Pages

Monday, November 9, 2015

ಆ ಹಳ್ಳಿಯ ಅವಿದ್ಯಾವಂತ ಮುದುಕಿಯ ನಡೆಯು ವೇದಕ್ಕನುಗುಣವಾಗಿಯೇ ಇದೆ-ಅಲ್ಲವೇ?


ಆ ತಾಯಿ ಹಳ್ಳಿ ಮುದುಕಿ ಗಂಡನ ಶವದ ಮುಂದೆ ಕುಳಿತಿದ್ದಳು. ಮಗಳು ರೋಧಿಸುತ್ತಿದ್ದಳು " ಅಪ್ಪಾ! ನೀನು ಹೋಗಿ ಬಿಟ್ಯೆಲ್ಲಾ!! ಇನ್ನು ತೌರಮನೆಗೆ ನಾನು ಹ್ಯಾಗ್ ಬರಲಿ? ನನ್ನ ಸುಖ -ದುಃಖ ಕೇಳೋರ್ಯಾರು? -ಹೆಣ್ಣು ಮಗಳ ರೋದನ ಮುಗಿಲು ಮುಟ್ಟಿತ್ತು. ಎಷ್ಟಾದರೂ ಹೆಣ್ಣು ಮಕ್ಕಳಿಗೆ ಅಪ್ಪನ ಬಗ್ಗೆ ಬಲು ವಾಂಚಲ್ಯ.

ಸ್ವಲ್ಪ ಹೊತ್ತು ಮಗಳು ಅಳುವುದನ್ನು ಕೇಳಿದ ತಾಯಿ ಮಗಳನ್ನು ತಬ್ಬಿಕೊಂಡಳು"ಸುಮ್ಕಿರು ಮಗ, ಅವ್ನು ಒಂಟು ಬಿಟ್ಟಾ ಅಂದ್ರೆ ಈ ಜೀವ ಬದುಕಿಲ್ವಾ? ನನ್ನ ಕೈಲಿ ಸಕ್ತಿ ಇರೋವರ್ಗೂ ಕೂಲಿನಾರೂ ಮಾಡಿ ನಿಂಗೆ ಗೌರಿಕಾಯಿ ಕೊಡ್ತೀನಿ.ಬಿಡಾಕಿಲ್ಲ, ಸುಮ್ಕಿರು ಅಳ್ ಬ್ಯಾಡ. ಆ ಮಗಿನ್ ಕಡೆ ನೋಡು, ಆ ಮಗಿಗ್ ಏನಾದ್ರೂ ಕುಡ್ಯಕ್ಕಾರು ಕೊಡು"

ಅಯ್ಯಪ್ಪ! ಆ ತಾಯಿ ಅಲ್ಲಿರೋ ತನ್ ಮಕ್ಕಳಿಗೆಲ್ಲಾ ಸಾಂತ್ವನ ಹೇಳುತ್ತಿದ್ದಳು.ಅವಳ ಗಂಡು ಮಕ್ಕಳೂ ಕೂಡ ಬಿಕ್ಕಿ ಬಿಕ್ಕಿ ಅಳುತ್ತಿದ್ದರೆ " ಏಳ್ಲಾ ಮಗ, ಮಾಡ ಜಬಾಬ್ದಾರಿ ಮಾಡು"
-ಈ ಮಾತು ಕೇಳುವಾಗ ನನಗೆ ವೇದಮಂತ್ರ ಒಂದರ ನೆನಪಾಯ್ತು

ಮಾ ಗತಾನಾಮಾ ದಿಧೀಥಾ ಯೇ ನಯಂತಿ ಪರಾವತಮ್|
ಆ ರೋಹ ತಮಸೋ ಜ್ಯೋತಿರೇಹ್ಯಾ ತೇ ಹಸ್ತೌರಭಾಮಹೇ
[ಅಥರ್ವ ವೇದ ಕಾಂಡ-೮, ಸೂಕ್ತ-೧ , ಮಂತ್ರ- ೮ ]


ಅರ್ಥ:-
ಹೇ ಜೀವಾತ್ಮನೇ, ಶರೀರಧಾರಿಯಾದ ಪುರುಷನೇ,
ಯೇ ಪರಾವತಮ್ = ಯಾರು ಪರಲೋಕವನ್ನು
ನಯಂತಿ = ತಲುಪಿರುತ್ತಾರೋ ಅವರಿಗಾಗಿ
ಮಾ ದೀಧೀಥಾಃ = ನೀನು ನೆನೆನೆನೆದು ಹಂಬಲಿಸುತ್ತಾ ಕೂಡದಿರು
ಗತಾನಾಮ್ ಮಾ ಆ ದಿಧೀಥಾಃ = ಗತಿಸಿದವರ ಬಗ್ಗೆ ದುಃಖಿಸುತ್ತಾ ಕೂಡದಿರು
ತಮಃ ಆರೋಹ = ತಮಸ್ಸಿನಿಂದ ಮೇಲೇಳು
ಜ್ಯೋತಿಃ ಆ ಇಹಿ = ಬೆಳಕಿನತ್ತ ಪಯಣಿಸು
ತೇ ಹಸ್ತೌ ರಭಾಮಹೇ = ನಿನ್ನ ಕೈಗಳನ್ನೆತ್ತಿ ನಾವು ಹಿಡಿದು ಉದ್ಧರಿಸುತ್ತೇವೆ
ಭಾವಾರ್ಥ:-
ಹೇ ಜೀವಾತ್ಮನೇ, ಶರೀರಧಾರಿಯಾದ ಪುರುಷನೇ,ಯಾರು ಪರಲೋಕವನ್ನು ತಲುಪಿರುತ್ತಾರೋ ಅವರಿಗಾಗಿ ನೀನು ನೆನೆನೆನೆದು ಹಂಬಲಿಸುತ್ತಾ ಕೂಡದಿರು, ಗತಿಸಿದವರ ಬಗ್ಗೆ ದು:ಖಿಸುತ್ತಾ ಕೂಡದಿರು. ತಮಸ್ಸಿನಿಂದ ಮೇಲೇಳು ಬೆಳಕಿನತ್ತ ಪಯಣಿಸು ನಿನ್ನ ಕೈಗಳನ್ನೆತ್ತಿ ನಾವು ಹಿಡಿದು ಉದ್ಧರಿಸುತ್ತೇವೆ.

ಈ ಮಂತ್ರವು ಗತಿಸಿದವರ ಬಗ್ಗೆ ದು:ಖಿಸುವುದನ್ನು ಅಜ್ಞಾನವೆಂದೇ ಹೇಳುತ್ತದೆ. ವೇದದ ಈ ಮಾತನ್ನು ಅರಗಿಸಿಕೊಳ್ಳುವುದು ಕಷ್ಟವೇ ಹೌದು. ಹಾಗಾದರೆ ಗತಿಸಿದವರ ಬಗ್ಗೆ ದುಃಖಿಸಬಾರದೇ? ಒಬ್ಬ ವ್ಯಕ್ತಿ ಮರಣ ಹೊಂದಿದಾಗ ಅವನ ಸಂಬಂಧಿಕರು ಶೋಕಿಸದಿದ್ದರೆ ಸುತ್ತಮುತ್ತಲ ಜನರಾದರೂ ಏನೆಂದಾರು? ಇವರಿಗೆ ಮನುಷ್ಯತ್ವವೇ ಇಲ್ಲವೇ? ಇಷ್ಟೇನಾ ಸಂಬಂಧ? ಇವರ ಮುಖದಲ್ಲಿ ದುಃಖದ ಛಾಯೆಯೇ ಇಲ್ಲವಲ್ಲಾ!!

ನಾವು ಅತ್ಯಂತ ಮಹತ್ವಉಳ್ಳ ಈ ವಿಷಯದ ಬಗ್ಗೆ ಅತ್ಯಂತ ಗಂಭೀರವಾಗಿ ವಿಚಾರ ಮಾಡಬೇಕು. ಸತ್ತವರ ಬಗ್ಗೆ ಶೋಕಿಸುತ್ತಾ ಕೂರುವುದು ಅಜ್ಞಾನವೆಂದು ವೇದವು ಹೇಳುವುದು ಸತ್ಯವಾಗಿದೆ. ನಾವು ಶವದ ಮುಂದೆ ಕುಳಿತು ಅಳುವುದರಿಂದ ಪ್ರಯೋಜನವಾದರೂ ಏನು? ನಮ್ಮೊಳಗಿನ ದುಃಖವು ಕಡಿಮೆಯಾಗಬಹುದು ನಿಜ. ಆದರೆ ನಮಗೆ ದುಃಖವಾಗಿರುವುದನ್ನೇ ವೇದವು ತಮಸ್ಸು ಎಂದು ಹೇಳುತ್ತದೆ. ಈ ಕತ್ತಲಿನಿಂದ ಬೆಳಕಿನ ಕಡೆಗೆ ಅರ್ಥಾತ್ ಜ್ಞಾನದ ಕಡೆಗೆ ಪಯಣಿಸು ನಿನ್ನ ಕೈಗಳನ್ನು ನಾನು ಹಿಡಿದು ಮೇಲೆತ್ತುತ್ತೇನೆಂದು ಭಗವಂತನು ನುಡಿಯುತ್ತಾನೆ.

