Pages

Monday, January 16, 2012

ಶ್ರಾದ್ಧ ....................ಒಂದಷ್ಟು ಹರಟೆ


      ಹುಟ್ಟು ಅಂದಮೇಲೆ  ಸಾವು ನಿಶ್ಚಿತ. ಹುಟ್ಟಿನೊಂದಿಗೆ ಪ್ರಾರಂಭವಾಗುವ ಜೀವನ ಯಾತ್ರೆ  ಮರಣದೊಂದಿಗೆ  ಮುಗಿಯುತ್ತವೆ. ಅಂತ್ಯಸಂಸ್ಕಾರ ನಡೆಯುತ್ತವೆ . ನಂತರದಲ್ಲಿ  ಮೃತ ವ್ಯಕ್ತಿಗೆ ಹಲವಾರು ಸಂಸ್ಕಾರಗಳು ನಡೆಯುತ್ತವೆ. ಸತ್ತ ದಿನದಿಂದ ಹದಿನಾಲ್ಕು ದಿನಗಳವರೆಗೆ ಹಲವಾರು  ರೀತಿಯ ಕರ್ಮಗಳನ್ನು ಅವರವರ ಪದ್ದತಿಗನುಸಾರವಾಗಿ ಮತ್ತು ಸಂಪ್ರದಾಯದಂತೆ ಮಾಡುತ್ತಾರೆ. ಮೃತ ವ್ಯಕ್ತಿಯ ಮಕ್ಕಳು ಸಾಮಾನ್ಯವಾಗಿ ಈ ಕರ್ಮವನ್ನು ಮಾಡುತ್ತಾರೆ.ನಂತರದಲ್ಲಿ ಪ್ರತಿ ವರ್ಷ ಮೃತರ ನೆನಪಿನಲ್ಲಿ ಶ್ರಾದ್ಧ  ಕರ್ಮಅಥವಾ ತಿಥಿ ಎಂಬ  ಹೆಸರಿನಲ್ಲಿ  ಆಚರಣೆ ಮಾಡುವುದು ರೂಡಿಯಲ್ಲಿದೆ.
                                  ಈ ದೇಹಕ್ಕೆ ಅಂತ್ಯ ಸಂಸ್ಕಾರವಾದ ಮೇಲೆ ಶ್ರಾದ್ಧ  ಅಥವಾ ತಿಥಿ ಎನ್ನುವ ಕರ್ಮ ಬೇಕೇ? ಏಕೆ ಬೇಕು? ಅಂತ್ಯವಾದ ಮೇಲೆ ಶ್ರಾದ್ಧ  ಯಾರಿಗೆ? ಇದರ ಅವಶ್ಯಕತೆ ಏನು? ಎಂದು  ಹಲವರು  ಪ್ರಶ್ನೆ ಮಾಡುತ್ತಾರೆ . ಇನ್ನು ಹಲವರು "ವ್ಯಕ್ತಿ ಜೀವಂತ ಇದ್ದಾಗ ಅವರನ್ನು ಚೆನ್ನಾಗಿ ನೋಡಿಕೊಳ್ಳದೆ, ಗೊಳುಹಾಕಿ ಕೊಂಡು ಸತ್ತ ನಂತರ ನೂರಾರು ಜನರಿಗೆ ಊಟ ಹಾಕಿದರೇನು ಬಂತು?  ಇರುವಷ್ಟು ದಿನ ತಂದೆ ತಾಯಿಯನ್ನು ಪ್ರೀತಿಯಿಂದ ನೋಡಿಕೊಂಡು ಅವರ ಬೇಕುಬೇಡಗಳನ್ನು ಒದಗಿಸಿದರೆ ಸಾಕು. ಸತ್ತ ನಂತರ ತಿಥಿ ಮಾಡದಿದ್ದರೂ ಪರವಾಗಿಲ್ಲ." ಎನ್ನುತ್ತಾರೆ. ಮತ್ತೆ ಕೆಲವರು "ನಮ್ಮ ಹಿರಿಯರು ನಡೆಸಿಕೊಂಡು ಬಂದ ಆಚಾರ ವಿಚಾರ, ಸುಮ್ಮನೆ ಮಾಡಿರುವುದಿಲ್ಲ. ಇದನ್ನು ಏಕೆ ತಪ್ಪಿಸಬೇಕು? ಇಂತಹ ಒಂದು ಆಚರಣೆ ಶ್ರಾದ್ಧ .      ಹಿರಿಯರ  ನೆನಪಿನಲ್ಲಿ ಒಂದು ದಿನ ತಿಥಿ ಆಚರಣೆ ಅವಶ್ಯಕ." ಎಂದು ವಾದಿಸುತ್ತಾರೆ.        " ಸಮಾಜದಲ್ಲಿ ಬದುಕಿರುವಾಗ ಕೆಲವು ಆಚರಣೆಗಳು ಅನಿವಾರ್ಯ. ಎಲ್ಲರು ತಿಥಿ ಆಚರಣೆಯನ್ನು ಮಾಡುವಾಗ ನಾವೊಬ್ಬರು ಮಾಡುವುದಿಲ್ಲ ಎನ್ನಲು ಸಾಧ್ಯವೇ? ಆದ್ದರಿಂದ ನಾವು ಮಾಡುತ್ತವೆ." ಎಂದು ಕೆಲವರು ಸಮಜಾಯಿಷಿ ಕೊಡುತ್ತಾರೆ.   ಹೀಗೆ ಹಲವಾರು  ಅಭಿಪ್ರಾಯಗಳು ಇವೆ.
                             ಇನ್ನು ವಾರ್ಷಿಕವಾಗಿ ಮಾಡುವ ತಿಥಿಯ ಸಂದರ್ಭದಲ್ಲಿ ಹಲವಾರು ರೀತಿಯ  ಆಚಾರಗಳು ಇವೆ.  ಕೆಲವಕ್ಕೆ ಅರ್ಥವಿಲ್ಲ, ಕೆಲವು ಅತಿರೇಕ ಮತ್ತೆ ಕೆಲವು  ಸಂಬಂಧವಿಲ್ಲದ ರೀತಿಯಲ್ಲಿ ಇರುತ್ತವೆ.  ಇದಕ್ಕೆ ಯಾವುದೇ ರೀತಿಯ ವಿವರಣೆ ಸ್ಪಷ್ಟವಾಗಿ ಗೊತ್ತಿರುವುದಿಲ್ಲ  ಆದರೂ  ನಮ್ಮ ಹಿರಿಯರು ಮಾಡಿದರು ಎನ್ನುವ ಒಂದೇ ಕಾರಣಕ್ಕೆ ಇವರು ಮಾಡುತ್ತಿರುತ್ತಾರೆ. ಇಂತಹ ವ್ಯಕ್ತಿಗಳಿಗೆ ಮಾಡುವ ಕರ್ಮದಲ್ಲಿ ವಿಶ್ವಾಸ ಮತ್ತು  ಶ್ರದ್ಧೆಗಿಂತ ಭಯ ಜಾಸ್ತಿ ಇರುತ್ತದೆ.  ನಾನು ತಿಥಿ ಮಾಡದಿದ್ದರೆ ಏನೋ ಆಗಿಬಿಡಬಹುದೆಂಬ ಭಯ ಇವರನ್ನು ಕಾಡುತ್ತದೆ. ಒಂದು ಚಿಕ್ಕ ವ್ಯತ್ಯಾಸವನ್ನು ಇವರು ಸಹಿಸುವುದಿಲ್ಲ ಅಥವಾ ಒಪ್ಪಿಕೊಳ್ಳುವುದಿಲ್ಲ. ಹೀಗಾಗಿ ಇಂತಹ  ಕರ್ಮಗಳಲ್ಲಿ ಶ್ರದ್ಧೆಗಿಂತ ಹೆಚ್ಚು ಅಂಧ ವಿಶ್ವಾಸ ಜಾಸ್ತಿಯಾಗಿರುತ್ತದೆ. ಇಂತಹ ಹಿರಿಯರ ತಿಥಿಯ ದಿನವನ್ನು ಕೆಲವು ಸಂಪ್ರದಾಯದಲ್ಲಿ ಹಬ್ಬವನ್ನಾಗಿ ಆಚರಿಸುವುದಿಲ್ಲ  . ಉದಾಹರಣೆಗೆ,  ಅಂದು ಮನೆಯ ಮುಂದೆ ರಂಗೋಲಿ ಇಡದೆ, ಮನೆಯ ಹೆಂಗಸರು ಕುಂಕುಮ ಇಡದೆ ಶ್ರಾದ್ಧ  ಕಾರ್ಯ ಮುಗಿಯುವವರೆಗೂ ಕಾಯುತ್ತಾರೆ. ದೇವರಪೂಜ ಸಮಯದಲ್ಲಿ ಘಂಟಾನಾದವನ್ನು ಕೂಡ ಮಾಡುವುದಿಲ್ಲ.       ಇಂತಹ ಕ್ರಿಯೆಗಳಿಗೆ ಕೊಡುವ ಕಾರಣಗಳು ಅಸಂಬದ್ದವಾಗಿರುತ್ತವೆ.    ಇದು ಏನೇ ಇದ್ದರೂ ಹಿರಿಯರ ನೆನಪಿನಲ್ಲಿ ಮಾಡುವ ತಿಥಿ ಅಥವಾ ಶ್ರಾದ್ಧ  ಮಾತ್ರ ಅನಾದಿಕಾಲದಿಂದಲೂ ನಡೆಯುತ್ತಾ ಬಂದಿದೆ.
