Pages

Thursday, April 10, 2014

ವಿಜ್ಞಾನ ಇಷ್ಟೊಂದು ಮುಂದುವರೆದಿದೆ, ಜ್ಞಾನದ ಹಾತೊರೆಯುವಿಕೆ ಎಲ್ಲೆಲ್ಲಿಯೂ ಕಾಣಬರುತ್ತದೆ, ನಮ್ಮ ಋಷಿಮುನಿಗಳ ಚಿಂತನೆಯನ್ನು ತಿಳಿಯಲು ವಿಶ್ವದ ಜನರು ಕಾತುರರಾಗಿ ಭಾರತದ ಕಡೆ ನೋಡುತ್ತಿದ್ದಾರೆ. ಆದರೆ.......................

೧. ಇನ್ನೂ ನಮ್ಮಲ್ಲಿ ಮೌಢ್ಯ ಹರಿದಿಲ್ಲ

೨. ಕಟ್ಟುಕತೆಗಳಿಗೇ ವೇದಕ್ಕಿಂತ ಹೆಚ್ಚು ಮಾನ್ಯತೆ ಕೊಡುವ ದೊಡ್ದ ದೊಡ್ದ ವಿದ್ಯಾವಂತರೆನಿಸಿಕೊಂಡವರು ನಮ್ಮಲ್ಲಿಯೇ ಇದ್ದಾರೆ.

೩. ಅಜ್ಯೇಷ್ಠಾಸೋ ಅಕನಿಷ್ಠಾಸ ಏತೇ ಸಂ ಭ್ರಾತರೋ ವಾವೃಧು: ಸೌಭಗಾಯ|
ಯುವಾ ಪಿತಾ ಸ್ವಪಾ ರುದ್ರ ಏಷಾಂ ಸುದುಘಾ ಪೃಶ್ನಿ: ಸುದಿನಾ ಮರುದ್ಭ್ಯ: ||
[ಋಕ್ ೫.೬೦.೫]
ಯಾರೂ ದೊಡ್ದವರಲ್ಲಾ,ಯಾರೂ ಚಿಕ್ಕವರಲ್ಲ.ಭೂತಾಯಿಯ ಮಕ್ಕಳು ನಾವು,ಪರಮೇಶ್ವರನೇ ನಮ್ಮ ತಂದೆ. ನಾವೆಲ್ಲಾ ಸೋದರೆಂದು ಸಾರುವ ಋಗ್ವೇದದ ಈ ಮಂತ್ರಕ್ಕೆ ವೇದ ತಿಳಿದವರೇ ಅಪಚಾರ ಮಾಡುತ್ತಿಲ್ಲವಾ?

೪. ವೇದದ ಹೆಸರು ಹೇಳಿದೊಡನೆ ಉರಿದು ಬೀಳುವ ಜನರು ಒಂದು ಕಡೆ, ವೇದವನ್ನು ಅರಿತವರಿಂದಲೇ ವೇದ ವಿರೋಧಿ ನಡೆ ಮತ್ತೊಂದೆಡೆ.ಇದರಿಂದ ಸಮಾಜ ಸೊರಗಿಲ್ಲವೇ?

೫. ಅತ್ಯಂತ ದೊಡ್ದ ದೊಡ್ದ ಪದವೀ ಪಡೆದವರೂ ಕೂಡ ವೇದಕ್ಕೆ ವಿರುದ್ಧವಾದ ಅಂದರೆ ಅಜ್ಞಾನದ ಅಂಧಕಾರದಲ್ಲಿ ಮುಳುಗಿಲ್ಲವೇ? ನಮಗೆ ನಾವೇ ಪ್ರಶ್ನೆ ಹಾಕಿಕೊಳ್ಳಬೇಡವೇ?

೬. ನಿಜವನ್ನು ದೇವರಮನೆಯಲ್ಲಿಟ್ಟು ಪೂಜೆ ಮಾಡುವ ವಿದ್ಯಾವಂತರೆನಿಸಿಕೊಂಡವರು ನಿಜವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಅವರ ಉದ್ಧಾರವೂ ಆಗುತ್ತದೆ,ಸಮಾಜದ ಉದ್ಧಾರವೂ ಆಗುತ್ತದೆ.

೭. ಭಾರತದಲ್ಲಿ ವೇದದ ನಿಜವಾದ ಅರಿವುಂಟಾದರೆ ಅದು ಉದ್ಧಾರವಾಗುವುದರಜೊತೆಗೆ ವಿಶ್ವವನ್ನೂ ಮೇಲೆತ್ತುವ ಶಕ್ತಿ ಭಾರತಕ್ಕಿದೆ.

