ಗುರುನಾಥರು ದೇವಸನ್ನಿಧಿಯಲ್ಲಿ ಉಪಸ್ಥಿತರಿದ್ದಾಗ ಈಶ್ವರನಿಗೆ ಲಕ್ಷ ಬಿಲ್ವಾರ್ಚನೆಯ ಮಾತು ಬಂತು. ಈಶ್ವರನಿಗೆ ಲಕ್ಷ ಬಿಲ್ವಾರ್ಚನೆಯನ್ನು ಮಾಡಿಸುವ ಹೊಣೆ ಹೊತ್ತ ಮಹಾನುಭಾವರು ಈ ವಿಚಾರವನ್ನು ಗುರುನಾಥರಲ್ಲಿ ಪ್ರಸ್ತಾಪಿಸಿದರು.
" ಈ ಬಾರಿ ನಮ್ಮ ಈಶ್ವರನಿಗೆ, ಲಕ್ಷ ಬಿಲ್ವಾರ್ಚನೆ ಮಾಡುವ ಉದ್ದೇಶ ಹೊಂದಿದ್ದೇವೆ." ಎಂದು ಹೇಳಿದರು.
" ಬಹಳ ಸಂತೋಷ , ಈಶ್ವರನಿಗೆ ಲಕ್ಷ ಬಿಲ್ವಾರ್ಚನೆ ಮಾಡುತ್ತಿರಾ? ಸರಿ, ಲಕ್ಷಾರ್ಚನೆ ಎಂದರೇನು? ಸಾರ್." ಎಂದು ಮರು ಪ್ರಶ್ನೆ ಹಾಕಿದರು.
" ಲಕ್ಷಾರ್ಚನೆ ಎಂದರೆ ಒಂದು ಲಕ್ಷ ಬಿಲ್ವದ ಕುಡಿ ಎಸಳುಗಳನ್ನು, ಈಶ್ವರನಿಗೆ ಸಮರ್ಪಣೆ ಮಾಡುವುದು." ಎಂದರು.
" ಒಂದು ಲಕ್ಷ ಬಿಲ್ವದ ಕುಡಿಗಳೇ !!(?) ಅಂದರೆ , ಇಷ್ಟು ಸಂಗ್ರಹ ಮಾಡಲು ಸಾಕಷ್ಟು ಮರಗಳಿಂದ ಕುಯ್ಯಬೇಕು. ಸಾಕಷ್ಟು ಚಿಗುರು ಬಿಲ್ವಗಳು ತನ್ನ ಅಸ್ತಿತ್ವ ಕಳೆದುಕೊಳ್ಳುತ್ತದೆ. ಚಿಗುರುಗಳನ್ನೇ ಕುಯ್ಯುವುದು? ಹೌದೆ? " ಎಂದರು ಸ್ವಲ್ಪ ಆತಂಕ ಮಿಶ್ರಿತ ದ್ವನಿಯಲ್ಲಿ.
" ಹೌದು, ಈ ಎಲ್ಲ ಬಿಲ್ವ ಕುಡಿ ಎಸಳುಗಳು ಈಶ್ವರನಿಗೆ ಸಮರ್ಪಣೆಯಾಗುತ್ತದೆ. " ಎಂದು ಬೀಗುತ್ತಾ ಹೇಳಿದರು.
" ಈ ಲಕ್ಷ ಕುಡಿಗಳನ್ನು ಕೊಯ್ಯುವ ಮೊದಲು ಆ ಬಿಲ್ವ ಗಿಡಕ್ಕೆ ಒಂದಷ್ಟಾದರೂ ನೀರನ್ನು ಯಾರೋ ಹಾಕಿರಬೇಕಲ್ಲವೇ? ಹಾಕಿ ಸಾಕಿರಬೇಕಲ್ಲವೇ? ಹೀಗೆ ಪೋಷಣೆ ಯಾದರೆ ಗಿಡದಲ್ಲಿ ಚಿಗುರು ಕಾಣಿಸಿಕೊಳ್ಳುತ್ತದೆ. ಆ ಚಿಗುರನ್ನು ಗಿಡ ಕಳೆದು ಕೊಂಡರು ಮತ್ತೆ ನೀರು ಗೊಬ್ಬರ ಬಿದ್ದರೆ ಮತ್ತೆ ಚಿಗುರು ಒಡೆಯಬಹುದು. ಅಲ್ಲವೇ ಸಾರ್!? " ಎಂದು ಪ್ರಶ್ನಿಸಿದರು ಗುರುನಾಥರು.
" ಹೌದು........ ಹೌದು.." ಎಂದು ತಲೆ ತೂಗಿದರು.
