Pages

Saturday, December 24, 2011

ಹಿಂದು ಸಮಾಜದಲ್ಲಿ ನಡೆದುಕೊಂಡು ಬಂದಿರುವ ಆಚರಣೆಗಳು, ನಂಬಿಕೆಗಳನ್ನು ಅಲುಗಿಸುವ ಕೆಲಸ ?

ಇಂದು ವೇದಸುಧೆಯ ಹಳೆಯ ಲೇಖನಗಳನ್ನು ಆಯಾ ಮಾಲಿಕೆಯಡಿಯಲ್ಲಿ ಬರುವಂತೆ ಸರಿಪಡಿಸುತ್ತಿದ್ದೆ. ಆಗ ಕಣ್ಣಿಗೆ ಬಿದ್ದ ಲೇಖನವನ್ನು  ವೇದಸುಧೆಯ ಅಭಿಮಾನಿಗಳು ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ದೃಷ್ಟಿಯಿಂದ ಇಲ್ಲಿ ಪುನ: ಪ್ರಕಟಿಸುತ್ತಿರುವೆ.
-ಹರಿಹರಪುರ ಶ್ರೀಧರ್

ಶ್ರೀ ಕವಿ ನಾಗರಾಜ್ ಇವರು ವೇದೋಕ್ತ ಜೀವನ ಪಥ ಮಾಲಿಕೆಯಲ್ಲಿ ಪಂ. ಸುಧಾಕರ ಚತುರ್ವೇದಿಗಳ ಬರಹಗಳನ್ನು ವೇದಸುಧೆಯಲ್ಲಿ ಬರೆಯುತ್ತಿದ್ದಾರೆ. ಅದನ್ನು ಓದುತ್ತಿರುವ ನಾನು ಅಲ್ಲಿ ಬರೆದ ನನ್ನ ಅನಿಸಿಕೆಯನ್ನು ಇಲ್ಲಿ ಮುಖ್ಯ ಲೇಖನವಾಗಿ ಪ್ರಕಟಿಸುತ್ತಿರುವೆ. ಸುಧಾಕರ ಶರ್ಮರು ಇದಕ್ಕೆ ಉತ್ತರಿಸಬೇಕೆಂಬುದು ಅಪೇಕ್ಷೆ.
ವೇದ ಜ್ಞಾನವು ಎಲ್ಲರಿಗಾಗಿ ಎಂದು ವೇದವು ಸಾರಿ ಹೇಳುತ್ತಿದ್ದರೂ ಅದು ಎಲ್ಲರಿಗೆ ತಲುಪಲಿಲ್ಲ. ಹೀಗೂ ಹೇಳಬಹುದು ಎಲ್ಲಾ ಜನಾಂಗಕ್ಕೂ ಕಲಿಯುವ ಆಸೆಯೂ ಇಲ್ಲ.ಆರ್ಯಸಮಾಜವು ಎಲ್ಲರಿಗಾಗಿ ವೇದವೆನ್ನುವ ಮಾತನ್ನು ಹೇಳುತ್ತಿದ್ದರೂ ಅದರ ಕಾರ್ಯ ಚಟುವಟಿಕೆಯು ಸಮಾಜದ ಉದ್ದಗಲಕ್ಕೂ ಮುಟ್ಟುವ ಸಾಮರ್ಥ್ಯ ಅದಕ್ಕಿಲ್ಲ. ಆರ್ಯ ಸಮಾಜವು ಮಾಡುತ್ತಿರುವ ಒಂದು ಕೆಲಸವೆಂದರೆ ಅದರ ಹತ್ತಿರ ಬಂದವರಲ್ಲಿ ಹಿಂದು ಸಮಾಜದಲ್ಲಿ ನಡೆದುಕೊಂಡು ಬಂದಿರುವ ವಿಗ್ರಹಾರಾಧನೆ, ಹಬ್ಬ ಹರಿದಿನಗಳ ಆಚರಣೆ, ವ್ರತ ಕಥೆಗಳು, ಪುರಾಣ, ಇತ್ಯಾದಿಯ ಬಗ್ಗೆ ಶ್ರಧ್ಧೆಯನ್ನು ಕಡಿಮೆ ಮಾಡುವ ನಿರಂತರ ಪ್ರಯತ್ನ ವಾಗಿದೆ. [ಇಲ್ಲಿ ನಾನು ಶ್ರದ್ಧೆ ಎಂಬ ಪದವನ್ನು ನಂಬಿಕೆ ಎಂಬ ಅರ್ಥದಲ್ಲಿ ಉಪಯೋಗಿಸಿರುವೆ] ಹಿಂದು ಸಮಾಜಕ್ಕೆ ಅಂಟಿರುವ ಅಂಧಾಚರಣೆಗೆ ವಿರೋಧವಿರಲಿ, ಆದರೆ ಎಲ್ಲಾ ಆಚರಣೆಗಳಿಗೂ ವಿರೋಧವಿರುವುದರಿಂದ ಹಿಂದುಸಮಾಜವು ಆರ್ಯಸಮಾಜಿಗಳನ್ನು ಒಪ್ಪುವುದಾದರೂ ಹೇಗೆ? ಆರ್ಯಸಮಾಜಿಗಳು ಮಾಡುತ್ತಿರುವ ಕೆಲಸವು ಕೇವಲ ಹಿಂದು ಸಮಾಜಕ್ಕಲ್ಲ, ಇಡೀ ಮಾನವ ಸಮಾಜಕ್ಕೆ ಎಂದು ಅವರು ಹೇಳಿದರೂ ಅದರ ಬೇರು ಹಿಂದು ಸಮಾಜದಲ್ಲಿದೆ, ಎಂಬುದನ್ನು ಮರೆಯಬಾರದಲ್ಲವೇ? ಈ ದೃಷ್ಟಿಯಿಂದ ವೇದಾಧ್ಯಾಯೀ ಸುಧಾಕರ ಶರ್ಮರಂತಹ ವಿಚಾರಶೀಲರು ತಮ್ಮ ಚಟುವಟಿಕೆಗಳ ಬಗ್ಗೆ ಒಂದಿಷ್ಟು ಚಿಂತನೆ ಮಾಡುವುದು ಒಳ್ಳೆಯದು, ಎಂಬುದು ನನ್ನ ಅಭಿಪ್ರಾಯ.
-ಹರಿಹರಪುರ ಶ್ರೀಧರ್
--------------------------------------------------
Dr Gnanadev said...
ಹಿ೦ದೂ ಸಮಾಜದಲ್ಲಿ ನಿಜ, ಅನೇಕ ಅ೦ಧಾನುಚರಣೆ, ಅರ್ಥಹೀನ ವಿದಿವಿಧಾನಗಳು ಕಾಲಾ೦ತರದಲ್ಲಿ ನುಸುಳಿವೆ. ಅವುಗಳನ್ನು ಹಳಿಯುವ ತಿರಸ್ಕರಿಸುವ ಭರದಲ್ಲಿ ಹಿ೦ದೂ ಸ೦ಸ್ಕೃತಿಯಲ್ಲಿ ನೂರಾರು ಅರ್ಥಪೂರ್ಣ ಉದಾತ್ತವಾದ ಪವಿತ್ರವಾದ ಆಚರಣೆಗಳು ವಿದಿವಿದಾನಗಳೂ ಇವೆ ಎ೦ಬುದನ್ನು ಮರೆಯದಿರೋಣ. ಇ೦ಥಾ ಆಚರಣೆಗಳಿ೦ದ ಯಾರಿಗೂ ಹಾನಿ ತೊ೦ದರೆ ನಷ್ಟವಾಗಿಲ್ಲ. ಸಾವಿರಾರು ತಲೆಮಾರುಗಳ ಬದುಕನ್ನು ಸಾವಿರಾರು ವರ್ಷಗಳಿ೦ದ ಹಸನು ಮಾಡಿದೆ ನೆಮ್ಮದಿ ತ೦ದಿದೆ. ನೆಮ್ಮದಿ ತರುವ ಬದುಕಿನಲ್ಲಿ ಉಲ್ಲಾಸ ತರುವ ಆನ೦ದ ಅಲೌಕಿಕ ಆನ೦ದ ತರುವ ರಿಚ್ಯುಅಲ್ ವಿದಿವಿಧಾನಗಳು ಅವುಗಳನ್ನು ನ೦ಬಿ ಆಚರಿಸುತ್ತಿರುವ ಸಮುದಾಯದಲ್ಲಿ ಇರಲಿ. ಅವುಗಳನ್ನು ಖ೦ಡಿಸದಿರೋಣ. ಅಲ್ಲಿ ಮೌಢ್ಯವಿದ್ದರೆ ಖ೦ಡಿಸೋಣ.
ಈ ನಿಟ್ಟಿನಲ್ಲಿ ಭಾರತೀಯ ಸ೦ಸ್ಕೃತಿಯ ಆರಾಧಕರು ರಾಯಭಾರಿಗಳು ಮತ್ತೊಮ್ಮೆ ಯೋಚಿಸಲಿ.
--ಡಾ| ಜ್ಞಾನದೇವ್ ಮೊಳಕಾಲ್ಮುರು
-------------------------------------------------
ಆತ್ಮೀಯರಾದ ಡಾ| ಜ್ಞಾನದೇವ್,
ನಿಮ್ಮ ಅಭಿಪ್ರಾಯವು ಚಿಂತನೆಗೆ ಯೋಗ್ಯವಾಗಿದೆ.ಇಲ್ಲಿ ಶರ್ಮರ ಹೆಸರು ಪ್ರಸ್ಥಾಪಿಸಿರಲು ಕಾರಣವಿಷ್ಟೆ. ಈ ಬ್ಲಾಗನ್ನು ಶುರು ಮಾಡಿದ್ದೇ ಶರ್ಮರ ಎಲ್ಲರಿಗಾಗಿ ಪ್ರವಚನದ ಪ್ರೇರಣೆಯಿಂದ.ಕಳೆದೆರಡು ವರ್ಷಗಳಿಂದ ಶರ್ಮರ ಸಹವಾಸದಲ್ಲಿರುವ ನಾನು ಸೂಕ್ಷ್ಮವಾಗಿ ಆರ್ಯಸಮಾಜಿಗಳ ಚಟುವಟಿಕೆಯನ್ನು ಗಮನಿಸುತ್ತಿದ್ದೇನೆ. ಹಲವು ಉಪನ್ಯಾಸಗಳನ್ನು ಕೇಳಿದಮೇಲೆ, ಹಲವು ಸತ್ಸಂಗಗಳಲ್ಲಿ ಪಾಲ್ಗೊಂಡಮೇಲೆ ನನ್ನೊಳಗೆ ಚಿಂತನ-ಮಂಥನ ಹೆಚ್ಚಿರುವುದರ ಪರಿಣಾಮವಾಗಿ ಈ ಕಳಕಳಿಯ ಚರ್ಚೆ ಆರಂಭಿಸಿರುವೆ.ಶರ್ಮರೇ ಏಕೆ ನನ್ನ ಗುರಿ ಎಂಬ ಪ್ರಶ್ನೆ ಏಳಬಹುದು.ಶರ್ಮರು ವೇದವನ್ನು ಅಧ್ಯಯನಮಾಡುತ್ತಾ, ಅದರಂತೆ ತಮ್ಮ ಜೀವನವನ್ನೂ ರೂಢಿಸಿಕೊಂಡು ಸರಳಜೀವನ ಮಾಡುತ್ತಿರುವ ಸಜ್ಜನರು.ವೇದಕ್ಕಾಗಿ ಅವರ ಜೀವನ ಮುಡುಪಾಗಿದೆ, ಎಂದೇ ಭಾವಿಸುವೆ. ಇಂತವರ ಮಾತಿಗೆ ಸಮಾಜದಲ್ಲಿ ಗೌರವವಿದೆ,ಜನರು ಅವರಂತೆ ಇರಬೇಕೆಂದು ಬಯಸುವುದು ಸಹಜ.ಆದರೆ ಇಲ್ಲೊಂದು ಸಮಸ್ಯೆ ಇದೆ. ಇಂದು ಪಾಶ್ಚಿಮಾತ್ಯರೂ ಕೂಡ ನಮ್ಮ ದೇಶದತ್ತ ದೃಷ್ಟಿಹಾಯಿಸುತ್ತಾ ನಮ್ಮ ಸಂಸ್ಕೃತಿಯಮೇಲೆ ವಿಶ್ವಾಸವಿಟ್ಟು ತಮ್ಮಲ್ಲಿದ್ದ ಹಲವು ವಿಕೃತಿಗಳನ್ನು ಬಿಟ್ಟು ನಮ್ಮ ದೇಶದತ್ತ ಧಾವಿಸುತ್ತಿರುವುದು ,ಒಂದು ಕಡೆಯಾದರೆ ಇಲ್ಲಿನ ನಮ್ಮ ಯುವ ಜನಾಂಗವು ಪಾಶ್ಚಿಮಾತ್ಯರು ಬಿಟ್ಟ ಎಂಜಲನ್ನು ಅನುಕರಿಸತ್ತಾ ನಮ್ಮ ಸಂಸ್ಕೃತಿ-ಪರಂಪರೆಗಳನ್ನು ವಿರೋಧಿಸುತ್ತಿರುವ ಉಧಾಹರಣೆಗಳನ್ನು ನಮ್ಮ ಮಾಧ್ಯಮಗಳು ಬಿಂಬಿಸುತ್ತಿವೆ.ಇದೊಂದು ಸಂಧಿಕಾಲವೂ ಹೌದು, ವಿಷಮ ಕಾಲವೂ ಹೌದು. ಈ ಸಂದರ್ಭದಲ್ಲಿ ಶರ್ಮರಂತಹ ವಿದ್ವಜ್ಜನರ ಪಾತ್ರವು ಬಹಳ ಪ್ರಮುಖವಾಗುತ್ತದೆ.ನಮ್ಮ ಸಂಸ್ಕೃತಿ-ಪರಂಪರೆಗಳಲ್ಲಿ ಅಂಧಾನುಕರಣೆಗಳು, ಕಂದಾಚಾರಗಳು, ಸಮಾಜ ವಿರೋಧಿ ಆಚರಣೆಗಳೂ ನುಸುಳಿಕೊಂಡು ತಮ್ಮ ವಿಕೃತ ಚಾಯೆಯನ್ನು ಸಮಾಜದಲ್ಲಿ ಮೂಡಿಸಿರುವುದು ಸುಳ್ಳಲ್ಲ, ಬೆಳೆಯೊಡನೆ ಕಳೆ ಇದ್ದಂತೆ. ಕಳೆಯ ತೆಗೆಯಬೇಕು, ಬೆಳೆಗೆ ನೀರು-ಗೊಬ್ಬರ ಉಣಿಸುವ ಕೆಲಸವು ಶರ್ಮರಂತಹ ಮೇಧಾವಿಗಳಿಂದಾಗಬೇಕೆಂಬುದು ಸಮಾಜದ ಅಪೇಕ್ಷೆ.ಅವರೊಡನೆ ಅವರ ಜ್ಞಾನವನ್ನು ಮೆಚ್ಚುವ ನಮ್ಮಂತಹ ಸಾವಿರಾರು ಮನಸ್ಸುಗಳು ನಿಲ್ಲುವುದರಲ್ಲಿ ಸಂಶಯವಿಲ್ಲ.ಈ ನನ್ನ ಕಳಕಳಿಯನ್ನು ವೇದಾಧ್ಯಾಯೀ ಸುಧಾಕರಶರ್ಮರು ತಪ್ಪಾಗಿ ಭಾವಿಸದೆ ಸಮಾಜದ ಹಿತದೃಷ್ಟಿಯಿಂದ ಅರ ವಿಚಾರವನ್ನು ಮಂಡಿಸಬೇಕೆಂದು ಮತ್ತೊಮ್ಮೆ ಕೋರುವೆ.
-ಹರಿಹರಪುರಶ್ರೀಧರ್

