ಲಿವಿಂಗ್ ಇನ್ ದಿ ಹೆವನ್ !
ಪ್ಲಗ್ಗಿಂಗ್ ಆಂಡ್ ಅನ್ ಪ್ಲಗ್ಗಿಂಗ್ [ ಪಾರ್ಟ್-೧ ]
ಬುದ್ಧ ಧ್ಯಾನಾಸಕ್ತನಾಗಿದ್ದ ವೇಳೆ ಅವನಿಗೂ ಕೆಲವು ಉಪದ್ರವಗಳಿದ್ದವು ! ಏನಪ್ಪಾ ಇದುವರೆಗೂ ಕೇಳದ ಹೊಸ ಕಥೆ ಅಂತ ಹುಬ್ಬೇರಿಸಬೇಡಿ. ಬುದ್ಧನಿಗೆ ತೊಂದರೆ ಕೊಟ್ಟ ಉಪದ್ರವಿಗಳು ಬೇರಾರೂ ಅಲ್ಲ-ಬದಲಾಗಿ ಅವನೊಳಗಿನ ಬತ್ತಿರದ ಆಸೆಗಳು! ಧ್ಯಾನದಲ್ಲಿ ಆತನ ಹೆಂಡತಿ ಮತ್ತು ಮಗು ಕಣ್ಣ ಮುಂದೆ ಬಂದು ನಿಲ್ಲುತ್ತಾರೆ. ಹೆಂಡತಿ ಕೇಳುತ್ತಾಳೆ " ಯಾಕೆ ಸ್ವಾಮೀ ನಮ್ಮನ್ನೆಲ್ಲ ಮರೆತು ಇಲ್ಲಿಗೆ ಬಂದಿರಿ? ರೂಪವತಿಯಾದ ನನ್ನನ್ನೂ ಇಗೋ ನೋಡಿ ಇಷ್ಟು ಸುಂದರವಾದ ಮಗುವನ್ನೂ ತೊರೆದು ಇಲ್ಲಿಗೆ ಬಂದಿರಲ್ಲ ಇದು ನ್ಯಾಯವೇ ? " ಬುದ್ಧ ತನ್ನ ಮನವನ್ನು ಸ್ಥಿಮಿತಕ್ಕೆ ತಂದುಕೊಂಡ, ಮತ್ತು ಮನಸ್ಸಿಗೆ ಹೇಳಿದ " ಎಲೈ ಮನವೇ ನನಗೆ ಆ ಭಾವನೆಗಳು ಬೇಡ, ಆ ಆಸೆಗಳನ್ನು ಕತ್ತರಿಸಿ ತುಂಡು ತುಂಡು ಮಾಡು ಮತ್ತು ಎಲ್ಲಾದರೂ ಬಿಸಾಡಿಬಿಡು. ಆತ ಮನಸ್ಸನ್ನು ಹಾಗೆ ಹೇಳೀ ಹೇಳೀ ಹೇಳೀ ಗೆದ್ದ. ಯಾವಾಗ ಆತ ಸಂಪೂರ್ಣ ಗೆದ್ದನೋ ಆತನೇ ಘೋಷಿಸಿದ " ಆಸೆಯೇ ದುಃಖಕ್ಕೆ ಮೂಲ" !
ಏಸುಕ್ರಿಸ್ತ ಗುಡ್ಡದ ಮೇಲೆ ಧ್ಯಾನಾಸಕ್ತನಾಗಿದ್ದವೇಳೆ ಬಹಳ ಜನ ಅನುಯಾಯಿಗಳು ಬಂದು "ನೀವು ಇಲ್ಲಿ ಏನುಮಾಡುತ್ತೀರಿ ಸ್ವಾಮೀ, ಬೇಕಾದ ಸಾಮಗ್ರಿಗಳಿರುವ ಖಜಾನೆಯೇ ಊರಲ್ಲಿರುವಾಗ ಈ ಗುಡ್ಡದಲ್ಲಿ ಅದೇನು ಕಂಡಿರಿ ? " ಏಸುವು ಮಾತನಾಡಿರಲಿಲ್ಲ, ಮೌನದಲ್ಲಿ ಹಾಗೇ ಮುನ್ನಡೆದಿದ್ದ. ಆತ ಧ್ಯಾನದಲ್ಲಿ ಪಡೆದದ್ದನ್ನೇ ಶಾಂತಿಯೆಂದು ಬೋಧಿಸಿದ. ಉತ್ತರ ಅಮೇರಿಕಾದ ಮರುಭೂಮಿಗಳಲ್ಲಿ ವಾಸಿಸಿದ್ದ ಸಂತ ಅಂತೋನಿ ಬಹಳ ದಾರ್ಶನಿಕನಾಗಿದ್ದ. ಧ್ಯಾನಾಸಕ್ತನಾಗಿ ತಿರುಗಾಡುವಾಗ ಆತನಿಗೆ ಆತನ ಪೂರ್ವಾಶ್ರಮದ ರೋಮನ್ ಚಕ್ರಾಧಿಪತ್ಯದ ರಾಜಮಹಲುಗಳೂ, ವೈಭವದ ಸಿಂಹಾಸನಗಳೂ, ರಾಜೋಪಚಾರ ಸೇವೆಗಳೂ ನೆನೆಪಿಗೆ ಬಂದವು, ಅವು ಹಾಗೇ ಆತನ ಎದುರಲ್ಲಿ ಮೂರ್ತರೂಪ ಪಡೆದು ಆತನನ್ನು ಸಾಯುವ ಸ್ಥಿತಿಗೆ ತಳ್ಳಿದಾಗ ಆತನೆಂದುಕೊಂಡ ಅವುಗಳನ್ನೆಲ್ಲ ದೂರ ಅಟ್ಟಿದರೇನೆ ತನಗೆ ಬೇಕಾದ್ದು ಸಿಗುತ್ತದೆ, ಅಂತೇಯೇ ಆತ ಅವುಗಳನ್ನೆಲ್ಲ ಮನಸ್ಸಲ್ಲೇ ಸೇರಿಸಿ ನಿವಾಳಿಸಿ ಎಸೆದ!