                            ಬದುಕಿರುವಾಗ ನಮ್ಮ ಹಿರಿಯರಿಗೆ ತೋರಿಸುವ ಗೌರವ, ನೀಡುವ ಸಹಕಾರ, ಮಾಡುವ ಉಪಚಾರ ಮತ್ತು ನಿರ್ವಹಿಸುವ ಕರ್ತವ್ಯ ಇವೆಲ್ಲವೂ ಬೌತಿಕ ಕ್ರಿಯೆಗಳು. ಈ ಕರ್ತವ್ಯದಿಂದ ನಮ್ಮ ಗುಣಗಳನ್ನು ದೃಢ ಗೊಳಿಸಿಕೊಂಡಾಗ  ವ್ಯಕ್ತಿಗತವಾಗಿ ನಮಗೆ ಸಂತೋಷ,ಸಂತೃಪ್ತಿ ಮತ್ತು  ಸಮಾಧಾನ ಸಿಗುತ್ತದೆ. ಆದರೆ, ಆ ವ್ಯಕ್ತಿ ಮೃತರಾದಾಗ ನಮ್ಮ ದುಃಖವನ್ನು ಸಮಾಧಾನ ಮಾಡಿಕೊಳ್ಳಲು, ಮೃತವ್ಯಕ್ತಿಯ ಸ್ಮರಣೆಯಲ್ಲಿ ಕೃತಜ್ಞತೆಯಿಂದ ಸ್ಮರಿಸುವ ಸಂಸ್ಕಾರಕ್ಕೆ ಶ್ರಾದ್ಧ ಎಂದು ಕರೆಯುತ್ತಾರೆ. ಇಂತಹ ಸಂದರ್ಭದಲ್ಲಿ ಮೃತ ವ್ಯಕ್ತಿಯ ಇಷ್ಟ  ಬಂಧು ಮಿತ್ರರನ್ನು , ಆಹ್ವಾನಿಸಿ ಭೋಜನ ಮತ್ತು ಯಥಾನುಶಕ್ತಿ ದಾನವನ್ನು ಮಾಡುತ್ತಾರೆ. ಈ ಸಂಸ್ಕಾರ ಮಾಡಲು ಸತ್ವಶುದ್ದಿ ಮತ್ತು ಚಿತ್ತಶುದ್ದಿ ಎರಡು ಬೇಕಾಗುತ್ತದೆ. ಈ ಎರಡು ಶುದ್ದಿ ಲಭ್ಯವಾಗಲು ರಜಸ್ತಮೂ ಗುಣದಿಂದ ಸಾತ್ವಿಕ ಗುಣದತ್ತ ಮನಸ್ಸು ಕೊಡಬೇಕಾಗುತ್ತದೆ. ಆಗ ಪ್ರೀತಿ,ಪ್ರೇಮ,ಸತ್ಯ, ಗೌರವ, ಕೃತಜ್ಞತಾ ಭಾವಗಳು ಹತ್ತಿರ ಸುಳಿಯುತ್ತವೆ. ಆಗ ಮನಸ್ಸು ಪುಟವಾಗುತ್ತದೆ. ಪುಟವಾದ ಮನಸ್ಸು ವಿಶಾಲವಾಗಿ ಜಗತ್ತನ್ನು ನೋಡುತ್ತದೆ.
                           "ಶ್ರದ್ಧಯಾ ಇದಂ ಕರ್ಮ ಅನುಷ್ಟೀಯತೆ ಇತಿ ಶ್ರಾದ್ಧಂ."  ಅತ್ಯಂತ ಶ್ರದ್ಧೆಯಿಂದ ಆಚರಿಸುವ ಶ್ರಾದ್ಧ ಕರ್ಮವನ್ನು   ಕರ್ತವ್ಯ ಎಂದು ಹೇಳಲಾಗಿದೆ. ನಮ್ಮ ಜನ್ಮಕ್ಕೆ ಕಾರಣರಾದ, ನಮ್ಮ ಸರ್ವತೋಮುಖ ಬೆಳವಣಿಗೆಗೆ ಮತ್ತು ನಮ್ಮ ಪುರೋಭಿವೃದ್ದಿಗೆ ಕಾರಣಕರ್ತರಾದ ನಮ್ಮ ತಂದೆ ತಾಯಿ,ಹಿರಿಯರು, ಗುರುಗಳು,ಕುಟುಂಬದ ಸದಸ್ಯರು, ಬಂಧು ಬಾಂಧವರು ಮತ್ತು ಸ್ನೇಹಿತರು ಇವರುಗಳನ್ನು ಮರೆಯದೆ ಕೃತಜ್ಞತೆಯಿಂದ ನೆನೆಯುತ್ತ ಪ್ರತಿವರ್ಷವು ಆಚರಿಸುವ ಸಾಂಕೇತಿಕ ಕರ್ಮವೆ ಶ್ರಾದ್ಧ  ಅಥವಾ ತಿಥಿ.  ಶ್ರದ್ಧೆ ಮತ್ತು ಅಚಲ ವಿಶ್ವಾಸ ಇಂತಹ  ಕರ್ಮಕ್ಕೆ ಬೇಕಾದ ಎರಡು ಮುಖ್ಯ ಅಂಶಗಳು. ಈ ಎರಡು ಭಾವನೆ  ಕ್ರಿಯೆಯಲ್ಲಿರಬೇಕಾಗುತ್ತದೆ. ನಮ್ಮ ಅಂತಃಕರಣ ಭಾವನೆಗಳಾದ ಭಕ್ತಿ, ಪ್ರೀತಿ, ಗೌರವ ಮತ್ತು ಕೃತಜ್ಞತೆಗಳನ್ನು  ವ್ಯಕ್ತ ಪಡಿಸುವ ಕ್ರಿಯೆಗಳು ಧನ್ಯತಾ ಭಾವದಿಂದ  ನಡೆಸಿದರೆ ಹೆಚ್ಚು ಪ್ರಯೋಜನ. ಈ ಭಾವನೆಗಳು ಹುಟ್ಟಬೇಕಾದರೆ ನಾವು ಮಾಡುವ ಪ್ರತಿ ಕಾರ್ಯಗಳ ಜೊತೆಗೆ ಹೇಳುವ ಮಾತುಗಳು, ಮಂತ್ರಗಳು, ನಡವಳಿಕೆಗಳು, ಆಚಾರಗಳು ಇತ್ಯಾದಿಗಳ ಅರ್ಥ ತಿಳಿದು ಮಾಡಿದರೆ ಹೆಚ್ಚು ಅರ್ಥಪೂರ್ಣವಾಗಿ ಇರುತ್ತದೆ. ಆಗ ನಮ್ಮ ಭಾವನೆಗಳು ಇನ್ನಷ್ಟು ದೃಢಗೊಳ್ಳುತ್ತವೆ. ಧನ್ಯತೆಯು ಪವಿತ್ರ ಭಾವನೆಗಳಾಗಿ ಕರ್ತೃವಿಗೆ ಅಪೂರ್ವವಾದ ದೈವಿಕಾನಂದ ಸಿಗುತ್ತದೆ.
                            "A well performed ritual is work of art by which even a sceptical spectator will get a kick. it will give a enduring and lingering satisfaction to  both"---Aldous Huxley.      
                             ನಾವು ಮಾಡುವ ಕರ್ಮಗಳ ಅರ್ಥ ತಿಳಿದು ಮಾಡೋಣ. ಹಿರಿಯರು ಕಂಡುಕೊಂಡ ಆದರ್ಶ ಮತ್ತು ಇರಿಸಿದ್ದ ವಿಶ್ವಾಸ ಇವೆರಡನ್ನೂ ಕಾಪಾಡುವ ಸಂಕಲ್ಪ ಮಾಡಿ ನಮ್ಮ ಮುಂದಿನ ಪೀಳಿಗೆಗೆ ಇಂತಹ ಉದಾತ್ತ ವಿಚಾರಗಳನ್ನು ಉಳಿಸಿ ಬೆಳೆಸ ಬೇಕಾದ ಗುರುತರವಾದ ಜವಾಬ್ದಾರಿ ಎಲ್ಲರ ಮೇಲೂ ಇದೆ. ಇದು ನಮ್ಮ ಮನೆಯಿಂದಲೇ ಪ್ರಾರಂಭಗೊಳ್ಳಲಿ.
                               ಸಕಲ ಓದುಗರಿಗೂ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.

