Pages

Tuesday, October 19, 2010

ವೇದೋಕ್ತ ಜೀವನ ಪಥ: ಭಗವತ್ ಸ್ವರೂಪ - 5

ಋಗ್ವೇದ ಒಂದು ಕಡೆ ಹೇಳುತ್ತಲಿದೆ:


ಯ ಏಕ ಇತ್ ತಮು ಷ್ಟುಹಿ ಕೃಷ್ಟೀನಾಂ ವಿಚರ್ಷಣಿಃ|
ಪತಿರ್ಜಜ್ಞೇ ವೃಷಕ್ರತುಃ||  (ಋಕ್. 6.45.16)


[ಯಃ] ಯಾವ, [ಕೃಷ್ಟೀನಾಮ್] ಪ್ರಜಾಮಾತ್ರರ, [ವಿಚರ್ಷಣಿಃ] ನಿರೀಕ್ಷಕನಾಗಿ, [ಏಕ ಇತ್] ಒಬ್ಬನೇ ಇದ್ದಾನೋ, [ತಂ ಉ ಸ್ತುಹಿ] ಅವನನ್ನು ಮಾತ್ರ ಸ್ತುತಿಸು. [ವೃಷಕ್ರತುಃ] ಪ್ರಬಲ ಜ್ಞಾತಿಯು, ಅದ್ಭುತ ಕರ್ತೃವೂ, [ಪತಿ] ಎಲ್ಲರ ಸ್ವಾಮಿಯೂ, ಪಾಲಕನೂ ಆಗಿ [ಜಜ್ಞೇ] ಅವನು ಪ್ರಸಿದ್ಧನಾಗಿದ್ದಾನೆ.


ಇಂತಹ ಸ್ಫುಟವಾದ ಪ್ರಮಾಣಗಳಿದ್ದರೂ ಕೂಡ, ಅನೇಕ ಪಾಶ್ಚಾತ್ಯ ವಿದ್ವಾಂಸರೂ, "ಗೌರಾಂಗ ಪ್ರಭುಗಳು ಹೇಳಿರುವುದೇ ಸತ್ಯ" ಎಂದು ನಂಬುವ ಕೆಲವು ಭಾರತೀಯ ವಿದ್ವಾಂಸರೂ ಸಹ "ವೇದಗಳಲ್ಲಿ ಅನೇಕೇಶ್ವರವಾದವಿದೆ, ಆರ್ಯರು ಇಂದ್ರ, ಅಗ್ನಿ, ವರುಣ ಮೊದಲಾದ ಅದೆಷ್ಟೋ ದೇವರನ್ನು ಪೂಜಿಸುತ್ತಿದ್ದರು. 'ದೇವರೊಬ್ಬನೇ' ಎಂಬ ಸಿದ್ಧಾಂತ ಇತ್ತೀಚಿನದು. ಅದು ವೈದಿಕ ಋಷಿಮುನಿಗಳಿಗೆ ಗೊತ್ತಿರಲಿಲ್ಲ" ಎಂದು ವಾದಿಸುತ್ತಾರೆ. ವೇದಗಳಲ್ಲಿ ಒಬ್ಬನೇ ಭಗವಂತನನ್ನು ನಾನಾ ಹೆಸರುಗಳಿಂದ ಸಂಬೋಧಿಸಿರುವುದನ್ನು ಕಂಡು ಅವರು ಮುಗ್ಗರಿಸಿದ್ದಾರೆ. ವೇದಗಳಲ್ಲಿ ಅನೇಕ ದೇವತಾವಾದವಿದೆ ಎಂಬುದನ್ನಂತೂ ಯಾರೂ ತಿರಸ್ಕರಿಸಲಾರರು. ಪದಾರ್ಥ ಜಡವಾಗಲಿ, ಚೇತನವಾಗಲಿ, ಯಾವುದಾದರೊಂದು ದಿವ್ಯಶಕ್ತಿ ಅದರಲ್ಲಿದ್ದರೆ, ವೇದಗಳು ಅದನ್ನು 'ದೇವತೆ' ಅಥವಾ 'ದೇವ' ಎಂದು ನಿರ್ದೇಶಿಸುತ್ತವೆ.
                                                                                                                              ..ಮುಂದುವರೆಯುವುದು.

