Pages

Tuesday, January 25, 2011

ಉಪನಯನ(ಮುಂಜಿ)ಸಂಸ್ಕಾರದ ಮೂಲ ಉದ್ದೇಶವೇನು?

ವೇದೋಕ್ತ ಜೀವನ ಪಥ ಪಾಠ ಮಾಡುತ್ತಿರುವ ಶ್ರೀ ಸುಧಾಕರಶರ್ಮರು
 ಶ್ರೀ ಸುಧಾಕರ ಶರ್ಮಾ ರವರಿಗೆ,ಪ್ರಣಾಮಗಳು.
ನಿಮ್ಮ ಒಂದು ಆಡಿಯೋ ಪ್ರಕಾರ (ನಾನು ಅರ್ಥೈಸಿಕೊಂಡಂತೆ) ಬ್ರಾಹ್ಮಣನಾದವನು ಜ್ಞಾನವನ್ನು ಹೊಂದಿ, ಇತರರಿಗೆ ಮಾರ್ಗದರ್ಶಿಯಾಗುತ್ತಾನೆ, ಹಾಗೆ ಅದು ಜಾತಿಯಲ್ಲ ಎಂದು ವಿವರಿಸಿದ್ದೀರ.
ಈಗ ಪ್ರಶ್ನೆಗಳು:
೧) ನಿಮ್ಮ ಪ್ರಕಾರ ನಾವೇ ಮಾಡಿಕೊಂಡಂಥ ಬ್ರಾಹ್ಮಣರಾದ ನಾವುಗಳು ಗಂಡು ಮಕ್ಕಳಿಗೇಕೆ ಉಪನಯನ(ಮುಂಜಿ)ವನ್ನು ಮಾಡುತ್ತೇವೆ. ಅದರ ಮೂಲ ಉದ್ದೇಶವೇನು?? ಈ ಪದ್ದತಿಯನ್ನು ಮಾನವರಾದ ನಾವೇ ರೂಢಿಸಿಕೊಂಡು ಬಂದಿರುವುದೇ?
೨) ಉಪನಯನದಲ್ಲಿ ಜನಿವಾರವನ್ನು (ಎಳೆಯನ್ನು) ಹಾಕುತ್ತೇವೆ. ಅದರ ವೈಶಿಷ್ಟ್ಯವೇನು?
೩) ಉಪನಯನದ ನಂತರ ಸಂಧ್ಯಾವಂದನೆಯ ಬಗ್ಗೆ ಕೂಡ ವಿವರಿಸುವಿರಾ?
- ಚಿತ್ರ 
-------------------------------------------------
 
