ಹುಟ್ಟು ಸಾವುಗಳೆಲ್ಲ ನಮ್ಮ ಕೈಯೊಳಗಿಲ್ಲ
ಪಟ್ಟ ಪದವಿಯ ಬಯಸಿ ಹೊರಟಿಹೆವು ನಾವು
ಕೊಟ್ಟ ಪಾತ್ರವ ಮಾಡು ಪೋಷಿಸುತ ಚೆನ್ನಾಗಿ
ಮೆಟ್ಟಿ ಮಿಥ್ಯದ ಬಯಕೆ | ಜಗದಮಿತ್ರ
ಹೊರಗೆ ಬಣ್ಣದ ಗೋಡೆ ಒಳಗೆ ಮಣ್ಣಿನಗಚ್ಚು
ನರನಾಡಿಗಳ ರೀತಿ ತಂತಿ ತುಂಬಿಹುದು
ನರನ ನಯನವ ನಲಿಸಿ ಬಣ್ಣ ಬಿರುಕನು ಮುಚ್ಚಿ
ಹರನಮರೆಸುವ ತಂತ್ರ | ಜಗದಮಿತ್ರ
ಇರುವನಕ ಬೇಕೆಮಗೆ ಸಂಪತ್ತು ಧನಕನಕ
ಬರುವಾಗ ತರಲಿಲ್ಲ ಹೋಗುವಾಗಿಲ್ಲ
ಮರೆಯದಲೆ ಉಪಕ್ರಮಿಸು ಪರದ ಸತ್ಯವನರಿತು
ಗುರುತನದಿ ಬಾಳುನೀ | ಜಗದಮಿತ್ರ
ಕರ್ಮಬಂಧನದಿಂದ ಬಂಧಿತವು ಈ ಜೀವ
ಮರ್ಮವರಿಯದ ನಮಗೆ ತರುತಿಹುದು ಕಾವ
ಚರ್ಮವ್ಯಾಧಿಯರೀತಿ ಮರುಹುಟ್ಟು ಮತ್ತಂತ್ಯ
ತೀರ್ಮಾನ ಮನಕಿರಲಿ | ಜಗದಮಿತ್ರ
ಹಳೆಯ ಕಟ್ಟಡದಂತೆ ಸೋರುವುದು ಜೀವಜಗ
ಮಳೆಯ ಅಜ್ಞಾನದಾ ನೀರು ಹನಿಸುತಲಿ
ಕೊಳೆಯ ಎಳೆಯುತ ತಂದು ಸೋಕಿಸುತ ಮೈಮನಕೆ
ಮೆಳೆಯ ಮಾಯೆಯ ಮುಸುಕಿ | ಜಗದಮಿತ್ರ
ನನ್ನಮನೆ ನನ್ನಜನ ನಾನು ನನದೇ ಎಂಬ
ಕನ್ನವಿಕ್ಕುವ ಕೆಲಸ ಕಾರ್ಯಗಳು ಬೇಡ
ಮುನ್ನ ನೀ ಅರ್ಥವಿಸಿ ಚೆನ್ನಾಗಿ ಬ್ರಹ್ಮಾಂಡ
ಕನ್ನಯ್ಯನೊಲುಮೆ ಪಡೆ| ಜಗದಮಿತ್ರ
ಮತ್ತೆ ಹುಟ್ಟುವ ಬಯಕೆ ಗಗನದೆತ್ತರದಾಸೆ
ಮತ್ತುಬರಿಸುತ ಆತ್ಮಕಡರುತಿದೆ ಬಳ್ಳಿ
ಕುತ್ತು ಇದ ತಿಳಿದು ನೀ ಪಥ್ಯಜೀವಿತ ನಡೆಸಿ
ಹತ್ತು ಆ ಪರಮಪದ | ಜಗದಮಿತ್ರ
-ವಿ.ಆರ್ .ಭಟ್
ಶ್ರೀ ಭಟ್ಟರ 'ವಿಧಿಲಿಖಿತ' ಕುರಿತ ಲಿಖಿತ ಸುಂದರವಾಗಿದೆ.
ReplyDeleteಧನ್ಯವಾದಗಳು ಕವಿನಾಗರಾಜ್ ಅವರಿಗೂ ಮತ್ತು ಓದಿದ ಎಲ್ಲರಿಗೂ
ReplyDelete