Pages

Wednesday, November 5, 2014

ಹಾಸನದಲ್ಲಿ ವೇದಭಾರತಿಯಿಂದ ಸಾಮೂಹಿಕ ಅಗ್ನಿಹೋತ್ರ



ಮನುಷ್ಯನು ಯಾವ ಜಾತಿಗಾದರೂ ಸೇರಿರಲಿ,ಯಾವ ಮತಕ್ಕಾದರೂ ಸೇರಿರಲಿ, ಯಾವ ಧರ್ಮಕ್ಕಾದರೂ ಸೇರಿರಲಿ, ನಿತ್ಯವೂ ಒಂದಲ್ಲಾ ಒಂದು ರೀತಿಯಲ್ಲಿ ಭಗವಂತನನ್ನು ಆರಾಧಿಸದೆ ಇರಲು ಅವನಿಗೆ ಸಾಧ್ಯವಿಲ್ಲ. ದೇವರಿಲ್ಲ ಎನ್ನುವನಿಗೂ ಕೂಡ ತನ್ನ ಊಹೆಗರಿಯದ ಶಕ್ತಿಯೊಂದು ಜಗತ್ತನ್ನು ನಿಯಂತ್ರಿಸುತ್ತಿದೆ, ಎಂಬ ಅರಿವು ಆಗ್ಗಾಗೆ ಆಗುತ್ತಲೇ ಇರುತ್ತದೆ. ವೈದ್ಯೋ ನಾರಾಯಣೋ ಹರಿಃ ಎಂದರೂ ಕೂಡ ಹಲವು ವೇಳೆ ವೈದ್ಯರೂ ಕೂಡ ತಾನು ಎಲ್ಲಾ ಪ್ರಯತ್ನವನ್ನೂ ಮಾಡಿದ್ದಾಗಿದೆ, ಇನ್ನು ದೈವೇಚ್ಛೆ! ಎನ್ನುವ ಮಾತು ಕೇಳಿದ್ದೇವೆ.

ಹೌದು, ಭಗವಂತನ ಅಸ್ತಿತ್ವವನ್ನು ನಂಬದೇ ಇರುವವರೂ ಕೂಡ ತನ್ನ ಊಹೆಗೂ ಮೀರಿದ ಶಕ್ತಿಯೊಂದಿದೆ ಎಂದು ನಂಬಲೇ ಬೇಕು.ಅದನ್ನು ಅವನು ಏನೆಂದಾದರೂ ಕರೆದುಕೊಳ್ಳಲಿ. ಹಗಲು-ರಾತ್ರಿ ಎಂಬುದು ಒಮ್ಮೆಯೂ ವೆತ್ಯಾಸವಾಗಲೇ ಇಲ್ಲವಲ್ಲಾ! ಯಾರು ಈ ವ್ಯವಸ್ಥೆ ಮಾಡಿದವರು? ಎಂದಾಗ ಕೆಲವರು ಅದು ಪ್ರಕೃತಿ ಸಹಜ ವ್ಯವಸ್ಥೆ ಎಂದು ಬಿಡುತ್ತಾರೆ. ಸರಿ, ಹಾಗೆಂದರೇನು? ಅದರ ನಿಯಂತ್ರಕರಾರು? ಈ ಪ್ರಶ್ನೆಗಳಿಗೆ ಉತ್ತರವಿರುವುದಿಲ್ಲ. ಆದರೂ ದೇವರನ್ನು ನಂಬುವುದಿಲ್ಲವೆಂದು ವಾದಿಸುವವರಿದ್ದಾರೆ.ಇರಲಿ. ನಾಸ್ತಿಕವಾದ ಬೆಳೆಯಲು ಹಲವು ಭಾರಿ ಆಸ್ತಿಕರ ವಿಚಿತ್ರ ನಡವಳಿಕೆಯೂ ಕಾರಣ. ಈ ಲೇಖನದ ಉದ್ಧೇಶ ಇದಲ್ಲ.

ದೇವರನ್ನು ನಂಬುವವರು ನಿತ್ಯವೂ ದೇವರ ಆರಾಧನೆ ಮಾಡುತ್ತೇವೆ. ದೇವರಿಗೆ ನೈವೇದ್ಯ ಮಾಡುತ್ತೇವೆ. ಆ ಭಗವಂತನಿಗೆ ಅರ್ಪಿಸಿದೆವೆಂಬ ಭಾವದಿಂದ ಪ್ರಸಾದ ರೂಪದಲ್ಲಿ ಆ ನೈವೇದ್ಯವನ್ನು ನಾವೇ ಸೇವಿಸುತ್ತೇವೆ. ಇಂತಾ ಭಕ್ತಿಭಾವ ಬೇಕು.ಇರಲಿ. ಆದರೆ ನಾವು ಯಾವ ಯಾವ ರೀತಿಯಲ್ಲಿ ಭಗವಂತನನ್ನು ಆರಾಧಿಸಿದರೂ ಅವನನ್ನು ಕಲ್ಪಿಸಿಕೊಳ್ಳಬಹುದೇ ಹೊರತೂ ನೋಡಲು ಸಾಧ್ಯವಿಲ್ಲ. ಅವನು ಸರ್ವವ್ಯಾಪಿಯಾದ್ದರಿಂದ ನಮ್ಮ ಒಳಗೇ ಇರುವ ಆ ಭಗವಂತನೇ ನಮಗೆ ಬಲು ಹತ್ತಿರದವನು.

