Pages

Tuesday, March 13, 2012

ಆರ್ಯರು ಭಾರತಕ್ಕೆ ವಲಸೆ ಬಂದವರೇ ?(ವೇದದ ನೆರಳಿನಲ್ಲಿರುವ ವಾದ)

ಆರ್ಯರು ಭಾರತಕ್ಕೆ ವಲಸೆ ಬಂದವರೆ ? ಈ ಪ್ರಶ್ನೆಯನ್ನು ಕೇಳೆದೊಡನೆ ಕೆಲವರಿಗೆ ಸಿಟ್ಟು ಬರುತ್ತದೆ, ಮತ್ತೆ ಕೆಲವರಿಗೆ ರೋಮಾಚನವಾಗುತ್ತದೆ. ಯಾರಿಗೆ ಸಿಟ್ಟು ಯಾರಿಗೆ ರೋಮಾಂಚನ ಎಂದು ಗೊತ್ತಿದ್ದವರಿಗೆ ತಿಳಿಸಿ ಹೇಳಬೇಕಾಗಿಲ್ಲ. ಸರಳವಾಗಿ ಹೇಳಬೇಕೆಂದರೆ ಕೆಲವು ಸಮುದಾಯದವರಿಗೆ ಇದನ್ನು ಒಪ್ಪಿಕೊಂಡರೆ ನಾವು ವಿದೇಶೀಯರಾಗುತ್ತೇವೆ ಎಂದು ಕೋಪ, ಕೆಲವು ಸಮುದಾಯದವರಿಗೆ ಇದರಿಂದ ನಾವು ಈ ದೇಶದ ಮೂಲನಿವಾಸಿಗಳು ಎಂದು ಸಿದ್ದವಾಯಿತು ಎಂದು ರೋಮಾಂಚನ, ಈ ಸಮುದಾಯದವರಲ್ಲದೆ ಬಲ ಪಂಥಿಯರ ಮಸಸ್ಸಿನ ಮೇಲೆ ಇದು ಉಂಟು ಮಾಡುವ ಗಾಯ ಅಷ್ಟಿಷ್ಟಲ್ಲ ಮತ್ತು ಇದರಿಂದ ಎಡ ಪಂಥೀಯರಿಗಾಗುವ ಉನ್ಮಾದಾನಂದಕ್ಕೇನು ಕಡಿಮೆಯಿಲ್ಲ. ಇದಕ್ಕೆಲ್ಲ ಕಾರಣ ತಿಳಿದೇ ಇದೆ.
ಬ್ರಿಟೀಷರು ಭಾರತವನ್ನು ಒಡೆದು ಆಳಲು ಸೃಷ್ಟಿಸಿದ ಸಿದ್ದಾಂತ ಎಂದು ಕೆಲವರ ಭಾವನೆ. ಹಾಗದರೆ ಇದು ಬ್ರಿಟೀಷರ ಸೃಷ್ಟಿಯೇ ? ಇತಿಹಾಸವನ್ನು ಪಾರದರ್ಶಕವಾಗಿ ನೋಡಿದರೆ ಇದು ಬ್ರಿಟೀಷರು ಸೃಷ್ಟಿಸಿದ ಸಿದ್ದಾಂತ ಎಂಬುದಕ್ಕೆ ಎಲ್ಲೂ ಆಧಾರ ದೊರೆಯುವುದಿಲ್ಲ. ನಮ್ಮನ್ನು ಒಡೆದು ಆಳಲು ಇಂತಹ ಒಂದು ಸಿದ್ದಾಂತವನ್ನು ಸೃಷ್ಟಿಸುವ ಅಗತ್ಯ ಬ್ರಿಟೀಷರಿಗೇನು ಇರಲಿಲ್ಲ, ನಮ್ಮನು ಒಡೆದು ಆಳಲು ಬೇಕಾದ ಪರಿಸರ ನಮ್ಮಲ್ಲಿ ಬಹಳವಿತ್ತು ಇಂದಿಗೂ ಇದೆ. ಆದರೆ ಬ್ರಿಟೀಷರು ನಮ್ಮನ್ನು ಒಡೆದು ಆಳಲು ಈ ಸಿದ್ದಾಂತವನ್ನು ಬಳಸಿಕೊಂಡರಲ್ಲ ಅದಕ್ಕೆ ಬೇಕಾದಷ್ಟು ಪುರಾವೆಗಳು ಇತಿಹಾಸದಲ್ಲಿ ದೊರೆಯುತ್ತವಲ್ಲ ಎಂದರೆ ಹೌದು ಎಂದು ಹೇಳಲೇಬೇಕು, ಬ್ರಿಟೀಷರು ಸೃಷ್ಟಿಸಿದರು ಮತ್ತು ಉಪಯೋಗಿಸಿಕೊಂಡರು ಎನ್ನುವುದರ ನಡುವೆ ಬಹಳಷ್ಟು ಅರ್ಥ ವ್ಯತ್ಯಾಸವು ಎಂತಹವರಿಗೂ ಗೊತ್ತಾಗುತ್ತದೆ, ಅಲ್ಲವೇ ಉಪಯೋಗಿಸಲು ನಾವು ಏನನ್ನೂ ಸೃಷ್ಟಿಸಬೇಕಾಗಿಲ್ಲ ಮತ್ತೊಬ್ಬರದನ್ನೂ ಉಪಯೋಗಿಸಲು ಬರುತ್ತದೆ. ಇತಿಹಾಸದಲ್ಲಿ ಬ್ರಿಟೀಷರು ಬೇರಯವರ ಸಿದ್ದಾಂತವನ್ನು ಉಪಯೋಗಿಸಿದ್ದಕ್ಕೆ ಆಧಾರ ದೊರೆಯುತ್ತದೆಯೇ ಹೊರತು ಸೃಷ್ಟಿಸಿ ಉಪಯೋಗಿಸಿದರು ಎನ್ನುವುದಕ್ಕಲ್ಲ.
ಹಾಗಾದರೆ ಈ ಸಿದ್ದಾಂತ ಹೇಗೆ ಸೃಷ್ಟಿಯಾಯಿತು ? ಯಾವುದೇ ಜ್ಞಾನ ಶಾಖೆಯ ಪರಿಧಿಯಲ್ಲಿ ಬರುವ ಯಾವುದೇ ಸಿದ್ದಾಂತ/ವಾದ ರಾತ್ರಿ ಬೆಳಗಾಗುವುದೊರಳಗೆ ಸೃಷ್ಟಿಯಾಗಲು ಸಾಧ್ಯವಿಲ್ಲ, ವಾಸ್ತವವಾಗಿ ಈ ಸಿದ್ದಾಂತವು/ವಾದವು ಬಾರತದ ಚರಿತ್ರೆಯ ಪರಿಧಿಯಲ್ಲಿ ಬರುವಂತಹದ್ದು. ಆದ್ದರಿಂದ ಸಿದ್ದಾಂತವನ್ನು ಪ್ರತಿಪಾದಿಸುವವರೂ ಅದಕ್ಕೆ ಬೇಕಾದ ಬಲವಾದ ಆಧಾರ ಸಾಮಗ್ರಿಗಳನ್ನು ಹೊಂದಿರಬೇಕಾಗುತ್ತದೆ, ಮತ್ತು ಅದನ್ನು ತಕ್ಕ ಸಮರ್ಥನೆಗಳೊಂದಿಗೆ ಚರಿತ್ರೆಯ ಶಿಸ್ತಿನ ಚೌಕಟ್ಟಿನಲ್ಲಿ ಸಾಧಿಸಬೇಕಾಗುತ್ತದೆ. ಆರ್ಯ ವಲಸೆ ಸಿದ್ದಾಂತ ದಂತಕಥೆಯಲ್ಲದಂತಕಥೆಗಳುನ್ನು ದಿನ ಬೆಳಗಾಗುವುದೊರಳಗೆ ಹೇಣೆಯಬಹುದು, ಚರಿತ್ರೆಯ ಸಿದ್ದಾಂತವನ್ನು ಹಾಗೆ ಎಣೆಯಲಾಗದು, ಅದೂ ಚರಿತ್ರೆಯ ಶಿಸ್ತಿನ ಪರಿಧಿಯಲ್ಲಿ ಬರುವ ಒಂದು ಸಿದ್ದಾಂತ/ವಾದವನ್ನು ಮನಸೋ ಇಚ್ಛೇ ಪೂರ್ವಾಗ್ರಹ ಪೀಡಿತವಾಗಿ, ದ್ವೇಷದಿಂದ ಮಂಡಿಸಲು ಸಾಧ್ಯವಿಲ್ಲ ಎಂದು ಚರಿತ್ರೆಯನ್ನು ಓದಿದ ಎಲ್ಲರೂ ಬಲ್ಲ ಸತ್ಯ.
ಹಾಗಾದರೆ ಈ ಸಿದ್ದಾಂತ ಸತ್ಯವೇ ? ಚರಿತ್ರೆಯಲ್ಲಿ ಸತ್ಯ ಎಂದು ಹೇಳಲು ಬೇಕಾದ ಅಗತ್ಯವಾದ ಪರಿಪೂರ್ಣ ಆಧಾರಗಳು ದೊರೆತ ಮೇಲೆ ಸಂಶೋಧಕರು ಅದನ್ನು ಪರ್ಯಾಲೋಚಿಸಿ ಮಂಡಿಸಿ ನಿಷ್ಕರ್ಷಿಸದ ಮೇಲೆಯೇ ಯಾವುದೇ ಒಂದು ಸಿದ್ದಾಂತದ ಸತ್ಯಾಸತ್ಯತೆ ಗೊತ್ತಾಗುವುದು ಅಂದರೆ ಅಂತಹ ಸಿದ್ದಾಂತವನ್ನು ಮಂಡಿಸಲು ಪರಿಪೂರ್ಣವಾದ ಆಧಾರಗಳು ದೊರೆಯಲೇಬೇಕು, ಪರಿಪೂರ್ಣ ಆಧಾರ ದೊರೆಯದ ಹೊರತೂ ಚರಿತ್ರೆಯ ಯಾವೊಂದು ಸಿದ್ದಾಂತವು ಪರಿಪೂರ್ಣವಾಗುವುದಿಲ್ಲ, ಅದರಂತೆ ಆರ್ಯರ ವಲಸೇ ಸಿದ್ದಾಂತವೂ ಕೂಡ,
ಆರ್ಯ ವಲಸೆ ಸಿದ್ದಾಂತ ಕೆಲವರಿಗೆ ಚರ್ವಣ ಚರ್ವಿತ ಹಳಸಲು ಸಿದ್ದಾಂತ, ಇನ್ನು ಕೆಲವರಿಗೆ ಸಂಶೋಧನೆ ಮಾಡಲು ಉತ್ತವವಾದ ಪೂರಕ ವಸ್ತು, ಇವೆಲ್ಲಕ್ಕಿಂತ ಹೆಚ್ಚಾಗಿ ಇದು ಬಳಕೆಯಾದದ್ದು ಸಮುದಾಯದ ನಡುವೆ ದ್ವೇಷ ಹುಟ್ಟಿಸಲು, ಒಡೆದು ಆಳಲು ಎಂಬುದಂತು ಚಾರಿತ್ರಿಕ ಸತ್ಯ, ಒಟ್ಟಿನಲ್ಲಿ ಸ್ವಾರ್ಥಿಗಳಿಗೆ, ಭಾರತ ವಿರೋಧಿಗಳಿಗೆ/ದ್ವೇಷಿಗಳಿಗೆ ಕಾಮಧೇನು, ಕಲ್ಪವೃಕ್ಷ ಎಲ್ಲವೂ ಹಿಂದೆಯೂ ಮುಂದೆಯೂ ಕೂಡ.
