Pages

Wednesday, January 29, 2014

ವೇದ ಭಾರತೀ -ಹಿನ್ನೋಟ

ಸುಮಾರು ಒಂಬತ್ತು ತಿಂಗಳ ಹಿಂದಿನ ವೀಡಿಯೋ ಇಲ್ಲಿದೆ.

ಹುಬ್ಬಳ್ಳಿಯ ಶ್ರೀ ದಯಾನಂದ ಗುರುಕುಲ

ಪೂಜ್ಯ ಚಿದ್ರೂಪಾನಂದ ಸರಸ್ವತೀ ಸ್ವಾಮೀಜಿಯವರ ಆಮಂತ್ರಣದಂತೆ ಹುಬ್ಬಳ್ಳಿಗೆ ಹೋಗಿದ್ದೆ. ದಿನಾಂಕ 26.1.2014 ಭಾನುವಾರ ಬೆಳಿಗ್ಗೆ ಶ್ರೀ ದಯಾನಂದ ಗುರುಕುಲದ ವೇದಪಾಠಶಾಲೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ. ದಾನಿ ಶ್ರೀಮತೀ ಸ್ಮಿತಾ ಗೋಸಾಯಿ ಅಮೆರಿಕಾ ದಿಂದ ಬಂದಿದ್ದರು. ಆಶ್ರಮದ ವಿದ್ಯಾರ್ಥಿಗಳ ಚಟುವಟಿಕೆಯನ್ನು ಬೆಳಗಿನಿಂದ ರಾತ್ರಿ 9.00 ಗಂಟೆ ತನಕ ಉಲ್ಲಾಸದಿಂದ ವೀಕ್ಷಿಸಿದರು. ಅವರ ಕಣ್ಣಲ್ಲಿ ಸಾರ್ಥಕತೆಯ ಭಾವ ತುಂಬಿದ್ದು ಗೋಚರವಾಗುತ್ತಿತ್ತು. ಉಳ್ಳವರ ಹಣದ ಸದ್ವಿನಿಯೋಗವಾದಾಗ ಅವರ ಮುಖದಲ್ಲಿ ಅದೆಂತಹ ಸಂತೋಷವಾಗುತ್ತದೆ! ಅದನ್ನು ಪ್ರತ್ಯಕ್ಷ ಕಾಣುವ ಅವಕಾಶ ನನಗೆ. ಗುರುಕುಲದ ವಿದ್ಯಾರ್ಥಿಗಳ, ಅಲ್ಲಿನ ಅಧ್ಯಾಪಕರುಗಳ [ ಗುರೂಜಿ ಎಂದೇ ಅಲ್ಲಿ ಕರೆಯುತ್ತಾರೆ] ಸಂತಸಭರಿತ ಓಡಾಟವೇ ಕಣ್ಣಿಗೆ ಹಬ್ಬ. ಎಲ್.ಕೆ.ಜಿ.ಮಕ್ಕಳಿಂದ ಹತ್ತನೆಯ ತರಗತಿ ಮಕ್ಕಳ ವರೆಗೂ ಎಲ್ಲರಲ್ಲೂ ಲವಲವಿಕೆ ತಾಂಡವಾಡುತ್ತಿತ್ತು. ವಾರ್ಷಿಕೋತ್ಸವವನ್ನು ವಿಶೇಷವಾಗಿ ಆಚರಿಸಲು ಮೂರ್ನಾಲ್ಕು ತಿಂಗಳ ತಯಾರಿ ಮಾಡಿದ್ದರು. ಅಬ್ಭಾ! ಆ ಪುಟ್ಟ ಮಕ್ಕಳನ್ನು ತಯಾರಿ ಮಾಡಿದ್ದ ಪರಿ!! ಯಾವ TV ಶೋಗಳೂ ಈ ಮಕ್ಕಳ ಮುಂದೆ ಸರಿಯಾಟಿಯಲ್ಲಾ! ಸಂಸ್ಕೃತ ನಾಟಕ, ಯಕ್ಷಗಾನ, ಪುಟ್ಟ ಮಕ್ಕಳಿಂದ ರೂಪಕಗಳು. ಒಂದೇ ಎರಡೇ! ಮದ್ಯಾಹ್ನ ನಾಲ್ಕರಿಂದ ಬರೊಬ್ಬರಿ ಐದು ಗಂಟೆಗಳ [ರಾತ್ರಿ 9.00ರತನಕ with out brake] ಕಾರ್ಯಕ್ರಮಗಳು. ಒಂದಕ್ಕಿಂತ ಒಂದು ಅದ್ಭ್ಜುತ. ಮಕ್ಕಳ ಉತ್ಸಾಹಭರಿತ ಪ್ರದರ್ಶನ ನೋಡಲು ಕಾತುರರಾಗಿದ್ದ ಪೋಷಕರ ಮುಂದೆ ದೊಡ್ದವರ ಉದ್ದನೆಯ ಭಾಷಣಗಳಿಲ್ಲ. ಎಲ್ಲವೂ ಐದಾರು ನಿಮಿಷಗಳ ಪುಟ್ಟ ಪುಟ್ಟ ಭಾಷಣಗಳು! ಆದರೆ ಪುಟ್ಟ ಮಕ್ಕಳ ದೊಡ್ದ ಪ್ರದರ್ಶನಗಳು!! ಸಂಸ್ಕೃತ ನಾಟಕ ಮಾಡುವಾಗ ಆ ಪುಟ್ಟ ಮಕ್ಕಳ ಸ್ಪಷ್ಟವಾದ ಮಾತು ಜನರನ್ನು ಹಿಡಿದಿಟ್ಟಿತ್ತು. ಅಬ್ಭಾ ! ಎಲ್ಲರನ್ನೂ ಬೆಚ್ಚಿ ಬೀಳಿಸಿದ್ದು 13 ವರ್ಷದ ವಿದ್ಯಾರ್ಥಿಯ ಮಹಿಶಾಸುರನ ಪಾತ್ರ. ಆ ವಿದ್ಯಾರ್ಥಿ ತನ್ನನ್ನು ತಾನು ಮರೆತು ಬಿಟ್ಟಿದ್ದ! ಸಾವಿರಾರು ಜನರು ಸೇರಿದ್ದ ಸಭೆಯ ಹೊರಗಿನಿಂದ ಮಹಿಶಾಸುರನು ಪಂಜಿನ ಬೆಳಕಿನಲ್ಲಿ ವೇದಿಕೆಯ ಬಳಿ ಬರುವ ದೃಶ್ಯವು ಮೈನವಿರೇಳಿಸುತ್ತದೆ. ಅವನ ಆರ್ಭಟ! ಆ ಗತ್ತು! ಅಬ್ಭಾ! ಅವನೊಬ್ಬ 13 ವರ್ಷದ ಹುಡುಗನೆಂದು ಹೇಳುವುದಾದರೂ ಹೇಗೆ? ಅವನ ಆರ್ಭಟವನ್ನು ಇಲ್ಲಿ  ವಿಡಿಯೋ ದಲ್ಲಿ ನೋಡಿ.  ದಿನಾಂಕ 26.1.2014 ರಂದು ಹುಬ್ಬಳ್ಳಿಯ ದಯಾನಂದ ಗುರುಕುಲದ ವೇದಪಾಠಶಾಲೆಯ ನೂತನ ಕಟ್ಟಡದ ಉದ್ಘಾಟನಾ ಸಂದರ್ಭದಲ್ಲಿ ದಾನಿಗಳಾದ ಅಮೆರಿಕೆಯಲ್ಲಿರುವ ಶ್ರೀಮತಿ ಸ್ಮಿತಾ ಗೋಸಾಯಿಯವರನ್ನೂ, ಕಟ್ಟಡ ನಿರ್ಮಾಣವನ್ನು ಮಾಡಿದ ಶ್ರೀ ಜೋಷಿಯವರನ್ನೂ ಸನ್ಮಾನಿಸುವುದರ ಜೊತೆಗೆ ವೇದ ಪ್ರಸಾರದಲ್ಲಿ ತೊಡಗಿಸಿಕೊಂಡಿರುವ ಹಾಸನದ ವೇದಭಾರತಿಯನ್ನೂ ಕೂಡ ಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.ಅದರ ಕೆಲವು ದೃಶ್ಯಗಳು ಇಲ್ಲಿವೆ.ಅಲ್ಲಿನ ಹಲವು ಪ್ರಸಂಗಗಳು ನನ್ನ ಮನಸೆಳೆದವು.ಅದರಲ್ಲಿ ಮೇಘಾಲಯದಿಂದ ಬಂದಿರುವ ವಿದ್ಯಾರ್ಥಿಗಳಿಗೆ ಸ್ವಾಮೀಜಿಯವರ ಆಶ್ರಯ ಮತ್ತು ಮುಸಲ್ಮಾನ ವಿದ್ಯಾರ್ಥಿಗಳ ಪೋಷಕರ ಹೃದಯಾಳದ ಮಾತುಗಳು ಪ್ರಮುಖವಾದವುಗಳು. ಒಬ್ಬ ಮುಸಲ್ಮಾನ್ ತಾಯಿಯಂತೂ ಅಪ್ಪ-ಅಮ್ಮನನ್ನು ಕಳೆದುಕೊಂಡಿರುವ ಮೊಮ್ಮಗನನ್ನು ಆಶ್ರಮದಲ್ಲಿ ಬೆಳೆಸುತ್ತಿದ್ದಾರೆ. ಅವರ ಮಾತುಗಳು ನಮ್ಮ ಕಣ್ ಗಳನ್ನು ಹನಿದುಂಬುವಂತೆ ಮಾಡಿದವು. ಇವೆಲ್ಲಾ ದೃಶ್ಯಗಳನ್ನೂ ಇಲ್ಲಿ ನೋಡಿ. ಜೊತೆಗೆ ಮಹಿಶಾಸುರ ಮರ್ಧಿನಿ ರೂಪಕದ ವೀಡಿಯೋ ದೃಶ್ಯವನ್ನು ಇಲ್ಲಿಯೇ ಪಕ್ಕದಲ್ಲಿರುವ ವೀಡಿಯೋಗ್ಯಾಲ್ಲರಿಯಲ್ಲಿ    ನೋಡಲು ಮರೆಯದಿರಿ












