Pages

Tuesday, February 14, 2012

ಅಹಂಕಾರ                   ಒಂದು ಬೆಟ್ಟದ ಮೇಲೆ ಪುರಾತನ ಕಾಲದ 3 ಆಶ್ರಮಗಳಿದ್ದವು.  ಇದನ್ನು  ಮಠಗಳೆಂದು ಕರೆಯುತ್ತಿದ್ದರು. ಈ ಮಠಗಳ  ಮುಖ್ಯಸ್ಥರುಗಳು ಯಾವಾಗಲಾದರೊಮ್ಮೆ ಒಟ್ಟಿಗೆ ಸೇರುತ್ತಿದ್ದರು. ಒಮ್ಮೆ ಹೀಗೆ ಸೇರಿದಾಗ ಉಭಯಕುಶಲೋಪರಿ ಆದನಂತರ ಪ್ರಾಸಂಗಿಕವಾಗಿ ತಮ್ಮ ತಮ್ಮ ಮಠಗಳ ಬಗ್ಗೆ ಮಾತನಾಡಲು ಆರಂಭಿಸಿದರು.  ಒಬ್ಬ   ಮಠಾಧಿಪತಿ  " ನಿಮ್ಮ ಮಠ ಸುಂದರವಾದ ಉತ್ತಮವಾದ ಮಠ. ಆದರೆ, ನಮ್ಮ ಮಠದ ವ್ರತ,ನಿಯಮ ಮತ್ತು ಕಠಿಣ ಬದ್ಧತೆಯಲ್ಲಿ ನೀವು ನಮ್ಮ ಮಠವನ್ನು ಸರಿಗಟ್ಟಲಾರಿರಿ." ಎಂದು ಸ್ವಯಂ ಪ್ರತಿಷ್ಠೆಯಲ್ಲಿ ಹೇಳಿದರು.  ಇದನ್ನು ಕೇಳಿಸಿಕೊಂಡ  ಮತ್ತೊಬ್ಬ  ಮಠಾಧಿಪತಿ         "ಹೌದು, ನೀವು ಹೇಳಿದ್ದು ಸರಿಯೇ. ನಿಮ್ಮ ಮಠದ ಬಗ್ಗೆ ನಮಗೆ ಚನ್ನಾಗಿ ಗೊತ್ತು. ನಿಮ್ಮ ವ್ರತ, ನಿಯಮ ಮತ್ತು ಕಠಿಣ ಬದ್ಧತೆಯ ವಿಚಾರ ಪ್ರಶಂಸನೀಯ ಮತ್ತು ಉತ್ಕೃಷ್ಟ.  ಆದರೂ, ಕಲಿಕೆಯ ವಿಚಾರ ಬಂದರೆ ನಮ್ಮ ಮಠಕ್ಕೆ ಯಾವ ಹೋಲಿಕೆಯನ್ನು ಮಾಡಲಾಗದು. ನಮ್ಮ ಮಠದಲ್ಲಿ ಇರುವಷ್ಟು ಶಾಸ್ತ್ರಾಧ್ಯಯನ ಆಚಾರ್ಯರು ಮತ್ತು ಪಂಡಿತರು ಬೇರೆ ಯಾವ ಮಠದಲ್ಲೂ ಇಲ್ಲವೆಂಬ ವಿಚಾರ ನಿಮಗೂ ತಿಳಿದಿರಬೇಕಲ್ಲ!" ಎಂದು ಹಮ್ಮಿನಿಂದ ಹೇಳಿಕೊಂಡರು.   ಈ ಎಲ್ಲ ಮಾತನ್ನು ಕೇಳಿಸಿಕೊಂಡ ಮತ್ತೊಬ್ಬ ಮಠಾಧಿಪತಿ " ನೀವಿಬ್ಬರು ಸರಿಯೇ. ನಿಮ್ಮ ಮಠದ  ವ್ರತ, ನಿಯಮ ಮತ್ತು ಇವರ ಮಠದ  ಶಾಸ್ತ್ರಾಧ್ಯಯನ ಆಚಾರ್ಯರುಗಳ ಬಗ್ಗೆ  ಯಾರೂ ಮಾತಾಡುವ ಹಾಗೆ ಇಲ್ಲ.  ಆದರೂ, ನಮ್ಮ ಮಠದಲ್ಲಿರುವ ಯಾರೊಬ್ಬರಲ್ಲೂ ಸ್ವಪ್ರತಿಷ್ಠೆ ಇಲ್ಲ. ನಮ್ರತೆ, ವಿನೀತ ಮತ್ತು ತಗ್ಗಿ ಬಗ್ಗಿ ನಡೆಯುವ ನಾವುಗಳು  ಉನ್ನತ ಸ್ತಾನದಲ್ಲಿ ಇದ್ದೇವೆ. ಈ ಗುಣಗಳನ್ನು ನಿಮ್ಮ ಮಠದಲ್ಲಿ ಕಾಣಸಿಗುವುದಿಲ್ಲ.  ಇದನ್ನು ನೀವು ಒಪ್ಪುತ್ತಿರ ಅಲ್ಲವೇ?"  ಎಂದು ಅಹಂನಿಂದ ಹೇಳಿದರು.ಮೊದಲು ಹೇಳಿದ ಇಬ್ಬರು ಮಠಾಧಿಪತಿಗಳ ಹೇಳಿಕೆಯಲ್ಲಿ ಅಹಂಕಾರದ ಛಾಯೆ ಇರುವುದು ಅವರ ಮಾತಿನಲ್ಲಿ  ಕಾಣುತ್ತದೆ . ಆದರೆ ಮುರನೆಯ ಮಠಾಧಿಪತಿಯ ಹೇಳಿಕೆಯು ಎಂತಹ ವಿರೋಧಾಭಾಸ. ಸಾತ್ವಿಕ ಗುಣ ಇದೆ ಎನ್ನುವ ವಿಚಾರ ಕೂಡ ಅಹಂಕಾರದಲ್ಲಿದೆ.

