Pages

Wednesday, December 29, 2010

ಊಟವನ್ನು ಏಕೆ ಮಾಡಬೇಕು?ಯಾವಾಗ ಮಾಡಬೇಕು?ಏನು ಸೇವಿಸಬೇಕು? Part-1

ಶ್ರೀ ಶ್ರೀನಾಥರ ಪ್ರಶ್ನೆಗೆ ಶ್ರೀ ಸುಧಾಕರಶರ್ಮರು ನೀಡಿರುವ ವಿವರಣೆ ಇಲ್ಲಿದೆ.

 ಆಹಾರಸೇವನೆಯ ಬಗ್ಗೆ ವೇದ ಮತ್ತು ಆಯುರ್ವೇದ ಹಿನ್ನೆಲೆಯಲ್ಲಿ ಒಂದಷ್ಟು ವಿಚಾರಗಳು.
1. ಊಟ ಏಕೆ ಮಾಡಬೇಕು?
ನಿರಂತರ ಕಾರ್ಯಚಟುವಟಿಕೆಗಳಿಂದ ಕಳೆದುಹೋದ ಶಕ್ತಿಯನ್ನು ಮರುಪೂರೈಕೆ ಮಾಡಲು. (ಹಾಗಾಗಿ ನಾವು ತಿನ್ನುವ ಆಹಾರದಲ್ಲಿ ಶಕ್ತಿಯಿರಬೇಕು ಎಂಬುದನ್ನು ಮತ್ತ ಹೇಳಬೇಕಿಲ್ಲ).
2. ಯಾವಾಗ ತಿನ್ನಬೇಕು?
ಹಸಿವಾದಾಗ. ಹಸಿವೆಯಲ್ಲಿ ಎರಡು ವಿಧ - ನಿಜ ಹಸಿವು, ಕಳ್ಳ ಹಸಿವು!
ಗಡಿಯಾರ ನೋಡಿ ಊಟ ಮಾಡುವವರಿಗೆ ಆ ಸಮಯಕ್ಕೆ ಸರಿಯಾಗಿ ಹೊಟ್ಟೆಯಲ್ಲಿ ಏನೋ ಒಂದು ತರಹ ಆಗುತ್ತದೆ. ಅದನ್ನು ಹಸಿವೆಂದು ತಿನ್ನುತ್ತಾರೆ. ಇದು ಕಳ್ಳ ಹಸಿವು. ನಮಗೆ ಇಷ್ಟವಾದ ತಿನಿಸನ್ನು ನೋಡಿದಾಗಲೂ ಹಸಿವಿನಂತೆ ಏನೂ
ಆಗುತ್ತದೆ. ಇದೂ ಕಳ್ಳ ಹಸಿವು.
ಮೊದಲು ತಿಂದ ಆಹಾರ ಜೀರ್ಣವಾದಮೇಲೆ ಆಹಾರ ತಿನ್ನುವ ಬಯಕೆ ಆದಲ್ಲಿ ಅದು ನಿಜ ಹಸಿವು. ಮೊದಲು ತಿಂದ ಆಹಾರ ಜೀರ್ಣವಾಗಿದೆ ಎಂದು ತಿಳಿಯುವುದು ಹೇಗೆ?
ಉದ್ಗಾರ ಶುದ್ಧಿರುತ್ಸಾಹೋ ವೇಗೋತ್ಕರ್ಷೋ ಯಥೋಚಿತಃ|
ಲಘುತಾ ಕ್ಷುತ್ ಪಿಪಾಸಾ ಚ ಜೀರ್ಣಾಹಾರಸ್ಯ ಲಕ್ಷಣಮ್||
ಉಸಿರು ಶುದ್ಧವಾಗಿರಬೇಕು, ಬಾಯಿ ವಾಸನೆಯಿರಬಾರದು, ಕಮರು ತೇಗು ಮೊದಲಾದವು ಇರಬಾರದು; ಉತ್ಸಾಹ, ಲವಲವಿಕೆ ಇರಬೇಕು; ಮಲಮೂತ್ರಾದಿಗಳು ಕಾಲಕಾಲಕ್ಕೆ ಸರಿಯಾಗಿ ಆಗಿ, ಅವುಗಳ ಶೇಷ ಶರೀರದಲ್ಲಿ ಇರಬಾರದು; ಹಗುರವಾಗಿದೆ ಎನಿಸಬೇಕು, ಮೈ-ಮನಗಳು ಭಾರವಾಗಿವೆ ಎಂದೆನಿಸಬಾರದು; ನೀರನ್ನು ಕುಡಿದರೂ ಅದರ ಸವಿ ನಾಲಿಗೆಗೆ ಅರಿವಾಗಬೇಕು. ಇಂತಹ ಹಿನ್ನೆಲೆಯಲ್ಲಿ ಹೊಟ್ಟೆಯಲ್ಲಿ ಚುಮು ಚುಮು ಎಂದು, ಆಹಾರ ಸೇವಿಸಬೇಕು ಎಂದೆನಿಸಿದರೆ ಅದು ನಿಜವಾದ ಹಸಿವು.!! (ಎಷ್ಟು ಸಲ ನಾವು ಊಟಕ್ಕೆ ಮುಂಚೆ ಎಷ್ಟೆಲ್ಲಾ ಪರಿಶೀಲನೆ ಮಾಡಿದ್ದೇವೆ?! - ನನ್ನನ್ನೂ ಸೇರಿಸಿಕೊಂಡು!)
3. ಏನು ಸೇವಿಸಬೇಕು?
ಆಗಲೇ ಹೇಳಿದ ಹಾಗೆ ಸತ್ವಭರಿತವಾದ ಆಹಾರವನ್ನು ಸೇವಿಸಬೇಕು.
(ಮುಂದುವರೆಸುವೆ)
-ಸುಧಾಕರ ಶರ್ಮ

