Pages

Tuesday, March 24, 2015

ಜನರಿಗೆ ಸತ್ಯ ತಿಳಿಸುವವರಾರು?

ಜನರಿಗೆ ಸತ್ಯ ತಿಳಿಸುವವರಾರು?   ಹಲವು ಸಂದರ್ಭದಲ್ಲಿ ನನ್ನ ಕಣ್ಮುಂದೆ ಈ ಪ್ರಶ್ನೆ ಹೆಮ್ಮರವಾಗಿ ನಿಲ್ಲುತ್ತದೆ. ಯಾವುದೇ ಕ್ಷೇತ್ರದಲ್ಲಿ ನೋಡಿದರೂ  ಅಸತ್ಯ-ಅಧರ್ಮ-ದಬ್ಬಾಳಿಕೆ-ಬೂಟಾಟಿಕೆ-ಭಯದ ವಾತಾವರಣ ಎದ್ದು ಕಾಣುತ್ತದೆ. ಬ್ರಷ್ಟಾಚಾರದ ವಿರುದ್ಧ ಹೋರಾಟಮಾಡುವ ಹೆಸರಲ್ಲಿ ಜನರಿಂದ ಸುಲಿಗೆ ಮಾಡುವವರಿಗೇನೂ ಕಮ್ಮಿ ಇಲ್ಲ. ಧರ್ಮದ ಹೆಸರಲ್ಲೂ ಸುಲಿಗೆ. ರಾಜಕಾರಣವಂತೂ ಹೊಲಸೆದ್ದು ಹೋಗಿದೆ, ಎಂದೇ ಹೇಳಬೇಕಾಗುತ್ತದೆ. ಸಾಮಾನ್ಯವಾದ ಪ್ರಾಮಾಣಿಕ ಸೇವಾಮನೋಭಾವನೆಯ ವ್ಯಕ್ತಿಯು ರಾಜಕೀಯ ಪ್ರವೇಶಮಾಡಿ ಒಂದು ನಗರಸಭೆಗೆ ಟಿಕೆಟ್ ಪಡೆಯಲು ಸಾಧ್ಯವಿಲ್ಲ. ಅಲ್ಲೂ ಹಣದ,ಜಾತಿಯ ಪ್ರಭಾವ. ಇನ್ನು ದೇವಾಲಯಗಳಲ್ಲಿ ಭಕ್ತರಲ್ಲಿಯೇ ತಾರತಮ್ಯ. ಶ್ರೇಣೀಕೃತ ಭಕ್ತರು!  ಮಠಮಂದಿರಗಳಲ್ಲೂ ತಾರತಮ್ಯ. ಜಾತಿಗೆ ಪ್ರಾಶಸ್ತ್ಯ!

ಇದಕ್ಕೆಲ್ಲಾ ಕಾರಣ ಏನು ಗೊತ್ತೇ? ನಮಗೆ ಸತ್ಯದರ್ಶನವಾಗಿಲ್ಲ. ಸತ್ಯ ತಿಳಿದಿಲ್ಲ. ಭಗವಂತನ ಅಸ್ತಿತ್ವದ ಬಗ್ಗೆಯೇ ಸರಿಯಾದ ಅರಿವಿಲ್ಲ. ಭಗವಂತನು ನಿರಾಕಾರಿ, ಸರ್ವವ್ಯಾಪಿ, ಸರ್ವಶಕ್ತ ಎಂಬ ನಿಜದ ಅರಿವು ನಮಗುಂಟಾದರೆ,  ಬದುಕಿನ ಉದ್ದೇಶ ತಿಳಿದರೆ  ಮುಂದೆ ಯಾವಕ್ಷೇತ್ರವೂ ನಮಗೆ ಸಮಸ್ಯೆ ಎನಿಸುವುದೇ ಇಲ್ಲ.  ಹಲವು ವೇಳೆ ನಾವು ಭಯದ ನೆರಳಲ್ಲೇ ಬದುಕು ಸಾಗಿಸುತ್ತೇವೆ. ಕಾರಣ ಬೇರೆ ಏನೂ ಅಲ್ಲ. ಸತ್ಯದ ಅರಿವಿರುವುದಿಲ್ಲ. ನಮ್ಮಲ್ಲಿ  ಮನೆ ಮಾಡಿರುವ ಭಯ ಮತ್ತು ಮೌಢ್ಯ ಎರಡು ಸಂಗತಿಗಳು ದೂರವಾದರೆ ನಮ್ಮನ್ನು ಧರ್ಮದ ಹೆಸರಲ್ಲಿ ,ದೇವರಹೆಸರಲ್ಲಿ, ಕಾನೂನಿನ ಹೆಸರಲ್ಲಿ  ಶೋಷಿಸುವ, ವಂಚಿಸುವ ಜನರನ್ನು ಮೆಟ್ಟಿ ನಿಲ್ಲಲು ಸಾಮರ್ಥ್ಯ ತಾನೇ ತಾನಾಗಿ ಬರುತ್ತದೆ.