                  ಇದನ್ನು, ಕೆಲವರು ಸಾತ್ವಿಕ ಅಹಂಕಾರ ಎನ್ನುತ್ತಾರೆ. ಇಲ್ಲೇ ವಿಚಾರಬೇಧ ಇರುವುದು. ಅಹಂಕಾರದಲ್ಲಿ ಸಾತ್ವಿಕ ಮತ್ತು ಸಾಮಾನ್ಯ ಎಂಬುದಿಲ್ಲ.  ಅಹಂಕಾರ  ಅಹಂಕಾರವೇ! ಹಣವಿದೆ, ರಾಜಕೀಯದಲ್ಲಿ ಬಲವಿದೆ, ಸಮಾಜದಲ್ಲಿ ಉತ್ತಮ ಸ್ಥಾನ ಮಾನಗಳಿವೆ,  ಸೌಂದರ್ಯವಿದೆ, ವಿದ್ಯೆಬುದ್ಧಿ  ಇದೆ, ಉತ್ತಮ ದೇಹಧಾಡ್ಯತೆ  ಇದೆ, ಅಧ್ಯಾತ್ಮದಲ್ಲಿ ಉನ್ನತ ಸಾಧನೆ ಇದೆ, ದೊಡ್ಡ ಸಂತನಾಗಿದ್ದೇನೆ,  ಹೀಗೆ ಇನ್ನು ಹಲವಾರು ರೀತಿಯ  ವಿಂಗಡಣೆಗಳು  ಅಹಂಕಾರದ ಬೀಜಗಳು.  ಈ  'ನಾನು ನನ್ನದು ' ಎಂಬ ಹಮ್ಮು ಒಮ್ಮೆ ಮನದಾಳದಲ್ಲಿ ಹೊಕ್ಕಿದರೆ ಸಾಕು, ಒಂದು ಚಿಕ್ಕ ಬೀಜ ಹೆಮ್ಮರವಾಗಿ ಬೆಳೆದು ಬೇಕೆಂದ ಕಡೆಗೆಲ್ಲ ತನ್ನ ಬಾಹುಳ್ಯವನ್ನು ಚಾಚಿಕೊಂಡು ಬಿಡುತ್ತದೆ. ಇದೊಂದು ರೀತಿಯ ರಕ್ತಬೀಜಾಸುರನ ಹಾಗೆ!  ಈ ಅಹಂಕಾರವು ಯಾವುದೇ ದಿಕ್ಕಿನಿಂದ ಬಂದು ನಮ್ಮನ್ನು ಆವರಿಸಿಬಿಡಬಹುದು. ಅಹಂಕಾರಕ್ಕೆ ಇಂತಹುದೇ ಒಂದು ನಿರ್ಧಿಷ್ಟ ದಾರಿಯಿಲ್ಲ. ಇದು ಯಾವುದೇ ಸನ್ನಿವೇಶವನ್ನು ತನ್ನದಾಗಿಸಿಕೊಂಡು ಗಟ್ಟಿ ಬೇರುಗಳನ್ನು  ಬಿಡಬಲ್ಲದು.

