Pages

Wednesday, April 21, 2010

ಅರ್ಥಶೌಚ ಶ್ರೇಷ್ಠವಾದದ್ದು


ಸರ್ವೇಷಾಮೇವ ಶೌಚಾನಾಂ ಅರ್ಥಶೌಚಂ ಪರಂ ಸ್ಮೃತಮ್|
ಯೋರ್ಥೇ ಶುಚಿ: ಸ ಹಿ ಶುಚಿರ್ನ ಮೃದ್ವಾದಿಶುಚಿ: ಶುಚಿ:||


ಎಲ್ಲಾ ರೀತಿಯ ಶೌಚಗಳಲ್ಲಿ ಅರ್ಥಶೌಚ ಶ್ರೇಷ್ಠವಾದದ್ದು, ಯಾರು ಹಣಕಾಸಿನ ವ್ಯವಹಾರದಲ್ಲಿ ಶುಚಿಯೋ ಅವನೇ ಶುಚಿ, ಮೃತ್ತಿಕೆನೀರಿನಿಂದ ತೊಳೆದುಕೊಂಡ ಮಾತ್ರಕ್ಕೆ ಶುಚಿಯಲ್ಲ.
ಶೌಚವೆಂದರೆ ಶುದ್ಧಿ. ಮೈ, ಮಾತು ಮತ್ತು ಮನಸ್ಸುಗಳ ಶುದ್ಧಿ! ಬಾಹ್ಯ ಕೊಳೆಯನ್ನು ಸ್ನಾನ ಮಾಡಿ ಶುದ್ಧಿ ಮಾಡಿಕೊಳ್ಳಬಹುದು. ಎರಡನೆಯದು ಮಾತಿನ ಶುದ್ಧಿ. ಮಾತನ್ನು ಹತೋಟಿಯಲ್ಲಿಟ್ಟು ಕೊಳ್ಳುವುದು ಸ್ವಲ್ಪ ಕಷ್ಟವೇ ಸರಿ,ಎಂತಹ ಸಂದರ್ಭದಲ್ಲೂಇನ್ನೊಬ್ಬರಿಗೆ ನೋವುಂಟುಮಾಡದೆ ಸತ್ಯವೂ, ಪ್ರಿಯವೂ, ಹಿತವೂ ಆದ ಮಾತನ್ನಾಡುವುದು ವಾಕ್ ಶುದ್ಧಿ. ಇವೆರಡಕ್ಕಿಂತಕಠಿಣವಾದುದು ಮನ: ಶುದ್ಧಿ.ಈ ಮೂರೂ ಯಾರಿಗೆ ಶುದ್ಧವಾಗಿದೆಯೋ ಅವನು ತ್ರಿಕರಣಶುದ್ಧ.ಅರ್ಥಶೌಚವು ಮುಖ್ಯವಾಗಿಮನಸ್ಸಿಗೆ ಸಂಬಂಧಿಸಿದ್ದು. ಅನ್ಯಾಯ, ಮೋಸ, ವಂಚನೆ ಮಾಡದೆ ನ್ಯಾಯಯುತವಾದ ದುಡಿಮೆಯಿಂದ ಮನುಷ್ಯ ಜೀವನಮಾಡಿದರೆ, ಹಣಕಾಸಿನ ವ್ಯವಹಾರದ ಶುದ್ಧನಾಗಿದ್ದರೆ ಅವನೇ ಶುದ್ಧ.

Tuesday, April 20, 2010

ಗೃಹಿಣಿ ಇಲ್ಲದ ಮನೆಯು ಗೃಹವೆನಿಸುವುದಿಲ್ಲ

ನ ಗೃಹಂ ಗೃಹಮಿತ್ಯಾಹು: ಗೃಹಿಣೀ ಗೃಹ ಮುಚ್ಚ್ಯತೇ|
ಗೃಹಂ ತು ಗೃಹಿಣೀಹೀನಂ ಕಾಂತಾರಾದತಿರಿಚ್ಯತೇ||

ಗೃಹಿಣಿ ಇಲ್ಲದ ಮನೆಯು ಗೃಹವೆನಿಸುವುದಿಲ್ಲ. ಗೃಹಿಣಿ ಇದ್ದರೆ ಗೃಹವೆಂದು ಕರೆಯುತ್ತಾರೆ. ಗೃಹಿಣಿಯಿಲ್ಲದ ಮನೆಯು ಕಾಡಿಗಿಂತ ಕಡೆಯೇ ಸರಿ.

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರುಪಾಯಿ.
ಹೆಂಡತಿಯೊಬ್ಬಳು ಹತ್ತಿರವಿದ್ದರೆ ನಾನು ಒಬ್ಬ ಸಿಪಾಯಿ. ಈ ಹಾಡನ್ನು ತಮಾಶೆಗಾಗಿ ಹಾಡಿಲ್ಲ. ಹೆಂಡತಿಯ ಮಹತ್ವವನ್ನು ಈ ಹಾಡೂ ಕೂಡ ಸಾರಿ ಹೇಳುತ್ತೆ. ನಮ್ಮ ಪೂರ್ವಜರು ಮನೆಯೊಡತಿಯನ್ನು "ಗೃಹಲಕ್ಷ್ಮಿ" ಎಂದು ಕರೆದರು. ಗೃಹಿಣಿ ಎಂದೂ ಕರೆದರು. ಪತ್ನಿಯ ಪತಿಯನ್ನು ಗೃಹಸ್ತನೆಂದು ಕರೆದರೂ ಸಹ ಮನೆಯೊಂದು ಶೋಭಿಸಬೇಕಿದ್ದರೆ ಅದು ಮನೆಯೊಡತಿಯಿಂದ ಮಾತ್ರವೇ ಸಾಧ್ಯ ವೆಂಬುದು ಎಲ್ಲರ ಅನುಭವದ ಮಾತು. ಮನೆಯ ಯಜಮನನಾದರೋ ಮನೆಗೆ ಬೇಕಾದ ಎಲ್ಲವನ್ನೂ ತರಬಲ್ಲ. ಆದರೆ ಅದರ ಸದುಪಯೋಗ ಗೃಹಿಣಿಯಿಂದ ಮಾತ್ರ ಸಾಧ್ಯ. ಮನೆಗೆ ಬಂದ ಅತಿಥಿ ಸತ್ಕಾರ,ಮಕ್ಕಳ ಲಾಲನೆ ಪೋಷಣೆ, ಕುಟುಂಬದ ಯೋಗ ಕ್ಷೇಮ, ಮನೆಯ ಜೋಪಾನ, ಮನೆಯಲ್ಲಿ ಲವಲವಿಕೆ, ಹಾಡುಹಸೆ, ಪೂಜೆ-ಪುನಸ್ಕಾರ, ದಾನ-ಧರ್ಮ- ಯಾವ ಕೆಲಸವಾದರೂ ಅದು ಗೃಹಿಣಿಯಿಂದ ಮಾತ್ರ ಸಾಧ್ಯ. ಅಂತಹ ಮಹತ್ವದ ಹೊಣೆ ಇರುವ ಗೃಹಿಣಿಯರು ಗೃಹ ಬಿಟ್ಟು ಹೊರಗೆ ದುಡಿಯುವ ಪರಿಸ್ಥಿತಿ! ಅದು ಅನಿವಾರ್ಯವೋ ಅಥವ ಹಣದ ವ್ಯಾಮಹವೋ, ಅಂತೂ ಇಂದಿನ ದಿನಗಳಲ್ಲಿ ಅನೇಕ ಗೃಹಿಣಿಯರ ಹೊಣೆ ಹಿಂದಿಗಿಂತಲೂ ಅತಿ ಹೆಚ್ಚು. ಕೇವಲ ಹಣಬೇಕಾದರೆ ಮನೆಯ ನೆಮ್ಮದಿಯನ್ನೇ ಬಲಿಕೊಡಬೇಕಾಗುತ್ತದೆ. ಪತಿ-ಪತ್ನಿಯರಿಬ್ಬರೂ ಉದ್ಯೋಗಮಾಡುವ ಅನೇಕ ಕುಟುಂಬಗಳಲ್ಲಿ ಜೀವನ ಬಲು ಯಾಂತ್ರಿಕ. ಜೀವನ ಪೂರ್ತಿ ಹೀಗೆಯೇ ದುಡಿದು ನೆಮ್ಮದಿಯಿಂದ ಇರುವುದಾದರೂ ಎಂದು? ಈ ವಿಷಯದಲ್ಲಿ ಪತಿ-ಪತ್ನಿಯರಲ್ಲಿ ಚಿಂತನ-ಮಂಥನ ನಡೆಯಬೇಕು. ಏನಂತೀರಾ?
ನಮ್ಮ ಸಂಸ್ಕೃತಿಯಲ್ಲಿ ಗೃಹಿಣಿಯ ಮಹತ್ವದ ಬಗ್ಗೆ ಹೀಗೆ ಹೇಳಿದ್ದರೆ, ಅನ್ಯ ಸಂಸ್ಕೃತಿಯಲ್ಲಿ ಲಿವ್ ಟುಗೆದರ್, ಬೇಸರವಾದರೆ ಡೈವರ್ಸ್! ಯೋಚನೆ ಮಾಡಿ, ನಮ್ಮ ಕುಟುಂಬದ ಕಲ್ಪನೆ ಬೇರೆಲ್ಲಿ ಸಿಗಲು ಸಾಧ್ಯ? ಇಂತಹ ಶ್ರೇಷ್ಠ ಸಂಸ್ಕೃತಿಯು ನಮ್ಮದೆಂಬ ಬಗ್ಗೆ ಹೆಮ್ಮೆ ಪಡಬೇಡವೇ?