ಸ್ವತಂತ್ರ ಭಾರತದಲ್ಲಿ ಆಗಬೇಕಾಗಿರುವುದು ಜನರಿಗೆ ಸತ್ಯವನ್ನು ತಿಳಿಸುವ ಕೆಲಸ. ವೇದದ ನಿಜವಾದ ಅರಿವಿದ್ದರೆ ಸತ್ಯವು ಮನವರಿಕೆಯಾಗುತ್ತದೆ. ವೇದದ ಹೆಸರಿನಲ್ಲಿಯೇ ನಡೆಯುತ್ತಿರುವ ಬೂಟಾಟಿಕೆಗಳೆಲ್ಲಾ ದೂರವಾಗ ಬೇಕಾದರೆ ವೇದದ ನಿಜ ಅರಿವು ಮೂಡಬೇಕು

ವೇದದ ಅರಿವು ಮೂಡಿದರೆ ಎಲ್ಲಾ ಸಮಸ್ಯೆ ಬಗೆಹರಿಯುತ್ತದೆಂದು ಹೇಗೆ ಹೇಳುವಿರಿ-ಎಂಬುದು ತಾನೇ ನಿಮ್ಮ ಪ್ರಶ್ನೆ.ಅದಕ್ಕೆ ವೇದದಲ್ಲಿಯೇ ಉತ್ತರವಿದೆ.

ನಾವು ಬಹುಪಾಲು ಭಯದಿಂದ ಬದುಕಿರುವುದು ದೇವರ ಹೆಸರಲ್ಲಿ. ಆ ದೇವರ ಬಗ್ಗೆ ಸ್ಪಷ್ಟ    ಕಲ್ಪನೆ ವೇದದಲ್ಲಿ ದೊರೆಯುತ್ತದೆ. ಅದೊಂದು ಶಕ್ತಿ .ಇಡೀ ಬ್ರಹ್ಮಾಂಡದ ಎಲ್ಲಾ ಚಲನವಲನ-ಚಟುವಟಿಕೆಗಳ ನಿಯಂತ್ರಣ  ಶಕ್ತಿ. ಅದನ್ನು ನೋಡಲು ಸಾಧ್ಯವೇ ಇಲ್ಲ.ಅನುಭವಿಸಬಹುದು ಅಷ್ಟೆ. ಆಶಕ್ತಿಯ ಸರಿಯಾದ ಅರಿವಿಲ್ಲದೆ ದೇವರವಾರಸುದಾರರೆಂದು ಬೀಗುವ ದಳ್ಳಾಳಿಗಳ ಆಟಾಟೋಪಕ್ಕೆ  ನಾವೆಲ್ಲಾ ಬಲಿಯಾಗಿದ್ದೇವೆಂದರೆ ನನಗೆಲ್ಲೋ ತಲೆಕೆಟ್ಟಿದೆ-ಎನಿಸಬಹುದು.ಆದರೆ ಅದೇ ಸತ್ಯ.

ಭಗವಂತನು ನಿಮ್ಮಲ್ಲಿ, ನನ್ನಲ್ಲಿ, ಒಂದು ಹುಳುವಿನಲ್ಲೂ ಇದ್ದಾನೆ.ಎಲ್ಲವನ್ನೂ ನಡೆಸುತ್ತಿದ್ದಾನೆ.ಅವನು ಒಬ್ಬನೇ.ಅವನ ಹೆಸರಲ್ಲಿ ಕಿತ್ತಾಟ ನಡೆಯುತ್ತಿಲ್ಲವೇ? ಬೇಕೇ?

ಇನ್ನು ಜಾತಿಯ ಬಗ್ಗೆ ಸಂಘರ್ಷ. ವೇದದಲ್ಲಿ ಜಾತಿಯ ಸುಳಿವೂ ಇಲ್ಲ. ಮಾನವರೆಲ್ಲರೂ ಒಬ್ಬ ತಾಯಿಯ ಮಕ್ಕಳೆಂದು ವೇದವು ಸಾರುತ್ತದೆ. ಆದರೂ ವೇದದ ಹೆಸರಲ್ಲೇ ಜಾತೀಯತೆ ನಡೆಯುತ್ತದೆ.ಈ ಬಗ್ಗೆ ಸರಿಯಾದ ತಿಳುವಳಿಕೆ ಕೊಡುವವರಾರು?

ಸ್ವಾತಂತ್ರ್ಯ ಬಂದು ಏಳು ದಶಕಗಳು ಮುಗಿಯುತ್ತಾ ಬಂತು. ಯಾವ ಋಷಿಮುನಿಗಳ ತಪಸ್ಸಿನಿಂದ ನಮಗೆ "ವೇದವೆಂಬ" ಒಂದು ಜ್ಞಾನ ಭಂಡಾರ ಲಭ್ಯವಾಗಿದೆಯೋ ಅದರ ಸೂತ್ರಗಳ ಮೇಲೆ ನಮ್ಮ ವ್ಯವಸ್ಥೆಯನ್ನು ಬಲಪಡಿಸುತ್ತಾ ಹೋಗಿದ್ದರೆ ನಮ್ಮ ದೇಶವು ಇಂದಿನ ಕೆಟ್ಟಸ್ಥಿತಿಯಲ್ಲಿರಬೇಕಾಗಿರಲಿಲ್ಲ. ಇನ್ನೂ ಕಾಲಮಿಂಚಿಲ್ಲ. ನಮ್ಮ ದೇಶವನ್ನು ಮುನ್ನಡೆಸುವುದಕ್ಕೆ    ಹೊರಗಿನಿಂದ ಶಿಕ್ಷಣ ಪಡೆಯಬೇಕಾಗಿಲ್ಲ. ವೇದವೆಂಬ ಜ್ಞಾನ ಭಂಡಾರದ ವ್ಯಾಪಕ ಅಧ್ಯಯನ ಆಗಬೇಕು. ಇಲ್ಲಿ ಒಂದು ತಪ್ಪು ಭಾವನೆ ಕೂಡ ಇದೆ. ವೇದವೆಂದರೆ ಹೋಮಹವನಗಳನ್ನು    ಮಾಡಿಸಲು ಬೇಕಾದ ಮಂತ್ರಗಳನ್ನು ಕಲಿಯುವುದು! ಈ ಭಾವನೆ ದೂರವಾಗಬೇಕು. ವೇದವೆಂದರೆ ಸಮಸ್ತ ಬದುಕಿನ ಜ್ಞಾನ ಭಂಡಾರ. ಅದರ ಆಮೂಲಾಗ್ರ ಅಧ್ಯಯನ ಆದರೆ ನಮ್ಮ  ಸಾಮಾಜಿಕ ಬದುಕಿನ, ವೈಯಕ್ತಿಕ ಬದುಕಿನ, ರಾಷ್ಟ್ರದ ಅಭಿವೃದ್ಧಿಯ ಎಲ್ಲಾ ವಿಚಾರಕ್ಕೂ  ಮಾರ್ಗದರ್ಶನ ಸಾಧ್ಯ. ಈ ಬಗ್ಗೆ ಒತ್ತಾಯ ಮಾಡುವ ಶಕ್ತಿ ವೃದ್ಧಿಯಾಗಬೇಕಾಗಿದೆ.