                  ಸಾತ್ವಿಕತೆ ಉದಯವಾಗುವುದು ಅಹಂಕಾರದ ಮರಣದ ನಂತರ. ಆಚಾರ್ಯ ರಜನೀಷರು ಹೇಳುತ್ತಾರೆ. "ಸಾತ್ವಿಕತೆ ಇದ್ದಲ್ಲಿ ಅಹಂಕಾರ ಇರುವುದಿಲ್ಲ.  ಅಹಂಕಾರ ಇರುವಲ್ಲಿ ಸಾತ್ವಿಕತೆಗೆ ಜಾಗವೇ ಇಲ್ಲ. ಒಂದೇ ಜಾಗದಲ್ಲಿ ಎರಡು ಭಾವಗಳು ಇರಲು ಹೇಗೆ ತಾನೇ ಸಾಧ್ಯ?"    ತಮಸ್ಸು, ರಜಸ್ಸು ಮುಂತಾದ ಪರಿಕ್ರಮಗಳೆಲ್ಲ ಮುಗಿದನಂತರ ಸಾತ್ವಿಕತೆ ಕಾಣುತ್ತದೆ.  ಸಾತ್ವಿಕ ನಾಗಿ ಉಳಿಯಲು ಆಹಾರ ವಿಹಾರಗಳ ಜೊತೆಗೆ ನಡೆನುಡಿಗಳಲ್ಲಿ  ಕ್ಷಣ ಕ್ಷಣದಲ್ಲೂ ಎಚ್ಚರನಾಗಿರಬೇಕು. ಶ್ರೀ ಶಂಕರರು ಹೇಳುತ್ತಾರೆ " ಸಾಧಕನು, ಅಧ್ಯಾತ್ಮದಲ್ಲಿ  ಮೇಲೆ ಹೋದಂತ್ತೆಲ್ಲ ದಾರಿ ಕಿರಿದು ಮತ್ತು  ಜಾರಿಕೆಯದು. ಒಮ್ಮೆ ಎಚ್ಚರ ತಪ್ಪಿದರೆ ಸಾಕು ನೇರ ಪ್ರಪಾತವೆ!  ಆದ್ದರಿಂದ ಸಾಧಕನು ತನ್ನೆಲ್ಲ ಮೋಹಭಾವದ ಹೊರೆಯನ್ನು ಕಳಚುತ್ತ ಹೋದರೆ ಭಾರ ಕಡಿಮೆಯಾಗುತ್ತದೆ.  ಹಗುರವಾದಂತೆ ಮೇಲೇರುವುದು ಸುಲಭ".   ಇದನ್ನು ವಿವರಿಸಲು ಶಂಕರರು ಇನ್ನೊಂದು ಉದಾಹರಣೆ ಕೊಡುತ್ತಾರೆ "ಬೆಟ್ಟದ ಮೇಲೆ ನಿಂತು ಮಗು ಚಂಡಿನ  ಆಟ ಅಡುತ್ತಿರುತ್ತದೆ.  ಬಹಳ ಜಾಗರೂಕತೆಯಿಂದ ಆಡುತ್ತದೆ. ಏಕೆಂದರೆ, ಮಗುವಿಗೆ ಗೊತ್ತು,  ಒಮ್ಮೆ ತಪ್ಪು ಮಾಡಿದರೆ ಚಂಡು ಒಂದೇ ಕ್ಷಣದಲ್ಲಿ ಕೆಳಕ್ಕೆ ಬಿದ್ದು ಬಿಡುತ್ತದೆ."  ಹೌದು, ಸಾಧಕನು ಅಹಂಕಾರಕ್ಕೆ ವಶನಾದರೆ ಸತ್ವದ  ಬದಲಿಗೆ ಅಹಂಕಾರ ವೃದ್ಧಿಯಾಗುತ್ತದೆ. ಸತ್ವಗುಣ ಬೆಳೆದಿದೆಯೆಂಬ ಅಹಂಕಾರಕ್ಕೆ ಮೊದಲು ಬೀಳುತ್ತಾನೆ.    "ಅಹಂಕಾರ ಉದಯವಾಗಿದ್ದು ಎಲ್ಲಿಂದ   ಎಂಬುದನ್ನು ಮೊದಲು ಪ್ರಶ್ನೆ ಮಾಡು. ನಾನು ಎಂಬುದೇ ಅಹಂಕಾರದ ಬೀಜ. ಈ  'ನಾನು'  ದೇಹವೋ? ಆತ್ಮವೋ? ಎಂಬುದನ್ನು ವಿಚಾರಮಾಡು. " ಎನ್ನುತ್ತಾರೆ ಭಗವಾನ್ ರಮಣರು.

                  "ಅಹಂಕಾರದ ಮುಕ್ತಿಗಾಗಿ ಬಯಸುವವನು ವರ್ತಮಾನದಲ್ಲಿ ಬದುಕಲು ಪ್ರಾರಂಭಿಸಬೇಕು.  ಅವನಿಗೆ ನಿನ್ನೆಗಳು ಸತ್ತಿವೆ, ನಾಳೆಗಳು ಬೇಕಾಗಿಲ್ಲ.  ಇಂದಿಗೆ ಬದುಕುವವನಿಗೆ ಈ ನಾಳೆಗಳು ಅನಿವಾರ್ಯವಲ್ಲ.  ಇಂದಿಗೆ ಬದುಕಲು ಪ್ರಾರಂಭ ಮಾಡಿದಾಗ ಬೇಕುಗಳು ಕಡಿಮೆಯಾಗುತ್ತವೆ.  ಈ ಬೇಕುಗಳೇ ನಾಳೆಯನ್ನು ಸೃಷ್ಟಿ ಮಾಡುವುದು". ಎನುತ್ತಾರೆ ಡಿ ವಿ ಜಿ .
" ಅಹಂಕಾರ ಖಂಡಿತವಾಗಿಯೂ ನಿನ್ನ ಮಿತ್ರನಲ್ಲ,  ಎಂದಿಗೂ ಅವನು ನಿನ್ನ ಶತ್ರುವೇ! ಈ ಶತ್ರುವನ್ನು  ಬೇರು ಸಮೇತ ಕಿತ್ತುಬಿಡು. ಇದು ವಾಸಿಯಾಗುವ  ರೋಗವಲ್ಲ, ಇದಕ್ಕೆ ಯಾವ ಔಷಧಿಯು ಇಲ್ಲ.   ಶಸ್ತ್ರ ಚಿಕಿತ್ಸೆಯೇ ಆಗಬೇಕು. ಮನದಾಳದಿಂದ ಕಿತ್ತುಬಿಡು." ಎನ್ನುತ್ತಾರೆ ಆಚಾರ್ಯ ರಜನೀಶರು.

           ತಿಮ್ಮಗುರು ಹೀಗೆ ಹೇಳುತ್ತಾರೆ.

            ದಿವಸದಿಂ ದಿವಸಕ್ಕೆ, ನಿಮಿಷದಿಂ ನಿಮಿಷಕ್ಕೆ|  ಭವಿಷಿಯವ ಚಿಂತಿಸದೆ ಬದುಕ ನೂಕುತಿರು||
            ವಿವರಗಳ ಜೋಡಿಸುವ ಯಜಮಾನ ಬೇರಿಹನು|    ಸವೆಸು ನೀಂ ಜನುಮವನು ಮಂಕುತಿಮ್ಮ||  ೬೮೨ ||

                  ಈ ಕ್ಷಣವೇ ಅತ್ಯಂತ ಮದುರ. ಭಗವಂತ ಈ ಕ್ಷಣದಲ್ಲಿ ಏನೇನು ಕರುಣಿಸಿದ್ದಾನೋ ಅದು ಮಾತ್ರ ನನ್ನ ಪಾಲಿನ ಭಿಕ್ಷೆ, ಇದನ್ನು ಸಂಪೂರ್ಣವಾಗಿ ಆನಂದದಿಂದ ಅನುಭವಿಸುವ, ಅಹಂಕಾರದಿಂದ ಮುಕ್ತನಾಗಿ ದಿನನಿತ್ಯದಲ್ಲಿ  ಬದುಕುವ ಮನಸು ನೀಡಿ ಕರುಣಿಸೋ ಎಂದು ಭಗವಂತನಲ್ಲಿ ಅನನ್ಯ ಪ್ರಾರ್ಥನೆ. 
                   
