Pages

Sunday, April 3, 2011

ಅಸತೋಮಾ ಸದ್ಗಮಯ

ಯುಗಾದಿ ಹಬ್ಬದ ಮುನ್ನಾದಿನವಾದ ಇಂದು ಸ್ವಲ್ಪ ಚಿಂತನ-ಮಂಥನ ಮಾಡಬೇಕೆನಿಸಿದೆ.ವಿಕೃತಿ ಸಂವತ್ಸರ ಇಂದು ಮುಗಿದು ನಾಳೆಯಿಂದ ಖರ ಸಂವತ್ಸರವು ಆರಂಭವಾಗುತ್ತದೆ.ಹೀಗೆಯೇ ನಮ್ಮ ನಮ್ಮ ವಯೋಮಾನದಂತೆ ಹಲವು ಸಂವತ್ಸರಗಳು ಕಳೆದುಹೋಗಿದ್ದಾಗಿದೆ. ಅದರೊಟ್ಟಿಗೆ ನಮ್ಮ ಆಯುಷ್ಯವೂ ಕೂಡ ಕಡಿಮೆಯಾಗುತ್ತಾ ಬರುತ್ತಿದೆ. ಪ್ರತಿ ವರ್ಷವೂ ಕೂಡ ಹೊಸಸಂವತ್ಸರವು ನಿಮಗೆ ಶುಭತರಲಿ ಎಂಬ ಶುಭ ಕಾಮನೆಗಳು ಕೇಳಿಬರುವುದು ಸರ್ವೇ ಸಾಮಾನ್ಯ. ಇದು ಎಸ್.ಎಂ.ಎಸ್ ಕಾಲ. ಇಂದೂ ಕೂಡ ನೂರಾರು ಎಸ್.ಎಂ.ಎಸ್ ಗಳು ನಿಮ್ಮ ಮೊಬೈಲ್ ನಲ್ಲಿ ಬಂದು ಕುಳಿತಿದ್ದಾಗಿದೆ.ಎಲ್ಲವೂ ಶುಭ ಹಾರೈಕೆಗಳೇ. ಆದರೆ ಯಾರಿಗಾದರೂ "ಸತ್ಯದಲ್ಲೇ ನಡೆಯೋಣ, ಸತ್ಯವನ್ನೇ ಆಚರಿಸೋಣ ಎಂಬ ಒಂದು ಎಸ್.ಎಂ.ಎಸ್ ಬಂದಿದೆಯೇ?" ಬಂದಿದ್ದರೆ ಪಡೆದವರು ಪುಣ್ಯವಂತರು.

ವೇದಸುಧೆಯ ಗೌರವ ಸಂಪಾದಕರಾದ ಹಾಸನದ ಶ್ರೀ ಕವಿ ನಾಗರಾಜ್ ಅವರ ನಿವಾಸದಲ್ಲಿ ಇಂದು ಬೆಳಿಗ್ಗೆ ಒಂದು ಸತ್ಸಂಗ ನಡೆಯಿತು. ಬೇಲೂರಿನ ವೇದಾಧ್ಯಾಯೀ ವಿಶ್ವನಾಥಶರ್ಮರು ಅಗ್ನಿಹೋತ್ರವನ್ನು ನಡೆಸಿಕೊಟ್ಟರು.ನಾವೆಲ್ಲರೂ ಸಾಮಾನ್ಯವಾಗಿ ಹೇಳುವ ಒಂದು ಮಂತ್ರವನ್ನು ಅಗ್ನಿಹೋತ್ರ ನಡೆಯುವಾಗ ಶ್ರೀ ಶರ್ಮರು ಹೇಳಿ ಅದರ ಅರ್ಥವನ್ನೂ ವಿವರಿಸಿದರು. ಹೌದು, ನಮಗೆಲ್ಲರಿಗೂ ಅದರ ಅರ್ಥವೂ ತಿಳಿದಿದೆ. ಆದರೆ ಅದರ ಒಳಹೊಕ್ಕು ಆ ಮಂತ್ರದ ಅರ್ಥವನ್ನು ತಿಳಿದಿದ್ದೇವೆಯೇ? ಎಂದು ಸ್ವಲ್ಪ ವಿಚಾರ ಮಾಡೋಣ.

ಅಸತೋಮಾ ಸದ್ಗಮಯ|
ತಮಸೋಮಾ ಜ್ಯೋತಿರ್ಗಮಯ|
ಮೃತ್ಯೋರ್ಮಾ ಅಮೃತಂಗಮಯ|
ಓಂ ಶಾಂತಿ: ಶಾಂತಿ: ಶಾಂತಿ: ||

ಅಸತ್ಯದಿಂದ ಸತ್ಯದ ಕಡೆ ಹೋಗೋಣ
ಕತ್ತಲೆಯಿಂದ ಬೆಳಕಿನತ್ತ ಹೋಗೋಣ
ಮೃತ್ಯುವಿನಿಂದ ಅಮೃತತ್ವ ಕಡೆಗೆ ಹೋಗೋಣ
ಎಲ್ಲರಿಗೂ ಶಾಂತಿ ಸಿಗಲಿ-
ಇದು ಭಾವಾರ್ಥ. ಆದರೆ ಇದರ ಒಳಹೊಕ್ಕು ನಾವು ಮಂತ್ರವನ್ನು ಅರ್ಥ ಮಾಡಿಕೊಂಡಿದ್ದೇವೆಯೇ? ಹಾಗೆ ಒಂದು ವೇಳೆ ಮಂತ್ರವನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದೇ ಆದರೆ ಇಂದು ನಮ್ಮ ಬಾಳು ನೆಮ್ಮದಿಯಿಂದ ಇರಲೇ ಬೇಕಲ್ಲವೇ?

"ಅಸತ್ಯದಿಂದ ಸತ್ಯದ ಕಡೆ ಹೋಗೋಣ"- ಸರಳವಾಗಿ ಹೇಳುವ ಈ ಮಾತಿಗೆ ಎಷ್ಟು ಅರ್ಥವಿದೆ! ಅಸತ್ಯ ಅಂದರೇನು? ಸತ್ಯ ಎಂದರೇನು? -ಈ ಪದಗಳ ಅರ್ಥವನ್ನು ಮೊದಲು ತಿಳಿದುಕೊಳ್ಳಬೇಕಲ್ಲವೇ? ಇಲ್ಲಿ ನಾವು ವೇದಾಂತಿಗಳಾಗುವುದೇನೂ ಬೇಡ. ಆದರೆ "ಅಸತ್ಯದಿಂದ ಸತ್ಯದ ಕಡೆ ಹೋಗೋಣ"- ಎಂದು ಮಂತ್ರವನ್ನು ಹೇಳಿದ ಮೇಲೆ ಮಂತ್ರದಂತೆ ನಡೆಯಬೇಕಲ್ಲವೇ? ನಾವು ಹಾಗೆ ಮಾಡುತ್ತಿದ್ದೇವೆಯೇ? ದೇವರ ಹೆಸರಿನಲ್ಲಿ ಮಾಡುತ್ತಿರುವ ಪೂಜೆ-ಪುನಸ್ಕಾರಗಳು, ಆಚರಿಸುತ್ತಿರುವ ಆಚರಣೆಗಳು, ಹವನ-ಹೋಮಗಳು, ಇತ್ಯಾದಿಗಳನ್ನು ಸತ್ಯಪಥದಲ್ಲಿ ಆಚರಿಸುತ್ತಿದ್ದೇವೆಯೇ? ಶ್ರೀ ಸುಧಾಕರಶರ್ಮರು ಬಹಳ ನಿಷ್ಟುರವಾಗಿಯೇ ಒಂದು ಮಾತು ಹೇಳುತ್ತಾರೆ. ಸರ್ವವ್ಯಾಪಿಯೂ, ಸಾರ್ವಭೌಮನೂ, ಸರ್ವಜ್ಞನೂ ಆದ ಭಗವಂತನಿಗೆ ನಾವು ಏನೇನೋ ಆಕಾರಕೊಟ್ಟು , ಅವನನ್ನು ಕುಬ್ಜನನ್ನಾಗಿ ಮಾಡಿಬಿಡುತ್ತೀವಲ್ಲಾ! ಸುಳ್ಳು ಸುಳ್ಳು ಕಥೆಗಳನ್ನೇ ಹೇಳುತ್ತಾ ಅದನ್ನೇ ನಿಜವೆನಿಸಲು ಹೊರಟಿದ್ದೀವಲ್ಲಾ! ಇದು ಅಸತ್ಯದಿಂದ ಸತ್ಯದ ಕಡೆ ಹೋಗೋಣವೆಂದು ಮಂತ್ರ ಹೇಳುವ ನಮಗೆ ಎಷ್ಟು ಸರಿ ಹೊಂದುತ್ತದೆ?

ತಮಸೋಮಾ ಜ್ಯೋತಿರ್ಗಮಯ|
"ಕತ್ತಲೆಯಿಂದ ಬೆಳಕಿನತ್ತ ಹೋಗೋಣ"- ನಾವು ಅದೇ ಕತ್ತಲೆಯಲ್ಲಿ ಸಿಕ್ಕಿಹಾಕಿಕೊಂಡು ನೆರಳುತ್ತಿಲ್ಲವೇ?