ವೇದಪಾಠ ಪರಿಚಯ



* ಸತ್ಯ-ಪ್ರಿಯ-ಹಿತ
ಒಂದು ವಿಚಾರವನ್ನು ನಂಬಿ ಜೀವನದಲ್ಲಿ ಅಳವಡಿಸಿಕೊಳ್ಳುವಾಗ ಹಾಗೂ ಬೇರೆಯವರಿಗೆ ತಿಳಿಸುವಾಗ ಮೂರು ಅಂಶಗಳನ್ನು ಎಚ್ಚರಿಕೆಯಿಂದ ಗಮನಿಸಬೇಕು.ಅವು ಯಾವುವೆಂದರೆ ಈ ವಿಚಾರ ಸತ್ಯವಾಗಿದೆಯೇ? ಇದು ಪ್ರಿಯವಾಗಿದೆಯೇ? ಬೇರೆಯವರಿಗೆ ಹಿತವಾಗಿದೆಯೇ? ನಾವು ನಿತ್ಯ ಜೀವನದಲ್ಲಿ ನಮ್ಮ ಮಾತುಗಳನ್ನು ಗಮನಿಸಿದಾಗ ನಾವಾಡುವ ಬಹಳಷ್ಟು ಮಾತುಗಳು ಸತ್ಯ-ಪ್ರಿಯ ಮತ್ತು ಹಿತಕ್ಕೆ ದೂರವಾಗಿಯೇ ಇರುತ್ತವೆ.ಹಾಗಾಗಿ ಮಾತುಗಳು ಯಾವ ಪ್ರಭಾವವನ್ನು ಜೀವನದಲ್ಲಿ ಮಾಡಬೇಕಿದೆ, ಅದರಲ್ಲಿ ಅದು ಸೋತಿದೆ.ಆದ್ದರಿಂದ ಜೀವನದಲ್ಲಿ "ಅಯ್ಯೋ ಜೀವನ ಮಾಡಬೇಕಾಗಿದೆಯಲ್ಲಾ!" ಎನಿಸಿದೆ.ಆದರೆ ಜೀವನವು ಹೀಗೆ ಇರಬೇಕಾಗಿಲ್ಲ.ನಮ್ಮ ಜೀವನವನ್ನು ನಗು ನಗುತ್ತಾ ನಡೆಸುತ್ತಾ ಸುಖ ಸಂತೋಷಗಳನ್ನು ಅನುಭವಿಸುತ್ತಾ, ನಾವೂ ಚೆನ್ನಾಗಿದ್ದುಕೊಂಡು ಬೇರೆಯವರನ್ನೂ ಚೆನ್ನಾಗಿ ನೋಡಿ ಕೊಂಡು ಬದುಕಲು ಸಾಧ್ಯವಿದೆ.ಅದಕ್ಕೆ ಬೇಕಾಗುವ ಸಕಲ ಮಾರ್ಗದರ್ಶನಗಳು ನಮಗೆ ಸಿದ್ಧವಾಗಿ ವೇದದಲ್ಲಿ ಲಭ್ಯವಿದೆ. ಅದನ್ನು ಉಪಯೋಗಿಸಿಕೊಂಡು ಬದುಕಿದರೆ ಸುಖ-ಸಮೃದ್ಧ-ಸಮಾಧಾನಕರ ಜೀವನವನ್ನು ನಡೆಸಲು ಸಾಧ್ಯ.
* ವೇದದ ಮುಖ್ಯ ಉದ್ಧೇಶ
ನಾವು ನಮ್ಮ ಲೌಕಿಕ ಜೀವನವನ್ನು ಹೇಗೆ ಉತ್ತಮವಾಗಿ ನಡೆಸುತ್ತಾ ಅಂತಿಮವಾಗಿ ಜೀವನದ ಪರಮಗುರಿಯಾದ ಅಧ್ಯಾತ್ಮಿಕ ಸಾಧನೆಯನ್ನು ಹೇಗೆ ಮಾಡಬೇಕೆಂಬುದನ್ನು ತಿಳಿಸಿಸುವುದೇ ವೇದಗಳ ಉದ್ಧೇಶವಾಗಿದೆ.
