ದೇವರು ಹೇಳಿದ ಸುಪ್ರಭಾತ
ಮುಂಜಾನೆ ನೀನೆದ್ದೆ - ನಾನು ಕಾದಿದ್ದೆ
ನಿನ್ನೆರಡು ಮಾತಿಗೆ, ಮುಗುಳ್ನಗೆಗೆ;
ನಿನಗೆ ಪುರುಸೊತ್ತಿಲ್ಲ !
ಗಡಿಬಿಡಿಯಲಿ ನೀ ನಿತ್ಯಕರ್ಮ ಮುಗಿಸಿದೆ
ನಿನ್ನ ನಿರೀಕ್ಷಣೆಯಲ್ಲೇ ನಾನಿದ್ದೆ;
ಯಾವ ಬಟ್ಟೆ ಧರಿಸಲಿ
ಎಂಬ ಗುಂಗಿನಲ್ಲಿ ನೀನಿದ್ದೆ;
ನಿನಗೆ ಸಮಯವಿಲ್ಲ !
ತಿಂಡಿ ತಿನ್ನುವಾಗೊಮ್ಮೆಯಾದರೂ
ನೀ ನೋಡುವಿಯೆಂದುಕೊಂಡಿದ್ದೆ;
ಇಂದೇನು ಮಾಡಬೇಕೆಂಬ
ಚಿಂತೆಯಲಿ ನೀನಿದ್ದೆ;
ನಿನಗೆ ಸಮಯವಿಲ್ಲ !
ಮನೆಯಿಂದ ಹೊರಟಾಗಲೊಮ್ಮೆ
ಕೈಬೀಸಿ ವಿದಾಯ ನುಡಿಯಲೂ
ನಿನಗಾಗಲಿಲ್ಲ ! ಅಷ್ಟು ಆತುರ ನಿನಗೆ;
ನಿನಗೆ ಸಮಯವಿಲ್ಲ !
ದಿನವಿಡೀ ನಾಕಾದೆ - ನಿನ್ನ ಗಮನಿಸಿದೆ
ನಿನ್ನ ಕೆಲಸದ ಒತ್ತಡದಿ
ನನ್ನ ನೆನಪು ನಿನಗಾಗದಿರಬಹುದು;
ನಿನಗೆ ಸಮಯವಿಲ್ಲ !
ಮಧ್ಯಾಹ್ನದೂಟ ಮಾಡುವ ಮುನ್ನ
ಅರೆಘಳಿಗೆ ನೀ ಸುಮ್ಮನೆ ಇದ್ದಾಗ
ಮಾತಾಡಬಹುದೇನೋ ಅನ್ನಿಸಿತು;
ನಾನು ಕಾದಿದ್ದೇ ಬಂತು;
ನಿನಗೆ ಗೊತ್ತೇ ಆಗಲಿಲ್ಲ;
ನಿನಗೆ ಸಮಯವಿಲ್ಲ !
ಯಾಂತ್ರಿಕವಾಗಿ ಟಿವಿ ನೋಡಿ
ಮಡದಿ ಮಕ್ಕಳೊಂದಿಗೆ ಊಟ ಮಾಡಿ
ಸುಸ್ತಾಗಿ ಮಲಗುವ ಮುನ್ನ
ನನ್ನೊಡನೆ ದಿನದ ಕಷ್ಟ ಸುಖ
ಹಂಚಿಕೊಳ್ಳಬಹುದೆಂದು ನಾನು ಕಾದಿದ್ದೆ;
ನಿದ್ರೆಗೆ ನೀನು ಜಾರಿದೆ;
ನಿನಗೆ ಸಮಯವಿಲ್ಲ !
ದಿನಚರಿ ಹೀಗೇ ಸಾಗುವುದು
ಬೆಳಗಾಗುವುದು, ರಾತ್ರಿಯಾಗುವುದು;
ನಾನು ಕಾಯುತ್ತಿರುವೆ, ಪ್ರೀತಿಯಿಂದ
ನಿನಗೆ ಸಮಯ ಸಿಗಬಹುದೆಂದು;
ನಿನಗೆ ಶುಭವಾಗಲಿ !
