Pages

Monday, July 16, 2012

ಓದುವ ವಿಧ್ಯಾರ್ಥಿಗಳಿಗೆ ಸಹಾಯ ಮಾಡಿ, ಅದು ಅವರಿಗೆ ಜೀವನ ಕೊಡುತ್ತೆ



ನಾನು S S L C  ಓದುತ್ತಿದ್ದ ಸಮಯದಲ್ಲಿ ನಮ್ಮ ಮನೆಗೆ ಒಬ್ಬ ವಿಧ್ಯಾರ್ಥಿ ವಾರಾನ್ನಕಾಗಿ ಬರುತ್ತಿದ್ದ.. ವಾರಾನ್ನ ಎಂದರೆ ವಾರದ ಒಂದು ದಿನ, ಒಂದು ಹೊತ್ತಿನ ಅಥವಾ ಎರಡು ಹೊತ್ತಿನ ಊಟವನ್ನು ಮಾಡಿಕೊಂಡು ಹೋಗುವುದು. ಆ ದಿನಗಳಲ್ಲಿ ಹಳ್ಳಿಯಿಂದ   ಬರುವ ಬಡ ಕುಟುಂಬದ ವಿಧ್ಯಾರ್ಥಿಗಳಿಗೆ ವಾಸಮಾಡಲು ಅನಾಥಾಲಯಗಳಲ್ಲಿ ಜಾಗ ಸಿಗುತ್ತಿತ್ತು. ಆದರೆ, ಊಟಕ್ಕೆ ಈ ರೀತಿಯಾಗಿ ತಮ್ಮದೇ ವರ್ಗದ ಮನೆಗಳಲ್ಲಿ ಉಚಿತವಾಗಿ ವಾರದ ಒಂದು ದಿನ ಅಥವಾ ಅರ್ಧ ದಿನದ ಊಟದ ವ್ಯವಸ್ಥೆ ಕೇಳಿಕೊಂಡು ಬರುತ್ತಿದ್ದರು. ಅಂದಿನ ದಿನಗಳಲ್ಲಿ ಹೋಟೆಲ್ಲಿಗೆ ಅಥವಾ ಮೆಸ್ಸಿಗೆ ಹೋಗುವಷ್ಟು ಅನುಕೂಲ ಹೆಚ್ಚಿನವರಲ್ಲಿ ಇರುತ್ತಿರಲಿಲ್ಲ.  ಹೀಗೆ ಕೇಳಿಕೊಂಡು ಬಂದ ವಿಧ್ಯಾರ್ಥಿಗಳ ಕುಲ ಗೋತ್ರ ವಿಚಾರಿಸಿಕೊಂಡು ಯಥಾನುಶಕ್ತಿ ವಿದ್ಯಾರ್ಥಿಗಳಿಗೆ ವಾರನ್ನಕ್ಕೆ ಒಪ್ಪಿಗೆ ನೀಡುತ್ತಿದ್ದರು.  ಆ ವಿಧ್ಯಾರ್ಥಿ ನಿಗದಿತ ವಾರದ ದಿನದಂದು ಬಂದು ಊಟ, ತಿಂಡಿ ಮುಗಿಸಿ ಹೋಗುತ್ತಿದ್ದ.  ಪ್ರತಿ ವಿಧ್ಯಾರ್ಥಿ ಹೀಗೆ ಹತ್ತಾರು ಮನೆಗಳ ವ್ಯವಸ್ಥೆ ಮಾಡಿಕೊಂಡು ತಮ್ಮ ವಿಧ್ಯಾಭ್ಯಾಸ ಮುಗಿಸುತ್ತಿದ್ದರು.

ನಮ್ಮ ಮನೆಯಲ್ಲಿ ಕೂಡ ಮೂವರು ವಿಧ್ಯಾರ್ಥಿಗಳಿಗೆ ಈ ರೀತಿಯ ವಾರಾನ್ನದ ವ್ಯವಸ್ಥೆ ಇತ್ತು. ನಮ್ಮದು ಬಡ ಕುಟುಂಬವೇ.  ನಮ್ಮ ಮನೆಯಲ್ಲೂ ಆರು ಜನ ಮಕ್ಕಳೊಟ್ಟಿಗೆ ನಮ್ಮ ಅಪ್ಪ ಅಮ್ಮ ಸೇರಿ ಎಂಟು ಮಂದಿಯ ಜೊತೆಗೆ ವಾರಾನ್ನದ ವಿಧ್ಯಾರ್ಥಿಯ   ಊಟವು    ಸೇರುತ್ತಿತ್ತು .  ಇಷ್ಟು  ಜನಗಳ   ತುತ್ತಿನ  ಚೀಲ  ತುಂಬುವ   ಹೊಣೆ  ನನ್ನ  ತಂದೆಯ  ಏಕಮಾತ್ರ  ಆದಾಯದಿಂದ  ಸಾಗುತಿತ್ತು.   ಒಮ್ಮೆ ಕೂಡ ನನ್ನ ಅಪ್ಪ ತನಗಾಗುತ್ತಿದ್ದ ಹಣಕಾಸಿನ ಮುಗ್ಗಟ್ಟಿನ ಪರಿಸ್ಥಿಯನ್ನು  ನಮ್ಮೆದುರಿಗೆ ಎಂದಿಗೂ ಹೇಳಿಕೊಂಡವರಲ್ಲ.

