Pages

Thursday, January 15, 2015

ವಿದ್ವಾಂಸರು ಪ್ರಾಪಂಚಿಕ ಜ್ಞಾನವನ್ನು ಜನರಿಗೆ ನೀಡುವುದರ ಜೊತೆಗೆ ಜನರು ಆಧ್ಯಾತ್ಮಿಕ ಉನ್ನತಿ ಸಾಧಿಸಲು ಅಗತ್ಯವಾದ ಜ್ಞಾನವನ್ನು ನೀಡಬೇಕು.


ವಿದ್ವಾಂಸರ ಕರ್ತವ್ಯದ ಬಗ್ಗೆ ಇರುವ ವೇದ ಮಂತ್ರಗಳ ಬಗ್ಗೆ ವಿಚಾರ ಮಾಡೋಣ.
ಸುತಾ ಅನು ಸ್ವಮಾ ರಜೋ ಭ್ಯರ್ಷಂತಿ ಬಭ್ರವಃ |
ಇಂದ್ರಂ ಗಚ್ಚಂತ ಇಂದವಃ ||
[ಋಗ್ವೇದ ಮಂಡಲ-೯ ಸೂಕ್ತ-೬೩ ಮಂತ್ರ-೬]
ಪದಾರ್ಥ :-
ಸ್ವಂ ಆ ರಜಃ ಅನು = ತನ್ನ ಶಕ್ತಿಯನ್ನು ಅನುಸರಿಸಿ
ಬಭ್ರವಃ = ಭರಣಪೋಷಣ ಮಾಡುವವರಾಗಿ
ಇಂದ್ರಮ್ ಗಚ್ಛಂತಃ = ಸರ್ವೇಶ್ವರನ ಬಳಿ ಸಾಗುತ್ತಾ
ಇಂದವಃ = ಕರುಣಾಮಯರು
ಸುತಾಃ = ಪವಿತ್ರರಾಗಿ
ಅಭಿ ಅರ್ಷಂತಿ = ಮುಂದೆ ಸಾಗುತ್ತಾರೆ
ಭಾವಾರ್ಥ :
ಕ್ರಿಯಾಶೀಲರಾದ ವಿದ್ವಾಂಸರು ತಮ್ಮ ಪೂರ್ಣ ಸಾಮರ್ಥ್ಯವನ್ನು ಬಳಸಿ ಇತರರ ಪೋಷಣೆ ಮಾಡುತ್ತಾ ಸಮಾಜದ ಸಂಪತ್ತನ್ನು ಉಳಿಸಿ ಬೆಳೆಸುತ್ತಾರೆ. ಮತ್ತು ಜಗತ್ತಿನ ಎಲ್ಲರನ್ನೂ ಶ್ರೇಷ್ಠರನ್ನಾಗಿ ಮಾಡುತ್ತಾರೆ. ಅಂತೆಯೇ ಸ್ವಾರ್ಥಭಾವನೆಯನ್ನು ನಾಶ ಮಾಡುತ್ತಾರೆ. ಈ ರೀತಿಯ ಕರುಣಾಮಯರೂ, ಪವಿತ್ರರೂ ಆದ ವಿವೇಕಿಗಳು ಭಗವಂತನ ಸಾಮೀಪ್ಯವನ್ನು ಪಡೆಯುತ್ತಾರೆ.
ಸಮಾಜದಲ್ಲಿ ಯಾವಾಗಲೂ ಹಾಗೆಯೇ, ಹೆಚ್ಚು ತಿಳಿದವನಿಗೆ ಹೆಚ್ಚು ಹೊಣೆ. ಇದು ಧರ್ಮ. ತನ್ನಲ್ಲಿರುವ ಸಾಮರ್ಥ್ಯವನ್ನು ವಿದ್ವಾಂಸನಾದವನು ತನ್ನಲಿಟ್ಟುಕೊಂಡು ಸುಮ್ಮನಾಗುವಂತಿಲ್ಲ. ತನ್ನ ಜ್ಞಾನವನ್ನು ಇತರರಿಗೆ ಹಂಚಿ ಸಾಮಾನ್ಯ ಜನರ ಶ್ರೇಯೋಭಿವೃದ್ಧಿಗೆ ಕಾರಣರಾದಾಗ ಒಬ್ಬ ವಿದ್ವಾಂಸನ  ಜ್ಞಾಕ್ಕೆ ಮಾತ್ರ ಬೆಲೆ. ಹಾಗಿಲ್ಲದೆ ಹತ್ತಾರು ಪದವಿಗಳನ್ನು ಪಡೆದಿದ್ದರೆ ಅದರಿಂದ ಏನೂ ಪ್ರಯೋಜನವಿಲ್ಲ. ಅಂತವನಿಗೆ ಸದ್ಗತಿಯೂ ಕೂಡ ಸಿಕ್ಕಲಾರದು. ವಿದ್ವಾಂಸನಾದವನು ತನ್ನ ಜ್ಞಾನವನ್ನು ಹಂಚುತ್ತಾ ಸಮಾಜದ ಉನ್ನತಿಗೆ ಕಾರಣ ನಾಗುತ್ತಾ ಇಡೀ ವಿಶ್ವದ ಜನರನ್ನು ಶ್ರೇಷ್ಠರನ್ನಾಗಿ ಮಾಡಬೇಕೆಂದು ವೇದವು ವಿದ್ವಾಂಸನಾದವನಿಗೆ ಕರೆ ಕೊಡುತ್ತದೆ. ಅಂತವನಿಗೆ ಸದ್ಗತಿ ಪ್ರಾಪ್ತಿಯಾಗುತ್ತದೆ.
ಮತ್ತೊಂದು ಮಂತ್ರವೂ ಈ ವಿಚಾರವನ್ನೇ ಒತ್ತಿ ಹೇಳುತ್ತದೆ.

ಅಯಾ ಪವಸ್ಯ ಧಾರಯಾ ಯಯಾ ಸೂರ್ಯಮರೋಚಯಃ |
ಹಿನ್ವಾನೋ ಮಾನುಷೀರಪಃ || [ಋಗ್ವೇದ ಮಂಡಲ-೯ ಸೂಕ್ತ-೬೩ ಮಂತ್ರ-೭]
ಪದಾರ್ಥ :-
ಯಯಾ ಧಾರಯಾ = ಯಾವ ವಚನದಿಂದ
ಮಾನುಷೀಃ ಅಪಃ = ಮಾನವೀಯ ಪ್ರಜೆಗಳನ್ನು
ಹಿನ್ವಾನಃ = ಪ್ರೇರಿಸುತ್ತಾ
ಸೂರ್ಯಮ್ = ಪ್ರಗತಿಶೀಲನನ್ನು
ಅರೋಚಯಃ = ಬೆಳಗಿಸುತ್ತೀಯೋ
ಅಯಾ ಧಾರಯಾ = ಆ ವಚನದಿಂದ
ಪವಸ್ವ = ಮುನ್ನಡೆಸು
ಭಾವಾರ್ಥ :
ಯಾವ ವಚನಗಳಿಂದ ಜನರಿಗೆ ಪ್ರೇರಣೆ ಸಿಗಬಲ್ಲದೋ ಅಂತಹ ವಚನಗಳಿಂದ ವಿದ್ವಾಂಸರು  ಜನರನ್ನು   ಪ್ರೇರಿಸುತ್ತಾ ಮುನ್ನಡೆಸಬೇಕೆಂಬುದು ವೇದದ ಕರೆ.ಇದು ವೇದದ ಆದೇಶ ಕೂಡ. ಜ್ಞಾನವನ್ನು ಪಡೆದು ಒಬ್ಬ ವಿದ್ವಾಂಸನು ಸುಮ್ಮನಿರುವಂತಿಲ್ಲ. ಪಡೆದ  ಜ್ಞಾನವನ್ನು ಜನರಿಗೆ ಹಂಚಬೇಕು.
ಇನ್ನೊಂದು ಮಂತ್ರವನ್ನು ನೋಡೋಣ.
ಅಯುಕ್ತ ಸೂರ ಏತಶಂ ಪವಮಾನೋ ಮನಾವಧಿ |
ಅಂತರಿಕ್ಷೇಣ ಯಾತವೇ || [ಋಗ್ವೇದ ಮಂಡಲ-೯ ಸೂಕ್ತ-೬೩ ಮಂತ್ರ-೮]