ಮೃತ್ಯೋರ್ಮಾ ಅಮೃತಂಗಮಯ|
"ಮೃತ್ಯುವಿನಿಂದ ಅಮೃತತ್ವ ಕಡೆಗೆ ಹೋಗೋಣ"- ನಾವೆಲ್ಲಾ ಮೃತ್ಯುವಿನ ಭೀತಿಯಲ್ಲಿಯೇ ಕಾಲ ಹಾಕುತ್ತಿಲ್ಲವೇ? ನಾವು ತಿನ್ನುತ್ತಿರುವ ಆಹಾರವು ವಿಷಪೂರಿತವಾಗಿದೆ, ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ, ಆದರೂ ನಾವು ನಮ್ಮ ಆಹಾರದ ಶೈಲಿ ಬದಲಿಸಲು ಸಿದ್ಧರಿಲ್ಲ. ಹೀಗಾದರೆ ಅಮೃತತ್ವದ ಕಡೆ ಹೋಗುವುದಾದರೂ ಹೇಗೆ?
ಅಷ್ಟೇ ಅಲ್ಲ, ನಮ್ಮ ಚಿಂತನೆಗಳು, ಆಲೋಚನೆಗಳು,ನಮ್ಮ ಬದುಕಿನ ಶೈಲಿ, ಆಹಾರ ಕ್ರಮ -ಇವೆಲ್ಲವೂ ಕೂಡ ನಮ್ಮ ಆರೋಗ್ಯದ ಮೇಲೆ ಪ್ರಭಾವವನ್ನು ಬೀರುತ್ತವೆ. 
ಸಧ್ಯದ ಪರಿಸ್ಥಿತಿಯಲ್ಲಿ ನಾವೆಲ್ಲಿದ್ದೇವೆಂಬುದನ್ನು ಕೇವಲ ಕೆಲವೇ ಶಬ್ಧಗಳಲ್ಲಿ ಇಲ್ಲಿ ಪ್ರಸ್ತಾಪಿಸಲಾಗಿದೆ.
ವೇದಸುಧೆಯ ಅಭಿಮಾನಿಗಳೇ ಹೊಸವರ್ಷದಲ್ಲಿ ಮೇಲೆ ಪ್ರಸ್ತಾಪಿಸಿರುವ ವಿಷಯಗಳ ಬಗ್ಗೆ ಸ್ವಲ್ಪ ಚಿಂತನ-ಮಂಥನ ನಡೆಸೋಣ. ಅರ್ಥವನ್ನು ತಿಳಿದು ಮಂತ್ರವನ್ನು ಪಠಿಸೋಣ. ಹಾಗಲ್ಲದೆ ಕಂಠಪಾಠವಾದ ಮಂತ್ರವನ್ನು ಅರ್ಥ ತಿಳಿಯದೆ ಪಠಿಸಿದರೆ ಬರುವ ಭಾಗ್ಯವಾದರೂ ಏನು?
ಇಂತಹ ಪವಿತ್ರವಾದ ಭರತ ಭೂಮಿಯಲ್ಲಿ ಹುಟ್ಟಿರುವುದೇ ನಮ್ಮ ಪೂರ್ವಜನ್ಮದ ಪುಣ್ಯದ ಫಲ ವಲ್ಲವೇ? ವೇದದ ಭೂಮಿಯಲ್ಲಿ ಜನ್ಮತಾಳಿರುವ ನಾವು ವೇದ ವೆಂದರೆ ಜ್ಞಾನ ಎಂಬುದನ್ನು ಮನವರಿಕೆ ಮಾಡಿಕೊಂಡು ಕೆಲವಾದರೂ ವೇದಮಂತ್ರಗಳ ಅರ್ಥವನ್ನು ತಿಳಿದುಕೊಂಡಿದ್ದೇ ಆದರೆ ನಮ್ಮ ನೆಮ್ಮದಿಯ ಜೀವನಕ್ಕೆ ಬೇಕಾದ ಸಮಸ್ತವೂ ಅದರಲ್ಲಿದೆ ಎಂಬುದನ್ನು ತಿಳಿಸುತ್ತಾ, ವೇದವನ್ನು ಆಧಾರವಾಗಿಟ್ಟುಕೊಂಡು ಮಾಡಿರುವ ವೇದಾಧ್ಯಾಯೀ ಸುಧಾಕರ ಶರ್ಮರ ಹಲವು ಉಪನ್ಯಾಸಗಳ ಆಡಿಯೋ ವೇದಸುಧೆಯ "ಶರ್ಮರ ಪುಟದಲ್ಲಿ ಲಭ್ಯವಿದೆ. ಹೊಸ ಬರಹಗಳಿಗಾಗಿ ಕಾಯುವ ಅಗತ್ಯವಿಲ್ಲ. ಈಗಾಗಲೇ ರುಚಿಯಾದ ಅಡುಗೆ ಸಿದ್ಧವಾಗಿದೆ. ಅದನ್ನು ಉಣಬಡಿಸಲು ವೇದಸುಧೆಯು ಸಾಕಷ್ಟು ಶ್ರಮಪಟ್ಟು ಸಂಗ್ರಹಿಸಿ ಪ್ರಕಟಿಸಿದೆ. ಅವುಗಳನ್ನು ಕೇಳಿದ್ದೇ ಆದರೆ ವೇದಪಥದಲ್ಲಿ ಕ್ರಮಿಸಲು ನಮಗೆ ಸಾಧ್ಯವಾಗುವುದರಲ್ಲಿ ಸಂಶಯವಿಲ್ಲ.

ದೇವರನ್ನು ದೇವರ ಪಾಡಿಗೆ ಬಿಟ್ಟುಬಿಡೋಣ - 2

     ನಾನು ವಿಗ್ರಹಾರಾಧನೆಯನ್ನು ಸಮರ್ಥಿಸುವುದಿಲ್ಲವೆಂದ ಮಾತ್ರಕ್ಕೆ ಅದನ್ನು ವಿರೋಧಿಸುವುದಿಲ್ಲ. ಏಕೆಂದರೆ ನಾನು ಯಾವುದೇ ವಿಚಾರ, ತತ್ವಗಳನ್ನು ಪ್ರತಿಪಾದಿಸುವಷ್ಟು ಪ್ರಬುದ್ಧತೆ ಹೊಂದಿಲ್ಲ. ವಿಗ್ರಹ ಪೂಜೆಯಿಂದ ಶಾಂತಿ, ನೆಮ್ಮದಿ ಪಡೆಯುತ್ತಿರುವ/ಪಡೆಯಬಯಸುವ ಬಹುತೇಕರ ಶ್ರದ್ಧೆ, ನಂಬಿಕೆಗಳು ಸುಳ್ಳೆಂದು ನಾನು ಹೇಗೆ ಹೇಳಲಿ? ಅವರುಗಳ ಪ್ರಾರ್ಥನೆಗೆ ವಿಗ್ರಹಗಳು ಮಾಧ್ಯಮವಾಗಿರಬಹುದು. ವಿಗ್ರಹಗಳು ಅವರ ಮನೋಶಕ್ತಿಯ ಕೇಂದ್ರೀಕರಣಕ್ಕೆ ಸಾಧನ ಹಾಗೂ ಸಹಕಾರಿಯಾಗಿ ಇರಬಹುದು. ವಿಗ್ರಹಗಳನ್ನು ದೇವರೆಂದು ಭಾವಿಸಿ, ನಂಬಿ ಪೂಜಿಸುವವರ ಮಾನಸಿಕ ಚಿಂತನೆಯ ಅಲೆಗಳು ವಿಗ್ರಹಗಳಲ್ಲಿ ಕ್ರೋಢೀಕೃತಗೊಂಡು ಅಲ್ಲಿ ಶಕ್ತಿ ಸಂಚಯನ ಆಗಿರಬಹುದು. ಅಂತಹ ಸ್ಥಳಗಳು ಶಕ್ತಿ ಕೇಂದ್ರಗಳಾಗಿರಬಹುದು. ಇಲ್ಲೂ ಸಹ ವಿಗ್ರಹಗಳಿಗಿಂತ ಅವುಗಳನ್ನು ಪೂಜಿಸುವವರ ಮನೋಶಕ್ತಿಯೇ ನಿರ್ಧಾರಕವೆಂದು ನನ್ನ ವೈಯಕ್ತಿಕ ಅನಿಸಿಕೆ. ದೇವರನ್ನು ವಿಗ್ರಹಗಳಲ್ಲಿ ಅಥವ ವಿಗ್ರಹಗಳ ಮೂಲಕ ಕಾಣುವುದರಲ್ಲಿಯೂ ಅರ್ಥವಿರಬಹುದು, ಇಲ್ಲದಿರಬಹುದು. ಆದರೆ ವಿಗ್ರಹಗಳೇ ದೇವರೆಂದು ಭಾವಿಸುವುದು ತಾರ್ಕಿಕವಾಗಿಯೂ ಸಹ ಕಷ್ಟಕರ ಸಂಗತಿ. ಒಂದು ಹಂತದ ಪರಿಪಕ್ವತೆ ಬಂದ ನಂತರದಲ್ಲಿ ವಿಗ್ರಹ ಪೂಜೆಯ ಅಗತ್ಯ ಬಾರದೇ ಹೋಗಬಹುದು. ಕೆಲವು ದೇವಸ್ಥಾನಗಳಲ್ಲಿ ದೇವರ ಪ್ರಸಾದ ಕೇಳಿ ಬೇಡುತ್ತಾ ಕುಳಿತ ಭಕ್ತರನ್ನು ಗಮನಿಸಿದ್ದೀರಾ? ಬಲಗಡೆ ಹೂವು ಬಿದ್ದರೆ ಒಪ್ಪಿಗೆಯೆಂತಲೂ ಎಡಗಡೆ ಬಿದ್ದರೆ ಅಶುಭವೆಂದು ನಂಬುವ ಅವರು ದೇವರೊಂದಿಗೆ ಮಾತನಾಡುವ ಪರಿಯನ್ನೂ ನೋಡಿದ್ದೇನೆ. ತಮ್ಮ ಕಷ್ಟ ಸುಖ ತೋಡಿಕೊಳ್ಳುತ್ತಾ 'ಯಾಕಪ್ಪಾ ಇಷ್ಟು ಪರೀಕ್ಷೆ ಮಾಡುತ್ತೀಯಾ? ಇನ್ನೂ ಸತಾಯಿಸಬೇಡ, ಒಳ್ಳೆಯದು ಮಾಡಪ್ಪಾ, ಬೇಗ ಪ್ರಸಾದ ಕೊಡು' ಎಂಬಿವೇ ಇತ್ಯಾದಿ ಹಳಹಳಿಸುತ್ತಿರುತ್ತಾರೆ. ಪ್ರಸಾದ ಕೇಳಲು ಬಂದ ಇತರರೂ ಅವರ ಸರದಿಗಾಗಿ ಕಾಯುತ್ತಿರುತ್ತಾರೆ. ಹಲವರಿಗೆ ಅದು ಭ್ರಮೆಯಂತೆ ಕಂಡರೂ ಭಕ್ತರ ತದೇಕ ಚಿತ್ತತೆ, ನಂಬಿಕೆ ಅಲ್ಲಿ ಎದ್ದು ಕಾಣುತ್ತದೆ. ಅಲ್ಲಿಯೂ ಅವರ ಮನೋಶಕ್ತಿಯೇ ಪ್ರಮುಖವೆಂದು, ವಿಗ್ರಹವಲ್ಲವೆಂದು ನನಗೆ ಅನ್ನಿಸುತ್ತದೆ. ವೈದ್ಯರಲ್ಲಿನ ನಂಬಿಕೆ ಅರ್ಧ ಕಾಯಿಲೆ ವಾಸಿ ಮಾಡುವಂತೆ ದೇವರಲ್ಲಿನ ಅವರ ನಂಬಿಕೆ ಅವರಿಗೆ ನೆಮ್ಮದಿ, ಶಾಂತಿ ಕಂಡುಕೊಳ್ಳಲು ನೆರವಾಗಬಹುದು. ಮೊದಲಿನಿಂದ ಪೂರ್ವಜರು ಮತ್ತು ಸುತ್ತಮುತ್ತಲಿನವರು ಇಟ್ಟುಕೊಂಡು ಬಂದ ನಂಬಿಕೆ, ನಡವಳಿಕೆಗಳನ್ನು ಅವರು ಮುಂದುವರೆಸುತ್ತಾರೆ. ಮುಂದೆ ಅವರ ಮಕ್ಕಳೂ ಅದೇ ರೀತಿಯಲ್ಲಿ ಸಾಗಬಹದು.