ಇನ್ನು ಅವನನ್ನು ನಮ್ಮ ಹೊರಗೆ ಕಾಣಬೇಕೆಂದರೆ ಚೇತನರೂಪದಲ್ಲಿರುವ ತಂದೆ-ತಾಯಿಯರಲ್ಲಿ,ಗುರುಗಳಲ್ಲಿ ಕಾಣಬಹುದು. ಗೋಮಾತಾ ಪ್ರತ್ಯಕ್ಷ ದೇವತಾ ಎನ್ನುತ್ತಾರೆ. ನಮಗೆ ಜನ್ಮಕೊಟ್ಟು ಸಲಹಿದ ತಂದೆತಾಯಿ, ವಿದ್ಯೆ ಕೊಟ್ಟ ಗುರುಗಳು, ನಮ್ಮ ಜೀವನಪೂರ್ಣ ಹಾಲು ಕೊಟ್ಟು ಸಲಹಿದ ಗೋಮಾತೆ ನಮಗೆ ಪ್ರತ್ಯಕ್ಷ ದೇವತೆಗಳು. ತಂದೆ,ತಾಯಿ, ಗುರು ಮತ್ತು ಗೋಮಾತೆಯ ಸೇವೆಯನ್ನು ಮಾಡುವುದೇ ಭಗವಂತನ ಪೂಜೆ.

ಪಂಚ ಭೂತಗಳಿಂದ ಈ ಶರೀರವು ಆಗಿದ್ದು ಜಗತ್ತೂ ಕೂಡ ಪಂಚಭೂತಗಳಿಂದಲೇ ಆಗಿದೆ. ಆದ್ದರಿಂದ ಈ ಪಂಚಭೂತಗಳಾದ ನೀರು,ಗಾಳಿ,ಭೂಮಿ,ಆಕಾಶ ಮತ್ತು ಅಗ್ನಿ-ಇವುಗಳೂ ದೇವತೇ ಗಳೆ ಆಗಿವೆ.

ನಮ್ಮ ಪೂರ್ವಜರಾದ ಋಷಿಮುನಿಗಳು ನಮ್ಮಂತೆ ವಿಗ್ರಹವನ್ನು ಆರಾಧಿಸಲಿಲ್ಲ. ಬದಲಿಗೆ ಪ್ರಕೃತಿಯನ್ನು ಪೂಜಿಸಿದರು. ಸೂರ್ಯನನ್ನು, ಅಗ್ನಿಯನ್ನು ಆರಾಧಿಸಿದರು. ಸೂರ್ಯನನ್ನು ಕುರಿತು ತಪಸ್ಸು ಮಾಡಿದರೆ, ಪ್ರತ್ಯಕ್ಷ ಅಗ್ನಿಯಲ್ಲಿ ಹೋಮವನ್ನು ಮಾಡಿ ಯಜ್ಞಕ್ಕೆ ಹವಿಸ್ಸನ್ನು ಅರ್ಪಿಸಿ ಅಗ್ನಿದೇವತೆಯು ಸ್ವೀಕರಿಸುವುದನ್ನು ಕಂಡರು.

ನಾವು ಬಾಯಿ ಮೂಲಕ ಸ್ವೀಕರಿಸಿದ ಆಹಾರವು ನಮ್ಮ ಜೀರ್ಣಕೋಶಗಳಲ್ಲಿ ಜೀರ್ಣವಾಗಿ ರಸವಾಗಿ ಪರಿವರ್ತಿತವಾಗಿ ರಕ್ತದ ಮೂಲಕ ಶರೀರದ ಅಂಗಾಂಗಗಳಿಗೆಲ್ಲಾ ತಲುಪುವುದಲ್ಲವೇ ಅದೇ ರೀತಿಯಲ್ಲಿ ಯಜ್ಞದಲ್ಲಿ ಕ್ರಿಯೆ ನಡೆಯುತ್ತದೆಂದರೆ ನಿಮಗೆ ಅಚ್ಚರಿಯಾಗಬಹುದು.

ಯಜ್ಞದಲ್ಲಿ ಅರ್ಪಿಸಿದ ಹವಿಸ್ಸು ಸೂಕ್ಷ್ಮಾಣುಗಳಾಗಿ ಪರಿವರ್ತಿತವಾಗಿ ಮೊದಲು ಗಾಳಿಯಲ್ಲಿ ಸೇರಿ ನಮಗೆ ಪ್ರಾಣವಾಯುವಿಗೆ ಕಾರಣವಾಗುವುದು. ಅಷ್ಟೇ ಅಲ್ಲ ನಂತರ ಮೇಘಮಂಡಲವನ್ನು ಸೇರಿ ಅದರಲ್ಲಿನ ಜಲಕ್ಕೆ ಸೇರುವುದು. ಮಳೆಯೊಡನೆ ಮತ್ತೆ ಭೂಮಿ ತಲುಪಿ ಸಸ್ಯ ಸಂಮೃದ್ಧಿಗೆ ಕಾರಣವಾಗುವುದು. ಆದುದರಿಂದಲೇ ನಮ್ಮ ಋಷಿಮುನಿಗಳು ಅಗ್ನಿರ್ವೈದೇವಾನಾಂ ಮುಖಮ್ ಎಂದರು. ಅಂದರೆ ಅಗ್ನಿಯು ದೇವತೆಗಳಿಗೆ ಬಾಯಿ ಎಂದು ಎಂದು ಪರಿಶೋಧಿಸಿ ತಿಳಿದುಕೊಂಡರು. ಒಂದು ವಿಚಾರ ಗೊತ್ತಿರಬೇಕು. ಯಜ್ಞದಲ್ಲಿ ಔಷಧೀಯ ಗುಣಗುಳುಳ್ಳ ಹವಿಸ್ಸನ್ನು ಅರ್ಪಿಸಿದಾಗ ಮಾತ್ರವೇ ವಾಯು ಶುದ್ಧಿಯಾಗುತ್ತದೆ. ಅದಕ್ಕಾಗಿಯೇ ಅರಳೀ ಸಮಿತ್ತು ಮತ್ತು ಹಸುವಿನತುಪ್ಪದ ಜೊತೆಗೆ ಹಿಮಾಲದಿಂದ ತರಿಸಿರುವ ಗಿಡಮೂಲಿಕೆಗಳ ಪುಡಿಯನ್ನು ಮಾತ್ರವೇ ವೇದಭಾರತಿಯು ನಿತ್ಯವೂ ನಡೆಸುವ ಅಗ್ನಿಹೋತ್ರದಲ್ಲಿ ಉಪಯೋಗಿಸುತ್ತೇವೆ.