ಬ್ರಾಹ್ಮಣ್ಯ ಹುಟ್ಟಿನಿಂದ ಬರುತ್ತದೆ - ಎಂಬಲ್ಲಿಂದ ಚಿಂತನೆ ವೇದಗಳಿಂದ ದೂರಸರಿದಿದೆ. ನಮ್ಮ ಗುಣ, ಸ್ವಭಾವ, ಕರ್ಮಗಳನ್ನು, ನಮ್ಮ ಸೇವಾಕ್ಷೇತ್ರವನ್ನು ನೋಡಿ ನಾವು ಬ್ರಾಹ್ಮಣರೋ ಮತ್ತೇನೋ ಆಗುತ್ತೇವೆ. ಇವುಗಳಲ್ಲಿ ಮೇಲು-ಕೀಳುಗಳಿಲ್ಲ. ಬ್ರಾಹ್ಮಣನು ಎಷ್ಟು ಶ್ರೇಷ್ಠನೋ ಶೂದ್ರನೂ ಅಷ್ಟೇ ಶ್ರೇಷ್ಠ!!! ಉಪನಯನ ಮತ್ತು ವೇದಾರಂಭಸಂಸ್ಕಾರ = ಗುರುಕುಲವಾಸ ಮತ್ತು ಶಿಕ್ಷಣ. ಶಿಕ್ಷಣ ಯಾರ ಸ್ವತ್ತು? ಸಮಾಜ ಚೆನ್ನಾಗಿರಬೇಕಾದರೆ ಪ್ರತಿಯೊಬ್ಬರಿಗೂ - ಯಾವುದೇ ಭೇದಭಾವವಿಲ್ಲದೆ - ಶಿಕ್ಷಣ ಸಿಗಬೇಕು. (ಇಂದು ಸರ್ಕಾರೀ ಪೋಷಿತ ಶಿಕ್ಷಣವಲ್ಲ, ವೇದಗಳು ಸಾರುವ ಮಾನವೀಯ ಶಿಕ್ಷಣ, ವ್ಯಕ್ತಿತ್ವ ರೂಪಕ ಶಿಕ್ಷಣ.) ಉಳಿದೆಲ್ಲವೂ ನಾವೇ ಅರೆಬರೆ ಜ್ಞಾನದಿಂದ ರೂಢಿಸಿಕೊಂಡಿರುವ ಚಿಂತನೆಯಿಲ್ಲದ ಸಂಪ್ರದಾಯ! ಮೊದಲನೆಯ ಎಳೆ - ದೇವಋಣ - ಪರಮಾತ್ಮನಿಂದ ಪಡೆದುಕೊಂಡಿರುವ ಎಲ್ಲ ಸೌಲಭ್ಯಗಳ ವಿಚಾರದಲ್ಲಿ ಕೃತಜ್ಞತೆ. ಈ ಋಣವನ್ನು ತೀರಿಸುವ ಸಂಕಲ್ಪ. ಆ ಎಲ್ಲ ಕೊಡುಗೆಗಳನ್ನೂ ಶುದ್ಧವಾಗಿ ರಕ್ಷಿಸುವುದು, ಇತರರೊಡನೆ ಹಂಚಿಕೊಳ್ಳುವುದು ವಿಧಾನ. (ನೀರು, ಗಾಳಿ, ಜ್ಞಾನ, ಪ್ರಕೃತಿಸಂಪತ್ತು ಇತ್ಯಾದಿ) ಜ್ಞಾನ. ಮಾನವ ಇತರ ಪ್ರಾಣಿಗಳಿಗಿಂತ ಭಿನ್ನವಾಗಿರುವುದೇ ಈ ಜ್ಞಾನದ ಕಾರಣದಿಂದ. ಇತರ ಪ್ರಾಣಿಗಳಲ್ಲಿ ಕೇವಲ ಸ್ವಾಭಾವಿಕ ಜ್ಞಾನವಿದ್ದರೆ, ಮನುಷ್ಯನಲ್ಲಿ ಅದರೊಂದಿಗೆ, ನೈಮಿತ್ತಿಕ್ ಜ್ಞಾನ, ಆಥ್ಯಾತ್ಮಿಕ ಜ್ಞಾನಗಳೂ ಸೇರಿವೆ. ಈ ಜ್ಞಾನಗಳನ್ನು ಸಂಪಾದಿಸುವೆ ಎಂಬ ಸಂಕಲ್ಪ. ಮನಸ್ಸಿನ ಶುದ್ಧಿ. ನಮ್ಮ ಅಂತರಂಗದಲ್ಲಿ ಕೊಳೆ ಇರುವವರೆಗೂ ಶಾಂತಿ, ಆನಂದಗಳ ಅನುಭವ ಉಂಟಾಗುವುದಿಲ್ಲ. ಆ ಕೊಳೆಗಳನ್ನು ಕಳೆದುಕೊಂಡು ಶುದ್ಧತೆಯನ್ನು ಗಳಿಸುತ್ತೇನೆ ಎಂಬ ಸಂಕಲ್ಪ. ಎರಡನೆಯ ಎಳೆ - ಪಿತೃ ಋಣ. ತಂದೆ-ತಾಯಿಗಳು, ಪಾಲಕ ಪೋಷಕರು ನಮ್ಮ ಬಾಲ್ಯ ಕಾಲದಲ್ಲಿ ಕಿಂಚಿತ್ತೂ ಬೇಸರಿಸಿಕೊಳ್ಳದೆ, ಅಸಹ್ಯಪಟ್ಟುಕೊಳ್ಳದೆ ನಮಗೆ ಆಶ್ರಯ, ಆಹಾರ, ಬಟ್ಟೆ, ಪ್ರೀತಿ ಮೊದಲಾದುವನ್ನು ಕೊಟ್ಟಿದ್ದಾರೆ. ನಮ್ಮ ಮಲ-ಮೂತ್ರಗಳನ್ನು ಶುಚಿಗೊಳಿಸಿದ್ದಾರೆ. ಈ ಬಗ್ಗೆ ನಮ್ಮ ಕೃತಜ್ಞತೆ ಆವಶ್ಯಕ. ಅವರ ವೃದ್ಧಾಪ್ಯದಲ್ಲಿ (ಅವರು ಬದುಕಿರುವಾಗ) ನಮ್ಮ ಕೈಯಿಂದಲೇ ಅವರ ಸೇವೆಯನ್ನು ಅದೇ ಭಾವನೆಯಿಂದ ಮಾಡುವುದು ಈ ಋಣವನ್ನು ತೀರಿಸಿಕೊಳ್ಳುವ ಬಗೆ. ಕೇವಲ ಜ್ಞಾನ ನಿರುಪಯುಕ್ತ. ಅದು