ಅರಸೀಕೆರೆಯಲ್ಲಿ ಹಾಸನದ ವೇದಭಾರತೀ ಸದಸ್ಯರಿಂದ ಅಗ್ನಿಹೋತ್ರ

Photo: ಅರಸೀಕೆರೆಯ ವಾಸವೀ ಯುವಜನಸಂಘವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಾಸನದ ವೇದಭಾರತೀ ಸದಸ್ಯರಿಂದ ಅಗ್ನಿಹೋತ್ರ ಮತ್ತು ವಿವರಣೆ.

ಅರಸೀಕೆರೆಯ ವಾಸವೀ ಯುವಜನಸಂಘವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಾಸನದ ವೇದಭಾರತೀ ಸದಸ್ಯರಿಂದ ಅಗ್ನಿಹೋತ್ರ ಮತ್ತು ವಿವರಣೆ.

ಸಾಧಕರಿಗೆ ಯೋಗ್ಯವಾದ ಸ್ಥಳ ಹಾರನಹಳ್ಳಿಯ ತಪಸ್ವೀ ಆಶ್ರಮ




















       ಅರಸೀಕೆರೆಯ ವಾಸವೀ ಯುವಜನ ಸಂಘದವರ ಆಹ್ವಾನದ ಮೇರೆಗೆ ಅರಸೀಕೆರೆಗೆ ಹೊರಟಿದ್ದೆವು. ಹಾಸನದಿಂದ ಅರಸೀಕೆರೆಗೆ ಹೋಗಬೇಕಾದರೆ ಹಾರನಹಳ್ಳಿಯ ಮಾರ್ಗವಾಗೇ ಹೋಗಬೇಕು. ಹಾಸನದಿಂದ ಹೋಗುವಾಗ  ಹಾರನಹಳ್ಳಿ      ಮುಂಚೆಯೇ  ರಸ್ತೆಯ ಬದಿಯಲ್ಲಿರುವ  "ತಪಸ್ವೀ ಆಶ್ರಮದ " ಫಲಕ ನಮ್ಮನ್ನು ಸೆಳೆಯದೆ ಬಿಡಲಿಲ್ಲ. ಟೆಂಪೋ ಟ್ರಾವೆಲ್ಲರ್ ನಿಂದ ಇಳಿದ ಕೂಡಲೇ ನಮ್ಮನ್ನು ವಿಚಾರಿಸಿದವರು ಶ್ರೀ ವೆಂಕಟಾಚಲ ಅವರು. ಕೈಕಾಲು ತೊಳೆದುಕೊಂಡು ಕಾಫಿ ತೆಗೆದುಕೊಂಡು  ದರ್ಶನ ಮಾಡಲು ತಿಳಿಸಿದರು.ಅರಸೀಕೆರೆಯ ಕಾರ್ಯಕ್ರಮಕ್ಕೆ  ಇನ್ನೂ ಒಂದು ಗಂಟೆ ಸಮಯವಿತ್ತು.  ಕೈಕಾಲು ತೊಳೆದ ನಾವು ಶಂಕರರ ಸನ್ನಿಧಿಯಲ್ಲಿ ಕುಳಿತು ಒಂದೆರಡು ವೇದ ಮಂತ್ರ ಹೇಳಿದೆವು. ನಂತರ ಕಾಫಿ ಹೀರಿ ಪಿರಮಿಡ್ ಧ್ಯಾನ ಮಂದಿರಕ್ಕೆ ತೆರಳಿದೆವು. ಅಲ್ಲಿ ಹದಿನೈದು ನಿಮಿಷ ಧ್ಯಾನ ಮಾಡಿ  ಯೋಗಿ ನರಸಾರ್ಯರ ವೇದಿಕೆಯೊಳಗೆ ಪ್ರವೇಶಿಸಿದೆವು. ಅಲ್ಲಿ ಪುನ: ಹತ್ತು ನಿಮಿಷ ಕುಳಿತೆವು. ಅಂತೂ ಒಂದು ಗಂಟೆ ಕಳೆದದ್ದು ಗೊತ್ತೇ ಆಗಲಿಲ್ಲ. ಪ್ರಶಾಂತ ವಾತಾವರಣದಲ್ಲಿರುವ ಈ ಆಶ್ರಮದಲ್ಲಿ ಬಂದವರಿಗೆ ಅನ ಪ್ರಸಾದದ ವ್ಯವಸ್ಥೆಯೂ ಇದೆ. ಎಲ್ಲ ವ್ಯವಸ್ಥೆಯನ್ನೂ ಮಾಡಿರುವವರು  ದಿ|| ಹಾರನಹಳ್ಳಿ ರಾಮಸ್ವಾಮಿಯವರ ಪುತ್ರರಾದ ಶ್ರೀ ಅಶೋಕ್ ಹಾರನಹಳ್ಳಿ ಯವರು.