ಸಾವು ಯಾರ ವಯಸ್ಸನ್ನೂ ಕೇಳುವುದಿಲ್ಲ. ಆದರೆ ವಯಸ್ಸಾದಮೇಲೆ ಬರುವುದು ಸಹಜ ಸಾವು. ಹೆತ್ತ ಅಪ್ಪ-ಅಮ್ಮನನ್ನು ಅವರ ವೃದ್ಧಾಪ್ಯದಲ್ಲಿ ನೋಡಿಕೊಳ್ಳಬೇಕಾದ್ದು ಮಕ್ಕಳ ಕರ್ತವ್ಯ. ಮಕ್ಕಳು ವೃದ್ಧ ತಂದೆ-ತಾಯಿಯರ ಸೇವೆಮಾಡುತ್ತಿರುವಾಗ ಸಹಜವಾಗಿ ಸಾವು ಬಂದರೆ ಮಕ್ಕಳು ಅಳುತ್ತಾ ಕುಳಿತುಕೊಳ್ಳುವ ಅವಶ್ಯಕತೆ ಇಲ್ಲ. ಬದುಕಿದ್ದಾಗ ತಂದೆ-ತಾಯಿಯರ ಸೇವೆ ಮಾಡಿದ ಸಮಾಧಾನವಿರುತ್ತದೆ. ಆದರೆ ಸೇವೆ ಮಾಡಬೇಕಾದಾಗ ಸೇವೆ ಮಾಡದೆ ಅಪ್ಪ-ಅಮ್ಮ ಸತ್ತಾಗ ಮೃತದೇಹದ ಮುಂದೆ ಕುಳಿತು ಕಣ್ಣೀರು ಹಾಕಿದರೇನು ಪ್ರಯೋಜನ? ಆಗ ನಿರ್ವಹಿಸಬೇಕಾದ ಜವಾಬ್ದಾರಿಯೇ ಬೇರೆ. ಮೃತದೇಹವನ್ನು ಪಂಚಭೂತಗಳಲ್ಲಿ ಲೀನವಾಗಿಸಲು ಅಗತ್ಯವಾದ ಅಂತ್ಯಸಂಸ್ಕಾರ ಕ್ರಿಯೆಗಳು. ಅಷ್ಟೆ
                 ಪುನರಪಿ ಜನನಮ್-ಪುನರಪಿ ಮರಣಮ್ ಪುನರಪಿ ಜನನೀ ಜಠರೇ ಶಯನಮ್, ಇಹಸಂಸಾರೇ ಬಹುದುಸ್ತಾರೇ ಕೃಪಯಾ ಪಾರೇ ಪಾಹಿ ಮುರಾರೇ,ಭಜಗೋವಿಂದಮ್, ಭಜಗೋವಿಂದಮ್, ಗೋವಿಂದಮ್ ಭಜ ಮೂಢಮತೇ-ಎಂದು ಶಂಕರರು ಹೇಳುತ್ತಾರೆ.
                        ಮತ್ತೆ ಹುಟ್ಟುವುದು ಮತ್ತೆ ಸಾಯುವುದು ಮತ್ತೆ ತಾಯಿಯ ಗರ್ಭದಲ್ಲಿ ಸೇರಿ ಮಲಗುವುದು, ಈ ರೀತಿಯ ಸಂಸಾರಕ್ಕೆ ಪಾರವೇ ಇಲ್ಲ. ಬಹಳ ಸುಲಭವಾಗಿ ಈ ಹುಟ್ಟು-ಸಾವುಗಳ ಚಕ್ರದಿಂದ ಹೊರಬರಲಾಗುವುದಿಲ್ಲ.ಆದ್ದರಿಂದ ಹುಟ್ಟಿರುವಾಗ ಆ ಭಗವಂತನ ಸ್ಮರಣೆಯನ್ನು ಮಾಡು, ಎಂದು ಶಂಕರರು ಹೇಳುತ್ತಾರೆ.

ಅಂದರೆ ಹುಟ್ಟು-ಸಾವುಗಳನ್ನು ಯಾರೂ ತಪ್ಪಿಸುಕೊಳ್ಳಲು ಸಾಧ್ಯವೇ ಇಲ್ಲ. ಹುಟ್ಟಿದವನು ಸಾಯಲೆ ಬೇಕು. ಸತ್ತವನು ಹುಟ್ಟಲೇ ಬೇಕು. ಈ ಹುಟ್ಟು ಸಾವುಗಳೆಲ್ಲಾ ಜಡ ಶರೀರಕ್ಕೇ ಹೊರತೂ ಆತ್ಮಕ್ಕಲ್ಲ. ಆದ್ದರಿಂದ ಶೋಕಿಸುವ ಅಗತ್ಯವಿಲ್ಲ.

ಭಗವದ್ಗೀತೆಯಲ್ಲಿ ಶ್ರೀಕೃಷ್ಣನ ಈ ಮಾತುಗಳನ್ನು ಕೇಳಿ..
[ಸಾಂಖ್ಯಾಯೋಗ ಶ್ಲೋಕ - ೨೭]
ಜಾತಸ್ಯ ಹಿ ಧ್ರುವೋ ಮೃತ್ಯುಃ ಧ್ರುವಂ ಜನ್ಮ ಮೃತಸ್ಯ ಚ |
ತಸ್ಮಾದಪರಿಹಾರ್ಯೇರ್ಥೇ ನತ್ವಂ ಶೋಚಿತು ಮರ್ಹಸಿ ||

ಹುಟ್ಟಿದವನಿಗೆ ಮರಣವು ನಿಶ್ಚಯವು ಮತ್ತು ಸತ್ತವನಿಗೆ ಜನ್ಮವು ನಿಶ್ಚಯವು. ಆದುದರಿಂದ ಪರಿಹರಿಸಲಾಗದ ಈ ವಿಷಯದಲ್ಲಿ ನೀನು ಶೋಕಿಸಬಾರದು

ದೇಹೀ ನಿತ್ಯ ಮವಧ್ಯೋಯಂ ದೇಹೇ ಸರ್ವಸ್ಯ ಭಾರತ |
ತಸ್ಮಾತ್ ಸರ್ವಾಣಿ ಭೂತಾನಿ ನ ತ್ವಂ ಶೋಚಿತುಮರ್ಹಸಿ ||
[ಸಾಂಖ್ಯಾಯೋಗ ಶ್ಲೋಕ - ೩೦]
ಎಲ್ಲರ ದೇಹದಲ್ಲೂ ಇರುವ ಈ ಆತ್ಮನು ಎಂದಿಗೂ ನಾಶವಾಗುವುದಿಲ್ಲ. ಆದ್ದರಿಂದ ನೀನು ಸಮಸ್ತ ಪ್ರಾಣಿಗಳನ್ನು ಕುರಿತು ಶೋಕಿಸಬಾರದು. ಹೀಗೆ ಸಾವಿನ ಬಗ್ಗೆ ವೇದವು ಏನು ಹೇಳಿದೆಯೋ ಅದನ್ನೇ ಶ್ರೀ ಕೃಷ್ಣನೂ ಹೇಳಿದ್ದಾನೆ. ಶಂಕರಾಚಾರ್ಯರೂ ಹೇಳಿದ್ದಾರೆ.
ಗತಿಸಿದವರ ಬಗ್ಗೆ ಶೋಕಿಸದಿರು,ತಮಸ್ಸಿನಿಂದ ಮೇಲೇಳು, ನಿನ್ನ ಕೈ ಹಿಡಿದು ನಾನು ಮೇಲೆತ್ತುತ್ತೇನೆ- ಎಂಬ ಭಗವಂತನ ಮಾತು ನಮಗೆ ಧೈರ್ಯವನ್ನು ಕೊಡುವಂತಹದ್ದು. ತನ್ನ ಚಿಕ್ಕ ಪ್ರಾಯದಲ್ಲಿ ಪತಿಯನ್ನು ಕಳೆದುಕೊಂಡು ಚಿಕ್ಕಪುಟ್ಟ ಮಕ್ಕಳೊಡನೆ ಒಬ್ಬ ಸ್ತ್ರೀ ಬದುಕಬೇಕಾದ ಅನಿವಾರ್ಯ ಪರಿಸ್ಥಿಗಳು ಬಂದಿರುವ ಹಲವು ಉಧಾಹರಣೆಗಳನ್ನು ಕಾಣಬಹುದು. ಆ ಸಂದರ್ಭದಲ್ಲಿ ತಾಯಿಯಾದವಳು ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ನಡೆಸಬೇಕೋ ಅಥವಾ ಸತ್ತ ಪತಿಯ ಬಗ್ಗೆ ಶೋಕಿಸುತ್ತಾ ಕುಳಿತುಕೊಳ್ಳಬೇಕೋ. ಇಂತಹ ಸಂದರ್ಭದಲ್ಲಿ ವೇದವು ನಮಗೆ ಸಹಾಯಕ್ಕೆ ಬರುತ್ತದೆ. ಇಂತಹಾ ದು:ಖದ ಸ್ಥಿತಿಯಲ್ಲೂ ತಾಯಿಯಾದವಳು ಮಕ್ಕಳ ಅಭ್ಯುದಯದ ಬಗ್ಗೆ ಯೋಚಿಸಬೇಕೇ ಹೊರತೂ ಸತ್ತ ಪತಿಯ ಬಗ್ಗೆ ದು:ಖಿಸುತ್ತಾ ಕುಳಿತುಕೊಳ್ಳಕೂಡದು. ಅಂತಹಾ ತಮಸ್ಸಿನಿಂದ ಹೊರ ಬರಲು ವೇದವು ಕರೆಕೊಡುತ್ತದೆ. ಸಮಾಜದಲ್ಲಿ ತನ್ನ ಬಗ್ಗೆ ಜನರು ಏನು ಅಂದುಕೊಂಡಾರೋ ಎಂಬ ಭೀತಿಯಲ್ಲಿ ತಮ್ಮ ಜೀವನವನ್ನು ಹಾಳುಮಾಡಿಕೊಳ್ಳುವ ಅನೇಕ ಸ್ತ್ರೀಯರನ್ನು ಸಮಾಜದಲ್ಲಿ ಕಾಣಬಹುದು. ಅಂತಹಾ ಸೋದರಿಯರಿಗೆಲ್ಲಾ ವೇದವು ಮಾನಸಿಕವಾಗಿ ಶಕ್ತಿಯನ್ನು ತುಂಬುತ್ತದೆ.