     ಒಂದು ಪ್ರಾಂತದ ರಾಜನೊಬ್ಬ ಸ್ವಾಮಿ ವಿವೇಕಾನಂದರೊಂದಿಗೆ ಚರ್ಚಿಸುತ್ತಿದ್ದ ಸಂದರ್ಭ. ಆ ರಾಜನಿಗೆ ವಿಗ್ರಹಾರಾಧನೆಯಲ್ಲಿ/ಮೂರ್ತಿ ಪೂಜೆಯಲ್ಲಿ ನಂಬಿಕೆಯಿರಲಿಲ್ಲ. ವಿಗ್ರಹಪೂಜೆ ಬಗ್ಗೆ ಆತ ನಿಕೃಷ್ಟವಾಗಿ ಮಾತನಾಡಿದುದನ್ನು ಶಾಂತವಾಗಿ ಆಲಿಸಿದ ವಿವೇಕಾನಂದರು ರಾಜನ ಭಾವಚಿತ್ರವೊಂದನ್ನು ತರಿಸಲು ಹೇಳಿದರು. ಭಾವಚಿತ್ರ ತಂದಾಗ ಅಲ್ಲಿದ್ದ ಸಭಾಸದರೊಬ್ಬರನ್ನು ಕರೆದು ಆ ಭಾವಚಿತ್ರದ ಮೇಲೆ ಉಗುಳಲು ಹೇಳಿದರು. ಆ ವ್ಯಕ್ತಿ ನಡುಗಿಹೋದರು -'ರಾಜರ ಭಾವಚಿತ್ರದ ಮೇಲೆ ಉಗುಳುವುದೇ?'. ವಿವೇಕಾನಂದರು ಹೇಳಿದರು -'ಇದು ರಾಜರ ಭಾವಚಿತ್ರವೇ ಹೊರತು ರಾಜರಲ್ಲ; ಉಗುಳಿದರೆ ರಾಜರಿಗೆ ಏನೂ ಆಗುವುದಿಲ್ಲ'. ಅದಕ್ಕೆ ಅವರು 'ಸ್ವಾಮಿ, ಇದು ಭಾವಚಿತ್ರವಿರಬಹುದು. ಆದರೆ ಇದರಲ್ಲಿ ನಾವು ರಾಜರನ್ನು ಕಾಣುತ್ತಿದ್ದೇವೆ. ಇದರ ಮೇಲೆ ಉಗುಳುವುದು ನಮಗೆ ಕಲ್ಪನೆಯಲ್ಲಿಯೂ ಅಸಾಧ್ಯ'. ಆಗ ವಿವೇಕಾನಂದರು ರಾಜರಿಗೆ 'ದೇವರ ವಿಗ್ರಹಗಳು ದೇವರಲ್ಲ. ಅದರೆ ಜನ ಅಲ್ಲಿ ದೇವರನ್ನು ಕಾಣುತ್ತಾರೆ. ಅವುಗಳನ್ನು ಪೂಜಿಸಿ ನೆಮ್ಮದಿ, ಶಾಂತಿ ಕಂಡುಕೊಳ್ಳುತ್ತಾರೆ. ಆದ್ದರಿಂದ ವಿಗ್ರಹಪೂಜೆಯನ್ನು ವಿರೋಧಿಸುವುದು ಸಲ್ಲ' ಎಂದು ಮನವರಿಕೆ ಮಾಡಿಕೊಟ್ಟಿದ್ದರು.


     ವೇದ, ಉಪನಿಷತ್ತುಗಳು, ರಾಮಾಯಣ, ಮಹಾಭಾರತದ ವೃತ್ತಾಂತಗಳು, ದೇವರ ಮಹಿಮೆ ಕೊಂಡಾಡುವ ಕಥೆಗಳು, ಬೈಬಲ್, ಕುರಾನ್, ಗುರುಗ್ರಂಥ ಸಾಹೀಬಾ, ವಿವಿಧ ಧರ್ಮಗ್ರಂಥಗಳು, ಇತ್ಯಾದಿಗಳು ಜನಸಮೂಹದ ಮೇಲೆ ಅಚ್ಚಳಿಯದ ಪ್ರಭಾವ ಬೀರಿವೆ, ಬೀರುತ್ತಿವೆ. ಎಲ್ಲಾ ಧರ್ಮಗ್ರಂಥಗಳು ಮೂಲಭೂತವಾಗಿ ಮನುಷ್ಯನ ಒಳ್ಳೆಯ ನಡವಳಿಕೆ ಬಗ್ಗೆ ಒತ್ತು ನೀಡಿವೆ. ಆದರೆ ಅವುಗಳನ್ನು ನಂಬುವ ಜನರ ನಡವಳಿಕೆ ಒಳ್ಳೆಯ ರೀತಿಯಲ್ಲಿ ಇದೆ ಎಂದು ಹೇಳಲಾಗುವುದಿಲ್ಲ. ದೇವರನ್ನು ಹಲವು ಹೆಸರುಗಳಲ್ಲಿ, ಹಲವು ರೂಪಗಳಲ್ಲಿ ಪೂಜಿಸುತ್ತಿರುವ ಮತ್ತು ಹೊಸ ಹೊಸ ದೇವರುಗಳು ಮತ್ತು ಪೂಜಾ ಪದ್ಧತಿಗಳನ್ನು ಹುಟ್ಟು ಹಾಕಲಾಗುತ್ತಿರುವ ಹಿಂದೂ ಸಮಾಜದಲ್ಲಿ ಪರಧರ್ಮ ಸಹಿಷ್ಣುತೆ ಮೈಗೂಡಿದೆ. ಮುಸ್ಲಿಮ್ ಮತ್ತು ಕ್ರಿಶ್ಚಿಯನ್ ಸಮುದಾಯದಲ್ಲಿ ಪರಧರ್ಮ ಸಹಿಷ್ಣುತೆಯ ಕೊರತೆ ಕಂಡು ಬರುತ್ತಿರುವುದು ಸುಳ್ಳೇನಲ್ಲ. ಹಾಗೆಂದು ನಾನು ಯಾವುದೇ ಧರ್ಮದ ಪರ ಅಥವಾ ವಿರೋಧಿ ಅಲ್ಲ. ನನಗೆ ಅದರ ಅಗತ್ಯವೂ ಇಲ್ಲ. ದೇವರ ಹೆಸರಿನಲ್ಲಿ ನಡೆಯುತ್ತಿರುವ ಗೊಂದಲ, ಸಮಸ್ಯೆ, ಸಂಘರ್ಷಗಳ ಬಗ್ಗೆ ಮಾತ್ರ ನನ್ನಲ್ಲಿ ತಳಮಳ ಇದೆ.

