Pages

Thursday, August 14, 2014

ಹೇ ಪರಮಾತ್ಮ, ನಮ್ಮನ್ನು ಹರ್ಷಗೊಳಿಸು



ವೇದಮಂತ್ರಗಳು  ಒಂದೊಂದೂ ಅದ್ಭುತ!

ಮೂಷೋ ನ ಶಿಶ್ನಾ ವ್ಯದಂತಿ ಮಾಧ್ಯಃ ಸ್ತೋತಾರಂ ತೇ ಶತಕ್ರತೋ |
ಸಕೃತ್ಸು ನೋ ಮಘವನ್ನಿಂದ್ರ ಮೃಳಯಾಧಾ ಪಿತೇವ ನೋ ಭವ ||
[ ಋಗ್ವೇದ ಮಂಡಲ-೧೦, ಸೂಕ್ತ-೩೩, ಮಂತ್ರ ೩]

ಅರ್ಥ :
ಶತಕೃತೋ ಇಂದ್ರ = ಹೇ ಬಹುಪ್ರಜ್ಞಾವಾನ್ ಇಂದ್ರನೇ, ಪರಮೇಶ್ವರನೇ,
ತೇ = ನಿನ್ನನ್ನು
ಸ್ತೋತಾರಂ = ಸ್ತುತಿಗೈಯ್ಯುವ
ಮಾ = ನನ್ನನ್ನು
ಆಧ್ಯಃ = ಮಾನಸಿಕ ಚಿಂತೆಗಳು
ಮೂಷಃ ನ ಶಿಶ್ನಾ = ಇಲಿಗಳು ಎಣ್ಣೆ ಸವರಿದ ದಾರವನ್ನು ತಿನ್ನುವಂತೆ
ವಿ ಅದಂತಿ = ಬಗೆ ಬಗೆಯಾಗಿ ಕುಕ್ಕಿ ತಿನ್ನುತ್ತಿವೆ
ಮಘವನ್ = ಹೇ ಐಶ್ವರ್ಯಶಾಲಿಯಾದ ಪರಮೇಶ್ವರನೇ
ನಃ = ನಮ್ಮನ್ನು
ಸಕೃತ್ = ಒಂದು ಸಾರಿ
ಸಮೃಳಯ = ಹರ್ಷಗೊಳಿಸಿಬಿಡು
ಅಥಾ = ಹೀಗೆ
ನಃ ಪಿತಾ ಇವ ಭವ = ನೀನು ನಮಗೆ ತಂದೆಯಂತೆ ಆಗು.
ಭಾವಾರ್ಥ :