10 ಕಾಮೆಂಟ್‌(ಗಳು):


ಸಾಗರದಾಚೆಯ ಇಂಚರ said...
Good one
Dr Gnanadev said...
ಹಿ೦ದೂ ಸಮಾಜದಲ್ಲಿ ನಿಜ, ಅನೇಕ ಅ೦ಧಾನುಚರಣೆ, ಅರ್ಥಹೀನ ವಿದಿವಿಧಾನಗಳು ಕಾಲಾ೦ತರದಲ್ಲಿ ನುಸುಳಿವೆ. ಅವುಗಳನ್ನು ಹಳಿಯುವ ತಿರಸ್ಕರಿಸುವ ಭರದಲ್ಲಿ ಹಿ೦ದೂ ಸ೦ಸ್ಕೃತಿಯಲ್ಲಿ ನೂರಾರು ಅರ್ಥಪೂರ್ಣ ಉದಾತ್ತವಾದ ಪವಿತ್ರವಾದ ಆಚರಣೆಗಳು ವಿದಿವಿದಾನಗಳೂ ಇವೆ ಎ೦ಬುದನ್ನು ಮರೆಯದಿರೋಣ. ಇ೦ಥಾ ಆಚರಣೆಗಳಿ೦ದ ಯಾರಿಗೂ ಹಾನಿ ತೊ೦ದರೆ ನಷ್ಟವಾಗಿಲ್ಲ. ಸಾವಿರಾರು ತಲೆಮಾರುಗಳ ಬದುಕನ್ನು ಸಾವಿರಾರು ವರ್ಷಗಳಿ೦ದ ಹಸನು ಮಾಡಿದೆ ನೆಮ್ಮದಿ ತ೦ದಿದೆ. ನೆಮ್ಮದಿ ತರುವ ಬದುಕಿನಲ್ಲಿ ಉಲ್ಲಾಸ ತರುವ ಆನ೦ದ ಅಲೌಕಿಕ ಆನ೦ದ ತರುವ ರಿಚ್ಯುಅಲ್ ವಿದಿವಿಧಾನಗಳು ಅವುಗಳನ್ನು ನ೦ಬಿ ಆಚರಿಸುತ್ತಿರುವ ಸಮುದಾಯದಲ್ಲಿ ಇರಲಿ. ಅವುಗಳನ್ನು ಖ೦ಡಿಸದಿರೋಣ. ಅಲ್ಲಿ ಮೌಢ್ಯವಿದ್ದರೆ ಖ೦ಡಿಸೋಣ. ಈ ನಿಟ್ಟಿನಲ್ಲಿ ಭಾರತೀಯ ಸ೦ಸ್ಕೃತಿಯ ಆರಾಧಕರು ರಾಯಭಾರಿಗಳು ಮತ್ತೊಮ್ಮೆ ಯೋಚಿಸಲಿ. --ಡಾ| ಜ್ಞಾನದೇವ್ ಮೊಳಕಾಲ್ಮುರು
ಹರಿಹರಪುರ ಶ್ರೀಧರ್ said...
ಆತ್ಮೀಯರಾದ ಡಾ| ಜ್ಞಾನದೇವ್, ನಿಮ್ಮ ಅಭಿಪ್ರಾಯವು ಚಿಂತನೆಗೆ ಯೋಗ್ಯವಾಗಿದೆ.ಇಲ್ಲಿ ಶರ್ಮರ ಹೆಸರು ಪ್ರಸ್ಥಾಪಿಸಿರಲು ಕಾರಣವಿಷ್ಟೆ. ಈ ಬ್ಲಾಗನ್ನು ಶುರು ಮಾಡಿದ್ದೇ ಶರ್ಮರ ಎಲ್ಲರಿಗಾಗಿ ಪ್ರವಚನದ ಪ್ರೇರಣೆಯಿಂದ.ಕಳೆದೆರಡು ವರ್ಷಗಳಿಂದ ಶರ್ಮರ ಸಹವಾಸದಲ್ಲಿರುವ ನಾನು ಸೂಕ್ಷ್ಮವಾಗಿ ಆರ್ಯಸಮಾಜಿಗಳ ಚಟುವಟಿಕೆಯನ್ನು ಗಮನಿಸುತ್ತಿದ್ದೇನೆ. ಹಲವು ಉಪನ್ಯಾಸಗಳನ್ನು ಕೇಳಿದಮೇಲೆ, ಹಲವು ಸತ್ಸಂಗಗಳಲ್ಲಿ ಪಾಲ್ಗೊಂಡಮೇಲೆ ನನ್ನೊಳಗೆ ಚಿಂತನ-ಮಂಥನ ಹೆಚ್ಚಿರುವುದರ ಪರಿಣಾಮವಾಗಿ ಈ ಕಳಕಳಿಯ ಚರ್ಚೆ ಆರಂಭಿಸಿರುವೆ.ಶರ್ಮರೇ ಏಕೆ ನನ್ನ ಗುರಿ ಎಂಬ ಪ್ರಶ್ನೆ ಏಳಬಹುದು.ಶರ್ಮರು ವೇದವನ್ನು ಅಧ್ಯಯನಮಾಡುತ್ತಾ, ಅದರಂತೆ ತಮ್ಮ ಜೀವನವನ್ನೂ ರೂಢಿಸಿಕೊಂಡು ಸರಳಜೀವನ ಮಾಡುತ್ತಿರುವ ಸಜ್ಜನರು.ವೇದಕ್ಕಾಗಿ ಅವರ ಜೀವನ ಮುಡುಪಾಗಿದೆ, ಎಂದೇ ಭಾವಿಸುವೆ. ಇಂತವರ ಮಾತಿಗೆ ಸಮಾಜದಲ್ಲಿ ಗೌರವವಿದೆ,ಜನರು ಅವರಂತೆ ಇರಬೇಕೆಂದು ಬಯಸುವುದು ಸಹಜ.ಆದರೆ ಇಲ್ಲೊಂದು ಸಮಸ್ಯೆ ಇದೆ. ಇಂದು ಪಾಶ್ಚಿಮಾತ್ಯರೂ ಕೂಡ ನಮ್ಮ ದೇಶದತ್ತ ದೃಷ್ಟಿಹಾಯಿಸುತ್ತಾ ನಮ್ಮ ಸಂಸ್ಕೃತಿಯಮೇಲೆ ವಿಶ್ವಾಸವಿಟ್ಟು ತಮ್ಮಲ್ಲಿದ್ದ ಹಲವು ವಿಕೃತಿಗಳನ್ನು ಬಿಟ್ಟು ನಮ್ಮ ದೇಶದತ್ತ ಧಾವಿಸುತ್ತಿರುವುದು ,ಒಂದು ಕಡೆಯಾದರೆ ಇಲ್ಲಿನ ನಮ್ಮ ಯುವ ಜನಾಂಗವು ಪಾಶ್ಚಿಮಾತ್ಯರು ಬಿಟ್ಟ ಎಂಜಲನ್ನು ಅನುಕರಿಸತ್ತಾ ನಮ್ಮ ಸಂಸ್ಕೃತಿ-ಪರಂಪರೆಗಳನ್ನು ವಿರೋಧಿಸುತ್ತಿರುವ ಉಧಾಹರಣೆಗಳನ್ನು ನಮ್ಮ ಮಾಧ್ಯಮಗಳು ಬಿಂಬಿಸುತ್ತಿವೆ.ಇದೊಂದು ಸಂಧಿಕಾಲವೂ ಹೌದು, ವಿಷಮ ಕಾಲವೂ ಹೌದು. ಈ ಸಂದರ್ಭದಲ್ಲಿ ಶರ್ಮರಂತಹ ವಿದ್ವಜ್ಜನರ ಪಾತ್ರವು ಬಹಳ ಪ್ರಮುಖವಾಗುತ್ತದೆ.ನಮ್ಮ ಸಂಸ್ಕೃತಿ-ಪರಂಪರೆಗಳಲ್ಲಿ ಅಂಧಾನುಕರಣೆಗಳು, ಕಂದಾಚಾರಗಳು, ಸಮಾಜ ವಿರೋಧಿ ಆಚರಣೆಗಳೂ ನುಸುಳಿಕೊಂಡು ತಮ್ಮ ವಿಕೃತ ಚಾಯೆಯನ್ನು ಸಮಾಜದಲ್ಲಿ ಮೂಡಿಸಿರುವುದು ಸುಳ್ಳಲ್ಲ, ಬೆಳೆಯೊಡನೆ ಕಳೆ ಇದ್ದಂತೆ. ಕಳೆಯ ತೆಗೆಯಬೇಕು, ಬೆಳೆಗೆ ನೀರು-ಗೊಬ್ಬರ ಉಣಿಸುವ ಕೆಲಸವು ಶರ್ಮರಂತಹ ಮೇಧಾವಿಗಳಿಂದಾಗಬೇಕೆಂಬುದು ಸಮಾಜದ ಅಪೇಕ್ಷೆ.ಅವರೊಡನೆ ಅವರ ಜ್ಞಾನವನ್ನು ಮೆಚ್ಚುವ ನಮ್ಮಂತಹ ಸಾವಿರಾರು ಮನಸ್ಸುಗಳು ನಿಲ್ಲುವುದರಲ್ಲಿ ಸಂಶಯವಿಲ್ಲ.ಈ ನನ್ನ ಕಳಕಳಿಯನ್ನು ವೇದಾಧ್ಯಾಯೀ ಸುಧಾಕರಶರ್ಮರು ತಪ್ಪಾಗಿ ಭಾವಿಸದೆ ಸಮಾಜದ ಹಿತದೃಷ್ಟಿಯಿಂದ ಅರ ವಿಚಾರವನ್ನು ಮಂಡಿಸಬೇಕೆಂದು ಮತ್ತೊಮ್ಮೆ ಕೋರುವೆ.
Dr Gnanadev said...
ನಿಜ ಶ್ರೀಧರ್ , ಯಾವುದೇ ಪೂರ್ವಾಗ್ರಹಗಳಿಲ್ಲದೆ ಮುಕ್ತ ಪ್ರಾ೦ಜಲ ಮನಸ್ಸಿನಿ೦ದ ಭಾರತೀಯ ಸ೦ಸ್ಕೃತಿಯ ಎಲ್ಲ ಚಹರೆಗಳನ್ನು , ಎಲ್ಲ ಇತಿಹಾಸವನ್ನು ,ಗುರುತಿಸುವ ಗೌರವಿಸುವ ವಿಮರ್ಶಿಸುವ ವಿಶ್ಲೇಷಿಸುವ ಸುಧಾರಿಸುವ ಪ್ರಾಮಾಣಿಕ ಪ್ರಯತ್ನಗಳು ನಮ್ಮೆಲ್ಲರ ನಡುವೆ ಮೂಡಲಿ. ಆ ಮೂಲಕ ವಿಶ್ವಶಾ೦ತಿಯನ್ನು ಸದಾ ಕೋರುವ ಭಾರತೀಯ ಸ೦ಸ್ಕೃತಿಯನ್ನು ಪಸರಿಸುವ ಕಾರ್ಯದಲ್ಲಿ ಪಾಲ್ಗೊಳ್ಳೋಣ. ಶ್ರೀಧರ್ ಈ ನಿಟ್ಟಿನಲ್ಲಿ ನಿಮ್ಮ ಪ್ರಯತ್ನಕ್ಕೆ ನನ್ನ ಹ್ಯಾಟ್ಸ್ ಆಫ್!
ಸೀತಾರಾಮ. ಕೆ. / SITARAM.K said...
nice debate
ಹರಿಹರಪುರ ಶ್ರೀಧರ್ said...
