ ಬಡತನದ ವ್ಯಾಖ್ಯೆಯೂ ಕೂಡ. ಈಗಿನ ಕಾಲದಲ್ಲಂತೂ ಬಡತನಕ್ಕೆ ಆಸ್ಪದವೇ ಇಲ್ಲ. ಸೋಮಾರಿ ಮಾತ್ರ ಬಡವನಾಗಿರುತ್ತಾನೆ. ಕಷ್ಟಪಟ್ಟು ದುಡಿಯುತ್ತೀನೆನ್ನುವವನಿಗೆ ಕೂಲಿ ಮಾಡಿದರೂ ತಿಂಗಳಿಗೆ ಹತ್ತು ಸಾವಿರ ರೂಪಾಯಿಗಿಂತ ಹೆಚ್ಚು ದುಡಿಮೆ ಸಾಧ್ಯ. ಅಡಿಗೆ ಕೆಲಸ ಮಾಡುವ,ಕೂಲಿ ಕೆಲಸ ಮಾಡುವ,ಡ್ರೈವರ್ ವೃತ್ತಿ ಮಾಡುವ ಹಲವರನ್ನು ನಾನು ಬಲ್ಲೆ.ಹಾಗಾಗಿ ಬಡತನ ಎನ್ನುವುದು ಅವನ ಮನೋ ಭೂಮಿಕೆ ಸಂಬಂಧಿಸಿದ್ದು. ತಿಂಗಳಲ್ಲಿ ಐವತ್ತು ಸಾವಿರ ರೂಪಾಯಿ ದುಡಿಮೆ ಇದ್ದು ಬಡತನದಲ್ಲಿರುವ ಮನೆಗಳನ್ನೂ ನೋಡಿರುವೆ. ಐದಾರು ಸಾವಿರ ರೂಪಾಯಿ ದುಡಿಮೆ ಮಾಡುತ್ತಾ ಮನೆಗೆ ಬಂದ ಅತಿಥಿ ಸತ್ಕಾರ ಮಾಡಿಕೊಂಡು ಸಂತೋಷವಾಗಿರುವ ಜನರನ್ನೂ ನೋಡಿರುವೆ.  ಬಡತನ/ಸಿರಿತನಕ್ಕೂ ಮನುಷ್ಯನ ಸಂತೋಷವಾದ ಬದುಕಿಗೂ ಸಂಬಂಧವಿಲ್ಲ.

ಯೇಗ್ ದಾಗೆಲ್ಲಾ ಐತೆ-ಬೆನ್ನು ಹತ್ತಿ ಹೊರಟಾಗ- ಭಾಗ-2

ಮಿತ್ರರಾದ ಅರಸೀಕೆರೆ ಸುಬ್ಬಣ್ಣ ನವರಿಗೆ ಫೋನ್ ಮಾಡಿದಾಗ  ಅವರು  ಯಗಟಿ ಎಂಬ ಊರಿಗೆ  ಬಸ್ ಪ್ರಯಾಣ ಮಾಡ್ತಾಇದ್ರು. " ಸಾsssರ್ ,ಎಂತಾ ಕೆಲ್ಸಾ ಆಯ್ತು, ನಾನೂ ಬಂದ್ ಬಿಡ್ತಾಇದ್ದೆ,ಕುಟುಂಬ ಸಮೇತ ಯಗಟಿಗೆ ಹೋಗ್ತಾ ಇದೀವಿ.ಏನ್ ಮಾಡೋದು"ಅಂದ್ರು.
-’ಪರವಾಗಿಲ್ಲಾ, ಸುಬ್ಬಣ್ಣ, ಇನ್ನೊಮ್ಮೆ ಒಟ್ಟಿಗೆ ಹೋಗೋಣ, ಇವತ್ತು ನಾನು ಹೋಗಲು ದಾರಿ ಹೇಳಿ" ಎಂದಾಗ ಸರಿಯಾಗಿ ಹೇಳಿದರು.

-"ಅರಸೀಕೆರೆಯಿಂದ ಬಾಣಾವರಕ್ಕೆ ಹೋಗಿ. ಅಲ್ಲಿಂದ ಜಾವಗಲ್ ಬಸ್ ಹತ್ತಿ    ಅರಕೆರೆಯಲ್ಲಿ ಇಳಿದುಕೊಳ್ಳಿ, ಅರಕೆರೆಯಲ್ಲಿ ಯಾರನ್ನಾದರೂ "ವಿರಕ್ತ ಮಠ ಎಲ್ಲಿ" ಅಂದ್ರೆ  ಹೇಳ್ತಾರೆ.  ಅರಕೆರೆ  ಮುಖ್ಯ ರಸ್ತೆ ಯಿಂದ ಒಂದು ಕಿಲೋ ಮೀಟರ್ ದೂರ ಕಚ್ಚಾ ರಸ್ತೆಯಲ್ಲಿ ಕಾಲು ನಡಿಗೆಯಲ್ಲಿ ಹೋಗ ಬೇಕು:-ಅಂದ್ರು.   ಅಲ್ಲಿಗೆ ತಲುಪಿದಷ್ಟೇ ಸಮಾಧಾನವಾಯ್ತು.

