Pages

Sunday, September 12, 2010

ಮೂಢ ಉವಾಚ -6

ಅರಿವು
ಸೋತೆನೆಂದೆನಬೇಡ ಸೋಲು ನೀನರಿತೆ
ಬಿದ್ದೆನೆಂದೆನಬೇಡ ನೋವು ನೀನರಿತೆ
ಸೋಲರಿತು ನೋವರಿತು ಹಸಿವರಿತು
ಜಗವರಿಯೆ ನೀನೇ ಗೆಲುವೆ ಮೂಢ

ಕೊಂಬೆ
ರಸಭರಿತ ಫಲಮೂಲ ಕೊಂಬೆ ತಾನಲ್ಲ
ಫಲಸತ್ವ ಸಾಗಿಪ ಮಾರ್ಗ ತಾನಹುದು
ಮಾಡಿದೆನಬೇಡ ನಿನ್ನದೆನೆಬೇಡ
ಜಗವೃಕ್ಷರಸ ಹರಿದ ಕೊಂಬೆ ನೀನು ಮೂಢ

ಯಾರು?
ಕೆಲಸವಿರೆ ಓಲೈಸುವರು ಇಲ್ಲದಿರೆ ಹೀನೈಸುವರು
ಎಲ್ಲರ ಸೇವೆ ಬಯಸುವರು ತಾನಾರಿಗೂ ಆಗರು
ಕಂಡರೂ ಕಾಣದೊಲು ನಟಿಸುವ ಚತುರರಿವರು
ಇವರೊಳು ನೀಯಾರು ನಾಯಾರು ಹೇಳು ಮೂಢ

ಯಾರು?
ಆಪತ್ತಿಗಾಗುವರಿಹರು ತಿರುಗಿ ನೋಡದವರಿಹರು
ಒಳಿತು ಹಾರೈಸುವರಿಹರು ಕೆಡಕು ಬಯಸುವರಿಹರು
ಒಳಿತು ಮಾಡದ ಕೆಡಕು ಎಣಿಸಲರಿಯರಿಹರು
ಇವರೊಳು ನೀಯಾರು ನಾಯಾರು ಹೇಳು ಮೂಢ
*************
-ಕವಿನಾಗರಾಜ್.

2 comments:

  1. ನಾಗರಾಜ್,
    ಮೆಚ್ಚುಗೆ ಮಾತುಗಳನ್ನು ಬಣ್ಣಿಸಲು ನನ್ನೊಡನೆ ಪದವಿಲ್ಲ.ದಯಮಾಡಿ ಹೀಗೆಯೇ ಮುಂದುವರೆಸಿ. ನವಂಬರ್ ಕವಿಗೋಷ್ಟಿಗೆ ಮೂಢ ಉವಾಚ ಕಿರುಹೊತ್ತಿಗೆ ಪ್ರಕಟಿಸಿ ಬಿಡೋಣ.

    ReplyDelete
  2. ಧನ್ಯವಾದ, ಶ್ರೀಧರ್.

    ReplyDelete