ಎಂತು ಅರ್ಚಿಸಲಿ?
ನಿನ್ನನೆಂತು ಅರ್ಚಿಸಲಿ, ಹೇ ದೇವಾ|
ಸತ್ಪಥವ ತೋರಿ ತಣಿಸೆನ್ನ ಮನವಾ||
ಸರ್ವವ್ಯಾಪಕ ಸರ್ವಾಂತರ್ಯಾಮಿ ನೀನು|
ಘಂಟಾನಾದವ ಮಾಡಿ ಬಾ ಎನ್ನಲೇನು?||
ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ನೀನು|
ಕಿರುಪೀಠವ ತೋರಿ ಕುಳ್ಳಿರಿಸಲೇನು?||
ದಿವ್ಯ ಚೇತನ ಪರಿಶುದ್ಧ ಪರಮಾತ್ಮ ನೀನು|
ಅಭಿಷೇಕವ ಮಾಡಿ ಕೊಳೆ ತೊಳೆಯಲೇನು?||
ಸಕಲ ಚರಾಚರ ಸೃಷ್ಟಿಕರ್ತ ನೀನಲ್ಲವೇನು?|
ನಿನ್ನ ಸೃಷ್ಟಿಯ ಹೂವ ನಿನಗೆಂತು ಕೊಟ್ಟೇನು?||
ಅನೂಹ್ಯ ಅನಂತ ಅಭೋಕ್ತ ಅಚ್ಯುತನು ನೀನು|
ನಿನಗೆ ನೈವೇದ್ಯವೆನೆ ಕೊಡಬಹುದು ನಾನೇನು?||
ಸಕಲ ಜೀವರಿಗೆ ನೆಲೆ ಕೊಟ್ಟ ಧೀಮಂತ ನೀನು|
ನಿನಗೊಂದು ಗುಡಿ ಕಟ್ಟಿ ನೆಲೆಗೊಳಿಸಲೇನು?||
ರೂಢಿರಾಡಿಯಲಿ ಮುಳುಗಿ ಇರಲಾರೆ ನಾನು|
ಹೊರಬರುವ ದಾರಿಯನು ತೋರುವೆಯ ನೀನು?||
ನಿನ್ನನೆಂತು ಅರ್ಚಿಸಲಿ, ಹೇ ದೇವಾ|
ಸತ್ಪಥವ ತೋರಿ ತಣಿಸೆನ್ನ ಮನವಾ||
-ಕವಿ ನಾಗರಾಜ್
-
[ರೂಢಿರಾಡಿಯಲಿ ಮುಳುಗಿ ಇರಲಾರೆ ನಾನು|
ReplyDeleteಹೊರಬರುವ ದಾರಿಯನು ತೋರುವೆಯ ನೀನು?]
ಸುಧಾಕರಶರ್ಮರೊಡನಿರುವಾಗ ದಾರಿ ಸಿಗದಿರಲಾರದೇ?
ಎಲ್ಲಿ ಹುಡುಕಲಿ ನಿನ್ನ -ಕವನದ ಪಕ್ಕಕ್ಕಿಟ್ಟರೆ ಹೇಗಿರುತ್ತೆ?. ಶ್ರೀಮತಿ ಲಲಿತಾರಮೇಶ್ ಅವರಿಗೆ ರಾಗಹಾಕಿ ಹಾಡಲು ಹೇಳುವೆ. ಸಧ್ಯದಲ್ಲೇ ಅದರ ಆಡಿಯೋ ಹಾಕೋಣವಂತೆ.
ತುಂಬ ಮೆಚ್ಚುಗೆಯಾಯ್ತು.
ಹೀಗೆಯೇ ಮುಂದುವರೆಯಲಿ .
ಒಪ್ಪಿಗೆಯಿದೆ, ಶ್ರೀಧರ್.
ReplyDelete