ಪ್ರಾಚೀನ ಹಿಂದೂಸ್ಥಾನದ ಅನೇಕ ಋಷಿಮುನಿಗಳು ಯಾಕೆ ಎಲ್ಲವನ್ನೂ ಬಿಟ್ಟು ತಪಸ್ಸನ್ನಾಚರಿಸಿದರು ? ಮಾಡಲಿಕ್ಕೆ ಬೇರೆ ಕೆಲಸವಿಲ್ಲವೆಂದೇ? ಅಥವಾ ಸನ್ಯಾಸಿಗಳಾದರೆ ಹಾಯಾಗಿರಬಹುದೆಂದೇ ? ಅಲ್ಲವಲ್ಲ ! ವಾಸ್ತವದಲ್ಲಿ ಸನ್ಯಾಸಧರ್ಮ ಅತಿ ಕಠಿಣ! ಅವರು ಸರ್ವಸಂಗ ಪರಿತ್ಯಾಗಿಗಳಾಗಿ ಎಲ್ಲಾ ಬಯಕೆಗಳನ್ನೂ ದಮನಮಾಡಿಕೊಂಡು ತನ್ಮೂಲಕ ನಿರಾಕಾರ ಮೂಲಸ್ವರೂಪ ಪರಮಾತ್ಮನ ಸಾಯುಜ್ಯವನ್ನು ಸಾಕಾರ ರೂಪದಲ್ಲಿ ಕಾಣುತ್ತಾರೆ! ನಮಗೆ ಇರುವ ಪಂಚೇಂದ್ರಿಯಗಳ ಮೂಲ ಹುಡುಕಿ ನೋಡಿದರೆ ಅದೆಲ್ಲಾ ಒಂದೇ ಮೂಲರೂಪಕ್ಕೆ ಸೇರಿದ್ದು! ಉದಾಹರಣೆಗೆ ಸೂರ್ಯನ ಬೆಳಕನ್ನು ಬೇರೆ ಬೇರೆ ರೀತಿಯ ಸ್ಪಟಿಕದ ಅಥವಾ ರಾಹುಗನ್ನಡಿಯ ಮೂಲಕ ಹಾಯಿಸಿದಾಗ ನಮಗೆ ಬೇರೆ ಬೇರೆ ಬಣ್ಣಗಳ ಮತ್ತು ಆಕಾರಗಳ ದರ್ಶನವಾಗುತ್ತದೆ. ಅವುಗಳಲ್ಲಿ ಕಾಮನಬಿಲ್ಲೂ ಒಂದು ಅಲ್ಲವೇ ? ಕಾಮನಬಿಲ್ಲಿನಲ್ಲಿ ಏಳು ಬೇರೆ ಬೇರೆ ಬಣ್ಣಗಳನ್ನು ನಾವು ಕಾಣುತ್ತೇವೆ. ಆದರೆ ಅವೆಲ್ಲಾ ಬಣ್ಣಗಳೂ ಸೇರಿದಾಗ ಬಿಳಿಯಬಣ್ಣವೇ ಆಗುತ್ತದೆ! ಕೆಲವು ಬೇರೆ ಬೇರೆ ದಪ್ಪದ ಗಾಜಿನ ಜಾಡಿಗಳಲ್ಲಿ ಒಂದೇ ವಸ್ತುವನ್ನು ಇಡುತ್ತ ಬನ್ನಿ: ಅದು ಬೇರೆ ಬೇರೆ ಗಾತ್ರಗಳಲ್ಲಿ ಗೋಚರಿಸುತ್ತದೆ. ನೀರಿನ ತೊಟ್ಟಿಯೊಂದರಲ್ಲಿ ನಾಣ್ಯವನ್ನು ಹಾಕಿ ತಳದಲ್ಲಿ ಕುಳಿತ ಅದನ್ನು ನೇರವಾಗಿ ತಾಕುವಂತೆ ಒಂದು ಕೋಲನ್ನು ಇಳಿಸಿ, ನೀವು ಮೇಲಿಂದ ನೋಡಿದ ಜಾಗಕ್ಕೆ ಕೋಲು ಇಳಿದಾಗ ನಿಜವಾಗಿಯೂ ನಾಣ್ಯ ಅಲ್ಲಿರುವುದಿಲ್ಲ ಬದಲಿಗೆ ಅದು ಅಲ್ಲಿಗೆ ಹತ್ತಿರದಲ್ಲೇ ಆಚೀಚೆ ಇರುತ್ತದೆ.