ಪದಾರ್ಥ:
ಪವಮಾನಃ ಸೂರಃ = ಪವಿತ್ರಕಾರಕನಾದ ಪ್ರೇರಕನು
ಮನೌ ಅಧಿ = ಮಾನವ ಸಮಾಜದಲ್ಲಿ
ಅಂತರಿಕ್ಷೇಣ ಯಾತವೇ = ಆಂತರಿಕ ಮಾರ್ಗದಿಂದ ಹೋಗಲು
ಏತಶಮ್ = ಗತಿಸಾಧನವನ್ನು
ಅಯುಕ್ತ = ಹೊಂದಿಸಿಕೊಳ್ಳಬೇಕು
ಭಾವಾರ್ಥ :
ಇಲ್ಲಿ ವಿದ್ವಾಂಸರುಗಳಿಗೆ ವೇದವು ಕೊಡುವ ಕರೆಯನ್ನು ಗಮನಿಸ ಬೇಕು. ಒಬ್ಬ ವಿಚಾರಶೀಲನು ಪ್ರಾಪಂಚಿಕ ಜ್ಞಾನವನ್ನು ಜನರಿಗೆ ನೀಡುವುದರ ಜೊತೆಗೆ ಜನರು ಆಧ್ಯಾತ್ಮಿಕ ಉನ್ನತಿ ಸಾಧಿಸಲು ಅಗತ್ಯವಾದ ಜ್ಞಾನವನ್ನು ನೀಡಬೇಕು.
ಏನಾದರೂ ಇನ್ನೊಬ್ಬರಿಗೆ  ಕೊಡಬೇಕಾದರೆ ಅವನಲ್ಲಿ ಅದು ಮೊದಲು ಇರಬೇಕು ತಾನೇ? ಇಲ್ಲದಿದ್ದುದನ್ನು ಕೊಡುವುದಾದರೂ ಹೇಗೆ? ಆದ್ದರಿಂದ ಪಂಡಿತನಾದವನು ಮೊದಲು ತಾನು ಆತ್ಮೋನ್ನತಿಯ ಮಾರ್ಗದಲ್ಲಿ ಸಾಧನೆಯನ್ನು ಮಾಡಿ ಉಳಿದ ಜನರಿಗೂ ಆಧ್ಯಾತ್ಮಿಕ ಉನ್ನತಿ ಸಾಧಿಸಲು ಅಗತ್ಯವಾದ ಜ್ಞಾನವನ್ನು ನೀಡಬೇಕು.
ಇಂದು ನಾವು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಪಡೆಯುತ್ತಿರುವ ವಿದ್ಯೆಯ ಪರಿಣಾಮ ಏನಾಗಿದೆ! ಎಂಬುದನ್ನು ಇಲ್ಲಿ ಸ್ವಲ್ಪ ವಿಚಾರಮಾಡಬೇಡವೇ? ನಮ್ಮ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ  ಮಗುವನ್ನು ಅದರ ಮೂರನೇ ವಯಸ್ಸಿನಲ್ಲಿಯೇ  ಎಲ್.ಕೆ.ಜಿ ಎಂಬ ತರಗತಿಗೆ ತಳ್ಳಲಾಗುತ್ತದೆ. ಆಗಿನಿಂದಲೇ ಅದರ ಸ್ವಾತಂತ್ರ್ಯ ಹರಣವಾಗುತ್ತದೆ. ಬಲವಂತದ ವಿದ್ಯೆ ತುಂಬಿ ಸತತವಾಗಿ ಇಪ್ಪತ್ತು ವರ್ಷಗಳ ಕಾಲ ಆ ಮಗುವಿಗೆ ವಿದ್ಯೆಯ ಹೆಸರಲ್ಲಿ ಅದಕ್ಕೆ ಇಚ್ಚೆ ಇರಲಿ ಬಿಡಲಿ ತುರುಕುತ್ತಾ ಅಂತೂ ಆ ಮಗು ಬೆಳೆದು ಒಬ್ಬ ವೈದ್ಯನೋ, ಸಾಫ್ಟ್ ವೇರ್ ಇಂಜಿನಿಯರೋ ಆದರೆ ಅಪ್ಪ-ಅಮ್ಮನ ಜನ್ಮ ಸಾರ್ಥಕ ಎಂದುಕೊಳ್ಳುತ್ತೇವೆ. ಆದರೆ ಸಾಮಾಜಿಕ ಕಾರ್ಯಕರ್ತನಾದ ನಾನು ಹಲವು ಮನೆಯಲ್ಲಿ ಅಪ್ಪ ಅಮ್ಮನ ಸಂಕಟವನ್ನೂ ಗಮನಿಸಿರುವೆ.
  ೨೫ ವರ್ಷ ವಯಸ್ಸಿನ ಮಗನ ನಡವಳಿಕೆ,ಸ್ವಭಾವ,ಮಾತುಕತೆ ಗಮನಿಸಿದಾಗ ಅಪ್ಪ-ಅಮ್ಮನಿಗೆ ಚಿಂತೆ ಶುರುವಾಗುತ್ತದೆ.ಯಾಕೋ ನನ್ನ ಮಗನ ನಡವಳಿಕೆಯೇ ವಿಚಿತ್ರವಾಗಿದೆಯಲ್ಲಾ! ಆಫೀಸ್‌ಗೆ ಹೋಗುತ್ತಾನೆ, ಮನೆಗೆ ಬಂದರೆ ಟಿ.ವಿ ಅಥವಾ ಕಂಪ್ಯೂಟರ್ ಮುಂದೆ ಕುಳಿತು ಬಿಟ್ಟರೆ ಅವನಿಗೆ ಪ್ರಪಂಚವೇ ಬೇಡವಾಗಿದೆಯಲ್ಲಾ! ಜೀವನದಲ್ಲಿ ಸ್ಪೂರ್ತಿಯೇ ಇಲ್ಲವಲ್ಲಾ! ಜೀವಂತಿಕೆಯೇ ಇಲ್ಲವಲ್ಲಾ!
ಈ ಪರಿಸ್ಥಿತಿ ಯಾರದೋ ಒಂದು ಮನೆಯದ್ದಲ್ಲ. ಬಹುಪಾಲು ತಂದೆತಾಯಿಯರ ಸಂಕಟ ಇದೇ ಆಗಿದೆ. ಯಾಕೆ ಹೀಗೆ? ನಮ್ಮ ಶಿಕ್ಷಣವ್ಯವಸ್ಥೆಯಲ್ಲಿ ಮಗುವಿನೊಳಗಿನ ಚೈತನ್ಯವನ್ನು ಜಾಗೃತ ಮಾಡುವ ವ್ಯವಸ್ಥೆಯೇ ಇಲ್ಲ. ಮೇಲಿನಿಂದ ತುರುಕುತ್ತಾ ಇದ್ದೇವೆ, ಅಷ್ಟೆ. ಮೆಲಿನ ಒತ್ತಡಗಳ  ಪರಿಣಾಮ ಒಳಗಿನ ಚೈತನ್ಯವು ಕಮರಿ ಹೋಗುತ್ತಿದೆಯಲ್ಲಾ!!
ಇಂತಾ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿನ ನಮ್ಮ ಪಂಡಿತರನ್ನು[?] ವಿದ್ವಾಂಸರೆನಲು ಸಾಧ್ಯವೇ? ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಅವರು ಯಾವ ಭಾಷಾಪಂಡಿತರೇ ಇರಲಿ, ವಿಜ್ಞಾನದ ಪಂಡಿತರೇ ಇರಲಿ ಅವರನ್ನು ವೇದದ ಆಶಯದಂತೆ ವಿದ್ವಾಂಸರೆಂದು ಕರೆಯಲು ಬಹುಪಾಲು ಜನರು  ಅರ್ಹರಲ್ಲ.
ಮೇಲಿನ ಮಂತ್ರಗಳಲ್ಲಿ ವಿದ್ವಾಂಸನ ಕರ್ತವ್ಯದ ಬಗ್ಗೆ ಸೂಚಿಸುತ್ತಲೇ ಇನ್ನೂ ಮುಂದುವರೆದಂತೆ ಕರ್ತವ್ಯದ ವ್ಯಾಪ್ತಿಯನ್ನು ಇನ್ನೂ ಹೆಚ್ಚುಗೊಳಿಸುವುದನ್ನು ಮುಂದಿನ ಮಂತ್ರದಲ್ಲಿ ನಾವು ತಿಳಿಯಬಹುದಾಗಿದೆ.
ಉತ ತ್ಯಾ ಹರಿತೋ ದಶ ಸೂರೋ ಆಯುಕ್ತ ಯಾತವೇ |
ಇಂದುರಿಂದ್ರ ಇತಿ ಬ್ರುವನ್ ||[ಋಗ್ವೇದ ಮಂಡಲ-೯ ಸೂಕ್ತ-೬೩ ಮಂತ್ರ-೯]

ಪದಾರ್ಥ:
ಸೂರಃ ಇಂದುಃ = ಪ್ರೇರಣಾದಾಯಕನಾದ ಕರುಣಾಮಯನು
ಇಂದ್ರಃ = ಭಾಗ್ಯಶಾಲಿಯಾಗಿ
ಉತ =ಮತ್ತು
ಇತಿ ಬ್ರುವನ್ = ಹೀಗೆಯೇ ಉಪದೇಶ ಮಾಡುತ್ತಾ
ಯಾತವೇ = ಮುಂದುವರೆಯುವುದಕ್ಕಾಗಿ
ತ್ಯಾ ದಶ ಹರಿತಃ = ಆ ಹತ್ತು ದಿಕ್ಕುಗಳಲ್ಲಿ ಇರುವ ಆಕರ್ಷಣೀಯ ಪ್ರಜೆಗಳನ್ನು
ಅಯುಕ್ತ = ನಿಯೋಜಿಸಬೇಕು
ಭಾವಾರ್ಥ :
ವಿಚಾರಶೀಲನಾದ ಮಾನವನು ಐಶ್ವರ್ಯಶಾಲಿಯೂ, ಭಾಗ್ಯಶಾಲಿಯೂ, ದಯಾಮಯನೂ ಆಗಿರಬೇಕು. ಜನರಿಗೆ ಉಪದೇಶಮಾಡುತ್ತಾ ಹತ್ತು ದಿಕ್ಕುಗಳಲ್ಲೂ ವಾಸಿಸುವ ಪ್ರಜೆಗಳನ್ನು ಉನ್ನತಿಯ ಮಾರ್ಗದಲ್ಲಿ ನಿಯೋಜಿಸಬೇಕು.
ಜ್ಞಾನವನ್ನು ಪಡೆದಂತೆಲ್ಲಾ ಅವನ ಸಾಮಾಜಿಕಪ್ರಜ್ಞೆ ಹೇಗೆ ಹೆಚ್ಚುತ್ತಾ ಹೋಗಬೇಕೆಂಬುದಕ್ಕೆ ಈ ಮಂತ್ರದಲ್ಲಿ ನಿಖರವಾದ ಸಂದೇಶವಿದೆ.  ಒಬ್ಬ ವಿದ್ವಾಂಸನು ತನ್ನ ಪಾಂಡಿತ್ಯದಿಂದ ಐಶ್ವರ್ಯಶಾಲಿಯೂ, ಭಾಗ್ಯಶಾಲಿಯೂ, ಆಗುವುದರ ಜೊತೆಗೆ ಅವನು  ದಯಾಮಯನೂ ಆಗಿರಬೇಕು, ಹಾಗೂ ಎಲ್ಲಾ ದಿಕ್ಕುಗಳಲ್ಲಿರುವ ಜನರಲ್ಲೂ ಆತ್ಮೋನ್ನತಿಗಾಗಿ ತನ್ನನ್ನು ತೊಡಗಿಸಿಕೊಳ್ಳಬೇಕೆಂದು  ಈ ಮಂತ್ರವು ವಿದ್ವಾಂಸರಿಗೆ ಕರೆಕೊಡುತ್ತದೆ.
-ಹರಿಹರಪುರಶ್ರೀಧರ್

