Pages

Monday, March 8, 2010

ಬೆಳಕಿನ ಕಿಂಡಿ

ವೇದವು ಯಾರ ಸ್ವತ್ತು?
ಇಂದು ವೇದದ ಬಗೆಗೆ ತಪ್ಪು ಕಲ್ಪನೆಗಳೇ ಹೆಚ್ಚು.ವೇದವು ಯಾರ ಸ್ವತ್ತು? ಬ್ರಾಹ್ಮಣರು ಮಾತ್ರ ಕಲಿಯ ಬೇಕೆ? ಅಥರ್ವಣವೇದದಲ್ಲಿ ಈ ಬಗ್ಗೆ ಏನು ಹೇಳಿದೆ? ಈ ಬಗ್ಗೆ ನೋಡೋಣ.

ಪ್ರಜಯಾ ಸ ವಿಕ್ರಿಣೀತೇ
ಪಶುಭಿಶ್ಚೋಪದಸ್ಯತಿ|
ಯ ಆರ್ಷೇಯೇಭ್ಯೋ ಯಾಚದ್ಭ್ಯೋ
ದೇವಾನಾಂ ಗಾಂ ನ ದಿತ್ಸತಿ||

[ಅಥರ್ವ.೧೨.೪.೨]

ಅರ್ಥ:
ಯಾವನು ಆರ್ಷೇಯರಾದ ಅಂದರೆ ಪರಮಋಷಿಯಾದ ಪರಮಾತ್ಮನ ಮಕ್ಕಳಾದ ಜ್ಞಾನಯಾಚನೆ ಮಾಡುವ ಜನರಿಗೆ, ವಿದ್ವಜ್ಜನರ ಸಂಪತ್ತಾದ ವೇದವಾಣಿಯನ್ನು ಕೊಡಲು ಇಚ್ಛಿಸುವುದಿಲ್ಲವೋ, ಅವನು ಮಕ್ಕಳು-ಮರಿಗಳೊಂದಿಗೆ ಮಾರಿಹೋಗುತ್ತಾನೆ. ಮತ್ತು ತನ್ನ ಪಶು ಸಂಪತ್ತಿನೊಂದಿಗೆ ನಷ್ಟ-ಭ್ರಷ್ಟನಾಗಿ ಹೋಗುತ್ತಾನೆ.
ಇದು ವೇದ ವಾಣಿ. ಇನ್ಯಾರ ಅಪ್ಪಣೆ ಬೇಕು?
ವೇದವನ್ನು ಕಲಿಯಲು ಒಂದಿಷ್ಟು ಕಟ್ಟುಪಾಡುಗಳು ಬೇಡವೇ? ಅರ್ಹತೆ ಬೇಡವೇ? ಯಾವುದೇ ವಿದ್ಯೆಯನ್ನು ಕಲಿಯಲು ಒಂದಿಷ್ಟು ಕಟ್ಟುಪಾಡುಗಳೂ ಬೇಕು, ಅರ್ಹತೆಯೂ ಬೇಕು.ಹಾಗಾದರೆ ಕಟ್ಟುಪಾಡುಗಳೇನು? ವೇದವನ್ನು ಕಲಿಯಲಿಚ್ಛಿಸುವವನು ಮಾಂಸಾಹರಿಯಾಗಿದ್ದರೆ ಮೊದಲು ಮಾಂಸಾಹಾರ ತ್ಯಜಿಸಬೇಕು.ವೇದವನ್ನು ಕಲಿಯುವ ತೀವ್ರ ಇಚ್ಛೆ ಹೊಂದಿರಬೇಕು.ಅರ್ಹತೆ ಏನು? ಉಪನಯನ ಸಂಸ್ಕಾರವಾಗಬೇಕು. ಕಲಿಯಬೇಕೆಂಬ ಇಚ್ಛೆ ತೀವ್ರ ವಾದರೆ ಗುರುವು ದೊರೆಯುತ್ತಾನಷ್ಟೇ ಅಲ್ಲ,ಬೇಕಾದ ಸಿದ್ಧತೆ ಮಾಡಿಸುತ್ತಾನೆ.ಈಗಾಗಲೇ ಅಂತಹ ಗುರುಗಳು ನಮ್ಮ ಮಧ್ಯೆಯೇ ಇದ್ದಾರೆ.ಉಪಯೋಗವಾಗಬೇಕಷ್ಟೆ.

