ವೇದಸುಧೆಯಲ್ಲಿ ಹೀಗೆಲ್ಲಾ ಬರೆಯಬಹುದೇ? ಓದುಗರ ಮನದ ಮೇಲೆ ಏನೆಲ್ಲಾ ಪರಿಣಾಮ ಬೀರೀತು! ನೀವು ಹೀಗೆ ಬರೆಯ ಬಾರದು! ವೇದಸುಧೆಯ ಅಭಿಮಾನಿಗಳು ತಪ್ಪು ತಿಳಿದಾರು!!
ಮಿತ್ರರೂ ವೇದಸುಧೆಯ ಮಾರ್ಗದರ್ಶಿಗಳೂ ಆದ ಶ್ರೀ ವಿಷ್ಣು ಭಟ್ಟರು ಯಾವಾಗಲೂ ಕೈತುಂಬ ಕೆಲಸವಿಟ್ಟುಕೊಂಡು ರಾತ್ರಿ ನಿದ್ರೆಗೆಟ್ಟು ಬರವಣಿಗೆ ಮಾಡಿಕೊಂಡು ಬ್ಲಾಗ್ ಲೋಕದಲ್ಲಿ ಒಬ್ಬ ವಿಶಿಷ್ಟ ಸ್ಥಾನವನ್ನು ಪಡಿದಿರುವ ಚಿಂತಕರು.ನಿನ್ನೆ ನಾನು ಬರೆದ "ನಿತ್ಯ ಸತ್ಯ" ಕವನ ವನ್ನು ನೋಡಿದೊಡನೆ ಹಿರಿಯರಾದ ಕವಿನಾಗರಾಜರು ಕವನದ ಎರಡು ಸಾಲುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮರು ಕ್ಷಣವೇ ಆತಂಕದಿಂದ ಪ್ರತಿಕ್ರಿಯಿಸಿದವರು ಶ್ರೀ ಭಟ್ಟರು. "ಏನು ಶ್ರೀಧರ್ ಮರವೇರಿ ಅದರ ಕೊಂಬೆಯಮೇಲೆ ನಿಂತು ಅದಕ್ಕೇ ಕೊಡಲಿ ಹಾಕಿದ್ದೀರಲ್ಲಾ!"- ಭಟ್ಟರು ನಿಜವಾಗಿ ಆತಂಕ ಗೊಂಡಿದ್ದರು. ಆತುರದಲ್ಲಿ ಯಾವುದೋ ಬರವಣಿಗೆಯಲ್ಲಿ ತೊಡಗಿದ್ದರೂ ನಡು ನಡುವೆ ನನ್ನ ಕವನಕ್ಕೆ ಅವರು ಬರೆದ ಪ್ರತಿಕ್ರಿಯೆಗಳಿಗೆ ನಾನೇನು ಉತ್ತರ ಕೊಟ್ಟಿದ್ದೀನೆಂದು ಕಾತುರದಿಂದಲೇ ನೋಡುತ್ತಾ ಮರು ಕ್ಷಣವೇ " ಹಾಗಲ್ಲಾ , ಶ್ರೀಧರ್ ವೇದಸುಧೆಯು ವೇದಾಭಿಮಾನಿಗಳಲ್ಲಿ ಸಂದೇಹಗಳನ್ನು ಮೂಡಿಸಬಾರದು, ಎಂಬ ವಿವೇಕವನ್ನು ಹೇಳುತ್ತಾ ಪ್ರತಿಕ್ರಿಯಿಸುತ್ತಿದ್ದರು.
ನಿಜವಾಗಿ ಅವರ ಕಳಕಳಿಯನ್ನು ಗಮನಿಸಿದಾಗ " ವೇದಸುಧೆಯನ್ನು " ಅಭಿಮಾನಿಗಳು ಇಷ್ಟು ಸೀರಿಯಸ್ ಆಗಿ ತೆಗೆದುಕೊಂಡಿದ್ದಾರಲ್ಲಾ! ಎಂಬ ಸಂತೋಷವೂ ಆತಂಕವೂ ಒಟ್ಟಿಗೇ ಆಯ್ತು.
