Pages

Saturday, December 4, 2010

"ಸಪ್ತಗರಿ ಸಂಪದ" ಶ್ರೀವೆಂಕಟೇಶ ಪುರಾಣಕಥೆ -(ಒಂದು ಶೋಧನೆ)

ಕಲ್ಯಾಣಾದ್ಭುತ ಗಾತ್ರಾಯ ಕಾಮಿತಾರ್ಥ ಪ್ರದಾಯಿನೇ |

ಶ್ರೀಮದ್ವೆಂಕಟನಾಥಾಯ ಶ್ರೀನಿವಾಸಾಯತೇನಮಃ ||

ಜಗತ್ತು ತ್ರಿಗುಣಾತ್ಮಕವಾಗಿದೆ. ಇಲ್ಲಿ ಮೂರು ಭಾಗ ಜಲಾವೃತವಾಗಿದೆ. ಒಂದು ಭಾಗ ಮಾತ್ರ ಭೂಮಿ. ಈ ಒಂದು ಭಾಗ ಭೂಮಿಯಲ್ಲಿ ಮೂರು ಭಾಗ ಪರಮ ಪಾಪಿಗಳೆ ತುಂಬಿದ್ದಾರೆ. ಹೌದು, ಪರಮ ಪಾಪಿಗಳಿಗೇ ಸುಭಿಕ್ಷ ಕಾಲವೆಂದರು ನಮ್ಮ ಹರಿದಾಸರು 15ನೇ ಶತಮಾನದಲ್ಲಿಯೆ. ಈಗ ಜನ ಸಂಖ್ಯೆ ಹೆಚ್ಚುತ್ತಲೇ ಇದೆ ಪರಮ ಪಾಪಿಗಳೂ ಹೆಚ್ಚುತ್ತಲೆ ಇದ್ದಾರೆ. ಹೌದು, ಮೂರು ಭಾಗ ಪರಮ ಪಾಪಿಗಳಾದರೆ, ಇನ್ನೊಂದು ಭಾಗದಲ್ಲಿ ಸಾತ್ವಿಕರು. ಈ ಸಾತ್ವಿಕರಿಂದಲೇ ಇಡೀ ಜಗತ್ತು ಅಸ್ತಿತ್ವದಲ್ಲಿರುವುದು; ಚಲನೆಯಲ್ಲಿರುವುದು. ಜಗತ್ತಿನಲ್ಲಿ ಸಾತ್ವಿಕ ಶಕ್ತಿಯೆ ಮೇಲು. ನಾವು ಯಾರ ಜೊತೆ ಬದುಕ ಬೇಕೆಂಬುದ ನಮ್ಮ ಆಯ್ಕೆಗಷ್ಟೇ ಎದಿರಾಗಿ ಬಿಡುವುದು ಒಂದು ಸವಾಲು ಅಲ್ಲವೇ...?