ಆಚರಣೆಗೆ ಇಳಿಯಬೇಕು. ಅದನ್ನೇ ಕರ್ಮ ಎನ್ನುತ್ತಾರೆ. ಮಾನವಜೀವನದಲ್ಲಿ ಇದೂ ಪ್ರಮುಖಸ್ಥಾನವನ್ನು ಪಡೆಯುತ್ತುದೆ. ಮಾತಿನ ಶುದ್ಧಿಯೂ ಅತ್ಯಗತ್ಯ. ನಮ್ಮ ಮಾತು ತೂಕವಾಗಿರಬೇಕು. ಮಾತಿನಲ್ಲಿ ಸತ್ಯ, ಪ್ರಿಯ ಮತ್ತು ಹಿತದ ಪ್ರಮಾಣ ಹೆಚ್ಚಿದಂತೆ ತೂಕವೂ ಹೆಚ್ಚುತ್ತಾ ಹೋಗುತ್ತದೆ. ಮೂರನೆಯ ಎಳೆ - ಆಚಾರ್ಯ ಋಣ. ಯಾರು ಯಾರು ನಮಗೆ ಜೀವನ ಶಿಕ್ಷಣವನ್ನು ಕೊಟ್ಟಿದ್ದಾರೋ ಅವರೆಲ್ಲರೂ ಆಚಾರ್ಯರೇ. ಅವರ ಸಾಧನೆ, ಜ್ಞಾನ, ಅನುಭವಗಳ ಸಾರವನ್ನು ಅಮಗೆ ಧಾರೆಯೆರೆದಿರುತ್ತಾರೆ. (ನಾನಿಲ್ಲಿ ಆಚಾರ್ಯ ಹೆಸರನ್ನು ಇಟ್ಟುಕೊಂಡಿರುವ ಬಗ್ಗೆಯಾಗಲೀ, ಸಂಬಳಕ್ಕೆ ಪಾಠ ಮಾಡುವ Teachers ಬಗ್ಗೆಯಾಗಲೀ ಹೇಳುತ್ತಿಲ್ಲ) ಅವರ ಕೊಡುಗೆಯ ಬಗ್ಗೆ ಕೃತಜ್ಞತೆ. ಆ ಜ್ಞಾನವನ್ನು ರಕ್ಷಿಸಿ, ನಮ್ಮ ಸಾಧನೆ, ಜ್ಞಾನ, ಅನುಭವಗಳಿಂದ ಸಮೃದ್ಧಿಗೊಳಿಸಿ ಮುಂದಿನ ಜನಾಂಗಕ್ಕೆ ನೀಡುವುದೇ ಆಚಾರ್ಯ ಋಣವನ್ನು ತೀರಿಸುವ ಬಗೆ. ಅದಕ್ಕಾಗಿ ಸಂಕಲ್ಪ. ಜ್ಞಾನ, ಕರ್ಮಗಳೊಂದಿಗೆ, ಸರ್ವವ್ಯಾಪಿಯೂ,ಸರ್ವಶಕ್ತವೂ, ಸರ್ವಜ್ಞವೂ, ಸಾರ್ವಭೌಮವೂ, ಆನಂದಸ್ವರೂಪವೂ ಆದ ಒಂದು ಪರಮಾತ್ಮಶಕ್ತಿ ಸದಾ ನಮ್ಮೊಂದಿಗಿದೆ ಎಂಬ ದೃಢ ಅರಿವು, ಅದರ ಆಧಾರದ ಮೇಲೆ ಮೂಡುವ ಆತ್ಮವಿಶ್ವಾಸ, ಜೀವನೋತ್ಸಾಹಗಳೇ ಉಪಾಸನೆ. ಇದೂ ಮಾನವಜೀವನದ ಸಾರ್ಥಕತೆಗೆ ಅನಿವಾರ್ಯ. ನಮ್ಮ ಎಲ್ಲ ಕರ್ಮಗಳೂ ಈ ಉಪಾಸನೆಯ ಭಾವನೆಯಿಂದ ನಡೆದಲ್ಲಿ ಕಾಯಶುದ್ಧಿ ಸಾಧಿಸಿದಂತೆ. ಈ ಸಂಕಲ್ಪ, ಸಾಧನೆಗಳನ್ನು ನೆನಪಿಸುವುದಕ್ಕಾಗಿ ಮೂರು ಎಳೆಯ ಯಜ್ಞೋಪವೀತ - ಸತ್ಕರ್ಮಗಳನ್ನು ಮಾಡಲು ದೃಢನಿರ್ಧಾರ ಕೈಗೊಂಡಿರುವ ಸಂಕೇತ. ಅವರವರ ಕರ್ತವ್ಯಗಳನ್ನು ಅವರವರೇ ಮಾಡಬೇಕು. ಹೆಂಡತಿಯ ಜನಿವಾರವನ್ನು ಗಂಡ ಹಾಕಿಕೊಳ್ಳುವುದು ಈ ಹಿನ್ನೆಲೆಯಲ್ಲಿ ಅಜ್ಞಾನ ಎಂಬುದು ಸುಲಭವಾಗಿ ತಿಳಿಯುತ್ತದಲ್ಲವೇ? ಅಂತೆಯೇ ಇದು ಸಕಲ ಮಾನವರಿಗೂ ಕೊಡಬೇಕಾದ ಸಂಸ್ಕಾರ ಎಂಬುದನ್ನೂ ಹೇಳದೆಯೇ ತಿಳಿಯಬಹುದಲ್ಲವೇ? ಉಪನಯನ, ವೇದಾರಂಭ ಸಂಸ್ಕಾರಗಳಲ್ಲಿ ತಿಳಿಹೇಳುವ (ಮೇಲಿನ ಜ್ಞಾನದೊಂದಿಗೆ ಇನ್ನೂ ಇವೆ) ವಿಚಾರಗಳನ್ನು ದಿನವೂ ಬೆಳಿಗ್ಗೆ, ಸಂಜೆ ನೆನಪಿಸಿಕೊಳ್ಳುವುದೇ ಸಂಧ್ಯಾವಂದನೆ. ಸಹಜವಾಗಿಯೇ ನಮಗೆ ಮರೆವಿರುತ್ತದೆ. ಅದನ್ನು ಮೀರುವ ಒಂದು ವಿಧಾನವಿದು. (ಮತ್ತೊಮ್ಮೆ ಯಾವಾಗಲಾದರೂ ಸಂಧ್ಯೋಪಾಸನೆಯ ಮಂತ್ರಗಳ ಬಗ್ಗೆ ವಿಚಾರ ಮಾಡೋಣ.)  -ಸುಧಾಕರ ಶರ್ಮಾ

