Pages

Wednesday, December 7, 2011

ಬದುಕು



            


When I am happy, I see the happiness in others. When I am depressed, I notice that people's eyes look sad. 
When I am weary, I see the world as boring and unattractive.

- Steve Chandler -


  ಈ ಬದುಕನ್ನು  ಒಂದು ರೀತಿಯ ರಹಸ್ಯ, ವಿಚಿತ್ರ, ಸುಂದರ, ಅಸಹನೀಯ, ನಿರೀಕ್ಷೆ, ಇತ್ಯಾದಿಯಾಗಿ ಹಲವಾರು ವಿಚಾರವಂತರು ತಮ್ಮ ವಿಚಾರಗಳನ್ನು ಧಾಖಲಿಸಿದ್ದಾರೆ. ಪ್ರತಿಯೊಬ್ಬರೂ ಬದುಕನ್ನ ತಮ್ಮ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಅರ್ಥಮಾಡಿಕೊಂಡು ಬದುಕುತ್ತಿದ್ದಾರೆ. ಸುಖ, ದುಃಖ, ನೋವು, ನಲಿವು, ಪ್ರೀತಿ, ದ್ವೇಷ, ರೋಗ,ಬಡತನ, ಸಿರಿತನ, ಇತ್ಯಾದಿ ಮಜಲುಗಳ ಮಧ್ಯೆ ಬದುಕು ಸವೆಯುತ್ತಿದೆ. ಬದುಕು ಕೆಲವರಿಗೆ ಅರ್ಥಪೂರ್ಣವೆನಿಸಿದರೆ ಕೆಲವರಿಗೆ ಅರ್ಥಹೀನ. ಕೆಲವರಿಗೆ ಸುಂದರ ಮತ್ತೆ ಕೆಲವರಿಗೆ ನಿರಾಶೆ.    "ಏಕೆ ಹೀಗೆ? ಹಾಗಾದರೆ ಬದುಕು ಎಂದರೆ ನಿಜವಾದ ಅರ್ಥದಲ್ಲಿ ಏನು?" ಎಂಬ ಪ್ರಶ್ನೆ ಯುವಕನೊಬ್ಬನ ಮನಸ್ಸಿನಲ್ಲಿ ಹುಟ್ಟಿತು. ಸಾಕಷ್ಟು ಯೋಚಿಸಿದ,ಸರಿಯಾದ  ಉತ್ತರ ಸಿಗಲಿಲ್ಲ.
                      ತನ್ನ ಸುತ್ತಲ ಪ್ರಪಂಚ ನೋಡುತ್ತಾ ಹೊರಟ.  ಎಲ್ಲರು ಬದುಕು ನಡೆಸುತ್ತಿರುವವರೇ, ಯಾರನ್ನು ಕೇಳುವುದು? ದಾರಿ ಮಧ್ಯದಲ್ಲಿ ಯುವಕ ಯುವತಿಯರ ತಂಡವನ್ನು ಕಂಡು ವಿಚಾರಿಸಿದ. " ಅಯ್ಯೋ , ಈಗಲೇ ಬದುಕಿನ ಚಿಂತೆ ಏಕೆ? ಮೊದಲು ಖುಷಿಯಾಗಿ ಬದುಕೋಣ."ಎಂದು ಮುಂದೆ ಸಾಗಿದರು. ನಂತರದಲ್ಲಿ ಒಬ್ಬ ವಿಶ್ವವಿದ್ಯಾನಿಲಯದ ಪ್ರಾದ್ಯಾಪಕರನ್ನು ಕಂಡು ಬದುಕಿನ ಬಗ್ಗೆ ವಿಚಾರಿಸಿದ. ಅವರು " ಈ ವರಗೆ ಬದುಕು ಹೀಗೆ ನಿರ್ಧಿಷ್ಟ  ಎಂದು ಹೇಳುವ ಯಾವ ಪುಸ್ತಕವನ್ನು ನಾನು  ಓದಿಲ್ಲ. ಹುಡುಕುತ್ತೇನೆ, ಸಿಕ್ಕರೆ ನಿನಗೆ ತಿಳಿಸುತ್ತೇನೆ." ಎಂದು ಜಾರಿಕೊಂಡ.
                      ಏನಿದು? ಬದುಕಿಗೆ ಅರ್ಥವೇ ಗೊತ್ತಿಲ್ಲದೇ ನಾವೆಲ್ಲಾ ಬದುಕುತ್ತೀದ್ದೆವೆಯೇ?  ಎಂದು ಯುವಕ ಚಿಂತೆಗೆ ಒಳಗಾದ. ನಿರಾಶನಾಗದೆ ಮಧ್ಯ ವಯಸ್ಕ ಸಂಸಾರಸ್ತನಲ್ಲಿ  ಬದುಕಿನ ಬಗ್ಗೆ ಕೇಳಿದ. " ನಾನು ಈಗಾಗಲೇ ಅರ್ಧ ಜೀವನ ಸವೆಸಿದ್ದೇನೆ, ಮಕ್ಕಳ ಜವಾಬ್ದಾರಿ ಇನ್ನು ಇದೆ. ನನ್ನದಾಗಿ ಒಂದು ಮನೆ ಇಲ್ಲ. ಸಂಸಾರದ ಜವಾಬ್ದಾರಿಯೆಲ್ಲ ಮುಗಿದಮೇಲೆ ಬದುಕಿನ ಬಗ್ಗೆ ಚಿಂತಿಸುತ್ತೇನೆ " ಎಂಬ ಉತ್ತರ ಬಂತು. ಕೊಂಚ ನಿರಾಶನಾದರು ಬದುಕಿನ ಬಗ್ಗೆ ತಿಳಿಯುವ ಕುತೂಹಲ ಜಾಸ್ತಿ ಇತ್ತು. ನಂತರದಲ್ಲಿ ತನಗೆ ಸಿಕ್ಕ ವಯೋವ್ರುದ್ದ ,ಸಂಗೀತಗಾರ , ರಾಜಕಾರಣಿ ಹೀಗೆ ಎಲ್ಲರಲ್ಲೂ ವಿಚಾರಿಸಿದ. ಯಾರಿಂದಲೂ ಸಮರ್ಪಕ ಉತ್ತರ ಸಿಗಲಿಲ್ಲ. 
