Pages

Tuesday, July 1, 2014

ವೇದಭಾರತಿಯ ವಾರ್ಷಿಕೋತ್ಸವ

         ಕಳೆದ  ಎರಡು ವರ್ಷಗಳಿಂದ "ವೇದಭಾರತಿಯ" ಹೆಸರಲ್ಲಿ "ಎಲ್ಲರಿಗಾಗಿ ವೇದ" ಧ್ಯೇಯದೊಡನೆಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮುಗಿಸಿ ಎರಡನೆಯ  ವರ್ಷದ ವಾರ್ಷಿಕೋತ್ಸವಕ್ಕೆ ವೇದಭಾರತಿಯು ಸಜ್ಜಾಗುತ್ತಿದೆ. ಬರುವ ಆಗಸ್ಟ್ 16 ಮತ್ತು 17 ರಂದು ವಿಭಿನ್ನವಾಗಿ ಕಾರ್ಯಕ್ರಮಗಳನ್ನು ನಡೆಸಲು ವ್ಯವಸ್ಥೆಗಳು ಆರಂಭವಾಗಿವೆ.

         ಎಲ್ಲರಿಗಾಗಿವೇದ ಎಂಬ ಉದ್ಧೇಶದೊಡನೆ ವೇದಸುಧೆಯು 9.2.2010 ರಂದು ಆರಂಭವಾದಾಗ ಒಂದೆರಡು ವರ್ಷ ಕೇವಲ ಅಂತರ್ಜಾಲದಲ್ಲಿ ನಮ್ಮ ಚಟುವಟಿಕೆಯು   ವೇದಸುಧೆಯ ಹೆಸರಿನಲ್ಲಿ ನಡೆದು ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ ಹಲವು ಉಪನ್ಯಾಸಗಳನ್ನು ಏರ್ಪಾಡುಮಾಡಿ ಹಾಸನದ ಜನತೆಯಲ್ಲಿ ವೇದದ ನಿಜ ಅರಿವು ಮೂಡಿಸುವ ಪ್ರಯತ್ನವನ್ನು ಮಾಡಿದೆವು. 30.1.2011 ನಡೆದ ವೇದಸುಧೆಯ ಪ್ರಥಮ ವಾರ್ಷಿಕೋತ್ಸವವು ಬ್ಲಾಗ್ ಲೋಕದಲ್ಲಿ ಒಂದು ಮೈಲಿಗಲ್ಲು. ರಾಜ್ಯದ ಹಲವು    ಸ್ಥಳಗಳಿಂದ ಆಗಮಿಸಿ ಪಾಲ್ಗೊಂಡಿದ್ದ  ವೇದಸುಧೆಯ ಸುಮಾರು 500 ಅಭಿಮಾನಿಗಳ ಮಹಾ  ಮೇಳ  ಅದಾಗಿತ್ತು. ನಂತರದ ದಿನಗಳಲ್ಲಿ  ನಮ್ಮದೇ ಆದ ವೆಬ್ಸೈಟ್ vedasudhe.com ಆರಂಭವಾಯ್ತು. ನಿರಂತರ ವೇದದ ಪ್ರಚಾರ ಕಾರ್ಯ ಮುಂದುವರೆಯಿತು.

ವೇದಾಧ್ಯಾಯೀ ಶ್ರೀ ಸುಧಾಕರಶರ್ಮರೊಡನೆ   ನಡೆದ ಮುಕ್ತ ಸಂವಾದ ಕಾರ್ಯಕ್ರಮವನ್ನು ಹಾಸನ ನಗರ ಜನತೆಗೆ ಕೇಬಲ್ ಟಿ.ವಿ.ಮೂಲಕ  ನೇರ ಪ್ರಸಾರ ಮಾಡಿ ತೋರಿಸಲಾಯ್ತು. 

ನಂತರ   2012 ಆಗಸ್ಟ್ 19 ರಂದು  ಬೇಲೂರಿನ    ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮರ ಮಾರ್ಗದರ್ಶನದಲ್ಲಿ  ವೇದ ಪಾಠದ ಆರಂಭದೊಡನೆ "ವೇದಭಾರತಿ" ಹೆಸರಿನ ಸಂಘಟನೆಯನ್ನು ಆರಂಭಿಸಲಾಯ್ತು.