ಒಂದು ದಿನ ರಾತ್ರಿ      ಎಲ್ಲ ಎಂಟು ಜನರು ಊಟಕ್ಕೆ ಕೂತಿದ್ದೆವು.  ನನ್ನ ಅಮ್ಮ ಎಲ್ಲರಿಗೂ ಅನ್ನ ಬಡಿಸಲು ಪ್ರಾರಂಭ ಮಾಡಿದರು.  ಅಂದು ಬೆಳಿಗ್ಗೆ ಮಾಡಿ ಉಳಿದ ಅನ್ನವನ್ನು ಸಂಜೆಗೆ ಬಡಿಸಲು ಇಟ್ಟಿದ್ದರು. ಬಿಸಿಬಿಸಿ  ಅನ್ನ ಬಡಿಸುವ  ಬದಲು ಬೆಳಗಿನ ತಂಗಳು ಅನ್ನವನ್ನು ವಾರಾನ್ನದ ಹುಡುಗನ  ಕಡೆಯಿಂದ ಬಡಿಸಲು ಅಮ್ಮ ಪ್ರಾರಂಭಿಸಿದರು.  ಅಮ್ಮನ ಉದ್ದೇಶ ತಣ್ಣನೆಯ ಅನ್ನ ಖಾಲಿಯಾದೊಡನೆ ಬಿಸಿ ಅನ್ನ ಬಡಿಸುವ ಯೋಚನೆ. ಆ ಹುಡುಗ ಮೊದಲಲ್ಲೇ ಕೂತ ಕಾರಣ ಆ ಅನ್ನ ಅವನ ತಟ್ಟೆಗೆ ಅಮ್ಮ ಬಡಿಸಿದರು. ಆಚೆ ಬದಿಯಲ್ಲಿ ಕೂತ ನನ್ನ ಅಪ್ಪ "ಆ ಹುಡುಗನಿಗೆ ಬಿಸಿ ಅನ್ನ ಬಡಿಸು, ಅವನಿಗೆ ತಂಗಳು ಅನ್ನ ಬೇಡ " ಎಂದರು   .  ತಕ್ಷಣ    ಆತನಿಗೆ    ಬಡಿಸಿದ    ತಂಗಳು ಅನ್ನ ತೆಗೆದು    ಬಿಸಿ ಅನ್ನ ಬಡಿಸಿದರು ಅಮ್ಮ.  ಅಮ್ಮನಿಗೆ  ಕೊಂಚ  ಬೇಸರ  ಹಾಗೂ  ಇರಿಸುಮುರುಸು ಆಯಿತು .   ಅವರ  ಮುಖದಲ್ಲಿ  ಆದ   ಬದಲಾವಣೆ  ಇತರರಿಗೆ     ಗೊತ್ತಾಗುತ್ತಿತು  .  ಇದನ್ನು   ಆ ಹುಡುಗನು   ಗಮನಿಸಿದ   ಆತನಿಗೂ   ತುಂಬಾ            ಕಷ್ಟ    ಎನಿಸಿತು   .  ತಕ್ಷಣ  ಆ ಹುಡುಗ "ಇಲ್ಲ,.....  ನನಗೂ ಬೆಳಗಿನ ಅನ್ನವನ್ನೇ  ಹಾಕಿ , ಬಿಸಿ ಅನ್ನ ಬೇಡ" ಎಂದು ಬೇಡಿಕೊಂಡ .   ಪಕ್ಕದಲ್ಲಿ  ಇದ್ದ  ನಮ್ಮೆಲ್ಲರಿಗೂ  ಅಪ್ಪನ  ಮಾತು  ಆ ಸಮಯದಲ್ಲಿ ಸರಿ  ಅನ್ನಿಸಲಿಲ್ಲ .   ಇದನ್ನೆಲ್ಲಾ  ಸೂಕ್ಹ್ಮವಾಗಿ  ಗಮನಿಸಿದ  ನನ್ನ ತಂದೆಯವರು,          " ನೀನು       ಬಿಸಿ ಅನ್ನವನ್ನೇ   ಊಟಮಾಡು .  ಪರೀಕ್ಷೆ   ಸಮಯ  . ನೀನು  ಹುಷಾರು  ತಪ್ಪಿ  ಮಲಗಿದರೆ  ನೋಡಲು   ಯಾರಿದ್ದಾರೆ   .  ಈ ಮಕ್ಕಳಿಗೆ   ನಾನಿದ್ದೇನೆ.   ನಿಂಗೆ  ಇಲ್ಲಿ  ಯಾರಿದ್ದಾರಪ್ಪ ?  ಊಟ ಮಾಡು , ಚನ್ನಾಗಿ  ಓದು "  ಎಂದು ಹೇಳಿದರು.  ಈ ಮಾತು  ಕೇಳಿದ  ಅಮ್ಮನ  ಮುಖದಲ್ಲಿ     ಒಂದು ರೀತಿಯ ಸಮಾಧಾನ  ಕಂಡಿತು ಎಲ್ಲರು  ಊಟ ಮುಗಿಸಿ ಎದ್ದರು  .

ನಂತರದಲ್ಲಿ ನಮ್ಮನ್ನೆಲ್ಲ ಕೂರಿಸಿಕೊಂಡು ವಾರಾನ್ನಕ್ಕೆ ಬರುವ ಹುಡುಗರ ಕಷ್ಟಗಳು ಎಷ್ಟಿರುತ್ತದೆ? ಎಂಬುದನ್ನು ತಮ್ಮ ಜೀವನದಲ್ಲಿ ಆದ ಘಟನೆಗಳನ್ನು ವಿಸ್ತಾರವಾಗಿ ಹೇಳಿದರು. ನಮ್ಮೆಲ್ಲರಿಗೂ ಆಗ ಅಪ್ಪನ ಬಗ್ಗೆ ಹೆಮ್ಮೆ ಎನಿಸಿತು. ಈ ಘಟನೆ ಚಿಕ್ಕದಾಗಿ ಕಾಣಬಹುದು, ಆದರೆ ಇದು ನಮಗೆ ಹೇಳಿದ ಪಾಠ ಮಾತ್ರ ತುಂಬಾ ದೊಡ್ಡದಾಗಿತ್ತು. ಯಾವ ಬೀಜದ ಶಕ್ತಿ ಹೇಗೆ ಇರುತ್ತೆ ಎಂಬುದನ್ನು ಅರಿಯಲು ಕಾಯಬೇಕಾಗುತ್ತದೆ. ಒಮ್ಮೆಲೇ ತೀರ್ಮಾನಿಸಲು ಸಾಧ್ಯವಾಗದು.  ನಮ್ಮ ಮನೆಯಲ್ಲಿ ವಾರಾನ್ನ ಮಾಡಿದ ಒಬ್ಬ ವಿದ್ಯಾರ್ಥಿ ಉನ್ನತ ಹುದ್ದೆಗೆ ಸೇರಿಕೊಂಡಾಗ ನನ್ನ ಅಪ್ಪನ ಆಶೀರ್ವಾದ ಪಡೆದು ಹೋಗಲು ಬಂದಿದ್ದರು. ಆತ " ನಿಮ್ಮ ಉಪಕಾರ ಮರೆಯಲಾರೆ, ನಿಮ್ಮ ಋಣ ಹೇಗೆ ತೀರಿಸಲಿ? " ಎಂದು ಕೇಳಿದಾಗ ನನ್ನ ಅಪ್ಪ ಕೊಟ್ಟ ಉತ್ತರ " ನಿನ್ನಂತೆ ಇರಬಹುದಾದ ವಿದ್ಯಾರ್ಥಿಗೆ ಸರಿಯಾದ ಸಮಯದಲ್ಲಿ ಸಹಾಯ ಮಾಡು, ನಿನ್ನ ಋಣ ತೀರುತ್ತೆ " ಎಂದು ಆಶೀರ್ವಾದ ಮಾಡಿ ಕಳುಹಿಸಿ ಕೊಟ್ಟರು.