ಶ್ರೀ ಸೀತಾರಾಮ್, ನಿಮ್ಮ ಅಭಿಪ್ರಾಯ ತಿಳಿಸಿ.ಚರ್ಚೆಯಲ್ಲಿ ಎಲ್ಲರೂ ಪಾಲ್ಗೊಂಡಾಗ ಒಂದಿಷ್ಟು ಬದಲಾವಣೆ ಸಾಧ್ಯ.ನಮ್ಮ ಮನದಲ್ಲಿ ಮೂಡಿದ್ದೆಲ್ಲಾ ಸರಿಯಾಗಿರಬೇಕೆಂದೇನೂ ಇಲ್ಲ.ಆದರೆ ಹಿಂದುಸಮಾಜದಲ್ಲಿನ ಜೊಳ್ಳನ್ನು ಬೇರ್ಪಡಿಸಿ ಸ್ವೀಕರಿಸಬೇಕಾದುದಕ್ಕೆ ಪುಷ್ಟಿಕೊಡುವ ಪಾತ್ರದಲ್ಲಿ ನಮ್ಮೆಲ್ಲರ ಹೊಣೆ ಇದೆ , ಅಲ್ಲವೇ?
SUDHAKARA SHARMA said...
ಮೊದಲಿಗೆ ಒಂದು ಸ್ಪಷ್ಟನೆ. ಸುಧಾಕರ ಶರ್ಮಾ ಆರ್ಯಸಮಾಜಿಯಲ್ಲ, Repeat ಆರ್ಯಸಮಾಜಿಯಲ್ಲ. ವೇದಗಳನ್ನು ಅಧ್ಯಯನ ಮಾಡುತ್ತಿರುವ ಒಬ್ಬ ಸತ್ಯಾನ್ವೇಷಕ ಅಷ್ಟೇ. ಆರ್ಯಸಮಾಜದ ಲೋಪ-ದೋಷಗಳಿಗೆ, ಇತಿ-ಮಿತಿಗಳಿಗೆ ಖಂಡಿತವಾಗಿ ನಾನು ಹೊಣೆಗಾರನಲ್ಲ. ವೇದಗಳ ಪ್ರಚಾರವೊಂದೇ ಆರ್ಯಸಮಾಜದ ಉದ್ದೇಶವಾಗಿರುವುದರಿಂದ ಒಟ್ಟಿಗೆ ಕೆಲಸ ಮಾಡುವುದು ಅನಿವಾರ್ಯ. ಅಷ್ಟೇ ನನ್ನ ಆರ್ಯಸಮಾಜದ ಸಂಬಂಧ. ಇನ್ನು 'ಹಿಂದೂ' ಎಂಬ ಪದ ತೀರಾ ಇತ್ತೀಚಿನದು. ಪ್ರಾಚೀನ ಸಾಹಿತ್ಯಗಳಲ್ಲಿ ಈ ಪದದ ಪ್ರಯೋಗವೇ ಇಲ್ಲ. ಇದರ ಬಗ್ಗೆ ಇನ್ನೂ ದೀರ್ಘವಾದ ಪ್ರತಿಕ್ರಿಯೆ ನೀಡುವವನಿದ್ದೇನೆ. - ಸುಧಾಕರ ಶರ್ಮಾ
ವೇದಸುಧೆ said...
ಶ್ರೀ ಶರ್ಮಾಜಿ, ನಮಸ್ತೆ, ಹಿಂದು ಪದದ ಬಗೆಗೆ ನೀವು ನಿಮ್ಮ ಸುಧೀರ್ಘ ಚರ್ಚೆಯನ್ನು ಆರಂಭಿಸುವ ಮುಂಚೆಯೇ ನನ್ನ ಅಭಿಪ್ರಾಯವನ್ನು ತಿಳಿಸಿ ಬಿಡುತ್ತೇನೆ. ವಿಶ್ವದಲ್ಲಿ ನಮ್ಮ ದೇಶವನ್ನು "ಹಿಂದು ದೇಶ" ಎಂದು ಒಪ್ಪಿಯಾಗಿದೆ. ವೇದದಲ್ಲಿ ಹಿಂದು ಎಂಬ ಪದವು ಇಲ್ಲದಿದ್ದರೂ ಹಿಂದು ಸಮಾಜಕ್ಕೆ ವೇದವೇ ಮೂಲ. ವೇದದಬಗ್ಗೆ ಅಪಾರ ಶ್ರಧ್ಧೆ,ಗೌರವ,ಭಕ್ತಿ ಹಿಂದು ಸಮಾಕ್ಕಿದೆ.ನಮ್ಮನ್ನು ಆರ್ಯರೆಂದರೂ, ಸನಾತನಿಗಳೆಂದರೂ ಹಿಂದುಗಳಿಗೇನೂ ಬೇಸರವಿಲ್ಲ.ಅದೇನೇ ಇರಲಿ, ನಾವೆಲ್ಲಾ ಮಾಡಬೇಕಾದ ಮೊದಲ ಕರ್ತವ್ಯವೆಂದರೆ ನಮ್ಮ ಸಮಾಜದಲ್ಲಿರುವ ಮಾನವವಿರೋಧಿ ಆಚರಣೆಗಳನ್ನು ಕಿತ್ತುಹಾಕುವ ಕೆಲಸ. ಎರಡನೆಯ ಸಂಗತಿಯೆಂದರೆ ಪ್ರತಿಯೊಬ್ಬ ಮನುಷ್ಯನೂ ಅಂತಿಮವಾಗಿ ಬಯಸುವುದು ನೆಮ್ಮದಿಯ ಜೀವನ, ಆನಂದಮಯ ಜೀವನ.ಯಾವ ಜೀವನಮಾರ್ಗದಿಂದ ಮನುಷ್ಯನಿಗೆ ನೆಮ್ಮದಿ ಸಿಗುತ್ತದೋ ಆ ಮಾರ್ಗವನ್ನು ಅವನು ಹುಡುಕಿಕೊಳ್ಳುತ್ತಾನೆ.ಇನ್ನೊಬ್ಬರಿಗೆ ನೋವುಂಟಾಗದಂತೆ ಬದುಕಿದರಾಯ್ತು, ಅಲ್ಲವೇ?
SUDHAKARA SHARMA said...
ಆತ್ಮೀಯರೇ! ವಿಶ್ವದಲ್ಲಿ ನಮ್ಮ ದೇಶವನ್ನು `ಹಿಂದೂ ದೇಶ' ಎಂದು ಒಪ್ಪಿಯಾಗಿದೆ ಎಂದಿರೆ. ನಾವು ಭಾರತೀಯರೇ ಅದನ್ನು ಒಪ್ಪಿಲ್ಲವಲ್ಲ! ಭಾರತದ ಸಂವಿಧಾನದ ಪ್ರಕಾರ ನಮ್ಮದು ಹಿಂದೂ ರಾಷ್ಟ್ರವೇ ಅಲ್ಲ!! This is a Secular Country you know?! ಮೊದಲಿಗೆ ನಮ್ಮ ಭಾರತ ಆರ್ಯಾವರ್ತ. ನಾವು ಮೊದಲಿಗೆ ಆರ್ಯರು. ಈ ಆರ್ಯ ಜಾತಿ, ಜನಾಂಗವಲ್ಲ, ಜೀವನಪದ್ಧತಿ, ಸಂಕ್ಷಿಪ್ತವಾಗಿ ಹೇಳುವುದಾದರೆ, Gentrleman. ಪ್ರಗತಿಶೀಲ, Progressive, ಎಂಬ ಅರ್ಥವೂ ಇದೆ. ಪ್ರಾಚೀನತೆ ಇದೆ. ಇದಕ್ಕೆ ಹೋಲಿಸಿದರೆ ಹಿಂದೂ ಶಬ್ದಕ್ಕೆ ರೂಢಿಯ ಬಲ ಬಿಟ್ಟರೆ ಮಿಕ್ಕಾವ ಬಲವೂ ಇಲ್ಲ. ಅಷ್ಟೇ ಅಲ್ಲ ಅರಾಬಿಕ್/ಪಾರ್ಸಿ ಭಾಷೆಗಳಲ್ಲಿ ಕಳ್ಳ, ದರೋಡೆಕೋರ ಎಂಬರ್ಥಗಳೂ ಇವೆ. ಇಲ್ಲಿಯ ಜನರನ್ನು ಹೀನಾಯವಾಗಿ ಗುರುತಿಸಲು ಬಳಸಿದ ಪದವಿದ್ದಂತೆ ಕಾಣುತ್ತದೆ. ಪದದ ಬಳಕೆಗಿಂತ, ಯಾವ ಪದವು ನಮ್ಮ ಅಂತರಂಗದ ಭಾವನೆಗಳನ್ನು ಚೆನ್ನಾಗಿ, ವೈಜ್ಞಾನಿಕವಾಗಿ ಪ್ರತಿಬಿಂಬಿಸಬಲ್ಲದೋ ಅದು ಸೂಕ್ತವಲ್ಲವೇ? ಆರ್ಯ = ಆರ್ಯಾ ಜ್ಯೋತಿರಗ್ರಾಃ - ಬೆಳಕನ್ನು, ಜ್ಞಾನದ ಬೆಳಕನ್ನು ಮುಂದಿಟ್ಟುಕೊಂಡು ಸಾಗುವ ಸಭ್ಯನೇ ಆರ್ಯ. ಹಿಂದೂ ಎನ್ನುವಾಗಲೂ ನಮ್ಮ ಭಾವನೇ ಇದೇ ಆಗಿದೆಯಲ್ಲವೇ?! ಅಂತಿಮವಾಗಿ, ಪದ ಯಾವುದೇ ಆಗಿರಲಿ, ಮುಕ್ತ ಮನಸ್ಸಿನಿಂದ ಸತ್ಯವನ್ನು ಹುಡುಕುತ್ತಾ, ಸಾಕ್ಷಾತ್ಕಾರ ಮಾಡಿಕೊಳ್ಳುತ್ತಾ, ಪ್ರಗತಿಶೀಲರಾಗಿ, ಜ್ಞಾನದ ಬೆಳಕಿನಲ್ಲಿ ಮುನ್ನಡೆಯುದೇ ಮುಖ್ಯವಲ್ಲವೇ?!
ಹರಿಹರಪುರ ಶ್ರೀಧರ್ said...
ಗೌರವಾನ್ವಿತ ಶರ್ಮಾಜಿ, ಬೃಹಸ್ಪತಿ ಆಗಮದಲ್ಲಿ ಈ ಸಾಲುಗಳಿವೆಯಲ್ಲಾ? ಹಿಮಾಲಯಮ್ ಸಮಾರಭ್ಯ ಯಾವದಿಂಧು ಸರೋವರಮ್| ತಂ ದೇವನಿರ್ಮಿತಮ್ ದೇಶಮ್ ಹಿಂದುಸ್ಥಾನಂ ಪ್ರಚಕ್ಷ್ಯತೇ|| ಈ ಬಗ್ಗೆ ನಿಮ್ಮೊಡನೆ ವಾದ ಮಾಡುವುದಿಲ್ಲ, ಆದರೆ ನನ್ನ ಭಾವನೆಗಳನ್ನು ವಿವರವಾಗಿ ಪ್ರತ್ಯೇಕ ಬರೆಯುವೆ. [ಭಾರತದ ಸಂವಿಧಾನದ ಪ್ರಕಾರ ನಮ್ಮದು ಹಿಂದೂ ರಾಷ್ಟ್ರವೇ ಅಲ್ಲ!! This is a Secular Country you know?!] ಈ ಬಗ್ಗೆಯೂ ನನ್ನ ಭಾವನೆಗಳನ್ನು ಹಂಚಿಕೊಳ್ಳುವೆ. ನಮಸ್ಕಾರಗಳೊಡನೆ -ಶ್ರೀಧರ್