ಒಬ್ಬ ವ್ಯಕ್ತಿಯ ಸಾವಿನಿಂದ ಕುಟುಂಬದವರು ಶೋಕಸಾಗರದಲ್ಲಿ ಮುಳುಗಿದಾಗ ಅಂತವರಿಗೆ ವೇದವು ಹೇಳುತ್ತದೆ.. . . .
ಮೈತಂ ಪಂಥಾಮನು ಗಾ ಭೀಮ ಏಷ ಯೇನ ಪೂರ್ವಂ ನೇಯಥ ತಂ ಬ್ರವೀಮಿ|
ತಮ ಏತತ್ ಪುರುಷ ಮಾ ಪ್ರ ಪತ್ಥಾ ಭಯಂ ಪರಸ್ತಾದಭಯಂ ತೇ ಅರ್ವಾಕ್ ||

[ಅಥರ್ವ ವೇದ ಕಾಂಡ-೮, ಸೂಕ್ತ-೧, ಮಂತ್ರ-೧೦]

ಅನ್ವಯಾರ್ಥ:
ಏತಮ್ ಪಂಥಾನಮ್ ಮಾ ಅನುಗಾಃ = ಈ ಪಲಾಯನವಾದದ ಮಾರ್ಗವನ್ನು ಅನುಸರಿಸದಿರು
ಭೀಮ ಏಷ: = ಇದು ಭಯಾನಕವಾಗಿದೆ
ಯೇನ ಪೂರ್ವಮ್ ನ ಇಯಥ = ಯಾವ ಮಾರ್ಗದಲ್ಲಿ ನೀನು ಮೊದಲಿನಿಂದಲೂ ಹೋಗಿಲ್ಲವೋ
ತಮ್ ಬ್ರಮೀಮಿ = ಅದನ್ನು ಕುರಿತು ನಿನಗೆ ಹೇಳುತ್ತೇನೆ
ಏತತ್ ತಮಃ = ಈ ಮೌಢ್ಯದ ಮಾರ್ಗವು ತಮಸ್ಸಿನಿಂದ ತುಂಬಿದೆ
ಪುರುಷ = ಹೇ ಜೀವ ಪುರುಷನೇ
ಮಾ ಪ್ರಪತ್ಥಾಃ = ನೀನು ಕತ್ತಲೆಯಲ್ಲಿ ಹೋಗದಿರು,ಕೆಳಗೆ ಬೀಳದಿರು [ಏಕೆಂದರೆ]
ಪರಸ್ಥಾತ್ ಭಯಮ್ = ಅದರಾಚೆಗೆ ಭಯವಿದೆ
ತೇ ಅರ್ವಾಕ್ ಅಭಯಮ್ = ಮುಂದೆ ಮುನ್ನಡೆದರೆ ನಿನಗೆ ಅಭಯವಿದೆ,ಬೆಳಕಿದೆ.
ಭಾವಾರ್ಥ:-
ಯಾರೇ ಸತ್ತರೂ ದುಃಖಿಸಿ ಕೂರುವಂತಹ ಪಲಾಯನ ವಾದವನ್ನು ಅನುಸರಿಸಬೇಡ.ಏಕೆಂದರೆ ಆ ಮಾರ್ಗವು ಆತ್ಮಘಾತಕವೂ, ಭಯಕಾರವೂ ಆದುದಾಗಿದೆ. ನಿರ್ಭಯವಾದ ಸ್ವಚ್ಚ ಬೆಳಕಿನಲ್ಲಿ ಮುನ್ನಡೆದೆಯಾದರೆ ಅಲ್ಲಿ ಅಭಯವೂ ಇದೆ, ಬೆಳಕೂ ಇದೆ.
                ಈ ವೇದ ಮಂತ್ರದ ಅರ್ಥವನ್ನು ಅರಿಯುತ್ತಾ ಹೋದಂತೆ ರೋಮಾಂಚನವಾಗದಿರದು. ಯಾವುದೇ ದುಃಖದ ಸಮಯದಲ್ಲಿ ಶೋಕಿಸುತ್ತಾ ಕುಳಿತರೆ ಆ ಪರಿಸ್ಥಿತಿಯು ಸರಿಹೋಗುವುದಿಲ್ಲ.ಬದಲಿಗೆ ಭಯವು ಹೆಚ್ಚಾಗುತ್ತದೆ. ತನ್ನ ಬದುಕಿನ ಬಗ್ಗೆ ಬೇಸರಮೂಡುತ್ತದೆ. ಇದನ್ನೇ ವೇದವು ತಮಸ್ಸು ಎನ್ನುತ್ತದೆ. ಬದಲಿಗೆ ದುಃಖಿಸದೆ ಮುಂದೆ ಮುನ್ನಡೆದರೆ ದಾರಿ ಕಾಣುತ್ತದೆ, ಪರಿಸ್ಥಿಯನ್ನು ಮೆಟ್ಟಿ ನಿಲ್ಲುವಂತಹ ಸಾಮರ್ಥ್ಯವು ತಾನೇ ತಾನಾಗಿ ಬರುತ್ತದೆ. ನಾನು ಕೈ ಹಿಡಿದು ಮೇಲೆತ್ತುತ್ತೇನೆ ಎಂಬ ಭಗವಂತನ ಅಭಯದ ಮಾತು ಎಷ್ಟು ಶಕ್ತಿಯನ್ನು ಕೊಡುತ್ತದೆ! ಅಲ್ಲವೇ?

ಆ ಹಳ್ಳಿಯ ಅವಿದ್ಯಾವಂತ ಮುದುಕಿಯ ನಡೆಯು ವೇದಕ್ಕನುಗುಣವಾಗಿಯೇ ಇದೆ-ಅಲ್ಲವೇ?

ಈ ಸಂದರ್ಭದಲ್ಲಿ ಹತ್ತಿರದ ಹಂಪಾಪುರದಲ್ಲೇ ಇಪ್ಪತ್ತು ವಯಸ್ಸಿನ ಮಗನನ್ನು ಕಳೆದುಕೊಂಡು ತಾಯಿಯು ಅವನ ಕೊರಗಿನಲ್ಲಿ ಹಾಸಿಗೆ ಹಿಡಿದಾಗ RSS ಪ್ರಚಾರಕರೊಬ್ಬರ ಸಲಹೆಯಂತೆ ನಾಲ್ಕು ಹಸುಗಳನ್ನು ಸಾಕಲು ಆರಂಭಿಸಿದವರು, ಈಗ ಗೋಶಾಲೆಯನ್ನೇ ನಡೆಸುತ್ತಾ ಗೋವುಗಳಲ್ಲೇ ಮಗನನ್ನು ಕಂಡು ಗೋ ಸೇವೆ ಮಾಡಿಕೊಂಡು ಸಮಾಜ ಮುಖಿ ಕೆಲಸದಲ್ಲಿ ಪೂರ್ಣ ತೊಡಗಿಸಿಕೊಂಡಿದ್ದಾರೆ.ಕಳೆದ ಕೆಲವು ದಿನಗಳಲ್ಲಿ ನನ್ನ ಸಂಬಂಧಿಗಳು ಮೂರು ಜನ ಕ್ಯಾಲಿಕಟ್ ಬೀಚ್ ನಲ್ಲಿ ಸಮುದ್ರದ ಅಲೆಗೆ ಸಿಕ್ಕಿ ಕೊನೆಯುಸಿರೆಳೆದರು. ಒಂದು ಮನೆಯ ಇಬ್ಬರು ಅಳಿಯಂದಿರು ಮತ್ತು ಒಬ್ಬ ಮೊಮ್ಮಗ. ಆ ಅತ್ತೆ-ಮಾವ ಮೌನವಾಗಿ ಎಲ್ಲವನ್ನೂ ಸಹಿಸಿದರೆ ಅಪ್ಪ-ಅಮ್ಮಂದಿರು ಕಂಗಾಲಾಗಿದ್ದರು. ಎಲ್ಲರಿಗೂ ವೇದದ ಹಾದಿಯೊಂದೇ ಪರಿಹಾರ. ಭಗವಂತನ ಮೇಲಿನ ಅಚಲ ನಂಬಿಕೆಯೇ ಅವರನ್ನೆಲ್ಲಾ ಮಕ್ಕಳ ಅಗಲುವಿಕೆಯ ನೋವಿನಿಂದ ಪಾರುಮಾಡಬೇಕು.

