Pages

Sunday, April 18, 2010

ಸನ್ಯಾಸಿಗಳಿಗೆ ಶಾಂತಿಯೇ ಅಮೃತ

ಕಾವ್ಯಂ ಸುಧಾ ರಸಜ್ಞಾನಾಂ ಕಾಮಿನಾಂ ಕಾಮಿನೀ ಸುಧಾ|
ಧನಂ ಸುಧಾ ಸಲೋಭಾನಾಂ ಶಾಂತಿ: ಸಂನ್ಯಾಸಿನಾಂ ಸುಧಾ||

ರಸವನ್ನು ಬಲ್ಲವರಿಗೆ ಕಾವ್ಯಗಳೇ ಅಮೃತ
ಕಾಮಿಗಳಿಗೆ ಕಾಮಿನಿಯೇ ಅಮೃತ
ಲೋಭಿಗಳಿಗೆ ಹಣವೇ ಅಮೃತ
ಆದರೆ ಸನ್ಯಾಸಿಗಳಿಗೆ ಶಾಂತಿಯೇ ಅಮೃತ.

ಶೃಂಗಾರ, ವೀರ, ಕರುಣ ಮುಂತಾದ ನವರಸಗಳನ್ನು ಆಸ್ವಾದನೆ ಮಾಡುವ ಕವಿ-ವಿದ್ವಾಂಸರಿಗೆ ಕಾವ್ಯಗಳೇ ಅಮೃತವಲ್ಲವೇ? ಕಾವ್ಯವನ್ನೇ ಅವರು ಆಸ್ವಾದಿಸುತಾರೆ. ಕಾಮುಕರಿಗೆ ಸದಾ ಕಾಮಿನಿಯ ಚಿಂತೆ, ಅದೇ ಅವರಿಗೆ ಅಮೃತ. ಸದಾ ಹಣ-ಹಣ ವೆಂದು ಹೆಣಗಾಡುವ ಲೋಭಿಗೆ ಹಣವೇ ಅಮೃತ. ಸರ್ವಸಂಗಪರಿತ್ಯಾಗಿಗಳಾದ ಸಂನ್ಯಾಸಿಗೆ ಸದಾ ಆತ್ಮಜ್ಞಾನದ ಸಾಧನೆ ಮಾಡುತ್ತಾ ಅವನಿಗೆ ಶಾಂತಿಯೇ ಅಮೃತವು.

Saturday, April 17, 2010

ಆತ್ಮವಿಮರ್ಶೆ

ಪ್ರತ್ಯಹಂ ಪ್ರತ್ಯವೇಕ್ಷೇತ ನರಶ್ಚರಿತಮಾತ್ಮನ:|
ಕಿಂ ನ ಮೇ ಪಶುಭಿಸ್ತುಲ್ಯಂ ಕಿಂ ನು ಸತ್ಪುರುಶೈರಿತಿ||

ಪ್ರತಿದಿನವೂ ರಾತ್ರಿ ಮಲಗುವಾಗ ತನ್ನ ಆದಿನದ ನಡತೆಯನ್ನು ತಾನೇ ವಿಮರ್ಶೆಮಾಡಿಕೊಳ್ಳಬೇಕು, " ಇಂದು ನಾನು ಪಶುಗಳಂತೆ ನಡೆದುಕೊಂಡಿಲ್ಲ, ತಾನೆ? ಸತ್ಪುರುಷನಂತೆ ಸ್ವಲ್ಪವಾದರೂ ಇಂದು ನಡೆದುಕೊಂಡಿದ್ದೇನೆಯೇ?" - ಎಂದು.

"ಬೆಳಗಿನಿಂದ ರಾತ್ರಿ ವರಗೆ ನಾನು ಏನೆಲ್ಲಾ ಮಾಡಿರುತ್ತೇನೆ, ಯಾರ್ಯಾರ ಜೊತೆ ಸಂತಸವಾಗಿ ಕಾಲ ಕಳೆದಿರುತ್ತೇನೆ, ಯಾರ್ಯಾರ ಜೊತೆ ಬೇಸರದಿಂದ ವ್ಯವಹರಿಸಿರುತ್ತೇನೆ, ಎಷ್ಟು ಕೆಲಸವನ್ನು ನ್ಯಾಯಯುತವಾಗಿ ಮಾಡಿದೆನು, ಅನ್ಯಾಯ ಮಾರ್ಗದಲ್ಲಿ ನಡೆದಿರುತ್ತೇನೆಯೇ? ವಿನಾಕಾರಣ ಯಾರಿಗೆ ನೋವುಂಟು ಮಾಡಿದೆ? ನನ್ನಿಂದ ಯಾರಿಗಾದರೂ ಸ್ವಲ್ಪವಾದರೂ ಪ್ರಯೋಜನವಾಗಿದೆಯೇ? ನಾನು ಮನುಷ್ಯತ್ವದಿಂದ ವರ್ತಿಸಿದ್ದೇನೆಯೇ? ಅಥವಾ ನನ್ನಿಂದ ತಪ್ಪಾಗಿದ್ದರೆ ಅದು ನಾಳೆ ಪುನರಾವರ್ತಿತವಾಗಬಾರದು" - ಹೀಗೆ ರಾತ್ರಿ ಮಲಗುವ ಮುಂಚೆ ೫-೧೦ ನಿಮಿಷಗಳು ಧ್ಯಾನಸ್ಥಿತಿಯಲ್ಲಿ ಕುಳಿತು ಆತ್ಮವಿಮರ್ಶೆ ಮಾಡಿಕೊಂಡಿದ್ದೇ ಆದರೆ ಪ್ರತಿದಿನವೂ ನಮ್ಮನ್ನು ಇನ್ನೂ ಹೆಚ್ಚು ಹೆಚ್ಚು ಸುಧಾರಿಸಿಕೊಳ್ಳಬಲ್ಲೆವು.

Friday, April 16, 2010

ದೂರದಿಂದ ನೋಡಿದಾಗ ಬೆಟ್ಟ ಸುಂದರ

ದೂರತ: ಪರ್ವತೋ ರಮ್ಯ:
ಬಂಧೂ ರಮ್ಯ: ಪರಸ್ಪರಮ್|
ಯುದ್ಧಸ್ಯ ಚ ಕಥಾ ರಮ್ಯಾ
ತ್ರೀಣಿ ರಮ್ಯಾಣಿ ದೂರತ: ||

ದೂರದಿಂದ ನೋಡಿದಾಗ ಬೆಟ್ಟ ಸುಂದರ.
ದೂರದಿಂದ ನೋಡಿದಾಗ ನೆಂಟರಿಷ್ಟರು ಸುಂದರ.
ದೂರದಿಂದ ನೋಡಿದಾಗ ಯುದ್ಧದ ಕಥೆ ಸುಂದರ.
ಹೀಗೆ ಈ ಮೂರೂ ದೂರದಿಂದ ಮಾತ್ರ ಸುಂದರ.


ಎಷ್ಟು ಅರ್ಥಗರ್ಭಿತವಲ್ಲವೇ? ದೂರದಿಂದ ಸುಂದರವಾಗಿ ಕಾಣುವ ಬೆಟ್ಟವನ್ನು ಹತ್ತುವಾಗ ಅಲ್ಲಿನ ಮುಳ್ಳು ಕಲ್ಲು, ಹಾವು, ಚೇಳುಎಲ್ಲವೂ ಭಯಂಕರವಾಗಿ ಕಾಣುತ್ತವೆ. ದೂರದಲ್ಲಿರುವ ನೆಂಟರಿಷ್ಟರ ಬಗ್ಗೆ ಎಂತಹಾ ಭವ್ಯ ಕಲ್ಪನೆಗಳಿರುತ್ತವೆಯೋ ಅವುಹತ್ತಿರಹೋದಾಗ ಕಾಣದೆ ಇರಬಹುದು, ಇನ್ನೂ ಹತ್ತಿರಹೋದರಂತೂ ಅವರ ಅವಗುಣಗಳೇ ಕಾಣಬಹುದು. ಹಾಗೆಯೇ ಯುದ್ಧದಕಥೆ ಕೇಳಲು ಸೊಗಸು, ಆದರೆ ಪ್ರತ್ಯಕ್ಷ ಯುದ್ಧವನ್ನು ಕಣ್ಣಾರೆ ಕಂಡರೆ ಅದು ನರಕಸದೃಶವೇ ಸರಿ.

Thursday, April 15, 2010

ಸಂಪದದಲ್ಲಿ ಕಾಣಿಸಿಕೊಂಡ ವೇದಸುಧೆ

[ಶ್ರೀ ಶ್ರೀಕಾಂತಮಿಶ್ರಕೋಟಿಯವರು ಸಂಪದದಲ್ಲಿ ವೇದಸುಧೆಯ ಪರಿಚಯ ಮಾಡಿದ್ದಾರೆ.ವೇದದ ಬಗ್ಗೆ ಇನ್ನೂ ಹೆಚ್ಚಿನ ಮಹತ್ವದ ಬರಹಗಳು ಮುಂದೆ ಬರಬಹುದೆಂಬುದು ಅವರ ಅಭಿಲಾಶೆಯಾಗಿದೆ. ಅವರ ಮಾತುಗಳನ್ನೇ ಇಲ್ಲಿ ಪ್ರಕಟಿಸಲಾಗಿದೆ]

