Pages

Friday, August 17, 2012

ನಾನು ಸಾಯ ಬೇಕು!!


"ಓದುಗರ ಚರ್ಚೆಗಾಗಿ"

ಈಗಂತೂ ವೇದಸುಧೆಯಲ್ಲಿ ನನ್ನ ಲೇಖನಗಳನ್ನಾಗಲೀ ಕವನವನ್ನಾಗಲೀ ಪ್ರಕಟಿಸಬೇಕಾದರೆ ನೂರು ಭಾರಿ ಯೋಚಿಸುತ್ತೇನೆ. ಮೊನ್ನೆ ಒಂದು ಕವನ ಬರೆದೆ. ಅದಕ್ಕೆ ಉದ್ಧೇಶವಿತ್ತು. ಆದರೂ ವೇದಸುಧೆಯಲ್ಲಿ ಪ್ರಕಟಿಸುವ ಧೈರ್ಯಮಾಡಲಿಲ್ಲ. ಫೇಸ್ ಬುಕ್ ನಲ್ಲಿ ಪ್ರಕಟಿಸಿದೆ. ಪ್ರಕಟವಾದ ಎರಡು ದಿನಗಳಲ್ಲಿ  ಕವನವನ್ನು ಮೆಚ್ಚಿ  ಹಲವರು ಪ್ರತಿಕ್ರಿಯೆ ನೀಡಿದರು. ಮತ್ತೊಂದು ತಾಣ ಸಂಪದದಲ್ಲಿ ಪ್ರಕಟಿಸಿದೆ. ಆಗಲೂ ನನ್ನ ನಿರೀಕ್ಷೆಗೆ ಮೀರಿ ಓದುಗರು ಸ್ಪಂಧಿಸಿದ್ದರು. ನನ್ನ  ಮನದ ಭಾವನೆಗಿಂತಲೂ ಓದುಗರ ಭಾವನೆ ಇನ್ನೂ ಮಹತ್ವದ್ದಾಗಿದೆ. ಜನರ ಭಾವನೆಗಳನ್ನು ಕಂಡಮೇಲೆ   ಸಂಪದದಲ್ಲಿ ಮತ್ತು ಫೇಸ್ ಬುಕ್ ನಲ್ಲಿ ಪ್ರಕಟವಾದ  ಓದುಗರ ಅಭಿಮಾನದ ಮಾತುಗಳನ್ನೂ ಸಹ ನನ್ನ ಕವನದೊಡನೆ  ವೇದಸುಧೆಯಲ್ಲಿ  ಪ್ರಕಟಿಸುವ ಧೈರ್ಯ ಮಾಡಿದೆ. ಈಗ  ಚೆಂಡು ನಿಮ್ಮ ಅಂಗಳದಲ್ಲಿದೆ.


ನಾನು ಸಾಯದೆ ಗತಿಯೇ ಇಲ್ಲ|
ನಾನು ಹುಟ್ಟಿದ ಕೆಲವು ದಿನ
ಈ ನಾನುವಿನ ಕಾಟವಿರಲಿಲ್ಲ|
ಬೆಂಕಿ ಸುಡುತ್ತಿರಲಿಲ್ಲ
ಹಾವು ಕಡಿಯುತ್ತಿರಲಿಲ್ಲ||

ನಾನು ಹುಟ್ಟಿದ ಬಹುದಿನಗಳ
ಮೇಲೆ ಹುಟ್ಟಿದ ಈ ನಾನು
ನನಗಿಂತ ಮುಂಚೆಯೇ ಸಾಯಬೇಕು|
ಅದು ನನ್ನನ್ನು ಪದೇ ಪದೇ ಸಾಯಿಸುತ್ತಿದೆ
ಅದು ಮೊದಲು ಸಾಯಲೇ ಬೇಕು||

ಅದಕ್ಕಾಗಿಯೇ ನಾನು ವಿರುದ್ಧವಾಗಿ
ನಾನೇ ಹೋರಾಡಬೇಕಿದೆ|
ಸತ್ತಂತೆ ನಟಿಸುತ್ತದೆ ಕೆಲಒಮ್ಮೆ
ಮತ್ತೆ ಪುಟಿದೇಳುತ್ತದೆ!!
ಬೇರೆಯವರ ಏಳಿಗೆ ಸಹಿಸಲಾರದ
ಈ ನಾನು ಸಾಯಲೇ ಬೇಕು!!

ಈ ನಾನು ಸಾಯಲು
ಮೊದಲು ಅದರ ಕೊಬ್ಬು ಅಡಗಿಸಬೇಕು|
ಮಾನ ಕಳೆಯಬೇಕು
ಕೊರಗಿ ಕೊರಗಿ ಕೊನೆಗೊಮ್ಮೆ ಸಾಯಲೇ ಬೇಕು||



ಕೆಲವು ಪ್ರತ್ರಿಕ್ರಿಯೆಗಳು:

1. ಪ್ರವೀಣ್.ಎಸ್ .ಕುಲಕರ್ಣಿ(ಚುಕ್ಕಿ)
ತುಂಬಾ ಸುಂದರವಾಗಿ ಬರೆದಿದ್ದಿರಾ.ನಿಜ ನಾನು ಸಾಯಲೇಬೇಕು


2. Rajendra Kumar Raikodi
ಆತ್ಮೀಯ ಹರಿಹರಪುರಶ್ರೀಧರ್ ಅವರೆ, ನಿಮ್ಮ ಕವನ ಸುಂದರ ಮತ್ತು ಅರ್ಥಗರ್ಭಿತವಾಗಿದೆ. ಧನ್ಯವಾದಗಳು.


3. Raju T
ಅರ್ಥಪೂರ್ಣವಾಗಿದೆ ಶ್ರೀಧರರವರೆ ...


4. ಸತೀಶ ಎನ್
ನಿಜ ನಾನು ಎಂಬುದು ಹುಟ್ಟುವುದು ನಿದಾನವಾಗಿ , ಸಾಯುವುದು ನಿದಾನವೆ . " ನಾನು " ಎಂಬುದನ್ನು ಸಾಯಿಸಲು " ನಾನು " ಎಂಬುದೇ ಬೇಕು ಅಲ್ಲವೇ ? ಒಳ್ಳೆಯ ಕವನ ಶ್ರೀಧರ್ ರವರೆ

5. ಡಿ.ನಂಜುಂಡ
ಉತ್ತಮ ಕವನ. ಧನ್ಯವಾದಗಳು


6. ಭಾಸ್ಕೀ
ನಾನು ಎಂಬುದು ಅಜ್ಞಾನದ ಸಾಗರ. ಇದನ್ನು ತಿಳಿದೂ ತಿಳಿದೂ ಅದರಲ್ಲೇ ಈಜಲು ಹೋಗುವ ಮನುಜ ಜನ್ಮವು ಅರ್ಥಹೀನ ಎನಿಸುವುದಿಲ್ಲವೇ? ನಿಮ್ಮ ಬರಹದಲ್ಲಿ ಮಹತ್ತರವಾದ ಸಾರವಿದೆ.
ಅಭಿನಂದನೆಗಳೊಂದಿಗೆ
ಭಾಸ್ಕೀ

7. ಶ್ರೀಧರ್ ಬಂಡ್ರಿ
.ಶ್ರೀಧರ್ ಸರ್,
ಕನಕದಾಸರನ್ನು, "ನಾನು ಸ್ವರ್ಗಕ್ಕೆ ಹೋಗುತ್ತೇನೆಯೇ?" ಎಂದು ವ್ಯಾಸರಾಯರು ಪ್ರಶ್ನಿಸಿದಾಗ, ಕನಕದಾಸರು, "ನಾನು" ಹೋದರೆ ಹೋಗಬಹುದು" ಎನ್ನುವ ಮಾರ್ಮಿಕ ಉತ್ತರವನ್ನು ಕೊಡುತ್ತಾರೆ. ಆ ಪ್ರಸಂಗವನ್ನು ನೆನಪಿಸಿತು ನಿಮ್ಮ ಈ ಕವನ. ಅದಕ್ಕಾಗಿ ನಿಮಗೆ ಅಭಿನಂದನೆಗಳು.

8. ಡಿ.ನಂಜುಂಡ
ನಾನು ನಾನೆನೆ ಅದು ನಾನಲ್ಲ,
ನಾನು ತಾನನವೆನೆ ಅದು ನಾನು.
ತನ್ನಿರವ ಮರೆವ ತಾನನವೆ ನಾನು
ತನುವಲ್ಲ ಮನವಲ್ಲ ನೋವುನಲಿವಲ್ಲ
ತನುಮನದಿರವ ಮರೆತರಿವು ನಾನು
ಗುರುಪದದ ಸಂಚರವು,
ಗುರುಪದದ ಇಂಚರವು
ಗುರುಪದದ ಅರಿವೆ ನಾನು.


9. ಈ ನಾನು ಸಾಯಲು ಮೊದಲು
ಅದರ ಕೊಬ್ಬು ಅಡಗಿಸಬೇಕು
ಮಾನ ಕಳೆಯಬೇಕು
ಕೊರಗಿ ಕೊರಗಿ
ಕೊನೆಗೊಮ್ಮೆ ಸಾಯಲೇ ಬೇಕು||
ಏನಿದೆಲ್ಲಾ ಶ್ರೀಧರ್ ಅವರೆ,
ಅವನೇ ನಾನು (ಸೋಹಂ) "ಅಹಂ ಬ್ರಹ್ಮಾಸ್ಮಿ"
"ಅಹಂ"ಕಾರ ಇರಲಿ. "ನಾನು" ಸಾಯಬಾರದು.
-ಗಣೇಶ.

ಶ್ರೀ ಗಣೇಶ್ ಅವರಿಗೆ ನನ್ನ  ಪ್ರತಿಕ್ರಿಯೆ:

"ಅಹಂ ಬ್ರಹ್ಮಾಸ್ಮಿ" ಬೇರೆ. ಈ ನಾನು ಬೇರೆ. ಅಹಂ ಬ್ರಹ್ಮಾಸ್ಮಿ ಚೇತನ ಕುರಿತಾದದ್ದು. ಈ ನಾನು ನನ್ನ ಅಹಂಕಾರ. ಅಹಂಕಾರವೂ ಇರಬೇಕು.ಅದು ನನ್ನ ಸದ್ವಿಚಾರಗಳನ್ನು ಸಮರ್ಥಿಸಿಕೊಳ್ಳ ಲು. ಆದರೆ ನನ್ನ ಎಲ್ಲವನ್ನೂ ಸಂಕುಚಿತವಾಗಿ ಬೀಗುವ ಈ ನಾನು ಹೋಗಬೇಕಾದರೆ ಅದರ ಕೊಬ್ಬು ಅಡಗಿಸಬೇಡವೇ? ನಮ್ಮನ್ನು ಬೇರೆಯವರು ಹೊಗಳುತ್ತಿದ್ದಾಗ ನಮ್ಮ ಮನ: ಸ್ಥಿತಿಗೂ ಬೇರೆಯವರು ತೆಗಳುವಾಗ ನಮ್ಮ ಮನ: ಸ್ಥಿತಿಗೂ ವೆತ್ಯಾಸ ಇದೆಯಲ್ಲವೇ? ಅದಕ್ಕೆ ಕಾರಣ ಈ ನಾನು .ಅದು ಸಾಯಬೇಕು. ಅದರಿಂದ ನನಗಂತೂ ತೊಂದರೆ ಆಗುತ್ತಿದೆ. ನಿಮಗೆ?

ಮೆಚ್ಚಿದವರು:
1.K Venkatesh Karanth Bhandarkar's Arts & science college, Mysore University
2.Kundapura Friends Kamlesh Kundapur Bhandarkars collage kundapur 
3.Shankar Hegde Bangalore, India 
4.Sadyojata Bhatta Dharvad,mysore
5.Padmasini Udyavara 
6. AP Phatak Jogalbettu ' perwaje
7.Nagarathna Bhushan Karkala
8.Ramachandra Shetty ,Site Civil Engineer
9. Sujatha Lokesh Adichunchanagiri polytechnic (chikamagaluru)
10.Siddaraju Kagalavadi
11.Nagaraju Vidyodaya Junior College
12.Ganesh Khare Kalasagar kala mahavidyalay 
13. Rudresh Rajashekharaiah Works at JSS Mahavidyapeetha, Mysore 
14.  Nataraj Kangod Cheif Operating Officer at Afghan TV



೫. ಯೋಗದರ್ಶನ

ಪರಿಚಯ
          ಭಾರತೀಯ ತತ್ವಶಾಸ್ತ್ರ ಪದ್ಧತಿಗಳನ್ನು ದರ್ಶನಗಳೆಂದು ಕರೆದಿದ್ದಾರೆ. ಪಾಶ್ಚಿಮಾತ್ಯ ತತ್ವ ಸಿದ್ಧಾಂತಗಳಂತೆ, ಸಂಪೂರ್ಣವಾಗಿ ತರ್ಕ ಮತ್ತು ಕಾರಣಗಳ ಮೇಲೆ ಅವಲಂಭಿಸದೆ ಭಾರತೀಯ ತತ್ವಶಾಸ್ತ್ರವು ಸತ್ಯದ 'ದರ್ಶನ' ಅಥವಾ 'ನೋಟ' ಅಥವಾ 'ಅನುಭವ'ವನ್ನು ಅತೀಂದ್ರಿಯ ಸ್ಥಿತಿಯಲ್ಲಿ ಕಂಡುಕೊಳ್ಳುವುದರ ಮೇಲೆ ನಿಂತಿದೆ. ಆದ್ದರಿಂದ 'ದರ್ಶನ' ಪದವು ಹೆಚ್ಚು ಸೂಕ್ತವೆನಿಸುತ್ತದೆ. ಈ ದರ್ಶನಗಳನ್ನು ಎರಡು ಗುಂಪುಗಳಾಗಿ ವಿಂಗಡಿಸುತ್ತಾರೆ - ಆಸ್ತಿಕ ಮತ್ತು ನಾಸ್ತಿಕ. ಯಾವುವು ವೇದಗಳ ಪ್ರಮಾಣಗಳ ಮೇಲೆ ಆಧಾರಿತವಾಗಿವೆಯೋ ಅವು ಆಸ್ತಿಕ ದರ್ಶನಗಳು ಇದಕ್ಕೆ ಹೊರತಾದವುಗಳು ನಾಸ್ತಿಕ ದರ್ಶನಗಳು. ಚಾರ್ವಾಕ (ಪ್ರಾಪಂಚಿಕ ಭೋಗವನ್ನು ಪ್ರತಿಪಾದಿಸುವ ದರ್ಶನ), ಜೈನ ಮತ್ತು ಬೌದ್ಧ ಸಿದ್ಧಾಂತಗಳು ನಾಸ್ತಿಕ ದರ್ಶನಗಳ ವರ್ಗಕ್ಕೆ ಸೇರಿದರೆ; ಷಡ್ದರ್ಶನಗಳು ಅಥವಾ ಆರು ಹಿಂದೂ ಸಾಂಪ್ರದಾಯಿಕ ಸಿದ್ಧಾಂತಗಳು ಆಸ್ತಿಕ ದರ್ಶನಗಳ ವರ್ಗಕ್ಕೆ ಸೇರುತ್ತವೆ.
          ಆರು ಸಾಂಪ್ರದಾಯಿಕ ಪದ್ಧತಿಗಳೆಂದರೆ: ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ, ಮೀಮಾಂಸ ಮತ್ತು ವೇದಾಂತ. ಸಾಮಾನ್ಯವಾಗಿ ಈ ಪದ್ಧತಿಗಳು ನಾಲ್ಕು ವಿಷಯಗಳ ಬಗ್ಗೆ ಚರ್ಚಿಸುತ್ತವೆ, ಅವೆಂದರೆ - ಬ್ರಹ್ಮನ್/ಈಶ್ವರ ಅಥವಾ ಭಗವಂತನ ಇರುವಿಕೆ ಮತ್ತು ಅವನ ಸ್ವಭಾವ; ಜೀವಿಗಳು ಅಥವಾ ಪ್ರತ್ಯೇಕ ಆತ್ಮಗಳ ಸ್ವಭಾವ;  ಜಗತ್ತಿನ ಅಥವಾ ಪ್ರಪಂಚದ ಸೃಷ್ಟಿ ; ಮೋಕ್ಷ ಅಥವಾ ಮುಕ್ತಿ ಹಾಗೂ ಅದನ್ನು ಪಡೆಯಲು ಅನುಸರಿಸುವ ವಿವಿಧ ಮಾರ್ಗಗಳು/ನಿಯಮಗಳು.

ಸಾಂಖ್ಯ ಮತ್ತು ಯೋಗ ದರ್ಶನಗಳು:
          ಸಾಂಖ್ಯ ಶಬ್ದವು 'ಸಂಖ್ಯಾ' ಎಂದರೆ ಜ್ಞಾನ ಅಥವಾ ಅರಿವು ಎನ್ನುವ ಧಾತುವಿನಿಂದ ವ್ಯುತ್ಪತ್ತಿಯಾಗಿದೆ. ಏಕೆಂದರೆ, ಸಾಂಖ್ಯ ಪದ್ಧತಿಯ ದಾರ್ಶನಿಕರಾದ ಕಪಿಲ ಮುನಿಗಳು "ಜ್ಞಾನವೊಂದೇ ಮೋಕ್ಷ ಅಥವಾ ಕೈವಲ್ಯ ಪಡೆಯಲು ಏಕೈಕ ಅಥವಾ ಮೂಲ ಸಾಧನ" ಎಂದು ಪ್ರತಿಪಾದಿಸಿದ್ದರಿಂದ ಈ ಪದ್ಧತಿಯನ್ನು 'ಸಾಂಖ್ಯ ದರ್ಶನ'ವೆಂದು ಪ್ರಚುರಪಡಿಸಲಾಗಿದೆ. ಸಾಂಖ್ಯ ಎನ್ನುವುದು ಸಂಖ್ಯೆಯೆನ್ನುವ ಅರ್ಥವನ್ನೂ ಕೊಡುತ್ತದೆ. ಈ ದರ್ಶನವು ಮೂಲ ವಿಶ್ವದ ತತ್ವಗಳು ೨೪+೧ (೨೪= ಪ್ರಕೃತಿ ಮತ್ತದರಿಂದ  ಹೊಮ್ಮಿದ ವಿಶ್ವದ ತತ್ವಗಳು ಮತ್ತು ೧=ಪುರುಷ) ಎನ್ನುವ ಸಂಖ್ಯೆಯನ್ನು ನಿರ್ಧಿಷ್ಠ ಪಡಿಸುವುದರಿಂದ, ಈ ದರ್ಶನವು ತನ್ನಷ್ಟಕ್ಕೇ ಸಾಂಖ್ಯ ಪದ್ಧತಿಯೆನ್ನುವ ಅನ್ವರ್ಥ ನಾಮವನ್ನು ಪಡೆದಿರಬಹುದು.
          ಸಾಂಖ್ಯ ಪದ್ಧತಿಯು 'ಪುರುಷ'(ಪ್ರತ್ಯೇಕ ಆತ್ಮ) ಮತ್ತು 'ಪ್ರಧಾನ' ಅಥವಾ 'ಪ್ರಕೃತಿ' ಇವುಗಳನ್ನು ಮಾತ್ರವೇ ಮೂಲ ವಾಸ್ತವತೆಗಳೆಂದು ನಂಬುವುದರಿಂದ ಅವು 'ಈಶ್ವರ' ಅಥವಾ 'ಭಗವಂತ'ನನ್ನು ಒಪ್ಪಿಕೊಳ್ಳುವುದಿಲ್ಲ. ಆದ್ದರಿಂದ ಇದನ್ನು ಕೆಲವೊಮ್ಮೆ 'ನಿರೀಶ್ವರ ಸಾಂಖ್ಯ' (ಈಶ್ವರ ರಹಿತ ಸಾಂಖ್ಯ)ವೆಂದು ಕರೆದಿದ್ದಾರೆ. ಯೋಗ ದರ್ಶನವು ಸಾಂಖ್ಯದ ಎಲ್ಲಾ ತತ್ವಗಳೊಂದಿಗೆ ಈಶ್ವರ ಅಥವಾ ಭಗವಂತನನ್ನೂ ಒಪ್ಪಿಕೊಳ್ಳುವುದರಿಂದ ಅದು 'ಸೇಶ್ವರ-ಸಾಂಖ್ಯ' (ಈಶ್ವರ ಸಹಿತ ಸಾಂಖ್ಯ)ವೆಂದು ಪ್ರಾಚುರ್ಯ ಪಡೆದಿದೆ.
          ಸಾಂಖ್ಯ ಪದ್ಧತಿಯಲ್ಲಿ ತತ್ವಜ್ಞಾನ ಅಥವಾ ಸತ್ಯದ ಗುಣ ಮತ್ತು ಸ್ವಭಾವಗಳ ಬಗೆಗಿನ ಅನ್ವೇಷಣೆಗೆ ಹೆಚ್ಚು ಒತ್ತು ಕೊಡಲಾಗಿದೆ. ಆದರೆ ಯೋಗ ಪದ್ಧತಿಯು 'ಸಾಧನೆ' ಅಥವಾ 'ಆಧ್ಯಾತ್ಮಿಕ ನಿಯಮ'ಗಳಿಗೆ ಹೆಚ್ಚು ಒತ್ತು ಕೊಡುತ್ತದೆ. ಆದ್ದರಿಂದ ಪತಂಜಲಿಯ 'ಯೋಗಸೂತ್ರಾ' ಅಥವಾ ಯೋಗ ಪದ್ಧತಿಯ ಮೂಲ ಗ್ರಂಥವು, 'ಜಿಜ್ಞಾಸಾ' ಅಥವಾ 'ಮೀಮಾಂಸಾ' ಎನ್ನುವ ಅನ್ವೇಷಣಾತ್ಮಕ ಪದವನ್ನು ಬಳಸದೆ; "ಅಥ ಯೋಗಾನುಶಾಸನಮ್" (ಈಗ ಯೋಗದ ಅನುಶಾಸನವು=ನಿಯಮಗಳ ಪಾಠವು, ಪ್ರಾರಂಭವಾಗಿದೆ) ಎಂದಿದೆ.