ನನ್ನ ಅಪ್ಪ  ನಮಗೂ ಪದೇ ಪದೇ ಹೇಳುತ್ತಿದ್ದರು. " ಓದುವ ವಿಧ್ಯಾರ್ಥಿಗಳಿಗೆ ಸಹಾಯ    ಮಾಡಿ, ಅದು ಅವರಿಗೆ ಜೀವನ ಕೊಡುತ್ತೆ  "  ಈ ಮಾತು ನಮಗೆ ಯಾವಾಗಲು ಜ್ಞಾಪಕಕ್ಕೆ ಬರುತ್ತದೆ.  ಪುಣ್ಯವಶಾತ್ ನಾನೂ ಕೂಡ ಒಂದು ವಿದ್ಯಾ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಕಾಶ ಭಗವಂತ ಕರುಣಿಸಿದ ಕಾರಣ ಹಲವಾರು ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಅವಕಾಶ  ನನ್ನದಾಗಿದೆ. ನನ್ನ ತಂದೆಯವರು  ನನಗೆ ವಿದ್ಯಾಸಂಸ್ಥೆಯಲ್ಲಿ ಕೆಲಸ ಸಿಕ್ಕಿದ್ದು ಕೇಳಿಯೇ ತುಂಬಾ ಖುಷಿ ಪಟ್ಟು, "ಈ ಸದವಕಾಶವನ್ನು ಸರಿಯಾಗಿ ಬಳಸಿಕೋ" ಎಂದು ಹಲವಾರು ಬಾರಿ ನನಗೆ ಹೇಳಿದ್ದುಂಟು.