        ನಂತರದ ದಿನಗಳಲ್ಲಿ  ನಡೆದ ವೇದೋಕ್ತಜೀವನ ಶಿಬಿರ, ಬಾಲಶಿಬಿರ, ಗೋರಕ್ಷೆಗಾಗಿ   ಪಂಡಿತ್ ಅಜಿತ್ ಕಡ್ಕಡೆ ಯವರ ಸಂಗೀತ ಕಛೇರಿ, ಪೂಜ್ಯ ಚಿದ್ರೂಪಾನಂದ ಸರಸ್ವತೀ ಸ್ವಾಮೀಜಿಯವರಿಂದ ಗೀತಾಜ್ಞಾನಜ್ಞ ...ಒಂದಕ್ಕಿಂತ ಒಂದು ಅದ್ಭುತ. ಇವುಗಳೆಲ್ಲದರ ಜೊತೆಗೆ  ಹಾಸನದ ಸ್ಥಳೀಯ ಪತ್ರಿಕೆ ಜನಮಿತ್ರ,ಜನಹಿತ ಹಾಗೂ ವಿಕ್ರಮ ವಾರಪತ್ರಿಕೆಗಳಲ್ಲಿ  ವೇದದ ಅಂಕಣಗಳು  ವೇದಭಾರತಿಯ ಕೆಲಸದ ಭಾಗವಾಗಿಯೇ ಆರಂಭವಾದವು.

ಎಲ್ಲರನ್ನೂ ಹೆಚ್ಚು  ಆಕರ್ಶಿಸಿದ್ದು ನಮ್ಮ ನಿತ್ಯ ಅಗ್ನಿಹೋತ್ರ ಕಾರ್ಯಕ್ರಮ. ನಿತ್ಯವೂ ಸಂಜೆ 6.00 ರಿಂದ 7.00 ರವರಗೆ ನಡೆಯುವ ಅಗ್ನಿಹೋತ್ರ ಮತ್ತು  ವೇದ ಪಾಠದಲ್ಲಿ ಪಾಲ್ಗೊಳ್ಳುತ್ತಿರುವ ಸುಮಾರು 15 ಜನ ಮಾತೆಯರು ಮತ್ತು 15ಜನ ಪುರುಷರು ವೇದಭಾರತಿಗೆ ಶಕ್ತಿಯಾಗಿ, ಬೆನ್ನೆಲುಬಾಗಿ ನಿಂತಿದ್ದಾರೆ. 

ಈ ಒಂದು ಗುಂಪು ಸಕ್ರಿಯವಾಗಿರುವುದರಿಂದ ಮೈಸೂರು, ಅರಸೀಕೆರೆ, ಹಂಪಾಪುರ,ಬೆಂಗಳೂರು ,ಕೊಣನೂರು ಸಮೀಪದ ತರಗಳಲೆ ಹಾಗೂ ಹಾಸನ ನಗರದ ಹಲವೆಡೆಗಳಲ್ಲಿ ಅಗ್ನಿಹೋತ್ರವನ್ನು ಒಂದು ಅಭಿಯಾನದಂತೆ ಮಾಡುತ್ತಿದ್ದು ಈಗಾಗಲೇ ಸಾವಿರಾರು ಜನರಿಗೆ ವೇದದ ಅರಿವು ಮೂಡಿಸುವ ಪ್ರಯತ್ನ ನಡೆದಿರುವುದು ವೇದಭಾರತಿಯ ಹೆಗ್ಗಳಿಕೆಯೇ ಸರಿ.

ಈ ಹಿಂದೆ ಯಾವುದೇ ಕಾರ್ಯಕ್ರಮ ನಡೆಸಬೆಕಾಗಿದ್ದರೂ ವೈಯಕ್ತಿಕ ಸಾಮರ್ಥ್ಯದ   ಮೇಲೆ   ನಡೆಸಲಾಗುತ್ತಿತ್ತು.ಆದರೆ ಈಗ ಕಣ್ಮುಂದೆ ಜವಾಬ್ದಾರಿಯನ್ನು ಹೆಗಲ ಮೆಲೆ ಹೊರುವ 25-30 ಕಾರ್ಯಕರ್ತರ   ಗುಂಪು ಸಿದ್ಧವಾಗಿದೆ. ವೇದಭಾರತಿಯ ಹರ್ಷಕ್ಕೆ ಇದಕ್ಕಿಂತ ಹೆಚ್ಚಿನದೇನು ಬೇಕು?