ಹೇ ಪರಮೇಶ್ವರ, ನಿನ್ನನ್ನು  ಸ್ತುತಿಗೈಯ್ಯುವ ನನ್ನನ್ನು ನನ್ನ  ಮಾನಸಿಕ ಚಿಂತೆಗಳು  ಇಲಿಗಳು ಎಣ್ಣೆ ಸವರಿದ ದಾರವನ್ನು ತಿನ್ನುವಂತೆ ಬಗೆ ಬಗೆಯಾಗಿ ಕುಕ್ಕಿ ತಿನ್ನುತ್ತಿವೆ, ಹೇ ಐಶ್ವರ್ಯಶಾಲಿಯಾದ ಪರಮೇಶ್ವರನೇ ನಮ್ಮನ್ನು  ಒಂದು ಸಾರಿ  ಹರ್ಷಗೊಳಿಸಿಬಿಡು,   ಹೀಗೆ  ನೀನು ನಮಗೆ ತಂದೆಯಂತೆ ಆಗು.
ಎಂತಹಾ ವಾಸ್ತವ ಸತ್ಯ ಸಂಗತಿಗಳು! ಇದರಿಂದಲೇ ವೇದವನ್ನು ಸಾರ್ವಕಾಲಿಕ ಎನ್ನುವುದು. ಭಗವಂತನ ಸ್ಮರಣೆಯಲ್ಲಿದ್ದರೂ ಸಹ ನಮ್ಮ ಮಾನಸಿಕ ಚಿಂತೆಗಳು ನಮ್ಮನ್ನು ಕಾದದೆ ಬಿಡದು. ಇಲ್ಲಿ ಹೋಲಿಕೆ ಹೇಗಿದೆ ನೋಡಿ, ಇಲಿಗಳು ಎಣ್ಣೆ ಸವರಿದ ದಾರವನ್ನೋ, ಹಗ್ಗವನ್ನೋ ಅಥವಾ ಮತ್ತಿನ್ನೇನನ್ನೋ ಅದರ ವಾಸನೆಹಿಡಿದು ಅಲ್ಲಿ ಧಾವಿಸಿ ಎಣ್ನೆ ಸವರಿದ ವಸ್ತುವನ್ನು ಕುಕ್ಕಿ ಕುಕ್ಕಿ ತಿನ್ನುವುದು ನಮಗೆ ಗೊತ್ತಿರುವ ಸಂಗತಿಯೇ ಅಲ್ಲವೇ! ಅದರಂತೆಯೇ ನಮ್ಮ ಮಾನಾಸಿಕ ಚಿಂತೆಗಳು ನಮ್ಮನ್ನು ಕುಕ್ಕಿ ಕುಕ್ಕಿ ತಿನ್ನುತ್ತವೆ. ಎಂತಹಾ ಅದ್ಭುತ ಹೋಲಿಕೆ! ಹೌದಲ್ಲವೇ? ಭಗವಂತನ ಸ್ಮರಣೆಯನ್ನು ನಿತ್ಯವೂ ಮಾಡುವ, ನಿತ್ಯವೂ ಅವನ ಅರ್ಚನೆಮಾಡುವ , ಅವನದೇ ಧ್ಯಾನದಲ್ಲಿರುವವನನ್ನೂ ಕೂಡ ಮಾನಸಿಕ ಚಿಂತೆಗಳು ಸುಮ್ಮನೆ ಬಿಡುವುದಿಲ್ಲವಲ್ಲ. ನಮ್ಮ  ಮೇಲೆ ದಾಳಿಮಾಡಿ ನಮ್ಮ ಚಿತ್ತವನ್ನು ಹಾಳುಮಾಡುವುದಿಲ್ಲವೇ? ಇಂತಹಾ ನನ್ನ ಮಾನಸಿಕ ಅವಸ್ಥೆಯು ದೂರವಾಗಲು ನೀನು ಒಮ್ಮೆ ನನ್ನತ್ತ ನೋಡಿಬಿಡು. ನನ್ನನ್ನು ಒಮ್ಮೆ ಹರ್ಷಗೊಳಿಸಿಬಿಡು- ಎಂದು ಆ      ಶತಕೃತನಾದ ಪರಮಾತ್ಮನಲ್ಲಿ ಪ್ರಾರ್ಥನೆ ಮಾಡುವ ವೇದ ಮಂತ್ರವಿದು.
