Pages

Thursday, February 2, 2012

ನೀನಿಲ್ಲೆ ಇರುವಾಗ ಎಲ್ಲಿ ಹೋಗಲಿ ನಾನು

ಇಂದು  ಬೆಳಿಗ್ಗೆ ಧ್ಯಾನ ಮಾಡುವಾಗ ನನ್ನ ಮನದಲ್ಲಿ ಬಂದ ಭಾವನೆಗಳಿಗೆ  ಅಕ್ಷರ ಕೊಟ್ಟಾಗ ಮೂಡಿಬಂದ  ಹಾಡಿಗೆ ಶ್ರೀಮತಿ ಲಲಿತಾ ರಮೇಶ್ ರಾಗ ಹಾಕಿ ಹಾಡಿದ್ದಾರೆ.


Podcast Powered By Podbean

ಶ್ರೀ ರಮಣ ಮಹರ್ಷಿಗಳ ಸಂದೇಶ--ಅನನ್ಯ ಶರಣಾಗತಿ   ಸಂಪೂರ್ಣ ಶರಣಾಗತಿಯ ಬಗ್ಗೆ ಹಲವು ರೀತಿಯ ಅಭಿಪ್ರಾಯಗಳಿವೆ. ಅದರಲ್ಲಿ ಕೆಲವು ಮೂಡನಂಬಿಕೆಯು ಸಹ ಸೇರಿದೆ. ಕೆಲವೊಂದು ಸಂಶಯಗಳಿಗೆ ಸರಿಯಾದ ಉತ್ತರ ದೊರೆಯದೆ ಇದ್ದಾಗ ಶರಣಾಗತಿಯ ಬಗ್ಗೆ ಶ್ರದ್ಧೆ ಕಡಿಮೆಯಾಗುತ್ತದೆ ಅಥವಾ ತಪ್ಪು ಗಹಿಕೆಯಿಂದ ಕೂಡಿರುತ್ತದೆ. ಇಂತಹ ಸಂದರ್ಭದಲ್ಲಿ ಒಬ್ಬ ಭಕ್ತರು ಶ್ರೀ ಭಗವಾನರಲ್ಲಿ ಈ ರೀತಿಯಾಗಿ ಪ್ರಶ್ನೆ ಇಟ್ಟರು.

                             "ಭಗವಂತನಲ್ಲಿ ಸಂಪೂರ್ಣ ಶರಣಾಗಿ, ಯಾವುದರ ಬಗ್ಗೆಯು ಚಿಂತಿಸದೆ ಇದ್ದಲ್ಲಿ, ಅಂತಹವರಿಗೆ ಭಗವಂತನಿಂದಲೇ  ಎಲ್ಲವೂ ಸಿಕ್ಕುತ್ತದೆ ಎಂದು ಒಂದು ನಂಬಿಕೆ.  ಒಂದೇ ಕಡೆ ಕೂತು ಭಗವಂತನ ಧ್ಯಾನದಲ್ಲೇ ಸದಾ ಕಾಲ ಮುಳುಗಿ, ಎಲ್ಲ ಯೋಚನೆಗಳನ್ನು ತೊರೆದು ಅಂದರೆ,  ದೇಹ ಪೋಷಣೆಗೆ ಅವಶ್ಯಕವಾಗಿ ಬೇಕಾದ ಅನ್ನಾಹಾರ, ನೀರಿನ ಯೋಚನೆಯನ್ನು ಬಿಟ್ಟು ಕೂತುಬಿಡುವುದೇ?  ದೇಹಾರೋಗ್ಯ ಕೆಟ್ಟು ಹೋದಂತಹ ಸಮಯದಲ್ಲಿ, ಅವಶ್ಯವಿರುವ ಔಷಧಿ ಮತ್ತು ಶಿಶ್ರುಷೆಯ ಬಗ್ಗೆ ಯೋಚಿಸದೆ ಭಗವಂತನಲ್ಲೇ ಚಿಂತಿಸುತ್ತಾ ಕೂರಬೇಕೆ?"