Friday, March 5, 2010

ಕೃತಜ್ಞತೆಗಳು

ಸೇವೆಯಲಿ ತಾನು ತನ್ನನು ಮರೆತುಸಲ್ಲುವುದು
ಯಾವ ಕಾಲಕೂ ಬರುವ ಪುಣ್ಯ ಸಂಚಯನ
ಜೀವಿತಾವಧಿಯುದ್ದ ಮಾಡು ವೇದಾಧ್ಯಯನ
ಜವನ ಧಿಕ್ಕರಿಸುತಲಿ | ಜಗದಮಿತ್ರ

ಸನ್ಮಿತ್ರರಾಗಿ ನಮ್ಮೆಲ್ಲಾ ಓದುಗ ಮಿತ್ರರಿಗೆ ನಿಸ್ವಾರ್ಥರಾಗಿ ವೇದಸುಧೆಯನ್ನು ಹರಿಸುತ್ತಿರುವ ಶ್ರೀ ಶ್ರೀಧರ್ ಅವರಿಗೆ ಧನ್ಯತಾಪೂರ್ವಕ ಅರ್ಪಿಸಿದ ಸಾಲುಗಳು, ಓದುಗ ಸ್ನೇಹಿತ ಬಂಧುಗಳೇ, ಬನ್ನಿ ವೇದಸುಧೆಯಲ್ಲಿ, ವೇದದ ಸೇವಾ ಕೈಂಕರ್ಯದಲ್ಲಿ ಕೈಜೋಡಿಸೋಣ
--ವಿ.ಆರ್.ಭಟ್

Wednesday, March 3, 2010

ಸುಭಾಷಿತಗಳು

ಹಾಸನದವರಾದ ಹಂಸಾನಂದಿಯವರು ಕ್ಯಾಲಿಫೊರ್ನಿಯಾದಲ್ಲಿದ್ದು ನಮ್ಮ ಸಂಸ್ಕೃತಿಯ ಬಗ್ಗೆ ಅತ್ಯಂತ ಅಭಿಮಾನ ಉಳ್ಳವರಾಗಿದ್ದು ಆಗಿಂದಾಗ್ಗೆ ಸಂಸ್ಕೃತ ಸುಭಾಷಿತಗಳನ್ನು ಸಂಪದಕ್ಕೆ/ವೇದಸುಧೆಗೆ ಕನ್ನಡ ಅರ್ಥದೊಂದಿಗೆ ಬರೆಯುತ್ತಾರೆ. ಅವೆಲ್ಲವೂ ಫೆಬ್ರವರಿ ತಿಂಗಳಿನ ಅವರ ಬರಹಗಳೊಡನೆ ಸೇರುತ್ತಾ ಹೋಗುತ್ತವೆ. ಅವುಗಳನ್ನು ಓದಿ ಪ್ರತಿಕ್ರಿಯಿಸುವಿರಾ?