ಹೀಗೇ ನಮ್ಮೊಳಗೆ ಕುಳಿತ ಯಾವುದೋ ಒಂದು ’ಏನೋ’ ಕಣ್ಣಿನಿಂದ ಸುಂದರವಾದ ದೃಶ್ಯಗಳನ್ನು ನೋಡಬಯಸುತ್ತದೆ, ಕಿವಿಯಿಂದ ಇಂಪಾದ ಸಂಗೀತವನ್ನು ಕೇಳಬಯಸುತ್ತದೆ, ನಾಲಿಗೆಯಿಂದ ರುಚಿರುಚಿಯಾದ ತಿನಿಸುಗಳನ್ನು ತಿನ್ನಬಯಸುತ್ತದೆ, ಮೂಗಿನಿಂದ ಆಹ್ಲಾದಕರ ಸುಗಂಧವನ್ನು ಹೀರಬಯಸುತ್ತದೆ, ಚರ್ಮದಿಂದ ಮೆತ್ತನೆಯ ವಸ್ತುವನ್ನು ಸ್ಪರ್ಶಿಸಲು ಹಾತೊರೆಯುತ್ತದೆ. ಇವಿಷ್ಟನ್ನು ಬಿಟ್ಟು ಈ ಲೋಕದಲ್ಲಿ ಬೇರೇ ಏನೂ ಇಲ್ಲವೇ ಇಲ್ಲ. ಮಾನವನ ಮಿಕ್ಕುಳಿದ ಎಲ್ಲಾ ಆಸೆಗಳೂ ಇವುಗಳ ಸುತ್ತ ಬೆಸೆದ ಹಲವು ಮಜಲುಗಳಲ್ಲಿ ಹೂಡಲ್ಪಟ್ಟಿವೆ. ಕಾಣಬೇಕಾದ ಸೌಂದರ್ಯಕ್ಕೆ ಯಾರೋ ಅಡ್ಡಿಪಡಿಸಿದರೆ, ಮೂಗಿಗೆ ಕೆಟ್ಟ ವಾಸನೆ ಬಡಿದರೆ,ಚರ್ಮಕ್ಕೆ ಚುಚ್ಚುವ ಅಥವಾ ಗಟ್ಟಿಯ ವಸ್ತು ತಾಗಿದರೆ, ಕಿವಿಗೆ ಕರ್ಕಶಧ್ವನಿ ಕೇಳಿಸಿದರೆ, ನಾಲಿಗೆಗೆ ರುಚಿಯಿರದ ಪದಾರ್ಥಗಳು ತಾಗಿದರೆ ನಾವು ಕೋಪಗೊಳ್ಳುತ್ತೇವೆ! ಕೋಪ ಎಂಬುದು ನಮ್ಮೊಳಗಿನ ಆರುವೈರಿಗಳಲ್ಲಿ ಒಂದು ಎಂದು ಕೇಳಿದ್ದೇವಷ್ಟೇ? ಈ ಆರುವೈರಿಗಳೂ ಐದು ದಾರಿಗಳಿಂದ ಒಂದೆಡೆ ಸೇರಿ ನಮ್ಮ ಮೂಲರೂಪದ ಆತ್ಮನನ್ನು ನಮ್ಮೊಳಗಿಂದ ಹೊರಗೆಳೆದು ಆತನಿಗೆ ಬೇಡದ್ದನ್ನು ಅಂಟಿಸಿ ಆತನ ತೇಜೋವಧೆ ಮಾಡುತ್ತವೆ. ಯಾವಾಗ ಆ ಆತ್ಮ ಇವುಗಳ ಕೈಗೆ ಸಿಕ್ಕಿಹಾಕಿಕೊಳ್ಳುತ್ತಾನೋ ಆವಾಗ ಇವುಗಳು ಆಡಿದ್ದೇ ಆಟ! ತನ್ನ ಮೂಲಸ್ವರೂಪವನ್ನು ಮರೆತ ಆತ್ಮ ತನ್ನ ನೈಜತೆಯನ್ನು ತೊರೆದು ಲೌಕಿಕಾಧೀನವಾಗಿ ಇಲ್ಲದ ಉಪದ್ವ್ಯಾಪಕ್ಕೆ ಈಡಾಗುತ್ತಾನೆ.[ಆತ್ಮ ಪರಮಾತ್ಮನ ರೂಪ ಎಂಬ ಕಾರಣಕ್ಕೆ ಪುಲ್ಲಿಂಗ ಸಾಂಕೇತಿಕವಾಗಿ ಬಳಸಿದ್ದೇನೆ]
ಹಾಗಾದರೆ ನಾವು ವಿಜ್ಞಾನವನ್ನು ನೋಡೋಣ. ಇಲ್ಲಿ ಕಿವಿ-ಮೂಗು-ಬಾಯಿ[ಗಂಟಲು] ಒಂದೇ ಕನೆಕ್ಟಿಂಗ್ ಪಾಯಿಂಟ್ ಸೇರುತ್ತವೆ. ದೆರ್ ಈಸ್ ಇಂಟರ್ ಕನೆಕ್ಟಿವಿಟಿ. ಇನ್ನುಳಿದದ್ದು ಎರಡೇ ಒಂದು ಕಣ್ಣು ಇನ್ನೊಂದು ಚರ್ಮ. ನಾನು ಅನೇಕಾವರ್ತಿ ಕಣ್ಣಿಗೆ ಕಾಯಿಲೆಬಂದಾಗ ಉಪಯೋಗಿಸಿದ ಆಲೋಪಥಿ ಔಷಧ ದ್ರವ್ಯ ಪರೋಕ್ಷ ಬಾಯಿಗೆ ಕಹಿ ಕಹಿಯಾಗಿ ಬಂದಿದ್ದನ್ನು ಹಲವಾರು ಸಲ ನೆನೆಸಿಕೊಂಡಿದ್ದೇನೆ! ಅಂದಮೇಲೆ ಕಣ್ಣಿಗೂ ಆ ಕನೆಕ್ಟಿಂಗ್ ಪಾಯಿಂಟ್ ಗೂ ಏನೋ ಅವಿನಾಭಾವ ಸಂಪರ್ಕ ಸಂಬಂಧ ಇರಲೇಬೇಕಲ್ಲವೇ? ಚರ್ಮ ನಮ್ಮನ್ನು ಎಲ್ಲೆಲ್ಲೂ ಆವರಿಸಿಕೊಂಡಿದೆ! ಹಾಗಾದ್ರೆ ಈ ಎಲ್ಲವೂ ಒಂದೇ ಮೂಲ ಕನೆಕ್ಟಿಂಗ್ ಪಾಯಿಂಟ್ ಸೇರುತ್ತವೆ. ಆಗಲೇ ನಮಗೆ ಲೌಕಿಕದ ಎಲ್ಲದರ ಅನುಭೂತಿ ಸಿಗುವುದು. ಒಳಗಿರುವ ಒಂದೇ ’ಏನೋ’ ಅದು/ಅವನು ಹೊರಗಡೆಗೆ ತನ್ನ ಕಿರಣಗಳನ್ನು ಕಣ್ಣು, ಮೂಗು, ಬಾಯಿ, ಕಿವಿ, ಚರ್ಮಗಳ ಮೂಲಕ ಹರಿಬಿಟ್ಟಾಗ ನಮಗೆ ಇವೆಲ್ಲಾ ಬೇರೆ ಬೇರೆ ಎಂಬ ಅನಿಸಿಕೆಯಾಗುತ್ತದೆ. ಆ ಒಳಗಿರುವ ’ಏನೋ’ ಎಂದೆನಲ್ಲ ಅದೇ ಮನಸ್ಸು. ಮನಸ್ಸು ಆತ್ಮನ ಒಂದು ಭಾಗ. ಯಾವಾಗ ಶರೀರದಲ್ಲಿ ಆತ್ಮ ಇರುವುದಿಲ್ಲವೋ ಆಗ ಕಣ್ಣು ತೆರೆದೇ ಇದ್ದರೂ ಆ ಹೆಣ ನೋಡಲಾರದು, ಕಿವಿಯಿಂದ ಕೇಳಲಾರದು,. ಬಾಯಿಂದ ತಿನ್ನಲಾರದು ಹೀಗೇ ಈ ಎಲ್ಲಾ ಕೆಲಸಗಳು ಸ್ವಸ್ಥಸ್ಥಿತಿಯಲ್ಲಿ ನಡೆಯಬೇಕಾದರೆ ಶರೀರದ ಒಳಗೆ ಆತ್ಮನಿರಬೇಕು. ಆ ಆತ್ಮದ ಭಾಗವಾದ ಮನಸ್ಸಿರಬೇಕು.
