Pages

Wednesday, February 28, 2018

ಜೀವರು ಮತ್ತು ದೇವರು [Jeevatma and Paramatma]


     ಸ್ವಾರಸ್ಯಕರವಾದ ದೃಷ್ಯಕಾವ್ಯದ ರೀತಿಯಲ್ಲಿ ಈ ವೇದಮಂತ್ರ ಜೀವಿಗಳು ಮತ್ತು ದೇವರ ನಡುವಣ ಸಂಬಂಧವನ್ನು ಚಿತ್ರಿಸಿದೆ:
ದ್ವಾ ಸುಪರ್ಣಾ ಸಯುಜಾ ಸಖಾಯಾ ಸಮಾನಂ ವೃಕ್ಷಂ ಪರಿ ಷಸ್ವಜಾತೇ| ತಯೋರನ್ಯಃ ಪಿಪ್ಪಲಂ ಸ್ವಾದ್ವತ್ಯನಶ್ನನ್ನನ್ಯೋ ಅಭಿ ಚಾಕಶೀತಿ|| (ಋಕ್.೧.೧೬೪.೨೦)
     ಯಾವಾಗಲೂ ಜೊತೆಯಾಗಿರುವ, ಸ್ನೇಹಿತರಾದ (ಅಥವಾ ಆತ್ಮ ಎಂಬ ಸಮಾನ ವ್ಯಾಖ್ಯೆಗೊಳಪಟ್ಟ) ಎರಡು ಸುಂದರವಾದ ರೆಕ್ಕೆಗಳನ್ನುಳ್ಳ ಹಕ್ಕಿಗಳು (ಅಥವಾ ಸೊಗಸಾದ ಗತಿಯನ್ನುಳ್ಳ ಇಬ್ಬರು ಆತ್ಮರು) ಒಂದೇ ಮರವನ್ನು (ಅಥವಾ ಪ್ರಾಕೃತಿಕ ಜಗತ್ತನ್ನು) ಆಶ್ರಯಿಸಿದ್ದಾರೆ. ಅವರಲ್ಲಿ ಒಬ್ಬನು (ಜೀವಾತ್ಮನು) ಮಧುರವಾದ ಫಲವನ್ನು ಸವಿಯುತ್ತಿದ್ದಾನೆ. ಮತ್ತೊಬ್ಬನು ಏನನ್ನೂ ಸೇವಿಸದೆ ಸಾಕ್ಷಿರೂಪನಾಗಿ ವಿರಾಜಿಸುತ್ತಿದ್ದಾನೆ. ಸರಳಗನ್ನಡದಲ್ಲಿ ಇದರ ಭಾವಾರ್ಥವನ್ನು ಹೀಗೆ ಹೇಳಬಹುದೇನೋ!
ಒಂದನೊಂದನಗಲಿರದ ಸೊಗದ ಹಕ್ಕಿಗಳೆರಡು
ಒಂದೆ ಕೊಂಬೆಯಲಿ ಆಶ್ರಯವ ಪಡೆದಿಹವು |
ಫಲ ಸವಿಯುತಿಹುದೊಂದು ಮತ್ತೊಂದು ಸಾಕ್ಷಿ
ಜೀವಾತ್ಮ ಪರಮಾತ್ಮರವರಲ್ತೆ ಮೂಢ ||
     ಅನಾದಿ ಕಾಲದಿಂದಲೂ ಜಿಜ್ಞಾಸುಗಳನ್ನು ಬಹಳವಾಗಿ ಕಾಡಿರುವ, ಕಾಡುತ್ತಿರುವ ಮತ್ತು ಮುಂದೆಯೂ ಕಾಡಲಿರುವ ಮೂರು ಕುತೂಹಲದ ಸಂಗತಿಗಳೆಂದರೆ, ಜಗತ್ತು, ದೇವರು ಮತ್ತು ಜೀವರು! ಅನೇಕ ಧರ್ಮಗ್ರಂಥಗಳು, ಪುರಾಣಗಳು, ಪುಣ್ಯಕಥೆಗಳು ಈ ಮೂರರ ಸಂಗತಿಗಳ ಕುರಿತೇ ಸುತ್ತುತ್ತವೆ. ಮೇಲೆ ಹೇಳಿದ ವೇದಮಂತ್ರ ಜೀವರು ಮತ್ತು ದೇವರ ನಡುವಣ ಸಂಬಂಧ ಹೇಗಿದೆ ಎಂಬ ಬಗ್ಗೆ ಬೆಳಕು ಚೆಲ್ಲಿದೆ. ಜೀವಿಗಳಿಗೂ, ದೇವರಿಗೂ ಅವಿನಾಭಾವ ಸಂಬಂಧವಿದೆ. ಒಂದನ್ನು ಮತ್ತೊಂದು ಸದಾ ಆಶ್ರಯಿಸಿರುತ್ತದೆ. ಜೀವಿಗಳು ಜಗತ್ತಿನ ಸುಖ, ಸೌಲಭ್ಯಗಳನ್ನು ಅನುಭವಿಸುತ್ತಾ ಇದ್ದರೆ ಪರಮಾತ್ಮ ಜೀವಿಗಳ ಕ್ರಿಯೆಗಳನ್ನು ಕೇವಲ ಸಾಕ್ಷಿರೂಪವಾಗಿ ನೋಡುತ್ತಿರುತ್ತಾನೆ ಎಂದು ಹೇಳುವ ಈ ಮಂತ್ರ ನಮ್ಮಲ್ಲಿ ಹಲವು ಪ್ರಶ್ನೆಗಳನ್ನೂ ಹುಟ್ಟುಹಾಕುತ್ತದೆ. 
     ಪರಮಾತ್ಮ ಸರ್ವಶಕ್ತ, ಸರ್ವತೃಪ್ತ, ಸರ್ವವ್ಯಾಪಕ, ನಿರ್ವಿಕಾರಿ, ನಿರಾಕಾರಿಯಾಗಿರುವುದರಿಂದ ಆತನಿಗೆ ಯಾವುದೇ ಸಂಗತಿಯ ಅವಶ್ಯಕತೆ ಇರುವುದಿಲ್ಲ. ಯಾವುದಾದರೂ ಸಂಗತಿ ಬೇಕು, ಯಾವುದಾದರೂ ಅಗತ್ಯ ಅವನಿಗೆ ಇದೆ ಎಂದರೆ ಆತ ಪರಮಾತ್ಮ ಹೇಗಾದಾನು? ಆಕಾರಿಯಾಗಿದ್ದರೆ, ಆತ ಸರ್ವವ್ಯಾಪಕನಾಗಿರಲಾರ, ಆದ್ದರಿಂದ ಆತ ನಿರಾಕಾರಿಯೇ ಸರಿ. ಆತನನ್ನು ಹೋಲಿಸಬಹುದಾದ ಯಾವುದಾದರೂ ಒಂದು ಸಂಗತಿ ಇದ್ದರೆ, ಅದು ಬಹುಷಃ ಎಲ್ಲೆಲ್ಲೂ ವ್ಯಾಪಿಸಿರುವ, ಅದು ಇಲ್ಲದ ಸ್ಥಳವೇ ಇರದ, ಜಗತ್ತನ್ನು ಸ್ಥಿತಿಯಲ್ಲಿ ಇರಿಸಲು ಸಹಾಯಕಾರಿಯಾಗಿರುವ, ಇದ್ದರೂ ತನ್ನ ಇರುವನ್ನು ತೋರಿಸಿಕೊಳ್ಳದ, ಯಾವುದಕ್ಕೂ ಅಡ್ಡಿಪಡಿಸದ, ಸುಡಲಾರದ, ಕತ್ತರಿಸಲಾಗದ, ತೋಯಿಸಲಾಗದ, ಆಕಾರವಿರದ, ಜಗದ ಯಾವುದೇ ಚಟುವಟಿಕೆಗಳಿಗೆ ಸಾಕ್ಷಿಯಾಗುವ, ನಿರ್ಲಿಪ್ತವಾಗಿರುವ ಆಕಾಶವೇ ಆಗಿದೆ.