ಯೋಗ ಎಂದರೆ ಏನು? 
          ಯೋಗ ಎನ್ನುವುದನ್ನು ಎರಡು ಶಬ್ದ ಧಾತುಗಳಿಂದ ನಿಷ್ಪತ್ತಿಗೊಳಿಸಬಹುದು. 'ಯುಜ್' (ಒಂದುಗೂಡಿಸು/ಜೋಡಿಸು) ಅಥವಾ 'ಯುಜ್' (ಧ್ಯಾನಿಸು). ಆದ್ದರಿಂದ ಯಾವುದು ಜೀವಿ ಅಥವಾ ಆತ್ಮನನ್ನು ಈಶ್ವರನ ಮೇಲೆ ಧ್ಯಾನಿಸಲು ಸಹಾಯ ಮಾಡಿ ಅವನಲ್ಲಿ ಒಂದುಗೂಡಿಸುತ್ತದೆಯೋ ಅದನ್ನೇ 'ಯೋಗ'ವೆನ್ನುವುದು.
          ಯೋಗವೆನ್ನುವ ಶಬ್ದವನ್ನು ಹಲವಾರು ಅರ್ಥಗಳಲ್ಲಿ ಋಗ್ವೇದ (೫.೮೧.೧), ಕೆಲವೊಂದು ಉಪನಿಷತ್ತುಗಳು - ಕಥಾ (೬.೧೦,೧೧; ೨.೧೨) ಮತ್ತು ಶ್ವೇತಾಶ್ವತರ (೧.೩).; ಇವುಗಳಲ್ಲಿ ಬಳಸಿರುವುದನ್ನು ಕಾಣಬಹುದು. ಭಗವದ್ಗೀತೆ(೬.೧೧,೧೩,೨೦ ಮತ್ತು ೩೫)ಯಲ್ಲಿ ಕಂಡುಬರುವ ಅನೇಕ ವಿಷಯಗಳು ಯೋಗಸೂತ್ರಾ(೨.೪೬;೧.೨;೧.೧೨)ದಲ್ಲಿ ಪ್ರಸ್ತಾವಿಸಲ್ಪಟ್ಟಿರುವ ಹಲವಾರು ಉಪದೇಶಗಳಿಂದ ಪ್ರಭಾವಿತವಾಗಿರುವಂತೆ ಕಾಣುತ್ತವೆ. ಆದ್ದರಿಂದ ಯೋಗದ ಬಗ್ಗೆ ಹಿರಣ್ಯಗರ್ಭನು ರಚಿಸಿದನೆಂದು ಹೇಳಲ್ಪಡುವ ಪುರಾತನವಾದ ಕೃತಿಯಿರಬೇಕು; ಮತ್ತು ಆ ಮೂಲ ಕೃತಿಯು ಇತರ ಕೃತಿಗಳ ರಚನೆಯ ಮೇಲೆ ತನ್ನ ಪ್ರಭಾವವನ್ನು ಬೀರಿರಬಹುದು. 

ಕೃತಿಕಾರ ಮತ್ತು ಅವನ ಕಾಲ
          ಸ್ವಯಂ ಭಗವಂತನ ಸ್ವರೂಪನಾದ ಹಿರಣ್ಯಗರ್ಭನಿಂದ ಯೋಗ ವಿಜ್ಞಾನವು ಆವಿರ್ಭವಿಸಿತೆಂದು ಹಿಂದೂ ಸಂಪ್ರದಾಯವು ಆರೋಪಿಸುತ್ತದೆ. ಕೆಲವೊಮ್ಮೆ  ಋಷಿಗಳಾದ ಸನತ್ಕುಮಾರ ಮತ್ತು ಜೈಗಿಶ್ವ್ಯ ಇವರೀರ್ವರಿಂದ ಯೋಗಶಾಸ್ತ್ರವು ರಚಿಸಲ್ಪಟ್ಟಿತು ಎಂದು ತಿಳಿಸುತ್ತದೆ. ಆದರೆ ಇವರಿಂದ ರಚಿತವಾಗಿರಬಹುದಾದ  ಕೃತಿಗಳು ಇದುವರೆಗೆ ಲಭ್ಯವಾಗಿಲ್ಲ.
          ನಮಗೆ ಈಗ ದೊರೆತಿರುವ ಕೃತಿಗಳಲ್ಲಿ ಪತಂಜಲಿಯ ಯೋಗಸೂತ್ರವೇ ಬಹು ಪುರಾತನವಾದದ್ದೆಂದು ತೋರುತ್ತದೆ. ಪಾಣಿನಿಯ ಸೂತ್ರಗಳಿಗೆ ಭಾಷ್ಯ ಅಥವಾ ವ್ಯಾಖ್ಯಾನವನ್ನು ಬರೆದ ಪತಂಜಲಿ ಹಾಗೂ ಯೋಗಸೂತ್ರವನ್ನು ರಚಿಸಿದ ಪತಂಜಲಿಯು ಒಬ್ಬರೇ ಎನ್ನುವುದು ಇದುವರೆಗೂ ನಿರ್ವಿವಾದಿತವಾಗಿ ನಿರೂಪಿತವಾಗಿಲ್ಲ. ಆಯುರ್ವೇದದ ಬಗ್ಗೆಯೂ ಪತಂಜಲಿಯು ರಚಿಸಿರುವನೆಂದು ಹೇಳಲಾದ ಕೃತಿಯೂ ಕೂಡ ಇದುವರೆಗೆ ನಮಗೆ ಲಭ್ಯವಾಗಿಲ್ಲ. ಈ ಪತಂಜಲಿಯು ಸುಮಾರು ಕ್ರಿ.ಪೂ. ೨೦೦ರಿಂದ ಕ್ರಿ.ಶ. ೩೦೦ರ ಮಧ್ಯ ಕಾಲದಲ್ಲಿ ಜೀವಿಸಿರಬಹುದೆಂದು ಪಂಡಿತರು ಅಭಿಪ್ರಾಯ ಪಡುತ್ತಾರೆ.

ಪತಂಜಲಿಯ ಕೃತಿ
          ಷಡ್ದರ್ಶನಗಳನ್ನು ವಿಶದಪಡಿಸುವ ಇತರೇ ಕೃತಿಗಳಂತೆ ಪತಂಜಲಿಯ ಗ್ರಂಥವೂ ಕೂಡ ಸೂತ್ರರೂಪದಲ್ಲಿದೆ. ಸೂತ್ರವೆಂದರೆ ಚಿಕ್ಕದಾದ ನೆನಪಿನಲ್ಲಿಡಬೇಕಾದ ನುಡಿಗಟ್ಟು/ವಾಕ್ಯ; ಸೂತ್ರವು ಮಿತ ಅಕ್ಷರಗಳನ್ನು ಹೊಂದಿದ್ದು ಮಹತ್ತರವಾದ ಜ್ಞಾನವನ್ನು ಹೊರಹೊಮ್ಮಿಸುತ್ತದೆ.
          ಯೋಗಸೂತ್ರವು ೧೯೫ ಸೂತ್ರಗಳನ್ನೊಳಗೊಂಡ ನಾಲ್ಕು ಪಾದಗಳು ಅಥವಾ ಅಧ್ಯಾಯಗಳನ್ನು ಹೊಂದಿದೆ. ಅವೆಂದರೆ: ಸಮಾಧಿ ಪಾದ (೫೧ ಸೂತ್ರಗಳು); ಸಾಧನಪಾದ (೫೫ ಸೂತ್ರಗಳು); ವಿಭೂತಿಪಾದ (೫೫ ಸೂತ್ರಗಳು) ಮತ್ತು ಕೈವಲ್ಯಪಾದ (೩೪ಸೂತ್ರಗಳು).
          ಯಾವುದೇ ಸೂತ್ರ ಕೃತಿಯು ತನ್ನ ಶೈಲಿಯಿಂದಾಗಿ ಅಸ್ಪಷ್ಟವಲ್ಲದಿದ್ದರೂ ದ್ವಂದ್ವತೆಯಿಂದ ಕೂಡಿರುತ್ತದೆ; ಹಾಗಾಗಿ ಅದನ್ನು ಅರ್ಥ ಮಾಡಿಸಲು ಅದಕ್ಕೆ ವ್ಯಾಖ್ಯಾನ ಅಥವಾ ಭಾಷ್ಯ ಬಹು ಆವಶ್ಯಕ. ಸುದೈವವಶಾತ್ ಯೋಗಸೂತ್ರಗಳು ಹಲವಾರು ಪ್ರಭುದ್ಧರ ಗಮನ ಸೆಳೆದದ್ದರಿಂದ ಅವರು ವಿದ್ವತ್ಪೂರ್ಣ ಟಿಪ್ಪಣಿ ಹಾಗೂ ಉಪಟಿಪ್ಪಣಿ(ಭಾಷ್ಯ, ಟೀಕಾ, ವಾರ್ತಿಕ ಮೊದಲಾದವುಗಳು)ಗಳನ್ನು ರಚಿಸಿ ಯೋಗ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ.
          ವ್ಯಾಸ ರಚಿತ 'ಭಾಷ್ಯ'ವು ಯೋಗಸೂತ್ರಕ್ಕೆ ಬರೆದ ಮೂಲ ಟಿಪ್ಪಣಿಯೆಂದು ಒಪ್ಪಿಕೊಳ್ಳುವುದಲ್ಲದೆ ಅದನ್ನು ಗೌರವಾದರಗಳಿಂದ ವ್ಯಾಸರ ನಂತರದ ಎಲ್ಲಾ ಕೃತಿಕಾರರು ಕಂಡಿದ್ದಾರೆ. ಈ ವ್ಯಾಸನು ಬಹುಶಃ ನಮ್ಮ ಸಾಂಪ್ರದಾಯಿಕ ವ್ಯಾಸನಿಗಿಂತ ಬೇರೆಯವನು ಎಂದು ತಿಳಿಯಲಾಗಿದೆ ಮತ್ತು ಈತನ ಜೀವಿತ ಕಾಲವು ಕ್ರಿ.ಶ. ೪೦೦ ಎಂದು ಭಾವಿಸಲಾಗಿದೆ.  
          ಈ ಕೆಳಗಿನವು ವ್ಯಾಸ ಭಾಷ್ಯಕ್ಕೆ ಬರೆದಿರುವ ಟೀಕೆ ಹಾಗೂ ಟಿಪ್ಪಣಿಗಳು:
ವಾಚಸ್ಪತಿ ಮಿಶ್ರ(ಕ್ರಿ.ಶ. ೮೫೦) ಬರೆದ - 'ತತ್ವವೈಶಾರದಿ'; ವಿಜ್ಞಾನಭಿಕ್ಷು(ಕ್ರಿ.ಶ. ೧೬ನೇ ಶತಮಾನ)ವಿನ - 'ಯೋಗವಾರ್ತಿಕ'; ಹರಿಹರಾನಂದ ಅರಣ್ಯ (೧೯ನೇ ಶತಮಾನ) ವಿರಚಿತ 'ಭಾಸ್ವತೀ'.  ಶಂಕರ(ಕ್ರಿ.ಶ. ೭೮೮-೮೨೦)ರು ರಚಿಸಿದರೆಂದು ಹೇಳಲಾದ ಯೋಗಭಾಷ್ಯವಿವರಣ ಎನ್ನುವ ಕೃತಿಯೂ ಲಭ್ಯವಿದೆ. ಆದರೆ ಈ ಕೃತಿಯು ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ ಆದಿಶಂಕರರಿಂದ ರಚಿಸಲ್ಪಟ್ಟಿತೋ ಇಲ್ಲವೋ ಎನ್ನುವ ವಿಷಯದಲ್ಲಿ ವಿದ್ವಾಂಸರಲ್ಲಿ ಗೊಂದಲವಿದೆ. ಬರವಣಿಗೆಯ ಶೈಲಿ ಮತ್ತು ಕೃತಿಯ ನಿರೂಪಣೆ, ಮತ್ತು ಆದಿ ಶಂಕರರು ಮಹಾನ್ ಯೋಗಿಗಳಾಗಿದ್ದರು ಎನ್ನುವುದು ದೃಢಪಟ್ಟ ವಿಷಯವಾದ್ದರಿಂದ, ಈ ಕೃತಿಯು ಅವರದೇ ಆಗಿರಬಹುದು ಎನ್ನುವುದಕ್ಕೆ ಸ್ವಲ್ಪ  ಪುಷ್ಟಿ ದೊರೆಯುತ್ತದೆ. 
          ಇವಲ್ಲದೆ ಯೋಗಸೂತ್ರಕ್ಕೆ ನೇರವಾಗಿ ಬರೆದ ಕನಿಷ್ಠ ಆರು ಭಾಷ್ಯಗಳು ಲಭ್ಯವಿವೆ. ಅವೆಂದರೆ: ಭೋಜದೇವ(೧೧ನೇ ಶತಮಾನ) ಬರೆದ 'ರಾಜಮಾರ್ತಾಂಡಾವೃತ್ತಿ'; ಭಾವಗಣೇಶನು ರಚಿಸಿದ 'ಯೋಗಸೂತ್ರಪದೀಪಿಕಾ'; ನಾಗೋಜಿ ಭಟ್ಟನ 'ಯೋಗಸೂತ್ರಾವೃತ್ತಿ'; ರಾಮಾನಂದ ಯತಿಗಳ 'ಯೋಗಮಣಿಪ್ರಭಾ', ನಾರಾಯಣ ತೀರ್ಥ ವಿರಚಿತ 'ಯೋಗಸಿದ್ಧಾಂತಚಂದ್ರಿಕಾ'; ಮತ್ತು ಸದಾಶಿವ ಬ್ರಹ್ಮೇಂದ್ರ (೧೮ನೇ ಶತಮಾನ) ವಿರಚಿತ, 'ಯೋಗಸುಧಾಕರ'.

ಯೋಗಸೂತ್ರಗಳ ಸಿದ್ಧಾಂತ

          ಪತಂಜಲಿ ವಿರಚಿತ ಯೋಗಸೂತ್ರವು ಮೂಲವಾಗಿ ಅಧ್ಯಾತ್ಮಿಕ ಸಾಧನೆ ಮತ್ತು ನಿಯಮಗಳ ಬಗ್ಗೆ ಪ್ರತಿಪಾದಿಸಿದರೂ ಕೂಡ ಅದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕಾದರೆ ಅದರ 'ಸಾಂಖ್ಯ'ದ ಹಿನ್ನಲೆಯ ಮೂಲವನ್ನು ಸ್ವಲ್ಪ ತಿಳಿದುಕೊಂಡಿರುವುದು ಒಳಿತು.
          ಯೋಗದರ್ಶನವು ಮೂಲತಃ ಮೂರು ರೀತಿಯ ವಾಸ್ತವತೆಗಳನ್ನು ಒಪ್ಪಿಕೊಳ್ಳುತ್ತದೆ. ಅವೆಂದರೆ, ಈಶ್ವರ, ಪುರುಷರು ಮತ್ತು ಪ್ರಧಾನ ಅಥವಾ ಪ್ರಕೃತಿ. ಪುರುಷರು ಎಂದರೆ ಪ್ರತ್ಯೇಕ ಜೀವಿಗಳು. ಅವುಗಳು ಚಿದ್ರೂಪರು ಅಥವಾ ಪ್ರಜ್ಞಾ ಸ್ವರೂಪವನ್ನುಳ್ಳವರು ಮತ್ತು ಇವುಗಳು ಅಸಂಖ್ಯಾತವಾಗಿವೆ. ಈಶ್ವರನನ್ನು 'ಪುರುಷವಿಶೇಷ' - ವಿಶೇಷ ಪುರುಷ ಅಥವಾ ಅದ್ವಿತೀಯ ಪುರುಷ ಎಂದು ಕರೆಯಲಾಗಿದೆ ಮತ್ತವನ ಇರುವಿಕೆಯನ್ನು ಶಾಸ್ತ್ರಮುಖೇನ ಮಾತ್ರವೇ ಕಂಡುಕೊಳ್ಳಬಹುದು. ಅವನು ಸರ್ವಜ್ಞನು ಅಥವಾ ಎಲ್ಲದರ ಬಗ್ಗೆಯೂ ಜ್ಞಾನವನ್ನು ಹೊಂದಿದವನು. ಪ್ರಕೃತಿಯ ಶೃಂಖಲೆಗಳಿಂದ ಬಂಧನಕ್ಕೊಳಗಾಗದೇ ಇರುವ ಅವನು ನಿತ್ಯಮುಕ್ತನು. ಅವನೇ ಆದಿಗುರು - ಪ್ರಥಮ ಶಿಕ್ಷಕ. ಪ್ರಣವ ಅಥವಾ ಓಂ ಎನ್ನುವುದು ಅವನ ಪ್ರತೀಕ. ಅವನ ಇಚ್ಛೆಯಿಂದ ಪುರುಷರ ಕರ್ಮಕ್ಕನುಗುಣವಾಗಿ ಮೂರುಗುಣಗಳಾದ - ಸತ್ವ, ರಜೋ ಹಾಗು ತಮೋ ಗುಣಗಳಿಂದೊಡಗೂಡಿದ ಪ್ರಕೃತಿಯ ಸಮಾಗಮದಿಂದ ಸೃಷ್ಠಿಯ ಉಗಮವಾಗುತ್ತದೆ. ಪ್ರಕೃತಿಯ ಉತ್ಪನ್ನಗಳಾದ, ಮಹತ್ (ವಿಶ್ವದ ಬುದ್ಧಿ), ಅಹಂಕಾರ(ನಾನು ಎನ್ನುವ ಭಾವನೆ), ಮನಸ್(ವಿಶ್ವದ ಮನಸ್ಸು), ತನ್ಮಾತ್ರೆಗಳು(ಸೂಕ್ಷ್ಮ ಧಾತುಗಳು) ಮೊದಲಾದವುಗಳು ಸಾಂಖ್ಯ ಪದ್ಧತಿಯಲ್ಲಿ ಪ್ರತಿಪಾದಿಸಿರುವಂತೆ ರೂಪುಗೊಳ್ಳುತ್ತವೆ.

          ಪುರುಷನು ಅದು ಹೇಗೋ ಅವಿದ್ಯಾ ಅಥವಾ ಅಜ್ಞಾನದ ಪ್ರಭಾವಕ್ಕೊಳಗಾಗಿ ತನ್ನ ನಿಜ ಸ್ವರೂಪವಾದ ಚಿದ್ರೂಪವನ್ನು ಮರೆತು; ಪ್ರಕೃತಿಯ ವಿವಿಧ ರೂಪಾಂತರಗಳೊಳಗೆ ಸಿಲುಕಿ ಹುಟ್ಟು, ಸಾವು ಮತ್ತವುಗಳ ಸ್ಥಿತ್ಯಂತರಗಳನ್ನು ಅನುಭವಿಸುತ್ತಾನೆ. ಆದರೆ ಜೀವಿಯು ಸಾಧನೆಗಳನ್ನು ಅಂದರೆ ಅಷ್ಟಾಂಗ ಅಥವಾ ಯೋಗದ ಎಂಟು ಸೋಪಾನಗಳನ್ನು ಕೈಗೊಂಡಾಗ ಅವನು ತನ್ನ ಸ್ವರೂಪವನ್ನು ಅರಿಯುತ್ತಾನೆ ಮತ್ತು ತಕ್ಷಣವೇ ಸಂಸಾರದ ಹುಟ್ಟು ಸಾವುಗಳ ಸ್ಥಿತ್ಯಂತರಗಳಿಂದ ಬಿಡುಗಡೆ ಹೊಂದುತ್ತಾನೆ. ಆತ್ಮನು ತನ್ನೊಳಗೆ ಐಕ್ಯಗೊಂಡು, ಸಂಸಾರದಿಂದ ಬಿಡುಗಡೆ ಹೊಂದುವುದನ್ನೇ ಕೈವಲ್ಯವೆನ್ನುತ್ತಾರೆ.

