Pages

Tuesday, February 9, 2010

ಯಜ್ಞ

ಯಜ್ಞ:[ವೇದಾಧ್ಯಾಯೀ ಸುಧಾಕರ ಶರ್ಮರ ಉಪನ್ಯಾಸದ ಆಯ್ದ ಭಾಗ]
ಕೇವಲ ಸಮಿತ್ತನ್ನು ಹೋಮಕುಂಡಕ್ಕೆ ಹಾಕಿ ಸ್ವಾಹಾ, ಇದಂ ನಮಮ, ಎನ್ನುವುದಕ್ಕೇ ಯಜ್ಞದ ಅರ್ಥ ಮುಗಿದುಬಿಡುವುದಿಲ್ಲ. ಇದಕ್ಕೆ ಇನ್ನೂ ವಿಸ್ತಾರವಾದ ಅರ್ಥವಿದೆ.ಯಜ್ಞವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಅದು ಯಾವಧಾತುವಿನಂದ ಬಂತು ಅಲ್ಲಿಂದಲೇ ತಿಳಿಯಬೇಕು.ಆಗ ನಮಗೆ ಸರಿಯದ ಅರ್ಥ ಸಿಗುತ್ತದೆ.ನಾವು ವೇದಾಂಗಕ್ಕೆ ಹೋಗಿ ಆರ್ಶೇಯ ಕ್ರಮದಲ್ಲಿ ಅರ್ಥ ನೋಡುವುದು ಸರಿಯಾದ ಕ್ರಮ. ಯಜ್ಞ ಎನ್ನುವುದಕ್ಕೆ ಅರ್ಥ ಹುಡುಕಿದಾಗ -ಯಜ್ ದೇವಪೂಜಾ ಸಂಗತಿಕರಣ ದಾನೇಶು, ಇದು ಮೂಲದಲ್ಲಿರುವ ಧಾತು. ದೇವಪೂಜ, ಸಂಗತಿಕರಣ ಮತ್ತು ದಾನ ಎಂಬ ಮೂರು ಪದಗಳು ಇದರಿಂದ ಮೂಡುತ್ತವೆ. ಶತಪತಬ್ರಾಹ್ಮಣದಲ್ಲಿ ಹೇಳುತ್ತದೆ "ಯಜ್ಞೋವೈಶ್ರೇಷ್ಠತಮಂ ಕರ್ಮ" ಶ್ರೇಷ್ಠತಮ ಕರ್ಮ ಎಂದಾಗ [ಶ್ರೇಷ್ಠ-ಶ್ರೇಶ್ಠತರ-ಶ್ರೇಷ್ಠತಮ]ಅಂದರೆ ಅತ್ಯಂತಶ್ರೇಷ್ಠವಾದ ಕರ್ಮಗಳಿಗೆ ಯಜ್ಞ ಎಂದು ಅರ್ಥೈಸಲಾಗಿದೆ.ನಾವು ಮಾಡುವ ಆಲೋಚನೆಗಳು, ನಾವು ಆಡುವ ಮಾತುಗಳು, ನಾವು ಮಾಡುವ ಕೆಲಸ ಎಲ್ಲದರಿಂದಲೂ ನಾವು ಯಜ್ಞವನ್ನು ಮಾಡಲು ಸಾಧ್ಯವಿದೆ. ಕೇವಲ ಹೋಮಕುಂಡದ ಅಗ್ನಿಯಿಂದ ಮಾಡುವ ಯಜ್ಞವನ್ನಷ್ಟೇ ನಾವು ಯಜ್ಞ ಎಂದು ಭಾವಿಸಬೇಕಿಲ್ಲ. ನಾವು ಮಾಡುವ ಯಾವುದೇ ಕೆಲಸವನ್ನು ಶ್ರೇಷ್ಠತಮವಾಗಿ ಮಾಡಿದರೆ ಅದು ಯಜ್ಞ ಎನಿಸಿಕೊಳ್ಳುತ್ತದೆ. ನಾವು ಪುರೋಹಿತರಿಂದ ಯಜ್ಞಕುಂಡದ ಎದುರು ಮಾಡುವ ಹೋಮವನ್ನು ಮಾತ್ರವೇ ಯಜ್ಞ ವೆಂದುಭಾವಿಸುತ್ತೇವೆ ,ಆದರೆ ಇದೂ ಕೂಡ ಒಂದು ಯಜ್ಞವೇ ಹೊರತೂ ಯಜ್ಞ ವೆಂದರೆ ಇಷ್ಟೇ ಅಲ್ಲ. ನಾವು ಶ್ರೇಷ್ಠತಮವಾಗಿ ಮಾಡುವ ಪ್ರತಿಯೊಂದು ಕೆಲಸವೂ ಯಜ್ಞವೇ ಆಗಿದೆ.ಈ ಒಂದು ವಿಶಾಲವಾದ ಅರ್ಥವು ದೊರೆತಾಗ ನಮ್ಮ ಇಡೀ ಜೀವನವನ್ನೇ ಯಜ್ಞವನ್ನಾಗಿ ಮಾಡಿಕೊಳ್ಳಬಹುದು.ನಾವು ಇಡೀ ದಿನವನ್ನೇ ಯಜ್ಞವನ್ನಾಗಿ ಮಾಡಿಕೊಳ್ಳಬಹುದು.ನಾವು ಮಾಡುವ ಆಲೋಚನೆಗಳು ಇದಕ್ಕಿಂತ ಇನ್ನೂ ಶ್ರೇಷ್ಠತಮವಾಗಿ ಮಾಡಬಹುದೇ ಎಂದು ಯೋಚಿಸಿ ಮಾಡಿದಾಗ ಅದು ಯಜ್ಞವಾಗುತ್ತದೆ.ನಾವು ಆಡುವ ಮಾತು ಇನ್ನೂ ಶ್ರೇಷ್ಠತಮವಾಗಿ ಆದಬಹುದೇ ಎಂದು ಆಲೋಚಿಸಿ ಆಡಿದಾಗ ಅದೂ ಯಜ್ಞವೇ ಆಗುತ್ತದೆ.ಮಾಡುವ ಕೆಲಸ ಯಾವುದೇ ಇರಬಹುದು ಅದನ್ನು ಶ್ರೇಷ್ಠತಮವನ್ನಾಗಿ ಮಾಡಿಗಾಗ ಅದೂ ಯಜ್ಞವೇ ಆಗುತ್ತದೆ. ನಾವು ಅಡಿಗೆ ಮಾಡುವ ಕೆಲಸವೇ ಆಗಲೀ, ಕಸ ಗುಡಿಸುವ ಕೆಲಸವೇ ಆಗಲೀ, ಸೌದೆ ಒಡೆಯುವ ಕೆಲಸವೇ ಆಗಲೀ, ಇದಕ್ಕಿಂತ ಶ್ರೇಷ್ಠತಮವಾಗಿ ಮಾಡಿದೆ ನೆಂದರೆ ಅದು ಯಜ್ಞವೆನಿಸುತ್ತದೆ. ಅಂದರೆ ಇದಕ್ಕಿಂತ ಇನ್ನು ಚೆನ್ನಾಗಿ ಮಾಡಲು ಸಾಧ್ಯವೇ ಇಲ್ಲವೆನ್ನುವಂತೆ ಅತ್ಯಂತ ಶ್ರದ್ಧೆಯಿಂದ ಮಾಡಿದಾಗ ಅದು ಯಜ್ಞವೆನಿಸುತ್ತದೆ.