Pages

Friday, July 29, 2011

ವಿವೇಕ ಚೂಡಾಮಣಿ -ಭಾಗ-2

ಶ್ರೀ ಶಂಕರಾಚಾರ್ಯರ ಹಲವು ಪ್ರಕರಣ ಗ್ರಂಥಗಳಲ್ಲಿ ವಿವೇಕ ಚೂಡಮಣಿಯು ಅತ್ಯಂತ ವಿಶಿಷ್ಟವಾದುದಾಗಿದೆ. ಆರಂಭದಿಂದ ಅಂತ್ಯದವರೆವಿಗೂ ಎಲ್ಲಿಯೂ ದಿಕ್ಕು ತಪ್ಪದೆ ವೇದೋಪನಿಷತ್ತುಗಳ ಸಾರವನ್ನು ತುಂಬಾ ಸರಳವಾದ ಭಾಷೆಯಲ್ಲಿ ತಿಳಿಸುತ್ತಾ ನಿರ್ದಿಷ್ಟವಾದ ಗುರಿಯನ್ನು ಮುಟ್ಟುತ್ತದೆ. ರಾಜಕಾರಣಿಗಳ ಭಾಷಣದಂತೆ ಎಲ್ಲೋ ಆರಂಭವಾಗಿ ಮತ್ತೆಲ್ಲೋ ಮುಗಿಯುವಂತಾಗದೆ, ಆತ್ಮ ಸಂಸ್ಕಾರದ ಅರಿವಿನಿಂದ ಆರಂಭವಾಗಿ ಮುಕ್ತಿಯೆಡೆಗೆ ಸಾಗುವ ದಾರಿಯ ವಿಚಾರಗಳು ಆಸಕ್ತರನ್ನು ಸಲೀಸಾಗಿ ಓದುವಂತೆ ಹಿಡಿದಿಡುತ್ತದೆ. ಇಂತಹ ಗ್ರಂಥಗಳ ವಿಚಾರಗಳನ್ನು ತಿಳಿಯುವುದು ಮತ್ತು ಅದನ್ನು ವರ್ತಮಾನಕ್ಕೆ ಅನ್ವಯವಾಗುವಂತೆ ವಿವರಿಸುವುದು ತುಸು ಕಷ್ಟವಾದರೂ, ವಿವೇಕ ಚೂಡಾಮಣಿಯಲ್ಲಿ ಬಳಸಿರುವ ಭಾಷೆಯ ಲಾಲಿತ್ಯ, ವಿಚಾರಗಳು ಎಲ್ಲಾ ಕಾಲಕ್ಕೂ ಪ್ರಸ್ತುತವಾಗುವಂತಯೇ ಇದೆ. ಈಗಾಗಲೇ ಚೂಡಾಮಣಿಯ ಕನ್ನಡದ ವಿವರಣೆಗಳಿರುವ ಹಲವು ಪುಸ್ತಕಗಳು ಹೊರಬಂದಿದ್ದು, ಅದರಲ್ಲಿ ಪ್ರಮುಖವಾಗಿ ಶ್ರೀ ಚಂದ್ರಶೇಖರ ಭಾರತಿಗಳ ವ್ಯಾಖ್ಯಾನವನ್ನು ನನ್ನ ಅಧ್ಯಯನಕ್ಕೆ ಇಟ್ಟುಕೊಂಡಿದ್ದೇನೆ. ಇಲ್ಲಿ ಬರುವ ವಿಚಾರಗಳು ಮತ್ತೆಲ್ಲೋ ಬಂದಿರಲೂ ಬಹುದು ಅಥವಾ ಬಂದಿಲ್ಲದೇ ಇರಬಹುದು, ಸಾಧ್ಯವಾದಷ್ಟು ಅಧ್ಯಯನಪರವಾದ ಹೊಸ ವಿಚಾರಗಳನ್ನು ಬರೆಯಲು ಯತ್ನಿಸುತ್ತೇನೆ. ಸರಳ ಸಂಸ್ಕೃತ ಭಾಷೆಯಲ್ಲಿ ಸುಮಾರು ೫೮೧ ಸೂಕ್ತಿಗಳೊಂದಿಗೆ ಹಲವು ಅಲಂಕಾರಗಳನ್ನು ಬಳಸಿ ರಚಿತವಾಗಿರುವ ಈ ಗ್ರಂಥವು ಕೇವಲ ಪಾವಿತ್ರ್ಯತೆಗಾಗಿಯಾಗಲೀ ಅಥವಾ ಜಗದ್ಗುರುಗಳಿಂದ ಹೇಳಲ್ಪಟ್ಟಿದೆ ಎಂದಾಗಲೀ ಮಹತ್ವವನ್ನು ಪಡೆಯದೆ , ಬದುಕಿನ ಅನೇಕ ಗೊಂದಲಗಳನ್ನು ನಿವಾರಿಸಿ ಮನಸಿಗೆ ನೆಮ್ಮದಿಯನ್ನೂ ವಿವೇಕವನ್ನೂ ತಂದುಕೊಡುವ ಗ್ರಂಥವಾಗಿದೆ. ಆಧುನಿಕ ಜಗತ್ತಿನ ವಿಜ್ಞಾನ-ತಂತ್ರಜ್ಞಾನ ಶಾಸ್ತ್ರಗಳಲ್ಲಿ ಹೇಳಲ್ಪಡುತ್ತಿರುವ ವಿಚಾರಗಳು ನಮ್ಮ ಭಾರತೀಯ ಬೇರಿನದೇ ಆದ ಉಪನಿಷತ್ಸಾರಗಳಲ್ಲಿ ಹೇಗೆ ಸೂಕ್ಷ್ಮವಾಗಿ ಅಡಕವಾಗಿದೆ ಎಂಬುದನ್ನು ಈ ಗ್ರಂಥದ ಅಧ್ಯಯನದ ಮೂಲಕ ತಿಳಿಯಬಹುದಾಗಿದೆ.

ಗ್ರಂಥದ ಆರಂಭದ ಶ್ಲೋಕವು ಹೀಗಿದೆ


सर्व वेदांतसिद्धांत गोचरमं तमगोचरम् ।
गोविन्दं परमानन्दं सद्गुरुं प्रणतोस्म्हम् ॥१॥ಸರ್ವವೇದಾಂತ ಸಿದ್ಧಾಂತ ಗೋಚರಂ ತಂ ಅಗೋಚರಮ್ |
ಗೋವಿದಂ ಪರಮಾನಂದಂ ಸದ್ಗುರುಂ ಪ್ರಣತೋಸ್ಮ್ಯಹಮ್ ||೧||

ಗ್ರಂಥದ ಆರಂಭದಲ್ಲಿ ಶ್ರೀ ಶಂಕರರು ಗೋವಿಂದನಿಗೆ ತಮ್ಮ ನೆನೆಕೆಗಳನ್ನು ಸಲ್ಲಿಸಿದ್ದಾರೆ. ಶಂಕರಾಚಾರ್ಯರ ದೀಕ್ಷಾ ಗುರುಗಳ ಹೆಸರು ಗೋವಿಂದ ಭಗವಾತ್ಪಾದರೆಂದು ತಿಳಿಯಲಾಗಿದೆ. ಹಾಗೆಯೇ ಶ್ರೀ ಕೃಷ್ಣನು ಶಂಕರರ ಕುಲದೇವತೆಯೆಂದೂ ಗ್ರಂಥಾಂತರದಲ್ಲಿ ತಿಳಿದುಬರುತ್ತದೆ. ಅವರ ಹುಟ್ಟೂರಾದ ಕೇರಳ ರಾಜ್ಯದ ಕಾಲಟಿಯಲ್ಲಿ ಪೂರ್ಣಾ(ಪೆರಿಯಾರ್) ನದಿಯ ದಡದಲ್ಲಿ ಇರುವ ಶ್ರೀ ಕೃಷ್ಣನ ದೇವಾಲಯವನ್ನು ಇಂದಿಗೂ ಕಾಣಬಹುದು. ಗೋವಿಂದನೆಂದರೆ ಗೋಪಾಲನೂ ಆಗುವನು, ಬೆಟ್ಟಗಳ ಒಡೆಯನೂ ಆಗುವನು ಹಾಗೆಯೇ ಗುರು ಗೋವಿಂದ ಭಗವತ್ಪಾದರೂ ಆಗುವರು.
ಗುರುವಿನ ವಿಚಾರಕ್ಕೆ ಬಂದರೆ , ಶಂಕರರು ಸಹಜವಾಗಿ ಗ್ರಂಥದ ಮೊದಲಲ್ಲಿ ತಮ್ಮ ಗುರುಗಳನ್ನು ನೆನೆಪಿಸಿಕೊಂಡಿದ್ದಾರೆ.
ಆ ಗುರುಗಳಾದರೂ ಎಂತಹವರು ? ಅವರು ಕಣ್ಣಿಗೆ ಕಾಣುವವರಲ್ಲ, ಬುದ್ಧಿಗೆ ತಿಳಿಯುವವರಲ್ಲ, ಮಾತಿಗೆ ಸಿಲುಕುವವರಲ್ಲ, ಅವರ ದೇಹಕ್ಕೆ ಯಾವ ಆದರಣೆಯೂ ಇಲ್ಲ, ಅದು ಅಗೋಚರವಾದುದು ಮತ್ತು ಅಲೌಕಿಕವಾದು. ಹಾಗಾದರೆ ಶಂಕರರು ತಮ್ಮ ಗುರುಗಳನ್ನು ಕಂಡಿದ್ದಾದರೂ ಹೇಗೆ ? ಯಾವ ರೂಪದಲ್ಲಿ ಕಂಡುಕೊಂಡರು ?.
ಶಂಕರರಿಗೆ ತಮ್ಮ ಗುರುಗಳು ಕಾಣಿಸಿದ್ದು ಅರಿವಿನ ರೂಪದಲ್ಲಿ ಮತ್ತು ಜ್ಞಾನದ ಬೆಳಕಿನಲ್ಲಿ. ಜಗತ್ತಿನ ಎಲ್ಲಾ ಲೌಕಿಕ-ಪಾರಮಾರ್ಥಿಕ ಸಿದ್ಧಾಂತ-ವೇದಾಂತಗಳ ರೂಪದಲ್ಲಿ ಕಂಡರು .

ದೇಹಕೆ ಸಿಲುಕದ
ಮನಸಿಗೆ ನಿಲುಕದ
ಅರಿವಿಗೆ ತೋರುವ
ಗುರು ಗೋವಿಂದಗೆ
ತಲೆ ಬಾಗಿಸುವೆ

ಎಂದು ಹೇಳುತ್ತಾ ಗುರುವನ್ನು ಅರಿವಿನ ರೂಪದಲ್ಲಿ ಕಂಡೆ ಎಂದು ಸಾರುತ್ತಾರೆ. ಯಾವ ವೇದಾಂತ-ಸಿಧ್ಧಾಂತಗಳು ನನ್ನ ಅರಿವಿಗೆ ಕಾರಣವಾದವೋ ಅದೇ ನನ್ನ ಗುರುವು ಮತ್ತು ಆ ತತ್ತ್ವಜ್ಞಾನವೇ ಗೋವಿಂದ ಗುರುಗಳೆಂದು
ಸೂಚ್ಯವಾಗಿ ಹೇಳುತ್ತಾರೆ. ಮಾತು-ಮನಸಿಗೆ ನಿಲುಕದೆ ವೇದಾಂತ-ಸಿದ್ಧಾಂತದ ಮೂಲಕ ಎಲ್ಲರಿಗೆ ಕಾಣುವಂತಹ ಅರಿವಿನ ಗುರುವಾದ ಗೋವಿಂದರಿಗೆ ನಮಿಸುತ್ತೇನೆ ಎಂದು ಶಂಕರರು ಆರಂಭಿಸುತ್ತಾರೆ. ಗುರು ಅನ್ನುವ ಪದಕ್ಕಾಗಲೀ ಅಥವಾ ಗುರುವಿನ ಲೌಕಿಕ ದೇಹಕ್ಕಾಗಲೀ ಹೆಚ್ಚು ಮಹತ್ವವಿಲ್ಲವೆಂಬುದನ್ನು ಶಂಕರರು ಈ ಸೂಕ್ತದ ಮೂಲಕ ಸೂಕ್ಷ್ಮವಾಗಿ ಹೇಳುತ್ತಾರೆ. ’ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ’ ಎಂಬ ದಾಸರ ಪದವೊಂದಿದೆ. ಗುರುವಿನ ಗುಲಾಮನಾಗುವುದು ಎಂದರೆ ಗುರುವಿನಲ್ಲಿರುವ ಅರಿವಿನ ಗುಲಾಮನಾಗುವುದು ಎಂದೇ ಅರ್ಥ. ಕೇವಲ ಗುರುವಿನ ಬಾಹ್ಯ ದೇಹದ ಸೇವೆ ಮಾಡಿಕೊಂಡು ಸಮಯ ತಳ್ಳಿದರೆ ತಿಳಿವು ಮೂಡುವುದಿಲ್ಲ , ಅದರೊಟ್ಟಿಗೆ ಆ ಸದ್ಗುರುವಿನಲ್ಲಿ ಅಡಕವಾಗಿರುವ ವಿದ್ಯೆಯನ್ನೂ ಸಂಪಾದಿಸಬೇಕು ಅಂತಹ ವಿದ್ಯೆಯೇ ನಿಜವಾದ ಗುರುವಿನ ರೂಪ ಎಂದು ಶಂಕರರು ಹೇಳುತ್ತಾರೆ.

ಕನ್ನಡದ ಮೇರು ಕಲಾವಿದ ರಾಜಕುಮಾರರು ಇಂದು ನಮ್ಮೊಂದಿಗಿಲ್ಲದಿರಬಹುದು, ಆದರೆ ಅವರ ಚಿತ್ರಗಳು, ಅಭಿನಯ ಅವರ ಹಾಡುಗಾರಿಕೆಯಿಂದ ಎಲ್ಲಾ ಕಾಲದಲ್ಲೂ ಅವರು ಜೀವಂತವಾಗಿರುತ್ತಾರೆ ಅದರ ಮೂಲಕವೇ ಅವರು ಗೋಚರಿಸುತ್ತಾರೆ. ಹಾಗೆಯೇ ಸದ್ಗುರುವೂ ಸಹ, ಅರಿವಿನ ಬೆಳಕನ್ನು ಚೆಲ್ಲುವ ಮೂಲಕ ವಿಷಯಾಸಕ್ತರಿಗೆ ಯಾವಾಗಲೂ ಕಾಣಿಸುತ್ತಾರೆ. ಗುರುವು ಹೇಗಿರಬೇಕು ಎಂಬುದಕ್ಕೂ ಇದೇ ಸೂಕ್ತವು ಅನ್ವಯವಾಗಬಲ್ಲುದು. ಗುರುವೆನಿಸಿಕೊಂಡವನು ತನ್ನ ಹಾವ-ಭಾವಗಳಿಂದಾಗಲೀ, ಹಣದ ಪ್ರಭಾವದಿಂದಾಗಲೀ ಅಥವಾ ರಾಜಕೀಯ ವಿಷಯಗಳಿಂದಾಗಲೀ ಅನೇಕ ಶಿಷ್ಯರನ್ನು ಸಂಪಾದಿಸಿಕೊಂಡರೆ ಕೊನೆಗೆ ಅಂತಹ ಶಿಷ್ಯರಿಂದಲೇ ಗುರುವೆಂಬ ಘನತೆಯನ್ನೂ ಕಳೆದುಕೊಳ್ಳುತ್ತಾನೆ. ಇಂದು ಇಂತಹ ಅನೇಕ ಗುರುಗಳನ್ನು ಕಾಣಬಹುದಾಗಿದೆ !. ಇಲ್ಲಿ ಸದ್ಗುರು ಶ್ರೀಧರರು ಹೇಳಿದ ವಾಕ್ಯವೊಂದನ್ನು ನೆನಪಿಸಿಕೊಳ್ಳಬಹುದು,

ಶತ್ರೋರಪಿ ಗುಣಾವಾಚ್ಯಾ ದೋಷಾವಾಚ್ಯಾ ಗುರೋರಪಿ |
ಯುಕ್ತಿಯುಕ್ತಂ ವಚೋಗ್ರಾಹ್ಯಂ ಬಾಲಾದಪಿ ಶುಕಾದಪಿ ||
ಗುರೋರಪ್ಯವಲಿಪ್ತಸ್ಯ ಕಾರ್ಯಾಕಾರ್ಯಮಜಾನತಃ|
ಅಪಾರ್ಥಪ್ರತಿಪನ್ನಸ್ಯ ನ್ಯಾಯ್ಯಂ ಭವತಿ ಶಾಸನಮ್ ||

"ಗುರು ಎಂದಾಕ್ಷಣ ಅವರ ಅಯೋಗ್ಯ, ಕೀಳು ವಿಚಾರಗಳು ತಿಳಿದಿದ್ದರೂ ಸಹ ಅವರನ್ನು ಅನುಸರಿಸುವುದು ತಪ್ಪು. ತನ್ನ ನಡತೆ ಮತ್ತು ಒಳ್ಳೆಯ ಗುಣಗಳಿಂದ ಯಾರು ಉತ್ತಮರೆನಿಸಿಕೊಳ್ಳುತ್ತಾರೋ ಅವರೇ ನಿಜವಾದ ಸದ್ಗುರುಗಳು"
ಎಂದು ಹೇಳುತ್ತಾರೆ. ನಮ್ಮ ಜಾತಿಯವರೆಂದೋ, ಮತ-ಧರ್ಮದವರೆಂದೋ ಕುರುಡು ಬುದ್ದಿಯಿಂದ ಯಾರೋ ಒಬ್ಬರನ್ನು ಶ್ರೀ ಶ್ರೀ ಶ್ರೀ ಜಗದ್ಗುರುವೆಂದು ಒಪ್ಪುವ ಬದಲು ಅಂತಹ ಗುರುವಿನಲ್ಲಿರುವ ಅರಿವನ್ನು ಒರೆಗೆ ಹಚ್ಚಬೇಕು ಎಂಬುದು ಮೇಲಿನ ಸೂಕ್ತಗಳ ಸಾರವಾಗಿದೆ. ಶಿಷ್ಯನು ಹೇಗಿರಬೇಕು ಎಂಬುದಕ್ಕೂ ಮೇಲಿನ ಸೂಕ್ತಗಳೇ ಮಾದರಿಯಾಗಿವೆ.
ನಮಗೂ ಸಹ ವಿವೇಕ ಚೂಡಾಮಣಿಯನ್ನು ಶ್ರೀ ಶಂಕರರು ಬರೆದಿದ್ದಾರೆ ಹಾಗಾಗಿ ಅದೊಂದು ಪವಿತ್ರ ಗ್ರಂಥ ಎನ್ನುವ ಭಾವನೆಗಿಂತಲೂ , ಅದರೊಳಗಿನ ಸತ್ವವನ್ನು ತಿಳಿದು ಅದರಲ್ಲಿ ಶಂಕರರನ್ನು ಕಂಡರೆ ನಾವು ನಿಜವಾದ ಗುರುವನ್ನು ಪಡೆದುಕೊಂಡಂತಾಗುತ್ತದೆ ಎನ್ನಬಹುದು. ಇಂದು ಗೋವಿಂದರಂತಹ ಗುರುಗಳು ಮತ್ತು ಜ್ಞಾನದಲ್ಲೇ ಗುರುವನ್ನು ಕಂಡ ಶಂಕರರಂತಹ ಶಿಷ್ಯರು ಸಿಗುವುದು ಬಲು ಕಷ್ಟ. ಮುಕ್ತಿ ಮಾರ್ಗಕ್ಕೆ ಅಥವಾ ನೆಮ್ಮದಿಯ ಬದುಕಿಗೆ ಆಧ್ಯಾತ್ಮವೇ ಅಂತಿಮವೆಂದೇನೂ ಇಲ್ಲ, ಎಲ್ಲರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಉತ್ತಮ ಸಾಧನೆಗೈಯಬಹುದಾಗಿದೆ ಅದರಿಂದಲೇ ನೆಮ್ಮದಿಯನ್ನೂ ಪಡೆಯಬಹುದಾಗಿದೆ. ಹಾಗೆ ಸಾಧಿಸಲು ಅನುಸರಿಸಬೇಕಾದ ಮಾರ್ಗಗಳು ನಮ್ಮ ವೇದೋಪನಿಷತ್ತುಗಳಲ್ಲಿದೆ. ಎಲ್ಲೆಲ್ಲೋ ತಡಕಾಡುವ ಬದಲು ನೇರವಾಗಿ ನಮ್ಮ ಸಂಸ್ಕೃತಿಯ ಬೇರನ್ನು ಅಪ್ಪಿಕೊಳ್ಳುವುದು ಉಚಿತವೇ ಆಗಿದೆ. ಅರಿವನ್ನು ಹಂಚುವ ಮತ್ತು ಪಡೆಯುವ ಕಾರ್ಯದಲ್ಲಿ ಗುರು-ಶಿಷ್ಯರಿಬ್ಬರಿಗೂ ಸ್ಥಿತಪ್ರಜ್ಞತೆಯ ಅಗತ್ಯವಂತೂ ಇದ್ದೇ ಇದೆ, ಅಲ್ಲಿ ಸ್ವಾರ್ಥಕ್ಕೆ ಅವಕಾಶವಿಲ್ಲ.
ಮುಂದಿನ ಬರಹದಲ್ಲಿ ವಿವೇಕ ಚೂಡಾಮಣಿಯ ಆರಂಭದ ಮೊದಲ ಸೂಕ್ತಿಯನ್ನು ತಿಳಿಯೋಣ.
-ಹೆಚ್.ಎಸ.ಸುಬ್ರಹ್ಮಣ್ಯ
---------------------------------------------------------------------
ಲೇಖನವನ್ನು ಓದುತ್ತಿದ್ದಂತೆ ವೇದಸುಧೆಯ ಬಳಗದ ಸದಸ್ಯರು ಇಲ್ಲಿ ಸ್ವಲ್ಪ ಜಿಜ್ಞಾಸೆ ಮಾಡಬಾರದೇಕೆ? ಎಂಬ ಆಲೋನೆಯಿಂದ ನನ್ನ ಮಾತು ಬರೆದಿರುವೆ. ಇನ್ನು ನಿಮ್ಮ ಸರದಿ.......
----------------------------------------------------------------------
ನನ್ನ ಮಾತು :
ನನ್ನನ್ನು ಬಲವಾಗಿ ಹಿಡಿದಿಟ್ಟ ಮೂರ್ನಾಲ್ಕು ವಾಕ್ಯಗಳನ್ನು ಇಲ್ಲಿ ಸ್ಮರಿಸಬೇಕೆನಿಸಿದೆ.
"ಗುರುವಿನ ಗುಲಾಮನಾಗುವುದು ಎಂದರೆ ಗುರುವಿನಲ್ಲಿರುವ ಅರಿವಿನ ಗುಲಾಮನಾಗುವುದು ಎಂದೇ ಅರ್ಥ. ಕೇವಲ ಗುರುವಿನ ಬಾಹ್ಯ ದೇಹದ ಸೇವೆ ಮಾಡಿಕೊಂಡು ಸಮಯ ತಳ್ಳಿದರೆ ತಿಳಿವು ಮೂಡುವುದಿಲ್ಲ , ಅದರೊಟ್ಟಿಗೆ ಆ ಸದ್ಗುರುವಿನಲ್ಲಿ ಅಡಕವಾಗಿರುವ ವಿದ್ಯೆಯನ್ನೂ ಸಂಪಾದಿಸಬೇಕು ಅಂತಹ ವಿದ್ಯೆಯೇ ನಿಜವಾದ ಗುರುವಿನ ರೂಪ"ಎಂತಹಾ ಜಾಗೃತಿ ಮೂಡಿಸುವಂತಹ ದಿಟ್ಟ ಮಾತು!ಅರಿವನ್ನು ಗುರುತಿಸದೆ ಕೇವಲ ಗುರುವಿನ ದೇಹಕ್ಕೆ ಸೇವೆ ಮಾಡಿಕೊಂಡು ಅನೇಕರು ಮುಗ್ಧವಾಗಿರುವ ಉಧಾಹರಣೆ ಕಂಡಿರುವೆ.ಅಂತವರು ಜಾಗೃತರಾಗಬೇಕಲ್ಲವೇ?