ಹೆಚ್ ಎನ್ ಪ್ರಕಾಶ್ 
--

ವೇದೋಕ್ತ ಜೀವನ ಪಥ: ಬ್ರಾಹ್ಮಣಾದಿ ಚತುರ್ವರ್ಣಗಳು - ೫


     ಯಜುರ್ವೇದಲ್ಲಿ ತತೋ ವಿರಾಡಾಜಾಯತ || (ಯಜು.೩೧.೫.) - ಅನಂತರ ವಿರಾಟ್ ಉದ್ಭವಿಸಿತು - ಎಂದು ಹೇಳಿದೆ. ಈ ವಿರಾಟ್ ಒಂದು ಪುರುಷನ ರೂಪದಲ್ಲಿ ಊಹಿಸಲ್ಪಟ್ಟಿದೆ. ಆಮೇಲೆ ಪ್ರಶ್ನೆ ಎತ್ತಲ್ಪಟ್ಟಿದೆ.
     ಮುಖಂ ಕಿಮಸ್ಯಾಸೀತ್ ಕಿಂ ಬಾಹೂ ಕಿಮೂರೂ ಪಾದಾ ಉಚ್ಯೇತೇ || (ಯಜು.೩೧.೧೦.)  
     [ಅಸ್ಯ] ಈ ವಿರಾಟ್ ಪುರುಷನ [ಮುಖಂ ಕಿಂ ಆಸೀತ್] ಮುಖ ಯಾವುದಾಯಿತು? [ಬಾಹೂ ಕಿಂ] ಬಾಹುಗಳು ಯಾವುವು? [ಊರೂ ಪಾದೌ ಕಿಂ ಉಚ್ಯೇತೇ] ಯಾವುದು ತೊಡೆಗಳು, ಪಾದಗಳು ಎಂದು ಹೇಳಲ್ಪಟ್ಟಿತು? 
     ಈ ಪ್ರಶ್ನೆಗಳಿಗೆ ಉತ್ತರವಾಗಿ ಕೆಳಗಿನ ಮಂತ್ರವಿದೆ:-
      ಬ್ರಾಹ್ಮಣೋsಸ್ಯ ಮುಖಮಾಸೀದ್ಬಾಹೂ ರಾಜನ್ಯ ಕೃತಃ |
      ಊರೂ ತದಸ್ಯ ಯದ್ವೈಶ್ಯಃ ಪದ್ಭ್ಯಾಂ ಶೂದ್ರೋ ಅಜಾಯತ || (ಯಜು.೩೧.೧೧.)
     [ಬ್ರಾಹ್ಮಣಃ] ಬ್ರಾಹ್ಮಣನು [ಅಸ್ಯ ಮುಖಂ ಆಸೀತ್] ಈ ವಿರಾಟ್ ಪುರುಷನ ಮುಖವಾದನು. [ರಾಜನ್ಯಃ] ಕ್ಷತ್ರಿಯನು [ಬಾಹೂ ಕೃತಃ] ತೋಳುಗಳಾಗಿ ಮಾಡಲ್ಪಟ್ಟನು. [ಯತ್ ವೈಶ್ಯಃ] ವೈಶ್ಯನು ಯಾವನಿದ್ದಾನೋ [ತತ್ ಅಸ್ಯ ಊರೂ] ಅವನು ಇವನ ತೊಡೆಗಳು. [ಪದ್ಬ್ಯಾಂ] ಪಾದಗಳಿಗಾಗಿ [ಶೂದ್ರಃ ಅಜಾಯತ] ಶೂದ್ರನು ಉದ್ಭವಿಸಿದನು.
     ವಿರಾಟ್ ಪುರುಷನ ಬೇರೆ ಬೇರೆ ಅಂಗಗಳ ರೂಪದಲ್ಲಿ ವರ್ಣಗಳು ವರ್ಣಿತವಾಗಿವೆ. ರೂಪಕ ಅತ್ಯಂತ ಸಾರಗರ್ಭಿತವಾಗಿದೆ. ಮುಖದಲ್ಲಿಯೇ ಪಂಚ ಜ್ಞಾನೇಂದ್ರಿಯಗಳೂ, ವಾಗಿಂದ್ರಿಯವೂ ಅಡಗಿದೆ. ಇವು ವ್ಯಷ್ಟಿ ಶರೀರದಲ್ಲಿ ಮಾಡುವುದು ಜ್ಞಾನಸಂಬಂಧದ ಕಾರ್ಯಗಳನ್ನು. ವಾಗಿಂದ್ರಿಯ ಪರರಿಗೆ ತನ್ನ ಭಾವನೆಗಳನ್ನು ಸೂಚಿಸುವ ಸಾಧನ. ಈ ಜ್ಞಾನಕ್ಕೆ ಸಂಬಂಧಿಸಿದ ಮತ್ತು ಜ್ಞಾನ ಪ್ರಸಾರದ ಕಾರ್ಯವನ್ನು ಸಮಾಜದಲ್ಲಿ ಮಾಡುವವನೇ ಬ್ರಾಹ್ಮಣ.
     ವ್ಯಷ್ಟಿ ಶರೀರದಲ್ಲಿ ಬಾಹುಗಳ ಮುಖ್ಯ ಕಾರ್ಯ ರಕ್ಷಣೆ. ಈ ರಕ್ಷಣಾ ಕಾರ್ಯವನ್ನು ಸಮಾಜದಲ್ಲಿ ನಿರ್ವಹಿಸುವವನೇ ಕ್ಷತ್ರಿಯ.
     ತೊಡೆಗಳು ಎಂಬ ಶಬ್ದಕ್ಕೆ ಬದಲು ಅಥರ್ವವೇದದಲ್ಲಿ ಮಧ್ಯಂ ತದಸ್ಯ ಯದ್ವೈಶ್ಯಃ|| (ಅಥರ್ವ. ೧೯.೬.೬.) - ವೈಶ್ಯನು ವಿರಾಟ್ ಪರುಷನ ಮಧ್ಯಭಾಗ - ಎಂದು ಹೇಳಿ ಭಾವನೆಯನ್ನು ಸ್ಪಷ್ಟಪಡಿಸಿದೆ. ವ್ಯಷ್ಟಿಶರೀರದ ಮಧ್ಯಭಾಗ ಎಂದರೆ ಮುಂಡದಲ್ಲಿಯೇ ಜೀವನವನ್ನು ನಿರ್ವಹಿಸಲು ಆವಶ್ಯಕವಾದ ಹೃದಯ, ಶ್ವಾಸಕೋಶಗಳು, ಜಠರ, ಆಹಾರ ಜೀರ್ಣಾಂಗಗಳು, ಮಲ-ಮೂತ್ರ ವಿಸರ್ಜನಾಂಗಗಳು, ಪ್ರಜನನೇಂದ್ರಿಯ ಎಲ್ಲವೂ ಇವೆ. ಇವೆಲ್ಲಾ ಮಾಡುವ ಕಾರ್ಯಗಳು ವಿವಿಧವಾದರೂ, ಆಹಾರ ಪಚನ, ಸರ್ವೇಂದ್ರಿಯಗಳಿಗೂ ರಕ್ತದಾನ ಇವೇ ಅತಿ ಮುಖ್ಯವೆನ್ನಬಹುದು. ಸಮಾಜದಲ್ಲಿ ಇದೇ ರೀತಿ ಸಂಪದರ್ಜನ ಮತ್ತು ವಿಭಜನ ಮಾಡುವವನು ವೈಶ್ಯನು.