"ಚಿತ್ತವೃತ್ತಿಗಳನಿರೋಧ"ವಾಗಿ ಯೋಗ

          ಪತಂಜಲಿಯು "ಚಿತ್ತವೃತ್ತಿಗಳನಿರೋಧ"ವೇ 'ಯೋಗ'ವೆಂದು ಕರೆದಿದ್ದಾನೆ (ಯೋಗಸೂತ್ರ ೧.೨). ಚಿತ್ತ ಅಥವಾ ಮನಸ್ಸಿನ ಎಲ್ಲಾ ವೃತ್ತಿ ಅಥವಾ ಮಾರ್ಪಾಟುಗಳನ್ನು  ನಿಯಂತ್ರಣ ಮತ್ತು ನಿಗ್ರಹ(ನಿರೋಧ)ದಲ್ಲಿಟ್ಟರೆ ಪುರುಷ ಅಥವಾ ಆತ್ಮನ ನೈಜ ಸ್ವರೂಪವು ಅನಾವರಣಗೊಳ್ಳುತ್ತದೆ. ಚಿತ್ತವು ಮನಸ್ಸಿನ ಪದಾರ್ಥವಾಗಿದ್ದು ಅದನ್ನು ಅಂತಃಕರಣ (ಒಳಗಿನ ಸಾಧನ), ಮನಸ್ (ಮನಸ್ಸು) ಅಥವಾ ಬುದ್ಧಿ ಮೊದಲಾದ ಶಬ್ದಗಳಿಂದ ಕರೆಯಲಾಗಿದೆ. ಜ್ಞಾನೇಂದ್ರಿಯಗಳಾದ ಕಣ್ಣು, ಕಿವಿ ಮೊದಲಾದವುಗಳ ಮುಖಾಂತರ ವಿಷಯ ವಸ್ತುಗಳು ಮನಸ್ಸಿನ ಒಳಗೆ ಉಂಟು ಮಾಡುವ ಆಲೋಚನಾ ತರಂಗಗಳು, ಭಾವನೆಗಳು ಮತ್ತು ಉದ್ವೇಗಗಳನ್ನೇ ಚಿತ್ತವೃತ್ತಿಗಳೆಂದು ಕರೆದಿದ್ದಾರೆ. ಈ ಚಿತ್ತವೃತ್ತಿಗಳು ಅಸಂಖ್ಯಾತವೆಂದು ಕಂಡುಬಂದರೂ ಕೂಡ ಅವುಗಳನ್ನು ಐದು ವರ್ಗಗಳಾಗಿ ವಿಂಗಡಿಸಬಹುದು. ಅವೆಂದರೆ, 'ಪ್ರಮಾಣ'(ನೈಜ ಜ್ಞಾನದ ಮೂಲಗಳು), 'ವಿಪರ್ಯಯ'(ಅಸಂಬದ್ಧ ಜ್ಞಾನ), 'ವಿಕಲ್ಪ'(ಒಂದು ಶಬ್ದವನ್ನು ಕೇಳಿದಾಗ ಮನಸ್ಸಿನಲ್ಲಿ ಮೂಡುವ ಚಿತ್ರ), 'ನಿದ್ರಾ'(ನಿದ್ದೆ) ಮತ್ತು 'ಸ್ಮೃತಿ'(ನೆನಪು).

          'ಪ್ರಮಾಣ'ವೆಂದರೆ ಸರಿಯಾದ ಜ್ಞಾನವನ್ನು ಹೊಂದಲು ಇರುವ ಮಾಧ್ಯಮ. ಪ್ರಮಾಣಗಳು ಮೂರು - ಪ್ರತ್ಯಕ್ಷ (ನೇರವಾದ ಅನುಭವ), ಅನುಮಾನ (ನಿಷ್ಕರ್ಷೆ ಅಥವಾ ಕ್ರಮಬದ್ಧ ಜ್ಞಾನ) ಮತ್ತು ಆಗಮ (ನಂಬಲರ್ಹ ವ್ಯಕ್ತಿಯ ಮಾತು ಹಾಗೂ ಶ್ರುತಿಗಳ ವಾಕ್ಯಗಳು). 'ವಿಪರ್ಯಯ'ವೆಂದರೆ ಅಸಂಬದ್ಧ (ಅಸ್ಪಷ್ಟ)ವಾದ ಜ್ಞಾನ - ಹಗ್ಗವನ್ನು ಹಾವೆಂದು ಅರೆಕತ್ತಲಿನಲ್ಲಿ ತಿಳಿಯುವಂತೆ. 'ವಿಕಲ್ಪ'ವೆಂದರೆ ಒಂದು ಶಬ್ದ ಅಥವಾ ಶಬ್ದಗಳನ್ನು ಕೇಳಿದೊಡನೆ ಮನಸ್ಸಿನಲ್ಲಿ ಮೂಢುವ ಚಿತ್ರ; ಉದಾಹರಣೆಗೆ "ರಾಹುವಿನ ತಲೆ" (ಕುಗ್ರಹವಾದ ರಾಹುವಿಗೆ ತಲೆಮಾತ್ರವಿದ್ದು ದೇಹದ ಉಳಿದ ಭಾಗವು ಇರುವುದಿಲ್ಲ). 'ನಿದ್ರಾ' ಅಥವಾ ನಿದ್ದೆಯ ಸ್ಥಿತಿಯೆಂದರೆ ತಮಸ್ಸಿನ ಆಧಿಪತ್ಯದಿಂದ ಮನಸ್ಸಿನಲ್ಲಿ ಏಳುವ ವಿಕಾರಗಳು. 'ಸ್ಮೃತಿ'ಯೆಂದರೆ ಹಿಂದಿನ ಅನುಭವಗಳ ನೆನಪು.

          ಚಿತ್ತವೃತ್ತಿಗಳು ಪುರುಷನಿಗೆ ಅವಿದ್ಯೆ(ಅಜ್ಞಾನ), ಅಸ್ಮಿತಾ(ತಾನೆ ಎನ್ನುವ ಅಹಂಭಾವ) ಮೊದಲಾದವುಗಳಿಂದ 'ಕ್ಲೇಷ' ಅಥವಾ ದುಃಖವನ್ನು ಉಂಟು ಮಾಡಿದಾಗ ಅವನ್ನು 'ಕ್ಲಿಷ್ಟ'ವೆನ್ನುತ್ತಾರೆ. ಯಾವಾಗ ಚಿತ್ತವೃತ್ತಿಗಳು ಪುರುಷನು ಅವುಗಳಿಂದ ಬಿಡುಗಡೆಹೊಂದಲು ಸಹಾಯ ಮಾಡುತ್ತವೆಯೋ ಆಗ ಅವು 'ಅಕ್ಲಿಷ್ಟ'ವೆನಿಸುತ್ತವೆ.

          ಚಿತ್ತ ಅಥವಾ ಮನಸ್ಸಿಗೆ ಐದು ಹಂತಗಳಿವೆ: ಕ್ಷಿಪ್ತ(ಚುರುಕು), ಮೂಢ(ನಿರಾಸಕ್ತಿ), ವಿಕ್ಷಿಪ್ತ (ಚಂಚಲ ಅಥವಾ ಚದುರಿದ), ಏಕಾಗ್ರ (ತಲ್ಲೀನ) ಮತ್ತು ನಿರುದ್ಧ (ನಿರ್ಲಿಪ್ತ ಅಥವಾ ನಿಗ್ರಹ). ಮೊದಲ ಮೂರು ಹಂತಗಳಲ್ಲಿ ಯೋಗವು ಸಾಧ್ಯವಿಲ್ಲ ಏಕೆಂದರೆ ಮನಸ್ಸು ಆಗ ರಜಸ್ಸು ಹಾಗು ತಮಸ್ಸಿನ ಆಧೀನಕ್ಕೊಳಪಟ್ಟಿರುತ್ತದೆ. ಯಾವಾಗ ಸತ್ವದ ಆಧಿಪತ್ಯವು ಉಂಟಾಗುತ್ತದೋ ಅದು ಮನಸ್ಸಿನ ಮೇಲೆ ಹತೋಟಿಯನ್ನು ಸಾಧಿಸಿ ಅದನ್ನು ಏಕಾಗ್ರತೆಯಿಂದ 'ಸಂಪ್ರಜ್ಞತ-ಸಮಾಧಿ'ಯ(ನಿಖರವಾದ ಧ್ಯಾನದಿಂದ ಲಕ್ಷದ ಬಗ್ಗೆ ಸ್ಪಷ್ಟ ತಿಳುವಳಿಕೆ ಉಂಟಾಗುವ ಸ್ಥಿತಿ) ಕಡೆಗೆ ಕೊಂಡೊಯ್ಯುತ್ತದೆ. ಕಡೆಯದಾದ ನಿರುದ್ಧ ಸ್ಥಿತಿಯಲ್ಲಿ ಯಾವುದೇ ರೀತಿಯ ಚಿತ್ತವೃತ್ತಿಗಳು ಉತ್ಪನ್ನವಾಗದೆ ಮನಸ್ಸು 'ಅಸಂಪ್ರಜ್ಞ-ಸಮಾಧಿ'ಯ ಸ್ಥಿತಿಗೆ ಕೊಂಡೊಯ್ಯಲ್ಪಡುತ್ತದೆ. ಈ ಸ್ಥಿತಿಯಲ್ಲಿ ಯಾವುದೇ 'ಲಕ್ಷ್ಯ'ದ ಬಗ್ಗೆ ಪುರುಷನಿಗೆ ಪರಿವೆಯಿರುವುದಿಲ್ಲ ಆದರೆ ಅವನು ತನ್ನೊಳಗೆ ಅಂದರೆ ಆತ್ಮದ ಸ್ವರೂಪದೊಂದಿಗೆ ಸಂಪೂರ್ಣ ತನ್ಮಯನಾಗುತ್ತಾನೆ. ಆವಾಗ ಪುರುಷನು ಮುಕ್ತನಾಗುತ್ತಾನೆ; ಅಂದರೆ ಬಂಧನದಿಂದ ಬಿಡುಗಡೆಗೊಂಡ ಆತ್ಮನಾಗುತ್ತಾನೆ - ಅಂದರೆ ಪ್ರಕೃತಿಯ ಎಲ್ಲಾ ಸಂಕಷ್ಟಗಳಿಂದ ಪಾರಾದವನಾಗಿರುತ್ತಾನೆ.

ಯೋಗಕ್ಕೆ ಬರುವ ಪ್ರತಿರೋಧಗಳು

          ಪತಂಜಲಿಯು ಯೋಗಕ್ಕೆ ಬರುವ ಅಡ್ಡಿಗಳನ್ನು 'ಅಂತರಾಯ'(ಮಧ್ಯದಲ್ಲಿ ಬರುವವು)ಗಳೆಂದು  ಕರೆಯುತ್ತಾನೆ ಮತ್ತು ಅವು ಒಂಭತ್ತು ವಿಧವಾದವುಗಳು ಎಂದು ಪಟ್ಟಿ ಮಾಡುತ್ತಾನೆ (೧.೩೦). ಅವೆಂದರೆ, ವ್ಯಾಧಿ (ರೋಗ/ಖಾಯಿಲೆ), ಸ್ಥ್ಯಾನ(ಅಯಿಷ್ಟತೆ/ನಿರಾಸಕ್ತಿ), ಸಂಶಯ (ಶಂಖೆ), ಪ್ರಮಾದ (ಅವಘಡ), ಆಲಸ್ಯ(ಸೋಮಾರಿತನ), ಅವಿರತಿ (ವೈರಾಗ್ಯ ಹೀನತೆ/ಪ್ರಾಪಂಚಿಕ ವಸ್ತುಗಳಲ್ಲಿ ಆಸಕ್ತಿ), ಭ್ರಾಂತಿದರ್ಶನ (ತಪ್ಪು ತಿಳುವಳಿಕೆ/ಅನುಭವ), ಅಲಬ್ಧಭೂಮಿಕತ್ವ(ಯೋಗದ ವಿವಿಧ ಹಂತಗಳನ್ನು ಮುಟ್ಟಲಾಗದೇ ಇರುವುದು) ಮತ್ತು ಅನವಸ್ಥಿತತ್ವ (ಯೋಗದ ಸ್ಥಿತಿಯಲ್ಲಿ ನಿಲ್ಲಲಾಗದೇ ಇರುವುದು).

          ಖಾಯಿಲೆಯನ್ನು ಸೂಕ್ತವಾದ ಚಿಕಿತ್ಸೆಯಿಂದ ಶಮನಗೊಳಿಸಬೇಕು. ನಿರಾಸಕ್ತಿಯನ್ನು ಮನೋಬಲವನ್ನು ಗಟ್ಟಿಗೊಳಿಸಿಕೊಳ್ಳುವುದರ ಮೂಲಕ ನಿವಾರಿಸಿಕೊಳ್ಳಬೇಕು. ಸಂಶಯವನ್ನು ಶ್ರುತಿಗಳ ಮತ್ತು ಗುರುಗಳ ಮೇಲೆ ನಂಬಿಕೆಯಿರಿಸಿ ಹೊಡೆದೋಡಿಸಬೇಕು. ನಿರಂತರ ಎಚ್ಚರಿಕೆಯಿಂದ ಪ್ರಮಾದಗಳು ಸಂಭವಿಸದಂತೆ ನೋಡಿಕೊಳ್ಳಬೇಕು. ಆಲಸ್ಯತನ ಅಥವಾ ಸೋಮಾರಿತನವನ್ನು ನಿರಂತರ ಚಟುವಟಿಕೆಯಿಂದ ಗೆಲ್ಲಬೇಕು. ಅವಿರತಿಯನ್ನು ವಿವೇಕ (ಒಳ್ಳೆಯದು ಮತ್ತು ಕೆಟ್ಟದ್ದರ ಬಗ್ಗೆ ವಿವೇಚನೆ) ಮತ್ತು ವೈರಾಗ್ಯ(ಪ್ರಾಪಂಚಿಕತೆಯನ್ನು ತೊರೆಯುವುದು) ಇವುಗಳ ಮೂಲಕ ಶೂನ್ಯವಾಗಿಸಬೇಕು. ಕಡೆಯ ಮೂರು ಪ್ರತಿರೋಧಗಳಾದ ಭ್ರಾಂತಿದರ್ಶನ, ಅಲಬ್ಧಭೂಮಿಕತ್ವ ಮತ್ತು ಅನವಸ್ಥಿತತ್ವಗಳನ್ನು ಯೋಗ್ಯ ಗುರುವಿನ ಮಾರ್ಗದರ್ಶನದಂತೆ ನಡೆದು ಇಲ್ಲವಾಗಿಸಿಕೊಳ್ಳಬೇಕು.

          ಪತಂಜಲಿಯು ಮನಸ್ಸನ್ನು ವಿಚಲಿತಗೊಳಿಸುವ ಇನ್ನೂ ಐದು ಅಂತರಾಯಗಳನ್ನು ಈ ಪಟ್ಟಿಗೆ ಸೇರಿಸುತ್ತಾನೆ. ಅವೆಂದರೆ: ದುಃಖ (ಯಾತನೆ/ನೋವು), ದೌರ್ಮನಸ್ಯ (ಹತಾಶೆ/ಆಶಾಭಂಗ), ಅಂಗಮೆಜಯತ್ವ(ದೇಹದ ಅಂಗಗಳ/ಕೈಕಾಲುಗಳ ಅವಿಶ್ರಾಂತತೆ), ಶ್ವಾಸ ಮತ್ತು ಪ್ರಶ್ವಾಸ (ಲಯಬದ್ಧವಾಗಿ ಉಸಿರನ್ನು  ಬಿಡುವುದು ಮತ್ತು ತೆಗೆದುಕೊಳ್ಳುವುದಕ್ಕೆ ಉಂಟಾಗುವ ತೊಂದರೆ). ಇವುಗಳನ್ನು ಕೂಡ ಸೂಕ್ತ ಕ್ರಮಗಳಿಂದ ನಿವಾರಿಸಿಕೊಳ್ಳಬೇಕು.

ಅನುಸರಿಸಬಹುದಾದ ಕೆಲವು ಸೂಚನೆಗಳು

          ಪತಂಜಲಿಯು ಯೋಗಾಸಕ್ತರಿಗೆ ಹಲವಾರು ಸಲಹೆ ಸೂಚನೆಗಳನ್ನು ಕೊಡುತ್ತಾನೆ; ಇದರಿಂದ ಯೋಗ ಮಾರ್ಗದಲ್ಲಿರುವ ಅಂತರಾಯಗಳನ್ನು ಹೋಗಲಾಡಿಸಿಕೊಂಡು ಹೆಚ್ಚಿನ ಏಕಾಗ್ರತೆಯನ್ನು ಗಳಿಸಿಕೊಂಡು ಅಂತಿಮವಾಗಿ ಸಮಾಧಿ ಅಥವಾ ತನ್ನ/ಆತ್ಮದ ಕುರಿತಾದ ಅಸಾಮಾನ್ಯ ಅನುಭವಡೆಗೆ ಸಾಗಬಹುದು. ಇವುಗಳಲ್ಲಿ ವೈರಾಗ್ಯ ಮತ್ತು ಅಭ್ಯಾಸಗಳು ಮೊದಲು ಬರುತ್ತವೆ. ಮೊದಲನೆಯದಾದ ವೈರಾಗ್ಯವು ಪ್ರಾಪಂಚಿಕತೆಯನ್ನು ತೊರೆಯುವುದು ಅಥವಾ ವಿಷಯ ವಸ್ತುಗಳ ಕಡೆಗೆ ಅನಾಸಕ್ತಿಯನ್ನು ಬೆಳೆಸಿಕೊಳ್ಳುವುದರೆಡೆಗೆ ಮನಸ್ಸನ್ನು ಕೊಂಡೊಯ್ದರೆ; ಅಭ್ಯಾಸ (ನಿರಂತರ ಪ್ರಯತ್ನ)ವು ದೇವರೆಡೆಗೆ ಅಥವಾ ಆತ್ಮನನ್ನು ತಿಳಿಯುವುದರೆಡೆಗೆ ಕೊಂಡೊಯ್ಯುತ್ತದೆ.  
          ಬೇರೆ ಕೆಲವು ಸೂಚನೆಗಳೆಂದರೆ: ಯಾರು ಸಂತೋಷದಿಂದ ಇರುತ್ತಾರೋ ಅವರ ಬಗ್ಗೆ ಮತ್ಸರ ತಳೆಯದೆ ಅವರೊಡನೆ ಸ್ನೇಹಭಾವ(ಮೈತ್ರಿ) ಇಟ್ಟುಕೊಳ್ಳುವುದು; ಕಷ್ಟಕಾರ್ಪಣ್ಯದಿಂದ ಬಳಲುವವರನ್ನು ಅನುಕಂಪದಿಂದ (ಕರುಣೆಯಿಂದ) ಕಾಣುವುದು; ಕ್ರಮಬದ್ಧ ಉಸಿರಾಟದಿಂದ ಪ್ರಾಣಶಕ್ತಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು; ತನ್ನ ಹೃದಯ ಮಧ್ಯದಲ್ಲಿರುವ ಬೆಳಕಿನ ಮೇಲೆ ಧ್ಯಾನಿಸುವುದು; ಮಹಾತ್ಮರ ಮನಸ್ಸಿನ ಬಗೆಗೆ ಚಿಂತನೆ ಮಾಡುವುದು; ಉಚ್ಛಸ್ಥಿತಿಗೆ ಕೊಂಡೊಯ್ದ ಕನಸುಗಳೇನಾದರೂ ಬಿದ್ದಿದ್ದರೆ ಅವುಗಳನ್ನು ಮೇಲಿಂದ ಮೇಲೆ ಜ್ಞಾಪಿಸಿಕೊಳ್ಳುವುದು; ದೇವ-ದೇವತೆಗಳ ರೂಪಗಳ ಬಗ್ಗೆ ಅಥವಾ ಚಂದ್ರನಂತಹ ಗ್ರಹಗಳ ಬಗ್ಗೆ ಅಥವಾ ತನ್ನ ದೇಹದಲ್ಲಿರುವ ಮನೋಬಿಂದುಗಳ ಬಗ್ಗೆ ಎಡಬಿಡದೆ ಮನನ ಮಾಡುವುದು.
          ಮೇಲೆ ತಿಳಿಸಿದ ಎಲ್ಲಾ ವಿಧಾನಗಳು ಆಧ್ಯಾತ್ಮ ಪಿಪಾಸುಗಳಿಗೆ ಮನಃಶಾಂತಿಯನ್ನುಂಟು ಮಾಡುವುದಲ್ಲದೆ ಮನಸ್ಸಿನ ಮೇಲೆ ಹತೋಟಿಯನ್ನು ಸಾಧಿಸಲು ಸಹಾಯಕವಾಗುತ್ತವೆ.