Monday, January 24, 2011

ನಮ್ಮ ಆಯಸ್ಸು ಪೂರ್ವ ನಿರ್ಧಾರಿತವೇ?

ಪುನರ್ಜನ್ಮ-ಒಂದು ವಿವರಣೆ
ನಮ್ಮ ಆಯಸ್ಸು ಪೂರ್ವ ನಿರ್ಧಾರಿತವೇ?



ವೇದಾಧ್ಯಾಯೀ ಸುಧಾಕರ ಶರ್ಮರ ಮಾತುಗಳೇ ಹಾಗೆ . ಮನ ಮುಟ್ಟುತ್ತವೆ. ಮನ ತಟ್ಟುತ್ತವೆ. ವೇದದ ಬಗೆಗೆ ಮಾತನಾಡುವಾಗ  ಹೀಗೂ ಮಾತನಾಡಲು ಸಾಧ್ಯವೇ?ಎಂಬ ಆಶ್ಚರ್ಯ ಮತ್ತು ಕುತೂಹಲವು ಒಟ್ಟಿಗೆ ಮೂಡುತ್ತವೆ ಈಗ ಕೇಳಿ , ಶರ್ಮರ ಹತ್ತು ನಿಮಿಷದ ಮಾತುಗಳನ್ನು.ನಿಮ್ಮ ಪ್ರಾಮಾಣಿಕ ಅನಿಸಿಕೆಗಳು ಮುಂದಿನ ನಮ್ಮ ಪ್ರಯತ್ನಗಳಿಗೆ ಪ್ರೇರಕವೆಂಬುದು ನೆನಪಿರಲಿ.

Sunday, January 23, 2011

Saturday, January 22, 2011

ಸತ್ಯದ ಹುಡುಕಾಟದಲ್ಲಿ

ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ದೊಡ್ಡಮಗ್ಗೆ ಗ್ರಾಮದಲ್ಲಿ ವೇದೋಕ್ತ ಜೀವನ ಪಥ ಕುರಿತು ಮೂರು ದಿನಗಳ ಕಾರ್ಯಾಗಾರ ಆರಂಭವಾಗಿದೆ. ಶ್ರೀ ಸುಧಾಕರ ಶರ್ಮರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ಶಿಬಿರದಲ್ಲಿ ವೇದಸುಧೆಯ ಸಂಪಾದಕ ಹರಿಹರಪುರ ಶ್ರೀಧರ್ ಸೇರಿದಂತೆ ೧೫ ಆಸಕ್ತರು ಪಾಲ್ಗೊಂಡಿದ್ದಾರೆ. ಶಿಬಿರಾರ್ಥಿಗಳು ಊಟ, ಉಪಹಾರ, ಕೆಲಸ ಕಾರ್ಯಗಳನ್ನು ಸ್ವತಃ ತಾವೇ ನಿರ್ವಹಿಸಿಕೊಂಡು ಅಧ್ಯಯನ, ಚರ್ಚೆಗಳಲ್ಲಿ ತೊಡಗಿರುವುದು ಅಪೂರ್ವ ಅನುಭವವೇ ಸರಿ. ಪರಮಾತ್ಮ, ಜೀವಾತ್ಮ, ಜಡವಸ್ತುಗಳ ಕುರಿತು ವೇದ ಏನು ಹೇಳುತ್ತದೆ ಎಂಬ ಬಗ್ಗೆ, ಪ್ರಚಲಿತ ಸಂಪ್ರದಾಯಗಳು, ನಂಬಿಕೆಗಳು, ಇತ್ಯಾದಿಗಳ ವಿಚಾರಗಳಲ್ಲಿ ಮುಕ್ತ ಮತ್ತು ಪೂರ್ವಾಗ್ರಹವಿಲ್ಲದ ಚರ್ಚೆ ಸಾಗುತ್ತಿದೆ. ದಿನಾಂಕ ೨೨-೦೧-೧೧ರಂದು ನಡೆದ ಶಿಬಿರದ ಕೆಲವು ದೃಷ್ಯಗಳು ವೇದಸುಧೆ ವೀಕ್ಷಕರಿಗಾಗಿ:


ಮುಕ್ತ ಸಂವಾದ

                                                          ಅಗ್ನಿ ಹೋತ್ರ








ಶಿಭಿರಾರ್ಥಿಗಳ ಸಂದೇಹಗಳ ಸಮಾಧಾನ ಶ್ರೀ ಸುಧಾಕರ ಶರ್ಮರಿಂದ
    

Friday, January 21, 2011

ವಾರ್ಷಿಕೋತ್ಸವ ಮಾಹಿತಿ

ವೇದಸುಧೆಯ ಆತ್ಮೀಯ ಅಭಿಮಾನಿಗಳೇ,
ವಾರ್ಷಿಕೋತ್ಸವ ದಿನವು ಸಮೀಪಿಸುತ್ತಿದ್ದಂತೆ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳಲು ಹಾಸನಕ್ಕೆ ಬರಲು ಉತ್ಸುಕರಾಗಿರುವ ಅನೇಕರು ಮೇಲ್ ಮೂಲಕ ಹಾಗೂ  ದೂರವಾಣಿಯ ಮೂಲಕ ವೇದಸುಧೆಯ ಸಂಪರ್ಕದಲ್ಲಿದ್ದಾರೆ.ವಾರ್ಷಿಕೋತ್ಸವದ ಹಿಂದಿನ ದಿನ ಸಂಜೆ ಶ್ರೀ ಸುಧಾಕರಶರ್ಮರ ಉಪನ್ಯಾಸವೊಂದು ಯೋಜಿಸಲ್ಪಟ್ಟಿರುವುದರಿಂದ ಹಲವರು ಆಹೊತ್ತಿಗೇ ಬರುವುದಾಗಿ ತಿಳಿಸಿದ್ದಾರೆ. ಬೆಂಗಳೂರಿನಿಂದ ನಲವತ್ತಕ್ಕೂ ಹೆಚ್ಚು ಅಭಿಮಾನಿಗಳು ಹೊರಟಿದ್ದರೂ ಬೇರೆ ಬೇರೆ ಸಮಯದಲ್ಲಿ ಅವರವರ ಅನುಕೂಲಕ್ಕೆ ತಕ್ಕಂತೆ ಹೊರಡುತ್ತಿರುವುದರಿಂದ ಒಟ್ಟಾಗಿ ಒಂದು ವಾಹದಲ್ಲಿ ಹೊರಡುವ ಚಿಂತನೆ ಕಾರ್ಯರೂಪಕ್ಕೆ ಬರುತ್ತದೋ ಇಲ್ಲವೋ ತಿಳಿಯದು.ಈ ಮಧ್ಯೆ  ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ದೊಡ್ದಮಗ್ಗೆ  ಸಮೀಪ ಒಂದು ಹಳ್ಳಿಯಲ್ಲಿ ಶ್ರೀ ಸುಧಾಕರಶರ್ಮರ ಮಾರ್ಗದರ್ಶನದಲ್ಲಿ ವೇದೋಕ್ತ ಜೀವನ ಕಾರ್ಯಾಗಾರ ಒಂದು ಇಂದು ರಾತ್ರಿ [21.01.2011] ಆರಂಭವಾಗಿ 25.01.2011 ರಂದು ಬೆಳಿಗ್ಗೆ ವರಗೆ ನಡೆಯಲಿದೆ.ಆ ಕಾರ್ಯಾಗಾರದಲ್ಲಿ ನಾನೂ ಕೂಡ ಪಾಲ್ಗೊಳ್ಳುತ್ತಿದ್ದೇನಾದ್ದರಿಂದ 
25.01.2011ರವರಗೆ ದೂರವಾಣಿಯಾಗಲೀ ಅಥವಾ ಅಂತರ್ಜಾಲ ಸಂಪರ್ಕವಾಗಲೀ ದೊರೆಯುವ ಅವಕಾಶಗಳು ಕಡಿಮೆ ಇರಬಹುದು. ಆದರೆ ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿನಾಗರಾಜರು ಅಂತರ್ಜಾಲ ಸಂಪರ್ಕಕ್ಕೂ ದೂರವಾಣಿ ಸಂಪರ್ಕಕ್ಕೂ ಲಭ್ಯವಿರುತ್ತಾರಾದ್ದರಿಂದ ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ ಅವರನ್ನು ದಯಮಾಡಿ ಸಂಪರ್ಕಿಸಿ. 
kavinagaraj2010@gmail.com
Mo: 9448501804
29.01.2011 ರಂದು ರಾತ್ರಿ ವಸತಿ ಹಾಗೂ ಊಟೋಪಚಾರದ ವ್ಯವಸ್ಥೆ ಇರುವುದರಿಂದ ಶನಿವಾರ ಸಂಜೆ 6.00 ಗಂಟೆಯೊಳಗೆ  ಶರ್ಮರ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆಯೇ ಬರಲು ಕೋರುತ್ತೇನೆ.
-ಹರಿಹರಪುರ ಶ್ರೀಧರ್
ಸಂಪಾದಕ,
  ವೇದಸುಧೆ