ಹೆಚ್.ಏನ್ ಪ್ರಕಾಶ್ 

  1. ಶ್ರಾದ್ಧದ ವಿಚಾರದಲ್ಲಿ ಅಂಧಾನುಕರಣೆಯೇ ಹೆಚ್ಚು. ಶ್ರಾದ್ಧಕ್ಕೆ ತಿಥಿ,ವೈದೀಕ, ಎಂದೆಲ್ಲಾ ಅದು ಹೇಗೆ ಅರ್ಥೈಸಿದರೋ ಆ ದೇವರೇ ಬಲ್ಲ. ಸತ್ತಾಗ ಪಂಚಭೂತಗಳಲ್ಲಿ ಲೀನ ಮಾಡುವುದಕ್ಕೆ ಸುಡುವುದೇ ಹೆಚ್ಚು ಸೂಕ್ತ. ಕೆಲವರು ಭೂಮಿಯಲ್ಲಿ ಹೂಳುತ್ತಾರೆ. ಹೂಳುವುದರಿಂದ ಮೃತಶರೀರವು ಪಂಚಭೂತಗಳಲ್ಲಿ ಲೀನವಾಗಲು ಬಹುಕಾಲ ಹಿಡಿಯಬಹುದು. ಸತ್ತಾಗ ಮಾಡಬೇಕಾದ್ದು ಇಷ್ಟೆ. ಮೃತಶರೀರವನ್ನು ಸರಿಯಾಗಿ ಅಂತ್ಯ ಸಂಸ್ಕಾರ ಮಾಡದಿದ್ದರೆ ಮೃತಶರೀರವನ್ನು ನಾಯಿ ನರಿ ಕಿತ್ತು ತಿನ್ನುವ ದೃಶ್ಯವನ್ನು ಕೊನೆಯ ಕ್ಷಣದವರೆಗೂ ಜೊತೆಯಲ್ಲಿರುವ ಮಕ್ಕಳಿಗೆ ನೋಡಲು ಸಾಧ್ಯವಿಲ್ಲ. ಮೃತದೇಹವು ಅವರ ಕಣ್ಣೆದುರಿಗೆ ಉರಿದು ಬಸ್ಮ ವಾದರೆ ಸತ್ತ ವ್ಯಕ್ತಿಯ ಅಂತಿಮ ಕರ್ತವ್ಯ ನಿರ್ವಹಿಸಿದ ಸಮಾಧಾನ ಮಕ್ಕಳಿಗಿರುತ್ತದೆ. ಅಷ್ಟೆ. ಮುಂದಿನ ಕರ್ಮಗಳೆಲ್ಲಾ ಹಿಂದಿನವರು ಮಾಡಿದರು. ಇಂದಿನವರು ಮಾಡುತ್ತಿದ್ದಾರೆ. ಇದನ್ನು ನೋಡಿ ಮುಂದಿನವರೂ ಮಾಡುತ್ತಾರೆ. ಸತ್ತವರ ಸ್ಮರಣೆಗಾಗಿ ನಾಲ್ಕು ಜನರಿಗೆ ಊಟ ಹಾಕಬಹುದಷ್ಟೆ. ಉಳಿದದ್ದೆಲ್ಲಾ ಇವತ್ತಿನ ಹುಡುಗರ ಮಾತಿನಲ್ಲಿ ಹೇಳಬೇಕೆಂದರೆ ಬರೀ ವೋಳು.