                             "ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಪರಮಾತ್ಮ ಹೇಳುತ್ತಾನೆ: " ಯಾವ ಪುರುಷನು ಎಲ್ಲಾ ಆಶೆ ಆಕಾಂಕ್ಷೆಗಳನ್ನು ತೊರೆದು, ಮಮತಾರಹಿತ, ಅಹಂಕಾರರಹಿತ ಹಾಗು ಇಚ್ಚರಹಿತನಾಗಿ ವರ್ತಿಸುತ್ತಾನೋ ಅವನು ಶಾಂತಿಯನ್ನು ಪಡೆಯುತ್ತಾನೆ".(2 :71 )  ಅಂದರೆ, ಎಲ್ಲಾ ಆಸೆಯನ್ನು ಬಿಡಬೇಕೆಂದು ಹೇಳಿರುತ್ತಾನೆ. ಆದ್ದರಿಂದ ನಾವು ಸಂಪೂರ್ಣವಾಗಿ ಭಗವಂತನ ಧ್ಯಾನದಲ್ಲಿ ಮುಳುಗಿ, ಏನನ್ನು ಕೇಳದೆ, ಭಗವಂತನ ಅನುಗ್ರಹದಲ್ಲಿ ಸಿಗುವಂತಹ ಅನ್ನಾಹಾರ ನೀರು ಮಾತ್ರ ಸೇವಿಸುತ್ತ ಕೂಡಬೇಕೇ? ಅಥವಾ ನಾವು ಈ ಬಗ್ಗೆ ಸ್ವಲ್ಪ ಪ್ರಯತ್ನವನ್ನು ಮಾಡಬೇಕೆ? ಭಗವನ್, ದಯಮಾಡಿ    ಶರಣಾಗತಿಯ    ರಹಸ್ಯವನ್ನು  ತಿಳಿಸಿ  ಕೊಡಬೇಕಾಗಿ  ಪ್ರಾರ್ಥನೆ." 

                               ಭಗವಾನರು ನಸುನಕ್ಕು ಉತ್ತರಿಸುತ್ತಾರೆ :  "ಅನನ್ಯ    ಶರಣಾಗತಿ ಎಂದರೆ  ಯಾವ   ಯೋಚನೆಗಳಿಗೂ   ಅಂಟಿಕೊಳ್ಳದೆ  ಭಗವಂತನಲ್ಲಿ ಧ್ಯಾನಿಸುತ್ತಾ ಇರುವುದು  ಎಂದು  ಅರ್ಥ .  ಇದರಲ್ಲಿ  ಸಂಶಯವೇ  ಇಲ್ಲ. . ಆದರೆ , ದೇಹದ  ಅವಶ್ಯಕತೆಗೆ  ಬೇಕಾಗಿರುವ  ಅನ್ನಾಹಾರ ನೀರುಗಳನ್ನೂ  ತ್ಯಜಿಸಬೇಕು   ಎಂದು  ಅರ್ಥವಲ್ಲ .    ಪ್ರಶ್ನೆ ಮಾಡಿದವರ ಕಡೆಗೆ ಕೈತೋರಿಸಿ, ಈಗ  ಅವರು   ಕೇಳುತ್ತಿದ್ದಾರೆ " ನಾನು  ಏನನ್ನು ದೇವರನ್ನು  ಕೇಳದೆ, ಭಗವಂತ  ಏನನ್ನು ದಯಪಾಲಿಸುತ್ತನೋ  ಅದನ್ನು  ಮಾತ್ರ ತಿನ್ನಬೇಕೆ ?   ಅಥವಾ ನಾನು  ಏನಾದರು  ಪ್ರಯತ್ನ   ಮಾಡಬೇಕೆ?" ಎಂದು.
" ಅವರು ಹೇಳಿದಂತೆ ಹಾಗೆಯೇ ಆಗಲಿ, ಈಗ ನಾವೇನು ತಿನ್ನಬೇಕೋ ಅದು ತನ್ನಷ್ಟಕ್ಕೆ ತಾನೇ ಬಂದಿದೆ ಎಂದೇ  ಇಟ್ಟುಕೊಳ್ಳೋಣ. ಆದರೆ, ಆಗಲೂ  ಕೂಡ ಊಟ ಮಾಡುವವರು ಯಾರು?  ಆಯಿತು,  ಯಾರೋ ಬಂದು ನಮ್ಮ ಬಾಯಿಗೆ ತುತ್ತು ಹಾಕುತ್ತಾರೆ ಎಂದುಕೊಂಡರೂ , ಕಡೇಪಕ್ಷ ನಾವು ಅದನ್ನು ನುಂಗಬೇಕಲ್ಲವೇ? ಅಲ್ಲಿ ನಮ್ಮ ಪ್ರಯತ್ನ ಇಲ್ಲವೇ? 