     ನನ್ನ ಮನಸ್ಥಿತಿ ಹೇಗಿದೆಯೆಂದರೆ ಯಾವುದಾದರೂ ಉತ್ತಮ ಗ್ರಂಥ ಓದಿದಾಗ ಅದರಲ್ಲಿನ ಒಳ್ಳೆಯ ಅಂಶಗಳಿಗೆ ಮಾರುಹೋಗುತ್ತೇನೆ. ಯಾವುದು ಮನಸ್ಸಿಗೆ ಹಿತ, ಸಂತೋಷ ನೀಡುತ್ತದೆಯೋ ಮತ್ತು ಅದನ್ನು ಅಂತಃಸಾಕ್ಷಿ ಒಪ್ಪುತ್ತದೆಯೋ ಅದು ಒಳ್ಳೆಯದೆಂದೇ ನನ್ನ ಭಾವನೆ. ಚಿಕ್ಕಂದಿನಲ್ಲಿ ಪ್ರತಿದಿನ ಸಾಯಂಕಾಲ ಆಟ ಆಡಿಕೊಂಡು ಬಂದ ನಂತರ ಕೈಕಾಲುಮುಖ ತೊಳೆದುಕೊಂಡು ನಾವು ಐವರು ಮಕ್ಕಳು ನಮ್ಮ ತಾಯಿ ಹೇಳಿಕೊಡುತ್ತಿದ್ದ ಪ್ರಾರ್ಥನೆ, ಭಜನೆಗಳನ್ನು ಒಟ್ಟಿಗೆ ಹೇಳಿ ದೇವರಿಗೆ ನಮಸ್ಕಾರ ಮಾಡಿದ ನಂತರವೇ ಓದಿಕೊಳ್ಳಲು ತೊಡಗುತ್ತಿದ್ದೆವು. ಹಬ್ಬ ಹರಿದಿನಗಳಲ್ಲಿ ತಂದೆಯವರು ಮಾಡುತ್ತಿದ್ದ ದೇವರ ಪೂಜೆ ನಂತರ ಮಂಗಳಾರತಿ, ತೀರ್ಥ, ಪ್ರಸಾದ ಪಡೆದ ಮೇಲಷ್ಟೇ ನಮಗೆ ತಿಂಡಿ ಸಿಗುತ್ತಿತ್ತು. ಆ ದಿನಗಳಲ್ಲಿ ತೋರಣ ಕಟ್ಟುವುದು, ಗಣಪತಿ ಪೂಜೆಗೆ ಮಂಟಪ ಸಿದ್ಧಪಡಿಸುವುದು, ನವರಾತ್ರಿಯಲ್ಲಿ ಗೊಂಬೆಗಳನ್ನು ಅಂದವಾಗಿ ಜೋಡಿಸುವುದು, ಇತ್ಯಾದಿಗಳನ್ನು ಶ್ರದ್ಧೆಯಿಂದ ಮತ್ತು ಆಸಕ್ತಿಯಿಂದ ಮಾಡುತ್ತಿದ್ದೆ. ಸಾಮೂಹಿಕ ರಾಮನವಮಿ, ಗಣೇಶ ಉತ್ಸವಗಳ ಸಂದರ್ಭಗಳಲ್ಲಿ ಏರ್ಪಾಡಾಗುತ್ತಿದ್ದ ಹರಿಕಥೆಗಳು, ಸಂಗೀತ ಕಾರ್ಯಕ್ರಮಗಳನ್ನು ಆಸಕ್ತಿಯಿಂದ ತಲ್ಲೀನನಾಗಿ ಕೇಳುತ್ತಿದ್ದೆ. ವಿಶೇಷವಾಗಿ ರಾಮಾಯಣ, ಮಹಾಭಾರತಗಳಿಗೆ ಸಂಬಂಧಿಸಿರುತ್ತಿದ್ದ ಹರಿಕಥೆಗಳು ನನ್ನ ಮೇಲೆ ತುಂಬಾ ಪರಿಣಾಮ ಬೀರಿವೆ. ರಾಮಾಯಣ, ಮಹಾಭಾರತಗಳು ನಿಜವಾಗಿಯೂ ನಡೆದಿದೆಯೋ, ಇಲ್ಲವೋ ಎಂಬಿತ್ಯಾದಿ ವಿವಾದಗಳ ಬಗ್ಗೆ ನನಗೆ ಆಸಕ್ತಿಯಿಲ್ಲ. ಆದರೆ ಅವುಗಳಲ್ಲಿ ತುಂಬಿರುವ ನೀತಿಪಾಠಗಳು, ಜೀವನದರ್ಶನ ಅನುಕರಣೀಯ.


     ದೇವರ ಕುರಿತು ಜಿಜ್ಞಾಸೆ, ದೇವರನ್ನು ಪೂಜಿಸುವ ರೀತಿ ಕುರಿತು ವಿವಿಧ ಆಲೋಚನೆಗಳು ಚಿಕ್ಕಂದಿನಿಂದಲೇ ಬಂದಿತ್ತು. ಹಬ್ಬ ಹರಿದಿನಗಳಲ್ಲಿ ತಂದೆಯವರು ಪೂಜೆ ಮಾಡುವ ಸಂದರ್ಭಗಳಲ್ಲಿ ನಾವು ಮಕ್ಕಳಿಗೆ ಸಹಜವಾದ ಆಟ, ಜಗಳಗಳಲ್ಲಿ ತೊಡಗಿ ಕಿರುಚಾಟ, ಅಳು, ಗಲಾಟೆ ಮಾಡುತ್ತಿದ್ದರಿಂದ ತಂದೆಯವರ ಏಕಾಗ್ರತೆಗೆ ಭಂಗ ಬಂದು ಅವರು ಸಿಟ್ಟಿಗೇಳುತ್ತಿದ್ದರು. ಆ ಸಿಟ್ಟಿನಲ್ಲಿ ಮಕ್ಕಳಲ್ಲಿ ದೊಡ್ಡವನಾದ ನನಗೆ ಬೈಗುಳ ಮತ್ತು ಪೆಟ್ಟುಗಳು ಬೀಳುವುದು ಸಾಮಾನ್ಯವಾಗಿತ್ತು. ಕೆಲವೊಮ್ಮೆ ನನ್ನ ತಪ್ಪಿಲ್ಲದಿದ್ದರೂ ನಾನು ಬೈಸಿಕೊಳ್ಳಬೇಕಾದಾಗ, ಪೆಟ್ಟು ತಿನ್ನಬೇಕಾಗಿ ಬಂದಾಗ ನನಗೆ ಸರಿಕಾಣುತ್ತಿರಲಿಲ್ಲ. ಆಗೆಲ್ಲಾ ನನ್ನ ಮನಸ್ಸು 'ಹಬ್ಬ ಮಾಡುವುದು ಎಲ್ಲರಿಗೂ ಒಳ್ಳೆಯದಾಗಲಿ, ಸಂತೋಷ ಸಿಗಲಿ ಎಂದು; ಇದರಿಂದ ಮನಸ್ಸಿಗೆ ಬೇಸರವಾಗುವುದಾದರೆ ಅಂತಹ ಹಬ್ಬ ಏಕೆ ಬೇಕು?' ಎಂದು ಯೋಚಿಸುತ್ತಿತ್ತು. ಚಿಕ್ಕಂದಿನಿಂದಲೇ ದೇವರ ಕುರಿತು ತರ್ಕ, ಜಿಜ್ಞಾಸೆಗಳಿಗೆ ಶ್ರೀಕಾರ ಬಿದ್ದಿತ್ತು.


     ಇಂದು ಯಾರನ್ನು ನಮ್ಮ ಕಷ್ಟ, ಕಾರ್ಪಣ್ಯಗಳಿಗಾಗಿ ಮೊರೆಯಿಡುತ್ತೇವೆಯೋ ಆ ದೇವರುಗಳೇ ಸಮಸ್ಯೆಗಳ ಮೂಲವಾಗಿರುವುದು ಯುಗಮಹಿಮೆ. ದೇವರಿಗಾಗಿ ಧರ್ಮಯುದ್ಧಗಳು, ಮಾರಣಹೋಮಗಳು ನಡೆಯುತ್ತಿರುವುದು ಯಾವ ಪುರುಷಾರ್ಥಕ್ಕಾಗಿ? ತಮ್ಮ ಮತ-ಧರ್ಮದ ವಿಸ್ತಾರದ ಹಿನ್ನೆಲೆಯೇ ದೇಶ-ದೇಶಗಳ ನಡುವೆ ನಡೆಯುವ ಯುದ್ಧಗಳ ನಿಜವಾದ ಕಾರಣವೆಂಬುದು ಸುಸ್ಪಷ್ಟ. ನಾನು ದೇವರು/ದೇವರುಗಳ ವಿರುದ್ಧ ಮಾತನಾಡುತ್ತಿಲ್ಲ. ದೇವರ ಹೆಸರಿನಲ್ಲಿ ನಡೆಯುತ್ತಿರುವ ಪ್ರಚಲಿತ ವಿದ್ಯಮಾನದ ಬಗ್ಗೆ ಹೇಳುತ್ತಿದ್ದೇನೆ. ದೇವರ ಹೆಸರಿನಲ್ಲಿ ಅನೇಕ ಒಳ್ಳೆಯ ಜೊತೆಗೆ ಕೆಟ್ಟ ಸಂಪ್ರದಾಯಗಳೂ ಆಚರಿಸಲ್ಪಡುತ್ತಿವೆ. ನಿಜವಾಗಿಯೂ ದೇವರು ತನ್ನನ್ನು ಕುರಿತು ಜನರು ಪೂಜಿಸಬೇಕು, ಪ್ರಾರ್ಥಿಸಬೇಕು ಎಂದು ಬಯಸುತ್ತಾನೆ ಎಂದು ನಾನು ನಂಬುವುದಿಲ್ಲ. ದೇವರನ್ನು ಪೂಜಿಸುವುದು, ಪ್ರಾರ್ಥಿಸುವುದು ಜನರಿಗೆ ಬೇಕಾಗಿದೆಯೇ ಹೊರತು ದೇವರಿಗಲ್ಲ. ನೂರೆಂಟು ಪಾಪಕೃತ್ಯಗಳನ್ನು ಮಾಡಿ ಪರಿಹಾರರೂಪವಾಗಿ ದೇವರಿಗೆ ಪೂಜೆ-ಪುನಸ್ಕಾರಗಳನ್ನು ಮಾಡುವುದು, ಹುಂಡಿಗೆ ಹಣ ಹಾಕುವುದು, ಇತ್ಯಾದಿ ಮಾಡಿ ಪಾಪ ಕಳೆದುಕೊಂಡ ಭಾವನೆ ಮೂಡಿಸಿಕೊಳ್ಳುವುದು ಕಾಣುತ್ತೇವೆ. ಪಾಪ ಮಾಡಿದ್ದನ್ನು ಕ್ಷಮಿಸುವಂತಹ ದೇವರಿಗಿಂತ ಪಾಪಕ್ಕೆ ತಕ್ಕ ಶಿಕ್ಷೆ ಕೊಡುವ ದೇವರು ನನಗೆ ಇಷ್ಟ. ಏಕೆಂದರೆ ಹೀಗಿದ್ದರೆ ಕೆಟ್ಟದನ್ನು ಮಾಡಲು ಹಿಂಜರಿಯುವಂತಹ ವಾತಾವರಣ ಬರಬಹುದು. ಆದರೆ ನಮ್ಮ ಇಷ್ಟ, ಕಷ್ಟ ಅನುಸರಿಸಿ ದೇವರು ಇರುತ್ತಾನೋ, ಇಲ್ಲವೋ ಗೊತ್ತಿಲ್ಲ.