ಇನ್ನೂ ಹೆಚ್ಚು ಸಂತಸ ಪಡುವ ಸಂಗತಿ ಎಂದರೆ  ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಪೂಜ್ಯ ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀರಾಮಕೃಷ್ಣಾಶ್ರಮದ ಪೂಜ್ಯ ಬೋಧಸ್ವರೂಪಾನಂದರು,ಪೂಜ್ಯ ಯುಕ್ತೇಶಾನಂದರು, ಬರಮಸಾಗರದ ಪೂಜ್ಯ ಬ್ರಹ್ಮಾನಂದ ತೀರ್ಥಭಿಕ್ಷು ಅವರಲ್ಲದೆ ಹಲವಾರು ಮಹನೀಯರು ವೇದಭಾರತಿಯ ಕಾರ್ಯಕ್ರಮಗಲಲ್ಲಿ ಪಾಲ್ಗೊಂಡು ಸ್ತ್ರೀಯರು ಪಠಿಸುವ ವೇದಮಂತ್ರವನ್ನು ಕೇಳಿ ಸಂತಸ ವ್ಯಕ್ತಪಡಿಸಿ ಆಶೀರ್ವದಿಸಿದ್ದಾರೆ.

ಈಭಾರಿಯ  ವಾರ್ಷಿಕೋತ್ಸವದಲ್ಲಿ  ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು, RSS ನ ಜ್ಯೇಷ್ಠ ಪ್ರಚಾರಕರಾದ ಶ್ರೀ ಸು.ರಾಮಣ್ಣನವರು, ವೇದತರಂಗದ ಸಂಪಾದಕರಾದ ಶ್ರೀ ಶೃತಿ ಪ್ರಿಯರು, ಮೈತ್ರೇಯಿ ಗುರುಕುಲದ ಆಚಾರ್ಯೇ ಶ್ರೀಮತಿ ಅಮೃತವರ್ಷಿಣೀ ಉಮೇಶ್  ಇವರೆಲ್ಲಾ ಪಾಲ್ಗೊಂದು ಮಾರ್ಗದರ್ಶನ ಮಾಡಲಿದ್ದಾರೆ. ವೇದಸುಧೆಯ ಅಭಿಮಾನಿಗಳಿಗೆ ಸ್ವಾಗತವಿದೆ.