ಹೆಚ್ ಏನ್ ಪ್ರಕಾಶ್ 

ಅತ್ಯಂತ ದೊಡ್ಡ ಬ್ರೆಕಿಂಗ್ ನ್ಯೂಸ್

ಇತ್ತೇಚೆಗೆ ಫೆಸ್ ಬುಕ್ ನ ವೇದಿಕೆಯೊಂದರಲ್ಲಿ ಕೆಲ ಧಾರ್ಮಿಕ ಮತ್ತು ಸಾಂಸ್ಕೃತಿಕ ವಿಷಯಗಳ ಚರ್ಚೆ ನಡೆಯುತ್ತಿತ್ತು. ಯಾರೋ ನನ್ನನ್ನು ಅಲ್ಲಿ ಎಳೆದುಕೊಂಡು ಹೋಗಿ ಸೇರಿಸಿದರು. ನನಗೆ ಅಂತಹ ಚರ್ಚೆಗಳು ಅನಾವಶ್ಯಕ ಅನಿಸಿದ್ದರಿಂದ ನಿರಾಸಕ್ತನಾಗಿದ್ದೆ. ಆದರೆ ಅಲ್ಲಿ ನಡೆಯುವ ಕೆಲ ಅಸಂಬದ್ಧ ವಿಷಯ ಮಂಡನೆಯನ್ನು ನೋಡಿ ಸಹಿಸಲಾಗದೇ ನಾನೂ ಚರ್ಚೆಯಲ್ಲಿ ಧುಮುಕಿದೆ. ಅನೇಕ ವಿಷಯಗಳ ಚರ್ಚೆಯಾದ ನಂತರ ಮತ್ತು ಇತ್ತೀಚಿನ ಕೆಲ ವಿದ್ವಾಂಸರ ಜನಪ್ರಿಯ ಪ್ರವಚನ ಮತ್ತು ಪುಸ್ತಕಗಳನ್ನು ಓದಿದಾಗ, ಹಾಗೂ ಬೆಂಗಳೂರಿನಂಥ ನಗರದ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗಗಳ ಜನರ ಜೊತೆ ಕೆಲ ದಿನಗಳಿಂದ ಒಡನಾಡಿದ ನಂತರ ಗಮನಕ್ಕೆ ಬಂದ ವಿಷಯ ಏನೆಂದರೆ, ಭಾರತದ ಬಹುತೇಕ ಅಕ್ಷರಸ್ಥರು ವಿಚಾರವಂತರು ನಮ್ಮ ಭಾರತೀಯ ಧಾರ್ಮಿಕ ಆಚರಣೆಗಳ ಹಿಂದಿನ ಮರ್ಮಗಳನ್ನು ಅಥವಾ ಉದ್ದೇಶಗಳನ್ನು ತಿಳಿಯುವಲ್ಲಿ ಆಸಕ್ತರಾಗಿದ್ದಾರೆ. ನಗರಗಳಲ್ಲಿ ಅಂಥವರ ಸಂಖ್ಯೆ ತುಂಬಾ ಬೆಳೆಯುತ್ತಿದೆ. ಆದರೆ ಅಂಥವರಿಗೆ ಅವರಿಗೆ ಬೇಕಾದ ವಿಷಯಗಳನ್ನು ತಿಳಿಯುವ ಸರಿಯಾದ ''ದಾರಿ'' ಗೊತ್ತಿಲ್ಲದ ಕಾರಣ ದೇವಸ್ಥಾನಗಳ ಅರ್ಚಕರು ಹಾಗೂ ಟಿವಿ ಗಳಲ್ಲಿ ಬರುವ ಏನೂ ಓದಿಕೊಳ್ಳದ ನಿರ್ಲಜ್ಜ ಜ್ಯೋತಿಷಿಗಳನ್ನು ಆಶ್ರಯಿಸುತ್ತಿದ್ದಾರೆ. ಇಂತಹ ಜನ ಸಮೂಹದ ದೃಷ್ಟಿಯಲ್ಲಿ ಟಿವಿಗಳಲ್ಲಿ ಅಲ್ಪ-ಸ್ವಲ್ಪ ಚೆನ್ನಾಗಿ ಮಾತಾಡುವವರು ಕೂಡ ಮಹಾತ್ಮರಾಗಿ ಕಾಣುತ್ತಿದ್ದಾರೆ, ಹಾಗಾಗಿ ಜ್ಯೋತಿಷ್ಯದ ಕಾರ್ಯಕ್ರಮಗಳಿಗೆ ವಿಪರೀತ TRP ಬರುತ್ತಿದೆ ಮತ್ತು ಎಲ್ಲ ಚಾನೆಲ್ ಗಳು ಬೆಳಗಿನ ಹೊತ್ತು ಇಂತಹ ಕಾರ್ಯಕ್ರಮಗಳಿಗೆ ಮೀಸಲಾಗುತ್ತಿವೆ. ಇತ್ತೀಚಿನ ಶ್ರೀಮಂತ ಆಂಗ್ಲ ಶಾಲೆಗಳಲ್ಲಿ ಕೂಡ ಹಬ್ಬಗಳು ಯಾಕೆ ಮಾಡಬೇಕು ? ಮುಂತಾದ ವಿಷಯಗಳನ್ನು ಹಬ್ಬಗಳ ಮುನ್ನಾ ದಿನಗಳಲ್ಲಿ ಮಕ್ಕಳಿಗೆ ಹೇಳಿ ಕಳಿಸುತ್ತಿರುವುದು ಆಶ್ಚರ್ಯದ ವಿಚಾರ. ಇತ್ತೀಚೆಗೆ ನಾನು ಭೇಟಿಯಾದ ಮಹಿಳೆಯೊಬ್ಬರು ''ಈ ಯುಗಾದಿ ಹಬ್ಬದ ಬಗ್ಗೆ ನನಗಿಂತ ನನ್ನ ಆರು ವರ್ಷದ ಮಗುವಿಗೆ ಚೆನ್ನಾಗಿ ಗೊತ್ತಿದೆ'' ಎಂದು ಹೇಳಿಕೊಳ್ಳುವಾಗ ಆಕೆಯ ಮುಖದಲ್ಲಿ ಕೀಳರಿಮೆಯ ಜೊತೆಗೆ..''ನನ್ನ ಮಗನನ್ನು ಅಂತಹ ಉತ್ತಮ ಶಾಲೆಯಲ್ಲಿ ಒದಿಸುತ್ತಿದ್ದೇವೆ'' ಎಂಬ ಜಂಬ ಹೆಚ್ಚಾಗಿ ಕಾಣುತ್ತಿತ್ತು. ನಿಮ್ಮ ಮಕ್ಕಳಿಗೆ ಇಂಥದ್ದನ್ನೆಲ್ಲ ಕಲಿಸುತ್ತಿದ್ದೇವೆ ಎಂಬ ಪ್ರಲೋಭನೆಯೊಂದಿಗೆ ಹೆಚ್ಚಿನ ಡೊನೇಶನ್ ಪೀಕುತ್ತಿದ್ದೇವೆ ಎಂಬ ವಿಷವನ್ನು ಗಮನಕ್ಕೆ ಬಾರದ ಹಾಗೆ ಮಾಡುವ ಶಿಕ್ಷಣ ವ್ಯವಸ್ಥೆಯ ಹೊಸ ವ್ಯಾಪಾರ ತಂತ್ರ ಇದು ಎಂದು ಆಕೆಗೆ ಅರ್ಥವಾಗಿರಲಿಲ್ಲ. ಒಟ್ಟಿನಲ್ಲಿ ''ನೀನು ದುಡ್ಡು ಕೊಡು, ನಾವು ಎಲ್ಲ ನೀಡುತ್ತೇವೆ'' ಎನ್ನುವ ವ್ಯಾಪಾರ ತಂತ್ರ. ಮತ್ತು ''ನಾವು ದೊಡ್ದು ಕೊಡುತ್ತೇವೆ, ಹಾಗಾಗಿ ನಮ್ಮ ಜವಾಬ್ದಾರಿ ಎಲ್ಲ ಮುಗಿಯಿತು'' ಎನ್ನುವ ಪೋಷಕರ ಮನಸ್ಥಿತಿ- ಈ ಎರಡೂ ಒಟ್ಟೊಟ್ಟಿಗೆ ಕಂಡು ಬರುತ್ತಿವೆ. ಈ ಸ್ಥಿತಿ ಶಿಕ್ಷಣದಲ್ಲಿ ಮಾತ್ರ ಅಲ್ಲ, ಇಡಿಯಾದ ಮಾರುಕಟ್ಟೆ....