"ಗುರು ಎಂದಾಕ್ಷಣ ಅವರ ಅಯೋಗ್ಯ, ಕೀಳು ವಿಚಾರಗಳು ತಿಳಿದಿದ್ದರೂ ಸಹ ಅವರನ್ನು ಅನುಸರಿಸುವುದು ತಪ್ಪು. ತನ್ನ ನಡತೆ ಮತ್ತು ಒಳ್ಳೆಯ ಗುಣಗಳಿಂದ ಯಾರು ಉತ್ತಮರೆನಿಸಿಕೊಳ್ಳುತ್ತಾರೋ ಅವರೇ ನಿಜವಾದ ಸದ್ಗುರುಗಳು"ಇಲ್ಲೂ ಎಂತಹಾ ದಿಟ್ಟತನಬೇಕಲ್ಲವೇ!
"ಜ್ಞಾನದಲ್ಲೇ ಗುರುವನ್ನು ಕಂಡ ಶಂಕರರಂತಹ ಶಿಷ್ಯರು ಎಲ್ಲೆಲ್ಲೋ ತಡಕಾಡುವ ಬದಲು ನೇರವಾಗಿ ನಮ್ಮ ಸಂಸ್ಕೃತಿಯ ಬೇರನ್ನು ಅಪ್ಪಿಕೊಳ್ಳುವುದು ಉಚಿತವೇ ಆಗಿದೆ".
ಎಂತಹಾ ಗಟ್ಟಿ ಮಾತು!
ಇದು ಸಾಂದರ್ಭಿಕವೂ ಆಗಿದೆ. ವೇದಗಳುದಿಸಿದ ಈ ನೆಲದಲ್ಲಿ ವೇದದ ಸಾರವನ್ನು ತಿಳಿಸುವ "ಭಗವದ್ಗೀತಾ ಆಂದೋಲನದ" ಬಗ್ಗೆ ಬುದ್ಧಿಜೀವಿಗಳೆನಿಸಿಕೊಂಡವರು ವಿರೋಧಿಸಿ ಸುದ್ದಿ ಮಾಡುತ್ತಾರೆ. ಜಾತ್ಯಾತೀತ ಸರ್ಕಾರದಕಲ್ಲಿ ಮಕ್ಕಳಿಗೆ ಖುರಾನ್,ಬೈಬಲ್ ವಿಚಾರಗಳನ್ನೂ ತಿಳಿಸಿ ಎಂದು ಅರಚುತ್ತಾರೆ. ಅಂತವರಿಗೆ ಇದೊಂದು ಕಿವಿಮಾತಾಗಬೇಕು. ನಮ್ಮ ವೇದಉಪನಿಷತ್ತುಗಳನ್ನು ಅಲ್ಪಸ್ವಲ್ಪ ವಾದರೂ ಅಧ್ಯಯನ ಮಾಡಿದರೆ ಸಮಾಜದಲ್ಲಿ ತಾಂಡವಾಡುತ್ತಿರುವ ಹಲವು ಸಮಸ್ಯೆಗಳಿಗೆ ಪರಿಹಾರ ಸಿಕ್ಕೀತು. ಅದನ್ನು ಬದಿಗಿಟ್ಟು ನೀವು ತಿಳಿಸಿದಂತೆ ಎಲ್ಲೆಲ್ಲೋ ತಡಕಾಡಿದರೆ!
-ಹರಿಹರಪುರ ಶ್ರೀಧರ
ಸಂಪಾದಕ

Thursday, July 28, 2011

ವಿವೇಕ ಚೂಡಾಮಣಿ -ಭಾಗ-1

ಹಾಸನ ಜಿಲ್ಲೆಯವರಾದ ಶ್ರೀ ಸುಬ್ರಹ್ಮಣ್ಯ ಹೆಚ್.ಎಸ್. ಇವರು ಇನ್ನು ಮುಂದೆ ವೇದಸುಧೆಯಲ್ಲಿ ತಮ್ಮ ಲೇಖನಗಳನ್ನು ಪ್ರಕಟಿಸಲು ಒಪ್ಪಿ ವೇದಸುಧೆಯ ಲೇಖಕಬಳಗದ ಒಬ್ಬ ಸದಸ್ಯರಾಗಿ ಇಂದು ಸೇರ್ಪಡೆಯಾಗಿದ್ದಾರೆ. ಅವರ ಲೇಖನಗಳು ಇನ್ನುಮುಂದೆ ವೇದಸುಧೆಯಲ್ಲಿ ಪ್ರಕಟವಾಗಲಿವೆ.ಆರಂಭದಲ್ಲಿ ಅವರ ಲೇಖನಗಳನ್ನು ನಾನೇ ಅವರ ಹೆಸರಲ್ಲಿ ಪ್ರಕಟಿಸುವೆ. ಮುಂದೆ ಅವರೇ ಸ್ವತ: ವೇದಸುಧೆಯಲ್ಲಿ ಪ್ರಕಟಿಸುವರು.ಶ್ರೀಯುತರು ಹೆಚ್ಚು ಪ್ರಚಾರಪ್ರಿಯರಲ್ಲ.ವೇದಸುಧೆಯ ಅಭಿಮಾನಿಗಳಿಗೆ ಅವರ ಲೇಖನಗಳೇ ಅವರನ್ನು ಚೆನ್ನಾಗಿ ಪರಿಸಚಯಿಸುತ್ತವೆ. ಶ್ರೀಯುತರನ್ನು ವೇದಸುಧೆಗೆ ಆದರದಿಂದ ಬರಮಾಡಿಕೊಳ್ಳುತ್ತೇನೆ.
-ಹರಿಹರಪುರಶ್ರೀಧರ್
ಸಂಪಾದಕ

ಈ ಜಗತ್ತಿಗೆ ಯಾರು ಅತ್ಯುತ್ತಮವಾದವುಗಳನ್ನು ಕೊಟ್ಟಿರುವರೋ ಅವರು ಎಲೆ ಮರೆಯ ಕಾಯಿಯಂತೆಯೇ ಇದ್ದು ಹೆಸರಿನ ,ಕೀರ್ತಿಯ ಆಸೆಯಾಗನ್ನಾಗಲೀ ಇಟ್ಟುಕೊಳ್ಳದೆ ಮಾನವಕೋಟಿಗೆ ಉತ್ತಮವಾದುದು ಉಳಿದರೆ ಸಾಕೆಂದು ಆಕಾರವಿಲ್ಲದ ಗಾಳಿ, ಬೆಳಕಿನಂತೆ ಆಗಿ ಹೋಗಿದ್ದಾರೆ. ಭಾರತೀಯ ಪುರಾತನ ತತ್ತ್ವಶಾಸ್ತ್ರದ ರಚನಕಾರರು, ಪುರಾತನ ಗುಡಿ-ಕೋಟೆಗಳನ್ನು ಕಟ್ಟಿದವರು, ನಾಗರೀಕ ಜೀವನಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟ ಅನೇಕ ಮಹಾಮಹಿಮರುಗಳ ಹೆಸರುಗಳು ನಮಗೆ ನಿಶ್ಚಿತವಾಗಿ ದೊರಕುವುದಿಲ್ಲ. ಭಾರತೀಯ ತತ್ತ್ವಶಾಸ್ತ್ರದ ಆಧಾರಸ್ತಂಭಗಳಾದ ವೇದೋಪನಿಷತ್ತುಗಳೂ ಸಹ ಇಂತಹ ಅನೇಕ ಅನಾಮಧೇಯ ದೃಷ್ಟಾರರಿಂದಲೇ ಬೆಳಕಿಗೆ ತೆರೆದುಕೊಂಡಿವೆ. ವೇದ-ವೇದಾಂಗಗಳು ಮಾನವನಿಂದ ರಚಿತವಾದವುಗಳಲ್ಲ (ಅಪೌರುಷೇಯ) ಎಂಬ ವಿಚಾರವಿದ್ದರೂ ಮಾನವಕೋಟಿಗೆ ವೇದೋಪನಿಷತ್ತುಗಳ ಸಾರವನ್ನು ತಿಳಿಸಿಕೊಟ್ಟ ಅನೇಕ ಜ್ಞಾನಿಗಳ-ಗುರುಗಳ ವಿವರಗಳು ತಿಳಿದುಬಂದಿಲ್ಲ. ಸೃಷ್ಟಿಯ ಅನೇಕ ವಿಚಿತ್ರಗಳನ್ನು ವೈವಿಧ್ಯಗಳನ್ನು ಸಾವಿರಾರು ವರುಷಗಳಷ್ಟು ಹಿಂದೆಯೇ ಕಂಡುಕೊಂಡು ಆ ಸತ್ಯಗಳನ್ನು ಉಪನಿಷತ್ತುಗಳ ಮೂಲಕ ತೆರೆದಿಟ್ಟ ಋಷಿಗಳನ್ನು, ಯಂತ್ರಗಳ ಸಹಾಯದಿಂದಲೇ ಬದುಕನ್ನು ಕಟ್ಟಿಕೊಂಡು ಜೀವಿಸುತ್ತಿರುವ ಮಾನವನೊಂದಿಗೆ ಹೋಲಿಸಬಹುದೇ ? . ಜಗತ್ತಿನ ಅತ್ಯಂತ ಬುದ್ಧಿವಂತ ಪ್ರಾಣಿಯಾದ ಮಾನವನು ಅನೇಕ ತಾಂತ್ರಿಕ-ವೈಜ್ಞಾನಿಕ ವಸ್ತು-ವಿಧಾನಗಳನ್ನು ಅನ್ವೇಶಿಸಿಕೊಂಡು ತನ್ನ ಬದುಕನ್ನು ನಾಜೂಕಿನ ಗರಡಿಯೊಳಗೆ ದೂಡಿ ಪಳಗಿ ಹೊರಬಂದು ಸ್ವಾರ್ಥದ ಬದುಕನ್ನು ನೆಡೆಸುತ್ತಿರುವ ಇಂದಿನ ಕಾಲಮಾನದ ಜನಕ್ಕೆ ಉಪನಿಷತ್ತುಗಳ ಸಾರವಾಗಲೀ ಅದರ ಆವಶ್ಯಕತೆಯಾಗಲೀ ಪ್ರಸ್ತುತವಾಗಬಲ್ಲುದೆ ?. ಭಗವದ್ಗೀತೆಯು ಭಾರತೀಯ ತತ್ತ್ವಶಾಸ್ತ್ರದ ಪ್ರಮುಖವಾದ ಮತ್ತು ಪವಿತ್ರವಾದ ಗ್ರಂಥವೆಂದು ಗಣಿಸಲ್ಪಟ್ಟಿದೆ. ಅಲ್ಲಿ ಬರುವ ಧ್ಯಾನ ಶ್ಲೋಕದ ಅರಿತವೊಂದು ಹೀಗಿದೆ, " ಉಪನಿಷತ್ತುಗಳು ಹಸುಗಳು, ಗೋಪಾಲಕನು ಹಾಲನ್ನು ಕರೆಯುವವನು, ಅರ್ಜುನನು ಕರು, ಗೀತೆಯೇ ಅಮೃತಸಮಾನವಾದ ಹಾಲು, ಜ್ಞಾನಿಗಳು ಅದನ್ನು ಕುಡಿಯುವರು ". ಹೀಗಾಗಿ ಉಪನಿಷತ್ತೇ ಗೀತೆಗೂ ಆಶ್ರಯವಾದುದು ಎನ್ನಬೇಕಾಗುವುದು. ಇಂದಿನ ಕಾಲಮಾನಕ್ಕೆ ಬಹುತೇಕ ಯುವಜನಾಂಗಕ್ಕೆ ವೇದೋಪನಿಷತ್ತುಗಳ ಸಾರವು ಅಪ್ರಸ್ತುತವೆನಿಸಿದರೂ, ಮಾನವನ ಜೀವನದ ಹುಟ್ಟು-ಸಾವಿನ ಬಗೆಗೆ ವಿಚಾರ ಮಾಡುವ ಸಮಯ ಬಂದಾಗ , ಸೃಷ್ಟಿಯ ಮೂಲವನ್ನು ಹುಡುಕುವ ಆಸೆ ಹುಟ್ಟಿದಾಗ, ಜೀವವಿಕಾಸಕ್ಕೆ ಕಾರಣಗಳನ್ನು ತಿಳಿಯ ಬಯಸುವಾಗ , ವಿಜ್ಞಾನವು ಪ್ರಯೋಗಗಳಿಂದ ಸಿದ್ಧಿಸಿ ತೋರಿಸಲು ಸಾಧ್ಯವಾಗುವುದಿಲ್ಲ ಎಂದಾಗ ಮತ್ತು ರಕ್ತವು ತಣ್ಣಗಾಗಿ ಬಾಳಿನ ಮುಸ್ಸಂಜೆಯು ಅಪ್ಪಿಕೊಂಡು ಮುಂದೇನು? ಎಂಬ ಗೊಂದಲ ಹುಟ್ಟಿದಾಗ ನೆರವಿಗೆ ಬರುವುದೇ ಉಪನಿಷತ್ತುಗಳು !. ’ತನ್ನ ಅರಿವು ತನಗೆ ಗುರು’ ಎಂಬ ಮಾತು ಎಲ್ಲಾ ಕಾಲಕ್ಕೂ ಹೊಂದುವಂತೆಯೇ , " ಆತ್ಮವನ್ನರಿಯಲು ಆಧ್ಯಾತ್ಮಿಕ ಗ್ರಂಥವಾಗಲೀ, ಗುರುವಿನ ನುಡಿಗಳಾಗಲೀ ಸಹಾಯಕವಾಗುವುದಿಲ್ಲ. ಅದು ತನಗೆ ತಾನೇ ಒಬ್ಬನ ಅರಿವಿಗೆ ಅನುಗುಣವಾಗಿ ತಿಳಿದುಬರುವಂತಹುದು. ಆದರೂ ಇಂತಹ ಅರಿವನ್ನು ಪಡೆಯಲು ಗ್ರಂಥವೂ , ಗುರುವೂ ಅವಶ್ಯಕ " ಎಂದು ಯೋಗ ವಾಸಿಷ್ಠ ಸಂಗ್ರಹ ಎಂಬ ಗ್ರಂಥದಲ್ಲಿ ಹೇಳಿದೆ. ಅಂದರೆ, ಗ್ರಂಥಗಳು ಮತ್ತು ಗುರುಗಳು ಆತ್ಮಜ್ಞಾನಕ್ಕೆ ದಾರಿ ತೋರಬಲ್ಲರು ಆದರೆ ಒಬ್ಬನು ತನ್ನ ಅರಿವಿನಿಂದ ಮತ್ತು ಧ್ಯಾನಗಳಿಂದ ಆತ್ಮಜ್ಞಾನವನ್ನು ಹೊಂದಬಹುದು ಎಂಬುದು ಮೇಲಿನ ಸೂಕ್ತದ ಉದ್ದೇಶ. ಉಪನಿಷತ್ತುಗಳಿಂದ ತಿಳಿದುಬರುವ ಸಂಗತಿಗಳು ಎಣಿಕೆಗೆ ನಿಲುಕದ್ದು ಮತ್ತು ಒಂದೊಂದು ಸೂಕ್ತಿಗಳ ಮೇಲೂ ನೂರು ಪುಟಗಳ ಹೊತ್ತಗೆಯನ್ನೇ ಬರೆಯಬಹುದಾದಷ್ಟು ವಿಚಾರಗಳು. ಉಪನಿಷತ್ತುಗಳನ್ನೇ ಆಧಾರವಾಗಿರಿಸಿಕೊಂಡು ಅನೇಕ ಆಚಾರ್ಯರು ಹತ್ತು-ಹಲವು ಗ್ರಂಥಗಳನ್ನು ಮಾನವನ ಅರಿವಿಗಾಗಿ , ತಿಳಿವಿಗಾಗಿ ಬರೆದಿಟ್ಟಿದ್ದಾರೆ. ಅಂತಹ ಅತ್ಯುತ್ತಮ ಗ್ರಂಥಗಳಲ್ಲಿ "ವಿವೇಕ ಚೂಡಾಮಣಿ" ಎಂಬ ಗ್ರಂಥವೂ ಒಂದು. ವಿವೇಕ ಚೂಡಾಮಣಿ ಎಂಬ ಗ್ರಂಥವು ಹಿಂದೂ ಧರ್ಮದ ಪುನರುದ್ಧಾರಕ, ಭಾರತೀಯ ಸಂಸ್ಕೃತಿಗೆ ಮರುಜನ್ಮ ನೀಡಿದ ಮಹಾನ್ ಚೇತನವೆಂದೇ ತಿಳಿಯಲ್ಪಟ್ಟಿರುವ ಶ್ರೀ ಶಂಕರಾಚಾರ್ಯರಿಂದ ರಚನೆಯಾಗಿರುವುದಾಗಿದೆ. ಮಾನವನು ಹೇಗೆ ಹಾರೆ ಗುದ್ದಲಿಗಳಿಂದ (ಯಂತ್ರಗಳಿಂದ) ನೆಲವನ್ನು ಅಗೆದು ನೀರನ್ನು ಪಡೆಯುತ್ತಾನೋ ಹಾಗೆಯೇ ಗುರುಗಳು ಹೇಳಿರುವ ವಿಚಾರಗಳನ್ನು ಅಧ್ಯಯನ ಮಾಡುವುದರಿಂದ ಉತ್ತಮ ಜ್ಞಾನ-ವಿದ್ಯೆಯನ್ನು ಪಡೆಯಬಹುದು (ಪಡೆಯಬೇಕು).

ಯಥಾ ಖನನ್ ಖನಿತ್ರೇಣ ನರೋ ವಾರ್ಯಧಿಗಚ್ಛತಿ |
ತಥಾ ಗುರುಗತಾಂ ವಿದ್ಯಾಂ ಶುಶ್ರೂಷುರಧಿಗಚ್ಛತಿ ||

ಶಂಕರಾಚಾರ್ಯರಿಂದ ರಚಿತವಾಗಿರುವ ವಿವೇಕ ಚೂಡಾಮಣಿಯು ಆ ಹೆಸರಿಗೆ ಅನ್ವರ್ಥವಾಗಿಯೇ ಇದೆ ಎಂಬುದು ವಿದ್ವಾಸಂರ ಅಭಿಮತ. ಜ್ಞಾನ ಸಂಪಾದನೆಗೆ ಉತ್ತಮ ಮಾರ್ಗಗಳನ್ನು ಹುಡುಕುತ್ತಾ ಹೋಗುವುದು ವಿವೇಕಿಗಳ ಲಕ್ಷಣವೇ ಆಗಿದೆ. ಅವಿವೇಕತನದಿಂದ ಬೇಡದ ಕೆಲಸಗಳನ್ನು ಮಾಡಿ ನಂತರ ವ್ಯಥೆಪಡುವ ಬದಲು ಒಳ್ಳೆಯ ಅರಿವಿನ ದಾರಿಯಲ್ಲಿ ನೆಡೆಯಲು ಉತ್ತಮ ಜ್ಞಾನದ ಮಾರ್ಗವನ್ನು ಆರಿಸಿಕೊಳ್ಳುವುದು ಒಳಿತೇ ಆಗಿದೆ.
"ಪ್ರಕ್ಷಾಲನಾದ್ದಿ ಪಂಕಸ್ಯ ದೂರಾದಸ್ಪರ್ಶನಂ ವರಮ್ " ಅಂದರೆ, "ಕೆಸರನ್ನು ತುಳಿಯುವುದೇಕೆ ? ಆಮೇಲೆ ತೊಳೆಯುವುದೇಕೆ ? " . ತೊಳೆದರೆ ದೇಹಕ್ಕಂಟಿದ ಕೆಸರು ಹೋಗಬಹುದು ಮನಕ್ಕಂಟಿದ ಕೆಸರು ಹೋಗುವುದೇ ? .
ಇದನ್ನೇ "ದುಷ್ಟರನ್ನು ಕಂಡರೆ ದೂರವಿರು" ಎಂಬ ಮಾತಿನಲ್ಲೂ ಹೇಳಲಾಗಿದೆ.

ಆಚಾರ್ಯ ಶಂಕರರಿಂದ ರಚಿತವಾಗಿರುವ ವಿವೇಕ ಚೂಡಾಮಣಿಯ ಅಷ್ಟೂ ಸೂಕ್ತಿಗಳನ್ನೂ ಇದೇ ಬ್ಲಾಗಿನಲ್ಲಿ ಕನ್ನಡ ಭಾವಾರ್ಥದೊಂದಿಗೆ ಬರೆಯಬೇಕೆಂಬ ಅಭಿಲಾಷೆಯಿಂದ ಇಷ್ಟೆಲ್ಲಾ ಪೀಠಿಕೆ ಹಾಕಿದ್ದೇನೆ. ನಾನು ಹುಡುಕಿದಂತೆ ಅಂತರಜಾಲದಲ್ಲಿ ವಿವೇಕ ಚೂಡಾಮಣಿಯ ಸಂಪೂರ್ಣ ಭಾವಾರ್ಥವು ಲಭ್ಯವಿದ್ದಂತೆ ಕಂಡುಬರಲಿಲ್ಲ. ಲಭ್ಯವಿದ್ದರೂ ಸಹ ನನಗೆ ಅರಿವಿದ್ದಷ್ಟನ್ನೂ ಇಲ್ಲಿ ಬರೆಯಬೇಕೆಂದುಕೊಂಡಿದ್ದೇನೆ. ಓದಲು ಹೇಗೂ ನೀವೆಲ್ಲಾ ಇದ್ದೇ ಇದ್ದೀರಲ್ಲಾ :-).
ಮುಂದಿನ ಪೋಸ್ಟುಗಳಲ್ಲಿ ಒಂದು ಅಥವಾ ಎರಡು ಸೂಕ್ತಿಗಳನ್ನು ತೆಗೆದುಕೊಂಡು ಅರ್ಥದೊಂದಿಗೆ ಬರೆಯಲಿದ್ದೇನೆ. ಈಗಿನ ಕಾಲಮಾನಕ್ಕೆ ಇದು ಎಷ್ಟು ಪ್ರಸ್ತುತ-ಅಪ್ರಸ್ತುತ ಎಂಬ ವಿಚಾರಕ್ಕಿಂತಲೂ ಯವಾಗ ನಮ್ಮ ತತ್ತ್ವಶಾಸ್ತ್ರದ ಅಗತ್ಯ ಯಾರಿಗೆ ಬೇಕಾಗುತ್ತದೋ ಆಗ ಅಂತರಜಾಲದಲ್ಲಿ ಈ ವಿವೇಕ ಚೂಡಾಮಣಿಯ ಅರ್ಥವು ಸಿಕ್ಕುವಂತಾದರೆ ನನ್ನ ಪ್ರಯತ್ನ ಸಾರ್ಥಕ.

ಕನ್ನಡದಲ್ಲಿ ಭಾವಾರ್ಥವನ್ನು ಬರೆಯುವೆನೆಂದು ಹೇಳಿ ಬರವಣಿಗೆಯಲ್ಲಿ ಇಷ್ಟೊಂದು ಸಂಸ್ಕೃತವನ್ನು ಬಳಸುವುದು ತರವೇ ? ಎಂದು ಇಲ್ಲಿ ಯಾರಾದರೂ ದೊಡ್ಡೋರಿಗೆ ಅನಿಸಿದರೆ , ಅನಿಸಿದ್ದನ್ನು ಹೊಟ್ಟಗೆ ಹಾಕ್ಕೊಂಡು ಮುಂದಕ್ಕೆ ಓದಿ.
ಅರಿವಿಗೆ ನೂರೆಂಟು ದಾರಿಯಿದೆ , ನೂರಾರು ಕವಲುಗಳಿವೆ ಗುರಿ ಮಾತ್ರ ಒಂದೇ !.


ಆತ್ಮಾನಂ ರಥಿನಂ ವಿದ್ದಿ ಶರೀರಂ ರಥಮೇವ ತು |
ಬುದ್ಧಿಂ ತು ಸಾರಥಿಂ ವಿಧ್ಧಿ ಮನಃ ಪ್ರಗ್ರಹಮೇವ ಚ ||
(ಕಠೋಪನಿಷತ್ತು)

ಆತ್ಮನೇ ಬಿಲ್ಲಾಳು,
ದೇಹವೇ ತೇರು,
ಬುದ್ಧಿಯೇ ತೇರಾಳು,
ಮನಸೇ ಲಗಾಮು !

Tuesday, July 26, 2011

ವೇದವಿಚಾರ - ಚಿಂತನ

ಸಹೃದಯರೇ,
                    ಚನ್ನರಾಯಪಟ್ಟಣದಲ್ಲಿ 'ವೇದವಿಚಾರ - ಚಿಂತನ' ಎಂಬ ಕಾರ್ಯಕ್ರಮವನ್ನು ನಡೆಸುತ್ತಿದ್ದು ಅಲ್ಲಿನ ಸತ್ಸಂಗದ ವತಿಯಿಂದ ಬಂದ ಆಹ್ವಾನಪತ್ರಿಕೆಯ ಪ್ರತಿಯನ್ನು ತಮ್ಮ ಅವಗಾಹನೆಗೆ ಪ್ರಕಟಿಸಿದೆ.
-ಕ.ವೆಂ.ನಾಗರಾಜ್.