Sunday, June 29, 2014

ಯಶಸ್ಸಿನ ಪಥದಲ್ಲಿ ಸಾಗುತ್ತಿರುವ ವೇದಭಾರತಿ

ತೇ ಅಜ್ಯೇಷ್ಠಾ ಅಕನಿಷ್ಠಾಸ ಉದ್ಭಿದೋ | ಮಧ್ಯಮಾಸೋ ಮಹಸಾ ವಿವಾವೃಧುಃ || 
ಸುಜಾತಾಸೋ ಜನುಷಾ ಪೃಶ್ನಿಮಾತರೋ | ದಿವೋ ಮರ್ಯಾ ಆ ನೋ ಅಚ್ಛಾ ಜಿಗಾತನ || [ಋಗ್. ೫.೫೯.೬]
"ಮಾನವರಲ್ಲಿ ಯಾರೂ ಜನ್ಮತಃ ಜ್ಯೇಷ್ಠರೂ ಅಲ್ಲ, ಕನಿಷ್ಠರೂ ಅಲ್ಲ, ಮಧ್ಯಮರೂ ಅಲ್ಲ. ಎಲ್ಲರೂ ಉತ್ತಮರೇ. ತಮ್ಮ ತಮ್ಮ ಶಕ್ತಿಯಿಂದ ಮೇಲೇರಬಲ್ಲವರಾಗಿದ್ದಾರೆ."
     ಹಾಸನದ ವೇದಭಾರತಿ ತನ್ನದೇ ಆದ ರೀತಿಯಲ್ಲಿ ಸಮಾಜಮುಖಿ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ವೇದ ಅರ್ಥಾತ್ ಜ್ಞಾನ ಸಮಾಜದ ಎಲ್ಲ ಆಸಕ್ತರಿಗೂ ತಲುಪಲಿ ಎಂಬ ಸದಾಶಯದಿಂದ 'ಎಲ್ಲರಿಗಾಗಿ ವೇದ' ಎಂಬ ಘೋಷ ವಾಕ್ಯದೊಂದಿಗೆ ಸುಮಾರು ಎರಡು ವರ್ಷಗಳ ಹಿಂದೆ ಪ್ರಾರಂಭವಾದ ಈ ಸಂಸ್ಥೆಯನ್ನು ಪ್ರಾರಂಭದಲ್ಲಿ ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರ ಮಾರ್ಗದರ್ಶನದಲ್ಲಿ ಪೋಷಿಸಿ ಬೆಳೆಸಿದವರು ಹರಿಹರಪುರ ಶ್ರೀಧರ್ ಮತ್ತು ಕವಿನಾಗರಾಜರು. ನಂತರದಲ್ಲಿ ಹಲವಾರು ಸಮಾನಮನಸ್ಕರ ಬೆಂಬಲ, ಪ್ರೋತ್ಸಾಹಗಳೂ ಸಿಕ್ಕಿ ಇಂದು ಒಂದು ಗುರುತಿಸಲ್ಪಡುವ ಸಂಘಟನೆಯಾಗಿದೆ. ಶ್ರೀ ಸುಧಾಕರ ಶರ್ಮರವರು ವೇದದ ಬೆಳಕಿನಲ್ಲಿ ನೀಡಿದ ಹಲವು ಉಪನ್ಯಾಸಗಳಿಂದ ಪ್ರಭಾವಿತರಾಗಿ 'ವೇದಸುಧೆ' ಹೆಸರಿನಲ್ಲಿ ಒಂದು ಅಂತರ್ಜಾಲ ಬ್ಲಾಗ್ ಅನ್ನು ಅಕ್ಟೋಬರ್, ೨೦೧೦ರಲ್ಲಿ ಪ್ರಾರಂಭಿಸಲಾಯಿತು. ಈ ಬ್ಲಾಗ್ ಎಷ್ಟು ಜನಪ್ರಿಯವಾತೆಂದರೆ ಇದರಲ್ಲಿ ವೇದದ ಹಿನ್ನೆಲೆಯಲ್ಲಿನ ಹಲವಾರು ಬರಹಗಳಿಗೆ, ಚರ್ಚೆಗಳಿಗೆ ಸಿಕ್ಕ ಪ್ರತಿಕ್ರಿಯೆಗಳು ಪ್ರೋತ್ಸಾಹದಾಯಕವಾಗಿದ್ದವು. ಆರೋಗ್ಯಕರ ಚರ್ಚೆಗಳು ಜ್ಞಾನದ ಹರವನ್ನು ಹೆಚ್ಚಿಸಲು ಸಹಕಾರಿಯಾದವು. ಇದುವರೆಗೆ ೧೨೨೦ ಬರಹಗಳು ಈ ಬ್ಲಾಗಿನಲ್ಲಿ ಪ್ರಕಟವಾಗಿ ಇದುವರೆವಿಗೆ ಸುಮಾರು ೧,೨೫,೦೦೦ ಪುಟವೀಕ್ಷಣೆಗಳಾಗಿವೆ. ಬ್ಲಾಗ್ ಪ್ರಾರಂಭವಾದ ನಂತರದಲ್ಲಿ ಒಂದು ವರ್ಷ ಪೂರ್ಣವಾದ ಸಂದರ್ಭದಲ್ಲಿ ವಾರ್ಷಿಕೋತ್ಸವ ಮಾಡಿ ಆ ಸಂದರ್ಭದಲ್ಲಿ ವಿದ್ವಾಂಸರುಗಳಿಂದ ವಿಚಾರಗೋಷ್ಠಿ , ಅಗ್ನಿಹೋತ್ರದ ಪ್ರಾತ್ಯಕ್ಷಿಕೆ, ವೇದದ ವಿಚಾರಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದು ಹೇಗೆ ಎಂಬ ಉಪನ್ಯಾಸ ಏರ್ಪಡಿಸಲಾಗಿತ್ತು. ೨೦೧೧ರಲ್ಲಿ ವೇದಸುಧೆ ಹೆಸರಿನಲ್ಲಿ ಒಂದು ವೆಬ್ ಸೈಟ್ ಅನ್ನು ಪ್ರಾರಂಭಿಸಲಾಯಿತು. ಈ ವೆಬ್ ಸೈಟಿನಲ್ಲಿ ಅನೇಕ ಪ್ರಬುದ್ಧ ವೈಚಾರಿಕ ಬರಹಗಳು, ಮಾಹಿತಿಗಳು, ವಿಡಿಯೋ, ಆಡಿಯೋಗಳು ಸಾರ್ವಜನಿಕರ ಅವಗಾಹನೆಗೆ ಲಭ್ಯವಿದೆ. ಬ್ಲಾಗ್ ಮತ್ತು ವೆಬ್ ಸೈಟಿನ ವಿಳಾಸ: 