Tuesday, January 21, 2014

ಸಹ ನಾವವತು

ಓಂ ಸಹ ನಾವವತು ಸಹ ನೌ ಭುನಕ್ತು
ಸಹ ವೀರ್ಯಂ ಕರವಾವಹೈ |
ತೇಜಸ್ವಿ ನಾವಧೀತಮಸ್ತು ಮಾ ವಿದ್ವಿಷಾವಹೈ||
ಓಂ ಶಾಂತಿ: ಶಾಂತಿ: ಶಾಂತಿ: ||

ಈ ಮಂತ್ರದ ಅರ್ಥ ತಿಳಿಯುವುದು ಸೂಕ್ತ.

ಸಹನಾ ವವತು = ಎಲ್ಲರೂ ಪರಸ್ಪರ ಒಬ್ಬರು ಇನ್ನೊಬ್ಬರ ರಕ್ಷ್ಯಣೆಯನ್ನು ಮಾಡೋಣ
ಸಹ ನೌ ಭುನಕ್ತು =  ಎಲ್ಲರೂ ಪರಮ ಪ್ರೀತಿಯಿಂದ ಆನಂದವನ್ನು ಅನುಭವಿಸೋಣ
ಸಹ ವೀರ್ಯಂ ಕರವಾವಹೈ = ನಾವೆಲ್ಲರೂ ಪುರುಷಾರ್ಥದಿಂದ ಎಲ್ಲರ ಸಾಮರ್ಥ್ಯವನ್ನು ವರ್ಧಿಸೋಣ
ತೇಜಸ್ವಿ ನೌ ಅಧೀತಮಸ್ತು = ನಮ್ಮೆಲ್ಲರ ತೇಜಸ್ಸು ವರ್ಧಿಸಲಿ
ಮಾ ವಿದ್ವಿಷಾವಹೈ = ನಾವೆಲ್ಲರೂ ಪರಸ್ಪರ ವಿರೋಧವನ್ನು ಎಂದಿಗೂ ಮಾಡದಂತೆ,
ಮಿತ್ರರಾಗಿ ಸದಾ ಇರುವಂತೆ ಮಾಡು
ಶಾಂತಿ: ಶಾಂತಿ: ಶಾಂತಿ:

ಮೂರು ಶಾಂತಿ ಏಕೇ?
೧.ಆಧ್ಯಾತ್ಮಿಕ [ಆತ್ಮಕ್ಕೆ ಸಂಬಂಧಿಸಿದ ದು:ಖ]
೨.ಆಧಿ ಭೌತಿಕ[ದುರ್ಬಲನಿಗೆ ಪ್ರಬಲನಿಂದ ಆಗುವ ದು:ಖ]
೩.ಆಧಿ ದೈವಿಕ = ಪ್ರಕೃತಿ ವಿಕೋಪದಿಂದುಂಟಾಗುವ ದು:ಖ
[ಆಧಿ = ದು:ಖ]

ಭಾವಾರ್ಥ:

       ಓ ಭಗವಂತಾ! ನಮ್ಮೆಲ್ಲರಿಗೂ ಪರಸ್ಪರ ರಕ್ಷಣೆ ಮಾಡಿಕೊಳ್ಳುವ ಸಾಮರ್ಥ್ಯ ಕೊಡು. ಎಲ್ಲರೂ ಪರಸ್ಪರ ಪ್ರೀತಿಯಿಂದ ಆನಂದವನ್ನು ಅನುಭವಿಸುವಂತಾಗಲಿ. ನಮ್ಮೆಲ್ಲರ ತೇಜಸ್ಸು ವರ್ಧಿಸಲಿ. ನಾವೆಲ್ಲರೂ ಪರಸ್ಪರ ವಿರೋಧವನ್ನು ಎಂದಿಗೂ ಮಾಡದಂತೆ, ಮಿತ್ರರಾಗಿ  ಸದಾ ಇರುವಂತೆ ಮಾಡು.

ಈ ಮಂತ್ರಕ್ಕೂ ಭೋಜನಕ್ಕೂ ಏನೂ ಸಂಬಂಧವಿಲ್ಲ. ಆದರೂ ಊಟಮಾಡುವಾಗ ಹೇಳುವ ಪದ್ದತಿ ಬೆಳೆದು ಬಂದಿದೆ. ತಪ್ಪೇನಿಲ್ಲ. ಆದರೆ ಮಂತ್ರದ ಅರ್ಥ ಗೊತ್ತಿರಬೇಕು.

Sunday, January 19, 2014

ಜೀವನ ವೇದ-2


                                       
ಒಂದು ಸಂಮೃದ್ಧವಾದ ಮನೆ ಅಂದರೆ ಹೇಗಿರಬೇಕು? ಮನೆಯ ಯಜಮಾನ ಹೇಗಿರಬೇಕು? ಎಂಬ ವಿಚಾರವನ್ನು  ಅಥರ್ವಣ ವೇದದಲ್ಲಿನ ಒಂದು ಮಂತ್ರದಲ್ಲಿ ಹೀಗೆ ಹೇಳಿದೆ.