Monday, July 25, 2011

ಸಾಧನಾ ಪಂಚಕಮ್-ಭಾಗ -12


ಆತ್ಮೀಯ ಬಂಧುಗಳೇ, ಶ್ರೀ ಶಂಕರಾಚಾರ್ಯ ವಿರಚಿತ ಸಾಧನಾಪಂಚಕಮ್ ಕೃತಿಯ ಬಗ್ಗೆ ತಿಪಟೂರು ಚಿನ್ಮಯಾ ಮಿಶನ್ನಿನ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರು ಹಾಸನದ ಶ್ರೀ ಶಂಕರ ಮಠದಲ್ಲಿ ಮಾಡಿದ ಉಪನ್ಯಾಸದ ಎಲ್ಲಾ ಧ್ವನಿ ಕ್ಲಿಪ್ ಗಳನ್ನೂ ಕಳೆದ ಮೂರು ವಾರಗಳಿಂದ ಪ್ರಕಟಿಸುತ್ತಾ ಇಂದು ಕೊನೆಯ ಕಂತನ್ನು ಪ್ರಕಟಿಸಲಾಗಿದೆ. ಅಧ್ಯಾತ್ಮಪಥದಲ್ಲಿ ಸಾಗುತ್ತಿರುವ ಸಾಧಕರಿಗಂತೂ ಬಹಳ ಉತ್ತಮವಾದ ಜೀವನ ಸೂತ್ರಗಳು ಸಾಧನಾ ಪಂಚಕಮ್ ಉಪನ್ಯಾಸದಲ್ಲಿ ಲಭ್ಯ. ಹಾಗಂದು ಸಾಮಾನ್ಯ ಲೌಕಿಗರಿಗೆ ಇದು ಬೇಡವೇ? ಶ್ರದ್ಧೆಯಿಂದ ಈ ಉಪನ್ಯಾಸ ಮಾಲಿಕೆಯನ್ನು ಕೇಳಿನೋಡಿ. ನಿಮ್ಮ ಹಲವು ಸಮಸ್ಯೆಗಳಿಗೆ ಇಲ್ಲಿ ಉತ್ತರವಿದೆ.ಆದ್ದರಿಂದ ಸಾಧನಾ ಪಂಚಕಮ್ ಉಪನ್ಯಾಸ ಮಾಲಿಕೆ ಇಂದಿಗೆ ಮುಗಿದರೂ ಅದನ್ನು ಯಾವಾಗ ಬೇಕಾದರೂ ಕೇಳಲು ಯೋಗ್ಯವಾಗಿದೆ. ನೀವು ಮಾಡಬೇಕಾದುದು ಇಷ್ಟೆ.ಬ್ಲಾಗಿನ ಎಡಬದಿಯಲ್ಲಿ "ಮಾಲಿಕೆಗಳು" ಎಂಬ ತಲೆಬರಹವಿದೆ. ಅದರಡಿಯಲ್ಲಿರುವ "ಸಾಧನಾ ಪಂಚಕಮ್" ಮೇಲೆ ಕ್ಲಿಕ್ ಮಾಡಿದರೆ ಅಷ್ಟೂ ಉಪನ್ಯಾಸದ ಕ್ಲಿಪ್ ಗಳು ನಿಮಗೆ ಕೇಳಲು ಲಭ್ಯವಾಗುತ್ತವೆ. ಅದರ ಉಪಯೋಗವನ್ನು ಎಲ್ಲರೂ ಪಡೆದರೆ ನಮ್ಮ ಪ್ರಯತ್ನ ಸಾರ್ಥಕವಾದೀತು.
------------------------------------------
ಸಾಧನಾ ಪಂಚಕಂ -ಮೆಟ್ಟಲು- 37+38+39+40
37. ಪ್ರಾಕ್ಕರ್ಮ ಪ್ರವಿಲಾಪ್ಯತಾಮ್
-ಸಂಚಿತ ಕರ್ಮಗಳ ಫಲವನ್ನು ಅನುಭವಿಸು
38. ಚಿತಿಬಲಾನ್ನಾಪ್ಯುತ್ತರೈ: ಶ್ಲಿಷ್ಯತಾಮ್
ಹಾಗೆಯೇ ಮನೋಬಲದಿಂದ ಭವಿಷ್ಯ ಬಗ್ಗೆಯೂ ಆತಂಕ ಪಡದಿರು
39. ಪ್ರಾರಬ್ಧಂ ತ್ವಿಹ ಭುಜ್ಯತಾಮ್
ಪ್ರಾರಬ್ಧ ಕರ್ಮಗಳನ್ನು ಇಲ್ಲಿ ಅನುಭವಿಸು.
40. ಅಥ ಪರಬ್ರಹ್ಮಾತ್ಮನಾ ಸ್ಥೀಯತಾಮ್
-ಅನಂತರ ಬ್ರಹ್ಮಾನುಭವದಲ್ಲಿ ಸ್ಥಿತನಾಗಿರು.

Sunday, July 24, 2011

ಸಾಧನಾ ಪಂಚಕಮ್-ಭಾಗ -11

35. ಪೂರ್ಣಾತ್ಮಾ ಸುಸಮೀಕ್ಷತಾಮ್
ಸರ್ವವ್ಯಾಪಿಯಾಗಿರುವ ಆತ್ಮನನ್ನು ದರ್ಶಿಸು
36. ಜಗದಿದಂ ತದ್ಬಾಧಿತಂ ದೃಶ್ಯತಾಮ್
ಆ ಕ್ಷಣ ಭಂಗುರದ ಜಗತ್ತು ನಮ್ಮ ಮನಸ್ಸಿನ ಭ್ರಮೆ ಎಂಬುದನ್ನು ಮನಗಾಣು

Saturday, July 23, 2011

ಉತ್ತರ ಸಿಕ್ಕಿತು!


      ಅವನ ಪಾಡಿಗೆ ಅವನು ಸುಮ್ಮನೆ ಹೋಗುತ್ತಿದ್ದಾಗ ಎದುರಿಗೆ ಪ್ರಶ್ನೆಯೊಂದು ಅಡ್ಡ ಬಂದಿತು. ಅದನ್ನು ನಿರ್ಲಕ್ಷಿಸಿ ಪಕ್ಕಕ್ಕೆ ಸರಿಸಿ ಹೋಗಲು ಪ್ರಯತ್ನಿಸಿದರೆ ಅದೂ ಪಕ್ಕಕ್ಕೆ ಬಂದು ಉತ್ತರ ಹೇಳಲು ಆಗ್ರಹಿಸಿತು. ಅದನ್ನು ದೂಡಿದಷ್ಟೂ ದೊಡ್ಡದಾಗಿ ಬೆಳೆಯುತ್ತಾ ಹೋಗುತ್ತಿತ್ತು. ಉತ್ತರ ಹೇಳದೆ ಬಿಡುಗಡೆಯಿಲ್ಲವೆಂದು ಅವನಿಗೆ ಮನದಟ್ಟಾಯಿತು. ಅವನಿಗೆ ಉತ್ತರ ಗೊತ್ತಿರಲಿಲ್ಲ. ಅವನು ಉತ್ತರ ಹುಡುಕಲು ಪ್ರಾರಂಭಿಸಿದ. ಪ್ರಶ್ನೆಯೂ ಅವನನ್ನು ನೆರಳಿನಂತೆ ಹಿಂಬಾಲಿಸುತ್ತಲೇ ಇತ್ತು. ಉತ್ತರ ಕಂಡು ಹಿಡಿಯಲು ಅವನು ಹಲವಾರು ವರ್ಷಗಳ ಕಾಲ ಊರೂರು ಅಲೆದ, ಕಾಡು-ಮೇಡುಗಳನ್ನು ಸುತ್ತಿದ. ಎಲ್ಲರನ್ನೂ ವಿಚಾರಿಸಿದ. ಉತ್ತರ ಸಿಗುತ್ತಿರಲಿಲ್ಲ. ಚರ್ಚು, ಮಸೀದಿ, ಮಠ, ಮಂದಿರಗಳಿಗೆ ಭೇಟಿ ಕೊಟ್ಟ. ಉಹುಂ, ಉತ್ತರ ಸಿಗಲಿಲ್ಲ. ಮೌಲ್ವಿ, ಮುಲ್ಲಾ, ಪಾದ್ರಿ, ಅರ್ಚಕರು, ವಿದ್ವಾಂಸರುಗಳು, ಗುರುಗಳು, ಸಾಧು, ಸಂತರನ್ನು ಕಂಡು ಪ್ರಾರ್ಥಿಸಿದ. ಒಬ್ಬೊಬ್ಬರು ಒಂದೊಂದು ರೀತಿ ಹೇಳಿದರು. ಕೆಲವರು ತಾವು ಹೇಳಿದ ದಾರಿಯಲ್ಲಿ ಹೋದರೆ ಮಾತ್ರ ಉತ್ತರ ಸಿಗುತ್ತದೆ, ಇಲ್ಲದಿದ್ದರೆ ಸಿಗಲು ಸಾಧ್ಯವೇ ಇಲ್ಲ ಎಂದರು. ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಿದ್ದರು. ಅವರು ಹೇಳುವುದನ್ನು ಕೇಳುತ್ತಿದ್ದರೆ ಅದು ಸರಿಯಿರಬಹುದು ಎನ್ನಿಸುತ್ತಿತ್ತು. ಇನ್ನೊಬ್ಬರು ಹೇಳುವುದನ್ನು ಕೇಳಿದಾಗ ಇದೂ ಸರಿಯಿರಬಹುದು ಎನ್ನಿಸುತ್ತಿತ್ತು, ಆದರೆ ಸ್ಪಷ್ಟ ಉತ್ತರ ಸಿಗದೆ ಗೊಂದಲವಾಗಿಬಿಡುತ್ತಿತ್ತು. ಪ್ರಶ್ನೆ ಅವನನ್ನು ನೋಡಿ ಗಹಗಹಿಸಿ ನಗುತ್ತಿತ್ತು. ಕೊನೆಗೆ ಸುಸ್ತಾಗಿ ಒಂದೆಡೆ ಕುಳಿತು ಕಣ್ಣು ಮುಚ್ಚಿ ಯಾವ ಉತ್ತರ ಸರಿ ಎಂದು ಆಲೋಚಿಸತೊಡಗಿದ. ಪ್ರಶ್ನೆಯೂ ಆದಿಶೇಷನಂತೆ ಅವನ ಬೆನ್ನ ಹಿಂದೆಯೇ ಕುಳಿತಿತ್ತು. ಸಿಕ್ಕ ಎಲ್ಲಾ ಉತ್ತರಗಳನ್ನು ಮನಸ್ಸಿನಲ್ಲೇ ವಿಮರ್ಶಿಸತೊಡಗಿದ, ಅಳೆದು ತೂಗಿ ನೋಡತೊಡಗಿದ. ಹೀಗೆ ಆಲೋಚಿಸುತ್ತಾ, ಆಲೋಚಿಸುತ್ತಾ ಅವನು ಒಳಗೆ, ಒಳಗೆ, ತನ್ನ ಒಳಗೆ, ತನ್ನ ಅಂತರಂಗದ ಒಳಗೇ ಸಾಗತೊಡಗಿದ. ಹಾಗೆಯೇ ಸಾಗುತ್ತಿದ್ದಾಗ ಅವನಿಗೆ ಕ್ಷೀಣ ಬೆಳಕೊಂದು ಕಂಡಿತು. ಅದನ್ನು ಅನುಸರಿಸಿ ಮುಂದೆ ಮುಂದೆ ಹೋಗತೊಡಗಿದ. ಕ್ರಮೇಣ ಬೆಳಕು ದೊಡ್ಡದಾಗುತ್ತಾ ಹೋಯಿತು. ಕೊನೆಗೊಮ್ಮೆ ಉಜ್ವಲ ಪ್ರಕಾಶ ಕಂಡಿತು. ಅವನಿಗೆ ತಾನು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಬಿಟ್ಟಿತ್ತು. ಅದುವರೆಗೆ ಉತ್ತರ ಇದ್ದ ಸ್ಥಳ ಬಿಟ್ಟು ಆತ ಬೇರೆಲ್ಲಾ ಕಡೆ ಹುಡುಕಿದ್ದ. ಉತ್ತರ ಸಿಕ್ಕಿದ ಸಂತೋಷದಿಂದ ಪ್ರಶ್ನೆಗೆ ಉತ್ತರ ಹೇಳಲು ಹೊರಪ್ರಪಂಚಕ್ಕೆ ಬಂದರೆ, ಅಲ್ಲಿ ಪ್ರಶ್ನೆಯೇ ಕಾಣುತ್ತಿರಲಿಲ್ಲ. ಅದು ಕಣ್ಣಿಗೆ ಕಾಣದಷ್ಟು ಸಣ್ಣದಾಗಿ ಉತ್ತರದೊಳಗೆ ಐಕ್ಯವಾಗಿಬಿಟ್ಟಿತ್ತು!
(ಚಿತ್ರಕೃಪೆ: ಅಂತರ್ಜಾಲ).
*****************
-ಕ.ವೆಂ.ನಾಗರಾಜ್.

Friday, July 22, 2011

ಧಾವಂತದ ಬದುಕಿನಲ್ಲಿ ಬಡವಾದ ಸಮಾಜ

ಸರ್ವೇ ಭವಂತು ಸುಖಿನ: ಸರ್ವೇ ಸಂತು ನಿರಾಮಯಾ:

ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದು:ಖ ಭಾಗ್ಭವೇತ್||

ಇದು ನಮ್ಮ ಪೂರ್ವಜರು ನಮಗೆ ನೀಡಿರುವ ನಿತ್ಯ ಸಂಕಲ್ಪ.ಇದರ ಅರ್ಥವನ್ನು ಸ್ವಲ್ಪ ನೋಡೋಣ. "ಎಲ್ಲರೂ ಸುಖವಾಗಿರಲಿ. ಎಲ್ಲರಿಗೂ ಒಳ್ಳೆಯ ಆರೋಗ್ಯ ಸಿಗಲಿ.ಯಾರೂ ದು:ಖ ಪಡುವುದು ಬೇಡ"

ಎಲ್ಲರೂ ಅಂದರೆ ಯಾರು? ನಮ್ಮ ಮನೆಯ ಎಲ್ಲಾ ಜನರೇ? ನಮ್ಮ ಜಾತಿಯ ಎಲ್ಲಾ ಜನರೇ? ನಮ್ಮ ಊರಿನ ಎಲ್ಲಾ ಜನರೇ? ನಮ್ಮ ಧರ್ಮದ ಎಲ್ಲಾ ಜನರೇ? ಅಥವಾ ಎಲ್ಲಾ ಮನುಕುಲವೇ?.....ನಮ್ಮ ಪೂರ್ವಜರ ಕಲ್ಪನೆ ಕೇವಲ ಮನುಷ್ಯ ರಿಗೂ ಸೀಮಿತಗೊಳ್ಳಲಿಲ್ಲ. ಭೂಮಂಡಲದಲ್ಲಿರುವ ಎಲ್ಲಾ ಜೀವ ಜಂತುಗಳು, ಗಿಡಮರ ಬಳ್ಳಿಗಳೂ ಕೂಡ ಸುಖವಾಗಿರಬೇಕೆಂಬ ಮಹತ್ತರ ಸಂಕಲ್ಪ. ಅಂದರೆ ಅಷ್ಟರ ಮಟ್ಟಿಗೆ ಉದಾರ ನೀತಿ. ಕೇವಲ ಮನುಷ್ಯ ಮಾತ್ರರೇ ಅಲ್ಲದೆ ಸಮಸ್ತ ಜೀವ ಜಂತುಗಳೂ ಸುಖವಾಗಿರಲೆನ್ನುವ ನಮ್ಮ ಪೂರ್ವಜರು ನಮಗೆ ಎಂತಹಾ ಉದಾರವಾದ ಬದುಕುವ ಶೈಲಿ ಕಲಿಸಿಕೊಟ್ಟಿದ್ದಾರಲ್ಲವೇ?

ಅದ್ವೇಷ್ಟಾ ಸರ್ವ ಭೂತಾನಾಮ್ ಮೈತ್ರ: ಕರುಣ ಏವ ಚ....ಎಂದು ಗೀತೆಯು ಸಾರುತ್ತದೆ. ಅಂದರೆ ಏನು? ಯಾರಮೇಲೂ ದ್ವೇಷ ಬೇಡ, ಎಲ್ಲರಲ್ಲೂ ಮೈತ್ರಿ, ಕರುಣೆ ಯಂತಹ ಸದ್ಗುಣಗಳನ್ನು ಬೆಳೆಸಿಕೊಳ್ಳೋಣ.....

ಸಮ: ಶತ್ರೌ ಚ ಮಿತ್ರೇ ಚ ತಥಾ ಮಾನಾಪಮಾನಯೋ:......

ಶತ್ರು ಮಿತ್ರರನ್ನು ಹಾಗೂ ಮಾನ ಅಪಮಾನಗಳನ್ನು ಸಮಭಾವದಿಂದ ಕಾಣೋಣ.

.........ಇಂತಹ ಸಾಕಷ್ಟು ಪ್ರೇರಣಾ ದಾಯಕ ವಿಚಾರಗಳನ್ನು ವೇದ ಉಪನಿಷತ್ತುಗಳಲ್ಲಿ, ಭಗವದ್ಗೀತೆಯಲ್ಲಿ ನಾವು ಕಾಣ ಬಹುದಾಗಿದೆ......

ಇವೆಲ್ಲಾ ನಮ್ಮ ಧಾರ್ಮಿಕ ಜೀವನಕ್ಕೆ ಪ್ರೇರಣಾದಾಯಕ ಅಂಶಗಳು. ಪರ ಮತವನ್ನು ದ್ವೇಶಿಸು, ಹಿಂದು ವಿಚಾರವನ್ನು ಒಪ್ಪದ ಅಥವಾ ನಮ್ಮ ಧಾರ್ಮಿಕ ಗ್ರಂಥಗಳನ್ನು ಒಪ್ಪದವರು ನರಕಕ್ಕೆ ಹೋಗಬೇಕಾಗುತ್ತದೆಂದು ನಮ್ಮ ಯಾವುದೇ ಧಾರ್ಮಿಕ ಗ್ರಂಥಗಳಲ್ಲಿ ಎಲ್ಲೂ ಹೇಳಿಲ್ಲ. ಅಥವಾ ಹಿಂದು ಧಾರ್ಮಿಕ ಗ್ರಂಥಗಳನ್ನು ಓದುವುದರಿಂದ ಮಾತ್ರ ನಿಮಗೆ ಸ್ವರ್ಗ ಸಿಗುತ್ತದೆಂದೂ ಕೂಡ ಎಲ್ಲೂ ಹೇಳಿಲ್ಲ.ಇಷ್ಟು ಭವ್ಯವಾದ ನಮ್ಮ ನೆಲದ ವಿಚಾರಗಳನ್ನು ನಾವು ಪ್ರಚಾರ ಮಾಡಲೇ ಇಲ್ಲವಲ್ಲ! ಇರಲಿ... ನಮ್ಮ ಮಕ್ಕಳಿಗೂ ಕಲಿಸಲಿಲ್ಲವಲ್ಲಾ!

ಈಗಿನ ನಮ್ಮ ಸಾಮಾಜಿಕ ಪರಿಸ್ಥಿತಿಯನ್ನು ನೋಡಿ.ವೃದ್ಧಾಶ್ರಮ ಸೇರುತ್ತಿರುವ ಅಪ್ಪ-ಅಮ್ಮ. ಹೆತ್ತ ಅಪ್ಪ-ಅಮ್ಮನ ಪ್ರೀತಿ ಕಾಣದೆ ಆಯಾಗಳ ಪೋಷಣೆಯಲ್ಲಿ ಯಾಂತ್ರಿಕವಾಗಿ ಬೆಳೆಯುವ ಮಕ್ಕಳು. ಇಂತಹ ಮಕ್ಕಳು ಬೆಳೆದು ದೊಡ್ದವರಾದಂತೆ ಅವರ ಕಣ್ಮುಂದಿನ ಆದರ್ಶವಾದರೂ ಏನು? ಕೈತುಂಬಾ ಸಂಬಳ ಸಿಗುವ ನೌಕರಿ.ಐಶಾರಾಮ ಜೀವನ. ಪ್ರೀತಿ ಪ್ರೇಮ, ಕಾಮದ ದೃಶ್ಯಗಳೇ ತುಂಬಿತುಳುಕುವ ದೂರದರ್ಶನ ದಾರಾವಾಹಿಗಳು! ಅಥವಾ ಕ್ರಿಕೆಟ್ ಆಟಗಳು!! ಕ್ರೈಮ್ ಡೈರಿಯೇ ಮೊದಲಾದ ಅಪರಾಧವನ್ನೇ ವೈಭವೀ ಕರಿಸುವ ದೃಶ್ಯಗಳು. ಇಷ್ಟಕ್ಕಿಂತ ಹೆಚ್ಚು ಚಟುವಟಿಕೆಗಳಿಗೆ ಬಿಡುವೆಲ್ಲಿಂದ ಬರಬೇಕು? ಮನಸ್ಸಿಗೆ ಮುದವನ್ನು ನೀಡಬಹುದಾದ ಪ್ರವಚನಗಳು, ಸಂಗೀತ-ನೃತ್ಯಗಳು, ಕಥೆ ಕಾದಂಬರಿಯನ್ನು ಓದುವ ಹವ್ಯಾಸಗಳು.... ಇವಕ್ಕೆಲ್ಲಾ ಸಮಯ ಎಲ್ಲಿಂದ ಬರಬೇಕು? ಹೀಗೆ ಸಮಾಜವು ದಿಕ್ಕುತಪ್ಪಿ ಧಾವಿಸುತ್ತಿರುವಾಗ ಸಹಜವಾಗಿ ಅಪರಾಧಗಳು, ಹೊಡೆದಾಟ ಬಡಿದಾಟಗಳು, ಕೋಮು ಗಲಭೆಗಳು, ಅಗ್ನಿ ಸ್ಪರ್ಷಗಳು, ಎಲ್ಲವೂ ಕಿಚ್ಚಿನಂತೆ ಹರಡಿ ಬಿಡುತ್ತವೆ. ಇದೆಲ್ಲಾ ಅತಿರೇಕವಾದಾಗ ಅದನ್ನು ನಿರ್ಬಂಧುಸಲು ಸರ್ಕಾರವು ಹೆಣಗುವ ಪರಿಸ್ಥಿತಿ!!

ಹೀಗೆ ಸಾಮಾಜಿಕವಾಗಿ ನೆಮ್ಮದಿ ಹಾಳಾಗುವುದನ್ನು ನಾವು ನೋಡುತ್ತಿರುವಂತೆಯೇ ವೈಯಕ್ತಿಕವಾಗಿಯೂ ಶಾಂತಿ ಇಲ್ಲದ ಜೀವನವನ್ನು ನೋಡುತ್ತಿದ್ದೇವೆ. ಮಾನಸಿಕವಾಗಿ ಶಾರೀರಿಕವಾಗಿಯೂ ಕೂಡ ಸ್ವಾಸ್ಥ್ಯವನ್ನು ಹಾಳುಮಾಡಿಕೊಂಡಿರುವ ಹಲವಾರು ಉಧಾಹರಣೆಗಳನ್ನು ಇಂದಿನ ಪೀಳಿಗೆಯಲ್ಲಿ ಕಾಣಬಹುದಾಗಿದೆ. ಈ ಪರಿಸ್ಥಿತಿಗೆ ಕಾರಣ ನಮಗೆ ಅರಿವಾಗಿದೆಯೇ?

ನಮಗೆ ಸ್ವಾತಂತ್ರ್ಯ ಬಂದು ಆರು ದಶಕಗಳಲ್ಲಿ ನಾವು ನಮ್ಮ ಮಣ್ಣಿನ ಸಂಸ್ಕೃತಿ ಪರಂಪರೆಯನ್ನು ಮರೆತದ್ದೇ ಇಂದಿನ ವಿಶಮ ಸ್ಥಿತಿಗೆ ಕಾರಣ ಎನಿಸುವುದಿಲ್ಲವೇ? ನಾವು ನಿಜವಾಗಿ ಒಬ್ಬ ಮುಗ್ಧ ತಂದೆ ತಾಯಿಯ ಸ್ಥಾನದಲ್ಲಿ ನಿಂತು ಚಿಂತನೆ ಮಾಡಿದಾಗ ನಮ್ಮ ಮಕ್ಕಳ ಭವಿಷ್ಯವು ಮುಸುಕಾಗಿ ನಮಗೆ ಕಾಣುವುದಿಲ್ಲವೇ? ನೆಲದ ಉದಾರವಾದ ಸಂಸ್ಕೃತಿ ಪರಂಪರೆಯನ್ನು ಬದಿಗಿಟ್ಟು ಈಗಾಗಲೇ ಕೆಟ್ಟಿರುವುದು ಸಾಲದೇ? ಭಗವದ್ಗೀತೆಯ ಸಾರವನ್ನು ತಿಳಿಯದೆ ಅದನ್ನು ವಿರೋಧಿಸುವವರಿಗೆ ಏನೆನ್ನೋಣ? ಇಡೀ ಮನುಕುಲದ ಒಳಿತಿಗಾಗಿ ನಮ್ಮ ಋಷಿಮುನಿಗಳ ತಪ್ಪಸ್ಸಿನ ಫಲವಾಗಿ ಮೂಡಿಬಂದ ಹಿಂದು ಧರ್ಮವನ್ನು ಅನುಸರಿಸುವ ಹಿಂದು ಮತೀಯರಲ್ಲಿಯೇ ಕೆಲವರನ್ನು ಅಲ್ಲಿಂದ ಬೇರ್ಪಡಿಸಿ ಅನ್ಯಮತೀಯ ಗುಂಪುಗಳೊಡನೆ ಸೇರಿಸುವ ಪ್ರಯತ್ನಕ್ಕೆ ಏನೆನ್ನೋಣ?

