Pages

Sunday, August 15, 2010

ಪ್ರಶ್ನೆಯಾದ ರಾಜು!

-ಈಗ್ಗೆ ಸುಮಾರು ಸುಮಾರು ೧೮-೨೦ ವರ್ಷಗಳಮಾತು. ನಾನು ನಿತ್ಯವೂ ಒಂದು ಧ್ಯಾನಮಂದಿರಕ್ಕೆ ಹೋಗಿ ಸಂಜೆವೇಳೆ ಅರ್ಧ ಗಂಟೆ ಧ್ಯಾನ ಮಾಡಿ ಬರುತ್ತಿದ್ದೆ. ಅಲ್ಲಿ ಆಗಿಂದಾಗ್ಗೆ ಕಾಣುತ್ತಿದ್ದ ವ್ಯಕ್ತಿ ರಾಜು. ಸುಮಾರು ೪೦ ವರ್ಷ ವಯಸ್ಸಿನ ರಾಜು ಮೂರುವರೆ ಅಡಿ ಎತ್ತರ ವಿದ್ದಿರಬಹುದು. ಪರಸ್ಪರ ಪರಿಚಯ ವಾಯ್ತು. ನಮ್ಮ ಮನೆಯ ಸಮೀಪ ಇರುವ ಪರಿಶಿಷ್ಟ ಜಾತಿಗೆ ಸೇರಿದ ಎರಡು ಕಾಲುಗಳೂ ಇಲ್ಲದ ಲಕ್ಷ್ಮಿಯನ್ನು ರಾಜು ಮದುವೆಯಾಗಿದ್ದರು. ರಾಜುವಿನ ವೃತ್ತಿ ಎಂದರೆ ಊರೂರು ತಿರುಗುತ್ತಾ ಲಾಟರಿ ಟಿಕೆಟ್ ಮಾರಾಟ. ರಾಜು ತಮಿಳುನಾಡಿನವರು. ಹೀಗೆಯೇ ಊರೂರು ತಿರುಗುತ್ತಾ ಲಾಟರಿ ಟಿಕೆಟ್ ಮಾರುವಾಗ ಯಾರದೋ ಪರಿಚಯವಾಗಿ ಲಕ್ಶ್ಜ್ಮಿಯ ಸಂಬಂಧದವರೆಗೆ ತಲುಪಿ ಲಕ್ಷ್ಮಿಯ ಮದುವೆಯನಂತರ ಪತ್ನಿಯ ಮನೆಯಲ್ಲೇ ಇದ್ದುಕೊಂಡು ಲಾಟರಿ ಟಿಕೆಟ್ ಮಾರಾಟ ಮಾಡುವ ಕಾಯಕ ಮುಂದುವರೆಸಿದ್ದರು. ನಂತರ ಒಂದು ಹೆಣ್ಣುಮಗು ಜನ್ಮತಾಳಿ ಬೆಳೆದು ಅವಳ ಮದುವೆಯೂ ಆಯ್ತು. ಇತ್ತೀಚೆಗೆ ರಾಜು ಕಂಡಿರಲಿಲ್ಲ.
ಇಂದು ಭಾನುವಾರವಾದ್ದರಿಂದ ಸ್ನೇಹಿತರಾದ ಕವಿನಾಗರಾಜ್ ಮನೆಗೆ ಹೋಗಿದ್ದವನು ಅಲ್ಲಿಂದ ಆಫೀಸ್ ಕಡೆ ಹೋಗುವ ಮಾರ್ಗದಲ್ಲಿ ಇರುವ ಮಹಾರಾಜಾ ಪಾರ್ಕಿನೊಳಗೆ ಒಮ್ಮೆ ಹೋಗಿ ಹತ್ತು ನಿಮಿಷ ಅಡ್ಡಾಡಿ ನಂತರ ಆಫೀಸ್ ಗೆ ಹೋಗೋಣವೆಂದು ಪಾರ್ಕಿನೊಳಗೆ ಕಾಲಿಟ್ಟೆ. ಅಲ್ಲಿ ಬಿಳಿ ತುಂಡುಪಂಚೆ ಮತ್ತು ಬಿಳಿ ಹೊದಿಕೆ ಹೊದ್ದಿದ್ದ ಗಡ್ಡದಾರಿ ಕುಳ್ಳುವ್ಯಕ್ತಿಯೊಬ್ಬನನ್ನು ಕಂಡು ಅವನತ್ತ ನೋಡುವುದರಲ್ಲಿ ಅರೇ! ಇವರು ನಮ್ಮ ರಾಜು ಅಲ್ಲವೇ?!! ನೋ ಡೌಟ್ , ಆತನೇ!!