Tuesday, January 13, 2015

ಒಂದು ಸಾವಿರ ಜನರಿಂದ ಸಾಮೂಹಿಕ ಅಗ್ನಿಹೋತ್ರ

ಹಾವೇರಿ  ಸಮೀಪ ಮಲಗುಂದದಲ್ಲಿ ಪೂಜ್ಯ ಚಿದ್ರೂಪಾನಂದಸರಸ್ವತೀ ಸ್ವಾಮೀಜಿಯವರ ಆಶ್ರಮದಲ್ಲಿ  ದಿನಾಂಕ 10.2.2015 ರಂದು ಒಂದು ಸಾವಿರ ಜನರಿಂದ ಸಾಮೂಹಿಕ ಅಗ್ನಿಹೋತ್ರ ನಡೆಯಲಿದ್ದು ಆಸಕ್ತರು ಪಾಲ್ಗೊಳ್ಳಲು ಅವಕಾಶವಿದೆ. ಹಾಸನದಿಂದ ಸುಮಾರು ಒಂದು ನೂರು ವೇದಾಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ದಿನಾಂಕ 9.2.2015 ರಂದು ಸೋಮವಾರ ರಾತ್ರಿ 12.30 ಕ್ಕೆ ಹಾಸನದಿಂದ ರೈಲಿನಲ್ಲಿ ಹೊರಟು 10.2.2015 ಬೆಳಿಗ್ಗೆ 6.00 ಕ್ಕೆ  ಹಾವೇರಿ ತಲುಪಿ, ಅಲ್ಲಿಂದ ಆಶ್ರಮದ ಬಸ್ ಗಳಲ್ಲಿ  ಕಾರ್ಯಕ್ರಮ ಸ್ಥಳಕ್ಕೆ ಕರೆದುಕೊಂಡು ಹೋಗುವ ವ್ಯವಸ್ಥೆ ಇರುತ್ತದೆ. ಅಂದೇ ರಾತ್ರಿ 10.30 ಕ್ಕೆ ಹಾವೇರಿಯಿಂದ ರೈಲಿನಲ್ಲಿ ಹೊರಟು ಬೆಳಿಗ್ಗೆ 4.30 ಕ್ಕೆ ಹಾಸನಕ್ಕೆ ಹಿಂದಿರುಗಬಹುದಾಗಿದೆ. ಆಸಕ್ತರು ರೈಲಿನಲ್ಲಿ ಹೋಗಿಬರುವ  ಪ್ರಯಾಣದ ಖರ್ಚು ಒಬ್ಬರಿಗೆ  ರೂ 400.00 ನ್ನು ದಿನಾಂಕ 15.1.2015 ರೊಳಗೆ ಹರಿಹರಪುರಶ್ರೀಧರ್, ಮೊಬೈಲ್ ನಂಬರ್-9663572406,  ಈಶಾವಾಸ್ಯಮ್, ಶಕ್ತಿ ಗಣಪತಿ ದೇವಾಲಯ ರಸ್ತೆ, ಹೊಯ್ಸಳನಗರ, ಹಾಸನ-ಇವರಿಗೆ ತಲುಪಿಸಿ ಅಗ್ನಿಹೋತ್ರಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದಾಗಿರುತ್ತದೆ.
ಈ ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ ಆಸಕ್ತರು ಪಾಲ್ಗೊಳ್ಳಲು    ಅವಕಾಶವಿದ್ದು ಪಾಲ್ಗೊಳ್ಳ  ಬಯಸುವವರು ಮೇಲ್ಕಂಡ ನನ್ನ ಮೊಬೈಲ್ ಗೆ ಕರೆಮಾಡಿ ತಿಳಿಸಲು ಕೋರುವೆ. ಮೇಲೆ ತಿಳಿಸುವ ರೈಲು ಮೈಸೂರು-ಧಾರವಾಡ ಟ್ರೈನ್ ಆಗಿದ್ದು ಅದು  ರಾತ್ರಿ 10.30 ಕ್ಕೆ ಮೈಸೂರು ಬಿಟ್ಟು ರಾತ್ರಿ 12.30ಕ್ಕೆ ಹಾಸನ ತಲುಪುತ್ತದೆ.ಅದೇ ರಲಿನಲ್ಲಿ ಹಾಸನದಿಂದ ನಾವು ನೂರು ಜನರು ಹೊರಟು ಹಾವೇರಿಯನ್ನು ಬೆಳಿಗ್ಗೆ 6.00 ಕ್ಕೆ ತಲುಪುತ್ತೇವೆ. ಅಲ್ಲಿಂದ ಆಶ್ರಮದ ಬಸ್ ನಲ್ಲಿ ಮಲಗುಂದಕ್ಕೆ ಹೋಗುವ ವ್ಯವಸ್ಥೆ ಎಲ್ಲರಿಗೂ ಇದೆ.
ಬೆಂಗಳೂರಿನಿಂದ ಹಾಗೂ ಉಳಿದ ನಗರಗಳಿಂದಲೂ ಹಾವೇರಿಗೆ ರೈಲು ವ್ಯವಸ್ಥೆ ಇದೆ. ಹಾವೇರಿಯಿಂದ ಆಶ್ರಮದ ವ್ಯವಸ್ಥೆಯಲ್ಲಿ ಮಲಗುಂದ ಕ್ಕೆ ಹೋಗ ಬೇಕೆಂದರೆ ಬೆಳಿಗ್ಗೆ 6.00 ಗಂಟೆಗೆ ಹಾವೇರಿ ತಲುಪಿರಬೇಕು. ಸಮಯ ವೆತ್ಯಾಸದಲ್ಲಿ ಹಾವೇರಿ ತಲುಪಿದರೆ ಹಾವೇರಿಯಿಂದ  ಅಕ್ಕಿಆಲೂರಿಗೆ KSRTC ಬಸ್ ನಲ್ಲಿ ಬಂದು ಅಲ್ಲಿಂದ ಆಟೋರಿಕ್ಷಾದಲ್ಲಿ ಮಲಗುಂದ ಆಶ್ರಮ ತಲುಪಬಹುದು.

ಸಾಮೂಹಿಕ ಅಗ್ನಿಹೋತ್ರಕ್ಕೆ ಪೂರ್ವ ಸಿದ್ಧತೆಯಾಗಿ ಹಾಸನದ ವೇದ ಭಾರತಿಯು ನಿತ್ಯವೂ ಸಂಜೆ 6.00 ರಿಂದ 7.00 ರವರಗೆ ನಡೆಸುವ ಸತ್ಸಂಗದಲ್ಲಿ ಆನ್ ಲೈನ್ ನಲ್ಲಿ ಪಾಲ್ಗೊಳ್ಲಲು ಅವಕಾಶವಿದೆ.ಆಸಕ್ತರು vedasudhe@gmail.com ಗೆ ಮೇಲ್ ಕಳಿಸಿ ಮಾಹಿತಿ ಪಡೆಯಬಹುದು.




Friday, January 9, 2015

ಸಿರಿಭೂವಲಯ ಒಂದು ಖಚಿತವಾದ ಸರಳ ಪರಿಚಯ

 ಒಂದು ಖಚಿತವಾದ ಸರಳ ಪರಿಚಯ
ಗ್ರಂಥದ ಮೂಲ ವಾರಸುದಾರರು: ದೊಡ್ಡಬೆಲೆ ಧರಣೆಂದ್ರ ಪಂಡಿತರು
ಗ್ರಂಥ ಸಂರಕ್ಷಕರು:  ಪಂ. ಯಲ್ಲಪ್ಪ ಶಾಸ್ತ್ರಿ
ಗ್ರಂಥ ಸಂಶೋಧಕರು: ಕರ್ಲಮಂಗಲಂ ಶ್ರೀಕಂಠಯ್ಯ
ಗ್ರಂಥ ಪ್ರಚಾರಕರು: ಕೆ. ಅನಂತಸುಬ್ಬರಾಯ
ಅಕ್ಷರ ಆವೃತಿಯ ಮೊದಲ ಪ್ರಕಾಶಕರು: ಸರ್ವಾರ್ಥಸಿದ್ಧಿಸಂಘ ಬೆಂಗಳೂರು
ನಾಡಿನ ಹೆಸರಾಂತ ವಿದ್ವಾಂಸರ ಸಂಪಾದಕ ಮಂಡಳಿಯ ನೆರವಿನೊಂದಿಗೆ
ಭಾಗಶಃ ಪರಿಷ್ಕೃತ ಮರುಮುದ್ರಣ: ಪುಸ್ತಕಶಕ್ತಿಪ್ರಕಾಶನ ಬೆಂಗಳೂರು.
ಪ್ರಥಮಖಂಡದ ೫೯ ಅಧ್ಯಾಯಗಳ ಸರಳ ಪರಿಚಯಕಾರ: ಸಿರಿಭೂವಲಯದ ಸುಧಾರ್ಥಿ
ಸರಳ ಪರಿಚಯಕೃತಿಗಳ ಪ್ರಕಟಣೆ: ಶ್ರೀಮತಿ ಗಿರಿಜಾಶಂಕರ ಹಾಲುವಾಗಿಲು.
ಸಿರಿಭೂವಲಯಕ್ಕೆ ಸಂಬಂಧಿಸಿದ ಮಾಹಿತಿಗಳಿರುವಜಾಗ:
ಗೂಗಲ್ಸ್, ವಿಕಿಪಿಡಿಯ ಸೇರಿದಂತೆ ಹಲವಾರು ಅಂತರ್ಜಾಲ ತಾಣಗಳು
ಸಿರಿಭೂವಲಯದ ಸಂಶೋಧನೆಯ ಮಾಹಿತಿಗಳಿಗೇ ಮೀಸಲಾದ ತಾಣ:
Siribhuuvalayasaa.blogspot.in
*   *   *
  ಆತ್ಮೀಯ ಕನ್ನಡಾಭಿಮಾನಿಗಳೇ.
  ಜಗತ್ತಿನ ಸಾಹಿತ್ಯಕ್ಷೇತ್ರದಲ್ಲಿ ಕನ್ನಡದವೇದ ಎಂದು ಪರಿಗಣಿಸಬೇಕಾದ ಸಿರಿಭೂವಲಯವನ್ನು ಕುರಿತಂತೆ ಈಗಾಗಲೇ ನಿಮಗೆ ಈ ಅಂತರ್ಜಾಲತಾಣದಲ್ಲಿ ಸಾಕಷ್ಟು ಮಾಹಿತಿಗಳನ್ನು ಒದಗಿಸಲಾಗಿದೆ. ಇದರೊಂದಿಗೆ ವಿವಿಧಮೂಲದಿಂದಲೂ  ನೀವು ಮಾಹಿತಿಗಳನ್ನು ತಿಳಿದಿರುವುದು ಸಹಜ.  ಪ್ರಾರಂಭದಿಂದಲೂ ಈ ಗ್ರಂಥದ ವಿಚಾರವಾಗಿ ಇಲ್ಲದ ಇತಿಹಾಸ ಸೃಷ್ಟಿಸುವ ದಿಸೆಯಲ್ಲಿ ಹಲವಾರು ಅಸಹಜ ಸಂಗತಿಗಳು ಪ್ರಚಾರವಾಗಿರುವುದರ ಕಾರಣ ಸಾಮಾನ್ಯ ಓದುಗರಿರಲೀ; ಈ ಅಚ್ಚರಿಯ ಕೃತಿಯನ್ನು ಕುರಿತು ಮುಂದೆ ಪ್ರಾಮಾಣಿಕವಾಗಿ ಸಂಶೋಧನೆ ಮಾಡಬಯಸುವ ಪ್ರತಿಭಾಶಾಲಿಗಳನ್ನೂ ದಿಕ್ಕುಗೆಡಿಸುವ ಗೊಂದಲದ ಮಾಹಿತಿಗಳು ಅಂತರ್ಜಲತಾಣದಲ್ಲಿ ವ್ಯಾಪಕವಾಗಿ ಬೆಳಕುಕಂಡವು.
   ವಿವೇಕಶಾಲಿಗಳ ಸಮಂಜಸವಾದ ತರ್ಕಕ್ಕೆ ಸಿಲುಕದಂತೆ ಅಂತೆ ಕಂತೆ ಗಳ ಅಡ್ಡಗೋಡೆಯಮೇಲಿನ ದೀಪದಂಥ ಅಲ್ಲಿನ ಮಾಹಿತಿಗಳಿಂದಾಗಿ ಯಾವುದನ್ನು ನಂಬುವುದು; ಯಾವುದನ್ನು ನಿರಾಕರಿಸುವುದು!? ಎಂಬುದೇ ಹಲವರಿಗೆ ಸಮಸ್ಯೆಯಾಗಿ ಪರಿಣಮಿಸಿತ್ತು! ಇದರೊಂದಿಗೆ ಜೈನ ಸಂಪ್ರದಾಯ ಹಾಗೂ ವೈದಿಕ ಸಂಪ್ರದಾಯಗಳ ನಡುವೆ ಬೆಳೆದುಬಂದಿರುವ ಶ್ರೇಷ್ಠತೆಯ ಮೇಲಾಟದಲ್ಲಿ ಈ ಕೃತಿಯು ಬಲಿಪಶುವಾಗಿತ್ತು. ಈ ಎರಡೂ ಸಂಪ್ರದಾಯದ ವಿದ್ವಾಂಸರೂ ತಮ್ಮದೇ ಆದ ಕಾರಣಗಳಿಂದಾಗಿ ಈ ಅಚ್ಚರಿಯ ಅಂಕಕಾವ್ಯವನ್ನು ಆಧುನಿಕ ಕನ್ನಡ ಸಾಹಿತ್ಯ ಪರಿಸರದಲ್ಲಿ ಸುಮಾರು ೬೦ ವರ್ಷಗಳಕಾಲ ಕತ್ತಲಕೋಣೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದರು. ಸಿರಿಭೂವಲಯ ಎಲ್ಲಿದೆ? ಕುಮುದೇಂದು ಮುನಿಯಾರು? ಸಿರಿಭೂವಲಯದಲ್ಲಿ ಏನಿದೆ ಮಣ್ಣು? ಎಂದು ಪ್ರಶ್ನಿಸುತ್ತಿದ್ದ ವಿದ್ವಾಂಸರು ಈಗ ಪರಿತಪಿಸುವಂತಾಗಿದೆ!
   ಈಗ ಪರಿಸರ ಪೂರ್ಣ ಬದಲಾಗಿದೆ. ಕುಮುದೇಂದುಮುನಿಯ ಸಿರಿಭೂವಲಯಕ್ಕೆ ಸಂಬಂಧಿಸಿದ ಅಧಿಕೃತವಾದ ಖಚಿತ ಮಾಹಿತಿಗಳನ್ನು ಒಳಗೊಂಡಂತೆ ಪ್ರಥಮ ಖಂಡದ ಸರಳ ಪರಿಚಯ ರೂಪದಲ್ಲಿ ನಿರೂಪಿತವಾದ ಒಂಬತ್ತು ಕೃತಿಗಳು ಹಾಗೂ ಇವುಗಳ ಹಿಂದಿ ಹಾಗೂ ಆಂಗ್ಲಾಭಾಷೆಯ ಭಾವಾನುವಾದವು ಮೇಲೆ ಸೂಚಿಸಿದ ದಿಕ್ಕುಗೆಡಿಸುವ ಗೊಂದಲದ ಪರಿಸರವನ್ನು ಯಶಸ್ವಿಯಾಗಿ ಬದಲಿಸಿದೆ. (ಹಿಂದಿ ಭಾವಾನುವಾದ: ಶ್ರೀ ರಾಮಣ್ಣ ಹಾಸನ ; ಆಂಗ್ಲಾಭಾವಾನುವಾದ: ಶ್ರೀ ಕವಿ ಸುರೇಶ್ ಶಿವಮೊಗ್ಗ)  ಕಳೆದ ೩೦ ವರ್ಷಗಳಿಂದ ನಡೆದುಬಂದಿರುವ ನಿರಂತರವಾದ ಅಧ್ಯಯನವು ಈ ಬದಲಾವಣೆಗೆ ಪ್ರಮುಖ ಕಾರಣವಾಗಿದೆ.
 