ಹಾಗಾದರೆ ನೀವು ಇಲ್ಲಿ ಏನನ್ನು ಹೇಳಲು ಹೊರಟಿದ್ದೀರಿ ಎಂದು ನನ್ನನ್ನು ಪ್ರಶ್ನಿಸಬಹುದು. ನಾನು ಇಲ್ಲಿ ಬರೆಯಹೊರಡಟಿರುವುದು ಆರ್ಯ ವಲಸೆ ಸಿದ್ದಾಂತದ ಪ್ರಾಮಾಣಿಕತೆಯನ್ನು ಕುರಿತಲ್ಲ, ಸಮರ್ಥನೆಯನ್ನಲ್ಲ, ಖಂಡನೆಯನ್ನಲ್ಲ, ಪರಾನರ್ಶೆ, ಪರೀಕ್ಷೆ, ನಿಷ್ಕರ್ಷೆ, ಚರ್ಚೆ ಯಾವುದನ್ನೂ ಅಲ್ಲ. ಹಾಗಾದರೆ ಏನನ್ನು ? ವಾಸ್ತವನ್ನು ಮಾತ್ರ, ಹಾಗಾದರೆ ಏನು ಈ ವಾಸ್ತವ ?
ನಾನು ಮೊದಲೇ ಹೇಳಿದಂತೆ ಚರಿತ್ರೆಯ ಶಿಸ್ತಿನ ಪರಿಧಿಯಲ್ಲಿ ಬರುವ ಯಾವುದೇ ಸಿದ್ದಾಂತ/ವಾದ ರಾತ್ರಿ ಕಳೆದು ಬೆಳಗಾಗುವುದೊರಳಗೆ ಹುಟ್ಟುಲು ಸಾಧ್ಯವಿಲ್ಲ, ನಿಜವಾಗಿ ಆರ್ಯ ವಲಸೆ ಸಿದ್ದಾಂತವು/ವಾದವು ಮೊಳಕೆಯೊಡೆದದ್ದು ಭಾರತೀಯ ಭಾಷೆಗಳನ್ನು ಅದರನ್ನು ಮುಖ್ಯವಾಗಿ ಸಂಸ್ಕೃತವನ್ನು ಮತ್ತು ಅದರಲ್ಲಿರುವ ಶಾಸ್ತ್ರಗಳನ್ನು ಅಧ್ಯಯನ ಮಾಡಲು ಹೊರಟ ವಿದೇಶೀ ವಿದ್ವಾಂಸರಲ್ಲಿ, ಕಾರಣ ಸಂಸ್ಕೃತವನ್ನು ಒಳಗೊಂಡಂತೆ ಭಾರತೀಯ ಆರ್ಯಭಾಷೆಗಳಿಗೂ ಮತ್ತು ವಿದೇಶೀ ಭಾಷೆಗಳಿಗೂ ಇರುವು ತುಲಾನಾತ್ಮಕ ಸಾದೃಶ್ಯ, ಗ್ರೀಕ್ ಕಾವ್ಯಗಳಿಗೂ ಭಾರತದ ರಾಮಾಯಣ ಮಹಾ ಭಾರತಾದಿ ಕಾವ್ಯಗಳಿಗೂ ಕಥೆಯಲ್ಲಿ ಕಂಡು ಬರುವ ಹೋಲಿಕೆ, ಪೌರ್ವಾತ್ಯ ಹಾಗೂ ಪಾಶ್ಚಾತ್ಯದ ಅನೇಕ ಜ್ಞಾನ ಶಾಖೆಗಳ ಮತ್ತು ಕಲೆಗಳ ನಡುವೆ ಕಂಡು ಬಂದ ಸಾದೃಶ್ಯಗಳು ಮತ್ತು ಅದಕ್ಕೆ ವೇದದಲ್ಲೇ ಆಧಾರ ಎಂದು ಹೇಳಲಾಗುವ ಕೆಲವು ಮಂತ್ರಗಳು ಇವೆಲ್ಲವೂ ಸೇರೆ ಅವರಲ್ಲಿ ಆರ್ಯ ವಲಸೆ ಸಿದ್ದಾಂತ/ವಾದ ಮೊಳಕೆಯೊಡೆಯಲು ಕಾರಣವಾದವು. ಆದ್ದರಿಂದ ಈ ಸಿದ್ದಾಂತದ ಸತ್ಯಾಸತ್ಯತೆ ಏನೇ ಇದ್ದರೂ ವಿದ್ವಾಂಸರು ಈ ಸಿದ್ದಾಂತವನ್ನು ಮಂಡಿಸಲು ವೇದದ ನೆರಳಿನಲ್ಲಿ ಉಪಯೋಗಿಸಿದ ಆಧಾರಗಳನ್ನು ಡಾ. ಎನ್ ಎಸ್ ಅನಂತರಂಚಾರ್ ಅವರು ತಮ್ಮ ವೈದಿಕ ಸಾಹಿತ್ಯ ಚರಿತ್ರೆ ಎಂಬ ಗ್ರಂಥದಲ್ಲಿ ಸಂಗ್ರಹಿಸಿದ್ದಾರೆ, ವೇದದ ನೆರಳಿನಲ್ಲಿ ಇರುವ ವಾದದ ಪರಿಚಯ ಇರಲಿ ಎಂಬುದೇ ನನ್ನ ಉದ್ದೇಶ, ಆದ್ದರಿಂದ ಡಾ. ಅನಂತರಂಗಾಚಾರ್ ಅವರ ಲೇಖನವನ್ನು ಯಥಾವತ್ತಾಗಿ ನೀಡಲಾಗಿದೆ. ಆದರೆ ಒಂದು ಮಾತನ್ನು ನೆನಪಿಪಿರಲಿ ಸಿದ್ದಾಂತ ತಪ್ಪು/ಸರಿ ಎಂದು ಹೇಳವುದಕ್ಕೆ ಆ ಸಿದ್ದಾಂತ/ವಾದದ ಮುಖ್ಯಾಂಶಗಳ ಸಂಪೂರ್ಣ ಪರಿಚಯ ಇರುವುದು ಜ್ಞಾನಿಗಳ ದೃಷ್ಟಿಯಿಂದ ಅತ್ಯವಶ್ಯ, ಏನನ್ನು ಓದದೇ ಮತ್ತೊಂಬ್ಬರು ಹೇಳಿದ್ದನ್ನು ಕೇಳಿಕೊಂಡು ಜಾಗಟೆ ಬಾರಿಸುವವರಿಗೆ ಇದರ ಅಗತ್ಯ ಇರುವುದಿಲ್ಲ. ಇಷ್ಟು ಸಾಕು ಇನ್ನು ಡಾ. ಅನಂತರಂಗಾಚಾರ್ ಅವರ ಲೇಖನವನ್ನು ನೋಡೋಣ.

ಆರ್ಯರು ಭಾರತಕ್ಕೆ ವಲಸೆ ಬಂದವರೇ ?
(ವೈದಿಕ ಸಾಹಿತ್ಯ ಚರಿತ್ರೆ ಪುಟ ೧೪ ರಿಂದ ೨೧ - ಡಾ. ಅನಂತರಂಗಾಚಾರ್)
ಭಾರತದ ಪ್ರಾಚೀನೇತಿಹಾಸವನ್ನು ನಿರೂಪಿಸುವಾಗ ಭಾರತ ದೇಶಕ್ಕೆ ಆರ್ಯರು ಮತ್ತೆಲ್ಲಿಂದಲೋ ವಲಸೆ ಬಂದವರೆಂದು ಚರಿತ್ರಕಾರರು ಅಭಿಪ್ರಾಯ ಪಡುತ್ತಾರೆ. ಭಾರತಕ್ಕೆ ಬರುವ ಮೊದಲು ಆರ್ಯರು ಎಲ್ಲಿದ್ದರೆಂಬ ಅಂಶ ನಿಶ್ಚಯವಾಗಿಲ್ಲ. ಅನೇಕ ವಿದ್ವಾಂಸರುಗಳು ಈ ವಿಚಾರವನ್ನು ಚರ್ಚಿಸಿದ್ದಾರೆ; ಹಾಗೂ ಬೇರೆ ಬೇರೆ ವಿಧವಾಗಿ ತೀರ್ಮಾನಿಸಿದ್ದಾರೆ.