" ಈಗ..... ನೀವು ಯಾರೋ ಬೆಳೆಸಿದ ಗಿಡ ಅಥವಾ ಮರದಿಂದ ಕುಡಿ ಎಸಳುಗಳನ್ನು ತಂದು ಈಶ್ವರನಿಗೆ ಲಕ್ಷ ಬಿಲ್ವಾರ್ಚನೆ ಮಾಡುತ್ತಿದ್ದಿರ. ನೀವು ಆ ಗಿಡಗಳಿಗೆ ಈ ಮುಂಚೆ ಎಷ್ಟು ಕೊಡ ನೀರು ಹಾಕಿದ್ದೀರಾ? ಎಷ್ಟು ಗೊಬ್ಬರ ಹಾಕಿದ್ದೀರ? ಏನೂ ಮಾಡದೆ ಯಾರೋ ಬೆಳೆಸಿದ ಮರದಿಂದ ಅದರಲ್ಲೂ ಕುಡಿ ಎಸಳು ಕುಯ್ಯ್ದು, ಚಿಗುರನ್ನು ಹಾಳುಮಾಡಿ ಈಶ್ವರನ ತಲೆಯಮೇಲೆ ಹಾಕಿದರೆ ಈಶ್ವರ ಮೆಚ್ಚುತಾನೆಯೇ ............ಸಾರ್?" ಎಂದು ಸರಳವಾದ ಸಿದ್ದಾಂತವನ್ನು ಅವರ ಮುಂದೆ ನಿರ್ಲಿಪ್ತರಾಗಿ ಇಟ್ಟುಬಿಟ್ಟರು.
ಈ ತರಹದ ಚಿಂತನೆಯಾಗಲಿ, ವಿಚಾರವಾಗಲಿ ಅವರ ಕನಸಿನಲ್ಲೂ ಬಂದಿರಲಿಕ್ಕೆ ಸಾಧ್ಯವಿಲ್ಲ. ಮಿಂಚಿನಂತೆ ಬಂದ ಈ ಪ್ರಶ್ನೆ ಆ ಮಹಾನುಭಾವರನ್ನು ತಬ್ಬಿಬ್ಬು ಮಾಡಿತು. ಏನು ಹೇಳಲು ತೋಚದೆ ಕುಬ್ಜರಾದರು.
" ಇದೆಲ್ಲ ಕಕ್ಕುಲಾತಿ ಸಾರ್......ಬರಿ ಕಕ್ಕುಲಾತಿ. " ಎಂದು ತಲೆ ಅಲ್ಲಾಡಿಸಿದರು.
ಸಾವರಿಸಿಕೊಂಡು " ಹಾಗಾದರೆ ಲಕ್ಷ ಬಿಲ್ವಾರ್ಚನೆ ಮಾಡುವುದು ಬೇಡವೇ? " ಎಂದು ಅತ್ಯಂತ ನಿರಾಸೆಯಿಂದ ಕೇಳಿದರು.
" ನಾನೆಲ್ಲಿ ಹಾಗೆ ಹೇಳಿದೆ?" ಎಂದು ಸುಮ್ಮನಾದರು
" ಹಾಗಾದರೆ, ಲಕ್ಷಾರ್ಚನೆ ಮಾಡುವ ಬಗೆಯಾದರೂ ಹೇಗೆ? " ಎಂದು ವಿನೀತರಾಗಿ ಪ್ರಶ್ನಿಸಿದರು.
" ಲಕ್ಷ್ಯದಿಂದ ಒಂದು ಬಿಲ್ವದ ಎಸಳನ್ನ ಪರಮ ಭಕ್ತಿಯಿಂದ ಈಶ್ವರನ ತಲೆಯ ಮೇಲೆ ಇರಿಸಿ ಧನ್ಯತೆಯನ್ನ ಹೊಂದುವುದು. ಭಕ್ತಿ, ಪ್ರೇಮ, ಶ್ರದ್ಧೆ ಇಲ್ಲದೇ ಒಂದು ಲಕ್ಷ ಹಾಕಿದರು ಅಷ್ಟೇ, ಒಂದು ಕೋಟಿ ಹಾಕಿದರು ಅಷ್ಟೇ! ಬರಿ ತೋರಿಕೆಯಾಗುತ್ತೆ ,ಆಡಂಬರವಾಗುತ್ತೆ " ಎಂದು ತಮ್ಮ ಮಾತನ್ನು ಮುಗಿಸಿದರು.
ಇಂದಿಗೂ ಗುರುನಾಥರ ಈ ಮಾತು ನಮ್ಮನ್ನ ಭಾವ ಪರವಶರನ್ನಾಗಿ ಮಾಡುತ್ತದೆ. ಭಗವಂತನ ಮುಂದೆ ನಿಂತಾಗ ಲಕ್ಷ್ಯವಿಡಬೇಕೆಂಬ ಮಾತು ಪ್ರತಿಸಾರಿಯೂ ಎಚ್ಚರಿಸುತ್ತದೆ. ಇಂತಹ ಗುರುನಾಥರನ್ನು ಪಡೆದ ನಾವೇ ಧನ್ಯರು.
(ನನ್ನ ಆತ್ಮೀಯರೊಬ್ಬರು ಗುರುನಾಥರ ಬಳಿ ಹೋದಾಗ ಈ ಘಟನೆ ನಡೆದದ್ದು. ಅವರು ನೀಡಿದ ವಿವರಣೆ ಆಧರಿಸಿ ಆ ಘಟನೆಯನ್ನು ಇಲ್ಲಿ ಹಂಚಿಕೊಂಡಿದ್ದೇನೆ)