2 comments:

  1. ....ಚಿಕ್ಕ ಚೊಕ್ಕ ಬರಹ ಚೆನ್ನಾಗಿ ಮೂಡಿಬಂದಿದೆ ....ಮುಂದಿನ ಭಾಗವನ್ನು ಕುತೂಹಲದಿಂದ ನಿರೀಕ್ಷಿಸುತ್ತಿದ್ದೇನೆ ...ಅಂದಹಾಗೆ , ನಾನು ಸುಧಾಕರ ಶರ್ಮರವರ ಅಭಿಮಾನಿಯೆಂದು ತಿಳಿಸಲು ಹೆಮ್ಮೆ ಹಾಗೂ ಹರ್ಷಪಡುತ್ತೇನೆ . ಅವರು ನೂರ್ಕಾಲ ಬಾಳಲಿ !! ....ಅವರಿಗೆ ನನ್ನ ವಿನಮ್ರ ಪ್ರಣಾಮಗಳು .

    ReplyDelete
  2. (ಮುಂದುವರೆದಿದೆ)
    ಪ್ರಕೃತಿಯು ಮನುಷ್ಯರಿಗಾಗಿ ಸಿದ್ಧಪಡಿಸಿರುವ ಆಹಾರವು ಅತ್ಯಂತ ಸತ್ವಭರಿತ, ಶ್ರೇಷ್ಠ. ಅವೇ ಹಣ್ಣುಗಳು. ಮಾನವರು ಶರೀರರಚನೆಯ ಆಧಾರದ ಮೇಲೆ ವೈಜ್ಞಾನಿಕವಾಗಿ ಹೇಳುವುದಾದರೆ ಬರೀ Vegetarian ಅಷ್ಟೇ ಅಲ್ಲ, Frutarian! Dry Fruits ಮತ್ತು Nuts ಕೂಡ ಇದರೊಂದಿಗೆ ಸೇರುತ್ತದೆ.
    ಆ ಹಣ್ಣುಗಳನ್ನು ಬೆರೆಸುವ, ಅವಕ್ಕೆ ಸ್ವಲ್ಪ ಹಾಲು, ಬೆಲ್ಲ, ಜೇನು, ಕಾಯಿತುರಿ ಇತ್ಯಾದಿಗಳನ್ನು ಬೆರೆಸಿ/ಸಂಸ್ಕರಿಸಿ ಬಳಸಿದರೂ Good. ಮೊಳಕೆ ಬರಿಸಿ ಸೇವಿಸಿದರೂ Good. ಆದರೆ, ಸತ್ವಭರಿತದಲ್ಲೇ ಎರಡನೆಯ ದರ್ಜೆ.
    ಆಹಾರವನ್ನು ಬೇಯಿಸಿ ತಿನ್ನುವುದು ಮುಂದಿನ ಕೆಳದರ್ಜೆ. ಈ ದರ್ಜೆಯಲ್ಲಿ ಬೇಯಿಸಿರುವುದಷ್ಟೇ. ಆದರೆ ಸಪ್ಪೆ. ಅಥವಾ ಅತ್ಯಂತ ಸ್ವಲ್ಪ ಉಪ್ಪು, ಹುಳಿ, ಖಾರ.