Wednesday, December 21, 2011

ಸತ್ತರು ಎನಲವರು ಹುಟ್ಟಿರಲೇ ಇಲ್ಲ!


     "ಶ್ರೀ. . . . . . . . . . . . ರವರು ಅತ್ಯಂತ ಜನಾನುರಾಗಿಯಾಗಿದ್ದು, ನಮಗೆಲ್ಲಾ ತುಂಬಾ ಬೇಕಾದವರಾಗಿದ್ದರು. ಅವರನ್ನು ಕಳೆದುಕೊಂಡು ನಾವು ಅನಾಥರಾಗಿದ್ದೇವೆ. ಅವರ ಅಗಲಿಕೆಯ ದುಃಖವನ್ನು ಸಹಿಸುವುದು ನಮಗೇ ಇಷ್ಟು ಕಷ್ಟವಾಗಿರುವಾಗ ಅವರ ಕುಟುಂಬದವರಿಗೆ ಇನ್ನು ಹೇಗಾಗಿರಬೇಕು? ಅವರ ಕುಟುಂಬದವರೆಲ್ಲರಿಗೂ ದುಃಖವನ್ನು ಸಹಿಸುವ ಶಕ್ತಿಯನ್ನು ಆ ದಯಾಮಯನಾದ ಭಗವಂತ ಕೊಡಲಿ ಎಂದು ಪ್ರಾರ್ಥಿಸೋಣ. ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ನಾವೆಲ್ಲರೂ ಎದ್ದುನಿಂತು ಎರಡು ನಿಮಿಷ ಮೌನ ಶ್ರದ್ಧಾಂಜಲಿ ಸಲ್ಲಿಸೋಣ" - ಗಣ್ಯರೊಬ್ಬರ ನಿಧನದ ಸಂದರ್ಭದಲ್ಲಿ ಏರ್ಪಡಿಸಿದ್ದ ಸಂತಾಪ ಸೂಚಕ ಸಭೆಯಲ್ಲಿ ವೇದಿಕೆಯಲ್ಲಿದ್ದವರೊಬ್ಬರು ಈ ರೀತಿಯಲ್ಲಿ ಕರೆ ಕೊಡುತ್ತಿದ್ದರು. ಮೃತ ಗಣ್ಯರ ಅಂತ್ಯಸಂಸ್ಕಾರ ಅದಾಗಲೇ ಆಗಿಹೋಗಿತ್ತು. ಅಗ್ನಿಯಲ್ಲಿ ಅರ್ಪಿತವಾಗಿ ಶರೀರ ಪಂಚಭೂತಗಳಲ್ಲಿ ಲೀನವಾಗಿತ್ತು. ಹಾಗಾದರೆ ಆ ಶರೀರದೊಂದಿಗೆ ಗುರುತಿಸಿಕೊಂಡಿದ್ದ ಆತ್ಮ ಇನ್ನೂ ಇತ್ತೇ? ಶರೀರ ಹೋದರೂ ಆತ್ಮ ಇರುತ್ತದೆಯೇ? ಸದ್ಗತಿ ಸಿಗುವುದು ಅಂದರೆ ಏನು? . . ಇತ್ಯಾದಿ ಪ್ರಶ್ನೆಗಳು ಕಾಡತೊಡಗಿದವು. ಶರೀರಕ್ಕೆ ಹೊರತಾದ ಆತ್ಮ ಒಂದು ಇದೆ ಅನ್ನುವುದನ್ನು ಒಪ್ಪಿ ಮಾಡುವ ಕ್ರಿಯೆಯೇ ಉತ್ತರಕ್ರಿಯಾದಿ ಸಂಸ್ಕಾರಗಳು. ಶರೀರವನ್ನು ಹೂಳುವುದಿರಬಹುದು, ಸುಡುವುದಿರಬಹುದು, ಪಾರ್ಸಿಗಳು ಮಾಡುವಂತೆ ರಣಹದ್ದುಗಳಿಗೆ ದೇಹವನ್ನು ಆಹಾರವಾಗಿ ಉಣಿಸುವುದಿರಬಹುದು, ಏನಾದರೂ ಇರಬಹುದು. ಇಂತಹ ಕ್ರಿಯೆಗಳಿಂದ ಮೃತಶರೀರ ಪಂಚಭೂತಗಳಲ್ಲಿ ವಿಲೀನವಾಗಲು ಸಹಕಾರಿಯಾಗುತ್ತದೆ.
    'ಜೀವಾತ್ಮ ಅನ್ನುವ ವಸ್ತು ಇರುವುದಿಲ್ಲ. ಅದು ಶರೀರದೊಂದಿಗೆ ಸಹಜವಾಗಿ ಉಂಟಾಗುವ ಚೈತನ್ಯವಿಶೇಷ. ಶರೀರ ನಷ್ಟವಾದೊಡನೆ ಅದೂ ನಾಶವಾಗುತ್ತದೆ' ಎಂಬ ವಾದವೂ ಇದೆ. ವಿಚಾರ ಮಾಡೋಣ. ಈ ಶರೀರ ಅನ್ನುವುದು ಜಡವಸ್ತುಗಳಿಂದ ಕೂಡಿದ ಒಂದು ಸುಂದರ ನಿರ್ಮಾಣ. ಅದಕ್ಕೆ ಚೈತನ್ಯ ಬಂದಿರುವುದು ಅದರೊಳಗಿರುವ ಪ್ರಾಣ/ಚೈತನ್ಯ/ಜೀವಾತ್ಮ/ಯಾವುದೋ ಶಕ್ತಿಯಿಂದ ಎಂದು ಒಪ್ಪಬಹುದಲ್ಲವೇ? ವೈಜ್ಞಾನಿಕ ದೃಷ್ಟಿಯಿಂದ ನೋಡಿದರೆ ಯಾವುದೇ ಮೂಲವಸ್ತುವಿಗೆ ನಾಶವಿರುವುದಿಲ್ಲ. ಅದು ರೂಪಾಂತರ ಹೊಂದಿದರೂ ಒಂದಲ್ಲಾ ಒಂದು ರೂಪದಲ್ಲಿ ಅಸ್ತಿತ್ವದಲ್ಲಿರುತ್ತದೆ. ಮೃತ ಶರೀರವನ್ನು ಸುಟ್ಟಾಗ/ಯಾವುದೇ ರೀತಿಯಲ್ಲಿ ಅಂತ್ಯ ಸಂಸ್ಕಾರ ಮಾಡಿದಾಗ ಅದು ಬೂದಿಯಾಗಿಯೋ, ಆವಿಯಾಗಿಯೋ, ಮಣ್ಣಾಗಿಯೋ, ನೀರಾಗಿಯೋ ರೂಪಾಂತರ ಹೊಂದುತ್ತದೆ. ಆ ಶರೀರದೊಳಗಿದ್ದ ಜೀವ ಚೈತನ್ಯ ಏನಾಗುತ್ತದೆ? ನಾಶವಾಗುತ್ತದೆ ಎಂದರೆ ಅದು ಇನ್ನೂ ಯಾವುದೋ ರೀತಿಯಲ್ಲಿ ಇರಲೇಬೇಕಲ್ಲವೇ? ಮೊದಲು ಅದು ಯಾವ ರೂಪದಲ್ಲಿತ್ತು? ಅಂತ್ಯ ಸಂಸ್ಕಾರದ ನಂತರ ಯಾವ ರೂಪ ಹೊಂದುತ್ತದೆ ಎಂಬುದು ಯಾರಿಗೆ ಗೊತ್ತಿದೆ? ಶರೀರದೊಂದಿಗೆ ಸಹಜವಾಗಿ ಉಂಟಾಗುವ ಜೀವ ಚೈತನ್ಯವೆಂದರೆ ಅದನ್ನು ಸೃಷ್ಟಿಸಿದವರು ಯಾರು? ಜಡವಸ್ತು ತನ್ನಿಂದ ತಾನೇ ಏನಾದರೂ ಸೃಷ್ಟಿಸಲು ಸಾಧ್ಯವಿದೆಯೇ? ಇಲ್ಲ ಅನ್ನುತ್ತದೆ ವಿಜ್ಞಾನ. ಆದ್ದರಿಂದ ಶರೀರ ಜೀವ ಚೈತನ್ಯವನ್ನು ಉತ್ಪಾದಿಸಲಾರದು. ಒಂದು ವೇಳೆ ಜಡವಸ್ತು ಏನಾದರೂ ಸೃಷ್ಟಿಸಲು ಸಾಧ್ಯ ಎಂದು ವಾದಕ್ಕೋಸ್ಕರವಾಗಿ ಒಪ್ಪಿಕೊಂಡರೂ ಅದರಿಂದ ಮತ್ತೊಂದು ಜಡವಸ್ತು ನಿರ್ಮಾಣ ಸಾಧ್ಯವೇ ಹೊರತು ಚೈತನ್ಯದಿಂದ ಕೂಡಿದ ವಸ್ತು ನಿರ್ಮಾಣ ಆಗಲಾರದು. ಇರುವ ವಸ್ತುಗಳಿಂದ ಇಲ್ಲದ ವಸ್ತುವಿನ ಸೃಷ್ಟಿ ಹೇಗೆ ಸಾಧ್ಯ? ಆದ್ದರಿಂದ ಶರೀರ ಜೀವ ಚೈತನ್ಯವನ್ನು ಉತ್ಪಾದಿಸಲು ಸಾಧ್ಯವಿಲ್ಲ. ಶರೀರದೊಳಗೆ ಜೀವ ಚೈತನ್ಯ ಸೇರಿದೆಯೇ ಹೊರತು, ಶರೀರದಿಂದ ಚೈತನ್ಯ ಉಂಟಾಗಿಲ್ಲ ಅನ್ನುವುದು ಹೆಚ್ಚು ತಾರ್ಕಿಕ. ಹೀಗೆಯೇ ಮುಂದುವರೆಸೋಣ. ಆ ಚೈತನ್ಯ ಮೊದಲು