Friday, March 20, 2015

ಜೀವನವೇದ-1






ವೇದಭಾರತಿಯ ಕಾರ್ಯಕ್ರಮಗಳ ಒತ್ತಡದಲ್ಲಿ ವೇದಸುಧೆಯನ್ನು ಗಮನಿಸಲು ಸಾಧ್ಯವಾಗಿರಲಿಲ್ಲ. ಈಗಾಗಲೇ ನನ್ನ ಪುಸ್ತಕ "ಜೀವನವೇದ" ಲೋಕಾರ್ಪಣೆಯಾಗಿದೆ. ಪುಸ್ತಕವನ್ನು ಲೋಕಾರ್ಪಣೆಮಾಡಿದ ಸಂಸ್ಕೃತ ವಿ.ವಿ.ಯ ವಿಶ್ರಾಂತ ಕುಲಪತಿ ಶ್ರೀ ಮಲ್ಲೇಪುರಮ್ ವೆಂಕಟೇಶ್ ಮತ್ತು ಪುಸ್ತಕವನ್ನು ಕುರಿತು ಮಾತನಾಡಿದ ವಿಕ್ರಮ ಸಾಪ್ತಾಹಿಕ ಪತ್ರಿಕೆಯ ಸಂಪಾದಕರಾದ ಶ್ರೀ ದು.ಗು.ಲಕ್ಷ್ಮಣ್ ಅವರ ಮಾತುಗಳನ್ನು ಕೇಳಿ.ನಾಳೆ ಉಗಾದಿ ಹಬ್ಬದಿಂದ ಆರಂಭಿಸಿ ಪ್ರತಿ ಭಾನುವಾರ "ಜೀವನವೇದದ" ಒಂದೊಂದು ಲೇಖನವನ್ನು ಇಲ್ಲಿ ಪ್ರಕಟಿಸಲಾಗುವುದು. ಶ್ರೀಸುಧಾಕರಶರ್ಮರ ಆರೋಗ್ಯವನ್ನು ನೋಡಿಕೊಂಡು ಅವರ ಉಪನ್ಯಾಸವನ್ನೂ ಸಹ ವಾರಕ್ಕೊಂದಾದರೂ ಪ್ರಕಟಿಸಬೇಕೆಂಬ ಆಸೆ ಇದೆ.ಎಂದಿನಂತೆ ಸಹಕರಿಸುತ್ತೀರಾಗಿ ನಂಬಿಕೆ ಇದೆ. ಹೊಸವರ್ಷವು ಎಲ್ಲರಿಗೂ ಶುಭವನ್ನು ತರಲಿ.
---------------------------------------------------------------------------------------------------------
ಭಾಗ-೧
 ಜೀವನ ಎಂದರೆ ಹಿಡಿಯಷ್ಟು ಸುಖ, ಬೆಟ್ಟದಷ್ಟು ಕಷ್ಟ- ಎಂಬುದು ಸಾಮಾನ್ಯರ ಮಾತು. ಯಾಕೆ ಹೀಗೆ? ಜೀವನದಲ್ಲಿ ನೆಮ್ಮದಿ ಸಿಗುವುದು ಯಾಕೆ ದುಸ್ತರವಾಗುತ್ತದೆ? ಸುಖೀಕುಟುಂಬ ಎಂಬುದು ಗಗನಕುಸುಮವೇ? ಜೀವನದಲ್ಲಿ ಸುಖವಾಗಿರಲು, ನೆಮ್ಮದಿಯಾಗಿರಲು ನಮ್ಮ ಋಷಿಮುನಿಗಳು ಏನಾದರೂ ಸೂತ್ರಗಳನ್ನು ನೀಡಿದ್ದಾರೆಯೇ? ನಮ್ಮ ಆಧುನಿಕ ವಿಜ್ಞಾನದ ಸಲಕರಣೆಗಳು ಜೀವನಕ್ಕೆ ಎಷ್ಟು ನೆಮ್ಮದಿಯನ್ನು ಕೊಟ್ಟಿದೆ? ಎಷ್ಟು ನೆಮ್ಮದಿ ಹಾಳಾಗಿದೆ? ಹೀಗೆಲ್ಲಾ ಯೋಚಿಸುವಾಗ ಕಟ್ಟ ಕಡೆಗೆ ನಾವು ಆಶ್ರಯಿಸುವುದು ನಮ್ಮ ಋಷಿ ಮುನಿಗಳು ನೀಡಿದ ಮಾರ್ಗವನ್ನು. ಆ ಹೊತ್ತಿಗೆ ನಮ್ಮ ಜೀವನದ ಆಯುಷ್ಯವು ಬಹುಪಾಲು ಮುಗಿದಿರುತ್ತದೆ. ಕಡೆಯ ದಿವಸಗಳನ್ನು ಭಗವಚ್ಚಿಂತನೆಯಲ್ಲಿ ಕಳೆಯುತ್ತಾ ಅಂತಿಮ ದಿನಗಳನ್ನು ಎಣಿಸುವಂತಹ ಸ್ಥಿತಿ ಬರಬೇಕೇ? ಅಧ್ಯಾತ್ಮ ಚಿಂತನೆ ಎಂದರೆ ವೃದ್ಧಾಪ್ಯದಲ್ಲಿ ಮಾಡಬೇಕಾದ್ದೇ? ನಮ್ಮ ಜೀವನಕ್ಕೆ ನಿಜವಾಗ ಮಾರ್ಗದರ್ಶನ ಎಲ್ಲಿದೆ? ಇನ್ನು ಮುಂದೆ ಚಿಂತನೆ ಮಾಡುತ್ತಾ ಸಾಗೋಣ, ನನ್ನೊಡನೆ ನೀವೂ ಬರುವಿರಾ? ಸ್ವರ್ಗ ಎಲ್ಲಿದೆ? ಸತ್ತಮೇಲೆ ಸ್ವರ್ಗ-ನರಕಗಳೋ? ಬದುಕಿದ್ದಾಗಲೋ? ಸ್ವರ್ಗವೆಲ್ಲಿದೆಯೋ ಗೊತ್ತಿಲ್ಲ.