ಅಷ್ಟಾಂಗ ಅಥವಾ ಎಂಟು ಸೋಪಾನಗಳು
          ಪುರುಷ ಅಥವಾ ಜೀವಾತ್ಮನು (ಪ್ರತ್ಯೇಕ ಆತ್ಮನು) ಪ್ರಕೃತಿಯ ಉತ್ಪನ್ನವಾದ "ಮನೋದೈಹಿಕ ಸಂಕೀರ್ಣ"(ಮನಸ್ಸಿನಿಂದ ಕೂಡಿದ ದೇಹ)ದ ಜೊತೆಗೆ ಹೊಂದಿದ ಅತಿಯಾದ ಮಮತೆಯಿಂದಾಗಿ ಭಂದನಕ್ಕೊಳಗಾಗಿದ್ದಾನೆ. ಯೋಗದ ಗುರಿಯು ವಿಯೋಗ ಅಂದರೆ ಪ್ರಕೃತಿಯ ಪಾಶದಿಂದ ಪುರುಷನನ್ನು ಬಿಡುಗಡೆಗೊಳಿಸುದೇ ಆಗಿದೆ. ಈ ಮುಕ್ತಿಯು ವಿವೇಕಖ್ಯಾತಿಯಿಂದ ಬರುತ್ತದೆ. (ವಿವೇಕ=ಯುಕಾಯುಕ್ತ ವಿವೇಚನೆ ಮತ್ತು ಖ್ಯಾತಿ=ಜ್ಞಾನ).
          ಯೋಗಸೂತ್ರಗಳು ಹಂತ ಹಂತವಾಗಿ ಎಂಟು ಹೆಜ್ಜೆಗಳುಳ್ಳ ಶಿಕ್ಷಣ ಕ್ರಮವನ್ನು ಸೂಚಿಸುತ್ತವೆ. ಅವುಗಳೆಂದರೆ: ಯಮ (ನಿಗ್ರಹ), ನಿಯಮ (ಕಟ್ಟಳೆ), ಆಸನ (ಭಂಗಿ), ಪ್ರಾಣಾಯಾಮ (ಪ್ರಾಣಶಕ್ತಿಗಳ ನಿಯಂತ್ರಣ), ಪ್ರತ್ಯಾಹಾರ(ಹಿಂತೆಗೆದುಕೊಳ್ಳುವ ಪ್ರಕ್ರಿಯೆ), ಧಾರಣ(ಒಟ್ಟುಗೂಡಿಸುವಿಕೆ ಅಥವಾ ಕೇಂದ್ರೀಕರಿಸುವಿಕೆ), ಧ್ಯಾನ (ಏಕಾಗ್ರಗೊಳಿಸುವಿಕೆ ಅಥವಾ ಲಕ್ಷದ ಮೇಲೆ ಗಮನಕೊಡುವಿಕೆ), ಮತ್ತು ಸಮಾಧಿ (ಸಂಪೂರ್ಣ ತಲ್ಲೀನತೆ/ತನ್ಮಯವಾಗುವಿಕೆ). ಯೋಗ ಸ್ಥಿತಿಯ ಪ್ರಾಪ್ತಿಯಲ್ಲಿ ಇವುಗಳಲ್ಲಿ ಮೊದಲ ಐದು ನಿಯಮಗಳನ್ನು 'ಬಹಿರಂಗ' (ಬಾಹ್ಯ) ಮತ್ತು ಕಡೆಯ ಮೂರನ್ನು 'ಅಂತರಂಗ' (ಒಳಗಿನ) ಸಾಧನೆಗಳೆನ್ನುತ್ತಾರೆ.
          ಅಹಿಂಸಾ (ನೋವುಂಟು ಮಾಡದೇ ಇರುವುದು), ಸತ್ಯ (ನಿಜವನ್ನು ನುಡಿಯುವುದು), ಅಸ್ತೇಯ (ಕಳ್ಳತನ ಮಾಡದೇ ಇರುವುದು), ಬ್ರಹ್ಮಚರ್ಯ(ಇಂದ್ರಿಯ ನಿಗ್ರಹ) ಮತ್ತು ಅಪರಿಗ್ರಹ (ದಾನವನ್ನು ಸ್ವೀಕರಿಸದೇ ಇರುವುದು) ಇವುಗಳು ಮೊದಲನೆಯ ಹಂತವಾದ ಯಮದ ನಿಯಮಾವಳಿಗಳು.
          ಎರಡನೇ ಹಂತವಾದ ನಿಯಮದಲ್ಲಿ ಶೌಚ (ಪರಿಶುದ್ಧತೆ), ಸಂತೋಷ(ತೃಪ್ತಿ), ತಪಸ್ಸು(ತ್ರಿಕರಣ ಶುದ್ಧತೆ ಅಂದರೆ ಕಾಯ, ವಾಚ, ಮನಸಾ ನಿಗ್ರಹವನ್ನು ಹೊಂದಿರುವುದು), ಸ್ವಾಧ್ಯಾಯ (ವೇದ ಶಾಸ್ತ್ರಗಳ ಪಾರಾಯಣ ಮತ್ತು ಓಂ ಮುಂತಾದ ಮಂತ್ರಗಳ ಪುನರುಚ್ಛಾರಣೆ ಮಾಡುವುದು), ಮತ್ತು ಈಶ್ವರಪ್ರಣಿಧಾನ (ದೇವರ ಮೇಲೆ ಭಕ್ತಿಯನ್ನಿರಿಸುವುದು) ಇವುಗಳನ್ನು ಒಳಗೊಂಡಿದೆ.
          ಶೌಚವು ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಿದರೆ ಎರಡನೆಯದಾದ ಸಂತೋಷವು ವೈಯ್ಯಕ್ತಿಕ ಪರಿಶುದ್ಧತೆಯನ್ನು ಉಂಟು ಮಾಡುತ್ತವೆ. ಇತರ ಮೂರು ನಿಯಮಗಳಾದ ತಪಸ್ಸು, ಸ್ವಾಧ್ಯಾಯ ಮತ್ತು ಈಶ್ವರಪ್ರಣಿಧಾನಗಳನ್ನು ಒಟ್ಟುಗೂಡಿಸಿ ಅವುಗಳನ್ನು ಪತಂಜಲಿಯು 'ಕ್ರಿಯಾಯೋಗ'ವೆಂದು ಕರೆದಿದ್ದಾನೆ. ಇದು ಯೋಗಕ್ಕೆ ಕೊಂಡೊಯ್ಯುವ ಪರಿಣಾಮಕಾರಿ ಮತ್ತು ಹತ್ತಿರದ ಮಾರ್ಗವಾಗಿದೆ.
          ಆಸನವೆಂದರೆ ಯೋಗಾಭ್ಯಾಸವನ್ನು ಕೈಗೊಳ್ಳುವ ವ್ಯಕ್ತಿಯು ಅನುಕೂಲಕರವಾಗಿ ಮತ್ತು ಸ್ಥಿರವಾಗಿ ಕುಳಿತುಕೊಳ್ಳಲು ಅನುವಾಗಿರುವ ಭಂಗಿ. ಪ್ರಾಣಾಯಾಮವೆಂದರೆ ಕ್ರಮಬದ್ಧ ಉಸಿರಾಟದ ಮೂಲಕ ಜೀವನಾಧಾರವಾದ ಪ್ರಾಣವಾಯುಗಳನ್ನು ನಿಯಂತ್ರಿಸುವುದು. ಗ್ರಹಣೇಂದ್ರಿಯಗಳನ್ನು ಅಥವಾ ಪಂಚೇಂದ್ರಿಯಗಳನ್ನು ವಿಷಯವಸ್ತುಗಳಿಂದ ಒಳಸೆಳೆದುಕೊಂಡಾಗ ಅವು ಯಾವುದೇ ಪ್ರತಿಕ್ರಿಯೆಯಿಲ್ಲದೆ ಮನಸ್ಸಿನೊಂದಿಗೆ ಏಕೀಕರಣಗೊಳ್ಳುತ್ತವೆ; ಇದನ್ನೇ ಪ್ರತ್ಯಾಹಾರವೆಂದು ಕರೆಯುತ್ತಾರೆ.
          ಮುಂದಿನ ಮೂರು ಹಂತಗಳಾದ ಧಾರಣ, ಧ್ಯಾನ ಮತ್ತು ಸಮಾಧಿಗಳು ಒಂದೇ ಕ್ರಿಯೆಯ ಮುಂದುವರೆದ ಹೆಜ್ಜೆಗಳು. ಧಾರಣದಲ್ಲಿ ಮನಸ್ಸು ಲಕ್ಷ್ಯವಿಡಬೇಕಾದ ವಸ್ತುವಿನ ಮೇಲೆ ಕೇಂದ್ರಿತವಾಗಿರುತ್ತದೆ. ಈ ಏಕಾಗ್ರತೆಯು ಒಂದು ಪಾತ್ರೆಯಿಂದ ಇನ್ನೊಂದು ಪಾತ್ರೆಗೆ ಸುರಿಯಲ್ಪಡುವ ಎಣ್ಣೆಯಂತೆ ನಿರಾತಂಕವಾಗಿ ಹರಿಯುವಂತಹ ಸ್ಥಿತಿಯಲ್ಲಿದ್ದಾಗ ಅದು ಧ್ಯಾನವೆನಿಸುಕೊಳ್ಳುತ್ತದೆ. ಯಾವಾಗ ಧ್ಯಾನವು ಪಕ್ವಗೊಂಡು ವ್ಯಕ್ತಿಯು ತನ್ನ ಇರಿವನ್ನು ಸಹ ಮರೆತು ಲಕ್ಷ್ಯದೊಂದಿಗೆ ತನ್ಮಯತೆಯನ್ನು ಹೊಂದುತ್ತಾನೋ ಆ ಸ್ಥಿತಿಯನ್ನು ಸಮಾಧಿಯೆನ್ನುತ್ತಾರೆ. ಸಮಾಧಿ ಸ್ಥಿತಿಯು ಈಶ್ವರಪ್ರಣಿಧಾನ ಅಥವಾ ಭಗವದ್ಭಕ್ತಿಯಿಂದಲೂ ಲಭ್ಯವಾಗುತ್ತದೆ.
          ಧಾರಣ, ಧ್ಯಾನ ಮತ್ತು ಸಮಾಧಿ ಈ ಮೂರನ್ನೂ ಒಟ್ಟಾಗಿಸಿ ಪತಂಜಲಿಯು ಅದನ್ನು 'ಸಂಯಮ'ವೆಂಬ ಶಬ್ದದಿಂದ ಕರೆದಿದ್ದಾನೆ. ಮತ್ತು ಈ ಸಂಯಮವು ಯಾವಗಲೂ ಒಂದೇ ಒಂದು ವಸ್ತುವಿನ ಮೇಲಿರಬೇಕು.

ಯೋಗಸಿದ್ಧಿಗಳು
          ತಪಸ್ಸು ಅಥವಾ ಭಗವದನುಗ್ರಹದಿಂದ ಅತೀಂದ್ರಿಯ ಶಕ್ತಿಗಳನ್ನು ಪಡೆಯಬಹುದೆನ್ನುವ ನಂಬಿಕೆಯು ಬಹು ಪುರಾತನವಾದದ್ದು. ಪತಂಜಲಿಯು  ಸತ್ಯಾನ್ವೇಷಕರ ಮನದಲ್ಲಿ ನಂಬಿಕೆಯನ್ನುಂಟು ಮಾಡಲು ತನ್ನ ಎರಡನೆಯ ಮತ್ತು ಮೂರನೆಯ ಅಧ್ಯಾಯದಲ್ಲಿ ಇಂತಹ ಹಲವಾರು ವಿಶೇಷ ಶಕ್ತಿಗಳ ಬಗ್ಗೆ ಉಲ್ಲೇಖಿಸಿದ್ದಾನೆ. ಉದಾಹರಣೆಗೆ ಯಾವ ಮನುಷ್ಯನು ಸಂಪೂರ್ಣವಾಗಿ ಅಹಿಂಸಾ ಗುಣಗಳನ್ನು ಒಂದಾಗಿಸಿಕೊಂಡಿರುತ್ತಾನೋ ಅವನ ಬಳಿಯಲ್ಲಿ ಪರಸ್ಪರ ವೈರತ್ವವಿರುವ (ಹುಲಿ ಮತ್ತು ಹಸು) ಪ್ರಾಣಿಗಳೂ ಕೂಡ ಶಾಂತಿ ಮತ್ತು ಸೌಹಾರ್ದತೆಗಳಿಂದ ಜೀವಿಸುತ್ತವೆ. ಯಾವ ವ್ಯಕ್ತಿಯಲ್ಲಿ ಸತ್ಯವು ಬೇರೂರಿರುತ್ತದೆಯೋ ಆ ವ್ಯಕಿಯ ಮಾತು ಸುಳ್ಳಾಗುವುದಿಲ್ಲ. ಯಾವ ವ್ಯಕ್ತಿಯು ಕಠಿಣವಾಗಿ ಅಪರಿಗ್ರಹವನ್ನು(ದಾನವನ್ನು ಸ್ವೀಕರಿಸುವುದಿಲ್ಲವೋ) ಪರಿಪಾಲಿಸುತ್ತಾನೆಯೋ ಅವನಿಗೆ ತನ್ನ ಪೂರ್ವ ಜನ್ಮದ ಜ್ಞಾನವುಂಟಾಗುತ್ತದೆ ಮತ್ತು ಅವನು ತನ್ನ ಮುಂದಿನ ಜನ್ಮಗಳ ಬಗ್ಗೆಯೂ ತಿಳಿದುಕೊಳ್ಳಬಲ್ಲ (ನೋಡಿ ಯೋಗಸೂತ್ರ ೨.೩೫,೩೬ ಮತ್ತು ೩೯).
          'ಸಂಯಮ'ದಿಂದ ಯೋಗಿಗೆ ಹಲವಾರು ಅತೀಂದ್ರಿಯ ಶಕ್ತಿಗಳು ಪ್ರಾಪ್ತವಾಗುತ್ತವೆ. ಉದಾಹರಣೆಗೆ, ಪಂಚಭೂತಗಳಾದ ಪೃಥ್ವಿ(ಭೂಮಿ) ಮತ್ತು ಅಪ್(ನೀರು) ಇವುಗಳ ಮೇಲಿನ 'ಸಂಯಮ'ದಿಂದ ಯೋಗಿಯು ಅಷ್ಟಸಿದ್ಧಿ ಅಥವಾ ಎಂಟು ಸುತ್ತಿನ ಶಕ್ತಿಯನ್ನು ಪಡೆಯುತ್ತಾನೆ; 'ಅಣಿಮಾ'(ಅಣುವಿನಷ್ಟು ಚಿಕ್ಕದಾಗುವಿಕೆ), 'ಮಹಿಮಾ'(ಎಷ್ಟು ಬೇಕೋ ಅಷ್ಟು ಎತ್ತರಕ್ಕೆ ಬೆಳೆಯುವುದು) ಮೊದಲಾದವು (ಯೋಗಸೂತ್ರ ೩.೪೪,೪೫). ಆ ಕೃತಿಯಲ್ಲಿ ಹೆಸರಿಸಿರುವ ಇನ್ನೂ ಕೆಲವು ಸಿದ್ಧಿಗಳೆಂದರೆ: ಆಲೋಚನೆಯನ್ನು ಗ್ರಹಿಸುವುದು, ನೋಟದಿಂದ ಕಣ್ಮರೆಯಾಗುವುದು, ಅಸದಳ ಶಕ್ತಿಯನ್ನು ಹೊಂದುವುದು, ಪಶು-ಪಕ್ಷಾದಿಗಳ ಭಾಷೆಯನ್ನು ಅರಿತುಕೊಳ್ಳುವುದು,  ಮೊದಲಾದವು.
          ಆದರೆ ಮನೋವಿಜ್ಞಾನಿಯಾಗಿದ್ದ ಪತಂಜಲಿಯು ಇವನ್ನು ವಿವರಿಸಿದರೂ (ವಿಜ್ಞಾನದ ಭಾಗವಾಗಿರುವುದರಿಂದ ಅವುಗಳನ್ನು ವಿವರಿಸಿದ್ದಾನೆ); ಅವುಗಳನ್ನು ಹೊಂದುವುದರಲ್ಲಿ ಆಸಕ್ತಿಯನ್ನು ತಳೆಯಬಾರದೆಂದು ಯೋಗಾಸಕ್ತರಿಗೆ ಎಚ್ಚರಿಸುತ್ತಾನೆ. ಏಕೆಂದರೆ ಇವುಗಳ ಪ್ರಲೋಭನೆ ಅಥವಾ ಸೆಳೆತಕ್ಕೆ ಸಿಕ್ಕ ಯೋಗಾಭ್ಯಾಸಿಯು ಅವನ ಗುರಿಯಾದ 'ಕೈವಲ್ಯ' ಅಥವಾ 'ಮುಕ್ತಿ'ಯನ್ನು ಪಡೆಯುವ ಮಾರ್ಗದಿಂದ ವಿಮುಖನಾಗಿಬಿಡುತ್ತಾನೆ. ಆದರೆ ಒಮ್ಮೆ 'ಕೈವಲ್ಯ' ಸ್ಥಿತಿಯನ್ನು ಪಡೆದ ವ್ಯಕ್ತಿಯು ತನ್ನ 'ಪ್ರಾರಬ್ಧ ಕರ್ಮ'(ಈ ಜನ್ಮಕ್ಕೆ ಕಾರಣವಾದ ಕರ್ಮ)ಕ್ಕೆ ಅನುಸಾರವಾಗಿ ಇನ್ನೂ ಸ್ವಲ್ಪ ಕಾಲ ಜೀವಿಸಬಹುದು. ಈ ಸ್ಥಿತಿಯಲ್ಲಿ ಅವನು ಯಾವುದೇ ಪ್ರಮಾದವಿಲ್ಲದೆ ಈ ಶಕ್ತಿಗಳನ್ನು  ಮಾನವಸಂತತಿಯ ಒಳಿತಿಗಾಗಿ ಬಳಸಬಹುದು.

ಸಮಾರೋಪ
          ಯೋಗದರ್ಶನವು ಕೇವಲ ಪ್ರಾಚೀನವಾದ ಪದ್ಧತಿ ಮಾತ್ರವಾಗಿರದೆ ಅನುಷ್ಠಾನಯೋಗ್ಯವೂ ಆಗಿದೆ. ವೇದಾಂತ ದರ್ಶನಗಳೂ ಕೂಡ ಅದರ ಸಾಧನಾ ಭಾಗಗಳನ್ನು ಒಪ್ಪಿಕೊಳ್ಳುತ್ತವೆ. ಆಧುನಿಕ ಮನಃಶಾಸ್ತ್ರಜ್ಞರು ಕೂಡ ಮನಸ್ಸಿನ ಸ್ವಾಸ್ಥ್ಯವನ್ನು ಮತ್ತೆ ಪಡೆಯುವಲ್ಲಿ ಮತ್ತು ಅದನ್ನು ಕಾಪಾಡಿಕೊಳ್ಳುವಲ್ಲಿ ಇದರ ಉಪಯುಕ್ತತೆಯ ಬಗ್ಗೆ ಸಂಶೋಧನೆಗಳನ್ನು ಕೈಗೊಂಡಿದ್ದಾರೆ. ಯೋಗದ ವಿಧಾನ ಮತ್ತು ಕೌಶಲಗಳು ಪ್ರಪಂಚದಾದ್ಯಂತ ಇಂದು ಜನಪ್ರಿಯತೆಯನ್ನು ಗಳಿಸಿಕೊಳ್ಳುತ್ತಿವೆ. ಮೊದಲೆರಡು ನಿಯಮಾವಳಿಗಳಾದ ಯಮ ಮತ್ತು ನಿಯಮಗಳು ವ್ಯಕ್ತಿಗೆ ಒಳಿತುಂಟು ಮಾಡುವುದಲ್ಲದೆ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಸಹಾಯಕವೆನಿಸುತ್ತವೆ. ವಿವಿಧ ಆಸನಗಳು ಅಥವಾ ಚೆನ್ನಾಗಿ ಪ್ರಚಲಿತವಿರುವ ಯೋಗಾಸನಗಳು ವ್ಯಕ್ತಿಯ ಮಾನಸಿಕ ಆರೋಗ್ಯವನ್ನು ಮರಳಿ ಪಡೆಯಲು ಪೂರಕವಾಗಿವೆ. ಆದ್ದರಿಂದ ಯೋಗ ಪದ್ಧತಿಯು ನಿಧಾನವಾಗಿ ಸಾರ್ವಜನಿಕ ಮನ್ನಣೆಯನ್ನು ಗಳಿಸಿಕೊಳ್ಳುತ್ತಿದೆ.
-ಶ್ರೀಧರ್ ಭಂಡ್ರಿ

ಅಸಾಧ್ಯ ಎನ್ನುವುದು ಯಾವುದೂ ಇಲ್ಲ

ಕಾಷ್ಟಾದಗ್ನಿರ್ಜಾಯತೇ ಮಥ್ಯಮಾನಾತ್
ಭೂಮಿಸ್ತೋಯಂ ಖನ್ಯಮಾನಾ ದದಾತಿ ।
ಸೋತ್ಸಾಹಾನಾಂ ನಾಸ್ತ್ಯಸಾಧ್ಯಂನರಾಣಾಂ
ಮಾರ್ಗಾರಬ್ಧಾಃ ಸರ್ವಯತ್ನಾಃ ಫಲಂತಿ ॥ 

ಮರದತುಂಡುಗಳೆರಡನ್ನು ಕಡೆದರೆ ಬೆಂಕಿ ಉಂಟಾಗುತ್ತದೆ, ನೆಲವನ್ನು ಅಗೆದರೆ ಆಳದಲ್ಲಿ ನೀರು ಸಿಗುತ್ತದೆ, ಹುರುಪಿನಿಂದ ಕೆಲಸಮಾದುವ ಯಾವುದೇ ಮನುಷ್ಯನಿಗೂ ಅಸಾಧ್ಯ ಎನ್ನುವುದು ಯಾವುದೂ ಇಲ್ಲ,ಸರಿಯಾದ ಕ್ರಮದಲ್ಲಿ ಮಾಡಿದ ಎಲ್ಲ ಯತ್ನಗಳೂ ಫಲವನ್ನು ಕೊಡುತ್ತವೆ.