ಇದೇ ದಾರಿಯಲ್ಲಿ ಮುನ್ನುಗ್ಗುತ್ತಿದೆ. ಭಾರತೀಯ ಧಾರ್ಮಿಕ ಆಚರಣೆಗಳ ವಿಷಯಕ್ಕೆ ಮತ್ತೆ ಬರುವುದಾದರೆ, ನಗರ ಜೀವನ ಹುಟ್ಟು ಹಾಕುವ ಅನೇಕ ಸಮಸ್ಯೆಗಳ ನಿವಾರಣೆ, ನಾಳಿನ ಬಗೆಗಿನ ಭಯ, ಜ್ಞಾನದ ಕೊರತೆ, ಅತಿ ಆಸೆ ಮುಂತಾದ ಅನೇಕ ಕಾರಣಗಳಿಗಾಗಿ ಜನ ಜ್ಯೋತಿಷಿಗಳ ಮತ್ತು ದೇವಸ್ಥಾನಗಳ ಮುಂದೆ ತಂಡೋಪ ತಂಡವಾಗಿ ಕಾಣಿಸುತ್ತಿದ್ದಾರೆ. ಮಂತ್ರಗಳ -ಸ್ತೋತ್ರಗಳ ಕಲಿಯುವುವಿಕೆ ಮುಂತಾದವುಗಳು ಹೆಚ್ಚುತ್ತಿವೆ. ಇನ್ನು ಅನೇಕರು ಪೂಜಾ-ಆಚರಣೆಗಳ ಹಿನ್ನೆಲೆಯನ್ನು ತಿಳಿಯುವ ನಿಟ್ಟಿನಲ್ಲಿ ಅತೀ ಉತ್ಸುಕರಾಗಿದ್ದಾರೆ. ಈ ಎಲ್ಲ ಆಚಾರ ಸಂಪ್ರದಾಯಗಳು ವೈಜ್ಞಾನಿಕ ಹಿನ್ನೆಲೆ ಹೊಂದಿವೆಯೇ ಇಲ್ಲವೇ ? ಎಂದು ತಿಳಿಯುವ ಕುತೂಹಲಿಗಳ ಸಂಖ್ಯೆಯೂ ದೊಡ್ಡದಿದೆ. ಈ ಉದ್ದೇಶದ ಹಿಂದೆ....ಕೇವಲ ಧಾರ್ಮಿಕ ಅಥವಾ ಸಾಂಸ್ಕೃತಿಕ ಕಾರಣ ಇಲ್ಲ . ಶ್ರದ್ಧೆ ಮತ್ತು ಆಸಕ್ತಿ ಇದ್ಯಾವುದೂ ಇಲ್ಲ. ಒಂದು ದೊಡ್ಡ ಸಮುದಾಯವೇ ಸಂಪೂರ್ಣವಾಗಿ ಒಂದು ಸನ್ನಿಗೆ ಒಳಗಾಗಿದೆ .. ಅದೇನೆಂದರೆ ಭಾರತೀಯೇತರ ಧರ್ಮಗಳಲ್ಲಿ ಅಥವಾ ಹಿಂದೂಯೇತರ ಧರ್ಮಗಳಲ್ಲಿ ಎಲ್ಲ ಪಾರದರ್ಶಕವಾಗಿದೆ, ನೆರವಾಗಿದೆ.. ವೈಜ್ಞಾನಿಕವಾಗಿದೆ ಮತ್ತು ಎಲ್ಲ ಸರಿಯಾಗಿದೆ...ಎಂಬ ಭ್ರಮೆಯ ಜೊತೆಗೆ ಭಾರತೀಯ ಆಚರಣೆಗಳು ಕೂಡ ವೈಜ್ಞಾನಿಕ ಎಂದು ಸಾಬೀತು ಪಡಿಸುವ ಹುಕಿಗೆ ಬಿದ್ದು ಅವುಗಳ ಹಿನ್ನೆಲೆಯನ್ನು ತಿಳಿಯುವವರ ಸಂಖ್ಯೆ ಬೆಳೆಯುತ್ತಿದೆ. ಪ್ರತಿಯೊಂದು ಆಚರಣೆಗೂ ವೈಜ್ಞಾನಿಕ ಹಿನ್ನೆಲೆಯನ್ನು ವಿವರಿಸುವ ಜನರು ಹುಟ್ಟಿಕೊಂಡಿದ್ದಾರೆ. ಕಳೆದ ಕೆಲ ಶತಮಾನಗಳಲ್ಲಿ ರಾಜನೈತಿಕ ದಾಸ್ಯದ ಪರಿಣಾಮವಾಗಿ....ಬೌದ್ಧಿಕ ಮತ್ತು ವೈಚಾರಿಕವಾಗಿಯೂ ನಮ್ಮ ಮನಸುಗಲ್ಲಿ ದಾಸ್ಯ ಬೇರೂರಿದೆ. ದಾಸ್ಯ ಮನೋಭಾವದ ಪರಿಣಾಮವಾಗಿ ಪಶ್ಚಿಮ ದೇಶಗಳ ಎಲ್ಲವೂ ಸಾಮಾನ್ಯ ಭಾರತೀಯರ ಕಣ್ಣಿಗೆ sophisticated ಆಗಿ ಕಾಣಿಸುತ್ತದೆ. ನಮ್ಮ ಋಷಿಗಳು ಹೇಳಿದ ಮಾತುಗಳು ನಮಗೆ ಕಾಲ ಕಸವಾದರೆ..ಅದೇ ಮಾತುಗಳನ್ನು ಇಂಗ್ಲಿಷ್ ನಲ್ಲಿ ಹೇಳಿದ ಮ್ಯಾಕ್ಸ್ ಮುಲ್ಲರ್ ಮಾತನ್ನು ನಾವು ಹೆಮ್ಮೆಯಿಂದ ಕೊಟ್ ಮಾಡುತ್ತೇವೆ. ಕನ್ನಡದ ಒಳ್ಳೆ ಪುಸ್ತಕದ ಹೆಸರುಗಳು ಸರಿಯಾಗಿ ತಿಳಿಯದ ನಾವು ಇಂಗ್ಲಿಷ್ ನಲ್ಲಿ ಬರೆದ ತಲೆಹರಟೆ ಪುಸ್ತಕಗಳನ್ನು ದೊಡ್ಡ ಬುದ್ಧಿಜೀವಿಯಂತೆ ಪೋಸ್ ಕೊಟ್ಟುಕೊಂಡು ಓದುತ್ತೇವೆ. ''ನಾನು ಇಂಗ್ಲಿಷ್ ಪುಸ್ತಕ ಓದುತ್ತೇನೆ'' ಎನ್ನುವುದೇ ದೊಡ್ಡ ಹೆಮ್ಮೆ. ಅದರಲ್ಲಿ ಕಸ ತುಂಬಿದೆ ಎಂಬುದು ಅರ್ಥವಾಗುವುದಿಲ್ಲ. ಆದ್ದರಿಂದಲೇ...ಚೇತನ್ ಭಗತ್ ನನ್ನು ''ನೀವು ಭಾರತೀಯರಗಿದ್ದೂ ಕೂಡ ನೀವು ಹಿಂದಿಯಲ್ಲಿ ಯಾಕೆ ಬರೆಯುವುದಿಲ್ಲ''? ಎಂದು ಕೇಳಿದಾಗ ''it's not considered cool to pick up a Hindi book in India '' ಅಂತ ಹೇಳಿದ್ದ... ಅವನಿಗೆ ಮಾರ್ಕೆಟ್ phycology ಚೆನ್ನಾಗಿ ಗೊತ್ತು. ಕಸ ತುಂಬಿ ಕೊಟ್ಟರೂ ನಮ್ಮ ಜನ ಇಂಗ್ಲಿಷ್ ಪುಸ್ತಕ ಓದುತ್ತಾರೆ. ರಸದ ಬಗ್ಗೆ ಅವರಿಗೆ ಗೊತ್ತಿಲ್ಲ.