ಆದರೆ ಹಲವಾರು ಮನೆಗಳು ನಿತ್ಯ ನರಕವಾಗಿ ಇರುವುದಂತೂ ಸತ್ಯ. ಹಾಗಾದರೆ ಮನೆಗಳನ್ನು ಸ್ವರ್ಗವಾಗಿ ಮಾಡಲು ಸಾಧ್ಯವಿಲ್ಲವೇ? ಸಾಧ್ಯ, ಎನ್ನುತ್ತದೆ ವೇದ. ಮನೆಯು ಸ್ವರ್ಗದಂತಿರಬೇಕಾದರೆ ಹೀಗಿರಬೇಕು ಎಂದು ವೇದವು ಕೆಲವು ಜೀವನ ಸೂತ್ರಗಳನ್ನು ಹೇಳುತ್ತದೆ. ಅದನ್ನು ಅನುಸರಿಸಿದ್ದೇ ಆದರೆ ಮನೆಯನ್ನು ಸ್ವರ್ಗ ಮಾಡುವುದೇನೂ ಕಷ್ಟಸಾಧ್ಯವಲ್ಲ. ಹಿಂದುಗಳಲ್ಲಿ ವಿವಾಹ ಸಂದರ್ಭದಲ್ಲಿ ಸಪ್ತಪದೀ ಎಂಬ ಒಂದು ವಿಧಿ ಇರುತ್ತದೆ. ಪುರೋಹಿತರು ಮಂತ್ರ ಹೇಳುತ್ತಾರೆ. ವಧು-ವರರು ಒಟ್ಟು ಏಳು ಹೆಜ್ಜೆ ಹಾಕುತ್ತಾರೆ. ಆ ಏಳು ಮಂತ್ರಗಳು ಒಂದೊಂದೂ ಉತ್ಕೃಷ್ಟ. ಅದರಲ್ಲಿ ಒಂದು ಮಂತ್ರದ ಅರ್ಥವನ್ನು ಇಲ್ಲಿ ತಿಳಿಯೋಣ.
 ಸಖೇ ಸಪ್ತಪದೀ ಭವ 
 ನೀನು ನನಗೆ ಮಿತ್ರಳಂತೆ ಇರು/ನೀನು ನನಗೆ ಮಿತ್ರನಂತೆ ಇರು ಇದು ವಿವಾಹ ಸಂದರ್ಭದಲ್ಲಿ ಗಂಡು-ಹೆಣ್ಣು ಪರಸ್ಪರ ಹೇಳಿಕೊಳ್ಳುವ ಮಾತು. ನಾನೂ ನೀನೂ ಪರಸ್ಪರ ಮಿತ್ರರಂತೆ ಇರೋಣ ಎಂಬ ಸಂಕಲ್ಪವನ್ನು ನೂರಾರು ಜನರ ಮುಂದೆ ಮಾಡುವುದೇ ಸಪ್ತಪದೀ. ಎಷ್ಟು ಜನರಿಗೆ ಇದು ಆ ಸಂದರ್ಭದಲ್ಲಿ ಅರ್ಥವಾಗುತ್ತದೋ ಗೊತ್ತಿಲ್ಲ. ಒಂದು ವೇಳೆ ಅರ್ಥವಾಗಿ ಅದರಂತೆ ಜೀವನ ಮಾಡಿದ್ದೇ ಆದರೆ ಅದೇ ಸ್ವರ್ಗ. ಸ್ವರ್ಗ ಇನ್ನೆಲ್ಲೂ ಇಲ್ಲ. ಪತಿ-ಪತ್ನಿಯರು ಪರಸ್ಪರ ಮಿತ್ರರಂತೆ ಇದ್ದರೆ ಆ ದಾಂಪತ್ಯ ಹೇಗಿದ್ದೀತು? ದಾಂಪತ್ಯವು ಗಟ್ಟಿಯಾಗಿ ಸದಾಕಾಲ ಸಂತೋಷವಾಗಿರಲೆಂದು ನಮ್ಮ ಹಿರಿಯರು ಕೊಟ್ಟ ಸೂತ್ರ ಸಪ್ತಪದೀ. ಸಖೇ ಸಪ್ತಪದೀ ಭವ ಎಂಬ ಮಂತ್ರವನ್ನು ಹೇಳಿ ಮದುವೆಯಾಗಿದ್ದೇನೆ. ಇದಕ್ಕೆ ಮದುವೆಗೆ ಬಂದ ನೂರಾರು ಜನರು ಸಾಕ್ಷಿಯಾಗಿದ್ದಾರೆ, ಎಂದು ಯಾರಾದರೂ ಮದುವೆಯ ನಂತರ ಯೋಚಿಸಿದ್ದಾರೆಯೇ? ಹಾಗೆ ಒಂದು ವೇಳೆ ಮಂತ್ರದ ಅರ್ಥವನ್ನು ತಿಳಿದು ಮನ: ಪೂರ್ವಕವಾಗಿ ವಧು-ವರರು ಈ ಮಂತ್ರವನ್ನು ಹೇಳಿದ್ದೇ ಆದರೆ ಈಗ ನಡೆಯುತ್ತಿರುವಂತಹ ಡೈವರ್ಸ್ ಗಳು ನಡೆಯಲು ಸಾಧ್ಯವೇ? ಡೈವರ್ಸ್ ಗಳ ವಿಚಾರದಲ್ಲಿ ಎಂತಹ ಚರ್ಚೆಗಳು ಟಿ.