ಸೂತ್ರ
ಸರಸರನೆ ಮೇಲೇರಿ ಗಿರಕಿ ತಿರುಗಿ
ಪರಪರನೆ ಹರಿದು ದಿಕ್ಕೆಟ್ಟು ತಲೆಸುತ್ತಿ
ಬೀಳುವುದು ಗಾಳಿಪಟ ಬಂಧ ತಪ್ಪಿದರೆ
ಸೂತ್ರ ಹರಿದರೆ ಎಚ್ಚರವಿರು ಮೂಢ
ನಾನತ್ವ
ತಾನೇ ಸರಿ ತನ್ನದೇ ಸರಿ ಕಾಣಿರಿ
ಎಂಬ ಸರಿಗರ ಸಿರಿಗರ ಬಡಿದ ಪರಿ
ಏನು ಪೇಳ್ವುದೋ ತಿಪ್ಪೆಯ ಒಡೆಯ
ತಾನೆಂಬ ಶುನಕದ ಹಿರಿಮೆಗೆ ಮೂಢ
ಹೆದರಿಕೆ
ಅವರಿಲ್ಲ ಇವರಿಲ್ಲ ನಿನ್ನವರು ಯಾರಿಲ್ಲ
ಹಿತವಿಲ್ಲದ ಕಹಿಪ್ರವರ ಜಗಕೆ ಬೇಕಿಲ್ಲ
ಬಿದ್ದೆದ್ದು ನಡೆಯದಿರೆ ಒಗೆಯುವರು ಕಲ್ಲ
ಹೆದರಿಕೆ ಸಲ್ಲ ದೇವನಿಹನಲ್ಲ ಮೂಢ
ತೃಪ್ತಿ
ಉಣ್ಣಲುಡಲಿರಬೇಕು ನೆರಳಿರಬೇಕು
ಮನವರಿತು ಅನುಸರಿಪ ಮಡದಿ ಬೇಕು
ಬೆಳಕಾಗಿ ಬಾಳುವ ಮಕ್ಕಳಿರಬೇಕು
ಇರುವುದೇ ಸಾಕೆಂಬ ಮನ ಬೇಕು ಮೂಢ
*******
-ಕ.ವೆಂ.ನಾಗರಾಜ್
[ಇರುವುದೇ ಸಾಕೆಂಬ ಮನ ಬೇಕು ಮೂಢ]
ReplyDeleteಎಲ್ಲಕ್ಕೂ ಕಳಶವಿಟ್ಟಂತಿದೆ, ನಾಗರಾಜ್.ಶುಭವಾಗಲಿ.
ವಂದನೆ, ಶ್ರೀಧರ್.
ReplyDelete