  ಕುಮುದೇಂದುಮುನಿಯ ಸಿರಿಭೂವಲಯವು ಆಧುನಿಕ ವಿದ್ವಾಂಸರ ದೃಷ್ಟಿಯಲ್ಲಿ ಎಷ್ಟೇ ಅನಾದಣೆಗೆ ಗುರಿಯಾದರೂ ಇದು ಕನ್ನಡಭಾಷೆಯ ಮಾನಸ್ತಂಬ! ಕನ್ನಡಭಾಷೆಯ ಪ್ರಾಚೀನತೆ ಹಾಗೂ ಪ್ರಬುದ್ಧತೆಯನ್ನು ಪ್ರತಿಪಾದಿಸಲು ಇರುವ ಏಕೈಕ ಜೀವಂತ ದಾಖಲೆ!!

   ತನ್ನದೇ ಆದ ತಾಂತ್ರಿಕ ಕಾರಣದಿಂದಾಗಿ ಈ ಗ್ರಂಥವು ಓದುಗರಿಗೆ ಬಹಳ ಕಠಿಣವಾದ ಕಾವ್ಯವೆನಿಸಿದರೂ ಇದೊಂದು ಜಗತ್ತಿನ ಜ್ಞಾನಭಂಡಾರ. ಆಧುನಿಕ ವಿಜ್ಞಾನದ ಎಲ್ಲರೀತಿಯ ತಂತ್ರಜ್ಞಾನದ ಮಾಹಿತಿಯೂ ಇದರಲ್ಲಿ ಅಡಕವಾಗಿವೆ. ಯಾರೊಬ್ಬರೂ ನಾಶಪಡಿಸಲಾಗದ ೩೬೩ ಮತಧರ್ಮಗಳ ವಿವರಗಳು ಇದರಲ್ಲಿ ಸಮಾವೇಶವಾಗಿವೆ. ೧೨೦೦ ವರ್ಷಗಳ ಹಿಂದಿನ ಜಾಗತಿಕ ಪರಿಸರದಲ್ಲಿ ಪ್ರಚಲಿತವಿದ್ದ ೭೧೮ಭಾಷೆಗಳ ಸಾಹಿತ್ಯ ಸಾಗರವು ಈ ಗ್ರಂಥದಲ್ಲಿ ಅಡಕವಾಗಿದೆ. ಇದನ್ನು ಅಲ್ಲಗಳೆಯಲು ಈಗ ಯಾಗಿಗೂ ಸಾಧ್ಯವಿಲ್ಲವಾಗಿದೆ!

  ಸರ್ವಭಾಷಾಮಯೀಭಾಷಾ ಕನ್ನಡ ವರ್ಣಮಾಲೆಯ ೬೪ ಅಕ್ಷರಗಳಿಗೆ ಅನ್ವಯವಾಗುವ ೧ ರಿಂದ ೬೪ ಅಂಕಿಗಳನ್ನು ಉದ್ದಸಾಲು ೨೭ ; ಅಡ್ಡಸಾಲು ೨೭ ರಂತೆ ಒಂಟ್ಟು ೭೨೯ ಚೌಕಗಳಲ್ಲಿ ಸೂತ್ರಬದ್ಧವಾಗಿ ತುಂಬಿಸಿ ರಚಿಸಲಾಗಿರುವ  ಈ ಅಂಕಕಾವ್ಯವನ್ನು ಓದಲು ಸುಮಾರು ೪೦ ಬಂಧಗಳಿವೆ. ೬೦೦೦ ಸೂತ್ರಗಳನ್ನು ಬಳಸಿ ಈ ಅಂಕಕಾವ್ಯವನ್ನು ರಚಿಸಲಾಗಿದೆ. ನೂರುಸಾವಿರ ಲಕ್ಷಕೋಟಿ ಶ್ಲೋಕಗಳ ವ್ಯಾಪ್ತಿಯಲ್ಲಿರುವ  ೭೧೮ ಭಾಷೆಗಳಿಗೆ ಸೇರಿದ ಸಕಲ ಸಾಹಿಯ್ಯವನ್ನೂ ಒಳಗೊಂಡ ಈ ಕಾವ್ಯದ ಮೂಲ ಕನ್ನಡ ಸಾಂಗತ್ಯ ಪದ್ಯಗಳ ಒಟ್ಟು ಸಂಖ್ಯೆ: ಆರುಲಕ್ಷ! ಇದರಲ್ಲಿ ೬೦೦೦ ಪ್ರಶ್ನೆಗಳಿಗೆ ಉತ್ತರವಿದೆಯೆಂದು ಕವಿಯು ಘೋಷಿಸಿದ್ದಾನೆ. ಕಾವ್ಯವು ೯ ಖಂಡಗಳಾಗಿ ವಿಂಗಡಣೆಯಾಗಿದೆ. ಪ್ರತಿಯೊಂದು ಖಂಡದಲ್ಲಿಯೂ ಹಲವಾರು ಅಧ್ಯಾಯಗಳು ಇರುತ್ತವೆ. ಮಂಗಳಪ್ರಾಭೃತವೆಂದು ಹೆಸರಿರುವ ಪ್ರಥಮಖಂಡದಲ್ಲಿ ೫೯ ಅಧ್ಯಾಯಗಳಿವೆ.