-ಏನ್ರೀ ಹೀಗೆ?
- "ಎಲ್ಲಾ ಸಾಯಿಬಾಬರ ಕೃಪೆ "
- ಕಾಣ್ತಾ ಇರಲಿಲ್ಲ, ಹೆಂಡ್ತಿ -ಮಗಳು?
- ಈಗ ಯಾರೂ ಇಲ್ಲ. ನಿಮಗೆ ಗೊತ್ತಿರುವಂತೆ ಹೆಳವಳಾದ ಅವಳನ್ನು ಮದುವೆಯಾಗಿ ನಿತ್ಯವೂ ಅವಳ ಸೇವೆ ಮಾಡಿಕೊಂಡು ನನ್ನ ವ್ಯಾಪಾರ ಮಾಡಿಕೊಂಡು ಅವಳನ್ನು ಸಾಕಿದ್ದಕ್ಕೆ ಅವಳೇ ನನ್ನ ಮೇಲೆ ಅನುಮಾನ ಪಟ್ಟಳು. ಒಂದೆರಡು ವರ್ಷ ಸಹಿಸಿಕೊಂಡಿದ್ದೆ. ಕೊನೆಗೆ ತಡೆಯಲಾಗಲಿಲ್ಲ. ಮನೆ ಬಿಟ್ಟು ಹೊರಟೆ. ವ್ಯಾಪಾರ ಮಾಡುವುದನ್ನೂ ನಿಲ್ಲಿಸಿದೆ. ಕೈಲಿದ್ದ ೨೫ ಸಾವಿರ ರೂಪಾಯಿಯಿಂದ ಬೂದಿಗೆರೆ ಸಾಯಿನಾಥ ಮಂದಿರಕ್ಕೆ ಒಂದು ಕಾಣಿಕೆಹುಂಡಿ ಮಾಡಿಸಿಕೊಟ್ಟೆ. ಅಲ್ಲಿಂದ ಮಾಲೂರು -ಬಂಗಾರ್ ಪೇಟೆ ರಸ್ತೆಯ ೧೨ ನೇ ಮೈಲುಗಲ್ಲಿಗೆ ಮೂರು ಕಿಲೋ ಮೀಟರ್ ದೂರವಿರುವ ಪಣಣಾತಿಹಳ್ಳಿಯಲ್ಲಿನ ಸಾಯಿಬಾಬ ಮಂದಿರದಲ್ಲಿ ಸೇವೆ ಮಾಡಿಕೊಂಡಿರುವೆ.
-ಏನು ಸೇವೆ ಮಾಡ್ತೀರಿ?
-"ಬಾಬರಿಗೆ ಅಲಂಕಾರ ಮಾಡುವೆ. ಅಲ್ಲಿ ಸಾಕಿರುವ ನಾಲ್ಕು ಹಸುಗಳ , ಕೆಲವು ಪಕ್ಷಿಗಳ ಸೇವೆ ಮಾಡಿಕೊಂಡಿರುವೆ".
ರಾಜು ಮಾತು ಮುಂದುವರೆಸಿದ್ದರು" ನೋಡಿ, ಅಲ್ಲಿರುವ ಹೂಗಿಡಗಳಲ್ಲಿ ಹೂ ಕೊಯ್ದುಕೊಂಡು ಪೂಜೆಗೆ ಕೊಡುವೆ, ಹುಲ್ಲು ಕೊಯ್ದು ,ಸಗಣಿ-ಗಂಜಲ ತೆಗೆದು ಪಶು ಸೇವೆ ಮಾಡುವೆ. ಪಶು-ಪಕ್ಷಿ ಗಳ ಸೇವೆ ಮಾಡಿಕೊಂಡು ಆನಂದ ವಾಗಿರುವೆ. ಬಿಡುವಾದಾಗ ಧ್ಯಾನ ಮಾಡುವೆ. ನಾನು ಹೂವು ಕೊಯ್ಯುವಾಗ ಒಮ್ಮೊಮ್ಮೆ ಏನಾಗುತ್ತೆ ಗೊತ್ತಾ? ಒಂದು ಹೂವು ನನ್ನ ಕಿವಿಯಲ್ಲಿ ಮಾತನಾಡಿದಂತೆ ಬಾಸವಾಗುತ್ತೆ " ನನ್ನನ್ನೇಕೆ ಬಾಬರ ಚರಣಕ್ಕೆ ಅರ್ಪಿಸಲು ನೀನು ಮನಸ್ಸು ಮಾಡಲಿಲ್ಲ?" ತಕ್ಷಣ ಹಿಂದಿರುಗಿ ಹೋಗಿ ಆಗಿಡದಲ್ಲಿ ನೋಡಿದರೆ ಸಂಧಿಯಲ್ಲಿ ಕಾಣದೆ ಬಿಟ್ಟಿದ್ದ ಹೂವೊಂದು ಪತ್ತೆಯಾಗುತ್ತೆ. ಆಹೂವನ್ನು ಕೊಯ್ದು ಬಾಬರಿಗೆ ಅರ್ಪಿಸುವೆ.............
ಹೀಗೆಯೇ ರಾಜು ಮಾತನಾಡುತ್ತಲೇ ಇದ್ದರು. ನಾನೇ ಮಧ್ಯೆ ಮಾತನಾಡಿ ಅವರ ಮಾತು ನಿಲ್ಲಿಸಿದೆ.ರಾಜು ತಮಿಳುನಾಡಿನ ಚೆಟ್ಟಿಯಾರ್ ಕುಲದವರಂತೆ. ವಿಧಿ ಅವರನ್ನು ಕರ್ನಾಟಕ ಸುತ್ತುವಂತೆ ಮಾಡಿ ಹಾಸನಕ್ಕೂ ಬಂದು ಅಲ್ಲಿನ ಲಕ್ಷ್ಮಿಯನ್ನು ಮದುವೆಯಾಗಿ ಅವಳಿಂದಲೂ ಪರಿತ್ಯಜ್ಯನಾಗಿ ಈಗ ಸಾಯಿಬಾಬರ ಸೇವೆ ಮಾಡಿಕೊಂಡಿರಲು ನಿರ್ಧರಿಸಿದ್ದೇನೆನ್ನುತ್ತಾರೆ. ನಮ್ಮ ಮನೆ ಗೃಹಪ್ರವೇಶಕ್ಕೆ ಆತ ಬಂದಿದ್ದರು. ಸತ್ಯನಾರಾಯಣ ಪೂಜೆಯ ಸಂದರ್ಭದಲ್ಲಿ ಎಲ್ಲರಿಗಿಂತ ಮುಂದೆ ಕುಳಿತು ಎಲ್ಲರ ಕಣ್ಸೆಳೆದಿದ್ದರು. ನಮ್ಮ ಪತ್ನಿ ಆಗ ಹೇಳಿದ್ದಳು" ಯಾರ್ಯಾರನ್ನೋ ಕರೀತೀರಲ್ರೀ!
ಮನುಷ್ಯನ ಈ ಜೀವನಕ್ಕೆ ಏನೆನ್ನೋಣ? ರಾಜು ಯಾರೋ, ಲಕ್ಷ್ಮಿ ಯಾರೋ, ಎಲ್ಲೋ ಇದ್ದವನು ಎಲ್ಲೋ ಬಂದು ಹೆಳವಿಯನ್ನು ಮದುವೆಯಾಗಿ ಆವಳಿಂದಲೇ ಪರಿತ್ಯಜ್ಯನಾಗಿ , ಈಗ ಮತ್ತೆ ಒಬ್ಬಂಟಿಯಾಗಿ ಓಡಾಡುತ್ತಿರುವ ರಾಜು ನನಗೆ ಪ್ರಶ್ನೆಯಾಗಿಯೇ ಉಳಿದು ಹೋದರು!! ನನ್ನ ಮೊಬೈಲ್ ಸೆರೆಹಿಡಿದ ಅವರ ಚಿತ್ರವನ್ನೊಮ್ಮೆ ನೋಡಿದರೆ ವಿ.ಆರ್.ಭಟ್ಟರು ಭವಿಷ್ಯ ಹೇಳಿಯಾರು!



