ಆ ಜೀವಾತ್ಮನ ಸ್ವರೂಪವೇನು? ವೇದ ಹೇಳುತ್ತಲಿದೆ:-
ದಂಡಾ ಇವೇದ್ ಗೋ ಅಜನಾಸ ಆಸನ್ ಪರಿಚ್ಛಿನ್ನಾ ಭರತಾ ಅರ್ಭಕಾಸಃ|
ಅಭವಚ್ಛ ಪುರ ಏತಾ ವಸಿಷ್ಠ ಆದಿತ್ ತೃತ್ಸೂನಾಂ ವಿಶೋ ಅಪ್ರಥಂತ|| (ಋಕ್. ೭.೩೩.೬)
[ಪರಿಚ್ಛಿನ್ನಃ] ಏಕದೇಶಿಗಳೂ [ಭರತಾ] ಶರೀರಧಾರಿಗಳೂ [ಅರ್ಭಕಾಸಃ] ಅಣುಪ್ರಮಾಣರೂ ಆದ ಜೀವಾತ್ಮರು [ಗೋ ಅಜನಾಸಃ ದಂಡಾಃ ಇವ] ಗೋವುಗಳನ್ನು ಮುನ್ನಡೆಸುವ ದಂಡಗಳಂತೆ [ಗೋ ಅಜನಾಸಃ] ಇಂದ್ರಿಯಗಳು ಮತ್ತು ವಾಣಿಯನ್ನು ಸಂಚಾಲನಗೊಳಿಸುವವರು [ಆಸನ್] ಆಗಿದ್ದಾರೆ. [ವಸಿಷ್ಠಃ] ಸರ್ವಶ್ರೇಷ್ಠ ಆಧಾರ ಮತ್ತು ಆಶ್ರಯದಾತೃವಾದ ಭಗವಂತನು [ಪುರ ಏತಾ ಅಭವತ್] ಇವರ ನಾಯಕನಾಗಿದ್ದಾನೆ. [ಆತ್ ಇತ್] ಅನಂತರವೇ [ತೃತ್ಸೂನಾಮ್] ತೃಪ್ತಿಯನ್ನರಸುವ, ತೃಷಿತರಾದ ಜೀವಾತ್ಮರ [ವಿಶಃ] ಮಕ್ಕಳು [ಅಪ್ರಥಂತ] ವಿಕಸಿತರಾಗುತ್ತಾರೆ.
ಮೊದಲಿನ ಎರಡು ಚರಣಗಳಲ್ಲಿ ಜೀವಾತ್ಮರ ಲಕ್ಷಣಗಳನ್ನು ಹೇಳಿ ಆಮೇಲೆ ವೇದವು ಜೀವಸಂತತಿ ಉತ್ಕರ್ಷ ಹೊಂದಬೇಕಾದರೆ ಭಗವಂತನ ಆದೇಶದಂತೆ ವರ್ತಿಸಬೇಕು ಎಂದು ಬೋಧಿಸುತ್ತದೆ.
ಪರಿಚ್ಛಿನ್ನ ಚೇತನನಾದ ಜೀವಾತ್ಮನು ಬೇರೆ ಬೇರೆ ಯೋನಿಗಳಲ್ಲಿ ಜನಿಸಿ ಕ್ರಮವಾಗಿ ವಿಕಾಸ ಹೊಂದುತ್ತಾ ಹೋಗುತ್ತಾನೆ. ಪುನರ್ಜನ್ಮ ಸಿದ್ಧಾಂತ ಕೇವಲ ಒಂದು ಕುರುಡು ನಂಬಿಕೆಯಲ್ಲ. ಆತ್ಮನು ಪರಮಾತ್ಮನಿಂದ ಸೃಜಿಸಲ್ಪಟ್ಟವನು, "ಇದೇ ಮೊದಲನೆಯ ಜನ್ಮ, ಇದೇ ಅವನ ಕೊನೆಯ ಜನ್ಮ "- ಎಂದು ಹೇಳುವ ಸಾಂಪ್ರದಾಯಿಕರಿಗೆ ಆಧ್ಯಾತ್ಮಿಕ ಜಗತ್ತಿನ ವೈಶಾಲ್ಯದ ಅರಿವೇ ಇಲ್ಲ. ಆತ್ಮನು ಅನಾದಿ-ಅನಂತ, ಅವನು ತನ್ನ ಕರ್ಮಾನುಸಾರ ಒಳ್ಳೆಯ ಅಥವಾ ಕೆಟ್ಟ ಜನ್ಮಗಳನ್ನೆತ್ತುತ್ತಾನೆ. ಪುನರ್ಜನ್ಮಕ್ಕೆ ಪ್ರತ್ಯಕ್ಷ ಪ್ರಮಾಣ ಇಲ್ಲವೆನ್ನುವವರು ಮಾನವ ಜೀವನವನ್ನೂ ಕೂಡ ತೆರೆದ ಕಣ್ಣುಗಳಿಂದ ಅವಲೋಕಿಸುವುದಿಲ್ಲ. ಒಂದೇ ಮಾತಾ-ಪಿತೃಗಳಿಂದ ಜನ್ಮ ತಾಳಿದ ಅಣ್ಣ-ತಮ್ಮಂದಿರಲ್ಲಿಯೂ, ಅಕ್ಕ-ತಂಗಿಯರಲ್ಲಿಯೂ ಕೂಡ ಸಾಮರ್ಥ್ಯ-ಅಭಿರುಚಿ ಮೊದಲಾದುವುಗಳಲ್ಲಿ ವ್ಯತ್ಯಾಸವೇಕೆ? ಕೆಲವರು ೧೦-೧೦ ಗಂಟೆ ದುಡಿದರೂ ಸಾಫಲ್ಯ ಗಳಿಸರು. ಕೆಲವರಿಗೆ ಶ್ರಮವಿಲ್ಲದಿದ್ದರೂ ಸಾಫಲ್ಯ ತಾನಾಗಿ ಒಲಿಯುವುದು. ಈ ಜೀವನದಲ್ಲಿ ಸತ್ಪ್ರವೃತ್ತಿಗಳಲ್ಲೇ ತೊಡಗಿದ್ದರೂ ನಾನಾ ರೋಗರುಜಿನಗಳಿಂದ, ಕಷ್ಟ-ಕಾರ್ಪಣ್ಯಗಳಿಂದ ನರಳುವುದು, ಇದೆಲ್ಲಾ ಏತಕ್ಕಾಗಬೇಕು? ಗಂಭೀರವಾಗಿ ಆಲೋಚಿಸಿದಾಗ ಇದೊಂದೇ ಸಾರಿಯಲ್ಲ ನಾವು ಹುಟ್ಟಿರುವುದು, ಅದೆಷ್ಟೋ ಸಾರಿ ಜನ್ಮವೆತ್ತಿ ನಾನಾ ಬಗೆಯ ಸುಸಂಸ್ಕಾರ-ಕುಸಂಸ್ಕಾರಗಳ ಬುತ್ತಿ ಕಟ್ಟಿಕೊಂಡು ಬಂದಿದ್ದೇವೆ ಎಂಬುದು ತಾನಾಗಿಯೇ ಗೊತ್ತಾಗುತ್ತದೆ. ಭಗವಂತನಂತೂ ನಿರ್ದಯ ಹಾಗೂ ಅನ್ಯಾಯಕಾರಿಯಲ್ಲ. ನಮಗೆ ಹಿಂದಿನ ಜನ್ಮಗಳ ನೆನಪಿಲ್ಲ ಎಂದ ಮಾತ್ರಕ್ಕೆ ಪುನರ್ಜನ್ಮವೇ ಇಲ್ಲವೇ? ಈ ಜನ್ಮದಲ್ಲಿಯೇ ನಾವು ಮಾಡಿದ ಅನೇಕ ಕಾರ್ಯಗಳ, ಓದಿದ ಅನೇಕ ಪಾಠಗಳ ನೆನಪಿರುವುದಿಲ್ಲ, ಅಂದ ಮಾತ್ರಕ್ಕೆ ನಾವು ಆ ಕಾರ್ಯಗಳನ್ನು ಮಾಡಿಯೇ ಇಲ್ಲವೇ? ಆ ಪಾಠಗಳನ್ನು ಓದಲೇ ಇಲ್ಲವೇ? ಪುನರ್ಜನ್ಮದ ಸಂಸ್ಕಾರ ಪ್ರಬಲವಾಗಿರುವ ಕೆಲವರಿಗೆ ಹಿಂದಿನ ಜನ್ಮದ ನೆನಪೂ ಇರುತ್ತದೆ. ಸಾಧಾರಣತಃ ಜನರಿಗೆ ಅದರ ನೆನಪಿಲ್ಲದಿರುವುದೂ ಭಗವತ್ಕೃಪೆಯೇ ಎಂದರಿಯಬೇಕು. ಏಕೆಂದರೆ, ಹಿಂದಿನ ಜನ್ಮಗಳ ನಮ್ಮ ಕಾರ್ಯಗಳೆಲ್ಲಾ ನಮಗೆ ನೆನಪಿದ್ದರೆ ಘಳಿಗೆ ಘಳಿಗೆಗೂ ಏನಾಗುವುದೋ ಎಂಬ ಭೀತಿಯೇ ಬಾಳನ್ನು ಹಾಳುಮಾಡಿಬಿಡುತ್ತಿತ್ತು.