     ನಂತರದ ದಿನಗಳಲ್ಲಿ ಏರ್ಪಡಿಸಿದ್ದ ಶ್ರೀ ಸುಧಾಕರ ಶರ್ಮರಿಂದ ಒಂದು ವಾರದ ಕಾಲ ಉಪನ್ಯಾಸ ಮಾಲೆ, ಸಾರ್ವಜನಿಕರೊಡನೆ ಮುಕ್ತ ಸಂವಾದ ಜನಮನವನ್ನು ಸೆಳೆಯುವಲ್ಲಿ, ವೈಚಾರಿಕ ಚಿಂತನೆ ಉದ್ದೀಪಿಸುವಲ್ಲಿ ಯಶಸ್ವಿಯಾದವು. ಕಳೆದ ವರ್ಷ ಮೂರು ದಿನಗಳ 'ವೇದೋಕ್ತ ಜೀವನ ಶಿಬಿರ' ನಡೆಸಿದ್ದು ಆ ಶಿಬಿರದಲ್ಲಿ ಹಾಸನ ಜಿಲ್ಲೆಯ ೩೦ ಮತ್ತು ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ೪೦ ಶಿಬಿರಾರ್ಥಿಗಳು ಭಾಗವಹಿಸಿದ್ದರು. ದೂರದ ಪೂನಾದಿಂದಲೂ ಒಬ್ಬರು ಭಾಗವಹಿಸಿದ್ದರು. ಪ್ರತಿದಿನ ಸಾಯಂಕಾಲ ಸಾರ್ವಜನಿಕರಿಗೆ ಉಪನ್ಯಾಸ ಏರ್ಪಡಿಸಿತ್ತು. ಕೊನೆಯ ದಿನದಂದು ನಾಲ್ವರು ಮಹಿಳೆಯರೂ ಸೇರಿದಂತೆ ಏಳು ಜನರು ಉಪನಯನ ಸಂಸ್ಕಾರ ಪಡೆದು ಯಜ್ಞೋಪವೀತ ಧಾರಣೆ ಮಾಡಿಸಿಕೊಂಡಿದ್ದು ಉಲ್ಲೇಖನೀಯ. ಇದು ಟಿವಿಯ ವಿವಿಧ ಚಾನೆಲ್ಲುಗಳ ಮೂಲಕ ಬಿತ್ತರವಾಗಿ ಗಮನ ಸೆಳೆದಿತ್ತು. ಸ್ವಾಮಿ ಚಿದ್ರೂಪಾನಂದಜಿಯವರಿಂದ ಒಂದು ವಾರದ ಕಾಲ 'ಗೀತಾಜ್ಞಾನಯಜ್ಞ' ನಡೆಸಲಾಯಿತು. ಕಳೆದ ವರ್ಷದಿಂದ ಮಕ್ಕಳಲ್ಲೂ ವೇದಾಭ್ಯಾಸದಲ್ಲಿ ಆಸಕ್ತಿ ಮೂಡಿಸುವ ಸಲುವಾಗಿ ಬಾಲಶಿಬಿರಗಳನ್ನು ನಡೆಸಲಾಗುತ್ತಿದೆ. ಶಿಬಿರದಲ್ಲಿ ಭಾಗವಹಿಸಿದ ಮಕ್ಕಳು ಈಗಲೂ ವೇದಮಂತ್ರಗಳನ್ನು ಹೇಳುತ್ತಿರುವುದು, ಕಲಿಕೆ ಮುಂದುವರೆಸುತ್ತಿರುವುದು ಮುದ ನೀಡುವ ಸಂಗತಿಯಾಗಿದೆ.
     ವೇದ ಎಂದರೆ ಕೇವಲ ಪೂಜಾ ಮಂತ್ರಪಾಠಗಳಲ್ಲ, ಒಂದು ವರ್ಗಕ್ಕೆ ಮೀಸಲಲ್ಲ. ಈ ಜ್ಞಾನ ಸಂಪತ್ತು ಸಮಸ್ತ ಮಾನವಕುಲದ ಆಸ್ತಿಯಾಗಿದ್ದು ಎಲ್ಲರೂ ಇದರ ಪ್ರಯೋಜನ ಪಡೆಯಲು ಅರ್ಹರು. ವೇದಗಳಲ್ಲಿ ಎಲ್ಲೂ ಅಸಮಾನತೆಯ ಸೋಂಕಿಲ್ಲ, ಬದಲಾಗಿ ಸಮಸ್ತ ಜೀವರಾಶಿಯ ಶ್ರೇಯೋಭಿವೃದ್ಧಿ ಬಯಸುವ ಸಂದೇಶಗಳಿವೆ. ವೇದಗಳನ್ನು ಪುರಾಣಗಳು ಮತ್ತು ಕಟ್ಟುಕಥೆಗಳೊಂದಿಗೆ ಸೇರಿಸಿ ಅಥವ ಸಮೀಕರಿಸಿ ವಿಶ್ಲೇಷಿಸುವುದು ವೇದಕ್ಕೆ ಬಗೆಯುವ ಅಪಚಾರವಾಗುತ್ತದೆ. ಕರುಣಾಮಯಿ ಪರಮಾತ್ಮ ಜೀವಜಗತ್ತಿನ ವಿಚಾರದಲ್ಲಿ ಯಾವುದೇ ರೀತಿಯ ತಾರತಮ್ಯ ಮಾಡಿಲ್ಲ. ಇವನು ಆಸ್ತಿಕ, ನನ್ನನ್ನು ಹಾಡಿ ಹೊಗಳುತ್ತಾನೆ, ಪೂಜಿಸುತ್ತಾನೆ ಎಂದು ಅವನಿಗೆ ವಿಶೇಷ ಅನುಗ್ರಹ ಕೊಡುವುದಿಲ್ಲ. ಅವನು ನಾಸ್ತಿಕ, ನನ್ನನ್ನು ನಂಬುವುದಿಲ್ಲ, ಹೀಗಳೆಯುತ್ತಾನೆ ಎಂದುಕೊಂಡು ಅವನಿಗೆ ಅನ್ನ, ನೀರು ಸಿಗದಂತೆ ಮಾಡುವುದೂ ಇಲ್ಲ. ಬಿಸಿಲು, ಮಳೆ, ಗಾಳಿ, ಬೆಂಕಿ, ಆಕಾಶಗಳೂ ಸಹ ಅನುಸರಿಸುವುದು ಪರಮಾತ್ಮನ ತಾರತಮ್ಯವಿಲ್ಲದ ಭಾವಗಳನ್ನೇ ಅಲ್ಲವೇ? ಹೀಗಿರುವಾಗ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಸರಿ, ತಪ್ಪುಗಳ ವಿವೇಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುವ, ಪೂರ್ವಾಗ್ರಹಗಳನ್ನು ಬದಿಗಿಟ್ಟು ಚಿಂತನೆ ಮಾಡುವ ಮನೋಭಾವ ಮೂಡಿದರೆ ಅದು ನಿಜಕ್ಕೂ ಒಂದು ವೈಚಾರಿಕ ಕ್ರಾಂತಿಯೆನಿಸುತ್ತದೆ.  ಈ ನಿಟ್ಟಿನಲ್ಲಿ ಜನಜಾಗೃತಿ ಮಾಡಲು ವೇದಭಾರತಿ ಎರಡು ವರ್ಷಗಳ ಹಿಂದೆ ಯಾವುದೇ ಜಾತಿ, ಮತ, ಪಂಗಡ, ಲಿಂಗ, ವಯಸ್ಸಿನ ತಾರತಮ್ಯವಿಲ್ಲದೆ ಆಸಕ್ತ ಎಲ್ಲರಿಗೂ ವೇದಮಂತ್ರಗಳನ್ನು ಅಭ್ಯಸಿಸುವ ಅವಕಾಶ ಕಲ್ಪಿಸಿ ಸಾಪ್ತಾಹಿಕ ವೇದಾಭ್ಯಾಸ ತರಗತಿ ಪ್ರಾರಂಭಿಸಿತು. ಒಂದೆರಡು ತಿಂಗಳ ನಂತರ ಇದು ಪ್ರತಿನಿತ್ಯದ ತರಗತಿಯಾಗಿ ಮಾರ್ಪಟ್ಟಿದೆ.  ಕಳೆದ ಏಳೆಂಟು ತಿಂಗಳುಗಳಿಂದ ನಿತ್ಯ ಅಗ್ನಿಹೋತ್ರವನ್ನು ಸಾಮೂಹಿಕವಾಗಿ ಮಾಡಲಾಗುತ್ತಿದೆ. ಅಗ್ನಿಹೋತ್ರದ ಮಹತ್ವ, ಮಂತ್ರಗಳ ಅರ್ಥವನ್ನು ಜನರಿಗೆ ಪರಿಚಯಿಸುವ ಕೆಲಸವನ್ನೂ ಮಾಡಲಾಗುತ್ತಿದೆ. ಮೈಸೂರು, ಬೆಂಗಳೂರು, ಹಂಪಾಪುರ, ಅರಸಿಕೆರೆ ಮುಂತಾದೆಡೆಯಲ್ಲೂ ಈ ಪರಿಚಯ ಕಾರ್ಯ, ಜಾಗೃತಿ ಮೂಡಿಸುವ ಕೆಲಸಗಳಾಗಿವೆ. 