    ಇಲ್ಲಿಂದ ಮುಂದೆ ಸೇವಿಸಲು ಅರ್ಹವಾದದ್ದಿಲ್ಲ. ಅವುಗಳ ವಿವರ ಹೀಗಿದೆ.
    ಬೇಯಿಸಿದ ಆಹಾರ. ಯದ್ವಾತದ್ವಾ ಉಪ್ಪು, ಹುಳಿ, ಖಾರಗಳನ್ನು ಹಾಕಿ ತಿನ್ನುವುದು. (ಆದರೂ ಪರವಾಗಿಲ್ಲ! ಕಾಲಾನಂತರದಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದಾಗ ಬಿಡಲೇಬೇಕಾಗುತ್ತದೆ!!)
    ಮುಂದಿನದು ನಿಷಿದ್ಧ ಆಹಾರ.
    ಹಿಂಸೆಯ ಪರಿಣಾಮವಾಗಿ ಬರುವ ಮಾಂಸಾಹಾರ.
    (ಈ ಬಗ್ಗೆ ವ್ಯಾಪಕ ಚರ್ಚೆ ಯಾವಾಗಲೂ ನಡೆಯುತ್ತಿರುತ್ತದೆ. ಮಾಂಸಾಹಾರವನ್ನು ಸಮರ್ಥಿಸುವವರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ತಮ್ಮ ನಾಲಿಗೆಗೆ/ಚಪಲಕ್ಕೆ ಸಿಲುಕಿರುತ್ತಾರೆ. ಹೃದಯವಾಗಲೀ, ಮಿದುಳಾಗಲೀ ಕೆಲಸ ಮಾಡುತ್ತಿರುವುದಿಲ್ಲ!)
    ಇದರ ಬಗ್ಗೆ ಮತ್ತೊಮ್ಮೆ ವ್ಯಾಪಕವಾಗಿ ಚಿಂತಿಸೋಣ.
    Golden Rule ಹೀಗಿದೆ -
    ಪ್ರಕೃತಿಗೆ ಎಷ್ಟು ಹತ್ತಿರವಾಗಿರುತ್ತೇವೋ, ಸಂಸ್ಕರಣ ಎಷ್ಟು ಕಡಿಮೆಯಿರುತ್ತದೋ (Zero ಕೂಡ ಆಗಬಹುದು) ಅಷ್ಟೂ ಆ ಆಹಾರ ಸೇವಿಸಲು ಹೆಚ್ಚು ಹೆಚ್ಚು ಯೋಗ್ಯವಾಗಿರುತ್ತದೆ.
    ಮುಂದಿನ ಪ್ರಶ್ನೆ ಹೇಗೆ ಸೇವಿಸಬೇಕು?
    (ಮುಂದುವರೆಯುವುದು)

    ReplyDelete