ನಮ್ಮ ಆಧುನಿಕ ವೈದ್ಯ ವಿಜ್ಞಾನ ಇಷ್ಟೆಲ್ಲಾ ಮುಂದುವರಿದರೂ ಮನಸ್ಸಿನ ರೂಪವನ್ನು ಕಂಡುಹಿಡಿಯಲು ಇದುವರೆಗೆ ಸಾಧ್ಯವಾಗಿಲ್ಲ. ನಾವು ಬರೇ ಮೆಮರಿ ಸೆಲ್ಸ್ ಅಂತೀವಿ ಅಷ್ಟೇ! ಆದರೆ ಆ ಮೆಮರಿ ಸೆಲ್ಸ್ ಹೆಣದಲ್ಲಿ ಯಾಕೆ ಕೆಲಸಮಾಡುವುದಿಲ್ಲ? ನೋಡಿ ತಾವು ಕೇಳಿರುತ್ತೀರಿ-ಯಾರಾದರೂ ಆತ್ಮಹತ್ಯೆಗೆ ಪ್ರಯತ್ನಿಸಿ ಕೋಮಾದಲ್ಲಿದ್ದರೆ ವೈದ್ಯ ಪರಿಭಾಷೆಯಲ್ಲಿ ಅವರು ಹೇಳುತ್ತಾರೆ ’ ಮೈಂಡ್ ಈಸ್ ಇನ್ಸಲ್ಟೆಡ್ ಟು ದಿ ಮ್ಯಾಕ್ಸಿಮಮ್’ ! ಹಾಗಾದ್ರೆ ಮನಸ್ಸಿಗೆ ಇನ್ಸಲ್ಟ್ ಅಂದ್ರೆ ಏನು? ಯಾವುದನ್ನು ನಮ್ಮೊಳಗಿನ ಆತ್ಮ ಸ್ವೀಕರಿಸಲು ಇಷ್ಟಪಡುವುದಿಲ್ಲವೋ ಅದನ್ನು ಅದಕ್ಕೆ ಬಲವಂತವಾಗಿ ನಮ್ಮ ಇಂದ್ರಿಯಗಳ ಮೂಲಕ ನಾವು ತುರುಕಿದರೆ ಅದು ಮನಸ್ಸಿಗೆ ನಾವು ಮಾಡುವ ಇನ್ಸಲ್ಟ್ ಆಗಿರುತ್ತದೆ. ಈ ಇನ್ಸಲ್ಟ್ ಬೇರೆಯವರ ಕೃತ್ಯದಿಂದ ಆದದ್ದೂ ಆಗಿರಬಹುದು. ಇನ್ಸಲ್ಟ್ ನಲ್ಲಿ ಎರಡು ವಿಧ, ಒಂದು ಬಾಹ್ಯ ಮತ್ತೊಂದು ಆಂತರಿಕ. ಬಾಹ್ಯವಾಗಿ ನಡೆದ ಇನ್ಸಲ್ಟ್ ಬಹಳ ಮೊನಚಾಗಿ ಇಲ್ಲದಿದ್ದರೆ ಅದು ಯಾವುದೇ ವಿಪತ್ತಿಗೆ ಕಾರಣವಾಗುವುದಿಲ್ಲ, ಒಂದೊಮ್ಮೆ ಬಾಹ್ಯದಲ್ಲಿ ನಡೆಯುವ ಇನ್ಸಲ್ಟ್ ಬಹಳ ಮೊನಚಾಗಿದ್ದರೆ ಅದು ಆಂತರಿಕ ಇನ್ಸಲ್ಟ್ ಆಗಿ ಪರಿವರ್ತಿತಗೊಳ್ಳುತ್ತದೆ. ಈ ಇನ್ಸಲ್ಟ್ ನಮ್ಮ ಮನಸ್ಸಿಗೆ ಒತ್ತಡ ತಂದೂ ತಂದೂ ಮನಸ್ಸು ನಮ್ಮನ್ನು ತ್ಯಜಿಸುವಂತೆ ಮಾಡುತ್ತದೆಯಲ್ಲಾ ಆಗಲೇ ಬಹುತೇಕರಿಗೆ ಹೃದಯಸ್ತಂಭನವಾಗುತ್ತದೆ!