Monday, April 19, 2010

ಆತ್ಮಜ್ಞಾನದಿಂದ ಮುಕ್ತಿಯೇ ಹೊರತು ಮುಂಡನದಿಂದಲ್ಲ

ದಾನೇನ ಪಾಣಿರ್ನ ತು ಕಂಕಣೇನ
ಸ್ನಾನೇನ ಶುದ್ಧಿರ್ನ ತು ಚಂದನೇನ|
ಮಾನೇನ ತೃಪ್ತಿರ್ನ ತು ಭೋಜನೇನ
ಜ್ಞಾನೇನ ಮುಕ್ತಿರ್ನ ತು ಮುಂಡನೇನ||

ದಾನದಿಂದ ಕೈ ಶೋಭಿಸುತ್ತದೆಯೇ ಹೊರತು ಬಳೆಯಿಂದಲ್ಲ
ಸ್ನಾನದಿಂದ ಶುದ್ಧಿಯೇ ಹೊರತು ಗಂಧ-ಚಂದನ ಲೇಪನದಿಂದಲ್ಲ
ಸ್ವಾಭಿಮಾನದಿಂದ ತೃಪ್ತಿಯೇ ಹೊರತು ಭೋಜನದಿಂದಲ್ಲ
ಆತ್ಮಜ್ಞಾನದಿಂದ ಮುಕ್ತಿಯೇ ಹೊರತು ಮುಂಡನದಿಂದಲ್ಲ.

ದಾನದಿಂದ ಕೈಗಳಿಗೆ ಶೋಭೆ ಬರುತ್ತದೆಯೇ ಹೊರತು ಮೈಮೇಲೆ ಚಿನ್ನದಾಭರಣ ಹಾಕಿಕೊಂಡು ಇತರರಿಗೆ ತೋರಿಸಿಕೊಂಡರೆ ಶೋಭಿಸುವಿದಿಲ್ಲ. ಸ್ನಾನವನ್ನೇ ಮಾಡದೆ ಮೈಗೆ ಸೆಂಟ್ ಬಳಿದುಕೊಂಡರೆ ಸಾಕೇ? ಶುದ್ಧನೀರಿನಿಂದ ಸ್ನಾನ ಮಾಡಿದಾಗ ಮಾತ್ರ ಶರೀರ ಶುದ್ಧವಾಗುತ್ತದೆ. ಮನಶುದ್ಧಿಯ ವಿಚಾರವೇ ಬೇರೆ. ವಿದ್ವಾಂಸರಿಗೆ ಸನ್ಮಾನದಿಂದ ತೃಪ್ತಿಯೇ ಹೊರತು ಪುಷ್ಕಳವಾದ ಭೋಜನದಿಂದಲ್ಲ. ಊಟ ಹೊಟ್ಟೆ ತುಂಬಲು ಮಾತ್ರ. ಕೇವಲ ತಲೆಬೋಳಿಸಿಕೊಂಡು ಕಾವಿ ಉಟ್ಟರೆ ಸಾಲದು ಆತ್ಮಜ್ಞಾನವನ್ನು ಪಡೆದುಕೊಂಡರೆ ಮಾತ್ರವೇ ಮುಕ್ತಿ.
-