ವಿ. ಮಾಧ್ಯಮಗಳಲ್ಲಿ ನಡೆಯುತ್ತವೆ! ಗಂಡು-ಹೆಣ್ಣಿಗೆ ಹೊಂದಾಣಿಕೆ ಆಗದಿದ್ದಮೇಲೆ ಜೀವನ ಪರ್ಯಂತ ಹೀಗೆಯೇ ಕಾಲ ಹಾಕಲು ಸಾಧ್ಯವೇ? ಅದಕ್ಕೆ ನನ್ನ ಮಗಳಿಗೆ ಡೈವರ್ಸ್ ಕೊಟ್ಟು ಬಾ ಎಂದು ಹೇಳಿದೆ ಎಂದು ಒಬ್ಬ ತಾಯಿಯು ಹೇಳುತ್ತಾಳೆಂದರೆ,ಎಂತಹ ಸಂದರ್ಭದಲ್ಲಿ ಈ ಸಮಾಜವಿದೆ! ಎಂಬುದನ್ನು ಸ್ವಲ್ಪ ಆಳವಾಗಿ ಚಿಂತನೆ ನಡೆಸಬೇಡವೇ? ಡೈವರ್ಸ್ ಕೊಡುವ ಪರಿಸ್ಥಿತಿ ಯಾಕೆ ಬಂತು? ಈ ಬಗ್ಗೆ ಪತಿ-ಪತ್ನಿಯರಾಗಲೀ ಅಥವಾ ಅವರ ಅಪ್ಪ-ಅಮ್ಮನಾಗಲೀ ವಿಚಾರ ಮಾಡುತ್ತಾರೆಯೇ? ಮದುವೆಗೆ ಮುಂಚೆ ಹಣಕ್ಕೋ, ಪದವಿಗೋ, ರೂಪಕ್ಕೋ ಬಲಿಯಾಗಿ ಮದುವೆಯಾದಮೇಲೆ ಈಗ ಸಂಸಾರದಲ್ಲಿ ಸುಖವಿಲ್ಲ ಎಂದರೆ ಹೇಗೆ ಸಿಗಲು ಸಾಧ್ಯ? ಆ ಬಗ್ಗೆ ಮದುವೆಗೆ ಮುಂಚೆ ಯೋಚಿಸಬೇಕಿತ್ತು , ಅಲ್ಲವೇ? ಮದುವೆ ಎಂದರೆ ಇದು ಜೀವನ ಪರ್ಯಂತದ ಕುಟುಂಬವ್ಯವಸ್ಥೆ.ಅದು ಸುಭದ್ರವಾಗಿರಬೇಕೆಂದರೆ ಗಂಡು-ಹೆಣ್ಣಿನ ನಡುವೆ ಹೊಂದಾಣಿಕೆಗೆ ನೋಡಬೇಕಾದ ಅಂಶಗಳೇನೆಂಬ ಬಗ್ಗೆ ನಮಗೆ ಅರಿವಿರಬೇಕಲ್ಲವೇ? ಸಾಮಾನ್ಯವಾಗಿ ಮದುವೆ ಮಾಡುವಾಗ ಹಿಂದು ಸಮಾಜದಲ್ಲಿ ಹೆಚ್ಚು ಮಹತ್ವಕೊಡುವುದು ಗಂಡು-ಹೆಣ್ಣಿನ ಜಾತಕಕ್ಕೆ. ಇಷ್ಟು ಗುಣಗಳಿದ್ದರೆ ಮದುವೆ ಮಾಡಿಕೊಳ್ಳಬಹುದು,ಇಲ್ಲದಿದ್ದರೆ ಇಲ್ಲ. ಮದುವೆಯಾಗಬೇಕಾದ ಹುಡುಗ-ಹುಡುಗಿರ ವಿದ್ಯೆ, ರೂಪ, ಸ್ವಭಾವಗಳ ಹೊಂದಾಣಿಕೆಯಾಗಬೇಕಲ್ಲವೇ? ಹುಡುಗಿ ಅತ್ಯಂತ ಶ್ರೀಮಂತ ಮನೆಯವಳಾಗಿದ್ದು ಹಣದಾಸೆಯಿಂದ ಹುಡುಗನು ಆಕೆಯನ್ನು ಮದುವೆಯಾಗಿದ್ದರೆ ಈ ದಂಪತಿಗಳ ಜೀವನದಲ್ಲಿ ಹೊಂದಾಣಿಕೆ ಬರಲು ಸಾಧ್ಯವೇ? ಶ್ರೀಮಂತರಾದವರೆಲ್ಲಾ ಕೆಟ್ಟವರಲ್ಲ. ಶ್ರೀಮಂತ ಮನೆಯ ಹುಡುಗ-ಹುಡುಗಿಯರಲ್ಲೂ ಬಡವರನ್ನು ಮದುವೆ ಯಾಗಬೇಕೆಂದು ಬಯಸುವವರೂ ಇದ್ದಾರೆ. ಅಂತಹ ಸಂದರ್ಭದಲ್ಲಿ ಅವರ ಶ್ರೀಮಂತಿಕೆ-ಬಡತನ ಗಣನೆಗೆ ಬರುವುದಿಲ್ಲ ಬದಲಾಗಿ ಅವರ ಸ್ವಭಾವಗಳು, ಸದ್ಗುಣಗಳು ಗಣನೆಗೆ ಬರುತ್ತವೆ.ಈ ವಿಚಾರಗಳನ್ನು ಗಮನಿಸದೆ ಎಲ್ಲವೂ ಸರಿಯಾಗಿದೆ ಜಾತಕ ಒಂದು ಕೂಡಿಬಂದರೆ ಮದುವೆ ಆದಂತೆಯೇ ಎಂಬ ವಿಚಾರವಿದ್ದರೆ ಅದೇ ಬಲು ಅಪಾಯದ ಅಂಶವೆಂಬುದು ಹಲವರಿಗೆ ಅರ್ಥವಾಗುವುದೇ ಇಲ್ಲ. ಸುಖ ದಾಂಪತ್ಯಕ್ಕೆ ವೇದವು ಏನು ಹೇಳುತ್ತದೆ? ನೋಡೋಣ. ಅಥರ್ವಣ ವೇದದ ಒಂದು ಮಂತ್ರವು ಇನ್ನೂ ಅದ್ಭುತವಾಗಿ ಹೇಳುತ್ತದೆ.