                              ಅವರು ಕೇಳುತ್ತಾರೆ " ನಾನೇನಾದರು ಅನಾರೋಗ್ಯ ಪೀದಿತನಾದರೆ ನಾನು ಔಷದಿ ತೆಗೆದುಕೊಳ್ಳಬೇಕೆ  ಅಥವ ನಾನು ನನ್ನ ಆರೋಗ್ಯ ಮತ್ತು ಅನಾರೋಗ್ಯವನ್ನು ಭಗವಂತನ ಕೈಯಲ್ಲಿ ಹಾಕಿ ಸುಮ್ಮನೆ ಕೂಡಬೇಕೇ?"    ಇದಕ್ಕೆ  ಶ್ರೀ ಶಂಕರರು ಬರೆದಿರುವ ಸಾಧನಾ ಪಂಚಕಂನಲ್ಲಿ, ಶಂಕರರು ಹೇಳುತ್ತಾರೆ, "ಈ ಹಸಿವು ಎನ್ನುವ ರೋಗಕ್ಕೆ ಭಿಕ್ಷೆಯಿಂದ ಬಂದ ಆಹಾರವನ್ನು ಸೇವಿಸಬೇಕು." ಆದರೆ, ಈ ಭಿಕ್ಷೆಯನ್ನು ಪಡೆಯಲಿಕ್ಕಾದರು ಹೊರಗೆ ಹೋಗಬೇಡವೇ? ಇಲ್ಲೂ ಪ್ರಯತ್ನ ಬೇಡವೇ?    ಎಲ್ಲರು ಕಣ್ಣು ಮುಚ್ಚಿ ಕುಳಿತು ತಾನಿರುವಲ್ಲಿಗೆ ಆಹಾರಾದಿಗಳು ಬರಲಿ ಎಂದು ಕಾಯುತ್ತ ಕೂತರೆ ಈ ಪ್ರಪಂಚ ನಡೆಯುವುದಾದರು ಹೇಗೆ?  ಆದ್ದರಿಂದ, ಪ್ರತಿಯೊಬ್ಬರೂ ತಮ್ಮ ಸಂಪ್ರದಾಯಕ್ಕೆ ಬಂದಿರುವ ಕುಲಕಸುಬನ್ನು ಕೈಗೊಳ್ಳಬೇಕು. ಆದರೆ,  ಇದೆಲ್ಲವನ್ನು ನಾನು ಮಾಡುತ್ತಿದ್ದೇನೆಂಬ ಭಾವದಿಂದ ಮುಕ್ತನಾಗಿರಬೇಕು.  ಇಲ್ಲಿ ನಾನು ಮಾಡುತ್ತಿರುವೆ ಎಂಬುದೇ ನಮ್ಮನ್ನು ಕಟ್ಟಿಹಾಕಿ ಬಿಡುವುದು. ಆದ್ದರಿಂದ ಈ ಭಾವದಿಂದ ಹೊರಬರುವಂತಹ ವಿಧಾನವನ್ನು ಅರಿಯುವುದು ಅವಶ್ಯವಾಗಿದೆ.  ಅದನ್ನು ಬಿಟ್ಟು,  ರೋಗಕ್ಕೆ ಔಷದಿ ತೆಗೆದುಕೊಳ್ಳಬೇಕಾ? ಹಸಿವೆಯಾದಾಗ ಊಟ ಮಾಡಬೇಕಾ? ಎಂದೆಲ್ಲ ಸಂಶಯದ ಪ್ರಶ್ನೆಗಳನ್ನು ಕೇಳಬಾರದು. ಈ ರೀತಿಯ ಸಂಶಯದ ಪ್ರಶ್ನೆಗಳು ಬರಲು ಪ್ರಾರಂಭವಾದರೆ  ಅದಕ್ಕೆ ಕೊನೆಮೊದಲಿಲ್ಲ.   ' ನಂಗೆ ನೋವಾದರೆ ನರಳಬೇಕೆ ಬಿಡಬೇಕೇ? ನಾನು ಉಸಿರು ತೆಗೆದುಕೊಂಡ ಮೇಲೆ  ಉಸಿರು ಬಿಡಬೇಕೋ ಹಾಗೆ ಇರಬೇಕೋ?     ಎಂಬೆಲ್ಲ ಪ್ರಶ್ನೆಗಳು ಬಂದು ಆವರಿಸುತ್ತವೆ."