ಆಧುನಿಕ ಚರಿತ್ರಕಾರರು ವೇದಮಂತ್ರಗಳನ್ನು ಆಧಾರವಾಗಿ ತೋರಿ ಆರ್ಯರು ವಲಸೆ ಬಂದವರೆಂಬ ತೀರ್ಮಾನಕ್ಕೆ ಬಂದಿದ್ದಾರೆ. ವೇದಮಂತ್ರಗಳ ಅರ್ಥವೃತ್ತಿ ಬಹಳ ಸಂಧಿಗ್ಧವಾಗಿರುವುದರಿಂದ ಇಂಥ ನಿರ್ಣಯ ಸುಲಭವಾಗಿ ಆಗುವುದಿಲ್ಲ. ನಮ್ಮ ಪ್ರಾಚೀನ ಸಾಹಿತ್ಯದ ಮಟ್ಟಿಗೆ ಹೇಳುವುದಾದರೆ ಸಂಹಿತೆ, ಬ್ರಾಹ್ಮಣ, ಅರಣ್ಯಕ, ಉಪನಿಷತ್ತು, ಇತಿಹಾಸ ಪುರಾಣಗಳು ಮುಂತಾದವುಗಳಲ್ಲೆಲ್ಲಿಯೂ ಆರ್ಯರು ಮತ್ತೇಲ್ಲಿಂದಲೋ ಬಂದರೆಂಬ ಸೂಚನೆ ಕಂಡುಬರುವುದಿಲ್ಲ. ಒಂದು ಭೂಭಾಗದಿಂದ ಮತ್ತೊಂದು ಭೂಭಾಗಕ್ಕೆ ವಲಸೆ ಹೋಗಿ ಬಿಡುವಂತಹ ಮಹತ್ತರವದ ಈ ಅಂಶವನ್ನು ಪೂರ್ಣವಾಗಿ ಜಾನಾಂಗವೇ ಮರೆತು ಬಿಟ್ಟಿತೆಂದು ಹೇಳಬಹುದೇ ? ಹಾಗೆ ವಲಸೆ ಬಂದುದು ನಿಜವಾದರೆ ಜನಾಂಗದ ಸ್ಮೃತಿ ಪರಂಪರೆಗೆ ನಿಲುಕದ ಈ ಘಟನೆ ಮತ್ತೇಷ್ಟು ಹಿಂದೆ ನಡಿದಿರಬೇಕು ?
ನಿಪುಣರಾದ ವಿದ್ವಾಂಸರು ಈ ವಿಚಾರವನ್ನು ಕುರಿತು ಚರ್ಚಿಸಿದ್ದಾರೆ. ಅವರೂ ಬೇರೆ ಬೇರೆ ನಿರ್ಣಯಗಳಿಗೆ ಬಂದಿದ್ದಾರೆ. ಅವರ ಅಭಿಪ್ರಾಯಗಳನ್ನು ಮುಂದೆ ಸಂಗ್ರಹಿಸಿಕೊಟ್ಟಿದೆ.
ಆಧುನಿಕ ವಿಮರ್ಶಕರ ಹಾಗೂ ಐತಿಹಾಸಿಕರ ವಾದಸರಣಿ ಹೀಗೆದೆ.
೧) ಆರ್ಯರ ಪೂರ್ವಜರು ಆರ್ಯಾವರ್ತದ ಆರ್ಯಾವರ್ತದ ಹೊರಗಿನ ಪ್ರದೇಶದಿಂದಲೇ ಬಂದಿರಬೇಕು, ಅವರ ಮೂಲ ನಿವಾಸ ಮಧ್ಯ ಏಷ್ಯಾ ಇರಬಹುದು. ಅಲ್ಲಿಂದ ವಲಸೆ ಹೊರಟು ಭಾರತ, ಇರಾನ್ ಯುರೋಪು ಮೊದಲಾದ ಪ್ರದೇಶಗಳಿಗೆ ಅವರು ತಂಡ ತಂಡವಾಗಿ ಬಂದು ನೆಲಸಿದರು. ವೇದದಲ್ಲಿ ಅನೇಕ ಕಡೆ ಅವರ ಪೂರ್ವನಿವಾಸದ ಪ್ರಸ್ತಾಪವಿದೆ.
"ಅನು ಪ್ರತ್ನಸ್ಯೌಕಸೋ ಹುವೇ ತುವಿ ಪ್ರತಿಂ ನರಂ
ಯಂ ತೇ ಪೂರ್ವಂ ಪಿತಾ ಹುವೇ " || (ಋ.ಸಂ- ೧-೩೦-೯)
ಈ ಮಂತ್ರದಲ್ಲಿ ಬರುವ 'ಪ್ರತ್ನಸ್ಯೌಕಸಃ' ಎಂಬ ಶಬ್ದ ಇವರ ಪುರಾತನವಾದ ವಾಸ ಸ್ಥಳವನ್ನು ಸೂಚಿಸುತ್ತದೆ. ಇಂಥ ಉಲ್ಲೇಖಗಳು ಹೇರಳವಾಗಿವೆ.
೨) ಮಧ್ಯ ಏಷ್ಯಾದಿಂದ ವಲಸೆ ಬಂದ ಆರ್ಯರೇ ಯುರೋಪು, ಇರಾನ್, ಭಾರತ ಮೊದಲಾದ ದೇಶಗಳಲ್ಲಿ ನೆಲೆಸಿದರು, ಇವರು ಬೇರೆ ಬೇರೆ ದೇಶಗಳಲ್ಲಿ ನೆಲಸಿ ಬೆಳಸಿದ ಬೇರೆ ಬೇರೆ ಭಾಷೆಗಳಲ್ಲಿ ಗಮನಾರ್ಹವಾದ ಸಾದೃಶ್ಯವಿದೆ. ಇದರ ಆಧಾರದಿಂದ ಬೇರೆ ಬೇರೆಯಾಗಿ ತೋರುವ ಈ ಭಾಷೆಗಳು ಒಂದೆ ವಂಶಕ್ಕೆ ಸೇರಿದವೆಂದೂ ಈ ಮೂಲಭಾಷೆ ಒಂದೇ ಎಂದೂ ಊಹಿಸಬಹುದು. ಆ ಮೂಲಭಾಷೆಯೇ ಇಂಡೋ ಯೂರೋಪಿಯನ್ ಭಾಷೆ. ಅದು ಬೇರೆ ಬೇರೆ ದೇಶಗಳಲ್ಲಿ ಭಿನ್ನ ಭಿನ್ನ ಪರಿಸ್ಥಿಗಳಲ್ಲಿ ಭಿನ್ನ ಭಿನ್ನ ಸಂಪರ್ಕಕ್ಕೊಳಗಾಗಿ ಕಾಲ ಕಳೆದಂತೆ ಒಂದಕ್ಕೊಂದಕ್ಕೆ ಸಂಬಂಧವೂ ಇಲ್ಲವೆಂಬಂತೆ ಬೇರೆ ಬೇರೆಯಾಗಬಿ ಬೆಳದವು, ಹೀಗಾಗಿ 'ತುಲನಾತ್ಮಕ ಭಾಷಾಶಾಸ್ತ್ರ' ಬೇರೆ ಬೇರೆ ದೇಶಗಳಲ್ಲಿ ನೆಲಸಿ ಬೇರೆ ಬೇರೆ ಭಾಷೆಗಳನ್ನಾಡುತ್ತಿರುವ ಈ ಜನ ಒಂದೇ ಬುಡಕಟ್ಟಿನವರೆಂದು ಸಮರ್ಥಿಸುತ್ತದೆ.
೩) ಪರ್ಷಿಯನ್ನರ 'ಜೆಂಡಾ ಅವೆಸ್ತಾ' ಗ್ರಂಥದಲ್ಲಿ 'ವೇಂದಿದಾದ್' ಪ್ರಕರಣದಲ್ಲಿ ದೇಶವರ್ಣನೆಯ ಪ್ರಸಂಗ ಬರುತ್ತದೆ. ಇಲ್ಲಿ
ಐರ್ಯೆನಂಬೇಜೋ ಎಂಬ ದೇಶದ ವರ್ಣನೆ ಮಾಡುತ್ತಾ ಇದು ಹೊಮರ್ತುಪ್ರಧಾನವಾದುದೆಂದು ಹೇಳಿದೆ, ಇದು ಪಾರಸೀಕರ
ಮೂಲದೇಶ, ಈ ಅವೆಸ್ತಾದಲ್ಲಿ ಪ್ರತಿಪಾದಿಸಿರುವ ಅಂಶಗಳಿಗೂ ವೇದದಲ್ಲಿ ಬರುವ ಅಂಶಗಳಿಗೂ ನಿಕಟವಾದ ಸಾಮ್ಯವಿದೆ.
ಅಗ್ನಿಪೂಜೆ, ಮೊದಲಾದವು ಇದಕ್ಕೆ ನಿದರ್ಶನ. ವೇದದಲ್ಲಿ ಬರುವ ದೇವತೆಗಳ ಹೆಸರುಗಳೇ ಅವೆಸ್ತಾದಲ್ಲಿಯೂ ಬರುತ್ತದೆ.
ಆದುದರಿಂದ ಇವರೂ 'ಐರ್ಯೆನಂಬೇಜೋ' ನಿವಾಸಿಗಳಾಗಿದ್ದಿರಬಹುದು.
೪) ಆರ್ಯರು ಪದೇ ಪದೇ ಹಿಮಾಲಯದ ಉತ್ತರಪ್ರದೇಶವನ್ನು ಪರಮಪವಿತ್ರವೆಂದು ಎಣಿಸಿರುವುದೂ ಸಹ ಮಧ್ಯ ಏಷ್ಯಾದಿಂದಲೇ
ಅವರು ವಲಸೆ ಬಂದವರೆಂಬುದನ್ನು ಸಮರ್ಥಿಸುತ್ತದೆ. ಕೆಳಗಿನ ಮಂತ್ರದಲ್ಲಿ ಇಂಥ ಉಲ್ಲೇಖವನ್ನು ಕಾಣಬಹುದು.
"ಉದೀಚ್ಯಾಂ ದಿಶಿ ಪ್ರಜ್ಞಾತತರಾ ವಾಗುತ್ಪದ್ಯತೇ ಉದಂಚ ಉ ವಾವ
ಯಂತಿ ವಾಚಂ ಶಿಕ್ಷಿತಂ ಯೋ ವಾ ತತ ಆಗಚ್ಛತಿ ತಸ್ಯ ವಾ
ಶುಶ್ರೂಷತಿ ಇತಿ ಹ ಸ್ಮಾ ಹೈಷಾ ಹಿ ವಾಚೋ ದಿಕ್ ಪ್ರಜ್ಞಾತಾ" (ಕೌಶೀತಕೀ ಬ್ರಾಹ್ಮಣ- ೧-೭-೬)
೫) ಋಗ್ವೇದದಲ್ಲಿನ 'ತೋಕಂ ಪುಷ್ಯೇಮ ತನಯಂ ಶತಂ ಹಿಮಾಃ', "ಸುಮ್ನಂ ಮದೇಮ ಶತಹಿಮಂ ಸುವೀರಾಃ ಮೊದಲಾದ
ವಾಕ್ಯಗಳು ಆರ್ಯರ ಮೂಲ ವಸತಿ ಹಿಮರ್ತು ಪ್ರಧಾನವಾದ ದೇಶವೆಂದು ಸೂಚಿಸುತ್ತದೆ. ಹಿಮ ಪ್ರಪಾತ ಅಧಿಕವಾಗಿದರುವ
ಮಧ್ಯ ಏಷ್ಯಾ ಭಾಗದಲ್ಲಿ ವರ್ಷಾರಂಭವನ್ನು ಹಿಮರ್ತುವಿನಿಂದ ಆರಂಭ ಮಾಡುತ್ತಿದ್ದರು. ಆದ್ದರಿಂದ ಆರ್ಯರು ಅಲ್ಲಿನ
ಮೂಲನಿವಾಸಿಗಳೇ ಇರಬಹುದು.
೬) ಶತಪಥ ಬ್ರಾಹ್ಮಣದಲ್ಲಿನ 'ಉತ್ತರಂ ಗಿರಿಮತಿದುದ್ರಾವ' ಎಂಬ ನುಡಿ ಹಿಮಾಲಯನ್ನಿವರು ದಾಟಿ ಬಂದರೆಂಬುದನ್ನು
ಸೂಚಿಸುತ್ತದೆ. ಆದುದರಿಂದಲೂ ಅವರ ಮೂಲನಿವಾಸ ಮಧ್ಯ ಏಷ್ಯಾ ಇರಬೇಕು.
೭) ಗ್ರೀಕ್ ಮತ್ತು ರೋಮನ್ ಜನರ ಮೂಲಬುಡಕಟ್ಟಿನವರು ಈಶಾನ್ಯ ಭೂಭಾಗದಿಂದ ಬಂದು ಇಟಲಿ ಮುಂತಾದ ಕಡೆಗಳಲ್ಲಿ
ನೆಲಸಿದರೆಂಬ ಅಂಶವೂ ಆರ್ಯರು ಮಧ್ಯ ಏಷ್ಯಾದಿಂದ ಬಂದರೆಂಬುದನ್ನು ಪುಷ್ಟೀಕರಿಸುವುದು.
ಹೀಗೆ ಐತಿಹಾಸಿಕರು ಮತ್ತು ಆಧುನಿಕ ವಿಮರ್ಶಕರು ಈ ಸಮಸ್ಯೆಯನ್ನು ವಿವೇಚಿಸಿದ್ದಾರೆ.
ಬಾಲಗಂಗಾಧರ ತಿಲಕರ ವಾದ
ಬಾಲಗಂಗಾಧರ ತಿಲಕರವರು ಆರ್ಯರ ಮೂಲನಿವಾಸಿಗಳು ಪ್ರಥಮತಃ ಉತ್ತರ ಧ್ರುವನಿವಾಸಿಗಳೆಂದು ಅಲ್ಲಿಂದ ಅವರು ಭಾರತ ಮೊದಲಾದ ವಿವಿಧ ದೇಶಗಳಿಗೆ ವಲಸೆ ಬಂದರೆಂದೂ ಸಿದ್ಧಾಂತ ಮಾಡಿ ವೇದ ಮಂತ್ರಗಳನ್ನೇ ಆಧಾರವಾಗಿ ತೋರಿದ್ದಾರೆ. ಅವರ ವಾದ ಹೀಗಿದೆ.
ಪ್ರಾಚೀನಾಚಾರ್ಯರು ಉತ್ತರ ಧ್ರುವ ನಿವಾಸಿಗಳು, ಈ ಧ್ರುವದ ವೈಶಿಷ್ಟ್ಯವೇನೆಂದರೆ -
೧) ಸೂರ್ಯ ದಕ್ಷಿಣದಲ್ಲಿ ಉದಿಸುವನು.
೨) ನಕ್ಷತ್ರಗಳು ಉದಿಸಿ ಮುಳುಗುವುದಿಲ್ಲ, ಆದರೆ ೨೪ ಘಂಟೆಗಳಿಗೊಮ್ಮೆ ಧ್ರುವದ ಸುತ್ತಲೂ ಪ್ರದಕ್ಷೆಣೆ ಮಾಡುವುವು.
೩) ವರ್ಷದಲ್ಲಿ ೬(ಆರು) ತಿಂಗಳು ಕಾಲದ ಒಂದು ರಾತ್ರಿಯೂ ಇನ್ನಾರು ತಿಂಗಳ ಕಾಲದ ಒಂದು ಹಗಲೂ ಆಗುವುವು.
೪) ಸಂವತ್ಸರಕ್ಕೆಲ್ಲಾ ಒಂದೇ ಒಂದು ಪ್ರಭಾತವೂ ಒಂದೇ ಒಂದು ಸಂಜೆಯೂ ಆಗುವುವು. ಉದಯಾಸ್ತಗಳ ಅರುಣಕಾಂತಿ
ಇಪ್ಪತ್ತು ನಾಲ್ಕು ಘಂಟೆಗಳಿಗೊಂದಾವರ್ತಿ ಕ್ಷಿತಿಜದ ಸುತ್ತ ಸುತ್ತುತ್ತಾ ಎರಡು ತಿಂಗಳ ಕಾಲ ಇರುತ್ತದೆ.
೫) ಇಲ್ಲಿ ವರ್ಷ ಮೂರು ಭಾಗವಾಗಿರುತ್ತದೆ. ಅಖಂಡವಾದ ಒಂದು ದೀರ್ಘದಿವಸ, ಒಂದು ದೀರ್ಘ ರಾತ್ರಿ ಮತ್ತು ಇವುಗಳ
ಸಂಧಿಕಾಲವಾದ ಅಹೋರಾತ್ರ. ಈ ಅಂಶಗಳೆಲ್ಲಾ ಇಂದಿನಂತೆ ಸಹಸ್ರಾರು ವರ್ಷಗಳ ಹಿಂದೆಯೂ ಅಚಲವಾದ
ಧ್ರುವಪ್ರದೇಶದಲ್ಲಿ ಇದ್ದವು. ಇವುಗಳ ಉಲ್ಲೇಖ ವೇದಗಳಲ್ಲಿ ಕಂಡುಬರುತ್ತದೆ. ಆದುದರಿಂದ ಆರ್ಯರು ಮೂಲತಃ
ಧ್ರುವನಿವಾಸಿಗಳು. ಈ ಅಂಶಗಳನ್ನು ಸೂಚಿಸುವ ಕೆಲವು ಮಂತ್ರಗಳನ್ನೂ ಸೂಚಿಸಬಹುದು.
" ಅಮೀ ಯ ಋಕ್ಷಾ ನಿಹಿತಾಸ ಉಚ್ಛಾ
ನಕ್ತಂ ದದೃಶ್ರೇ ಕುಹಚಿದ್ದಿವೇಯುಃ |
ಅದಬ್ಧಾನಿ ವರುಣಸ್ಯ ವ್ರತಾನಿ
ವಿಚಾಕಶಚ್ಚಂದ್ರಮಾ ನಕ್ತಮೇತಿ || (ಋ.ಸಂ -೧-೨೪-೧೦)
"ಋಕ್ಷಾಃ ಎಂದರೆ ಸಪ್ತರ್ಷಿಗಣವು ಸೃಷ್ಟಿಕರ್ತನಿಂದ ನಮ್ಮ ತಲೆಯ ಮೇಲೆ ಇಡಲ್ಪಟ್ಟಿದೆ. ಇವು ರಾತ್ರಿಯಲ್ಲಿ ಕಾಣುತ್ತದೆ.
ಹಗಲಿನಲ್ಲಿ ಎಲ್ಲಿಯೋ ಮಾಯವಾಗುತ್ತದೆ. ಚಂದ್ರನೂ ರಾತ್ರಿಯಲ್ಲಿಯೇ ಪ್ರಕಾಶಿಸುತ್ತಾನೆ. ಇವೆಲ್ಲಾ ವರುಣನ
ಶಾಶ್ವತವಾದ ಕರ್ಮ"
ಈ ಮಂತ್ರದಲ್ಲಿ ಸಪ್ತರ್ಷಿಮಂಡಲ ಸರ್ವದಾ ನಮ್ಮ ತಲೆಯ ಮೇಲೆಯೇ ಕಾಣುವುದೆಂದು ಹೇಳಲಾಗಿದೆ.
ಸ ಸೂರ್ಯಃ ಪರ್ಯುರೂ ವರಾಂಸ್ಯೇಂದ್ರೋ
ವವೃತ್ಯಾದ್ರಥ್ಯೇವಚಕ್ರಾಃ | (ಋ.ಸಂ--೧೦-೮೯-೨)
ಸಾರಥಿಯು ರಥಕ್ಕೆ ಸಂಬಂಧಿಸಿದ ಚಕ್ರಗಳನ್ನು ಆವರ್ತಗೊಳಿಸುವಂತೆ ಸುವೀರ್ಯನೂ ಪ್ರಸಿದ್ದನೂ ಆದ ಇಂದ್ರನು ಅನೇಕ ಗ್ರಹಗಳನ್ನು ಭ್ರಮಣಗೊಳಿಸುತ್ತಾನೆ. ಇಲ್ಲಿ ಬರುವ ನಕ್ಸತ್ರ ಭ್ರಮಣ ಧ್ರುವಪ್ರದೇಶವನ್ನು ಬಿಟ್ಟು ಮತ್ತಾವ ಪ್ರದೇಶಕ್ಕೂ ಅನ್ವಯಿಸುವುದಿಲ್ಲ.
ಉಷಃ ಕಾಲದ ಸುಧೀರ್ಘತ್ವವನ್ನು ಮಂತ್ರಗಳು ಹೇಳುತ್ತವೆ. ಕೆಳಗಿನ ಮಂತ್ರಗಳಲ್ಲಿ ಈ ಅಂಶ ಇದೆ.
ತಾನೀದಹಾನಿ ಬಹುಲಾನ್ಯಾಸನ್
ಯಾ ಪ್ರಾಚೀನಮುದಿತಾ ಸೂರ್ಯಸ್ಯ |
ಯತಃ ಪರಿಚಾರ ಇವಾಚರಂ
ತ್ಯುಷೋ ದದೃಕ್ಷೇ ನ ಪುನರ್ಯತೀವ || (ಋ.ಸಂ- ೭-೭೬-೩)
ಉಷಃ ಕಾಲ ಆರಂಭವಾದ ಮೇಲೆ ಸೂರ್ಯೋದಯದವರೆಗೆ ಎಷ್ಟು ದಿನಗಳು ಕಳೆದು ಹೋದವು.! ಪ್ರಿಯನ ಸುತ್ತಲೂ ಪ್ರಿಯೆ ಚರಿಸುವಂತೆ ಉಷೆಯೂ ಸುತ್ತುತ್ತಾಳೆ. ಎಂದು ಇಲ್ಲಿ ಹೇಳಿದೆ.