      ದೇವರು ಸರ್ವಶಕ್ತ ಎಂಬುದನ್ನು ಒಪ್ಪಿಕೊಳ್ಳೋಣ. ಆದರೆ ಅವನು ಜೀವಿಗಳ ಕಾರ್ಯಗಳನ್ನು ಕೇವಲ ಸಾಕ್ಷಿಯಾಗಿ ನೋಡುತ್ತಿರುತ್ತಾನೆ ಅಂದರೆ ಸರಿಯೇ? ಯಾರೋ ಇನ್ಯಾರನ್ನೋ ಕೊಲೆ ಮಾಡಿದರೂ ನೋಡಿಕೊಂಡು ಸುಮ್ಮನಿರುತ್ತಾನೆ ಎಂದರೆ, ಕೊಲೆಯಾದವನು ಯಾರಿಗೂ ತೊಂದರೆ ಕೊಡದ ಸಜ್ಜನನಾಗಿದ್ದರೂ ಅವನ ರಕ್ಷಣೆಗೆ ಬರುವುದಿಲ್ಲವೆಂದರೆ ಅವನು ಎಂತಹ ದೇವರು ಎಂದು ಅನ್ನಿಸುವುದಿಲ್ಲವೇ? ಏಕೆ ಹೀಗೆ? ಭಗವದ್ಗೀತೆಯಲ್ಲಿ ಹೇಳಿದಂತೆ ಧರ್ಮರಕ್ಷಣೆಗಾಗಿ, ದುಷ್ಟರ ಶಿಕ್ಷೆಗಾಗಿ, ಶಿಷ್ಟರ ರಕ್ಷಣೆಗಾಗಿ ಅವತರಿಸಿ ಬರುತ್ತೇನೆ ಎಂದು ಹೇಳಿದ ಮಾತು ಸುಳ್ಳಾಗುವುದಿಲ್ಲವೇ? ಈ ವಿಷಯದಲ್ಲಿ ಆಳವಾಗಿ ಜಿಜ್ಞಾಸೆ ಮಾಡಿದಲ್ಲದೆ ಇದರಲ್ಲಿನ ಹೊಳಹು ಗೋಚರವಾಗುವುದಿಲ್ಲ. ಕೆಲವರು ಹೇಳುತ್ತಾರೆ, ನಮ್ಮ ಕೈಯಲ್ಲಿ ಏನಿದೆ? ನಾವೆಲ್ಲಾ ಅವನು ಆಡಿಸಿದಂತೆ ಆಡುವ ಸೂತ್ರದ ಗೊಂಬೆಗಳು! ಇದನ್ನು ಒಪ್ಪುವುದಾದರೆ, ನಾವು ಯಾರದಾದರೂ ತಲೆಯನ್ನು ಒಡೆದರೆ ಅದು ದೇವರೇ ಮಾಡಿಸಿದ್ದು, ನಮ್ಮ ತಪ್ಪಲ್ಲ ಎಂದಾಗುವುದಿಲ್ಲವೇ? ಹಾಗಾದರೆ ತಲೆ ಒಡೆದ ತಪ್ಪಿಗೆ ಶಿಕ್ಷೆ ಯಾರಿಗೆ ಕೊಡಬೇಕು? 
     ಎಲ್ಲಾ ನಮ್ಮ ಹಣೆಬರಹ, ನಾವೇನು ಮಾಡಕ್ಕೆ ಆಗುತ್ತೆ? ಎಂಬ ಮಾತನ್ನು ಕೇಳುತ್ತಿರುತ್ತೇವೆ. 'ಮಾಡಿದ್ದುಣ್ಣೋ ಮಹರಾಯ' ಎಂಬ ಪ್ರಸಿದ್ಧ ನಾಣ್ನುಡಿಯೂ ಕಿವಿಗೆ ಬೀಳುತ್ತಿರುತ್ತದೆ. ಈ ಮಾತುಗಳಲ್ಲಿ ನಾವು ಏನು ಮಾಡಿದರೂ ದೇವರು ಏಕೆ ಸುಮ್ಮನಿರುತ್ತಾನೆ ಎಂಬುದಕ್ಕೆ ಸೂಕ್ಷ್ಮವಾಗಿ ಉತ್ತರ ಕಾಣುತ್ತದೆ. ಅದೆಂದರೆ, ಕರ್ಮಕ್ಕೆ ತಕ್ಕ ಫಲ ಅನಿವಾರ್ಯ ಎಂಬುದು! ದೇವರು ಒಂದು ಸರಳ ನಿಯಮವನ್ನು ಮಾಡಿಟ್ಟುಬಿಟ್ಟಿದ್ದಾನೆ. 'ನೀನು ಏನು ಮಾಡುತ್ತೀಯೋ ಅದಕ್ಕೆ ನೀನೇ ಹೊಣೆ. ತಪ್ಪು ಮಾಡಿದರೂ ಸರಿ, ಒಳ್ಳೆಯದು ಮಾಡಿದರೂ ಸರಿ. ಅದಕ್ಕೆ ತಕ್ಕಂತೆ ಫಲವನ್ನು ನೀನು ಅನುಭವಿಸಲೇಬೇಕು' ಎಂಬುದೇ ಆ ನಿಯಮ. 'ಈ ಮಾತಿನಲ್ಲಿ ಸತ್ಯವಿಲ್ಲ. ಅನ್ಯಾಯ ಮಾಡಿದವರು, ದರೋಡೆ ಮಾಡುವವರು ಸುಖವಾಗಿಲ್ಲವೇ? ನ್ಯಾಯ, ನೀತಿ, ಧರ್ಮ ಅನ್ನುವವರೇಕೆ ಕಷ್ಟಪಡುತ್ತಿದ್ದಾರೆ?' ಎಂಬ ಮಾತೂ ಬರುತ್ತದೆ. ಆದರೆ ಅನ್ಯಾಯ ಮಾಡಿದವರು ಎಷ್ಟು ಸುಖಿಗಳಾಗಿದ್ದಾರೆ ಎಂಬುದು ಅವರಿಗೇ ಗೊತ್ತು. ಅಲ್ಲದೆ,  ಸುಖ ಮತ್ತು ದುಃಖಗಳು ಮಾನಸಿಕ ಸ್ಥಿತಿಗಳಷ್ಟೇ ಹೊರತು ಭೌತಿಕ ಸಂಪತ್ತು, ವಿಚಾರಗಳಲ್ಲಿ ಇಲ್ಲ. ವೇದಗಳು ಪುನರ್ಜನ್ಮವನ್ನು ಪ್ರತಿಪಾದಿಸುತ್ತಿದ್ದು, ಹಿಂದಿನ ಕರ್ಮಗಳಿಗನುಸಾರವಾಗಿ ಮುಂದೆ ಪಡೆಯುವ ಜನ್ಮ ಲಭ್ಯವಾಗುತ್ತದೆ ಎನ್ನುತ್ತದೆ. ಅನೇಕರು ಹುಟ್ಟುವಾಗಲೇ ಅಂಗವಿಕಲರಾಗಿ, ರೋಗಿಷ್ಟರಾಗಿ, ಬಡವರಾಗಿ, ಶ್ರೀಮಂತರಾಗಿ, ಬಲಶಾಲಿಗಳಾಗಿ, ಪ್ರಾಣಿ-ಪಕ್ಷಿಗಳಾಗಿ, ಕ್ರಿಮಿ-ಕೀಟಗಳಾಗಿ ಹೀಗೆ ವಿವಿಧ ರೀತಿಯಲ್ಲಿ ಹುಟ್ಟಲು ಈ ಕಾರಣವಲ್ಲದೆ ಬೇರೆ ಕಾರಣಗಳು ಇರಲಾರವು. ಬೇರೆ ಯಾವುದೇ ಕಾರಣವಿಲ್ಲದೆ ಹೀಗೆ ಹುಟ್ಟುವುದಾದರೆ ದೇವರು ಪಕ್ಷಪಾತಿ ಎನ್ನಿಸಿಕೊಳ್ಳುತ್ತಾನೆ. ಆಸ್ತಿಕ ಮನಸ್ಸುಗಳನ್ನು ದೇವರು ಪಕ್ಷಪಾತಿ ಎಂಬುದನ್ನು ಒಪ್ಪುವುದಿಲ್ಲ. ಈ ವಿಷಯ ಸಂಕ್ಷಿಪ್ತವಾಗಿ ಚರ್ಚಿಸಬಹುದಾದ ವಿಷಯವಲ್ಲವಾದುದರಿಂದ ಇಲ್ಲಿಗೇ ಮೊಟಕುಗೊಳಿಸಿ ಮೂಲ ವಿಷಯಕ್ಕೆ ಮತ್ತೆ ಬರೋಣ.  
     ಒಂದು ಲಘುವಾದರೂ ಅರ್ಥವತ್ತಾದ ಉದಾಹರಣೆ ನೋಡೋಣ. ಅವರಿಬ್ಬರೂ ನೆರೆಹೊರೆಯವರು, ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ, ಇಬ್ಬರೂ ಒಬ್ಬನೇ ದೇವರ ಭಕ್ತರು. ಒಬ್ಬ ಪ್ರಾರ್ಥಿಸುತ್ತಾನೆ, 'ದೇವರೇ, ಪಕ್ಕದ ಮನೆಯವನು ದುಷ್ಟ. ನನಗೆ ಬಹಳ ತೊಂದರೆ ಕೊಡುತ್ತಾನೆ. ಅವನ ಎರಡು ಕಣ್ಣುಗಳನ್ನೂ ಇಂಗಿಸಿಬಿಡು'. ಇನ್ನೊಬ್ಬನೂ ಕೋರುತ್ತಾನೆ, 'ದೇವರೇ, ಅವನ ಕಾಟ ಸಹಿಸಲಾಗುತ್ತಿಲ್ಲ. ಅವನಿಗೆ ಲಕ್ವ ಹೊಡೆಯಲಿ'. ದೇವರು ಯಾರ ಮಾತು ಕೇಳಬೇಕು? ಇಬ್ಬರೂ ಭಕ್ತರೇ, ಇಬ್ಬರೂ ದೇವರ ಮಕ್ಕಳೇ. ಇಬ್ಬರ ಬೇಡಿಕೆಯನ್ನೂ ಈಡೇರಿಸಿದರೂ ಅವನ ಭಕ್ತರಿಗೇ ತೊಂದರೆ. ಆಗ ಮತ್ತೆ ಪ್ರಾರ್ಥಿಸಿ ಸರಿಪಡಿಸುವಂತೆ ಗೋಳಾಡುತ್ತಾರೆ, ಸುಮ್ಮನಿರುವುದೇ ಲೇಸು ಎಂದು ಸುಮ್ಮನಾಗಿಬಿಡುತ್ತಾನೆ.
     ಮಾನವನ ಬದುಕಿನಲ್ಲಿ ದೇವರ ಪಾತ್ರ ಹೇಗಿರುತ್ತದೆಂಬುದಕ್ಕೆ ಇನ್ನೊಂದು ಸಣ್ಣ ಉದಾಹರಣೆಯಾಗಿ ಚದುರಂಗದ ಆಟವನ್ನೇ ತೆಗೆದುಕೊಳ್ಳೋಣ. ಈ ಆಟಕ್ಕೆ ನಿಯಮವಿದೆ. ನಿಯಮಗಳ ಅನುಸಾರವಾಗಿ ಚದುರಂಗದ ಕಾಯಿಗಳನ್ನು ಆಟಗಾರ ನಡೆಸಬೇಕು. ನಿಯಮಗಳ ಅನುಸಾರವಾಗಿ ಆಟಗಾರ ಬುದ್ಧಿಮತ್ತೆಯನ್ನು ಉಪಯೋಗಿಸಿ ಕಾಯಿಗಳ ಚಲನೆ ಮಾಡಿದರೆ ಎದುರಾಳಿಯನ್ನು ಸೋಲಿಸಬಹುದು. ತಪ್ಪು ನಡೆಗಳನ್ನು ಮಾಡಿದರೆ ಸೋಲುತ್ತಾನೆ. ಈ ಆಟವನ್ನು ಗಮನಿಸಲು ಒಬ್ಬ ರೆಫರಿ ಇದ್ದು ಆತ ಪಂದ್ಯದ ನಿಯಮಗಳು ಪಾಲನೆಯಾಗುತ್ತಿವೆಯೇ ಎಂಬುದನ್ನು ಮಾತ್ರ ಗಮನಿಸುತ್ತಿರುತ್ತಾನೆ. ಕೊನೆಯಲ್ಲಿ ಫಲಿತಾಂಶ ನಿರ್ಧರಿಸುತ್ತಾನೆ. ಆತನ ಪಾತ್ರ ಅಷ್ಟಕ್ಕೇ ಸೀಮಿತ. ಆತ ಯಾವುದೇ ಆಟಗಾರನಿಗೆ ಹೀಗೆ ಆಡು, ಹಾಗೆ ಆಡು ಎಂದು ಹೇಳುವುದಿಲ್ಲ. ರೆಫರಿ/ಅಂಪೈರ್ ನನಗೆ ಸಹಾಯ ಮಾಡಲಿಲ್ಲ ಎಂದು ಯಾರಾದರೂ ದೂರುತ್ತಾರೆಯೇ? ಇಲ್ಲ. ದೇವರ ಕೆಲಸವೂ ಅಷ್ಟೇ. ಆತ ಕೇವಲ ಸಾಕ್ಷಿಯಾಗಿ ನಮ್ಮ ಚಟುವಟಿಕೆಗಳನ್ನು, ಕ್ರಿಯೆಗಳನ್ನು ನೋಡುತ್ತಿರುತ್ತಾನೆಯೇ ಹೊರತು, ಆತ ಸಹಾಯವನ್ನಾಗಲೀ, ಅಡ್ಡಿಯನ್ನಾಗಲೀ ಮಾಡುವುದಿಲ್ಲ. ಜೀವನವೆಂಬ ಆಟದಲ್ಲಿ ನಾವು ಪ್ರತಿಯೊಬ್ಬರೂ ಸ್ವತಂತ್ರ ಆಟಗಾರರೇ. ಮೊದಲೇ ಹೇಳಿದ್ದಂತೆ ಪ್ರತಿಯೊಂದೂ ನಿಯಮಾನುಸಾರವೇ ನಡೆಯುತ್ತದೆ. ಹೀಗೆ ಮಾಡಿದರೆ ಹೀಗೆ ಆಗುತ್ತದೆ ಎಂಬುದು ನಿರ್ಧರವಾಗಿರುತ್ತದೆ. ನಮ್ಮ ಬದುಕು ಎಚ್ಚರಿಕೆಯಿಂದ ಸಾಗಿದರೆ, ವಿವೇಚನಾಶಕ್ತಿ ಬಳಸಿ ನಡೆದರೆ ನಮಗೆ ಯಶಸ್ಸು ಸಿಕ್ಕೇಸಿಗುತ್ತದೆ. ಇಲ್ಲದಿದ್ದರೆ ಇಲ್ಲ. ಬದುಕೆಂಬ ಆಟವನ್ನು ಸುಂದರವಾಗಿ, ಎಚ್ಚರಿಕೆಯಿಂದ, ಸಂತೋಷದಿಂದ ಅನುಭವಿಸುತ್ತಾ ಆಡೋಣ, ಗೆಲ್ಲೋಣ, ಮುಂದುವರೆಯೋಣ!
-ಕ.ವೆಂ.ನಾಗರಾಜ್.