     ವ್ಯಷ್ಟಿಶರೀರದಲ್ಲಿ ಪಾದಗಳ ಸ್ಥಾನ ಕೀಳುದರ್ಜೆಯದಲ್ಲ. ಸಂಪೂರ್ಣ ಶರೀರ ನಿಂತಿರುವುದೇ ಪಾದಗಳ ಮೇಲೆ. ಉದ್ದಿಷ್ಟ ಸ್ಥಾನಕ್ಕೆ ದೇಹವನ್ನು ಒಯ್ಯುವುದೂ ಪಾದಗಳೇ! ಸಮಾಜದಲ್ಲಿ ಇದೇ ರೀತಿ ಶಾರೀರಿಕ ಶ್ರಮ ಮಾಡುವವನೇ ಶೂದ್ರ. 
     ರೂಪಕ ಅತಿ ಭವ್ಯ. ದೇಹಕ್ಕೆ ಯಾವ ಅಂಗ ಬೇಕು, ಯಾವ ಅಂಗ ಬೇಡ? ಎಲ್ಲವೂ ತಮ್ಮ ತಮ್ಮ ಸ್ಥಾನದಲ್ಲಿ ಪ್ರಧಾನವೇ! ಯಾವುದಿಲ್ಲದಿದ್ದರೂ ಶರೀರ ಅಪೂರ್ಣವೇ. ತಲೆ ಮೇಲು, ಕಾಲು ಕೀಳು - ಎಂದು ಭಾವಿಸುವುದು ಮಹಾನ್ ಭ್ರಮೆ. ಕಾಲಿಗೆ ಮುಳ್ಳು ಚುಚ್ಚಿದರೆ ಮೊದಲು 'ಹಾ' ಎನ್ನುವುದು ಬಾಯಿ-ಬ್ರಾಹ್ಮಣ; ಆ ಮುಳ್ಳನ್ನು ಕಿತ್ತೆಸೆಯುವುದು ಬಾಹು-ಕ್ಷತ್ರಿಯ. ಪ್ರತಿಯೊಂದು ಅಂಗ ಪರಸ್ಪರಾಶ್ರಿತ. ಇದೇ ರೀತಿ ಸಮಾಜದಲ್ಲಿ ಬ್ರಾಹ್ಮಣರು. ಕ್ಷತ್ರಿಯರು, ವೈಶ್ಯರು, ಶೂದ್ರರು ಪರಸ್ಪರ ವೈರಿಗಳಲ್ಲ, ಪರಸ್ಪರ ಆಶ್ರಿತರು.
     ಬೌದ್ಧಿಕ ಪರಿಶ್ರಮ, ಬಾಹುಬಲ ಸಂಯೋಜನ, ವ್ಯಾಪಾರೋದ್ಯಮ, ಕೃಷಿಸಾಧನ ಹಾಗೂ ಶಾರೀರಿಕ ಪರಿಶ್ರಮ -  ಈ ನಾಲ್ಕು ಸೇವಾಸಾಧನಗಳಿವೆ. ಇವನ್ನು ವರ್ಣಗಳು ಎನ್ನುತ್ತಾರೆ. ವರ್ಣ ಎಂಬ ಶಬ್ದದ ಅರ್ಥ 'ಆರಿಸಿಕೊಳ್ಳುವ ತತ್ತ್ವ' ಎಂದು. ವರ್ಣ, ಜಾತಿಯಂತೆ ಹುಟ್ಟಿ ಬರುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಗುಣ-ಕರ್ಮ-ಸ್ವಭಾವಕ್ಕನುಸಾರ, ತನ್ನ ವರ್ಣವನ್ನು ಆರಿಸಿಕೊಳ್ಳುತ್ತಾನೆ. ಹುಟ್ಟಿದ ಕುಲ, ಈ ಬಗೆ ಆರಿಸುವಿಕೆಗೆ ನೆರವಾಗಬಹುದು. ಅಂದರೆ, ಬ್ರಾಹ್ಮಣನ ಮಗ ಬ್ರಾಹ್ಮಣನಾಗಬಹುದು, ಆಗದೆಯೂ ಇರಬಹುದು. ವರ್ಣದಲ್ಲಿ ವ್ಯಕ್ತಿಗತ ಸಾಮರ್ಥ್ಯಾಭಿರುಚಿಗಳಿಗೆ ಪ್ರಾಧಾನ್ಯವೇ ಹೊರತು ಕುಲ ಅಥವಾ ಪರಂಪರೆಗಲ್ಲ. ಕೆಲವರಿಗೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ಶಬ್ದಗಳು ರುಚಿಸದಿರಬಹುದು. ಆದರೆ, ರಾಷ್ಟ್ರ ಆಸ್ತಿಕವೇ ಆಗಿರಲಿ, ನಾಸ್ತಿಕವೇ ಆಗಿರಲಿ, ಬುದ್ಧಿಜೀವಿ, ಶಕ್ತಿಜೀವಿ, ವ್ಯಾಪಾರೋದ್ಯಮಜೀವಿ, ಶ್ರಮಜೀವಿ ಇದ್ದೇ ಇರುತ್ತಾರೆ. ಈ ನೈಸರ್ಗಿಕ ವಿಭಾಗಗಳಿಗೆ ಸೊನ್ನೆ ಸುತ್ತಿ, ಎಲ್ಲರ ತಲೆಗೂ ಒಂದೇ ವೃತ್ತಿಯನ್ನು ಸುತ್ತುವ ಪ್ರಯತ್ನ ಎಂದಿಗೂ ಸಫಲವಾಗದು.
***************
ವೇದೋಕ್ತ ಜೀವನ ಪಥ: ಬ್ರಾಹ್ಮಣಾದಿ ಚತುರ್ವರ್ಣಗಳು - ೪ ಕ್ಕೆ ಲಿಂಕ್:
 http://vedajeevana.blogspot.in/2011/12/blog-post_15.html