                     ಬೇಸರವಾಯಿತು, ನಿರ್ಜನ ಪ್ರದೇಶಕ್ಕೆ ಹೋಗಿ ಅಲ್ಲಿ ಗಿಡ ಮರ, ಹರಿಯುವ ನೀರು, ಹಸಿರು ನೆಲ, ಬೆಟ್ಟ ,ನೀಲಿ ಆಕಾಶ ಎಲ್ಲವನ್ನು ನೋಡಿದ ಮೇಲೆ   ಮನಸ್ಸು ಶಾಂತವಾಯಿತು. ಸ್ವಲ್ಪ ಸಮಯದ ನಂತರದ, ಹತ್ತಿರದಲ್ಲೇ ದ್ಯಾನಸಕ್ತನಾಗಿದ್ದ ಒಬ್ಬ ವಯೋವ್ರುದ್ದ  ಸನ್ಯಾಸಿಯಲ್ಲಿ  ಹೋಗಿ ಬದುಕಿನ ಬಗ್ಗೆ ತಿಳಿಸಲು ಪ್ರಾರ್ಥಿಸಿದ. ಸನ್ಯಾಸಿ ನಸುನಗುತ್ತ, " ಬದುಕು ಎಂದರೆ ಸವಿಜೇನು, ಬದುಕು ಎಂದರೆ ಸದಾಕಾಲ ಹರಿವ ನೀರು; ಬದುಕು ಎಂಬುದು ಸುಂದರ ಸಂಗೀತ; ಬದುಕು ಎಂದರೆ ಸುಂದರ,ಪರಮ ಪ್ರೇಮ ಹಾಗು ಭಕ್ತಿ. ಇದನ್ನು ಸರಿಯಾಗಿ ಅರ್ಥ ಮಾಡಿಕೊ, ಬದುಕಿನ ಅರ್ಥ ತಿಳಿಯುತ್ತದೆ. ನಂತರದಲ್ಲಿ ನಿನಗೆ ಅನುಭವವಾಗುತ್ತದೆ." ಎಂದು ಹೇಳಿದ. ನಮ್ಮ ಯುವಕನಿಗೆ ಹೆಚ್ಚು ಅರ್ಥವಾಗದ್ದಿದ್ದರು ಸಮಾಧಾನವಾಯಿತು. ನಮಸ್ಕರಿಸಿ ಹೊರಟ.  
                     ಹೌದು, ಬದುಕು ಎನ್ನುವುದಕ್ಕೆ ಇಂಥದೇ ಅರ್ಥ ಎನ್ನುವ ಯಾವ ನಿರ್ಧಿಷ್ಟ ಉತ್ತರ ಇಲ್ಲ. ಬದುಕಿನಲ್ಲಿ ಎಲ್ಲವು ಅನಿವಾರ್ಯಗಳೇ! ಯಾವುದರಿಂದಲೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ತಪ್ಪಿಸಿಕೊಳ್ಳುವ ಪ್ರಯತ್ನಕ್ಕಿಂತ ಎದುರಿಸುವ ಎದೆಗಾರಿಕೆ ತೋರಿದಲ್ಲಿ ಬದುಕು ಸಹ್ಯವೆನಿಸುತ್ತದೆ.ನಾವು ಹೇಗೆ ಭಾವಿಸುತ್ತೇವೋ ಹಾಗೆ ನಮಗೆ ಬದುಕು ಕಾಣುತ್ತದೆ. ಕಣ್ಣಿಗೆ ಬಣ್ಣದ ಕನ್ನಡಕ ಹಾಕಿಕೊಂಡಂತೆ. ಯಾವ ಬಣ್ಣದ್ದು ಎಂಬುವುದರ ಮೇಲೆ ಬದುಕಿನ ಬಣ್ಣ ನಿರ್ಭರವಾಗುತ್ತದೆ. ನಮ್ಮ ಮನಸ್ಸಿನ  ಸ್ಥಿತಿಯ ಮೇಲೆ ಬದುಕು ತೋರುತ್ತದೆ. ಈ ಮೇಲಿನ ಉದಾಹರಣೆಗಳು ಇದನ್ನೇ ಹೇಳುತ್ತವೆ. ಬದುಕಿನ ಅರ್ಥ ಹುಡುಕುವ ಬದಲಿಗೆ, ಬದುಕಿನಲ್ಲಿ ಹೇಗಿರಬೇಕೆನ್ನುವ ಬಗ್ಗೆ ಚಿಂತಿಸಿ  ಬಾಳುವೆ ಮಾಡಿದರೆ  ಹೆಚ್ಚು ಉಪಯುಕ್ತ. ಕನ್ನಡಿಯನ್ನು ಒರಸಿ ಶುಚಿಮಾಡಿದಂತೆ, ಮನ- ಮನೆಯ ಒಳಗೂ ಹೊರಗು ನಿತ್ಯ ಗುಡಿಸಿ ಕಸ ತೆಗೆದರೆ, ಬಾಳುವೆ ಮಾಡುವ ಬದುಕು ಹೊಸತಾಗಿ ಕಾಣಲು ಸಹಕಾರಿ. ಆಗ ಬದುಕು ಅಮೂಲ್ಯ ಎನಿಸಬಹುದು, ಸಾರ್ಥಕ ಎನಿಸಬಹುದು, ಶಾಂತೆನಿಸಬಹುದು. 
                     ನೀವೇನು ಹೇಳುತ್ತೀರಾ?.................
--