ದೇಶದ ಅಧ್ಯಾತ್ಮಿಕ ಪರಂಪರೆ , ಸನಾತನ ಮೌಲ್ಯಗಳು , ವೇದಗಳು ಅಭಿರುಚಿ , ಅಭಿಮಾನ ಇರುವ ಸಂಪದಿಗ ಹರಿಹರಪುರ ಶ್ರೀಧರ್ ಅವರ ಬ್ಲಾಗ್ , ಅಶ್ವಮೇಧ ಯಾಗ ಶಬ್ದದಲ್ಲಿನ ಅಶ್ವ ಕುದುರೆ ಅಲ್ಲವಂತೆ , ಇಂದ್ರಿಯಗಳಂತೆ ಅವುಗಳನ್ನ ಹತೋಟಿಯಲ್ಲಿಡುವುದು ಅಂತ ಲೂ ಇನ್ನೊಂದೆಡೆ ಅಶ್ವ ಎಂದರೆ ರಾಷ್ಟ್ರ ಅಂತಲೂ ಅಶ್ವಮೇಧ ಅಂದರೆ ರಾಷ್ಟ್ರಗಳನ್ನು ಒಗ್ಗೂಡಿಸುವುದು ಅಂತಲೂ ಹೇಳಿದ್ದಾರೆ. ಆದರೆ ಅಶ್ವಮೇಧಯಾಗದಲ್ಲಿ ಕುದುರೆಯ ಪಾತ್ರ ಇದ್ದೇ ಇದೆಯಲ್ಲ ? ರಾಜರುಗಳ ಕತೆಗಳಲ್ಲಿ , ಅಶ್ವಮೇಧ ಯಾಗದ ವಿಧಿವಿಧಾನಗಳಲ್ಲಿ ? ಇದು ನನ್ನ ಪ್ರಶ್ನೆ .
"ಮಾಡುವ ಕೆಲಸ ಯಾವುದೇ ಇರಬಹುದು ಅದನ್ನು ಶ್ರೇಷ್ಠತಮವನ್ನಾಗಿ ಮಾಡಿಗಾಗ ಅದೂ ಯಜ್ಞವೇ ಆಗುತ್ತದ" ಎಂದು ಇಲ್ಲಿನ ಬರಹವೊಂದರಲ್ಲಿ ಲೇಖಕರು ಹೇಳಿದ್ದಾರೆ .

ಈ ಬ್ಲಾಗಿನಲ್ಲಿ ಈವರೆಗೆ ವೇದಗಳ ಬಗೆಗೆ ಅಭಿಮಾನ ವ್ಯಕ್ತವಾಗಿದೆ , ವೇದಗಳ ಬಗೆಗೆ ಏನೂ ಮಹತ್ವದ ಮಾಹಿತಿ ಬಂದಿಲ್ಲ . ಮುಂದೆ ಬರಬಹುದು ಎಂದು ಆಶಿಸೋಣ .

[ಬರಹದ ಈ ಕೆಳಗಿನ ಕೊಂಡಿಯನ್ನು ಕಾಪಿ ಮಾಡಿ ಅಡ್ರೆಸ್ ಬಾರ್ ನಲ್ಲಿ ಪೇಸ್ಟ್ ಮಾಡಿ ಬರಹವನ್ನು ಓದಬಹುದು.]
http://sampada.net/blog/shreekantmishrikoti/12/04/2010/24804

ವೇದದಲ್ಲಿ ಮಾನವೀಯ ನೆಲೆ


ಸಮಾನೀ ಪ್ರಪಾ ಸಹವೋsನ್ನಭಾಗಃ ಸಮಾನೇ ಯೋಕ್ತ್ರೇ ಸಹ ವೋ ಯುನಜ್ಮಿ|
ಸಮ್ಯಂಚೋsಗ್ನಿಂ ಸಪರ್ಯತಾರಾ ನಾಭಿಮಿವಾಭಿತಃ||
(ಅಥರ್ವ.೩.೩೦.೬.)
ಜಲಾಶಯಗಳು ನಿಮ್ಮೆಲ್ಲರಿಗೂ ಸಮಾನವಾಗಿ ಸೇರಿದವುಗಳಾಗಿವೆ. ನಿಮ್ಮೆಲ್ಲರ ಜಲಾಶಯಗಳು ಸಮಾನವಾಗಿರಲಿ. ನಿಮ್ಮ ಭೋಜನಗಳು ಒಂದಿಗಿರಲಿ. ಸಮಾನವಾದ ನೊಗದಲ್ಲಿ ನಿಮ್ಮನ್ನು ಒಂದಿಗೆಯೇ ಹೂಡಿದ್ದೇನೆ. ಗುಂಭವನ್ನು ಅರೆಕಾಲುಗಳು ಸುತ್ತಲಿಂದಲೂ ಆವರಿಸಿಕೊಂಡಿರುವಂತೆ ಒಂದುಗೂಡಿ ಜಗನ್ನಾಯಕನನ್ನು ಆರಾಧಿಸಿರಿ.