     ದೇವರ ಕುರಿತು ಜಿಜ್ಞಾಸೆ, ಗೊಂದಲಗಳು ಬಗೆಹರಿಸಲು ಆ ದೇವರೇ ಬರಬೇಕು! ಬಸವಣ್ಣನವರು ಎಲ್ಲಾ ಜಾತಿಗಳವರನ್ನು ಒಟ್ಟುಗೂಡಿಸಲು ಪ್ರಯತ್ನಿಸಿದರು. ಆಗಿದ್ದೇನು? ಅಂತಹವರದ್ದೇ ಒಂದು ಜಾತಿ/ಧರ್ಮ ಆಯಿತು. ಮಧ್ಯಪ್ರದೇಶದಲ್ಲೂ ಸಹ ಜಾತಿ ಪದ್ಧತಿ ವಿರೋಧಿಸುವ ಗುಂಪಿದ್ದು, ಅವರನ್ನು 'ಅಜಾತರು' ಎಂಬ ಜಾತಿ ಹೆಸರು ಇಟ್ಟು ಅವರದೇ ಜಾತಿ ಮಾಡಿಬಿಟ್ಟಿದ್ದಾರೆ. ಯಾವುದೇ ಹೊಸ ವಿಚಾರ, ಜ್ಞಾನ ಪಸರಿಸುವವರನ್ನೂ ಸಹ ಪ್ರತ್ಯೇಕಿಸಿ ಹೆಸರಿಟ್ಟುಬಿಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಸತ್ಯಾನ್ವೇಶಿಗಳು ಗೊಂದಲ, ತೊಂದರೆಗಳಿಗೆ ಸಿಲುಕುತ್ತಾರೆ.


     ವೇದಗಳ ಕುರಿತು ವೇದಾಧ್ಯಾಯಿ ಸುಧಾಕರ ಶರ್ಮರವರ ಉಪನ್ಯಾಸಗಳು ಸೇರಿದಂತೆ ಹಲವಾರು ಜ್ಞಾನವೇತ್ತರ ಮಾತುಗಳನ್ನು ಕೇಳಿದ ನಂತರ ಮತ್ತು ಸಂಬಂಧಿಸಿದ ವಿಚಾರಧಾರೆಗಳಿರುವ ಪುಸ್ತಕಗಳನ್ನು ಓದಿದ ನಂತರ ಸಂದೇಹಗಳು ಬಗೆಹರಿದಿಲ್ಲವಾದರೂ ನನ್ನ ವಿಚಾರ ಸರಿಯಾದ ದಾರಿಯಲ್ಲಿದೆಯೆಂಬ ಭಾವ ಮೂಡುತ್ತಿದ್ದು ಒಂದು ರೀತಿಯ ಅಭಿಪ್ರಾಯ ನನ್ನೊಳಗೆ ಸಾಂದ್ರೀಕೃತವಾಗುತ್ತಿದೆ. ಅವೆಂದರೆ:
೧. ಎಲ್ಲವನ್ನೂ, ಎಲ್ಲರನ್ನೂ ನಿಯಂತ್ರಿಸುವ ಅದ್ಭುತ ಶಕ್ತಿ ಇದೆ. ಅದನ್ನು ದೇವರೆಂದಾದರೂ ಕರೆಯಿರಿ, ಯಾವ ಹೆಸರಿನಲ್ಲಾದರೂ ಕರೆಯಿರಿ. ಆ ಶಕ್ತಿ ಎಲ್ಲರನ್ನೂ -ನಂಬುವವರನ್ನೂ, ನಂಬದವರನ್ನೂ, ಕೆಟ್ಟವರನ್ನೂ, ಒಳ್ಳೆಯವರನ್ನೂ - ಸಮಾನಭಾವದಿಂದ ಕಾಣುತ್ತದೆ. ಆ ಶಕ್ತಿ ಕೇವಲ ಮಾನವ ಜೀವಿಗಳಿಗೆ ಮತ್ತು ನಿರ್ದಿಷ್ಟ ಗಡಿ ಪ್ರದೇಶಗಳಿಗೆ ಮಾತ್ರ ಸೀಮಿತವಲ್ಲ.
೨. ನಮಗೆ ಆಗುವ ಎಲ್ಲಾ ಒಳಿತು ಕೆಡಕುಗಳಿಗೆ ನಾವೇ ಕಾರಣರೇ ಹೊರತು ಇತರರಲ್ಲ, ದೇವರಲ್ಲವೇ ಅಲ್ಲ. ದೇವಸ್ಥಾನಕ್ಕೆ ಹೋಗಿ ತಪ್ಪುಕಾಣಿಕೆ ಹಾಕುವುದರಿಂದ ಮತ್ತು ಕ್ಷಮಿಸಲು ಪ್ರಾರ್ಥಿಸುವುದರಿಂದ ಮಾಡಿದ ಪಾಪ ಹೋಗುವುದಿಲ್ಲ. ಮಾಡಿದ ಕರ್ಮಕ್ಕೆ ಅನುಸಾರವಾಗಿ ಫಲ ಕಟ್ಟಿಟ್ಟ ಬುತ್ತಿ.
೩. ಪುನರ್ಜನ್ಮವಿದೆ. ನಾವು ಮಾಡುವ ಒಳ್ಳೆಯ ಕೆಲಸಗಳು ಒಳಿತನ್ನೇ ತರುತ್ತದೆ, ಈ ಜನ್ಮದಲ್ಲಿ ಅಲ್ಲದಿದ್ದರೂ ಮುಂದಿನ ಜನ್ಮದಲ್ಲಿ!
೪. ಒಳ್ಳೆಯದು ಮತ್ತು ಸತ್ಯವೆಂದು ಭಾವಿಸುವ ದಾರಿಯಲ್ಲಿ ನಡೆಯುವುದೇ ದೇವರ ಪೂಜೆ.
೫. ಮೊದಲಿನಿಂದ ನಡೆದುಬಂದ ಸಂಪ್ರದಾಯಗಳನ್ನು ವಿಮರ್ಶಿಸಿ ಅದರಲ್ಲಿನ ಅರ್ಥಪೂರ್ಣ ಅಂಶಗಳನ್ನು ಉಳಿಸಿಕೊಂಡು ಪಾಲಿಸುವುದು. ಅರ್ಥವಿಲ್ಲದ ಮತ್ತು ಇತರರರಿಗೆ ನೋವು ಉಂಟುಮಾಡಬಹುದಾದ ಸಂಗತಿಗಳನ್ನು ಬಿಡುವುದು ಅಗತ್ಯ.
೬. ಸತ್ಯ ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹವಿಲ್ಲದೆ ಸ್ವೀಕರಿಸುವ ಮತ್ತು ಅಗತ್ಯವೆನಿಸಿದಲ್ಲಿ ನಮ್ಮನ್ನು ನಾವು ತಿದ್ದಿಕೊಳ್ಳುವ ಮನೋಭಾವ ಬರಬೇಕು.


      ದೇವರನ್ನು ದೇವರ ಪಾಡಿಗೆ ಬಿಟ್ಟುಬಿಡೋಣ. ಆತ ತನ್ನ ಕೆಲಸ ಮಾಡಿಯೇ ಮಾಡುತ್ತಾನೆ. ನಾವು ನಮ್ಮ ಕೆಲಸ ಮಾಡೋಣ, ಅಂದರೆ ನಾವು ಏಕೆ ಹುಟ್ಟಿದ್ದೇವೆ ಎಂಬುದನ್ನು ಅರಿತು ಸತ್ಯಾನ್ವೇಶಿಗಳಾಗಿ ನಡೆಯೋಣ, ಇರುವಷ್ಟು ಕಾಲ ಯಾರಿಗೂ ಉಪಕಾರ ಮಾಡದಿದ್ದರೂ ಅಪಕಾರವನ್ನಂತೂ ಮಾಡದಿರೋಣ!

************

-ಕ.ವೆಂ.ನಾಗರಾಜ್.