ತಿರುಪತಿ ತಿರುಮಲೇಶ ಸಂಪತ್ತಿನ ಸ್ವಾಮಿ, ಬಡ್ಡಿ ಕಾಸಿನವನೆಂದೇ ಭಾವಿಸುವುದಲ್ಲ. ಅವನು ಸಾತ್ವಿಕ ಸಂಪನ್ನ. ಇಡೀ ಜಗತ್ತಿಗೆ ಸಾತ್ವಿಕ ಶಕ್ತಿ ಸಾರಲೆಂದೇ ಭೂಮಿಗಿಳಿದು ಬಂದ ಭಗವಂತನವನು ಎಂಬ ಸತ್ಯ ತಿಳಿದವರೂ ಕಡಿಮೆಯೆ . ಭಕ್ತಿ ಭಾವದಿಂದ ಅವನಿಗೆ ಹರಕೆ ಕಾಣಿಕಗಳನ್ನೊಪ್ಪಿಸಿದರೆ ಸಾಕು, ತಮ್ಮ ಇಷ್ಟಾರ್ಥಗಳು ಸಿದ್ಧಿಸುವುವೆಂದು ನಂಬಿರುವ ಸಮುದಾಯ ಬಹಳ ದೊಡ್ಡದು. ಸಾಮಾನ್ಯವಾಗಿ ರಾಮಾಯಣ ,ಮಹಾಭಾರತ ಈ ಎರಡು ಮಹಾ ಪುರಾಣ ಕಥೆಗಳು ಎಲ್ಲಕಾಲಕ್ಕೂ ಸಮಕಾಲೀನ ಜೀವನ ಮೌಲ್ಯಗಳನ್ನು ಒದಗಿಸುತ್ತವೆ ಎಂಬ ಭಾವನೆಯೆ ಪ್ರಚಲಿತದಲ್ಲಿದೆ.. ಇವುಗಳನ್ನು ಹೊರತು ಪಡಿಸಿ ಬೇರೆ ಯಾವುದಾದರೂ ಪುರಾಣ ಕಥೆ ನಮ್ಮ ಬದುಕಿಗೆ ಮೌಲಿಕ ವೆನಿಸೀತೇ.... ಸಾರ್ವಕಾಲಿಕ ಸತ್ಯವನ್ನು ತೆರೆದಿಡಬಲ್ಲದೇ ಎಂಬ ಶೋಧನೆಯಲ್ಲಿ ನಾನಿದ್ದಾಗ ಮೂಡಿ ಬಂದ ಕೃತಿ “ಸಪ್ತಗಿರಿ ಸಂಪದ”. ಮಹಾಭಾರತದಷ್ಟು ವಿಸ್ತಾರವಾದ ವಿಸ್ತೃತವಾದ ಭೂಮಿಕೆಯಲ್ಲಿ ಜೀವನಮೌಲ್ಯಗಳನ್ನು ಈ ಕೃತಿ ಒದಗಿಸಲಾರದು. ಮಹಾಭಾರತದ ವಿಧುರ,ಧರ್ಮರಾಜ,ವಿಭೀಷಣ ಹಾಗೂ ರಾಮಾಯಣದ ಸಾತ್ವಿಕ ಪ್ರಭು ಶ್ರೀರಾಮಚಂದ್ರನ ಪಾತ್ರಗಳಲ್ಲಿ ಸತ್ವಗುಣದ ಹಿರಿಮೆಯನ್ನೇ ಈ ಕೃತಿಯಲ್ಲೂ ಕಾಣಬಹುದು. ಹೌದು,ಸತ್ವಗುಣಾಧಿಕ್ಯ ಹೊಂದುವುದರಿಂದಲೇ ಮನುಷ್ಯ ರಾಜೋ ಮತ್ತು ತಮೋಗುಣವನ್ನು ಹಾಗೂ ಅರಿಷಡ್ವರ್ಗಗಳನ್ನೂ ಗೆಲ್ಲಬಹುದು. ಮನುಷ್ಯ ಸಭ್ಯನಾಗಿರುವುದು, ಸಭ್ಯಗೃಹಸ್ಥನಾಗಿ ಬದುಕುವುದೇ ಮುಖ್ಯವಲ್ಲವೇ...?

1998ರಲ್ಲಿ ಪ್ರಕಟವಾದ ಈ ನನ್ನ ಪೌರಾಣಿಕ ಕೃತಿ ಸಾಕಷ್ಟು ಜನ ಮನ್ನಣೆ ಗಳಿಸಿತಾದರೂ , ತಿರುಪತಿ ಪುಣ್ಯಕ್ಷೇತ್ತ್ರದ ಗಣ್ಯರ ಗಮನಕ್ಕೆ ಇನ್ನೂ ಬಂದಿಲ್ಲ. ಈ ಪ್ರಚಾರ ಪ್ರಪಂಚದಲ್ಲಿ ನನ್ನಂಥ ಸಾಮಾನ್ಯ ಲೇಖಕನಿಗೆ ಅದು ಸಾಧ್ಯವೂ ಆಗದ ಮಾತಲ್ಲವೇ... ಈ ಬರಹಗಾರನ ಬದುಕಿನಲ್ಲೊಂದು ಮಹತ್ವದ ಕೃತಿಯಾಗಿರುವ ಈ “ಸಪ್ತಗಿರಿ ಸಂಪದ” ವನ್ನು ಅಂತರ್ಜಾಲದಲ್ಲಿ ಪೌರಾಣಿಕ ಕಥಾನಕವಾಗಿ ಬ್ಲಾಗ್ ಮಾಡ ಬಯಸಿದ್ದೇನೆ. ದಯವಿಟ್ಟು ಇದನ್ನೊಂದು ಧಾರ್ಮಿಕ ಕೃತಿಯೆಂದು ನೀವು ಖಂಡಿತ ಊಹಿಸಿದಿರಿ. ಮುಖ್ಯವಾಗಿ ಇಂದಿನ ಪೀಳಿಗೆಯ ಎಲ್ಲ ಧರ್ಮೀಯರೂ ಇಷ್ಟ ಪಡುವಂತಹ ಸಾರ್ವಕಾಲಿಕವಾದ ಸಾಮಾಜಿಕ ಮೌಲ್ಯಗಳು ಈ ಕೃತಿಯಲ್ಲಿದೆ. ಜಗತ್ತಿನಲ್ಲಿ ಸಭ್ಯನಾಗಿರುವುದು ಸಭ್ಯಗೃಹಸ್ತನಾಗಿ ಬದುಕುವುದನ್ನು ಬಿಟ್ಟರೆ ಬೇರೇನಿದೆ ಎಂದು ಹೇಳಿದರೆ ಏನೂ ಹೇಳಿದಂತಾಗದು..... ಈ ಸಪ್ತಗಿರಿ ಸಂಪದದ ಸ್ವಾರಸ್ಯ ಮತ್ತು ಸಾರವಿರುವುದೇ ಸಾತ್ವಿಕತೆ ಮತ್ತು ಸಾತ್ವಿಕ ಶಕ್ತಿ ಸಂದೇಶದಲ್ಲಿ.