     ಪ್ರತಿನಿತ್ಯ ಹಾಸನದ ಹೊಯ್ಸಳನಗರದ 'ಈಶಾವಾಸ್ಯಮ್'ನಲ್ಲಿ ಸಾಯಂಕಾಲ ೬ರಿಂದ೭ರವರೆಗೆ ನಡೆಯುವ ವೇದಾಭ್ಯಾಸ ಸತ್ಸಂಗದ ಸ್ವರೂಪ ಪಡೆದುಕೊಂಡಿದೆ. ಪರಮಾತ್ಮಸ್ತುತಿ, ಅಗ್ನಿಹೋತ್ರ, ನಂತರ ವೇದಮಂತ್ರಗಳ ಸಾರವೆಂಬಂತಿರುವ ಎರಡು ಭಜನೆಗಳು, ವೇದಮಂತ್ರಗಳ ಅಭ್ಯಾಸ ನಡೆಯುತ್ತದೆ. ವೇದಮಂತ್ರಗಳ ಅರ್ಥ ತಿಳಿಸುವುದರೊಂದಿಗೆ ಆರೋಗ್ಯಕರ ಚರ್ಚೆಗೂ ಅವಕಾಶವಿರುತ್ತದೆ. ಆಗಾಗ್ಯೆ ಸಾಧು-ಸಂತರ, ಜ್ಞಾನವೃದ್ಧರ ಉಪನ್ಯಾಸಗಳನ್ನೂ ಏರ್ಪಡಿಸಲಾಗುತ್ತದೆ. ಪ್ರತಿನಿತ್ಯ ಸುಮಾರು ೨೦ರಿಂದ೩೦ ಆಸಕ್ತರು ಪಾಲುಗೊಳ್ಳುತ್ತಿದ್ದಾರೆ. ಆಸಕ್ತಿ ಇರುವ ಯಾರಿಗೇ ಆಗಲಿ, ಇಲ್ಲಿ ಮುಕ್ತ ಪ್ರವೇಶವಿದೆ. ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಕೇವಲ ಸ್ವಂತದ ಅಭಿವೃದ್ಧಿಗಾಗಿ ಬಯಸುವುದಲ್ಲ, ಸಮಾಜಮುಖಿಯಾಗಿ ನಮ್ಮ ನಡವಳಿಕೆಗಳು, ಮನೋಭಾವ ವೃದ್ಧಿಸಲಿ ಎಂಬ ಸದುದ್ದೇಶದ ಚಟುವಟಿಕೆಗಳನ್ನು ನಡೆಸುವುದು, ಸಜ್ಜನ ಶಕ್ತಿಯ ಜಾಗರಣೆಗೆ ತನ್ನದೇ ಆದ ರೀತಿಯಲ್ಲಿ ಮುಂದುವರೆಯುವುದು ವೇದಭಾರತಿಯ ಧ್ಯೇಯವಾಗಿದೆ. ವೇದದ ಈ ಕರೆಯನ್ನು ಸಾಕಾರಗೊಳಿಸುವತ್ತ ಸಜ್ಜನರು ಕೈಗೂಡಿಸಲಿ ಎಂದು ಆಶಿಸೋಣ.
ಸಮಾನೀ ವ ಆಕೂತಿಃ ಸಮಾನಾ ಹೃದಯಾನಿ ವಃ | ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ || [ಅಥರ್ವ.೬.೬೪.೩]
"ನಿಮ್ಮ ಹಿತವು ಒಂದಿಗೇ ಆಗುವಂತೆ, ನಿಮ್ಮ ಮನಃಕಾಮನೆ ಸಮಾನವಾಗಿರಲಿ. ನಿಮ್ಮ ಹೃದಯಗಳು ಸಮಾನವಾಗಿರಲಿ. ನಿಮ್ಮ ಮನಸ್ಸುಗಳು ಸಮಾನವಾಗಿರಲಿ."
-ಕ.ವೆಂ.ನಾಗರಾಜ್.