ಸಾವು


ಮೊನ್ನೆ ನಮ್ಮ ಕಾಲೇಜಿನ ವಿಧ್ಯಾರ್ಥಿ ಸತ್ತನೆಂಬ ಸುದ್ದಿ ಬಂತು. 2 ನೆ ವರ್ಷದ ಎಂಜಿನೀರಿಂಗ್ ವ್ಯಾಸಂಗ ಮಾಡುತ್ತಿದ್ದ ಈ ಹುಡುಗ ತನ್ನ ಗೆಳೆಯ ಗೆಳತಿಯರ ಜೊತೆಯಲ್ಲಿ ನಿಸರ್ಗ ಧಾಮಕ್ಕೆ ಪ್ರಕೃತಿ ಸೌಂದರ್ಯ ಸವಿದು ಭಾನುವಾರವನ್ನು ಸಾರ್ಥಕ ಪ್ರವಾಸವನ್ನಾಗಿ ಮಾಡಿ ಬರಲೆಂದು ಹೋಗಿದ್ದ. ನಿಸರ್ಗವನ್ನು ಸವಿಯುವಾಗ ನೀರಿನಲ್ಲಿ ಅಕಸ್ಮಾತ್ತಾಗಿ ಬಿದ್ದು ಹೃದಯಾಘಾತದಿಂದ ಅಸು ನೀಗಿದ. 19 -20 ರ ನಡುವಿನ ಪ್ರಾಯದ ಹುಡುಗ ಅನಿರೀಕ್ಷಿತವಾಗಿ ಎಲ್ಲರಿಂದ ಕಾಣದ ಲೋಕಕ್ಕೆ ಪ್ರಯಾಣ ಬೆಳೆಸಿದ ಎಂದರೆ ಯಾರಿಗೆ ಆದರು ಆಘಾತವೇ! ಚುರುಕು ಬುದ್ದಿಯ, ಬುದ್ದಿವಂತ,ಸ್ನೇಹಮಯಿಯಾಗಿದ್ದನೆಂದು ಅವನನ್ನು ಸಮೀಪದಿಂದ ಬಲ್ಲ ಅವನ ಸ್ನೇಹಿತ ಹೇಳಿಕೊಂಡು ದುಃಖಪಡುತ್ತಿದ್ದ. ಈ ಹುಡುಗನ ಸ್ನೇಹಿತನಿಗೆ ಇಷ್ಟೊಂದು ದುಃಖ ಆಗಿರಬೇಕಾದರೆ ಈ ಹುಡುಗನ ಹೆತ್ತವರ ದುಃಖ ಊಹಿಸಲು ಅಸಾಧ್ಯ.
ಇಂತಹ ಒಂದು ಸಂದರ್ಭದಲ್ಲಿ ಅಲ್ಲಿ ನೆರೆದವರ ಮಾತು ಬೇರೆಯಾಗಿಯೇ ಸಾಗಿತ್ತು. " ದೇವರು ಅದೆಂತ ಕಟುಕ ರೀ, ಇಷ್ಟು ಚೆಂದದ ಹುಡುಗನೇ ಬೇಕಿತ್ತಾ? ಅದೆಷ್ಟು ಜನ ಸಾಯಲು ಹಾತೊರೆಯುತ್ತಿರುವಾಗ ಆ ಕಾಯಿಲೆಯವರನ್ನು, ಮುದುಕರನ್ನು ಬಿಟ್ಟು ಈ ಮುದ್ದಾದ ಹುಡುಗನನ್ನು ಕರೆದುಕೊಂಡು ಬಿಟ್ಟನಲ್ಲ?" ಎಂದು ಸಂತಾಪ ವ್ಯಕ್ತ ಮಾಡಿದರೆ, ಮತ್ತೊಬ್ಬರು " ಈ ಹುಡುಗರಿಗೆ ಬುದ್ದಿ ಇದೆಯೇ? ಅಲ್ಲಾರಿ, ನೀರಿನ ಹತ್ತಿರ ಯಾಕೆ ಹೋಗಬೇಕಾಗಿತ್ತು? ಹುಡುಗಾಟದ ವಯಸ್ಸು ನೋಡಿ ಹೀಗೆಲ್ಲ ಆಡಿಸುತ್ತೆ." "ಇವರು ಟೂರ್ ಹೋಗಲಿಲ್ಲಂತ ಯಾರು ಅಳುತ್ತಿದ್ರು ಹೇಳಿ, ಮಕ್ಕಳು ಏನೋ ಮಾಡಿಕೊಂಡು ಬಿಡ್ತಾರೆ. ಆದರೆ, ಅನುಭವಿಸೋರಿಗೆ ತಾನೇ ತಿಳಿಯೋದು" ಎಂದರು ಮಗದೊಬ್ಬರು. " ಅದೆಷ್ಟು ಕಷ್ಟ ಬಿದ್ದು ಓದಿಸ್ತಾ ಇದ್ರು, ನೋಡಿ ಹೀಗೆ ಆಗೋಯ್ತು". ಎಂದರು ಇನ್ನೊಬ್ಬರು. ಹೀಗೆ ಸಾಗಿತ್ತು ಮಾತಿನ ಲಹರಿ.
ಜನರ ಮಾತಿಗೆ ಕೊನೆ ಮೊದಲಿಲ್ಲದೆ ಹಿಡಿತವಿರದೆ ಸಾಗಿತ್ತು. ಇದನ್ನೆಲ್ಲಾ ದೂರದಲ್ಲಿ ನಿಂತು ಗಮನಿಸುವಾಗ ನನ್ನ ವಿಚಾರ ಲಹರಿ ಓಡಿದ್ದೆ ಬೇರೆ ದಿಕ್ಕಿನಲ್ಲಿ. ಸಾವು ಯಾರನ್ನು ಹೇಳಿ ಕೇಳಿ ಬರುತ್ತೆ? ಯಾವಾಗ ಬರುತ್ತೆ ಎಂಬುದು ಯಾರಿಗೆ ತಾನೆ ಗೊತ್ತು? ಹುಟ್ಟು ಎಂಬುದು ಬಂದ ಕೂಡಲೇ ಸಾವು ನಮ್ಮ ಹಿಂದೆಯೇ ಇರುತ್ತದೆ. ನಾವು ಹುಟ್ಟುವ ಮೊದಲು ಒಂದು unconditional agreement ಮಾಡಿಕೊಂಡೆ ಬಂದಿರುತ್ತೇವೆ. ಯಾವಾಗ ಕರೆದರೂ ಯಾವ ಸಬೂಬು ಹೇಳದೆ ಸುಮ್ಮನೆ ಹೊರಡುತ್ತೇವೆ ಎಂದು. ಸಾವು ಯಾವ ಕ್ಷಣದಲ್ಲಿ ಎಂದು ಯಾರಿಗೂ ಗೊತ್ತಾಗದ ಹಾಗೆ ಯಮ ಕರೆಸುತ್ತಾನೆ. ಸಾವಿಗೊಂದು ಕಾರಣ ಮಾತ್ರ ನೀಡೆ ಕರೆದುಕೊಂಡು ಹೋಗುತ್ತಾನೆ. ಹುಟ್ಟಿನಷ್ಟೇ ಸಾವು ಕೂಡ ನಿಗೂಡ. ಕೆಲವರು ಮುಂದೆ ಹೋಗುತ್ತಾರೆ ಮತ್ತೆ ಕೆಲವರು ಹಿಂದೆ, ಆದರೆ ಎಲ್ಲರು ಹೋಗಲೇ ಬೇಕಾದ ಜಾಗ ಇದು. ಪ್ರತಿ ಸಾವು ಕೂಡ ನಮಗೊಂದು ಎಚ್ಚರಿಕೆ ನೀಡುತ್ತಿರುತ್ತದೆ. "ನೀನು ಸಾವಿನ ಸಾಲಿನಲ್ಲಿ ನಿಂತಿದ್ದಿಯ".
ಉಳಿದಷ್ಟು ದಿನದಲ್ಲಿ ನನ್ನ ಬದುಕನ್ನು ಹೇಗೆ ಸಾರ್ಥಕ ಮಾಡಿಕೊಳ್ಳಬಹುದು? ಇರುವಷ್ಟು ಸಮಯದಲ್ಲಿ ನಾವೇನು ಒಳ್ಳೆಯದು ಮಾಡಬಹುದು? ಮತ್ತೊಬ್ಬರಿಗೆ ಸಾಧ್ಯವಾದಷ್ಟು ಮಟ್ಟಿಗೆ ತೊಂದರೆ ಕೊಡದೆ ಹೇಗೆ ಬದುಕಬಹುದು? ನಮ್ಮ ನಮ್ಮ ಕರ್ತವ್ಯವನ್ನ ಎಷ್ಟು ಪ್ರಾಮಾಣಿಕರಾಗಿ ಮಾಡಬಹುದು? ನಾವೆಷ್ಟು ಹೃದಯವನ್ತರಾಗಿ ಬಾಳಬಹುದು? ಹೇಗೆ ಉತ್ಸಾಹದಿಂದ ಜಗತ್ತನ್ನು ನೋಡಬಹುದು? ಪ್ರೀತಿ ಪ್ರೇಮದಿಂದ ಎಷ್ಟು ಕಾಲ ಸ್ವತಂತ್ರರಾಗಿ ಬಾಳುವೆ ನಡೆಸಬಹುದು? ಇತ್ಯಾದಿಗಳನ್ನು ಸಕಾರಾತ್ಮಕವಾಗಿ ಚಿಂತನೆ ನಡೆಸಿ,ಅದರಂತೆ ಬಾಳುವೆ ನಡೆಸಿದರೆ ಸಾವಿನಲ್ಲೂ ಧನ್ಯತೆ ಸಿಗಬಹುದೇನೋ ಎಂದೆನಿಸುತ್ತದೆ.
ಇದಕ್ಕೆ ನಿಮ್ಮ ಚಿಂತನೆ ಏನು?
-ಹೆಚ್.ಏನ್.ಪ್ರಕಾಶ್ 

Saturday, December 3, 2011

ಶ್ರೀ ಶೃತಿ ಪ್ರಿಯರ ಸಂದರ್ಶನ



ವೇದ ತರಂಗ ಮಾಸ ಪತ್ರಿಕೆಯ ಸಂಪಾದಕರಾದ ಶ್ರೀ ಶೃತಿ ಪ್ರಿಯರ ಸಂದರ್ಶನ. ಸಂದರ್ಶಿಸುವವರು ವೇದಾಧ್ಯಾಯೀ ಶ್ರೀ ಸುಧಾಕರಶರ್ಮ.

ಚಹಾಇಲ್ಲ.