  ಸಿರಿಭೂವಲಯದ ಪ್ರಥಮಖಂಡದ ೫೯ ಅಧ್ಯಾಯಗಳಿಗೆ ಸಂಬಂಧಿಸಿದಂತೆ ಸೀಮಿತ ಪರಿಧಿಯಲ್ಲಿ ಸಾಧ್ಯವಿರುವ ಮಾಹಿತಿಗಳನ್ನು ಸಂಗ್ರಹಿಸಿ, ಅಂತರ್ಸಾಹಿತ್ಯವನ್ನು ಬಿಡಿಸಿ; ೭ ಸರಳ ಪರಿಚಯಕೃತಿಗಳ ನಿರೂಪಣೆ ಮಾಡಿದ್ದಾಗಿದೆ. ಈಗ ಇವುಗಳ ಪೈಕಿ ಕೆಲವು ಲಭ್ಯವಿಲ್ಲ. ಇದನ್ನು ಗಮನಿಸಿ ಜನಸಾಮಾನ್ಯ ಓದುಗರ ಅಗತ್ಯಕ್ಕೆ ಬೇಕಾದ ಮಾಹಿತಿಗಳನ್ನು ಒಂದೆಡೆ ಸಂಗ್ರಹಿಸಿ ಜಗತ್ತಿನ ಹತ್ತನೇ ಅಚ್ಚರಿ ಎಂಬ ಪರಿಚಯಕೃತಿಯನ್ನು ರೂಪಿಸಲಾಗಿದೆ. ಸಿರಿಭೂವಲಯಕ್ಕೆ ಸಂಬಂಧಿಸಿದಂತೆ ಇದೊಂದು ಉಪಯುಕ್ತ ಕೈಪಿಡಿ. ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಸಾಮಾನ್ಯ ಓದುಗರಿಗಾಗಿ ಸಂಕ್ಷಿಪ್ತ ಸಿರಿಭೂವಲಯ ಎಂಬ ಕಿರುಹೊತ್ತಿಗೆಯನ್ನೂ ಹೊರತರಲಾಗಿದೆ.  ಸಿರಿಭೂವಲಯದ ಅಂತರ್ಸಾಹಿತ್ಯದ ಮೂಲಕ ಹೆಚ್ಚಿನ ಸಂಶೋಧನೆ ಮಾಡುವ ಆಸಕ್ತಿ ಹೊಂದಿರುವವರು ಜಗತ್ತಿನ ಹತ್ತನೇ ಅಚ್ಚರಿಯೊಂದಿಗೆ ಸಿರಿಭೂವಲಯಸಾರ, ಸಿರಿಭೂವಲಯಸಾಗರರತ್ನಮಂಜೂಷ, ಸಿರಿಭೂವಲಯ ಸಾಗರರತ್ನಮಂಜೂಷ, ೨. ಇವುಗಳನ್ನು ಪೂರ್ಣವಾಗಿ ಗಮನಿಸುವುದು ಅಗತ್ಯವಾಗಿದೆ.

  ಅಶ್ವಗತಿ ಹಾಗೂ ಸ್ತಂಬಕಾವ್ಯರೂಪದಲ್ಲಿ ದೊರೆತಿರುವ ಪ್ರಾಕೃತ; ಸಂಸ್ಕೃತ; ಕನ್ನಡ ಹಾಗೂ ಇತರ ಹಲವಾರು ಭಾಷೆಗಳ ಅಂತರ್ಸಾಹಿತ್ಯವನ್ನು ಕ್ರಮಬದ್ಧವಾಗಿ ಒಂದೆಡೆ ಸಂಗ್ರಹಿಸಿ; ಅವುಗಳನ್ನು ವಿಶ್ಲೇಷಿಸುವ ಕಾರ್ಯವನ್ನು ಸಂಬಂಧಿಸಿದ ಭಾಷಾ ವಿಶಾರದರು ಆಸಕ್ತಿವಹಿಸಿ ಮಾಡಬೆಕಿದೆ.
 
  ಆತ್ಮೀಯ ಓದುಗರೇ, ಇದುವರೆವಿಗೂ ನೀವು ಈ ಜಗದ ಅಚ್ಚರಿಯೆನಿಸಿರುವ ಕುಮುದೇಂದುಮುನಿಯ ಸರ್ವಭಾಷಾಮಯೀಭಾಷಾ ಸಿರಿಭೂವಲಯದ ಸರಳ ಪರಿಚಯ ಕೃತಿಗಳಿಗೆ ಸಂಬಂಧಿಸಿದ ಪ್ರಮುಖವಾದ ಮಾಹಿತಿಗಳನ್ನು  ಓದಿ ತಿಳಿದಂತಾಯಿತು. ಈ ಕಾವ್ಯದಲ್ಲಿ ಕವಿಯು ಒಂದೆಡೆ ವಿದ್ಯೆಯನ್ನು ಕಲಿಯಲು ೧೨ ವರ್ಷಗಳಕಾಲ ಏಕೆ? ಇಲ್ಲಿ ಬನ್ನಿ ಒಂದು ಅಂತರ್ಮುಹೂರ್ತದಲ್ಲಿ (ಸುಮಾರು ೪೭ ನಿಮಿಷಗಳ ಅವಧಿ) ಎಲ್ಲವನ್ನೂ ತಿಳಿಸಿಕೊಡುತ್ತೇನೆ! ಎಂದು ಘೋಷಿಸಿರುವುದಿದೆ! ಜಗತ್ತಿನ ಜ್ಞಾನ ಸಾಗರದಲ್ಲಿ ಇದೊಂದು ಸವಾಲಾಗಿದೆ!
 
  ಪಂಡಿತರಿರಲೀ; ಪಾಮರರಿರಲೀ ಯಾರೊಬ್ಬರೂ ಈ ಮಾತನ್ನು ತಕ್ಷಣವೇ ಒಪ್ಪಿಕೊಳ್ಳ್ಳುವುದಿಲ್ಲವೆಂಬುದು ನಿಶ್ಚಯ!! ಈ ಜಗತ್ತಿನಲ್ಲಿ ವ್ಯಕ್ತಿಜೀವನದ ಸೂಕ್ಷ್ಮ ಮರ್ಮವನ್ನು ಅರಿತವರು ಮಾತ್ರ ಇದನ್ನು ಒಪ್ಪಿಕೊಳ್ಳಲು ಸಾಧ್ಯ!! ಸಿರಿ; ಸಂಪತ್ತು; ಸೌಂದರ್ಯ, ಸಾಮರ್ಥ್ಯ, ಅಧಿಕಾರ, ಆರೋಗ್ಯ, ವಿದ್ಯೆ; ಬುದ್ಧಿ, ಮುಂತಾದುವು ಇಲ್ಲದೇ ಇಹಜೀವನದಲ್ಲಿ ಸಾರ್ಥಕತೆ ಸಿಗದೆಂಬುದು ಬಹುಜನರ ಭಾವನೆ! ಈ ಭಾವನೆಯು ಅರೆ ಸತ್ಯ; ಅರೆ ಮಿಥ್ಯ! ಇವುಗಳು ದೇಹಕ್ಕೆ ಬೇಕು; ಆತ್ಮಕ್ಕೆ ಬೇಡ!
 
  ಜಗತ್ತಿನ ಸೃಷ್ಟಿಸ್ಥಿತಿಲಯಗಳ ಸಮರ್ಪಕವಾದ ಜ್ಞಾನವನ್ನು ಹೊಂದುವುದೇ ನಿಜವಾದ ಜೀವನ ಸಾರ್ಥಕತೆಯಾಗಿದೆ. ಈ ಪರಿಚಯಕೃತಿಯನ್ನು ಓದಲು ನೀವು ತೆಗೆದುಕೊಳ್ಳುವ ಸಮಯವು ಎಷ್ಟೇ ಇರಲೀ; ನಿಮ್ಮ ಗ್ರಹಿಕೆಗೆ ಸಿಕ್ಕಿದ ವಿಚಾರಗಳನ್ನು ಕುರಿತು ನೀವು ಕೆಲವು ಸಮಯವಾದರೂ ಯೋಚಿಸಿದರೆ ನಿಮಗೆ ಕೂಡಲೇ ಜಗತ್ತಿನ ಸೃಷ್ಟಿಸ್ಥಿತಿಲಯಗಳ ಸಮರ್ಪಕವಾದ ಜ್ಞಾನವು ಅನುಭವಕ್ಕೆ ಬರುತ್ತದೆ. ಈ ಯೋಚನೆಯ ಅವಧಿಯು ನಿಜಕ್ಕೂ ೪೭ ನಿಮಿಷಗಳನ್ನು ಮೀರುವುದಿಲ್ಲ! ಇದು ನನ್ನ ಸ್ವಾನುಭವ. ಅಲ್ಲಿಗೆ ಕವಿವಾಣಿಯು ಸತ್ಯವೆಂದು ನನಗೆ ಖಚಿತವಾಯಿತು.! ನೀವೂ ಇದನ್ನು ಪರೀಕ್ಷಿಸಲು ಸ್ವತಂತ್ರರಿದ್ದೀರಿ!

  ವೈಯಕ್ತಿಕವಾಗಿ ನನಗೆ ಈ ಸತ್ಯದರ್ಶನವಾಗುವ ದಿಸೆಯಲ್ಲಿ ಕಾರಣವಾದ ಕುಮುದೇಂದು ಸಹಿತವಾದ ಸಕಲ ಪ್ರಾಚೀನ ಋಷಿ ಮುನಿಗಳಿಗೆ; ಸಿರಿಭೂವಲಯಕ್ಕೆ; ನನ್ನನ್ನು ಈ ಸಿರಿಭೂವಲಯದ ಪರಿಧಿಗೆ ಒತ್ತಾಯ ಪೂರ್ವಕವಾಗಿ ಸೇರಿಸಿದ ಹಿರಿಯ ಚೇತನ ದಿ| ಕೆ. ಅನಂತ ಸುಬ್ಬರಾಯರಿಗೆ, ಅಧ್ಯಯನಕ್ಕೆ ನೆರವಾಗಿ; ಈ ಸಂಬಂಧದ ನನ್ನ ಬರಹವನ್ನು ಪ್ರಕಟಿಸುವ ಊಹಾತೀತವಾದ ಕಾರ್ಯಕ್ಕೆ ಕೈಹಾಕಿ ಯಶಸ್ಸುಗಳಿಸಿದ ನನ್ನಾಕೆ ಸೌ|| ಗಿರಿಜೆಗೆ; ಈ ಫಲವನ್ನು ಸಾರ್ಥಕ ಪಡಿಸಿಕೊಳ್ಳ್ಳುವ ಉತ್ಸಾಹ ತೋರಿಸಿರುವ ಅಭಿಮಾನೀ ಓದುಗರಿಗೆ ಸಿರಿಭೂವಲಯದ ಸುಧಾರ್ಥಿಯ ನಮನಗಳು.