                                   "ಈಶ್ವರನೆಂದು  ಕರೆಯಿರಿ,  ಕರ್ಮವೆಂದು ಕರೆಯಿರಿ, ಕರ್ತನೆಂದು ಕರೆಯಿರಿ, ಏನೆಂದು ಕರೆದರೂ ಅದು ಪ್ರತಿಯೊಬ್ಬರ ಮಾನಸಿಕ ಬೆಳವಣಿಗೆಯಂತೆಯೇ ಈ ಪ್ರಪಂಚದಲ್ಲಿ ಇರುತ್ತದೆ. ನಾವು ನಮ್ಮ ಜವಾಬ್ದಾರಿಗಳನ್ನು ಆ ಉನ್ನತ ಶಕ್ತಿಯ ಮೇಲೆ ಹಾಕಿದರೆ ಅದು ಹೇಗೆ ನಡೆಯಬೇಕೋ ಹಾಗೆ ನಡೆಸಿಕೊಳ್ಳುತ್ತದೆ. ನಾವು ಈ ಭೂಮಿಯ ಮೇಲೆ ನಡೆಯುತ್ತೇವೆ. ಹೀಗೆ ಮಾಡುವಾಗ ನಾವು ಒಂದು ಕಾಲನ್ನು ಎತ್ತುವ ಮುಂಚೆ ಇನ್ನೊಂದು ಕಾಲನ್ನು ಎಲ್ಲಿ ಇಟ್ಟಿರಬೇಕು ಎಂದೆಲ್ಲ ಚಿಂತಿಸಿರುವುದಿಲ್ಲ. ತನ್ನಷ್ಟಕ್ಕೆ ತಾನೇ ಅದು ನಡೆಯುವುದಿಲ್ಲವೆ? ಅದೇ ರೀತಿ ಉಸಿರಾಟವು ಕೂಡ ತನ್ನಷ್ಟಕ್ಕೆ ತಾನೇ ನಡೆಯುತ್ತದೆ.ಇದಕಾಗಿ ಯಾವರೀತಿಯ ವಿಶೇಷ ಪರಿಶ್ರಮವನ್ನು ಹಾಕಬೇಕಿಲ್ಲ. ಇದೆ ರೀತಿಯಲ್ಲಿ ನಮ್ಮ ಜೀವನ ಕೂಡ. ನಾವು ಏನಾದರು ಕೊಡಬೇಕಾದರೆ ಅಥವಾ ಬಿಡಬೇಕಾದರೆ ನಾವಿಷ್ಟಬಂದಂತೆ ಮಾಡಲಾದಿತೆ?  ಈ ಜಗತ್ತಿನಲ್ಲಿ ಹೆಚ್ಚಿನ ಸಂಖ್ಯೆಯ ವಿಚಾರಗಳು ನಮ್ಮ ಗಮನಕ್ಕೆ ಬಾರದ ರೀತಿಯಲ್ಲಿ ನಡೆದು ಹೋಗಿರುತ್ತವೆ. ಭಗವಂತನಲ್ಲಿ ಸಂಪೂರ್ಣ ಶರಣಾಗತಿ ಎಂದರೆ ಎಲ್ಲ ಯೋಚನೆಗಳನ್ನು ಬಿಟ್ಟು ಭಗವಂತನಲ್ಲಿ ಮನಸನ್ನು ಕೇಂದ್ರೀಕರಿಸುವುದು. ನಾವು ನಮ್ಮ ಮನಸನ್ನು ಅವನಲ್ಲಿ ಕೇಂದ್ರೀಕರಿಸಿದರೆ ಬೇರೆ ವಿಚಾರಗಳು ಮಾಯವಾಗಿ ಬಿಡುತ್ತವೆ. ಕಾಯ, ವಾಚ, ಮನಸು ಆ ಭಗವಂತನಲ್ಲಿ ಸೇರಿಹೊದರೆ ನಮ್ಮೆಲ್ಲ ಜೀವನದ ಚಿಂತೆಗಳ ಹೊರೆಯು ಆತನ ಮೇಲಕ್ಕೆ ವರ್ಗಾವಣೆ ಆಗುತ್ತದೆ."