 ಇಹೇಮಾವಿಂದ್ರ ಸಂ ನುದ ಚಕ್ರವಾಕೇವ ದಂಪತೀ| [ಕಾಂಡ ೧೪ ಸೂಕ್ತ ೨ ಮಂತ್ರ ೬೪] 

ಅರ್ಥ:- ಪತಿ ಪತ್ನಿಯರಿಬ್ಬರೂ ಚಕ್ರವಾಕ ಪಕ್ಷಿಗಳಂತೆ ಒಬ್ಬರು ಇನ್ನೊಬ್ಬರನ್ನು ಪ್ರೀತಿಸಲಿ. ವೇದ ಮಂತ್ರಗಳೆಂದರೆ ಕೇವಲ ಪೂಜೆ ಪುನಸ್ಕಾರಕ್ಕೆ ಇರುವ ಮಂತ್ರಗಳೇ? ಈ ಮೇಲಿನ ಮಂತ್ರದ ಅರ್ಥವನ್ನು ಗ್ರಹಿಸಿದಾಗ ಆಶ್ಚರ್ಯವಾಗದೇ ಇರದು. ಚಕ್ರವಾಕ ಪಕ್ಷಿಗೆ ಕೋಕ ಪಕ್ಷಿ ಎಂತಲೂ ಹೇಳುತ್ತಾರೆ. ಗಂಡು ಹೆಣ್ಣು ಸದಾಕಾಲ ಒಟ್ಟೊಟ್ಟಿಗೆ ಇದ್ದು ಸಾಯುವವರೆಗೂ ಸಂತೋಷ ಅನುಭವಿಸಿಯೇ ಸಾಯುತ್ತವೆ. ಅಂತಹ ಪಕ್ಷಿಗಳಂತೆ ಪತಿ ಪತ್ನಿಯರು ಪರಸ್ಪರ ಪ್ರೀತಿಯಿಂದಿರಬೇಕು-ಎಂಬುದು ವೇದದ ಆಶಯ. ಈಗ ಹೇಳಿ, ವೇದವು ವೈರಾಗ್ಯವನ್ನು ಹೇಳುವುದೇ? ಇಲ್ಲಿ ಕೋಕ ಪಕ್ಷಿಯಂತೆ ಪರಸ್ಪರ ಪ್ರೀತಿಯಿಂದ ಪತಿ ಪತ್ನಿಯರು ಇರಬೇಕೆಂಬುದು ಸ್ವಲ್ಪ ವಿಪರೀತವೆನಿಸಿದರೂ ಜೀವನದ ಹಲವು ಘಟ್ಟಗಳಲ್ಲಿ ನಾವು ಹೇಗೆ ಜೀವನವನ್ನು ನಿರ್ವಹಿಸಬೇಕೆಂಬ ಸರಿಯಾದ ಮಾರ್ಗದರ್ಶನವನ್ನು ವೇದವು ನಮಗೆ ನೀಡುತ್ತದೆ.

Wednesday, March 11, 2015

ಹಾಸನದಲ್ಲಿ ಸಂಸ್ಕೃತ ಸಂಭ್ರಮ - 10


     ಜಿಲ್ಲಾ ಸಂಸ್ಕೃತ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಂಸ್ಕೃತ ಭಾರತಿಯ ಅಧ್ಯಕ್ಷರಾದ ಡಾ. ಪ್ರಸನ್ನ ಎನ್.ರಾವ್ ರವರು ಸಮ್ಮೇಳನ ಯಶಸ್ವಿಯಾಗಿ ನಡೆದ ಕುರಿತು ಹರ್ಷ ವ್ಯಕ್ತಪಡಿಸಿದರು. ಸಂಸ್ಕೃತದ ಅಧ್ಯಯನದಿಂದ ನಮ್ಮ ಸಂಸ್ಕೃತಿ ಉನ್ನತಿ ಕಾಣುವುದೆಂದು ಅವರು ಅಭಿಪ್ರಾಯಿಸಿದರು.