ತಸ್ಯ ವೇನೀರನುವ್ರತಮುಷಸ್ತಿಸ್ರೋ
ಅವರ್ಧಯನ್ನಭಂತಾಮನ್ನಯಕೇ ಸಮೇ || (ಋ.ಸಂ ೮-೪೧-೩)
ಎಂಬ ಮಂತ್ರದಲ್ಲಿ ಮೂವತ್ತು ಉಷೆಯರ ವರ್ಣನೆಯಿದೆ. ಇವು ಒಂದೇ ಧೀರ್ಘವಾದ ಉಷಃಕಾಲದ ಮೂವತ್ತು ಭಾಗಗಳೆಂದು ಹೇಳಬಹುದು.
ಪ್ರಾತರನುವಾಕವನ್ನು 'ಪುರಾ ಶಕುನಿವಾದಾದನುಬ್ರೂಯಾತ್ ' ಎಂದು ವಿಧಿಸಿದೆ. ಈ ಮಂತ್ರವನ್ನು ಸಾವಿರ ಸಲ ಪಠಿಸಬೇಕೆಂಬ ವಿಧಿಯಿದೆ. ಬೇರೆ ಯಾವ ಪ್ರದೇಶದ ಉಷಃಕಾಲದಲ್ಲಿಯೂ ಈ ಪ್ರಾತರನುವಾಕವನ್ನು ಸಾವಿರ ಸಲ ಪಠಿಸುವುದು ಸಾಧ್ಯವಿಲ್ಲ. ಉತ್ತರ ಧ್ರುವದ ಪ್ರದೇಶದ ಉಷಃ ಕಾಲದಲ್ಲಿ ಮಾತ್ರ ಇದು ಸಾಧ್ಯ.
ವೇದದಲ್ಲಿ ಬರುವ ಉಷೋದೇವಿಯ ಮೂವತ್ತು ಅಡಿಗಳ ವಿಚಾರ ಇಪ್ಪತ್ತಾನಾಲ್ಕು ಗಂಟೆಗಳ ಮೂವತ್ತು ದಿನಗಳಿಗೆ ಸ್ಪಷ್ಟವಾಗಿ ಅನ್ವಯಿಸುತ್ತದೆ.
ವೇದದಲ್ಲಿ ಬರುವ ದೀರ್ಘ ದಿವಸ ಮತ್ತು ದೀರ್ಘರಾತ್ರಿಯ ವರ್ಣನೆಯೂ ಧ್ರುವ ಪ್ರದೇಶಕ್ಕೆ ಅನ್ವಯಿಸುತ್ತದೆ.
ವೃತ್ರವಧವರ್ಣನೆ ದೀರ್ಘರಾತ್ರಿಯ ನಂತರ ಉದಿಸುವ ಪ್ರಕಾಶಕ್ಕೆ ಸಂಬಂದಿಸಿದೆ. ಆವಿಯ ರೂಪದಲ್ಲಿ ಗಗನಗಾಮಿಯಾಗುವ ಜಲ, ಸೂರ್ಯ ಮತ್ತು ಉಷಸ್ಸುಗಳು ಕೆಳಲೋಕದಿಂದ ಮೇಲಕ್ಕೆ ಬರದಂತೆ ತಡೆಯಲ್ಪಟ್ಟಿದ್ದವೆಂದು ನಂಬಲಾಗಿತ್ತು. ವೃತ್ರವಧವಾದ ಮೇಲೆ ಸೂರ್ಯನ ಅಭಿವ್ಯಕ್ತಿಯೂ ವಾತಾವರಣದ ಜಲನಿರ್ಗಮವೂ ಆಯಿತೆಂದು ವರ್ಣಿಸಿದೆ.
ಇವೆಲ್ಲ ಆಧಾರಗಳಿಂದ ಆರ್ಯರು ಉತ್ತರಧ್ರುವದ ಮೂಲನಿವಾಸಿಗಳಾದ್ದರೆಂದೂ ಹಿಮಪ್ರಪಾತವಾದ ಮೇಲೆ ಆ ಪ್ರದೇಶದಿಂದ ಹೊರಟುಬಂದು ಭಾರತ ದೇಶದಲ್ಲಿ ನೆಲಸಿದರೆಂದು ಸಿದ್ಧವಾಗುತ್ತದೆ.

ಅವಿನಾಶ ಚಂದ್ರದಾಸರ ವಾದ
ಅನೇಕ ವಿದ್ವಾಂಸರು ಆರ್ಯರು ಬೇರೆಲ್ಲಿಂದಲೋ ಭಾರತಕ್ಕೆ ಬಂದರೆಂಬ ವಾದವನ್ನು ಮುಂದಿಟ್ಟಿದ್ದಾರೆ. ಆದರೆ ಶ್ರೀಯುತ ಅವಿನಾಶ ಚಂದ್ರದಾಸ್ ಅವರು ಆರ್ಯರ ಮೂಲವಸತಿಯನ್ನು ಚರ್ಚಿಸುತ್ತ ಆರ್ಯರು ಆರ್ಯಾವರ್ತದ ಮೂಲನಿವಾಸಿಗಳೇ ವಿನಾ ಬೇರೆ ಕಡೆಯಿಂದ ಬಂದವರಲ್ಲವೆಂದು ಅಭಿಪ್ರಾಯಕ್ಕೆ ಬಂದಿದ್ದಾರೆ. ಇವರ ವಾದ ಹೀಗೆದೆ.
ಅ) ಸಪ್ತಸಿಂಧು ಎಂದು ಕರೆಯಲಾದ ಪಂಜಾಬು ಪ್ರಾಂತವೇ ಆರ್ಯರ ಮೂಲಸ್ಥಾನ. ಋಗ್ವೇದದ ಕಾಲದಲ್ಲಿ ಈಗಿನ ರಾಜಪುಟಾಣ ಪ್ರಾಂತದಿಂದ ಹಿಡಿದು ಅಸ್ಸಾಮಿನವರೆಗೂ ಸಾಗರ ಹರಡಿಕೊಂಡಿದ್ದಿತ್ತು. ಆಗ ದಕ್ಷಿಣ ಭಾರತ ಮಹಾದ್ವೀಪವಾಗಿದ್ದಿತ್ತು. ಆಗ್ಗೆ ಭಾರತ ಪ್ರಾಯಃ ಆಸ್ಟ್ರೇಲಿಯಾದವರೆಗೂ ಹರಡಿಕೊಂಡಿದ್ದಿರಬಹುದು. ಋಗ್ವೇದಕಾಲವಾದ ನಂತರ ಎಂದೋ ಸಂಬವಿಸಿದ ಕೆಲವು ಭೂಕಂಪಗಳ ಪರಿಣಾಮವಾಗಿ ದಕ್ಷಿಣ ಭಾರತದ ದಕ್ಷಿಣ ಭಾಗಗಳನೇಕ ಸಮುದ್ರದಲ್ಲಿ ಲೀನವಾಗಿಹೋದವು; ಹಾಗೂ ಇಂದಿನ ಭಾರತದ ರೂಪ ಬಂದಿತು. ಅಥ ಭೂಕಂಪದ ಪರಿಣಾಮವಾಗಿಯೇ ರಾಜಪುಟಾಣವು ಸಮುದ್ರಗರ್ಭದಿಂದ ಮೇಲಕ್ಕೆದ್ದಿರಬೇಕು. ಇದರಿಂದ ಆರ್ಯರಿಗೆ ದಕ್ಷಿಣಕ್ಕೆ ಹೋಗಲು ಮಾರ್ಗವೊಂದು ತೆರೆಯಿತು. ಪುರಾಣದಲ್ಲಿ ಬರುವ ಅಗಸ್ತ್ಯರ ಸಮುದ್ರ ಪಾನದ ಕಥೆ ಪ್ರಾಯಃ ರಾಜಪುಟಾಣಾ ಸಾಗರದ ಶೋಷಣೆಗೆ ಅನ್ವಯಿಸಬಹುದು.
ಆ) ಭೂಗರ್ಭಶಾಸ್ತ್ರಜ್ಞರ ಅಭಿಪ್ರಾಯದಂತೆ ಸಪ್ತಸಿಂಧು ಪ್ರದೇಶದಲ್ಲಿ ಪ್ರಾಚೀನ ಕಾಲದಿಂದ ಮಾನವಸೃಷ್ಟಿಯವರೆಗೂ ಮತ್ತೆ ಮುಂದಕ್ಕೂ ಅನ್ವಯಿಸಿದ ವಿಚಾರಗಳು ಉಪಲಬ್ಧವಾಗಿವೆ. ಇಲ್ಲಿ ಆರ್ಯರು ಎಂದಿನಿಂದ ಎಂದಿನವರೆಗೆ ಇದ್ದರೆಂದು ನಿರ್ಧರಿಸಲು ಸಾಧ್ಯವಿಲ್ಲದ ಕಾರಣ ಇದೇ ಅವರ ಮೂಲಸ್ಥಾನವಾಗಿದ್ದಿರಬಹುದು. ದುಸ್ತರವಾದ ಸಮುದ್ರವನ್ನು ದುರ್ಲಂಘ್ಯವಾದ ಪರ್ವತ ಮಾಲೆಯನ್ನು ನೆನೆದರೆ ಆರ್ಯರು ಮಧ್ಯ ಏಷ್ಯಾದಿಂದಲೋ ಉತ್ತರ ಧ್ರುವದಿಂದಲೋ ಬಂದರೆಂಬುದನ್ನು ನಂಬುವುದಕ್ಕಾಗುವುದಿಲ್ಲ. ಕೋಲರೂ, ದ್ರಾವಿಡರೂ ಹೇಗೆ ದಕ್ಷಿಣ ಭಾರತದ ಮೂಲನಿವಾಸಿಗಳೋ ಹಾಗೆಯೇ ಆರ್ಯರು ಸಪ್ತಸಿಂಧೂ ಪ್ರದೇಶದ ನಿವಾಸಿಗಳು.
