Pages

Tuesday, June 15, 2010

ಸಂಜೆಯಾಯ್ತು ದೇವರ ದೀಪ ಹಚ್ಚಬೇಡವೇ?

ಎರಡು ಮೂರು ವರ್ಷದ ಹಿಂದಿನ ಘಟನೆ.ಮಿತ್ರರೊಬ್ಬರು ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಬೇಕಾಯ್ತು.ಆಗ ಸಮಯ ಸಂಜೆ ಐದುಗಂಟೆ. ಮಿತ್ರರ ಮಡದಿ ಹಾಗೂ ಮೂರ್ನಾಲ್ಕು ಜನ ಹತ್ತಿರದ ಬಂಧುಗಳು ಹಾಗೂ ನಾನು ಮತ್ತು ನನ್ನ ಮಡದಿ ಆಸ್ಪತ್ರೆಯಲ್ಲಿ ಜೊತೆಗಿದ್ದೆವು.ವೈದ್ಯರಿಂದ ತಪಾಸಣೆಯಾಯ್ತು. ಮೂರ್ನಾಲ್ಕು ಪರೀಕ್ಷೆಗಳಾದವು.ಆ ಹೊತ್ತಿಗೆ ಸಮಯ ೬.೩೦. ಒಬ್ಬ ಬಂಧು ಸತ್ಸಂಗಕ್ಕೆಂದು ಹೊರಟರು. ಮಿತ್ರನ ಸೋದರನಾದರೋ ಸಂಧ್ಯಾವಂದನೆ ಮಾಡಲು ಸಮಯವಾಯ್ತೆಂದು ಹೊರಟ.ಮಿತ್ರನ ತಂಗಿ ಯೋಗಾಸನಕ್ಕೆಂದು ಹೊರಟಳು. ಹೀಗೆ ಒಬ್ಬಬ್ಬರಾಗಿ ಎಲ್ಲರೂ ಖಾಲಿ. ಮಿತ್ರನ ಮಡದಿ ಜೊತೆಗೆ ನಾವಿಬ್ಬರು ಮಾತ್ರ. ನನ್ನ ಪತ್ನಿ ಹೇಳಿದಳು" ಸಂಜೆಯಾಯ್ತು ದೇವರ ದೀಪ ಹಚ್ಚಬೇಡವೇ?" ನಾನು ಹೇಳಿದೆ" ನೀನು ದೇವರಿಗೆ ದೀಪ ಹಚ್ಚಲೇ ಬೇಕೆಂದರೆ ಹೋಗು, ನಾನು ತಡೆಯಲಾರೆ. ಆದರೆ ಆನಂದನನ್ನು[ನನ್ನ ಮಿತ್ರ] ಒಮ್ಮೆ ನೋಡು. ಅವನ ಇಂತಹಾ ಪರಿಸ್ಥಿತಿಯಲ್ಲಿ ಬಿಟ್ಟು ಹೋಗಬೇಕೆಂದರೆ ಹೇಳು"
ಎರಡು ನಿಮಿಷ ಯೋಚಿಸಿದ ನನ್ನಾಕೆ ಇಲ್ಲಾರೀ, ನಾವು ಹೋಗ್ಬಿಟ್ರೆ, ಆನಂದನನ್ನು ನೋಡುವವರು ಯಾರ್ರೀ?...............
ಆನಂದನ ಪತ್ನಿಯ ಕಣ್ಣಲ್ಲಿ ನೀರು ಕಂಡ ನನ್ನಾಕೆ ಹೇಳಿದಳು" ಇಲ್ಲ, ನಿರ್ಮಲಾ, ಅಳಬೇಡ, ನಾವು ಹೋಗುವುದಿಲ್ಲ. ರಾತ್ರಿ ಇಲ್ಲೇ ನಿದ್ರೆಗೆಟ್ಟರೂ ಚಿಂತೆ ಇಲ್ಲ, ನಿನ್ನೊಬ್ಬಳನ್ನೇ ಬಿಟ್ಟು ಹೋಗುವುದಿಲ್ಲ........

............ಆನಂದನ ಆಯಸ್ಸು ಗಟ್ಟಿಯಾಗಿತ್ತು, ಬದುಕುಳಿದ. ಈಗ ನಾವೆಂದರೆ ಪಂಚ ಪ್ರಾಣ.

4 comments:

  1. ಮನದಲ್ಲಿ ದೇವರ ನೆನಹಿನ ದೀಪ ಸದಾ ಹೊತ್ತಿ ಉರಿಯಿತಿರುವಲ್ಲಿ ಬಾಹ್ಯ ಬೆಳಕಿನ ದೀಪ ಅವಶ್ಯವಿಲ್ಲ.ಮಾನವೀಯ ಕಾಳಜಿಗಳಲ್ಲಿ ಹಲವು ಸ೦ಪ್ರದಾಯಗಳ ಅಥವಾ ದೈನ೦ದಿನ ಆಚರಣೆಗಳಲ್ಲಿನ ಲೋಪ ದೇವರಿಗೆ ಅಪ್ರಿಯವಲ್ಲ! ಅದು ಹೆಚ್ಚು ಮೆಚ್ಚಿಗೆಯಾಗುವದು ಎ೦ದು ನನ್ನ ಭಾವನೆ. ತಮ್ಮ ವಿಚಾರ ಸರಿ.

    ReplyDelete
  2. ನಿಜ, ಕೆಲವು ಸಂದರ್ಭಗಳಲ್ಲಿ ಯಾವುದು ಮುಖ್ಯ,
    ಯಾವುದು ಮೊದಲು ಎನ್ನುವುದನ್ನು ನಾವೇ ನಿರ್ಧರಿಸಬೇಕು

    ReplyDelete
  3. ದೇವರ ಮುಂದೆ ಅನುಕೂಲವಿದ್ದಾಗ ದೀಪ ಬೆಳಗಿದರೆ ಅದು ನಮಗೆ ಪಾಸಿಟಿವ್ ಎನರ್ಜಿ ತರುತ್ತದೆ, ಅದರ ಹಿಂದೆ ಸಂಪ್ರದಾಯಕ್ಕಿಂತ ತತ್ವ-ಸತ್ವ ಅಡಗಿದೆ. ಆದರೆ ಅನಿವಾರ್ಯತೆಯಲ್ಲಿ ದೇವರು ದೀಪವನ್ನು ಹಚ್ಚಲೇ ಇಲ್ಲ ಎಂದು ಬೈಯ್ಯುವುದಿಲ್ಲ! ದೇವರಿಗೆ ಹೊರಗಿನ ದೀಪಕ್ಕಿಂತ ನಮ್ಮ ಹೃದಯದ ಒಳಗಿನ ದೀಪ ದೊಡ್ಡದು. ಶಂಕರರು ಹೇಳಿದರಲ್ವೆ- ದೀಪಂ ದೇವ ದಯಾನಿಧೇ ಪಶುಪತೇ ಹೃತ್ಕಲ್ಪಿತಂ ಗೃಹ್ಯತಾಂ,ಧನ್ಯವಾದಗಳು

    ReplyDelete
  4. ಮನ ಮುಟ್ಟುವ ನಿರೂಪಣೆ.ಅನುಕರಣೀಯ ನಡೆ.

    ReplyDelete