ಸಾಧನಾ ಪಂಚಕಮ್-ಭಾಗ -10

33 ಏಕಾಂತೇ ಸುಖಮಾಸ್ಯತಾಮ್
-ಏಕಾಂತದ ಬದುಕನ್ನು ಆಶ್ರಯಿಸು
34. ಪರತರೇ ಚೇತ: ಸಮಾಧೀಯತಾಮ್
-ಚಿತ್ತವನ್ನು ಪರಮಾತ್ಮನಲ್ಲಿ ಲೀನಗೊಳಿಸುThursday, July 21, 2011

ಸಾಧನಾಪಂಚಕಮ್-ಭಾಗ -9
ಸಾಧನಾ ಪಂಚಕಂ -ಮೆಟ್ಟಲು- 29+30+31+32

29. ಶೀತೋತೋಷ್ಣಾದಿ ವಿಷಹ್ಯತಾಮ್
ಶೀತ-ಉಷ್ಣ ಇತ್ಯಾದಿಗಳನ್ನು ಸಹಿಸಿಕೊ
30. ನತು ವೃಥಾ ವಾಕ್ಯಂ ಸಮುಚ್ಚಾರ್ಯತಾಮ್
ಹಾಗೆಯೇ ಅನುಚಿತ/ಅನುಪಯುಕ್ತಮಾತುಗಳನ್ನು ಆಡದಿರು
31. ಔದಾಸೀನ್ಯಮಭೀಪ್ಸ್ಯತಾಮ್
ಉದಾಸೀನತೆಯ ನಿಸ್ಪೃಹ ದೃಷ್ಟಿಯನ್ನು ಹೊಂದು
32. ಜನಕೃಪಾನೈಷ್ಠುರ್ಯಮುತ್ಸೃಜಾಮ್
ದಯೆ ಅಥವಾ ಬಿರುನುಡಿಗೆ ಗಮನ ಕೊಡದಿರು

Tuesday, July 19, 2011

ವೇದೋಕ್ತ ಜೀವನ ಪಥ: ಮಾನವಧರ್ಮದ ಮೂರು ಅಭಿನ್ನ ಅಂಗಗಳು - ೩:

ಇಂದ್ರ ಕ್ರತುಂ ನ ಆ ಭರ ಪಿತಾ ಪುತ್ರೇಭ್ಯೋ ಯಥಾ |
ಶಿಕ್ಷಾ ಣೋ ಅಸ್ಮಿನ್ ಪುರುಹೂತ ಯಾಮನಿ ಜೀವಾ ಜ್ಯೋತಿರಶೀಮಹಿ ||
(ಋಕ್. ೭.೩೨.೨೬.)

[ಇಂದ್ರ] ಓ ಶಕ್ತಿಮಾನ್ ಪ್ರಭೋ! [ಯಥಾ ಪಿತಾ ಪುತ್ರೇಭ್ಯಃ] ಯಾವ ರೀತಿ ತಂದೆಯು ತನ್ನ ಮಕ್ಕಳಿಗೆ ತುಂಬಿಕೊಡುತ್ತಾನೋ ಅದೇ ರೀತಿ, [ ನಃ ಕ್ರತುಂ ಆಭರ] ನಮಗೆ ಉತ್ತಮ ಆಲೋಚನೆಗಳನ್ನು ತುಂಬಿಕೊಡು. [ಜೀವಾಃ] ಜೀವರಾದ ನಾವು, [ಜ್ಯೋತಿಃ ಆಶೀಮಹಿ] ಜ್ಯೋತಿಯನ್ನು ಸೇವಿಸೋಣ.
ಈ ಜ್ಯೋತಿ, ಜೀವನಪಥವನ್ನು ಬೆಳಗುವ ನಿರ್ಮಲಜ್ಞಾನ ಎಂಬುದನ್ನು ನೆನಪಿಟ್ಟರೆ, ವೈದಿಕ ಧರ್ಮದ ಸೌಂದರ್ಯ ವ್ಯಕ್ತವಾಗುತ್ತದೆ. ಈ ಜಾನ, ಪ್ರಾಕೃತಿಕ ಜಗತ್ತಿನಿಂದಾರಂಭಿಸಿ, ಪರಮಾತ್ಮನವರೆಗಿನ ಸಮಸ್ತ ತತ್ತ್ವಗಳನ್ನೂ ಯಥಾವತ್ತಾಗಿ ಅರಿಯುವುದೇ ಆಗಿದೆ. ಈ ಬಗೆಯ ಅರಿವಿಲ್ಲದೆ, ಮಾನವಜೀವನದ ವಿಕಾಸವಾಗುವುದು ಹಾಗೂ ಅವನು ತನ್ನ ಗುರಿಯನ್ನು ಮುಟ್ಟುವುದು ಅಸಂಭವ. ಅದಕ್ಕಾಗಿಯೇ ವೈದಿಕ ಧರ್ಮೀಯರು ಪ್ರತಿದಿನವೂ ಮಾಡುವ ಸಂಧ್ಯಾವಂದನೆಯಲ್ಲಿ ನಾವು ಈ ಮಂತ್ರವನ್ನು ಕಾಣುತ್ತೇವೆ:-


ಉದ್ವಯಂ ತಮಸಸ್ಪರಿ ಸ್ವಃ ಪಶ್ಯಂತ ಉತ್ತರಮ್ |
ದೇವಂ ದೇವತ್ರಾ ಸೂರ್ಯಮಗನ್ಮ ಜ್ಯೋತಿರುತ್ತಮಮ್ ||
(ಯಜು. ೩೫.೧೪.)

[ವಯಮ್] ನಾವು, [ತಮಸಃ ಪರಿ] ಅಂಧಕಾರದಿಂದ ಮೇಲೆದ್ದು, [ಉತ್] ಜಗದುತ್ಪತ್ತಿಗೆ ಉಪಾದಾನವಾದ ಪ್ರಕೃತಿಯನ್ನೂ, [ಉತ್ತರಂ ಸ್ವಃ] ಅದಕಿಂತ ಶ್ರೇಷ್ಠನಾದ, ಸುಖರೂಪನಾದ ಜೀವಾತ್ಮನನ್ನೂ, [ಪಶ್ಶಂತಃ] ನೋಡುತ್ತಾ, [ದೇವತ್ರ] ವಿದ್ವನ್ಮಂಡಲದಲ್ಲಿ [ಉತ್ತಮಂ ಜ್ಯೋತಿಃ] ಸರ್ವಶ್ರೇಷ್ಠನಾದ ಜ್ಞಾನಸ್ವರೂಪನೂ, [ದೇವಂ ಸೂರ್ಯಮ್] ಪ್ರಕಾಶಮಯನೂ, ಸರ್ವಧಾತೃವೂ ಆದ ವಿಶ್ವಸಂಚಾಲಕ ಪ್ರಭುವನ್ನು, [ಅಗನ್ಮ] ಸಾಕ್ಷಾತ್ಕಾರ ಮಾಡಿಕೊಳ್ಳೋಣ.
ಪ್ರಕೃತಿಯ ಜ್ಞಾನದಿಂದ ಇಹಲೋಕದ ಸುಧಾರಣೆ; ಸ್ವಂತ ಆತ್ಮನ ಜ್ಞಾನದಿಂದ ತನ್ನ ವ್ಯಕ್ತಿಗತ ಸುಧಾರಣೆ ಹಾಗೂ ಪರಮಾತ್ಮ ಜ್ಞಾನದಿಂದ ಮೋಕ್ಷಸಾಧನೆ - ಹೀಗೆ ಮಾನವಜೀವನದ ಸಾಫಲ್ಯ ಸಿದ್ಧಿಸುತ್ತದೆ. ವೇದೋಕ್ತವಾದ ಈ ಜ್ಞಾನ ಕೇವಲ ಆಧ್ಯಾತ್ಮಿಕ ವಿಷಯಗಳಿಗೆ ಮಾತ್ರ ಸಂಬಂಧಿಸಿದುದಲ್ಲ; ಕೇವಲ ದಾರ್ಶನಿಕ ಉಗ್ಗಡಣೆಯಲ್ಲ; ಈ ಪ್ರಪಂಚದಲ್ಲಿ ಸಾಂಸಾರಿಕ ಜೀವನವನ್ನು ಉತ್ತಮ ಮಟ್ಟಕ್ಕೇರಿಸಲು ಸುಖೋತ್ಕರ್ಷದ ಪ್ರಾಪ್ತಿಗಾಗಿ ವೈಜ್ಞಾನಿಕ ಆವಿಷ್ಕಾರಗಳನ್ನೂ, ಇತರ ಸಾಮಾಜಿಕ - ಆರ್ಥಿಕ - ರಾಜಕೀಯ - ಪಾರಿವಾರಿಕ ಹಾಗೂ ವೈಜ್ಞಾನಿಕ ಜೀವನಗಳನ್ನು ಉನ್ನತಗೊಳಿಸುವ ಸಾಧನವಾದ ಲೌಕಿಕ ಜ್ಞಾನವನ್ನೂ ಒಳಗೊಂಡಿದೆ ಎಂಬುದನ್ನು ಯಾರೂ ಮರೆಯಬಾರದು. ಪ್ರಾಪಂಚಿಕ ಅಥವಾ ಭೌತಿಕವಿದ್ಯೆಗೆ ತಿಲಾಂಜಲಿಯಿತ್ತು, ಕೇವಲ ಆಧ್ಯಾತ್ಮಿಕ ವಿದ್ಯೆಯನ್ನೇ ಸಾಧಿಸಲು ಹೊರಟವರು, ಆಧ್ಯಾತ್ಮಿಕ ವಿದ್ಯೆಗೆ ತಿಲಾಂಜಲಿಯಿತ್ತು ಕೇವಲ ಭೌತಿಕ ವಿದ್ಯೆಗೆ ಗಮನ ಕೊಡುವವರಿಗಿಂತ ಹೆಚ್ಚು ಗಾಢವಾದ ಅಂಧಕಾರದಲ್ಲಿ ಬೀಳುವರು ಎಂದು ಯಜುರ್ವೇದ ಹೇಳುತ್ತದೆ. ಕೊನೆಗೆ,


ಸಂಭೂತಿಂ ಚ ವಿನಾಶಂ ಚ ಯಸ್ತದ್ವೇದೋಭಯಂ ಸಹ |
ವಿನಾಶೇನ ಮೃತ್ಯುಂ ತೀರ್ತ್ವಾ ಸಂಭೂತ್ಯಾಮೃತಮಶ್ನುತೇ ||
(ಯಜು. ೪೦.೧೧.)


ವಿದ್ಯಾಂ ಚಾವಿದ್ಯಾಂ ಚ ಯಸ್ತದ್ವೇದೋಭಯಂ ಸಹ |
ಅವಿದ್ಯಯಾ ಮೃತ್ಯುಂ ತೀರ್ತ್ವಾ ವಿದ್ಯಯಾಮೃತಮಶ್ನುತೇ ||
(ಯಜು.೪೦.೧೪.)

[ಸಂಭೂತಿಮ್] ಉತ್ಕೃಷ್ಟವಾದ ತತ್ತ್ವವಾದ ಪರಮಾತ್ಮನನ್ನೂ, [ಚ] ಮತ್ತು, [ವಿನಾಶಂಚ] ನಾಶವಾನ್ ಜಗತ್ತನ್ನೂ, [ಯಃ] ಯಾವನು, [ತತ್ ಉಭಯಂ ಸಹ] ಎರಡನ್ನೂ ಜೊತೆಯಲ್ಲಿಯೇ, [ವೇದ] ತಿಳಿಯುತ್ತಾನೋ ಅವನು, [ವಿನಾಶೇನ] ನಾಶವಾನ್ ಜಗತ್ತಿನ ಜ್ಞಾನದಿಂದ, [ಮೃತ್ಯುಂ ತೀರ್ತ್ವಾ] ಮರ್ತ್ಯಲೋಕವನ್ನು ದಾಟಿ, [ಸಂಭೂತ್ಮಾ] ಉತ್ಕೃಷ್ಟನಾದ ಪರಮಾತ್ಮನ ಜ್ಞಾನದಿಂದ, [ಅಮೃತಂ ಅಶ್ನುತೇ] ಅಮರತ್ವವನ್ನು ಪಡೆಯುತ್ತಾನೆ.
[ವಿದ್ಯಾಂ ಚ] ಆಧ್ಯಾತ್ಮಿಕ ವಿದ್ಯೆಯನ್ನೂ [ಅವಿದ್ಯಾಂ ಚ] ಭೌತಿಕ ವಿದ್ಯೆಯನ್ನೂ. [ಯಃ] ಯಾವನು, [ತತ್ ಉಭಯಂ ಸಹ] ಎರಡನ್ನೂ ಜೊತೆಯಲ್ಲಿಯೇ, [ವೇದ] ತಿಳಿಯುತ್ತಾನೋ ಅವನು, [ಅವಿದ್ಯಯಾ] ಭೌತಿಕ ವಿದ್ಯೆಯಿಂದ, [ಮೃತ್ಯುಂ ತೀರ್ತ್ವಾ] ಮರ್ತ್ಯಲೋಕವನ್ನು ದಾಟಿ, [ವಿದ್ಯಯಾ] ವಿದ್ಯೆಯಿಂದ [ಅಮೃತಂ ಅಶ್ನುತೇ] ಅಮರತ್ವವನ್ನು ಪಡೆಯುತ್ತಾನೆ.
ಈ ಮಂತ್ರಗಳ ಮೇಲೆ ಟೀಕೆ ಅನಾವಶ್ಯಕ. ವೈದಿಕ ಧರ್ಮ ಜ್ಞಾನಾಶ್ರಿತ ಧರ್ಮ. ಇದರಲ್ಲಿ ಅಜ್ಞಾನಕ್ಕೆಡೆಯಿಲ್ಲ. ಈ ಜ್ಞಾನ ಸರ್ವವಿಷಯಾಚ್ಛಾದಕ, ಶಾಶ್ವತ ತತ್ತ್ವಗಳ ಹಾಗೂ ಅಶಾಶ್ವತ ತತ್ತ್ವಗಳ ನಿರ್ಭ್ರಾಂತ ಜ್ಞಾನ ಪಡೆದೇ ಮಾನವನು ಆದರ್ಶಮಾನವನಾಗಿ, ಇಹಪರಗಳೆರಡರಲ್ಲೂ ಸಾಧಿಸಿಕೊಳ್ಳುವನು. ಅಂಧವಿಶ್ವಾಸಕ್ಕೆ, ಅಜ್ಞಾನದ ಆಡಳಿತಕ್ಕೆ ವೈದಿಕ ಧರ್ಮದಲ್ಲಿ ಸೂಜಿಯ ಮೊನೆಯಷ್ಟೂ ಜಾಗವಿಲ್ಲ.
************************

Sunday, July 17, 2011

ಸಾಧನಾ ಪಂಚಕಮ್: ಭಾಗ -8

ಸಾಧನಾ ಪಂಚಕಂ -ಮೆಟ್ಟಲು- 25+26+27+28

25. ಕ್ಷುದ್ ವ್ಯಾದಿಶ್ಚ ಚಿಕಿತ್ಸ್ಯತಾಮ್
ಭಾವಾರ್ಥ: ಹಸಿವು ಎಂಬ ರೋಗ ಮತ್ತು ಅಸ್ವಸ್ಥತೆ ಇದ್ದರೆ ಗುಣಪಡಿಸಿಕೊ
26. ಪ್ರತಿದಿನಂ ಬಿಕ್ಷೌಷಧಂ ಭುಜ್ಯತಾಮ್
ಭಾವಾರ್ಥ: ನಿತ್ಯವೂ ಆಹಾರವನ್ನು ಔಷಧಿಯಂತೆ ಸೇವಿಸು
27. ಸ್ವಾದ್ವನ್ನಂ ನ ತು ಯಾಚ್ಯತಾಮ್
ಭಾವಾರ್ಥ: ರುಚಿಕರವಾದ ಆಹಾರವನ್ನು ಯಾಚಿಸಬೇಡ.
28. ವಿಧಿವಶಾತ್ ಪ್ರಾಪ್ತೇನ ಸಂತುಷ್ಯತಾಮ್
ಭಾವಾರ್ಥ: ಪರಮಾತ್ಮನು ವಿಧಿಸಿದಂತೆ ನಿನಗೆ ಒದಗುವ ಪಾಲನ್ನು ಸಂತುಷ್ಟನಾಗಿ ಸ್ವೀಕರಿಸು


Saturday, July 16, 2011

ವೇದೋಕ್ತ ಜೀವನ ಪಥ: ಮಾನವಧರ್ಮದ ಮೂರು ಅಭಿನ್ನ ಅಂಗಗಳು - ೨:

     ಜ್ಞಾನವಿಹೀನನಾದ ಮಾನವ, ಕರ್ತವ್ಯಾಕರ್ತವ್ಯಗಳ ನಿರ್ಣಯ ಮಾಡಲಾರದೆ, ಪಾಪಮಾರ್ಗದಲ್ಲಿ ಕಾಲಿಡುತ್ತಾನೆ. ನಿಜವಾಗಿ ಅಜ್ಞಾನದೆಶೆಯಲ್ಲಿ ನಡೆಯುವುದೆಂದರೆ, ಕತ್ತಲಿನಲ್ಲಿ ಎಡವಿದಂತೆಯೇ ಸರಿ. ಅಜ್ಞಾನವೆಂದರೆ ಆಧ್ಯಾತ್ಮಿಕ ಕತ್ತಲೆಯೆಂದು ಹೇಳಿಯೇ ಇದ್ದೇವೆ. ಅದೇ ಕಾರಣದಿಂದ, ವಿವಿಧ ಜ್ಞಾನಸಂಪನ್ನರಾದ ವಿದ್ವಾಂಸರಲ್ಲಿ ಜಿಜ್ಞಾಸುವಾದ ಜೀವನು ಈ ರೀತಿ ಮೊರೆಯಿಡುತ್ತಾನೆ:-


ಅದಿತೇ ಮಿತ್ರ ವರುಣೋತ ಮೃಳ ಯದ್ ವೋ ವಯಂ ಚಕ್ರುಮಾ ಕಚ್ಚಿದಾಗಃ |
ಉರ್ವಶ್ಯಾಮಭಯಂ ಜ್ಯೋತಿರಿಂದ್ರ ಮಾ ನೋ ದೀರ್ಘಾ ಅಭಿ ನಶನ್ತಮಿಸ್ರಾಃ ||
(ಋಕ್. ೨.೨೭.೧೪.)

     [ಅದಿತೇ] ಓ, ಪ್ರಾಮಾಣಿಕನಾದ ವಿದ್ವಾಂಸನೇ, [ವಯಮ್] ನಾವು [ಯತ್ಕಚ್ಚಿದಾಗಃ] ಏನೊಂದು ಪಾಪವನ್ನೂ, [ವಃ] ನಿನ್ನಂತಹ ಜ್ಞಾನಿಗಳ ಬಗೆಗೆ [ಚಕೃಮಾ] ಮಾಡುತ್ತೇವೋ, ಅದನ್ನು [ಮೃಳ] ಸುಧಾರಿಸು. [ಮಿತ್ರ] ಸ್ನೇಹಪರ ವಿದ್ವಾಂಸನೇ, ನೀನೂ ಸುಧಾರಿಸು. [ಉತ] ಹಾಗೆಯೇ [ವರುಣ] ದುಃಖನಿವಾರಕನಾದ ಜ್ಞಾನಿಯೇ, [ಮೃಳ] ನೀನೂ ಸುಧಾರಿಸು. [ಇಂದ್ರ] ಓ, ಜಿತೇಂದ್ರಿಯನಾದ ವಿದ್ವಾಂಸನೇ, [ಉರು ಅಭಯಂ ಜ್ಯೋತಿಃ] ಮಹತ್ತಾದ, ಅಭಯಪ್ರದವಾದ, ಜ್ಞಾನಜ್ಯೋತಿಯನ್ನು, [ಅಶ್ಯಾಮ್] ಅನುಭವಿಸುವೆ. ದೀರ್ಘಾಃ ತಮಿಸ್ರಾಃ] ದೀರ್ಘವಾದ ಅಜ್ಞಾನಾಂಧಕಾರಗಳು, [ನಃ ಮಾನಶನ್] ನನ್ನನ್ನು ಆವರಿಸದಿರಲಿ.
     ಈ ಜ್ಯೋತಿಯ ಕಾಮನೆ ಮತ್ತು ಜ್ಯೋತಿರ್ಧಾರಣೆ ಆದರ್ಶ ಜೀವನ ಮಾರ್ಗದ ವೈಶಿಷ್ಟ್ಯವೇ ಆಗಿದೆ. ಪ್ರಜ್ಞಾನ ಸ್ವರೂಪನಾದ ಪರಮಾತ್ಮನಲ್ಲಿಯೂ ವೇದಾನುಯಾಯಿಗಳ ಮೊರೆಯೂ ಇದೇ ಆಗಿದೆ.
*****************

Friday, July 15, 2011

ಇಂದು ಗುರುಪೂರ್ಣಿಮಾಇಂದು ಗುರುಪೂರ್ಣಿಮಾ. ಕಳೆದ ವರ್ಷ ಇದೇ ದಿನ ಹಾಸನದಲ್ಲಿ ಆರ್.ಎಸ್.ಎಸ್. ನ ಒಂದು ಶಾಖೆಯಲ್ಲಿ ಉತ್ಸವದ ನಿಮಿತ್ತ ನಾನು ಮಾಡಿದ ಭಾಷಣ ಇಲ್ಲಿದೆ.

ಹೀಗೊಂದು ವೇದೋಕ್ತ ವಿವಾಹ

ಸುಮಾರು ಒಂದು ವರ್ಷದ ಹಿಂದಿನ ಘಟನೆ. ಅವನ ಹೆಸರು ಸುನಿಲ, ಓರ್ವ ಸ್ಫುರದ್ರೂಪಿ ಹಿಂದೂ ತರುಣ, ಹಾಸನ ಮೂಲದವನು. ಅವಳು ಒಲಿವಿಯ, ಮನಮೋಹಕ ಚೆಲುವಿನ ಕ್ರಿಶ್ಚಿಯನ್ ನವಯುವತಿ, ಮಂಗಳೂರಿನ ಕಡೆಯವಳು. ಇಬ್ಬರಿಗೂ ಪರಿಚಯವಾಯಿತು, ಮಾತುಕಥೆಗಳಾದವು, ಪ್ರೇಮಾಂಕುರವಾಯಿತು. ಮದುವೆಯಾಗಲು ನಿರ್ಧರಿಸಿದರು. ಜಾತಿ ಬೇರೆಯಾದ್ದರಿಂದ ಎರಡೂ ಮನೆಯವರು ಪ್ರಾರಂಭದಲ್ಲಿ ಒಪ್ಪದಿದ್ದರೂ ಅವರ ಧೃಢ ನಿರ್ಧಾರದಿಂದಾಗಿ ಒಪ್ಪಿಗೆ ಸಿಕ್ಕಿತು. ಸುನಿಲನಪೂರ್ಣ ಸರಿಹೊಂದಿಸು ಇಚ್ಛೆಯಂತೆ ಹಿಂದೂ ಸಂಪ್ರದಾಯದಂತೆ ಮದುವೆಯಾಗಲು ಒಲಿವಿಯ ಸಮ್ಮತಿಸಿದಳು.

ವೇದೋಕ್ತ ರೀತಿಯಲ್ಲಿ ಮದುವೆಯಾಗಲು ನಿರ್ಧರಿಸಿ ಬೆಂಗಳೂರಿನ ವೇದಾಧ್ಯಾಯಿ ಸುಧಾಕರ ಶರ್ಮರನ್ನು ಭೇಟಿಯಾದರು. ಅವರು ಒಲಿವಿಯಳನ್ನು ಆಕೆ ಇನ್ನುಮುಂದೆ ಸುನಿಲನಂತೆ ಸಸ್ಯಾಹಾರಿಯಾಗಿರಲು ಸಾಧ್ಯವೇ ಎಂದು ವಿಚಾರಿಸಿದರು. ಆಕೆಗೆ ತಕ್ಷಣಕ್ಕೆ ಉತ್ತರಿಸಲಾಗಲಿಲ್ಲ. ಶರ್ಮರು ಹೇಳಿದರು -"ಆಹಾರ ಪದ್ಧತಿ ಬದಲಾಯಿಸಲು ನನ್ನ ಒತ್ತಾಯವಿಲ್ಲ. ಆದರೆ ಸಸ್ಯಾಹಾರಿಯಾಗಲು ನಿರ್ಧರಿಸಿದರೆ ಮಾತ್ರ ನಾನು ಮದುವೆ ಮಾಡಿಸುವೆ. ಇಲ್ಲದಿದ್ದರೆ ಬೇರೆಯವರ ಮಾರ್ಗದರ್ಶನದಲ್ಲಿ ಮದುವೆಯಾಗಬಹುದು. ನಿರ್ಧಾರವನ್ನು ಈ ಕೂಡಲೇ ತೆಗೆದುಕೊಳ್ಳಬೇಕಿಲ್ಲ. ನಿಧಾನವಾಗಿ ಯೋಚಿಸಿದ ನಂತರದಲ್ಲಿ ತಿಳಿಸಿ". ನಂತರ ತಿಳಿಸುವುದಾಗಿ ಹೋದ ಅವರು ಕೆಲವು ದಿನಗಳ ನಂತರ ಮತ್ತೆ ಬಂದು ಶರ್ಮರನ್ನು ಭೇಟಿ ಮಾಡಿದರು. ಒಲಿವಿಯ ಇನ್ನುಮುಂದೆ ಸಸ್ಯಾಹಾರಿಯಾಗಿರಲು ನಿರ್ಧರಿಸಿದ್ದಳು.ಹಾಸನದ ಸುವರ್ಣ ರೀಜೆನ್ಸಿ ಹೋಟೆಲಿನ ಪಾರ್ಟಿಹಾಲಿನಲ್ಲಿ ವೇದೋಕ್ತ ರೀತಿಯಲ್ಲಿ ಮದುವೆಗೆ ವೇದಿಕೆ ಸಜ್ಜಾಯಿತು. ಸಭಾಭವನ ಬಂಧು-ಮಿತ್ರರೊಂದಿಗೆ ತುಂಬಿತ್ತು. ನನಗೆ ಅವರ ಪರಿಚಯವಿಲ್ಲದಿದ್ದರೂ ಶ್ರೀ ಸುಧಾಕರ ಶರ್ಮರವರಿಂದ ವಿಷಯ ತಿಳಿದ ನಾನು ಅಂತರ್ಜಾತೀಯ ಹಾಗೂ ವೇದೋಕ್ತ ರೀತಿಯ ವಿವಾಹ ಹೇಗಿರುತ್ತದೆ ಎಂದು ತಿಳಿಯುವ ಕುತೂಹಲದಿಂದ ಆ ವಿವಾಹಕ್ಕೆ ನಾನೂ ಸಾಕ್ಷಿಯಾದೆ. ಮದುವೆ ಗಂಡು ಸುನಿಲ ಪಂಚೆ-ಶಲ್ಯ ಹೊದ್ದು ಸಿದ್ಧನಾಗಿದ್ದ. ಬಾಬ್ ಕಟ್ಟಿನ ಹುಡುಗಿ ಒಲಿವಿಯ ಸೀರೆಯಲ್ಲಿ ಸುಂದರವಾಗಿ ಕಾಣುತ್ತಿದ್ದಳು. ಅವರ ಜೋಡಿ ಹೇಳಿ ಮಾಡಿಸಿದಂತಿತ್ತು.