ಧಾರವಾಡದ ಚಿಂತಕ ಹಾಗೂ ನಿವೃತ್ತ ಶಿಕ್ಷಕರಾದ ಶ್ರೀ ಸುರೇಶ ಕುಲಕರ್ಣಿಯವರು ನಿನ್ನೆ ನಮ್ಮ ಮನೆಯಲ್ಲಿ ನಡೆದ ಸತ್ಸಂಗಕ್ಕೆ ಬಂದಿದ್ದರು. ಅವರ ಜೀವನದ ಒಂದು ಘಟನೆ ಅವರ ಮಾತಿನಲ್ಲಿ ಕೇಳಿದಾಗ ನಮ್ಮ ಸಂಸ್ಕೃತಿ ಪರಂಪರೆಯ ಬಗ್ಗೆ ಅಭಿಮಾನ ಇಮ್ಮಡಿಯಾಯ್ತು. ಆ ಘಟನೆ ನೀವೂ ಕೇಳಿ.......
ಕುಲಕರ್ಣಿಯವರ ವಿಧ್ಯಾರ್ಥಿ ಜೀವನದ ಒಂದು ಘಟನೆ. ರಾತ್ರಿ  ಬಹಳ ಹೊತ್ತು ನಿದ್ರೆಗೆಟ್ಟು  ಕೆಲವು ಪೈಂಟಿಂಗ್ ಗಳನ್ನು ಮಾಡಿದ್ದರು. ಬೆಳಗಾಗೆದ್ದಾಗ    ಅಮ್ಮನ ಹತ್ತಿರ ಹೋಗಿ ಅರ್ಧ ಲೋಟ ಚಹಾ ಕೇಳಿದರು. ಅಮ್ಮ ಹೇಳಿದರು. 'ಇಲ್ಲ." ಸಕ್ಕರೆ ಖಾಲಿಯಾಗಿದೆ. ಸ್ವಲ್ಪ ಸಮಯ ಕಳೆಯಿತು. ಮನೆಗೆ ಯಾರೋ ಮೂರು ಜನ ಅತಿಥಿಗಳು ಬಂದರು. ಅಮ್ಮ ಅವರನ್ನು ಆದರದಿಂದ ಬರಮಾಡಿಕೊಂಡು ಚಹಾ ಕೊಟ್ಟಿದ್ದೆ ಅಲ್ಲದೆ  ಮಧ್ಯಾಹ್ನ ಊಟ ಮುಗಿಸಿಯೇ ಹೋಗಬೇಕೆಂದು ತಾಕೀತು ಮಾಡಿದ್ದರು. ಇದನ್ನು ಕಂಡ ಸುರೇಶ ಕುಲಕರ್ಣಿಯವರಿಗೆ ಅಮ್ಮನ ಮೇಲೆ ಸಿಟ್ಟು ಬಂದಿತ್ತು. ತಾನು ಕೇಳಿದರೆ ಅಮ್ಮ  ಸಕ್ಕರೆ ಇಲ್ಲವೆಂದು ಚಹಾ ಕೊಡಲಿಲ್ಲ, ಆದರೆ  ಮನೆಗೆ ಬಂದ ಅತಿಥಿಗಳಿಗೆ ಸಂತೋಷ ದಿಂದಲೇ ಚಹಾ ಮಾಡಿಕೊಟ್ಟಳಲ್ಲಾ!!
ಅಷ್ಟೇ ಅಲ್ಲ ಮಧ್ಯಾಹ್ನ ಊಟಕ್ಕೂ ಕೀರು ಮಾಡಿ ಬಡಿಸಿದ್ದಳು. ಕುಲಕರ್ಣಿಯವರಿಗೆ ಸಿಟ್ಟು ಇನ್ನೂ ಹೆಚ್ಚಾಯ್ತು. ಅಮ್ಮನ ಮೇಲೆ ಸಿಟ್ಟಾಗಿಯೇ   ಇದ್ದರು. ಅದನ್ನು ಗಮನಿಸಿದ ಅಮ್ಮ  ಒಂದು ಕಪ್ ಚಹಾ ಮಾಡಿಕೊಂಡು ಮಗನಿಗೆ ಕೊಡಲು ಹೋದರು. ಮಗ ಸಿಟ್ಟಾಗಿ" ನನಗೆ ನಿನ್ನ ಚಹಾ ಬೇಡ, ಅದನ್ನು ಮೋರಿಗೆ ಚೆಲ್ಲು! ಎಂದು ಸಿಟ್ಟಾಗಿ ಹೇಳಿದಾಗ ಅಮ್ಮ ಹಾಗೆಯೇ ಮಾಡಿದರು. ಕಪ್ ತೊಳೆದು ಅದರ ಸ್ಥಾನದಲ್ಲಿರಿಸಿ ಮೌನವಾದರು. 
ಬಂದ ಅತಿಥಿಗಳು ಮನೆಯಿಂದ ತೆರಳಿದರೂ ಮಗನ ಸಿಟ್ಟು ಇಳಿದಿರಲಿಲ್ಲ. ಮಗನ ಹತ್ತಿರ ಹೋದ ತಾಯಿ ಮಗನನ್ನು ಅಡಿಗೆ ಮನೆಗೆ ಕರೆದು " ಇಲ್ಲಿ ನೋಡೋ  ಈ  ಡಬ್ಬದ ಸಾಲುಗಳಲ್ಲಿ ಮೇಲಿನ ಸಾಲು ಇದೆಯಲ್ಲಾ, ಅದು ಅತಿಥಿಗಳಿಗಾಗಿ ಮೀಸಲಿಟ್ಟ ಡಬ್ಬಗಳು! ನೋಡು ಇವುಗಳಲ್ಲಿ  ಚಹಪುಡಿ, ಸಕ್ಕರೆ, ಬೇಳೆ....ಇತ್ಯಾದಿ  ಅಡಿಗೆಗೆ ಬೇಕಾಗುವ ಎಲ್ಲಾ ಸಾಮಾನುಗಳೂ ಇವೆ. ಪ್ರತಿ ತಿಂಗಳು ಅಂಗಡಿಯಿಂದ ಸಾಮಾನು ಕೊಂಡು ತಂದಾಗ ಎಲ್ಲದರಲ್ಲೂ ಒಂದು ಹಿಡಿಯನ್ನು  ಈ ಡಬ್ಬಗಳಿಗೆ ಮೊದಲು ಹಾಕುವೆ. ನಂತರ ನಮ್ಮ ಮನೆಬಳಕೆಗೆ ಇರುವ ಡಬ್ಬಗಳನ್ನು ತುಂಬಿಸುವೆ. ಯಾವುದೇ ಸಮಯದಲ್ಲಿ ಇದ್ದಕ್ಕಿದ್ದಂತೆ ಯಾರೇ ಅತಿಥಿಗಳು ಬಂದರೂ ಅವರ ಆತಿಥ್ಯಕ್ಕೆ ಕಷ್ಟವಾಗಬಾರದು . ಆದರೆ ಇವತ್ತು ಮನೆಬಳಕೆಯ ವಸ್ತುಗಳಲ್ಲಿ ಸಕ್ಕರೆ ಮುಗಿದುಹೋಗಿದೆ. ಅತಿಥಿಗಳಿಗಾಗಿ ಇಟ್ಟಿರುವುದರಲ್ಲಿ ನಿನಗೆ ಚಹಾ ಮಾಡಿಕೊಟ್ಟರೆ ನೀನು ನಮ್ಮ ಮನೆಯ ಅತಿಥಿಯಾಗುತ್ತೀಯೇ. ನೀನು ನಮ್ಮ ಮನೆಯ ಮಗನಾಗಿರಬೇಕೋ ಅಥವಾ  ಅತಿಥಿಯಾಗಬೇಕೋ ? ನೀನೇ ಹೇಳು. ಅದಕ್ಕಾಗಿಯೇ ನೀನು ಚಹಾ ಮೋರಿಗೆ ಚೆಲ್ಲು ಎಂದೊಡನೆಯೇ  ನಾನು ಚೆಲ್ಲಿದೆ. ನನ್ನ ಮಗ ನನಗೆ ಮಗನಾಗಿಯೇ ಇರಬೇಕೆಂಬುದು ನನ್ನಿಚ್ಚೆ!!

ಘಟನೆ ಓದಿದಿರಾ?  ಇದಕ್ಕೆ ವಿವರಣೆ ಬೇಕಾ? ನಮ್ಮ ಭಾರತೀಯ ಗೃಹಿಣಿ ಹೇಗಿರಬೇಕೆಂಬುದಕ್ಕೆ ಕುಲಕರ್ಣಿಯವರ ತಾಯಿ ಆದರ್ಶವಲ್ಲವೇ?


                

ಸಂಪಾದಕೀಯ: ಮಡೆಸ್ನಾನದ ಜತೆಗೆ ಪಂಕ್ತಿಭೇದವೂ ನಿಷೇಧವಾಗಬೇಕಲ್ಲವೇ?

ಸಂಪಾದಕೀಯ: ಮಡೆಸ್ನಾನದ ಜತೆಗೆ ಪಂಕ್ತಿಭೇದವೂ ನಿಷೇಧವಾಗಬೇಕಲ್ಲವೇ?: ಮಡೆಸ್ನಾನದ ಬಗ್ಗೆ ಎದ್ದಿರುವ ವಿವಾದ ದೊಡ್ಡದಾಗಿ ಬೆಳೆಯುತ್ತಲೇ ಇದೆ. ಮಡೆಸ್ನಾನ ವಿರೋಧಿಸಿ ಪ್ರತಿಭಟನೆಗೆ ತೆರಳಿದ್ದ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಎಂಬ ಸಂಘಟನೆಯ ಶ...

Friday, December 2, 2011

ಅಲ್ಲಿ ವಿಠೋಬನೆಂಬ ಒಬ್ಬ ಸಾಹುಕಾರ !

ಅಲ್ಲಿ ವಿಠೋಬನೆಂಬ ಒಬ್ಬ ಸಾಹುಕಾರ !