ದೇವರನ್ನು ದೇವರ ಪಾಡಿಗೆ ಬಿಟ್ಟುಬಿಡೋಣ - 1

     ಜಗತ್ತಿನ ಚರಾಚರ ಜೀವಿಗಳು, ನಿರ್ಜೀವಿಗಳ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣಕರ್ತವಾದ ಶಕ್ತಿಯನ್ನು ದೇವರೆಂದು ಇಟ್ಟುಕೊಳ್ಳಬಹುದು. ದೇವರೇ ಇಲ್ಲ ಎಂದು ಹೇಳುವ ಚಾರ್ವಾಕ/ನಾಸ್ತಿಕರಿಂದ ಹಿಡಿದು, ದೇವರಿಗೆ ಹಲವಾರು ಹೆಸರುಗಳನ್ನು ನೀಡಿ ಪೂಜಿಸುವವರು, ನಾವು ಪೂಜಿಸುವ ದೇವರೊಬ್ಬರೇ ದೇವರು, ಆ ದೇವರನ್ನು ಪೂಜಿಸದವರೆಲ್ಲಾ ಪಾಖಂಡಿಗಳು/ಕಾಫಿರರು ಎಂದು ಹೇಳುವವರು, ತಮ್ಮ ನಂಬಿಕೆಯನ್ನು ಇತರರ ಮೇಲೆ ಬಲವಂತವಾಗಿ ಹೇರಬಯಸುವವರು, ತಮ್ಮ ಧರ್ಮ ಪ್ರಚಾರಕ್ಕಾಗಿ ಇತರರ ಬಡತನ, ಅನಾರೋಗ್ಯ, ತಿಳುವಳಿಕೆಯ ಕೊರತೆಯನ್ನು ಬಂಡವಾಳ ಮಾಡಿಕೊಳ್ಳುವವರು, ಅನೇಕ ಆಮಿಷಗಳನ್ನು ಒಡ್ಡಿ ಮತಾಂತರದ ಮೂಲಕ ಸಂಖ್ಯೆ ಹೆಚ್ಚಿಸಿಕೊಳ್ಳುವ ಧಾವಂತದಲ್ಲಿರುವವರು, ಧರ್ಮಯುದ್ಧದ ಹೆಸರಿನಲ್ಲಿ ನರಮೇಧ ಮಾಡುವವರು, ಇತ್ಯಾದಿ, ಇತ್ಯಾದಿ ಮಾನವರ ಸಮೂಹದಲ್ಲಿ ನಾವು ಬಾಳುತ್ತಿದ್ದೇವೆ. ಜಗತ್ತಿನ ಸೃಷ್ಟಿ ಹೇಗಾಯಿತು ಎಂಬ ಬಗ್ಗೆ ವೈಜ್ಞಾನಿಕವಾಗಿ, ಧಾರ್ಮಿಕವಾಗಿ ವಿವೇಚಿಸುವ, ವಿಶ್ಲೇಷಿಸುವ ಕಾರ್ಯ ನಿರಂತರವಾಗಿ ನಡೆದಿದೆ. ಆದರೆ ಎಲ್ಲರೂ ಒಪ್ಪುವಂತಹ ವಿಚಾರವನ್ನು ಮುಂದಿಡಲು, ಆ ಅಗೋಚರ ಶಕ್ತಿಯ ಮೂಲವನ್ನು ತಿಳಿದು ಅರ್ಥೈಸುವ ಕಾರ್ಯ ಮಾಡಲು ಬಹಳ ಹಿಂದಿನ ಕಾಲದಿಂದಲೇ ನಿರಂತರ ಪ್ರಯತ್ನಗಳು, ಹುಡುಕಾಟಗಳು ಸಾಗಿವೆ, ಸಾಗುತ್ತಲೇ ಇವೆ, ಬಹುಷಃ ಸಾಗುತ್ತಲೇ ಇರುತ್ತದೆ.


     ಸಕಲ ಜೀವರಾಶಿಗಳಲ್ಲಿ ಮನುಷ್ಯ ಪ್ರಾಣಿ ಬಿಟ್ಟರೆ ಉಳಿದವು ದೇವರ ಬಗ್ಗೆ ತಲೆ ಕೆಡಿಸಿಕೊಂಡಿರಲಾರವು. ಮನುಷ್ಯ ಮಾತ್ರ ತಾನೂ ತಲೆ ಕೆಡಿಸಿಕೊಂಡು ಇತರರ ತಲೆಯನ್ನೂ ಕೆಡಿಸುತ್ತಿದ್ದಾನೆ. ಇದಕ್ಕೆ ಕಾರಣ ಅವನಿಗೆ ವಿವೇಚಿಸುವ ಶಕ್ತಿಯನ್ನು ದೇವರು ನೀಡಿರುವುದು. ಮನುಷ್ಯನಿಗೂ ಸಹ ಮೊದಲು ಈ ವಿಚಾರಗಳಿರಲಿಲ್ಲ. ವಿಕಾಸ ಹೊಂದುತ್ತಾ ಬಂದಂತೆ, ವಿಚಾರವಿಮರ್ಶೆ ಮಾಡುವ ಬುದ್ಧಿ ಬೆಳೆಯುತ್ತಾ ಹೋದಂತೆ, ತನ್ನನ್ನು ಮತ್ತು ಇತರ ಜೀವರಾಶಿಗಳನ್ನು ನಿಯಂತ್ರಿಸುವ ಶಕ್ತಿಯನ್ನು ಭಕ್ತಿಯಿಂದ, ಭಯದಿಂದ, ಗೌರವದಿಂದ ನೋಡುವ ಪ್ರವೃತ್ತಿ ಬೆಳೆದು ತನ್ನ ಕಲ್ಪನೆಯ ದೇವರುಗಳನ್ನು ಸೃಷ್ಟಿಸಿದ. ಮರ, ಗಿಡ, ಸೂರ್ಯ, ಚಂದ್ರ, ನಕ್ಷತ್ರ, ಗುಡುಗು, ಸಿಡಿಲು, ಮಿಂಚು, ಬೆಂಕಿ, ನೀರು, ಇತ್ಯಾದಿಗಳಲ್ಲಿ ದೇವರನ್ನು ಕಂಡು ಪೂಜಿಸತೊಡಗಿದ. ಇವುಗಳನ್ನೂ ಮೀರಿದ, ಇವುಗಳನ್ನೂ ನಿಯಂತ್ರಿಸುವ ಶಕ್ತಿಯೊಂದಿದೆ ಎಂದು ಅರಿತು ದೇವರ ಸಾಮ್ರಾಜ್ಯವನ್ನು ತನ್ನ ಕಲ್ಪನಾಶಕ್ತಿಯಲ್ಲಿ ಬೆಳೆಸತೊಡಗಿದ. ದೇವರ ಹೆಸರಿನಲ್ಲಿ ಕಥೆಗಳು, ಪುರಾಣಗಳು ಹುಟ್ಟಿಕೊಂಡವು. ದೇವರ ಮಹಿಮೆಯನ್ನು ಕೊಂಡಾಡಿದವು. ತಮ್ಮ ಕಲ್ಪನೆ, ನಂಬಿಕೆ, ಪ್ರದೇಶಗಳಿಗೆ ತಕ್ಕಂತೆ ಗುಂಪುಗಳಾಗಿ ಜಾತಿ, ಮತ, ಧರ್ಮಗಳು ಹುಟ್ಟಿಕೊಂಡವು. ನಂತರದಲ್ಲಿ ಹುಟ್ಟಿನ ಆಧಾರದಲ್ಲಿ ಮನುಷ್ಯನ ಜಾತಿ, ಧರ್ಮಗಳು ನಿಗದಿಸಲ್ಪಟ್ಟವು. ದೇವರು ಮನುಷ್ಯನನ್ನು ಸೃಷ್ಟಿಸಿದ. ಮನುಷ್ಯ ಹಲವು ದೇವರುಗಳನ್ನೇ ಸೃಷ್ಟಿಸಿದ.