   ಸಿರಿಭೂವಲಯವು ಇದುವರೆವಿಗೂ ಕೇವಲ ಕೆಲವೇ ಜನಗಳ ಆಸಕ್ತಿಯ ವಿಚಾರವಾಗಿತ್ತು. ಈಗ ಪಸರಿಸರವು ಸಂಪೂರ್ಣವಾಗಿ ಬದಲಾಗಿದೆ! ವೈದ್ಯಕೀಯ; ವಿದ್ಯುತ್, ಗಣಕಯಂತ್ರಕ್ರಮ; ಗಣಿತಶಾಸ್ತ್ರ ಮುಂತಾದ ಬೇರೆ ಬೇರೆ ಕ್ಷೇತ್ರಗಳಲ್ಲಿ ವಿಶ್ವವಿದ್ಯಾಲಯಗಳ ಪದವಿ ಪಡೆದ ಪ್ರತಿಭಾಶಾಲಿ  ಯುವ ಸಮೂಹವು ಈಗ ಈ ಜಗದ ಅಚ್ಚರಿಯತ್ತ ಗಮನಹರಿಸಿ; ಮುಂದಿನ ಸಂಶೋಧನೆಗೆ ಅಗತ್ಯವಾದ ಸಿದ್ಧತೆಗೆ ಮುಂದಾಗಿದೆ! ಈ ಪೈಕಿ ಕಾರ್ಕಳದ ಸಮೀಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಶ್ರೀ ಹೇಮಂತ ಕುಮಾರ್ ಹಾಗೂ ಮಿತ್ರರ ತಂಡವು ವಹಿಸಿರುವ ಆಸಕ್ತಿಯು ಬಹಳ ಸಂತೋಷದಾಯಕವಾದುದು. ಇವರ ಪ್ರಯತ್ನದಿಂದ ಈ ಪ್ರಾಚೀನ ಕನ್ನಡ ಅಂಕ ಕಾವ್ಯದ ಊಹಾತೀತವಾದ ಸಾಮರ್ಥ್ಯದ ಪರಿಚಯವು ಜಗತ್ತಿನಾದ್ಯಂತ ವಿದ್ವಜ್ಜನರ ಗಮನಸೆಳೆದು; ಕವಿ ಕುಮುದೇಂದುವಿನ ಸರ್ವಜ್ಞತ್ವವು ಲೋಕವಿದಿತವಾಗುವುದು ನಿಶ್ಚಿತವೆಂದು ಭಾವಿಸಿದ್ದೇನೆ.  ಸಿರಿಭೂವಲಯದ ವಿಸ್ತ್ರುತ ಪರಿಚಯಕೃತಿ  ಜಗತ್ತಿನ ಹತ್ತನೇ ಅಚ್ಚರಿ ಹಾಗೂ ಸಂಕ್ಷಿಪ್ತ ಸಿರಿಭೂವಲಯವು ಮುಂದಿನ ಸಂಕ್ರಾತಿಯ ವೇಳೆಗೆ ಓದುಗರ ಕೈಸೇರಲಿದೆಯೆಂದು ತಿಳಿಸಲು ಸಂತೋಷಿಸುತ್ತೇನೆ.
                                             ಸಿರಿಭೂವಲಯದ ಸುಧಾರ್ಥಿ.

ಹೆಚ್ಚಿನ ಮಾಹಿತಿಗಳಿಗೆ ಸಂಪರ್ಕಿಸಿರಿ: ೯೪೪೯೯೪೬೨೮೦, ೦೮೧೭೨ ೨೫೭೧೮೬.
ಮಿಂಚಂಚೆ: sudharthyhassan@gmail.com

Wednesday, January 7, 2015

ವಿಶ್ವದ ಅಭ್ಯುದಯಕ್ಕಾಗಿ ವೇದ"

ಇಷ್ಟಂತೂ ಸತ್ಯ. ನಮ್ಮ ದೇಶದಲ್ಲಿ ವೇದವನ್ನು ಎಲ್ಲದಕ್ಕೂ ಆಧಾರವೆಂದು ಹೇಳುತ್ತಲೇ ನೂರಾರು ದಾರ್ಶನಿಕರು ಅವರು ಕಂಡ   ಸತ್ಯವನ್ನು ಪ್ರತಿಪಾದಿಸುತ್ತಾ ಅಂತೂ ಇಂತೂ ವೇದದ ಸುತ್ತ ಮುತ್ತವೇ ಸುತ್ತುತ್ತಾ,  ವೇದದ ವಿರುದ್ಧವಾಗಿಯೂ ನಡೆಯುತ್ತಾ ನಮ್ಮ ಋಷಿಮುನಿಗಳು ಕೊಟ್ಟ   ವಿಚಾರವನ್ನು ಅವರಿಗೆ ತೋಚಿದ  ರೀತಿಯಲ್ಲಿ ಉಳಿಸಿದರು.  ಉಳಿಸಿದರೆನ್ನುವುದಕ್ಕಿಂತಲೂ  ವೇದವು ಅದರ ಗಟ್ಟಿತನದಿಂದ ಉಳಿದಿದೆ. ಇನ್ನು ಮುಂದೆಯೂ ಉಳಿಯುತ್ತದೆ.ಕಾರಣ  ಅದು ಸಾರ್ವಕಾಲಿಕ ಸತ್ಯ. ಶಂಕರ,ಮಧ್ವ,ರಾಮಾನುಜ,ಬಸವಣ್ಣ, ಬುದ್ಧ,ಮಹಾವೀರ, ಗುರುನಾನಕ್ ಅಲ್ಲದೆ ಇತ್ತೀಚಿನ ವಿವೇಕಾನಂದ, ಡಾ.ಅಂಬೇಡ್ಕರ್ ವರಗೆ ಎಲ್ಲರೂ ಕೊಟ್ಟ ವಿಚಾರಗಳು ನಶಿಸಿದರೂ ವೇದವು  ನಶಿಸಲು ಸಾಧ್ಯವೇ ಇಲ್ಲ.ಕಾರಣ ಅದು ಸಾರ್ವಕಾಲಿಕ, ಸಾರ್ವಭೌಮ, ಸಾರ್ವತ್ರಿಕ ಮತ್ತು ಸಾರ್ವದೇಶಿಕ. ಹಿಂದುಗಳಿಗೆ ಮಾತ್ರ ವೇದ ಸಂಬಂಧಿಸಿದ್ದೆಂಬ ತಪ್ಪು ಕಲ್ಪನೆ ಇದೆ. ಆದರೆ ವೇದವು ಸಕಲ ಮಾನವರಿಗಾಗಿ ಇದೆ.ಅದನ್ನು ಮರೆತಿರುವ ಪರಿಣಾಮವೇ ಈಗಿನ ಭಯೋತ್ಪಾದನೆ, ಮತೀಯ ಕಲಹ...ಎಲ್ಲವೂ ಕೂಡ. ಇವೆಲ್ಲ ಸಂಘರ್ಷಗಳಿಗೂ ಪರಿಹಾರ ಸಿಗಲು  ಮತ್ತೆ ವೇದವೇ ಗತಿ. ನಮ್ಮ ವೇದ ಪಂಡಿತರು ಕೇವಲ ಪೂಜೆ-ಪುನಸ್ಕಾರಗಳು, ಹವನ ಹೋಮಗಳು, ಶ್ರಾದ್ಧಕರ್ಮಗಳು, ವ್ರತ ಕತೆಗಳಿಗೆ ಸೀಮಿತವಾಗದೆ ವೇದದ ಒಳಹೊಕ್ಕಿ ನೋಡುವ ಕಾಲ ಬಂದಿದೆ. ಆ ಕೆಲಸ ಎಷ್ಟು ಬೇಗ ಶುರುವಾಗುತ್ತದೋ ಅಷ್ಟು ಬೇಗ ಇಡೀ ವಿಶ್ವದ ಅಭ್ಯುದಯಕ್ಕೆ     ಅಗತ್ಯವಾದ ಎಲ್ಲಾ ಮಾರ್ಗದರ್ಶನವೂ ಸಿಗುವುದರಲ್ಲಿ ಸಂಶಯವಿಲ್ಲ. ಈಗ ವೇದ ವಿದ್ವಾಂಸರನ್ನು ಎಚ್ಚರಿಸುವವರು ಬೇಕಾಗಿದ್ದಾರೆ. ಮೋದಿಯವರ ಸರ್ಕಾರವೂ ಕೂಡ  ಈ ಬಗ್ಗೆ ಚಿಂತನೆ ನಡೆಸಬೇಕು." ವಿಶ್ವದ ಅಭ್ಯುದಯಕ್ಕಾಗಿ ವೇದ"  ಗುರಿಯೊಡನೆ  ರಭಸದ ಕೆಲಸವಾಗಬೇಕು. ನನಗೆಲ್ಲೋ ಹುಚ್ಚು ಅಂತೀರಾ? ಪರವಾಗಿಲ್ಲ. ಈ ಹುಚ್ಚನ್ನು ವಿದ್ವಾಂಸರಿಗೆ ಹಿಡಿಸುವ ಕೆಲಸವನ್ನು ಮಾಡಿ.

Tuesday, January 6, 2015

ಹಾಸನ ವೇದಭಾರತೀ,ಸಹಕಾರದೊಡನೆ ರಾಜ್ಯದಲ್ಲಿಯೇ ಮೊದಲ ಬಾರಿಗೆ ಒಂದು ಸಾವಿರ ಜನರ ಸಾಮೂಹಿಕ ಅಗ್ನಿಹೋತ್ರ