ವಾಸ್ತವಿಕವಾಗಿ ಹೇಳಬೇಕಾದರೆ ನಾನು ದೈನಿಕ ಧಾರಾವಾಹಿಗಳನ್ನು ನೋಡುವುದಿಲ್ಲ. ಆದರೂ ಆರಂಭದಿಂದ ಇಲ್ಲೀವರೆಗೂ ಆಗಾಗ ಆಗಾಗ ನನ್ನನ್ನು ಸೆಳೆದಿದ್ದು ಒಂದೇ ಒಂದು ಧಾರಾವಾಹಿ ’ಶ್ರೀ ಗುರು ರಾಘವೇಂದ್ರ ವೈಭವ’. ಭರತಭೂಮಿ ಕಂಡ ತಪೋನಿಧಿಗಳಲ್ಲಿ ಮಂಚಾಲೆಯ ಶ್ರೀಗುರು ರಾಘವೇಂದ್ರ ತೀರ್ಥರೂ ಒಬ್ಬರು. ಅವರ ಹುಟ್ಟಿನಿಂದ ಹಿಡಿದು ನಡೆದ ಬಹುತೇಕ ಎಲ್ಲಾ ಘಟನೆಗಳನ್ನೂ ಸವಿಸ್ತಾರವಾಗಿಯೂ ಸಮರ್ಪಕವಾಗಿಯೂ ಜನರಿಗೆ ತಲ್ಪಿಸುವಲ್ಲಿ ನಿರ್ದೇಶಕ ಬ.ಲ.ಸುರೇಶ್ ಯಶಸ್ವಿಯಾಗಿದ್ದಾರೆ. ಆಯಾ ಪಾತ್ರಗಳ ಪೋಷಣೆಗಳನ್ನು ಎಲ್ಲಾ ಕಲಾವಿದರೂ ಅಷ್ಟೇ ಭಕ್ತಿಯಿಂದ, ಪ್ರೀತಿಯಿಂದ ನಿರ್ವಹಿಸುತ್ತಿದ್ದಾರೆ. ಅದರಲ್ಲಂತೂ ರಾಘವೇಂದ್ರರ ಪಾತ್ರಧಾರಿ ಆ ಪಾತ್ರಕ್ಕೆ ಹೇಳಿಮಾಡಿಸಿದ ಹಾಗಿರುವುದು ನನಗೆ ಬಹಳ ಖುಷಿಕೊಟ್ಟಿದೆ. ಭೂಮಿಕೆಯನ್ನು ಹಂಚುವುದರಲ್ಲೂ ಕಲಾವಿದರ ಆಯ್ಕೆಯಲ್ಲೂ ನಿರ್ದೇಶಕರು ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದಾರೆ.

ಅನೇಕ ಹಾಡುಗಳನ್ನೂ ದಾಸರ ಪದಗಳನ್ನೂ ಒಳಗೊಂಡಿರುವ ಧಾರಾವಾಹಿಯಲ್ಲಿ ಕೆಲವು ಹಾಡುಗಳಂತೂ ಅಮೋಘವಾಗಿವೆ, ವಿದ್ಯಾಭೂಷಣರ ಕಂಠಸಿರಿ ಮನಸ್ಸನ್ನು ಸಹಜಸ್ಥಿತಿಯಲ್ಲಿ ಗೆದ್ದುಬಿಡುತ್ತದೆ. ಒಂದು ದಿನ ಹೀಗೇ ತಡವಾಗಿ ಬಂದು ಊಟಕ್ಕೆ ಕುಂತಿದ್ದೆ, ಹತ್ತು ಗಂಟೆಯಾಗಿತ್ತು. ಸಾಮಾನ್ಯವಾಗಿ ಆ ಹೊತ್ತಿಗೆ ಇದ್ದರೆ ಟಿವಿ ೯ ಬಿತ್ತರಿಸುವ ಜಸ್ಟ್ ಬೆಂಗಳೂರು ನೋಡುವುದು ನನ್ನ ಅಭ್ಯಾಸ. ಆದರೆ ಆ ದಿನ ಮಾತ್ರ ಅದರ ಬದಲು ಯಾಕೋ ಸುವರ್ಣ ವಾಹಿನಿಯನ್ನು ನೋಡಲು ಆರಂಭಿಸಿದ್ದೆ. ಸಂಗೀತ ವಾದ್ಯ ಪರಿಕಕರಗಳಿಲ್ಲದೇ ಸಹಜವಾಗಿ ಕೈತಟ್ಟಿಕೊಂಡು ಹಾಡಿದ ಒಂದು ಹಾಡು ನನ್ನನ್ನು ಇನ್ನೂ ಹಿಡಿದಿಟ್ಟಿದೆ. ಮತ್ತೆ ಮತ್ತೆ ನೋಡಬೇಕೆನಿಸುತ್ತದೆ. ಮಂತ್ರಾಲಯ ಮಠದ ಗುರುವಿನ ಶಿಷ್ಯರೂ ಮಠದ ಕೆಲಸಗಳಲ್ಲಿ ನಿರತರಾಗಿರುವ ಜನರು ಸೇರಿ ಒಂದೆಡೆ ಕುಳಿತು ಹಾಡುವ ಸನ್ನಿವೇಶ. ಶ್ವೇತವಸ್ತ್ರಧಾರೀ ಬ್ರಾಹ್ಮಣ ವೇಷದ ಹತ್ತಾರು ಮಂದಿ ಕೂತು ಹಾಡಿದ ಆ ದೃಶ್ಯಾವಳಿ ಈಗಲೂ ಕಾಡುತ್ತದೆ.

ಪಂಢರಾಪುರವೆಂಬ ಒಂದು ನಗರ
ಅಲ್ಲಿ ವಿಠೋಬನೆಂಬ ಒಬ್ಬ ಸಾಹುಕಾರ....

ನಿಜಕ್ಕೂ ವಿಠೋಬ ಸಾಹುಕಾರನೇ ಹೌದು. ಮಹಾರಾಷ್ಟ್ರದ ಇಂದಿನ ಮರಾಠಾವಾಡಾ[ಹಿಂದೆ ವಿದರ್ಭದಲ್ಲಿತ್ತು]ದಲ್ಲಿರುವ ತನ್ನ ಆಲಯ ಶ್ರೀಮಂತಿಕೆಯಿಂದ ಕೂಡಿದ್ದರೂ ಆ ಜಿಲ್ಲೆಯಾದ್ಯಂತ ರೈತರು ಅನುಭವಿಸುತ್ತಿರುವ ಯಾತನೆಯನ್ನು ಮಾತ್ರ ಆತ ಯಾಕೆ ಕೇಳುತ್ತಿಲ್ಲ ಎಂಬುದು ನನಗೆ ಪ್ರಶ್ನೆಯಾಗಿ ಹಾಗೇ ಉಳಿದಿದೆ! ವರ್ಷವೂ ಕೋಟ್ಯಂತರ ಜನ ಯಾತ್ರೆಬಂದು ದರ್ಶನಮಾಡಿ ಪುನೀತರಾಗುವ ಸ್ಥಳ ಪಂಢರಾಪುರ. ಪಂಢರೀನಾಥನಿಗೆ ಎರಡೇ ಹಸ್ತ! ಸೊಂಟದಮೇಲೆ ಕೈಇಟ್ಟು ನಿಂತ ವಿಠಲನಿಗೆ ಮೀನಿನಾಕೃತಿಯ ಎರಡು ಕಿವಿಗಳು. ಅನೇಕ ಸಾಧು ಸಂತರು, ಸನ್ಯಾಸಿಗಳು, ವಿರಕ್ತರು ಹೀಗೇ ಹಲವಾರು ತೆರನಾದ ಭಕ್ತ-ಭಾವುಕರು ದಿಂಡಿ ಭಜನೆಮಾಡುವುದು ಅಲ್ಲಿನ ವಿಶೇಷ. ವಿಠೋಬ ಎಂದುಬಿಟ್ಟರೆ ಮಹಾರಾಷ್ಟ್ರದ ಜನತೆಗೆ ಅಚ್ಚುಮೆಚ್ಚು. ಹಾಡುತ್ತಾ ಕುಣಿಯುತ್ತಾ ಆತನನ್ನು ಓಲೈಸುವಲ್ಲಿ ಸಫಲರಾಗುತ್ತಾರೆ. ಉತ್ತರಕರ್ನಾಟಕದ ಗಾಣಗಾಪುರ ಕ್ಷೇತ್ರಕ್ಕೆ ಬಂದವರು ಪಂಢರಾಪುರಕ್ಕೆ ಹೋಗುವುದು ಅಥವಾ ಪಂಢರಾಪುರಕ್ಕೆ ಬಂದವರು ಗಾಣಗಾಪುರಕ್ಕೆ ಬರುವುದು ಯಾತ್ರಾರ್ಥಿಗಳ ರೂಢಿ. ಕೆಲವೊಮ್ಮೆ ಈ ಎರಡರ ಜೊತೆಗೆ ಶಿರಡಿ ಕೂಡ ಯಾತ್ರೆಯ ಪಟ್ಟಿಗೆ ಸೇರ್ಪಡೆಗೊಳ್ಳುತ್ತದೆ.