Thursday, January 12, 2012

ವಿವೇಕ ಚೂಡಾಮಣಿ-ಭಾಗ-೧೮



मूलम् = ಮೂಲ

स्वामिन्नमस्ते नतलोकबन्धो 
करुण्यसिन्धो पतितं भवाब्धौ ।
मामुद्धरात्मीयकटाक्षदृष्ट्या 
ऋज्व्याऽतिकारुण्यसुधाभिवृष्ट्या ॥೩೬||

ಸ್ವಾಮಿನ್ನಮಸ್ತೇ ನತಲೋಕ ಬಂಧೋ
ಕಾರುಣ್ಯಸಿಂಧೋ ಪತಿತಂ ಭವಾಬ್ಧೌ  |
ಮಾಮುದ್ಧರಾತ್ಮೀಯ-ಕಟಾಕ್ಷದೃಷ್ಟ್ಯಾ
ಋಜ್ವ್ಯಾಽತಿಕಾರುಣ್ಯ-ಸುಧಾಭಿವೃಷ್ಟ್ಯಾ || ೩೬||

ಪ್ರತಿಪದಾರ್ಥ:

(ನತಲೋಕಬಂಧೋ =ನಮಿಸುತ್ತಿರುವ ಜನರ ಬಂಧುವೆ, ಕಾರುಣ್ಯ ಸಿಂಧೋ = ಕರುಣಾಸಾಗರನೆ, ಸ್ವಾಮಿನ್ = ಸ್ವಾಮಿಯೆ-ಗುರುವೆ, ತೇ =ನಿನಗೆ, ನಮಃ= ನಮನಗಳು ;  ಭವಾಬ್ಧೌ =ಸಂಸಾರಸಾಗರದಲ್ಲಿ , ಪತಿತಂ = ಬಿದ್ದಿರುವ-ನೊಂದಿರುವ, ಮಾಂ- ನನ್ನನ್ನು, ಋಜ್ವ್ಯಾ = ಸರಳವಾದ-ಒಳ್ಳೆಯದಾದ, ಅತಿಕಾರುಣ್ಯ -ಸುಧಾಭಿವೃಷ್ಟ್ಯಾ = ಕರುಣೆಯೆಂಬ ಅಮೃತವನ್ನು ಸುರಿಸುತ್ತಿರುವ, ಆತ್ಮೀಯ-ಕಟಾಕ್ಷ-ದೃಷ್ಟ್ಯಾ = ನಿನ್ನ ಅನುಗ್ರಹದ ದೃಷ್ಟಿಯಿಂದ, ಉದ್ಧರ = ಉಧ್ಧಾರಮಾಡು. )

ತಾತ್ಪರ್ಯ :

ನಮಿಸುತ್ತಿರುವ ಜನಗಳ ಬಂಧುವೂ ಕರುಣಾಸಾಗರನೂ ಆದ ಗುರುವೇ ನಿನಗೆ ನಮಸ್ಕಾರವು. ಸಂಸಾರಸಾಗರದಲ್ಲಿ ಬಿದ್ದು ಭ್ರಮೆಗೊಳಗಾಗಿರುವ ನನ್ನನ್ನು ನಿನ್ನ ಕರುಣಾಮೃತವನ್ನು ಸುರಿಸುತ್ತಿರುವ ಕಣ್ಣುಗಳಿಂದ ದಿಟ್ಟಿಸಿ- ಅನುಗ್ರಹಿಸಿ ಉದ್ಧಾರಮಾಡು.

ವಿವರಣೆ:

ಜ್ಞಾನಾರ್ಥಿಯು ಬ್ರಹ್ಮದ ಅರಿವನ್ನು ಪಡೆಯುವ ವಿಷಯವನ್ನು ಮತ್ತು ಪರಿಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಬ್ರಹ್ಮಜ್ಞಾನಿಯಾದ ಗುರುವಿನ ಬಳಿಸಾರಿಬೇಕು ಎಂದು ಆಚಾರ್ಯರು ಹೇಳಿ ಮುಂದೆ ಶಿಷ್ಯನು ಗುರುವಿನ ಮುಂದೆ ತನ್ನ ಅಪೇಕ್ಷೆಯನ್ನು ಹೇಗೆ ನಿವೇದಿಸಿಕೊಳ್ಳಬೇಕು ಎನ್ನುವುದನ್ನು ’ಸ್ವಾಮಿನ್ ನಮಸ್ತೆ..’ ಎಂಬ ಶ್ಲೋಕದಲ್ಲಿ ವಿವರಿಸಿರುತ್ತಾರೆ. ಗುರುವಿನ ಮುಂದೆ ಹೇಳಿಕೊಳ್ಳುವುದೆಂದರೆ ಅದು ಪೂರ್ವಯೋಜಿತವೋ ಮುಖಸ್ತುತಿಯೋ ಆಗಿರದೆ ಸಾಧನ ಚತುಷ್ಟಯ ಸಂಪನ್ನತೆಯಿಂದ ತಾನಾಗೆ ಹೊರಬರುವ ಭಾವವಾಗಿರಬೇಕು ಎನ್ನುವುದು ಬಹುಮುಖ್ಯ ವಿಚಾರ. ವೈರಾಗ್ಯ ಬಂದ ಮಾತ್ರಕ್ಕೆ ಆತ ಜ್ಞಾನಿಯಾಗುವುದಿಲ್ಲ ಅಥವಾ ’ನಾನು ಸರ್ವಗುಣ ಸಂಪನ್ನನಾಗಿದ್ದೇನೆ ಆದುದರಿಂದ ಗುರುವೇ ನನ್ನನ್ನು ಅರಸಿ ಬರುತ್ತಾನೆ’ ಎನ್ನುವ ಭಾವವೂ ಅನುಚಿತವಾದುದಾಗಿರುತ್ತದೆ. ಗುರುವಿನ ಉಪದೇಶ ಮತ್ತು ಅನುಗ್ರಹವಿಲ್ಲದೆ ಜ್ಞಾನವು ಲಭಿಸುವುದಿಲ್ಲ ಅಥವಾ ಗುರುವಿಲ್ಲದ ಜ್ಞಾನಕ್ಕೆ ಬೆಲೆಯಿರುವುದಿಲ್ಲ ಎಂದು ತಿಳಿಯಬಹುದು. ಗುರುವಿನ ಮುಂದೆ ಮಂಡಿಯೂರಿ ಬಾಗಬೇಕಾಗುತ್ತದೆ ಮತ್ತು ಹಾಗೆ ಬಾಗುವುದು ಪೂಜ್ಯರಲ್ಲಿ ತೋರುವ ಅನುರಾಗ , ಮನೋಧರ್ಮ ಎನ್ನಬಹುದು. ಗುರುವಿನಿಂದ ಕಲಿಯಬೇಕಾದರೆ ಇಂತಹ ದೈನ್ಯತೆ ಇರಬೇಕಾಗುತ್ತದೆ. ಗುರುವು ಸುಮ್ಮನೆ ಕಲಿಸಿ ಕೊಡುವುದಿಲ್ಲ. ಯಾವ ಆಮಿಷಕ್ಕೂ ಬಲಿಯಾಗುವುದಿಲ್ಲ.  ’ನಾನಿಷ್ಟು ಫೀಜು ಕಟ್ಟಿದ್ದೇನೆ, ಕ್ಯಾಪಿಟೇಶನ್ ಶುಲ್ಕ ಕೊಟ್ಟಿದ್ದೇನೆ, ದೂಸರಾ ಮಾತನಾಡದೆ ನನಗೆ ಸರ್ಟಿಫಿಕೇಟ್ ಕೊಡಿ’ ಎಂದು ಕೇಳುವಂತಿಲ್ಲ !. ಬ್ರಹ್ಮಜಿಜ್ಞಾಸೆಯು ಗುರುವು ಮನಸು ಮಾಡಿದರೆ ಮಾತ್ರ ಆರಂಭವಾಗುವಂತಹುದು ಮತ್ತು ಸಾಧನ ಚತುಷ್ಟಯ ಸಂಪನ್ನನಾದ ಜ್ಞಾನಾರ್ಥಿಯನ್ನು ತನ್ನ ಶಿಷ್ಯನೆಂದು ಒಪ್ಪಿದರೆ ಮಾತ್ರ ಒಲಿದು ಬರುವಂತಹುದು.
ಒಮ್ಮೆ ಗುರುವು ಬಂದವನನ್ನು ಶಿಷ್ಯನೆಂದು ಸ್ವೀಕರಿಸಿದರೆ ಆತನು ಎಲ್ಲರಿಗಿಂತಲೂ ಹೆಚ್ಚು ಮಾನ್ಯನಾಗುತ್ತಾನೆ. ಗುರುವು ತನ್ನ ಸಾಧನೆಯ ಸಮಸ್ತವನ್ನೂ ಶಿಷ್ಯನಿಗೆ ಧಾರೆ ಎರೆಯುತ್ತಾನೆ. ಅರ್ಜುನನೂ ಸಹ ಕೃಷ್ಣನ ಮುಂದೆ ’ನಾನು ನಿನ್ನ ಶಿಷ್ಯ’ ಎಂದು ಹೇಳುತ್ತಾನೆ. ಶಿಷ್ಯವೃತ್ತಿಯು ಎಷ್ಟು ಮಹತ್ತರವಾದುದು ಎನ್ನುವುದನ್ನು ಅರ್ಜುನನ ಮಾತಿನ ಭಾವದಲ್ಲಿ ತಿಳಿಯಬಹುದು. ’ನತಲೋಕ ಬಂಧೋ’ ಎಂದರೆ  ದೈನ್ಯತೆಯಿಂದ ನಮಿಸಿ ಬರುತ್ತಿರುವ ಜನಗಳ ಆಪ್ತಮಿತ್ರನಂತೆ , ಬಾಂಧವನಂತೆ ಎಂದು ಅರ್ಥ.  ಅರ್ಜುನನು ವಿಷಾದದಲ್ಲಿ ಮುಳುಗಿದ್ದಾಗ ಕೃಷ್ಣನು ’ ಅಳಬೇಡ ಪಾರ್ಥ, ನಾನು ನಿನ್ನ ಗೆಳೆಯ’ ಎಂದು ಸಾಂತ್ವನ ಹೇಳುತ್ತಾನೆ. ಆಪ್ತವಚನದಿಂದ ಸಂತೈಸುವ ಗೆಳೆಯನಂತಹ ಗುಣವು ಗುರುವಿನದು ಎಂದು ತಿಳಿಯಬಹುದು. ಗುರುವು ಕರುಣೆಯ ಸಾಗರದಂತಿರಬೇಕು ಎನ್ನುವುದನ್ನು ಈ ಹಿಂದಿನ ಕಂತುಗಳಲ್ಲಿ ತಿಳಿದಿದ್ದೇವೆ.  ಮುಂದೆ, ’ಪತಿತಂ ಭವಾಬ್ಧೌ’ ಎಂದು ಶಿಷ್ಯನು ಹೇಳಿಕೊಳ್ಳುತ್ತಾನೆ. ಹುಟ್ಟು-ಯೌವನ-ಮುಪ್ಪು-ರೋಗ-ಸಾವು ಮುಂತಾದ ಜಂಜಡಗಳಿಂದ ಅನರ್ಥವಾದ ವಿಷಯಗಳಲ್ಲಿ ಸಿಲುಕಿ ಸಂಸಾರಸಾಗರದಲ್ಲಿ ಬಿದ್ದು ನೊಂದಿರುವ ತನ್ನನ್ನು ಉದ್ಧಾರ ಮಾಡು ಎಂದು ಶಿಷ್ಯನು ಕೇಳಿಕೊಳ್ಳುತ್ತಾನೆ.  ಹೀಗೆ ಬಂದವನು ಶಿಷ್ಯನಾಗಿ ಸ್ವೀಕೃತವಾಗಬೇಕಾದರೆ ಗುರುವಿನ ಕಾರುಣ್ಯಪೂರ್ಣವಾದ ನೋಟವು ಆತನ ಮೇಲೆ ಬೀಳಬೇಕು ಅಥವಾ ಅನುಗ್ರಹವಾಗಬೇಕು ಎನ್ನುವುದನ್ನು ’ ಋಜ್ವ್ಯಾ-ಅತಿಕಾರುಣ್ಯ-ಸುಧಾಭಿವೃಷ್ಟ್ಯಾ-ಆತ್ಮೀಯ ಕಟಾಕ್ಷ-ದೃಷ್ಟ್ಯಾ’ ಎಂಬಲ್ಲಿ ಹೇಳಿರುತ್ತಾರೆ.  ಒಳ್ಳೆಯದಾದ ಸರಳವಾದ ಕರುಣೆಯಿಂದ ತುಂಬಿದ ಗುರುವಿನ ಆಪ್ತವಾದ ನೋಟವು ಶಿಷ್ಯನಾಗುವವನ ಮೇಲೆ ಬಿದ್ದಾಗ ಹಣ್ಣು ಮಾಗಿ ಕೆಳಗೆ ಬಿದ್ದಂತಾಗುತ್ತದೆ. ’ಆತ್ಮೀಯ ಕಟಾಕ್ಷ ದೃಷ್ಟಿ’ ಎನ್ನುವುದು ’ಋಜುಸ್ವಭಾವದ ಅಥವಾ ಸರಳವಾದ ಕರುಣಾಪೂರಿತ ಅನುಗ್ರಹ’ ಎಂದು ಶ್ರೀ ಚಂದ್ರಶೇಖರ ಭಾರತಿಗಳು ತಮ್ಮ ವ್ಯಾಖ್ಯಾನದಲ್ಲಿ ಹೇಳಿರುತ್ತಾರೆ.  ಗುರುವನ್ನು ಕಂಡೊಡನೆಯೆ ಶಿಷ್ಯನಾಗುವವನು ಹೇಗೆ ನಿವೇದಿಸಿಕೊಳ್ಳಬೇಕು ಅನ್ನುವುದನ್ನು ಆಚಾರ್ಯರು ಮೇಲಿನ ಶ್ಲೋಕದಲ್ಲಿ ವಿವರಿಸಿರುತ್ತಾರೆ.