ಹಾವೇರಿ  ಸಮೀಪ ಮಲಗುಂದದಲ್ಲಿ ಪೂಜ್ಯ ಚಿದ್ರೂಪಾನಂದಸರಸ್ವತೀ ಸ್ವಾಮೀಜಿಯವರ ಆಶ್ರಮದಲ್ಲಿ  ದಿನಾಂಕ 10.2.2015 ರಂದು ಒಂದು ಸಾವಿರ ಜನರಿಂದ ಸಾಮೂಹಿಕ ಅಗ್ನಿಹೋತ್ರ ನಡೆಯಲಿದ್ದು ಆಸಕ್ತರು ಪಾಲ್ಗೊಳ್ಳಲು ಅವಕಾಶವಿದೆ. ಹಾಸನದಿಂದ ಸುಮಾರು ಒಂದು ನೂರು ವೇದಾಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ದಿನಾಂಕ 9.2.2015 ರಂದು ಸೋಮವಾರ ರಾತ್ರಿ 12.30 ಕ್ಕೆ ಹಾಸನದಿಂದ ರೈಲಿನಲ್ಲಿ ಹೊರಟು 10.2.2015 ಬೆಳಿಗ್ಗೆ 6.00 ಕ್ಕೆ  ಹಾವೇರಿ ತಲುಪಿ, ಅಲ್ಲಿಂದ ಆಶ್ರಮದ ಬಸ್ ಗಳಲ್ಲಿ  ಕಾರ್ಯಕ್ರಮ ಸ್ಥಳಕ್ಕೆ ಕರೆದುಕೊಂಡು ಹೋಗುವ ವ್ಯವಸ್ಥೆ ಇರುತ್ತದೆ. ಅಂದೇ ರಾತ್ರಿ 10.30 ಕ್ಕೆ ಹಾವೇರಿಯಿಂದ ರೈಲಿನಲ್ಲಿ ಹೊರಟು ಬೆಳಿಗ್ಗೆ 4.30 ಕ್ಕೆ ಹಾಸನಕ್ಕೆ ಹಿಂದಿರುಗಬಹುದಾಗಿದೆ. ಆಸಕ್ತರು ರೈಲಿನಲ್ಲಿ ಹೋಗಿಬರುವ  ಪ್ರಯಾಣದ ಖರ್ಚು ಒಬ್ಬರಿಗೆ  ರೂ 400.00 ನ್ನು ದಿನಾಂಕ 15.1.2015 ರೊಳಗೆ ಹರಿಹರಪುರಶ್ರೀಧರ್, ಮೊಬೈಲ್ ನಂಬರ್-9663572406,  ಈಶಾವಾಸ್ಯಮ್, ಶಕ್ತಿ ಗಣಪತಿ ದೇವಾಲಯ ರಸ್ತೆ, ಹೊಯ್ಸಳನಗರ, ಹಾಸನ-ಇವರಿಗೆ ತಲುಪಿಸಿ ಅಗ್ನಿಹೋತ್ರಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದಾಗಿರುತ್ತದೆ.
ಈ ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ ಆಸಕ್ತರು ಪಾಲ್ಗೊಳ್ಳಲು    ಅವಕಾಶವಿದ್ದು ಪಾಲ್ಗೊಳ್ಳ  ಬಯಸುವವರು ಮೇಲ್ಕಂಡ ನನ್ನ ಮೊಬೈಲ್ ಗೆ ಕರೆಮಾಡಿ ತಿಳಿಸಲು ಕೋರುವೆ. ಮೇಲೆ ತಿಳಿಸುವ ರೈಲು ಮೈಸೂರು-ಧಾರವಾಡ ಟ್ರೈನ್ ಆಗಿದ್ದು ಅದು  ರಾತ್ರಿ 10.30 ಕ್ಕೆ ಮೈಸೂರು ಬಿಟ್ಟು ರಾತ್ರಿ 12.30ಕ್ಕೆ ಹಾಸನ ತಲುಪುತ್ತದೆ.ಅದೇ ರಲಿನಲ್ಲಿ ಹಾಸನದಿಂದ ನಾವು ನೂರು ಜನರು ಹೊರಟು ಹಾವೇರಿಯನ್ನು ಬೆಳಿಗ್ಗೆ 6.00 ಕ್ಕೆ ತಲುಪುತ್ತೇವೆ. ಅಲ್ಲಿಂದ ಆಶ್ರಮದ ಬಸ್ ನಲ್ಲಿ ಮಲಗುಂದಕ್ಕೆ ಹೋಗುವ ವ್ಯವಸ್ಥೆ ಎಲ್ಲರಿಗೂ ಇದೆ.
ಬೆಂಗಳೂರಿನಿಂದ ಹಾಗೂ ಉಳಿದ ನಗರಗಳಿಂದಲೂ ಹಾವೇರಿಗೆ ರೈಲು ವ್ಯವಸ್ಥೆ ಇದೆ. ಹಾವೇರಿಯಿಂದ ಆಶ್ರಮದ ವ್ಯವಸ್ಥೆಯಲ್ಲಿ ಮಲಗುಂದ ಕ್ಕೆ ಹೋಗ ಬೇಕೆಂದರೆ ಬೆಳಿಗ್ಗೆ 6.00 ಗಂಟೆಗೆ ಹಾವೇರಿ ತಲುಪಿರಬೇಕು. ಸಮಯ ವೆತ್ಯಾಸದಲ್ಲಿ ಹಾವೇರಿ ತಲುಪಿದರೆ ಹಾವೇರಿಯಿಂದ  ಅಕ್ಕಿಆಲೂರಿಗೆ KSRTC ಬಸ್ ನಲ್ಲಿ ಬಂದು ಅಲ್ಲಿಂದ ಆಟೋರಿಕ್ಷಾದಲ್ಲಿ ಮಲಗುಂದ ಆಶ್ರಮ ತಲುಪಬಹುದು.

ನೀನು ನನ್ನೊಳಗೇ ಇದ್ದೀಯ

ಭಗವಂತನೆಂಬುವನು ಒಬ್ಬನೇ. ಅದೂ ಕೂಡ ಒಂದು ಶಕ್ತಿಯ ರೂಪದಲ್ಲಿ. ಅವನು   ಗಂಡೂ ಅಲ್ಲ.ಹೆಣ್ಣೂ ಅಲ್ಲ. ಆದರೂ ಭಗವಂತನನ್ನು ಪುಲ್ಲಿಂಗ ರೂಪದಲ್ಲಿ ಕರೆಯುವುದು ರೂಢಿಯಲ್ಲಿ ಬಂದಿದೆ.  ಅವನಿಗೆ  ದೇಹವೇ ಇಲ್ಲ. ಅದೊಂದು ಶಕ್ತಿ -ವಿದ್ಯುತ್  ಇದ್ದಂತೆ. ವಿದ್ಯುತ್ ಗೆ ಆಕಾರ ಹೇಗಿರಲು ಸಾಧ್ಯ?  ಕಣ್ಣಿಗೆ  ಕಾಣುವ ಮೋಟಾರ್,ಜನರೇಟರ್, ವಿದ್ಯುತ್ ದೀಪಗಳನ್ನೇ  ವಿದ್ಯುತ್ ಎಂದು ಕರೆದರೆ ಸರಿಯೇ? ವಿದ್ಯುತ್ ಪ್ರಭಾವದಿಂದ ಓಡುವ ಮೋಟಾರ್ ನ್ನು  ನೋಡಬಹುದೇ ಹೊರತೂ ವಿದ್ಯುತ್ ನ್ನು ನೋಡಲು ಸಾಧ್ಯವಿಲ್ಲ. ಅಲ್ಲವೇ?
ಹಾಗೆಯೇ ಭಗವಚ್ಛಕ್ತಿ ಕೂಡ. ಅವನ ನಿಯಂತ್ರಣಕ್ಕೊಳಪಟ್ಟ ಜಗತ್ತನ್ನು ಕಾಣಬಹುದೇ ಹೊರತೂ ಅವನನ್ನು ನೋಡಲು ಸಾಧ್ಯವೇ ಇಲ್ಲ.  ನಮಗೆ    ಶರೀರವಿದೆ. ಅದರ ಚಿತ್ರವನ್ನೂ ಬರೆಯಬಹುದು. ಆದರೆ ಇಲ್ಲದ ಶರೀರದ ಚಿತ್ರ ಬರೆಯುವುದಾದರೂ ಹೇಗೆ? ಆದರೂ ಭಗವಂತನ ಹಲವಾರು ಕ್ರಿಯೆಗಳನ್ನು ಬಿಂಬಿಸುವ ರೂಪವನ್ನು ಕಲ್ಪಿಸಿ  ವಿಗ್ರಹಗಳನ್ನು ಶಿಲ್ಪಿಯೊಬ್ಬ ಕೆತ್ತಿದ. ವಿದ್ವಾಂಸನೊಬ್ಬ ಭಗವಂತನ ಲೀಲಾ ಪ್ರಸಂಗಗಳನ್ನು ಸ್ತೋತ್ರ ರೂಪದಲ್ಲಿ ಬರೆದ. ಆ ವಿಚಿತ್ರ ಶಕ್ತಿಯನ್ನು ಆರಾಧಿಸಿದ.ಆ ಪರಂಪರೆ ಮುಂದುವರೆಸಿದ. ಎಲ್ಲಿಯವರೆಗೆ ವಿಗ್ರಹಗಳು ಬಂದು ತಲುಪಿದೆಯೆಂದರೆ ಕ್ರಿಕೆಟ್ ಆಡುವ ಗಣಪನ ಮೂರ್ತಿಯನ್ನೂ ಸಹ ಇಂದು ಕಾಣಬಹುದು.ಕ್ರಿಕೆಟ್ ಗಣಪನಿಗೆ ಅಭಿಶೇಕ, ನೈವೇದ್ಯ, ಮಂಗಳಾರತಿ…ಎಲ್ಲವೂ ನಡೆಯುತ್ತವೆ!!!
ವೇದವು  ಸಾಮಾನ್ಯ  ಜನರಿಗೆ ಅರ್ಥವಾಗುವುದಿಲ್ಲ-ಎಂಬ ಸಬೂಬು ಹೇಳಿ ಪಂಡಿತರುಗಳೇ  ಕತೆಗಳನ್ನು ಕಟ್ಟಿ ವಿಗ್ರಹಾರಾಧನೆಯನ್ನು ವೈಭವೀಕರಿಸಿದರು. ಮನುಷ್ಯನ ನೆಮ್ಮದಿಯ ಜೀವನಕ್ಕೆ ಅಗತ್ಯವಾದ ಮಾಹಿತಿಗಳು ವೇದದಲ್ಲಿರುವುದನ್ನು ಸಾಮಾನ್ಯ ಜನರಿಗೆ ಪರಿಚಯಿಸಲೆ ಇಲ್ಲ! ಬದಲಿಗೆ ಭಗವಂತನ ಸ್ತೋತ್ರಗಳನ್ನು ಹೇಳುವ , ಅವನ ಹೆಸರಲ್ಲಿ ಸಹಸ್ರನಾಮಗಳನ್ನು ಪಠಿಸುವ ಪದ್ದತಿಗಳನ್ನು ಹುಟ್ಟುಹಾಕಿದರು. ನಾನೊಮ್ಮೆ ಚಿನ್ಮಯಾ ಮಿಷನ್ನಿನ ಆಶ್ರಮ ಒಂದಕ್ಕೆ ಹೋಗಿದ್ದೆ. ಅಲ್ಲಿ ಪೂಜೆ ಮಾಡುವಾಗ ಹೇಳುವ ಚಿನ್ಮಯಾನಂದರ ಸಹಸ್ರನಾಮ ಕೇಳಿ ಅಚ್ಚರಿ ಗೊಂಡೆ.ಸಹಸ್ರನಾಮ ದಲ್ಲಿ ಒಂದು ನಾಮ ಏನು ಗೊತ್ತೆ? “ ಓಂ ಆಂಗ್ಲಭಾಷಾಪ್ರವೀಣಾಯೈ ನಮಃ” ಈ ಸಹಸ್ರನಾಮ ಅರ್ಚನೆ ಕೇಳಿದಾಗ ನಗು ಬರುವುದಿಲ್ಲವೇ? ಚಿನ್ಮಯಾನಂದರು ಭಗವದ್ಗೀತೆಯ ಸಾರವನ್ನು ಪ್ರಚುರಪಡಿಸುತ್ತಾ ಹೋದರೆ ಅವರ ಅನುಯಾಯಿಗಳು ಚಿನ್ಮಯ ಸಹಸ್ರನಾಮ ಪ್ರಚುರಪಡಿಸುತ್ತಿದ್ದಾರಲ್ಲಾ!!
ಹಿಂದುಗಳನ್ನು ನೋಡಿ ನೋಡಿ ಇತ್ತೀಚೆಗೆ ಕ್ರೈಸ್ತರೂ ಶುರುಮಾಡಿದರು “ ಜೀಸಸ್ ಸಹಸ್ರನಾಮ” ಹೀಗೆಯೇ ಮುಂದುವರೆದರೆ ಎಲ್ಲಾ ರಾಜಕೀಯ ನಾಯಕರು, ಸಿನೆಮಾ ನಟರುಗಳ ಸಹಸ್ರನಾಮ ಬರಲು ಕಾಲ ದೂರವಿಲ್ಲ.
ಇದೇನು! ಭಗವಂತನ ವಿಚಾರದಲ್ಲಿ ಹುಡುಕುವ ನಮ್ಮ ದಿಕ್ಕು ಸರಿ ಇದೆಯೇ? ಹೀಗೊಂದು ಚಿಂತನೆ ನನ್ನ ಮನದಲ್ಲಿ ಹೊಕ್ಕಾಗ….
ಎಲ್ಲಿ ಹುಡುಕಲಿ ನಿನ್ನ
ನಾ ಹೇಗೆ ಅರ್ಚಿಸಲಿ
ಯಾವ ಮಂತ್ರವ ಹೇಳಿ
ನಿನ್ನ ಮೆಚ್ಚಿಸಲಿ?
ಭಗವಂತನನ್ನು  ಹುಡುಕುತ್ತಾ ಹೊರಟಾಗ ಬಂದ ಪ್ರಶ್ನೆಗಳು. “ಭಗವಂತಾ, ನಿನ್ನನ್ನು ಎಲ್ಲಿ ಹುಡುಕಲಿ? ಎಲ್ಲಿದ್ದೀಯಾ ನೀನು? ನಿನ್ನನ್ನು ನಾನು ಹೇಗೆ ಆರಾಧಿಸಲಿ? ಯಾವ ಮಂತ್ರವನ್ನು ಹೇಳಿ ನಿನ್ನನ್ನು ನನ್ನವನನ್ನಾಗಿ ಮಾಡಿಕೊಳ್ಳಲಿ?