Sunday, April 18, 2010

ಸನ್ಯಾಸಿಗಳಿಗೆ ಶಾಂತಿಯೇ ಅಮೃತ

ಕಾವ್ಯಂ ಸುಧಾ ರಸಜ್ಞಾನಾಂ ಕಾಮಿನಾಂ ಕಾಮಿನೀ ಸುಧಾ|
ಧನಂ ಸುಧಾ ಸಲೋಭಾನಾಂ ಶಾಂತಿ: ಸಂನ್ಯಾಸಿನಾಂ ಸುಧಾ||

ರಸವನ್ನು ಬಲ್ಲವರಿಗೆ ಕಾವ್ಯಗಳೇ ಅಮೃತ
ಕಾಮಿಗಳಿಗೆ ಕಾಮಿನಿಯೇ ಅಮೃತ
ಲೋಭಿಗಳಿಗೆ ಹಣವೇ ಅಮೃತ
ಆದರೆ ಸನ್ಯಾಸಿಗಳಿಗೆ ಶಾಂತಿಯೇ ಅಮೃತ.

ಶೃಂಗಾರ, ವೀರ, ಕರುಣ ಮುಂತಾದ ನವರಸಗಳನ್ನು ಆಸ್ವಾದನೆ ಮಾಡುವ ಕವಿ-ವಿದ್ವಾಂಸರಿಗೆ ಕಾವ್ಯಗಳೇ ಅಮೃತವಲ್ಲವೇ? ಕಾವ್ಯವನ್ನೇ ಅವರು ಆಸ್ವಾದಿಸುತಾರೆ. ಕಾಮುಕರಿಗೆ ಸದಾ ಕಾಮಿನಿಯ ಚಿಂತೆ, ಅದೇ ಅವರಿಗೆ ಅಮೃತ. ಸದಾ ಹಣ-ಹಣ ವೆಂದು ಹೆಣಗಾಡುವ ಲೋಭಿಗೆ ಹಣವೇ ಅಮೃತ. ಸರ್ವಸಂಗಪರಿತ್ಯಾಗಿಗಳಾದ ಸಂನ್ಯಾಸಿಗೆ ಸದಾ ಆತ್ಮಜ್ಞಾನದ ಸಾಧನೆ ಮಾಡುತ್ತಾ ಅವನಿಗೆ ಶಾಂತಿಯೇ ಅಮೃತವು.

Saturday, April 17, 2010

ಆತ್ಮವಿಮರ್ಶೆ

ಪ್ರತ್ಯಹಂ ಪ್ರತ್ಯವೇಕ್ಷೇತ ನರಶ್ಚರಿತಮಾತ್ಮನ:|
ಕಿಂ ನ ಮೇ ಪಶುಭಿಸ್ತುಲ್ಯಂ ಕಿಂ ನು ಸತ್ಪುರುಶೈರಿತಿ||

ಪ್ರತಿದಿನವೂ ರಾತ್ರಿ ಮಲಗುವಾಗ ತನ್ನ ಆದಿನದ ನಡತೆಯನ್ನು ತಾನೇ ವಿಮರ್ಶೆಮಾಡಿಕೊಳ್ಳಬೇಕು, " ಇಂದು ನಾನು ಪಶುಗಳಂತೆ ನಡೆದುಕೊಂಡಿಲ್ಲ, ತಾನೆ? ಸತ್ಪುರುಷನಂತೆ ಸ್ವಲ್ಪವಾದರೂ ಇಂದು ನಡೆದುಕೊಂಡಿದ್ದೇನೆಯೇ?" - ಎಂದು.