ಇಮೇ ಗೃಹಾ ಮಯೋಭುವ ಊರ್ಜಸ್ವಂತ: ಪಯಸ್ವಂತ:|
ಪೂರ್ಣಾ ವಾಮೇನ ತಿಷ್ಠಂತಸ್ತೇ ನೋ ಜಾನಂತ್ವಾಯತ: ||

[ಅಥರ್ವಣದ ೭ನೇ ಕಾಂಡದ ೬೦ನೇ ಸೂಕ್ತದ ೨ನೇ ಮಂತ್ರ]

ಈ ಮಂತ್ರದ ಅರ್ಥವೇನೆಂದರೆ ನಮ್ಮ ಮನೆಗಳು ಆಹಾರಧಾನ್ಯಗಳಿಂದಲೂ ಹಾಲು ಮೊಸರಿನಿಂದಲೂ ತುಂಬಿದ್ದು,ಎಲ್ಲರಿಗೂ ಈ ಮನೆಯಲ್ಲಿ ಸುಖಶಾಂತಿ ನೆಮ್ಮದಿ ಸಿಗುವಂತಾಗಲೀ.
ಈ ಮಂತ್ರವನ್ನು ಹೇಗೆ ಅರ್ಥಮಾಡಿಕೊಳ್ಳ ಬೇಕು? ಒಂದು ಗೌರವಯುತ ಗೃಹವೆಂದರೆ ಆ ಮನೆಯಲ್ಲಿ ಆಹಾರಧಾನ್ಯದ ಸಂಗ್ರಹವಿರಬೇಕು.ಆಹಾರಧಾನ್ಯದ ಸಂಗ್ರಹವಿರಬೇಕೆಂದರೆ ಆ ಮನೆಯೊಡೆಯ ಆಹಾರಧಾನ್ಯವನ್ನು ಸಂಮೃದ್ಧವಾಗಿ ಬೆಳೆದಿರಬೇಕು.ಹಾಲು ಮೊಸರು ಸದಾಕಾಲವಿರುವಂತೆ ಹಸುಕರುಗಳನ್ನು ಸಾಕಿಕೊಂಡಿರಬೇಕು. ಮನೆಗೆ ಅತಿಥಿಗಳು ಸಂತೋಷದಿಂದ ಬಂದುಹೋಗುವಂತಿರಬೇಕು. ಮನೆಯಲ್ಲಿ ಸುಖಶಾಂತಿ ನೆಮ್ಮದಿ ನೆಲಸಿರಬೇಕು.

ಮನೆಯ ಯಜಮಾನ ಹೇಗಿರಬೇಕು?

ಊರ್ಜಂ ಬಿಭ್ರದ್ ವಸುವನೀ ಸುಮೇಧಾ
ಅಘೋರೇಣ ಚಕ್ಷುಷಾಮಿತ್ರಿಯೇಣ|
ಗೃಹಾನೈಮಿ ಸುಮನಾ ವಂದಮಾನೋ
ರಮಧ್ವಂ ಮಾ ಬಿಭೀತ ಮತ್||
[ಅಥರ್ವಣದ ೭ನೇ ಕಾಂಡದ ೬೦ನೇ ಸೂಕ್ತದ ೧ನೇ ಮಂತ್ರ]

 ಈ ಮಂತ್ರದ ಅರ್ಥ ಹೀಗಿದೆ. ಮನೆಯ ಯಜಮಾನನು ಶಕ್ತಿವಂತನಾಗಿರಬೇಕು, ಧನಾರ್ಜನೆ ಮಾಡುತ್ತಿರಬೇಕು,ಮೇಧಾವಂತನಾಗಿರಬೇಕು,ಮನೆಯ ಸದಸ್ಯರೊಡನೆ ಕ್ರೋಧರಹಿತನೂ,ಸ್ನೇಹಪೂರ್ಣ ಕಣ್ಣುಗಳಿಂದ ನೋಡುವವನೂ, ಸುಪ್ರಸನ್ನ ಮನಸ್ಸುಳ್ಳವನೂ,ಎಲ್ಲರಿಂದ ಪ್ರಶಂಸಿಸಲ್ಪಡುವವನೂ ಆಗಿದ್ದು ಮನೆಯ ಸದಸ್ಯರಿಗೆ  ನೀವು ನನಗೆ ಹೆದರಬೇಕಾಗಿಲ್ಲ, ಸಂತೋಷದಿಂದಿರಿ, ಎಂಬ ಸಂತೈಸುವ ಮಾತುಗಳನ್ನಾಡುತ್ತಾ ಎಲ್ಲರೊಡನೆ ಆನಂದದಿಂದ ಪ್ರಸನ್ನನಾಗಿರಬೇಕು.