Wednesday, February 21, 2018

ಅಗ್ನಿಹೋತ್ರ ಕಲಿಕೆ


Living By Pranayama & Sunlight - Speech by Prof Dr. BM Hegde - happy Omyoga

Dr.BM Hegde | Wellness Concept | Yoga

ವ್ಯಾಯಾಮ ಯಾವ ಸಮಯದಲ್ಲಿ ಮಾಡಬೇಕು by BM Hegde I Saral Jeevan I

Senior Students of Patanjali Yogpeeth Speaking Why To Opt Adhyatm Life

An advanced state-of-the-art 'gurukul' of Baba Ramdev in Haridwar

दैनिक अग्निहोत्र - योगऋषि स्वामी रामदेवजी महाराज

Vedic Samdhya and Agnihotra : Swami Ramdev | Acharyakulam, Haridwar | 11...

Vedic Samdhya and Agnihotra : Swami Ramdev | Acharyakulam, Haridwar | 11...

ಮಿತ್ರರೇ, ಹರಿದ್ವಾರದ ಆಚಾರ್ಯಕುಲಮ್ ನಲ್ಲಿ ನಡೆಯುವ ಅಗ್ನಿಹೋತ್ರದ ವೀಡಿಯೋ ಇಲ್ಲಿದೆ. ಇಲ್ಲಿ ಸಂಧ್ಯಾವಂದನೆ, ಈಶ್ವರಸ್ತುತಿ ಪ್ರಾರ್ಥನಾ , ಅಗ್ನಿಹೋತ್ರ ಮತ್ತು ಕೆಲವು ವಿಶೇಷ ಆಹುತಿಗಳನ್ನು ಕೊಡುವ ಮಂತ್ರಗಳಿವೆ. ನಾವು ಹಾಸನದಲ್ಲಿ ವೇದಭಾರತಿಯ ಸಹಕಾರದೊಡನೆ ಎಲ್ಲಾ ಯೋಗ ಕೇಂದ್ರಗಳಲ್ಲೂ ಆಗ್ಗಾಗ್ಗೆ ಅಗ್ನಿಹೋತ್ರವನ್ನು " ರಾಷ್ಟ್ರಯಜ್ಞ" ದ ಹೆಸರಲ್ಲಿ ಮಾಡುತ್ತಿದ್ದೇವೆ. ಹರಿದ್ವಾರದ ಆಚಾರ್ಯ ಕುಲಮ್ ನಂತೆಯೇ ನಾವೂ ಕೂಡ ಅಗ್ನಿಹೋತ್ರವನ್ನು ಕಲಿತಿರುವುದು ನಮ್ಮ ಸೌಭಾಗ್ಯ. ಪತಂಜಲಿ ಯೋಗ ಸಮಿತಿಯಿಂದ ಹಾಸನಕ್ಕೆ ಸಮೀಪವಾಗುವ ಯಾವುದೇ ಜಿಲ್ಲೆಯಿಂದ ಆಹ್ವಾನಿಸಿದರೂ ವೇದಭಾರತಿಯ ಸದಸ್ಯರೊಡನೆ ನಾವು ಬಂದು ರಾಷ್ಟ್ರಯಜ್ಞವನ್ನು ನಡೆಸಿಕೊಡಬಲ್ಲೆವು. ಹಾಸನದ "ಈಶಾವಾಸ್ಯಮ್ ಯೋಗ ಕೇಂದ್ರದಲ್ಲಿ ಪ್ರತಿ ದಿನ ಬೆಳಿಗ್ಗೆ 5.15 ರಿಂದ 6.45 ರ ವರಗೆ ಯೋಗಾಭ್ಯಾಸ ನಂತರ ಅಗ್ನಿಹೋತ್ರವು ನಡೆಯುತ್ತದೆ.

Tuesday, February 20, 2018

Sunday, February 18, 2018

ಕರ್ನಾಟಕದಲ್ಲೊಂದು ಕಾಶಿಪುರವಿತ್ತು

ಕರ್ನಾಟಕದಲ್ಲೊಂದು ಕಾಶಿಪುರವಿತ್ತು ಭಾಗ - 1
ಕರ್ನಾಟಕದಲ್ಲೊಂದು ಕಾಶಿಪುರವಿತ್ತು ಭಾಗ - 2
ಕರ್ನಾಟಕದಲ್ಲೊಂದು ಕಾಶಿಪುರವಿತ್ತು ಭಾಗ - 3
ಕರ್ನಾಟಕದಲ್ಲೊಂದು ಕಾಶಿಪುರವಿತ್ತು ಭಾಗ - 4
ಕರ್ನಾಟಕದಲ್ಲೊಂದು ಕಾಶಿಪುರವಿತ್ತು ಭಾಗ - 6