ಪ್ರಾರಂಭದಲ್ಲಿ ಶ್ರೀ ಶರ್ಮರು ದೇವರು ಮತ್ತು ಜಾತಿ ಕುರಿತು ನೀಡಿದ ವಿವರಣೆ ಮನ ಮುಟ್ಟುವಂತಿತ್ತು. ದೇವರು ಎಲ್ಲಾ ಜೀವಿಗಳಿಗೂ ಒಬ್ಬನೇ, ಬೇರೆ ಬೇರೆ ಜಾತಿಗಳವರಿಗೆ ಬೇರೆ ಬೇರೆ ದೇವರಿಲ್ಲ, ಅಲ್ಲದೆ ಮನುಷ್ಯರಿಗೆ, ಪ್ರಾಣಿಗಳಿಗೆ, ಗಿಡ-ಮರಗಳಿಗೆ ಪ್ರತ್ಯೇಕ ದೇವರುಗಳಿಲ್ಲವೆಂದ ಅವರು ಜಾತಿಗಳ ಸೃಷ್ಟಿ ಮನುಷ್ಯರು ಮಾಡಿಕೊಂಡದ್ದು ಎಂದರು. ಮದುವೆಯ ನಿಜವಾದ ಅರ್ಥವನ್ನು ವಿವರಿಸಿದ ಅವರು ಮದುವೆ ಅನ್ನುವುದು ಸುಖದಾಂಪತ್ಯ ನಡೆಸಲು ಬೇಕಾದ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಸಂಸ್ಕಾರ, ಮಾರ್ಗದರ್ಶನ ನೀಡುವ ಸರಳ ಸಮಾರಂಭ ಎಂದರು. ವೇದೋಕ್ತ ರೀತಿಯ ವಿವಾಹ ವಿಧಿಯಲ್ಲಿ ಭಗವಂತನ ಪ್ರಾರ್ಥನೆ, ಪಾಣಿಗ್ರಹಣ, ಯಜ್ಞ, ಪ್ರತಿಜ್ಞಾಮಂತ್ರ ಪಠಣ, ಲಾಜಾಹೋಮ. ಸಪ್ತಪದಿ ಮತ್ತು ಆಶೀರ್ವಾದಗಳು ಒಳಗೊಂಡಿರುತ್ತವೆ ಎಂದರು. ಬೆಂಗಳೂರಿನ ಕೃಷ್ಣಮೂರ್ತಿಯವರು ಪುರೋಹಿತರಾಗಿ ಕಾರ್ಯ ನಿರ್ವಹಿಸಿದರು. ಆ ಪುರೋಹಿತರು ಇತರ ಪುರೋಹಿತರಂತೆ ಇರದೆ, ಪಂಚೆ, ಜುಬ್ಬಾ ಮತ್ತು ಹೆಗಲ ಮೇಲೆ ಒಂದು ವಸ್ತ್ರ ಹಾಕಿಕೊಂಡಿದ್ದರು. ನಾವು ಸಾಮಾನ್ಯವಾಗಿ ನೋಡುವ ಮದುವೆಗಳಲ್ಲಿ ಪುರೋಹಿತರು ಅವರ ಪಾಡಿಗೆ ಅವರು ಮಂತ್ರಗಳನ್ನು ಹೇಳುತ್ತಿದ್ದರೆ ಅದನ್ನು ಬೇರೆಯವರು ಇರಲಿ, ಮದುವೆಯಾಗುವ ಗಂಡೂ-ಹೆಣ್ಣೂ ಸಹ ಅದನ್ನು ಕೇಳುವುದಿಲ್ಲ, ಮಂತ್ರದ ಅರ್ಥವೂ ಅವರಿಗೆ ಗೊತ್ತಿರುವುದಿಲ್ಲ, ಹೇಳುವ ಪುರೋಹಿತರಿಗೂ ತಿಳಿದಿರುತ್ತೋ ಇಲ್ಲವೋ!


ಪುರೋಹಿತರು ಮಂತ್ರಗಳನ್ನು ಹೇಳುತ್ತಿದ್ದರೆ ಅದರ ಅರ್ಥವನ್ನು ಕನ್ನಡದಲ್ಲಿ ಶರ್ಮರವರು ವಿವರಿಸಿ ಹೇಳುತ್ತಿದ್ದರು. ಮದುವೆಯ ವಿಧಿ-ವಿಧಾನಗಳ ನಿಜವಾದ ಪರಿಚಯ ಎಲ್ಲರಿಗೂ ಆದದ್ದು ವಿಶೇಷ. ಒಲಿವಿಯ ಸಸ್ಯಾಹಾರಿಯಾಗಿರಲು ನಿರ್ಧರಿಸಿದ ವಿಷಯ ಘೋಷಿಸಲಾಯಿತು. ವಧೂವರರು ಪೂರ್ಣ ಆಸಕ್ತಿಯಿಂದ ಕಲಾಪದಲ್ಲಿ ಭಾಗಿಯಾದರು, ನಾವೂ ಅಂತಹ ವಿಶೇಷವನ್ನು ಕಂಡು ಸಂತೋಷಿಸಿದೆವು. ವರನಿಂದ "ಜ್ಞಾನಪೂರ್ವಕವಾಗಿ ನಾನು ನಿನ್ನ ಕೈ ಹಿಡಿಯುತ್ತಿದ್ದೇನೆ, ನೀನೂ ಅಷ್ಟೆ. ನಾವಿಬ್ಬರೂ ಪ್ರಸನ್ನರಾಗಿ ಬಾಳೋಣ, ಉತ್ತಮ ಸಂತತಿಯನ್ನು ಪಡೆಯೋಣ. ಮುಪ್ಪಿನ ಕಾಲದವರೆಗೂ ಜೊತೆಯಾಗಿರೋಣ, ಪರಸ್ಪರ ಸುಪ್ರಸನ್ನರೂ, ಪರಸ್ಪರರಲ್ಲೇ ಆಸಕ್ತರೂ ಆಗಿ, ನೂರು ವರ್ಷಗಳ ಕಾಲ ಪ್ರೇಮದಿಂದ, ಆನಂದದಿಂದ, ಪ್ರಿಯವಚನಗಳನ್ನೇ ಆಡುತ್ತಾ ಬಾಳೋಣ" ಎಂಬ ಪ್ರತಿಜ್ಞಾ ವಚನ ಘೋಷಣೆ ಮಾಡಿಸಲಾಯಿತು. ಪ್ರತಿಯಾಗಿ ವಧುವೂ ಉತ್ತರವಾಗಿ ತನ್ನ ಬದ್ಧತೆಯನ್ನು ಘೋಷಿಸಿದಳು.ಸಪ್ತಪದಿಯ ಮಹತ್ವ ತಿಳಿಸಿ ನೆರವೇರಿಸಲಾಯಿತು. ಅನ್ನಾಹಾರಗಳ, ಇಚ್ಛಾಶಕ್ತಿಗಳ ಸಲುವಾಗಿ ಮೊದಲ ಜೋಡಿಹೆಜ್ಜೆ, ಬಲ, ಆರೋಗ್ಯಗಳ ಸಲುವಾಗಿ ಎರಡನೆಯ ಜೋಡಿಹೆಜ್ಜೆ, ಸಾಧನ-ಸಂಪತ್ತಿನ ಸಲುವಾಗಿ ಮೂರನೆಯ ಜೋಡಿಹೆಜ್ಜೆ, ಸುಖ-ಆನಂದಗಳಿಗಾಗಿ ನಾಲ್ಕನೆಯ ಜೋಡಿಹೆಜ್ಜೆ, ಉತ್ತಮ ಸಂತಾನಕ್ಕಾಗಿ ಐದನೆಯ ಜೋಡಿಹೆಜ್ಜೆ, ನಿಯಮಿತ ಜೀವನಕ್ಕಾಗಿ ಆರನೆಯ ಜೋಡಿಹೆಜ್ಜೆ ಮತ್ತು ಸ್ನೇಹಕ್ಕಾಗಿ ಏಳನೆಯ ಜೋಡಿಹೆಜ್ಜೆಗಳನ್ನಿರಿಸಿದ ನಂತರ ವಧೂವರರು ದಂಪತಿಗಳೆನಿಸಿದರು. ಬಂದವರು ಮನಃಪೂರ್ವಕವಾಗಿ ದಂಪತಿಗಳಿಗೆ ಶುಭ ಹಾರೈಸಿದರು. ಈ ಸಮಾರಂಭ ವೀಕ್ಷಿಸಿದ ನನಗೆ ಎಲ್ಲರೂ ಈರೀತಿ ಅರ್ಥಪೂರ್ಣ ಸಂಸ್ಕಾರ ಪಡೆಯುವ ವಿವಾಹಗಳನ್ನು ನಡೆಸಿದರೆ ಎಷ್ಟು ಚೆನ್ನ ಎಂದು ಅನ್ನಿಸಿತು. ಆ ಸಂದರ್ಭದಲ್ಲಿ ತೆಗೆದಿದ್ದ ಕೆಲವು ಫೋಟೋಗಳನ್ನು ನೋಡುತ್ತಿದ್ದಾಗ ನೆನಪು ಮರುಕಳಿಸಿತು, ಈ ಲೇಖನವಾಗಿ ಹೊರಬಂದಿತು.
*************************
-ಕ.ವೆಂ.ನಾಗರಾಜ್.

ಸಂಕೀರ್ಣವಾಗುತ್ತಿರುವ ಸಂಬಂಧಗಳು

ಮಾವಿನ ಮರ - ಕೋಗಿಲೆ ; ಎರಡೂ ಬೇರೆ ಬೇರೆ ಒಂದಕ್ಕೊಂದು ಸಂಬಂಧವಿಲ್ಲದ ಅಸ್ತಿತ್ವಗಳು. ಆದರೆ ಅವೆರಡಕ್ಕೂ ಅಗಲಲಾಗದ ನಂಟು. ಮಾವಿನ ಮರ ಚಿಗುರೊಡೆದೊಡನೆಯೇ ಕೋಗಿಲೆ ತನ್ನ ಗಾನಸುಧೆಯೊಂದಿಗೆ ಹಾಜರ್. ಅದೇ ನಮ್ಮನ್ನು ನೋಡಿ. ಹುಟ್ಟಿದ ಕೂಡಲೇ ಅಪ್ಪ-ಅಮ್ಮನ ಸಂಬಂಧ; ಸ್ವಲ್ಪ ಸಮಯದ ನಂತರ ಅಣ್ಣ-ತಂಗಿಯರ ಸಂಬಂಧ; ಬಂಧುಗಳ ಸಂಬಂಧ - ಹೀಗೆ ಈ ಸಂಬಂಧಗಳ ಸರಪಳಿ ಕೊನೆಯವರೆಗೂ ಬೆಳೆಯುತ್ತಲೇ ಹೋಗುತ್ತದೆ. ಆದರೆ ಇಂದು ನಾನಾ ಕಾರಣಗಳಿಂದ ಈ ರಕ್ತ ಸಂಬಂಧದ ಬೆಸುಗೆ ಸಾಕಷ್ಟು ಸಡಿಲವಾಗಿದೆ. ಅನೇಕ ಸಂದರ್ಭಗಳಲ್ಲಿ ಮುರಿದುಬೀಳುವ ಮಟ್ಟಕ್ಕೂ ಬಂದು ನಿಂತಿದೆ. ಇವತ್ತು ಎಲ್ಲರಲ್ಲೂ ವಿದ್ಯೆಯಿದೆ, ಹಣವಿದೆ. ಆದರೆ ವಿಶಾಲವಾದ ಹೃದಯ ಮತ್ತು ತೆರೆದ ಮನಸ್ಸು ವಿರಳವಾಗುತ್ತಿದೆ. ನಿಷ್ಕಲ್ಮಷವಾದ ನಗುಮುಖ ಮರೆಯಾಗಿದೆ. ಯಾರನ್ನು ದೂಷಿಸುವುದು? ಏಕೆ ಹೀಗೆ? ನಮಗೇನಾಗಿದೆ? ಎಂದು ಪ್ರಶ್ನಿಸಿಕೊಂಡರೆ ಅವು ಉತ್ತರವಿಲ್ಲದ ಪ್ರಶ್ನೆಗಳಾಗಿಯೇ ಉಳಿದುಬಿಡುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಇತ್ತೀಚಿನ ಪೀಳಿಗೆಗಳಲ್ಲಿ ಇಂತಹ ಒಂದು ತುಡಿತವೇ ಮಾಯವಾಗಿಬಿಟ್ಟಿದೆ. ಸುಮಧುರ ಸಂಬಂಧಗಳ ಸವಿಯನ್ನೇ ಅರಿಯದ ಇವರು ಅದರ ಮಹತ್ವವನ್ನು ಹೇಗೆ ತಾನೇ ತಿಳಿಯಬಲ್ಲರು? ಪಾಶ್ಚಾತ್ಯ ರೀತಿಯಂತೆ ನಾನು ಬದುಕುವುದೇ ನನ್ನ ಸುಖಕ್ಕಾಗಿ; ಇತರರ (ಅಂದರೆ ತನ್ನ ಸಂಬಂಧಿಕರನ್ನು ಕುರಿತು ಮಾತ್ರ ಇಲ್ಲಿ ಹೇಳಿರುವುದು) ಉಸಾಬರಿ ತನಗೇಕೆ ಎಂಬ ಭಾವನೆ ಎಲ್ಲರಲ್ಲಿ ಮನೆ ಮಾಡುತ್ತಿದೆ. ಸಮಾರಂಭಗಳಲ್ಲಿ ಅಪರೂಪಕ್ಕೆ ಸಿಗುವ ನೆಂಟರಿಗೆ ’ಹಾಯ್’ ’ಬಾಯ್’ ಹೇಳಿಬಿಟ್ಟು, ಮುಂದಿನ ಕ್ಷಣ ತನ್ನ ಲೋಕಕ್ಕೇ ಜಾರುವವರು ಬಹುಬಂದಿ ಇಂದು. ಆಪ್ತೇಷ್ಟರು ಮರಣ ಹೊಂದಿ ದೇಹವನ್ನು ಭಸ್ಮ ಮಾಡಿದೊಡನೆಯೇ ಸಂಬಂಧಗಳೂ ಭಸ್ಮವಾಗುವ ಕಾಲ ಬಂದಿರುವುದು ನಮ್ಮ ಸಂಸ್ಕೃತಿ ಎತ್ತ ಸಾಗುತ್ತಿದೆ ಎಂಬುದರ ಸೂಚಿ. ಬ್ಯಾಂಕ್ ಬ್ಯಾಲೆನ್ಸ್, 3-4 ನಿವೇಶನಗಳು, ಐಷಾರಾಮಿ ವಸ್ತುಗಳು ಇತ್ಯಾದಿ ಇಷ್ಟೇ ನಮ್ಮ ಜೀವನದ ಪರಮ ಗುರಿ ಎಂದಾದಾಗ ಪರಿಣಾಮ ಮೇಲಿನಂತೆಯೇ ಆಗಲೇಬೇಕಲ್ಲವೇ?

ಹುಟ್ಟಿದ ಮಗುವನ್ನು ಕ್ರೀಷೆಗೋ, ಆಯಾ ಸುಪರ್ದಿಗೋ ನೀಡಿ ದುಡಿಮೆಗೆ ಹೊರಟಾಗ ಮಗುವಿಗೆ ತಾಯಿಯ ಪ್ರೀತಿ, ಮಧುರ ಬಾಂಧವ್ಯದ ಸವಿಯನ್ನು ಉಣಿಸುವವರು ಯಾರು? ಕಾಲಾಂತರದಲ್ಲಿ ಆ ಮಗು ಆ ತಾಯಿ ಮಾಡಿದ್ದನ್ನೇ ಮಾಡುತ್ತದೆ. ಮುಂದೆ ತನ್ನ ಮಕ್ಕಳಿಗೆ ಒಂದಿಷ್ಟು ಸೌಲಭ್ಯ, ಹಣಕಾಸು ನೀಡಿ, ತನ್ನ ಪಾಡಿಗೆ ತಾನು ತನ್ನ ಸುಖದ ಅನ್ವೇಷಣೆಯಲ್ಲಿ ತೊಡಗಿಬಿಡುತ್ತದೆ. ಆಗ ತಾಯಿ ಮಗುವನ್ನು ದೂಷಿಸಿ ಪ್ರಯೋಜನವೇನು? ನೇರವಾಗಿ ಹೇಳಬೇಕೆಂದರೆ, ಇಂದು ಸಮಾಜದಲ್ಲಿ ತಾಯಿ ತನ್ನ ಪಾತ್ರವನ್ನು ಸರಿಯಾಗಿ ನಿರ್ವಹಿಸದೇ ಇರುವುದೇ ಈ ಸಂಬಂಧಗಳ ಹಳಸುವಿಕೆಗೆ ಮೂಲ ಕಾರಣವೆಂದರೆ ತಪ್ಪಾಗಲಾರದು. ಅದಕ್ಕಂದೇ ಮನೆಯೆ ಮೊದಲ ಪಾಠಶಾಲೆ; ತಾಯಿಯೇ ಮೊದಲ ಗುರುವು ಎಂದು ಹೇಳಿರುವುದು. ತಾಯಿ ಸ್ವಾರ್ಥಿಯಾದಾಗ ಅವಳ ಸಂತಾನ ಕೂಡಾ ಅದೇ ಹಾದಿ ಹಿಡಿದೇ ಹಿಡಿಯುತ್ತದೆ. ಕುರುಡು ಕಾಂಚಾಣದ ಹಿಂದೆ ಬಿದ್ದು ನಾಗಾಲೋಟದಲ್ಲಿ ಓಡುತ್ತಿರುವವರಿಗೆ ಮುಂದಿನ ಪರಿಣಾಮಗಳು ಹೇಗೆ ತಾನೇ ಅರಿವಾದೀತು ಅಲ್ಲವೇ? ಪರಿಣಾಮ ಸಂಬಂಧಗಳು ಸೊರಗುತ್ತಿವೆ; ನಿಧಾನವಾದ ಆದರೆ ಅಷ್ಟೇ ಖಚಿತವಾದ ಅನಾಹುತಗಳೆಡೆಗೆ ಸಾಗುತ್ತಿವೆ.

ಇನ್ನು ಮುಂದೆ ಅಣ್ಣ, ಅಕ್ಕ, ತಮ್ಮ, ತಂಗಿ ಸಂಬಂಧಗಳು ಅನುಭವಿಸಿದವರಿಗೆ ನೆನಪು ಮಾತ್ರಾ,. ಈಗಿನ ಪೀಳಿಗೆಗೆ ಈ ಅನುಬಂಧದ ಖುಷಿ ಬರೀ ಮರೀಚಿಕೆ ಅಷ್ಟೆ. ಏಕೆಂದರೆ ಪ್ರತಿ ಕುಟುಂಬದಲ್ಲೂ ಈಗ ಒಂದೇ ಮಗು. ಹಾಗಾಗಿ ಈ ಸಂಬಂಧಗಳು ಸಂಕೀರ್ಣವಾಗುವ ಬದಲು ಸಂಪೂರ್ಣ ಸ್ವಲ್ಪ ಕಾಲಾಂತರದಲ್ಲಿಯೇ ಮಾಯವಾದರೂ ಆಶ್ಚರ್ಯಪಡಬೇಕಾಗಿಲ್ಲ. ಮನೆಯಲ್ಲಿ ಸಹಜಾತರಿಲ್ಲದೇ ಬೆಳೆಯುವ ಒಂಟಿ ಮಗುವಿನ ಮನ:ಸ್ಥಿತಿ ಮತ್ತು ಇತರ ಸಂಬಂಧಿಗಳೊಡನೆ ಅದರ ವ್ಯವಹಾರ ಎಲ್ಲವೂ ಇದರಿಂದ ಪ್ರಭಾವಿತವಾಗುವುದಂತೂ ಶತ:ಸ್ಸಿದ್ಧ. ಸಹಬಾಳ್ವೆ ಮತ್ತು ಸಹಜೀವನದ ಸೌಖ್ಯ ಮತ್ತು ಅನುಭವದಿಂದ ವಂಚಿತವಾಗುವ ಈ ಮಕ್ಕಳ ಪರಿಸ್ಥಿತಿ ನೋಡಿದಾಗ ನಿಜವಾಗಿಯೂ ಖೇದವೆನಿಸುತ್ತದೆ.

ಮದುವೆ ಎಂದರೆ ಎರಡು ಮನಗಳ ಸಮಾಗಮ. ಗಂಡು-ಹೆಣ್ಣು ಪರಸ್ಪರ ಭಾವನೆಗಳಿಗೆ ಸ್ಪಂದಿಸುವ ಮತ್ತು ನೋವು-ನಲಿವುಗಳಿಗೆ ನಿರಂತರ ಭಾಗಿಯಾಗುವ ಒಂದು ಸಾಮಾಜಿಕ ವ್ಯವಸ್ಥೆ. ಆದರಿಂದು ಮದುವೆ ಮನ ಗಳ ಸಮಾಗಮವಲ್ಲ ಕೇವಲ ಮನಿ [money] ಗಳ ಸಮಾಗಮದ ವ್ಯವಸ್ಥೆಯಾಗಿದೆ. ಗಂಡ ತಿಂಗಳಿಗೆ ೧ ಲಕ್ಷಕ್ಕಿಂತಲೂ ಹೆಚ್ಚಿಗೆ ದುಡಿದರೂ ಹೆಂಡತಿ ಕೂಡಾ ಕೆಲಸಕ್ಕೆ ಹೋಗಲೇ ಬೇಕು. ಓದ್ದಿದ್ದೇವೆ ಎಂಬ ಏಕೈಕ ಕಾರಣದಿಂದ ದುಡಿಮೆ ಏಕೆ ಹೆಣ್ಣು ಮಕ್ಕಳಿಗೆ ಇಂದು ಅನಿವಾರ‍್ಯವಾಗಿದೆಯೋ ಅರ್ಥವಾಗದು. ಬದುಕಿನ ಗುರಿ ಅದಕ್ಕಿಂತ ಮಿಗಿಲಾಗಿ ಸಂಸಾರ ಬಂಧನದ ಗುರಿ ಮತ್ತು ಕರ್ತವ್ಯಗಳ ಪರಿಕಲ್ಪನೆಯ ಅಭಾವ ಇಂದು ಎದ್ದು ಕಾಣುತ್ತಿದೆ. ಹುಟ್ಟಿದ ಮಗುವಿಗೆ ತಾಯಿಯ ಮಡಿಲು ಮತ್ತು ಮಮತೆಯೇ ಇಂದು ಮರೀಚಿಕೆಯಾದರೆ, ಹೆತ್ತ-ತಾಯಿಗೆ ಮಗು ಪಾಲನೆ-ಪೋಷಣೆಯೇ ಹೊರೆಯಾದರೆ, ಕಾರ್ಯ ಒತ್ತಡದಿಂದ ಗಂಡ-ಹೆಂಡಿರ ಸಂಬಂಧಗಳೇ ಹಳಸುವುದಾದರೆ, ತಮ್ಮ ಹಾಗೂ ತಮ್ಮ ಏಕೈಕ ಸಂತಾನದ ದೈಹಿಕ ಮತ್ತು ಮಾನಸಿಕ ಆರೋಗ್ಯವೂ ಬಲಿಪಶುವಾಗಬಹುದಾದರೆ, ಅಂತಹ ದುಡಿಮೆಯಿಂದ ಏನು ಸಾರ್ಥಕ ಎಂಬ ಸಾಮಾನ್ಯ ಪ್ರಶ್ನೆಗೆ ಈಗಿನ ಸುಶಿಕ್ಷಿತ ಯುವಕ/ಯುವತಿಯರಿಗೆ ಉತ್ತರ ಏಕೆ ಹೊಳೆಯುತ್ತಿಲ್ಲ ಎಂಬುದೇ ಸೋಜಿಗವೆನಿಸುತ್ತದೆ. ಗಂಡ-ಹೆಂಡರ ಜಗಳದಲ್ಲಿ ಕೂಸು ಬಡವಾಯಿತು ಎಂಬ ಗಾದೆ ಮಾತು ಇಂದು ಅಕ್ಷರಶ: ನಿಜವಾಗುತ್ತಿದೆ. ಸಂಬಂಧಗಳ ದೃಷ್ಟಿಯಲ್ಲಿ (ಪ್ರೀತಿ, ಪ್ರೇಮ) ಮಗು ಬಡವಾದರೂ ಬಲವಾದ ಆರ್ಥಿಕ ಬೆಂಬಲದಿಂದ ಮುಂದೆ ಅದು ಭಡವ ಆದರೂ ಆಶ್ಚರ್ಯ ಪಡಬೇಕಾಗಿಲ್ಲ.