ಈ ಸಂಸಾರವೆಂಬ ಸಾವಿನ ಮನೆಯಿಂದ ಕಾಪಾಡು

ಶ್ರೀ ಸುಬ್ರಹ್ಮಣ್ಯರು  ವಿವೇಕ ಚೂಡಾಮಣಿ    ಗ್ರಂಥದಿಂದ ಆಯ್ದ ಭಾಗಗಳನ್ನು ಅದ್ಭುತವಾಗಿ ವೇದಸುಧೆಯಲ್ಲಿ ಬರೆಯುತ್ತಿದ್ದಾರೆ. ವೇದಸುಧೆಯ ಉದ್ಧೆಶವಾದರೋ ಒಂದು ಸದ್ವಿಚಾರಗಳ ಪ್ರಕಟವಾದಾಗ ನಮ್ಮ ಜೀವನಕ್ಕೆ ಅದು ಎಷ್ಟು ಉಪಯೋಗವಾಗುತ್ತದೆ , ಎಂಬುದು ತಿಳಿಯಬೇಕು. ಅಂದರೆ ಅದರ ಬಗ್ಗೆ ಒಂದಿಷ್ಟು ಚರ್ಚೆ ಆದಾಗ  ಅದರ ಹೂರಣದ ಅರಿವಾಗುತ್ತದೆ. ಇಂದಿನ   ವಿವೇಕ ಚೂಡಾಮಣಿಯ ಭಾಗವನ್ನು  ಓದಿದ ನಾನು ಅಲ್ಲಿ ಪ್ರತಿಕ್ರಿಯಿಸಿದರೆ  ಉದ್ದವಾದೀತು, ಎಂಬ ಆತಂಕದಿಂದ ಅದನ್ನೇ ಒಂದು ಲೇಖನವಾಗಿ ಪ್ರಕಟಿಸಿರುವೆ 