Thursday, January 20, 2011

ವೇದೋಕ್ತ ಜೀವನ ಪಥ: ಜೀವಾತ್ಮ ಸ್ವರೂಪ-4

ಭಗವಂತನ ಪ್ರೇರಣೆಯಂತೆಯೇ ಜೀವಾತ್ಮರು ಬೇರೆ ಬೇರೆ ಶರೀರಗಳಲ್ಲಿ ಜನ್ಮವೆತ್ತುತ್ತಾರೆ. ಕೇಳಿರಿ:-


ಅನಚ್ಛಯೇ ತುರಗಾತು ಜೀವಮೇಜತ್ ಧೃವಂ ಮಧ್ಯ ಆ ಹಸ್ತ್ಯಾನಾಮ್|
ಜೀವೋ ಮೃತಸ್ಯ ಚರತಿ ಸ್ವಧಾಭಿರಮರ್ತ್ಯೋ ಮರ್ತ್ಯೇನಾ ಸಯೋನಿಃ|| (ಋಕ್. ೧.೧೬೪.೩೦.)
     [ತುರಗಾತು] ವೇಗಶಾಲಿಯೂ [ಧೃವಮ್] ಧೃಢವೂ ಆದ ಪರಮಾತ್ಮ ತತ್ವವು, [ಅನತ್] ಎಲ್ಲರಿಗೂ ಜೀವದಾನ ಮಾಡುತ್ತಿದೆ. [ಶಯೇ] ಅಂತಃಸ್ಥಿತವಾಗಿದೆ. [ಜೀವಮ್] ಜೀವಾತ್ಮನನ್ನು [ಆಪಸ್ತ್ಯಾನಾಂ ಮಧ್ಯೇ] ಲೋಕಲೋಕಾಂತರಗಳ ನಡುವೆ [ಏಜತ್] ಪ್ರವೇಶಗೊಳಿಸುತ್ತದೆ. [ಮೃತಸ್ಯ ಜೀವಃ] ಮೃತನಾದವನ ಜೀವಾತ್ಮವು [ಅಮರ್ತ್ಯಃ] ಸ್ವತಃ ಅಮರವಾಗಿದ್ದು [ಮರ್ತ್ಯೇನಾ ಸಂಯೋನಿಃ] ಮೃತ್ಯುವಿಗೀಡಾಗುವ ಶರೀರದೊಂದಿಗೆ ಸಹಜೀವಿಯಾಗಿ [ಸ್ವಧಾಭಿಃ] ತನಗೆ ಪ್ರಾರಬ್ಧ ರೂಪದಲ್ಲಿ ಲಭಿಸಿದ ಅನ್ನ-ಜಲಗಳೊಂದಿಗೆ, [ಚರತಿ] ಸಂಚರಿಸುತ್ತದೆ.
     ಇದು ವೇದೋಕ್ತವಾದ ಸತ್ಯ. ಇದೆಂದಿಗೂ ಸುಳ್ಳಾಗಲಾರದು. ಈ ರೀತಿ ಜನ್ಮವೆತ್ತಿ ಅದೆಷ್ಟು ಸಾರಿ ಜಗತ್ತಿಗೆ ಬರುತ್ತಾರೋ, ಅಮರರಾದ ಜೀವಾತ್ಮರು. ಋಗ್ವೇದದ ಈ ಮಂತ್ರವೂ ಮನನೀಯವೇ ಆಗಿದೆ.