ಅಡಗೂರಿನಲ್ಲಿ ಅರ್ಥಪೂರ್ಣ ಶಿವರಾತ್ರಿಯ ಜಾಗರಣೆ


     ಪರಮಾತ್ಮನನ್ನು ಅರಿಯುವ, ನಮ್ಮನ್ನು ನಾವು ಅರಿತುಕೊಳ್ಳುವ ಕ್ರಿಯೆಗೆ ಚಾಲನೆ ಕೊಡುವ ದಿನವೇ ಶಿವರಾತ್ರಿ. ಶಿವರಾತ್ರಿ ವಿಶೇಷವಾದ ಜಾಗರಣೆ ಎಂದರೆ ಕೇವಲ ನಿದ್ರೆ ಮಾಡದಿರುವುದಲ್ಲ, ಜಾಗೃತರಾಗುವುದು, ಎಚ್ಚರಗೊಳ್ಳುವುದು, ಅರಿಯುವುದು ಎಂದೇ ಅರ್ಥ. ನಾವು ಜಾಗೃತರಾಗುವುದಲ್ಲದೆ, ಇತರರನ್ನೂ ಜಾಗೃತಗೊಳಿಸುವ ವಿಶೇಷ ಜಾಗರಣೆಯ ಕಾರ್ಯ 13-02-2018ರ ಶಿವರಾತ್ರಿಯಂದು ನಡೆದ ಕುರಿತು ಸಂಕ್ಷಿಪ್ತ ಮಾಹಿತಿಯನ್ನು ಆಸಕ್ತರ ಅವಗಾಹನೆಗಾಗಿ ನೀಡುತ್ತಿರುವೆ. 



     ಹಾಸನದಿಂದ ಹಳೇಬೀಡಿಗೆ ಹೋಗುವ ಮಾರ್ಗದಲ್ಲಿ ಸುಮಾರು 15 ಕಿ.ಮೀ. ದೂರದಲ್ಲಿರುವ ಗ್ರಾಮ ಅಡಗೂರು. ಬೇಲೂರು ತಾಲ್ಲೂಕಿಗೆ ಸೇರಿದ ಅಡಗೂರಿನಿಂದ ಸುಮಾರು ಒಂದೂವರೆ ಕಿ.ಮೀ. ದೂರದಲ್ಲಿ ಕಾಶಿಪುರ ಎಂಬ ಜನವಸತಿ ಇರದ ಬೇಚರಾಕ್ ಗ್ರಾಮವಿದೆ. ಅಲ್ಲಿ ಒಂದು ಪುರಾತನವಾದ ದೇವಸ್ಥಾನ ಶಿಥಿಲಾವಸ್ಥೆಯಲ್ಲಿದ್ದುದಲ್ಲದೆ ದೇವಸ್ಥಾನದ ಕಲ್ಲುಗಳನ್ನು ಅವರಿವರು ಸಾಗಿಸಿದ್ದು ಅಳಿದುಳಿದ ಭಾಗ ಮಾತ್ರ ಉಳಿದಿದೆ. ಈ ದೇವಸ್ಥಾನದ ಅಸ್ತಿತ್ವವೇ ಮರೆತು ಹೋದಂತಾಗಿದ್ದು, ಜನವಸತಿ ಇರದ ಗ್ರಾಮವಾಗಿದ್ದು, ಸುತ್ತಮುತ್ತಲೂ ಜಮೀನುಗಳು ಇರುವುದರಿಂದ ಹತ್ತಿರದ ಅಡಗೂರಿನವರಿಗೇ ಗೊತ್ತಿಲ್ಲವೇನೋ ಎಂಬಂತಾಗಿತ್ತು. ಅಲ್ಲಿ ಒಂದು ದೇವಸ್ಥಾನದ ಸಮುಚ್ಛಯವೇ ಇದ್ದುದು ಅವಶೇಷಗಳಿಂದ ತಿಳಿದುಬರುತ್ತದೆ. ಪ್ರವೇಶ ಮಂಟಪ, ಸುತ್ತಲೂ ಆವರಣ, ಒಳಭಾಗದಲ್ಲಿ ಮಂಟಪಗಳು, ಅಶ್ವಲಾಯ, ಗಜಲಾಯಗಳು, ಬಂದುಹೋಗುವವರಿಗೆ ಉಳಿದುಕೊಳ್ಳಬಹುದಾದ ಕೊಠಡಿಗಳು, ಶಿವ ಮತ್ತು ವಿಷ್ಣುವಿನ ದೇವಾಲಯಗಳಿದ್ದುದು ತಿಳಿದುಬರುತ್ತದೆ. ನಿಧಿಯ ಆಸೆಗಾಗಿ ಸುಮಾರು ಮೂರು ಅಡಿ ಎತ್ತರದ ಲಿಂಗವನ್ನು ನೆಲದಿಂದ ಕಿತ್ತು ಹೊರತೆಗೆದಿರುವುದು ಕಾಣುತ್ತದೆ. ಪಕ್ಕದಲ್ಲಿ ಜಯ ವಿಜಯರ ವಿಗ್ರಹವಿರುವ ದ್ವಾರವಿದ್ದು ವಿಷ್ಣುವಿನ ದೇವಸ್ಥಾನವೂ ಅಲ್ಲಿದ್ದುದು ತಿಳಿಯುತ್ತದೆ. ವಿಗ್ರಹ ಕಳುವಾಗಿದೆ ಅಥವ ಬೇರೆಲ್ಲೋ ಸಾಗಿಸಿರುವ ಸಾಧ್ಯತೆಯಿದೆ. ಈ ದೇವಸ್ಥಾನ ಸಮುಚ್ಛಯ ಸುಮಾರು ಒಂದೂವರೆ ಎಕರೆ ವಿಸ್ತೀರ್ಣದಲ್ಲಿದ್ದು ಅಕ್ಕಪಕ್ಕದ ಆವರಣ ಒತ್ತುವರಿ ಆಗಿರುವ ಸಾಧ್ಯತೆಯಿದೆ. ದೇವಸ್ಥಾನ ಸಮುಚ್ಛಯವಿರುವ ಭಾಗವನ್ನು ಪುನರುಜ್ಜೀವನಗೊಳಿಸಿ ಉಳಿಸಿಕೊಳ್ಳಬೇಕಾದ ಅಗತ್ಯತೆಯಿದೆ. ಜಿಲ್ಲಾಡಳಿತ, ಕಂದಾಯ, ಮೋಜಣಿ, ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆ, ಮುಜರಾಯಿ ಇಲಾಖೆಗಳು, ಜಿಲ್ಲಾ ಪಂಚಾಯಿತಿ, ಇತ್ಯಾದಿಗಳ ಗಮನ ಇತ್ತ ಕಡೆ ಹರಿಯಬೇಕಿದೆ.