ಇದು ನನ್ನ ಸ್ಪಸ್ಟ ಅಭಿಪ್ರಾಯ-ಕೆಲವರಿಗೆ ಕಟು ಎನಿಸಬಹುದು-ಈ ಪುನರ್ಜನ್ಮವೇ ಮೊದಲಾದ ಮೂಡನಂಬಿಕೆಯಲ್ಲಿ ಬಿದ್ದು ಒದ್ದಾಡುತ್ತಿರುವುದೇ ನಮ್ಮ ಅವನತಿಗೆ ಕಾರಣ. ಈ ಪುನರ್ಜನ್ಮ,ಪಲಜ್ಯೋತಿಷ್ಯ-ಇವುಗಳನ್ನೆಲ್ಲಾ ಕಿತ್ತು ಬಿಸಾಡಿ ಹೊಸ ಮೂರನೆಯ ಸಹಸ್ರಮಾನಕ್ಕೆ ವೈಜ್ಞಾನಿಕ ದೃಷ್ಟಿಕೋನದೊಂದಿಗೆ (ನಮ್ಮ ವೇದ ಕರ್ತೃಗಳಂತೆ) ಹಿಂದೂಗಳು ಅಡಿಯಿಡಬೇಕು.
ReplyDeleteಸುಬ್ರಹ್ಮಣ್ಯರೇ, ನಾವು ಒಪ್ಪಲಿ ಬಿಡಲಿ ಪುನರ್ಜನ್ಮ ಎಂಬುದಿದೆ ಎಂದು ಒಪ್ಪಲೇ ಬೇಕಾಗುತ್ತದೆ, ಕೆಲವೊಮ್ಮೆ ಪುನರ್ಜನ್ಮ ಪಡೆದ ವ್ಯಕ್ತಿಗಳು ಹಿಂದಿನ ಜನ್ಮವನ್ನು ನೆನೆಸಿಕೊಳ್ಳಲೂ ಭಗವಂತ ಅನುಕೂಲ ಕೊಟ್ಟು ಅದು ಈಗ ಋಜುವಾತಾದ ವಿಷಯ, ಇನ್ನು ಫಲಜ್ಯೋತಿಷ್ಯ ಇತ್ತೀಚೆಗೆ ಹಣಮಾಡುವವರ ಉದ್ಯಮವಾಗಿದೆ, ಅದಲ್ಲದಿದ್ದರೆ ಅದರಲ್ಲೂ ಹುರುಳಿದೆ ಎಂಬುದನ್ನು ಅನುಭವದಿಂದ ಸಾಧಿಸಿತೋರಿಸಿದವರಿದ್ದಾರೆ. ಸಹಸ್ರಮಾನ ಯಾವುದೇ ಬಂದರೂ ಬೆಂಕಿ-ನೀರು-ಗಾಳಿ-ಆಕಾಶ-ಭೂಮಿ ಇವೆಲ್ಲಾ ಹೇಗೆ ಸುಳ್ಳಾಗುವುದಿಲ್ಲವೋ ಹಾಗೇ ಜೀವಾತ್ಮನ ಚಲನಕ್ರಿಯೆ ಸುಳ್ಳಾಗುವುದಿಲ್ಲ. ನೀವು ಹೇಳಿದ್ದನ್ನು ನೆನೆದಾಗ ಲೌಕಿಕ ವ್ಯವಹಾರಗಳಿಗೆ ಸಂಬಂಧಿಸಿದಂತೇ ’ಬೆಕ್ಕು ಕಣ್ಣು ಮುಚ್ಚಿ ಹಾಲುಕುಡಿದರೆ ಜಗತ್ತಿಗೆ ಕಾಣುವುದಿಲ್ಲ’ ಎಂದು ಹೇಳುತ್ತಾರಲ್ಲ ಆ ಗಾದೆ ನೆನಪಾಗುತ್ತದೆ. ನಿಮ್ಮ ಅಭಿಪ್ರಾಯಕ್ಕೆ ಸ್ವಾಗತ, ನನ್ನ ವಿಶ್ಲೇಷಣೆ ಹೀಗಿದೆ ಆಗದೇ?
ReplyDeleteಬೇಜಾರಿಲ್ಲ ಭಟ್ಟರೇ.
ReplyDelete