Thursday, August 16, 2012

ಸಾಂಖ್ಯ ದರ್ಶನ


ಪರಿಚಯ:         
          ತನ್ನ ಚಿಂತನೆಗಳನ್ನು ಪ್ರತಿಪಾದಿಸಿ, ತದನಂತರ ಉಪನಿಷತ್ತುಗಳಲ್ಲಿ ಉಲ್ಲೇಖಿಸಿರುವ ವಾಕ್ಯಗಳ ಆಧಾರದಿಂದ ಅವುಗಳನ್ನು ಗಟ್ಟಿಗೊಳಿಸಿ ಬ್ರಹ್ಮಸೂತ್ರವನ್ನು ರಚಿಸಿರುವ ಬಾದರಾಯಣನು ತನ್ನ ಟೀಕೆಯನ್ನು ಸಾಂಖ್ಯ ಪದ್ಧತಿಯೊಂದಿಗೆ ಪ್ರಾರಂಭಿಸಿದ್ದಾನೆ (೨.೨.೧). ಬ್ರಹ್ಮಸೂತ್ರದ ೧.೪.೨೮ ಶ್ಲೋಕಕ್ಕೆ ಭಾಷ್ಯವನ್ನು ಬರೆಯುತ್ತಾ ಆದಿ ಶಂಕರರು (ಕ್ರಿ.ಶ. ೭೮೮-೮೨೦) ತಮ್ಮ ಟೀಕೆಗೆ ಸಾಂಖ್ಯ ಪದ್ಧತಿಯನ್ನು, "ಪ್ರಧಾನ-ಮಲ್ಲ-ನಿಭರ್ಹಣ-ನ್ಯಾಯೇನ" ಅಂದರೆ "ಪ್ರಧಾನ ಜಟ್ಟಿಯನ್ನು ಸೋಲಿಸುವ ತರ್ಕ"ಕ್ಕನುಗುಣವಾಗಿ ಆರಿಸಿಕೊಂಡೆನೆಂದು ತಿಳಿಸುತ್ತಾರೆ. "ಒಬ್ಬ ಹೆಸರುವಾಸಿಯಾದ ಜಟ್ಟಿಯು ತನ್ನ ವಿರುದ್ಧ ಪಾಳಯದ ಪ್ರಧಾನ ಜಟ್ಟಿಯನ್ನು ಮೊದಲು ಸೋಲಿಸಿದರೆ, ಉಳಿದವರೊಂದಿಗೆ ಸೆಣಸುವ ಅವಶ್ಯಕತೆಯೇ ಇಲ್ಲದೆ ಅವರೆಲ್ಲರನ್ನೂ ಪರಾಭವಗೊಳಿಸಿದಂತೆ". ಇದು ಸಾಂಖ್ಯ ದರ್ಶನದ ಪ್ರಾಮುಖ್ಯತೆಯನ್ನು ತೋರಿಸುತ್ತದೆ.
         
          ಸನಾತನವಾಗಿ ಲಭ್ಯವಿರುವ ಆಧಾರದ(ಭಾಗವತ ೩.೨೫-೩೩) ಪ್ರಕಾರ ಈ ಪದ್ಧತಿಯು ಕಪಿಲ ಮುನಿಯಿಂದ ಸ್ಥಾಪಿಸಲ್ಪಟ್ಟಿತು. ಅವನ ಮೂಲಕ ನಮಗೆ ಹರಿದು ಬಂದಿರುವ ಕೃತಿಯೆಂದರೆ 'ಸಾಂಖ್ಯಸೂತ್ರ'ಗಳು. ನಿರ್ವಿವಾದವಾಗಿ ಇದು ಇತ್ತೀಚಿನ ಕೃತಿ. ಅದು ಆರು ಅಧ್ಯಾಯಗಳನ್ನು ಒಳಗೊಂಡು ಅವೆಲ್ಲವುಗಳಿಂದ ೫೨೬ ಸೂತ್ರಗಳನ್ನು ಹೊಂದಿದೆ. ವಿಜ್ಞಾನಭಿಕ್ಷು (ಕ್ರಿ.ಶ. ೧೬ನೇ ಶತಮಾನ) ಇದಕ್ಕೆ 'ಸಾಂಖ್ಯ ಪ್ರವಚನ ಭಾಷ್ಯ' ಎನ್ನುವ ವ್ಯಾಖ್ಯಾನ ಗ್ರಂಥವನ್ನು ಬರೆದಿದ್ದಾನೆ.
         
          ಸಾಂಖ್ಯ ಪದ್ಧತಿಯ ಸಿದ್ಧಾಂತವು ಕಪಿಲನ ಶಿಷ್ಯನಾದ ಆಸುರಿ ಮತ್ತವನ ಶಿಷ್ಯನಾದ ಪಂಚಶಿಖ ಇವರ ಮೂಲಕ ಪ್ರಾಮುಖ್ಯತೆ ಹಾಗು ಪ್ರಚುರತೆಯನ್ನು ಪಡೆಯಿತು. ಪಂಚಶಿಖನ ಕೆಲವು ಸೂತ್ರಗಳನ್ನು ಕ್ರಿಸ್ತ ಶಕದಲ್ಲಿ ಬರೆಯಲ್ಪಟ್ಟಿರುವ ವ್ಯಾಸಭಾಷ್ಯ ಗ್ರಂಥದಲ್ಲಿ; ಪಾತಂಜಲಿಯ ಯೋಗಸೂತ್ರ(ಕ್ರಿ.ಪೂ.೨೦೦)ಕ್ಕೆ ಬರೆದ ಟಿಪ್ಪಣಿಯಲ್ಲಿ ಉಲ್ಲೇಖಿಸಿರುವುದನ್ನು ಕಾಣಬಹುದು. ಪಂಚಶಿಖನ ಸಂಪೂರ್ಣ ಕೃತಿಯು ನಮಗೆ ಇದುವರೆವಿಗೂ ಲಭ್ಯವಾಗಿಲ್ಲ.
         
          ಈಶ್ವರಕೃಷ್ಣ (ಕ್ರಿ.ಶ. ನೇ ಶತಮಾನ) ರಚಿಸಿದ 'ಸಾಂಖ್ಯಕಾರಿಕಾ' ಕೃತಿಯೇ ಸಾಂಖ್ಯ ದರ್ಶನದ ಬಗ್ಗೆ ಇದುವರೆಗೆ ನಮಗೆ ದೊರೆತಿರುವ ನಂಬಲರ್ಹವಾದ ಕೃತಿಯೆಂದು ನಿರ್ವಿವಾದವಾಗಿ ಹೇಳಬಹುದು. ಇದರಲ್ಲಿ ಆರ್ಯಛಂದಸ್ಸಿನಲ್ಲಿ ರಚಿಸಲ್ಪಟ್ಟಿರುವ ಎಪ್ಪತ್ತು ಪಂಕ್ತಿಗಳಿವೆ, ಆದ್ದರಿಂದ ಅದನ್ನು ಕೆಲವೊಮ್ಮೆ 'ಸಾಂಖ್ಯ ಸಪ್ತತಿ' ಎಂದೂ ಕರೆದಿದ್ದಾರೆ. ಇದರಲ್ಲಿ ಸಂಕ್ಷಿಪ್ತವಾದರೂ ವಿದ್ವತ್ಪೂರ್ಣವಾಗಿ ಮತ್ತು ಸರಳವಾಗಿ ಸಿದ್ಧಾಂತಗಳನ್ನು ಪ್ರಚುರಪಡಿಸಲಾಗಿದೆ. 'ಸಾಂಖ್ಯಕಾರಿಕಾ' ಕೃತಿಗೆ ಎರಡು ಪ್ರಸಿದ್ಧ ಭಾಷ್ಯಗಳು ಇವೆ, ಅವೆಂದರೆ ಗೌಡಪಾದ (ಕ್ರಿ.ಶ. ೭೦೦) ವಿರಚಿತ 'ಸಾಂಖ್ಯಕಾರಿಕಾ ಭಾಷ್ಯ' ಮತ್ತು ವಾಚಸ್ಪತಿಯ(ಕ್ರಿ.ಶ. ೮೪೦) 'ಸಾಂಖ್ಯತತ್ವ ಕೌಮುದಿ'. ವಿಜ್ಞಾನಭಿಕ್ಷುವಿನ 'ಸಾಂಖ್ಯಸಾರ' ಮತ್ತು ಅನಿರುದ್ಧನ(ಕ್ರಿ.ಶ. ೧೫ನೆ ಶತಮಾನ) 'ಸಾಂಖ್ಯಪ್ರವಚನಸೂತ್ರಾವೃತ್ತಿ' ಹೆಸರಿಸಬಹುದಾದ ಇತರ ಮುಖ್ಯ ಕೃತಿಗಳು.

ಹೆಸರಿನ ಪ್ರಾಮುಖ್ಯತೆ
         
          ಸಾಂಖ್ಯ ಶಬ್ದದ ವ್ಯುತ್ಪತ್ತಿ ಒಂದು ಒಗಟಿನಂತೆ ತೋರುತ್ತದೆ. ಈ ಪದ್ಧತಿಯು ಸೃಷ್ಟಿ ರಚನೆಯಲ್ಲಿ ೨೫ 'ಸಂಖ್ಯೆ'ಯ ಅಂತಿಮ ತತ್ವಗಳಿವೆ ಎಂದು ಪ್ರತಿಪಾದಿಸುವುದರಿಂದ 'ಸಾಂಖ್ಯ' ಎನ್ನುವುದು 'ಸಂಖ್ಯಾ' ಶಬ್ದದಿಂದ ವ್ಯುತ್ಪತ್ತಿಯಾಗಿರಬೇಕೆಂದು ಕೆಲವರು ಅಭಿಪ್ರಾಯ ಪಡುತ್ತಾರೆ. ಆದರೆ ಇತರರು ಅಭಿಪ್ರಾಯ ಪಡುವಂತೆ, ಸಾಂಖ್ಯ ದರ್ಶನವು 'ಜ್ಞಾನ' ಅಥವಾ 'ಅರಿವು' ಮಾತ್ರವೇ ಮುಕ್ತಿಗೆ ಸಾಧನವೆಂದು ಒತ್ತಿ ಹೇಳುವುದರಿಂದ ಈ ಶಬ್ದದ ವ್ಯುತ್ಪತ್ತಿಯು ಸಂಖ್ಯಾ ಎಂದರೆ ಜ್ಞಾನ (ಸಮ್ಯಕ್ ಖ್ಯಾಯತೇ ಇತಿ ಜ್ಞಾನಃ) ಎನ್ನುವ ಧಾತುವಿನಿಂದ ಬಂದಿದೆ ಎನ್ನುವುದು ಹೆಚ್ಚು ಸೂಕ್ತವಾಗಿದೆ.  

ಪ್ರಮಾಣಗಳು ಅಥವಾ ಜ್ಞಾನದ ವಿಧಗಳು
       
        ಇತರೆ ದರ್ಶನಗಳಂತಲ್ಲದೆ ಸಾಂಖ್ಯವು ಕೇವಲ ಮೂರು ಪ್ರಮಾಣಗಳು ಅಥವಾ ನಂಬಲರ್ಹವಾದ ಜ್ಞಾನದ ಮೂಲಗಳನ್ನು ಒಪ್ಪಿಕೊಳ್ಳುತ್ತದೆ. ಅವೆಂದರೆ ಪ್ರತ್ಯಕ್ಷ (ನೇರವಾದ ಅನುಭವ), ಅನುಮಾನ (ಕ್ರಮಬದ್ಧ ನಿಷ್ಕರ್ಷೆ) ಮತ್ತು ಶಬ್ದ (ವಾಕ್ಯ ಪ್ರಮಾಣ).
         
          ಪ್ರತ್ಯಕ್ಷಾನುಭವವೆನ್ನುವುದು ಒಂದು ವಸ್ತುವು ಯಾವುದಾದರೊಂದು ಗ್ರಹಣೇಂದ್ರಿಯದೊಂದಿಗೆ ಸಂಪರ್ಕಕ್ಕೆ ಬಂದಾಗ ಉಂಟಾಗುವ ನೇರವಾದ ಅರಿವು ಅಥವಾ ತಿಳುವಳಿಕೆ. ಉದಾಹರಣೆಗೆ: ಕಣ್ಣು ಮೇಜನ್ನು ನೋಡುವುದು ಅಥವಾ ಕಿವಿಗಳು ಹಕ್ಕಿಗಳ ಚಿಲಿಪಿಲಿಯನ್ನು ಕೇಳುವುದು. ಮೊದಲನೆಯ ಸಂಪರ್ಕವು ಸಾಮಾನ್ಯ ಜ್ಞಾನವನ್ನು ಒದಗಿಸಬಹುದು. ಇದನ್ನೇ 'ನಿರ್ವಿಕಲ್ಪಕ'(ಅಸ್ಪಷ್ಟ ಜ್ಞಾನ) ಎನ್ನುತ್ತಾರೆ. ಯಾವಾಗ ವಸ್ತುವನ್ನು ಹತ್ತಿರದಿಂದ, ಗಮನ ಮತ್ತು ವಿವೇಚನೆಯಿಂದ ನೋಡುತ್ತೇವೆಯೋ ಆಗ ಆ ವಸ್ತುವಿನ ಬಗ್ಗೆ ನಿಚ್ಚಳವಾದ ತಿಳುವಳಿಕೆ/ಅರಿವು ಉಂಟಾಗುತ್ತದೆ. ಅದನ್ನೇ 'ಸವಿಕಲ್ಪಕ'(ಸ್ಪಷ್ಟವಾದ ಜ್ಞಾನ) ಎನ್ನುತ್ತಾರೆ. ಒಂದು ಮೇಜನ್ನು ನೋಡಿದಾಗ, ಬರುವ ಮೊದಲ ಪ್ರಕ್ರಿಯೆ 'ನಾನು ಒಂದು ವಸ್ತುವನ್ನು ನೋಡುತ್ತಿದ್ದೇನೆ', ಆಮೇಲೆ ಅದರ ಬಗ್ಗೆ ಸ್ಪಷ್ಟತೆ ಮೂಡುತ್ತದೆ, "ಹ್ಞೋ! ಇದು ಒಂದು ಮರದಿಂದ ತಯಾರಾದ ಮೇಜು ಮತ್ತು ಅದರ ಮೇಲೆ ಒಂದು ಕೆಂಪು ಬಟ್ಟೆಯು ಹೊದಿಸಲ್ಪಟ್ಟಿದೆ". ಇಲ್ಲಿ ಮೊದಲನೆಯದು 'ನಿರ್ವಿಕಲ್ಪಕ-ಪ್ರತ್ಯಕ್ಷ' ಮತ್ತು ಎರಡನೆಯದು 'ಸವಿಕಲ್ಪಕ-ಪ್ರತ್ಯಕ್ಷ'.
         
          ಅನುಮಾನ ಅಥವಾ ನಿಷ್ಕರ್ಷೆ ಎನ್ನುವುದು ಎರಡನೆಯ ಜ್ಞಾನದ ಮೂಲ. ಮೊದಲು ಯಾವುದಾದರೂ ಸಂಜ್ಞೆಯನ್ನು (ಸಂಕೇತವನ್ನು) ನೋಡಿ ನಿಷ್ಕರ್ಷೆಮಾಡಿ ಅದರ ಹಿಂದಿರುವ ಸತ್ಯವನ್ನು ತಿಳಿದುಕೊಳ್ಳುವುದು(ಜ್ಞಾನವನ್ನು ಪಡೆಯುವುದು) ಅನುಮಾನದ ವಿಧಾನ. ಬಹುತೇಕ ಎಲ್ಲ ತತ್ವಶಾಸ್ತ್ರಜ್ಞರು ಅನುಮಾನಕ್ಕೆ ಕೊಡುವ ಸಾಮಾನ್ಯ ಉದಾಹರಣೆಯೆಂದರೆ, ದೂರದಲ್ಲಿರುವ ಬೆಟ್ಟದ ಮೇಲೇಳುತ್ತಿರುವ ಹೊಗೆಯಿಂದ ಅಲ್ಲಿ ಬೆಂಕಿಯಿದೆ ಎಂದು ನಿಷ್ಕರ್ಷೆ ಅಥವಾ ಕ್ರಮಬದ್ಧವಾದ ಊಹೆಯಿಂದ ತಿಳಿದುಕೊಳ್ಳುವುದು.  ನಮ್ಮ ಪೂರ್ವಾನುಭವವು ಎಲ್ಲೆಲ್ಲಿ ಹೊಗೆಯಿತ್ತೋ ಅಲ್ಲೆಲ್ಲಾ ಬೆಂಕಿಯಿತ್ತು ಎನ್ನುವುದನ್ನು ಪ್ರತ್ಯಕ್ಷ ಗ್ರಹಿಕೆಯಿಂದ ತಿಳಿಸಿ ಕೊಟ್ಟಿರುತ್ತದೆ, ಆದ್ದರಿಂದ ಇಲ್ಲಿ ಹೊಗೆಯನ್ನು ನೋಡಿ ಅಲ್ಲಿ ಬೆಂಕಿ ಇದೆ ಎನ್ನುವ ನಿರ್ಧಾರಕ್ಕೆ ಬರುತ್ತೇವೆ; ಬೆಂಕಿಯನ್ನು ಪ್ರತ್ಯಕ್ಷವಾಗಿ ಕಾಣದಿದ್ದರೂ ಕೂಡ. ಗೋಚರವಾದ ವಸ್ತುವಿಗೆ ಮತ್ತು ಅಗೋಚರವಾದ ವಸ್ತುವಿಗೆ ಅವಿನಾಭಾವ ಅಥವಾ ಬೇರ್ಪಡಿಸಲಾಗದ ಸಂಭಂದ (ಇಲ್ಲಿ ಹೊಗೆ ಮತ್ತು ಬೆಂಕಿ) ಇರಬೇಕಾದದ್ದು ಈ ಪದ್ಧತಿಯಲ್ಲಿನ ಪೂರ್ವನಿಯಮ.
         
          ಶಬ್ದ ಅಥವಾ ವಾಕ್ಯದ ಆಧಾರವು ಪ್ರಮಾಣಗಳಲ್ಲಿ ಮೂರನೆಯದು ಮತ್ತು ಅಂತಿಮವಾದದ್ದು. ಈ ಆಧಾರವು ಒಬ್ಬ ನಂಬಲರ್ಹ ವ್ಯಕ್ತಿಯ ನುಡಿ. ಇದನ್ನು 'ಅಲೌಕಿಕ ಶಬ್ದ' ಅಥವಾ 'ಆಪ್ತವಾಕ್ಯ' ಎಂದೂ ಕರೆಯುತ್ತಾರೆ. ನಂಬಲರ್ಹವಾದ ಆ ವ್ಯಕ್ತಿಯ ಗ್ರಹಿಕೆ ಮತ್ತು ನಿಷ್ಕರ್ಷೆಯ ಮೇಲೆ ಇದು ಅವಲಂಬಿತವಾಗಿರುವದರಿಂದ, ಸಾಂಖ್ಯ ಶಾಸ್ತ್ರವು ಈ ರೀತಿಯ ಆಧಾರವನ್ನು ಪ್ರತ್ಯೇಕ ಪ್ರಮಾಣವೆಂದು ಪರಿಗಣಿಸುವುದಿಲ್ಲ. ಆದರೆ ವಾಕ್ಯ ಅಥವಾ ಶ್ರುತಿಗಳ ಪ್ರಮಾಣ ಅಂದರೆ ವೇದಗಳ ಆಧಾರಗಳನ್ನು ಸಾಂಖ್ಯ ದರ್ಶನವು ಪ್ರತ್ಯೇಕ ಮತ್ತು ಅಂತಿಮ ಪ್ರಮಾಣವೆಂದು ಒಪ್ಪಿಕೊಳ್ಳುತ್ತವೆ. ವೇದಗಳು ನಮಗೆ ಇಂದ್ರಿಯಗೋಚರವಲ್ಲದ ಸತ್ಯಗಳ ಬಗ್ಗೆ ನಿಜವಾದ ಜ್ಞಾನವನ್ನು ಒದಗಿಸುತ್ತವೆ; ಈ ಸತ್ಯಗಳು ನಮಗೆ 'ಪ್ರತ್ಯಕ್ಷ' ಅಥವಾ 'ಅನುಮಾನ' ಪ್ರಮಾಣಗಳ ಮೂಲಕ ಅರಿಯಲಾಗದವುಗಳು. ವೇದಗಳು ಅಪೌರುಷೇಯವೂ (ಮನುಷ್ಯ ನಿರ್ಮಿತವಾಗಿರದೆ ಅಲೌಕಿಕವಾದವುಗಳಾಗಿವೆ) ಹಾಗು ದೋಷರಹಿತವಾದವುಗಳೂ ಆಗಿವೆ. ಇವುಗಳು ಬ್ರಹ್ಮಜ್ಞಾನವನ್ನು ಕಂಡುಕೊಂಡ ಮಹಾನ್ ಋಷಿಗಳ ಆಂತರ್ಯದ ವಾಣಿಗಳಾಗಿವೆ.
         