                              "ಆದರೆ , ಇಲ್ಲಿ ಮುಖ್ಯ ತೊಂದರೆ ಏನೆಂದರೆ,  ಮನುಷ್ಯ ತಾನೆ ಎಲ್ಲವನ್ನು ಮಾಡುವವನು ಎಂದು ಯೋಚಿಸುತ್ತಾನೆ. ಇದು ತಪ್ಪು. ಇದೆಲ್ಲವನ್ನು ಅಗೋಚರವಾದ ಅಪಾರ ಚೈತನ್ಯಶಕ್ತಿ ಮಾಡಿಸುತ್ತಿದೆ, ಮನುಷ್ಯ ಕೇವಲ ಆ ಶಕ್ತಿಯ ಉಪಕರಣ. ಇದನ್ನು ಮನುಷ್ಯ ಒಪ್ಪಿಕೊಂಡರೆ ಎಲ್ಲ ತೊಂದರೆಗಳಿಂದ ಮುಕ್ತನಾಗುತ್ತಾನೆ,ಇಲ್ಲವಾದಲ್ಲಿ ಎಲ್ಲವನ್ನು ತಾನೇ ಎದುರಿಸಬೇಕಾಗುತ್ತದೆ.  ನೋಡಿ, ಒಂದು ದೇವಸ್ತಾನದ ಗೋಪುರದ ಕೆಳಭಾಗದ ಕೆತ್ತನೆಯ ಶಿಲ್ಪವನ್ನು ನೋಡುವಾಗ ಆ ಗೋಪುರದ ಎಲ್ಲಭಾರವನ್ನು ಆ ಶಿಲ್ಪದಲ್ಲಿ ಇರುವವನೇ ಹೆಗಲ ಮೇಲೆ ಹೊತ್ತಂತೆ ಭಾಸವಾಗುತ್ತದೆ.  ಶಿಲ್ಪಿಯು ಶಿಲ್ಪದಲ್ಲಿ ಎಲ್ಲ ರೀತಿಯಲ್ಲಿ ಭಾರ ಹೊತ್ತಿ ರು ವವನ ಮುಖಚರ್ಯೆ ಮತ್ತು ಭಂಗಿಯನ್ನು ಅಷ್ಟೇ  ಚಂದವಾಗಿ ಮೂಡಿಸಿರುವ ಕಾರಣ, ನಿಜದಲ್ಲಿ ಕೂಡ ಅದರ ಮೇಲೆ ಭಾರ ಹೊತ್ತಿರುವುದೇನೋ ಎಂಬಂತೆ ಭಾಸವಾಗುತ್ತದೆ.  ಈಗ ಯೋಚಿಸಿನೋಡಿ ಇದು ಸತ್ಯವೇ? ಭೂಮಿಯೊಳಗಿಂದ  ಕಟ್ಟಲಾದ  ಗಟ್ಟಿ ತಳಪಾಯದೊಂದಿಗೆ ಗೋಪುರದತನಕ  ನಿರ್ಮಿತವಾಗಿದೆ ಮತ್ತು ಈ ತಳಪಾಯದ ಮೇಲೆ ಈ ಇಡಿ ಕಟ್ಟಡ ನಿಂತಿದೆ ಎನ್ನುವುದು ಸತ್ಯ.   ಶಿಲ್ಪವೂ ಕೂಡ ಈ ಕಟ್ಟಡದ ಒಂದು ಭಾಗವೇ ಹೊರತು ಬೇರೆಯಲ್ಲ. ಶಿಲ್ಪದಲ್ಲಿ ನೋಡಿದಂತೆ ಇಡೀ ಕಟ್ಟಡದ ಭಾರವನ್ನು ಹೊತ್ತಿದೆಯೆಂದು ಭಾವಿಸಿದರೆ ಅದು ಹಾಸ್ಯಾಸ್ಪದ ಎನಿಸುವುದಿಲ್ಲವೇ? ಇದೆ ರೀತಿ ಮನುಷ್ಯನು ಕೂಡ ಅಪಾರವಾದ ಚೈತನ್ಯ ಶಕ್ತಿಯನ್ನು ಮರೆತು,  ತಾನೇ ಎಲ್ಲವನ್ನು ಮಾಡುತ್ತಿದ್ದೇನೆಂದು ಕೊಳ್ಳುವುದು ಹಾಸ್ಯಾಸ್ಪದ."