  ವೇದಮಂತ್ರಗಳ ಒಂದೊಂದು ಪದವನ್ನೂ ಪಂಡಿತ್ ಸುಧಾಕರ ಚತುರ್ವೇದಿಗಳು  ನಮಗೆ ವಿವರಿಸುವ ರೀತು ಬಲು ಚೆನ್ನ. ಶತಕೃತೋ-ಎನ್ನುವ ಒಂದು ಪದದ ಅರ್ಥ ಬಲು ವಿಸ್ತಾರ. ಸರ್ವಶಕ್ತ  ಆ ಭಗವಂತನನ್ನು ಒಂದೊಂದು ಮಂತ್ರದಲ್ಲಿ ಒಂದೊಂದು ಬಗೆಯಲ್ಲಿ ಸ್ತುತಿಸುವುದನ್ನು ವೇದಮಂತ್ರಗಳಲ್ಲಿ ಕಾಣಬಹುದು. ಶತಕೃತೋ ಎಂದರೆ ನೂರಾರು ಕೆಲಸಗಳನ್ನು ಸರಾಗವಾಗಿ ಯಶಸ್ವಿಯಾಗಿ ನಿರ್ವಹಿಸುವ ಸಾಮರ್ಥ್ಯ ಉಳ್ಳ ಪ್ರಭುವೇ! -ಎ೦ದು. ಅಂದರೆ ಆ ಭಗವಚ್ಛಕ್ತಿಯಿಂದ ಯಾವ ಕೆಲಸ ಸಾಧ್ಯವಿಲ್ಲ! ಬ್ರಹ್ಮಾಂಡವನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುತ್ತಿರುವ ಆ ಶಕ್ತಿಯನ್ನು ಎಷ್ಟು ಬಣ್ಣಿಸಿದರೂ ಸಾಲದು. ಆ ಪರಮಾತ್ನನನ್ನು ಬಣ್ಣಿಸುವಾಗ ನಿನ್ನ ಐಶ್ವರ್ಯಕ್ಕೆ ಮಿತಿಯಿಲ್ಲ, ನಿನ್ನ ಕರುಣೆಗೆ ಕೊರತೆ ಇಲ್ಲ, ನಿನ್ನ ದಾನಕ್ಕೂ ಮಿತಿಯಿಲ್ಲ, ನಾನಾದರೋ ನಿನ್ನ ಸ್ತುತಿಯನ್ನು ಮಾಡುತ್ತಿದ್ದರೂ ನನ್ನಲ್ಲಿ ಕೊರಗು ಕಡಿಮೆಯಾಗಲಿಲ್ಲ, ನನ್ನಲ್ಲಿ ಹೊಟ್ಟೆಕಿಚ್ಚು,ಅಹಂಕಾರ,ಕೋಪ, ದುರಾಸೆ,ಕಾಮ, ಮೋಹ-ಇವುಗಳು ನನ್ನನ್ನು ಕುಕ್ಕಿ ಕುಕ್ಕಿ ತಿನ್ನುತ್ತಿವೆ. ಮನಸ್ಸಿಗೆ ನೆಮ್ಮದಿ ಇಲ್ಲ.
ಇವೆಲ್ಲವನ್ನೂ ನೀನು ಒಂದು ಸಾರಿ ಪರಿಹರಿಸಿಬಿಡು, ನಮಗೆ ಸತ್ಯದ ಅರಿವು ಮಾಡಿಬಿಡು. ಹೀಗೆ ಪ್ರಾರ್ಥಿಸುತ್ತಾ ಮಂತ್ರದ ಕೊನೆಯಲ್ಲಿ ನಃ ಪಿತಾ ಇವ ಭವ = ನೀನು ನಮಗೆ ತಂದೆಯಂತೆ ಆಗು ಎಂಬ ಭಾಗವನ್ನು ಗಮನಿಸಿವುದು ಮುಖ್ಯ. ಭಗವಂತನಲ್ಲಿ ಪ್ರಾರ್ಥಿಸುವಾಗ ನನ್ನ ಅವಸ್ಥೆಗಳನ್ನು ಪರಿಹರಿಸು, ಎಂದು ಮಾತ್ರ ಕೋರಲಿಲ್ಲ, ಬದಲಿಗೆ ನಮಗೆ ನೀನು ತಂದೆಯಂತೆ ಇದ್ದು ನಮ್ಮೆಲ್ಲರ ಮಾನಸಿಕ ದು:ಖವನ್ನು ಪರಿಹರಿಸು, ಎಂದು ಪ್ರಾರ್ಥಿಸಲಾಗಿದೆ. ಇದು ವೇದದ ಶ್ರೇಷ್ಠತೆಯಲ್ಲವೇ! ಕೇವಲ ನನಗಾಗಿ ನನ್ನ ಪ್ರಾರ್ಥನೆಯಲ್ಲ, ನನ್ನ ಪ್ರಾರ್ಥನೆ ನಮಗಾಗಿ ಎಂದರೆ ಇಡೀ ಸಮಾಜಕ್ಕಾಗಿ.ಅಲ್ಲವೇ?