ಶರೀರದೊಳಗಿದ್ದಾಗ ವ್ಯಕ್ತಿ ಜೀವಂತನಾಗಿದ್ದ, ಇಲ್ಲದಾದಾಗ ಮೃತನಾದ ಅನ್ನಬಹುದು. ಹೊರಗಿನಿಂದ ವ್ಯಕ್ತಿಯ ಶರೀರದೊಳಗೆ ಬಂದು ಸೇರಿದ್ದ ಆ ಚೈತನ್ಯ ವ್ಯಕ್ತಿಯ ಮರಣಾನಂತರ ಶರೀರದ ಹೊರಗೆ ಇರುತ್ತದೆ. ಬದುಕಿದ್ದಾಗ ಒಂದು ರೂಪದಲ್ಲಿ, ಸತ್ತಾಗ ಇನ್ನೊಂದು ರೂಪದಲ್ಲಿ ಇರುತ್ತದೆ ಎಂದಾದರೆ ಯಾವ ರೂಪದಲ್ಲಿ ಇದ್ದೀತು ಅನ್ನುವುದು ಯಾರಿಗೆ ತಿಳಿದಿದೆ? ಇಂತಹ ವಿಶಿಷ್ಟ ಚೈತನ್ಯವನ್ನೇ ಜ್ಞಾನಿಗಳು ಜೀವಾತ್ಮ ಎನ್ನುತ್ತಾರೆ. ಜೀವಾತ್ಮಕ್ಕೆ ಹುಟ್ಟೂ ಇಲ್ಲ, ಸಾವೂ ಇಲ್ಲ ಅನ್ನುವುದು ಈ ಅರ್ಥದಲ್ಲೇ ಇರಬೇಕು. 
ಪುನರಪಿ ಜನನಂ ಪುನರಪಿ ಮರಣಂ
ಪುನರಪಿ ಜನನೀ ಜಠರೇ ಶಯನಂ 
ಶ್ರೀ ಶಂಕರಾಚಾರ್ಯರ ಈ ಉಕ್ತಿ ಪುನರ್ಜನ್ಮವನ್ನು ಸಮರ್ಥಿಸುವುದರೊಂದಿಗೆ ಜೀವಚೈತನ್ಯದ ಅಮರತ್ವವನ್ನೂ ಸಾರುತ್ತಿದೆ. ಪುನರ್ಜನ್ಮವಿದ್ದಲ್ಲಿ ಹಳೆಯ ಶರೀರ ನಷ್ಟವಾದ ಮೇಲೆ, ಅದು ಪಂಚಭೂತಗಳಲ್ಲಿ ಸೇರಿಹೋದಮೇಲೆ ಆ ಜೀವಚೈತನ್ಯ ಬೇರೆ ಶರೀರದ ಮೂಲಕವೇ ಪ್ರಕಟಗೊಳ್ಳಬೇಕು/ಪುನರ್ಜನ್ಮ ಹೊಂದಬೇಕು.
     ಸಕಲ ಜೀವಿಗಳನ್ನು ಸೃಷ್ಟಿಸಿದವನು ಭಗವಂತ ಎಂದೂ ಸಹ ವಾದವಿದೆ. ಯಾವುದರಿಂದ ಸೃಷ್ಟಿಸಿದ? ಶೂನ್ಯದಿಂದಂತೂ ಆಗಿರಲಾರದು. ಶೂನ್ಯದಿಂದ ಸೃಷ್ಟಿ ಅನ್ನುವುದನ್ನು ವಿಜ್ಞಾನ ಸಹ ಒಪ್ಪುವುದಿಲ್ಲ. ಎಲ್ಲಾ ಜೀವಿಗಳೂ ಪರಮಾತ್ಮನ ಅಂಶಗಳೇ ಅಂದರೆ, ಇಷ್ಟೊಂದು ಜೀವಜಂತುಗಳು ಇರುವಾಗ ಅವೆಲ್ಲವನ್ನೂ ಪರಮಾತ್ಮ ತನ್ನ ಅಂಶದಿಂದಲೇ ಸೃಷ್ಟಿಸಿದ ಅಂದರೆ, ಸೃಷ್ಟಿಯ ನಂತರ ಅವನು  ಪರಿಪೂರ್ಣ ಎಂದೆನಿಸಿಕೊಳ್ಳಲಾರನು. ಭಗವಂತ ಸೃಷ್ಟಿಸಿದ ಅಂದರೆ ಏಕೆ ಸೃಷ್ಟಿಸಿದ ಎಂಬ ಪ್ರಶ್ನೆ ಬರುತ್ತದೆ. ಅವನಿಗೆ ಬೇಕಾಗಿತ್ತು, ಸೃಷ್ಟಿಸಿದ ಅಂದರೆ ಬೇಕು ಅನ್ನುವ ಭಾವನೆ ಬಂದ ತಕ್ಷಣ ಪರಮಾತ್ಮನಿಗೆ ಏನೂ ಬೇಕಿಲ್ಲದಾಗ, ಯಾವುದರ ಅಗತ್ಯವೂ ಇಲ್ಲದಿರುವಾಗ, ಇಂತಹ ಸೃಷ್ಟಿಗೆ ಅರ್ಥವೇ ಉಳಿಯುವುದಿಲ್ಲ, ಅಲ್ಲದೆ ಪರಮಾತ್ಮ ಪರಿಪೂರ್ಣ ಎಂಬ ಗುಣವಿಶೇಷತೆಗೆ ಧಕ್ಕೆ ಬರುತ್ತದೆ. ಸೂಕ್ತವಾದ ವಾದವೆಂದರೆ ಎಷ್ಟು ಜೀವಜಂತುಗಳಿವೆಯೋ ಅಷ್ಟು ಜೀವಾತ್ಮಗಳಿವೆ ಅನ್ನುವುದು. ಆ ಜೀವಾತ್ಮಗಳೂ ಪರಮಾತ್ಮನಂತೆ ಹುಟ್ಟು-ಸಾವುಗಳಿಲ್ಲದವು, ಪರಮಾತ್ಮನ ಪ್ರಜೆಗಳು ಅನ್ನುವುದು! ಶರೀರದೊಡನೆ ಇದ್ದಾಗ ಆತ್ಮಗಳು ಮಾಡುವ ಕರ್ಮವನ್ನನುಸರಿಸಿ ಹೊಸ ಜನ್ಮ ಪಡೆಯುವುವು. ಆ ಜನ್ಮ ಮಾನವಜನ್ಮವೇ ಆಗಬೇಕೆಂದಿಲ್ಲ, ಇಂತಹ ಲಿಂಗವೇ ಆಗಬೇಕೆಂದಿಲ್ಲ. 
ತ್ವಂ ಸ್ತ್ರೀ ತ್ವಂ ಪುಮಾನಸಿ ತ್ವಂ ಕುಮಾರ ಉತ ವಾ ಕುಮಾರೀ |
ತ್ವಂ ಜೀರ್ಣೋ ದಂಡೇನ ವಂಚಸಿ ತ್ವಂ ಜಾತೋ ಭವಸಿ ವಿಶ್ವತೋಮುಖಃ || (ಅಥರ್ವ: ೧೦.೮.೨೭)
     ಇದರ ಅರ್ಥ ಜೀವಾತ್ಮನೇ, ನೀನು ಸ್ತ್ರೀ, ನೀನು ಪುರುಷ, ನೀನು ಕುಮಾರ ಮತ್ತು ನೀನು ಕುಮಾರಿ. ವೃದ್ಧನಾಗಿ, ನಂತರ ಮತ್ತೆ ಜನಿಸಿ ಎಲ್ಲೆಡೆಯೂ ಮುಖ ಮಾಡುವೆ. ಭಗವಂತನಂತೆ ಜೀವಾತ್ಮನೂ ಲಿಂಗರಹಿತನಾಗಿದ್ದು ಧರಿಸಿದ ಶರೀರವನ್ನು ಅವಲಂಬಿಸಿ ಹೆಣ್ಣು, ಗಂಡು ಅನ್ನಿಸಿಕೊಳ್ಳುವುದು.
     ಮೃತ ಶರೀರವನ್ನು 'ವ್ಯಕ್ತಿಯ ಹೆಣ', 'ವ್ಯಕ್ತಿಯ ದೇಹ(ಬಾಡಿ)' ಅನ್ನುತ್ತೇವೆಯೇ ಹೊರತು ವ್ಯಕ್ತಿ ಅನ್ನುವುದಿಲ್ಲ. ಅಂದರೆ ಕೇವಲ ಶರೀರ ವ್ಯಕ್ತಿಯೆನಿಸುವುದಿಲ್ಲ. ಶರೀರದೊಳಗೆ ಜೀವಾತ್ಮನಿದ್ದಾಗ ಅದು ನಾಗರಾಜ, ಶ್ರೀಧರ, ಅಬ್ದುಲ್, ಡಿಸೋಜಾ, ಊರ್ಮಿಳಾ, ಇತ್ಯಾದಿಗಳಿಂದ ಗುರುತಿಸಲ್ಪಡುತ್ತದೆ. ಎಂತಹ ಚೋದ್ಯ! ಶರೀರಕ್ಕೆ ಸಾವಿದೆ, ಚೈತನ್ಯಕ್ಕಿಲ್ಲ. ಮಾಯೆಯೆಂದರೆ, ಶರೀರದೊಳಗಿನ ಚೈತನ್ಯವೂ ತನ್ನನ್ನು ಶರೀರದೊಂದಿಗೇ ಗುರುತಿಸಿಕೊಳ್ಳುತ್ತದೆ, ತಾನೇ ವ್ಯಕ್ತಿಯೆಂದು ಭಾವಿಸುತ್ತದೆ, ಚಿಂತನ-ಮಂಥನ ಮಾಡುತ್ತದೆ, ಸಕಲ ಸುಖವೂ ತನಗೇ ಬೇಕೆನ್ನುತ್ತದೆ, ಶರೀರ ಸಾಯುವವರೆಗೂ ಆ ಶರೀರ ನಾಶವಾಗುವುದನ್ನು ಬಯಸುವುದೇ ಇಲ್ಲ! ಆ ಶರೀರ ಮನುಷ್ಯನದಾಗಿರಬಹುದು, ಮನುಷ್ಯ ತಿಂದು ತೇಗುವ ಕೋಳಿ, ಹಂದಿಯದಾಗಿರಬಹುದು, ಯಾವುದೇ ಜೀವಜಂತುವಾಗಿರಬಹುದು! 