ಮುಂದಿನ ಕಂತಿನಲ್ಲಿ ಇನ್ನಷ್ಟು ತಿಳಿಯೋಣ....

-------------------------------------------------------------------

ಕೊ: ಗುರುದೃಷ್ಟಿಯು ಪಾಮರರ ಮೇಲೆ ಬೀಳಬಾರದು ಎನ್ನುವ ಮಾತನ್ನು ಕೇಳಿರುತ್ತೇವೆ.  ಅದಕ್ಕಾಗಿ ಗುರುವಿನ ಆಗಮನವಾದಾಗ ತುಂಬಿದಕೊಡವನ್ನು ಗುರುವಿನ ನೋಟಕ್ಕೆ ತಾಗುವಂತೆ ಹಿಡಿದು ಬರಮಾಡಿಕೊಳ್ಳುವುದು ವಾಡಿಕೆ. ಗುರುದೃಷ್ಟಿಯ ವಿಚಾರವನ್ನು ಇಲ್ಲಿ ಆಚಾರ್ಯರ ನಿರೂಪಣೆಯಲ್ಲಿ ತಿಳಿದಾಗ ಪಾಮರರ ಮೇಲೆ ಗುರುವಿನ ನೋಟವು ಬಿದ್ದರೆ ಏನಾದರೂ ಆಗಲು ಸಾಧ್ಯವೆ ? ಎಂದು ಯೋಚಿಸಬೇಕಾಗುತ್ತದೆ. ಸಾಧನ ಚತುಷ್ಟಯ ಸಂಪನ್ನನಿಗೇ ಗುರುವಿನ ಅನುಗ್ರಹವು ಒಲಿದು ಬರುವುದರಿಂದ ಅನ್ಯರು ಬೆದರುವ ಅಗತ್ಯವಿಲ್ಲವೆನಿಸುತ್ತದೆ. ನೆಮ್ಮದಿಯಿಂದ ಇಹಭೋಗಗಳನ್ನು ಅನುಭವಿಸಬಹುದಲ್ಲವೆ  ? ! :).
ಮಂಗಳಕರ ಮತ್ತು ಶುಭಸೂಚಕವಾಗಿಯೂ ಪೂರ್ಣಕುಂಭವನ್ನು ಹಿಡಿಯುವ ವಾಡಿಕೆ ಇದೆ.

ವಂದನೆಗಳೊಂದಿಗೆ....