ತಮ್ಮ ವೃತ್ತಿಜೀವನವೇ ಪ್ರಾಧಾನ್ಯವಾದರೆ ಅಮಾಯಕವಾದ ಒಂದು ಜೀವವನ್ನು ಈ ಪ್ರಪಂಚಕ್ಕೆ ತಂದು, ಅದನ್ನು ಅನ್ಯರ ಪಾಲನೆ-ಪೋಷಣೆಯಲ್ಲಿ ಬಿಟ್ಟು, ಅದರ ಜೀವನಕ್ಕೆ (ಅದರಲ್ಲೂ ವಿಶೇಷವಾಗಿ ಅದರ ಸಹಜ ಮಾನಸಿಕ ಬೆಳವಣಿಗೆಗೆ) ಕಲ್ಲು ಹಾಕುವ ಹಕ್ಕು ಕೂಡಾ ಇವರಿಗಿಲ್ಲವಷ್ಟೇ? ಒಂದು ಮಗು ಎಲ್ಲಾ ಐಷಾರಾಮಿ ವಸ್ತು-ಸೌಲಭ್ಯಗಳಿಗಿಂತಲೂ ಬೆಲೆ ಕಟ್ಟಲಾಗದಂತಹ ಆಸ್ತಿ. ಅಂತಹ ಅಮೂಲ್ಯವಾದ ಆಸ್ತಿಯನ್ನು ಜತನವಾಗಿ ಕಾಪಾಡಿ, ಪೋಷಿಸಿ, ಬೆಳೆಸಿದರೆ ಅದು ಕುಟುಂಬಕ್ಕಷ್ಟೇ ಅಲ್ಲ ಇಡೀ ದೇಶಕ್ಕೇ ಒಂದು ಅಪೂರ್ವವಾದ ಆಸ್ತಿಯಾಗಬಲ್ಲದು. ಪ್ರಮುಖವಾಗಿ ಮಕ್ಕಳ ಬಾಲ್ಯದಲ್ಲಿ ಹೆಜ್ಜೆ-ಹೆಜ್ಜೆಗೂ ಅದರ ನಡೆ-ನುಡಿಗಳನ್ನು ತಿದ್ದುವ ಕೆಲಸ ಪೋಷಕರದ್ದು; ಅದರಲ್ಲೂ ವಿಶೇಷವಾಗಿ ತಾಯಿಯದ್ದು. ಗಿಡವಾಗಿ ಬಗ್ಗದ್ದು ಖಂಡಿತವಾಗಿ ಮರವಾದ ಮೇಲೆ ಬಗ್ಗಲಾರದು. ಜೀವನ ನಿರ್ವಹಣೆಗೆ ಹೆಣ್ಣಿನ ದುಡಿಮೆ ಅನಿವಾರ್ಯವಾದಾಗ ಬದುಕಿನೊಂದಿಗೆ ರಾಜಿ ಮಾಡಿಕೊಳ್ಳಬೇಕಾದ್ದು ಒಪ್ಪಬಹುದಾದ ಮಾತು. ಆದರಿಂದು ಕನಿಷ್ಠಪಕ್ಷ ದುಡಿಯುವ ಶೇ.೬೦-೭೦ ಕ್ಕಿಂತ ಹೆಚ್ಚು ಮಹಿಳೆಯರಿಗೆ ಅಂತಹ ಪರಿಸ್ಥಿತಿ ಇಲ್ಲ; ಅದು ಕೇವಲ ಷೋಕಿಯ ಮತ್ತು ಸಾಮಾಜಿಕ ಪ್ರತಿಷ್ಠೆಯ ಪ್ರತೀಕ ಮಾತ್ರಾ ಆಗಿ ಉಳಿದಿದೆ. ಈ ಪ್ರವೃತ್ತಿಯಿಂದ ಏನೂ ಅರಿಯದ ಮುಗ್ಧ ಕಂದಮ್ಮಗಳು ನರಳುವಂತಾಗಿದೆ. ಕೇವಲ ಹಣದಿಂದ ಮಕ್ಕಳ ಎಲ್ಲಾ ಅವಶ್ಯಕತೆಗಳನ್ನೂ ನಾವು ಪೂರೈಸುತ್ತಿದ್ದೇವೆ ಎಂಬ ಭ್ರ,ಮೆಯಲ್ಲಿ ಇಂದು ಬಹುಮಂದಿ ಇದ್ದಾರೆ. ಮುಂದೆ ಬೆಳೆದು ನಿಂತ ಮಕ್ಕಳು ನಿಮ್ಮನ್ನು ಕೇವಲ ಒಂದು ATM ಆಗಿ ಮಾತ್ರಾ ನೋಡುತ್ತಾರೆ. ಅವರಲ್ಲಿ ನೀವವರ ತಂದೆ-ತಾಯಿಯರೆಂಬ ಭಾವನೆಗಳೂ ಕೂಡ ಇಲ್ಲದಿದ್ದಲ್ಲಿ ನೀವು ಆಶ್ಚರ್ಯ ಪಡಬೇಕಾಗಿಲ್ಲ. ಏಕೆಂದರೆ ನೀವು ಅದರ ನಿಜವಾದ ತಂದೆ-ತಾಯಿಯರೆಂಬ ವಾತ್ಸಲ್ಯದಿಂದ ಅದನ್ನು ವಂಚಿಸಿದರ ಫಲ ಅದು. ವಿದೇಶಕ್ಕೆ ತೆರಳಿ, ಹೆತ್ತ ಮಗುವನ್ನು, ಅಜ್ಜ-ಅಜ್ಜಿಯರ ಅಥವಾ ಅನ್ಯರ ಪೋಷಣೆಯಲ್ಲಿ ಬಿಟ್ಟು ಧನದಾಹಿ ಗಳಾಗಿರುವ ಅನೇಕರನ್ನು ನಾವಿನ್ನು ನೋಡಬಹುದು. ಬಹುಶ: ಐದಾರು ವರ್ಷಗಳ ನಂತರ ಇವರೇ ನಿಮ್ಮ ತಾಯಿ-ತಂದೆ ಎಂದು ಅಜ್ಜ-ಅಜ್ಜಿಯರು ಮಗುವಿಗೆ ಪರಿಚಯ ಮಾಡಿಕೊಡುವ ಸನ್ನಿವೇಶ ಕೂಡ ಖಂಡಿತ ಬಾರದಿರದು. ವೃದ್ಧಾಪ್ಯದಲ್ಲಿ ತಂದೆ-ತಾಯಿಯರನ್ನು ನೆಮ್ಮದಿಯಿಂದ ಬಾಳುವಂತೆ ನೋಡಿಕೊಳ್ಳುವುದಿರಲಿ; ಅವರಿಗೆ ಆ ಕಾಲದಲ್ಲಿ ಪುನ: ಪೋಷಕರ ಜವಾಬ್ದಾರಿ ಹೊರಿಸುವ ಈ ನಿಷ್ಕರುಣಿಗಳಿಗೆ ಏನೆನ್ನಬೇಕೋ ತಿಳಿಯದಾಗಿದೆ. ಇದೇ ಧಾಟಿ ಮುಂದುವರಿದಲ್ಲಿ, ಬಹುಶ: ವೃದ್ಧಾಶ್ರಮ ಮತ್ತು ಅಬಲಾಶ್ರಮಗಳಂತೆ ಬಾಲಾಶ್ರಮಗಳೂ ಕಾಲಾನುಕ್ರಮದಲ್ಲಿ ತಲೆಯೆತ್ತಿದರೆ ಆಶ್ಚರ್ಯ ಪಡಬೇಕಾಗಿಲ್ಲ. ಸಾಕಷ್ಟು ಸಂಖ್ಯೆಯಲ್ಲಿ ಬೆಳೆಯುತ್ತಿರುವ ಬೋರ್ಡಿಂಗ್ ಸ್ಕೂಲ್‌ಗಳೂ ಬಹುಶ: ಇದರ ಮುನ್ಸೂಚನೆಯಿರಬಹುದು! ದಿಕ್ಕೆಟ್ಟ ಮಕ್ಕಳಿಂದ ಮುಂದೆ ದಿಕ್ಕೆಟ್ಟ ಸಮಾಜವನ್ನು ಸೃಷ್ಟಿಸಿದ ಶಾಪಕ್ಕೂ ಅಂತಹವರು ಗುರಿಯಾಗಬೇಕಾಗುತ್ತದೆ. ಧನ ಮದ, ವಿದ್ಯಾಮದ ಮತ್ತು ಅದರೊಂದಿಗೆ ಮಿಳಿತವಾದ ಅಹಂ ಕಾರ ಇಂದಿನ ಈ ಪ್ರವೃತ್ತಿಗೆ ಬಹುಶ: ಪ್ರಮುಖ ಕಾರಣಗಳು ಎನ್ನಬಹುದು.

ಆರ್ಥಿಕ ಸ್ವಾತಂತ್ರ್ಯ ಮತ್ತು ಸಹಾಯ ಒಂದು ಮಟ್ಟದವರೆಗೆ ಗಂಡು-ಹೆಣ್ಣು ಇಬ್ಬರಿಗೂ ಅತ್ಯಂತ ಅವಶ್ಯ. ಆ ಮಟ್ಟ ಮುಟ್ಟಿದ ಕೂಡಲೇ ಅದು ನಮ್ಮ ಸಂಬಂಧಗಳ ಮೇಲೆ, ನಮ್ಮ ನೆಮ್ಮದಿಯ ಮೇಲೆ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಮುಗ್ಧ ಎಳೆ ಜೀವಗಳ ಮೇಲೆ ಸವಾರಿ ಮಾಡಲು ಬಿಡಬಾರದು. ಹಣ ಕೇವಲ ನಮ್ಮ ಅವಶ್ಯಕತೆಗಳನ್ನು ಪೂರೈಸುವ ಒಂದು ಸಾಧನವಾಗಬೇಕಷ್ಟೇ ಅಲ್ಲದೇ ಅದು ನಮ್ಮ ಜೀವನ ಶೈಲಿಯನ್ನೇ ಪ್ರಭಾವಿಸುವ ಯಜಮಾನ ನಾಗಬಾರದು. ಅವಶ್ಯಕತೆಗೆ ಮೀರಿದ ಹಣ ನಮಗರಿವಿಲ್ಲದಂತೆಯೇ ನಮ್ಮ ಮೇಲೆ ಸವಾರಿ ಮಾಡಲುಪಕ್ರಮಿಸುತ್ತದೆ; ಸಂಬಂಧಗಳನ್ನು ಹದಗೆಡಿಸುತ್ತದೆ; ಅಂತಿಮವಾಗಿ ಮಾನವೀಯತೆ ಸಾಯುತ್ತದೆ. ಹಾಗಾಗಬಾರದೆಂದರೆ, ವಿಶೇಷವಾಗಿ ಇಂದಿನ ಯುವಕ-ಯುವತಿಯರು ತಮ್ಮ ಆದ್ಯತೆಗಳನ್ನು, ಅದರಲ್ಲೂ ಪ್ರಮುಖವಾಗಿ ಮದುವೆಯ ನಂತರದ ಜೀವನವನ್ನು ಸುಗಮವಾಗಿಸುವ ದೃಷ್ಟಿಯಿಂದ, ಬಹಳ ಜೋಪಾನವಾಗಿ ಗುರುತಿಸಿಕೊಳ್ಳಬೇಕು. ನಾಳಿನ ಸುಸಂಸ್ಕೃತ ಪ್ರಜೆಗಳನ್ನು ರೂಪುಗೊಳಿಸುವ ಗುರುತರ ಜವಾಬ್ದಾರಿಯನ್ನರಿತು ಜೀವನದಲ್ಲಿ, ಅದರಲ್ಲೂ ವಿಶೇಷವಾಗಿ ಸುಶಿಕ್ಷಿತ ಹೆಣ್ಣು ಮಕ್ಕಳು, ಅತೀ ಜಾಗರೂಕವಾದ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಇಂದಿನ ತುರ್ತು ಅಗತ್ಯತೆ ಮತ್ತು ಅನಿವಾರ್ಯತೆ. ಅಂತಹ ಒಂದು ಧೀರ ನಿರ್ಧಾರದಿಂದ ಸಂಸಾರ ಆನಂದ ಸಾಗರವಾಗುತ್ತದೆ; ಹಣ ಕೊಡಲಾರದ, ಕೊಳ್ಳಲಾರದ, ಅಪರಿಮಿತ ಸೌಖ್ಯ ಕುಟುಂಬದ ಎಲ್ಲ ಸದಸ್ಯರ ಪಾಲಾಗುತ್ತದೆ.

ಸಂಸಾರದ ಕರ್ತವ್ಯ ನಿರ್ವಹಣೆಗೆ ಹಣ ಅಗತ್ಯ ನಿಜ. ಎಷ್ಟು ಹಣ ಬೇಕು ಎಂಬುದು ಸುಶಿಕ್ಷಿತರು ತಾವೇ ನಿರ್ಧರಿಸಿಕೊಳ್ಳಬೇಕಾದ ವಿಚಾರ. ಈ ಒಂದು ನಿರ್ಧಾರವನ್ನು ತೆಗೆದುಕೊಳ್ಳುವಲ್ಲೇ ಇಂದಿನ ಅನೇಕ ಯುವಕ-ಯುವತಿಯರು ಎಡವುತ್ತಿರುವುದರಿಂದಲೇ ಸಾಂಸಾರಿಕ ನೆಮ್ಮದಿ-ಸುಖ ನೇಪಥ್ಯಕ್ಕೆ ಸರಿದಿದೆ. ಎಲ್ಲೋ ಒಂದು ಕಡೆ ‘full-stop’ ಹಾಕದಿದ್ದರೆ, ವಾಕ್ಯ ಅಪೂರ್ಣವಾಗುವಂತೆ, ಜೀವನವೂ ಅಪೂರ್ಣವಾಗುತ್ತದೆ; ಅಸಹನೀಯವಾಗುತ್ತದೆ. ಅಪರಿಮಿತ ಅಷ್ಟೈಶ್ವರ್ಯಗಳು ಬೇಕೋ - ಸಾಂಸಾರಿಕ ನೆಮ್ಮದಿ, ಸೌಖ್ಯ ಬೇಕೋ - ಆಯ್ಕೆ ನಿಮ್ಮದೇ!
-ಕವಿ ವೆಂ. ಸುರೇಶ್
8.7.2011
94489-32866 - Email: bsr_kavisuresh@yahoo.co.in

ಸಾಧನಾ ಪಂಚಕಮ್: ಭಾಗ -7

ಸಾಧನಾ ಪಂಚಕಂ -ಮೆಟ್ಟಲು- 21+22+23+24
21. ಬ್ರಹ್ಮಾಸ್ಮೀತಿ ವಿಭಾವ್ಯತಾಮ್
ಭಾವಾರ್ಥ: ಬ್ರಹ್ಮಾನುಭಾವದಲ್ಲಿ ತಲ್ಲೀನನಾಗು
22. ಅಹರಹರ್ಗರ್ವ: ಪರಿತ್ಯಜ್ಯತಾಮ್
ಯಾವತ್ತೂ ಗರ್ವವನ್ನು ಪರಿತ್ಯಜಿಸು
23. ದೇಹೇಹಂ ಮತಿರುಝ್ಯತಾಮ್
ಶರೀರವೇ ನಾನೆಂಬ ಮನಸ್ಸಿನ ತಪ್ಪು ಗ್ರಹಿಕೆಯನ್ನು ತೊರೆ
24. ಬುಧಜನೈರ್ವಾದ: ಪರಿತ್ಯಜ್ಯತಾಮ್
ವಿವೇಕಿಗಳೊಡನೆವಾದಮಾಡುವ ಪ್ರವೃತ್ತಿಯನ್ನು ಸಂಪೂರ್ಣವಾಗಿ ತೊರೆದುಬಿಡು
Thursday, July 14, 2011

ಸಾಧನಾ ಪಂಚಕಮ್: ಭಾಗ -6

ಸಾಧನಾ ಪಂಚಕಂ -ಮೆಟ್ಟಲು- 18+19+20
18.ಶ್ರುತಿಶಿರ:ಪಕ್ಷ:ಸಮಾಶ್ರೀಯತಾಮ್
ಭಾವಾರ್ಥ: ಉಪನಿಷತ್ತುಗಳು ಸೂಚಿಸುವ ಸತ್ಯದ ಪರಂಧಾಮದಲ್ಲಿ ಆಶ್ರಯವನ್ನು ಪಡೆ
19.ದುಸ್ತರ್ಕಾತ್ ಸುವಿರಮ್ಯತಾಮ್
ಭಾವಾರ್ಥ:ವಿತಂಡವಾದದಿಂದ ದೂರವಿರು
20.ಶ್ರುತಿಮತಸ್ತರ್ಕೋನುಸಂಧೀಯತಾಮ್

ಭಾವಾರ್ಥ:ಶಾಸ್ತ್ರಸಮ್ಮತವಾದ ಯುಕ್ತಿಪೂರ್ವಕ ತರ್ಕವನ್ನು ಅನುಸರಿಸು.

Wednesday, July 13, 2011

ಸಾಧನಾ ಪಂಚಕಮ್: ಭಾಗ -5

ಸಾಧನಾ ಪಂಚಕಮ್-ಮೆಟ್ಟಿಲು-17
ವಾಕ್ಯಾರ್ಥಶ್ಚವಿಚಾರ್ಯತಾಮ್
ಭಾವಾರ್ಥ: ಉಪನಿಷತ್ತಿನ ಮಹಾವಾಕ್ಯಗಳ ಗೂಡಾರ್ಥವನ್ನು ವಿಚಾರತತ್ಪರತೆಯಿಂದ ಚಿಂತಿಸು.

Tuesday, July 12, 2011

ಸಾಧನಾ ಪಂಚಕಮ್-ಭಾಗ -4

ತಿಪಟೂರಿನ ಚಿನ್ಮಯಾ ಮಿಷನ್ನಿನ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರು ಐದು ದಿನಗಳ ಒಂದು ಉಪನ್ಯಾಸಮಾಲೆಯನ್ನು ಹಾಸನದಲ್ಲಿ ನಡೆಸಿಕೊಟ್ಟರು. ವಿಷಯ: ಶ್ರೀ ಶಂಕರಾಚಾರ್ಯ ವಿರಚಿತ ಸಾಧನಾ ಪಂಚಕಮ್. ಇದರಲ್ಲಿ ಐದು ಶ್ಲೋಕಗಳು. ಒಂದೊಂದರಲ್ಲೂ ಎಂಟೆಂಟು ಸೂತ್ರಗಳು.ಸಾಧನೆಯ ಪಥದಲ್ಲಿರುವವನಿಗೆ ಬಲು ಇಷ್ಟವಾಗುತ್ತದೆ.ಒಂದೊಂದೂ ಸೂತ್ರವೂ ಸಾಧಕನಿಗೆ ಒಂದೊಂದು ಮೆಟ್ಟಿಲು. ಒಂದೊಂದು ಮೆಟ್ಟಿಲನ್ನೂ ಮನಮುಟ್ಟುವಂತೆ ವಿವರಿಸಿದ ರೀತಿಯು ಅದ್ಭುತ. ಉಪನ್ಯಾಸವನ್ನು ನಾನು ಕೇಳಿದ ಮೇಲೆ ವೇದಸುಧೆಯ ಅಭಿಮಾನಿಗಳಿಗೂ ಕೇಳಿಸಬೇಡವೇ! ಅದಕ್ಕಾಗಿ ಈ ಪ್ರಯತ್ನ.ಒಂದೊಂದು ಸೂತ್ರವನ್ನೂ ಇಲ್ಲಿ ಪ್ರಕಟಿಸಲಾಗಿದೆ. ಅದರ ವಿವರಣೆಯನ್ನು ಶ್ರೀ ಸುಧರ್ಮ ಚೈತನ್ಯರ ಕಂಠದಿಂದಲೇ ಕೇಳಿ. ನಿತ್ಯವೂ ಒಂದೆರಡರಂತೆ ನಲವತ್ತು ಸೂತ್ರಗಳನ್ನೂ ಪ್ರಕಟಿಸಲಾಗುವುದು.
ಸಾಧನಾ ಪಂಚಕಂ -ಮೆಟ್ಟಲು- 14+ 15 + 16
14. ಪ್ರತಿದಿನಂ ತತ್ಪಾದುಕಾ ಸೇವ್ಯತಾಮ್
ಭಾವಾರ್ಥ: ನಿತ್ಯವೂ ಸದ್ಗುರುಗಳ ಪಾದುಕೆಗಳನ್ನು ಆರಾಧಿಸು
15. ಬ್ರಹ್ಮೈಕಾಕ್ಷರಮರ್ಥ್ಯತಾಮ್
ಭಾವಾರ್ಥ: ಬ್ರಹ್ಮವನ್ನು ಸೂಚಿಸುವ ಏಕಾಕ್ಷರವಾದ ಓಂ ಕಾರವನ್ನು ಧ್ಯಾನಿಸು
16. ಶ್ರುತಿಶಿರೋವಾಕ್ಯಂ ಸಮಾಕರ್ಣ್ಯತಾಮ್
ಭಾವಾರ್ಥ: ಉಪನಿಷತ್ತಿನ ಮಹಾವಾಕ್ಯಗಳನ್ನು ಕುರಿತು ಗಂಭೀರವಾಗಿ ಮನನ ಮಾಡು

Monday, July 11, 2011

ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬನ್ನಿ

ಶ್ರೀ ರಾಮಪ್ರಸಾದ್[ಹಂಸಾನಂದಿ] ಇವರು ಮೂಲತ: ಹಾಸನದವರು.ವಿದೇಶದಲ್ಲಿದ್ದು ಕನ್ನಡ ಮತ್ತು ನಮ್ಮ ಸಂಸ್ಕೃತಿಯ ಬಗ್ಗೆ ಅತ್ಯಂತ ಕಳಕಳಿಯುಳ್ಳವರು. ಸಂಗೀತದ ಆರಾಧಕರು.ಅವರ ಮತ್ತು ಅವರ ಪತ್ನಿಯ ಪುಸ್ತಕಗಳನ್ನು ಬೆಂಗಳೂರಿನಲ್ಲಿ ಬಿಡುಗಡೆಮಾಡಲಿದ್ದು ವೇದಸುಧೆಯ ಅಭಿಮಾನಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಅವರ ಆಮಂತ್ರಣವನ್ನು ಇಲ್ಲಿ ಪ್ರಕಟಿಸಿರುವೆ. ವೇದಸುಧೆಯ ಅಭಿಮಾನಿಗಳು ಅದರಲ್ಲೂ ಬೆಂಗಳೂರಿನಲ್ಲಿರುವ ಎಲ್ಲರೂ ತಪ್ಪದೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಲಲು ವಿನಂತಿಸುವೆ.
-ಹರಿಹರಪುರಶ್ರೀಧರ್
--------------------------------------------------

ಹಂಸನಾದ ಅಂದರೆ ಕರ್ನಾಟಕ ಸಂಗೀತದ ಒಂದು ಒಂದು ಜನಪ್ರಿಯ ರಾಗ. ನಂತರ, ನನ್ನ ಬ್ಲಾಗಿಗೆ ಅದೇ ಹೆಸರನ್ನು ನಾನು ಕೊಟ್ಟಿದ್ದೆ. ನನ್ನ ಮನಸ್ಸಿಗೆ ತೋಚಿದ್ದನ್ನೆಲ್ಲ ಮೂರು ನಾಲ್ಕು ವರ್ಷಗಳಿಂದ ಗೀಚ್ತಾ ಹೋಗಿದ್ದೆ ಅನ್ನಿ.

ಹೀಗೆ ನಾನು ಬರೆದ ಬರವಣಿಗೆಯಲ್ಲಿ ಆಯ್ದ ಕೆಲವು ಸುಭಾಷಿತ ಅನುವಾದಗಳು ಒಂದು ಪುಸ್ತಕವಾಗಿ ಸದ್ಯದಲೇ ಹೊರಬರಲಿದೆ ಎಂಬ ವಿಷಯವನ್ನು ನಿಮ್ಮೊಡನೆ ಹಂಚಿಕೊಳ್ಳಲು ಬಹಳ ಸಂತೋಷವಾಗುತ್ತಿದೆ.

ಪುಸ್ತಕದ ಹೆಸರು ಕೂಡ ಹಂಸನಾದ ಅಂತಲೇ!

ಪುಸ್ತಕದ ಬಿಡುಗಡೆ ಜುಲೈ ೧೬ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಜೊತೆಯಲ್ಲೇ ನನ್ನ ಶ್ರೀಮತಿಯ ಕಥಾಸಂಕಲನವೊಂದು ಕೂಡ ಬಿಡುಗಡೆ ಆಗುತ್ತಿರುವುದು ನನ್ನ ಸಂತೋಷವನ್ನು ಇಮ್ಮಡಿಗೊಳಿಸಿದೆ.

ಈ ಸಂತಸವನ್ನು ಇನ್ನೂ ಹೆಚ್ಚಿಸಲು ನೀವು ತಪ್ಪದೇ ಬರಬೇಕು, ನಮ್ಮೊಂದಿಗೆ ಇರಬೇಕು. .

ಹಲವು ಬ್ಲಾಗ್ ಗೆಳೆಯರಿಗೆ ಮಿಂಚಂಚೆ ಕಳಿಸಿರುವೆನಾದರೂ, ಕೆಲವರ ಮಿಂಚಂಚೆ ವಿಳಾಸ ಇರದೆಯೋ, ಇಲ್ಲವೇ ಕಣ್ತಪ್ಪಿನಿಂದಲೋ ನಿಮಗೆ ತಲುಪಿಲ್ಲದಿದ್ದರೆ ದಯವಿಟ್ಟು ಇದನ್ನೇ ನನ್ನ ಕರೆಯೋಲೆಯೆಂದು ತಿಳಿಯಬೇಕೆಂದು ಕೋರಿಕೆ.