ನೀವೂ ತಿರುಪತಿ ಪುಣ್ಯ ಕ್ಷೇತ್ರವನ್ನು ಸಂದರ್ಶಿಸಿರಬಹುದು. ನಾನು ಮೊದಲ ಬಾರಿಗೆ ಭೇಟಿ ಕೊಟ್ಟಾಗ (1993)ಯಾಕೆ ಇಲ್ಲಿ ಜನ ತಂಡೋಪತಂಡವಾಗಿ ಬರುತ್ತಾರೆ. ತಮ್ಮ ಹರಕೆ ಕಾಣಿಕೆಗಳನ್ನೊಪ್ಸಿದ ಈ ಜನ ತಮ್ಮ ಮುಂದಿನ ಬದುಕಿಗೆ ಅದೇನನ್ನು ಕೊಂಡೊಯ್ಯುತ್ತಾರೆಂದು ತುಂಬ ತಲೆ ಕೆಡಿಸಿಕೊಂಡವನು. ಅಲ್ಲಿ ಸಿಗುವ ಮಗ್ಗಿ ಪುಸ್ತಕಗಳ ಮಾದರಿಯ ಸ್ಥಳ ಪುರಾಣ ಕಥೆಯಿಂದ ಬದುಕಿಗೆ ಭಕ್ತಿಯೊಂದನ್ನು ಹೊರುತು ಪಡಿಸಿ ಬೇರೇನನ್ನೂ ಕಾಣದವನಾಗಿ ಚಡಪಡಿಸಿದವನು. ಅಷ್ಟೇ ಅಲ್ಲ, ಜಗತ್ತಿನಲ್ಲಿ ಈ ದೇವರ ದರ್ಶನ ಮಾಡುತ್ತಿದ್ದಂತೆ ಪಾಮರರೂ ,ಪಾಪಿಗಳು, ಜ್ಞಾನಿಗಳೆಲ್ಲರೂ ಒಕ್ಕೊರಲಿನಿಂದ “ಗೋವಿಂದಾ” ಎಂದು ಕೈಮುಗಿಯುವುದೇಕೆಂದು ಚಿಂತಾಕ್ರಾಂತನಾದವನು. ಇಲ್ಲಿ ಸಹಸ್ರಾರು ಜನರು ಪ್ರತಿದಿನವೂ ದೇವರ ದರ್ಶನಕ್ಕಾಗಿ ಬರುತ್ತಿದ್ದಾರೆಂದರೆ, ಇಲ್ಲಿ ಅದೆಂಥ ಚುಂಬಕ ಶಕ್ತಿ ಇದ್ದೀತು! ಅದು ಸಾತ್ವಿಕ ಶಕ್ತಿಯೆ...?