Tuesday, August 5, 2014

ವೇದಭಾರತಿಯ ವಾರ್ಷಿಕೋತ್ಸವಕ್ಕೆ ಬನ್ನಿ

ಓಂ
ವೇದಭಾರತೀ, ಹಾಸನ

ದ್ವಿತೀಯ ವಾರ್ಷಿಕೋತ್ಸವ

ಸ್ಥಳ: ಕನ್ನಡ ಸಾಹಿತ್ಯ ಪರಿಷತ್ ಭವನ , ಹಾಸನ

     ದಿನಾಂಕ: ಆಗಸ್ಟ್ 16 ಶನಿವಾರ ಮತ್ತು 17ಭಾನುವಾರ


16.8.2014 ಶನಿವಾರ ಬೆಳಿಗ್ಗೆ: 9.00ಕ್ಕೆ
ಉದ್ಘಾಟನೆ: ಪೂಜ್ಯ ಶ್ರೀ ಶ್ರೀ ಶಂಭುನಾಥ ಸ್ವಾಮೀಜಿ
ಆದಿಚುಂಚನಗಿರಿ ಹಾಸನ ಶಾಖಾ ಮಠ, ಹಾಸನ  ಇವರಿಂದ


ಎರಡೂ ದಿನಗಳಂದು ಸಂಜೆ 5.00 ಕ್ಕೆ ಸಾರ್ವಜನಿಕರಿಗಾಗಿ
ಉಪನ್ಯಾಸ: ಜಗದ್ಗುರು ಭಾರತ

ಉಪನ್ಯಾಸಕರು: 
ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮ. ಬೆಂಗಳೂರು
ಶ್ರೀ ಸು. ರಾಮಣ್ಣ, ರಾ.ಸ್ವ.ಸಂಘದ ಜೇಷ್ಠ ಪ್ರಚಾರಕರು