-ಕವಿ ನಾಗರಾಜ್
-
ಹೌದು! ಎಲ್ಲವುದಕ್ಕೂ ಸಮಯವಿದೆ. ದೇವರೊ೦ದಿಗೆ ಕಳೆಯಲು ಮಾತ್ರ ಇಲ್ಲ! ಅರ್ಥಗರ್ಭಿತ.ವ೦ದನೆಗಳು.
ReplyDeleteಚೆಂದದ ಸುಪ್ರಭಾತ ಅದು ದೇವರಿಂದ ಮನುಜಗೆ!!
ReplyDeleteಧನ್ಯವಾದಗಳು, ನಾವಡ ಮತ್ತು ಸೀತಾರಾಮರಿಗೆ.
ReplyDeleteಸಧ್ಯದಲ್ಲೇ ನಿಮ್ಮ ಕವನಗಳಸಂಗ್ರಹ ಪುಸ್ತಕರೂಪದಲ್ಲಿ ತರಬೇಕಾಗಬಹುದಲ್ಲವೇ? ಆ ಸಮಯಕ್ಕೆ ವೇದಸುಧೆ ಬಳಗದ ಪುಸ್ತಕ ಪ್ರಕಟಿಸುವ ಸಾಹಸ ಮಾಡಿಬಿಡೋಣ. ಬಳಗದ ಉಳಿದವರು ಏನಂತೀರಿ?
ReplyDeleteನಾಗರಾಜರೇ ಚೆನ್ನಾಗಿದೆ ನಿಮ್ಮ ಸುಪ್ರಭಾತ ಕವನ
ReplyDeleteಧನ್ಯವಾದಗಳು, ಶ್ರೀಧರ್ ಮತ್ತು ವಿ.ಆರ್. ಭಟ್ ರವರುಗಳಿಗೆ.
ReplyDeleteನಾಗರಾಜ್
ReplyDeleteಯಾಂತ್ರಿಕವಾಗಿ ಕವನ ಓದಿದ್ದ ನಾನು ಮತ್ತೆ ಓದಬೇಕಿನಿಸಿ ಓದಿದೆ.ಅಬ್ಭಾ! ಎಷ್ಟು ಚೆನ್ನಾಗಿ ಬರೆದಿದ್ದೀರಿ! ನಾನೂ ಹೀಗೆಯೇ ಅನೇಕಭಾರಿ ಯೋಚಿಸಿದ್ದುಂಟು, ಪ್ರಾಯಶ: ನಾನೂ ಒಂದು ಕವನ ಹೀಗೇ -ಇದೇ ಅರ್ಥ ಬರುವಂತೆ ಗೀಜಿರುವೆ.ಅದೆಲ್ಲಿ ಹೋಯ್ತೋ, ಈಗೇಕೆ ಹುಡುಕಲಿ! ಇಂತಾ ಅದ್ಭುತ ಕವನ ಓದುತ್ತಿರುವಾಗ!
ಈ ಕವನವನ್ನು ಹಾಡಲು ಅನುಕೂಲವಾಗುವಂತೆ ಸಣ್ಣಪುಟ್ಟ ಬದಲಾವಣೆ ಮಾಡಿದರೆ ಭಾವಪೂರ್ಣವಾಗಿ ಹಾಡಲೂ ಬಹುದು. ಹೀಗೆಯೇ ಬರೆಯುತ್ತಿರಿ, ಭಗವದ್ ಚಿಂತನೆ ಕೊಡುವ ಸಮಾಧಾನವನ್ನು ಬೇರೆ ಯಾವುದೂ ಕೊಡುವುದಿಲ್ಲ. ಇದಕ್ಕಿಂತ ಬೇರೆ ಪೂಜೆ ಬೇಕೆ?
Hi Nagaraj , it's so apt ,relevant & timely !!...thank you for sharing ...btw can I share this and many of your other posts with my friends on the net ??...ofcourse ,there will be a mention of YOUR NAME whenever I share !....
ReplyDelete