Pages

Saturday, February 11, 2012

ವೇದೋಕ್ತ ಜೀವನ ಪಥ: ಬ್ರಾಹ್ಮಣಾದಿ ಚತುರ್ವರ್ಣಗಳು - ೩


     ಎಷ್ಟಾದರೂ ವೇದ ಭ್ರಾಂತಿಪೂರ್ಣವಾದ ಪೌರುಷೇಯ ಕೃತಿಯಲ್ಲ. ಅದು ಸರ್ವಜ್ಞ ಭಗವದುಕ್ತ. ಆದುದರಿಂದ, ಪರಮ ವೈಜ್ಞಾನಿಕ. ಮಾನವರೆಲ್ಲರನ್ನೂ ಸಮಾನ ದೃಷ್ಟಿಯಿಂದಲೇ ನೋಡಬೇಕೆಂಬುದು ಸತ್ಯ ಸಿದ್ಧಾಂತ. ಆದರೆ ಮಾನವರು ಯಾಂತ್ರೀಕೃತರಲ್ಲ, ಎಲ್ಲಾ ವಿಷಯಗಳಲ್ಲಿಯೂ ಸರ್ವಥಾ ಸಮಾನವಾಗಿರುವುದಕ್ಕೆ. ಒಂದು ಯಂತ್ರಾಗಾರದಿಂದ ಒಂದೇ ರೂಪದ, ಒಂದೇ ತೂಕದ, ಒಂದೇ ಬಣ್ಣದ, ಒಂದೇ ಶಕ್ತಿಯ ಸಹಸ್ರಾರು ಮೋಟಾರುಗಳನ್ನು ನಿರ್ಮಿಸಬಹುದು. ಆದರೆ ಅತ್ಯಂತ ಸಮರ್ಥನಾದ ಆಚಾರ್ಯನೂ ಕೂಡ ಒಂದೇ ಶಕ್ತಿಯ, ಒಂದೇ ಅಭಿರುಚಿಯ, ಒಂದೇ ಭಾವನೆಯ ಸಾವಿರ, ಏಕೆ, ನೂರು ಶಿಷ್ಯರನ್ನೂ ತಯಾರು ಮಾಡಲಾರನು. ಅದಕ್ಕೆ ಕಾರಣವೂ ಇದೆ. ಪ್ರತಿಯೊಬ್ಬ ಜೀವಾತ್ಮನೂ ತನ್ನದೇ ಆದ ಸಂಸ್ಕಾರಗಳನ್ನು ಹೊತ್ತು, ಒಂದು ಜನ್ಮದಿಂದ ಮತ್ತೊಂದು ಜನ್ಮಕ್ಕೆ ಬರುತ್ತಾನೆ. ಪರಿಚ್ಛಿನ್ನ ಚೇತನ ಎಂಬ ಅಧ್ಯಾಯದಲ್ಲಿ ಪಾಠಕರು ಈ ವಿಷಯವನ್ನು ಓದಿದ್ದಾರೆ. ಋಗ್ವೇದ ಹೇಳುತ್ತಲಿದೆ:-


ಆದಹ ಸ್ವಧಾಮನು ಪುನರ್ಗರ್ಭತ್ವಮೇರಿರೇ |
ದಧಾನಾ ನಾಮ ಯಜ್ಞಿಯಮ್ || (ಋಕ್. ೧.೬.೪.)


    ಈ ಜೀವಾತ್ಮನು [ಯಜ್ಞಿಯಮ್ ನಾಮ ದಧಾನಾಃ] ಆದರಯೋಗ್ಯ ಪದವನ್ನು ಪಡೆಯುತ್ತಾ [ಆತ್ ಅಹ] ನಿರಂತರ ಕ್ರಮದಲ್ಲಿ [ಸ್ವಧಾಂ ಅನು] ತಮ್ಮ ಧಾರಣಶಕ್ತಿಗಳಿಗೆ ಅಂದರೆ ಸಂಸ್ಕಾರಗಳ ದೃಷ್ಟಿಯಿಂದ ಯೋಗ್ಯತೆಗೆ ಅನುಸಾರವಾಗಿ [ಪುನಃ ಗರ್ಭತ್ವಂ ಏರಿರೇ] ಮರಳಿ ಗರ್ಭತ್ವವನ್ನು - ಮಾತೃಯೋನಿಯಲ್ಲಿನ ಇರುವಿಕೆಯನ್ನು ಪಡೆಯುತ್ತಾರೆ. ಮಾನವಯೋನಿ ಏನೋ ಒಂದೇ, ಮಾನವತ್ವ ಸಾಮಾನ್ಯ ಧರ್ಮವೂ ಅಹುದು. ಈ ದೃಷ್ಟಿಯಿಂದ ಮಾನವರೆಲ್ಲಾ ಸಮಾನರೇ ಸರಿ. ಆದರೆ ಸಂಸ್ಕಾರಜನಿತವಾದ ಸಾಮರ್ಥ್ಯಗಳಲ್ಲಿ ಮತ್ತು ಒಲವುಗಳಲ್ಲಿ ಸಹಜವಾದ ಭೇದವಿರುತ್ತದೆ. ಅದನ್ನು ಗಮನಿಸಿ, ಪ್ರತಿಯೊಬ್ಬನಿಗೂ ತನ್ನದೇ ಆದ ರೀತಿಯಲ್ಲಿ ಏಳಿಗೆ ಸಾಧಿಸುವ ಅನುಕೂಲವನ್ನು ಕಲ್ಪಿಸಿಕೊಡುವುದೇ ಮನೋವಿಜ್ಞಾನಕ್ಕನುಗುಣವಾದ ಕ್ರಮ.
*************************