ವಿಠೋಬ ಭಕ್ತಾನುರಾಗಿ. ಭಜನೆಮಾಡುತ್ತಾ ಹೃದಯವನ್ನು ಸಮರ್ಪಿಸಿದರೆ ಏನನ್ನೇ ಕೇಳಿದರೂ ಒಲ್ಲೆ ಎನ್ನದ ಸ್ನೇಹಿತ! ಆತನ ಮೇಲೆ ಮರಾಠಿ ಅಭಂಗಗಳು, ಭಜನೆಗಳು, ಸಂಕೀರ್ತನೆಗಳು, ದೇವರನಾಮಗಳು ಅದೆಷ್ಟೋ ಇವೆ. ಕೆಲವೊಮ್ಮೆ ಅಹೋರಾತ್ರಿ ಜಾಗರಣೆನಡೆಸುತ್ತಾ ಮಾಡುವ ಭಜನೆಗಳಲ್ಲಿ ಕುಣಿತವೂ ಸೇರಿರುತ್ತದೆ. ನಾವು ಚಿಕ್ಕವರಿದ್ದಾಗ ನಮ್ಮೂರಿನ ಮಹಾವಿಷ್ಣು ದೇವಸ್ಥಾನದಲ್ಲೂ ಒಂದಷ್ಟು ಮರಾಠಿ ಭಜನೆಗಳನ್ನು ಹಿರಿಯರು ನಮಗೆ ಹೇಳಿಕೊಟ್ಟಿದ್ದರು. ಅರ್ಥ ಗೊತ್ತಿರಲಿಲ್ಲ. ಆದರೂ ಹಾಡಲು ತುಂಬಾ ಹಾಯಾಗಿರುವುದರಿಂದ ಭಜನೆಮಾಡುತ್ತಿದ್ದೆವು. " ಜೈ ಜೈ ವಿಠೋಬಾ ರಕುಮಾಯಿ ಮಹರಾಜ ವಿಠೋಬಾ ರಕುಮಾಯಿ "--ಇಂತಹ ಹಲವು ಹಾಡುಗಳು ಇಂದಿಗೂ ನೆನಪಿಗೆ ಬರುತ್ತವೆ. ಬೆಳಗಿನಜಾವದಲ್ಲಿ ಮರಾಠಿ ಭಜನೆಗಳು ಎಷ್ಟು ಚೆನ್ನಾಗಿರುತ್ತವೆ ಎಂದರೆ ಆ ಮಾಯೆಯಲ್ಲಿ ನಾವು ದೇವರನ್ನು ಕಾಣುತ್ತಾ ಭಾಷೆಯ ಗಡಿಯನ್ನೂ ಮೀರಿಬಿಡುತ್ತೇವೆ. ಯಾಕೆ ಈ ರೀತಿಯ ಭಜನೆ ಅಥವಾ ಸೇವೆ ವಿಠೋಬನಿಗೆ ಪ್ರೀತಿ ಎಂಬುದರ ಕುರಿತು ಅಲ್ಲಿನ ಸ್ಥಳಪುರಾಣ ಕೇಳಿ ಸ್ವಾರಸ್ಯಕರವಾಗಿದೆ:

ದಂಡಿರವನ ಎಂಬ ಅಡವಿಯಲ್ಲಿ ಜಾನು ಮತ್ತು ಸತ್ಯವತಿ ಎಂಬ ಬಡ ದಂಪತಿ ವಾಸವಾಗಿರುತ್ತಾರೆ. ಅವರಿಗೊಬ್ಬ ಮಗ ಪುಂಡಲೀಕ. ಮಗ ಪ್ರಾಯಪ್ರಬುದ್ಧನಾಗಿ ಮದುವೆಯಾಗುವವರೆಗೆ ತಂದೆ-ತಾಯಿಗಳನ್ನು ಪ್ರೀತಿಯಿಂದ ಕಾಣುತ್ತಿದ್ದ. ಯಾವಾಗ ಮದುವೆಯಾಯಿತೋ ಆಗ ಪುಂಡಲೀಕನಿಗೆ ದುರ್ಬುದ್ಧಿ ಬಂದುಬಿಟ್ಟಿತು. ಯುವ ದಂಪತಿ ಮುದಿ ದಂಪತಿಯನ್ನು ತೀರಾ ಹೀನಾಯವಾಗಿ ಕಾಣಹತ್ತಿದರು. ಅವರನ್ನು ಪೀಡಿಸಿ ದುಡಿಸಿಕೊಳ್ಳ ಹತ್ತಿದ್ದರು. ಮಗ-ಸೊಸೆ ಕೊಡುವ ಕಷ್ಟ ತಾಳಲಾರದೇ ವೃದ್ಧ ದಂಪತಿ ತಾವು ಕಾಶೀ ಯಾತ್ರೆಗೆ ಹೋಗುವುದಾಗಿ ಸುಮ್ಮನೇ ಹೇಳಿದರು. ಅದನ್ನೇ ಗಟ್ಟಿಯಾಗಿ ಹಿಡಿದುಕೊಂಡ ಪುಂಡಲೀಕ ತಾವೂ ನಿಮ್ಮ ಜೊತೆಗೂಡುತ್ತೇವೆ ಎಂದ ಮಾತ್ರವಲ್ಲ ಎಲ್ಲರೂ ಹೊರಡುವಂತೇ ಮಾಡಿಬಿಟ್ಟ. ಮಗ-ಸೊಸೆ ಕುದುರೆಯೊಂದರ ಮೇಲೆ ಪ್ರಯಾಣಿಸುತ್ತಿದ್ದರೆ ಅಪ್ಪ-ಅಮ್ಮ ಕುದುರೆಯ ಪಕ್ಕ ಕಾಲ್ನಡಿಗೆಯಲ್ಲಿ ಸಾಗಿದ್ದರು.

ನಿತ್ಯವೂ ಆಹಾರಕ್ಕಾಗಿ ಅಪ್ಪ-ಅಮ್ಮ ಅದೂ ಇದೂ ಕೆಲಸಮಾಡುವಂತೇ ಆಜ್ಞಾಪಿಸುತ್ತಿದ್ದ ಪುಂಡಲೀಕ ರಾತ್ರಿ ಎಲ್ಲಾದರೂ ತಂಗುತ್ತಾ ಅಲ್ಲಿ ತನ್ನ ಕುದುರೆಯನ್ನು ಸ್ವಚ್ಛಗೊಳಿಸಿ ಅಣಿಗೊಳಿಸಲು ಅಪ್ಪ-ಅಮ್ಮನಿಗೆ ತಾಕೀತು ಮಾಡುತ್ತಿದ್ದ. ಯಾಕಾದರೂ ಯಾತ್ರೆಗೆ ಹೋಗುತ್ತೇವೆಂದು ಹೇಳಿದೆವಪ್ಪಾ ಎನಿಸುವಷ್ಟು ತೊಂದರೆ ಕೊಡುತ್ತಿದ್ದ ಮಗನ ನಡಾವಳಿಯನ್ನು ಅನುಭವಿಸಿ ಪಾಲಕರು ಕಣ್ಣೀರಿನಲ್ಲಿ ಕೈತೊಳೆಯುತ್ತಾ ದಿನದೂಡುತ್ತಿದ್ದರು. ಬಹುಪ್ರಯಾಸದಿಂದ ಅಂತೂ ಕಾಶೀಪಟ್ಟಣವನ್ನು ತಲ್ಪಿದರು. ಅಲ್ಲಿದ್ದ ಕುಕ್ಕುಟಸ್ವಾಮಿ ಎಂಬ ಸಂತರ ಆಶ್ರಮದಲ್ಲಿ ತಂಗಲು ಏರ್ಪಾಡುಮಾಡಿಕೊಂಡರು. ನಡೆದೂ ನಡೆದೂ ಇನ್ನಾಗದು ಎಂಬ ಸ್ಥಿತಿಗೆ ತಲ್ಪಿದ್ದ ವೃದ್ಧ ದಂಪತಿಗೆ ವಾರದ ಕಾಲವಾದರೂ ಕಾಶಿಯಲ್ಲೇ ಇರಬೇಕಾದ ಅನಿವಾರ್ಯತೆ ಇತ್ತು. ಅದಕ್ಕೆ ಆಶ್ರಮದಲ್ಲಿ ಅನುಮತಿಯೂ ಸಿಕ್ಕಿತು. ಕಾಶೀ ವಿಶ್ವನಾಥನನ್ನು ನೆನೆಯುತ್ತಾ ದಂಪತಿ ಹಾಗೇ ವಿರಮಿಸುತ್ತಿದ್ದರು.