೮. ಆದರೆ ಕಟ್ಟು ಕತೆಗಳನ್ನೇ ವೇದದ ಹೆಸರಿನಲ್ಲಿ ಪಾಶ್ಚಾತ್ಯರಿಗೆ ತಿಳಿಸಿ ನಿಜವನ್ನು ಗಂಟುಕಟ್ಟಿಟ್ಟಿರುವ so called ವಿದ್ವಾಂಸರೇ ದಯಮಾಡಿ ವೇದಕ್ಕೆ ಅಪಚಾರ ಮಾಡಬೇಡಿ ತನ್ಮೂಲಕ ನಿಮಗೇ ನೀವು ದ್ರೋಹ ಮಾಡಿಕೊಳ್ಳಬೇಡಿ..

Tuesday, April 8, 2014

ಇತಿಹಾಸದ ನೈಜ, ಜೀವಂತ ಪ್ರತಿನಿಧಿ: ೧೧೮ನೆಯ ವರ್ಷಕ್ಕೆ ಕಾಲಿರಿಸಿರುವ ಪಂ. ಸುಧಾಕರ ಚತುರ್ವೇದಿ

     ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮದಿನದಂದೇ ಪ್ರಖರ ಸತ್ಯವಾದಿ, ನಂಬಿದ ಧ್ಯೇಯಕ್ಕಾಗಿ ಟೀಕೆ, ಟಿಪ್ಪಣಿಗಳಿಗೆ ಅಂಜದೆ ಹಿಡಿದ ಹಾದಿಯಲ್ಲಿಯೇ ಅಳುಕದೆ ಮುಂದುವರೆದು, ಸತ್ಯಪ್ರಸಾರ ಮಾಡುತ್ತಿರುವ ಕರ್ಮಯೋಗಿ, ಶತಾಯು ಪಂಡಿತ ಸುಧಾಕರ ಚತುರ್ವೇದಿಯವರ ಜನ್ಮದಿನವೂ ಆಗಿರುವುದು ವಿಶೇಷವೇ ಸರಿ. ಈ ರಾಮನವಮಿಗೆ (೮-೦೪-೨೦೧೪) ೧೧೭ ವಸಂತಗಳನ್ನು ಕಂಡು ೧೧೮ನೆಯ ವರ್ಷಕ್ಕೆ ಕಾಲಿರಿಸಿರುವ ಅವರಿಗೆ ಶಿರಬಾಗಿ ಪ್ರಣಾಮಗಳನ್ನು ಸಲ್ಲಿಸುತ್ತಾ ಈ ಕೆಲವು ಸಾಲುಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. 
     ಪಂಡಿತ ಸುಧಾಕರ ಚತುರ್ವೇದಿಯವರ ಪೂರ್ವಿಕರು ತುಮಕೂರಿನ ಕ್ಯಾತ್ಸಂದ್ರದವರಾದರೂ ಇವರು ಹುಟ್ಟಿದ್ದು, ಬೆಳೆದಿದ್ದು ಎಲ್ಲಾ  ಬೆಂಗಳೂರಿನಲ್ಲಿಯೇ. ಶಿಕ್ಷಣ ಇಲಾಖೆಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದ ಶ್ರೀ ಟಿ.ವಿ. ಕೃಷ್ಣರಾವ್ ಮತ್ತು  ಶ್ರೀಮತಿ ಲಕ್ಷ್ಮಮ್ಮನವರ ಮಗನಾಗಿ ೧೮೯೭ರ ರಾಮನವಮಿಯಂದು ಬಳೇಪೇಟೆಯಲ್ಲಿದ್ದ ಮನೆಯಲ್ಲಿ ಜನಿಸಿದ ಇವರು ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರಾಗಿದ್ದರೂ ಅರ್ಥವಿಲ್ಲದ ಕುರುಡು ಸಂಪ್ರದಾಯಗಳನ್ನು ಒಪ್ಪದಿದ್ದವರು, ಸರಿ ಅನ್ನಿಸಿದ್ದನ್ನು ಮಾತ್ರ ಮಾಡಿದವರು. ನಾನು ಹಾಸನದವನೆಂದು ತಿಳಿದಾಗ, ಪಂಡಿತರು ತಮ್ಮ ತಂದೆ ಹಾಸನದ ಶಿಕ್ಷಣ ಇಲಾಖೆಯಲ್ಲೂ ಕೆಲಸ ನಿರ್ವಹಿಸಿದ್ದು ತಾವು ೬-೭ ವರ್ಷದವರಾಗಿದ್ದಾಗ -ಅಂದರೆ ಸುಮಾರು ೧೧೦ ವರ್ಷಗಳ ಹಿಂದೆ-  ಹಾಸನದ ದೇವಿಗೆರೆ ಸಮೀಪದಲ್ಲಿ ಬಾಡಿಗೆ ಮನೆಯೊಂದರಲ್ಲಿ ಕೆಲವು ಸಮಯ ಇದ್ದೆವೆಂದು ನೆನಪಿಸಿಕೊಂಡಿದ್ದರು.  