Tuesday, November 3, 2015

ನಿಮ್ಮ ಪಾತ್ರವೇನು?

ನಮ್ಮ ನೆಚ್ಚಿನ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರಮೋದಿಯವರು ನಮ್ಮ ದೇಶದ ಯುವ ಸಂಪತ್ತಿನ ಬಗ್ಗೆ ಬಲು ವಿಶ್ವಾಸ ಹೊಂದಿದ್ದಾರೆ. ಇದೀಗ ಕಾಲ ಪಕ್ವವಾಗಿದೆ. ಯುವ ಮಿತ್ರರೇ, ನಿಮಗೆ ಈಗ ಪಂಥಾಹ್ವಾನವಿದೆ. ನಮ್ಮ ದೇಶದ ಸಂಸ್ಕೃತಿ, ಪರಂಪರೆ, ಆಚರಣೆಗಳನ್ನು ವಿಶ್ವದೆತ್ತರಕ್ಕೆ ಕೊಂಡುಯ್ಯುವ ಹೊಣೆ ನಿಮ್ಮ ಹೆಗಲ ಮೇಲಿದೆ. ಈಗ ನಿಮಗೆ ಸತ್ವ ಪರೀಕ್ಷೆಯ ಕಾಲ. ಧರ್ಮ ವಿರೋಧಿಗಳು, ಭಾರತದ ವಿರೋಧಿಗಳು ನಮ್ಮ ಧರ್ಮ, ಸಂಸ್ಕೃತಿಗಳ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಒಂದು ಸಣ್ಣ ಮೌಢ್ಯವನ್ನು ಹಿಡಿದು ಇಡೀ ಧರ್ಮವನ್ನು ವಿರೋಧಿಸುವ ಶಡ್ಯಂತ್ರ ನಡೆದಿದೆ. ಹೌದು, ಮೌಢ್ಯದ ವಿಚಾರದಲ್ಲಿ ನಾವೇಕೆ ಹೊಂದಾಣಿಕೆ ಮಾಡಿಕೊಳ್ಳಬೇಕು? ಅನ್ಯಮತಗಳ ವಿಚಾರ ಹಾಗಿರಲಿ. ಹಿಂದುಸಮಾಜದಲ್ಲಿ ಇಂದಿನ ಕಾಲಕ್ಕೆ ಬಾಹಿರವಾದ ಆಚರಣೆಗಳಿದ್ದರೆ ಅದನ್ನೇಕೆ ಬುಡ ಸಮೇತ ಕಿತ್ತುಹಾಕಬಾರದು? ಧರ್ಮವಿರೋಧಿಗಳ ಹಲ್ಲಿಗೆ ಆಹಾರವಾಗುವ ಯಾವ ಸಂಗತಿಗಳಿದ್ದರೂ ಅದನ್ನು ಬೇರು ಸಮೇತ ಕಿತ್ತು ಹಾಕಲೇ ಬೇಕು. ನಮ್ಮ ಮನೆಯನ್ನು ಅಚ್ಚುಕಟ್ಟಾಗಿ ಗುಡಿಸಿಕೊಂಡು, ಆನಂದವಾಗಿರಬೇಡವೇ? ಇಂತಾ ಸ್ವಚ್ಚತಾ ಆಂದೋಳನದಲ್ಲಿ ನಿಮ್ಮ ಪಾತ್ರವೇನು?

ಯುವ ಲೇಖಕರಾದ ಶ್ರೀ ಈಶ್ವರಚಂದ್ರ ಜೋಯಿಸ್ ಇವರಿಗೆ ವೇದಸುಧೆ ಬಳಗದ ಸ್ವಾಗತ

  ಯುವ ಲೇಖಕರಾದ ಶ್ರೀ ಈಶ್ವರಚಂದ್ರ ಜೋಯಿಸ್ ಇವರಿಗೆ  ವೇದಸುಧೆ ಬಳಗದ  ಸ್ವಾಗತ.


PhD Research ScholarTirupathi, India

Monday, November 2, 2015

ಗೋವಂಶ ಉಳಿಸಿ, ಬೆಳಸಿ, ಗೋವನ್ನು ರಕ್ಷಿಸಿ-ಎನ್ನುವುದು BJP ಶ್ಲೋಗನ್ ಆಗಬೇಕೇ?