ಇದು ‘ನನ್ನ’ ಹೊಲ-ಗದ್ದೆ. ಅಲ್ಲಿ ನನ್ನ ಭಾವಿಗೆ ನಾನು ಪಂಪ್ ಸೆಟ್ ಹಾಕಿದರೆ ಕೇಳಲು ನೀನು ಯಾರು? - ಎಂದು ಮುಂದುವರೆದಾಗ ಪಕ್ಕದ ಹೊಲದ ಭಾವಿ ಒಣಗಿದ ಮೇಲೆ ಪಕ್ಕದ ಭೂಮಿಯವನು ಏನು ಮಾಡಬೇಕು? ಕೊಳವೇಭಾವಿಯೇ ಗತಿ. ಈಗ ಮೊದಲಿನವನ ಭಾವಿಯ ಕಥೆ ಮುಗಿದಂತೆ! ಅವನು ಇನ್ನೂ ಆಳವಾದ ಕೊಳವೆಭಾವಿ ಹಾಕಿಸಿದಾಗ ಪಕ್ಕದವನ ಕೊಳವೇಭಾವಿಯೂ ಒಣಗುತ್ತದೆ. ಈ ಧೋರಣೆಯಿಂದ ಪ್ರಾರಂಭವಾದ ಅಂತರ್ಜಲದ ಶೋಷಣೆ ಇಂದು ಯಾವ ಮಟ್ಟಕ್ಕೆ ಬಂದಿದೆಯೆಂದರೆ, ೮೦೦ರಿಂದ ೧೦೦೦ ಅಡಿ ಭೂಮಿಯನ್ನು ಕೊರೆದರೂ ನೀರು ಸಿಕ್ಕುವ ಸಾಧ್ಯತೆಯಿಲ್ಲವೆಂದಾಗಿದೆ. ನಮ್ಮೆಲ್ಲರಿಗೂ ಆಶ್ರಯ ನೀಡುತ್ತಿರುವುದು ಒಂದೇ ಭೂಮಿ. ಭೂಮಿಯಳಗಿನ ಜಲಾಶಯಗಳು ಭೂಮಿಯ ಮೇಲಿನಂತೆ ಚಕ್ಕುಬಂದಿಗಳಿಗೆ ಒಳಪಟ್ಟಿಲ್ಲ. ಅವನ್ನು ರಕ್ಷಿಸುವ ಭಾರ ಎಲ್ಲರಿಗೂ ಸೇರಿದ್ದಾಗಿದೆ. ಅದರ ಶೋಷಣೆಯ ವಿರುದ್ಧ ದನಿಯೆತ್ತಲು ಎಲ್ಲರಿಗೂ ಹಕ್ಕಿದೆ. ಈ ಸರಳ ಸತ್ಯವನ್ನೇ ಈ ಮಂತ್ರ ನೆನಪಿಸುತ್ತಿದೆ. ಗೊಡ್ಡು ಆಚಾರ-ವಿಚಾರಗಳಲ್ಲಿ ತಮ್ಮನ್ನು ತಾವು ಕಳೆದುಕೊಂಡವರು ಸ್ಪೃಶ್ಯ-ಅಸ್ಪೃಶ್ಯ ಎಂಬ ಮಾನವದ್ರೋಹೀ ಭಾವನೆಗಳಿಗೆ ಕಾವನ್ನು ಕೊಡುತ್ತಾ, ನೀರಿನ ವಿಚಾರಕ್ಕೂ ಅದನ್ನೇ ವಿಸ್ತರಿಸಿ ಮಾಡಿರುವ ಅನ್ಯಾಯಕ್ಕೆ ಲೆಕ್ಕವಿಲ್ಲ. ಇಂದಿಗೂ ಕೆಲವೆಡೆ ಈ ದುಷ್ಟ ಪದ್ಧತಿ ಜೀವಂತವಾಗಿದೆಯೆಂದರೆ ಆ ಗೊಡ್ಡು ಪದ್ಧತಿಗಳ ಆಳವನ್ನು ಊಹಿಸಬಹುದು. ವೇದವಿದನ್ನು ಸ್ಪಷ್ಟನುಡಿಗಳಲ್ಲಿ ನಿಷೇಧಿಸಿರುವಾಗ, ಸ್ಪೃಶ್ಯಾಸ್ಪೃಶ್ಯ ಪಿಡುಗಿನ ಮೂಲವನ್ನು ವೇದಗಳಲ್ಲಿ ಗುರುತಿಸುವುದು ತಮ್ಮನ್ನು ತಾವು ಬುದ್ಧಿಜೀವಿ(?)ಗಳೆಂದು ಕರೆದುಕೊಳ್ಳುವವರಿಗೆ ಮಾತ್ರ ಸಾಧ್ಯವೇನೋ?!!