ಅಪ್ಪಟ ಕನ್ನಡಿಗರಾದ ಪಂ. ಸುಧಾಕರ ಚತುರ್ವೇದಿಯವರು ತಮ್ಮ ೧೩ನೆಯ ವಯಸ್ಸಿನಲ್ಲಿಯೇ  ಉತ್ತರ ಭಾರತದ ಹರಿದ್ವಾರದ ಹತ್ತಿರದ ಕಾಂಗಡಿ ಗುರುಕುಲಕ್ಕೆ ಸೇರಿ ಉಪನಿಷತ್ತು, ವ್ಯಾಕರಣ, ಛಂದಸ್ಸು, ಗಣಿತ, ಜ್ಯೋತಿಷ್ಯ, ಷಡ್ದರ್ಶನಗಳು ಸೇರಿದಂತೆ ವೇದಾಧ್ಯಯನ ಮಾಡಿದವರು. ಮಹರ್ಷಿ ದಯಾನಂದ ಸರಸ್ವತಿಯವರ ವಿಚಾರಗಳಿಂದ ಪ್ರಭಾವ9ತರಾಗಿದ್ದು, ಸ್ವಾಮಿ ಶ್ರದ್ಧಾನಂದರ ಪ್ರೀತಿಯ ಶಿಷ್ಯರಾಗಿ ಬೆಳೆದವರು. ನಾಲ್ಕೂ ವೇದಗಳನ್ನು ಅಧ್ಯಯಿಸಿದ ಅವರು ನಿಜ ಅರ್ಥದಲ್ಲಿ ಚತುರ್ವೇದಿಯಾಗಿ, 'ಚತುರ್ವೇದಿ' ಎಂಬ ಸಾರ್ಥಕ ಹೆಸರು ಗಳಿಸಿದವರು.  ಜಾತಿ ಭೇದ ತೊಲಗಿಸಲು ಸಕ್ರಿಯವಾಗಿ ತೊಡಗಿಕೊಂಡವರು. ನೂರಾರು ಅಂತರ್ಜಾತೀಯ ವಿವಾಹಗಳನ್ನು ಮುಂದೆ ನಿಂತು ಮಾಡಿಸಿದವರು ಮತ್ತು ಅದಕ್ಕಾಗಿ ಬಂದ ವಿರೋಧಗಳನ್ನು ಎದುರಿಸಿದವರು. ವೇದದಲ್ಲಿ ವರ್ಣವ್ಯವಸ್ಥೆಯಿದೆಯೇ ಹೊರತು, ಹುಟ್ಟಿನಿಂದ ಬರುವ ಜಾತಿಪದ್ಧತಿ ಇಲ್ಲವೆಂದು ಪ್ರತಿಪಾದಿಸಿದವರು, ಮನುಷ್ಯರೆಲ್ಲಾ ಒಂದೇ ಜಾತಿ, ಬೇಕಾದರೆ ಗಂಡು ಜಾತಿ, ಹೆಣ್ಣುಜಾತಿ ಅನ್ನಬಹುದು ಎಂದವರು. ಸಾಹಿತಿಯಾಗಿಯೂ ಸಹ ಅನೇಕ ಕೃತಿಗಳನ್ನು ಜನಹಿತವನ್ನು ಮನದಲ್ಲಿ ಇಟ್ಟುಕೊಂಡೇ ಕನ್ನಡ, ಸಂಸ್ಕೃತ, ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ರಚಿಸಿದವರು. 
     ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ಅವರು ಗಾಂಧೀಜಿಯವರ ಒಡನಾಟ ಹೊಂದಿದವರಾಗಿದ್ದರು. ಪಂಡಿತರು ಇದ್ದ ಗುರುಕುಲಕ್ಕೆ ಗಾಂಧೀಜಿಯವರು ಭೇಟಿ ಕೊಟ್ಟಿದ್ದ ಸಂದರ್ಭದಲ್ಲಿ ಇವರು ಗಾಂಧೀಜಿಯವರಿಂದ ಪ್ರಭಾವಿತರಾಗಿದ್ದಂತೆ, ಗಾಂಧೀಜಿಯವರೂ ಇವರಿಂದ ಪ್ರಭಾವಿತರಾಗಿದ್ದರು. ಗಾಂಧೀಜಿಯವರ ಹತ್ಯೆಯಾಗುವವರೆಗೂ ಇವರಿಬ್ಬರ ಸ್ನೇಹ ಮುಂದುವರೆದಿತ್ತು.  