ಅಪಶ್ಯಂ ಗೋಪಾಮನಿಪದ್ಯಮಾನಮಾ ಚ ಪರಾ ಪಥಿಭಿಶ್ಚರಂತಮ್|
ಸ ಸಧ್ರೀಚೀಃ ಸ ವಿಷೂಚೀರ್ವಸಾನ ಆ ವರೀವರ್ತಿ ಭುವನೇಷ್ವಂತಃ|| (ಋಕ್. ೧.೧೬೪.೩೧.)
     [ಆ ಚ ಪರಾ ಚ ಪಥಿಭಿಃ ಚರಂತಮ್] ಆ ಮಾರ್ಗ ಈ ಮಾರ್ಗಗಳಿಂದ ಸಂಚರಿಸುವ [ಆನಿಪದ್ಯಮಾನಮ್] ಅವಿನಾಶಿಯಾದ [ಗೋಪಾಮ್] ಇಂದ್ರಿಯಗಳ ಪಾಲಕನಾದ ಜೀವಾತ್ಮನನ್ನು [ಆಪಶ್ಯಮ್] ನಾನು ನೋಡುತ್ತಿದ್ದೇನೆ. [ಸಃ] ಅವನು [ಸಧ್ರೀಚೀಃ] ನೇರವಾಗಿ ನಿಂತು ನಡೆಯುವ ಶರೀರಗಳನ್ನೂ [ಸಃ[ ಅವನೇ [ವಿಷೂಚೀಃ] ತೆವಳಿಕೊಂಡು ಹೋಗುವ ಶರೀರಗಳನ್ನೂ [ವಸಾನಃ] ನೆಲೆಗೊಳಿಸುತ್ತಾ [ಭುವನೇಷು ಅಂತಃ] ಲೋಕಗಳ ಒಳಕ್ಕೆ [ಆ ಪರೀವರ್ತಿ] ಬಂದು ಹೋಗಿ ಮಾಡುತ್ತಿರುತ್ತಾನೆ.
      ಇದೀಗ ಸ್ಪಷ್ಟ ತತ್ತ್ವ ದರ್ಶನ. ಅಥರ್ವವೇದದ ಇನ್ನೆರಡು ಮಂತ್ರಗಳನ್ನು ಉದ್ಧರಿಸಿದರೆ ಜೀವಾತ್ಮನ ನಿಜವಾದ ಸ್ವರೂಪ ಪಾಠಕರ ಚಿತ್ತಭಿತ್ತಿಗಳ ಮೇಲೆ ಸ್ಫುಟವಾಗಿ ಅಂಕಿತವಾಗುತ್ತದೆ.


ತ್ವಂ ಸ್ತ್ರೀ ತ್ವಂ ಪುಮಾನಸಿ ತ್ವಂ ಕುಮಾರ ಉತ ವಾ ಕುಮಾರೀ|
ತ್ವಂ ಜೀರ್ಣೋ ದಂಡೇನ ವಂಚಸಿ ತ್ವಂ ಜಾತೋ ಭವಸಿ ವಿಶ್ವತೋಮುಖಃ|| (ಅಥರ್ವ.೧೦.೮.೨೭)


     ಓ ಜೀವಾತ್ಮನ್! [ತ್ವಂ ಸ್ತ್ರೀ] ನೀನು ಸ್ತ್ರೀಯಾಗಿದ್ದೀಯೆ. [ತ್ವಂ ಪುಮಾನ್ ಅಸಿ] ನೀನು ಪುರುಷನಾಗಿದ್ದೀಯೆ. [ತ್ವಂ ಕುಮಾರಃ] ನೀನು ಕುಮಾರನಾಗಿದ್ದೀಯೆ. [ಉತ ವಾ] ಮತ್ತು [ಕುಮಾರೀ] ಕುಮಾರಿಯಾಗಿದ್ದೀಯೆ. [ತ್ಮ್] ನೀನು [ಜೀರ್ಣಃ] ವೃದ್ಧನಾಗಿ [ದಂಡೇನ ವಂಚಸಿ] ಕೋಲನ್ನೂರಿ ತಡವರಿಸುತ್ತಾ ನಡೆಯುತ್ತೀಯೆ. [ತ್ವಮ್] ನೀನು [ಜಾತಃ] ಜನ್ಮವೆತ್ತಿ [ವಿಶ್ವತೋಮುಖಃ ಅಸಿ] ಎಲ್ಲೆಡೆಯೂ ಮುಖ ಮಾಡುತ್ತೀಯೆ.
     ಪರಮಾತ್ಮನೆಂತೋ ಜೀವಾತ್ಮನೂ ಅಂತೆಯೇ ಲಿಂಗರಹಿತನು. ಆದರೆ ಧರಿಸಿದ ಶರೀರದ ದೃಷ್ಟಿಯಿಂದ ಸ್ತ್ರೀ ಅಥವಾ ಪುರುಷ, ಕುಮಾರ ಅಥವಾ ಕುಮಾರೀ ಎನ್ನಿಸಿಕೊಳ್ಳುತ್ತಾನೆ.