     ಸಂಸ್ಕೃತ ಶಿಕ್ಷಣ ನೀಡುವಲ್ಲಿ ಗಣನೀಯ ಸೇವೆ ಸಲ್ಲಿಸಿ ನಿವೃತ್ತರಾದ ಹಲವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅಚ್ಚುಕಟ್ಟಾಗಿ ಊಟ ಮತ್ತು ಉಪಹಾರದ ವ್ಯವಸ್ಥೆ ಮಾಡಿದ ಅಡಿಗೆ ಕಂಟ್ರಾಕ್ಟರ್ ವೆಂಕಟೇಶರನ್ನು ಅಭಿನಂದಿಸಲಾಯಿತು.





     ಸಮ್ಮೇಳನದ ಯಶಸ್ಸಿಗೆ ಶ್ರಮ ವಹಿಸಿ ದುಡಿದ ಸಂಸ್ಕೃತ ಭಾರತಿಯ ದಕ್ಷಿಣ ಕರ್ನಾಟಕದ ಸಂಪರ್ಕ ಪ್ರಮುಖ ಶ್ರೀ ಶ್ರೀನಿವಾಸನ್ ಮತ್ತು ವೇದಭಾರತಿಯ ಸಂಯೋಜಕ ಶ್ರೀ ಹರಿಹರಪುರ ಶ್ರೀಧರರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳ ಸಂಘಟನೆ ಮಾಡಿ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವಂತೆ ಮಾಡಿದ ರಕ್ಷಿತ್ ಭಾರದ್ವಾಜರನ್ನೂ ಅಭಿನಂದಿಸಲಾಯಿತು. ಹರಿಹರಪುರ ಶ್ರೀಧರ್ ಸಮ್ಮೇಳನದ ಯಶಸ್ಸಿಗೆ ಸಂಬಂಧಿಸಿದ ಎಲ್ಲರ ಸಂಘಟಿತ ಪ್ರಯತ್ನ ಕಾರಣವಾಗಿದೆಯೆಂದು ನುಡಿದರು. ವಂದೇಮಾತರಮ್ ನೊಂದಿಗೆ ಸಭಾಕಾರ್ಯಕ್ರಮ ಸಂಪನ್ನಗೊಂಡಿತು. ನಂತರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
-ಕ.ವೆಂ.ನಾಗರಾಜ್.
*******************
ಹೆಚ್ಚಿನ ವಿವರಗಳು ಮತ್ತು ಫೋಟೋಗಳಿಗೆ ಕ್ಲಿಕ್ಕಿಸಿ: ಸಂಸ್ಕೃತ ಸಂಭ್ರಮ

Saturday, March 7, 2015

ಹಾಸನದಲ್ಲಿ ಸಂಸ್ಕೃತ ಸಂಭ್ರಮ - 7

      ಹಾಸನದಲ್ಲಿ ನಡೆದ ಜಿಲ್ಲಾ ಸಂಸ್ಕೃತ ಸಮ್ಮೇಳನದಲ್ಲಿ ಸದ್ಬಾವನಾಗೋಷ್ಠಿಯ ನಂತರದಲ್ಲಿ ಬೆಂಗಳೂರಿನ ಡಾ. ಅನಿಲಕುಮಾರರು 'ಶುಲ್ಬಸೂತ್ರೇಷು ಗಣಿತಮ್' ಕುರಿತು ವಿವರಿಸಿದರು. ಆ ಸಂಬಂಧದ ಕೆಲವು ಚಿತ್ರಗಳಿವು:





     ಬೆಂಗಳೂರು ಸಂಸ್ಕೃತ ವಿ.ವಿ.ಉ ಕುಲಪತಿ ಡಾ. ಶ್ರೀನಿವಾಸ ವರಖೇಡಿಯವರು 'ದೇಶೀನಾಯಕತ್ವಮ್' ಕುರಿತು ವಿದ್ಯಾರ್ಥಿ ಸಮೂಹದೊಂದಿಗೆ ನಡೆಸಿದ ಸಂವಾದ ಎಲ್ಲರಿಗೂ ಮೆಚ್ಚುಗೆಯಾಯಿತು. ಇಂತಹ ಕಾರ್ಯಕ್ರಮವನ್ನು ಪ್ರತಿ ಶಾಲಾ, ಕಾಲೇಜುಗಳಲ್ಲೂ ನಡೆಸಿದರೆ ಉತ್ತಮ ಪರಿಣಾಮ ಬೀರುವುದೆಂಬ ಅಭಿಪ್ರಾಯ ವ್ಯಕ್ತವಾಯಿತು.


     
     ನಂತರದಲ್ಲಿ ಢಾ. ಶುಭಾರವರು 'ಸಂಸ್ಕೃತ ವಿಕಿಪೀಡಿಯ' ಕುರಿತು ಅಮೂಲ್ಯ ಮಾಹಿತಿಗಳನ್ನು ಸಭೆಗೆ ಪ್ರಾತ್ಯಕ್ಞಿಕೆ ಮೂಲಕ ವಿವರಿಸಿದರು. ಡಾ. ಗುರುಮೂರ್ತಿಯವರು 'ಸಂಸ್ಕೃತದ ಪ್ರಸ್ತುತತೆ' ಕುರಿತು ಮಾತನಾಡಿದರು. ಶ್ರೀ ಅನಂತನಾರಾಯಣ ಕಾರ್ಯಕ್ರಮದ ನಿರ್ವಹಣೆ ಮಾಡಿದರು.