ಕುಪ್ರಸಿದ್ಧ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಸಾಕ್ಷಿಯಾಗಿದ್ದ ಅವರು ಗಾಂಧೀಜಿಯವರ ಸೂಚನೆಯಂತೆ ಅಲ್ಲಿ ಹತರಾಗಿದ್ದವರ ನೂರಾರು ಶವಗಳ ಸಾಮೂಹಿಕ ಶವಸಂಸ್ಕಾರ ಮಾಡಿದವರು. ಕ್ರಾಂತಿಕಾರಿ ಭಗತ್ ಸಿಂಗರಿಗೆ ಗುರುವೂ ಆಗಿದ್ದವರು. ತಾವು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಸ್ವಾಮಿ ಶ್ರದ್ಧಾನಂದರ ಪ್ರೋತ್ಸಾಹ ಕಾರಣವಾದರೂ ವೇದದ 'ಅಧೀನಾಃ ಸ್ಯಾಮ ಶರದಃ ಶತಂ, ಭೂಯಶ್ಚ ಶರದಃ ಶತಾತ್' - 'ನೂರು ವರ್ಷಕ್ಕೂ ಹೆಚ್ಚುಕಾಲ ಸ್ವಾತಂತ್ರ್ಯದಿಂದ, ಆತ್ಮಗೌರವದಿಂದ ಬಾಳೋಣ' ಎಂಬ ಅರ್ಥದ ಸಾಲು ಸಂಗ್ರಾಮಕ್ಕೆ ಪ್ರೇರಿಸಿತ್ತು ಎಂದು ಹೇಳುತ್ತಾರೆ. ಭಾರತೀಯರನ್ನು ಕೀಳಾಗಿ ಕಾಣುತ್ತಿದ್ದ ಆಂಗ್ಲರ ನಡವಳಿಕೆ ಇವರ ಮತ್ತು ಇವರಂತಹ ಸಾವಿರಾರು ಜನರ ಸ್ವಾಭಿಮಾನವನ್ನು ಕೆಣಕಿ ಹೋರಾಟ ಕಾವು ಪಡೆದಿತ್ತು. ಹೋರಾಟ ಕಾಲದಲ್ಲಿ ಕೃಶ ಶರೀರದವರಾದರೂ ಇವರ ಮನೋಬಲ ಮತ್ತು ಛಲದಿಂದಾಗಿ ಅನೇಕ ಪ್ರಾಣಾಂತಿಕ ಪೆಟ್ಟುಗಳನ್ನು ಹಲವಾರು ಬಾರಿ ತಿಂದರೂ ಸಹಿಸಿ ಅರಗಿಸಿಕೊಂಡವರು. ದಂಡಿ ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳುವಳಿ ಸೇರಿದಂತೆ ಅನೇಕ ಸತ್ಯಾಗ್ರಹಗಳಲ್ಲಿ ಸಕ್ರಿಯರಾಗಿ ಭಾಗವಹಿಸಿದ್ದವರು. ಸುಮಾರು ೧೫ ವರ್ಷಗಳ ಕಾಲ ಸೆರೆವಾಸ ಅನುಭವಿಸಿದವರು. ಭಾರತ-ಪಾಕಿಸ್ತಾನದ ವಿಭಜನೆಯ ಕಾಲದ ಭೀಕರ ಮಾರಣಹೋಮವನ್ನು ಕಂಡ ನೆನಪು ಮಾಸದೆ ಇರುವವರು. ಒಟ್ಟಿನಲ್ಲಿ ಹೇಳಬೇಕೆಂದರೆ ಇವರು ನಮ್ಮೊಡನಿರುವ  ಇತಿಹಾಸದ ನೈಜ ಜೀವಂತ ಪ್ರತಿನಿಧಿ.
     ವೇದ ಇವರ ಉಸಿರಾಗಿದೆ. ಸಾರ್ವಕಾಲಿಕ ಮೌಲ್ಯ ಸಾರುವ ವೇದಗಳ ಸಂದೇಶ ಸಾರುವುದೇ ಅವರ ಜೀವನ ಧ್ಯೇಯವಾಗಿದೆಯೆಂದರೆ ತಪ್ಪಿಲ್ಲ. ವೇದದ ಹೆಸರಿನಲ್ಲಿ ನಡೆಯುತ್ತಿರುವ ಅನೇಕ ಆಚರಣೆಗಳು ಅವೈದಿಕವಾಗಿರುವ ಬಗ್ಗೆ ಅಸಮಾಧಾನಿಯಾಗಿರುವ ಅವರು ಅಂತಹ ಆಚರಣೆಗಳನ್ನು ಖಂಡಿಸಿ ತಿಳುವಳಿಕೆ ನೀಡುವ ಕಾಯಕ ಮುಂದುವರೆಸಿದ್ದಾರೆ. 