Thursday, July 7, 2011

ಕೈವಲ್ಯೋಪನಿಷತ್ ಆಧಾರಿತ ಧ್ಯಾನ


ಹಾಸನದ ಶ್ರೀ ಶಂಕರ ಮಠದಲ್ಲಿ ಇತ್ತೀಚಿಗೆ ತಿಪಟೂರಿನ ಶ್ರೀ ಚಿನ್ಮಯಾ ಮಿಷನ್ನಿನ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯ ರಿಂದ ಕೈವಲ್ಯೋಪನಿಷತ್ ಆಧಾರಿತ ಧ್ಯಾನದ ತರಗತಿ ನಡೆಯಿತು. ಐದು ದಿನಗಳು ನಡೆದ ತರಗತಿಯಲ್ಲಿ ನಾನು ನಾಲ್ಕು ದಿನ ಪಾಲ್ಗೊಂಡಿದ್ದೆ. ಎರಡು ದಿನಗಳ ಧ್ಯಾನದ ಪ್ರವಚನ ರೆಕಾರ್ಡ್ ಆಗಿದೆ. ಅದನ್ನಿಲ್ಲಿ ಪ್ರಕಟಿಸಿರುವೆ. ನೀವು ಇದನ್ನು ಡೌನ್ ಲೋಡ್ ಮಾಡಿಕೊಂಡು ಪ್ಲೇಯರ್ ನಲ್ಲಿ ಹಾಕಿ ಪ್ಲೇ ಮಾಡುತ್ತಾ ಕಣ್ಮುಚ್ಚಿ ಕುಳಿತು ಇದರ ಸವಿ ಅನುಭವಿಸಬಹುದು. ಮನಸ್ಸನ್ನು ಪ್ರಶಾನ್ತಗೊಳಿಸಬಲ್ಲ ಇಂತಹ ಧ್ಯಾನದಿಂದ ನಿಜಕ್ಕೂ ಉಪಯೋಗವಾಗುತ್ತದೆ. ಮಾತುಗಳು ನಿಧಾನಗತಿಯಲ್ಲಿರುತ್ತದೆ. ತಾಳ್ಮೆ ಇರಲಿ.

ಅಂಬಿಗ ನಾ ನಿನ್ನ ನಂಬಿದೆ

ಎಚ್ಚರ-ನಿದ್ದೆ-ಕನಸು ಇವು ಪ್ರತಿ ನಿತ್ಯ ಮಾನವ ಅನುಭವಿಸುವ ಮೂರು ಅವಸ್ಥೆಗಳು. ನಿದ್ರಾವಸ್ಥೆ ಬಗ್ಗೆ ಹೆಚ್ಚಿಗೆ ಹೇಳಬೇಕಾಗಿಲ್ಲ. ಅದೊಂದು ಅರೆ-ಸಾವಿನ ಸ್ಥಿತಿ! ಇಂದ್ರಿಯಾದಿಗಳೆಲ್ಲವೂ ನಿಶ್ಚೇಷ್ಟವಾಗಿ, ನಿಷ್ಕ್ರಿಯವಾಗಿ ಹಾಗೂ ಪ್ರತಿಕ್ರಿಯಾಶೂನ್ಯವಾಗಿರುವ ಸ್ಥಿತಿ. ಇನ್ನು ಕನಸುಗಳ ಲೋಕವೇ ಬೇರೆ. ಅವುಗಳ ರೂಪಗಳೂ ಮತ್ತು ಲಕ್ಷಣಗಳೂ ಚಿತ್ರ-ವಿಚಿತ್ರವಾದವುಗಳು. ಅವು ಮನಸ್ಸನ್ನು ಮುದಗೊಳಿಸಲೂಬಹುದು; ಭಯಗೊಳಿಸಲೂ ಬಹುದು. ಮುಂದೊದಗಬಹುದಾದ ಘಟನೆಗಳ ಬಗ್ಗೆ ಮುನ್ಸೂಚನೆಯನ್ನೂ ಅನೇಕ ಬಾರಿ ನೀಡಬಲ್ಲವು. ಕನಸಿನಲ್ಲಿ ಬೆಟ್ಟದಿಂದ ನಾವು ಬೀಳಬಹುದು; ಆನೆ ಅಟ್ಟಿಸಿಕೊಂಡು ಬಂದು ತುಳಿಯಬಹುದು. ಆದರೆ ಈ ಭೌತಿಕ ಶರೀರಕ್ಕೆ ಮಾತ್ರಾ ಏನೂ ಘಾಸಿಯಾಗದು! ಕನಸಿನ ಸಾಮ್ರಾಜ್ಯವೇ ಹಾಗೆ. ಹಾಗಾಗಿ ಅವುಗಳ ಬಗ್ಗೆ ಹೆಚ್ಚಿನ ವಿಶ್ಲೇಷಣೆ ಇಲ್ಲಿ ಅಪ್ರಸ್ತುತ.

ನಿದ್ದೆ-ಕನಸಿನ ನಂತರ ಬಹು ಮಹತ್ತರವಾದ ಅವಸ್ಥೆ ಎಚ್ಚರ. ಎಚ್ಚರದಲ್ಲಿ ಮನುಷ್ಯನ ಇಂದ್ರಿಯಾದಿಗಳು ಮತ್ತು ಬುದ್ಧಿ-ಮನಸ್ಸು ಕೂಡಾ ಸಂಪೂರ್ಣ ಜಾಗೃದಾವಸ್ಥೆಯಲ್ಲಿರುತ್ತವೆ. ಮಾತಿಗೆ ತಕ್ಕ ಮಾತು, ನಗುವಿಗೆ ಪ್ರತಿ ನಗು, ಮುಳ್ಳು ಚುಚ್ಚಿದಾಗ ನೋವಿನ ಅನುಭವ, ದು:ಖದ ವಿಚಾರ ಬಂದಾಗ ಅಳು-ನೋವು, ಸುಖ ಬಂದಾಗ ಪ್ರಸನ್ನತೆ, ಆಹ್ಲಾದ - ಹೀಗೆ ನಾನಾ ಪ್ರತಿಕ್ರಿಯೆಗಳನ್ನು ಎಚ್ಚರದ ಸ್ಥಿತಿಯಲ್ಲಿ ಉಚ್ಛ್ರಾಯ ಮಟ್ಟದಲ್ಲಿ ಗಮನಿಸಬಹುದು.

ಎಚ್ಚರದ ಅವಸ್ಥೆಯಲ್ಲಿ ನಾವು ಏನು ಮಾಡುತ್ತೇವೆಯೋ (ಅದು ಕೆಟ್ಟದ್ದೂ ಇರಬಹುದು), ಏನು ಮಾತನಾಡುತ್ತೇವೆಯೋ (ಅದು ಸುಳ್ಳು ಇರಬಹುದು) ಮತ್ತು ಏನು ಯೋಚಿಸುತ್ತೇವೆಯೋ (ಅದು ದುರ್ಯೋಚನೆಯೂ ಇರಬಹುದು) ಅದೇ ಆಗಿನ ಸತ್ಯ. ಅಂದು ಅನುಭವಿಸುವ ಸುಖ-ದು:ಖ, ನೋವು-ನಲಿವುಗಳೇ ಆಗಿನ ಸತ್ಯ. ಆದರೆ ನಾವು ಏನು ಮಾಡುತ್ತೇವೆ, ಏನು ಮಾತನಾಡುತ್ತೇವೆ ಮತ್ತು ಏನು ಯೋಚಿಸುತ್ತೇವೆ ಎಂಬುದು ನಮ್ಮ ನಮ್ಮ ವ್ಯಕ್ತಿಗತವಾದಂತಹ ಸಂಸ್ಕಾರ, ಪರಿಸರ, ಜ್ಞಾನ ಮುಂತಾದ ಅಪರಿಮಿತ ವಿಷಯಗಳನ್ನು ಅವಲಂಬಿಸಿದೆ ಎಂದರೆ ತಪ್ಪಾಗದು.

"ಲೋಕೋ ಭಿನ್ನ ರುಚಿ:" ಎನ್ನುವುದು ಬಹಳ ಹಳೆಯ ಮಾತು. ಒಂದು ಮದುವೆಯ ಆರತಕ್ಷತೆಯ ಭೋಜನಕ್ಕೆ ಹೋಗಿದ್ಧೇವೆ. ಖಾಲಿದೋಸೆಯಿಂದ ಹಿಡಿದು ಫಿಜ್ಜಾವರೆಗೆ ಅನೇಕಾನೇಕ ಖಾದ್ಯಗಳನ್ನು ಸಾಲಾಗಿ ಇಟ್ಟು ಬಡಿಸುತ್ತಿದ್ದಾರೆ. ಆದರೆ ನೋಡಿ. ಎಲ್ಲರು ಎಲ್ಲವನ್ನೂ ತಿನ್ನುವುದಿಲ್ಲ; ತಿನ್ನಲಾಗುವುದಿಲ್ಲ. ಒಬ್ಬೊಬ್ಬರು ತಮಗಿಷ್ಟವಾದ ಖಾದ್ಯಗಳನ್ನೇ ಮನ:ಪೂರ್ತಿ ತಿನ್ನುತ್ತಾರೆ. ಏಕೆಂದರೆ ಆಸೆ ಇದ್ದರೂ ಹೊಟ್ಟೆ ಗಾತ್ರ ಸೀಮಿತ. ಅದೇ ರೀತಿ ಮಾನವನ ಮೆದುಳೂ ಸಹ. ಮೇಲ್ನೋಟಕ್ಕೆ, ರಚನೆಯಾನುಸಾರ, ಎಲ್ಲರ ಮೆದುಳೂ ಒಂದೇ ಇದ್ದರೂ ಸಹ, ಅದರ ಗ್ರಹಣಶಕ್ತಿ ಮಾತ್ರಾ ಸೀಮಿತವಾದದ್ದು. ಉಪಯುಕ್ತ/ಅನುಪಯುಕ್ತ ವಿಷಯಗಳನ್ನು ಜರಡಿ ಹಿಡಿಯುವ ಸಾಮರ್ಥ್ಯ ಕೂಡಾ ವ್ಯಕ್ತಿ ವ್ಯಕ್ತಿಗೆ ಭಿನ್ನ. ನದಿಯ ತುಂಬಾ ನೀರು ಹರಿಯುತ್ತಿದ್ದರೂ ನಾವು ಕುಡಿಯಲಾಗುವುದು (ಕುಡಿಯುವುದು) ಮೂರ್ನಾಲ್ಕು ಬೊಗಸೆಯಷ್ಟು ಮಾತ್ರ. ಅದರಲ್ಲೇ ನಾವು ಸಂತೃಪ್ತಿ ಹೊಂದುತ್ತೇವೆ. ವಿಷಯ/ವಸ್ತು ಒಂದೇ ಇದ್ದರೂ ಅದನ್ನು ಬೇರೆ ಬೇರೆ ವ್ಯಕ್ತಿಗಳು ತಮ್ಮದೇ ದೃಷ್ಟಿಕೋನದಲ್ಲಿ ಅರ್ಥೈಸಿಕೊಳ್ಳುತ್ತಾರೆ; ನೋಡುತ್ತಾರೆ. ಹೀಗಾಗಿಯೇ ನಾವು ಪ್ರಪಂಚದಲ್ಲಿ ನಾನಾ ರೀತಿಯ ಆಚಾರ-ವಿಚಾರಗಳನ್ನು ಹೊಂದಿರುವ, ನಾನಾ ನಂಬಿಕೆಗಳನ್ನಿಟ್ಟು ಕೊಂಡಿರುವ ಮತ್ತು ನಾನಾ ಸಂಪ್ರದಾಯಗಳನ್ನು ಅನುಸರಿಸುವಂತಹ ಅಸಂಖ್ಯಾತ ಜನರನ್ನು ಕಾಣುತ್ತೇವೆ.

ಅನ್ನ ಸಂಪಾದನೆಗೆ ನಾನಾ ಮಾರ್ಗಗಳಿದ್ದಂತೆ, ಜ್ಞಾನ/ಪಾರಮಾರ್ಥಿಕ ಸಾಧನೆಗೂ ಕೂಡ ಬಹು ಜನರು ತಮ್ಮ ತಮ್ಮ ಆಸ್ಥೆಯಾನುಸಾರ ನಾನಾ ಮಾರ್ಗಗಳನ್ನು ಅಳವಡಿಸಿಕೊಂಡಿರುವುದು ಸ್ವಯಂಸ್ಪಷ್ಟವಾದ ವಿಚಾರ. ತಾನು ಮಾಡುವ ನಿಷ್ಕಾಮ ಕರ್ಮವೇ ಭಗವತ್ಸೇವೆ ಎಂದು ಒಬ್ಬ ಭಾವಿಸಿದರೆ, ಮತ್ತೊಬ್ಬ ಒಂದು ಮೂರ್ತಿಯಲ್ಲಿಯೇ ತನ್ನ ಇಷ್ಟದೈವವನ್ನು ಉತ್ಕಟ ಭಕ್ತಿಯಿಂದ, ನಾನಾ ರೀತಿಯಿಂದ ಪೂಜಿಸಿ, ಭಜಿಸಿ ಸಾಕ್ಷಾತ್ಕಾರಭಾವ ಅನುಭವಿಸುತ್ತಾನೆ. ಮೂರ್ತಿ ಪೂಜೆಯನ್ನೇ ನಂಬದ ಮುಸಲ್ಮಾನರಲ್ಲಿ ಇಂದೂ ಅನೇಕ ಮುಸಲ್ಮಾನ ದಂಪತಿಗಳು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸಂತಾನ ಪ್ರಾಪ್ತಿಗಾಗಿ ಆಶ್ಲೇಷ ಬಲಿ ಇತ್ಯಾದಿ ಸೇವೆ ಮಾಡಿಸುವವರನ್ನು ನೋಡಬಹುದಾಗಿದೆ; ಅದರಿಂದ ಫಲ ಪಡೆದ ಅನೇಕರ ಅನುಭವಗಳು ಇಲ್ಲಿ ಸಾಕಷ್ಟಿವೆ. ಅದೇ ಕ್ಷೇತ್ರದಲ್ಲಿ ಎಂಜಲೆಲೆಯ ಮೇಲೆ ಉರುಳು ಸೇವೆ ಮಾಡಿ ಚರ್ಮರೋಗ ಪರಿಹರಿಸಿಕೊಂಡವರಲ್ಲಿ ನನಗೆ ಅತೀ ಸಮೀಪದ ಬಂಧುವೇ ಸಾಕ್ಷಿಯಾಗಿದ್ದಾರೆ. ಇವೆಲ್ಲಾ ಅವರವರ ಶ್ರದ್ಧೆ-ನಂಬಿಕೆಯ ವಿಚಾರ. ನಮಗೆ ಅರ್ಥವಾಗದಿದ್ದರೆ (ಅಥವಾ ಅರ್ಥಮಾಡಿಕೊಳ್ಳುವ ಮನಸ್ಸಿಲ್ಲದಿದ್ದರೆ) ಅದಕ್ಕೆ ಅರ್ಥವಿಲ್ಲವೆಂದು ಜರೆಯುವುದು ಯಾವ ಧರ್ಮ?

ನಂಬದಿರ್ದನು ತಂದೆ, ನಂಬಿದನು ಪ್ರಹ್ಲಾದ |
ನಂಬಿಯುಂ ನಂಬದಿರುವಿಬ್ಬಂದಿ ನೀನು ||
ಕಂಬದಿನೊ ಬಿಂಬದಿನೊ ಮೋಕ್ಷವವರಿಂಗಾಯ್ತು |
ಸಿಂಬಳದಿ ನೊಣ ನೀನು - ಮಂಕುತಿಮ್ಮ ||

ಅದೇ ರೀತಿ ಪರೋಪಕಾರದಲ್ಲಿ ಕೆಲವರು ಭಗವದ್ಧರ್ಶನ ಪರಿಭಾವಿಸಿಕೊಂಡರೆ, ಅಪರಿಮಿತ ಪಾರಮಾರ್ಥಿಕ ಜ್ಞಾನಾರ್ಜನೆಯಲ್ಲಿ ಮತ್ತೆ ಕೆಲವರು ಸಚ್ಚಿದಾನಂದದ ಅನುಭವ ಕಾಣುತ್ತಾರೆ. ದಾನ-ಧರ್ಮದಲ್ಲಿ ಕೂಡ ಹಲವರು ನೆಮ್ಮದಿ-ಶಾಂತಿ ಕಂಡುಕೊಳ್ಳುತ್ತಾರೆ. ಜ್ಞಾನದ ಅಭಾವವೋ, ವೈಯುಕ್ತಿಕ ಪೂರ್ವಾಗ್ರಹವೋ ಅಥವಾ ಪ್ರತಿಷ್ಠೆಯೋ ಗೊತ್ತಿಲ್ಲ, ಇಂದು ಒಬ್ಬರು ಮತ್ತೊಬ್ಬರ ಆಚರಣೆಗಳನ್ನು, ನಂಬಿಕೆಗಳನ್ನು, ಅವರು ನಂಬಿಕೊಂಡ ಸಂಪ್ರದಾಯಗಳನ್ನು (ಸಾಮಾಜಿಕ ಮತ್ತು ವೈಯುಕ್ತಿಕ ಹಾನಿಮಾಡದಂತವುಗಳನ್ನು ಬಿಟ್ಟು) ಹೀಯಾಳಿಸುವುದರಲ್ಲಿಯೇ ಬಹು ಸಮಯ ವ್ಯರ್ಥ ಮಾಡುತ್ತಿರುವುದು ಇಂದಿನ ದುರಂತ. ಮೊದಲೇ ಹೇಳಿದಂತೆ, ಪ್ರತಿ ಮಾನವನ ಗ್ರಹಣ ಶಕ್ತಿ, ಆತನ ಸಂಸ್ಕಾರ, ಆತನ ಪರಿಸರ ಎಲ್ಲವೂ ಕೂಡ ಭಿನ್ನ ಭಿನ್ನ. ಹಾಗಾಗಿ ಎಲ್ಲರಿಗೂ ಒಂದೇ ಸಾಧನಾ ಪಥ ಸಾಧುವೂ ಅಲ್ಲ; ಸಾಧ್ಯವೂ ಅಲ್ಲ. ಬಹುಶ: ಇದು ಆ ಅಗೋಚರ ಶಕ್ತಿಯೇ ಉದ್ಧೇಶಪೂರ್ವಕವಾಗಿ ನಿರ್ಮಿಸಿದಂತಹ ಸನ್ನಿವೇಶವಿರಬಹುದು. ಇಲ್ಲದಿದ್ದರೆ ಲೋಕದ ಜನರು ಜೀವನದ ಆಚರಣೆಗಳಲ್ಲಿ ಏಕತಾನತೆಯಿಂದ ಬಳಲುತ್ತಿದ್ದರೋ ಏನೋ. ಭಾರತದ ಸಂಸ್ಕೃತಿಯೇ ಹಾಗೆ. ಭಗವತ್ಸಾಕ್ಷಾತ್ಕಾರಕ್ಕೆ ಪ್ರತಿಯೊಬ್ಬನಿಗೂ (ಅವನ ಇತಿಮಿತಿಯಾನುಸಾರ) ಎಟಕುವಂತಹ ಅನೇಕ ಸಾಧನಾಪಥವನ್ನು ಹಾಕಿಕೊಟ್ಟಿದೆ. ದಾರಿ ಹಲವು. ಗುರಿ ಮಾತ್ರ ಒಂದೇ. ಅಂತಿಮವಾಗಿ ನೆಮ್ಮದಿ ಮತ್ತು ಸಚ್ಚಿದಾನಂದ ಹೊಂದುವ ಗುರಿ.

ದಾರಿ ಸುಂದರವಿರಲು ಗುರಿಯ ಚಿಂತ್ಯಾಕೆ
ಗುರಿಯು ಸುಂದರವಿರಲು ದಾರಿ ಚಿಂತ್ಯಾಕೆ |
ಕಲ್ಲಿರಲಿ ಮುಳ್ಳಿರಲಿ ಹೂವು ಹಾಸಿರಲಿ
ರೀತಿ ಸುಮಧುರವಿರೆ ಯಶ ನಿನದೆ ಮೂಡ ||

[ಕವಿ ನಾಗರಾಜ್ ರವರ "ಮೂಢ ಉವಾಚ" ಪುಸ್ತಕದಿಂದ]

ಒಳ್ಳೆಯ ದಾರಿ, ಒಳ್ಳೆಯ ಚಿಂತನೆ, ಮನಸ್ಸಿಗೊಪ್ಪಿದ (ಅನ್ಯರ ನೋಯಿಸದ) ಆಚರಣೆ ಇದ್ದಾಗ ನೆಮ್ಮದಿ ಖಂಡಿತಾ ಹತ್ತಿರ ಸುಳಿದೀತು. ನನ್ನ ಆಚರಣೆಯೇ ಸರಿ, ನನ್ನ ನಂಬಿಕೆಯೇ ಸರಿ, ಬೇರೆಯವರದು ಕೆಳಮಟ್ಟದ ಮಾರ್ಗ ಎನ್ನುವ ಭಾವ ಬಹುಶ: ತರವಲ್ಲ. "ನಹಿ ಸರ್ವ: ಸರ್ವಂ ಜಾನಾತಿ" - ಎಲ್ಲರಿಗೆ ಎಲ್ಲವೂ ತಿಳಿದಿರುವುದಿಲ್ಲ. ಇದು ನಿತ್ಯಸತ್ಯವಾದ ಮಾತು. ಆದುದರಿಂದ ವಿಚಾರಗಳನ್ನು ಅಧಿಕಾರವಾಣಿಯಿಂದ ಇತರರ ಮೇಲೆ ಹೇರುವ ಪ್ರವೃತ್ತಿ ಕೂಡ ಪ್ರಶ್ನಾರ್ಹವೇ. ವಿಚಾರ ಮಂಡನೆ ಇರಲಿ. ಹೇರಿಕೆ ಬೇಡ; ಎಲ್ಲರೂ ಒಪ್ಪ ಬೇಕೆಂಬ ನಿರೀಕ್ಷೆ ಕೂಡಾ ಬೇಡ. ಮನುಷ್ಯನ ಮೆದುಳು ಬ್ಲಾಟಿಂಗ್ ಪೇಪರ ಇದ್ದ ಹಾಗೆ. ತನಗೆ ಸಾಧ್ಯವಾದಷ್ಟು ಮಾತ್ರಾ ಗ್ರಹಿಸಬಲ್ಲದು; ಒಪ್ಪಿಕೊಂಡಷ್ಟು ಮಾತ್ರಾ ಅನುಸರಿಸಬಲ್ಲದು. ಆದ್ಧರಿಂದ ಸದ್ವಿಚಾರಗಳಿಗೆ ಸದಾ ಮನಸ್ಸು ತೆರೆದಿರಲಿ. ಆದರೆ ಆಚರಣೆ ಮತ್ತು ನಮ್ಮ ದೈನಂದಿನ ನಡವಳಿಕೆ ನಮ್ಮ ಅಂತರಾತ್ಮ ನಿರ್ದೇಶಿಸಿದಂತೇ (ಸದಾ ಸನ್ಮಾರ್ಗದಲ್ಲಿಯೇ) ಸಾಗಲಿ.

".........ಇನ್ನು ಅಲ್ಪ ಸ್ವಲ್ಪ ಸಾಧನೆ ಮಾಡಿ ಆಂಶಿಕವಾಗಿ ಪರಮಾತ್ಮತತ್ತ್ವವನ್ನು ತಿಳಿದುಕೊಂಡಿರುವವರು ಭೇದ-ಭಾವಗಳ ಕೆಸರಿನ ಹೊಂಡದಲ್ಲಿ ಬಿದ್ದುಕೊಂಡಿರುತ್ತಾರೆ. ಇಂತಹವರು ಕೂಪ ಮಂಡೂಕಗಳಂತೆ ನನ್ನ ಮತವೇ ಶ್ರೇಷ್ಠ ನನ್ನ ದೇವರೇ ಶ್ರೇಷ್ಠ ಎನ್ನುವ ಭ್ರಮೆಯಲ್ಲಿ ಸಿಲುಕಿಕೊಂಡು ಒದ್ದಾಡುತ್ತಿರುತ್ತಾರೆ. ಸತ್ಯಕ್ಕೆ ಅನಂತ ಮುಖಗಳಿವೆ. ನಾನು ನೋಡಿದ್ದು ಕೇವಲ ಒಂದು ಮುಖ ಎನ್ನುವ ವಾಸ್ತವಿಕ ವಿಚಾರವನ್ನು ಇಂತಹವರು ಮರೆತಿರುತ್ತಾರೆ....."

**ಶ್ರೀ ಶ್ರೀ ಸಚ್ಚಿದಾನಂದ ಸರಸ್ವತೀ ಸ್ವಾಮಿಗಳವರು, ಶ್ರೀಮಠ, ಹರಿಹರಪುರ
(ಸ್ವಯಂಪ್ರಕಾಶ ಮಾಸಪತ್ರಿಕೆ - ಮೇ-2009)

-ಕವಿ ವೆಂ.ಸುರೇಶ್

ವೈದ್ಯರೋ ? ಕೊಲೆಗಡುಕರೋ?

ವೈದ್ಯರೋ ? ಕೊಲೆಗಡುಕರೋ?

* ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ-ಅಂಶಗಳ ಪ್ರಕಾರ ಪ್ರತಿ ವರ್ಷ ಒಂದು ಕೋಟಿ ೨೫ ಲಕ್ಷಕ್ಕಿಂತಲೂ ಹೆಚ್ಚು ಮಂದಿ ಹೃದಯ ರೋಗಗಳಿಂದ ಸಾವನ್ನಪ್ಪುತ್ತಾರೆ.

* ಇದು ವರೆಗೆ ಪ್ರಪಂಚದಲ್ಲಿ ನಡೆದ ಎಲ್ಲಾ ಯುದ್ಧಗಳಲ್ಲೂ ಮರಣ ಹೊಂದಿದವರ ಒಟ್ಟು ಸಂಖ್ಯೆಗಿಂತ ಅತೀ ಹೆಚ್ಚು.

* ವಿಶೇಷವಾಗಿ ಅಭಿವೃದ್ಧಿ ಹೊಂದಿದ ದೇಶಗಳಲ್ಲೇ ಇದು ನಂ. ಕಿಲ್ಲರ್!

* ಅತೀ ದುಬಾರೀ ಚಿಕಿತ್ಸೆ ಮತ್ತು ಆಧುನಿಕ ಶಸ್ತ್ರಚಿಕಿತ್ಸಾ ಕ್ರಮಗಳಿದ್ದರೂ ಕೂಡಾ ಸಾವಿನ ಸಂಖ್ಯೆ ನಿಯಂತ್ರಣವಾಗಿಲ್ಲ.

* ಆಧುನಿಕ ವೈದ್ಯಶಾಸ್ತ್ರದ ಪ್ರಕಾರ ಕೊಲೆಸ್ಟ್ರಾಲ್ ಒಂದೇ ಇದಕ್ಕೆ ಮೂಲ ಕಾರಣ. ಅಂತೆಯೇ ಅದನ್ನು ನಿಯಂತ್ರಿಸುವ ನಾನಾ ತರಹದ ಔಷಧಿಗಳು (statins) ಚಾಲ್ತಿಯಲ್ಲಿದ್ದು ಅವನ್ನೇ ಹೆಚ್ಚು ಹೆಚ್ಚು ಪ್ರಚುರ ಪಡಿಸಿ ರೋಗಿಗಳಿಗೆ ಸೂಚಿಸಲಾಗುತ್ತಿದೆ.

* ಬರೀ statin ಔಷಧಿಗಳನ್ನೇ ಮಾರಾಟ ಮಾಡುವ ಕಂಪನಿಗಳ ಒಟ್ಟು ಆದಾಯ ಉಳಿದ 490 Fortune-500 ಕಂಪನಿಗಳ ಒಟ್ಟು ಆದಾಯಕ್ಕಿಂತ ಹೆಚ್ಚು.

* ನಾನಾ ಮಾತ್ರೆಗಳ ಪರ್ವತಗಳನ್ನೇ ಸುರಿದರೂ (ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ) ಹೃದಯ ರೋಗ ಮಾತ್ರ ಕಾಳ್ಗಿಚ್ಚಿನಂತೆ ಹಬ್ಬುತ್ತಲೇ ಇದೆ.

* ಹೃದಯ ಶಾಸ್ತ್ರ, ಹಾಗಾಗಿ, ತಪ್ಪು ಕಾರಣದ ಹಿಂದೆ ಬಿದ್ದಿದೆ.

* ಡಾ:ನಾರ್ಟನ್ ಹಡ್ಲರ್, ಎಂ.ಡಿ., ಅವರ ಪ್ರಕಾರ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಅರ್ಥವೇ ಇಲ್ಲ. ಏಕೆಂದರೆ ಶೇ.೯೫ ಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಖಾಯಿಲೆ ಮರುಕಳಿಸುತ್ತದೆ.
* ಡಾ:ಜೂಲಿಯನ್ ವಿಟಾಖರ್, ಎಂ.ಡಿ., ರವರ ಪ್ರಕಾರ ಆಂಜಿಯೋಪ್ಲಾಸ್ಟಿ ಬಹು ಅಪಾಯಕಾರೀ ಚಿಕಿತ್ಸೆ. ಇದಕ್ಕೆ ಯಾವುದೇ ವೈಜ್ಞಾನಿಕ ತಳಹದಿಯಿಲ್ಲ. ವಿಧಾನವನ್ನು ಅಳವಡಿಸಿಕೊಂಡವರಲ್ಲಿ ಹೆಚ್ಚಿನ ಸಾವಿನ ಪ್ರಮಾಣ, ಹೆಚ್ಚಿನ ಮರುಕಳಿಸಿದ ಹೃದಯಾಘಾತ ಮತ್ತು ಪುನ: ಶಸ್ತ್ರಚಿಕಿತ್ಸೆಯ ಅವಶ್ಯಕತೆ ಕಂಡು ಬಂದಿದೆ.

* ಅನೇಕ ಹೃದಯ ತಜ್ಞರು ಅನವಶ್ಯವಾಗಿ ರೋಗಿ ಮತ್ತು ಅವರ ಆಪ್ತರನ್ನು ಕೂಡಲೇ ಸರ್ಜರಿ ಮಾಡದಿದ್ದರೆ ಅಪಾಯ ಎಂದು ಹೇಳಿ ಭಯ ಹುಟ್ಟಿಸುತ್ತಾರೆ. ಡಾ: ವಿಟಾಖರ್ ರವರು ಪ್ರಸಿದ್ಧ ವೈದ್ಯಕೀಯ ಪತ್ರಿಕೆಯಲ್ಲಿ ಬರೆಯುತ್ತಾ ಅಂತಹ ಶೇ.೯೮. ಕ್ಕಿಂತ ಹೆಚ್ಚಿನವರು ಸರ್ಜರಿ ಇಲ್ಲದೇ ಆರೋಗ್ಯವಾಗಿರುವ ವಿಚಾರವನ್ನು ಸ್ಪಷ್ಟಪಡಿಸುತ್ತಾರೆ.

* ಹಾರ್ವರ್ಡ ವೈದ್ಯಕೀಯ ಸಂಸ್ಥೆಯ ಡಾ: ಥಾಮಸ್ ಗ್ರಾಬೋಸ್ ರವರು ಒಂದು ವಿಮರ್ಶಾತ್ಮಕ ಸಂಶೋಧನೆ ನಡೆಸಿದರು. ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಗೆ ಶಿಫಾರಸು ಮಾಡಲ್ಪಟ್ಟ ಸುಮಾರು ೧೬೮ ಪ್ರಕರಣಗಳಲ್ಲಿ ಅವರು ಪುನರ್-ಪರಿಶೀಲಿಸಿದಾಗ ಕೇವಲ ಜನ ಮಾತ್ರಾ ಅಂತಹ ಅತೀ ದುಬಾರಿ ಮತ್ತು ಮಾರಣಾಂತಿಕ ಶಸ್ತ್ರಚಿಕಿತ್ಸೆಗೆ ಅರ್ಹರೆಂಬುದು ಬೆಳಕಿಗೆ ಬಂತು. ಒಂದು ಅನೈತಿಕ ವ್ಯಾಪಾರೀಕರಣದ ಪ್ರವೃತ್ತಿ ಅಮೆರಿಕದ ಒಂದು ದೊಡ್ಟ ನಾಟಕ ಎಂದು ಡಾ:ಮೈಕೇಲ್ ಓಜ್ನರ್ ಎಂ.ಡಿ. ಖಂಡಿಸಿದ್ದಾರೆ.

* ೧೯೭೭ ರಿಂದ ಸತತವಾಗಿ ನಡೆಸಿದ ಸಂಶೋಧನೆಗಳಿಂದ ಸ್ಪಷ್ಟವಾಗುವ ಅಂಶವೆಂದರೆ, ಬೇರೆ ಚಿಕಿತ್ಸೆಗಳಿಗಿಂತ ಹೃದಯ ಶಸ್ತ್ರಚಿಕಿತ್ಸೆಯಿಂದ ಉಂಟಾಗುತ್ತಿರುವ ಅನಾಹುತಗಳೇ ಹೆಚ್ಚು.

* ಶಸ್ತ್ರಚಿಕಿತ್ಸೆಯೇ ಅಂತಿಮ ಪರಿಹಾರ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಸಂಶೋಧನೆಗಳ ಆಧಾರವಿಲ್ಲ. ಆದರೆ ಇದರ ಬಗ್ಗೆ ವ್ಯಾಪಾರೀಕರಣದ ಏಕೈಕ ಗುರಿಯುಳ್ಳವರು ಇದೇ ಅಂತಿಮ ಎಂದು ದಾರಿ ತಪ್ಪಿಸುತ್ತಿದ್ದಾರೆ.

* ಡಾ; ವಿಲಿಯಮ್ . ಬೊಡೆನ್, ಎಂ.ಡಿ., ರವರು ಲಘು ಹೃದಯಾಘಾತವಾಗಿ ಶಸ್ತ್ರಚಿಕಿತ್ಸೆ ಸೂಚಿಸಲ್ಪಟ್ಟ ಸುಮಾರು ೯೨೦ ರೋಗಿಗಳ ಪ್ರಕರಣಗಳನ್ನು ಪರಿಶೀಲನೆಗೆ ಎತ್ತಿಕೊಂಡರು. ಸುಮಾರು / ವರ್ಷಗಳ ಕಾಲ ಸಂಶೋಧನೆ ನಡೆಸಿದರು. ಅವರಲ್ಲಿ ೪೫೮ ಜನರಿಗೆ ಔಷಧಿಗಳನ್ನು ನೀಡಲಾಯಿತು ಮತ್ತು ಕಾಲಕಾಲಕ್ಕೆ ಟ್ರೆಡ್ ಮಿಲ್ ನಂತಹ ಬಾಹ್ಯ ಸರಳ ಪರೀಕ್ಷೆಗಳನ್ನು ನಡೆಸಲಾಯಿತು. ಉಳಿದ ೪೬೨ ಜನ ಆಂಜಿಯೋಗ್ರಾಂ ಬಳಿಕ ಆಂಜಿಯೋಪ್ಲಾಸ್ಟಿ ಅಥವಾ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದರು.

ಫಲಿತಾಂಶಗಳು ಅಚ್ಚರಿ ಮೂಡಿಸುವಂತಿತ್ತು. ಮೊದಲ ದಿನಗಳಲ್ಲೇ ಶಸ್ತ್ರಚಿಕಿತ್ಸೆಗೊಳಗಾದ ೨೧ ರೋಗಿಗಳು ಸತ್ತರು. ಬರೀ ಔಷಧೋಪಚಾರ ಪಡೆದವರಲ್ಲಿ ಕೇವಲ ಮಂದಿ ಮೃತರಾದರು.
/ ವರ್ಷಗಳ ನಂತರ ಶಸ್ತ್ರಚಿಕಿತ್ಸೆಗೊಳಗಾದವರಲ್ಲಿ ೮೦ ಜನ ಮೃತಪಟ್ಟರೆ, ಬರೀ ಔಷಧೋಪಚಾರ ಪಡೆದ ವರ್ಗದಲ್ಲಿ ಕೇವಲ ೫೯ ಜನ ಮಾತ್ರ ಮೃತರಾದರು.

* ಆದುದರಿಂದ ಶಸ್ತ್ರಚಿಕಿತ್ಸೆಯೇ ಅಂತಿಮ ಪರಿಹಾರ ಎನ್ನುವ ಈಗಿನ ಪ್ರವೃತ್ತಿ ಕೇವಲ ಒಂದು ಢೋಂಗಿತನ. ಸತ್ಯ ಮೇಲಿನ ಸಂಶೋಧನೆಯಿಂದ ಸ್ಷಷ್ಟವಾಗುತ್ತದೆ.

* ಡಾ:ಡ್ವೈಟ್ ಲಂಡೆಲ್, ಖ್ಯಾತ ಹೃದಯತಜ್ಞ, ಇವರು ಬರೆದ The Cure for Heart Diseases ಮತ್ತುe-book : The Great Cholesterol Lie ನಲ್ಲಿ ಹೃದಯ ಶಸ್ತ್ರಚಿಕಿತ್ಸೆಗಳ ಮತ್ತು ಸ್ಟ್ಯಾಟಿನ್ ಔಷಧಿಗಳ ಅರ್ಥಹೀನತೆಯನ್ನು ವಿವರಿಸಿದ್ದಾರೆ. ಹೃದಯ ಶಸ್ತ್ರಚಿಕಿತ್ಸಕರಾಗಿ ಅವರ ದಿನಾದಾಯ ರೂ.೫೦ ಲಕ್ಷ ವಿತ್ತು. ಆದರಿಂದು ಪ್ರತಿ ರೋಗಿಗೆ ಕೇವಲ ರೂ.೫೦ ರಂತೆ (ಸರಳ ಔಷಧಿಗಳನ್ನು ಸೂಚಿಸಿ) ಪಡೆದು ಸಂತಸ ಕಂಡುಕೊಂಡಿದ್ದಾರೆ.
ಅಮೆರಿಕನ್ ಹಾರ್ಟ ಅಸೋಷಿಯೇಷನ್ ಮತ್ತು ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿಯ ಫೆಲೋ ಮತ್ತು ಮಂಡಳಿ ಪ್ರಮಾಣಿತ ಹೃದಯತಜ್ಞರಾದ ಡಾ: ಮೈಕೇಲ್ ಓಜನರ್, ಎಂ.ಡಿ., ರವರು ತಮ್ಮ ಪುಸ್ತಕ: The Great American Heart Hoax ನಲ್ಲಿ ಹೀಗೆ ಬರೆದಿದ್ದಾರೆ:

- ೧೯೭೦ ಅಂತ್ಯದಲ್ಲಿ ಮತ್ತು ೧೯೮೦ ಪೂರ್ವದಲ್ಲಿ ನಡೆಸಿದ ಸಂಶೋಧನೆಗಳ ರೀತ್ಯಾ ಸಾಂಪ್ರದಾಯಿಕ ಚಿಕಿತ್ಸೆಗಳು ಬೈ-ಪಾಸ್ ಸರ್ಜರಿಗಿಂತ ಹೆಚ್ಚು ಪರಿಣಾಮಕಾರಿ.
- ಶಸ್ತ್ರಚಿಕಿತ್ಸೆಗೆ ಒಳಗಾದವರು ಶಸ್ತ್ರಚಿಕಿತ್ಸೆಗೆ ಒಳಗಾಗದವರಿಗಿಂತ ಹೆಚ್ಚು ಕಾಲ ಬದುಕಲಿಲ್ಲ ಮತ್ತು ಹೆಚ್ಚಿನ ಮರುಕಳಿಸಿದ ಹೃದಯಾಘಾತಗಳನ್ನು ಎದುರಿಸಿದ್ದರು.
- ಆಂಜಿಯೋಪ್ಲಾಸ್ಟಿ ಸಹ ಹೆಚ್ಚಿನ ಉತ್ತೇಜನಕರ ಫಲಿತಾಂಶ ತೋರಲಿಲ್ಲ. ಬದಲಾಗಿ ಅದು ಮರಣದ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಿತ್ತು.
- ಡಾ: ಓಜನರ್ ಪ್ರಕಾರ ಸ್ಟೆಂಟ್ ಗಳು (ಸ್ವದೇಶಿ - ವಿದೇಶೀ ಎಂದು ಹೇಳಿ ದೊಡ್ಡ ಮೊತ್ತ ಕೀಳುವ ದಂಧೆ - ಸ್ಟಂಟು!) ಕೂಡಾ ಅನುಪಯುಕ್ತ ಮತ್ತು ಅಪಾಯಕಾರಿ. ಅದರ ಅಳವಡಿಕೆಯಿಂದ ಮರುಕಳಿಸುವ ಹೃದಯಾಘಾತ ಮತ್ತು ಹೃದಯ ಸ್ತಂಭನ ಪ್ರಕರಣಗಳೇ ಹೆಚ್ಚು. ಸ್ಟೆಂಟ್ ಅಳವಡಿಸಿದ / ರಷ್ಟು ಜನರಲ್ಲಿ ತಿಂಗಳೊಳಗೆ ರಕ್ತನಾಳದ ಬ್ಲಾಕೇಜ್ (ತಡೆ) ಪುನ: ಕಾಣಿಸಿಕೊಂಡಿದೆ. ಸ್ಟೆಂಟ್ ಹಾಕಿದ ಭಾಗದಲ್ಲಿ ಅನಿರೀಕ್ಷಿತವಾಗಿ ರಕ್ತ ಹೆಪ್ಪುಗಟ್ಟಿ ತಕ್ಷಣ ಹೃದಯ ಸ್ತಂಭನ ಆಗುವ ಸಂದರ್ಭಗಳೂ ಹೆಚ್ಚು.

* ಅಮೆರಿಕನ್ ಹಾರ್ಟ ಅಸೋಷಿಯೇಷನ್ ಮತ್ತು ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿಯನ್ನು ಬೆಂಬಲಿಸುವ ಅನೇಕ ವೈದ್ಯರು ಶಸ್ತ್ರಚಿಕಿತ್ಸೆ ಬಿಟ್ಟರೆ ಅನ್ಯಮಾರ್ಗವಿಲ್ಲ ಎಂಬುದನ್ನು ಬಿಟ್ಟರೆ, ಉಳಿದ ಮತ್ತು ಸಾಕಷ್ಟು ಪುರಾವೆ ಸಹಿತ ಒದಗಿಸಿದ ಅನ್ಯ ಮಾರ್ಗಗಳನ್ನು, ಅವರು ಒಪ್ಪಲು ತಯಾರಿಲ್ಲ. ಕಾರಣ ಸುಸ್ಪಷ್ಟ. ಕೇವಲ ಹಣ ಮಾಡುವ ದಂಧೆ ಮತ್ತು ದುರುದ್ದೇಶ.

* ರಕ್ತನಾಳಗಳಲ್ಲಿ ಉಂಟಾಗುವ ಅನೇಕ ಸಣ್ಣಸಣ್ಣ ಬ್ಲಾಕ್ ಗಳನ್ನು ತಾನಾಗೆ ಸರಿಪಡಿಸಿಕೊಳ್ಳುವ ಸ್ವಾಭಾವಿಕ ವ್ಯವಸ್ಥೆ ನಮ್ಮ ದೇಹದೊಳಗೇ ಇದೆ. ಅದು ಹಾಗಾಗದಾದಾಗ ಹೃದಯಾಘಾತವಾಗುವ ಸಂಭವ ಇರುತ್ತದೆ.

* ವಿಶೇಷವಾಗಿ ದೊಡ್ಡ ರಕ್ತನಾಳಗಳು ಬ್ಲಾಕ್ ಆಗಿ ಒಡೆಯುವ ಸಂದರ್ಭಗಳು ಅತೀ ವಿರಳ. ಆದರೆ ಅದು ಹಾಗಾಗಿದೆ ಎಂದು ಸ್ವಾರ್ಥ ಉದ್ದೇಶಕ್ಕಾಗಿ ಹೆದರಿಸುವ ವೈದ್ಯರೇ ಬಹು ಮಂದಿ.

* ಮತ್ತೊಂದು ವಿಶೇಷ ಅಂಶವೆಂದರೆ ದೊಡ್ಡ ರಕ್ತನಾಳಗಳು ಬ್ಲಾಕ್ ಆದರೂ ಸಹಜವಾಗಿಯೇ ಪರ್ಯಾಯ ರಕ್ತನಾಳಗಳು (collateral new blood vessels) ಬ್ಲಾಕ್ ನ್ನು ಬಳಸಿ ಬೇರೆ ಸಂಪರ್ಕ ಕಲ್ಪಿಸಿಬಿಡುತ್ತವೆ. ಇದನ್ನೇ ಡಾ: ಓಜನರ್ ರವರು ಸಹಜ ಬೈ-ಪಾಸ್ ಎಂದು ಕರೆಯುತ್ತಾರೆ. ಅಂಶವನ್ನೂ ಸಹ ವೈದ್ಯರು ರೋಗಿಗಳಲ್ಲಿ ಮರೆ ಮಾಚುತ್ತಾರೆ.

* ನೀವು ಜೀವಂತ ಬಾಂಬ್ ಮೇಲೆ ಇದ್ದೀರಿ, ನೀವು ಯಾವುದೇ ಕ್ಷಣ ಸಾಯಬಹುದು ಇತ್ಯಾದಿ ಬೆದರಿಕೆಗಳನ್ನು ಶಸ್ತ್ರಚಿಕಿತ್ಸೆ ಬೇಡವೆನ್ನುವ ಅನೇಕರಿಗೆ ವೃತ್ತಿ-ನಿಯತ್ತು ಇಲ್ಲದ ಮತ್ತು ಕಪಟ ವೈದ್ಯರು ಹಾಕುತ್ತಾರೆ. ಉತ್ತಮ ವೈದ್ಯರು ಸಾಕಷ್ಟಿದ್ದಾರೆ. ಆದರೆ ಹಣಕ್ಕಾಗಿಯೇ ವೈದ್ಯ ಮಾಡುವ ವೃತ್ತಿ-ದ್ರೋಹಿಗಳು ಅವರಿಗಿಂತ ಹೆಚ್ಚಾಗಿದ್ದಾರೆ.
* ಡಾ: ವಿಟಾಖರ್ ರವರ ಪ್ರಕಾರ ಇಂತಹ ಮತಿಹೀನ ಚಿಕಿತ್ಸೆಗಳಿಂದ ಅಮೇರಿಕೆಯಲ್ಲೇ ಪ್ರತಿ ವರ್ಷ ೩೩,೦೦೦ ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದು ಸಾವಲ್ಲ; ವ್ಯವಸ್ಥಿತ ಹರಣ. ಏಕೆಂದರೆ ಫಾರ್ಮ ಲಾಬಿ ನಮ್ಮನ್ನು ಹೆದರಿಸಿ, ವಸ್ತುಸ್ಥಿತಿ ಮರೆಮಾಚಿ ಸದಾ ಕತ್ತಲೆಯಲ್ಲೇ ಇಡಲು ನಿರಂತರ ಶ್ರಮಿಸುತ್ತಿದೆ.

* ಶಸ್ತ್ರ ಚಿಕಿತ್ಸೆಯಿಲ್ಲದ ಸರಳ ಉಪಾಯವನ್ನು ಎರಡು ಬಾರಿ ನೊಬೆಲ್ ಪ್ರಶಸ್ತಿ ಪಡೆದ ಡಾ: ಲಿನಸ್ ಪಾಲಿಂಗ್ ರವರು ತಿಳಿಸಿದ್ದಾರೆ. ಈಗಿನ ಕಟ್ಟು ಕಥೆಗಳೆಲ್ಲ ಫಾರ್ಮ ಲಾಬಿ ಮತ್ತು ಹೃದಯ ಹೀನ ಹೃದಯ ಸಂಸ್ಥೆಗಳ ಲಾಬಿ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಜೀವನಶೈಲಿಯ ಸೂಕ್ತ ಬದಲಾವಣೆಯೇ ಅಪಾಯವನ್ನು ಅತೀ ಪರಿಣಾಮಕಾರಿಯಾಗಿ ಎದುರಿಸಬಲ್ಲದು ಮತ್ತು ವಿಟಮಿನ್-ಸಿ ಕೂಡಾ ಅತೀ ಸಹಾಯಕಾರಿ.

* ಖಾಯಿಲೆ ಇಷ್ಟು ಭಯಾನಕವಾಗಿ ಇಂದಿಗೂ ಇರಲು ಫಾರ್ಮ ಲಾಬಿ ಮತ್ತು ಅದರಿಂದ ಅನಾಯಾಸವಾಗಿ ಲಾಭ ಮಾಡಿಕೊಳ್ಳುತ್ತಿರುವ ಸ್ವಾರ್ಥೀ ವೈದ್ಯರುಗಳೇ ಪ್ರಮುಖ ಕಾರಣ. ಅವರಿಗೆ ಸತ್ಯ ತಿಳಿಯುವ ಹಂಬಲವಿಲ್ಲ; ಬಯಕೆಯೂ ಇಲ್ಲ. ಆದರೆ ಅವರಿಗೆ ಸತ್ಯವನ್ನೆದುರಿಸುವ ಭಯವಿದೆ (ಏಕೆಂದರೆ ಅದು ಅವರ ಆದಾಯದ ಮೇಲೆ ಪರಿಣಾಮ ಬೀರಲಿದೆ). ಆದರೆ ಇಂತಹ ಸುಶಿಕ್ಷಿತ, ಪ್ರಜ್ಞಾವಂತ ಮತ್ತು ಆರ್ಥಿಕವಾಗಿ ಸದೃಢರಾದ ವರ್ಗವೇ (ವೈದ್ಯರುಗಳೇ) ಸತ್ಯದ ಬೆಳಕನ್ನು ಏಕೆ ಕಂಡೂ ಕಾಣದಂತಿದ್ದಾರೆಂಬುದೇ ಯಕ್ಷ ಪ್ರಶ್ನೆ!

[Bhavans Journal – June 30, 2011 – Article: The Healers and the Killers by G.A. Mahew]ಸಾರಾಂಶ ಕನ್ನಡದಲ್ಲಿ: ಕವಿ ವೆಂ. ಸುರೇಶ್, ಶಿವಮೊಗ್ಗ.ಹೃದಯ ನಿಮ್ಮದೇ : ಅದರ ಹೊಣೆಯೂ ನಿಮ್ಮದೇ : ತೀರ್ಮಾನ ನಿಮ್ಮ ಕೈಯಲ್ಲಿದೆ.