ಆದ್ದರಿಂದ ಇಷ್ಟು ವೈಜ್ಞಾನಿಕವಾಗಿ ಚಿಂತನ-ಮಂಥನ ಮಾಡಿಯೇ ನಮ್ಮ ಪೂರ್ವಜರು ತಮ್ಮ ನೆಮ್ಮದಿಯ ಬದುಕಿಗಾಗಿ ಪ್ರತಿದಿನ ಸೂರ್ಯೋದಯ ಮತ್ತು ಸೂರ್ಯಾಸ್ತ ಸಮಯದಲ್ಲಿ ಎರಡು ಹೊತ್ತು ಅಗ್ನಿಹೋತ್ರವನ್ನು ಮಾಡುತ್ತಾ ಆರೋಗ್ಯಪೂರ್ಣ ಬದುಕು ನಡೆಸಿದರು. ಮಧ್ಯ ಕಾಲದಲ್ಲಿ ಅಗ್ನಿಹೋತ್ರವನ್ನು ಕೆಲವರು ಮಾತ್ರ ಮುಂದುವರೆಸಿದರೆ ಜನಸಾಮನ್ಯರಿಂದ ಮರೆಯಾಗಿರುವುದನ್ನು ಕಾಣುತ್ತೇವೆ. ಕಾರಣ ಏನಾದರೂ ಇರಲಿ. ಆದರೆ ಇಂದಿನ ಹಲವಾರು ಸಾಮಾಜಿಕ- ಪ್ರಾಕೃತಿಕ ಸಮಸ್ಯೆಗಳನ್ನು ನೋಡಿದಾಗ ಇವುಗಳ ಪರಿಹಾರಕ್ಕೆ ಅಗ್ನಿಹೋತ್ರವು ದೊಡ್ದ ಪ್ರಮಾಣದ ಕೊಡುಗೆ ನೀಡಬಲ್ಲದು. ಅದರ ಅಧ್ಯಯನ ಮತ್ತು ಪ್ರಯೋಗಗಳು ಸಾಕಷ್ಟು ನಡೆದು ಪಾಶ್ಚಿಮಾತ್ಯರೂ ಸಹ ಅಗ್ನಿಹೋತ್ರದ ಪ್ರಯೋಜನ ಪಡೆಯುತ್ತಿದ್ದಾರೆ.

ಯಜ್ಞದಲ್ಲಿ ಹವಿಸ್ಸನ್ನು ಅರ್ಪಿಸಿದಾಗ ಪ್ರಕೃತಿಯ ಮೇಲೆ ಒಳ್ಳೆಯ ಪರಿಣಾಮವಾಗುತ್ತದೆಂಬುದನ್ನು ಒಪ್ಪಿದರೂ ಈ ಮಂತ್ರಗಳೇಕೆ? ಹಾಗೆಯೇ ಹವಿಸ್ಸನ್ನು ಯಜ್ಞಕ್ಕೆ ಹಾಕಿದರೆ ಆಗದೇ ಎಂದು ಪ್ರಶ್ನಿಸುವವರಿದ್ದಾರೆ. ಅಗ್ನಿಹೋತ್ರದ ಆರಂಭದ ಕೆಲವು ಮಂತ್ರಗಳ ಅರ್ಥವನ್ನು ತಿಳಿದರೆ ಅದರ ಮಹತ್ವ ನಮಗೆ ಅರ್ಥವಾಗುತ್ತದೆ. ಅಗ್ನಿಹೋತ್ರದ ಬಾಹ್ಯ ಪರಿಣಾಮಗಳು ವಾಯುಮಂಡಲವನ್ನು ಶುದ್ಧಿಮಾಡಿದರೆ ಅಗ್ನಿಹೋತ್ರದಲ್ಲಿ ಹೇಳುವ ಮಂತ್ರಗಳು ನಮ್ಮ ಆಂತರ್ಯವನ್ನು ಶುದ್ಧಿಮಾಡಲು ನೆರವಾಗುತ್ತವೆ. ಅವುಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ವಿಚಾರ ಮಾಡೋಣ.

ಆರಂಭದಲ್ಲಿ ಆಚಮನ ಮಾಡುವಾಗ ಭಗವಂತನನ್ನು ಸ್ಮರಿಸುತ್ತಾ ತೈತ್ತರೀಯ ಅರಣ್ಯಕ ಮಂತ್ರವನ್ನು ಹೇಳುತ್ತೇವೆ.