ಅಬ್ಬಾ!ಒಂದುಕಾಲದಲ್ಲಿ ಸೂರ್ಯೋದಯಕ್ಕೆ ಮುಂಚೆ ಹಾಸಿಗೆಯಿಂದೆದ್ದು ಮನೆಯ ಒಂದು ಭಾಗದಲ್ಲಿರುತ್ತಿದ್ದ ಕೊಟ್ಟಿಗೆಯಲ್ಲಿನ ಗೋವುಗಳ ದರ್ಶನ ಮಾಡಿ ಮುಖ ತೊಳೆದು , ಸೂರ್ಯೋದಯ   ವಾಗುತ್ತಿದ್ದಂತೆ ಮನೆಯ ಹೊರಗೆ ಸೂರ್ಯದೇವನಿಗೆ ಕೈ ಮುಗಿದು ಆರಂಭವಾಗುತ್ತಿದ್ದ ದಿನಚರಿ!! ಇದು ಸಾಮಾನ್ಯವಾಗಿ  ನಮ್ಮ ಎಲ್ಲಾ ಹಳ್ಳಿ ರೈತರ ಜೀವನ ಪದ್ದತಿ! ಸೋಮವಾರಗಳಲ್ಲಿ ಎತ್ತಿನ ಬದಲು ಪತಿಪತ್ನಿಯರೇ ನೊಗ ಹೊತ್ತು ಭೂಮಿ ಉಳುತ್ತಿದ್ದುದು ಸಾಮಾನ್ಯ ದೃಶ್ಯ!
ಗೋವೆಂದರೆ ಅಷ್ಟು ಭಕ್ತಿ. ಗೋಮಾತಾ ಪ್ರತ್ಯಕ್ಷ ದೇವತೆ. ಯಾರಿಗೆ ಈ ವಿಷಯ ಗೊತ್ತಿಲ್ಲ? ಸಿದ್ರಾಮಯ್ಯನವರಿಗೆ ಗೊತ್ತಿಲ್ಲವೇ? ಉಳಿದ ರಾಜಕಾರಣಿಗಳಿಗೆ ಗೊತ್ತಿಲ್ಲವೇ?
ರಾಜಕೀಯಕ್ಕಾಗಿ ಏನೆಲ್ಲಾ ಮಾತಾಡ್ತಾರೆ? ಏನೆಲ್ಲಾ ಮಾಡ್ತಾರೆ?
ರಸ್ತೆಯಲ್ಲಿ ಸಹಭೋಜನ ಮಾಡಿ-ಅಲ್ಲಿ ಗೋಮಾಂಸ ತಿನ್ನುತ್ತಾರೆ! ಪುರಭವನದೆದುರು, ಜಿಲ್ಲಾಧಿಕಾರಿಗಳ ಕಚೇರಿ ಎದಿರು ಗೋಮಾಂಸದೂಟಮಾಡುತ್ತಾರೆ!!
ಛೆ! ಛೇ!!
ಇದೇನಿದು? ಏನಾಯ್ತು ಈ ರಾಜಕಾರಣಿಗಳಿಗೆ?
ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತ. ಕಾಂಗ್ರೆಸ್ಸಿನ ನಮ್ಮ ಮುಖ್ಯ ಮಂತ್ರಿ ಹೇಳ್ತಾರೆ- " ಇದುವರೆವಿಗೆ ನಾನು ಗೋಮಾಂಸ ತಿಂದಿಲ್ಲ. BJP ಯವರಿಗೆ ಬುದ್ಧಿ ಕಲಿಸಲು ಗೋಮಾಂಸವನ್ನು ತಿನ್ನುವೆ. ಹಂದಿ ಮಾಂಸವನ್ನೂ ತಿನ್ನುವೆ.
ಸ್ವಾಮಿ, ಮುಖ್ಯಮಂತ್ರಿಗಳೇ
ನೀವು ಮುಖ್ಯಮಂತ್ರಿಗಳಾಗಲು ಕರ್ನಾಟಕದ ಮತದಾರ ಕಾರಣ. BJP ಯವರಿಗೆ ಚಾಲೆಂಜ್ ಮಾಡಲು ಗೋಮಾಂಸ ತಿನ್ನುತ್ತೇನೆಂದರೆ ಅದರರ್ಥವೇನು? ಸಾಮಾನ್ಯಮತದಾರನ ಭಾವನೆಗೆ ಅದೆಷ್ಟು ಪೆಟ್ಟು ಬೀಳುತ್ತದೆಂದು ಯೋಚಿಸಿದ್ದೀರಾ?
ಈಗಾಗಲೇ ನಮ್ಮ ಸಾಮಾಜಿಕ ಸ್ವಾಸ್ಥ್ಯ ಹದಗೆಟ್ಟಿರುವುದು ಸಾಲದೇ? ಇನ್ನೂ ಅದೆಷ್ಟು ಹದಗೆಡಬೇಕು? ನಾಡಹಸು ಎತ್ತುಗಳ ವಂಶ ಕೊನೆಯಾದರೆ ಅದೆಂತಹ ಘೋರಪರಿಣಾಮ ಬೀರುತ್ತದೆಂಬ ವಿವೇಚನೆ ನಿಮಗಿದೆಯೇ?
ದನಗಳ ಗೊಬ್ಬರದಿಂದ ಬೆಳೆಯುತ್ತಿದ್ದ ಬೆಳೆ ಹೇಗಿರುತ್ತಿತ್ತು?
ಮನೆಯಲ್ಲಿ ಒಂದು ಜೊತೆ ಎತ್ತು ಒಂದು ಕರಾವಿನ ಹಸು ಇದ್ದರೆ ಒಂದು ಎಕರೆ ಜಮೀನಿನಲ್ಲಿ ರೈತ ಎಷ್ಟು ಆನಂದವಾಗಿ ಬಾಳ್ಮೆ ನಡೆಸುತ್ತಿದ್ದರು!!
ಜೋಡೆತ್ತಿನ ಗಾಡಿ!!
ನೇಗಿಲಿನಿಂದ ಉಳುಮೆ!!
ದನಗಳ ಗೊಬ್ಬರ!
ಕರಾವಿನ ಹಸು!!
ಈ  ವಾಕ್ಯಗಳು ನೆನಪಾದಾಗ ನಿಮ್ಮ ಕಣ್ಣು ತೇವಗೊಳ್ಳಲಿಲ್ಲವೆಂದರೆ ಈ ನೆಲದ ವಾಸನೆ ಮರೆತು ಹೋಗಿದೆ ಎಂದೇ ಭಾವಿಸಬೇಕಾಗುತ್ತದೆ!!
ಇದೇ ನಾಡದನಗಳ ಸಗಣಿ, ಗಂಜಲಗಳು ಹಲವಾರು ರೋಗಗಳಿಗೆ ರಾಮಬಾಣ!! ಎನ್ನುವುದು ಇತ್ತೀಚಿನ ಸಂಶೋಧನೆ!!!!
ಆದರೆ ಇದೇ ನಾಡದನಗಳ ಉಸಿರಿನ ವಾಸನೆಯಿಂದಲೇ ಮನೆಯಲ್ಲಿ ಆರೋಗ್ಯ ನೆಲೆಸುತ್ತಿತ್ತು! ಎಂಬುದು ನಮ್ಮ ಹಿರಿಯರ ಅನುಭವ!!
ಸ್ವಾಮಿ,
ನಿಮ್ಮ  ರಾಜಕಾರಣಕ್ಕಾಗಿ ಸಮಾಜದ ಸ್ವಾಸ್ಥ್ಯವನ್ನು ನಾಶಮಾಡಬೇಡಿ.
ಇಡೀ ವಿಶ್ವವು ನಮ್ಮ ಕಡೆ ನೋಡುತ್ತಿದೆ! ಎಂಬ ಎಚ್ಚರ ನಿಮಗೂ ಇರಲಿ. ವಿಶ್ವವು ನಮ್ಮನ್ನು ಗೌರವಿಸಲು  ಪ್ರಮುಖ ಕಾರಣ ಏನೆಂಬುದರ ಅರಿವು ನಿಮಗಿಲ್ಲವೇ?
ಇಂದಿನ ಯುವಕರಿಗೆ ಈ ನೆಲದ ಮಣ್ಣಿನ ವಾಸನೆ ಗೊತ್ತಿಲ್ಲ. ಅದೆಲ್ಲಾ ರಾಸಾಯನಿಕ ಗೊಬ್ಬರದಿಂದ ಗಬ್ಬೆದ್ದು ಹೋಗಿದೆ! ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಯಿಂದ ನಮ್ಮ ನಿಜ ಸಂಸ್ಕೃತಿಯ ಅರಿವೇ ಇಲ್ಲವಾಗಿದೆ.
ಇಂದಿನ ನನ್ನ ಪ್ರೀತಿಯ ಯುವ ಮಿತ್ರರೇ!

ನಾವೆಲ್ಲಾ ಅಮ್ಮನ ಹಾಲು ಕುಡಿದದ್ದು ಒಂದೆರಡು ವರ್ಷ. ಆಮೇಲೇ?
 ಮನೆಯಲ್ಲಿರುತ್ತಿದ್ದ ನಾಡಹಸುವಿನ ಕೆಚ್ಚಲಿಗೆ ಬಾಯಿಹಾಕಿ ಚಪ್ಪರಿಸಿದವರು ನಾವು!!
ನಮ್ಮ    ಆಯುಶ್ಯ ಇನ್ನೇನು ಮುಗಿಯುತ್ತಾ ಬಂತು!  ನಮ್ಮ   ತಲೆಮಾರು ಮಾಯವಾಗುದಕ್ಕೆ ಮುಂಚೆಯೇ  ನಮ್ಮ ಗತವೈಭವಗಳೆಲ್ಲಾ ಮಾಯವಾಗುತ್ತಿವೆ!!
ಓಹ್! ಗತ ವೈಭವ ಎಂದಾಗ ನೀವು ಅಣಕಿಸುತ್ತೀರ, ಅಲ್ವಾ?
ಹೌದು, ಇಂದಿನಂತೆ ಕಂಪ್ಯೂಟರ್, ಮೊಬೈಲ್, ಟಿ.ವಿ. ನಮ್ಮ ಕಾಲದಲ್ಲಿರಲಿಲ್ಲ. ಕಾರ್ ಗಳ ಓಡಾಟವೂ ಇರಲಿಲ್ಲ.
ಜೊತೆ ಜೊತೆಗೆ  ನಮ್ಮ ಕಾಲದಲ್ಲಿ ಮಕ್ಕಳು ಕನ್ನಡಕ ಹಾಕುತ್ತಿರಲಿಲ್ಲ!
ಬಿ.ಪಿ. ಶುಗರ್  ಖಾಯಿಲೆ ಗೊತ್ತಿರಲಿಲ್ಲ!!
ಅಂದಿನ ಕಾಲದಲ್ಲಿ  ತಿಂಗಳಲ್ಲಿ    ಒಂದು ಕ್ವಿಂಟಾಲ್ ಅಕ್ಕಿ ಖರ್ಚಾಗುತ್ತಿದ್ದ ಮನೆಯಲ್ಲಿ ಇಂದು 10 ಕೆ.ಜಿ. ಅಕ್ಕಿ ಖರ್ಚಾಗುತ್ತಿಲ್ಲ.
ಅಂದು ಹಸಿವಿತ್ತು. ಆರೋಗ್ಯವಿತ್ತು. ಅನ್ನ ರುಚಿಸುತ್ತಿತ್ತು
ಇಂದು ಹಸಿವಿಲ್ಲ. ಆರೋಗ್ಯವಿಲ್ಲ. ಅನ್ನ ರುಚಿಸುವುದಿಲ್ಲ!!
ಇದು ಸತ್ಯವೋ? ಸುಳ್ಳೋ ನೀವೇ ಹೇಳಿ. ನಿಮಗೆ ಊಹಿಸಲು ಕಷ್ಟವಾದೀತು. ಬದುಕಿದ್ದರೆ  ನಿಮ್ಮ       ಅಜ್ಜ-ಅಜ್ಜಿ ಅಥವಾ ನಿಮ್ಮ ಅಪ್ಪ-ಅಮ್ಮನನ್ನು ಕೇಳಿ. ಸತ್ಯವನ್ನು ತಿಳಿದುಕೊಳ್ಳಿ.
ಗೋವಂಶ ಉಳಿಸಿ, ಬೆಳಸಿ, ಗೋವನ್ನು ರಕ್ಷಿಸಿ-ಎನ್ನುವುದು BJP ಶ್ಲೋಗನ್ ಆಗಬೇಕೇ? ಇನ್ನುಳಿದ ಪಕ್ಷಗಳು ಈ ನೆಲದ ಸಂಸ್ಕೃತಿಯ ವಿರೋಧಿಗಳೇ?