'ವೇದೋಕ್ತ ಜೀವನ ಪಥ'ವೆಂಬ ಕಿರು ಪುಸ್ತಕದಲ್ಲಿ ಜೀವನದ ಮೌಲ್ಯಗಳು, ಜೀವಾತ್ಮ, ಪರಮಾತ್ಮ, ಪ್ರಕೃತಿಗಳ ಸ್ವರೂಪ, ಮಾನವ ಧರ್ಮ, ಚತುರ್ವರ್ಣಗಳು, ಬ್ರಹ್ಮಚರ್ಯಾದಿ ಚತುರಾಶ್ರಮಗಳು, ದೈನಂದಿನ ಕರ್ಮಗಳು, ಷೋಡಶ ಸಂಸ್ಕಾರಗಳು, ರಾಜನೀತಿ, ಸಾಮಾಜಿಕ ಜೀವನ, ಚತುರ್ವಿಧ ಪುರುಷಾರ್ಥಗಳನ್ನು ವೇದದ ಹಿನ್ನೆಲೆಯಲ್ಲಿ ವಿಶ್ಲೇಷಿಸಿದ್ದು, ಅದರಂತೆ ನಡೆದದ್ದೇ ಆದಲ್ಲಿ ಜೀವನ ಸಾರ್ಥಕವಾಗುವುದು. 'ಅರವತ್ತಕ್ಕೆ ಅರಳು-ಮರಳು' ಎಂಬ ಪ್ರಚಲಿತ ಗಾದೆ ಮಾತಿಗೆ ವಿರುದ್ಧವಾಗಿ ಇಂದಿಗೂ ಪಂಡಿತರ ವೈಚಾರಿಕ ಪ್ರಖರತೆಯ ಹೊಳಪು ಮಾಸಿಲ್ಲ, ನೆನಪು ಕುಂದಿಲ್ಲ. ಇವರ ಜೀವನೋತ್ಸಾಹ ಬತ್ತದ ಚಿಲುಮೆಯಾಗಿದ್ದು ದೇಹ, ಮನಸ್ಸು, ಬುದ್ಧಿಗಳನ್ನು ಹಿಡಿತದಲ್ಲಿಟ್ಟುಕೊಂಡಿರುವುದೇ ಇದಕ್ಕೆ ಕಾರಣವಿರಬಹುದು. ಪ್ರಶಸ್ತಿ, ಸನ್ಮಾನಗಳಿಗಾಗಿ ಲಾಬಿ ನಡೆಸುವವರೇ ತುಂಬಿರುವ, ಅದಕ್ಕಾಗಿ ತಮ್ಮತನವನ್ನೇ ಮಾರಿಕೊಳ್ಳುವವರಿರುವ ಈ ದೇಶದಲ್ಲಿ ಪ್ರಚಾರದಿಂದ ದೂರವಿರುವ ಇವರು ನಿಜವಾದ ಭಾರತರತ್ನರೆಂದರೆ ತಪ್ಪಿಲ್ಲ. ಎರಡು ವರ್ಷಗಳ ಹಿಂದೆ ಕನ್ನಡ ರಾಜ್ಯೋತ್ಸವದಂದು ರಾಜ್ಯಸರ್ಕಾರ ಇವರನ್ನು ರಾಜ್ಯಪ್ರಶಸ್ತಿ ನೀಡಿ ಗೌರವಿಸಿದೆ. ಇಂತಹವರು ನಮ್ಮೊಡನೆ ಇರುವುದೇ ನಮ್ಮ ಸೌಭಾಗ್ಯ, ಪುಣ್ಯವೆನ್ನಬೇಕು. ಬೆಂಗಳೂರಿನ ಜಯನಗರದ ೫ನೆಯ ಬ್ಲಾಕಿನ ಶ್ರೀ ಕೃಷ್ಣಸೇವಾಶ್ರಮ ರಸ್ತ್ರೆಯ ಮನೆ ನಂ. ೨೮೬/ಸಿಯಲ್ಲಿ ವಾಸವಿರುವ ಇವರ ಮನೆಯಲ್ಲಿ ಪ್ರತಿ ಶನಿವಾರ ಸಾಯಂಕಾಲ ೫-೩೦ಕ್ಕೆ ಸರಿಯಾಗಿ ಸತ್ಸಂಗ ನಡೆಯುತ್ತಿದ್ದು, ಆಸಕ್ತರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಅವರ ವಿಚಾರಗಳನ್ನು ಒಪ್ಪಲೇಬೇಕೆಂದಿಲ್ಲ. ಎಲ್ಲವನ್ನೂ ಆಲೋಚಿಸಿ, ವಿಮರ್ಶಿಸಿಯೇ ಒಪ್ಪಬೇಕೆಂಬುದೇ ಅವರ ಆಗ್ರಹ. 
     ವೇದದ ಬೆಳಕಿನಲ್ಲಿ ಸತ್ಯ ವಿಚಾರಗಳನ್ನು ಪ್ರಸರಿಸುವ ಧ್ಯೇಯದಲ್ಲಿ ಅವಿರತ ತೊಡಗಿರುವ ಮಹಾನ್ ವ್ಯಕ್ತಿಯ ಮಾರ್ಗದರ್ಶನ ಹೀಗೆಯೇ ಮುಂದುವರೆಯುತ್ತಿರಲಿ ಎಂದು ಪ್ರಾರ್ಥಿಸೋಣ. ಕರ್ಮಯೋಗಿ ಸಾಧಕರಿಗೆ ಸಾಷ್ಟಾಂಗ ಪ್ರಣಾಮಗಳು.
-ಕ.ವೆಂ.ನಾಗರಾಜ್.
[ದಿ.8-04-2014ರ ಜನಮಿತ್ರ ಪತ್ರಿಕೆಯಲ್ಲಿ ಈ ಲೇಖನ ಪ್ರಕಟಿತವಾಗಿದೆ.]