     ಒಂದು ಹಂತದವರೆಗೆ ವಿವಿಧ ಆಚಾರ-ವಿಚಾರಗಳನ್ನು ಒಪ್ಪಿಕೊಳ್ಳಬಹುದು. ಆದರೆ, ನಾವು ಹೇಳುವುದೇ ಸರಿ, ಇತರರು ಹೇಳುವುದು ತಪ್ಪು, ದೇವರು ಹೀಗೆಯೇ ಇದ್ದಾನೆ, ನಾವು ಪಾಲಿಸುವ ಧರ್ಮ/ಜಾತಿ/ಮತವೇ ನೈಜವಾದದ್ದು ಎಂಬ ವಾದ ಒಪ್ಪುವುದು ಕಷ್ಟ. ಇತರ ವಿಚಾರಗಳನ್ನು ಹೊಂದಿರುವವರು ಧರ್ಮದ್ರೋಹಿಗಳು, ಶಿಕ್ಷಾರ್ಹರು, ಅವರು ತಪ್ಪಿಗೆ ಶಿಕ್ಷೆ ಅನುಭವಿಸಲೇಬೇಕು, ನಮ್ಮ ಧರ್ಮಾನುಯಾಯಿಗಳಾಗಲೇಬೇಕು, ವಿಚಾರವನ್ನು ಒಪ್ಪಲೇಬೇಕು, ಎಂಬ ವಿಚಾರಧಾರೆ ಎಷ್ಟರ ಮಟ್ಟಿಗೆ ಸರಿ? ಅವರವರ ವಿಚಾರ ಅವರಿಗಿರಲಿ. ಅದನ್ನು ಕಡ್ಡಾಯವಾಗಿ ಇತರರ ಮೇಲೆ ಹೇರುವುದು ತರವಲ್ಲ. ತಮ್ಮ ಮತ/ಧರ್ಮ ಬೆಳೆಸಲು ಆರೋಗ್ಯ/ಶಿಕ್ಷಣ/ ಧಾರ್ಮಿಕ/ ವ್ಯಾವಹಾರಿಕ ಮಾಧ್ಯಮಗಳೆಲ್ಲವನ್ನೂ ಬಳಸಿಕೊಳ್ಳುವುದರ ಜೊತೆಗೆ ಬಡತನ, ಅಜ್ಞಾನಗಳನ್ನೂ ದುರ್ಬಳಕೆ ಮಾಡಿಕೊಳ್ಳುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಧರ್ಮಯುದ್ಧದ ಹೆಸರಿನಲ್ಲಿ ಇತರರನ್ನು ಮಟ್ಟ ಹಾಕುವ, ಬೆದರಿಕೆ ಹಾಕುವ, ಭಯೋತ್ಪಾದನೆ ನಡೆಸುವ ಕುರುಡು ಮತಾಂಧರ ಸಂಖ್ಯೆ ಸಹ ಕಡಿಮೆಯೇನಿಲ್ಲ. ವಿಗ್ರಹಾರಾಧನೆ ಮಾಡದಿರುವವರು ಧರ್ಮದ ಹೆಸರಿನಲ್ಲಿ ದೇವಸ್ಥಾನಗಳನ್ನು, ಪೂಜಾಸ್ಥಾನಗಳನ್ನು ಧ್ವ್ವಂಸ ಮಾಡಿ ಅನೇಕ ಅಮೂಲ್ಯ ಕಲಾಕೃತಿಗಳ ನಾಶ ಮಾಡುವುದನ್ನು, ಅದೇ ರೀತಿ ಒಂದು ಗುಂಪಿನವರು ಇನ್ನೊಂದು ಗುಂಪಿನೊಂದಿಗೆ ಘರ್ಷಣೆ ನಡೆಸುವುದನ್ನು ನಾಗರಿಕ ಸಮಾಜ ಒಪ್ಪಲಾರದು. ಕಲಾಕೃತಿಗಳನ್ನು ನಿರ್ಮಿಸುವುದು ಸುಲಭದ ಕೆಲಸವಲ್ಲ; ಆದರೆ ಹಾಳು ಮಾಡುವುದು ಸುಲಭ. ಸ್ವತಃ ಜೀವ ಕೊಡಲಾರದವರು ಜೀವ ತೆಗೆಯುವುದು ಎಷ್ಟರ ಮಟ್ಟಿಗೆ ಸರಿ? ಇಂತಹ ಪ್ರಯತ್ನಗಳಿಂದ ಅವರು ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬಹುದು. ತರ್ಕಕ್ಕಾಗಿ ಕಾಲಘಟ್ಟದಲ್ಲಿ ಎಲ್ಲರೂ ಒಂದೇ ಮತ/ಜಾತಿ/ಧರ್ಮಕ್ಕೆ ಸೇರಿದರು ಎಂದಿಟ್ಟುಕೊಳ್ಳೋಣ. ಆಮೇಲೆ ಏನು ಮಾಡುವುದು? ವಾಸ್ತವವಾಗಿ ಆಗ ಘಟಿಸಬಹುದಾದುದೇನೆಂದರೆ ಅವರಲ್ಲೇ ಪುನಃ ಒಳಪಂಗಡಗಳ ಸೃಷ್ಟಿಯಾಗಿ ತಮ್ಮದೇ ಮೇಲು ಎಂದು ವಾದಿಸತೊಡಗುವರು. ದೇವರ ಕೊಡುಗೆಯಾದ ವೈಚಾರಿಕ ಶಕ್ತಿಯನ್ನು ಮೊಟಕುಗೊಳಿಸುವ, ಇದಕ್ಕೂ ಮುಂದೆ ಯೋಚಿಸಬಾರದು ಎಂದು ಬೇಲಿ ಹಾಕುವ ಇಂತಹ ಪ್ರವೃತ್ತಿಗಳಿಂದ ಒಂದು ರೀತಿಯಲ್ಲಿ ಪ್ರಗತಿಗೆ ಹಿನ್ನಡೆಯಾಗುತ್ತದೆ ಎಂದು ಅನ್ನಿಸುವುದಿಲ್ಲವೇ?

     'ಸಂಕಟ ಬಂದಾಗ ವೆಂಕಟರಮಣ' ಎಂಬಂತೆ ನಾವು ಕಷ್ಟದ ಪರಿಸ್ಥಿತಿಯಲ್ಲಿ ದೇವರನ್ನು ನೆನೆಯುವುದೇ ಹೆಚ್ಚು. ತೊಂದರೆ, ತಾಪತ್ರಯಗಳಿಲ್ಲದವರು ಯಾರಿದ್ದಾರೆ? ಹೀಗಾಗಿ ಯಾರೂ ಸಹಾಯಕ್ಕೆ ಬಾರದಿದ್ದಾಗ ಸಹಾಯ ಮಾಡು ಎಂದು ದೇವರನ್ನು ಬಿಟ್ಟು ಇನ್ನು ಯಾರನ್ನು ಕೋರಬೇಕು? ಈ ಕಾರಣಕ್ಕಾಗಿಯಾದರೂ ದೇವರು ನಮಗೆ ಬೇಕು. ಒಂದೆರಡು ಉದಾಹರಣೆಗಳನ್ನು ಗಮನಿಸೋಣ. ರಸ್ತೆ ಅಪಘಾತದಲ್ಲಿ ಇರುವ ಒಬ್ಬನೇ ೬ ವರ್ಷದ ಮಗ ತೀವ್ರವಾಗಿ ಪೆಟ್ಟು ಬಿದ್ದು ಆಸ್ಪತ್ರೆಗೆ ಸೇರಿಸಿದ ತಂದೆ-ತಾಯಿಯರ ಗೋಳು ಹೇಳತೀರದು. ತುಂಬಾ ರಕ್ತಸ್ರಾವವಾಗಿ ಮಗುವಿಗೆ ತುರ್ತಾಗಿ ರಕ್ತ ಕೊಡಬೇಕಾಗಿದೆ. ತಂದೆ ನೀಡಿದ ರಕ್ತದ ಪ್ರಮಾಣ ಸಾಲದು. ಆಸ್ಪತ್ರೆಯಲ್ಲಿ ಮಗುವಿಗೆ ಬೇಕಾದ ವರ್ಗದ ರಕ್ತ ಇಲ್ಲ. ಬೇರೆಲ್ಲಾ ಕಡೆ ರಕ್ತ ಹೊಂದಿಸಲು ಪರದಾಡಿದರೂ ಫಲ ಸಿಗಲಿಲ್ಲ. ಏನು ಮಾಡಲೂ ತೋಚದ ಆ ಸಂದರ್ಭದಲ್ಲಿ ಅಕಾಸ್ಮಾತ್ತಾಗಿ ಅಲ್ಲಿಗೆ ಬಂದಿದ್ದವರೊಬ್ಬರಿಗೆ ವಿಷಯ ತಿಳಿದು ಅವರ ರಕ್ತದ ವರ್ಗವೂ ಮಗುವಿನ ರಕ್ತದ ವರ್ಗಕ್ಕೆ ಸೇರಿದ್ದು ಅವರು ರಕ್ತ ನೀಡಿದ್ದಲ್ಲದೇ ತಮ್ಮ ಸಹೋದರನನ್ನೂ ಕರೆಸಿ ಅವರಿಂದಲೂ ರಕ್ತದಾನ ಮಾಡಿಸಿದರು. ಮಗುವಿನ ಪ್ರಾಣ ಉಳಿಯಿತು. ಮಗುವಿನ ತಂದೆ, ತಾಯಿ ಆ ವ್ಯಕ್ತಿಯ ಕಾಲಿಗೆ ಬಿದ್ದು ಹೇಳಿದರು -'ನೀವೇ ನಮ್ಮ ಪಾಲಿನ ದೇವರು!'.