ಅದೇ ರೀತಿ ನಮ್ಮ ಈ ಧಾರ್ಮಿಕ ಆಚರಣೆಗಳು ಅವೈಜ್ಞಾನಿಕ, ಮತ್ತು ಮೂಢನಂಬಿಕೆಗಳಿಂದ ಕೂಡಿವೆ ಎಂದು ಬಲವಾಗಿ ನಂಬುವ ದಾಸ್ಯ ಮೊನೋಭಾವದ ಸಮೂಹ ಅವುಗಳ ಹಿನ್ನೆಲೆಯನ್ನು, ಮತ್ತು ವೈಜ್ನಾನಿಕತೆಯನ್ನು ತಿಳಿಯುವ ಮೂಲಕ ತಮ್ಮ ಕೀಳರಿಮೆಯನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಶ್ರದ್ದೆಗೆ ಬದಲಾಗಿ ಕೀಳರಿಮೆ ಈ ಬೆಳವಣಿಗೆಗೆ ಕಾರಣವಾಗುತ್ತಿರುವುದು ನಾಚಿಕೆ ಪಡುವ ವಿಚಾರ. ''ಧರ್ಮ'' ಮತ್ತು ''ಆಧ್ಯಾತ್ಮ'' ಎಂಬ ಈ ಎರಡು ಶಬ್ದಗಳು ಇತ್ತೀಚಿನ ದಿನಗಳಲ್ಲಿ ಅತ್ಯಂತ ಅಪಾರ್ಥಕ್ಕೊಳಗಾದ ಹಾಗೂ ದುರುಪಯೋಗಕ್ಕೊಳಗಾದ ಶಬ್ದಗಳು. ಅವುಗಳ ನಿಜವಾದ ಅರ್ಥ ಸಾಮಾನ್ಯರಿಗೆ ತಿಳಿಸಬೇಕಾದ, ಆಧ್ಯಾತ್ಮ ಬೋಧಿಸಬೇಕಾದ ಪುರಾತನ ಗುರುಪೀಠಗಳು ಶುಲ್ಕ ವಿಧಿಸಿ ಪಾದಪೂಜೆ, ಅಭಿಷೇಕ, ಕುಂಕುಮಾರ್ಚನೆ, ಶ್ರಾದ್ಧ ಮುಂತಾದವುಗಳನ್ನು ಮಾಡಿಸುವ ಸೇವಾ ಕೌಂಟರ್ ಗಳಾಗಿ ಪರಿವರ್ತನೆಗೊಂಡಿವೆ. ರಾಜರ ಆಶ್ರಯದಲ್ಲಿ ಜ್ಞಾನ ಕೇಂದ್ರ ಗಳಾಗಿ ಕೆಲಸ ಮಾಡುತ್ತಿದ್ದ ದೇವಸ್ಥಾನಗಳು ಈಗಿಲ್ಲ. ಈಗ ಸರ್ಕಾರಗಳ ಕೈಯಲ್ಲಿರುವ ಹಾಗೂ ಶ್ರೀಮಂತರು ಮತ್ತು ಮಾಡಲು ಕೆಲಸವಿಲ್ಲದ ವೃದ್ಧ ಟ್ರಸ್ಟಿಗಳು ಕಟ್ಟಿಸುವ ದೇವಸ್ಥಾನಗಳಲ್ಲಿ ಅಜ್ಞಾನದ ಪೋಷಣೆ ನಡೆಯುತ್ತಿದೆಯೇ ಹೊರತು ಆಧ್ಯಾತ್ಮದ ಪರಿಚಯವೂ ಸಾಮಾನ್ಯರಿಗಾಗುತ್ತಿಲ್ಲ. ''ಧರ್ಮ'' ಎನ್ನುವ ಶಬ್ದ ಹಿಂದೂ-ಮುಸ್ಲಿಂ ಜಗಳಕ್ಕೆ ಮಾತ್ರ ಸೀಮಿತವಾಗಿದೆ. ಇನ್ನು, ಆಧ್ಯಾತ್ಮ- ಧರ್ಮ ಬೊಧಿಸದೇ ಹೋದರೂ ಕೂಡ ಅವುಗಳ ಮುಸುಕಿನಲ್ಲಿ ಶಾರೀರಿಕ ಮತ್ತು ಮಾನಸಿಕ ರೋಗಗಳನ್ನು ನಿಯಂತ್ರಿಸುವ, ಯೋಗಾಸನ ಹೇಳಿಕೊಡುವ ಹಾಗೂ ಗಿಡಮೂಲಿಕೆ ಔಷಧಿ ಕೊಡುವ ಆಧುನಿಕ ಮಠಗಳು ಅಥವಾ ''ಮಲ್ಟಿ ಸ್ಪೆಷಾಲಿಟಿ ಆಶ್ರಮಗಳು'' ಶ್ರೀಮಂತರ ಜೇಬಿಗೆ ಮಾತ್ರ ನಿಲುಕುವಂಥವುಗಳು. ಈ ವಿಚಿತ್ರ ಸ್ಥಿತಿಯಲ್ಲಿರುವ ''ಜನಸಾಮಾನ್ಯ'' ಗಲಿಬಿಲಿಗೊಂಡು ಸಿಕ್ಕ ಸಿಕ್ಕವರನ್ನು ''ಗುರೂಜಿ'' ''ಸ್ವಾಮೀಜಿ'' ಎಂದು ಕರೆಯುತ್ತಿದ್ದಾನೆ. ದೇವಸ್ಥಾನದ ಹುಂಡಿಗೆ ದುಡ್ಡು ಹಾಕುವುದನ್ನೇ ''ಧಾರ್ಮಿಕತೆ'' ಮತ್ತು, ಹನುಮಾನ್ ಚಾಲೀಸಾ ಪಠಿಸುವುದನ್ನೇ ''ಆಧ್ಯಾತ್ಮಿಕತೆ'' ಎಂದು ತಿಳಿಯುತ್ತಿದ್ದಾನೆ. ಆದರೆ ಪ್ರಪಂಚದ ಎಲ್ಲ ಧರ್ಮಗಳಿಗಿಂತ ಭಾರತೀಯ ಸನಾತನ ಧರ್ಮ ಅತ್ಯಂತ ಪ್ರಾಚೀನವಾದದ್ದು. ಮತ್ತು ಅತೀ ಶ್ರೇಷ್ಠವಾದದ್ದು ಎಂದು ಭಾಷಣ ಮಾಡುವವರ ಸಂಖ್ಯೆ ಕಡಿಮೆಯಾಗಿಲ್ಲ. ಅಂಥವರನ್ನು ಪಕ್ಕಕ್ಕೆ ಕರೆದು ''ಸ್ವಾಮೀ, ಧರ್ಮ ಎಂದರೇನು ? ಎಂದು ಕೇಳಿ ನೋಡಿ...'' ನಿಮಗೆ ಸರಿಯಾದ ಉತ್ತರೆ ಸಿಕ್ಕರೆ ಅದು ಈ ದಶಕದ ಅತ್ಯಂತ ದೊಡ್ಡ ಬ್ರೆಕಿಂಗ್ ನ್ಯೂಸ್ . 