[ನೋಂದಾಯಿಸಿಕೊಂಡ ಪ್ರತಿನಿಧಿಗಳಿಗಾಗಿ ಎರಡು ದಿನಗಳೂ ಕಾರ್ಯಾಗಾರವಿರುತ್ತದೆ]

ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು   ಇಚ್ಛಿಸುವವರು     vedasudhe@gmail.com  ಈ ಮೇಲ್ ವಿಳಾಸಕ್ಕೆ  ದಿನಾಂಕ 12.8.2014 ಕ್ಕೆ ಮುಂಚೆ    ಒಂದು ಮೇಲ್ ಕಳುಹಿಸಿದರೆ ಅವರ ಉಳಿಯುವ ಮತ್ತು ಊಟೋಪಚಾರದ ವ್ಯವಸ್ಥೆ ಮಾಡಲಾಗುವುದು 





Monday, August 4, 2014

ಅನ್ಯಾಯದ ವಿರುದ್ಧ ಧ್ವನಿ ಎತ್ತೋಣ

ಯತ್ರ ಬ್ರಹ್ಮ ಚ ಕ್ಷತ್ರಂ ಚ ಸಮ್ಯಂಚೌ ಚರತಃ ಸಹ |
ತಲ್ಲೋಕಂ ಪುಣ್ಯಂ ಪ್ರಜ್ಞೇಷಂ ಯತ್ರ ದೇವಾಃ ಸಹಾಗ್ನಿನಾ || (ಯಜು.೨೦.೨೫.)
     ಎಲ್ಲಿ ಬ್ರಾಹ್ಮೀಶಕ್ತಿ ಮತ್ತು ಕ್ಷಾತ್ರಶಕ್ತಿಯು ಒಂದಕ್ಕೊಂದು ಆಶ್ರಯ ನೀಡುತ್ತಾ ಒಟ್ಟಿಗೆ ಪ್ರವೃತ್ತವಾಗುತ್ತವೋ, ಎಲ್ಲಿ ಉದಾರಾಶಯರೂ, ಸತ್ಯಮಯರೂ, ಪವಿತ್ರಚಾರಿತ್ರರೂ ಆದ ವಿದ್ವಜ್ಜನರು, ರಾಷ್ಟ್ರನಾಯಕನೊಂದಿಗೆ ಸಹಕರಿಸಿ ನಡೆಯುತ್ತಾರೋ, ಆ ಲೋಕವನ್ನೇ ಪುಣ್ಯಶಾಲಿ ಎಂದು ತಿಳಿಯುತ್ತೇನೆ. 
     ಸಮಾಜದಲ್ಲಿ ಯಾವೊಂದು ರೀತಿಯ ವಿಭಾಗವೂ ಮೇಲಲ್ಲ, ಕೀಳೂ ಅಲ್ಲ. ವಿದ್ವಜ್ಜನರು, ವ್ಯಾಪಾರಿಗಳು, ಶ್ರಮಿಕರು, ಯೋಧರು ಇವರೆಲ್ಲರೂ ಪರಸ್ಪರ ಅವಲಂಬಿತರು. ಇದು ನನ್ನ ಕೆಲಸವಲ್ಲ, ನನ್ನ ಕೆಲಸ ನಾನು ಮಾಡುತ್ತೇನೆ, ಅವರ ಕೆಲಸ ಅವರು ಮಾಡಲಿ; ನನ್ನ ತಂಟೆಗೆ ಅವರು ಬರುವುದು ಬೇಡ, ಅವರ ತಂಟೆಗೆ ನಾನೂ ಹೋಗುವುದಿಲ್ಲವೆಂದರೆ ಅದು ಸಮಾಜಕ್ಕೆ ಪೂರಕವಾದ ನಡೆಯಾಗುವುದಿಲ್ಲ. ಸಂದರ್ಭಗಳಲ್ಲಿ ಒಬ್ಬರಿಗೊಬ್ಬರು ಪೂರಕವಾಗಿ ಸಹಕರಿಸುತ್ತಾ ನಡೆದರೆ ಸಮಾಜವೂ, ದೇಶವೂ ಅಭಿವೃದ್ಧಿಯತ್ತ ಸಾಗುತ್ತದೆ. ಸರಿಯಾದ ಸಮಯದಲ್ಲಿ ಸರಿಯಾದ ಮಾರ್ಗದರ್ಶನವನ್ನು ಆಳುವವರಿಗೆ ವಿದ್ವಜ್ಜನರು ನೀಡದಿದ್ದರೆ, ಅಥವ ಆಳುವವರು ದುಷ್ಟಕೂಟದ ಸಂಚಿಗೆ ಬಲಿಯಾಗಿ ಸಮಾಜಹಿತಕ್ಕೆ ವಿರೋಧವಾಗಿ, ಅನ್ಯಾಯಿಗಳಾಗಿ, ಪಕ್ಷಪಾತಿಗಳಾಗಿ ವರ್ತಿಸಿದರೆ ಅವರನ್ನು ಎಚ್ಚರಿಸುವ ಕೆಲಸವನ್ನು ವಿದ್ವಜ್ಜನರು ಮತ್ತು ಭುಜಬಲಿಗಳು ಒಟ್ಟಾಗಿ ಮಾಡಬೇಕಾಗುತ್ತದೆ. ಇದಕ್ಕಾಗಿ ಜನರನ್ನು ಯೋಗ್ಯ ರೀತಿಯಲ್ಲಿ ಪ್ರೋತ್ಸಾಹಿಸುವ ಕೆಲಸ ವಿದ್ವಜ್ಜನರದ್ದೇ ಆಗಿದೆ. ಈ ಮಾಡಬೇಕಾದ ಕೆಲಸವನ್ನು ಮಾಡದಿದ್ದರೆ ಅದರ ಫಲವನ್ನು ಅನುಭವಿಸುವವರೂ ಅವರೇ ಆಗುತ್ತಾರೆ.
     ಬ್ರಹ್ಮತೇಜ ಮತ್ತು ಕ್ಷಾತ್ರ ತೇಜಗಳ ಸಮ್ಮಿಲನವಾದರೆ ಎಂತಹ ಚಮತ್ಕಾರವಾಗುತ್ತದೆ ಎಂಬುದಕ್ಕೆ ಚಂದ್ರಗುಪ್ತನನ್ನು ಪ್ರೇರಿಸಿದ ಚಾಣಕ್ಯ, ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣರಾದ ವಿದ್ಯಾರಣ್ಯರು ಉದಾಹರಣೆಗಳಾಗಿದ್ದಾರೆ. ವೈದಿಕ ಭಜನೆಯ ಈ ಸಾಲುಗಳು ಅನುಕರಣೀಯವಾಗಿವೆ.
ಸಲೆ ಕಷ್ಟಕೋಟಿ ಬರಲಿ ನಮಗಾದರಾತ್ಮ ಧಾತ |
ತಲೆ ಮಾತ್ರ ಬಾಗದಿರಲಿ ಅನ್ಯಾಯದೆದುರು ಧಾತಾ ||
     ಗಾಂಧಿಯವರು ಹೇಳಿದಂತೆ ಅಸತ್ಯ, ಅನ್ಯಾಯ, ದಬ್ಬಾಳಿಕೆಗಳನ್ನು ಸಹಿಸಿಕೊಳ್ಳುವುದು ಹೇಡಿತನವಾಗುತ್ತದೆ. ಹೋರಾಡಲು ನಮಗೆ ಶಕ್ತಿ ಇರದಿರಬಹುದು, ಮನಸ್ಸಿರದಿರಬಹುದು, ಆದರೆ ಹೋರಾಡುವವರನ್ನು ಹುರಿದುಂಬಿಸುವ, ಪ್ರೋತ್ಸಾಹಿಸುವ ಕನಿಷ್ಠ ಕೆಲಸವನ್ನಾದರೂ ನಾವು ಮಾಡಬಹುದು. ಸುಂಕದವನ ಮುಂದೆ ಸುಖ-ದುಃಖ ಹೇಳಿಕೊಳ್ಳಲಾಗದು, ಕಟುಕನ ಮುಂದೆ ಅಹಿಂಸೆಯ ಪಾಠ ಬೋಧಿಸಲಾಗದು. ಯಾರಿಗೆ ಯಾವ ರೀತಿಯಲ್ಲಿ ಉತ್ತರಿಸಬೇಕೋ ಆ ರೀತಿ ಉತ್ತರಿಸಬೇಕಾಗುತ್ತದೆ. ಯುವಶಕ್ತಿ ನಮ್ಮ ದೇಶದ ಶಕ್ತಿ. ಅವರುಗಳು ಅನ್ಯಾಯದ ವಿರುದ್ಧ ಧ್ವನಿ ಎತ್ತಿದರೆ ತಡೆಯುವವರು ಯಾರು?

ಮಾತನ್ನು ಹೇಗೆ ಆಡಬೇಕು?