              ಇದೊಂದು ಅತ್ಯಂತ ಯೋಗ್ಯವಾದ ಚಿಂತನ-ಮಂಥನ ಮಾಡಬೇಕಾದ ವಿಷಯ.ಸಂಸಾರವನ್ನು ಸಾವಿನ ಮನೆ ಎಂದರು. ವೇದಾಂತಿ ಗಳನ್ನು  ಈ ಬಗ್ಗೆ ಆಕ್ಷೇಪಿಸುವುದುಂಟು. ಶಂಕರರು "  ಸಂಸಾರಂ ದು:ಖಮಯಂ ,ಶಾರೀರಂ ರೋಗಮಯಂ " ಎಂದೆಲ್ಲಾ ಹೇಳಿದರಲ್ಲಾ! ಹಾಗಾದರೆ ಸಂಸಾರವೆಂದರೆ ಬರೀ ದ:ಖ ವೆ? , ಶರೀರವು    ಯಾವಾಗಲೂ ರೋಗಮಯವೇ?  ಅದೇ ರೀತಿ ಇಲ್ಲಿ ಸಂಸಾರವನ್ನು ಸಾವಿನ ಮನೆ ಎಂದಿದ್ದಾರೆ. 
ಈ ಬಗ್ಗೆ ಚರ್ಚಿಸ ಬೇಕಾದರೆ  ಮೊದಲುನಿಸ್ಸಂಕೋಚವಾಗಿ, ನಿರ್ಮಲ ಮನಸ್ಸಿನಿಂದ ಮನದಾಳದ ಮಾತಿಗೆ ಅಕ್ಷರ ಕೊಡಬೇಕು. ಸಾಮಾನ್ಯವಾಗಿ ಬರೆಯುವ ಬರಹವೇ ಬೇರೆಯಾಗಿರುತ್ತದೆ, ಮನದೊಳಗಿನ ವಿಚಾರವೇ ಬೇರೆಯಾಗಿರುತ್ತದೆ. ಅದೂ ತನ್ನ ಸಂಸಾರದ ವಿಚಾರದಲ್ಲಿ ಬರೆದಾಗ ಓದುಗರು ಏನೆಂದು ಕೊಂಡಾರು? ಎಂಬ ಭಯ! ಅನುಭವವೆಂದರೆ ಮೊದಲಿಗೆ ಅವನದ್ದು, ನಂತರ ಕಂಡಿದ್ದು, ಕೇಳಿದ್ದು. ಅದರಲ್ಲಿ ಸ್ವಂತ ಅನುಭವವೇ ಹೆಚ್ಚು  ಸತ್ಯ.  ಇನ್ನು ವಿಷಯಕ್ಕೆ ನೇರ ಬರುವೆ.

ನಿಜ ಹೇಳಿ, ಸಂಸಾರವೆಂಬುದು ಸ್ವರ್ಗವೋ? ಅಥವಾ ಸಾವಿನ ಮನೆಯೋ? 

ಮನುಷ್ಯನಿಗೆ ಸಂಸಾರದ ಅನುಭವ ಆರಂಭವಾಗುವುದು ಜನ್ಮದಿ೦ದಲೇ ಆದರೂ  ಬ್ರಹ್ಮಚರ್ಯ ಜೀವನದಲ್ಲಿ  ಸಂಸಾರದ ಅನುಭವ ಅಷ್ಟರ ಮಟ್ಟಿಗೆ ಆಗಲಾರದು. ತಂದೆ ತಾಯಿಯ ಸುಖ ದು:ಖಗಳನ್ನು  ಕಣ್ಣಾರೆ ನೋಡುತ್ತಿದ್ದರೂ ಅದಕ್ಕೂ ಮೀರಿದ ಪತಿ -ಪತ್ನಿಯರ ಜೀವನಾನುಭವವೇ ಬೇರೆ. ಅದರಲ್ಲಿ  ಎಲ್ಲವೂ ಇದೆ. ಸಾಮಾನ್ಯವಾಗಿ ವಿವಾಹವಾಗುವಾಗ ಗೃಹಮೈತ್ರಿ ಕೂಟ ವೆಂಬುದನ್ನು ನೋಡುತ್ತಾರೆ. ಅದರ ಬಗ್ಗೆ ನನಗೆ ತಿಳಿಯದು . ಬಹುಶ: ಜೀವನ ಪರ್ಯಂತ ಮೈತ್ರಿಯಿಂದ ,ಪರಸ್ಪರ ಹೊ೦ದಾಣಿಕೆಯಿ೦ದ ಸಾಮರಸ್ಯದಿಂದ ಸುಖವಾಗಿ ಬಾಳಲು , ಪತಿ-ಪತ್ನಿಯರ ಗುಣ ಸ್ವಭಾವಗಳನ್ನು  ಹೊ೦ದಿಸಿಕೊ೦ಡು ವಿವಾಹ ಮಾಡುವ ಪ್ರಕ್ರಿಯೆ ಇದ್ದಿರಬಹುದು. ಜಾತಕದಿ೦ದ ಅದೆಷ್ಟು  ತಿಳಿಯುತ್ತದೋ ನನಗೆ ಅರಿವಿಲ್ಲ. ಅಂತೂ ಜಗತ್ತನ್ನು ನೋಡುವಾಗ  ಬಹುಪಾಲು ಸಂಸಾರಗಳು ನೋವಿನ ನರಕಗಳಾಗಿ ಕೊನೆಗೆ ಆತ್ಮಹತ್ಯೆ ಯಲ್ಲಿ ಕೊನೆಗಾಣುವ ನೂರಾರು ಉಧಾಹರಣೆ ಗಳನ್ನೂ ನೋಡಬಹುದು. ಅಥವಾ ಸಂಸಾರತೊರೆದು ಸನ್ಯಾಸ ಸ್ವೀಕರಿಸಿರುವ ಉಧಾಹರ ಣೆಗಳೂ      ಇಲ್ಲದಿಲ್ಲ. 

ಹೀಗೇಕೆ? ಎಂದು ಚಿಂತಿಸಿದಾಗ  ಸಂಸಾರ ನಿರ್ವಹಣೆಗೆ ಸರಿಯಾದ ಮಾರ್ಗದರ್ಶನದ ಕೊರತೆ , ಅಥವಾ ಅರಿವಿನ ಕೊರತೆ ,ಎಂದು ಹೇಳಬಹುದು. 