ಮನಗೆದ್ದು ಮಾರುಗೆಲ್ಲು ಎಂಬ ಗಾದೆಯೊಂದಿದೆ. ಸಂಸ್ಕೃತದಲ್ಲಿ || ಮನಏವ ಮನುಷ್ಯಾಣಾಂ || ಎಂದಿದ್ದಾರೆ.ಇದರ ಅರ್ಥ ಅಂತರಾತ್ಮ ಯಾವುದನ್ನು ಒಪ್ಪಿ ಮಾಡುತ್ತದೋ ಅಲ್ಲಿ ಸಿದ್ಧಿಯಿದೆ.ನಾವು ಯಾವುದೇ ಕೆಲಸವನ್ನು ಮಾಡುವಾಗಲೂ ನಮ್ಮೊಳಗೇ ಅಳುಕು ಇದ್ದರೆ ಅಲ್ಲಿ ನಮಗೆ ಯಶಸ್ಸು ಸಿಗುವುದಿಲ್ಲ! ವಿದ್ಯಾರ್ಥಿಯೊಬ್ಬ ಓದಿರುವುದಿಲ್ಲ, ಪರೀಕ್ಷೆಗೆ ಹೆದರಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾನೆ--ಆದರೆ ಮನೆಗೆ ಹೇಳುವುದಿಲ್ಲ. ಅಲ್ಲಿ ಆತನ ಮನಸ್ಸು ಕಳ್ಳತನಮಾಡಿದ್ದನ್ನು ದಾಖಲಿಸಿಕೊಳ್ಳುತ್ತದೆ, ಮತ್ತು ಆಗಾಗ ಅವನನ್ನೇ ತಿವಿಯುತ್ತಿರುತ್ತದೆ. ಅದಕ್ಕೇ ಕೊಲೆಸುಲಿಗೆ ಮಾಡುವವರು ಅಂತರಾತ್ಮದ ಮಾತು ಕೇಳದೇ ಮದ್ಯ ಸೇವಿಸಿ ಅಂತಹ ದುಷ್ಕೃತ್ಯಗಳಲ್ಲಿ ತೊಡಗುತ್ತಾರೆ. ಸಹಜಸ್ಥಿತಿಯಲ್ಲಿ ಅವರಿಗೆ ಆ ಕೆಲಸ ಸಾಧ್ಯವಾಗುವುದಿಲ್ಲ, ಮಾಡಿದಮೇಲೆ ಮಾಡಿದ ತಪ್ಪಿನ ಅರಿವಾಗಿ ಕೊರಗುತ್ತಾರೆ ಕೆಲವರು, ಮತ್ತೆ ಮಾಡುತ್ತ ತಮ್ಮಲ್ಲಿ ನೆಗೆಟಿವ್ ಡೆಪಾಸಿಟ್ಸ್ ಜಾಸ್ತಿ ಮಾಡಿಕೊಳ್ಳುತ್ತಾರೆ ಇನ್ನೂ ಕೆಲವರು ಹೀಗೇ ಸಮಾಜದಲ್ಲಿ ನಡೆಯುತ್ತಲೇ ಇರುತ್ತದೆ. ’ಒಳಗಿನ ಕರೆ’ಯನ್ನು ಮನ್ನಿಸಿ ನಡೆದವ ಎಡಹುವುದಿಲ್ಲ. ಅಕಸ್ಮಾತ್ ಎಡವಿದ್ದರೆ ಅವನಲ್ಲಿ ಇಬ್ಬಂದಿತನವಿತ್ತು ಎಂತಲೇ ಲೆಕ್ಕ.
"ಬೀಸಿಬರುವ ಚಂಡಮಾರುತವನ್ನೂ, ಧಗಧಗಿಸುವ ಬೆಂಕಿಯನ್ನೂ, ಪ್ರಳಯಕಾಲದಂತೇ ಉಕ್ಕೇರಿದ ಸಮುದ್ರದ ಅಲೆಗಳನ್ನೂ ನೀನು ನಿಗ್ರಹಿಸ ಬಲ್ಲೆ, ಪರ್ವತದ ಬುಡವನ್ನೇ ಅಲ್ಲಾಡಿಸಬಲ್ಲೆ, ಶ್ರೀರಾಮಾ ಆದರೆ ಮನೋ ನಿಗ್ರಹ ಅದಕ್ಕಿಂತ ಕಠಿಣ" ಎಂದು ಗುರು ವಶಿಷ್ಠರು ತಮ್ಮ ಯೋಗವಾಶಿಷ್ಠದಲ್ಲಿ ಹೇಳಿದ್ದಾರೆ. ಘರ್ಜಿಸುವ ಸಿಂಹವನ್ನಾಗಲೀ, ಮದವೇರಿದ ಆನೆಯನ್ನಾಗಲೀ, ಕಡಿಯಬರುವ ಚಾಂಡಾಲನನ್ನಾಗಲೀ ನಿಗ್ರಹಿಸಬಹುದು-ಆದರೆ ಈ ಮನಸ್ಸೆಂಬುದನ್ನು ನಿಗ್ರಹಿಸುವುದು ಕಷ್ಟ ಎನ್ನುತ್ತವೆ ಹಲವು ಉಲ್ಲೇಖಗಳು. ಇವತ್ತು ನಾವಿದನ್ನೆಲ್ಲ ವೆಬ್ ಮೂಲಕ ಓದುತ್ತಿದ್ದೇವೆ, ನಮ್ಮ ಮೊಬೈಲ್ ಮೂಲಕ ಸಂಪರ್ಕಿಸುತ್ತೇವೆ, ಸಿನಿಮಾಗಳನ್ನು ನೋಡಿ ಸಂತಸಪಡುತ್ತೇವೆ, ಬೇಕಾದವರ ಪ್ರೀತಿಗೆ ಪಾತ್ರರೆಂದು ಹೆಮ್ಮೆಯಿಂದ ಬೀಗುತ್ತೇವೆ, ತಿಂಗಳಿಗೋ ವರ್ಷಕ್ಕೋ ಲೇಖನ ಬರೆದು ಕೆಲವಾರು ಒಳ್ಳೆಯ ಪ್ರತಿಕ್ರಿಯೆಗಳು ಬಂದದ್ದಕ್ಕೆ ಪುಳಕಗೊಳ್ಳುತ್ತೇವೆ, ಯಾವುದೋ ಜಾತ್ರೆ ಎಲ್ಲೋ ಹುಟ್ಟು ಹಬ್ಬ, ಮದುವೆ-ಮುಂಜಿ ಅಂತೂ ನಾವು ನಮಗೆ ಬೇಕಾದ ಹೂರಣಗಳಲ್ಲಿ ಮುಳುಗಿರುತ್ತೇವೆ. ಒಂದಿ ದಿನ ಲ್ಯಾಪ್ ಟಾಪು. ಮೊಬೈಲು, ಇಂಟರ್ನೆಟ್ಟು ಇರದಿದ್ದರೆ ನಮಗೆ ಏನನ್ನೋ ಕಳೆದುಕೊಂಡ ಅನುಭವ! ಇವೆಲ್ಲಾ ಇರದೆಯೂ ನಾವು ಬದುಕಿರಲಾರೆವೇ ? ಹಿಂದೆ ಬದುಕಿರಲಿಲ್ಲವೇ ? ಇದಕ್ಕೆ ಉತ್ತರ ನಾವೇ ಕಂಡುಕೊಳ್ಳಬೇಕು.