ಹುಟ್ಟದೇ ಇರುವವರು ಸಾಯುವುದೆ ಇಲ್ಲ
ಹುಟ್ಟಿದರು ಎನಲವರು ಸತ್ತಿರಲೆ ಇಲ್ಲ |
ಸತ್ತರು ಎನಲವರು ಹುಟ್ಟಿರಲೆ ಇಲ್ಲ
ಹುಟ್ಟುಸಾವುಗಳೆರಡು ಮಾಯೆ ಮೂಢ ||
**********************
-ಕ.ವೆಂ.ನಾಗರಾಜ್.
[ಆಧಾರ: ಪಂ. ಸುಧಾಕರ ಚತುರ್ವೇದಿಯವರ ವಿಚಾರಧಾರೆ]

Friday, December 16, 2011

ಸಮಾನೋ ಮಂತ್ರ: ಸಮಿತಿ: ಸಮಾನೀ-ಒಂದು ಚಿಂತನೆ

ಅನೇಕ ದಿನಗಳಿಂದ ನನ್ನ ಮನದೊಳಗೆ ಒಂದು ಚಿಂತೆ ಕಾಡುತ್ತಿದೆ.ನಮಗೆಲ್ಲಾ ಜನ್ಮಕೊಟ್ಟಈ ನೆಲಕ್ಕೆ ಪುಣ್ಯಭೂಮಿ, ಮೋಕ್ಷಭೂಮಿ, ತ್ಯಾಗಭೂಮಿ,ದೇವಭೂಮಿ, ಎಂದೆಲ್ಲಾ ಕವಿಗಳು ಬಣ್ಣಿಸಿದ್ದಾರೆ.ನಮ್ಮ ಋಷಿಪುಂಗವರ ತಪಸ್ಸಿನಿಂದ, ಅವರ ಆದರ್ಶಮಯ ಜೀವನದಿಂದ ನಮ್ಮ ದೇಶಕ್ಕೆ "ವಿಶ್ವಗುರುವಿನ" ಸ್ಥಾನ ಲಭಿಸಿತ್ತು ಎಂಬ ವಿಚಾರವನ್ನೂ ಸಹ ಕೇಳುತ್ತೇವೆ.ನಮ್ಮ ಈ ನೆಲದಲ್ಲಿಯೇ "ಮುತ್ತು ರತ್ನಗಳನ್ನು ಬಳ್ಳದಿಂದ ಅಳೆದು ಮಾರುತ್ತಿದರೆಂದೂ" ಕೇಳಿದ್ದೇವೆ.ಇವೆಲ್ಲದರ ಜೊತೆಗೆ ನಮ್ಮ ನಿತ್ಯ ಸಂಕಲ್ಪವಾದರೋ " ಸರ್ವೇ ಭವಂತು ಸುಖಿನ:.......ಮಾ ಕಶ್ಚಿತ್ ದು:ಖ ಭಾಗ್ಭವೇತ್"-ಎಲ್ಲರೂ ಸುಖವಾಗಿರಬೇಕು........, ಯಾರಿಗೂ ದು:ಖ ಬರುವುದು ಬೇಡ". ಇದು ನಮ್ಮ ನಿತ್ಯ ಪ್ರಾರ್ಥನೆ ಯಾಗಿತ್ತು. ಆದರೆ ಎಲ್ಲೋ ಎನೋ ತಪ್ಪಾಗಿದೆಯಲ್ಲಾ! ಯಾವುದೋ ಕೊಂಡಿ ಕಳಚಿದೆಯಲ್ಲಾ!!

