Pages

Saturday, December 18, 2010

ವೇದೋಕ್ತ ಜೀವನ ಪಥ: ಜೀವಾತ್ಮ ಸ್ವರೂಪ -2

     ವೇದಗಳ ಸಿದ್ಧಾಂತದ ಪ್ರಕಾರ, ಚೇತನ ಜೀವಾತ್ಮರು ವಿರಾಟ್ ಚೇತನದಿಂದ ಸರ್ವಥಾ ಬೇರೆಯಾದ ಸ್ವತಂತ್ರ ತತ್ವಗಳು. ಋಗ್ವೇದದ ಈ ಕರೆಯನ್ನು ಗಮನವಿತ್ತು ಆಲಿಸಿರಿ:-


ಕೋ ದದರ್ಶ ಪ್ರಥಮಂ ಜಾಯಮಾನಮಸ್ಥನ್ವಂತಂ ಯದನಸ್ಥಾ ಬಿಭರ್ತಿ|
ಭೂಮ್ಯಾ ಅಸುರಸೃಗಾತ್ಮಾ ಕ್ವ ಸ್ವಿತ್
ಕೋ ವಿದ್ವಾಂಸಮುಪ ಗಾತ್ ಪ್ರಷ್ಟುಮೇತತ್|| (ಋಕ್. ೧.೧೬೪.೪)


     [ಯತ್ ಅನಸ್ಥಾ] ಮೂಳೆಗಳಿಲ್ಲದ ಯಾವ ಚೇತನನು [ಅಸ್ಥನ್ವಂತಮ್] ಮೂಳೆಗಳಿಂದ ಕೂಡಿದ ದೇಹವನ್ನು [ಬಿಭರ್ತಿ] ಧರಿಸುತ್ತಾನೋ [ಜಾಯಮಾನಂ ಪ್ರಥಮಮ್] ಜನ್ಮವೆತ್ತುವ ಆ ಶ್ರೇಷ್ಠ ಅಸ್ತಿತ್ವವನ್ನು [ಕೋ ದದರ್ಶ] ಯಾವನು ನೋಡುತ್ತಾನೆ? [ಭೂಮ್ಯಾ] ಭೌತಿಕ ಜಗತ್ತಿನಿಂದ [ಅಸುಃ ಅಸೃಕ್] ಪ್ರಾಣ-ರಕ್ತ-ಮಾಂಸಗಳೇನೋ ಹುಟ್ಟುತ್ತವೆ. [ಆತ್ಮಾ ಕ್ವ ಸ್ವಿತ್] ಆತ್ಮನು ಎಲ್ಲಿಂದ ಬರುತ್ತಾನೆ? [ಏತತ್ ಪ್ರಷ್ಟುಮ್] ಇದನ್ನು ಕೇಳಲು [ಕಃ] ಯಾವನು [ವಿದ್ವಾಂಸಂ ಉಪಗಾತ್] ವಿದ್ವಾಂಸನ ಬಳಿಗೆ ಹೋಗುತ್ತಾನೆ?
ಈ ಜಿಜ್ಞಾಸೆಗೆ ಪ್ರೇರಣೆ ನೀಡಿ ಆಮೇಲೆ ವೇದಗಳು ಮಾರ್ಗದರ್ಶನ ಮಾಡುತ್ತವೆ.


ಅಯಂ ಹೋತಾ ಪ್ರಥಮಃ ಪಶ್ಯತೇಮಮಿದಂ ಜ್ಯೋತಿರಮೃತಂ ಮರ್ತ್ಯೇಷು|
ಅಯಂ ಸ ಜಜ್ಞೇ ಧ್ರುವ ಆ ನಿಷತ್ತೋ ಮರ್ತ್ಯಸ್ತನ್ವಾ ವರ್ಧಮಾನಃ|| (ಋಕ್. ೬.೯.೪)


    [ಅಯಂ] ಈ ಜೀವಾತ್ಮನು [ಪ್ರಥಮಃ ಹೋತಾ] ಮೊದಲನೆಯ ಆದಾನ-ಪ್ರದಾನಕರ್ತನು. [ಇಮಂ ಪಶ್ಯತ] ಇವನನ್ನು ನೋಡಿರಿ. [ಮರ್ತ್ಯೇಷು] ಮೃತ್ಯುವಿಗೀಡಾಗುವ ಭೌತಿಕ ಶರೀರದಗಳಲ್ಲಿ [ಇದಂ ಅಮೃತಂ ಜ್ಯೋತಿಃ] ಇದು ಅಮರ ಜ್ಯೋತಿಯಾಗಿದೆ. [ಅಯಂ] ಇವನು [ಸ ಧೃವಃ] ಆ ಶಾಶ್ವತನಾದ ಆತ್ಮನು. [ಅಮರ್ತ್ಯಃ] ಅಮರನಾದ ಆ ಆತ್ಮನು [ಆ ನಿಷತ್ತಃ] ಜಗತ್ತಿನಲ್ಲಿ ಕುಳಿತು [ತನ್ವಾ ವರ್ಧಮಾನಃ] ದೇಹದಿಂದ ವೃದ್ಧಿ ಹೊಂದುತ್ತಾ [ಜಜ್ಞೇ] ಪ್ರಕಟನಾಗುತ್ತಾನೆ.
     ಪರಿಚ್ಛಿನ್ನ ಚೇತನನಾದ ಜೀವಾತ್ಮನು ಶರೀರದ ಭಾಗವಲ್ಲ. ಅದರಿಂದ ಸರ್ವಥಾ ಭಿನ್ನನು. ಆತ್ಮ ಚೇತನ, ದೇಹ ಜಡ. ಆತ್ಮ ಅಮರ, ದೇಹ ಮರಣಕ್ಕೀಡಾಗುವ ವಸ್ತು. ಶರೀರದಲ್ಲಿ ಪಂಚ ಜ್ಞಾನೇಂದ್ರಿಯಗಳು, ನಾಲ್ಕು ಅಂತಃಕರಣಗಳು ಹೋತೃಗಳಾಗಿವೆ, ಕೊಡುವ ತೆಗೆದುಕೊಳ್ಳುವ ಅಂಗಗಳಾಗಿವೆ. ಆದರೆ ಅವೆಲ್ಲಾ ಎಷ್ಟೇ ಚೆನ್ನಾಗಿದ್ದರೂ ಪ್ರಥಮ ಹೋತೃವಾದ, ಮೊದಲನೆಯ ಆದಾತೃ-ಪ್ರದಾತೃವಾದ ಆತ್ಮನಿಲ್ಲದಿದ್ದರೆ, ಶರೀರ ಆರಿಹೋದ ದೀಪದಂತೆ ಅಪ್ರಯೋಜಕ, ನಗರದಿಂದ ಹೊರಸಾಗಿಸಲರ್ಹವಾದ ಶವ ಮಾತ್ರ. ಆತ್ಮನು ಶರೀರದಲ್ಲಿ ಪ್ರವಿಷ್ಟನಾಗುವುದು ಪ್ರಭುವಿನ ಆದೇಶದಂತೆ ಉತ್ಕರ್ಷ ಸಾಧಿಸುವುದಕ್ಕೆ. ಕೇವಲ ತಿನ್ನುವುದಕ್ಕೆ, ಕುಡಿಯುವುದಕ್ಕಲ್ಲ.