ಸಕ್ತುಮಿವ ತಿತ ಉನಾ ಪುನಂತೋ ಯತ್ರ ಧೀರಾ ಮನಸಾ ವಾಚಮಕ್ರತಾ|
ಅತ್ರ ಸಖಾಯಃ ಸಖ್ಯಾನಿ ಜಾನತೇ ಭದ್ರೈಷಾಂ ಲಕ್ಷ್ಮೀರ್ನಿಹಿತಾಧಿ ವಾಚಿ|| (ಋಗ್ವೇದ.೧೦.೭೧.೨.)
ಹಿಟ್ಟನ್ನು ಜರಡಿಯಾಡುವಂತೆ ಪವಿತ್ರಗೊಳಿಸಲ್ಪಟ್ಟ ಮಾತನ್ನು ಮನಃಪೂರ್ವಕವಾಗಿ ಎಲ್ಲಿ ಧೀರರು ಉಂಟುಮಾಡುತ್ತಾರೋ ಅಲ್ಲಿ ಸ್ನೇಹವು ಸ್ನೇಹವನ್ನು ಅರಿಯುತ್ತದೆ ಮತ್ತು ಅಂತಹ ಮಾತುಗಳಲ್ಲಿಯೇ ಮಂಗಳಕರವಾದ ಸಂಪತ್ತು ಸ್ಥಿರವಾಗಿ ನೆಲೆಗೊಂಡಿರುತ್ತದೆ.
ನಮಗೆ ಮಾತನಾಡುವುದಕ್ಕೆ ಬರುತ್ತದೆ ಎಂದು ಹೇಗಾದರೂ ಮಾತನಾಡಲಾದೀತೇ? ಮಾತನ್ನು ಹೇಗೆ ಆಡಬೇಕು? ವೇದಮಂತ್ರವು ಹೇಳುತ್ತದೆ ” ನಿನ್ನ ಮೆದುಳಿನಲ್ಲಿ ಇಂತಾ ಮಾತನಾಡಬೆಕೆಂದು ನಿರ್ದೇಶನ ಸಿಕ್ಕಿ ಬಾಯಿ ಮೂಲಕ ಮಾತು ಹೊರಬರುವ ಮುಂಚೆ  ಹಿಟ್ಟನ್ನು ಜರಡಿಯಾಡುವಂತೆ  ಅದನ್ನು ಜರಡಿ ಯಾಡಿರಬೇಕು,  ನಾನಾಡುತ್ತಿರುವ ಮಾತು ಬೇರೆಯವರ ಮೇಲೆ ಏನು ಪರಿಣಾಮ ಉಂಟುಮಾಡುತ್ತದೆ, ಅದು ಇನ್ನೊಬ್ಬರಿಗೆ ನೋವುಂಟುಮಾಡುತ್ತದೆಯೇ? ಸತ್ಯವಾಗಿದೆಯೇ? ಕೇಳುವವರಿಗೂ ಹೇಳುವ ನನಗೂ ಹಿತಮಾಗಿದೆಯೇ? ಇಬ್ಬರಿಗೂ ಪ್ರಿಯ ವಾಗಿದೆಯೇ? …ಹೀಗೆ ಎಲ್ಲಾ ರೀತಿಯಲ್ಲೂ ಜರಡಿಯಾಡಿ ಮಾತು ಹೊರಬೀಳಬೇಕು.

ಜರಡಿಯ ಮೂರು ಪದರಗಳಂತೆ  ಸತ್ಯ, ಹಿತ, ಪ್ರಿಯ ಈ ಮೂರೂ ಗುಣಗಳಿರುವಹಾಗೆ ಜರಡಿಯಾಡಿ ಆನಂತರ ಮಾತು ಹೊರಬೀಳ ಬೇಕು. ಹೊರ ಬಿದ್ದ ಮಾತು ಎಷ್ಟಿರಬೇಕು?      ಮಿತವಾಗಿರಬೇಕು. ವ್ಯರ್ಥ ಮಾತನ್ನು ಆಡಬಾರದು.ಹೀಗಿದ್ದಾಗ ನಮ್ಮ ಸ್ನೇಹ ಗಟ್ಟಿ ಯಾಗಿ ಉಳಿಯುತ್ತದೆ. ಇದರಿಂದ ಧೀರನಾದವನು  ವ್ಯರ್ಥವಾದ ಮಾತನ್ನು ಆಡಲಾರ. ಅವನ ಮಾತು ಮಧುರವಾಗಿ, ಸತ್ಯವಾಗಿ, ಹಿತವಾಗಿ ಮಿತವಾಗಿ ಎಲ್ಲರಿಗೂ ಆಪ್ಯಾಯಮಾನವಾಗಿರುತ್ತದೆ. 