ಮೊನ್ನೆ ನಾನು ಅಗ್ನಿಹೋತ್ರ ಮಾಡುತ್ತಾ ಕುಳಿತಿದ್ದೆ. ನಮ್ಮಕ್ಕ ನಮ್ಮ ಮನೆಗೆ ಬಂದವರು " ಇದೇನೋ ನೀನು "ಹೋಮ ಮಾಡುತ್ತಿದ್ದೀಯಾ? ಯಜುರ್ವೇದವರು ಮಾಡಬೇಕಾದ್ದು,ಋಗ್ವೇದಿಯಾದ ನೀನು ಮಾಡುತ್ತಿದ್ದೀಯಲ್ಲಾ!!" ವೇದಸುಧೆಯ ವಾರ್ಷಿಕೋತ್ಸವದಲ್ಲಿ ನಡೆದ ಅಗ್ನಿಹೋತ್ರ ಕಾರ್ಯಕ್ರಮದಲ್ಲಿ ಸ್ವತ: ಅಗ್ನಿಹೋತ್ರ ಮಾಡಿದ್ದ ನಮ್ಮ ಅಕ್ಕ ಶ್ರೀ ಸುಧಾಕರ ಶರ್ಮರಿಂದ ಅಗ್ನಿಹೋತ್ರದ ಅರ್ಥವಿವರಣೆಯನ್ನು ಸವಿಸ್ತಾರವಾಗಿ ಕೇಳಿದ್ದರು. ಅಂದು ಮೆಚ್ಚುಗೆ ವ್ಯಕ್ತಪಡಿಸಿದ್ದವರು. ಇವರೇ. ಆದರೆ ಅವರ ಬಾಯಲ್ಲಿಯೇ ಈ ಪ್ರಶ್ನೆ. ನಾನು ನಮ್ಮಕ್ಕನಿಗೆ ಹೇಳಿದೆ" ಆರೋಗ್ಯ ನಿಮಗೆ ಮಾತ್ರ ಬೇಕೋ? ಬೇರೆಯವರಿಗೆ ಬೇಡವೋ?
ಅವರು ನಿರುತ್ತರರಾಗಿದ್ದರು.
ಬ್ರಾಹ್ಮಣರೆಂದು ಕರೆಸಿಕೊಳ್ಳುವ , ಅಲ್ಪಸ್ವಲ್ಪ ಸಾಮಾಜಿಕ ಅರಿವು ಹೊಂದಿರುವ ಇವರೇ ಹೀಗೆ ಚಿಂತಿಸಿದರೆ ಹಿಂದುಸಮಾಜವು ಇನ್ನೂ ಯಾವ ಬಗೆಯ ಅಜ್ಞಾನದ ಸುಳಿಯಲ್ಲಿ ಸಿಲುಕಿ ಬಳಲುತ್ತಿರಬಹುದೆಂದು ಚಿಂತೆಗೊಳಗಾಗುತ್ತೇನೆ. ಚಿಂತೆಗೆ ಕಾರಣವಿದೆ. ಯಜ್ಞೋಪವೀತವನ್ನು ಧಾರಣೆ ಮಾಡಿರುವ ಎಲ್ಲರಿಗೂ ವೈಜ್ಞಾನಿಕವಾಗಿ ಅದರ ಮಹತ್ವವನ್ನು ಮನವರಿಕೆ ಮಾಡುವ ಪ್ರಯತ್ನವನ್ನು ಮಾಡಲಾಗುತ್ತದೆ, ಸಂಧ್ಯಾವಂದನೆ ಮಾಡುವ, ಗಾಯತ್ರಿ ಮಂತ್ರ ಜಪಿಸುವ, ಊಟಮಾಡುವಾಗಿನ ಪರಿಶಂಚನೆಗೂ ಅರ್ಥ ವಿವರಣೆ ಕೊಟ್ಟು ಅದರಿಂದಾಗಿ ನಮ್ಮ ಆರೋಗ್ಯದ ಮೇಲಾಗುವ ಸತ್ಪರಿಣಾಮದ ಬಗೆಗೆ ಅರಿವು ಮಾಡಿಸಲಾಗುತ್ತದೆ.ಆದರೆ " ಸರ್ವೇ ಭವಂತು ಸುಖಿನ:....... ಮಾ ಕಶ್ಚಿತ್ ದು:ಖ ಭಾಗ್ಭವೇತ್"-ಎಂದು ಪ್ರಾರ್ಥಿಸುವ ನಾವು ನಮ್ಮೊಡನೆ ಉಪನಯನ ಸಂಸ್ಕಾರದಿಂದ, ವೇದಾಧ್ಯಯನದಿಂದ ಎಷ್ಟು ಜನ ನಮ್ಮ ಸೋದರರು ವಂಚಿತರಾಗಿದ್ದಾರೆಂಬ ಬಗ್ಗೆ ಯೋಚಿಸಿದ್ದೇವೆಯೇ? " ಆತ್ಮವತ್ ಸರ್ವ ಭೂತೇಶು" ಎನ್ನುವ ನಮಗೆ ಮಾನವ ಜಾತಿಯಲ್ಲೂ ಒಂದುಬಹುದೊಡ್ದ ಭಾಗ ಈ ಸಂಸ್ಕಾರಗಳಿಂದ ವಂಚಿತವಾಗಿದೆ, ಎಂದು ಅನಿಸುವುದಿಲ್ಲವೇ?ಅವರಿಗೆ ಉತ್ತಮ ಆರೋಗ್ಯ ಬೇಡವೇ? ಉತ್ತಮ ಬದುಕು ಬೇಡವೇ?
ನನಗೆ ಚಿಂತೆ ಕಾಡಲೂ ಇನ್ನೂ ಕಾರಣಗಳಿವೆ. ವೇದಾಧ್ಯಯನವನ್ನು ಮಾಡಿರುವ ಅದೆಷ್ಟು ವಿದ್ವಾಂಸರುಗಳಿಲ್ಲ! ಅವರಲ್ಲಿ ಈ ಚಿಂತೆ ಯಾಕೆ ಕಾಡುತ್ತಿಲ್ಲ? ನಮ್ಮ ವೈದಿಕ ಪರಂಪರೆಯಿಂದ ಒಂದು ಆರೋಗ್ಯಯುತವಾದ ಜೀವನ ನಡೆಸಬಹುದೆಂದಾದರೆ ಆ ಜೀವನ ಕೆಲವರಿಗೆ ದಕ್ಕಿದರೆ ಸಾಕೇ?

ಸಮಾನೋ ಮಂತ್ರ: ಸಮಿತಿ: ಸಮಾನೀ
ಸಮಾನಂ ವ್ರತಂ ಸಹ ಚಿತ್ತಮೇಷಾಮ್|
ಸಮಾನೇನ ವೋ ಹವಿಷಾ ಜುಹೋಮಿ
ಸಮಾನಂ ಚೇತೋ ಅಭಿಸಂವಿಶಧ್ವಮ್||
[ಅಥರ್ವ-೬.೬೪.೨]

ಅಥರ್ವ ವೇದದ ಈ ಮಂತ್ರ ಏನು ಹೇಳುತ್ತದೆ?

ಸಮಾನೋ ಮಂತ್ರ: = ಮಾನವರೆಲ್ಲರ ಮಂತ್ರವು ಸಮಾನವಾಗಿರಲಿ
ಸಮಿತಿ: ಸಮಾನೀ= ಸಮಿತಿಯು ಸಮಾನವಾಗಿರಲಿ[ ಸಮಿತಿ ಎಂದರೆ ಸಭೆ, ಕೂಟ, ಸಂಸ್ಥೆ,ಸಮಾಜ,ಸೇರುವಿಕೆ]
ಸಮಾನಂ ವ್ರತಂ=ವ್ರತವೂ ಸಮಾನವಾಗಿರಲಿ[ವ್ರತವೆಂದರೆ ಕಟ್ಟು, ಕಟ್ಟಳೆ,ನಿಯಮ,ಶಾಸನ,ವಿಧಿ, ಯಜ್ಞ,ಪೂಜೆ,ಧಾರ್ಮಿಕ ಪ್ರತಿಜ್ಞೆ ]

ಸಹ ಚಿತ್ತಮೇಷಾಮ್= ಇವರೆಲ್ಲರ ಚಿತ್ತವು ಒಂದೇ ದಿಕ್ಕಿನಲ್ಲಿ ಹರಿಯಲಿ
ವ:=ನಿಮ್ಮೆಲ್ಲರಿಗೂ
ಸಮಾನೇನ ಹವಿಷಾ=ಸಮಾನವಾದ ಖಾದ್ಯ,ಪೇಯಗಳನ್ನೇ
ಜುಹೋಮಿ=ದಾನ ಮಾಡುತ್ತೇನೆ
ಸಮಾನಂ ಚೇತ:=ಸಮಾನವಾದ ಚೈತನ್ಯದಲ್ಲಿಯೇ
ಅಭಿಸಂವಿಶಧ್ವಮ್= ಎಲ್ಲೆಡೆಯಿಂದಲೂ ಪ್ರವೇಶಿಸಿರಿ