ಮಾಂಸಾಹಾರಿಗಳು ಯಾರೊಡನೆಯೂ ಕುಳಿತು ಊಟ ಮಾಡಿಬಿಡುತ್ತಾರೆ. ಆದರೆ, ಸಸ್ಯಾಹಾರಿಗಳಿಗೆ ಇದು ಸಾಧ್ಯವಿಲ್ಲ. ಹಾಗಾಗಿ ನಿಮ್ಮ ಭೋಜನ ಒಂದಿಗಿರಲಿ‌ಎಂದಾಗ ಎಲ್ಲರೂ ಸಸ್ಯಾಹಾರಿಗಳೇ ಆಗಬೇಕಾಗುತ್ತದೆ.

-ವೇದಾಧ್ಯಾಯೀ ಸುಧಾಕರಶರ್ಮ

Tuesday, April 13, 2010

ವಿದ್ವಾಂಸರೇ, ಸಮಾಜದಲ್ಲಿ ಕೆಳಗೆ ಬಿದ್ದವರನ್ನು ಮೇಲೆತ್ತಿ

[ಚಿತ್ರ ಕೃಪೆ: ಅಂತರ್ಜಾಲ]

ನಾಳೆ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ದಿನಾಚರಣೆ.ಸಹಜವಾಗಿ ನಮ್ಮ ದೇಶದಲ್ಲಿನ ದಲಿತ ಸಮುದಾಯಕ್ಕೆ ಸೇರಿದ ಜನಾಂಗದವರು ಅತ್ಯಂತ ಉತ್ಸಾಹದಿಂದ ಅಂಬೇಡ್ಕರ್ ಜನ್ಮದಿನವನ್ನು ಆಚರಿಸುತ್ತಾರೆ. ದುರ್ದೈವವೆಂದರೆ ನಮ್ಮ ದೇಶದ ಸಂವಿದಾನ ರಚನೆಯಲ್ಲಿ ಹಿರಿಯ ಪಾತ್ರ ವಹಿಸಿದ ಅಂಬೇಡ್ಕರ್ ಜನ್ಮದಿನಾಚರಣೆಯಲ್ಲಿ ಉಳಿದ ಜನಾಂಗದವರು ಉತ್ಸಾಹದಿಂದ ಪಾಲ್ಗೊಳ್ಳುವುದಿಲ್ಲ. ಅದೇನೇ ಇರಲಿ, ನಮ್ಮ ದೇಶದಲ್ಲಿ ವೇದ-ಉಪನಿಷತ್ತುಗಳು ಒಂದು ವರ್ಗದ ಸ್ವತ್ತೆಂಬಂತೆ ಬಿಂಬಿತವಾಗಿದ್ದು ಇಂದು ದಲಿತಸಮುದಾಯವು ವೇದವನ್ನಾಗಲೀ, ನಮ್ಮ ಪರಂಪರೆಯನ್ನಾಗಲೀ ವಿರೋಧಮಾಡುವುದೇ "ದಲಿತ ಚಳುವಳಿ" ಎಂಬಂತಾಗಿ ವೇದದ ಮತ್ತು ನಮ್ಮ ಪರಂಪರೆಯ ನಿಜವಾದ ಅರಿವಿನಿಂದ ಇಡೀ ಸಮಾಜವು ವಂಚಿತವಾಗುತ್ತಿದೆಯಲ್ಲಾ!! ಎಂಬ ನೋವು ನನ್ನಲ್ಲಿ ಕಾಡುತ್ತದೆ. ಈ ದಿಕ್ಕಿನಲ್ಲಿ ಚಿಂತನೆ ಮಾಡುತ್ತಾ ನನ್ನ ಕೆಲವು ವಿಚಾರಗಳನ್ನಿಡುವೆ.