Tuesday, October 13, 2015

ದೇವಾಲಯಗಳಲ್ಲಿ ಶುಷ್ಕ ಪೂಜೆಗಳಿಗಿಂತ ಜ್ಞಾನಪ್ರಸರಣ ತುರ್ತಾಗಿ ನಡೆಯಬೇಕಾಗಿದೆ

 ಶರನ್ನವರಾತ್ರಿಯ  ಮೊದಲದಿನವಾದ ಇಂದು ವಿಜಯವಾಣಿಯಲ್ಲಿ ಡಾ.ಕೆ.ಎಸ್.ನಾರಾಯಣಾಚಾರ್ಯರ ಮನದಾಳದ ನೇರ-ದಿಟ್ಟ  ನುಡಿಗಳನ್ನು ಓದಿದ ಮೇಲೆ ದಿಕ್ಕೆಟ್ಟ ಜನರಿಗೆ ಸೂಕ್ತ ಮಾರ್ಗದರ್ಶಕರು ಈ ದೇಶದಲ್ಲಿ  ಇನ್ನೂ  ಇದ್ದಾರೆಂಬ ಭಾವನೆಯಿಂದ ನನ್ನ ಚಟುವಟಿಕೆಗಳಿಗೆ ಇನ್ನಷ್ಟು ವೇಗವನ್ನು ಕೊಡಬೇಕೆಂದು ಮನದಲ್ಲೇ ನಿರ್ಧರಿಸಿಕೊಂಡೆ.
ಈ ದೇಶ ಉದ್ಧಾರವಾಗಬೇಕಾದರೆ..... ಲೇಖನದ ಕೊನೆಯ ಮಾತು ದೇವಾಲಯಗಳಲ್ಲಿ  ಶುಷ್ಕ ಪೂಜೆಗಳಿಗಿಂತ ಜ್ಞಾನಪ್ರಸರಣ ತುರ್ತಾಗಿ ನಡೆಯಬೇಕಾಗಿದೆ ಎಂಬ ಮಾತು ಇಂದಿಗೆ ಅತ್ಯಂತ ಮಹತ್ವವನ್ನು ಪಡೆಯುತ್ತದೆ. ನನಗೆ ಲೇಖನ ಓದುವಾಗ ಹಾಸನದ ಶಂಕರಮಠದಲ್ಲಿ ಈಗ್ಗೆ ಸುಮಾರು ಎಂಟು ಹತ್ತು ವರ್ಷಗಳಲ್ಲಿ ವಿಜಯದಶಮಿ ಸಂದರ್ಭಗಳಲ್ಲಿ ನಾವು ಆಯೋಜಿಸುತ್ತಿದ್ದ  ಜ್ಞಾನಯಜ್ಞದ ನೆನಪಾಗುತ್ತಿದೆ. ಗದಗ್ ಶ್ರೀರಾಮಕೃಷ್ಣಾಶ್ರಮದ ಪೂಜ್ಯ ನಿರ್ಭಯಾನಂದರು, ತುಮಕೂರಿನ ಪೂಜ್ಯ ವೀರೇಶಾನಂದರು, ಬೆಂಗಳೂರು ಭವತಾರಣಿ ಆಶ್ರಮದ ಮಾತಾಜಿ ವಿವೇಕಮಯೀ, ಚಿನ್ಮಯಾಮಿಷನ್ನಿನ ಬ್ರಹ್ಮಚಾರಿ ಸುಧರ್ಮಚೈತನ್ಯರು, ಹುಬ್ಬಳ್ಳಿಯ ಪೂಜ್ಯ ಚಿದ್ರೂಪಾನಂದಸರಸ್ವತೀ, ಬೆಂಗಳೂರಿನ ವೇದಾಧ್ಯಾಯೀ ಶ್ರೀಸುಧಾಕರಶರ್ಮರು. . . . ಇವರೆಲ್ಲಾ ಬಂದು ನಡೆಸಿಕೊಡುತ್ತಿದ್ದ ಉಪನ್ಯಾಸಗಳು! ಅಬ್ಬಾ! ಒಂದೇ ಎರಡೇ!!
ಈಗಲೂ ಹಲವು ಮಿತ್ರರು ನನ್ನನ್ನು ಆಗಿಂದಾಗ್ಗೆ ಕೇಳುತ್ತಾರೆ ಯಾಕೆ ಉಪನ್ಯಾಸಗಳನ್ನು ನಡೆಸುವುದನ್ನು ನಿಲ್ಲಿಸಿ ಬಿಟ್ಟಿರಿ? ನಿಲ್ಲಿಸಿಲ್ಲ. ನನ್ನ ಕಾರ್ಯಚಟುವಟಿಕೆಗಳಲ್ಲಿ ಸ್ವಲ್ಪ ಬದಲಾವಣೆಯಾಗಿದೆ. ನಮ್ಮ ಮನೆ ಈಶಾವಾಸ್ಯಮ್ ನಲ್ಲಿ ಪ್ರತೀ ದಿನ ಸತ್ಸಂಗದಲ್ಲಿ ವೇದಭಾರತಿಯು ಇದೇ ಕೆಲಸವನ್ನು ಮಾಡುತ್ತಿದೆ-ಎನ್ನುತ್ತೇನೆ.
ಹೌದು ಶ್ರೀ ನಾರಾಯಣಾಚಾರ್ಯರ ಮಾತು ಎಷ್ಟು ಅರ್ಥಗರ್ಭಿತ! ದೇವಾಲಯಗಳಲ್ಲಿ  ಶುಷ್ಕ ಪೂಜೆಗಳಿಗಿಂತ ಜ್ಞಾನಪ್ರಸರಣ ತುರ್ತಾಗಿ ನಡೆಯಬೇಕಾಗಿದೆ ಇಂದಿನಿಂದ ಬಹುತೇಕ ದೇವಾಲಯಗಳಲ್ಲಿ ದುರ್ಗಾಮಾತೆಗೆ ಪ್ರತೀ ದಿನ ಒಂದೊಂದು ಅಲಂಕಾರ, ಹವನ-ಹೋಮಗಳು, ಪೂಜೆ ಪುನಸ್ಕಾರಗಳು ನಡೆಯುತ್ತವೆ. ಜನರು ಸಾಲುಗಟ್ಟಿ ದುರ್ಗೆಯ ದರ್ಶನ ಪಡೆಯುತ್ತಾರೆ. ಉತ್ತಮ ಕಾರ್ಯವೇ ಆಗಿದೆ. ಆದರೆ ಅಷ್ಟೇ ಸಾಕೇ? ಇವೆಲ್ಲವೂ ನಾವು ನೆಮ್ಮದಿಯಾಗಿರಬೇಕೆಂದು ಮಾಡುವ ದೇವತಾ ಕಾರ್ಯಗಳು ತಾನೇ? ಆದರೆ ನಿಜವಾಗಿ ನಮ್ಮ ಮನೆಗಳಲ್ಲಿ ನೆಮ್ಮದಿ ಇದೆಯೇ? ಸುಖ ಇದೆಯೇ? ಆನಂದಕ್ಕೆ ಆಸ್ಪದ ಇದೆಯೇ? ಮಕ್ಕಳೇ ಮನೆಗೆ ಆಸ್ತಿ ಅಲ್ಲವೇ? ಅವರು ನಿಜವಾಗಿ ಆಸ್ತಿಯಾಗಿದ್ದಾರಾ? ಒಂದು ವೇಳೆ ನಮ್ಮ ನಿರೀಕ್ಷೆಗೆ ತಕ್ಕಂತೆ ಅವರಿಲ್ಲವೆಂದಾದರೆ ತಪ್ಪು ಯಾರದ್ದು? ಮಕ್ಕಳದ್ದೇ? ಅಥವಾ ಪೋಷಕರದ್ದೇ?
ದೇವಾಲಯಗಳಲ್ಲಿ ನೋಡಿ, ಸಾಮಾನ್ಯವಾಗಿ ನಲವತ್ತು ವಯಸ್ಸಿನ ಮೇಲ್ಪಟ್ಟವರಿಂದಲೇ ತುಂಬಿರುತ್ತದೆ! ಉಪನ್ಯಾಸ ಕಾರ್ಯಕ್ರಮಗಳಿಗೆ ಬರುವವರು ಯಾರು? ಕಿವಿ ಮಂದವಾಗಿರುವ             ದೃಷ್ಟಿ ಕಮ್ಮಿಯಾಗಿರುವ! ಅರವತ್ತು ದಾಟಿದ ಎಪ್ಪತ್ತು ಎಂಬತ್ತರ ವೃದ್ಧರಿಗೆ ಉಪನ್ಯಾಸ! ಅವರಿಗೆ ವಿಷಯ ಯಾವುದಿರಬೇಕೋ ಅದಿರುತ್ತದೆ. ಆದರೆ ನಮ್ಮ ಯುವಕರು ಉಪನ್ಯಾಸಗಳಿಗೆ ಬರುತ್ತಾರಾ? ಬರುವುದಿಲ್ಲವಾದರೆ ಕಾgಣ ಏನು? ಅವರನ್ನು ಆಕರ್ಷಿಸುತ್ತಿರುವ ವಿಷಯಗಳು ಯಾವುವು? ಆಕರ್ಷಣೆಗೆ ಒಳಗಾಗುವ ವಿಷಯಗಳ ಪ್ರಭಾವ ಏನು? ಯುವಕರು ನಮ್ಮ ದೇಶದ ಸಂಪತ್ತೆಂಬುದು ನಮ್ಮ ನೆಚ್ಚಿನ ಪ್ರಧಾನಿಯವರ ಆಶಯ. ಆದರೆ ಎಷ್ಟು ಯುವಕರು ನಮ್ಮ ದೇಶಕ್ಕೆ ಆಸ್ತಿಯಾಗಿದ್ದಾರೆ! ಯುವ ಶಕ್ತಿಯ ಎಷ್ಟುಭಾಗ ದೂರದರ್ಶನದ ಮುಂದೆ ಕ್ರಿಕೆಟ್ ಪಂದ್ಯ ನೋಡುತ್ತಲೋ, ಅಂತರ್ಜಾಲದಲ್ಲಿ ಬೆತ್ತಲೆದೃಶ್ಯ ನೋಡುವುದರಲ್ಲೋ ಕಳೆದು ಹೋಗಿದೆ? ನಮ್ಮ ದೇಶದ ಎಷ್ಟು ಯುವಕರಿಗೆ ದೇಶಭಕ್ತಿ ಇದೆ? ದೇಶಕ್ಕಾಗಿ ನನ್ನ ಬದುಕು !! ಎನ್ನುವ ಮನೋಭಾವದ ಯುವಕರೆಷ್ಟು ಜನರಿದ್ದಾರೆ!!
ದೇಶದ ಇಂತಾ ದೊಡ್ದ ಯುವಸಂಪತ್ತಿನ ಉಪಯೋಗ ದೇಶಕ್ಕೆ ಸರಿಯಾಗಿ ಆಗಬೇಡವೇ? ಹಳ್ಳಿಗಳಲ್ಲಂತೂ ಪುಡಾರಿಗಳ ಹಿಂದೆ ಸುತ್ತುವ ಯುವಕರನ್ನು ನೋಡಿದಾಗ ಬಲು ದುಃಖವಾಗುತ್ತದೆ. ಇವರಲ್ಲಿ ಜಾಗೃತಿ ಮಾಡುವುದು ಯಾವಾಗ? ಯಾರು ಜಾಗೃತಿ ಕೆಲಸ ಮಾಡಬೇಕು!
ನಿಜವಾಗಿ ಅಂತಾ ಕೆಲಸ ಕೂಡ ನಡೆಯುತ್ತಿದೆ. ರಾ.ಸ್ವ. ಸಂಘ , ಪತಂಜಲಿ ಯೋಗ ಪೀಠ, ರಾಮಕೃಷ್ಣ ಮಿಷನ್, ಮುಂತಾದ ಸಂಘಟನೆಗಳು ಮಾಡುತ್ತಿವೆ. ಆದರೂ ಸಾಲದು. ನಮ್ಮ ಜನಸಂಖ್ಯೆಗೆ ಹೋಲಿಸಿದಾಗ ಕೆಲಸದ ವೇಗ ಇನ್ನೂ ಹೆಚ್ಚಬೇಕು.
ನಾರಾಯಣಾಚಾರ್ಯರು ತಮ್ಮ ಲೇಖನದಲ್ಲಿ  ದೇಶವನ್ನು ಕಾಡುತ್ತಿರುವ ಹಲಾವಾರು ಸಮಸ್ಯೆಗಳ ಬಗ್ಗೆ ಓದುಗರ ಕಣ್ ತೆರೆಸುವ ಪ್ರಯತ್ನ ಮಾಡಿದ್ದಾರೆ. ಪ್ರತಿಯೊಂದು ವಿಷಯಗಳೂ ಒಂದು ಲೇಖನ ಬರೆಯುವಷ್ಟು ಮಹತ್ವ ಉಳ್ಳ ವಿಷಯಗಳೇ ಆಗಿವೆ. ಕೊನೆಯಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಅವರ ಒಂದು ಸಲಹೆ ಗಮನಾರ್ಹ.  ಸಾಮಾಜಿಕ ಸಾಮರಸ್ಯಕ್ಕಾಗಿ ನಾವು ಹಳಬರ ಮಾರ್ಗದರ್ಶನಕ್ಕೆ ಮೊರೆ ಹೋಗಬೇಕು. ಶ್ರೀರಾಮಕೃಷ್ಣ, ವಿವೇಕಾನಂದ,ನಾರಾಯಣಗುರು, ಫುಲೆ, ಅಮೃತಾನಂದಮಯೀ. ಚಿನ್ಮಯಾನಂದ, ದಯಾನಂದರ ವಿಚಾರಧಾರೆಗಳು ಒಟ್ಟಾಗಿ ಇತ್ತ ಶ್ರಮಿಸಬೇಕು
ಈ ಮೇಲಿನ ಸಲಹೆಯಿಂದ ನನಗೆಷ್ಟು ಸಮಾಧಾನವಾಗಿದೆ ಎಂದರೆ ನಾವೀಗ ವೇದಭಾರತಿ ಮತ್ತು ಪತಂಜಲಿ ಯೋಗ ಪೀಠ ಒಂದು ವೇದಿಕೆಯಲ್ಲಿ ಎಲ್ಲರಿಗಾಗಿ ವೇದ, ಎಲ್ಲರಿಗಾಗಿ ಯೋಗ ಎಂಬ ಉದ್ದೇಶದೊಡನೆ ಚಟುವಟಿಕೆಯನ್ನು ಈ ವರ್ಷ ವಿಶ್ವ ಯೋಗದಿನದಿಂದ ಆರಂಭಿಸಿದ್ದೇವೆ. ಈಗಾಗಲೇ ನೂರಾರು ಜನರಿಗೆ ಯೋಗದ ತರಬೇತಿ, ವೇದದ ಅರಿವು ಮೂಡಿಸುವ ಕೆಲಸ ಸಾಗಿದೆ  ವೇದ-ಯೋಗ ಸಂಗಮದ ಹೆಸರಲ್ಲಿ. ಜನರ ಸಹಕಾರ ಪಡೆದು ನಮ್ಮ ಕಾರ್ಯವೇಗವನ್ನು ಹೆಚ್ಚಿಸಬೇಕೆಂಬ ಉದ್ದೇಶವೂ ಇದೆ.
-ಹರಿಹರಪುರಶ್ರೀಧರ್
ಸಂಯೋಜಕ, ವೇದಭಾರತೀ, ಹಾಸನ