ಪ್ರಮೇಯಗಳು ಅಥವಾ ತಿಳಿಯಬೇಕಾದ ವಸ್ತುಗಳು
         
          "ಗೋಚರದಿಂದ ಅಗೋಚರದೆಡೆಗೆ ಅಥವಾ ತಿಳಿದದ್ದರಿಂದ ತಿಳಿಯದಿರುವದರೆಡೆಗೆ" ಎನ್ನುವ ತತ್ವವನ್ನಾಧರಿಸಿ ಸಾಂಖ್ಯ ಪಾರಮಾರ್ಥಿಕ ಶಾಸ್ತ್ರವು ನಮ್ಮ ಅನುಭವಕ್ಕೆ ಬರುವ ಎಲ್ಲ ರೀತಿಯ ವಾಸ್ತವ ಸಂಗತಿಗಳನ್ನು ಮೂಲಭೂತವಾಗಿ ಎರಡು ನಿತ್ಯವಾದ ವಸ್ತುಗಳಿಗೆ ಇಳಿಸುತ್ತದೆ; ಅವೆಂದರೆ ಪ್ರಕೃತಿ ಮತ್ತು ಪುರುಷ. ಪ್ರಧಾನ ಮತ್ತು ಅವ್ಯಕ್ತವೆಂದೂ ಕರೆಯಲ್ಪಡುವ -  ಎಲ್ಲಾ ಜೀವರಹಿತ ಜಡ ವಸ್ತುಗಳು ಹಾಗೂ ಅವುಗಳ ಸಂಕೀರ್ಣತೆಗಳಿಂದೊಡಗೂಡಿ 'ಅಚೇತನ'ವಾಗಿರುವುದು 'ಪ್ರಕೃತಿ' ಮತ್ತು ಚೇತನದಿಂದೊಡಗೂಡಿದ ಜೀವಿ ಅಥವಾ ಆತ್ಮನೇ 'ಪುರುಷ'.
         
          ಈ ರೀತಿ ಕೇವಲ ಎರಡು ನಿತ್ಯ ವಸ್ತುಗಳಿವೆ ಎಂಬ ನಿರ್ಣಯದ ಹಿಂದಿರುವ ಮೂಲಭೂತವಾದ ವಾದವನ್ನು 'ಸತ್ಕಾರ್ಯವಾದ' ತತ್ವ ಎನ್ನುತ್ತಾರೆ. ಈ ತತ್ವವು 'ಕಾರ್ಯ'ವು ಅನಾವರಣಗೊಳ್ಳುವ ಮೊದಲೇ 'ಕಾರಣ'ದಲ್ಲಿ 'ಪೂರ್ವದಲ್ಲಿಯೇ ಇತ್ತು' (ಸತ್) ಎಂದು ತಿಳಿಸುತ್ತದೆ. ಉದಾಹರಣೆಗೆ, ಒಂದು ಮಡಕೆಯನ್ನು ನಾವು ಮಣ್ಣಿನಿಂದ ತಯಾರಿಸಿದಾಗ, ಆ ಮಣ್ಣಿನಲ್ಲಿ ಮಡಕೆಯು ಅದಾಗಲೇ ಇತ್ತು; ಸುಪ್ತಾವಸ್ಥೆಯಲ್ಲಿದ್ದರೂ ಕೂಡಾ. ಇದರ ಹಿಂದಿರುವ ಮುಖ್ಯ ತರ್ಕವೆಂದರೆ ಯಾವುದೇ ವಸ್ತುವಿಲ್ಲದೇ ಇನ್ನೊಂದು ವಸ್ತುವನ್ನು ಸೃಷ್ಟಿಸಲಾಗದು (ಶೂನ್ಯದಿಂದ ಏನನ್ನೂ ಸೃಷ್ಟಿಸಲಾಗದು).
         
          ಈ ರೀತಿಯ ವಾದವನ್ನು ನಮ್ಮ ಅನುಭವಕ್ಕೆ ಬರುವ ಪ್ರಪಂಚದ ವಿವಿಧ ವಸ್ತುಗಳಿಗೆ ಅನ್ವಯಿಸಿದಾಗ ಎಲ್ಲಾ ವಸ್ತುಗಳಿಗೆ ಮೂರು ರೀತಿಯ ಸ್ಥಿತಿಗಳಿವೆ - ಆನಂದ, ದುಃಖ ಮತ್ತು ಅನಾಸಕ್ತಿ ಎಂದು ತಿಳಿಯುತ್ತದೆ. ಆದ್ದರಿಂದ ಸಾಂಖ್ಯ ದರ್ಶನವು ಈ ಮೂರು ಸ್ಥಿತಿಗಳು ಮೂಲಭೂತವಾಗಿ ಯಾವುದೋ ಸೂಕ್ಷ್ಮ ವಸ್ತುವಿನಿಂದ ರೂಪುಗೊಂಡಿರಬೇಕೆಂದು ಭಾವಿಸುತ್ತದೆ. ಈ ಸ್ಥಿತಿಗಳನ್ನೇ ಸಾಂಖ್ಯವು ಗುಣಗಳೆಂದು ಕರೆಯುತ್ತದೆ- ಸತ್ವಗುಣ (ಸಂತೋಷ ಅಥವಾ ಆನಂದವನ್ನು ಉಂಟುಮಾಡುತ್ತದೆ), ರಜೋಗುಣ (ನೋವು ಅಥವಾ ಯಾತನೆಯನ್ನು ಉಂಟುಮಾಡುತ್ತದೆ) ಮತ್ತು ತಮೋಗುಣ (ಎರಡನ್ನೂ ಉಂಟುಮಾಡುವುದಿಲ್ಲ).
         
          ಈ ಮೂರೂ ಗುಣಗಳು ಭೌತಿಕ ವಾಸ್ತವತೆಗಳಿಗೆ ಪ್ರತೀಕವಾಗಿವೆ. ಸತ್ವವು ಎಲ್ಲಾ ಶುದ್ಧವಾದ ಒಳ್ಳೆಯ ವಸ್ತುಗಳನ್ನು ಪ್ರತಿನಿಧಿಸುತ್ತದೆ ಮತ್ತು ಜ್ಞಾನ ಹಾಗು ಆನಂದವನ್ನು ಉಂಟು ಮಾಡುತ್ತದೆ. ರಜೋಗುಣವು ಯಾವಾಗಲೂ ಚಟುವಟಿಕೆಯಿಂದ ಕೂಡಿರುತ್ತದೆ. ಅದು ಎಲ್ಲಾ ರೀತಿಯ ಆಸೆ ಮತ್ತು ಮಹತ್ವಾಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ಹಾಗೂ ಒಬ್ಬರು ಕಾರ್ಯತತ್ಪರರಾಗಿರಲು ಕಾರಣೀಭೂತವಾಗಿದೆ. ತಮಸ್ಸು ಜಡತೆಯಿಂದ ಕೂಡಿದ್ದು ಪ್ರತಿರೋಧವನ್ನು ವ್ಯಕ್ತಪಡಿಸುತ್ತದೆ. ಅದು ನಿದ್ರೆ ಮತ್ತು ಆಲಸ್ಯಡೆಗೆ ಕೊಂಡೊಯ್ಯುತ್ತದೆ.
         
          ಈ ಮೂರೂ ಗುಣಗಳು ಯಾವಾಗಲೂ ಒಟ್ಟಿಗೇ ಇದ್ದು ಅವು ಯಾವಾಗಲೂ ಬೇರ್ಪಡುವುದಿಲ್ಲ. ಯಾವಾಗ ಈ ಮೂರೂ ಗುಣಗಳು - ಮೇಲ್ನೋಟಕ್ಕೆ ತೋರುವಂತೆ ಯಾವಾಗಲೂ ಗೊಂದಲದಲ್ಲಿದ್ದಂತೆ ಕಂಡುಬಂದರೂ, ವಾಸ್ತವವಾಗಿ ಇವು ನಿಶ್ಚಿತವಾದ ಸಮತುಲ್ಯ ಸ್ಥಿತಿಯಲ್ಲಿದ್ದು, ಒಂದಕ್ಕೆ ಮತ್ತೊಂದು ತೊಡಕುಂಟು ಮಾಡದೆ, ತಮ್ಮೊಳಗೆ ನಿರಂತರ ಚಲನೆ ಅಥವಾ ನಿತ್ಯ ಚಟುವಟಿಕೆಯಿಂದ ಕೂಡಿರುತ್ತವೋ ಆಗ ಅದು ಪ್ರಕೃತಿ ಅಥವಾ ಪ್ರಧಾನವಾಗುತ್ತವೆ. ಅಥವಾ ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಈ ಮೂರು ಗುಣಗಳ ನಿಶ್ಚಿತವಾದ ಸಮತುಲ್ಯ ಸ್ಥಿತಿಯೇ ಪ್ರಕೃತಿ.
         
          ಈ ಪ್ರಕೃತಿಯು ಮೂಲ ಧಾತು ಅಥವಾ ಪ್ರಾರಂಭಿಕ ವಸ್ತುವಾಗಿದ್ದು ಇದರಿಂದಲೇ ವಿಶ್ವದ ಉಗಮವಾಗುತ್ತದೆ. ಅದು ಜಡ ಎಂದರೆ ಅಚೇತನವಾದದ್ದು. ಮತ್ತೊಂದು ವಸ್ತುವಾದ 'ಪುರುಷ'ನು ಚೈತನ್ಯದಿಂದ ಒಡಗೂಡಿದ ವಸ್ತು ಅಥವಾ ಅದರ ಸ್ವಭಾವವೇ ಚೇತನ. 'ಪುರುಷ'ನು ನಿತ್ಯ ನಿರಂತರನಾಗಿದ್ದು, ನಿತ್ಯ ಶುದ್ದನೂ, ನಿತ್ಯ ಮುಕ್ತನೂ (ಅಸಂಗನು ಅಥವಾ ಭಂದನಕ್ಕೊಳಗಾಗದವನು) ಮತ್ತು ಸರ್ವಾಂತರಯಾಮಿಯಾಗಿದ್ದಾನೆ. ಎಷ್ಟು ಜೀವಿಗಳಿವೆಯೋ ಅಷ್ಟು ಲೆಕ್ಕವಿಲ್ಲದಷ್ಟು ಪುರುಷರು ಅಥವಾ ಆತ್ಮಗಳು ಇವೆ.

ವಿಶ್ವದ ಉಗಮ
         
          ಸೃಷ್ಟಿಯ ಅಥವಾ ವಿಶ್ವದ ಉಗಮ ಪ್ರಕೃತಿ ಮತ್ತು ಪುರುಷರ 'ಸಂಯೋಗ್ಯ' ಅಥವಾ 'ನಿಶ್ಚಿತವಾದ ಒಂದುಗೂಡುವಿಕೆ'ಯಿಂದ ಪ್ರಾರಂಭವಾಗುತ್ತದೆ. ಒಟ್ಟಾರೆಯಾಗಿ ಎಲ್ಲಾ ಪುರುಷರ ಕರ್ಮವು (ಅದೃಷ್ಟವು) ಪ್ರಕೃತಿಯಲ್ಲಿರುವ ಗುಣಗಳ ಸಮತುಲ್ಯ ಸ್ಥಿತಿಯನ್ನು ವ್ಯತ್ಯಸ್ಥಗೊಳಿಸಿ ಸೃಷ್ಟಿಯ ಪ್ರಕ್ರಿಯೆಯನ್ನು ಉಂಟುಮಾಡುತ್ತವೆ.

          ಪ್ರಕೃತಿಯು ಜಡವಾಗಿದ್ದು (ಜೀವರಹಿತ ಮತ್ತು ಚೈತನ್ಯರಹಿತವಾಗಿದ್ದು) ಮತ್ತು ಪುರುಷನು ಅಸಂಗನಾಗಿರುವಾಗ (ಸಂಪೂರ್ಣವಾಗಿ ಬಂಧನಕ್ಕೊಳಗಾಗದೇ ಇರುವಾಗ) ಇವೆರಡೂ ಅದು ಹೇಗೆ ಸೃಷ್ಟಿಕ್ರಿಯೆಗೆ ಸಹಕರಿಸುತ್ತವೆ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ? ಈ ರೀತಿಯ ಸಹಕಾರವು ಒಬ್ಬ ಕುರುಡ ಹಾಗು ಒಬ್ಬ ಕುಂಟ ಒಗ್ಗಟ್ಟಾಗಿ ಕಾಡಿನಿಂದ ಹೊರಬರುವ ತರದಲ್ಲಿರುತ್ತದೆ; ಕುರುಡನು ಹೆಳವನನ್ನು ಹೊತ್ತುಕೊಂಡು ಅವನ ನಿರ್ದೇಶನದಂತೆ ಸರಿಯಾದ ರಸ್ತೆಗೆ ಬರುವಂತೆ. ಸಾಂಖ್ಯರು ತಮ್ಮ ವಾದವನ್ನು ಪ್ರತಿಪಾದಿಸಲು ಇನ್ನೊಂದು ಉದಾಹರಣೆಯನ್ನು ಮುಂದಿಡುತ್ತಾರೆ - ತನ್ನ ಸಮೀಪದಲ್ಲಿ ಕರುವಿದ್ದಾಗ ಆಕಳ ಕೆಚ್ಚಲಿನಿಂದ ಅಪ್ರಚೋದಿತವಾಗಿ ಹಾಲು ಸ್ರವಿಸುವಂತೆ.

          ಪ್ರಕೃತಿಯಿಂದ ಸೃಷ್ಟಿಕ್ರಿಯೆಯ ಉಗಮವು ಈ ರೀತಿ ಇರುತ್ತದೆ: ಗುಣಗಳು ಒಂದರೊಂದಿಗೆ ಮತ್ತೊಂದು ಸಂಕರಗೊಂಡಾಗ (ಕಲೆತಾಗ) ಪ್ರಕೃತಿಯಿಂದ ಲಬ್ದವಾಗುವ ಪ್ರಥಮ ಸಂಕರವೇ ಮಹತ್ ಅಥವಾ ಬುದ್ಧಿ (ವಿಶ್ವದ ಬುದ್ಧಿ). ಈ ಮಹತ್ತಿನಿಂದ ಉಂಟಾಗುವುದೇ ಅಹಂಕಾರ (ವಿಶ್ವದ ಅಹಂಕಾರ - ನಾನು ಎನ್ನುವ ತತ್ವ). ಅಹಂಕಾರದ ಸಾತ್ವಿಕ ಅಂಶದಿಂದ ಮನಸ್ (ವಿಶ್ವದ ಮನಸ್ಸು), ಐದು ಜ್ಞಾನೇಂದ್ರಿಯಗಳು (ವಿಶ್ವದ - ಕಣ್ಣು, ಕಿವಿ ಮೊದಲಾದ ಜ್ಞಾನೇಂದ್ರಿಯಗಳು), ಮತ್ತು ರಾಜಸಿಕ ಅಂಶದಿಂದ ಐದು ಕರ್ಮೇಂದ್ರಿಯಗಳು (ವಿಶ್ವದ ಕರ್ಮೇಂದ್ರಿಯಗಳಾದ ಕೈ, ಕಾಲು ಮೊದಲಾದವುಗಳು) ಉದ್ಭವಿಸುತ್ತವೆ. ಅಹಂಕಾರದ ತಾಮಸಿಕ ಅಂಶದಿಂದ ಐದು ತನ್ಮಾತ್ರಗಳು (ಸೂಕ್ಷ್ಮ ರೂಪದ ಪೃಥ್ವಿ , ಜಲ ಮೊದಲಾದವುಗಳು) ಮತ್ತು ಅವುಗಳಿಂದ ಸ್ಥೂಲ ರೂಪದ ಪಂಚ ಮಹಾಭೂತಗಳಾದ ಪೃಥ್ವಿ, ಅಪ್, ತೇಜ, ವಾಯು ಮತ್ತು ಆಕಾಶ ಇವುಗಳು ಉದ್ಭವಿಸುತ್ತವೆ.

          ಒಟ್ಟಿನಲ್ಲಿ ಪ್ರಕೃತಿಯನ್ನು ಒಳಗೊಂಡು ೨೪ ಆಕಾಶ ತತ್ವಗಳು ಅಥವಾ ಧಾತುಗಳು ಉಂಟಾಗುತ್ತವೆ. ಉಳಿದ ಸೃಷ್ಟಿಕ್ರಿಯೆಯು ಈ ವಿವಿಧ ಧಾತುಗಳ ಸಂಕೀರ್ಣತಗೆಳಿಂದ ಉಂಟಾದ ಸಂಯೋಜನೆಗಳಿಂದ ಒಡಗೂಡಿ ಪ್ರತಿಯೊಬ್ಬ ಪುರುಷನು ಒಂದು 'ಮನೋಭೌತಿಕ ಸಂಕೀರ್ಣ'(ಕಾಯ/ದೇಹ)ವನ್ನು ತನ್ನ ಕರ್ಮಫಲಕ್ಕನುಗುಣವಾಗಿ ಪಡೆಯುವಲ್ಲಿ ಮುಗಿಯುತ್ತದೆ.

ಬಂಧನ ಮತ್ತು ಬಿಡುಗಡೆ

          ಸೋಜಿಗದ ಸಂಗತಿಯೆಂದರೆ ಸಾಂಖ್ಯ ತತ್ವಸಿದ್ಧಾಂತದ ಪ್ರಕಾರ ಈ ಪ್ರಪಂಚವನ್ನು ಸೃಷ್ಟಿಯು ಸೃಜಿಸುವುದರ ಹಿಂದಿರುವ ಮೂಲ ಉದ್ದೇಶ ಪುರುಷನಿಗೆ ಮುಕ್ತಿ ಹೊಂದಲು ಮತ್ತೊಂದು ಅವಕಾಶವನ್ನು ಒದಗಿಸುವುದು. ಮತ್ತದೇ ಪ್ರಕೃತಿ ಮತ್ತದರ ಉತ್ಪನ್ನವಾದ ಈ ಪ್ರಪಂಚ ಅವನನ್ನು ಮತ್ತೊಮ್ಮೆ ಬದ್ಧನಾಗಿಸುತ್ತದೆ (ಬಂಧನಕ್ಕೊಳಪಡಿಸುತ್ತದೆ)!

          ಪುರುಷನು ಪ್ರಾಪಂಚಿಕತೆಯ ಸುಳಿಗೆ ಸಿಕ್ಕಿವುದು ಮತ್ತು ದುಃಖವನ್ನು ಅನುಭವಿಸುವುದು 'ಅವಿವೇಕ' ಅಥವಾ 'ಅಜ್ಞಾನ'ದಿಂದಾಗಿ ಅಂದರೆ; ನಿತ್ಯಶುದ್ಧ ಮತ್ತು ಚೈತ್ಯನ್ಯ ಸ್ವರೂಪಿಯಾದ 'ಪುರುಷ'ನು ತನಗೂ ಮತ್ತು ಜಡ ಹಾಗೂ ಚೈತನ್ಯರಹಿತವಾದ 'ಪ್ರಕೃತಿ'ಗೂ ಭೇದವನ್ನು ಕಂಡುಕೊಳ್ಳದೇ ಹೋಗುವುದು. ಈ ಅಜ್ಞಾನದಿಂದಾಗಿಯೇ ಪುರುಷನು ಜನನ-ಮರಣಗಳ ಸ್ಥಿತಿಗಳಿಗೊಳಗಾಗುತ್ತಾನೆ ಅಥವಾ ಕೊನೆಯಿಲ್ಲದ ಪುನರ್ಜನ್ಮಗಳ ಚಕ್ರಕ್ಕೆ ಸಿಲುಕುತ್ತಾನೆ.

          ಈ ಗೊಂದಲದೊಳಗೆ ಹೇಗೆ ಮತ್ತು ಯಾವಾಗ ಪುರುಷನು ಸಿಲುಕಿಕೊಂಡ ಎನ್ನುವುದನ್ನು ಉತ್ತರಿಸುವುದು ಸಾಧ್ಯವಿಲ್ಲ ಆದರೆ ಇದು 'ಅನಾದಿ' (ಪ್ರಾರಂಭರಹಿತವಾದದ್ದು) ಆದರೂ ಇದು 'ಸಾಂತ'ವಾದದ್ದು(ಕೊನೆಯಿರುವಂಥಾದ್ದು).