-ಕ.ವೆಂ.ನಾಗರಾಜ್.


Friday, March 6, 2015

ಹಿಂದೂ ಚಟುವಟಿಕೆಗಳ ಏಳಿಗೆ ಸಹಿಸದವರು ಅದನ್ನು ಖಂಡಿಸುವಾಗ ವೇದವನ್ನು ತೆಗಳುವುದು ಸಾಮಾನ್ಯವಾಗಿ ಬಿಟ್ಟಿದೆ.ಇದಕ್ಕೆ ಎರಡು ಕಾರಣ. ವೈದಿಕಧರ್ಮದ ಹೆಸರಿನಲ್ಲಿಯೇ ವೇದವನ್ನು ತಪ್ಪಾಗಿ ಅರ್ಥೈಸಿ ಮೌಢ್ಯಗಳನ್ನು ಬಿಂಬಿಸುತ್ತಿರುವ ಒಂದು ಗುಂಪು.   ಹಾಗೂ ಈ ಬಲಿಷ್ಠ  ಗುಂಪು ಹರಡುತ್ತಿರುವ   ಮೌಢ್ಯಗಳನ್ನು ವಿರೋಧಿಸಲು ವೇದವನ್ನು ಅಧ್ಯಯನ ಮಾಡದೇ ವೇದವನ್ನು ವಿರೋಧಿಸುವ  ಮತ್ತೊಂದು ಸಣ್ಣ  ಗುಂಪು. ದೊಡ್ದಗುಂಪು ಮೌಢ್ಯಗಳನ್ನು ಎಗ್ಗಿಲ್ಲದೇ ಮುಂದುವರೆಸಿಕೊಂಡು ಹೋದರೆ . ಸಣ್ಣ ಗುಂಪು ಅದನ್ನು ಬಂಡವಾಳ ಮಾಡಿಕೊಂಡು ಮಾನವೀಯತೆಯನ್ನು ರಕ್ಷಿಸಲು ಸಂವಿಧಾನದಂತಿರುವ ವೇದವನ್ನು ವಿರೋಧಿಸಿ ಪ್ರಚಾರ ಗಿಟ್ಟಿಸುವುದು. ಎರಡೂ ಗುಂಪುಗಳು ಮಾಡುತ್ತಿರುವುದು ವೇದವಿರೋಧೀ ಹಾಗೂ ಮಾನವತೆಯ ವಿರೋಧೀ ಕೆಲಸಗಳೇ!! ಇವರಿಗೆ ಬುದ್ಧಿ ಹೇಳುವವರೇ ಇಲ್ಲ. ವೇದವನ್ನು ಸರಿಯಾಗಿ ಬಲ್ಲವರೂ ಸಹ ಸಮಾಜದಲ್ಲಿ ಮರೆಯಾಗಿದ್ದಾರೆ. ಒಟ್ಟಿನಲ್ಲಿ ಯಾವುದು ವಿಶ್ವದ ಅಭ್ಯುದಯಕ್ಕೆ ,ಮಾನವೀಯತೆಯ ಉಳಿವಿಗೆ,ವಿಶ್ವದ ಜನರ ನೆಮ್ಮದಿಯ ಬದುಕಿಗೆ ನಿಜವಾದ ಮಾರ್ಗದರ್ಶನ ವಾಗಬಲ್ಲದೋ ಅಂತಹ ವೇದವನ್ನು ಸರಿಯಾಗಿ ಅಧ್ಯಯನ ಮಾಡಿ ಸಮಾಜಕ್ಕೆ ಅದರ ಸಾರವನ್ನು ತಿಳಿಸುವ ಕೆಲಸ ಮಾಡುವವರ ಸಂಖ್ಯೆ ಹೆಚ್ಚಬೇಕಾಗಿದೆ. ಇದು ಯಾವ ಗುಂಪನ್ನು ಬಲಪಡಿಸಲು ಅಲ್ಲ, ಬದಲಿಗೆ ವಿಶ್ವದ ಜನರ ನೆಮ್ಮದಿಯ ಬದುಕಿಗೆ ಅತ್ಯಂತ ತುರ್ತಾಗಿ ಆಗಬೇಕಾದ ಕೆಲಸ. ಹಿಂದೂ ಹೆಸರಿನಲ್ಲಿ ಜನರು ಹೆಚ್ಚು ಸಂಘಟಿತರಾಗುತ್ತಿರುವುದು ಕಣ್ಣಿಗೆ ಕಾಣುತ್ತಿರುವ ದೃಶ್ಯ. ಹಿಂದುನಾಯಕರುಗಳು "ವೇದದ ಆಧಾರದಲ್ಲಿ ಜನರಿಗೆ ಮಾರ್ಗದರ್ಶನ ಮಾಡಿ ಇರಬಹುದಾದ   ಮೌಢ್ಯಗಳನ್ನು ದೂರಗೊಳಿಸಿ "ಹಿಂದುಶಕ್ತಿ" ಗೆ ವೇದದ ವಿಚಾರವನ್ನು ತಲುಪಿಸಿವ ಕೆಲಸಕ್ಕೆ ಆಧ್ಯತೆಕೊಡಬೇಕಾದುದು ಇಂದಿನ  ಅನಿವಾರ್ಯತೆ.