ಇ) ರಾಜಪುಟಾಣಾ ಸಮುದ್ರ ಪರಿವರ್ತನೆಗೊಂಡು ಸ್ಥೂಲವಾಗಿ ಮಾರ್ಪಾಡಾದಾಗ ಮಹಾಪ್ರಳಯವೊಂದು ಸಪ್ತ ಸಿಂಧು ಪ್ರದೇಶದಲ್ಲಿ ಆಗಿರಬೇಕು. ಮನುವಿನ ಜಲಪ್ರಳಯವೆಂದು ಇದನ್ನೇ ವರ್ಣಿಸಿಬೇಕು. ಈ ಅಪಾರವಾದ ಜಲರಾಶಿ ಪ್ರಾಯಃ ಉತ್ತರದ ಕಡೆ ಕೊಚ್ಚಿ ಹರಿದು 'ಐರ್ಯನೆಂಬೇಜೋ' ಅಥವಾ ಉತ್ತರ ಧ್ರುವದವರೆಗೂ ವಿನಾಶಕಾರಿಯಾಗಿ ಸಾರಿರಬಹುದು. ಯಮನೂ ಅವನ ಸಹಚರರೂ ತಮ್ಮ ಪ್ರಜೆಗಳನ್ನು ಉತ್ತರ ದಿಕ್ಕಿಗೆ ಓಡಿಸಿದರೆಂದು ಇದನ್ನೇ ವರ್ಣಿಸಿರಬಹುದು. ಋಗ್ವೇದ ಕಾಲವಾದ ಮೇಲೆ ಆರ್ಯ ಕೆಲವು ತಂಡಗಳು ಉತ್ತರ ಧ್ರುವದ ಕಡೆ ಹೋಗಿರಬಹುದೇ ವಿನಾ ಋಗ್ವೇದ ಕಾಲದಲ್ಲಿ ಆರ್ಯರು ಎಲ್ಲಿಗೂ ಹೋಗಲೂ ಇಲ್ಲ. ಎಲ್ಲಿಂದಲೂ ಬರಲೂ ಇಲ್ಲ.
ಈ) ಪ್ರಥಮತಃ ಸಮುದ್ರವಿದ್ದ ಕಾರಣ ಸಪ್ತ ಸಿಂಧುಪ್ರದೇಶ ಶೀತಲವಾಗಿದ್ದಿರಬೇಕು. ಆದುದರಿಂದ ವರ್ಷದ ಆದಿಯಲ್ಲಿ ಹಿಮರ್ತುವನ್ನು ಹೇಳಿರಬೇಕು. ರಾಜಪುಟಾಣ ಸಾಗರ ಹೋಗಿ ಪ್ರದೇಶವಾಗಿ ಪರಿವರ್ತನೆಯಾದ ಮೇಲೆ 'ಶರತ್' ಎಂದು ಬದಲಾಯಿಸಿದ್ದಾರೆ. ಆ ಪ್ರಾಂತದಲ್ಲಿ ಔಷ್ಣ್ಯವು ಅಧಿಕವಾದುದು ಇದಕ್ಕೆ ಕಾರಣ ಇರಬೇಕು. ಸರಸ್ವತೀ ಮತ್ತು ದೃಷದ್ವತೀಗಳೂ ಬತ್ತಿ ಹೋಗಲೂ ಇದೇ ಕಾರಣವೆನ್ನಬಹುದು.
ಉ) ಋಗ್ವೇದದಲ್ಲಿ ಬರುವ 'ದಾಸು' ಅಥವಾ 'ದಸ್ಯುಗಳು' ಆ ಕಾಲದಲ್ಲಿದ್ದ ಹಲ ಕೆಲ ಕಾಡುಜನರನ್ನೋ ಅಥವಾ ಯಾಗಾದಿಗಳನ್ನಾಚರಿಸದ ನಾಸ್ತಿಕರನ್ನೋ ಹೇಳುತ್ತದೆಯೇ ವಿನಾ ಇಲ್ಲಿನ ನಿವಾಸಿಗಳಾಗಿದ್ದ ದ್ರಾವಿಡ ಭೀಲಕೋಲರನ್ನು ಹೇಳುವುದಿಲ್ಲ.
ಊ) ಸಪ್ತ ಸಿಂಧು ಪ್ರದೇಶದಲ್ಲಿಯೇ ಇದ್ದ ಪಣಿಗಳೆಂಬ ವ್ಯಾಪಾರಿಗಳು ಪಶು ಚೌರ್ಯಾದಿಗಳನ್ನು ಮಾಡುತ್ತಾ ಕ್ರೂರಿಗಳಾಗಿದ್ದರು. ವೇದಧರ್ಮದಲ್ಲಿಯಾಗಲಿ ದೇವತೆಗಳಲ್ಲಿಯಾಗಲೀ ಇವರಿಗೆ ಆಸಕ್ತಿ ಇರಲಿಲ್ಲ. ಆರ್ಯರಿಂದ ಪರಾಜಿತರಾದ ಇವರು ನಾವಿಕರಾಗಿ ಸಾಗರದ ಮೇಲೆಯೇ ಇರತೊಡಗಿದರು. ರಾಜಪುಟಾಣಾ ಸಾಗರ ಬತ್ತಿದ ಮೇಲೆ ಇವರು ಗುಜರಾತು, ಮಲಬಾರ್ ಮೊದಲಾದ ಭಾಗಗಳಲ್ಲಿ ನೆಲಸಿರಬೇಕು. ಹೀಗೆ ಇವರಿಗೆ ಮೊದಮೊದಲು ಪಾಂಡ್ಯರು, ಕೋಲರು, ಮೊದಲಾದವರ ಸಹವಾಸವೇರ್ಪಟ್ಟಿರಬೇಕು. ಹೀಗೆ ಪಣಿಗಳೂ, ಕೋಲರೂ, ಚಾಲ್ಡಿಯಾ ಪ್ರಾಂತಕ್ಕೆ ಬಂದಿರಬೇಕು. ಮೆಸಪಟೋಮಿಯಾದಲ್ಲಿ ಸ್ವತಂತ್ರವಾದ ಬ್ಯಾಬಿಲೋನಿಯನ್ ಸಾಮ್ರಾಜ್ಯ ಕಟ್ಟಿದವರಿವರು. ಇವರದೇ ಆದ ಮತ್ತೊಂದು ಶಾಖೆ ಪಾಂಡ್ಯರೊಡನೆ ಇರಾನ್, ಅರೇಬಿಯಾ ಕಡೆ ಹೋಗಿ ಈಜಿಪ್ಟಿನಲ್ಲಿ ನೆಲಸಿತು.
ಹೀಗೆ ವಲಸೆ ಹೋದವರೆಂದರೆ ಆರ್ಯರ ಪಣಿಗಳ ವಿನಾ ಇತರರಲ್ಲವೆಂಬುದೂ , ವಲಸೆ ಹೊರಟ್ಟಿದ್ದು ಭಾರತದಿಂದಲೇ ಎಂಬುದೂ ಸಿದ್ಧವಾಗುತ್ತದೆ.
ಋ) ಪರ್ಷಿಯನ್ನರ ಮೂಲಪುರುಷರಾದ ಇರಾನಿಯನ್ನರು ಮೂಲತಃ ಶುದ್ಧ ಆರ್ಯರು. ಆರ್ಯ ಭಾಷೆಯನ್ನೇ ನುಡಿಯುತ್ತಿದ್ದರು. ಪಶುಯಜ್ಞ ಅವರಿಗೆ ಅಭಿಮತವಿರಲಿಲ್ಲ. ಈ ಜನ ಆರ್ಯರಿಂದ ಬೇರೆಯಾಗಿ ಕವಲೊಡೆದರು. ಇವರ ಕಲಹಗಳನ್ನೇ ದೇವಾಸುರ ಯುದ್ಧಗಳೆಂದು ವರ್ಣಿಸಿದ್ದಾರೆ. ಕೊನೆಯಲ್ಲಿ ಇವರು ಸಪ್ತಸಿಂಧು ಪ್ರದೇಶವನ್ನು ಬಿಟ್ಟು ಬಿಟ್ಟು 'ಐರ್ಯನಂಬೇಜೋ' ಪ್ರಾಂತದಲ್ಲಿ ನಿಂತರು.
ಇವೆಲ್ಲವನ್ನೂ ವಿಮರ್ಶಿಸಿದರೆ ಆರ್ಯರು ಸಪ್ತಸಿಂಧು ಪ್ರದೇಶದಲ್ಲಿ ಮೊದಲಿಂದ ವಾಸವಾಗಿದ್ದರೆಂದೂ, ಇಲ್ಲಿಂದಲೇ ಇತರ ಪ್ರದೇಶಗಳಿಗೆ ವಲಸೆ ಹೋದರೆಂದೂ ಸಿದ್ಧವಾಗುತ್ತದೆ.
ಸತ್ಯವ್ರತ ಸಾಮಶ್ರಮಿಗಳೂ ಮತ್ತು ಧರ್ಮಮಾರ್ತಂಡ ಲೇಲೇ ಅವರ ವಾದ.
ಸತ್ಯವ್ರತ ಸಾಮಶ್ರಮಿಗಳು ಮತ್ತು ಧರ್ಮಮಾರ್ತಂಡ ಲೇಲೇ ಅವರೂ ಉತ್ತರ ಧ್ರುವವು ಆರ್ಯರ ಮೂಲವಸತಿಯೆಂಬ ವಾದವನ್ನು ತೀವ್ರವಾಗಿ ವಿರೋಧಿಸಿ ಆರ್ಯರ ಮೂಲವಸತಿ ಆರ್ಯಾವರ್ತವೆಂದೇ ಸಮರ್ಥಿಸಿದ್ದಾರೆ. ಅವರ ವಾದಸರಣಿ ಕೆಳಕಂಡಂತೆ ಇದೆ.
೧) ಆರ್ಯರು ಮೊದಲಿನಿಂದಲೂ ಭಾರತದಲ್ಲಿಯೇ ಇದ್ದರು. ವೇದಗಳಲ್ಲಿ ಹೆಸರಿಸಿರುವ ನದಿಗಳೂ ಪರ್ವತಗಳೂ ಪ್ರದೇಶಗಳೂ ಉತ್ತರ ಧ್ರುವದಲ್ಲಿಲ್ಲ. ಅವೆಲ್ಲಾ ಭಾರತದಲ್ಲಿಯೇ ಇವೆ.
೨) ಉತ್ತರಧ್ರುವ ಆರ್ಯರ ಮೂಲಸ್ಥಾನವೆಂದೂ ಸಮರ್ಥಿಸಲು ಉದಾಹರಿಸಿರುವ ಮಂತ್ರಗಳಿಗೆ ಬೇರೆ ಬೇರೆ ಅರ್ಥವೇ ವಿನಾ ತಿಲಕರು ಹೇಳುವ ಅರ್ಥ ಹೊಂದುವುದಿಲ್ಲ. ಸಪ್ತರ್ಷಿಗಣವನ್ನಾಗಲಿ, ನಕ್ಷತ್ರ ಭ್ರಮಣವನ್ನಾಗಲಿ ಆ ಮಂತ್ರಗಳು ಹೇಳುವುದಿಲ್ಲ.