6 comments:

  1. ಹೂವಿನ ಭಾವನೆಯನ್ನು ಅವರು ಅರ್ಥ ಮಾಡಿಕೊಳ್ಳುವುದನ್ನು ನೋಡಿ ಸಂತೋಷವಾಯ್ತು :-)

    ReplyDelete
  2. ಹರೀಶ್ ಇಷ್ಟು ಬೇಗ ಓದಿ ಬಿಟ್ರಾ? ರಾಜುವನ್ನು ನಾನು ಇನ್ನೂ ಅರ್ಥಮಾಡಿಕೊಳ್ಳಲಾಗಿಲ್ಲ.

    ReplyDelete
  3. ಶ್ರೀಧರ್, ರಾಜು ನನಗಿಷ್ಟವಾದ!

    ReplyDelete
  4. ನಾಗರಾಜ್,
    ನಿಮ್ಮಿಂದ ಬೀಳ್ಗೊಂಡವನು ಮಹಾರಾಜಾ ಪಾರ್ಕಿನಲ್ಲಿ ರಾಜುವನ್ನು ಕಂಡೆ. ಆತನೊಡನೆ ಮಾತನಾಡಿದಾಗ ಈತನೇ ಇಂದಿನ ಬರಹದ ವಸ್ತುವಾದರೆ ತಪ್ಪಿಲ್ಲವೆಂದು ಬರೆದೆ.ಯಾರ್ಯಾರಲ್ಲಿ ಭಗಂತನ ಚೈತನ್ಯವು ಏನೇನು ಮಾಡಿಸುತ್ತೋ ಆ ಭಗವಂತನೇ ಬಲ್ಲ!

    ReplyDelete
  5. ಶ್ರೀ ಶ್ರೀಧರ್, ಚಿತ್ರ ತೀರಾ ಕ್ಲೀಯರ್ ಇಲ್ಲ , ಈ ವ್ಯಕ್ತಿಯನ್ನು ನೋಡಿದಾಗ ಅನಿಸುವುದು ಈತನಲ್ಲಿ ಹಲವು ಗೊಂದಲಗಳಿವೆ, ಸ್ವಲ್ಪ ವಿರಕ್ತಿ, ಸ್ವಲ್ಪ ಭಕ್ತಿ, ಸ್ವಲ್ಪ ಶ್ರದ್ಧೆ, ಸ್ವಲ್ಪ ಜಿಗುಪ್ಸೆ, ಸ್ವಲ್ಪ ಬೇಸರ ಹೀಗೆಲ್ಲಾ ಮೇಳೈಸಿದ ಈತನಿಗೆ ಸಾಯಿಬಾಬಾ ಏನೋ ಇಷ್ಟವಾಗಿ ಕಾಣಿಸಿದ್ದಾರೆ,ಇರಬಹುದು ಈತ ಒಂಥರಾ ತ್ರಿಶಂಕು ಮನಸ್ಥಿತಿಯಾತ, ಮತ್ತೆ ಸಿಕ್ಕರೆ ಕೇಳಿನೋಡಿ ಯಾರಾದ್ರೂ ರಾಜಿ ಮಾಡಿಸಿದರೆ ಮತ್ತೆ ಹೆಂಡತಿ ಜೊತೆ ಕೆಲಕಾಲ ಇರುವುದಕ್ಕೆ ರೆಡಿ! ಆದರೆ ಅವನೇ ಅವನಾಗಿ ಹೆಂಡತಿಯ ಹತ್ತಿರ ಹೋಗಲಾರ, ಕರ್ನಾಟಕದಲ್ಲೇ ಆತನ ಬದುಕು! ಇವಿಷ್ಟು ಸಾಕು ಎನಿಸುತ್ತದೆ, ತೀರಾ ಜಾಸ್ತಿ ಹೇಳಿದರೆ ವ್ಯಕ್ತಿತ್ವ ವಿಕಸನದ ಫೀಸು ಕೊಡುವುದು ಯಾರು ? ತಮಾಷೆಗೆ ಹೇಳಿದೆ, ಇನ್ನು ಮೇಲೆ ದಯವಿಟ್ಟು ಅದಕ್ಕೂ ಇದಕ್ಕೂ ತಮಾಷೆಗೂ ಹಾಗೆ ಬರೆಯಬೇಡಿ, ಯಾಕೆಂದರೆ ಅದರ ಮೌಲ್ಯವೇ ಹಾಗಿದೆ, ಎದುರಿಗೆ ಒಬ್ಬನನ್ನು ಕರೆತಂದು ನೀವು ಆತ ಯಾವ 'ತರಗತಿ' ಯವನು ಎಂದು ಕೇಳಿದರಷ್ಟೇ ಹೇಳಲು ಸಾಧ್ಯ! ಧನ್ಯವಾದ.

    ReplyDelete