     ಸುಮಾರು ೨೫ವರ್ಷಗಳ ಹಿಂದಿನ ನನ್ನ ಸ್ವಂತದ ಒಂದು ಅನುಭವ ಹೇಳುವೆ. ನಾನು ಹಾಸನ ಜಿಲ್ಲೆಯ ಹಳ್ಳಿಮೈಸೂರಿನಲ್ಲಿ ಉಪತಹಸೀಲ್ದಾರನಾಗಿದ್ದಾಗ ಒಂದು ಮಧ್ಯಾಹ್ನ ಒಬ್ಬ ಸುಮಾರು ೫೦ ವರ್ಷದ ಸುಬ್ಬಯ್ಯ ಎಂಬ ವ್ಯಕ್ತಿ ಕಛೇರಿಗೆ ಬಂದ. ಅಂದು ಹೆಚ್ಚಿನ ಕೆಲಸವಿಲ್ಲದ್ದರಿಂದ ಅವನೊಂದಿಗೆ ಕುಶಲೋಪರಿ ಮಾತನಾಡುತ್ತಿದ್ದೆ. ತೊಗಲು ಗೊಂಬೆ ಆಡಿಸುವ ವೃತ್ತಿಯ ಆತ ಹಲವಾರು ಪೌರಾಣಿಕ, ಐತಿಹಾಸಿಕ ಸಂಗತಿಗಳನ್ನು ರಾಗವಾಗಿ ಜಾನಪದ ಧಾಟಿಯಲ್ಲಿ ಹಾಡಿದ ಕುಶಲತೆಗೆ ಬೆರಗಾದೆ. ಅನಕ್ಷರಸ್ತನಾದರೂ ಅದ್ಭುತ ಕಲಾವಿದ ಅವನಲ್ಲಿ ನನಗೆ ಕಂಡ. ಸರ್ಕಾರ ಅವನಿಗೆ ಮಂಜೂರು ಮಾಡಿದ್ದ ೪ ಎಕರೆ ಜಮೀನನ್ನು ಗ್ರಾಮದ ಬಲಾಢ್ಯರೊಬ್ಬರು ಆಕ್ರಮಿಸಿಕೊಂಡು ಅನುಭವಿಸುತ್ತಿದ್ದರು. ವಂಶದ ಕಾಯಕವಾಗಿ ತೊಗಲು ಗೊಂಬೆ ಆಡಿಸಿಕೊಂಡು ಊರೂರು ಅಲೆಯುತ್ತಿದ್ದರಿಂದ ಜಮೀನು ಉಳಿಸಿಕೊಳ್ಳಲು ಅವನಿಗೆ ಆಗಿರಲಿಲ್ಲ. ಈ ಸಮಸ್ಯೆಯ ಸಲುವಾಗಿಯೇ ಆತ ನನ್ನನ್ನು ಭೇಟಿ ಮಾಡಲು ಬಂದಿದ್ದ. ವಿವರ ಪಡೆದು ನಾನೇ ಖುದ್ದು ಗ್ರಾಮಕ್ಕೆ ಹೋಗಿ ಜಮೀನನ್ನು ಅವನಿಗೆ ಬಿಡಿಸಿಕೊಟ್ಟೆ. ನನ್ನ ಪ್ರಯತ್ನದಿಂದ ಆ ವರ್ಷದ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಗೊಂಬೆಸುಬ್ಬಯ್ಯನನ್ನು ಸನ್ಮಾನಿಸಿ ಗೌರವಿಸಲಾಯಿತು. ಕಂದಾಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಹಾಗೂ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿಯೂ ನಾನೇ ಆಗಿದ್ದರಿಂದ ಸಂಘಗಳ ವತಿಯಿಂದಲೂ ತೊಗಲು ಗೊಂಬೆ ಆಡಿಸಲು ಅಗತ್ಯವಾಧ ಉತ್ತಮ ಗುಣಮಟ್ಟದ ಪರದೆ, ಗ್ಯಾಸ್ ಲೈಟು, ತಬಲ, ಮುಂತಾದ ವಾದ್ಯ ಪರಿಕರಗಳೊಂದಿಗೆ ಧನಸಹಾಯವನ್ನೂ ಸಹ ಮಾಡಿಸಿದೆ. ಆ ಸಂದರ್ಭದಲ್ಲಿ ಆತ ನನಗೆ ಕೈ ಮುಗಿದು ಹೇಳಿದ್ದು: 'ಯಪ್ಪಾ, ನೀವೇ ನಮ್ಮ ದ್ಯಾವರು!'.


     ಮೇಲೆ ತಿಳಿಸಿದಂತಹ ಅನೇಕ ಉದಾಹರಣೆಗಳು ನಿಮ್ಮ ಗಮನಕ್ಕೂ ಬಂದಿರಬಹುದು. ನಮ್ಮ ನಿಮ್ಮೆಲ್ಲರ ಅನುಭವದಂತೆ ಕಷ್ಟದಲ್ಲಿದ್ದಾಗ, ಬೇರೆ ಯಾವುದೇ ಸಹಾಯ ದೊರಕದಿದ್ದಾಗ ಅನಿರೀಕ್ಷಿತ ನೆರವು ನೀಡುವವರನ್ನು ದೇವರು ಎಂತಲೋ ಅಥವಾ ದೇವರೇ ಅವರ ಮೂಲಕ ಮಾಡಿಸಿದ ಸಹಾಯ ಎಂತಲೋ ಭಾವಿಸುವುದು ಸುಳ್ಳಲ್ಲ. ಹಸಿವಿನಿಂದ ಕಂಗೆಟ್ಟು ಹಪಹಪ ಪಡುತ್ತಿರುವವರಿಗೆ ತಿನ್ನಲು ಏನಾದರೂ ಕೊಡುವವರೇ ದೇವರು. ಅಂದರೆ ದೇವರು ಆಪದ್ಭಾಂದವನೆಂದು ಎಲ್ಲರೂ ಒಪ್ಪುತ್ತೇವಲ್ಲವೇ?


     ಸೂರ್ಯನ ಕಿರಣಗಳನ್ನು ಮಸೂರದ (ಲೆನ್ಸ್) ಮೂಲಕ ಹಾಯಿಸಿ ಕೇಂದ್ರೀಕರಿಸಿ ಒಣಗಿದ ಕಾಗದ, ತರಗೆಲೆಗಳಿಗೆ ಬೆಂಕಿ ಹೊತ್ತಿಸಲು ಸಾಧ್ಯವಿರುವಂತೆಯೇ, ನಮ್ಮ ಮನಸ್ಸನ್ನು ನಿಯಂತ್ರಿಸಿ ಒಂದು ವಿಷಯದ ಕುರಿತು ಕ್ರೋಢೀಕರಿಸಿ ಪ್ರಾರ್ಥಿಸಿದಾಗ, ನಾವು ಎಷ್ಟರ ಮಟ್ಟಿಗೆ ಆರೀತಿ ಮಾಡಲು ಸಾಧ್ಯವಿದೆಯೋ ಅಷ್ಟರ ಮಟ್ಟಿಗೆ ಸಫಲತೆ ಕಂಡುಕೊಳ್ಳಬಹುದೆಂಬುದು ನನ್ನ ವೈಯಕ್ತಿಕ ಅನುಭವ. ಅನಿರೀಕ್ಷಿತವಾಗಿ ಕಷ್ಟಕರ ಪರಿಸ್ಥಿತಿಗೆ ಸಿಲುಕಿ ಹತಾಶನಾಗಿದ್ದಾಗ, ಅವಮಾನಿತನಾಗುವುದಕ್ಕಿಂತ ಆತ್ಮಹತ್ಯೆ ಮಾಡಿಕೊಳ್ಳುವುದು ಒಳಿತೆಂದು ಭಾವಿಸಿದ ಸಂದರ್ಭವೊಂದರಲ್ಲಿ ನಾನು ದೇವಸ್ಥಾನಕ್ಕೆ ಹೋಗಿ ಅಡ್ಡಬೀಳಲಿಲ್ಲ. ಆ ಸಮಯದಲ್ಲಿ ನಾನು ಸುಬ್ರಹ್ಮಣ್ಯದಲ್ಲಿ ಕೊಠಡಿಯೊಂದರಲ್ಲಿ ವಾಸವಿದ್ದೆ. ದೇವಸ್ಥಾನದ ಹೊರಗಿನ ಕಟ್ಟೆಯೊಂದರ ಮೇಲೆ ಕುಳಿತು ನನ್ನನ್ನು ಪಾರು ಮಾಡುವಂತೆ ಅಗೋಚರ ಶಕ್ತಿಯಲ್ಲಿ ತದೇಕ ಚಿತ್ತದಿಂದ ಆರ್ತನಾಗಿ, ಮೌನವಾಗಿ ಪ್ರಾರ್ಥಿಸಿದ್ದೆ. ನನ್ನ ಪ್ರಾರ್ಥನೆಯ ಫಲವೋ, ದೇವರ ಸಹಾಯವೋ ಎಂಬಂತೆ ನನ್ನನ್ನು ಮುಸುಕಿ ಮುಳುಗಿಸಲಿದ್ದ ಕಾರ್ಮೋಡ ಸರಿದು ಹೋಗಿದ್ದಂತೂ ಸತ್ಯ. ಒಮ್ಮೆಯಾದರೆ ಆಕಸ್ಮಿಕವೆನ್ನಬಹುದಿತ್ತು. ಹಲವಾರು ಸಂದರ್ಭಗಳಲ್ಲಿ ಮನಸ್ಸು ನಿಯಂತ್ರಿಸಿ ಮಾಡಿದ ಏಕಚಿತ್ತದ ಧ್ಯಾನ ನನಗೆ ಪರಿಹಾರದ ದಾರಿ ತೋರಿದೆ, ಸಾಂತ್ವನ ನೀಡಿದೆ. ನನಗೆ ದೇವರ ಕುರಿತು ಸ್ಪಷ್ಟ ಕಲ್ಪನೆಯಿಲ್ಲ, ಅಭಿಪ್ರಾಯವಿಲ್ಲ. ಯಾರನ್ನು ಪ್ರಾರ್ಥಿಸುತ್ತಿದ್ದೇನೆ, ಆ ದೇವರು ಹೇಗಿದ್ದಾನೆ ಎಂಬುದೂ ಗೊತ್ತಿಲ್ಲ. ಆದರೆ ಅಗೋಚರ, ಕಲ್ಪನೆ/ತರ್ಕಕ್ಕೆ ಮೀರಿದ, ನಮ್ಮನ್ನೆಲ್ಲಾ ನಿಯಂತ್ರಿಸುವ ಶಕ್ತಿಯೊಂದಿದೆ ಎಂಬ ನಂಬಿಕೆ ಮಾತ್ರ ಧೃಢವಾಗಿದ್ದು ನಾನು ಪ್ರಾರ್ಥಿಸಿದ್ದು, ಪ್ರಾರ್ಥಿಸುವುದು ಆ ಶಕ್ತಿಯನ್ನೇ! ಹಾಗಾದರೆ ನಮ್ಮ ಪ್ರಾರ್ಥನೆ ಸಫಲಗೊಳಿಸಿಕೊಳ್ಳಬಲ್ಲ ಶಕ್ತಿ ನಮ್ಮೊಳಗೇ ಇದೆಯೇ? ಹೌದಾದರೆ ದೇವರು ನಮ್ಮೊಳಗೂ ಇದ್ದಾನಲ್ಲವೇ?
. . . . (ಮುಂದುವರೆದಿದೆ).
*******************
-ಕ.ವೆಂ.ನಾಗರಾಜ್.