* ಮನೆಯಲ್ಲಿ ಮಗುವೊಂದು ಕಕ್ಕಸು ಮಾಡಿಕೊಂಡು, ಅದರಮೇಲೆಯೇ ತನ್ನ ಕೈಗಳಿಂದ ರಪ ರಪ ಬಡಿಯುತ್ತದೆ.ಕೈಯೆಲ್ಲಾ ಹೊಲಸಾಗುತ್ತದೆ. ಅದೇ ಕೈಯನ್ನು ಮೈಮೇಲೆಲ್ಲಾ ಇಟ್ಟುಕೊಳ್ಳುತ್ತದೆ. ಅದರ ತಾಯಿ ಹತ್ತಿರದಲ್ಲಿಲ್ಲ. ನೋಡಿದವರೆಲ್ಲಾ ಅಸಹ್ಯಪಟ್ಟುಕೊಂಡು ಅದರ ತಾಯಿಯನ್ನಷ್ಟು ಬೈದುಕೊಳ್ಳುತ್ತಾರೆ. ತಾಯಿ ಬರುತ್ತಾಳೆ. ಮಗುವನ್ನು ನೋಡಿ " ಅಯ್ಯೋ ಕಂದ, ಮೈಯೆಲ್ಲಾ ಕಕ್ಕ ಮಾಡಿಕೊಂಡು ಬಿಟ್ಟೆಯಲ್ಲೋ" ಎಂದು ಮೃದುವಾಗಿ ಅದನ್ನು ಎತ್ತಿಕೊಂಡು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿಸಿ , ಬಟ್ಟೆ ಹಾಕಿ ಮುದ್ದಾಡುತ್ತಾಳೆ. ಹೀಗೆ ಒಂದು ಮಗುವನ್ನು ಶುಚಿಗೊಳಿಸುವ ತಾಯಿಯನ್ನು ನಾವು "ಮಾತೃ" ಎಂದು ಕರೆದು ಅವಳಿಗೆ ಅತ್ಯಂತ ಎತ್ತರದ ಸ್ಥಾನವನ್ನು ಕೊಡುತ್ತೇವೆ. ಕಾರಣ ಮಗುವಿನ ಮೇಲಿನ ತಾಯಿಯ ಮಮತೆ, ಪ್ರೀತಿ ಅವಳಿಗೆ ಸಮಾಜದಲ್ಲಿ ಒಂದು ಸ್ಥಾನವನ್ನೇ ಕಲ್ಪಿಸುತ್ತದೆ.
ಒಂದು ನಗರ. ಇಡೀ ದಿನವೆಲ್ಲಾ ಸಹಸ್ರಾರು ಜನರು ಮಾಡಿದ ಹೊಲಸೆಲ್ಲಾ ಬೆಳಗಾಗುವಾಗ ಮಾಯವಾಗಿರುತ್ತದೆ. ರಸ್ತೆಯಲ್ಲಿದ್ದ ಗಲೀಜೆಲ್ಲಾ ಕ್ಲೀನ್ ಆಗಿ ಕಸ ಕಡ್ದಿಗಳಿರುವುದಿಲ್ಲ. ವಾಸನೆ ಹೊಡೆಯುತ್ತಿದ್ದ ಚಿರಂಡಿ ಮತ್ತೆ ಮತ್ತೆ ಶುಚಿಯಾಗುತ್ತದೆ. ಇದನ್ನೆಲ್ಲಾ ಮಾಡುವವರಾರು? ಅವನಿಗೆ ನಾಮಕರಣ ವಾಗಿದೆ " ಜಾಡಮಾಲಿ". ಸಾಮಾನ್ಯವಾಗಿ ಅತ್ಯಂತ ಕಳಪೆ ಕೆಲಸವೆಂದು ಸಾಮಾನ್ಯರು ಭಾವಿಸುವ ಕೆಲಸ [ ನನ್ನ ದೃಷ್ಟಿಯಲ್ಲಿ ಅದೂಂದು ಯಜ್ಞ] ಜಾಡಮಾಲಿಗೆ ನಮ್ಮ ಸಮಾಜವು ಕೊಟ್ಟಿರುವ ಸ್ಥಾನ? ಅತ್ಯಂತ ಕನಿಷ್ಟ.
ನೋಡಿ ಒಂದು ಮಗುವನ್ನು ಶುಚಿಗೊಳಿಸುವ ತಾಯಿಯು ಸಮಾಜದಲ್ಲಿ ಅತ್ಯಂತ ಶ್ರೇಷ್ಠ ಸ್ಥಾನವನ್ನು ಹೊಂದಿದ್ದರೆ, ಸಹಸ್ರಾರು ಜನರ ಹೊಲಸನ್ನು ಶುಚಿಗೊಳಿಸುವ ಜಾಡಮಾಲಿಗೆ ಅತ್ಯಂತ ಕನಿಷ್ಟತಮ ಸ್ಥಾನ!!
ಯೋಚಿಸಿ ನೋಡಿ, ನಾಲ್ಕು ದಿನ ನಿಮ್ಮ ರಸ್ತೆಯಲ್ಲಿ ಜಾಡಮಾಲಿ ಬಾರದಿದ್ದರೆ ನಿಮ್ಮ ನಗರದ ಸ್ಥಿತಿ ಏನಾದೀತು? ಕೊಳೆತು ನಾರುತ್ತಾ ಜನರೆಲ್ಲಾ ಹಿಡಿ ಶಾಪವನ್ನು ಹಾಕುತ್ತಾರಲ್ಲವೇ? ಹಾಗಾದರೆ ಜಾಡಮಾಲಿಯ ಸ್ಥಾನದ ಅರಿವು ಈಗಲಾದರೂ ಆದೀತೇ?