[ನಿನ್ನೆಯ ಪ್ರತ್ಯಾಹಾರ ಕಾವ್ಯಕ್ಕೆ ಪ್ರತಿಕ್ರಿಯಿಸುತ್ತ ಪೂರ್ಣಿಮಾ ಎಂಬ ಹೆಸರಿನಿಂದ 'ನಿಮ್ಮೊಡನೆ ವಿ.ಆರ್.ಭಟ್ ' ಬ್ಲಾಗಿನಲ್ಲೂ ಹಾಗೂ ಅನಾನಿಮಸ್ ಎಂಬ ಅನಾಮಧೇಯರಾಗಿ ’ವೇದಸುಧೆ’ ಬ್ಲಾಗಿನಲ್ಲೂ ಪ್ರತಿಕ್ರಿಯಿಸಿದವಳ/ರ ಕುರಿತು ನನಗೆ ಮರುಕವುಂಟಾಗುತ್ತದೆ. ರೋಷವೇನಿಲ್ಲ! ಪಾಪ ತಿಳುವಳಿಕೆ ಕಮ್ಮಿ ಎನಿಸಿ ಸುಮ್ಮನಾಗಿ ಅದನ್ನು ಅಳಿಸಿಹಾಕಿದ್ದೇನೆ. ’ಬೆದೆಬಂದ ನಾಯಿ’ ಎನ್ನುವ ಕೀಳು ಪದವನ್ನು ಉಪಯೋಗಿಸಿದೆ ಎಂಬುದು ಅವರ ಆರೋಪ. ಇಲ್ಲಿ ಪೂರ್ಣಿಮಾ ಹೇಳುವುದು ನಾನು ಗುಂಡಪ್ಪನವರ ಕಾವ್ಯಕ್ಕೂ ಸ್ಪರ್ಧೆ ಕೊಡಲು ಹೊರಟಿದ್ದೇನಂತೆ, ಹುಳಿಯೆಂದು ದ್ರಾಕ್ಷಿಯನ್ನು ತಿನ್ನದೇ ಇರುವ ನರಿಗೂ ನಿರುಪಯುಕ್ತವಂತೆ ಆ ಬರಹ, ನರರೋಗ ತಜ್ಞರಿಗೆ ಕೈತುಂಬಾ ಕೆಲಸವಂತೆ, ಬ್ಲಾಗಿಗರೆಲ್ಲಾ ಪರಸ್ಪರ ನೆಕ್ಕುವ ದಂಡಂತೆ. ಅವರ ’ಬೆದೆ ಬಂದ’ ಮನಸ್ಥಿತಿಯೇ ಹಾಗೆಲ್ಲಾ ಬರೆಯಲು ಕಾರಣ ಎಂದುಕೊಳ್ಳುತ್ತೇನೆ ನಾನು. ಯಾಕೆಂದರೆ ನಮ್ಮ ಅನಿಯಂತ್ರಿತ ಮನಸ್ಸಿಗೂ ಹಾಗೂ ಬೆದೆಬಂದ ನಾಯಿಗೂ ಬಹಳ ಹೋಲಿಕೆಯಿದೆ. ಆ ನಾಯಿ ಹೇಗೆ ಒಂದೆಡೆ ಕೂರುವುದಿಲ್ಲವೋ ಹಾಗೇ ನಮ್ಮ ಮನಸ್ಸೂ ಕೂಡ, ಅದೇ ಕಾರಣವಾಗಿ ಅವರ ಮನಸ್ಸೂ ಹಾಗೇ ಮಾಡಿತು. ಇಂದ್ರಿಯ ನಿಗ್ರಹದಲ್ಲಿ ಕಾಮವನ್ನು ಗೆಲ್ಲುವುದೂ ಒಂದು ಸಬ್ಜೆಕ್ಟ್ ಅಲ್ಲವೇ ಪೂರ್ಣಿಮಾ / ಅನಾನಿಮಸ್ಸರೇ ? ನೀವದನ್ನು ಗೆದ್ದಿರೇ ? ಆ ಕಾಮ ತುಂಬಿದ ಮನಸ್ಸನ್ನು ಬೆದೆಬಂದ/ನೆಶೆಬಂದ ನಾಯಿಗೆ ಹೋಲಿಸಿದ್ದರಲ್ಲಿ ತಪ್ಪೇನಿದೆ ಹೇಳಿ? ಕಾವ್ಯವನ್ನು ಬರೆಯುವಾಗ ತಲೆಯಿಲ್ಲದೇ ಬರೆಯುವುದಿಲ್ಲ, ಅದರಲ್ಲೂ ಜಗದಮಿತ್ರ ಗುಂಡಪ್ಪನವರನ್ನು ತನ್ನ ಮಾನಸ ಗುರುವೆಂದು ಸ್ವೀಕರಿಸಿ ಬರೆದ ಕಾವ್ಯಗಳು ಕ್ಲೀಷೆಗಳಿಗೆ ಈಡಾಗಬಾರದಲ್ಲ. ನಿಮ್ಮ ಮನಸ್ಸು ಇನ್ನೂ ಕೂಪದೊಳಗಿನ ಮಂಡೂಕ! ಆ ಮಂಡೂಕಕ್ಕೆ ಸಮುದ್ರವನ್ನು ತೋರಿಸಿ, ಆಗ ಶಬ್ದಗಳ ಅರ್ಥ ಸರಿಯಾಗಿ ಧ್ವನಿಸುತ್ತದೆ! ನಿಮಗೆ ಅರ್ಥವಾಗುತ್ತದೆ. ಅದಿಲ್ಲವೋ ನೀವು