ಭೃಗು ಮಹರ್ಷಿಯಿಂದ ಪರೀಕ್ಷೆಗೊಳಗಾದ ಶ್ರೀಹರಿ ತಾನೇ ಸಾತ್ವಿಕನೆಂದು ಶೃತ ಪಡಿಸುತ್ತಾನಲ್ಲವೇ..?, ಆ ಶ್ರೀಹರಿಯ ಸಾತ್ವಿಕ ಸಂದೇಶವು ಆ ಮೂರು ಲೋಕಗಳಿಗೆ ಮಾತ್ರ ಸೀಮಿತವೆನಿಸುತ್ತದೆ. ಆನಂತರ, ಭಕ್ತಿರಸವಷ್ಟೇ ಪ್ರಧಾನವಾಗಿಬಿಡುತ್ತದೆ. ಆದರೆ, ಇಡೀ ಜಗತ್ತಿಗೆ ಸಾತ್ವಿಕ ಸಂದೇಶವನ್ನು ಆ ಸಾತ್ವಿಕ ಶಕ್ತಿಯೇ ಮೇಲೆಂದು ಸಾರಲು ಶ್ರೀಹರಿಯು ಶ್ರೀನಿವಾಸನಾಗಿ ಧರೆಗೆ ಬಂದನೆಂಬುದನ್ನು ಪುಟಪುಟಗಳಲ್ಲಿಯೂ ನಾವು ಕಾಣಬಹುದಾಗಿದೆ. ಅದೇ ಸಾಮಾನ್ಯವಾಗಿ ಲಭ್ಯವಿರುವ ಸ್ಥಳಪುರಾಣ ಕಥೆ ಪುಸ್ತಕಗಳಲ್ಲಿ ಕಾಣಸಿಗಲಾರದು.

ಇಂದಿನ ಯುವ ಪೀಳಿಗೆಯು ಏನೆಲ್ಲವನ್ನೂ ಪ್ರಾಕ್ಟಿಕಲ್ ಲೈಫ್ ಗೆಂದೇ ಹೋಲಿಸಿನೊಡುವಂತಹ ಈ ಕಾಲಮಾನದಲ್ಲಿ ಬದುಕುತ್ತಿರುವ ಹಿರಿಯರಾದ ನಾವು, ಅವರ ಅಂತಹ ಉಪಯುಕ್ತತೆ ಏನಿದೆ ಪುರಾಣ ಕಥೆಗಳಲ್ಲಿ ಎಂಬ ಅನೇಕ ಪ್ರಶ್ನೆಗಳಿಗೆ ಉತ್ತರಿಸಲು ಖಂಡಿತ ಸಾಧ್ಯವಿದೆ ಎಂಬುದೇ ನಮ್ಮ ಸಾಂಸ್ಕೃತಿಕ ಹಗ್ಗಳಿಕೆಯಾಗಿದೆ.