          'ಅವಿವೇಕ' ಅಥವಾ 'ಅಜ್ಞಾನ'ದಿಂದಾಗಿ ಪುರುಷನು ಪ್ರಾಪಂಚಿಕ ಬಂಧನದಲ್ಲಿ ಸಿಲುಕುವುದರಿಂದ, 'ಕೈವಲ್ಯ' ಅಥವಾ 'ಮುಕ್ತಿ'ಯು ಕೇವಲ 'ವಿವೇಕಖ್ಯಾತಿ' ಅಥವಾ ನಿಜವಾದ ಜ್ಞಾನದಿಂದ ಮಾತ್ರವೇ ಲಭ್ಯವಾಗುವುದು. 'ಖ್ಯಾತಿ' ಎಂದರೆ 'ಜ್ಞಾನ' (ಅಂದರೆ ನೇರವಾದ ಗ್ರಹಿಕೆ ಎನ್ನುವ ಅರ್ಥದಲ್ಲಿ) ಮತ್ತು 'ವಿವೇಕ'ವೆಂದರೆ ಪುರುಷನು ತಾನು ಶುದ್ಧವಾದ ಚೇತನರೂಪಿಯೆಂದೂ ಮತ್ತು ತನಗೂ ಹಾಗೂ ಅಚೇತನವಾದ ಜಡ ಪ್ರಕೃತಿಯು ಬೇರೆಯೆಂದು ಅರಿಯುವುದು. ಈ ತಿಳುವಳಿಕೆಯನ್ನು ಯೋಗದ ಅಷ್ಟಾಂಗಗಳನ್ನು ಅನುಸರಿಸುವುದರಿಂದ ಗಳಿಸಿಕೊಳ್ಳಬಹುದು; ಇಲ್ಲಿ ಪುರುಷ ಅಥವಾ ಆತ್ಮವು ಧ್ಯಾನದ ವಸ್ತುವಾಗಿರುತ್ತದೆ.

          ಸಾಂಖ್ಯ ದರ್ಶನವು ಎರಡು ವಿಧವಾದ ಮುಕ್ತಿಯನ್ನು ಒಪ್ಪಿಕೊಳ್ಳುತ್ತದೆ, ಅವೆಂದರೆ 'ಜೀವನ್ಮುಕ್ತಿ' ಮತ್ತು 'ವಿದೇಹಮುಕ್ತಿ'. 'ಜೀವನ್ಮುಕ್ತಿ'ಯು ಜೀವಿಸಿರುವಾಗಲೇ ಹೊಂದಲ್ಪಡುತ್ತದೆ; ಅಂದರೆ ದೇಹವು 'ಪ್ರಾರಬ್ಧ ಕರ್ಮ'ವು ಅಂದರೆ ಈ ಜನ್ಮಕ್ಕೆ ಕಾರಣವಾದ ಕರ್ಮವು ಅಂತ್ಯಗೊಳ್ಳುವ ತನಕ ಇರುತ್ತದೆ. ಈ ಸ್ಥಿತಿಯಲ್ಲಿ ಮುಕ್ತ ಪುರುಷನು ಪ್ರಪಂಚದಲ್ಲಿ ಜೀವನವನ್ನು ಮುಂದುವರೆಸುತ್ತಾನೆ; ಪ್ರಾಪಂಚಿಕತೆಯನ್ನು ಬದಿಗಿಟ್ಟು.

          ಅಂತಿಮ ಮುಕ್ತಿಯು ದೇಹವು ಮರಣಿಸಿದ ನಂತರ ಉಂಟಾಗುತ್ತದೆ ಆದ್ದರಿಂದ ಅದನ್ನು 'ವಿದೇಹಮುಕ್ತಿ' ಎನ್ನುತ್ತಾರೆ; ಇಲ್ಲಿ ಪುರುಷನು ಮತ್ತೆ ಈ ದೈನಂದಿನ  ಕಾರ್ಯ ಪ್ರಪಂಚಕ್ಕೆ ಹಿಂತಿರುಗುವುದಿಲ್ಲ. ಅವನು ಎಲ್ಲಾ ವಿಧವಾದ ನೋವು ಮತ್ತು ಯಾತನೆಯಿಂದ ಪೂರ್ಣಮುಕ್ತಿಯನ್ನು ಹೊಂದಿದ ಸ್ಥಿತಿಯಲ್ಲಿರುತ್ತಾನೆ; ಆದರೆ ನಿತ್ಯಾನಂದದಲ್ಲಿ ಅಲ್ಲ. ಆದರೆ ಚೈತನ್ಯ ಅಥವಾ ಪ್ರಜ್ಞೆಯು ಅವನ ಸ್ವರೂಪವಾದ್ದರಿಂದ ಅವನು ತನ್ನ ಆ ಸ್ಥಿತಿಯಲ್ಲೇ ನಿತ್ಯವಾಗಿ ಇರುತ್ತಾನೆ.

******



         
         



-ಶ್ರೀಧರ್ ಭಂಡ್ರಿ

ವಾಗ್ಭೂಷಣಂ ಭೂಷಣಮ್

ಕೇಯೂರಾ ನ ವಿಭೂಷಯಂತಿ ಪುರುಷಂ ಹಾರಾ ನ ಚಂದ್ರೋಜ್ಜ್ವಲಾಃ
ನ ಸ್ನಾನಂ ನ ವಿಲ್ಲೇಪನಂ ನ ಕುಸುಮಂ ನಾಲಂಕೃತಾ ಮೂರ್ಧಜಾಃ ।
ವಾಣ್ಯೇಕಾ ಸಮಲಂಕರೋತಿ ಪುರುಷಂ ಯಾ ಸಂಸ್ಕೃತಾ ಧಾರ್ಯತೇ
ಕ್ಷೀಯಂತೇ ಖಲು ಭೂಷಣಾನಿ ಸತತಂ ವಾಗ್ಭೂಷಣಂ ಭೂಷಣಮ್ ॥

ಕಂಕಣಗಳಾಗಲಿ, ಚಂದ್ರನಂತೆ ಬೆಳಗುವ ಹಾರಗಳಾಗಲಿ, ಸ್ನಾನವಾಗಲಿ, ಗಂಧಾದಿ ಲೇಪನಗಳಾಗಲಿ, ಹೂವಾಗಲಿ, ಅಲಂಕರಿಸಲ್ಪಟ್ಟ ಕೂದಲುಗಳಾಗಲಿ, ಮನುಷ್ಯನನ್ನು ಅಲಂಕರಿಸುವುದಿಲ್ಲ. ಸಂಸ್ಕಾರಯುಕ್ತವಾಗಿ ಆಡುವ ಮಾತೊಂದೇ ಮನುಷ್ಯನಿಗೆ ಅಂಕಾರ, ಒಡವೆಗಳೆಲ್ಲಾ ನಾಶವಾಗುತ್ತವೆ. ಆದರೆ ನಾವು ಆಡುವ ಮಾತು ಮಾತ್ರವೇ ಅವಿನಾಶಿಯಾಗಿ ನಾಶವಾಗದೇ ಉಳಿಯುವುದು. - ವಾಗ್ಭೂಷಣಂ ಭೂಷಣಮ್.

Wednesday, August 15, 2012

ವೈಶೇಷಿಕ ದರ್ಶನ

ಪರಿಚಯ:
          ವೈಶೇಷಿಕ ದರ್ಶನವು ಕಣಾದ ಅಥವಾ ಉಲೂಕನಿಂದ ಸ್ಥಾಪಿಸಲ್ಪಟ್ಟಿತು. ಆದ್ದರಿಂದ ಅದನ್ನು 'ಕಾಣಾದ' ಅಥವಾ 'ಔಲೂಕ್ಯ' ದರ್ಶನ ಎಂದೂ ಕರೆಯುತ್ತಾರೆ. ಕಣಾದ ಎನ್ನುವುದು ಉಲೂಕನ ಅನ್ವರ್ಥ ನಾಮವೆಂದು ಕಾಣುತ್ತದೆ. ಏಕೆಂದರೆ ಅವನು ಋಷಿಗಳಂತೆ ಜೀವನ ನಡೆಸಿ ರೈತರ ಹೊಲಗಳಿಂದ ಹೆಕ್ಕಿದ ಕಾಳುಗಳನ್ನು ತಿನ್ನುತ್ತಿದ್ದ. (ಕಣ=ಕಾಳು; ಅದ್=ತಿನ್ನು)
          ಈ ದರ್ಶನಕ್ಕೆ ಕಣಾದನ 'ವೈಶೇಷಿಕ ಸೂತ್ರ'ಗಳು ಮೂಲ ಗ್ರಂಥವಾಗಿದೆ. ಅದು ಹತ್ತು ಅಧ್ಯಾಯಗಳು ಅಥವಾ ಪುಸ್ತಕಗಳಿಂದ ಒಡಗೂಡಿದೆ ಮತ್ತು ಪ್ರತಿಯೊಂದೂ ಅಧ್ಯಾಯವು ಎರಡು 'ಅಹ್ನಿಕ' ಅಥವಾ ವಿಭಾಗಗಳನ್ನು ಹೊಂದಿವೆ. ಒಟ್ಟಾರೆಯಾಗಿ ಇದರಲ್ಲಿ ೩೭೪ ಸೂತ್ರಗಳು ಇವೆ.
          ಪ್ರಶಸ್ತಪಾದ(ಕ್ರಿ.ಶ. ನೇ ಶತಮಾನ) ರಚಿಸಿದ 'ಪದಾರ್ಥ ಧರ್ಮ ಸಂಗ್ರಹ' ಎನ್ನುವ ವ್ಯಾಖ್ಯಾನ ಗ್ರಂಥ ಬಹುಶಃ ವೈಶೇಷಿಕ ದರ್ಶನಕ್ಕೆ ಬರೆದ ಮೊದಲ ಭಾಷ್ಯ (ಲಭ್ಯವಿರುವ ಮೊದಲ ಗ್ರಂಥ). ಇದನ್ನು ಭಾಷ್ಯ ಗ್ರಂಥವೆಂದು ಕರೆದರೂ ಕೂಡ ಅದು ಪದ್ಧತಿಯಂತೆ ಮೂಲಗ್ರಂಥದ ಪ್ರತಿಯೊಂದೂ ಸೂತ್ರಕ್ಕೆ ಬರೆದ ಟಿಪ್ಪಣಿಯಲ್ಲ. ಈ ಭಾಷ್ಯದಲ್ಲಿ, ಮೂಲ ತತ್ವಗಳನ್ನು ಪುನರುದ್ಧರಿಸಿದರೂ ಕೂಡ ಅವುಗಳನ್ನು ಗಣನೀಯವಾಗಿ ಅಭಿವೃದ್ಧಿ ಪಡಿಸಲಾಗಿದೆ. ಶ್ರೀಧರನ(ಕ್ರಿ.ಶ. ೯೯೧) 'ನ್ಯಾಯಖಂಡಲಿ', ವ್ಯೋಮಶಿವನ 'ವ್ಯೋಮಾವಳಿ' ಮತ್ತು ಉದಯನನ (ಕ್ರಿ.ಶ. ೯೮೪) 'ಕಿರಣಾವಳಿ' ಇವುಗಳು ಪ್ರಶಸ್ತಪಾದನ ಗ್ರಂಥಗಳಿಗೆ ಬರೆದ ಪ್ರಸಿದ್ಧ ವ್ಯಾಖ್ಯಾನ ಗ್ರಂಥಗಳಾಗಿವೆ. ವಲ್ಲಭಾಚಾರ್ಯರ(ಕ್ರಿ.ಶ. ೧೧ನೇ ಶತಮಾನ) 'ನ್ಯಾಯಲೀಲಾವತಿ' ಮತ್ತು ಉದಯನನ 'ಲಕ್ಷಣಾವಳಿ' ಇವುಗಳು ವೈಶೇಷಿಕ ದರ್ಶನಕ್ಕೆ ಬರೆದ ಸಂಗ್ರಹ ಗ್ರಂಥಗಳಾಗಿವೆ.
          ವೈಶೇಷಿಕ ಪದ್ಧತಿಯು ನ್ಯಾಯ ಪದ್ಧತಿಯೊಂದಿಗೆ ಕಾಲ ಕ್ರಮೇಣ ಬಹಳ ಹತ್ತಿರದ ಸಹಯೋಗ ಹೊಂದಿತು. ಅದು ಎಷ್ಟು ಸನಿಹವಿತ್ತೆಂದರೆ ಕೆಲವು ಕಾಲದ ನಂತರ ಬಂದ ಗ್ರಂಥಕಾರರು ಇವೆರಡನ್ನೂ ಒಂದೇ ಆಗಿ ಪರಿಗಣಿಸಿ ವಿಶ್ಲೇಷಿಸತೊಡಗಿದರು. ಈ ವಿಷಯವಾಗಿ ಬಂದ ಗ್ರಂಥಗಳಲ್ಲಿ ಶಿವಾದಿತ್ಯನ(ಕ್ರಿ.ಶ.೧೦ನೇ ಶತಮಾನ) 'ಸಪ್ತಪದಾರ್ಥಿ' ಹಾಗೂ ವಿಶ್ವನಾಥ ವಿರಚಿತ 'ಭಾಷಾಪರಿಚ್ಛೇದ' ಮತ್ತು ಆ ಗ್ರಂಥಕ್ಕೆ ಅವನೇ ಬರೆದ ಭಾಷ್ಯ - 'ಸಿದ್ಧಾಂತ ಮುಕ್ತಾವಳಿ' ಇವುಗಳು ಉಲ್ಲೇಖಾರ್ಹವಾಗಿವೆ.