Monday, October 12, 2015

ವೈದಿಕ ಧರ್ಮಾಭಿಮಾನೀ ಮಿತ್ರರೇ, ನಿಮ್ಮಲ್ಲೊಂದು ಮನವಿ.

ವೈದಿಕ ಧರ್ಮಾಭಿಮಾನೀ  ಮಿತ್ರರೇ,
ನಿಮ್ಮಲ್ಲೊಂದು ಮನವಿ.
ವೈದಿಕ ಧರ್ಮವು ನಿಂತ ನೀರಲ್ಲ. ಅದು ಗಂಗೆ. ಯಾವಾಗಲೂ ಹರಿಯುತ್ತಿದ್ದು ಅದರ ಸಂಪರ್ಕಕ್ಕೆ ಬಂದದ್ದನ್ನೆಲ್ಲಾ ಪಾವನ ಗೊಳಿಸುತ್ತಾ ತನ್ನನ್ನೂ ಕಾಲಕಾಲಕ್ಕೆ ಪವಿತ್ರಗೊಳಿಸಿಕೊಳ್ಳುತ್ತಾ ಸದಾಕಾಲ ಜಗತ್ತಿಗೆ ಹಿತವನ್ನುಂಟುಮಾಡುವುದೇ ವೈದಿಕ ಧರ್ಮದ ವೈಶಿಷ್ಠ್ಯ.
ವೇದವೇ ನಮಗೆ ಆಧಾರ. ಆದರೆ ವೇದಕ್ಕೆ ವಿರುದ್ಧವಾದ ಹಲವು ಆಚರಣೆಗಳೂ ಸಹ ಕಾಲಗತಿಯಲ್ಲಿ ರೂಢಿಯಲ್ಲಿ  ಸೇರಿಹೋಗಿರುವುದು ಸುಳ್ಳಲ್ಲ. ಅವುಗಳಲ್ಲಿ ಕೆಲವು ಯಾರಿಗೂ ಹಾನಿಮಾಡದೆ ಆಚರಿಸುವವನಿಗೆ ನೆಮ್ಮದಿ ಕೊಟ್ಟಿದ್ದರೆ  ಇನ್ನು ಕೆಲವು ಮಾನವೀಯತೆಗೇ ಕೊಡಲಿ ಪೆಟ್ಟು ಕೊಡುವಂತಹ ಆಚರಣೆಗಳು !
ಉದಾಹರಣೆಗೆ ವಿಗ್ರಹಾರಾಧನೆ. ಎಲ್ಲಿಯವರಗೆ ಇದು ವ್ಯಕ್ತಿಯ ನಿತ್ಯಬದುಕಿನಲ್ಲಿ ಮನಸ್ಸಿನ ನೆಮ್ಮದಿಗೆ ಅಗತ್ಯವೆನಿಸಿ ಆಚರಿಸಲ್ಪಡುತ್ತದೋ ಅಲ್ಲಿಯ ವರಗೆ ಈ ಬಗ್ಗೆ ಚರ್ಚೆ ಅನಗತ್ಯ. ಯಾವಾಗ ದೇವಾಲಯಗಳಲ್ಲಿ ವ್ಯಾಪಾರೀ ಮನೋಭಾವವಾಗಿ ಮಾರ್ಪಡುತ್ತದೋ ಆಗ ಅದು ಚರ್ಚೆಯ ವಿಷಯವಾಗುತ್ತದೆ. ಅಲ್ಲದೆ  ಕೆಲವು ಗ್ರಾಮಾಂತರ ಪ್ರದೇಶಗಳಲ್ಲಿ  ಕೆಲವರಿಗೆ ದೇವಾಲಯ ಪ್ರವೇಷವನ್ನೇ ನಿರ್ಬಂಧಿಸುವ ಪದ್ದತಿಯು ಸಮಾಜದ ಸ್ವಾಸ್ಥ್ಯವನ್ನು ಕೆಡಿಸಲು ಕಾರಣ ವಾಗುತ್ತದೆ