ನನ್ನಂತೆ ನಿನಗೂ
ಮಡಿಯಮಾಡಿಸಿ ನಾನು
ಹಸಿದು ಪೂಜೆಯ ಮಾಡಿ
ಪಡಿಯ ನಿಡುವೆ|

ನನ್ನ ಹುಚ್ಚುತನ ನೋಡು.ನಾನು ಸ್ನಾನ ಮಾಡುವುದು ಅನಿವಾರ್ಯ. ಆದರೆ ನಿನಗೂ ಮಾಡಿಸುವ ಭ್ರಮೆ ನನ್ನದು. ನಿತ್ಯಶುದ್ಧನಾದ ನಿನಗೆ ಮಡಿಯ ಮಾಡಿಸುವ ಭ್ರಮೆ ನನ್ನದು!! ನಾನು ಹಸಿವಿನಿಂದ ಇದ್ದು ನಿನಗೆ ನೈವೇದ್ಯ ಮಾಡುವ ಹುಚ್ಚು ನನಗೆ! ನಿನಗೆಲ್ಲಿಯ ಹಸಿವು? ನಿನಗೆ ನಾನು ತಿನ್ನಿಸಿಯಾಯ್ತೇ?

ಕಣ್ಮುಚ್ಚಿ ಕುಳಿತಿರುವ ನಿನ್ನ
ದೇಗುಲದೀ ಹುಡುಕಿ
ಕಾಣಲಾಗದೆ ಬಂದೆ
ಎಲ್ಲಿರುವೆ ತಂದೆ?

ಭಗವಂತಾ, ಕಣ್ಣು ಮುಚ್ಚಿ ಕುಳಿತಿರುವ ನಿನ್ನ ವಿಗ್ರಹವನ್ನೇ ನೋಡಿ ಭ್ರಮಿಸಿದ ನನಗೆ ನಿನ್ನ ಪ್ರತ್ಯಕ್ಷ ದರ್ಶನ ಆಗಲೆ ಇಲ್ಲವಲ್ಲಾ! ಹೇಳು ಎಲ್ಲಿದ್ದೀಯಾ?

ಜಗವೆಲ್ಲ ಬೆಳಗುತ್ತ
ಜಗವ ರಕ್ಷಿಪ ನಿನ್ನ
ಹಣತೆಬೆಳಕಲಿ ಹುಡುಕಿ
ದೇಗುಲದಿ ಕೂಡಿಡುವೆ|

ಜಗತ್ತಿಗೆಲ್ಲಾ ಬೆಳಕು ಕೊಡುವ ನೀನು ಸ್ವಯಂ ಪ್ರಕಾಶ. ನಿನ್ನನ್ನು ಪುಟ್ಟ ಹಣತೆಯ ಬೆಳಕಿನಲ್ಲಿ ಹುಡುಕುವ ನನ್ನ ಹುಚ್ಚುತನಕ್ಕೆ ಏನು ಹೇಳಲಿ? ಜಗತ್ತೆಲ್ಲವನ್ನೂ ರಕ್ಷಿಸುವವನೇ ನೀನು, ನಿನಗೊಂದು ಗುಡಿ ಕಟ್ಟಿಸುವ ನನ್ನ ಹುಚ್ಚುತನ ನೋಡು. ನನ್ನ ಸಂತೋಷಕ್ಕೆ ನಾನು ಏನು ಬೇಕಾದರೂ ಮಾಡಿಕೊಳ್ಳಬಹುದು.ಆದರೆ ನಾನು ಹೇಳುವುದು ನಿನ್ನ ಹೆಸರನ್ನು! ನಿನಗೆ  ಮನೆ ಇಲ್ಲವಂತೆ! ಅದಕ್ಕೆ ಗುಡಿ ಕಟ್ಟಿಸಬೇಕಂತೆ!!

ಬಲ್ಲವರು ಹೇಳಿದರು
ಎಲ್ಲೆಲ್ಲು ನೀನಿರುವೆ
ಅಹುದೇ ದೇವ ತೋರು
ನಿನ್ನರೂಪ|

ಎಲ್ಲೆಲ್ಲೂ ಇರುವ ನಿನ್ನ   ನಿಜವಾದ ರೂಪವನ್ನು ನೋಡುವ ನನ್ನ ಹುಚ್ಚು ಆಸೆ ನೋಡು ಹೇಗಿದೆ? ಎಲ್ಲಾ ಕಡೆಯಲ್ಲಿ ವ್ಯಾಪಿಸಿರುವ ನಿನ್ನನ್ನು ನಾನು ನೋಡುವುದಾದರೂ ಹೇಗೆ? ಒಂದು ವೇಳೆ ನಾನು ನೋಡುತ್ತಿದ್ದೇನೆಂದರೂ  ಆ ನೋಡುತ್ತಿರುವ ಕಣ್ಣಿನಲ್ಲೂ ನೀನೇ ಇದ್ದೀಯಲ್ಲಾ!  ಆ ನಿನ್ನನ್ನು ನಾನು ಹೇಗೆ ನೋಡಲಿ?

ನನ್ನೊಳಗೆ ಇರುವ
ನಿನ್ನ ಮರೆತೂ ನಾನು
ಎಲ್ಲಿ ಕಾಣಲಿ ನಿನ್ನ ನಿಜದ ರೂಪ?

ಕೊನೆಯಲ್ಲಿ ನನಗೆ  ನಿನ್ನ ಬಗ್ಗೆ  ಸ್ವಲ್ಪ ಅರಿವುಂಟಾಗುತ್ತಿದೆ. . ನನ್ನಲ್ಲಿರುವ ನಿನ್ನನ್ನು ನಾನು ಮರೆತು ಎಲ್ಲೆಲ್ಲೋ ಹುಡುಕುತ್ತಿದ್ದೀನಲ್ಲಾ! ನನ್ನನ್ನು ಕ್ಷಮಿಸು ದೇವ. ನಿನ್ನ ಅನುಭವ ನನಗೆ ಮಾಡಿಬಿಡು ಸಾಕು. ನಿನ್ನ ರೂಪವನ್ನು ನೋಡುವ ಭ್ರಮೆಯನ್ನು ತೊರೆದುಬಿಡುವೆ.


ಇದೆಲ್ಲಾ ಓದಿದ ಮೇಲೆ ಇವನೊಬ್ಬ ಆರ್ಯಸಮಾಜಿ ಇವನು ವಿಗ್ರಹಾರಾಧನೆ ವಿರೋಧಿಸುತ್ತಾನೆ, ಎಂಬ ಭ್ರಮೆಗೆ ನೀವು ಬಂದರೆ ಅದು ನನ್ನ ತಪ್ಪಲ್ಲ. ಇದು ನನ್ನೊಳಗಿನ ಮಾತು. ಮ್ಕನುಷ್ಯನ ಆತ್ಮೋದ್ಧಾರಕ್ಕೆ ಅಗತ್ಯವಾಗಿರುವುದು  ಭಗವಂತನ ಸರ್ವವ್ಯಾಪಕತೆಯ ಬಗ್ಗೆ  ಬಲವಾದ ನಂಬಿಕೆ ಹೊರತೂ ಅವನನ್ನು ಸಂಕುಚಿತಗೊಳಿಸಿ ಅದಕ್ಕೊಂದು ಬಣ್ಣ ಕಟ್ಟುವುದಲ್ಲ. ಭಗವಂತನ ಈ ಭವ್ಯ ಸ್ಥಿತಿಯನ್ನು ಒಪ್ಪಿಅವನ ಗುಣಗಳನ್ನುನಮ್ಮದಾಗಿ ಮಾಡಿಕೊಳ್ಳುವುದೊಂದೇ ನಮ್ಮ ಆತ್ಮೋದ್ಧಾರಕ್ಕೆ ಇರುವ ಮಾರ್ಗ.

ಕೆಳಗಿನ ಕೊಂಡಿಯಲ್ಲಿ ಮೇಲಿನ ಹಾಡನ್ನು ಕೇಳಬಹುದು.
http://sridhar.vedasudhe.com/%e0%b2%8e%e0%b2%b2%e0%b3%8d%e0%b2%b2%e0%b2%bf-%e0%b2%b9%e0%b3%81%e0%b2%a1%e0%b3%81%e0%b2%95%e0%b2%b2%e0%b2%bf-%e0%b2%a8%e0%b2%bf%e0%b2%a8%e0%b3%8d%e0%b2%a8/