* ಎರಡು ವಿಪರೀತ ವಾದಗಳು
ಭೋಗವಾದ:
ಕೆಲವರು ಹೇಳುತ್ತಾರೆ. ಜೀವನ ಇರುವುದೇ ಅಲ್ಪ. ಅದನ್ನು ಚೆನಾಗಿ ಅನುಭೋಗಿಸು.[ಲೈಫ್ ಈಸ್ ಶಾರ್ಟ್, ಮೇಕ್ ಇಟ್ ಸ್ವೀಟ್] ನಾವು ಪ್ರಪಂಚಕ್ಕೆ ಹೇಗೆ ಬಂದೆವೋ ತಿಳಿಯದು, ೫೦-೬೦ ವರ್ಷಗಳು ಬದುಕಿರುತ್ತೇವೋ ಇಲ್ಲವೋ ತಿಳಿಯದು, ಅದನ್ನು ಚೆನ್ನಾಗಿ ಅನುಭವಿಸಿಬಿಡಿ.
ಕುಡಿದು, ತಿಂದು, ಬೇಕಾದ್ದನ್ನು ಅನುಭೋಗಿಸುವ ಈ ವಾದಕ್ಕೆ "ಭೋಗವಾದ" ಎನ್ನುತ್ತೇವೆ.ಇದು ಒಂದು ವಿಪರೀತವಾದ.
ವೈರಾಗ್ಯವಾದ:
ಇನ್ನೊಂದು ಗುಂಪಿನ ವಾದವಾದವಾದರೋ ಈ ಭೌತಿಕ ಜೀವನವನ್ನು ಪೂರ್ಣ ತಿರಸ್ಕರಿಸಿ ವೈರಾಗ್ಯದ ವಿಚಾರವನ್ನು ಹೇಳುತ್ತದೆ.ವೈರಾಗ್ಯದ ವಿಚಾರವನ್ನು ಹೇಳುವಾಗ ನಮ್ಮ ಜೀವನವನ್ನು ಸಂಪೂರ್ಣ ತಿರಸ್ಕರಿಸುವ ವಾದ ಇವರದು.ಆದರೆ ಯಾವ ವ್ಯಕ್ತಿಯೂ ವೈರಾಗ್ಯದ ವಿಚಾರವನ್ನು ಹೇಳುವಾಗಲೂ ಅವನ ಹಸಿವು-ಬಾಯಾರಿಕೆಗಳನ್ನು ಬಿಟ್ಟು ಕೇವಲ ವೈರಾಗ್ಯ ಹೇಳಲು ಸಾಧ್ಯವಿಲ್ಲ. ಈ ಭೌತಿಕ ಜೀವನವನ್ನು ಪೂರ್ಣ ತಿರಸ್ಕರಿಸಿ ವೈರಾಗ್ಯದ ವಿಚಾರವನ್ನು ಹೇಳುವ ಈ ವಾದವು ಮತ್ತೊಂದು ವಿಪರೀತ ವಷ್ಟೆ.
ಸಮತ್ವ:
ಇವೆರಡೂ ವಾದಗಳಿಂದ ಪರಿಪೂರ್ಣ ಜೀವನ ಸಾಧ್ಯವಿಲ್ಲ.ಆದರೆ ಇವೆರಡರ ಮಧ್ಯೆ , ಎರಡನ್ನೂ ಹೊಂದಿಸುವ ವಿಚಾರ ಒಂದಿದೆ. ಅದುವೇ "ಸಮತ್ವ" ಅದನ್ನು ವೇದವು ಹೇಳುತ್ತದೆ. ಅದೇನು? ಮಾನವನು ಅನುಭವಿಸುತ್ತಿರುವ ಈ ಲೌಕಿಕ ಜೀವನವನ್ನು ನಡೆಸುತ್ತಲೇ ಅಂತಿಮವಾಗಿ ಅಧ್ಯಾತ್ಮದತ್ತ ಸಾಗುವ ಜೀವನ ಕ್ರಮ.ಹೆಂಡತಿ ಮಕ್ಕಳೊಡನೆ ಸುಖವಾಗಿ ಬಾಳುತ್ತಾ, ಅಷ್ಟರಲ್ಲೇ ಮುಳುಗದೆ ಈ ಜೀವನದಾಚೆಗೂ ಏನೋ ಒಂದು ಅದ್ಭುತ ವಿಚಾರವಿದೆ ಎಂಬ ಅರಿವಿನೊಂದಿಗೆ ಜೀವನವನ್ನು ನಡೆಸುವ ಕ್ರಮ.