ಉತೈಷಾಂ ವಿತೋತ ವಾ ಪುತ್ರ ಏಷಾಮುತೈಷಾಂ ಜ್ಯೇಷ್ಠ ಉತ ವಾ ಕನಿಷ್ಠಃ|
ಏಕೋ ಹ ದೇವೋ ಮನಸಿ ಪ್ರವಿಷ್ಟಃ
ಪ್ರಥಮೋ ಜಾತಃ ಸ ಉ ಗರ್ಭೇ ಅಂತಃ|| (ಅಥರ್ವ.೧೦.೮.೨೮)


     [ಉತ] ಮತ್ತು [ಏಷಾಂ ಪಿತಾ] ಇವರ ತಂದೆ [ಉತ ವಾ] ಅಥವಾ [ಏಷಾಂ ಪುತ್ರಃ] ಇವರ ಮಗ [ಉತ] ಅಥವಾ [ಏಷಾಂ ಜ್ಯೇಷ್ಠಃ] ಇವರ ಅಣ್ಣ [ಉತ ವಾ] ಅಥವಾ [ಕನಿಷ್ಠಃ] ತಮ್ಮ [ಹ] ನಿಜವಾಗಿ [ಏಕ ದೇವಃ] ಒಬ್ಬನೇ ಜ್ಞಾನವಂತ ಚೇತನನು [ಮನಸಿ ಪ್ರವಿಷ್ಟಃ] ಮನಃಕಾಮನೆಯ ಒಳಹೊಕ್ಕಿದ್ದಾನೆ. [ಪ್ರಥಮಃ] ಆ ಶ್ರೇಷ್ಠ ಆತ್ಮನು [ಜಾತಃ] ಜನ್ಮವೆತ್ತಿದನು. [ಸ ಉ] ಅವನೇ ಮತ್ತೆ [ಗರ್ಭೇ ಅಂತಃ] ಗರ್ಭದಲ್ಲಿ ಪ್ರವೇಶ ಮಾಡಿದ್ದಾನೆ.
     ಪಾಠಕರಿಗೆ ಈಗ ಜೀವಾತ್ಮನ ವಿಷಯದಲ್ಲಿ ಒಂದು ಸ್ಪಷ್ಟ ಕಲ್ಪನೆ ಬಂದಿರಬಹುದು. ಹೀಗೆಯೇ ಜನ್ಮವೆತ್ತುತ್ತಾ, ಎತ್ತುತ್ತಾ ಕ್ರಮಕ್ರಮವಾಗಿ ವಿಕಾಸ ಹೊಂದಿ, ಪರಿಶುದ್ಧ ಧರ್ಮದ ಆಚರಣೆಯಿಂದ ವಿಶುದ್ಧ ಜ್ಞಾನ ಗಳಿಸಿ, ನಿಜವಾದ ಭಗವದುಪಾಸನೆ ಮಾಡಿ, ಸತ್ಕರ್ಮನಿಷ್ಠನಾಗಿ, ಪೂರ್ಣ ಪವಿತ್ರತೆಯನ್ನು ಗಳಿಸಿ, ಕೊನೆಗೆ ಮೋಕ್ಷ ಪಡೆಯುತ್ತಾನೆ. ಮೋಕ್ಷದ ಸ್ವರೂಪವೇನೆಂಬುದನ್ನು ಪಾಠಕರು ಮುಂದೆ ಓದುವರು. ಇಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯಾಂಶವಿದೆ. ಆ ದೇವಪುತ್ರನನ್ನು ನಂಬು, ಈ ದೇವದೂತನಿಗೆ ಶರಣಾಗು, ಈಮತಹ ಸಾಧು-ಸಂತರ ಸೇವೆ ಮಾಡು, ಅವರ ದಯೆಯಿಂದ, ಅವರ ಮಧ್ಯಸ್ತಿಕೆಯಿಂದ ದೇವರು ನಿನಗೆ ಮೋಕ್ಷ ನೀಡುವನು - ಈ ಮೊದಲಾದ ಅರ್ಥರಹಿತವಾದ, ಪಾಮರಕೋಟಿಯ ಕಣ್ಣಿಗೆ ಮಣ್ಣೆರಚುವ, ಆತ್ಮಘಾತುಕವಾದ ಟೊಳ್ಳು ಸಿದ್ಧಾಂತಗಳನ್ನು ವೇದಗಳು ಒಪ್ಪುವುದಿಲ್ಲ.