ಪಂಡಿತರೊಡನೆ: 
ಮಾಹಿತಿಗೆ: ಎರಡು ವರ್ಷಗಳ ಹಿಂದಿನ ಫೋಟೋಗಳಿವು.

ಸಂಪದಿಗ ಗಣೇಶರು ಒದಗಿಸಿದ ಮಾಹಿತಿ:

The Times of India
Bangalore



I have no desire for death: Pt Sudhakar Chaturvedi


BANGALORE: At the World Elders Day celebrations, Pandit Sudhakar Chaturvedi, who claims to be 121 years and wants to live to be 300 years, said he had no time for death. 

"I have no desire for death. Marne ko fursat nahin (no time for death)," he said, adding, "For longevity, one has to practise celibacy (brahmacharya) and also eat less so that the stomach doesn't bend." 
He went on: "Now you don't find brahmacharis — there are only brashtacharis (corrupt people)."



Thursday, April 3, 2014

ಪರಮಾತ್ಮ ಸ್ತುತಿ

ಸ್ವಾಮಿ ದೇವನೆ ಸರ್ವದಾತನೆ ವಂದನೆ ಶತವಂದನೆ |
ದುರಿತವೆಲ್ಲವ ದೂರಮಾಡಿ ಒಳಿತುಗೊಳಿಸಲು ಪ್ರಾರ್ಥನೆ || ಪ ||

ಜಗವ ಸಲಹುವ ಸ್ವಾಮಿ ನೀನೇ ಒಬ್ಬನೇ ನೀನೊಬ್ಬನೇ
ಸರ್ವ ಗ್ರಹಗಳ ಶಕ್ತಿ ನೀನೆ ಲೋಕದೊಡೆಯನೆ ವಂದನೆ |
ಜ್ಯೋತಿ ನೀನೇ ಶಕ್ತಿ ನೀನೇ ಸಚ್ಚಿದಾನಂದನೊಬ್ಬನೇ
ಸಕಲವೆಲ್ಲವು ನಿನ್ನದಾಗಿರೆ ನಮ್ಮತನವಿದು ಅರ್ಪಣೆ || ೧ ||