     ಕೆಲವು ತಿಂಗಳುಗಳ ಹಿಂದೆ ಮಿತ್ರ ಹರಿಹರಪುರ ಶ್ರೀಧರ ಕಾಶಿಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿ ಕಾಲಿಡಲು ಅವಕಾಶವಿಲ್ಲದಂತೆ ಕುರುಚಲು ಗಿಡಗಳು, ಮುಳ್ಳುಕಂಟಿಗಳು ಬೆಳೆದಿದ್ದವು. ಹಿಂದೆ ಯಾವಾಗಲೋ ಇನ್ನೊಬ್ಬ ಮಿತ್ರ ದಿ. ದಾಸೇಗೌಡರು ಆವರನ್ನು ಆ ಸ್ಥಳಕ್ಕೆ ಕರೆದುಕೊಂಡು ಹೋಗಿ ಇದರ ಪುನರುತ್ಥಾನಕ್ಕೆ ಏನಾದರೂ ಮಾಡಬೇಕಲ್ಲಾ ಎಂದು ಹೇಳಿದ್ದ ಮಾತು ನೆನಪಿನಲ್ಲಿ ಉಳಿದಿದ್ದುದೂ ಅವರ ಕಾಶಿಪುರ ಭೇಟಿಗೆ ಕಾರಣವಾಗಿತ್ತಂತೆ. ಆದರೆ ಅದಕ್ಕೆ ತಕ್ಕ ಮುಹೂರ್ತ ಬರಬೇಕಿತ್ತಷ್ಟೆ. ಮಿತ್ರ ಶ್ರೀಧರ್ ದೇವಸ್ಥಾನದ ಆಗಿನ ಸ್ಥಿತಿಯನ್ನು ಫೇಸ್ ಬುಕ್ಕಿನ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರಸಹಿತ ಪ್ರಕಟಿಸಿದಾಗ ರಾಜ್ಯದಾದ್ಯಂತ ಮತ್ತು ಹಾಸನ ಜಿಲ್ಲೆಯವರ ಗಮನ ಸೆಳೆಯಿತು. ಪರಿಣಾಮವಾಗಿ ಹಾಸನದ ವೇದಭಾರತಿ, ಪತಂಜಲಿ ಯೋಗ ಸಮಿತಿ, ಅಖಿಲ ಭಾರತೀಯ ಸಾಹಿತ್ಯ ಪರಿಷತ್, ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರುಗಳು, ಸ್ಕೌಟ್ಸ್ ಮತ್ತು ಗೈಡ್ಸ್, ಹೀಗೆ ಹತ್ತು ಹಲವಾರು ಸಂಘಟನೆಗಳು ಕೈಜೋಡಿಸಿದವು. ಹಲವಾರು ದಿನಗಳವರೆಗೆ ಶ್ರಮದಾನ ನಡೆದು ದೇವಸ್ಥಾನದ ಆವರಣದಲ್ಲಿ ಓಡಾಡಲು ಸಾಧ್ಯವಾಗುವಂತಹ ಸ್ಥಿತಿ ಏರ್ಪಟ್ಟಿತು. ಸ್ಕೌಟ್ಸ್ ಮತ್ತು ಗೈಡ್ಸ್‌ನವರ ಕಾರ್ಯ ವಿಶೇಷ ಗಮನ ಸೆಳೆಯಿತು. ಬೆಂಗಳೂರಿನ ತರುಣರೂ ಈ ಕೆಲಸದಲ್ಲಿ ಆಸಕ್ತಿ ವಹಿಸಿದರು. ರಿಕ್ಲೈಮ್ ಟೆಂಪಲ್ಸ್ ಆಂದೋಲನದ ಕಾರ್ಯಕರ್ತರು ಶ್ರೀ ಗಿರೀಶ್ ಭಾರಧ್ವಾಜರ ನೇತೃತ್ವದಲ್ಲಿ ಸಹಕಾರ ನೀಡಲು ಮುಂದೆ ಬಂದರು. ಹರಿಹರಪುರ ಶ್ರೀಧರ್, ಕವಿ ನಾಗರಾಜ್  ನೇತೃತ್ವದಲ್ಲಿ ಎರಡು ಮೂರು ಸಲ ಗ್ರಾಮಸ್ಥರ ಸಭೆಗಳೂ ನಡೆದು ಗ್ರಾಮಸ್ಥರ ಸಹಕಾರವನ್ನೂ ಕೋರಲಾಯಿತು.



      ಹಿರಿಯರಾದ ಶ್ರೀ ಸಿ.ಎಸ್. ಕೃಷ್ಣಸ್ವಾಮಿಯವರು ಕಾರ್ಯಗಳಿಗೆ ಒತ್ತಾಸೆ ನೀಡಿ ಬೆಂಬಲಿಸಿದರು. ಅವರ ಬೆಂಗಳೂರು ನಿವಾಸದಲ್ಲಿ ಮತ್ತು ರಾಜಾಜಿನಗರದ ರಸಧ್ವನಿ ಕಲಾಕೇಂದ್ರದಲ್ಲಿ ಬೆಂಗಳೂರಿನ ಆಸಕ್ತರ ಸಭೆ ಕರೆದು ಚರ್ಚಿಸಲಾಯಿತು. ದೇವಸ್ಥಾನ ಸಮುಚ್ಛಯದ ಪುನರುತ್ಥಾನಕ್ಕಾಗಿ ಜಾಗೃತಿ ಉಂಟುಮಾಡುವ ಸಲುವಾಗಿ ಒಂದು ರಾಜ್ಯಮಟ್ಟದ ಸಮಿತಿ ರಚಿಸಿ ಅದಕ್ಕೆ ಶ್ರೀ ಸಿ.ಎಸ್. ಕೃಷ್ಣಸ್ವಾಮಿಯವರು ಅಧ್ಯಕ್ಷರು, ಶ್ರೀ ಕವಿ ನಾಗರಾಜ್ ಉಪಾಧ್ಯಕ್ಷರು, ಶ್ರೀ ಹರಿಹರಪುರ ಶ್ರೀಧರ್ ಪ್ರಧಾನ ಸಂಚಾಲಕರು, ಶ್ರೀ ಶ್ರೀಕಾಂತ್ ಕಾರ್ಯದರ್ಶಿ, ಶ್ರೀ ನರೇಂದ್ರ ಕೋಶಾಧಿಕಾರಿ ಎಂದು ತೀರ್ಮಾನವಾಯಿತು. ಶ್ರೀಯುತರಾದ ಸುನೀಲ್, ಸದ್ಯೋಜಾತ ಭಟ್ಟರು ಸೇರಿದಂತೆ ಹಲವರನ್ನು ಜೋಡಿಸಿಕೊಳ್ಳಲಾಯಿತು. ಶಿವರಾತ್ರಿ ದಿನದಂದು ಕಾಶಿಪುರ ಉತ್ಸವ ನಡೆಸುವ ಮೂಲಕ ಅಡಗೂರು ಮತ್ತು ಸುತ್ತಮುತ್ತಲ ಗ್ರಾಮದವರನ್ನು ಜಾಗೃತಗೊಳಿಸಿ ಮುಂದಿನ ಪುನರುತ್ಥಾನದ ಕೆಲಸಗಳಿಗೆ ಅವರನ್ನು ಪ್ರೇರೇಪಿಸುವ ಕೆಲಸ ಮಾಡಬೇಕೆಂದು ನಿರ್ಧರಿಸಲಾಯಿತು. ಕಾರ್ಯಕ್ರಮದ ವ್ಯವಸ್ಥೆ, ರೂಪುರೇಷೆಗಳ ತಯಾರಿ, ಇತ್ಯಾದಿಗಳ ಹೊಣೆಯನ್ನು ಮಿತ್ರ ಶ್ರೀಧರ್ ಸ್ವತಃ ಹೊತ್ತುಕೊಂಡು ಅದಕ್ಕಾಗಿ ಪೂರ್ಣವಾಗಿ ತೊಡಗಿಕೊಂಡರು. ಅವರಿಗೆ ಮಿತ್ರರ ಸಹಕಾರವೂ ಸಿಕ್ಕಿತು. ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಸಂಕಲ್ಪ ಯಜ್ಞಗಳು, ಬೈಠಕ್ಕುಗಳು, ಹಣಕಾಸಿನ ವ್ಯವಸ್ಥೆಗಾಗಿ ಸಂಪರ್ಕ, ನಡೆಸಬೇಕಾದ ಕಾರ್ಯಕ್ರಮಗಳ ವ್ಯವಸ್ಥೆ, ಇತ್ಯಾದಿ ನಡೆದು ಕಾರ್ಯಕ್ರಮ ಯಶಸ್ಸು ಕಾಣುವ ಲಕ್ಷಣಗಳು ಸ್ಫುಟವಾಗಿ ಗೋಚರವಾಯಿತು. ಕಾರ್ಯಕ್ರಮ ನಡೆಯಲು ಎರಡು-ಮೂರು ದಿನಗಳಿದ್ದಂತೆ ಶ್ರಮದಾನದಿಂದ ನೋಡುವಂತಾಗಿದ್ದ ಕಾಶಿಪುರ ದೇವಸ್ಥಾನ ಸಮುಚ್ಚಯದ ಸ್ಥಳವನ್ನು ಜೆಸಿಬಿ ಸಹಾಯದಿಂದ ಸಮತಟ್ಟುಗೊಳಿಸಿ ಸಿದ್ಧಪಡಿಸಲಾಯಿತು. ಹಿಂದೆ ಆ ಸ್ಥಳ ಹೇಗಿದ್ದಿರಬಹುದು ಎಂಬ ಕಲ್ಪನೆಯೊಂದಿಗೆ ಅಚ್ಚರಿ ಮತ್ತು ಈಗಿನ ಸ್ಥಿತಿಯೊಂದಿಗೆ ವಿಷಾದ ಎರಡೂ ಭಾವಗಳು ನೋಡುಗರಿಗೆ ಉಂಟಾಗುತ್ತಿತ್ತು.