Wednesday, January 11, 2012

Tuesday, January 10, 2012

ಭಗವಾನ್ ರಮಣ ಮಹರ್ಷಿಗಳ ಸಂದೇಶ



January 9, 2012

ಭಗವಾನ್ ರಮಣ ಮಹರ್ಷಿಗಳ ಸಂದೇಶ

                          Photo courtesy: Mountain Path

    ಭಗವಾನ್ ರಮಣ ಮಹರ್ಷಿಗಳ ಸಂದೇಶ


                                 ಭಗವಾನ್ ಶ್ರೀ  ರಮಣ ಮಹರ್ಷಿಗಳು ಕೊಡುತ್ತಿದ್ದ ಸಂದೇಶಗಳು ಮನನೀಯವಾಗಿರುತ್ತಿತ್ತು. ಆದರೆ, ಅವರ ಸಂದೇಶಗಳನ್ನು ಓದಿಕೊಂಡು ಅವರ ದಿನಚರಿಯನ್ನು ಗಮನಿಸಿದರೆ ಮಹರ್ಷಿಗಳೇ ಈ ಜಗತ್ತಿಗೆ ಸಂದೇಶವಾಗಿ ಕಾಣುತ್ತಿದ್ದರು. ಅವರು ಏನು ಹೇಳುತ್ತಿದ್ದರೋ ಅವರು ಅದೇ ಆಗಿರುತ್ತಿದ್ದರು. ಇದು ಅವರ ಜೀವನದುದ್ದಕ್ಕೂ  ಧಾಖಲಾಗಿದೆ.
                               ಒಂದು ಸಂದರ್ಭದಲ್ಲಿ ಭಗವಾನ್ ರಮಣರು ಕೈವಲ್ಯ ನವನೀತಂನ ಎರಡು ಶ್ಲೋಕಗಳನ್ನು ಉದಾಹರಿಸಿ ಆತ್ಮಜ್ಞಾನದ ಬಗ್ಗೆ ತಿಳಿಸಿದರು.  ನವನೀತಂ, ಬೃಹದ್ದಾಕರವಾದ ಆಲದ ಮರದ ಕೆಳಗೆ ನಿಂತು " ನಾನು ಸತ್ಯವನ್ನೇ ಹೇಳುತ್ತೇನೆ, ನೀನೆ ಈ ಜಗತ್ತಿನ ಚೈತನ್ಯ. ಈ ಜಗತ್ತಿನಲ್ಲಿ ಆಗುಹೊಗುತ್ತಿರುವ ಎಲ್ಲವನ್ನು  ಸಾಕ್ಷಿಭೂತವಾಗಿ ನೋಡುತ್ತಿರುವ ನೀನು ಯಾವತ್ತು ಬದಲಾಗದ ಸ್ಥಿತಿಯಲ್ಲಿ ಇದ್ದೀಯ. ನೀನು ಭೂತ, ಭವಿಷ್ಯ ಮತ್ತು ವರ್ತಮಾನದಲ್ಲಿ ಕೊನೆಮೊದಲಿಲ್ಲದ ಸಾಗರದ ಅಲೆಗಳ ಏರಿಳಿತದಂತೆ ಸಕಲವನ್ನು ಸಾಕ್ಷಿಯಾಗಿ  ಸದಾಕಾಲ ನೋಡುತ್ತಿರುವೆ. ನಾನು ಈಗಾಗಲೇ ಲೆಕ್ಕವಿಲ್ಲದಷ್ಟು ಜನ್ಮಗಳನ್ನು ಕಳೆದ್ದಿದ್ದರೂ ದೇಹವನ್ನೇ ಆತ್ಮವೆಂದು ತಪ್ಪಾಗಿ ಗ್ರಹಿಸಿ ಎಲ್ಲಾ ಜನ್ಮಗಳನ್ನು ಹಾಳುಮಾಡಿಕೊಂಡಿದ್ದೇನೆ. ಹೆಚ್ಚು ಕಡಿಮೆ ಎಲ್ಲಾ ಜನ್ಮದಲ್ಲೂ ಮರಳುಗಾಡಿನಲ್ಲಿ ದೂರದಿಂದ ಕಾಣುವ ಜಲದಂತೆ, ಬ್ರಾಂತಿಯಲ್ಲೇ ಮುಳುಗಿ ಜನ್ಮವನ್ನು ವ್ಯರ್ಥ ಮಾಡಿಕೊಂಡಿದ್ದೇನೆ. ಕೊನೆಗೆ 'ನಾನು ಯಾರು?' ಎಂಬುದನ್ನು ಅರಿಯಲು ನೀನು ನನಗೆ ಬುದ್ದಿಕೊಟ್ಟ ಮೇಲೆ ನನ್ನಲ್ಲಿ ಜನ್ಮ ಜನ್ಮಗಳಿಂದ ಇದ್ದ ಎಲ್ಲಾ ಪೊರೆಯು ಕಳಚಿತು. ಈಗ ನಾನು ಮುಕ್ತನಾದೆ. ಈಗ ನನಗೆ ಸತ್ಯದ ಅರಿವಾಯಿತು." ಎಂದು ಹೇಳಿದ್ದನ್ನು ಮಹರ್ಷಿಗಳು ಉದಾಹರಿಸಿದರು.
                                ಇನ್ನೊಂದು  ಸಂದರ್ಭದಲ್ಲಿ ಮಹರ್ಷಿಗಳು ಸತ್ಯ ಮತ್ತು  ಕರ್ಮದ  ಬಗ್ಗೆ ಮಾಡಿದ ಉಪದೇಶ ಹೀಗಿದೆ. " ಸತ್ಯ ಯಾವಾಗಲೂ ಒಂದೇ, ಕೇವಲ ಒಂದೇ. ಈ ಸತ್ಯವನ್ನು ಅನಾದಿಕಾಲದಿಂದ ಒಬ್ಬರು ಇನ್ನೊಬ್ಬರಿಗೆ ವರ್ಗಾಯಿಸುತ್ತಲೇ ಬಂದಿದ್ದಾರೆ. ಉದ್ದಾಲಕ ಮಹರ್ಷಿಯು ಶ್ವೇತಕೆತುವಿಗೆ ವರ್ಗಾಯಿಸಿದರು. ನಂತರ ಯಮಧರ್ಮ ನಚಿಕೇತುವಿಗೆ, ಯಾಜ್ಞವಲ್ಕ್ಯರು ಗಾರ್ಗಿಗೆ, ಮೈತ್ರ್ಯೇಯಿಗೆ ಮತ್ತು ಜನಕನಿಗೆ ವರ್ಗಾಯಿಸಿದರು. ವ್ಯಾಸರು ಶುಕಮುನಿಗೆ, ವಸಿಷ್ಟರು ಶ್ರೀರಾಮನಿಗೆ , ಶ್ರೀರಾಮ ಆಂಜನೇಯನಿಗೆ , ಶ್ರೀಕೃಷ್ಣ ಅರ್ಜುನನನಿಗೆ, ಶ್ರೀ ಶಂಕರರು ಮಂಡನಮಿಶ್ರರಿಗೆ, ಶ್ರೀ ರಾಮಕೃಷ್ಣರು ವಿವೇಕಾನಂದರಿಗೆ ವರ್ಗಾಯಿಸಿದರು. ಹೀಗೆ ಸತ್ಯ ವರ್ಗಾವಣೆ ಆಗುತ್ತಲೇ ಬಂದಿದೆ.ಇವೆಲ್ಲವುಗಳ ಸಾರಸಂಗ್ರಹವೇ ಉಪನಿಷತ್ತು.  