ಆತ್ಮದಾತನೆ ಶಕ್ತಿದಾತನೆ ಜಗದ್ವಂದ್ಯನೆ ಪರಮನೆ
ಸತ್ಯಮಾರ್ಗದಿ ನಡೆಸುವಾತನೆ ದೇವದೇವನೆ ವಂದನೆ |
ಸತ್ಯ ಸುಂದರ ಶಿವನು ನೀನೆ ಹುಟ್ಟು ಸಾವಿನ ಒಡೆಯನೆ 
ಸಕಲವೆಲ್ಲವು ನಿನ್ನದಾಗಿರೆ ನಮ್ಮತನವಿದು ಅರ್ಪಣೆ || ೨ ||

ಪಶುಗಳೊಡೆಯನೆ ಪಕ್ಷಿಪಿತನೆ ಸಕಲ ಜೀವರ ರಾಜನೆ
ಜೀವರಾಶಿಯ ಕಾರ್ಯಕೊಡೆಯ ನ್ಯಾಯದೇವಗೆ ವಂದನೆ |
ಪ್ರಾಣದಾತನೆ ತ್ರಾಣದಾತನೆ ಹರುಷರೂಪಕೆ ತಿಲಕನೆ
ಸಕಲವೆಲ್ಲವು ನಿನ್ನದಾಗಿರೆ ನಮ್ಮತನವಿದು ಅರ್ಪಣೆ || ೩ ||

ಭುವಿಗೆ ಆಸರೆ ನಿನ್ನ ಕರುಣೆ ಪರಮ ಬೆಳಕಿನ ಲೋಕಕೆ
ಮುಕ್ತ ಸ್ಥಿತಿಗೆ ನೆಲೆಯ ನೀಡಿಹ ಕರುಣದೇವಗೆ ವಂದನೆ |
ಅಂತರಿಕ್ಷದ ಗ್ರಹಸಮೂಹಕೆ ಗತಿಯ ನೀಡಿಹ ಮಾನ್ಯನೆ
ಸಕಲವೆಲ್ಲವು ನಿನ್ನದಾಗಿರೆ ನಮ್ಮತನವಿದು ಅರ್ಪಣೆ || ೪ ||

ನಿನ್ನ ಬಿಟ್ಟು ಅನ್ಯರರಿಯೆವು  ಜೀವಕುಲದ ಸ್ವಾಮಿಯೆ
ಸರ್ವ ಸೃಷ್ಟಿಯ ಜನಕ ನೀನೆ ಒಡೆಯ ನಿನಗೆ ವಂದನೆ |
ದಾಸರಾಗದೆ ಸಿರಿಗೆ ನಾವು ಒಡೆಯರಾಗಿ ಬಾಳುವ 
ಕಾಮಿತಾರ್ಥದ ಫಲವು ಸಿಗಲಿ ನಿನ್ನ ಪೂಜಿಪ ಜೀವಗೆ || ೫ ||

ತೃಪ್ತಭಾವದ ಮುಕ್ತ ಸ್ಥಿತಿಯ ನಿನ್ನ ನೆಲೆಯಲಿ ಅರಸುವ
ವಿದ್ವಜ್ಜನರಿಗೆ ಜ್ಯೋತಿಯಾಗಿ ಮಾರ್ಗ ತೋರುವ ದೇವನೆ |
ನೀನೆ ಬಂಧು ನೀನೆ ದಾರಿ ನೀನೆ ಭಾಗ್ಯವಿಧಾತನು
ನಿನ್ನ ಸೃಷ್ಟಿಯ ನೀನೆ ಬಲ್ಲೆ ವಂದನೆ ಜಗದೊಡೆಯನೆ || ೬ ||

ಸತ್ಯಪಥದಿ ಮುಂದೆ ಸಾಗಲು ಮತಿಯ ಕರುಣಿಸು ದೇವನೆ
ಸಂಪತ್ತು ಬರಲಿ ನ್ಯಾಯ ಮಾರ್ಗದಿ ನಿನ್ನ ಕರುಣೆಯ ಬಲದಲಿ |
ರಜವ ತೊಳೆದು ತಮವ ಕಳೆದು ಸತ್ತ್ವ ತುಂಬಲು ಬೇಡುವೆ
ಬಾಳ ಬೆಳಗುವ ಜ್ಯೋತಿ ನೀನೆ ವಂದನೆ ಶತ ವಂದನೆ || ೭ ||
-ಕ.ವೆಂ.ನಾ.
*********
ಪ್ರೇರಣೆ:
     ಈ ಕೆಳಕಂಡ ವೇದಮಂತ್ರಗಳ ಪ್ರೇರಣೆಯಿಂದ ಇದನ್ನು ರಚಿಸಿದ್ದು, ಇದು ಪದಶಃ ಅನುವಾದವಲ್ಲ. ಮಂತ್ರದ ಸಾರವನ್ನು, ಭಾವವನ್ನು ಕನ್ನಡದಲ್ಲಿ ಮೂಡಿಸುವ ಸಣ್ಣ ಪ್ರಯತ್ನವಷ್ಟೆ.