ಹಾಗೇ ಇರಿ ನಾವು ಬರೆಯುತ್ತಲೇ ಇರುತ್ತೇವೆ-ನಿಮ್ಮ ಆ ಕ್ಷುಲ್ಲಕತನದ ಕಲ್ಲೆಸೆತಕ್ಕೆ ಧಕ್ಕೆಗೆ ಒಳಗಾಗುವ ಪುಕ್ಕಲು ಮನಸ್ಸಲ್ಲ ನಮ್ಮದು, ತಿಳಿದಿರಲಿ! ನಮ್ಮ ಬುನಾದಿ ಭದ್ರವಾಗಿದೆ, ಅದಕ್ಕೆ ಛಾವಣಿಯೂ ತಕ್ಕುದಾಗೇ ಇದೆ. ಇಲ್ಲಿ ಬರೆಯುವ ಯಾವ ಮಾಹಿತಿಯೂ ಕಡತಂದ ಸೌಭಾಗ್ಯವಲ್ಲ ಎಂಬುದು ನಿಮಗೆ ತಿಳಿದರೆ ನೀವು ಮತ್ತೆ ಹಾಗೆ ಬೇಕಾಬಿಟ್ಟಿ ಬರೆಯಲಾರಿರಿ ಅಲ್ಲವೇ ? ನಿಮ್ಮ ಮಿಂಚಂಚೆಯನ್ನು ಕೊಡಿ ಇನ್ನೂ ಬೇಕಾದ್ರೆ ನಿಮಗೆ ಮಾಹಿತಿ ನೀಡೋಣ ಮತ್ತು ನಿಮ್ಮಿಂದ ’ಸಂಸ್ಕಾರ’ ದ ಅರ್ಥ ತಿಳಿದುಕೊಳ್ಳಬೇಕಾಗಿದೆ ಕೊಡುವಿರೇ ? ಇಷ್ಟು ಸಾಕಲ್ಲವೇ ]
ಮನಸ್ಸನ್ನು ಹತೋಟಿಯಲ್ಲಿ, ಸಮಚಿತ್ತದಲ್ಲಿ ನಿಭಾಯಿಸಿದವರು ಹೃದಯ ಸಂಬಂಧೀ ಕಾಯಿಲೆಗಳಿಗೆ ತುತ್ತಾಗುವುದೇ ಇಲ್ಲ. ಆದರೆ ನಮ್ಮಲ್ಲಿ ಬಹುಸಂಖ್ಯಾಕರು ನಾವಿದನ್ನು ಪಾಲಿಸದೇ ವಯಸ್ಸಿಗೆ ತಕ್ಕಂತೇ ಬರುವ ಕಾಯಿಲೆಗಳ ಗುಂಪಿಗೆ ಹೃದಯಸ್ತಂಭನ, ಮಧುಮೇಹ, ರಕ್ತದೊತ್ತಡ ಹೀಗೇ ಹೆಸರಿಸಿ ಇಟ್ಟುಕೊಂಡಿದ್ದೇವೆ. ಸತ್ಯವಾದ ಒಂದು ವಾಕ್ಯ ಕೇಳಿ- ಯಾವಾಗ ಭೌತಿಕ ಶರೀರಕ್ಕೂ ನಮ್ಮೊಳಗಿನ ಸೂಕ್ಷ್ಮ ಶರೀರಕ್ಕೂ[ಮನಸ್ಸು ಎಂದಿಟ್ಟುಕೊಳ್ಳೋಣ!] ಲೆಕ್ಕಾಚಾರದಲ್ಲಿ ಭಿನ್ನತೆ ತೋರಿಬರುತ್ತದೋ ಆವಾಗಲೇ ನಮಗೆ ಇಲ್ಲದ ಕಾಯಿಲೆಗಳು ಅಡರಿಕೊಳ್ಳಲು ತೊಡಗುತ್ತವೆ! ನಿಜವಾಗಿ ಯೋಗಿಯಾದವನು ನಿರೋಗಿಯಾಗುತ್ತಾನೆ! ಹಾಗಾದ್ರೆ ಅವನಿಗೂ ೪೦ ವಯಸ್ಸು ದಾಟುವುದಿಲ್ಲವೇ ? ಆತನಿಗೂ ಹಲವು ಕಾಯಿಲೆಗಳು ಮುಪ್ಪಡರುವ ಶರೀರಕ್ಕೆ ಬರುವುದಿಲ್ಲವೇ ? ಇಲ್ಲಾ ಸ್ವಾಮೀ, ಯೋಗಿಗಳು ಕಾಯಿಲೆಗಳನ್ನೆಲ್ಲ ಮೀರಿನಿಲ್ಲುವ ಅದ್ಬುತ ಚೈತನ್ಯ ಪಡೆದಿರುತ್ತಾರೆ! ನೀವು ಬಾಬಾ ರಾಮದೇವ್ ಅವರನ್ನೇ ಕೇಳಿ, ಅವರು ಅಷ್ಟು ಚೆನ್ನಾಗಿ ಹೊಟ್ಟೆ, ಕೈಕಾಲು ಎಲ್ಲವನ್ನೂ ತಿರುಚುತ್ತ ಯೋಗಮಾಡುತ್ತಾರಲ್ಲ ಅವರಿಗೆ ಯವುದಾದರೂ ಕಾಯಿಲೆ ಇಲ್ಲವೇ ? ಉತ್ತರ ನಾನೇ ಹೇಳುತ್ತೇನೆ-ಇಲ್ಲ! ಕಾಯಿಲೆ ಅವರ ಹತ್ತಿರ ಬರುವುದೂ ಇಲ್ಲ!