ಓಂ ಅಮೃತೋಪಸ್ತರಣಮಸಿ ಸ್ವಾಹಾ

ಓಂ ಅಮ್ರುತಾಮಪಿಧಾನಮಸಿ ಸ್ವಾಹಾ

ಓಂ ಸತ್ಯಂ ಯಶಃ ಶ್ರೀರ್ಮಯೀ ಶ್ರೀಃ ಶ್ರಯತಾಂ ಸ್ವಾಹಾ

ಹೇ ಪ್ರಭೂ ,ನೀನು ನಮಗೆ ಆಧಾರವಾಗಿದ್ದೀಯೇ,ನೀನು ಎಲ್ಲೆಲ್ಲಿಯೂ ಆವರಿಸಿದ್ದೀಯೆ, ನನ್ನಲ್ಲಿ ಸತ್ಯವೂ, ಯಶವೂ, ಸೌಂದರ್ಯವೂ, ಸಂಪತ್ತೂ, ನೆಲೆಗೊಳ್ಳಲಿ ಎಂಬುದು ಈ ಮಂತ್ರಗಳ ಅರ್ಥ.

ನಂತರ ನಮ್ಮ ಅಂಗಾಂಗಗಳನ್ನು ಸ್ಪರ್ಶಿಸುತ್ತಾ ಈ ಕೆಳಗಿನ ಮಂತ್ರಗಳನ್ನು ಹೇಳುತ್ತೇವೆ

ಓಂ ವಾಂಙ್ಮ ಆಸ್ಯೇಸ್ತು [ ನನ್ನ ನಾಲಿಗೆಯಲ್ಲಿ ವಾಕ್‌ಶಕ್ತಿ ಸ್ಥಿರವಾಗಿರಲಿ]

ಓಂ ನಸೋರ್ಮೇ ಪ್ರಾಣೋಸ್ತು [ನನ್ನ ಮೂಗಿನಲ್ಲಿ ಪ್ರಾಣಶಕ್ತಿ ಇರಲಿ]

ಓಂ ಅಕ್ಷ್ಣೋರ್ಮೇ ಚಕ್ಷುರಸ್ತು [ನನ್ನ ಕಣ್ಣುಗಳಲ್ಲಿ ದರ್ಶನಶಕ್ತಿ ಇರಲಿ]

ಓಂ ಕರ್ಣಯೋರ್ಮೇ ಶ್ರೋತ್ರಮಸ್ತು [ನನ್ನ ಕಿವಿಗಳಲ್ಲಿ ಶ್ರವಣ ಶಕ್ತಿ ಇರಲಿ]

ಓಂ ಬಾಹ್ವೋರ್ಮೇ ಬಲಮಸ್ತು [ನನ್ನ ಬಾಹುಗಳಲ್ಲಿ ಬಲವಿರಲಿ]

ಓಂ ಊರ್ವೋರ್ಮೇ ಓಜೋಸ್ತು [ನನ್ನ ತೊಡೆಗಳಲ್ಲಿ ಓಜಸ್ಸಿರಲಿ]

ಓಂ ಅರಿಷ್ಟಾನಿ ಮೇsಂಗಾನಿ ತನೂಸ್ತನ್ವಾ ಮೇ ಸಹಸಂತು

[ನನ್ನ ಎಲ್ಲಾ ಅಂಗಾಂಗಗಳೂ ಸಮರ್ಥವಾಗಿರಲಿ]

ಅಂಗಾಂಗ ಸ್ಪರ್ಷ ಮಾಡುತ್ತಾ ಇಷ್ಟೆಲ್ಲಾ ಹೇಳಿದ ನಂತರ ಅಗ್ನಿಹೋತ್ರದಲ್ಲಿ ಹವಿಸ್ಸನ್ನು ಅರ್ಪಿಸುವಾಗ ಇದಂ ನ ಮಮ ಅಂದರೆ ಈ ಯಜ್ಞವನ್ನು ನನ್ನ ಸ್ವಾರ್ಥಕ್ಕಾಗಿ ಮಾಡುತ್ತಿಲ್ಲ. ಅಂದರೆ ಸಮಾಜದ ಅಭ್ಯುದಯಕ್ಕಾಗಿ ಈ ಯಜ್ಞವನ್ನು ಮಾಡುತ್ತಿದ್ದೇನೆಂದು ಪ್ರತಿದಿನವೂ ಹೇಳುತ್ತೇವೆ. ಈ ನೆಲೆಯಲ್ಲಿ ಅಂಗಸ್ಪರ್ಷ ಮಂತ್ರಗಳನ್ನು ಅರ್ಥ ಮಾಡಿಕೊಳ್ಳೋಣ.

ಓಂ ವಾಂಙ್ಮ ಆಸ್ಯೇಸ್ತು ಎನ್ನುವ ಮಂತ್ರವನ್ನು ಹೇಳುವಾಗ ನನ್ನ ನಾಲಿಗೆಯಲ್ಲಿ ಇಂದು ಒಳ್ಳೆಯ ಮಾತುಗಳೇ ಬರಲಿ ಎಂದು ಸಂಕಲ್ಪಿಸಬೇಕು. ಅಂತೆಯೇ ಕಿವಿಯಲ್ಲಿ ಒಳ್ಳೆಯದನ್ನೇ ಕೇಳೋಣ, ಕಣ್ಣಿನಿಂದ ಒಳ್ಳೆಯದನ್ನೇ ಕಾಣೋಣ, ನಮ್ಮ ಶರೀರವು ಒಳ್ಳೆಯದನ್ನೇ ಮಾಡಲಿ ಎಂದು ಬೆಳಿಗ್ಗೆ ಒಮ್ಮೆ ಸಂಕಲ್ಪಮಾಡಿದರೆ ನಮ್ಮಿಂದ ಅಚಾತುರ್ಯ ಆಗಲಾರದಲ್ಲವೇ? ಆದ್ದರಿಂದ ಮಂತ್ರವನ್ನು ಹೇಳುತ್ತಾ ಅಗ್ನಿಹೋತ್ರವನ್ನು ಮಾಡುವುದರಿಂದ ನಮ್ಮ ಅಂತರಂಗ ಶುದ್ಧಿಯಾಗುವುದು.