Wednesday, July 30, 2014

ವೇದಾಸಕ್ತರಿಗೆ ಅಪೂರ್ವ ಅವಕಾಶ

  ಹಾಸನದಲ್ಲಿ 16.8.2014 ಮತ್ತು 17.8.2014ರಂದು ಎರಡು ದಿನಗಳು ವೇದಭಾರತಿಯ ವಾರ್ಷಿಕೋತ್ಸವದ ನಿಮಿತ್ತ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವೇದಾಸಕ್ತರಿಗೆ ಎರಡು ದಿನಗಳ ಕಾರ್ಯಾಗಾರವಲ್ಲದೆ, ಸಾರ್ವಜನಿಕರಿಗೂ ವಿಶೇಷ ಮನರಂಜನಾ ಮತ್ತು ಸಾಮಯಿಕ ಮಹತ್ವದ ವಿಚಾರದ ಕುರಿತು ಉಪನ್ಯಾಸ ಏರ್ಪಡಿಸಲಾಗಿದೆ. ಎಲ್ಲರಿಗೂ ಆದರದ, ಆತ್ಮೀಯ ಸ್ವಾಗತವಿದೆ. ದಿ. 20.8.2014ರಿಂದ 24.8.2014ರವರೆಗೆ ಗೀತಾಜ್ಞಾನ ಯಜ್ಞವಿರುತ್ತದೆ.
ಸಾರ್ವಜನಿಕರಿಗಾಗಿ:
ಸ್ಥಳ: ಕನ್ನಡ ಸಾಹಿತ್ಯ ಪರಿಷತ್ ಭವನ, ಹಾಸನ
16.8.2014: ಬೆ. 9.00ಕ್ಕೆ: 
ಉದ್ಘಾಟನೆ: ಶ್ರೀ ಶ್ರೀ ಶ್ರೀ ಶಂಭುನಾಥ ಸ್ವಾಮೀಜಿ, ಆದಿಚುಚಂಚನಗಿರಿ ಮಠ, ಹಾಸನ ಶಾಖೆ.
ಮುಖ್ಯ ಅತಿಥಿಗಳು: ಶ್ರೀ ಸು. ರಾಮಣ್ಣ, ಹಿರಿಯ ಪ್ರಚಾರಕರು, ರಾ.ಸ್ವ.ಸಂ., ಅಖಿಲ ಭಾರತ ಪ್ರಮುಖರು, ಕುಟುಂಬ ಪ್ರಬೋಧನ್
                          ಶ್ರೀ ಸುಧಾಕರ ಶರ್ಮ, ವೇದಚಿಂತಕರು
                          ಶ್ರೀ ಶಂಕರಪ್ಪ, ರಾಜ್ಯಾಧ್ಯಕ್ಷರು, ಮಾದಿಗ ದಂಡೋರ ಸಮಿತಿ
                          ಶ್ರೀ ಸಿ.ಎಸ್. ಕೃಷ್ಣಸ್ವಾಮಿ, ಪ್ರಾಂಶುಪಾಲರು, ರಾ.ಕೃ.ವಿದ್ಯಾಲಯ
16.8.2014: ಸಾ. 5.30ಕ್ಕೆ:
ಭರತ ನಾಟ್ಯ - ಕು. ಅಕ್ಷತಾರಾಮಕೃಷ್ಣರಿಂದ
ಉಪನ್ಯಾಸ: ಜಗದ್ಗುರು ಭಾರತ - 1 - ಶ್ರೀ ಸು. ರಾಮಣ್ಣರವರಿಂದ.
17.8.2014: ಸಾ. 5.00ಕ್ಕೆ:
ವೀಣಾವಾದನ: ಕು. ಸಹನಾ ಆರ್.ಪಿ.ರವರಿಂದ
ಉಪನ್ಯಾಸ: ಜಗದ್ಗುರು ಭಾರತ - 2 - ಶ್ರೀ ಸು. ರಾಮಣ್ಣರವರಿಂದ.
20.8.2014ರಿಂದ 24.8.2014ರವರೆಗೆ: ಸಾ. 6.00ರಿಂದ 7.30ರವರೆಗೆ:
ಸ್ಥಳ: ಶ್ರೀ ಆದಿಚುಂಚನಗಿರಿ ಮಠ, ಹಾಸನದ ಯಾಗಮಂಟಪದಲ್ಲಿ.
ಗೀತಾಜ್ಞಾನಯಜ್ಞ -  ಭಗವದ್ಗೀತಾ ಸಾರವನ್ನು ಉಣಬಡಿಸಲಿದ್ದಾರೆ:
ಪೂಜ್ಯ ಶ್ರೀ ಶ್ರೀ ಚಿದ್ರೂಪಾನಂದ ಸರಸ್ವತೀ, ಆರ್ಷ ವಿದ್ಯಾಪೀಠ, ಹುಬ್ಬಳ್ಳಿ
-0-0-0-0-0-0-0-0-0-0-0-0-0-0-0-0-0-0-0-0-0-0-0-0-0-0-0-0-0-0-