ಒಂದು ರಾತ್ರಿ ಅಕಸ್ಮಾತ್ ಮಗ ಪುಂಡಲೀಕನಿಗೆ ಯಾಕೋ ಎಚ್ಚರವಾಗಿಹೋಯ್ತು. ನೋಡುತ್ತಾನೆ ಹೊರಗಿನಿಂದ ೪-೫ ಮಂದಿ ಕೊಳೆಯಾದ ಸೀರೆ ಧರಿಸಿದ ಸುಂದರ ತರುಣಿಯರು ಕುಕ್ಕುಟಸ್ವಾಮಿಯ ಆಶ್ರಮವನ್ನು ಪ್ರವೇಶಿಸುತ್ತಿದ್ದರು. ಹಾಗೆ ಬಂದವರು ಸ್ವಾಮಿಯ ಮನೆಯನ್ನು ಗುಡಿಸಿ, ಬೇಕಾದ ಸಾಮಗ್ರಿಗಳನ್ನು ಅಣಿಗೊಳಿಸಿಟ್ಟು ನಂತರ ಆಶ್ರಮದ ಪ್ರಾರ್ಥನಾ ಕೊಠಡಿಗೆ ತೆರಳಿದರು. ತುಸು ಹೊತ್ತಿನ ಬಳಿಕ ಮರಳಿ ಹೊರಹೊರಟ ಅವರ ಸೀರೆಗಳು ಆಗ ಪರಿಶುಭ್ರವಾಗಿದ್ದವು! ಇದೆಲ್ಲಾ ಏನು ವಿಚಿತ್ರ ಎಂದು ತನ್ನ ಕಣ್ಣುಗಳನ್ನೇ ನಂಬದಾದ ಪುಂಡಲೀಕ ಮಾರನೇ ರಾತ್ರಿಯೂ ಎಚ್ಚೆತ್ತುಕೊಂಡಿದ್ದು ತರುಣಿಯರು ಬಂದಾಗ ಅವರ ಹತ್ತಿರ ನಡೆದು " ನೀವೆಲ್ಲಾ ಯಾರು? ಇಲ್ಲಿಗೆ ಯಾಕೆ ಹೀಗೆ ಬರುತ್ತೀರಿ? ನಿಮ್ಮ ಬಟ್ಟೆಗಳು ಅದು ಹೇಗೆ ಕ್ಷಣಾರ್ಧದಲ್ಲಿ ಶುಭ್ರಗೊಳ್ಳುತ್ತವೆ ? " ಎಂದೆಲ್ಲಾ ಪ್ರಶ್ನೆಗಳನ್ನಿತ್ತನು. ತಾವು ಪುಣ್ಯನದಿಗಳಾದ ಗಂಗಾ, ಯಮುನಾ, ಸರಸ್ವತೀ ಮೊದಲಾದವರೆಂತಲೂ ಜನರು ಪ್ರತಿನಿತ್ಯ ತಮ್ಮ ಪಾಪಗಳನ್ನು ತೊಳೆಯಲು ನದಿಗಳಲ್ಲಿ ಸ್ನಾನಮಾಡುವುದರಿಂದ ತಮ್ಮ ಸೀರೆಗಳು ಮಲಿನವಾಗುತ್ತವೆ ಎಂದೂ ತಿಳಿಸಿ " ತಂದೆ-ತಾಯಿಗಳಿಗೆ ಕಷ್ಟಕೊಡುತ್ತಿರುವ ನಿನ್ನಂತಹ ಪರಮಪಾಪಿಯನ್ನು ಮಾತ್ರ ಕಾಣಲೇ ಇಲ್ಲ" ಎಂದುಬಿಟ್ಟರು.

ಪುಂಡಲೀಕನಿಗೆ ತಾನು ಮಡುತ್ತಿರುವ ತಪ್ಪಿನ ಅರಿವಾಯಿತು. ಆ ಕ್ಷಣದಿಂದಲೇ ಪುಂಡಲೀಕ ಬದಲಾಗಿ ಹೋದ. ತಂದೆ-ತಾಯಿಗಳ ಸೇವೆಯೇ ತನ್ನ ಪರಮಭಾಗ್ಯ ಮತ್ತು ಆದ್ಯ ಕರ್ತವ್ಯ ಎಂದುಕೊಂಡ ಆತ ತನಗೇ ಶರೀರ ಸ್ವಾಸ್ಥ್ಯವಿಲ್ಲದಿದ್ದರೂ ಮಾತಾ-ಪಿತೃಗಳ ಸೇವೆಯನ್ನು ತೊರೆಯದಾದ. ಮಗನಲ್ಲಾದ ಈ ಅಪೂರ್ವ ಬದಲಾವಣೆ ಕಂಡು ದೇವರೇ ಅವನಿಗೆ ಬುದ್ಧಿ ಕೊಟ್ಟಿರಬೇಕೆಂದು ವೃದ್ಧರು ತಿಳಿದರು. ಯಾವುದೇ ಕೆಲಸದಲ್ಲೂ ತನ್ನ ತಾದಾತ್ಮ್ಯತೆ ಇದ್ದರೆ ಅದು ದೇವರ ಸೇವೆಯಾಗುತ್ತದೆ. ಅದರಂತೇ ಮಾತಾ-ಪಿತೃಗಳ ಸೇವೆಯನ್ನು ಅತಿ ವಿಶೇಷವಾಗಿ ಮಾಡುತ್ತಿರುವ ಪುಂಡಲೀಕನ ಭಕ್ತಿಗೆ ವೈಕುಂಠದ ಮಹಾವಿಷ್ಣು ಪ್ರಸನ್ನಾನಾಗಿ ಪುಂಡಲೀಕನನ್ನು ಕಾಣಲು ಹೊರಟುಬಿಟ್ಟ! ಭಗವಂತ ಮನೆಬಾಗಿಲು ಬಡಿದಾಗ ಪುಂಡಲೀಕ ತಂದೆ-ತಾಯಿಗಳಿಗೆ ಊಟ ನೀಡುತ್ತಿದ್ದ. ಬಾಗಿಲೆಡೆಗೆ ಒಂದು ಇಟ್ಟಿಗೆ ಎಸೆದು ಅದರಮೇಲೆ ನಿಂತುಕೊಳ್ಳುವಂತೆಯೂ ತಾನು ತಂದೆ-ತಾಯಿಗಳ ಸೇವೆ ಮುಗಿದನಂತರ ಬರುವುದಾಗಿಯೂ ಕೂಗಿ ಹೇಳಿದ. ಬಂದಾತ ಭಗವಂತ ಎಂಬ ಸಂದೇಹ ಬಂದಿದ್ದರೂ ತನ್ನ ಕರ್ತವ್ಯದಲ್ಲಿ ವಿಮುಖನಾಗದೇ ಹಾಗೆ ಹೊರಗೇ ಕಾಯಿಸಿದ.