ಇಂತಹ ಒಂದು ಚಿಕ್ಕದಾದ , ಸರಳವಾದ ಅಗ್ನಿಹೋತ್ರವನ್ನು ಎಲ್ಲರೂ ಕಲಿಯೋಣ ಬನ್ನಿ. ನಿತ್ಯವೂ ಮಾಡುವ ಅಗ್ನಿಹೋತ್ರಕ್ಕೆ ಮೂರ್ನಾಲ್ಕು ಚಮಚ ಹಸುವಿನ ತುಪ್ಪ ಖರ್ಚಾಗುತ್ತದಷ್ಟೆ. ಆದರೆ ಅದರ ಲಾಭ ಅಪಾರ.

ಅಗ್ನಿಹೋತ್ರವನ್ನು ಯಾವ ಜಾತಿಭೇದ,ಲಿಂಗಭೇದ,ವಯಸ್ಸಿನ ಭೇದವಿಲ್ಲದೆ ಮಾಡಬಹುದು. ಬ್ರಹ್ಮಚಾರಿಗಳೂ ಮಾಡಬಹುದು. ದಂಪತಿಗಳು ಒಟ್ಟಾಗಿ ಕುಳಿತು ಮಾಡಬಹುದು.ಅಥವಾ ಒಬ್ಬರೇ ಮಾಡಿದರೂ ಅದರ ಫಲ ಇದ್ದೇ ಇದೆ.

ದಿನಾಂಕ ೧೦.೧೧.೨೦೧೪ ರಂದು ಸೋಮವಾರ ಸಂಜೆ ೬.೦೦ ಗಂಟೆಗೆ ಹುಬ್ಬಳ್ಳಿಯ ಸ್ವಾಮಿ ಚಿದ್ರೂಪಾನಂದ ಸರಸ್ವತೀ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಸಾಮೂಹಿಕ ಅಗ್ನಿಹೋತ್ರವನ್ನು ಹಾಸನದ ನೆಹರು ರಸ್ತೆಯಲ್ಲಿರುವ ಶ್ರೀ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ಏರ್ಪಡಿಸಲಾಗಿದೆ.ಎಲ್ಲರೂ ಉಚಿತವಾಗಿ ಪಾಲೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ. ದೇವಾಲಯದ ಹೊರಭಾಗದಲ್ಲಿ ಎಲ್ಲಾ ವಿವರವನ್ನೂ ಪ್ರಕಟಿಸಲಾಗಿದೆ. ಎಲ್ಲರಿಗೂ ವೇದಭಾರತಿಯು ಹೃದಯಪೂರ್ವಕ ಸ್ವಾಗತ ಕೋರುತ್ತದೆ. ಹೆಚ್ಚಿನ ಮಾಹಿತಿಗಾಗಿ ೯೬೬೩೫೭೨೪೦೬ ಸಂಪರ್ಕಿಸಿ.



-ಹರಿಹರಪುರಶ್ರೀಧರ್ಸಂಯೋಜಕ, ವೇದಭಾರತೀ, ಹಾಸನ

Friday, October 31, 2014






Acharya M. R. Rajesh





Tuesday, October 28, 2014

ಸಾಮೂಹಿಕ ಅಗ್ನಿಹೋತ್ರ

ಓಂ
ವೇದಭಾರತೀ, ಹಾಸನ

ಹುಬ್ಬಳ್ಳಿಯ ಆರ್ಶವಿದ್ಯಾಲಯದ 
ಪೂಜ್ಯ ಶ್ರೀ ಚಿದ್ರೂಪಾನಂದ ಸರಸ್ವತೀ ಸ್ವಾಮೀಜಿಯವರ
 ದಿವ್ಯ ಸಾನ್ನಿಧ್ಯದಲ್ಲಿ

ಲೋಕ ಕಲ್ಯಾಣಾರ್ಥ
ಸಾಮೂಹಿಕ ಅಗ್ನಿಹೋತ್ರ
ಮತ್ತು
ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು
ಸಂಗ್ರಹಿಸಿರುವ, ವೇದ ಮಂತ್ರಾಧಾರಿತ

ನೂರು ಹಿತನುಡಿಗಳು, ಭಾಗ-೨
 ಪುಸ್ತಕ ಬಿಡುಗಡೆ ಕಾರ್ಯಕ್ರಮ

ಸ್ಥಳ:  ಶ್ರೀ ಕೇಶವ ದೇವಾಲಯ, ಹಾಸನ

ದಿನಾಂಕ: ೧೦.೧೧.೨೦೧೪ ಸೋಮವಾರ ಸಂಜೆ ೬.೦೦ ಕ್ಕೆ

ನೂರು ದಂಪತಿಗಳಿಗೆ ಪಾಲ್ಗೊಳ್ಳಲು ಅವಕಾಶ

ಈ ವಿಶೇಷ ಕಾರ್ಯಕ್ರಮದಲ್ಲಿ 
ನಮ್ಮೊಡನೆ
ಶ್ರೀ ಸು.ರಾಮಣ್ಣ
ಅಖಿಲಭಾರತ ಪ್ರಮುಖರು,ಕುಟುಂಬ ಪ್ರಭೋದನ್
ಇವರು ಉಪಸ್ಥಿತರಿದ್ದು 
ಹಿಂದೂ ಜೀವನ ಮೌಲ್ಯಗಳ ಬಗ್ಗೆ ಮಾರ್ಗದರ್ಶನ ಮಾಡುವರು