"ಬೆಳಗಿನಿಂದ ರಾತ್ರಿ ವರಗೆ ನಾನು ಏನೆಲ್ಲಾ ಮಾಡಿರುತ್ತೇನೆ, ಯಾರ್ಯಾರ ಜೊತೆ ಸಂತಸವಾಗಿ ಕಾಲ ಕಳೆದಿರುತ್ತೇನೆ, ಯಾರ್ಯಾರ ಜೊತೆ ಬೇಸರದಿಂದ ವ್ಯವಹರಿಸಿರುತ್ತೇನೆ, ಎಷ್ಟು ಕೆಲಸವನ್ನು ನ್ಯಾಯಯುತವಾಗಿ ಮಾಡಿದೆನು, ಅನ್ಯಾಯ ಮಾರ್ಗದಲ್ಲಿ ನಡೆದಿರುತ್ತೇನೆಯೇ? ವಿನಾಕಾರಣ ಯಾರಿಗೆ ನೋವುಂಟು ಮಾಡಿದೆ? ನನ್ನಿಂದ ಯಾರಿಗಾದರೂ ಸ್ವಲ್ಪವಾದರೂ ಪ್ರಯೋಜನವಾಗಿದೆಯೇ? ನಾನು ಮನುಷ್ಯತ್ವದಿಂದ ವರ್ತಿಸಿದ್ದೇನೆಯೇ? ಅಥವಾ ನನ್ನಿಂದ ತಪ್ಪಾಗಿದ್ದರೆ ಅದು ನಾಳೆ ಪುನರಾವರ್ತಿತವಾಗಬಾರದು" - ಹೀಗೆ ರಾತ್ರಿ ಮಲಗುವ ಮುಂಚೆ ೫-೧೦ ನಿಮಿಷಗಳು ಧ್ಯಾನಸ್ಥಿತಿಯಲ್ಲಿ ಕುಳಿತು ಆತ್ಮವಿಮರ್ಶೆ ಮಾಡಿಕೊಂಡಿದ್ದೇ ಆದರೆ ಪ್ರತಿದಿನವೂ ನಮ್ಮನ್ನು ಇನ್ನೂ ಹೆಚ್ಚು ಹೆಚ್ಚು ಸುಧಾರಿಸಿಕೊಳ್ಳಬಲ್ಲೆವು.

Friday, April 16, 2010

ದೂರದಿಂದ ನೋಡಿದಾಗ ಬೆಟ್ಟ ಸುಂದರ

ದೂರತ: ಪರ್ವತೋ ರಮ್ಯ:
ಬಂಧೂ ರಮ್ಯ: ಪರಸ್ಪರಮ್|
ಯುದ್ಧಸ್ಯ ಚ ಕಥಾ ರಮ್ಯಾ
ತ್ರೀಣಿ ರಮ್ಯಾಣಿ ದೂರತ: ||

ದೂರದಿಂದ ನೋಡಿದಾಗ ಬೆಟ್ಟ ಸುಂದರ.
ದೂರದಿಂದ ನೋಡಿದಾಗ ನೆಂಟರಿಷ್ಟರು ಸುಂದರ.
ದೂರದಿಂದ ನೋಡಿದಾಗ ಯುದ್ಧದ ಕಥೆ ಸುಂದರ.
ಹೀಗೆ ಈ ಮೂರೂ ದೂರದಿಂದ ಮಾತ್ರ ಸುಂದರ.


ಎಷ್ಟು ಅರ್ಥಗರ್ಭಿತವಲ್ಲವೇ? ದೂರದಿಂದ ಸುಂದರವಾಗಿ ಕಾಣುವ ಬೆಟ್ಟವನ್ನು ಹತ್ತುವಾಗ ಅಲ್ಲಿನ ಮುಳ್ಳು ಕಲ್ಲು, ಹಾವು, ಚೇಳುಎಲ್ಲವೂ ಭಯಂಕರವಾಗಿ ಕಾಣುತ್ತವೆ. ದೂರದಲ್ಲಿರುವ ನೆಂಟರಿಷ್ಟರ ಬಗ್ಗೆ ಎಂತಹಾ ಭವ್ಯ ಕಲ್ಪನೆಗಳಿರುತ್ತವೆಯೋ ಅವುಹತ್ತಿರಹೋದಾಗ ಕಾಣದೆ ಇರಬಹುದು, ಇನ್ನೂ ಹತ್ತಿರಹೋದರಂತೂ ಅವರ ಅವಗುಣಗಳೇ ಕಾಣಬಹುದು. ಹಾಗೆಯೇ ಯುದ್ಧದಕಥೆ ಕೇಳಲು ಸೊಗಸು, ಆದರೆ ಪ್ರತ್ಯಕ್ಷ ಯುದ್ಧವನ್ನು ಕಣ್ಣಾರೆ ಕಂಡರೆ ಅದು ನರಕಸದೃಶವೇ ಸರಿ.