ಇಟ್ಟಿಗೆಯಮೇಲೆ ನಿಂತ ಮಹಾವಿಷ್ಣು ಸಾದಾ ಮಾನವ ರೂಪದಲ್ಲಿದ್ದ! ಸೊಂಟದಮೇಲೆ ಕೈ ಇಟ್ಟುಕೊಂಡು ಕಾದು ನಿಂತಿದ್ದ. ಹೊರಗೆ ಬಂದಾಗ ಪುಂಡಲೀಕನಲ್ಲೇ ಭಗವಂತ ಆತನ ಕ್ಷಮೆಯಾಚಿಸಿದ. ಸೇವಾ ಭಕ್ತಿಯ ಪಾರಮ್ಯವನ್ನು ಕಂಡು ಆನಂದಬಾಷ್ಪ ಸುರಿಸಿದ ವಿಠೋಬ ತಾನು ಯಾರೆಂಬುದನ್ನೂ ತಾನು ಬಂದಿದ್ದೇಕೆ ಎಂಬುದನ್ನೂ ಪುಂಡಲೀಕನಿಗೆ ಅರುಹಿದ. ತನಗೆ ಕೊಟ್ಟ ಈ ದರುಶನ ಭಾಗ್ಯ ಅದೇ ರೂಪದಲ್ಲಿ ತನ್ನಂತಹ ಸಕಲ ಭಕ್ತರಿಗೂ ಇದೇ ಜಾಗದಲ್ಲಿ ಸತತವಾಗಿ ಸಿಗುತ್ತಿರಲಿ ಎಂದು ಪ್ರಾರ್ಥಿಸಿದ ಪುಂಡಲೀಕ. ವಿಠೋಬ "ತಥಾಸ್ತು" ಎಂದು ಅಲ್ಲೇ ನಿಂತುಬಿಟ್ಟ! ನಂತರ ಅದೇ ಜಾಗದಲ್ಲಿ ದೇವಸ್ಥಾನದ ನಿರ್ಮಾಣವಾಯ್ತು.




ಅದೃಷ್ಟಪೂರ್ವಂ ಹೃಷಿತೋಸ್ಮಿ ದೃಷ್ಟ್ಯಾ
ಭಯೇನ ಚ ಪ್ರವ್ಯಥಿತಂ ಮನೋ ಮೇ |
ತದೇವ ಮೇ ದರ್ಶಯ ದೇವರೂಪಂ
ಪ್ರಸೀದ ದೇವೇಶ ಜಗನ್ನಿವಾಸ ||

ಮುಂದೊಂದು ಘಟನೆ ಹೀಗಿದೆ: ಮುಂದಿನ ಸಂತ ನಾಮದೇವ ಮಗುವಾಗಿದ್ದಾಗ ಆತನ ತಾಯಿ ಪ್ರತಿನಿತ್ಯ ಮಗನನ್ನು ಕರೆದುಕೊಂಡು ವಿಠೋಬನಿಗೆ ನೈವೇದ್ಯ ಸಲ್ಲಿಸಲು ಬರುತ್ತಿದ್ದಳು. ಒಂದೆರಡು ದಿನ ಅವಳಿಗೆ ಕಾರಣಾಂತರಗಳಿಂದ ದೇವಸ್ಥಾನಕ್ಕೆ ಬರಲಾಗಲಿಲ್ಲ, ಚಿಕ್ಕವನಾಗಿದ್ದ ಮಗನನ್ನು ನೈವೇದ್ಯ ಅರ್ಪಿಸುವಂತೇ ಕಳಿಸಿದ್ದಳು. ಮನೆಯಲ್ಲಿ ಮಡಿಯಲ್ಲಿ [ಸ್ವಚ್ಛತೆಯಲ್ಲಿ] ಮಾಡಿದ ಅಡಿಗೆಯನ್ನು ಪ್ರಥಮವಾಗಿ ದೇವರಮುಂದಿಟ್ಟು ಅದಕ್ಕೆ ಸುತ್ತ ನೀರನ್ನು ಪರಿಷೇಚಿಸಿ ದೇವರಲ್ಲಿ ಸ್ವೀಕರಿಸು ಎಂದು ಪ್ರಾರ್ಥಿಸುವುದು ವಾಡಿಕೆ. ಹಾಗೇ ಮಾಡಿದ ಮಗು ಭಗವಂತನ ಬರುವಿಕೆಗಾಗಿ ಕಾದ. ಕಾದ ಕಾದ ಕಾದ ಭಗವಂತ ಬರಲೇ ಇಲ್ಲ. ಬೇಸರಗೊಂಡ ನಾಮದೇವ ತನ್ನ ಹಣೆಯನ್ನು ಭವಂತನ ಪಾದಕ್ಕೆ ಜಪ್ಪಿ ಜಪ್ಪಿ ಘಾಸಿಮಾಡಿಕೊಳ್ಳತೊಡಗಿದ. ಬಾಲಕನ ಭಕ್ತಿ ಮತ್ತು ಮುಗ್ಧತೆಯನ್ನು ಕಂಡ ಭಗವಂತ ಪ್ರತ್ಯಕ್ಷನಾಗಿ ನೈವೇದ್ಯವನ್ನು ಸ್ವೀಕರಿಸಿ ನಾಮದೇವನ ಮೈದಡವಿದ! " ನಿನ್ನ ದರುಶನ ಪಡೆಯಲು ಬರುವ ಕೋಟ್ಯಂತರ ಜನ ನನ್ನನ್ನು ಸ್ಪರ್ಶಿಸಿ ಆಮೇಲೆ ನಿನ್ನನ್ನು ದರ್ಶಿಸುವಂತೇ ಅನುಗ್ರಹಮಾಡು ಎಂದ ಬಾಲಕನಿಗೆ ಭಗವಂತ " ತಥಾಸ್ತು" ಎಂದ. ನಾಮದೇವ ಇಂದಿಗೂ ಅಲ್ಲಿನ ಪ್ರಥಮ ಮೆಟ್ಟಿಲಲ್ಲಿ ಇದ್ದು ಎಲ್ಲರನ್ನೂ ಕಂಡು ಹರ್ಷಿಸುತ್ತಾನೆ ಮತ್ತು ನಿತ್ಯವೂ ಭಗವಂತನೊಡನೆ ಸಂವಾದ ಮಾಡುತ್ತಾನೆ ಎಂಬುದು ಅಲ್ಲಿನ ನಂಬಿಕೆ.

|| ಮಾಸಾನಾಂ ಮಾರ್ಗಶೀರ್ಷೋಹಮೃತೂನಾಂ ಕುಸುಮಾಕರಃ || ಎಂದು ಭಗವಂತ ಗೀತೆಯಲ್ಲಿ ಅಪ್ಪಣೆ ಕೊಡಿಸಿದ್ದಾನೆ. ಮಾಸಗಳಲ್ಲೇ ಮಾರ್ಗಶೀರ್ಷ ಮಾಸ ತಾನು ಎಂದಿದ್ದಾನೆ. ಈ ಮಾಸದಲ್ಲಿ ವಿಷ್ಣು ಕ್ಷೇತ್ರಗಳ ದರ್ಶನ, ಅಲ್ಲಿನ ಧೂಳಿಯ ಸ್ಪರ್ಶನ, ಅಲ್ಲಿನ ಸೇವೆಗಳ ಅವಲೋಕನ, ಕೀರ್ತನ-ಸಂಕೀರ್ತನಗಳ ಗಾಯನ, ವಾಚನ ಅತ್ಯಂತ ಪುಣ್ಯಪ್ರದ ಎಂಬುದು ಬಲ್ಲವರ ಅನಿಸಿಕೆ. ಗುರು ರಾಘವೇಂದ್ರರು ಧಾರಾವಾಹಿಯ ರೂಪದಲ್ಲಿ ವಿಠೋಬನ ನೆನಪನ್ನು ತಂದಿದ್ದಕ್ಕೆ ಅವರಿಗೆ ನನ್ನ ನಮನ, ಬಹುಶಃ ನಿಮ್ಮದೂ ಕೂಡಾ ...

ಪಂಢರಾಪುರವೆಂಬ ಒಂದು ನಗರ
ಅಲ್ಲಿ ವಿಠೋಬನೆಂಬ ಒಬ್ಬ ಸಾಹುಕಾರ....

ವಿಠೋಬನಿರುವುದು ನದಿತೀರ
ಅಲ್ಲಿ ಭಂಡಾರಿ ಭಜನೆಯು ವ್ಯಾಪಾರ ...

---ವಿ .ಆರ್. ಭಟ್