ಜನಮಿತ್ರದಲ್ಲಿ: ದಿ. 8.6.2014ರಂದು ಪ್ರಕಟಿತ.

ಜನಹಿತದಲ್ಲಿ 9.6.2014ರಂದು ಪ್ರಕಟಿತ:



Saturday, June 28, 2014

ಏಕಲ್ ವಿದ್ಯಾಲಯದ ಆಚಾರ್ಯರ ಅಭ್ಯಾಸ ವರ್ಗ

ಹಾಸನ ಜಿಲ್ಲೆಯ ಕೊಣನೂರು ಸಮೀಪ ಇರುವ ತರಗಳಲೆಯಲ್ಲಿ ನಡೆದ ಏಕಲ್ ವಿದ್ಯಾಲಯದ ಆಚಾರ್ಯರ ಅಭ್ಯಾಸ ವರ್ಗದಲ್ಲಿ ಹಾಸನ ವೇದಭಾರತಿಯ ಸದಸ್ಯರು ಪಾಲ್ಗೊಂಡು ಅಗ್ನಿಹೋತ್ರ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಶ್ರೀ ಹರಿಹರಪುರಶ್ರೀಧರ್ ಅವರು ವೇದದ ಸರಳ ಪರಿಚಯಮಾಡಿಕೊಟ್ಟು  ವೇದವು ಎಲ್ಲರಿಗಾಗಿ  ಎಂದು ವಿವರಿಸಿದರು. ಅಗ್ನಿಹೋತ್ರದ ಅರ್ಥವನ್ನು ತಿಳಿದ ಆಚಾರ್ಯರುಗಳು ತಾವು ಅಗ್ನಿಹೋತ್ರ ಕಲಿಯುವ ಆಸಕ್ತಿ ವ್ಯಕ್ತಪಡಿಸಿದರು.ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿರುವ ಏಕಲ್ ವಿದ್ಯಾಲಯ ಚಟುವಟಿಕೆಗಳು ಪ್ರಶಂಸನೀಯವಾಗಿವೆ.












Tuesday, June 24, 2014

ಹಾಸನದ ಕ.ವಿ.ಪ್ರ.ನಿ.ನಿ ಅಧಿಕಾರಿಗಳು ಮತ್ತು ನೌಕರ ವೃಂದದಿಂದ ಗುರುವಂದನಾ ಕಾರ್ಯಕ್ರಮದಲ್ಲಿ ಅಗ್ನಿಹೋತ್ರ


ಹಾಸನದ ಕ.ವಿ.ಪ್ರ.ನಿ.ನಿ ಮತ್ತು ಸೆಸ್ಕ್ ಅಧಿಕಾರಿಗಳು ಮತ್ತು ನೌಕರರು ಕೆ.ಇ.ಬಿ.ಸೀತಾರಾಮ ಮಂದಿರದಲ್ಲಿ ಆದಿಚುಂಚನಗಿರಿ ಶ್ರೀ ಕ್ಷೇತ್ರದ ಪೀಠಾಧಿಪತಿಗಳಾದ ಜಗದ್ಗುರು ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸರಸ್ವತೀ ಸ್ವಾಮೀಜಿಯವರಿಗೆ ದಿನಾಂಕ ೨೪.೬.೨೦೧೪ ರಂದು ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಹಾಸನದ ವೇದಭಾರತೀ ಸದಸ್ಯರಿಂದ ಅಗ್ನಿಹೋತ್ರ ನಡೆದು ಶ್ರೀಗಳು ಪೂರ್ಣಾಹುತಿಯನ್ನು ಸಮರ್ಪಿಸಿ ವೇದದ ಮಹತ್ವದ ಬಗ್ಗೆ ಉಪನ್ಯಾಸವನ್ನು ನೀಡಿದರು. ಸ್ವಾಮೀಜಿಯವರ ಉಪನ್ಯಾಸದ ವೀಡಿಯೋವನ್ನು ಸಧ್ಯದಲ್ಲೇ ಅಳವಡಿಸಲಾಗುವುದು.