ಅಧ್ಯಾತ್ಮ ಸಾಧನೆ ಮಾಡುವವನಿಗೂ ಹಸಿವು ಬಾಯಾರಿಕೆಗಳು ಸಹಜ. ಅದನ್ನು ತಿರಸ್ಕರಿಸದೆ ಈ ಲೌಕಿಕ ಬದುಕಿಗಾಗಿ ಐಶ್ವರ್ಯವನ್ನು ಸಂಪಾದಿಸುತ್ತಾ, ಆದರೆ ಬದುಕಿಗೆ ಎಷ್ಟು ಬೇಕೋ ಅಷ್ಟನ್ನು ಸಂಪಾದಿಸುವ ಮಾನಸಿಕತೆಯೊಂದಿಗೆ ಬದುಕುವುದನ್ನು ವೇದವು ಕಲಿಸುತ್ತದೆ. ದೇಹವನ್ನು ಬಿಡುವಾಗ ಎಲ್ಲವನ್ನೂ ಬಿಟ್ಟುತಾನೇ ಹೋಗಬೇಕು. ಈ ಅರಿವಿನೊಂದಿಗೆ ಬದುಕುವುದನ್ನು ವೇದವು ಕಲಿಸುತ್ತದೆ.ಹೀಗೆ ಬದುಕುವಾಗ ವಾಮಮಾರ್ಗಗಳಿಂದ ದುಡಿದು ಬೇಕಾದ್ದನ್ನು ಪಡೆಯುವ ವಿಚಾರವು ಹತ್ತಿರ ಸುಳಿಯುವುದಿಲ್ಲ. ಅಂತಿಮವಾಗಿ ಆನಂದವನ್ನು ಪಡೆಯುವ ಮಾರ್ಗವನ್ನು ವೇದವು ತಿಳಿಸಿಕೊಡುತ್ತದೆ.
*ಅಧ್ಯಾತ್ಮ ಸಾಧನೆಗೆ ಮನುಷ್ಯಜನ್ಮ ಮಾತ್ರ ಸಾಧ್ಯ:
ಮಾನವ ಜನ್ಮ ದೊಡ್ದದು, ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪ ಗಳಿರಾ! ದಾಸರ ವಾಣಿ ಎಲ್ಲರಿಗೂ ಚಿರಪರಿಚಿತ.ಅಧ್ಯಾತ್ಮ ಸಾಧನೆಗೆ ಮನುಷ್ಯ ಜನ್ಮದಿಂದ ಮಾತ್ರವೇ ಸಾಧ್ಯ.ಮನುಷ್ಯೇತರವಾದ ಪಶು-ಪಕ್ಷಿ-ಕ್ರಿಮಿ-ಕೀಟಗಳ ಶರೀರ, ಇಂದ್ರಿಯ ಮನಸ್ಸುಗಳಿಗೆ ಅಧ್ಯಾತ್ಮ ಸಾಧನೆಯ ಈ ಸಾಮರ್ಥ್ಯ ಇರುವುದಿಲ್ಲ.ಅವುಗಳ ಹತ್ತಿರ ಇರುವುದು ಸಾಮಾನ್ಯ ಕ್ಯಾಲ್ಕುಲೇಟರ್. ಆದ್ದರಿಂದ ಅವುಗಳು ತಿಂದು-ಉಂಡು ಮರಿಹಾಕಿದರೆ ಅವುಗಳ ಜೀವನ ಮುಗಿದಂತೆ.ಮನುಷ್ಯನ ಶರೀರ, ಇಂದ್ರಿಯ ಮನಸ್ಸುಗಳು  ಸೈಂಟಿಫಿಕ್ ಕ್ಯಾಲ್ಕುಲೇಟರ್ ನಂತೆ. ಆದರೆ ಅದರ ಉಪಯೋಗ ಮಾಡದೆ ಭೋಗವಾದಿಗಳು ಸಾಮಾನ್ಯ ಕ್ಯಾಲ್ಕುಲೇಟರ್ ನಲ್ಲಿ ಮಾಡುವಂತೆ  ಕೂಡು, ಕಳೆ, ಗುಣಿಸು, ಭಾಗಿಸು ಕೆಲಸವನ್ನು ಈ ಸೈಂಟಿಫಿಕ್ ಕ್ಯಾಲ್ಕುಲೇಟರ್ ನಲ್ಲಿ ಮಾಡುತ್ತಿರುವರಲ್ಲಾ!