ಈ ಮಂತ್ರದ ಅರ್ಥವನ್ನು ತಿಳಿದಾಗ ಆ ಭಗವಂತನೇ ನೀಡಿರುವ ಸವಲತ್ತನ್ನೂ ಕೂಡ ನಾವು ಸರಿಯಾಗಿ ಎಲ್ಲರೂ ಅನುಭವಿಸಲು ಸಾಧ್ಯವಾಗಿಲ್ಲವಲ್ಲಾ! [ಸುಪ್ರೀಮ್ ಕೋರ್ಟ್ ಆದೇಶವಿದ್ದರೂ ಸಹ ಸರ್ಕಾರವು ಕಾರ್ಯಕ್ರಮವನ್ನು ಅನುಷ್ಠಾನ ಮಾಡದಿರುವಂತೆ]
ಯಾಕೆ ಹೀಗೆ? ಯಾಕೆ ಹೀಗೆ? ಚಿಂತೆ ಕಾಡುತ್ತಿರುವುದು ತಪ್ಪೇ?
ಸಾಮಾಜಿಕ ಸಾಮರಸ್ಯದ ಬಗೆಗೆ ಚಿಂತನೆ ಮಾಡುವಾಗ ನಿಜವಾಗಿ ಮತ್ತೊಂದು ಸಮಸ್ಯೆ ಎದುರಾಗುತ್ತದೆ. ಅದು ಮಾಂಸಾಹಾರ ಸೇವನೆ ಯ ಸಮಸ್ಯೆ. ಈ ಸಮಸ್ಯೆಯನ್ನು ಪರಿಹರಿಸುವುದೇನೂ ಕಷ್ಟವಿಲ್ಲ. ಆದರೂ ಬೆಳೆದುಬಂದಿರುವ ರೂಢಿಯಿಂದ ಹಲವರು ಮಾಂಸಾಹಾರದ ಅಭ್ಯಾಸವನ್ನು ಮಾಡಿಕೊಂಡಿರುವುದು ಸುಳ್ಳಲ್ಲ. ಮಾಂಸಾಹಾರಿ ಮಿತ್ರರನ್ನು ಬಹಳ ಆತ್ಮೀಯವಾಗಿ ವಿಚಾರಿಸಿದಾಗ ಅವರಿಂದ ಪ್ರಾಮಾಣಿಕವಾಗಿ ಬರುವ ಉತ್ತರವೇನು ಗೊತ್ತೇ? “ ಬಾಯಿ ಚಪಲ ದಿಂದಾಗಿ ಮಾಂಸಾಹರ ಬಿಡಲು ಆಗುತ್ತಿಲ್ಲ” ಸಸ್ಯಾಹಾರವು ಆರೋಗ್ಯಕ್ಕೆ ಉತ್ತಮವೆಂದು ಹೇಳಿದರೆ ಉತ್ತರ ಒಂದು ಸಿದ್ಧವಾಗಿರುತ್ತದೆ” ಬಹುತೇಕ ವಿಜ್ಞಾನಿಗಳು ಭಾರತೀಯರಲ್ಲ. ಪಾಶ್ಚಿಮಾತ್ಯರಲ್ಲಿ ಮಾಂಸಾಹಾರ ಸರ್ವೇ ಸಾಮಾನ್ಯ. ಆದ್ದರಿಂದ ಮಾಂಸಾಹಾರಿ ವಿಜ್ಞಾನಿಗಳಿರಲಿಲ್ಲವೇ?
ನಿಜವಾಗಿ ಪಾಶ್ಚಿಮಾತ್ಯ ವಿಜ್ಞಾನಿಗಳ ಆಹಾರ ಕ್ರಮವನ್ನು ಇವರೇನೂ ಅಧ್ಯಯನ ಮಾಡಿಲ್ಲ. ಆದರೂ ಅವರೆಲ್ಲರನ್ನೂ ಮಾಂಸಾಹಾರಿಗಳೆಂದು ಪರಿಗಣಿಸಿ ಮಾಂಸಾಹಾರ ಸೇವನೆಗೂ ಜ್ಞಾನಕ್ಕೂ ಸಬಂಧವಿಲ್ಲ” ಎಂಬ ಸ್ವಂತ ತೀರ್ಮಾನಕ್ಕೆ ಬಂದು ಅದಕ್ಕೇ ಅಂಟಿಕೊಳ್ಳುವರಿಗೇನೆನ್ನಬೇಕು?
ಯಜ್ಞಕ್ಕೆ ಅಧ್ವರ ಎಂಬ ಸಮಾನ ಪದವೂ ಇದೆ. ಧ್ವರ ಎಂದರೆ ಹಿಂಸೆ. ಅಧ್ವರ ಎಂದರೆ ಅಹಿಂಸೆ ಎಂದಾಯ್ತು. ಹಾಗಾಗಿ ಹಿಂಸೆ ಮಾಡದೆ ,ಪ್ರಾಣಿಯನ್ನು ಕೊಲ್ಲದೆ ಮಾಂಸಾಹಾರ ಸೇವನೆ ಸಾಧ್ಯವೇ? ಆದ್ದರಿಂದ ಯಜ್ಞವನ್ನು ಮಾಡಬೇಕಾದ ಎಲ್ಲಾ ಮಾನವರೂ ಕೂಡ ಸಸ್ಯಾಹಾರಿಗಳೇ ಆಗಿರಬೇಕಲ್ಲವೇ?
ಈ ಮಾತು ಹೇಳುವಾಗ ಮಾಂಸಪ್ರಿಯರು ಕೂಡಲೇ ಉತ್ತರಿಸುತ್ತಾರೆ “ ನಾವು ಕುರಿ-ಕೋಳಿ ಕೊಂದು ತಿನ್ನದಿದ್ದರೆ , ಅವುಗಳ ಸಂಖ್ಯೆ ಎಷ್ಟಾಗುತ್ತಿತ್ತು ಗೊತ್ತಾ?
ಎಂತಹಾ ಪ್ರಶ್ನೆ!
ಸಿಂಹ, ಹುಲಿ ಇತ್ಯಾದಿ ಪ್ರಾಣಿಗಳ ಆಹಾರವೇ ಮತ್ತೊಂದು ಪ್ರಾಣಿಯ ಮಾಂಸ. ಸಿಂಹ, ಹುಲಿಗಳಿಗೆ ಸಸ್ಯಾಹಾರ ಉಣಿಸಲು ಸಾಧ್ಯವೇ? ಒಂದು ಪ್ರಾಣಿ ಮತ್ತೊಂದು ಪ್ರಾಣಿಗೆ ಆಹಾರ. ಆದರೆ ಯಾವ ಪ್ರಾಣಿಯೂ ಮನುಷ್ಯನಿಗೆ ಆಹಾರವಾಗಬಾರದು. ಮನುಷ್ಯನ ದೇಹದ ರಚನೆಯೂ ಕೂಡ ಸಸ್ಯಾಹಾರಕ್ಕೇ ರಚಿತವಾಗಿದ್ದು.
ಇಂತಹ ಸೂಕ್ಷ್ಮ ವಿಷಯಗಳ ಬಗೆಗೆ ಚಿಂತನ-ಮಂಥನ ಮಾಡಬಾರದೇ?
ಬದಲಾಗಬೇಕಾದವರು ಕೇವಲ ಒಂದು ವರ್ಗವಲ್ಲ. ವೇದಜ್ಞಾನವನ್ನು ಹೊಂದಿರುವವರು ವೇದಜ್ಞಾನವಿಲ್ಲದ ಆದರೆ ಅದನ್ನು ಕಲಿಯುವ ಆಸಕ್ತಿ ಇರುವ ಯಾವುದೇ ವ್ಯಕ್ತಿಗಾಗಲೀ ಕಲಿಸಿಕೊಡಲು ಮುಂದೆ ಬರಬೇಕು, ಅಂತೆಯೇ ವೇದಜ್ಞಾನವಿಲ್ಲದವರು ವೇದಜ್ಞಾನವನ್ನು ಪಡೆಯಲು ಬೇಕಾದ ಮಾನಸಿಕತೆಯನ್ನು ಹೊಂದಬೇಕು. ಅಲ್ಲವೇ?
ಇಡೀ ವಿಶ್ವಕ್ಕೆ ಉತ್ತಮ ಬದುಕು ನೀಡುವ ಸಾಮರ್ಥ್ಯವು ವೇದದಲ್ಲಿದ್ದು ಅದನ್ನು ಬಲ್ಲವರು ಆಸಕ್ತರಿಗೆ ನೀಡಲು
ಮನಸ್ಸು ಮಾಡಬೇಕು,ಪಡೆಯುವವರೂ ಕೂಡ ಪಡೆಯಲು ಬೇಕಾದ ಮಾನಸಿಕತೆಯನ್ನು ಬೆಳಸಿಕೊ ಳ್ಳಬೇಕು. ಏನಂತೀರಾ?
-ಹರಿಹರಪುರಶ್ರೀಧರ್

ಸಜ್ಜನರ ವರ್ತನೆ

ಸಜ್ಜನರ ವರ್ತನೆ ಹೇಗಿರುತ್ತೆ? ಚಿಂತಕ ಸೂರ್ಯ ಪ್ರಕಾಶ್ ಪಂಡಿತ್ ಏನ್ ಹೇಳ್ತಾರೆ? ಕೇಳಿ

ದಾನ

ದಾನದ ಬಗ್ಗೆ ಬೆಂಗಳೂರಿನ ಚಿಂತಕ ಸೂರ್ಯ ಪ್ರಕಾಶ್ ಪಂಡಿತ್ ಏನು ಹೇಳ್ತಾರೆ?

Wednesday, December 14, 2011

ಸೇವಾಭಾರತಿ

ನಾನು ನಿನ್ನೆ  ಬರೆದ  ಲೇಖನ ನೋಡಿದ ಕವಿನಾಗರಾಜರು ನಾವು 1994  ರ ಸುಮಾರಿನಲ್ಲಿ ಮಾಡುತ್ತಿದ್ದ ಹಾಸನದ  ಸೇವಾಭಾರತಿಯ     ಚಟುವಟಿಕೆಗಳ   ಬಗ್ಗೆ ತಮ್ಮ ಕವಿಮನದಲ್ಲಿ  ಸಚಿತ್ರ ವರದಿ ಕೊಟ್ಟಿದ್ದಾರೆ. ಸಮಾಜ ಸೇವೆ ಮಾಡುವ ಹಂಬಲ ಇರುವವರಿಗೆ ಪ್ರೇರಣಾ ದಾಯಕವಾಗಿದೆ. ದಯಮಾಡಿ ನೋಡಿ.
http://kavimana.blogspot.com/2011/12/blog-post_6813.html
http://kavimana.blogspot.com/2011/12/blog-post_14.ಹ್ತ್ಮ್ಲ್

-ಹರಿಹರಪುರಶ್ರೀಧರ್
ಸಂಪಾದಕ, ವೇದಸುಧೆ
ಸೇವಾಭಾರತಿ