ಈಗ ವೇದಸುಧೆಯ ಉದ್ಧೇಶದ ಬಗ್ಗೆ ಮತ್ತೊಮ್ಮೆ ಮೆಲುಕು ಹಾಕುವೆ. ವೇದಸುಧೆಯನ್ನು ಆರಂಭಿಸಿದೊಡನೆ ಅನೇಕರು ಹೇಗೆ ಭಾವಿಸಿದರೆಂದರೆ "ಇಲ್ಲಿ ವೇದಮಂತ್ರಗಳು, ವ್ರತಕಥಾದಿಗಳು, ಧಾರ್ಮಿಕ ಆಚರಣೆಗಳು, ಸ್ತೋತ್ರಗಳು" ಇತ್ಯಾದಿ ವಿಚಾರಗಳು ಪ್ರಕಟವಾಗುತ್ತವೆಂದು ತಿಳಿದು ಕೆಲವರಂತೂ ನನಗೆ ಕರೆಮಾಡಿ ಒಂದು ಪೂಜಾಕ್ರಮದ ಬಗ್ಗೆ ವಿಚಾರಿಸಿದರು. ಸುಧಾಕರ ಶರ್ಮರ ವಿಚಾರಗಳನ್ನು ಕೇಳಿದವರು ಈ ವಿಚಾರಗಳ ಬಗ್ಗೆ ಸಿ.ಡಿ. ಇದೆಯೇ ,ಇಲ್ಲದಿದ್ದರೆ ನನಗೆ ಬೇಕಲ್ಲಾ! ಎಂದು ಬೇಡಿಕೆ ಇಟ್ಟರು. ಕಳೆದ ಒಂದು ತಿಂಗಳಿನಿಂದ ಸುಧಾಕರ ಶರ್ಮರ ಉಪನ್ಯಾಸಗಳನ್ನು ಎರಡು ಮೂರು ಸಿ.ಡಿ. ಬರೆದು ಕೊಡುವುದು ನನ್ನ ನಿತ್ಯ ಕಾಯಕವಾಗಿ ಬಿಟ್ಟಿದೆ. ಒಂದು ವಿಚಾರವನ್ನು ನಾನು ಸ್ಪಷ್ಟಗೊಳಿಸಲೇ ಬೇಕು. ವೇದಸುಧೆಯ ಆರಂಭಕ್ಕೆ ಕಾರಣಕರ್ತರು ಶ್ರೀ ಸುಧಾಕರ ಶರ್ಮರೇ. ಬೇಲೂರಿನಲ್ಲಿ ಈಗ್ಗೆ ನಾಲ್ಕೈದು ವರ್ಷಗಳ ಹಿಂದೆ ನಡೆದ ಉಪನ್ಯಾಸ ಒಂದರ ಆರು ಕ್ಯಾಸೆಟ್ ಗಳನ್ನು ಮಿತ್ರರಾದ ಬೇಲೂರು ವಿಶ್ವನಾಥಶರ್ಮರು ನನಗೆ ಕೇಳಿಸಿದ್ದರಿಂದ ಅದರಿಂದ ಆಕರ್ಶಿತನಾದ ನಾನು ಅವುಗಳನ್ನೆಲ್ಲಾ ಎಂ.ಪಿ-೩ ಕ್ಕೆ ಕನ್ವರ್ಟ್ ಮಾಡಿ ಹಲವು ಮಿತ್ರರಿಗೆ ಕೇಳಿಸಿ "ಸಂಪದ" " ವಿಸ್ಮಯ" ಮುಂತಾದ ಅಂತರ್ಜಾಲದ ತಾಣಗಳಲ್ಲಿಯೂ ನನ್ನ " ನೆಮ್ಮದಿಗಾಗಿ" ಬ್ಲಾಗ್ ನಲ್ಲಿಯೂ ಅವುಗಳನ್ನೆಲ್ಲಾ ಅಪ್ ಲೋಡ್ ಮಾಡಿದ ನಂತರ ಬಂದ ಮೆಚ್ಚುಗೆಯಿಂದ " ವೇದಸುಧೆಯ" ಆರಂಭವಾಯ್ತು.