ಇಂತಹ ಸಾಮಾನ್ಯ ಕೆಲಸಕ್ಕೆ  ಸೈಂಟಿಫಿಕ್ ಕ್ಯಾಲ್ಕುಲೇಟರ್ ಅಗತ್ಯವಿತ್ತೇ?  ಕೇವಲ ಕೂಡು, ಕಳೆ, ಗುಣಿಸು, ಭಾಗಿಸು ಕೆಲಸವನ್ನು  ಸಾಮಾನ್ಯ ಕ್ಯಾಲ್ಕುಲೇಟರ್ ನಲ್ಲೂ ಮಾಡಬಹುದಲ್ಲವೇ? ಹಾಗೆ ಮನುಷ್ಯ ಶರೀರವು ದೊರೆತಿರುವಾಗ ಅದರ ಉಪಯೋಗ ಪಡೆದು ಎಷ್ಟು ಉತ್ತಮ ಕೆಲಸವನ್ನು ಮಾಡಬಹುದೋ ಅದನ್ನು ಮಾಡಬೇಕು.ಹಾಗಾಗದೆ ಪ್ರಾಣಿಯಂತೆ  ತಿಂದು -ಉಂಡು ಮರಿಹಾಕಿ ಬದುಕಿಗೆ ವಿದಾಯ ಹೇಳಿದರೆ , ಪ್ರಾಣಿಗಳಿಗೂ ಮನುಷ್ಯನಿಗೂ ಯಾವ ವ್ಯತ್ಯಾಸ ಇರುವುದಿಲ್ಲ.ಹಾಗಾದರೆ ಕೂಡು-ಕಳೆಯುವ ಸಾಮಾನ್ಯ ಕೆಲಸ ಬೇಡವೇ? ಬೇಕು. ಮನುಷ್ಯನ ಶರೀರ, ಮನಸ್ಸು.ಇಂದ್ರಿಯಗಳ ಆರೋಗ್ಯಕ್ಕಾಗಿ ಎಲ್ಲವೂ ಬೇಕು,  ಆದರೆ ಅಷ್ಟಕ್ಕೇ ಜೀವನ ಮುಗಿಯ ಬಾರದು.ಅದನ್ನು ಆಧಾರವಾಗಿಟ್ಟುಕೊಂಡು ಅದರ ಮುಂದಿನ ಆಧ್ಯಾತ್ಮ ಸಾಧನೆ ಮಾಡಬೇಕು. ಇದು  ಸಮತೋಲನದ ಬಿಂಧು.ಇದುವೇ ಸಮತ್ವ. ಇದನ್ನೇ ಕೃಷ್ಣನು ಯೋಗವೆಂದು ಹೇಳಿದ್ದಾನೆ." ಸಮತ್ವಂ ಯೋಗ ಉಚ್ಛತೇ" ಎಂದಿದ್ದಾನೆ.ಈ ಸಮತ್ವವೇ ಯೋಗ. ಈ ಸಮತ್ವವನ್ನು ಯಾರ್ಯಾರು ಜೀವನದಲ್ಲಿ ಗುರುತಿಸಿಕೊಳ್ಳುತ್ತಾರೆ, ಅವರು ಜೀವನದ ಸಾರ್ಥಕತೆಯನ್ನು ಪಡೆಯುತ್ತಾರೆ.ಹಿಂದಿನ ಕಾಲದ ನಮ್ಮ ಋಷಿಮುನಿಗಳಲ್ಲಿ ಬಹಳಷ್ಟು  ಜನರು ಗೃಹಸ್ಥರೇ ಆಗಿದ್ದರು.ವೈರಾಗ್ಯದ ಹೆಸರಿನಲ್ಲಿ ಈ ಲೌಕಿಕಜೀವನವನ್ನು ಅವರು ನಿರಾಕರಿಸಿರಲಿಲ್ಲ.ಲೌಕಿಕ ಲೀವನದಲ್ಲಿದ್ದು ಕೊಂಡೇ ಇಲ್ಲಿನ ಕರ್ತವ್ಯಗಳನ್ನು ನಿರ್ವಹಿಸುತ್ತಲೇ ಆಧ್ಯಾತ್ಮಿಕ ಸಾಧನೆಯನ್ನು ಮಾಡಿದರು.