ಶಾಲೆಯಲ್ಲಿ ಪಾಠಮಾಡುವಾಗ ಚೆನ್ನಾಗಿ ಪಾಠಮಾಡಿದೆನೆಂದರೆ ಅದು ಶ್ರೇಷ್ಠ. ಸಂಬಳ ಪಡೆಯುತ್ತೇನಾದ್ದರಿಂದ ಮಕ್ಕಳಿಗೆ ದ್ರೋಹವಾಗದಂತೆ ಪಾಠಮಾಡುತ್ತೇನೆಂದರೆ ಅದು ಶ್ರೇಷ್ಠತರ. ಸಂಬಳ ಬಾರದಿದ್ದರೂ ಚಿಂತೆಯಿಲ್ಲ ಮಕ್ಕಳ ಅಭ್ಯುದಯಕ್ಕಾಗಿನಾನು ಅತ್ಯಂತಶ್ರದ್ಧೆಯಿಂದ ಪಾಠಮಾಡುತ್ತೇನೆಂದರೆ ಅದುಶ್ರೇಷ್ಠತಮ. ಇದು ಎಲ್ಲಾ ಕೆಲಸಕ್ಕೂ ಅನ್ವಯ.ಶ್ರೇಷ್ಠತಮ ಕೆಲಸವು ಯಜ್ಞ ಎನಿಸಿಕೊಳ್ಳುತ್ತದೆ. ಪ್ರತಿಯೊಂದು ಮಾತಿನಲ್ಲೂ ಶ್ರೇಷ್ಠ ,ಶ್ರೇಷ್ಠತರ, ಶ್ರೇಷ್ಠತಮ ಎಂದು ಪರಿಗಣಿಸಲು ಸಾಧ್ಯವಿದೆ. ಮಾತಿನಲ್ಲಿ,ಆಲೋಚನೆಯಲ್ಲಿ, ಕೆಲಸದಲ್ಲಿ ಶ್ರೇಷ್ಠತಮವಾದಾಗ ಅವುಗಳೆಲ್ಲವೂ ಯಜ್ಞ ಎನಿಸಿಕೊಳ್ಳುತ್ತವೆ.ನಮ್ಮ ಇಡೀ ಜೀವನವು ಯಜ್ಞಮಯವಾದಾಗ ನಮಗೆ ಸಿಗುವ ಲಾಭವೂ ಅಷ್ಟೇ ವಿಶೇಷವಾಗಿರುತ್ತದೆ.ನಮಗೆ ಉತ್ತಮ ಆರೋಗ್ಯ , ಸುಖ, ಸಂತೋಷ, ನೆಮ್ಮದಿ ಎಲ್ಲಾ ಬೇಕಾದರೆ ನಮ್ಮ ಜೀವನ ಯಜ್ಞಮಯವಾಗಿರಬೇಕು.ಆಗ ಎಲ್ಲವೂ ತಾನೇ ತಾನಾಗಿ ಲಭ್ಯವಾಗುತದೆ.ವೇದವು ನಮಗೆ ಹೇಳುವ ಮಾರ್ಗ ಇದೇ ಆಗಿದೆ- "ನಾನ್ಯ ಪಂಥಾ ಅಯನಾಯ ವಿದ್ಯತೇ" ಇದನ್ನು ಬಿಟ್ಟು ಅನ್ಯ ಮಾರ್ಗವಿಲ್ಲ. ಯಾರುಈ ಮಾರ್ಗವನ್ನು ಅರ್ಥಮಾಡಿಕೊಂಡು ಜೀವನ ಮಾಡುತ್ತಾರೋ ಅವರು ಇಲ್ಲೇ ಅಮೃತತ್ವವನ್ನು ಹೊಂದುತ್ತಾರೆ ಎಂದು ಹೇಳಿದೆ. ಅಮೃತತ್ವ ಎಂದರೇನು? ಮೃತ ಎಂದರೆ ಸಾವು , ಅಮೃತ ಎಂದರೆ ಸಾವಿಲ್ಲದಿರುವುದು.[ಇಲ್ಲಿ ಸುಧಾಕರ ಶರ್ಮರು ಮೃತ್ಯುವೆಂಬ ಪದವನ್ನು ಬಹುವಾಗಿ ವಿಶ್ಲೇಷಿಸಿದ್ದಾರೆ , ಅದನ್ನು ಇಲ್ಲಿ ಬಿಟ್ಟಿದ್ದೇನೆ] ಅಂದರೆ ಯಾರಿಗೂ ಸಾವು ತಪ್ಪಿದ್ದಲ್ಲವಾದರೂ ನಿಜವಾಗಿ ಮನುಷ್ಯನಿಗೆ ನಿಜವಾಗಿ ತೊಂದರೆ ಕೊಡುತ್ತಿರುವುದು ಸಾವಲ್ಲ, ಸಾವಿನಭಯ.