Tuesday, February 16, 2010

ಶೀಲದ ಮಹಿಮೆ

ವಿದೇಶೇಷು ಧನಂ ವಿದ್ಯಾ
ವ್ಯಸನೇಷು ಧನಂ ಮತಿ:
ಪರಲೋಕೇ ಧನಂ ಧರ್ಮ:
ಶೀಲಂ ಸರ್ವತ್ರ ವೈ ಧನಮ್||


ಪರದೇಶಗಳಿಗೆ ಹೋದಾಗ ವಿದ್ಯೆಯೇ ಧನವು, ಸಂಕಷ್ಟಗಳೆದುರಾದಾಗ ವಿವೇಕರೂಪವಾದ ಧೈರ್ಯವೇ ಧನವು,ಪುಣ್ಯಲೋಕ ಪ್ರಾಪ್ತಿಗೆ ಧರ್ಮವೇ ಧನವು, ಆದರೆ ಶೀಲವಾದರೂ ಎಲ್ಲಾ ಕಡೆಯಲ್ಲೂ ಎಲ್ಲಾ ಸಮಯದಲ್ಲೂ ಧನವು.ಶೀಲವೇ ಧನವು, ಶೀಲವೇ ಸಂಪತ್ತು, ಶೀಲವೇ ಆಸ್ತಿ, ಶೀಲವೇ ಬಂಡವಾಳ.

Thursday, February 11, 2010

ಹಾಸನದಲ್ಲಿ "ಎಲ್ಲರಿಗಾಗಿ ವೇದ" ಉಪನ್ಯಾಸ



೨೩.೯.೨೦೦೯ ರಂದು ಹಾಸನದ ಶ್ರೀಶಂಕರಮಠದಲ್ಲಿ ವೇದಾಧ್ಯಾಯೀ ಸುಧಾಕರಶರ್ಮರು ನಡೆಸಿಕೊಟ್ಟ "ಎಲ್ಲರಿಗಾಗಿ ವೇದ" ಉಪನ್ಯಾಸದಲ್ಲಿ ಪಾಲ್ಗೊಂಡ ಶ್ರೋತೃವರ್ಗ

ಸುಭಾಷಿತಗಳು- ಹಂಸಾನಂದಿಯವರಿಂದ

೧.
ಕೇಡಿಗನ ನಂಜು

ಚೇಳಿನ ನಂಜೋ ಬಾಲದ ತುದಿಯಲಿ
ನೊಣಕ್ಕದುವೆ ಬಾಯಲ್ಲೆಲ್ಲಾ!
ಹಾವಿನ ಹಲ್ಲಲಿ ತುಂಬಿರುವುದು ವಿಷ
ಕೇಡಿಗನಿಗೋ ಮೈಯಲ್ಲೆಲ್ಲಾ!

ಸಂಸ್ಕೃತ ಮೂಲ:

ವೃಶ್ಚಿಕಸ್ಯ ವಿಷಂ ಪುಚ್ಛೇ ಮಕ್ಷಿಕಾಯಾಶ್ಚ ಮಸ್ತಕೇ |
ತಕ್ಷಕಸ್ಯ ವಿಷಂ ದಂತೇ ಸರ್ವಾಂಗೇ ದುರ್ಜನಸ್ಯ ಚ ||

೨.
ಮೂರ್ಖನ ಕುರುಹುಗಳು


ತಿಳಿಗೇಡಿಗಳ ಗುರುತಿಸುವುದು ಹೇಗೆನುವಿರಾ?
ಕೇಳಿ - ಇವೆಯಲ್ಲ ಕುರುಹುಗಳು ಐದು!
ಸಿಡುಕು; ಸೊಕ್ಕು; ಪರರ ಮಾತಲುದಾಸೀನ;
ಮೊಂಡುವಾದ ಜೊತೆಗೆ ಕೆಡುಕು ತುಂಬಿದ ಮಾತು!

ಸಂಸ್ಕೃತ ಮೂಲ:

ಮೂರ್ಖಸ್ಯ ಪಂಚ ಚಿಹ್ನಾನಿ ಗರ್ವೋ ದುರ್ವಚನಂ ತಥಾ |
ಕ್ರೋಧಶ್ಚ ದೃಢವಾದಶ್ಚ ಪರವಾಕ್ಯೇಶ್ವನಾದರಃ ||

೩.
ಪರರ ನೋಯಿಸುವ ಮಾತುಗಳು


ಬಾಯಿಂದ ಹೊರಬಿದ್ದ ಮಾತೆನುವ ಅಂಬುಗಳು
ಆಯಕಟ್ಟಿಗಿರಿದು ಕೊಟ್ಟಾವು ನೋವು ಹಗಲಿರುಳು;
ಅರಿವು ನಿನ್ನಲಿ ಇರಲು ಪರರ ನೋಯಿಸುವಂಥ
ನುಡಿಯಂಬುಗಳನೆಂದೂ ಬಿಡದಿರುವುದೇ ಲೇಸು.