ಇದೇ ಸರಿಯಾದ ಮಾರ್ಗ. ಇದುವೇ ಸಮತ್ವ.ಇದೇ ಯೋಗ.ಈ ಸಮತ್ವವನ್ನು  ಅದ್ಭುತವಾಗಿ ವೇದಗಳಲ್ಲಿ ತಿಳಿಸಿದೆ. ಇದು  ನಮಗೆ ಅರ್ಥವಾಗದೆ ಸಹಜವಾಗಿ ಕೇಳುತ್ತಿರುವ ಮಂತ್ರಗಳಷ್ಟೇ ವೇದವೆಂಬುದು ನಮ್ಮ ಕಲ್ಪನೆ. ಆದರೆ ಅದು ತಪ್ಪು ಕಲ್ಪನೆ. ಎಲ್ಲಾ ವೇದಮಂತ್ರಗಳಲ್ಲೂ ನಮ್ಮ ಉತ್ತಮ ಬದುಕಿಗೆ ಬೇಕಾಗುವ ಜ್ಞಾನ ಭಂಡಾರವೇ  ಅಡಗಿದೆ.ನಾವು ಈ ಜ್ಞಾನ ಭಂಡಾರವನ್ನು ಅರ್ಥಮಾಡಿಕೊಂಡು ಜೀವನಕ್ಕೆ ಅಳವಡಿಸಿಕೊಂಡಿದ್ದೇ ಆದರೆ ನಾವೂ ಸುಖ -ನೆಮ್ಮದಿಯನ್ನು ಜೀವನದಲ್ಲಿ ಪಡೆಯಬಹುದು, ಜಗತ್ತಿಗೂ ನೆಮ್ಮದಿಯನ್ನು ಕೊಡಬಹುದು. ಮನುಷ್ಯ ಜೀವನದ ಲೌಕಿಕ ಮತ್ತು ಆಧ್ಯಾತ್ಮಿಕ ಸಾಧನೆಯನ್ನು ಬಹುಶ:  ಇನ್ಯಾವುದರಿಂದಲೂ ಪಡೆಯಲು ಸಾಧ್ಯವಾಗಲಾರದು. ಹಿಂದಿನ ತಲೆಮಾರಿಗೂ ಇಂದಿನ-ಮುಂದಿನ ತಲೆಮಾರುಗಳ ನಡುವೆ ದೊಡ್ದ  ಸಮಸ್ಯೆಯನ್ನು ಕಾಣಬಹುದಾಗಿದೆ. ಹಿಂದಿನ ತಲೆಮಾರಿನವರು ಅಧ್ಯಾತ್ಮಿಕ ಸಾಧನೆ ಮಾಡಬೇಕೆನ್ನುತ್ತಾರೆ. ಆದರೆ ಯಾಕಾಗಿ ಮಾಡಬೇಕೆಂದು ಇಂದಿನ ತಲೆಮಾರಿನವರು ಕೇಳಿದರೆ ಅವರಲ್ಲಿ ಉತ್ತರವಿಲ್ಲ. ಇಂದಿನ-ಮುಂದಿನ ತಲೆಮಾರಿನವರ ವಾದವಾದರೋ ಭೋಗ ವಾದ. ಬದುಕಿರುವಷ್ಟು ದಿನ ತಿಂದುಂಡು ಮೆರೆದು ಬಿಡುವ ವಾದ.ಈ ತಲೆಮಾರಿನವರ ಪ್ರಶ್ನೆಗಳಿಗೆ ಹಿಂದಿನ ತಲೆಮಾರಿನವರು ಉತ್ತರಿಸಲು ಅಸಮರ್ಥರಾಗಿರುವುದರಿಂದ ಎರಡೂ ತಲೆಮಾರಿನ ಮಧ್ಯೆ ಗೊಂದಲವು ನಿರ್ಮಾಣವಾಗಿದೆ. ಆದರೆ ಈ ಎರಡೂ ತಲೆಮಾರಿನ ಜನರನ್ನು ಬೆಸೆಯುವ ಸಮತ್ವದ ಮಾರ್ಗಬೇಕೆಂದರೆ ಅದು ವೇದದಿಂದ  ಮಾತ್ರವೇ ಸಾಧ್ಯ.ಹಿಂದಿನ ತಲೆಮಾರಿನವರು  ಗೊಡ್ಡು ವಿಚಾರಗಳನ್ನು ಹೇಳುತ್ತಿದ್ದರೆ ವೇದದ ಜ್ಞಾನವು ಅದನ್ನು ನಿವಾರಣೆ ಮಾಡಬಲ್ಲದು.