ಯಾವಾಗ ಸಾವಿನಭಯ ಹೋಗುತ್ತದೆ, ಇನ್ಯಾವುದಕ್ಕೂ ಭಯ ಪಡುವ ಕಾರಣವೇ ಇಲ್ಲ.ಎಲ್ಲಾಭಯಗಳಿಗೂ ಮೂಲವೇ ಪ್ರಾಣಭಯ.ಆದ್ದರಿಂದ ಯಜ್ಞದ ಜ್ಞಾನದಿಂದ ಪ್ರಾಣಭಯದಿಂದ ದೂರವಾಗುತ್ತಾರೆ.ಯಾವಾಗ ಸಾವಿನಭಯವೇ ಇಲ್ಲ ಆಗ ಅಸತ್ಯ, ಅನ್ತ್ಯಾಯ, ಅಧರ್ಮಗಳಿಗೆ ಅಂಜದೆ ಸತ್ಯಮಾರ್ಗದಲ್ಲಿ ಅವರ ದಾರಿ ಸಾಗುತ್ತದೆ.
------------------------------------------------
ನನ್ನ ಮಾತು:
ಯಜ್ಞದ ಈ ಪರಿಕಲ್ಪನೆ ಮೂಡಿದಾಗ ನಮ್ಮ ಸಮಾಜದ ಸ್ಥಿತಿ ಎಷ್ಟು ಭವ್ಯ ವಾಗಬಹುದು!
ಸರ್ಕಾರಿ ಕಛೇರಿಯಲ್ಲಿನ ಒಬ್ಬ ನೌಕರ ತನ್ನ ಕರ್ತವ್ಯವನ್ನು ಶ್ರೇಷ್ಠತಮವಾಗಿ ನಿರ್ವಹಿಸಿದರೆ, ಬದುಕಿನ ಯಾವುದೇ ರಂಗದಲ್ಲಿರಲಿ ಆಯಾ ವ್ಯಕ್ತಿ ತನ್ನ ಕರ್ತವ್ಯವನ್ನುಶ್ರೇಷ್ಠತಮವಾಗಿ ನಿರ್ವಹಿಸಿದರೆ ನಮ್ಮ ದೇಶ ಸಮೃದ್ಧವಾಗಲು ಮತ್ತೇನು ಬೇಕು?
ಒಂದು ಕುಟುಂಬದ ಎಲ್ಲಾ ಸದಸ್ಯರೂ ತಾವು ಮಾತನಾಡುವ ಮುಂಚೆ, ಆಲೋಚಿಸುವ ಮುಂಚೆ, ಕೆಲಸಮಾಡುವ ಮುಂಚೆ, ವೇದದ ಪರಿಕಲ್ಪನೆಯಲ್ಲಿ ಶ್ರೇಷ್ಠತಮವಾಗಿ ತಮ್ಮ ತಮ್ಮ ಕರ್ತವ್ಯ ನಿರ್ವಹಿಸಿದರೆ ಅದು ಸುಖೀ ಕುಟುಂಬ ಆಗದಿರದೇ?

1 comment:

  1. "ಮಾಡುವ ಕೆಲಸ ಯಾವುದೇ ಇರಬಹುದು ಅದನ್ನು ಶ್ರೇಷ್ಠತಮವನ್ನಾಗಿ ಮಾಡಿಗಾಗ ಅದೂ ಯಜ್ಞವೇ ಆಗುತ್ತದ"
    ನಿಜ, ಯಾರೂ ಒಪ್ಪತಕ್ಕಂಥ ಮಾತು.

    ReplyDelete