ಸಂಸ್ಕೃತ ಮೂಲ:

ವಾಕ್ಸಾಯಕಾ ವದನಾನ್ನಿಷ್ಪತಂತಿ
ಯೈರಾಹತಃ ಶೋಚತಿ ರಾತ್ರ್ಯಹಾನಿ |
ಪರಸ್ಪರಂ ಮರ್ಮಸು ತೇ ಪತಂತಿ
ತಾನ್ ಪಂಡಿತೋ ನಾಪಸೃಜೇತ್ಪರೇಷು ||

೪.
ಕೈಗೆಟುಕುವ ದೇವರು


ಕೈಯಳತೆಯಲೇ ಇರುವ ತಾಯಿ-ತಂದೆ-ಗುರುಗಳನುಳಿದು
ಕೈಯಲೆಂದೂ ನಿಲುಕದ ದೈವವೆಂಬುದನೆಂತು ನೆಚ್ಚುವುದು?

ಸಂಸ್ಕೃತ ಮೂಲ (ರಾಮಾಯಣ, ಅಯೋಧ್ಯಾಕಾಂಡ ೩೦-೩೩)

ಸ್ವಾಧೀನಂ ಸಮತಿಕ್ರಮ್ಯ ಮಾತರಂ ಪಿತರಂ ಗುರುಂ |
ಅಸ್ವಾಧೀನಂ ಕಥಂ ದೈವಂ ಪ್ರಕಾರೈರಭಿರಾಧ್ಯತೇ? ||

ಮುಚ್ಚಿಡಬೇಕಾದ್ದೇನನ್ನು?


ಹಣದ ಹಾನಿ ಮನದ ದುಗುಡ
ಮನೆಯಲಾದ ಕೆಡುಕು ನಡತೆ
ಆದ ಮೋಸ ಹೋದ ಮಾನ
ತೋರ್ಗೊಡಬಾರದು ಜಾಣರು!

ಸಂಸ್ಕೃತ ಮೂಲ:

अर्थनाशं मनस्तापं गृहे दुश्चरितानि च |
वञ्चनं चापमानं च मतिमान्न प्रकाशयेत् ||

ಅರ್ಥನಾಶಂ ಮನಸ್ತಾಪಂ ಗೃಹೇ ದುಶ್ಚರಿತಾನಿ ಚ ||
ವಂಚನಂ ಚಾಪಮಾನಂ ಚ ಮತಿಮಾನ್ನ ಪ್ರಕಾಶಯೇತ್ ||

೫.
ಕೂಡಿಟ್ಟಿದ್ದು ಪರರಿಗೆ

ಹಣವ ಬರಿದೆ ಕೂಡಿಡದಲೇ
ನೀಡು,ಬಳಸು,ಮತ್ತೇನಾದರೂ ಮಾಡು;
ಬಂಡನ್ನು ಸೇರಿಸುತ ಜೇನ್ದುಂಬಿಗಳು
ಮಾಡಿಟ್ಟ ಜೇನು ಕದ್ದು ತಿಂದವರ ಪಾಲು!

ಸಂಸ್ಕೃತ ಮೂಲ:

ದಾತವ್ಯಂ ಭೋಕ್ತವ್ಯಂ ಧನವಿಷಯೇ ಸಂಚಯೋ ನ ಕರ್ತವ್ಯಃ |
ಪಶ್ಯೇಹ ಮಧುಕರೀಣಾಂ ಸಂಚಿತಾರ್ಥಂ ಹರಂತ್ಯನ್ಯೇ ||