ಅಷ್ಟು ಹೊತ್ತಿಗೆ  ಕವಿನಾಗರಾಜ್ ಫೋನ್ ಮಾಡಿದರು-ಎಂಟು ಗಂಟೆ ಗೇ ಹೊರಡಲು ನನಗೆ ಸಾಧ್ಯವಾಗುವುದಿಲ್ಲ. ನೀವು ಹೋಗಿ ಬನ್ನಿ, ಎಂದ್ರು. ನಾನು ಮತ್ತೆ ನಿಮಗೆ ಫೋನ್ ಮಾಡುವೆನೆಂದು ಅವರಿಗೆ ತಿಳಿಸಿ ,ಬೇಲೂರಿನಲ್ಲಿರುವ ಮಿತ್ರ ಡಾ. ಶ್ರೀವತ್ಸ ಎಸ್.ವಟಿಯವರಿಗೆ ಫೋನ್ ಮಾಡಿ.-"ವಟಿ ಹೀಗೆ ಮಾಡಬಹುದಾ?"-ಎಂದು ಆಕ್ಷೇಪಿಸುವಂತೆ ಮಾತು ಆರಂಭಿಸಿದೆ.
-"ಏನ್ ಮಾಡ್ದೇ ಸ್ವಾಮಿ?"
-ನೀವು ನನ್ನನ್ನು   ಅರಕೆರೆಕೆ ಕರೆದುಕೊಂಡು ಹೋಗಿದ್ದಿರೀ ತಾನೇ? ಅಲ್ಲಿ ಬರೀ ದೇವಸ್ಥಾನ ತೋರಿಸಿಕೊಂಡು ಅದರ ಬಗ್ಗೆ  ಪತ್ರಿಕೆಗೆ ಲೇಖನ ಮಾಡಿಸಿದಿರೇ ಹೊರತೂ ಅಲ್ಲಿ "ಮುಕುಂದೂರು ಸ್ವಾಮಿಗಳ ಆಶ್ರಮವನ್ನೇ ತೋರಿಸಲಿಲ್ಲವಲ್ಲಾ! ತಪ್ಪಲ್ವಾ?

-ಅಲ್ಲೆಲ್ಲಿದೆ, ಆಶ್ರಮ ? ನಿಮಗ್ಯಾರು ಹೇಳಿದ್ರು?

-ಅಲ್ಲಿ ಇರೋದು ಗೊತ್ತಾಗಿದೆ. ನಾನು ಹೋಗ್ತಾ ಇದೀನಿ. ಬರ್ತೀರೋ?

-ಈಗೆಲ್ಲಾಗುತ್ತೆ ಸ್ವಾಮಿ?

-ಅದೇನೋ ನಂಗೊತ್ತಿಲ್ಲ. ನಾನು ಅರ್ಸೀಕೆರೆ ಮಾರ್ಗ ಬರ್ತೀನಿ. ನೀವು ಕಳೇಬೀಡುಮಾರ್ಗ ಬನ್ನಿ. ಅಷ್ಟೆ. ಅಂದೆ

ನಾಗರಾಜ್ ಗೆ  ಫೋನ್ ಮಾಡಿ "ಸಾರ್ 10.00 ಗಂಟೆಗೆ  ಮತ್ತೊಂದು ಟ್ರೈನ್ ಇದೆ. ಹೊರಡುತ್ತೀರಾ?" ಎಂದೆ

-ಆಯ್ತು ಶ್ರೀಧರ್. ನಾನು ನೇರವಾಗಿ ರೈಲ್ವೆ ಸ್ಟೇಶನ್ ಗೇ ಬರ್ತೀನಿ, ಅಂದ್ರು.

ಅವರಾಗಲೇ 9.30 ಕ್ಕೆ ರೈಲ್ವೆ ಸ್ಟೇಶನ್ ತಲುಪಿ ನನಗೆ ಫೋನಾಯಿಸಿ"ಏನೂ ಎಲ್ಲಿದ್ದೀರಿ?" ಎಂದ್ರು

ಆಗ ನಾನು ಆಟೋ ಹತ್ತಿ   ಸ್ಟೇಶನ್     ತಲುಪಿದರೆ ಟ್ರೈನ್ ಒಂದು ಗಂಟೆ ತಡವಾಗಿಬಂತು. ಆ ಹೊತ್ತಿಗೆ ವಟೀ ಕೂಡ ತಾವು ನೇರವಾಗಿ ಅರಕೆರೆಗೆ ಬರುವುದಾಗಿ ಫೋನ್ ಮಾಡಿದ್ರು. ನಾವು ಅರಸೀಕೆರೆ ತಲುಪಿ ಬಸ್ಸ್ ನಲ್ಲಿ ಅರಕೆರೆ ತಲುಪುವಹೊತ್ತಿಗೆ, ವಟೀ ಅಲ್ಲಿ ಹಾಜರಿದ್ದರು. ಮೂವರೂ ತೋಟದ ದಾರಿಯಲ್ಲಿ ಅಶ್ರಮದತ್ತ ಹೆಜ್ಜೆ ಹಾಕಿದೆವು........