ನಂತರ ವೇದಸುಧೆಗೆ ಹಲವು ಚಿಂತಕರನ್ನು ಆಹ್ವಾನಿಸಿಈ ತಾಣವನ್ನು ಒಂದು ಬಳಗದ "ತಾಣವಾಗಿ" ವಿಸ್ತರಿಸಲಾಯ್ತು. ಆಗ ಹಲವು ರೀತಿಯ ಬರಹಗಳು ಹರಿದು ಬಂದವು. ಒಂದು ಧಾರ್ಮಿಕ ಕಾರ್ಯಕ್ರಮದ ಬಗ್ಗೆ ಪ್ರಕಟವಾದ ಲೇಖನಕ್ಕೆ " ವೇದಸುಧೆಯಲ್ಲಿ ಒಂದು ಕಟ್ಟುಪಾಡಿನ ಆಚರಣೆಯನ್ನು ಪ್ರಕಟಿಸುವುದು ಸೂಕ್ತವೇ? ಎಂಬ ಬಗ್ಗೆ ಪ್ರಶ್ನೆಗಳೂ ಹರಿದು ಬಂತು" ಆನಂತರ ಹತ್ತಿರವಿದ್ದು ನನಗೆ ಮಾರ್ಗದರ್ಶನ ಮಾಡುತ್ತಿರುವ ಹಿರಿಯರಾದ ಕವಿ ನಾಗರಾಜರೊಡನೆ ಕುಳಿತು ಚರ್ಚಿಸಿ ನಾವಿಬ್ಬರೂ ಸೇರಿ ಒಂದು ನಿರ್ಧಾರಕ್ಕೆ ಬಂದೆವು " ವೇದಸುಧೆಯು ಒಂದು ಚಿಂತನ-ಮಂಥನ ವೇದಿಕೆಯಾದರೆ ತಪ್ಪಿಲ್ಲ" ನೂರಾರು ವರ್ಷಗಳಿಂದ ನಡೆದುಕೊಂದು ಬಂದಿರುವ ಕೆಲವು ಆಚರಣೆಗಳಿಗೆ ವೇದದ ಹಿನ್ನೆಲೆಯೇ ಇಲ್ಲ, ಅರ್ಥ ಹೀನ ಆಚರಣೆಗಳು, ಎಂಬ ವಾದ ಒಂದೆಡೆ ಇದ್ದರೆ, ನಮ್ಮ ಆಚರಣೆಗಳಿಂದ ನಿಮಗೇನು ತೊಂದರೆ ಸ್ವಾಮಿ, ನಮ್ಮಷ್ಟಕ್ಕೆ ನೆಮ್ಮದಿಯಾಗಿರಲು ನಮ್ಮನ್ನು ಬಿಡಿ, ಎಂಬ ಮಾತುಗಳೂ ಕೇಳಿಬಂದವು. ಇದು ಸಹಜ. ಸಾವಿರಾರು ವರ್ಷಗಳಿಂದ ಇಂತಹ ಜಿಜ್ಞಾಸೆ ಇದ್ದೇ ಇದೆ. ಇದಕ್ಕೆ ಕೊನೆ ಎಂಬುದು ಬರಲಾರದು. ಹಾಗಾಗಿಯೇ " ಮೊನ್ನೆ ಅವರವರ ಭಾವಕ್ಕೆ " ಎಂಬ ವಿಚಾರದ ಬಗ್ಗೆ ವೇದಸುಧೆಯಲ್ಲಿ ಚರ್ಚೆ ಮಾಡಿದ್ದಾಯ್ತು.