ನಿಜವಾದ ಶ್ರಾದ್ಧ ಯಾವುದು?

ನಿಮಗೆ ಕೇವಲ ಮೂರು ನಿಮಿಷ ಬಿಡುವಿದೆಯೇ? ಈ ಆಡಿಯೋ ಕೇಳಿ. ಅನುಭವಿಗಳ ಎರಡು ಮಾತು ಸಾವಿರ ಪುಟದ ಗ್ರಂಥದ ಓದುವುದಕ್ಕಿಂತಲೂ ಮೇಲು.


ಶ್ರೀ ಬೆಳೆಗೆರೆ ಕೃಷ್ಣಶಾಸ್ತ್ರಿಗಳ ತಂದೆ ಶ್ರೀ ಚಂದ್ರಶೇಖರ ಶಾಸ್ತ್ರಿಗಳು.ಅವರು ಪ್ರಾಣ ಬಿಡುವಾಗ ಹೇಳಿದ ಮಾತನ್ನು ಶಾಸ್ತ್ರಿಗಳ ಬಾಯಿಯಿಂದಲೇ ಕೇಳಬೇಕು " ಇನ್ನು ಈ ಶರೀರದ ಕೆಲಸ ಮುಗೀತು. ತೆಗೆದುಕೊಂಡು ಹೋಗಿ ಸುಟ್ಟುಹಾಕು. ಸಾಲಮಾಡಿ ಶ್ರಾದ್ಧ ಮಾಡಬೇಡ .ಎರಡು ವರ್ಷ ನೀನು ನನ್ನ ಸೇವೆ ಮಾಡಿದ್ದೀಯಲ್ಲಾ! ನನ್ನ ಶ್ರಾದ್ಧ ಮಾಡಿದಂತಾಯ್ತು. ಇನ್ನು ತಾಯ್ನೆಲದ ಋಣ ತೀರಿಸಲು ಒಂದು ಶಾಲೆ ತೆರೆದು ಮಕ್ಕಳಿಗೆ ವಿದ್ಯೆ ಕೊಡು, ಜೊತೆಗೇ ಅನ್ನವನ್ನೂ ಹಾಕು"......... ನನಗೆ ನನ್ನ ತಂದೆಯ ಸಾವು ನೆನಪಾಯ್ತು. ಸಾಯುವ ಮುಂಚೆ ಅವರು ಹೇಳಿದ ಮಾತು" ಆ ಭಗವಂತ ನಿನಗೆ ಒಳ್ಳೆಯದು ಮಾಡಲಿ...ಒಳ್ಳೆಯದು ಮಾಡಲಿ...ಒಳ್ಳೆಯದು ಮಾಡಲಿ...ಒಳ್ಳೆಯದು ಮಾಡಲಿ... " ಈ ಮಾತುಗಳನ್ನು ಹೇಳುವಾಗಲೇ ಪ್ರಾಣಪಕ್ಷಿ ಹಾರಿಹೋಯ್ತು.