1.ದಂಪತಿ ಸಹಿತವಾಗಿ  ಪಾಲ್ಗೊಳ್ಳಬೇಕೆಂಬುದು ಅಪೇಕ್ಷೆ. ಅನಿವಾರ್ಯ ಸಂದರ್ಭದಲ್ಲಿ 
   ಪತಿ-ಪತ್ನಿಯರಲ್ಲಿ ಒಬ್ಬರು ಸಹ  ಪಾಲ್ಗೊಳ್ಳಬಹುದು
2.ಬ್ರಹ್ಮಚಾರಿಗಳೂ ಸಹ ಪಾಲ್ಗೊಳ್ಳಬಹುದು
3. ಅಗ್ನಿಹೋತ್ರಕ್ಕೆ ಅಗತ್ಯವಾದ ಎಲ್ಲಾ ವ್ಯವಸ್ಥೆಯನ್ನು ವೇದಭಾರತಿಯು ಮಾಡುವುದು. ಆದರೆ ಅಗ್ನಿಹೋತ್ರದಲ್ಲಿ ಪಾಲ್ಗೊಳ್ಳುವವರು ಒಂದು ಪಂಚಪಾತ್ರೆ-ಉದ್ಧರಣೆ [ಅಥವಾ ಒಂದು ಲೋಟ ಮತ್ತು ಚಮಚ] ಮತ್ತು ತುಪ್ಪ ಹಾಕಲು ಒಂದು ಬಟ್ಟಲು ಮತ್ತು ಚಮಚ  ತಂದಿರಬೇಕು.
4.ಅಗ್ನಿಹೋತ್ರವು ೬.೦೦ ಗಂಟೆಗೆ ಸರಿಯಾಗಿ ಓಂಕಾರದಿಂದ ಆರಂಭವಾಗುವುದರಿಂದ ಅರ್ಧ ಗಂಟೆ ಮುಂಚೆ ಕಾರ್ಯಕ್ರಮದ ಸ್ಥಳದಲ್ಲಿರಬೇಕು.
5.ಉಡುಪು: ಸ್ತ್ರೀಯರಿಗೆ ಸಾಂಪ್ರಾದಾಯಿಕ ಉಡುಗೆ. ಪುರುಷರಿಗೆ ಬಿಳಿ ಪಂಚೆ ಮತ್ತು ಶಲ್ಯ 
ಹತ್ತಿ ಬಟ್ಟೆ ಅಪೇಕ್ಷಣೀಯ.
6.ಇಡೀ ಕಾರ್ಯಕ್ರಮದಲ್ಲಿ ಮೊಬೈಲ್ ಸ್ವಿಚ್‌ಆಫ್ ಆಗಿರಬೇಕು.
7.ತುಂಬಾ ಪುಟ್ಟಮಕ್ಕಳಿದ್ದರೆ ಅವರನ್ನು ನೋಡಿಕೊಳ್ಳಲು ದೊಡ್ದವರನ್ನು ಜೊತೆಗೆ ಕರೆ ತನ್ನಿ
8.ಅಗ್ನಿಹೋತ್ರದ ನಂತರ ಸಾಮೂಹಿಕ  ವೇದಭಜನೆ , ಉಪನ್ಯಾಸ ನಡೆಯಲಿದ್ದು ಉಪಹಾರವನ್ನು ಮುಗಿಸಿಕೊಂಡು ಮನೆಗೆ ತೆರಳಬಹುದು
9. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಂದಲೇ ಅಗ್ನಿಹೋತ್ರವನ್ನು ಮಾಡಿಸಲಾಗುವುದು.ಜೊತೆಯಲ್ಲಿ ವೇದಭಾರತಿಯ ಕಾರ್ಯಕರ್ತರಿದ್ದು ವಿದಿವಿಧಾನವನ್ನು ಸುಗಮಗೊಳಿಸಲು ಪೂರ್ಣ ನೆರವಾಗುವರು. 
10. ಇದೊಂದು ಅತ್ಯಂತ ರಳವಾದ ನಿತ್ಯವೂ ಎಲ್ಲರೂ ತಮ್ಮ ಮನೆಗಳಲ್ಲಿ ೨೦ ನಿಮಿಷಗಳಲ್ಲಿ  ಮಾಡಬಹುದಾದ  ಯಜ್ಞವಾಗಿದ್ದು, ಕಾರ್ಯಕ್ರಮದ ನಂತರವೂ ಹೊಯ್ಸಳನಗರದ ಈಶಾವಾಸ್ಯಮ್ ನಲ್ಲಿ  ಅಗ್ನಿಹೋತ್ರವನ್ನು ಕಲಿಸುವ ವ್ಯವಸ್ಥೆ ಇರುತ್ತದೆ. 
11. ಕಾರ್ಯಕ್ರಮ ಸ್ಥಳದಲ್ಲಿ ನೂರು ಹಿತನುಡಿಗಳು ಪುಸ್ತಕವನ್ನು ಉಚಿತವಾಗಿ ವಿತರಿಸಲಾಗುವುದು.