ಈ ಮಂತ್ರದ ಒಂದೊಂದೂ ಶಬ್ಧಗಳೂ ಅತ್ಯಂತ ಮಹತ್ವ ಉಳ್ಳವುಗಳೇ ಆಗಿವೆ. ಈ ಮಂತ್ರದ ಒಂದೊಂದೇ ಶಬ್ಧದ ಬಗ್ಗೆ ವಿಚಾರ ಮಾಡೋಣ. ಮನೆಯ ಯಜಮಾನನಿಗಿರಬೇಕಾದ ಪ್ರಥಮ ಅರ್ಹತೆ ಎಂದರೆ.. . . . . .

ಊರ್ಜನ್ ಬಿಭ್ರತ್

ಊರ್ಜಮ್ ಎಂದರೆ ಪ್ರಾಣಬಲ ಅಥವಾ ಶಕ್ತಿ, ಬಿಭ್ರತ್ ಅಂದರೆ ಧಾರಣೆ ಮಾಡು, ಅಂದರೆ ಮನೆಯ ಯಜಮಾನನು ಶಕ್ತಿಯನ್ನು ಹೊಂದಿದವನಾಗಿರಬೇಕು. ಈ ಸಂಸಾರವೆಂಬುದು ಸಾಗರ. ಈ ಸಾಗರವನ್ನು ದಾಟಲು ಶಕ್ತಿ ಬೇಡವೇ? ವೈದಿಕ ಸಂಸ್ಕೃತಿಯಲ್ಲಿ ದುರ್ಬಲನಿಗೆ ಗೃಹಸ್ಥಾಶ್ರಮದಲ್ಲಿ ಪ್ರವೇಶವೇ ಇಲ್ಲ.
 ಮನು ಹೇಳುತ್ತಾನೆ ಯೋಧಾರ್ಯೋ ದುರ್ಬಲೇಂದ್ರಿಯೈ: ದುರ್ಬಲ ಇಂದ್ರಿಯ ಉಳ್ಳವರು ಮತ್ತು ಹೆದರುವವರು ಗೃಹಸ್ಥಾಶ್ರಮ ಸ್ವೀಕರಿಸಲು ಅರ್ಹರಲ್ಲ.ಅಂತವರು ಗೃಹಸ್ಥಾಶ್ರಮವನ್ನು ಪ್ರವೇಶಿಸಬಾರದು.
ಮನೆಯ ಯಜಮಾನನು ಶಕ್ತಿಶಾಲಿಯಾಗಿದ್ದರೆ ಅವನಲ್ಲಿ ಯಾರ ಬಗ್ಗೆಯೂ ದ್ವೇಷ,ಅಸೂಯೆ, ಮಾತ್ಸರ್ಯ ಭಾವನೆಗಳಿರದೆ ಎಲ್ಲರೊಡನೆ  ಪವಿತ್ರಪ್ರೇಮ ಭಾವ ಇದ್ದು ಕುಟುಂಬವು ಸಂತಸದಿಂದ ಇರುತ್ತದೆ. ಯಜಮಾನನೇನಾದರೂ ಶಕ್ತಿಹೀನನಾಗಿದ್ದರೆ ಸಣ್ಣ ಸಣ್ಣ ವಿಷಯಗಳಿಗೂ ಎಲ್ಲರ ಮೇಲೆ ಕೋಪ ಮಾಡಿಕೊಂಡು ರೇಗಾಡುತ್ತಾ  ಕುಟುಂಬದ ನೆಮ್ಮದಿಯು ಹಾಳಾಗುತ್ತದೆ. ಆದ್ದರಿಂದ ಗೃಹಸ್ಥನು ತನ್ನ ಶರೀರ ಮತ್ತು  ಇಂದ್ರಿಯಗಳನ್ನು ಶಕ್ತಿಯುತವಾಗಿ ಇಟ್ಟುಕೊಳ್ಳಬೇಕೆಂಬುದು ವೇದದ ಆಶಯ. ಯಜಮಾನನಿಗಿರಬೇಕಾದ ಎರಡನೆಯ ಅರ್ಹತೆ ಎಂದರೆ. . . . .  .

ವಸುವನಿ:
ವಸುವನೀ ಎಂದರೆ ಉತ್ತಮ ಮಾರ್ಗದಲ್ಲಿ ಧರ್ಮದಿಂದ ಧನವನ್ನು ಸಂಪಾದಿಸುವವರು ಎಂದು ಅರ್ಥ. ವಾಮ ಮಾರ್ಗದಲ್ಲಿ ಎಂದೂ ಹಣವನ್ನು  ಸಂಪಾದಿಸ ಕೂಡದು. ಇದು ವೇದದ ಆದೇಶ. ಅಗ್ನೇ ನಯ ಸುಪಥಾ ರಾಯೇ ಎಂದರೆ ಧನವನ್ನು ಸಂಪಾದಿಸಲು ನಮ್ಮನ್ನು ಉತ್ತಮ ಮಾರ್ಗದಲ್ಲಿ ಕರೆದುಕೊಂಡು ಹೋಗು, ಎಂದು  ಭಗವಂತನಲ್ಲಿ ಪ್ರಾರ್ಥಿಸುವ  ಒಂದು ವೇದಮಂತ್ರವಿದೆ. ನಮ್ಮ ಧರ್ಮಶಾಸ್ತ್ರಗಳು ಏನು ಹೇಳುತ್ತವೆ? ನೋಡೋಣ. . . .
ಅನ್ಯೇಯೇನಾಗತಾ ಲಕ್ಷ್ಮೀ: ಖದ್ಯೋತ ಇವ ದೀಪ್ಯತೇ|
ಕ್ಷಣಂ ಪ್ರಕಾಶ್ಯ ವಸ್ತೂನಿ ನಿರ್ವಾಣೇ ಕೇವಲಂ ತಮ: ||