ಹೋಗಿ ಭಟ್ಟರೆ ನೀವೆಲ್ಲಾ ಆಗಹೋಗದ್ದನ್ನೇ ಹೇಳುತ್ತೀರಿ ಎನ್ನುವ ಮಟ್ಟಕ್ಕೆ ನೀವೀಗ ತಲ್ಪಿರುತ್ತೀರಿ. ಇದನ್ನೇ ನಾನೊಬ್ಬ ಯೋಗಿಯಾಗಿ ಹೇಳಿದರೆ ನನ್ನ ಶಿಷ್ಯಂದಿರಾಗಲು ತಯಾರಾಗುತ್ತೀರಿ! ಪ್ರತ್ಯಾಹಾರವನ್ನು ಅರಿಯಲು, ಅಳವಡಿಸಿಕೊಳ್ಳಲು ಕೇವಲ ಸನ್ಯಾಸಿಯೇ ಆಗಬೇಕೆಂದೇನಿಲ್ಲ, ಸಂಸಾರಿಗಳೂ ಅದನ್ನು ಸಾಧಿಸಬಹುದು. ಮಹಾಭಾರತದ ಮೂಲಕ ಭಗವಾನ್ ಶ್ರೀಕೃಷ್ಣ ಗೀತೆಯಲ್ಲಿ ಇದನ್ನೇ ಲೋಕಾರ್ಪಣೆ ಮಾಡಿದ್ದಾನೆ. ಇದನ್ನು ಸರಿಯಾಗಿ ಅರಿತರೆ, ಅಳವಡಿಸಿಕೊಂಡರೆ ನಮ್ಮಲ್ಲಿರುವ ನೆಗೆಟಿವ್ ಎನರ್ಜಿ ಹೊರಟು ಹೋಗುತ್ತದೆ! ಯಾವಾಗ ನಮ್ಮಲ್ಲಿ ಪಾಸಿಟಿವ್ ಎನರ್ಜಿ ನೆಲೆಸುತ್ತದೋ ನಮ್ಮ ಸಮಸ್ಯೆಗಳಿಗೆ ನಾವೇ ಉತ್ತರ ಕಂಡುಕೊಳ್ಳಲು ಅದು ಕಾರಣವಾಗುತ್ತದೆ. ಯಾವಾಗ ಸಮಸ್ಯೆಗಳು ನಿವಾರಣೆಯಾಗುತ್ತವೆಯೋ ಆವಾಗ ನಮಗೆ ಜೀವನ ಹಗುರವಾಗುತ್ತದೆ, ನಿಜವಾದ ಆನಂದ ದೊರೆಯತೊಡಗುತ್ತದೆ. ಅದೇ ಸ್ವರ್ಗೀಯ ಆನಂದ! ಆ ಆನಂದವನ್ನು ಪಡೆಯ ಬಯಸುವವರು ನಿತ್ಯವೂ ಕೆಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಹಾಗೆ ಪಾಲಿಸುವುದರಿಂದ ಮಾತ್ರ ಆ ಆನಂದವನ್ನು ಪಡೆಯಲು ಸಾಧ್ಯವೇ ಹೊರತು ಅದು ಕೊಂಡುಕೊಳ್ಳುವ ಪ್ರಕ್ರಿಯೆಯಲ್ಲ!
ಇದನ್ನೆಲ್ಲ ನೋಡಿಯೇ ನಮ್ಮ ಆದಿಶಂಕರರು ಹೇಳಿದರು :
ಸತ್ಸಂಗತ್ವೇ ನಿಸ್ಸಂಗತ್ವಂ
ನಿಸ್ಸಂಗತ್ವೇ ನಿರ್ಮೋಹತ್ವಂ |
ನಿರ್ಮೋಹತ್ವೇ ನಿಶ್ಚಲತತ್ವಂ
ನಿಶ್ಚಲತತ್ವೇ ಜೀವನ್ಮುಕ್ತಿಃ ||
ನಿಸ್ಸಂಗತ್ವೇ ನಿರ್ಮೋಹತ್ವಂ |
ನಿರ್ಮೋಹತ್ವೇ ನಿಶ್ಚಲತತ್ವಂ
ನಿಶ್ಚಲತತ್ವೇ ಜೀವನ್ಮುಕ್ತಿಃ ||
ಉಳಿದುದನ್ನು ಮುಂದಿನ ಭಾಗದಲ್ಲಿ ನೋಡೋಣ,
ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು |
ಮಾವೇವೈಷ್ಯಸಿ ಯುಕ್ತ್ವೈವಮಾತ್ಮಾನಂ ಮತ್ಪರಾಯಣಃ ||
|| ಶ್ರೀ ಕೃಷ್ಣಾಯ ತುಭ್ಯಂ ನಮಃ ||
---ನಿಮ್ಮೊಡನೆ ವಿ.ಆರ್.ಭಟ್ ವಿಭಾಗದ 'ಹತ್ತಿರದಿಂದ ' ಪ್ರಬಂಧ ಸಂಕಲನದಿಂದ
ಮಾವೇವೈಷ್ಯಸಿ ಯುಕ್ತ್ವೈವಮಾತ್ಮಾನಂ ಮತ್ಪರಾಯಣಃ ||
|| ಶ್ರೀ ಕೃಷ್ಣಾಯ ತುಭ್ಯಂ ನಮಃ ||
---ನಿಮ್ಮೊಡನೆ ವಿ.ಆರ್.ಭಟ್ ವಿಭಾಗದ 'ಹತ್ತಿರದಿಂದ ' ಪ್ರಬಂಧ ಸಂಕಲನದಿಂದ
ಒಳ್ಳೆಯ ವಿಚಾರ.
ReplyDeleteಅನಾಮಧೇಯರ/ಅಪಕ್ವರ ಟೀಕೆಗಳಿಗೆ ನೀಡಿದ ಉತ್ತರ ಸಮಂಜಸವಾಗಿದೆ.
Thank You Sir
ReplyDeleteಭಟ್ಟರೇ,
ReplyDeleteಅರ್ಥ ಮಾಡಿಕೊಳ್ಳಲುಕಷ್ಟವೇ ಸ್ವಲ್ಪ ಆಯ್ತು. ಗಡಿಬಿಡಿಯಲ್ಲಿ ಓದುವ ಲೇಖನವಲ್ಲ. ಪುರಸತ್ತಾಗಿ ಮತ್ತೊಮ್ಮೆ ಓದುವೆ.