    ನಿಮಗೆ ಗೊತ್ತಿರಲಿ
1. ಈಶಾವಾಸ್ಯಮ್, ಶಕ್ತಿ ಗಣಪತಿ ದೇವಾಲಯ ರಸ್ತೆ, ಹೊಯ್ಸಳ ನಗರ,ಹಾಸನ- ಈ ವಿಳಾಸದಲ್ಲಿ ಪ್ರತಿದಿನ ಸಂಜೆ 6.00 ರಿಂದ  7.00  ರವರಗೆ ನಡೆಯುವ ಸತ್ಸಂಗದಲ್ಲಿ, ಅಗ್ನಿಹೋತ್ರ, ವೇದಾಭ್ಯಾಸ, ವೇದಪರಿಚಯ ಉಪನ್ಯಾಸ, ವೇದಭಜನ್ -ಮುಂತಾದ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದೆ. ಪ್ರವೇಶವು ಉಚಿತವಾಗಿದ್ದು  ಎಲ್ಲರಿಗೂ ಮುಕ್ತವಾಗಿ ಪಾಲ್ಗೊಳ್ಳುವ ಅವಕಾಶವಿದೆ.
2. ಹಾಸನದ ಸ್ಥಳೀಯ ಪತ್ರಿಕೆಗಳಾದ ಜನಮಿತ್ರ ಮತ್ತು ಜನಹಿತ ಪತ್ರಿಕೆ ಮತ್ತು ವಿಕ್ರಮ ವಾರ ಪತ್ರಿಕೆಯಲ್ಲಿ ಪ್ರತೀ ವಾರವೂ ಪ್ರಕಟವಾಗುತ್ತಿರುವ  ವೇದಾಧಾರಿತ ಲೇಖನಗಳನ್ನು ಓದಿ.
3. ನಮ್ಮ ಮೇಲ್ ವಿಳಾಸ : vedasudhe@gmail.com

Saturday, October 25, 2014

ಹಾಸನದಲ್ಲಿ ಸಾಮೂಹಿಕ ಅಗ್ನಿಹೋತ್ರ




ನಿಮ್ಮ ಮಾಹಿತಿ ನಮಗೆ ಕಳಿಸಿ


ವೇದಸುಧೆಯ ಅಭಿಮಾನಿಗಳೇ,

ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ ಅನಾರೋಗ್ಯದ ವಿಚಾರದ ಮಾಹಿತಿಯನ್ನು ವೇದಸುಧೆಯ ಮೂಲಕ ತಿಳಿದ ಕೂಡಲೇ ಹಲವರು  ಶರ್ಮರ ಆರೋಗ್ಯ ಬೇಗ ಸುಧಾರಿಸಿ ಅವರಿಂದ ವೇದದ ಕೆಲಸ ಇನ್ನೂ ಹೆಚ್ಚು ಆಗಲಿ,  ಎಂಬ ಮಹದಾಶೆಯಿಂದ ತುಂಬುಹೃದಯದಿಂದ ನೆರವಿಗೆ ಕೈಜೋಡಿಸಿದ್ದಾರೆ. ಅಂತಹಾ ಎಲ್ಲಾ ಬಂಧುಗಳಿಗೂ ಧನ್ಯವಾದಗಳನ್ನು   ಹೇಳುತ್ತಾ ನಿಮ್ಮೆಲ್ಲರ ಹೆಸರು-ಊರು-ಮೊಬೈಲ್ ನಂಬರ್ ಇತ್ಯಾದಿ ಮಾಹಿತಿಗಳನ್ನು vedasudhe@gmail.com ಗೆ ಕಳಿಸಿಕೊಡಿರೆಂದು ವಿನಂತಿಸುವೆ. ಮುಂದೆ ನಡೆಯಲಿರುವ  ನಮ್ಮ ಎಲ್ಲಾ ಚಟುವಟಿಕೆಗಳನ್ನೂ  ನಿಮಗೆ ತಿಳಿಸಲು ಅದು ಅನುಕೂಲವಾಗುತ್ತೆ.ಅಲ್ಲದೆ ಶರ್ಮರ ಆರೋಗ್ಯ ಒಮ್ಮೆ ಸುದಾರಿಸಿದ ಕೂಡಲೇ ಅವರಿಂದ ಸಹಜವಾಗಿ  ವೇದದ ಕೆಲಸ ಹೆಚ್ಚು ವೇಗವನ್ನು ಪಡೆಯುತ್ತದೆ.

Friday, October 24, 2014

ಎಚ್ಚರ! ಎಚ್ಚರ!! ಎಚ್ಚರ!!!

ವೇದ,ಉಪನಿಷತ್ತು,ಭಗವದ್ಗೀತೆ - ಇವುಗಳು ಪವಿತ್ರ ಗ್ರಂಥಗಳೆಂದು ಸಾಮಾನ್ಯವಾಗಿ ಎಲ್ಲರೂ ಒಪ್ಪುತ್ತಾರೆ. ಅವಕ್ಕೆ ಪೂಜ್ಯ ಸ್ಥಾನವನ್ನು ಕೊಟ್ಟು ದೂರವಿಡುತ್ತಾರೆ.ಇನ್ನು ಇಂದಿನ ಕಾಲದ ಯುವಕರಿಗೆ ಅಂತರ್ಜಾಲ, ದೂರದರ್ಶನಗಳಿಂದ  ಹಲವು ಆಕರ್ಷಣೆಗಳು! ಇವರೂ ಕೂಡ ಈ ಗ್ರಂಥಗಳನ್ನೆಲ್ಲಾ ವಿರೋಧಿಸದಿದ್ದರೂ ಅದು ನಮ್ಮ ಈ ವಯಸ್ಸಿಗಲ್ಲಾ!! ಎಂಬ ಭಾವನೆ!!