     ಶಿವರಾತ್ರಿಯ ದಿನದಂದು ಹಾಸನದಿಂದ ಒಂದು ನೂರು ಕಾರ್ಯಕರ್ತರು ವಿಶೇಷ ಬಸ್ಸು ಮತ್ತು ಖಾಸಗಿ ವಾಹನಗಳ ಮೂಲಕ ಅಡಗೂರಿಗೆ ಬಂದಿಳಿದರು. ಅಡಗೂರಿನ ಗಣಪತಿ ದೇವಸ್ಥಾನದ ಮುಂಭಾಗದ ಬಯಲು ರಂಗಮಂದಿರದಲ್ಲಿ ವಿಶೇಷ ಕಾರ್ಯಕ್ರಮಗಳಿಗಾಗಿ ವೇದಿಕೆ ಸಿದ್ಧಪಡಿಸಲಾಯಿತು. ಊರಲ್ಲೆಲ್ಲಾ ಕೇಸರಿ ಧ್ವಜಗಳು ವಿಜೃಂಭಿಸಿದ್ದವು. ಕಾಶಿಪುರದಲ್ಲಿ, ಅಡಗೂರಿನಲ್ಲಿ ಭವ್ಯವಾದ ೨೦ ಮತ್ತು ೧೦ ಅಡಿಗಳ ಫ್ಲೆಕ್ಸ್‌ಗಳು ಕಾರ್ಯಕ್ರಮಕ್ಕೆ ಮೆರುಗು ನೀಡಿದ್ದವು. ಸಿದ್ಧಿ ಸಮಾಧಿ ಯೋಗದ ಭಜನಾ ತಂಡವೂ ಬಂದಿಳಿಯಿತು. ಮಧ್ಯಾಹ್ನ ನಾಲ್ಕು ಗಂಟೆಗೆ ಸರಿಯಾಗಿ ಅಡಗೂರಿನಿಂದ ಕಾಶಿಪುರದವರೆಗೆ ಪುಷ್ಪಗಿರಿ ಮಠದ ೧೧೦೮ನೇ ಜಗದ್ಗುರು ಶ್ರೀ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಭವ್ಯ ಶೋಭಾಯಾತ್ರೆ ಭಜನಾತಂಡಗಳಿಂದ ಭಜನೆ, ಘೋಷಣೆಗಳೊಂದಿಗೆ ನಡೆಯಿತು. ಅಡಗೂರು ಮತ್ತು ಸುತ್ತಮುತ್ತಲ ಗ್ರಾಮಸ್ಥರು ಉತ್ಸಾಹದಿಂದ ಪಾಲುಗೊಂಡಿದ್ದರು.





     ಕಾಶಿಪುರದ ದೇವಸ್ಥಾನದ ಆವರಣದಲ್ಲಿ ಕಿಕ್ಕಿರಿದು ತುಂಬಿದ್ದ ಗ್ರಾಮಸ್ಥರು ಮತ್ತು ಕಾರ್ಯಕರ್ತರ ಸಮ್ಮುಖದಲ್ಲಿ ವೇದಭಾರತೀ ಕಾರ್ಯಕರ್ತರು ಅಗ್ನಿಹೋತ್ರ, ಸಂಕಲ್ಪ ಯಜ್ಞ ಮಾಡುವುದರ ಮೂಲಕ ಶತಮಾನಗಳ ನಂತರದಲ್ಲಿ ಆ ಸ್ಥಳದಲ್ಲಿ ಮತ್ತೊಮ್ಮೆ ಧಾರ್ಮಿಕ ಚಟುವಟಿಕೆಗಳಿಗೆ ಚಾಲನೆ ಸಿಕ್ಕಿತು. 'ಓಂ ರಾಷ್ಟ್ರಾಯ ಸ್ವಾಹಾ| ಇದಂ ರಾಷ್ಟ್ರಾಯ ಇದಂ ನ ಮಮ||' (ಈ ಸಮರ್ಪಣೆ ರಾಷ್ಟ್ರದ ಸಲುವಾಗಿ, ರಾಷ್ಟ್ರಕ್ಕೆ ಸಮರ್ಪಿತ, ಇದು ನಮ್ಮ ಸ್ವಾರ್ಥಕ್ಕಲ್ಲ} ಎಂಬ ಮಂತ್ರವನ್ನೂ ಪಠಿಸಿ ಸಮಿತ್ತು ಅರ್ಪಿಸಲಾಯಿತು. ಪುಷ್ಪಗಿರಿ ಸ್ವಾಮೀಜಿಯವರು, ಹಾಸನದಿಂದ ಬಂದು ಈ ಕಾರ್ಯ ಮಾಡುತ್ತಿರುವುದು ವಿಶೇಷವಾಗಿದೆ. ಈ ಸ್ಥಳದಲ್ಲಿ ನಡೆಯುತ್ತಿರುವ ಕಾರ್ಯ ಶ್ಲಾಘನೀಯ. ಹೊಸ ಹೊಸ ದೇವಸ್ಥಾನಗಳನ್ನು ಕಟ್ಟುತ್ತಿರುವ ಈ ಕಾಲದಲ್ಲಿ ಹಳೆಯ ದೇವಸ್ಥಾನವನ್ನು ಪುನರುದ್ಧಾರ ಮಾಡುವ ದಿಸೆಯಲ್ಲಿ ವೇದಭಾರತಿಯವರು ಮತ್ತು ಇತರರ ಕಾರ್ಯ ಮೆಚ್ಚುವಂತಹುದು. ಅಡಗೂರಿನ ಎಲ್ಲರೂ ಈ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ತಿಳಿಸಿದರು. ಹರಿಹರಪುರ ಶ್ರೀಧರ್ ಮಾತನಾಡಿ, ಈ ಕಾರ್ಯದ ಮಹತ್ವವನ್ನು ಗ್ರಾಮಸ್ಥರಿಗೆ ಮನಗಾಣಿಸಿದ್ದಾಗಿದೆ. ಮುಂದಿನ ಕೆಲಸಗಳನ್ನು ಸ್ವಾಮೀಜಿಯವರೊಂದಿಗೆ ಊರಿನವರು ಸೇರಿಕೊಂಡು ಮುಂದುವರೆಸಬೇಕು ಎಂದರು. ದೇವಸ್ಥಾನದ ಆವರಣದಲ್ಲಿ ಗ್ರಾಮಸ್ಥರು ತುಂಬಿಹೋಗಿದ್ದರು. ಎಲ್ಲರಲ್ಲೂ ಉತ್ಸಾಹ ಮತ್ತು ಕೈಜೋಡಿಸುವ ಮನಸ್ಸು ಇದ್ದುದು ಕಾಣುತ್ತಿತ್ತು.  