ಇಂದಿನ-ಮುಂದಿನ ಪೀಳಿಗೆಯವರ ಸಂದೇಹಗಳಿಗೆ ವೈಜ್ಞಾನಿಕವಾಗಿ ಪರಿಹಾರವನ್ನು ವೇದವು ನೀಡುವುದರಿಂದ ಅವರ ಜೀವನವನ್ನು ಸುಧಾರಿಸಿಕೊಳ್ಳಲು ಸಾಧ್ಯವಿದೆ. ಅಂದರೆ ಎರಡೂ ತಲೆಮಾರಿನವರಿಗೂ ವೇದದಲ್ಲಿ ಮಾರ್ಗದರ್ಶನವಿದೆ. ಇದನ್ನು ಇದೀಗಲೇ ಒಪ್ಪಬೇಕಾಗಿಲ್ಲ. ಆದರೆ ಮುಂದೆ ನಾಲ್ಕಾರು ಮಂತ್ರಗಳ ಅರ್ಥವನ್ನು ತಿಳಿದಮೇಲೆ ಅದು ಸ್ವೀಕಾರ್ಹವಾದರೆ ಆಗ ಒಪ್ಪಬಹುದು.ವೇದವೆನ್ನುವುದು ಲೌಕಿಕ ಮತ್ತು ಆಧ್ಯಾತ್ಮಿಕ ಬದುಕನ್ನು ಬೆಸುಗೆಗೊಳಿಸುವ ಜೀವನ ವಿಜ್ಞಾನವೆನ್ನುವುದನ್ನು  ವೇದದ ನಾಲ್ಕಾರು ಮಂತ್ರಗಳ ಅರ್ಥವನ್ನು ಸರಿಯಾಗಿ ತಿಳಿದುಕೊಂಡಾಗ ಮನದಟ್ಟು ಮಾಡಿಕೊಳ್ಳಬಹುದು. ಹೇಳಿಕೊಡುವ ಏಕೈಕ ವಿಜ್ಞಾನವೆಂದರೆ ಅದು ವೇದಗಳು.
ಲೌಕಿಕ ಮತ್ತು ಆಧ್ಯಾತ್ಮಿಕ ಸಾಧನೆಗೆ ವೇದವೇ ಆಗಬೇಕೇ? 
ಅನೇಕರ  ಪ್ರಶ್ನೆ ಹೀಗೂ ಇರಬಹುದು. ಅನೇಕ ಮಹಾಮಹಿಮರುಗಳು ಬರೆದಿರುವ ಧರ್ಮ ಗ್ರಂಥಗಳ ಭಂಡಾರವೇ ಇರುವಾಗ ವೇದವೇ ಏಕಾಗಬೇಕು? ಈ ವಿಚಾರವನ್ನು ಸ್ವಲ್ಪ ಸೂಕ್ಷ್ಮವಾಗಿ ಗಮನಿಸುವಾಗ ಮೊಟ್ಟಮೊದಲ ಅಂಶವೆಂದರೆ  " ವೇದವು ಇಡೀ ಮನುಕುಲದ ಉನ್ನತಿಗಾಗಿ ಇದೆ.ವೇದವು ಯಾವುದೇ ಮತ-ಪಂಥಗಳಿಗೆ ಸೀಮಿತವಾಗಿಲ್ಲ. ಯಾವುದೇ ಮತ-ಪಂಥಗಳ ಗ್ರಂಥದ ವಿಚಾರವನ್ನು ಗಮನಿಸಿದಾಗ ನಮಗೆ ತಿಳಿದುಬರುವ ಅಂಶವೆಂದರೆ ಯಾರು ಈ ಮತವನ್ನು ನಂಬುತ್ತಾರೋ, ಯಾರು ಈ ಮಾರ್ಗವನ್ನು ನಂಬುತ್ತಾರೋ,ಯಾರು ಈ ಗ್ರಂಥವನ್ನು ನಂಬುತ್ತಾರೋ ಅವರಿಗೆ ಅದು ಸೀಮಿತಗೊಳ್ಳುತ್ತದೆ.ಜಗತ್ತಿನಲ್ಲಿರುವ ಯಾವುದೇ ಮತ-ಸಂಪ್ರದಾಯಗಳೂ ಸೀಮಿತವೇ ಆಗಿವೆ.ಯಾವ ಕಟ್ಟು ಪಾಡುಗಳಿಲ್ಲದೆ, ಜಾತಿ-ಮತ-ಪಂಥ,ಲಿಂಗ ಭೇದವಿಲ್ಲದೆ, ಸಕಲ ಮಾನವಕುಲದ ಹಿತಕ್ಕಾಗಿ ಒಂದು ಗ್ರಂಥವಿದೆಯೆಂದಾದರೆ ಅದು ವೇದ ಮಾತ್ರವೇ ಆಗಿದೆ.