ಈ ಜಗತ್ತಿನಲ್ಲಿ ಅದೆಷ್ಟೋ ಸಂತರು ನಮ್ಮ ಮೇಲೆ ಅಪಾರ ಅನುಕಂಪದಿಂದ ಈ ಸತ್ಯದ ವಿಚಾರವನ್ನು ತಿಳಿಸುವ ಕೃಪೆಯ ಅನುಗ್ರಹ ಮಾಡಿದ್ದಾರೆ. ಇವರ ಅನುಗ್ರಹದ ಅನುಕಂಪವನ್ನು ನಾವೆಲ್ಲರೂ ಅರಿಯಬೇಕಾಗಿದೆ. ಮನುಷ್ಯ ಮೊದಲು ತನ್ನ ಆತ್ಮದ   ಅರಿವನ್ನು ತಿಳಿಯಬೇಕಾಗಿದೆ. ಆತನು ದೇಹವಲ್ಲ, ಇಂದ್ರಿಯ ಅಲ್ಲ ಅಥವ ಮನಸ್ಸು ಅಲ್ಲ. ಶುಭ್ರವಾದ ನೀಲಾಕಾಶದಂತೆ ಇರುವ ಈ ಅರಿವು ನಮ್ಮ ದೇಹದೊಳಗೆ ಇದೆಯಾದರೂ, ಕಮಲದ ಎಲೆಗಳಂತೆ ನೀರಿನಲ್ಲಿದ್ದರು, ದುಂಬಿ ಗಳು ಹೂವಿನಮೇಲೆ ಇದ್ದರು, ಯಾವುದು ಯಾವುದಕ್ಕೂ ಅಂಟಿಕೊಳ್ಳದಂತೆ  ಇದೆ.  ಆಕಾಶದಂತೆ ಭೂಮಿ, ನೀರು, ಬೆಂಕಿ, ಗಾಳಿ ಎಲ್ಲೆಡೆ ವ್ಯಾಪಿಸಿದ್ದರು ಯಾವುದು ಯಾವುದಕ್ಕೂ ಅಂಟಿಕೊಂಡಿಲ್ಲ, ಇದೆ ರೀತಿ ದೇಹ ಮತ್ತು ಮನಸ್ಸಿನಲ್ಲೆಲ್ಲ ಈ ಆತ್ಮದ ಅರಿವು ವ್ಯಾಪಿಸಿದ್ದರೂ  ಯಾವುದರಿಂದಲೂ ಇದು ಬಂಧಿತವಾಗಿಲ್ಲ. ಈ ಆತ್ಮಕ್ಕೆ ಹುಟ್ಟು ಇಲ್ಲ ಸಾವು ಇಲ್ಲ ; ಯಾವ ಬಂಧನವು ಇಲ್ಲ ಬಿಡುಗಡೆಯು ಇಲ್ಲ ;ಈ ಆತ್ಮದ ಅರಿವೇ ನಮ್ಮ ನಿಜ ಸ್ವರೂಪ. ಈ ಸತ್ಯವನ್ನು  ಪ್ರತಿಯೊಬ್ಬರೂ ಅರಿಯಬೇಕಾಗಿದೆ.
ಎಲ್ಲಾ ಸಂದರ್ಭದಲ್ಲೂ, ಎಲ್ಲಾ ಸಮಯದಲ್ಲೂ ತನ್ನ ಈ ಸ್ವಸ್ವರೂಪವನ್ನು ಸಾಧಕನು ಅರಿತಾಗ ಈ ಜಗತ್ತಿನ ಎಲ್ಲಾ ಬಂಧನದಿಂದ ಮುಕ್ತನಾಗಿ ಶಾಂತವಾಗಿ ಇರಲು ಸಾಧ್ಯ. ಆಗ  ತಾನು ಮಾಡುವ  ಎಲ್ಲಾ ಕಾರ್ಯಗಳಲ್ಲಿ ಯಾವುದೇ ಅಂಟಿಲ್ಲದೆ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಂತೃಪ್ತಿಯಿಂದ ನಿರ್ವಹಿಸಲು ಸಾದ್ಯ ಇಂತಹ ಮನೋಸಂಕಲ್ಪ ಸಾಧಕನು ಮಾಡಿದರೆ ಸಾಧನೆಯ ಹಾದಿ ಸುಲಭವಾಗುತ್ತದೆ."
                                 ಇದನ್ನು ಮಹರ್ಷಿಗಳು ಕೇವಲ ಹೇಳದೆ ತಮ್ಮ ದಿನಚರಿಯಲ್ಲಿ ಅಳವಡಿಸಿಕೊಂಡಿದ್ದರು. ಅವರ ದಿನನಿತ್ಯದ ಬದುಕು ಆರಂಭವಾಗುತ್ತಿದ್ದುದೆ ಮುಂಜಾವಿನ ನಾಲ್ಕು ಘಂಟೆಗೆ. ಆಗಿಲಿಂದ ಒಂದು ನಿಮಿಷ ಕೂಡ ಹಾಳುಮಾಡುತ್ತಿರಲಿಲ್ಲ. ಸದಾಕಾಲ ಒಂದಲ್ಲ ಒಂದು ಕೆಲಸದಲ್ಲಿ ನಿರತರಾಗಿರುತ್ತಿದ್ದರು. ಅಡುಗೆಮನೆಯಲ್ಲಿ ರುಬ್ಬುವುದು, ಚಟ್ನಿ ತಯಾರು ಮಾಡುವುದು, ತರಕಾರಿ ಹೆಚ್ಚುವುದು, ಅಡುಗೆ ತಯಾರು ಮಾಡುವುದು, ಮುತ್ತುಗದ ಎಲೆ ಮತ್ತು ದೊನ್ನೆ ತಯಾರು ಮಾಡುವುದು, ನಾಯಿ ಮಂಗಗಳಿಗೆ ಶಿಶ್ರೂಷೆ ಮಾಡುವುದು, ಆಶ್ರಮದ ಇನ್ನಿತರೇ ಕೆಲಸಗಳಲ್ಲಿ ಭಾಗಿಯಾಗುವುದು ಹೀಗೆ ಎಲ್ಲಾ ಕೆಲಸಗಳನ್ನು ಅತ್ಯಂತ ಶ್ರದ್ದೆಯಿಂದ ಮಾಡುತ್ತಿದ್ದರು. ಆಶ್ರಮಕ್ಕೆ ಬರುವ ಪ್ರತಿ ಭಕ್ತರ ಪ್ರಶ್ನೆಗಳಿಗೆ ಸಮಾಧಾನದ ಉತ್ತರ ನೀಡಿ ಸಂತೈಸುತ್ತಿದ್ದರು. ಪ್ರತಿಯೊಂದು ಕೆಲಸವೂ ಭಗವಂತನ ಸೇವೆಯೆಂದು ಮಾಡಿ ಮುಗಿಸಿ ಶಾಂತರಾಗಿರುತ್ತಿದ್ದರು. ಈ ಬಗ್ಗೆ ಯಾರಾದರು ಕೇಳಿದರೆ ಶಾಂತವಾಗಿಯೇ " ನಾನೇನು ಮಾಡಿದೆ? ಆ ಭಗವಂತ ಹೇಗೆ ಮಾಡಿಸಿದನೋ ಹಾಗೆ ಆಗಿದೆ. ಆತನ  ಆದೇಶದಂತೆ  ಕೆಲಸಗಳು  ಎಲ್ಲರ  ಕೈಯಲ್ಲಿ  ನಡೆದಿದೆ ." ಎಂದು ಉತ್ತರಿಸುತ್ತಿದ್ದರು.
                                 ಮಹರ್ಷಿಗಳ ಒಡನಾಟದಲ್ಲಿ ಇದ್ದ ಹಲವಾರು ಮಹನೀಯರು ತಮ್ಮ ಅನುಭವಗಳನ್ನು ಹಂಚಿಕೊಂದಿರುವುದನ್ನು ಓದುವಾಗ ಅವರೆಷ್ಟು ಧನ್ಯರು! ಎನ್ನುವ ಭಾವ ನಮಗೆ ಬಂದರೂ ಈ ವಿಚಾರಗಳನ್ನು ಎಲ್ಲಾ  ಭಕ್ತರಿಗೆ ತಿಳಿಸುವ ಪ್ರಯತ್ನವನ್ನು ರಮಣ ಆಶ್ರಮ ಮಾಡಿ ನಮ್ಮನ್ನು ಧನ್ಯರನ್ನಾಗಿಸಿದ್ದಾರೆ. 

Monday, January 9, 2012

ನೈರುತ್ಯ - ಇದರ ವೇದ ವಿವರಣೆ



  ನೈರುತ್ಯ-ಕೇವಲ ದಿಕ್ಕಿನ ಹೆಸರೇ? ಇದರ ವೇದ ವಿವರಣೆ ಕೇಳಿ ಶ್ರೀಸುಧಾಕರ ಶರ್ಮರ ಧ್ವನಿಯಲ್ಲಿ