     ಪುನಃ ಅಡಗೂರಿನ ಬಯಲು ರಂಗಮಂದಿರದಲ್ಲಿ ಎಲ್ಲರೂ ಒಟ್ಟುಗೂಡಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪ್ರಾರಂಭದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕವಿನಾಗರಾಜ್ ವಹಿಸಿದ್ದು ಅಡಗೂರಿನ ಆನಂದ್, ವಿಶ್ವನಾಥ್, ತಾ.ಪಂ. ಸದಸ್ಯರು, ಗ್ರಾ.ಪಂ. ಅಧ್ಯಕ್ಷರು, ಹರಿಹರಪುರ ಶ್ರೀಧರ್, ಅಶೋಕಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದು, ಎಲ್ಲರೂ ಕಾಶಿಪುರ ದೇವಸ್ಥಾನದ ಪುನರುಜ್ಜೀವನಕ್ಕೆ ಮುಂದಾಗುವಂತೆ ಕರೆ ನೀಡಿದರು. ಹಾಸನದ ಸಿದ್ಧಿ ಸಮಾಧಿಯೋಗದ ತಂಡದವರಿಂದ ಭಜನೆ, ಬೆಂಗಳೂರಿನ ಕು|| ಅಕ್ಷತಾ ರಾಮಕೃಷ್ಣ ಮತ್ತು ಹಾಸನದ ಕು|| ವೈಷ್ಣವಿ ಜಯರಾಮರಿಂದ ಭರತನಾಟ್ಯ, ಶ್ರೀಮತಿ ಪಲ್ಲವಿ ಗಿರೀಶ್, ಕು|| ಶ್ರದ್ಧಾ, ತನ್ಮಯಿ, ಯಶಸ್, ಶ್ರೀಮತಿ ಕಲವಾತಿ ಮಧುಸೂದನ್ ಮತ್ತು ಇತರರಿಂದ ಭಕ್ತಿಗೀತೆಗಳು, ಕು|| ಅನೀಶ್ ಮತ್ತು ತಂಡದವರಿಂದ ಕೊಳಲು ವಾದನ, ಪತಂಜಲಿ ಯೋಗಕೇಂದ್ರಗಳವರಿಂದ ಯೋಗ ನೃತ್ಯಗಳು, ಮುಂತಾದ ಹತ್ತು ಹಲವು ಕಾರ್ಯಕ್ರಮಗಳು ನೆರೆದಿದ್ದ ಜನರ ಮನರಂಜಿಸುವಲ್ಲಿ ಯಶಸ್ವಿಯಾಯಿತು. ಒಟ್ಟಾರೆಯಾಗಿ ಹೇಳಬೇಕೆಂದರೆ ಅಡಗೂರಿನಲ್ಲಿ ನಡೆದ ಕಾರ್ಯಕ್ರಮ ನಭೂತೋ ಎಂಬಂತಿತ್ತು. ಹರಿಹರಪುರ ಶ್ರೀಧರ ಮತ್ತು ಮಿತ್ರರೆಲ್ಲರ ಶ್ರಮ, ಸಹಕಾರ, ಪಾಲುಗೊಳ್ಳುವಿಕೆ ಫಲ ನೀಡಿತ್ತು. 








     ಕಾರ್ಯಕ್ರಮದ ಪೂರ್ಣ ವ್ಯವಸ್ಥೆಯನ್ನು ಹಾಸನದ ಕಾರ್ಯಕರ್ತರೇ ಮಾಡಿದ್ದುದಲ್ಲದೆ, ಪ್ರಸಾದದ ವ್ಯವಸ್ಥೆ ಸಹ ಹಾಸನದಿಂದಲೇ ಆಗಿದ್ದು ಗಮನಾರ್ಹ. ಮುಂದಿನ ವರ್ಷದ ಕಾಶಿಪುರ ಉತ್ಸವವನ್ನು ಅಡಗೂರಿನವರೇ ಮಾಡಲು ಮುಂದೆ ಬರುತ್ತಾರೆ, ಹಾಸನ ಮತ್ತು ಪರ ಊರಿನವರು ಕೈಜೋಡಿಸುತ್ತಾರೆ ಎಂಬ ಆಶಯದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ನಿಜವಾದ ಅರ್ಥದಲ್ಲಿ ಜಾಗರಣೆ ಅಡಗೂರಿನಲ್ಲಿ ಉಂಟಾಗಿತ್ತು. ಅದು ನಿರಂತರ ಮುಂದುವರೆಯಲಿ, ಯೋಜಿತ ಕಾರ್ಯ ಸಾಧಿತವಾಗಲಿ.
ಓಂ ನಮಃ ಶಂಭವಾಯ ಚ ಮಯೋಭವಾಯ ಚ ನಮಃ ಶಂಕರಾಯ ಚ ಮಯಸ್ಕರಾಯ ಚ 
ನಮಃ ಶಿವಾಯ ಚ ಶಿವತರಾಯ ಚ || (ಯಜು. ೧೬.೪೧)
ಅರ್ಥ: ಶಾಂತಿ ಸ್ವರೂಪನಿಗೆ ನಮಸ್ಕಾರ, ಮತ್ತು ಹಾಗೆಯೇ ಆನಂದ ಸ್ವರೂಪನಿಗೆ ನಮಸ್ಕಾರ. ಶಾಂತಿಕಾರಕನಿಗೆ ನಮಸ್ಕಾರ. ಹಾಗೆಯೇ ಆನಂದಕಾರಕನಿಗೆ ನಮಸ್ಕಾರ. ಮಂಗಳ ಸ್ವರೂಪನಿಗೆ ನಮಸ್ಕಾರ. ಅಂತೆಯೇ ಮಂಗಳತರ ಸ್ವರೂಪನಿಗೆ ನಮಸ್ಕಾರ.
-ಕ.ವೆಂ. ನಾಗರಾಜ್.