* ಬೆಂಗಳೂರಿನ ವೇದಾಧ್ಯಾಯೀ ಸುಧಾಕರ ಶರ್ಮರು ಕಳೆದ ವರ್ಷ ಹಾಸನಕ್ಕೆ ಬಂದಿದ್ದರು. ಕಾರೊಂದರಲ್ಲಿ ನಾವು ಮೂರ್ನಾಲ್ಕು ಜನ ಪ್ರಯಾಣಿಸುತ್ತಿದ್ದೆವು. ನಾನು ಸಹಜವಾಗಿ ಶರ್ಮರನ್ನು ಕೇಳಿದೆ" ಶರ್ಮರೇ, ಎಲ್ಲರಿಗಾಗಿ ವೇದ ವೆಂಬ ಪ್ರಚಾರ ಮಾಡುತ್ತಿದ್ದೀರಲ್ಲಾ, ನಿಮ್ಮೊಡನೆ ಬ್ರಾಹ್ಮಣೇತರರು ವೇದ ಪ್ರಚಾರದಲ್ಲಿ ಕೈ ಜೋಡಿಸಿದ್ದಾರೆಯೇ?
ಶರ್ಮರು ಹೇಳಿದರು" ಬೇರೆಲ್ಲೂ ಹೋಗಬೇಡಿ, ನಿಮ್ಮ ಪಕ್ಕದಲ್ಲೇ ಕುಳಿತಿರುವ ನನ್ನ ಮಿತ್ರರ ಬಾಯಿಂದ ವೇದಮಂತ್ರವನ್ನು ಕೇಳಿದಿರಲ್ಲವೇ? ನನಗಿಂತ ಹೆಚ್ಚಿನ ವಿದ್ವಾಂಸರಾದ ಇವರ ಜನ್ಮ ಯಾವ ಜಾತಿಯಲ್ಲಾಗಿದೆ ಗೊತ್ತಾ? ಈ ಸಮಾಜದಲ್ಲಿ ’ ಹೊಲೆಯರೆಂದು" ಯಾರನ್ನು ಕರೆಯುತ್ತಾರೆ, ಆ ಜಾತಿಯಲ್ಲಿ ಜನ್ಮ ತಾಳಿದ ಮಹಾನುಭಾವರಿವರು."
ಪ್ರಶ್ನೆ ಕೇಳಿ ತಪ್ಪು ಮಾಡಿದೆನೇ? ಎನಿಸಿತ್ತು

* ಇನ್ನು ವೇದದಲ್ಲಿ ನ ಎರಡು ಶ್ಲೋಕಗಳನ್ನು ನೋಡೋಣ...

ನಮೋ ಜ್ಯೇಷ್ಠಾಯ ಚ ಕನಿಷ್ಠಾಯ ಚ ನಮ: ಪೂರ್ವಜಾಯ
ಚಾಪರಜಾಯ ಚ ನಮೋ ಮಧ್ಯಮಾಯ ಚಾಪಗಲ್ಫಾಯ
ಚ ನಮೋ ಜಘನ್ಯಾಯ ಬುಧ್ನ್ಯಾಯ ಚ||
[ಯಜು: ೧೬-೩೨]
ಅರ್ಥ:
ಜ್ಯೇಷ್ಠಾಯ = ಗುಣಕರ್ಮ ಸ್ವಭಾವಗಳಿಂದ ದೊಡ್ಡವನಾದವನಿಗೆ
ನಮ: = ನಮಸ್ಕರಿಸುವೆ
ಚ = ಹಾಗೂ
ಕನಿಷ್ಠಾಯ= ಗುಣಕರ್ಮ ಸ್ವಭಾವಗಳಿಂದ ಸಣ್ಣವನಾದವನಿಗೆ
ನಮ: = ನಮಸ್ಕರಿಸುವೆ
ಚ = ಹಾಗೂ
ಪೂರ್ವಜಾಯ = ವಯಸ್ಸಿನಲ್ಲಿ ಹಿರಿಯನಿಗೆ