ಇಷ್ಟು ವಿಶಾಲ ವ್ಯಾಪ್ತಿಯ ಜ್ಞಾನ ಭಂಡಾರವು ವೇದದ ಹೊರತಾಗಿ ಮತ್ಯಾವುದೂ ಜಗತ್ತಿನಲ್ಲಿಲ್ಲ.ಆದರೆ ದುರಾದೃಷ್ಟವೆಂದರೆ ವೇದದ ಬಗ್ಗೆ ಮಾತನಾಡುವ ಅನೇಕರು ಈ ಬಗ್ಗೆ ಸ್ಪಷ್ಟವಾಗಿ ತಿಳಿಸುತ್ತಿಲ್ಲ.ವೇದವು ಯಾವುದೋ ವರ್ಗಕ್ಕೆ ಸೀಮಿತವೆಂಬ ಕಟ್ಟುಪಾಡು ವಿಧಿಸಿರುವುದು ನಮ್ಮ ಸಮಾಜದ ದು:ಸ್ಥಿತಿಗೆ ಕಾರಣವಾಗಿದೆ.ಆದರೆ ಈಗ ನಾವು ವೇದದ ಕೆಲವು ಮಂತ್ರಗಳ ಅರ್ಥವನ್ನು ನೇರವಾಗಿ ತಿಳಿಯುವ ಪ್ರಯತ್ನವನ್ನು ಮಾಡೋಣ. ಆಗ ನಮಗೆ ವೇದದ ಹಿರಿಮೆ ಅರ್ಥವಾಗುತ್ತದೆ.ಆಗಲೂ ಅದು ನಮಗೆ ಒಪ್ಪಿಗೆಯಾಗದಿದ್ದಲ್ಲಿ ಅದನ್ನು ಬಿಡುವ ಅಧಿಕಾರ ನಮಗೆ ಇದ್ದೇ ಇದೆ.ಇನ್ನು ಮುಂದಿನ ನಾಲ್ಕಾರು ಮಂತ್ರಗಳ ಅರ್ಥ ವಿವರಣೆಯನ್ನು ತಿಳಿಯುವಾಗ ಬಹಳ ಎಚ್ಛರಿಕೆಯಿಂದಿದ್ದು ಗಮನಿಸಿದಾಗ ವೇದದ ಗಟ್ಟಿತನ ನಿಚ್ಛಳವಾಗುತ್ತದೆ. ಆದರೆ ವೇದವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಪೂರ್ವಾಗ್ರಹವಿಲ್ಲದ  ಮುಕ್ತ ಮನಸ್ಸು ಇರಬೇಕು.ನಾವು ಇದುವರವಿಗೆ ಬೆಳೆದು ಬಂದಿರುವ ಪರಿಸರದಲ್ಲಿ ಸ್ವಲ್ಪ ಗೊಂದಲವಾಗಲೂ ಬಹುದು. ಆದರೆ ಈ ನಾಲ್ಕಾರು ಮಂತ್ರಗಳನ್ನು ಅರ್ಥಮಾಡಿಕೊಳ್ಳುವ ವರಗೆ ನಮ್ಮ ತಲೆಯಲ್ಲಿ ತುಂಬಿರಬಹುದಾದ ಯಾವುದೇ ವಿಚಾರವನ್ನೂ ಸ್ವಲ್ಪ ಕಾಲ ಬದಿಗಿರಿಸಿ ಮುಕ್ತ ಮನಸ್ಸಿನಿಂದ  ವೇದ ಮಂತ್ರಗಳ ಅರ್ಥವನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡಿದ್ದೇ ಆದರೆ ನಮ್ಮಲ್ಲಿರಬಹುದಾದ ಪೂರ್ವಾಗ್ರಹವು ತೊಂದರೆ ಮಾಡುವುದನ್ನು ತಪ್ಪಿಸಿಕೊಳ್ಳ ಬಹುದಾಗಿದೆ............