ವೇದದ ಬಗ್ಗೆ ತಿಳಿಯುತ್ತಾ ಹೋದಾಗಲೆಲ್ಲಾ  ಸುಖೀ ಸಂಸಾರಕ್ಕೆ ಅಗತ್ಯವಾದ ಹಲವು ಮಂತ್ರಗಳು ಅಲ್ಲಿವೆ.  ವೇದಾಧ್ಯಾಯೀ ಸುಧಾಕರಶರ್ಮರ ಉಪನ್ಯಾಸಗಳನ್ನು ಕೇಳುವಾಗ  ವೇದಗಳಲ್ಲಿ   ಎಲ್ಲವೂ ಇದೆ ಎಂಬ ಭಾವ ಮೂಡುತ್ತಾದರೂ  ಅವುಗಳನ್ನು ಅರ್ಥೈಸುವವರಾರು? ವೇದವೆ೦ದರೆ ಒ೦ದಿಷ್ಟು ಮ೦ತ್ರಗಳನ್ನು  ಕ೦ಠಪಾಠ ಮಾಡುವುದು ,ಎ೦ದಷ್ಟೇ ಹಲವರ ನಿಲುವು. ಆದರೆ  "ಅದೊ೦ದು ಜೀವನ ಸೂತ್ರ " ಎನ್ನುತ್ತಾರೆ, ಸುಧಾಕರ ಶರ್ಮರು. ಇಲ್ಲಿ ವೇದಾ೦ತ ಕ್ಕೂ   ವೇದಕ್ಕೂ  ಒಂದಿಷ್ಟು  ಗೊ೦ದಲ ನಿರ್ಮಾಣವಾಗುತ್ತೆ.  ವೇದಾ೦ತವೆ೦ಬುದು ವೇದದ ಕಡೆಯ ಭಾಗವೆ೦ದು  ತಿಳಿಯಬೇಕಾದರೆ ಮೊದಲು ವೇದ ವನ್ನು   ತಿಳಿಯಬೇಕಲ್ಲವೇ?   ಆ ಕೆಲಸ ಆಗಬೇಕಾಗಿದೆ. ಸ೦ಸಾರವ೦ಬುದು  " ಸಾವಿನ ಮನೆಯೋ ಅಥವಾ ನೆಮ್ಮದಿಯ ಗೂಡೋ" ಎ೦ಬುದು ಸ್ಪಷ್ಟ ವಾಗಬೇಕಾದರೆ ನಮಗೆ ವೇದ ಮತ್ತು ವೇದಾ೦ತದ ಅರಿವು ಇರಬೇಕಾಗುತ್ತದೆ.  ಇ೦ದಿನ ಪರಿಸ್ಥಿತಿಯಲ್ಲಿ ವೇದಸುಧೆಗೆ ವೇದಾ೦ತ ತಿಳಿಸುವವರು ಹಲವರು ಲಭ್ಯ , ಆದರೆ ವೇದದ ತಿರುಳನ್ನು  ಸರಳವಾಗಿ ತಿಳಿಸಿ ಜನರ ನೆಮ್ಮದಿಯ ಬಾಳಿಗೆ ಅನುಕೂಲವಾಗುವವರು ಬೇಕು. 

         ಪತಿ ಪತ್ನಿಯರ ಮನಸ್ಥಾಪದಲ್ಲಿ  ಆತ್ಮಹತ್ಯೆ ಮಾಡಿಕೊ೦ಡ ಮಗನ ಭಾವಚಿತ್ರ ದ ಮು೦ದೆ ಕಣ್ಣೀರಿಡುತ್ತಿರುವ ತಾಯಿ

ದುರ್ಬಲ ಮನಸ್ಸಿನವರು ಪ್ರಾಣಕ್ಕೆ ಸ೦ಚಕಾರ ತ೦ದು ಕೊಳ್ಳುತ್ತಾರೆ , ಗಟ್ಟಿಮನಸ್ಸಿನವರು ಸ೦ಸಾರ ದೂಡುತ್ತಾರೆ. ಅಷ್ಟೇ. ನಿಜಕ್ಕೂ ಇದೊ೦ದು  ನಮ್ಮ ಸಮಾಜದ ದೊಡ್ಡ ಸಮಸ್ಯೆಯೇ ಹೌದು. ಇದಕ್ಕಿ೦ತಲೋ  ಹೆಚ್ಚು ಆತ೦ಕದ  ವಿಷಯವೆ೦ದರೆ  ವಿದ್ಯಾರ್ಥಿಗಳ ಆತ್ಮಹತ್ಯೆ! ಚಿಕ್ಕಪುಟ್ಟ  ವಿಷಯಗಳಿಗೆ ಜೀವನಕ್ಕೆ ಕೊನೆ ಎಳೆಯುತ್ತಿರುವ ನೂರಾರು  ಉಧಾಹರಣೆಗಳಿವೆ.         ಇದಕ್ಕೆ ಕಾರಣ, ಆತ್ಮಸ್ಥೈರ್ಯದ ಕೊರತೆ. ಇವೆಲ್ಲಕ್ಕೂ ಪರಿಹಾರ ವೇದದಲ್ಲಿದೆ. ತಿಳಿಸಿ  ಕೊಡುವವರಿಗಾಗಿ  ನಾವು ಹುಡುಕಬೇಕಿದೆ. ಓದುಗರೂ ಕೂಡ  ನಮ್ಮ ಪ್ರಯತ್ನಕ್ಕೆ ನೆರವಾಗಬಹುದು.