ನಮ: = ನಮಸ್ಕರಿಸುವೆ
ಚ = ಹಾಗೂ
ಅಪರಜಾಯ= ವಯಸ್ಸಿನಲ್ಲಿ ಕಿರಿಯನಿಗೆ
ನಮ: = ನಮಸ್ಕರಿಸುವೆ
ಚ = ಹಾಗೂ
ಮಧ್ಯಮಾಯ= ನಡು ವಯಸ್ಕನಿಗೆ
ನಮ: = ನಮಸ್ಕರಿಸುವೆ
ಚ = ಹಾಗೂ
ಅಪಗಲ್ಫಾಯ = ಅಶಕ್ತನಿಗೆ
ನಮ: = ನಮಸ್ಕರಿಸುವೆ
ಜಘನ್ಯಾಯ=ಹೀನಸ್ಥಿತಿಯಲ್ಲಿರುವವನಿಗೆ
ನಮ: = ನಮಸ್ಕರಿಸುವೆ
ಚ = ಹಾಗೂ
ಬುಧ್ನ್ಯಾಯ= ವಿಶಾಲ ಮನಸ್ಕನಿಗೂ

ನಮ: = ನಮಸ್ಕರಿಸುವೆ

ಅಂದರೆ ದೊಡ್ದವ, ಚಿಕ್ಕವ, ಹಿರಿಯ-ಕಿರಿಯ, ಅಶಕ್ತ, ಶಕ್ತ, ಅತ್ಯಂತ ಹೀನ ಸ್ಥಿತಿಯಲ್ಲಿರುವವ, ಅತ್ಯಂತ ವಿಶಾಲ ಮನೋಭಾವದ, ಎಲ್ಲರಿಗೂ ನಮಸ್ಕಾರ.ನಮಸ್ಕರಿಸಲು ಭೇಧವೆಲ್ಲಿಂದ ಬಂತು? ಎಲ್ಲರಿಗೂ ಸಮಾನವಾಗಿ ಕಾಣಿರೆಂಬುದೇ ವೇದದಕರೆ.

ಇನ್ನೊಂದು ವೇದ ಮಂತ್ರವನ್ನು ನೋಡೋಣ.....

* ಉತದೇವಾ ಅವಹಿತಂ ದೇವಾ ಉನ್ನಯಥಾ ಪುನ:| ಉತಾಗಶ್ಚಕ್ರುಷಂ ದೇವಾ ದೇವಾ ಜೀವಯಥಾ ಪುನ: ||
ಋಗ್ವೇದ ೧೦.೧೩೫.೧

ದೇವಾ: ದೇವಾ: = ಜ್ಞಾನಜ್ಯೋತಿಯಿಂದ ಬೆಳಗುವ ಉದಾರ ಹೃದಯರೇ!
ಅವಹಿತಂ= ಕೆಳಗೆ ಬಿದ್ದವನನ್ನು
ಉತ= ನಿಶ್ಚಯವಾಗಿ
ಪುನ: ಉನ್ನಯತಾ=ಮತ್ತೆ ಮೇಲಕ್ಕೆತ್ತಿರಿ


ದೇವಾ: ದೇವಾ: = ನಿತ್ಯ ಜಾಗರೂಕರಾದ ವಿದ್ವಾಂಸರೇ!
ಆಗ: ಚಕ್ರುಷಂ= ಪಾಪ ಕರ್ಮ ನಿರತನಲ್ಲಿ
ಪುನ:=ಮತ್ತೆ
ಜೀವಯಥಾ= ನವಜೀವನವನ್ನು ತುಂಬಿರಿ[ಪಾಪ ಮಾಡಿ ಸತ್ತಂತೆ ಇರುವವನಲ್ಲಿ ಹೊಸ ಚೈತನ್ಯವನ್ನು ತುಂಬಿ, ಅವನಿಗೆ ನವ ಜೀವನವನ್ನು ಕೊಡಿ].

ವೇದದ ಕರೆ ಹೇಗಿದೆ, ನೋಡಿ,
ಎಲೈ ವಿದ್ವಾಂಸರೇ, ಸಮಾಜದಲ್ಲಿ ಕೆಳಗೆ ಬಿದ್ದವರನ್ನು ಮೇಲೆತ್ತಿ, ಪಾಪಮಾಡಿ ಸತ್ತಂತೆ ಇರುವವನಲ್ಲಿ ನವ ಚೈತನ್ಯವನ್ನು ತುಂಬಿ ಹೊಸ ಜೀವನವನ್ನು ಕೊಡಿ.
ವೇದದ ಕರೆ ಸಮಾಜದಲ್ಲಿ ಎತ್ತರದಲ್ಲಿರುವವರ ಕಿವಿಗೆ ಮುಟ್ಟೀತೇ?

[ಕೃಪೆ: ವೇದ ಮಂತ್ರಗಳು: ಪಂ. ಸುಧಾಕರ ಚತುರ್ವೇದಿಯವರ " ಜನ್ಮಗತ ಜಾತಿ ಭೇದ ವೇದ ವಿರೋಧಿ" ಪುಸ್ತಕದಿಂದ ]