ಅನ್ಯಾಯದಿಂದ ಸಂಪಾದಿಸಿದ ಹಣವು ಆಕ್ಷಣಕ್ಕೆ ಪ್ರಕಾಶಿಸುವಂತೆ ಭಾಸವಾಗುತ್ತದೆ. ಆದರೆ ಸ್ವಲ್ಪ ಸಮಯದ ನಂತರ ಬೆಳಕೆಲ್ಲಾ ಕರಗಿ ಅಂಧಕಾರವೇ ವ್ಯಾಪಿಸುತ್ತದೆ. ಈ ಅರಿವು ಅಧಿಕಾರಿಗಳಲ್ಲಿ,ರಾಜಕಾರಣಿಗಳಲ್ಲಿ, ವ್ಯಾಪಾರಿಗಳಲ್ಲಿ ಇದ್ದಿದ್ದರೆ ದುರ್ಮಾರ್ಗದಲ್ಲಿ ಹಣವನ್ನು ಸಂಪಾದಿಸಿ ನಂತರ ಜೈಲು ಸೇರುವ ಸಂದರ್ಭ ಬರುತ್ತಿರಲಿಲ್ಲ, ಅಲ್ಲವೇ?
ಹಾಗಾದರೆ ಹಣವನ್ನು ಹೇಗೆ ಸಂಪಾದಿಸಬೇಕು?

ಅಕೃತ್ವಾ ಪರಸಂತಾಪಮ್
ಅಗತ್ವಾ ಖಲ ನಮ್ರತಾಮ್|
ಅನುತ್ಸೃಜ್ಯ ಸತಾಂ ಮಾರ್ಗಮ್
ಯತ್ ಸ್ವಲ್ಪಮಪಿ ತದ್ ಬಹು||

ಯಾರಿಗೂ ಕಷ್ಟವನ್ನು ಕೊಡದೆ, ದುರ್ಜನರಿಗೆ ತಲೆಬಾಗದೆ, ಸನ್ಮಾರ್ಗವನ್ನು ಬಿಡದೆ, ಸ್ವಲ್ಪ ದುಡಿದರೂ ಅದೇ ಬಹಳವೆಂದು ದುಡಿದ ಸಂಪಾದನೆಯೇ ಶ್ರೇಷ್ಠ.
ವಸುವನೀ ಪದದ ಬಗ್ಗೆ ವಿಮರ್ಶೆ ಮಾಡುತ್ತಿದ್ದೆವಲ್ಲವೇ? ವಸು ಎಂಬ ಪದಕ್ಕೆ ವ್ಯವಸ್ಥಿತವಾದ ಯೋಗ್ಯ ಜೀವನವೆಂದೂ ಅರ್ಥವಿದೆ. ನಾವು ಎಷ್ಟು ಹಣ ಸಂಪಾದಿಸುತ್ತೇವೆಂಬುದಕ್ಕಿಂತ ಎಷ್ಟು ಸರಳವಾಗಿ ಕಡಿಮೆ ಖರ್ಚಿನಲ್ಲಿ ಜೀವನ ಮಾಡುತ್ತೇವೆಂಬುದೂ ಗಣನೆಗೆ ಬರುತ್ತದೆ. ಆದ್ದರಿಂದ ನೆಮ್ಮದಿಯ ಜೀವನಕ್ಕೆ ಹೆಚ್ಚು ಸಂಪಾದನೆ ಬೇಕೆಂದೇನೂ ಅಲ್ಲ, ಆದರೆ ದುಡಿಮೆಯನ್ನು ವ್ಯವಸ್ಥಿತವಾಗಿ ಖರ್ಚು ಮಾಡುತ್ತಾ ಸಂಸಾರ ಮಾಡುವವನನ್ನೂ ವಸುವನೀ ಎನ್ನಬಹುದು.
ಇನ್ನೊಂದು ಬಹಳ ಸತ್ಯವಾದ ವಿಚಾರವೆಂದರೆ ಮಿತವಾಗಿ ಹಣವನ್ನು ಬಳಸುವುದರಿಂದ ವಿಲಾಸೀ ಜೀವನಕ್ಕೆ ಅವಕಾಶವೇ ಇರುವುದಿಲ್ಲ. ಆಗ ಸಹಜವಾಗಿ ಯಾವ ರೋಗದ ಭಯ ಇರುವುದಿಲ್ಲ. ಭೋಗೇ ರೋಗಭಯಮ್ ಎಂಬ ಮಾತಿದೆ. ಭೋಗಿಸೋಣವೆಂದರೆ ರೋಗದ ಭಯ.ಇದು ಯಾರಿಗೆ? ಹೆಚ್ಚು ಹಣವಿದ್ದವರಿಗೆ ಅಲ್ಲವೇ? ನ್ಯಾಯಮಾರ್ಗದಲ್ಲಿ ದುಡಿಯುವವನಿಗೆ ಭೋಗದ ಪ್ರಶ್ನೆಯೇ ಇಲ್ಲ. ಆಗ ರೋಗದ ಭಯವೆಲ್ಲಿ? ಯಜಮಾನನಿಗಿರಬೇಕಾದ ಮೂರನೆಯ ಅರ್ಹತೆ ಎಂದರೆ. . . . .  .
ಸುಮೇಧಾ:
ಮೇಧಾವಂತನಾಗಿರಬೇಕು. ಎಲ್ಲಿ ಮೇಧಾ ಅಂದರೆ ಜ್ಞಾನವಿರುತ್ತದೆಯೋ ಅಲ್ಲಿ ಮೋಹ, ಮೂರ್ಖತೆ ಮತ್ತು ಅಂಧವಿಶ್ವಾಸಗಳಿರುವುದಿಲ್ಲ.   ಮಹಾಭಾರತದಲ್ಲಿ ಮೋಹಕ್ಕೆ ಸಿಲುಕಿದ್ದ  ದುರ್ಯೋಧನನ ಸ್ಥಿತಿ ಹೇಗಿತ್ತು ಎಂಬುದನ್ನು ಅವನ ಮಾತುಗಳಿಂದಲೇ ಕೇಳಿ. . .