                                    ಓಂ ನಮೋ ಭಗವತೇ ರಮಣಾಯ.

ಮನವಿ:
ವೇದಸುಧೆಯ, ವಾಕ್ಪಥದ, ಮತ್ತು ಸಂಪದದ ಬೆಂಗಳೂರಿನಲ್ಲಿರುವ ನನ್ನ ಮಿತ್ರರೇ,
ಅಂತರ್ಜಾಲತಾಣದಲ್ಲಿ ಸಾಮಾಜಿಕ ಕಳಕಳಿ ಇರುವ   ಮಿತ್ರರು ಪರಿಚಯವಾದಾಗ  ಬಲು  ಸಂತೋಷವಾಗುತ್ತೆ.  ನಾವು ಕೆಲವರು ಬೆಂಗಳೂರಿನಿಂದ ಹೊರಗಿದ್ದೇವೆ. ಅಪರೂಪಕ್ಕೆ ಯಾವುದಾದರೂ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಬಂದಾಗ ಒಮ್ಮೆ ಭೇಟಿಯಾದರೆ ಸಿಗುವ ಸಂತೋಷಕ್ಕೆ ಪಾರವಿಲ್ಲ. ಹಾಗೊಂದು ಅವಕಾಶ ಇಲ್ಲಿದೆ. ನನ್ನ ಮಗನ ವಿವಾಹ ನಿಶ್ಚಿತಾರ್ಥವು 5.2.2012  ಭಾನುವಾರ ಬೆಂಗಳೂರಿನಲ್ಲಿ ನಡೆಯುತ್ತೆ. ವಿವರ ತಿಳಿಸುವೆ. ಸುಮಾರು 12.00 ಕ್ಕೆ  ನಾನು ಬಿಡುವಾಗಬಹುದು. ಆ ಹೊತ್ತಿಗೆ ಮಿತ್ರರು  ದಯಮಾಡಿ ಬನ್ನಿ. ಒಂದಿಷ್ಟು ಹರಟೆ, ಪರಿಚಯ ನಂತರ ಊಟ ಮುಗಿಸಿ ಹಿಂದಿರುಗೋಣ.

ಸ್ಥಳ: ಶ್ರೀ ಸಾಯಿ ಕಮ್ಯುನಿಟಿ ಹಾಲ್, ಮಾರುತಿ ವೃತ್ತ.
4 ನೆ ಅಡ್ಡರಸ್ತೆ, 14  ನೆ ಮುಖ್ಯರಸ್ತೆ,  ಹನುಮಂತನಗರ , ಬೆಂಗಳೂರು-19 

ದಿನಾಂಕ: 5.2.2012  ಭಾನುವಾರ

ನಿಮ್ಮ 
ಹರಿಹರಪುರಶ್ರೀಧರ್
ಮೊ: 9663572406