ಆರು ಮಕ್ಕಳ ತಾಯಿ ಬಿನ್ನಾಣಗಿತ್ತಿ

ಆರು ಮಕ್ಕಳ ತಾಯಿ ಬಿನ್ನಾಣಗಿತ್ತಿ
ಚೆಲುವೆ ಮಾಯವ್ವ ಎಂಥ ಮಕ್ಕಳ ಹೆತ್ತಿ | || ಪ || 


ಸುಖವು ಸಿಕ್ಕುವುದೆಂದು ಕುಣಿಸುವನು ಒಬ್ಬ
ವಿವೇಕವನೆ ಮರೆಸಿ ತುಳಿಯುವವನೊಬ್ಬ
ಕೂಡಿಡುವ ಕಟಪವನು ಕಲಿಸುವವನೊಬ್ಬ
ಒಬ್ಬೊಬ್ಬರೇ ಸಾಕು ನರಬಾಳು ಹಾಳವ್ವ || ೧ ||


ನನದೆಂಬ ಭಾವವನು ಮೂಡಿಸುವನೊಬ್ಬ
ಸೊಕ್ಕಿನಿಂ ಮೆರೆಯೆನುತ ಉಬ್ಬಿಸುವನೊಬ್ಬ
ಉರಿವ ಒಡಲಿಗೆ ತುಪ್ಪ ಹಾಕುವನು ಒಬ್ಬ
ಒಬ್ಬೊಬ್ಬರೇ ಸಾಕು ನರಬಾಳು ಗೋಳವ್ವ || ೨ ||


ಅರಿಗಳಾರೆನಿಸಿ ಜಗದಿ ಮೆರೆದಿಹರವ್ವ್ವ
ಒಬ್ಬರಿಗೆ ಒಬ್ಬರು ಜೊತೆಯಾಗಿ ಇಹರವ್ವ
ಶೂರಾಧಿಶೂರರೇ ಮಣ್ಣು ಮುಕ್ಕಿಹರವ್ವ
ಮೋಹಿನಿ ಮಾಯವ್ವ ನಿಷ್ಕರುಣಿ ನೀನವ್ವ || ೩ ||


ಕಾಮ ಕ್ರೋಧಗಳು ಹಾಳು ಮಾಡಿದವವ್ವ
ಮದ ಮಚ್ಚರಗಳು ಚೂರಿ ಹಾಕಿಹವವ್ವ
ಲೋಭ ಮೋಹಗಳು ತುಳಿದಿಹವು ಕಾಣವ್ವ 
ಎಷ್ಟು ಕಾಡುತಿಯವ್ವ ದೇವರೇ ದಿಕ್ಕವ್ವ || ೪ ||
*************
-.ಕವೆಂ.ನಾಗರಾಜ್.

ಪಂಪ ಭಾರತ



ಪಂಪ ತನ್ನ ಭಾರತ ಕಥೆಯಲ್ಲಿ ವರ್ಣಿಸುವ ರೀತಿ ಅದೆಷ್ಟು ಸುಂದರ ನೋಡಿ :

ಚಲದೊಳ್ ದುರ್ಯೋಧನಂ|
ನನ್ನಿಯೋಳ್ ಇನತನಯಂ|
ಗಂಡಿನೊಳ್ ಭೀಮ ಸೇನಂ |
ಬಳದೋಳ್ ಮದ್ರೆಶನ್|
ಅತ್ಯುನ್ನತಿಯೋಳ್ ಅಮರ ಸಿಂಧೂದ್ಭವಂ |
ಚಾಪವಿದ್ಯಾ ಬಳದೋಳ್ ಕುಮ್ಬ್ಹೊದ್ಭವಂ |
ಸಾಹಸದ ಮಹಿಮೆಯೋಳ್ ಫಲ್ಗುಣಂ|
ಧರ್ಮದೋಳ್ ನಿರ್ಮಲ ಚಿತ್ತಂ ಧರ್ಮಪುತ್ರಂ|
ಮಿಗಿಲ ಇರ್ಗಳನ್ ಈ ಭಾರತಮ್ ಲೋಕಪೂಜ್ಯಂ ||

ಎಂತಹ ನುಡಿ ಇದ್ದೀಯ ಮಹಾಭಾರತದ ಪಾತ್ರಗಳ ವರ್ಣನೆಯನ್ನು ನಾಲ್ಕು ಸಾಲುಗಳಲ್ಲಿ ಹಿಡಿದಿರಿಸಿದ ಪಂಪನ ಸಾಮರ್ಥ್ಯ ಎಂತಹದ್ದಿರಬಹುದು

-ಸದ್ಯೋಜಾತ ಭಟ್ಟ

ತಕ್ಷಕಸ್ಯ ವಿಷಂ ದಂತೇ




ತಕ್ಷಕಸ್ಯ ವಿಷಂ ದಂತೇ ಮಕ್ಷಿಕಾಯಾಶ್ಚ ಮಸ್ತಕೆ |
ವ್ರಶ್ಚಿಕಸ್ಯ ವಿಷಂ ಪುಚ್ಚೇ ಸರ್ವಂಗೆ ದುರ್ಜನಸ್ಯ ತತ್ ||


ತಕ್ಷಕನಿಗೆ (ಹಾವಿಗೆ) ಹಲ್ಲಿನಲ್ಲಿ ವಿಷವಿರುತ್ತದೆ,  ಸೊಳ್ಳೆಗಳಿಗೆ ತಲೆಯಲ್ಲಿ ವಿಷವಿರುತ್ತದೆ, ಚೇಳುಗಳಿಗೆ ಬಾಲದಲ್ಲಿ ವಿಷವಿರುತ್ತದೆ ಆದರೆ ಕೆಟ್ಟ ಜನರಿಗೆ ಇಡಿ ದೇಹವೇ ವಿಷವಾಗಿರುತ್ತದೆ. ಆದುದರಿಂದ ಆದಷ್ಟು ಸಜ್ಜನರ ಸಂಗವೇ ಲೇಸು.
--
-ಸದ್ಯೋಜಾತಭಟ್ಟ

ಇಷ್ಟಿ ದಿನ ನೆಚ್ಚಿ ನಂಬಿ

ರಚನೆ: ಹರಿಹರಪುರಶ್ರೀಧರ್ ಗಾಯನ: ಶ್ರೀಮತಿ ಲಲಿತಾ ರಮೇಶ್