೩) ಪ್ರಾತರನುವಾಕವನ್ನು ಸಹಸ್ರಶಃ ಪಠಿಸುವ ವಿಚಾರ ಋಗ್ವೇದಲ್ಲಿಲ್ಲ. ಇದು ಐತರೇಯ ಬ್ರಾಹ್ಮಣದಲ್ಲಿರುವುದರಿಂದ ಐತರೇಯ ಬ್ರಾಹ್ಮಣಕಾರರು ಉತ್ತರ ಧ್ರುವದಲ್ಲಿದ್ದರೆಂದು ಹೇಳಬಹುದೇ ? ಪಕ್ಷಿಕೂಜನಕ್ಕೂ ಮೊದಲು ಪ್ರಾತರನುವಾಕವನ್ನು ಪಠಿಸಬೇಕೆಂದು ಹೇಳಿರುವುದು ಮಂತ್ರದ ಮುಖ್ಯವಾದ ಭಾಗಕ್ಕನ್ವಯಿಸುತ್ತಿತ್ತು. ಉಳಿದ ಭಾಗಗಳನ್ನು ಅನಂತರ ಪಠಿಸುತ್ತಿದ್ದರು.
೪) ಧ್ರುವಪ್ರದೇಶದಲ್ಲಿ ಒಂದು ರಾತ್ರಿಯೂ ಒಂದು ಹಗಲೂ ಸೇರೆದರೆ ಒಂದು ವರ್ಷವಾಗುವುದು. ಹೀಗಿರಲು ಶ್ರುತಿಸಿದ್ಧವಾದ ನೂರು ವರ್ಷಗಳ ನೂರು ವರ್ಷಗಳ ಆಯುಸ್ಸಿನ ಗಣನೆ ಹೇಗೆ ಸಾಧ್ಯವಾಗುತ್ತದೆ. ಮಾಸದ ಪರಿಮಿತಿ ಹೇಗೆ ? ವರ್ಷದ ಅವಧಿ ಎಷ್ಟಿರಬೇಕು ? ಮಾವನರ ಒಂದು ವರ್ಷ ದೇವತೆಗಳ ಒಂದು ದಿನವೆಂದು ಹೇಳಿರುವಲ್ಲಿಯೂ ಧ್ರವಪ್ರದೇಶದ ಸೋಂಕಿಲ್ಲ.
ಈ ಕಾರಣಗಳಿಂದ ಧ್ರವಪ್ರದೇಶ ಆರ್ಯರ ಮೂಲ ವಸತಿಯಲ್ಲವೆಂದೂ ಸೂಚಿಸಿ ಆರ್ಯರ ಮೂಲಸ್ಥಾನ ಆರ್ಯಾವರ್ತವೆಂದು ಸಮರ್ಥಿಸಲು ಕೆಳಗಿನ ಕಾರಣಗಳನ್ನು ಹೇಳುತ್ತಾರೆ.
೧) ಆರ್ಯರ ಮೂಲವಸತಿ ಹಿಮಾಲಯದ ದಕ್ಷಿನಕ್ಕಿರುವ ಸುವಾಸ್ತು ಪ್ರದೇಶವೇ. 'ಸುವಾಸ್ತ್ವಾ ಅಧಿ ತುಗ್ವನಿ'(ಋ.ಸಂ- ೮-೧೯-೩೭) ಎಂದು ಇದನ್ನು ನಿರ್ದೇಶಿಸಲಾಗಿದೆ. 'ಸುವಾಸ್ತುರ್ನದೀ ತುಗ್ವತೀರ್ಥಂಭವತಿ' ಎಂದು ಯಾಸ್ಕರು ತಿಳಿಸಿದ್ದಾರೆ. (ನಿರುಕ್ತ- ೪-೧೫-೨). ಸುವಾಸ್ತು ಪ್ರದೇಶ ವಾಸಕ್ಕೆ ಅತ್ಯಂತ ಪ್ರಶಸ್ತವಾದ ಪ್ರದೇಶವೆಂದೂ ತಿಳಿಸಿದ್ದಾರೆ. ಈಗಿನ 'ಸ್ವಾತ್' ನದೀ ಪುರಾತನ ಸುವಾಸ್ತು ಆಗಿರಬೇಕೆಂದು ಕನ್ನಿಂಗ್ ಹ್ಯಾಂ ಅಭಿಪ್ರಾಯಪಡುತ್ತಾರೆ.
೨) ಅತಿ ಪ್ರಭಾವಶಾಲಿಯಾದ ರಸಾನದೀ ಆರ್ಯಾವರ್ತದ ಉತ್ತರ ಸೀಮೆಯಾಗಿಯೂ ಕುಭಾನದಿಯು (ಈಗಿನ ಕಾಬೂಲ್ ನದೀ ?) ಪಶ್ಚಿಮದ ಎಲ್ಲೆಯಾಗಿಯೂ ಇದ್ದಿರಬೇಕು. ಸರಯೂ ನದೀ ಪೂರ್ವದ ಎಲ್ಲೆಯಾಗಿರಬೇಕು. ಕುಭಾದ ಕೆಳಗೆ ಇರುವ ಕ್ರಮು ಸಿಂಧುಗಳ ಸಂಗಮವೇ ದಕ್ಷಿಣದ ಎಲ್ಲೆ ಇರಬೇಕು.
" ಮಾ ವೋ ರಸಾ ನಿತಭಾ ಕುಭಾ, ಕ್ರುಮುರ್ಮಾ ವಃ ಸಿಂಧುರ್ನಿರೀರಮತ್ |
ಮಾ ವಃ ಪರಿಷ್ಠಾತ್ಸರಯುಃ ಪುರೀಷಿಣ್ಯಸ್ಮೇ ಇತ್ಸುಮ್ನಮಸ್ತುಮಃ " || ( ಋ.ಸಂ ೫-೫೩-೯ ಮತ್ತು ೧-೧೦೪-೪)
೩) ಈ ಆರ್ಯರ ವಾಸಸ್ಥಳ ಕ್ರಮೇಣ ಸಾರಸ್ವತ ಪ್ರದೇಶದ ಕಡೆಗೆ ಹರಡಿತು. ನಿರುಕ್ತದಲ್ಲಿ ಯಾಸ್ಕರು ವಿಪಾಟ್ ಶುತದ್ರುಗಳ ಸಂಗಮ ಸ್ಥಳಕ್ಕೆ ವಿಶ್ವಾಮಿತ್ರರು ಸುದಾಸನೊಡನೆ ಬಂದರೆಂದೂ ಇತರರು ಅವರನ್ನೂ ಅನುಸರಿಸಿದರೆಂದೂ ಹೇಳಿದ್ದಾರೆ. ಋಗ್ವೇದದಲ್ಲಿ ಬರುವ ವಿಶ್ವಾಮಿತ್ರ ಮತ್ತು ನದಿಗಳ ಸಂವಾದ ಈ ಹಿನ್ನೆಲೆಯಲ್ಲಿ ಆದುದು. ಈ ಸಾರಸ್ವತ ಪ್ರದೇಶವು ಯಾಗಭೂಮಿಯೆಂದು ಪಾವನತಮವಾದುದೆಂದೂ ಪ್ರಶಂಶಿಸಲ್ಪಟ್ಟಿದೆ. " ಧಾನ್ಯ ಬಹುಳವೂ ಪೃಥ್ವಿಯಲ್ಲಿ ಸುಂದರವೂ ಆದ ಈ ಪ್ರದೇಶದಲ್ಲಿ ಅಗ್ನಿಯನ್ನು ವಿಶೇಷ ರೂಪದಿಂದ ಸ್ಥಾಪನೆ ಮಾಡಿರುತ್ತೇನೆ. ಈ ಪಾವನತಮವಾದ ಪ್ರದೇಶವಾದರೋ ದೃಷದ್ವತೀ ಮತ್ತು ಸರಸ್ವತೀ ನದಿಗಳ ಮಧ್ಯಪ್ರದೇಶವೇ. ಇಲ್ಲಿ ನೀನು ಸ್ವಚ್ಛಂದವಾಗಿ ಪ್ರಕಾಶ ಬೀರು " ಎಂದು ಈ ಕೆಳಗಿನ ಮಂತ್ರದಲ್ಲಿ ಹೇಳಿದೆ.
ನಿ ತ್ವಾ ದಧೇ ವರ ಆ ಪೃಥಿವ್ಯಾ, ಇಳಾಯಾಸ್ಪದೇ ಸುದಿನತ್ವೇ ಅಹ್ನಾಮ್ |
ದೃಷದ್ವತ್ಯಾಂ ಮಾನುಷ ಅಪಯಾಯಾಂ ಸರಸ್ವತ್ಯಾಂ ರೇವದಗ್ನೇ ದಿದೀಹಿ || (ಋ.ಸಂ. ೩-೨೩-೪)
ಸರಮಾ ಪಣಿಗಳ ಸಂವಾದದಲ್ಲಿ ಬರವು ರಸಾನದೀ ಆರ್ಯಾವರ್ತದ ಉತ್ತರ ದಿಕ್ಕಿನ ಎಲ್ಲೆಯಾಗಿದ್ದಿತೆಂಬುದನ್ನೇ ಸೂಚಿಸುತ್ತದೆ.
ಋಗ್ವೇದದಲ್ಲಿ ಮೊಜವಾನ್ ಪರ್ವತದ ಉಲ್ಲೇಖವಿರುವುದರಿಂದ ಆರ್ಯರು ಅಲ್ಲಿ ಮೊದಲು ವಾಸವಾಗಿದ್ದರೆಂದು ಹೇಳುವುದು ಸರಿಯಾಗದು. ಋಕ್ ಸಂಹಿತೆಯ ಕಾಲಕ್ಕೆ ಈ ಮೊಜವಾನ್ ಪರ್ವತ, ಇರಾನ್ ದೇಶ ಮೊದಲಾದುವೆಲ್ಲಾ ಆರ್ಯಾವರ್ತದಲ್ಲಿಯೇ ಸೇರಿದ್ದವೆಂದು ಕಂಡುಬರುತ್ತದೆ.