ಓಂ ವಿಶ್ವಾನಿ ದೇವ ಸವಿತರ್ದುರಿತಾನಿ ಪರಾ ಸುವ| ಯದ್ಭದ್ರಂ ತನ್ನ ಆ ಸುವ|| (ಯಜು.೩೦.೩.)

ಓಂ ಹಿರಣ್ಯಗರ್ಭಃ ಸಮವರ್ತತಾಗ್ರೇ ಭೂತಸ್ಯ ಜಾತಃ ಪತಿರೇಕ ಆಸೀತ್| ಸ ದಾಧಾರ ಪೃಥಿವೀಂ ದ್ಯಾಮುತೇಮಾಂ ಕಸ್ಮೈ ದೇವಾಯ ಹವಿಷಾ ವಿಧೇಮ|| (ಯಜು.೧೩.೪.)

ಓಂ ಯ ಆತ್ಮದಾ ಬಲದಾ ಯಸ್ಯ ವಿಶ್ವ ಉಪಾಸತೇ ಪ್ರಶಿಷಂ ಯಸ್ಯ ದೇವಾಃ| ಯಸ್ಯ ಚ್ಛಾಯಾಮೃತಂ ಯಸ್ಯ ಮೃತ್ಯುಃ ಕಸ್ಮೈಃ ದೇವಾಯ ಹವಿಷಾ ವಿಧೇಮ|| (ಯಜು.೨೫.೧೩.)

ಓಂ ಯಃ ಪ್ರಾಣತೋ ನಿಮಿಷತೋ ಮಹಿತ್ವೈಕ ಇದ್ರಾಜಾ ಜಗತೋ ಬಭೂವ| ಯ ಈಶೇ ಅಸ್ಯ ದ್ವಿಪದಶ್ಚತುಷ್ಪದಃ ಕಸ್ಮೈ ದೇವಾಯ ಹವಿಷಾ ವಿಧೇಮ|| (ಯಜು.೨೫.೧೧.)

ಓಂ ಯೇನ ದ್ಯೌರುಗ್ರಾ ಪೃಥಿವೀ ಚ ಧೃಢಾ ಯೇನ ಸ್ವ ಸ್ತಭಿತಂ ಯೇನ ನಾಕಃ| ಯೋ ಅಂತರಿಕ್ಷೇ ರಜಸೋ ವಿಮಾನಃ ಕಸ್ಮೈ ದೇವಾಯ ಹವಿಷಾ ವಿಧೇಮ|| (ಯಜು.೩೨.೬.)

ಓಂ ಪ್ರಜಾಪತೇ ನ ತ್ವದೇತಾನ್ಯನ್ಯೋ ವಿಶ್ವಾ ಜಾತಾನಿ ಪರಿ ತಾ ಬಭೂವ| ಯತ್ ಕಾಮಾಸ್ತೇ ಜುಹುಮಸ್ತನ್ನೋ ಅಸ್ತು ವಯಂ ಸ್ಯಾಮ ಪತಯೋ ರಯೀಣಾಮ್|| (ಋಕ್.೧೦.೧೨೧.೧೦.)

ಓಂ ಸ ನೋ ಬಂಧುರ್ಜನಿತಾ ಸ ವಿಧಾತಾ ಧಾಮಾನಿ ವೇದ ಭುವನಾನಿ ವಿಶ್ವಾ| ಯತ್ರ ದೇವಾ ಅಮೃತಮಾನಶಾನಾಸ್ತೃತೀಯೇ ಧಾಮನ್ನಧ್ಯೈರಯಂತ|| (ಯಜು.೩೨.೧೦.)

ಓಂ ಅಗ್ನೇ ನಯ ಸುಪಥಾ ರಾಯೇ ಅಸ್ಮಾನ್ ವಿಶ್ವಾನಿ ದೇವ ವಯುನಾನಿ ವಿದ್ವಾನ್| ಯುಯೋಧ್ಯಸ್ಮಜ್ಜುಹುರಾಣಮೇನೋ ಭೂಯಿಷ್ಠಾಂ ತೇ ನಮ ಉಕ್ತಿಂ ವಿಧೇಮ|| (ಯಜು.೪೦.೧೬.)