ಜಾನಾಮಿ ಧರ್ಮಂ ನ ಚ ಮೇ ಪ್ರವೃತ್ತಿ:
ಜಾನಾಮ್ಯಧರ್ಮಂ ನ ಚ ಮೇ ನಿವೃತ್ತಿ:

ಧರ್ಮವೇನೆಂದು ನನಗೆ ಗೊತ್ತಿದೆ, ಆದರೆ ನನಗೆ ಪಾಲಿಸಲು ಸಾಧ್ಯವಾಗುತ್ತಿಲ್ಲ
ಅಧರ್ಮವೇನೆಂಬುದೂ ಗೊತ್ತಿದೆ, ಆದರೆ ಬಿಡಲು ಸಾಧ್ಯವಾಗುತ್ತಿಲ್ಲ.
ನಮ್ಮೆಲ್ಲರದೂ ಇದೇ ಸ್ಥಿತಿಯಲ್ಲವೇ? ಯಾವುದು ಧರ್ಮ ಯಾವುದು ಅಧರ್ಮ, ಎಂಬ ಅರಿವಿರುತ್ತದೆ ಆದರೆ ಧರ್ಮದ ದಾರಿಯಲ್ಲಿ ನಡೆಯಲು ಆಗುತ್ತಿಲ್ಲ, ಅಧರ್ಮದ ಹಾದಿಯನ್ನು ಬಿಡಲಾಗುತ್ತಿಲ್ಲ. ಇದಕ್ಕೆಲ್ಲಾ ಕಾರಣವೇನು? ವ್ಯಾಮೋಹ.
ಮನೆಯ ಯಜಮಾನನಿಗೆ ಮಕ್ಕಳಲ್ಲಿ ವ್ಯಾಮೋಹವಿದ್ದರೆ ಮಕ್ಕಳ ಅಧ: ಪತನಕ್ಕೆ ಕಾರಣನಾಗುತ್ತಾನೆ. ವ್ಯಾಮೋಹದ ಕಾರಣದಿಂದ ಮಕ್ಕಳ ತಪ್ಪು ತಂದೆಗೆ ತಪ್ಪಾಗಿ ಕಾಣುವುದೇ ಇಲ್ಲ. ಅಥವಾ ವ್ಯಾಮೋಹದ ಕಾರಣ ಮಕ್ಕಳು ತಪ್ಪು ಮಾಡಿದರೂ ನೋಡಿಕೊಂದು ಸುಮ್ಮನಿರುತ್ತಾನೆ. ವ್ಯಾಮೋಹದ ಕತ್ತಲು ಅವನಿಗೆ ಆವರಿಸಿರುತ್ತದೆ.
ಪ್ರೇಮವು ಉತ್ಥಾನಕ್ಕೆ ಕಾರಣವಾದರೆ ಮೋಹವು ಪಥನಕ್ಕೆ ಕಾರಣವಾಗುತ್ತದೆ. ಮನೆಯ ಯಜಮಾನನಿಗೆ ಮನೆಯ ಸದಸ್ಯರ ಮೇಲೆ ಪ್ರೇಮವು ಇರಬೇಕೇ ಹೊರತೂ ವ್ಯಾಮೋಹವಲ್ಲ.

ಗೃಹಸ್ಥನಿಗಿರಬೇಕಾದ ಇನ್ನೂ ಹಲವು ಗುಣಗಳ ಬಗ್ಗೆ ಮುಂದಿನ ವಾರ ನೋಡೋಣ.