   ಯಾವ ಕೆಲವು ವಿದ್ಯಾವಂತ ಯುವಕರು ವೇದ-ಭಗವದ್ಗೀತೆ ಗ್ರಂಥಗಳ ಪುಟ ತೆರೆದು ನೋಡಲು  ನಮಗೆ ಇನ್ನೂ  "ಆ ಕಾಲ ಬಂದಿಲ್ಲ "  ಎಂಬ ದೋರಣೆಯ ಕಂಡು  ನನಗೆ ಅಚ್ಚರಿ ಮತ್ತು ಕರುಣೆ ಒಟ್ಟೊಟ್ಟಿಗೆ ಬರುತ್ತದೆ. ಯಾವಾಗಲೂ ಹಾಗೆಯೇ ಶರೀರ ರೋಗಗ್ರಸ್ತವಾಗುವವರೆಗೂ ಯೋಗದ ಮಹತ್ವ ತಿಳಿಯುವುದಿಲ್ಲ, ನಮ್ಮ ಪರಂಪರಾಗತವಾದ ಆಹಾರ ಪದ್ದತಿಯ ಮಹತ್ವ ತಿಳಿಯುವುದಿಲ್ಲ, ಅದಕ್ಕಿಂತ ಹೆಚ್ಚಾಗಿ ಈ ಗ್ರಂಥಗಳ ಮಹತ್ವ ತಿಳಿಯುವುದಿಲ್ಲ.

ನನ್ನ ಹಾಗೆ ವಯಸ್ಸು ಅರವತ್ತು ದಾಟುವಾಗ ಅಲ್ಪಸ್ವಲ್ಪ ಆಸಕ್ತಿ ಉಂಟಾದಾಗ " ಅಯ್ಯೋ ರಾಮ, ಇವೆಲ್ಲಾ ನಮಗೆ ಬಾಲ್ಯ-ಯೌವ್ವನದಲ್ಲೇ ತಿಳಿಯಬೇಕಾಗಿದ್ದ ಸಂಗತಿಗಳೆಂಬ ಅರಿವಾಗಿ ಪಶ್ಚಾತ್ತಾಪ ಪಡುವಂತಾಗುತ್ತದೆ.

ಇಪ್ಪತ್ತು-ನಲವತ್ತರ ನಡುವಿನ ಯುವಕ-ಯುವತಿಯರೇ , ನಿಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಿರಬೇಕೆಂಬ ಆಸೆ ನಿಮಗಿದೆಯಲ್ಲವೇ? ಕೇವಲ ಇಂಗ್ಳೀಶ್ ಕಾನ್ವೆಂಟ್ ಶಿಕ್ಷಣದಿಂದ  ನಿಮ್ಮ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆಂಬ ಭ್ರಮೆ ಬಿಡಿ.

ನಿಮ್ಮ ಮಕ್ಕಳು ಆರೋಗ್ಯವಂತರಾಗಿ, ದೃಢಕಾಯರಾಗಿ, ಗುಣವಂತರಾಗಿ, ಬುದ್ಧಿವಂತರಾಗಿ ಬೆಳೆಯಬೇಕೆಂದರೆ ಅದಕ್ಕೆ ಪೂರಕವಾದ ಹಲವಾರು ಮಾರ್ಗದರ್ಶೀ ಸೂತ್ರಗಳು ವೇದದಲ್ಲಿದೆ. ಶೋಡಷ ಸಂಸ್ಕಾರಗಳಿವೆಯಲ್ಲಾ ! ಅವುಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಸಂಸ್ಕಾರ ನೀಡುತ್ತಾ ಬನ್ನಿ, ನಿಮ್ಮ ಮಕ್ಕಳು  ಎಷ್ಟು ಚುರುಕಾಗಿ, ಗುಣವಂತರಾಗಿ, ಧೈರ್ಯವಂತರಾಗಿ, ಬುದ್ಧಿವಂತರಾಗಿ ಬೆಳೆಯುತ್ತಾರೆಂಬುದು ನಿಮಗೇ ಗೊತ್ತಾಗುತ್ತದೆ. ವಯಸ್ಸಿಗೆ ಬಂದಿರುವ  ಗಂಡು-ಹೆಣ್ಣುಗಳ ಸಾವಿರಾರು ಅಪ್ಪ-ಅಮ್ಮಂದಿರು   ಇಂದು  ಕಣ್ಣೀರಲ್ಲಿ ಕೈತೊಳೆಯುತ್ತಿರುವುದು ನಮ್ಮೆಲ್ಲರ ಕಣ್ಣು ತೆರಸಬೇಕು. ಮುಂದಿನ ದಿನಗಳಲ್ಲಿ  ಅಂತಾಸ್ಥಿತಿ ನಿಮಗೆ ಬರಬಾರದೆಂದರೆ ಈಗಿನಿಂದಲೇ ನಮ್ಮ ಋಷಿಮುನಿಗಳು ತಮ್ಮ ಸಾವಿರಾರು ವರ್ಷಗಳ ತಪ್ಪಸ್ಸಿನ ಫಲದಿಂದ, ಅನುಭವದ ಮೂಸೆಯಿಂದ ನಮಗೆ ಕೊಟ್ಟಿರುವ ಗ್ರಂಥಗಳನ್ನು ಓದುವ ,ಆಧ್ಯಾತ್ಮಿಕ ಉಪನ್ಯಾಸಗಳನ್ನು ಕೇಳುವ ಸ್ವಭಾವವನ್ನು ಬೆಳೆಸಿಕೊಳ್ಳಿ.ಅದು ಬಿಟ್ಟು  ಬೇರೆ ಮಾರ್ಗವೇ ಇಲ್ಲ.
ಇಂದಿನ ಈ ಸಿನೆಮಾಗಳು, ದಾರವಾಹಿಗಳ  ಸೆಳೆತಕ್ಕೆ ಸಿಲುಕಿ ಮುಂದಿನ ಭವಿಷ್ಯ ಹಾಳಾಗದಿರಲಿ.ಎಚ್ಚರ! ಎಚ್ಚರ!! ಎಚ್ಚರ!!!