ವೇದಾಸಕ್ತರಿಗೆ ಮತ್ತು ಕಾರ್ಯಾಗಾರದಲ್ಲಿ ಭಾಗವಹಿಸುವವರಿಗಾಗಿ:
ಪ್ರತಿದಿನ ಬೆ. 9.00 ರಿಂದ ಸಾಯಂಕಾಲದವರೆಗೆ:
ವಿಷಯಗಳು:
16.8.2014:
1. ಸಾಮಾಜಿಕ ಸಾಮರಸ್ಯಕ್ಕಾಗಿ ವೇದ -  ಮಾರ್ಗದರ್ಶನ: ಶ್ರೀ ಶ್ರುತಿಪ್ರಿಯ, ಸಂಪಾದಕರು, ವೇದತರಂಗ, ಬೆಂಗಳೂರು. 
2. ಸಮಾಜ ಮತ್ತು ನಾನು: - ಮಾರ್ಗದರ್ಶನ: ಶ್ರೀ ಸು. ರಾಮಣ್ಣ
3. ಮಹಿಳೆ ಮತ್ತು ವೇದ: - ಮಾರ್ಗದರ್ಶನ: ಶ್ರೀಮತಿ ಅಮೃತವರ್ಷಿಣಿ ಉಮೇಶ್.
4. ಸತ್ಸಂಗ: - ಮಾರ್ಗದರ್ಶನ: ಶ್ರೀ ವಿಶ್ವನಾಥ ಶರ್ಮ
17.8.2014
5. ನಮ್ಮ ಮನೆ: - ಮಾರ್ಗದರ್ಶನ: ಶ್ರೀ ಸು. ರಾಮಣ್ಣ
6. ರಕ್ಷಾ ಬಂಧನ ಮತ್ತು ಮುಂದಿನ ಕಾರ್ಯಗಳ ಯೋಜನೆ
7. ಸಂಪ್ರದಾಯಗಳು: - ಮಾರ್ಗದರ್ಶನ: ಶ್ರೀ ಸುಧಾಕರ ಶರ್ಮ
8. ಗಣ್ಯರೊಡನೆ ಸಂವಾದ.
ಆಹ್ವಾನ ಪತ್ರಿಕೆ ಮತ್ತು ಕಾರ್ಯಾಗಾರದ ವಿವರ ಹೀಗಿದೆ:



Tuesday, July 29, 2014

ಏಕಲ್ ವಿದ್ಯಾಲಯ ಮತ್ತು ವೇದಭಾರತಿಯ ಸಂಯುಕ್ತ ಸಭೆ

ವೇದಮಂತ್ರವನ್ನು ಕಲಿಸುವುದಷ್ಟೇ ವೇದಭಾರತಿಯ ಉದ್ಧೇಶವಲ್ಲ, ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಜೋಡಿಸಿಕೊಂಡು ಅಲ್ಲೂ  ವೇದದ ಅರಿವು ಮೂಡಿಸಲು ವೇದ ಭಾರತಿಯು ನಡೆಸಿದ ಚಿಂತನ ಘೋಷ್ಠಿ.
ಅಗ್ನಿಹೋತ್ರದಿಂದ ಆರಂಭ

ಶ್ರೀ ರಾಕೇಶ್,ಡಾ.ವೀರಭದ್ರಪ್ಪ, ಶ್ರೀ ಕವಿನಾಗರಾಜ್ ಮತ್ತು ಮಾತನಾಡುತ್ತಿರುವವರು ಶ್ರೀ ಕೆ.ಪಿ.ಎಸ್.ಪ್ರಮೋದ್




ಏಕಲ್ ಕಾರ್ಯದರ್ಶಿ ಶ್ರೀ ನಂದಕುಮಾರ್

ನನ್ನನ್ನು ಸಭೆಯಲ್ಲಿ ಹುಡುಕ ಬೇಡಿ, ನಾನು ಚಿತ್ರೀಕರಣ ನಡೆಸುತ್ತಿದ್ದೆ.
 -ಹರಿಹರಪುರಶ್ರೀಧರ್