ಹೀಗೆ ಚಿಂತನೆ ಮಾಡುತ್ತಾ ವೇದಸುಧೆಯು ಸಧ್ಯಕ್ಕೆ ಒಂದು ನಿರ್ಧಾರಕ್ಕೆ ಬಂದಿದೆ " ವೇದದಲ್ಲಿ ಏನು ಹೇಳಿದೆ, ಎಂಬುದರ ಬಗ್ಗೆ ಸುಧಾಕರ ಶರ್ಮರು ಹಲವು ವಿವರಣೆ ನೀಡಿರುವ ಉಪನ್ಯಾಸದ ತುಣುಕುಗಳನ್ನು ಪ್ರಕಟಿಸುತ್ತಾ ಹೋಗುತ್ತದೆ" ಈ ಬಗ್ಗೆ ಚರ್ಚೆ ನಡೆಯಬೇಕು. ಹಾಗೆಯೇ ವೇದಗಳ ಬಗ್ಗೆ ಬೇರೆ ಯಾರೇ ವಿದ್ವಾಂಸರು ಉಪನ್ಯಾಸವನ್ನು ನೀಡಿದರೂ ಕೂಡ ಅದರ ಆಡಿಯೋ/ ವೀಡಿಯೋ ತುಣುಕುಗಳನ್ನು ವೇದಸುಧೆಯಲ್ಲಿ ಬರೆಯಲವಕಾಶವಿರುವ ಬಳಗದ ಯಾವುದೇ ಸದಸ್ಯರೂ ಪ್ರಕಟಿಸಲು ಸ್ವತಂತ್ರರು. ಅವುಗಳ ಬಗ್ಗೆಯೂ ಚರ್ಚೆ ನಡೆಯಬೇಕು. ಅಂತಿಮವಾಗಿ ಅವುಗಳಿಂದ ನಮ್ಮ ಬದುಕನ್ನು ಹಸನುಗೊಳಿಸುವ ಕೆಲವು ಸೂತ್ರಗಳು ಲಭ್ಯವಾಗಬೇಕಷ್ಟೆ. ಶೀ ಶರ್ಮರು" ಶ್ರಾದ್ಧ " ದ ಬಗ್ಗೆ ಭಿನ್ನವಾಗಿ ಮಾಡಿರುವ ಉಪನ್ಯಾಸವು ಈಗಾಗಲೇ ವೇದಸುಧೆಯು ಪ್ರಕಟಿಸಿದೆ. ಅದನ್ನು ನಾವು ಒಪ್ಪಬೇಕೆಂದೇನೂ ಆಗ್ರಹವಿಲ್ಲ. ಆದರೆ ಇತಹ ವಿಚಾರಗಳಬಗ್ಗೆ ಒಂದು ಆರೋಗ್ಯಕರವಾದ ಚರ್ಚೆ ನಡೆಯ ಬೇಡವೇ? ಒಟ್ಟಿನಲ್ಲಿ ಬದುಕನ್ನು ಗೊಂದಲಮಯವಾಗಿ ಮಾಡಿಕೊಳ್ಳದೆ ಸಾರ್ಥಕ ಬದುಕಿಗೆ ನೆರವಾಗುವ ಯಾವುದೇ ಆರೋಗ್ಯಕರ ಚರ್ಚೆಯು ವೇದಸುಧೆಯಲ್ಲಿ ನಡೆಯಬೇಕೆಂಬುದು ವೇದಸುಧೆಯ ಅಪೇಕ್ಷೆ.
ಅಂತೂ ವೇದಸುಧೆಯಲ್ಲಿ ವೈಚಾರಿಕವಾಗಿ ಎರಡು ಭಾಗಗಳಿರುತ್ತವೆ. ಒಂದರಲ್ಲಿ ಅನೂಚಾನವಾಗಿ ನಡೆದುಕೊಂಡು ಬಂದಿರುವ ಪೂಜೆ ಪುನಸ್ಕಾರಗಳು, ಧಾರ್ಮಿಕ ಚರಣೆಗಳ ಬಗ್ಗೆ ಲೇಖಕರು ಪ್ರಕಟಿಸಲು ಅವಕಾಶ ಇರುತ್ತದೆ. ಮತ್ತೊಂದರಲ್ಲಿ ವೇದದ ವಿಚಾರಗಳ ಚಿಂತನೆಗಳಿರುತ್ತವೆ. ಯಾವುದೇ ಬರಹಗಳಬಗ್ಗೆ ಚರ್ಚೆಯಂತೂ ನಡೆಯಲು ಅವಕಾಶವು ಇದ್ದೇ ಇದೆ. ಚರ್ಚೆಗಳು ಹಳಿತಪ್ಪುವ ಸಂದರ್ಭ ಒದಗಿಬಂದರೆ ವೇದಸುಧೆಯ ಬಳಗವು ಕೂಡಿ ಬಹುಮತದ ತೀರ್ಮಾನ ತೆಗೆದುಕೊಳ್ಳುತ್ತದೆ.ಇಷ್ಟೆಲ್ಲಾ ಬರೆದ ಮೇಲೆ ಇನ್ನು ನಿಮ್ಮ ಅಭಿಪ್ರಾಯವನ್ನು ತಿಳಿಸಬೇಕಲ್ಲವೇ?
No comments:
Post a Comment