ಆದ್ದರಿಂದ ಆರ್ಯವರ್ತ ಇಂದಿನ ಪರ್ಷಿಯಾದ ಉತ್ತರದಲ್ಲಿರುವ ಏಷ್ಯಾಮೈನರಿನಿಂದ ಪೂರ್ವಕ್ಕೂ ಗಂಗಾಪ್ರದೇಶದ ಪಶ್ಚಿಮಕ್ಕೂ, ಮೊಜವತ್ ಪರ್ವತದ ದಕ್ಷಿಣಕ್ಕೂ ಸಿಂಧೂನದೀ ಸಾಗರದೊಡನೆ ಸಂಗಮವಾಗುವ ಪ್ರದೇಶದಿಂದ ಉತ್ತರಕ್ಕೂ ಹರಡಿತ್ತೆಂದು ಸಿದ್ಧವಾಗುತ್ತದೆ. ಇದೇ ಆರ್ಯರ ಮೂಲವಸತಿಯಾಗಿತ್ತೆಂದು ಇವರ ಮತ.

ಮೇಲ್ಕಂಡ ವಾದಗಳ ಮೇಲೆ ಡಾ. ಎನ್ ಎಸ್ ಅನಂತರಂಗಾಚಾರ್ ಅವರ ತೀರ್ಮಾನ


ಈ ರೀತಿಯಲ್ಲಿ ಆರ್ಯರ ಮೂಲವಸತಿಯ ವಿಚಾರದಲ್ಲಿ ವಿದ್ವಾಂಸರು ಬಗೆಬಗೆಯ ಅಭಿಪ್ರಾಯಗಳನ್ನು ಪ್ರತಿಪಾದಿಸಿದ್ದಾರೆ. ತುಲನಾತ್ಮಕ ದೃಷ್ಟಿಯಿಂದ ಇವುಗಳನ್ನು ವಿಮರ್ಶಿಸಿದರೆ ಈ ವಿವಾದ ಇನ್ನೂ ನಿರ್ಣೀತವಾಗಿಲ್ಲವೆಂದೂ ಹೇಳಬಹುದು. ಆರ್ಯರು ಮಧ್ಯ ಏಷ್ಯಾದಿಂದಲೋ ಉತ್ತರ ಧ್ರುವದಿಂದಲೋ ಬಂದರೆಂಬ ವಾದಕ್ಕೆ ಆಧಾರ ದೊರೆಯುವಂತೆ ಅವರು ಆರ್ಯಾವರ್ತದಲ್ಲಿದ್ದರೆಂಬುದಕ್ಕೂ ಆಧಾರಗಳಿಲ್ಲದೇ ಇಲ್ಲ. ವೇದ ಶಬ್ದಗಳ ಅರ್ಥವೃತ್ತಿ ಸಂದಿಗ್ಧವಾಗಿರುವುದೂ ಅವಕ್ಕೂ ನಮಗೂ ಸಹಸ್ರಾರು ವರ್ಷಗಳ ಅಂತರವಿರುವುದೂ ಈ ವಿಧವಾದ ಭಿನ್ನಾಭಿಪ್ರಾಯಗಳಿಗೆ ಕಾರಣ. ಯಾಸ್ಕಾಚಾರ್ಯರ ಕಾಲಕ್ಕೇ ವೇದಮಂತ್ರಗಳು ಸುಲಭವಾಗಿ ಅರ್ಥವಾಗುತ್ತಿರಲಿಲ್ಲವೆಂದು ಹೇಳಿರುವಾಗ ಈಗ ಆ ಮಂತ್ರಗಳ ಆಧಾರದಿಂದಲೇ ಸಿದ್ಧಾಂತಗಳನ್ನು ಸ್ಥಾಪಿಸಲು ಯತ್ನಿಸುವುದು ಯಶಸ್ವಿಯಾಗದು. ಅಲ್ಲದೇ ವೇದಸೂಕ್ತಗಳು ಒಂದೇ ಕಾಲಕ್ಕೆ ಸೇರಿದವೂ ಅಲ್ಲ. ಭಿನ್ನಭಿನ್ನಕಾಲದಲ್ಲಿ ಭಿನ್ನ ಭಿನ್ನ ಋಷಿಗಳಿಂದ ಬೇರೆ ಬೇರೆ ದೇಶ ಮತ್ತು ಪರಿಸ್ಥಿತಿಗಳಲ್ಲಿ ದೃಷ್ಟವಾದ ಮಂತ್ರಗಳಿವು. ಹೀಗಾಗಿ ವೇದದಲ್ಲಿ ಉತ್ತರ ಧ್ರುವದ ಅಂಶವೂ ಇರಬಹುದು. ಆರ್ಯಾವರ್ತದ ಮೊಜವದಾದಿ ವಿಚಾರಗಳೂ ಇರಬಹುದು. ಅಷ್ಟರಿಂದಲೇ ಆರ್ಯರ ಮೂಲವಸತಿ ಯಾವುದೆಂಬುದನ್ನು ಅವು ಸಾಧಿಸಲಾರವು. ಬೇರೆ ಬೇರೆ ಭೌಗೋಳಿಕ ಪರಿಸ್ಥಿತಿಗಳಲ್ಲಿ ಬೇರೆ ಬೇರೆ ಪ್ರದೇಶಗಳಿಗೆ ಅವು ಹೋಗಿರಬಹುದು.
ಋಗ್ವೇದದಲ್ಲಿ ಬರುವ ಪರ್ವತಗಳು, ನದಿಗಳು, ಮತ್ತು ಪ್ರದೇಶಗಳು ಮೊದಲಾದವೆಲ್ಲಾ ಆರ್ಯಾವರ್ತಕ್ಕೆ ಸಂಬಂಧಿಸಿವೆ. ಇಂದಿನ ಪರ್ಷಿಯಾ, ಇರಾನ್, ಕಾಬೂಲ್ ಪ್ರಾಂತಗಳೆಲ್ಲಾ ಆರ್ಯಾವರ್ತದೊಳಗೆ ಅಡಕವಾಗಿದ್ದವೆಂದೂ ಗೊತ್ತಾಗುತ್ತದೆ. ಆರ್ಯರು ಇಲ್ಲಿಯೇ ಮೊದಲು ವಾಸವಾಗಿದ್ದು ಇಲ್ಲಿಂದಲೇ ಇತರ ಭಾಗಗಳಿಗೆ ವಲಸೆ ಹೋಗೆರಬೇಕೆಂದು ಸಾರುವ ವಾದ ಅಸಂಭವಾದುದಲ್ಲ. ತುಲನಾತ್ಮಕ ಭಾಷಾಶಾಸ್ತ್ರದಂತೆ ಸಂಸ್ಕೃತ, ಇಂಗ್ಲಿಷ್, ಲ್ಯಾಟಿನ್, ಪರ್ಷಿಯನ್, ಮೊದಲಾದ ಭಾಷೆಗಳು ಇಂಡೋ ಜರ್ಮನಿಕ್ ವಂಶಕ್ಕೆ ಸೇರಿದುವೆಂದು ಸಮರ್ಥಿಸಲಾಗಿದೆ. ಇವರೆಲ್ಲಾ ಒಂದೇ ಬುಡಕಟ್ಟಿನವರೆಂದು ಇದರಿಂದ ಸಿದ್ಧವಾಗುತ್ತದೆ. ಈ ಮೂಲ ಬುಡಕಟ್ಟಿನ ಜನ ಆರ್ಯಾವರ್ತದಿಂದಲೇ ಇತರ ಭಾಗಗಳಿಗೆ ವಲಸೆ ಹೋಗಿದ್ದಿರಬಹುದು.; ಮಧ್ಯ ಏಷ್ಯಾದಿಂದಲೇ ಬಂದಿರಬೇಕಾಗಿಲ್ಲ.
ಹರಪ್ಪ ಮತ್ತು ಮೊಹೆಂಜದಾರೋ ಪ್ರದೇಶದಲ್ಲಿ ಉಪಲಬ್ಧವಾಗಿರುವ ನಾಗರಿಕತೆಗೂ ಆರ್ಯರ ಈ ನಾಗರೀಕತೆಗೂ ಸಂಬಂಧವೆದೆಯೇ ? ಅದು ಎಂಥದು ? ಎಂಬ ಬಗೆಯೂ ವಿಚಾರ ವಿವಿಧವಾಗಿ ನಡೆದಿದೆ. ಸಿಂಧೂ ಬಯಲಿನ ಆ ನಾಗರೀಕತೆ ಹೆಚ್ಚೆಂದರೆ ಕ್ರಿ.ಪೂ. ೪೦೦೦ ವರ್ಷಗಳಿಗೆ ಸಂಬಂಧಿಸಿದುದೆನ್ನಲಾಗಿದೆ. ಋಗ್ವೇದದ ಕಾಲ ಕ್ರಿ.ಪೂ ೫೦೦೦ ಕ್ಕೂ ಹಿಂದಿನದೆಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಈ ಪರಿಸ್ಥಿತಿಯಲ್ಲಿ ಸಿಂಧೂನದಿ ನಾಗರಿಕತೆಯು ವೇದೋತ್ತರ ಕಾಲೀನವೇ ? ಅಥವಾ ವೇದಗಳ ನಾಗರಿಕತೆಗೆ ಸಮಕಾಲೀನವಾದುದೇ ? ಈ ಅಂಶವೂ ಚರ್ಚೆಗೊಳಗಾಗಿದೆ. ಈ ಪ್ರಶ್ನೆ ಇನ್ನೂ ಜಟಿಲವಾಗಿಯೇ ಉಳಿದಿದೆ. ಆರ್ಯರು ಮಧ್ಯ ಏಷ್ಯಾದಿಂದ ಬಂದವರೆಂದು ಒಂದು ಊಹೆ ಮಾತ್ರ. ಹಾಗೆಯೇ ಆರ್ಯಾವರ್ತದಲ್ಲಿಯೇ ಇದ್ದು ಇತರ ಭಾಗಗಳಿಗೆ ಹೋದರೆಂಬುದೂ ಮತ್ತೊಂದು ಊಹೆ. ಇವುಗಳಲ್ಲಿ ಯಾವುದೊಂದನ್ನೂ ಸ್ಥಾಪಿಸುವ ಪ್ರಬಲ ಪ್ರಮಾಣಗಳು ಉಪಲಬ್ಧವಾಗುವವರೆಗೂ ಈ ಪ್ರಶ್ನೆ ಇನ್ನೂ ನಿರ್ಣೀತವಾಗಿಲ್ಲವೆಂದೇ ಹೇಳಬೇಕಾಗಿದೆ.
(ಇಲ್ಲಿಗೆ ಮುಗಿದಿದೆ)