ಮೇಲು-ಕೀಳು ಭಾವನೆ :
 ಎಲ್ಲರನ್ನೂ ಸಮಾನವಾಗಿ ಕಾಣುವ ಹಲವು ವೇದ ಮಂತ್ರಗಳಿದ್ದರೂ ಸಮಾಜದಲ್ಲಿ ಮೇಲು-ಕೀಳು ಭಾವನೆ ಪೂರ್ಣವಾಗಿ ಮಾಯವಾಗಿಲ್ಲ.

ವ್ರತ-ಕತೆಗಳು :

ಹಿಂದಿನಿಂದ ನಡೆದುಬಂದಿರುವ ಕೆಲವು ವ್ರತಕತೆಗಳಿವೆ. ಉದಾಹರಣೆಗೆ ವರಮಹಾಲಕ್ಷ್ಮೀ ವ್ರತ, ಗೌರಿ-ಗಣೇಶ ವ್ರತ, ಅನಂತ ಪದ್ಮನಾಭವ್ರತ. ಇವುಗಳನ್ನು ಕೆಲವರು ತಲೆತಲಾಂತರದಿಂದ ಆಚರಿಸಿಕೊಂಡು ಬಂದಿದ್ದಾರೆ. ಅದು ಅವರ ನಂಬಿಕೆ. ಆದರೆ ಇತ್ತೀಚೆಗೆ ಸಂಕಷ್ಟಹರ ಗಣಪತಿ ವ್ರತದಂತಾ ಕೆಲವು ಸಾಮೂಹಿಕ ವ್ರತಗಳು ಆರಂಭವಾಗಿವೆ. ಇವು ಸಹ ಚರ್ಚೆ ಮಾಡಲು ಅರ್ಹವಾಗಿವೆ

ಮಡೆಉರುಳು :
ಇಂತಾ ಅವೈದಿಕ ಆಚರಣೆಯ ಬಗ್ಗೆ ಚರಿಚಿಸಬಾರದೇ?

ಇವಲ್ಲದೆ ಮನುಷ್ಯ-ಮನುಷ್ಯನಲ್ಲಿ ಭೇದಮಾಡುವ ಹಲವು ಆಚರಣೆಗಳು ಇನ್ನೂ ಜೀವಂತವಾಗಿವೆ. ಈ ಬಗ್ಗೆ ಆರೋಗ್ಯಕರವಾದ ಚರ್ಚೆಯಾಗಬಾರದೇ?

ಸಮಾಜದ ಎಲ್ಲಾ ಸಮಸ್ಯೆಗಳಿಗೂ ವೇದವಿರೋಧಿಗಳದ್ದು ಒಂದೇ ಪ್ರಹಾರ " ವೇದವೇ ಶೋಷಣೆಗೆ ಮೂಲ"

ಹೀಗೆ ಹೇಳುವಾಗ ಅವರಿಗೆ ವೇದದ ಸರಿಯಾದ ಅರಿವಿಲ್ಲವೆಂಬುದು ಸತ್ಯವಾದರೂ  ವೇದದ ಹೆಸರಿನಲ್ಲಿ ನಡೆದಿರುವ ಅವೈದಿಕ ಆಚರಣೆಗಳೇ ಅವರಿಗೆ ಆಹಾರವಾಗಿರುವ ಪರಮ ಸತ್ಯ.  ವೇದಕ್ಕೆ ವಿರುದ್ಧವಾಗಿ ಮಾನವೀಯತೆಗೆ ಧಕ್ಕೆ ತರುವ ಆಚರಣೆಗಳನ್ನು "ಮೌಢ್ಯ" ಎಂದರೆ ತಪ್ಪಾಗಲಾರದು. ಇಂತಹ ಮೌಢ್ಯಗಳನ್ನು ವೇದಾಭಿಮಾನಿಗಳೇ ವಿರೋಧಿಸಿ ಶುದ್ಧ ವೈದಿಕಾಚರಣೆಗಳನ್ನು ರೂಢಿಗೆ ತಂದರೆ ವೇದ ವಿರೋಧಿಗಳಿಗೆ ವಿರೋಧಿಸಲು ವಿಷಯವೇ ಸಿಗಲಾರದು, ಜೊತೆಗೆ ಸಮಾಜದಲ್ಲಿ ಸಮರಸದಿಂದ , ನೆಮ್ಮದಿಯಾಗಿ ಬಾಳಲು ದಾರಿ ತೆರೆದುಕೊಳ್ಳುತ್ತದೆ.
ಈ ದಾರಿಯಲ್ಲಿ ಚರ್ಚೆ ಮಾಡಲು ಬರುವಿರಾ?

ಈ ಸಂಧಿಕಾಲದಲ್ಲಿ ನಾವಿಂತಾ ಚರ್ಚೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಸಾಮಾಜಿಕ ಸಾಮರಸ್ಯಕ್ಕೆ ಇನ್ನೂ ದೊಡ್ದ ಪೆಟ್ಟು ಬೀಳಬಹುದು.
ಹೀಗೆ ಸಾಮಾಜಿಕ ಸಾಮರಸ್ಯವನ್ನು ಕಾಪಾಡುವ ಉದ್ದೇಶದಿಂದ "ಚಿಂತನ-ಮಂಥನ " ನಡೆಸಬೇಕೆಂಬ ಇಚ್ಛೆ ನನ್ನದು. ಹತ್ತಾರುಜನರ ಸಹಮತ ಸಿಕ್ಕರೆ ಅದಕ್ಕೆ ಸರಿಯಾದ ರೂಪು ರೇಶ ಕೊಟ್ಟು, ಅದಕ್ಕೊಂದು ಸ್ಥಳ, ದಿನ ಎಲ್ಲವನ್ನೂ ಅಂತಿಮಗೊಳಿಸಿದರಾಯ್ತು.

ನಾಲ್ಕೈದು ಗಂಟೆಗಳ ಕಾರ್ಯಕ್ರಮವಾದರೂ ಆಗಬೇಕು. ಅದನ್ನು ಯಾವ ಬ್ಯಾನರ್ ನಲ್ಲಿ ಮಾಡ ಬೇಕೆಂಬುದನ್ನು ಮುಂದೆ ತೀರ್ಮಾನಿಸಬಹುದು. ಇಂದಿನ ಸಮಾಜಕ್ಕೆ ಒಪ್ಪುವಂತೆ ಮಾರ್ಗದರ್ಶನ ಮಾಡಲು ಯಾರನ್ನಾದರೂ ಸ್ವಾಮೀಜಿಯವರನ್ನೋ, ಸಾಮಾಜಿಕ ಚಿಂತಕರನ್ನೋ ಮಾರ್ಗದರ್ಶನಕ್ಕೆ ಕರೆಸಬಹುದು

  ಹಾಸನದಲ್ಲಿ ಮಾಡಲು ಒಮ್ಮತ ದೊರೆತರೆ        ನೂರು  ಜನ ಅಭಿಮಾನಿಗಳು ಪಾಲ್ಗೊಂಡ ರೂ ಅವರಿಗೆ ಉಚಿತ    ಊಟೋಪಚಾರದ ಭಾಗ ನನಗಿರಲಿ.ಬೆಂಗಳೂರಿನಲ್ಲೂ  ಆಗಬಹುದು. ಅಲ್ಲಿ ಮಾಡಿದರೂ ವ್ಯವಸ್ಥೆಗೆ ನನ್ನ ಪ್ರಯತ್ನ ಇದ್ದೇ ಇರುತ್ತೆ.
ನಿಮ್ಮ ಅಭಿಪ್ರಾಯ ತಿಳಿಸುವಿರಾ?