ಸಪ್ತ ಪದಾರ್ಥಗಳು
          ವೈಶೇಷಿಕ ತತ್ವ ಶಾಸ್ತ್ರವು ಏಳು 'ಪದಾರ್ಥ' ಅಥವಾ ವಾಸ್ತವದ ವಿಧಾನಗಳನ್ನು ಗುರುತಿಸುತ್ತದೆ. ಪದಾರ್ಥದ ಅರ್ಥ 'ಯಾವುದು ಪದದಿಂದ ಗುರುತಿಸಲ್ಪಡುತ್ತದೆ'ಯೋ ಅಥವಾ ಜ್ಞಾನಕ್ಕೆ ಕಾರಕವಾದ ವಸ್ತುವೇ ಪದಾರ್ಥ. ಈ ರೀತಿಯ ಎಲ್ಲಾ ವಸ್ತುಗಳನ್ನು ಎರಡು ವರ್ಗಗಳಲ್ಲಿ ವಿಭಾಗಿಸಬಹುದು: ಭಾವ (ಇರುವಿಕೆ) ಮತ್ತು ಅಭಾವ (ಇಲ್ಲದಿರುವಿಕೆ). ಭಾವವು ಎಲ್ಲಾ ರೀತಿಯ ಧನಾತ್ಮಕವಾದ ವಾಸ್ತವ ಸಂಗತಿಗಳನ್ನು ಬಿಂಬಿಸಿದರೆ, ಅಭಾವವು ಋಣಾತ್ಮಕ ವಾಸ್ತವಿಕತೆಯನ್ನು ಬಿಂಬಿಸುತ್ತದೆ (ವೈಶೇಷಿಕ ಸೂತ್ರಗಳು ೧.೧.೧೪).
          ಸಪ್ತ ಪದಾರ್ಥಗಳು ಅಥವಾ ಏಳು ವಿಧಾನಗಳು ಯಾವುವೆಂದರೆ: ) ದ್ರವ್ಯ (ವಸ್ತು); 2) ಗುಣ (ಸ್ವಭಾವ); 3) ಕರ್ಮ (ಕ್ರಿಯೆ); 4) ಸಾಮಾನ್ಯ (ಸಮಾನ ಅಂಶ); 5)ವಿಶೇಷ (ಪ್ರತ್ಯೇಕತೆ); 6) ಸಮವಾಯ (ಅಂತರ್ಗತ ಸಂಭಂದ/ಬೇರ್ಪಡಿಸಲಾಗದ ಸಂಭಂದ)  ಮತ್ತು 7) ಅಭಾವ (ಇಲ್ಲದಿರುವಿಕೆ). ಇವುಗಳನ್ನು ಈಗ ಒಂದೊಂದಾಗಿ ಪರಿಶೀಲಿಸೋಣ:
          ದ್ರವ್ಯ ಎನ್ನುವ ಒಂದು ವಸ್ತುವು, ಗುಣ (ಸ್ವಭಾವ) ಮತ್ತು ಕರ್ಮ (ಕ್ರಿಯೆ) ಇವುಗಳನ್ನು ಒಳಗೊಳ್ಳಬಹುದು. ದ್ರವ್ಯವು ಎರಡೂ ಪದಾರ್ಥಗಳಿಗೆ ಮೂಲಾಧಾರವಾಗಿದೆ. ಒಂಭತ್ತು ರೀತಿಯ ದ್ರವ್ಯಗಳಿವೆ, ಅವುಗಳೆಂದರೆ: ನಾಲ್ಕು ಧಾತುಗಳಾದ [ಪೃಥ್ವಿ (ಭೂಮಿ), ಜಲ(ನೀರು), ತೇಜಸ್(ಅಗ್ನಿ/ಬೆಳಕು) ಮತ್ತು ವಾಯು(ಗಾಳಿ)]; ಆಕಾಶ (ಮೂಲ ಧಾತು), ಕಾಲ(ಸಮಯ); ದಿಕ್(ಸ್ಥಳ); ಆತ್ಮ(ಜೀವಿ) ಮತ್ತು ಮನಸ್ಸು; ಇವೆಲ್ಲವೂ ಆದ್ಯಂತರಹಿತವಾಗಿವೆ ಅಥವಾ ನಿತ್ಯನಿರಂತರವಾಗಿವೆ.
          ನಾಲ್ಕು ಧಾತುಗಳು ಸೃಷ್ಟಿಕ್ರಿಯೆಗೆ ಮುಂಚೆ ಪರಮಾಣುಗಳ ರೂಪದಲ್ಲಿ ಇದ್ದರೆ; ಆಕಾಶ, ಕಾಲ, ದಿಕ್ಕು ಮತ್ತು ಮನಸ್ಸು ಇವು ಸರ್ವಾಂತರ್ಯಾಮಿಗಳಾಗಿವೆ ಮತ್ತು ಇದರಲ್ಲಿ ಮನಸ್ಸೆಂಬುದು ಅಣುವಿನ ಗಾತ್ರದಲ್ಲಿರುತ್ತದೆ.
          ವೈಶೇಷಿಕ ಪದ್ದತಿಯು ಎರಡು ವಿಧವಾದ ಜೀವಿ(ಆತ್ಮ)ಗಳನ್ನು ಗುರುತಿಸುತ್ತದೆ, ಜೀವಾತ್ಮ ಮತ್ತು ಪರಮಾತ್ಮ(ಈಶ್ವರ ಅಥವಾ ಪರಮೇಶ್ವರ ಎಂದೂ ಕರೆಯುತ್ತಾರೆ). ಮೊದಲನೆಯದಾದ ಜೀವಾತ್ಮರು ಅನಂತ ಸಂಖ್ಯೆಯಲ್ಲಿದ್ದರೆ ಪರಮಾತ್ಮನು ಅಥವಾ ಅತ್ಯುನ್ನತ ಆತ್ಮನು ಅಥವಾ ದೇವರು ಒಬ್ಬನೇ ಒಬ್ಬನಿರುತ್ತಾನೆ.
          ಗುಣ ಅಥವಾ ಸ್ವಭಾವವು ಯಾವಾಗಲೂ ದ್ರವ್ಯ ಅಥವಾ ವಸ್ತುವಿನ ಆಧಾರಕ್ಕೊಳಪಟ್ಟು ತನ್ನ 'ಇರುವಿಕೆ' ಮತ್ತು 'ವ್ಯಕ್ತವಾಗುವುವಿಕೆ'ಗೆ ಅದನ್ನೇ ಅವಲಂಬಿಸಿದೆ. ಅದು ಯಾವಾಗಲೂ ದ್ರವ್ಯಕ್ಕೇ ಸೇರಿದ್ದೇ ಹೊರತು ಇನ್ನೊಂದು ಗುಣಕ್ಕೆ ಸೇರುವುದಿಲ್ಲ; ಅಂದರೆ ಅದು ದ್ರವ್ಯದ ಭಾಗವೇ ಹೊರತು ಇನ್ನೊಂದು ಗುಣದ ಭಾಗವಲ್ಲ.
          ವೈಶೇಷಿಕ ಪದ್ಧತಿಯು ೨೪ ರೀತಿಯ ಗುಣಗಳನ್ನು ಪ್ರತಿಪಾದಿಸುತ್ತದೆ. ಅವುಗಳಲ್ಲಿ ಕೆಲವೆಂದರೆ: ಐದು ಗ್ರಹಣೇಂದ್ರಿಯಗಳ ಗುಣಗಳು(ರೂಪ, ರಸ, ಗಂಧ, ಸ್ಪರ್ಶ, ಶಬ್ದ), ಪರಿಮಾಣ (ಗಾತ್ರ), ಸಂಯೋಗ್ಯ (ಜೋಡಣೆ), ಬುದ್ಧಿ (ಗ್ರಹಿಕೆ), ಸುಖ ಮತ್ತು ದುಃಖ (ನೋವು ಮತ್ತು ನಲಿವುಗಳು), ಇಚ್ಛೆ ಮತ್ತು ದ್ವೇಷ (ಇಷ್ಟ ಮತ್ತು ಅಯಿಷ್ಟಗಳು), ಸಂಸ್ಕಾರ (ಧೋರಣೆ/ಸಹಜ ಪ್ರವೃತ್ತಿ), ಧರ್ಮ ಮತ್ತು ಅಧರ್ಮ (ಒಳ್ಳೆಯ ಮತ್ತು ಕೆಟ್ಟ ಗುಣಗಳು).
          ಇಲ್ಲಿ ಗುಣಗಳನ್ನು ೨೪ಕ್ಕೇ ಪರಿಮಿತಗೊಳಿಸುವುದರ ಹಿಂದಿರುವ ಉದ್ದೇಶವೇನೆಂದರೆ ಅವುಗಳನ್ನು ಇದಕ್ಕೂ ಹೆಚ್ಚಾಗಿ ವಿಭಾಗಿಸಲು ಆಗುವುದಿಲ್ಲವೆನ್ನುವುದು ವೈಶೇಷಿಕರ ಅಭಿಮತ.
          ಕರ್ಮ ಅಥವಾ ಕ್ರಿಯೆಯು ಒಂದು ಭೌತಿಕ ಚಲನೆ. ಅದು ವಸ್ತುವಿಗೆ ಸೇರಿದ್ದಾಗಿದ್ದು ಅದರ ಸ್ವಭಾವವು ನಿರಂತರ ಬದಲಾವಣೆ. ಐದು ರೀತಿಯಾದ ಚಲನೆಗಳನ್ನು; ಉತ್ಕ್ಷೇಪಣ (ಮೇಲೆ ತೂರುವಿಕೆ) ಮತ್ತು ಆಕುಂಚನ (ಕುಗ್ಗುವಿಕೆ) ಮೊದಲಾದವುಗಳನ್ನು ಪಟ್ಟಿ ಮಾಡಲಾಗಿದೆ. ಈ ರೀತಿಯ ಚಲನೆಗಳನ್ನು ಕಣ್ಣು, ಚರ್ಮ ಮೊದಲಾದ ಪಂಚೇಂದ್ರಿಯಗಳಿಂದ ಗ್ರಹಿಸಬಹುದು. ಮನಸ್ಸೂ ಕೂಡ ಚಲನೆಯನ್ನು ಒಳಗೊಂಡಿದೆ ಆದರೆ ಅದನ್ನು ಬಾಹ್ಯವಾಗಿ ಗ್ರಹಿಸಲಾಗದು.
          'ಸಾಮಾನ್ಯ' ಅಥವಾ ಸಮಾನ ಅಂಶವೆಂದರೆ ಒಂದು ವರ್ಗದಲ್ಲಿರುವ ಸಾರ ಮತ್ತು ಅದರ ಸಾರ್ವತ್ರಿಕತೆ. ಸಾರ್ವತ್ರಿಕತೆ ವರ್ಗದಲ್ಲಿರುವ ಪ್ರತಿಯೊಬ್ಬ ಸದಸ್ಯನಲ್ಲೂ ನಿತ್ಯ (ನಿರಂತರ ಮತ್ತು ಕೊನೆಯಿಲ್ಲದ್ದು) ಮತ್ತು ಅಂತರ್ಜ್ಯನ್ಯವಾಗಿರುತ್ತವೆ. ಉದಾಹರಣೆಗೆ: 'ಗೋತ್ವ' (ಗೋವಿನ ಅಂಶ) ಮತ್ತು 'ಘಟತ್ವ' (ಮಡಕೆಯ ತತ್ವ) ಇವುಗಳು ಪ್ರತಿ ಹಸು ಮತ್ತು ಮಡಕೆಯಲ್ಲಿಯೂ ಅನುಕ್ರಮವಾಗಿ ಇರುತ್ತವೆ. ಒಂದು ಹಸುವಿನ ಮರಣ ಅಥವಾ ಮಡಕೆಯ ಒಡೆಯುವಿಕೆ ಅವುಗಳಲ್ಲಿದ್ದ 'ಸಾಮಾನ್ಯ'ವನ್ನು ನಾಶಪಡಿಸುವುದಿಲ್ಲ.
          'ವಿಶೇಷ' ಅಥವಾ ಪ್ರತ್ಯೇಕತೆಯು 'ಸಾಮಾನ್ಯ'ದ ನೇರ ವಿರುದ್ಧ ಪದ. ಅದು ನಿತ್ಯವಿರುವ ವಸ್ತುಗಳಲ್ಲಿ ಕಂಡು ಬರುವ ಅದ್ವಿತೀಯತೆ. ಉದಾಹರಣೆಗೆ ಭೂಮಿಯ ಮೇಲೆ ಲಭ್ಯವಿರುವ ಒಂದು ಪರಮಾಣು ಇದೇ ಭೂಮಿಯ ಮತ್ತೊಂದು ಪರಮಾಣುವಿಗಿಂತ ವಿಭಿನ್ನವಾಗಿರುತ್ತದೆ. ಇವುಗಳಲ್ಲಿರುವ ಏನೋ ಒಂದು ಪ್ರತಿಯೊಂದನ್ನೂ ಒಂದರಿಂದ ಮತ್ತೊಂದನ್ನು ವ್ಯತ್ಯಾಸಗೊಳಿಸುತ್ತದೆ; ಅದನ್ನೇ 'ವಿಶೇಷ' ಎನ್ನುವುದು.
          'ಸಮವಾಯ' ಅಥವಾ ಅಂತರ್ಗತತ್ವವು ವೈಶೇಷಿಕ ಸಿದ್ಧಾಂತದ ವಿಶೇಷ ಕೊಡುಗೆ ಇರಬಹುದೆಂದು ಕಾಣುತ್ತದೆ. ಎರಡು ವಸ್ತುಗಳ ನಡುವೆ ಸಂಯೋಗ ಅಥವಾ ಜೋಡಣೆಯನ್ನು ಇಷ್ಟ ಬಂದಾಗ ಮಾಡಬಹುದು ಮತ್ತು ಅದೇ ರೀತಿ ವಿಯೋಗ ಅಥವಾ ಬೇರ್ಪಡಿಸುವಿಕೆಯನ್ನು ಕೂಡ. ಎರಡು ವಸ್ತುಗಳ ನಡುವಿನ ಈ ವಿಧವಾದ ಸಂಭಂದವು ತಾತ್ಕಾಲಿಕ. ಆದರೆ 'ಸಮವಾಯ'ವು ಪ್ರತಿಪಾದಿಸುವ ಸಂಭಂದವು ಅಂತರ್ಗತವಾದದ್ದು (ಪ್ರತ್ಯೇಕಿಸಲಾಗದ್ದು) ಆದ್ದರಿಂದ ಇದನ್ನು 'ಅಯುತಸಿದ್ಧ' ಅಥವಾ ಜೋಡಣೆಯಲ್ಲದ ಸಂಭಂದವೆಂದು ಕರೆದಿದ್ದಾರೆ. ಅದು ನಿತ್ಯ ಮತ್ತು ಸರ್ವಕಾಲಿಕ. ಒಂದು ಪೂರ್ಣ ವಸ್ತು ಮತ್ತದರ ಭಾಗಗಳೊಂದಿಗಿನ ಸಂಭಂದವು  'ಸಮವಾಯ' ಅಥವಾ ಅಂತರ್ಗತತ್ವತೆ. ದಾರದ ಎಳೆಗಳೊಂದಿಗೆ ಬಟ್ಟೆಯ ಸಂಭಂದ; ಕೆಂಪುತನದೊಂದಿಗೆ ಕೆಂಪು ವಸ್ತು(ಉದಾ: ಕೆಂಪು ಗುಲಾಬಿ)ವಿನ ಸಂಭಂದ; ಚಲಿಸುವ ವಸ್ತುವಿನಲ್ಲಿರುವ ಚಲನೆಯ ಸಂಭಂದ (ಉದಾ: ಚಲಿಸುವ ಚಂಡು) ಇವುಗಳನ್ನು ಸಮವಾಯಕ್ಕೆ ಉದಾಹರಣೆಗಳಾಗಿ ಕೊಡಬಹುದು. ಸಮವಾಯದಲ್ಲಿ ಪ್ರಸ್ತಾಪಿಸಿರುವ ಸಂಭಂದಗಳು ಮಾರ್ಪಾಟಿಗೆ ಒಳಪಡದೇ ಇರುವಂತವುಗಳು ಅಂದರೆ ಬದಲಾವಣೆಗೆ ಅತೀತವಾಗಿರುವಂತಹವು.
          'ಅಭಾವ' ಅಥವಾ 'ಇಲ್ಲದಿರುವಿಕೆ' (ಏಳು ಪದಾರ್ಥಗಳಲ್ಲಿನ ಕೊನೆಯದು) ಮಾತ್ರವೇ ಋಣಾತ್ಮಕ ವರ್ಗಕ್ಕೆ ಸೇರಿದ್ದು. ಅದನ್ನು ಕೂಡ ವೈಶೇಷಿಕ ಪದ್ಧತಿಯಲ್ಲಿ ವಾಸ್ತವವೆಂದು ತಿಳಿಯಲಾಗುತ್ತದೆ. ರಾತ್ರಿಯ ಹೊತ್ತಿನಲ್ಲಿ ನಾವು ಆಕಾಶವನ್ನು ನೋಡಿದಾಗ ಅಲ್ಲಿ ಸೂರ್ಯನು ಗೋಚರಿಸದೇ ಇರುವುದನ್ನು ಗಮನಿಸುತ್ತೇವೆ; ಚಂದ್ರ ಹಾಗೂ ಇತರ ತಾರೆಗಳನ್ನು ನಾವು ನೋಡಿದರೂ ಕೂಡ. (ಇಲ್ಲಿ ಸೂರ್ಯನ ಅಭಾವವು-ಇಲ್ಲದಿರುವಿಕೆಯು ವಾಸ್ತವ). ಸ್ಥೂಲವಾಗಿ ಹೇಳಬೇಕೆಂದರೆ ಅಭಾವವು ಎರಡು ವಿಧವಾದದ್ದು, ಸಂಸರ್ಗಾಭಾವ ಮತ್ತು ಅನ್ಯೋನ್ಯಾಭಾವ. ಮೊದಲನೆಯದಾದ ಸಂಸರ್ಗಾಭಾವವು "ಒಂದರಲ್ಲಿ ಮತ್ತೊಂದು ಇಲ್ಲದಿರುವಿಕೆ"ಯನ್ನು ಪ್ರತಿಪಾದಿಸುತ್ತದೆ. ಉದಾಹರಣೆಗೆ - ಮೇಜಿನ ಮೇಲೆ ಮಡಕೆಯು ಇಲ್ಲದಿರುವುದು. ಇನ್ನೊಂದು ಭಾವವಾದ ಅನ್ಯೋನ್ಯಾಭಾವವು ಒಂದು ವಸ್ತುವು ಇನ್ನೊಂದು ವಸ್ತುವಲ್ಲ ಎಂದು ತಿಳಿಸುತ್ತದೆ; ಉದಾಹರಣೆಗೆ - ಒಂದು ಕುದುರೆಯು ಎಮ್ಮೆಯೊಳಗೆ ದೊರೆಕದು(ಸಿಗದು). 
          ಸಂಸರ್ಗಾಭಾವವು ಮೂರು ವಿಧಾನದ್ದಾಗಿರುತ್ತದೆ, ಅವುಗಳೆಂದರೆ:
1) ಪ್ರಾಗಾಭಾವ (ಪೂರ್ವದಲ್ಲಿ ಇಲ್ಲದಿರುವಿಕೆ); 2) ಪ್ರಧ್ವಂಸಾಭಾವ ಅಥವಾ ಧ್ವಂಸಾಭಾವ (ಹಾಳಾದ ನಂತರ ಇಲ್ಲದಿರುವಿಕೆ); ಮತ್ತು 3) ಅತ್ಯಂತ್ಯಾಭಾವ (ಅಪ್ಪಟವಾಗಿ ಇಲ್ಲದಿರುವಿಕೆ ಅಥವಾ ಸಂಪೂರ್ಣವಾಗಿ ಯಾವಾಗಲೂ ಇಲ್ಲದಿರುವಿಕೆ).ಕಟ್ಟುವ ಮುನ್ನ ಇಟ್ಟಿಗೆಗಳಲ್ಲಿ ಮನೆಯು ಇಲ್ಲದಿರುವಿಕೆಯನ್ನು ಪ್ರಾಗಾಭಾವಕ್ಕೆ ಉದಾಹರಣೆಯಾಗಿ ಕೊಡಬಹುದು. ಒಂದು ಮಣ್ಣಿನ ಮಡಕೆಯು ಒಡೆದು ಹೋದ ನಂತರ ಅದರಲ್ಲಿ ಮಡಕೆಯು ಇಲ್ಲದಿರುವಿಕೆಯು ಪ್ರಧ್ವಂಸಾಭಾವಕ್ಕೆ ಉದಾಹರಣೆಯಾಗುತ್ತದೆ. ಗಾಳಿಯು "ಬಣ್ಣ ಅಥವಾ ಆಕಾರ" ರಹಿತವಾಗಿರುವುದು ಅತ್ಯಂತ್ಯಾಭಾವಕ್ಕೆ ಉದಾಹರಣೆ.

ದೇವರು ಮತ್ತು ಪ್ರಪಂಚ:
          ವೈಶೇಷಿಕ ದರ್ಶನವು ದೇವರು ಅಂದರೆ ಈಶ್ವರ ಅಥವಾ ಪರಮೇಶ್ವರ ಇವನ ಇರುವಿಕೆಯನ್ನು ಒಪ್ಪಿಕೊಳ್ಳುತ್ತದೆ. ಈ ಭಗವಂತನು ಅತ್ಯಂತ ಮೇಧಾವಿಯಾದ ಜೀವಿಯಾಗಿದ್ದು ಅವನ ಇಚ್ಛೆ ಮತ್ತು ಮಾರ್ಗದರ್ಶನದಲ್ಲಿ ಈ ಪ್ರಪಂಚದ ಸೃಷ್ಟಿ-ಸ್ಥಿತಿ-ಲಯ(ರಚನೆ-ನಿರ್ವಹಣೆ-ವಿನಾಶ)ಗಳು ಏರ್ಪಡುತ್ತವೆ.
          ಈ ಪ್ರಪಂಚವು ಭೌತಿಕ ಮತ್ತು ಜೈವಿಕ ವಸ್ತುಗಳ ವ್ಯವಸ್ಥೆಯಾಗಿದ್ದು ಅವುಗಳು ಒಂದರೊಂದಿಗೆ ಮತ್ತೊಂದು ಪರಸ್ಪರ ಸಹಯೋಗವನ್ನು ಹೊಂದಿವೆ. ವಾಸ್ತವವಾಗಿ ಪ್ರಪಂಚವನ್ನು ಮುನ್ನಡೆಸುವ ನೀತಿಸೂತ್ರ ಯಾವುದೆಂದರೆ ವಿಶ್ವವ್ಯಾಪಿಯಾದ ಕರ್ಮ ನಿಯಮ - ಇದರಿಂದ ಎಲ್ಲ ಆತ್ಮಗಳ(ಜೀವರುಗಳ) ಜೀವನ ಮತ್ತು ಗುರಿಗಳು ನಿರ್ದೇಶಿಸಿಲ್ಪಟ್ಟಿದೆ.   
          ಸೃಷ್ಟಿಕ್ರಿಯೆಯ ಪ್ರಾರಂಭ (ಅದನ್ನನುಸರಿಸಿ ಅದರ ನಿರ್ವಹಣೆ ಮತ್ತು ವಿನಾಶ, ಇವು ಮೂರು ನಿರಂತರವಾಗಿ ಆವರ್ತನಗೊಳ್ಳುತ್ತವೆ) ಇದು ಭಗವಂತನ ಇಚ್ಛೆಗನುಗುಣವಾಗಿ ನಡೆಯುತ್ತದೆ. ಅವನ ಇಚ್ಛೆಯಿಂದ ಉತ್ಪನ್ನಗೊಂಡ ಮೊದಲ ವಸ್ತು 'ಜಗತ್ತಿನ ಆತ್ಮ' - ಬ್ರಹ್ಮ. ಭಗವಂತನ ಕೃಪೆಯಿಂದ ಅವನು ಆರು ಸದ್ಗುಣಗಳಾದ ಜ್ಞಾನ, ವೈರಾಗ್ಯ ಮತ್ತು ಐಶ್ವರ್ಯ ಮೊದಲಾದವುಗಳ ಗಣಿಯಾಗಿದ್ದಾನೆ. ಈ ಬ್ರಹ್ಮನು ಸೃಷ್ಟಿಯ ಪ್ರಧಾನ ಶಿಲ್ಪಿ; ಅವನು ಸಂಪೂರ್ಣವಾಗಿ ವಿವಿಧ ಆತ್ಮಗಳ ಅದೃಷ್ಠ (ಅಗೋಚರವಾದ ಒಳಿತು ಮತ್ತು ಕೆಡಕುಗಳು)ಗಳಿಗೆ ಅನುಗುಣವಾಗಿ ಮತ್ತು ವಿವಿಧ ರೀತಿಯ ಪರಮಾಣುಗಳು ಅಥವಾ ಅಣುಗಳನ್ನು ಒಂದಕ್ಕೊಂದು ಜೋಡಣೆಗೊಳಿಸಿ ಅಂತಿಮವಾಗಿ ಈ ವಿಶ್ವವನ್ನು ಸೃಜಿಸಿದ್ದಾನೆ.
          ಅಂತ್ಯದ ಪ್ರಕ್ರಿಯೆಯು ಸೃಷ್ಟಿಯ ವಿರುದ್ಧ ದಿಕ್ಕಿನಲ್ಲಿ ಸಾಗುತ್ತದೆ. ಬ್ರಹ್ಮನು ತನ್ನ ದೇಹವನ್ನು ಪರಿತ್ಯಜಿಸುತ್ತಾನೆ, ತದನಂತರ ಮಹೇಶ್ವರನು ಸೃಷ್ಟಿಯನ್ನು ಅಂತಿಮಗೊಳಿಸಲು ಇಚ್ಛಿಸಿ ಪ್ರಳಯ ಅಥವಾ ವಿನಾಶವನ್ನು ಉಂಟುಮಾಡುತ್ತಾನೆ. ಆಗ ಇಡೀ ಪ್ರಪಂಚವು ತನ್ನ ಮೂಲ ಸ್ವರೂಪವಾದ ಏಳು ಪದಾರ್ಥಗಳ ಸ್ಥಿತಿಗೆ ಹಿಂತಿರುಗುತ್ತದೆ.

ಉಪಸಂಹಾರ
          ನ್ಯಾಯ ಪದ್ಧತಿಯಂತೆ ವೈಶೇಷಿಕ ದರ್ಶನವೂ ಕೂಡ ನೈಜ ತತ್ವವನ್ನು ಒಳಗೊಂಡು ಅನೇಕತೆ ಮತ್ತು ಆಸ್ತಿಕತೆಯನ್ನು ಪ್ರತಿಪಾದಿಸುತ್ತದೆ. ಸೃಷ್ಟಿಯು ಅವಾಂಛಿತವಾದುದ್ದಲ್ಲ ಅದು ಭಗವಂತನ ಇಚ್ಛೆಯಂತೆಯೇ ಕ್ರಮಬದ್ಧವಾಗಿ; ಜೀವಾತ್ಮರ ಕರ್ಮಕ್ಕನುಗುಣವಾಗಿ ಅವುಗಳು ಅಂತಿಮ ನೈತಿಕ ಪರಿಪೂರ್ಣತೆಯನ್ನು ಪಡೆಯುವ ದಿಕ್ಕಿನಲ್ಲಿ ಸಾಗುತ್ತದೆ.
          ಅಣು ಸಿದ್ಧಾಂತವನ್ನು ನೈತಿಕ ಹಾಗು ಆಧ್ಯಾತ್ಮಿಕತೆಗಳೊಂದಿಗೆ ಸಮನ್ವಯಗೊಳಿಸಿದ್ದಲ್ಲದೆ, ಭಗವಂತನನ್ನು ಸೃಷ್ಟಿಕರ್ತ ಮತ್ತು ಜಗನ್ನಿಯಾಮಕನೆಂದು ಒಪ್ಪಿಕೊಂಡು ವೈಶೇಷಿಕ ದರ್ಶನವು ಭಾರತೀಯ ತತ್ವಶಾಸ್ತ್ರಗಳಲ್ಲಿ ಅತ್ಯುನ್ನತವೆಂದು ಪರಿಗಣಿಸಲ್ಪಟ್ಟಿರುವ ವೇದಾಂತ ದರ್ಶನಕ್ಕೆ ಅತೀ ಸಮೀಪದಲ್ಲಿ ಬಂದು ನಿಂತಿತು.       

-ಶ್ರೀಧರ್ ಭಂಡ್ರಿ