ಶ್ರೀ ವೆಂಕಟೇಶ ಪುರಾಣವನ್ನು ಪುರಾಣ ಕಥೆಯನ್ನು ತಳಸ್ಪರ್ಶಿಯಾಗಿ ಅಧ್ಯಯನ ಮಾಡಿ ಶೋಧನೆಗಿಳಿದಾಗ ನಮ್ಮ ಆದಿ ಋಷಿಗಳು ಎಂಥಹ ಮಹಾಜ್ಞಾನಿಗಳು. ಅವರು ಯುಗಪ್ರವರ್ತಕರು. ಪ್ರಗತಿಗಾಮಿಗಳು. ದೂರದೃಷ್ಟಿಯುಳ್ಳವರು. ಮನುಕುಲಕೆ ಮಾರ್ಗದರ್ಶಕರು. ಅವರು ತಮ್ಮ ಕೃತಿ ರಚನೆಯಲ್ಲಿ ಭಕ್ತಿಭಾವದಿಂದಲೇ, ಮಾನವೀಯ ಪ್ರೀತಿ ಪ್ರೇಮದ ಪರಿಯಲ್ಲೇ ನಮ್ಮೆಲ್ಲರ ಇಂದ್ರಿಯ ಕಲ್ಯಾಣದ ಶಿಷ್ಟ ಸಂಸ್ಕೃತಿಯನ್ನು ಕಟ್ಟಿಕೊಡುವ ಪ್ರಯತ್ನ ಮಾಡಿರುವರು ಎಂಬುದು ವೇದ್ಯವಾಗುತ್ತದೆ.
ಆದ್ದರಿಂದ, ಇಂತಹ ಸ್ಥಳ ಪುರಾಣಗಳಷ್ಟೋ ಇವೆಯಲ್ಲ... ಅವೆಲ್ಲ ಕಂದಾಚಾರದ ಮೌಢ್ಯತುಂಬಿದವುಗಳಲ್ಲ. ಭಕ್ತಿಮಾರ್ಗದ ಇನ್ನೊಂದು ಮುಖವೇ ಜ್ಞಾನಮಾರ್ಗ ಎನ್ನುತ್ತಾರೆ. ನಮ್ಮ ಮಹರ್ಷಿಗಳ ಪರಂಪರೆಯೇ ಅಂತಹದು. ಆ ಮಹರ್ಷಿಗಳು ತಮ್ಮ ದಾರ್ಶನಿಕ ದೃಷ್ಟಿಯಲ್ಲೇ ದೇವರ ದರ್ಶನವನ್ನೂ ಮಾಡಿಸಿರುವ ದ್ರಷ್ಟಾರರು.
ಇದೇ ಯುಗದಲ್ಲಿ ಆಗಿ ಹೋದ ಮಹಾನ್ ಯೋಗಿಗಳು, ಪ್ರಗಲ್ಭಜ್ಞಾನಿಗಳು, ದಾಸವರೇಣ್ಯರೂ ಯಾವೊಂದೂ ಫಲಾಪೇಕ್ಷೆಯಿಲ್ಲದೆಯೆ ಅವರು ಕಂಡಂಥ ದೇವರನ್ನು ನಾವು ಸ್ವತಃ ಕಾಣಲಾರವೇಕೆ? ಅನಿಸಿದಾಗ ನಾವು ವೇದಕಾಲದ ಆ ದಾರ್ಶನಿಕರ ಪ್ರಪಂಚಕ್ಕೇ ಹೋಗಬೇಕಾಗುತ್ತದೆ. ಅದು ವ್ಯಷ್ಟಿ-ಸಮಷ್ಟಿಯನ್ನು ನೈತಿಕ ಮತ್ತು ಅಧ್ಯಾತ್ಮಿಕ ಶಕ್ತಿಗಳೇ ನಿಗ್ರಹಿಸುತ್ತಿದ್ದ ಕಾಲ. ಆ ಕಾಲವನ್ನು ನಾವು ಒಳ ಹೊಕ್ಕು ನೋಡಬೇಕಾಗುತ್ತದೆ...

ಅಂತಹ ಒಂದು ಪ್ರಯತ್ನವನ್ನೊಳಗೊಂಡಿದೆ; ತಿರುಮಲೇಶನ ಸ್ಥಳ ಈ ಪುರಾಣ ಕಥೆ "ಸಪ್ತಗಿರಿ ಸಂಪದ". ಸುಮಾರು ಏಳುವರ್ಷಗಳೇ ಈ ಕೃತಿಯ ಬಗ್ಗೆ ಚಿಂತಿತನಾಗಿ ಚಿಂತನೆಗಿಳಿದವನು ನಾನು. ನಾನು ಇಲ್ಲಿ ಮಾಡಿರುವುದು ಶೋಧನೆಯೋ ಅಥವಾ ಆ ದೇವ ದೇವ ಗೋವಿಂದನ ಪ್ರೇರಣೆಯಲ್ಲಿ ಈ ಕೆಲಸ ಮಾಡಿದ್ದೇನೆಂದೇ ನನ್ನ ನಂಬಿಕೆ. ದಯವಿಟ್ಟು, ನೀವೂ ಬನ್ನಿ ಈ ವೆಂಕಟೇಶ ಪುರಾಣ ಕಥೆಯಲ್ಲೇ ಮತ್ತೊಮ್ಮೆ ಒಳ ಹೊಕ್ಕು ನೋಡಬನ್ನಿ,
ಆ ಭಗವಂತನ ಪ್ರೇರಣೆಯಿಂದ ಮೊದಲು ಕನ್ನಡದಲ್ಲಿ ಬರೆದ ಕೃತಿ "ಸಪ್ತಗಿರಿ ಸಂಪದ" 1998 ರಲ್ಲಿ ಪ್ರಕಟವಾಯಿತು (ಕೃತಿಗಳು ಲಭ್ಯವಿಲ್ಲ)

ದಯವಿಟ್ಟು ಕ್ಷಮಿಸಿಬಿಡಿ, ಖಂಡಿತ ನಾನು ಪ್ರಚಾರ ಪ್ರಿಯನಲ್ಲ.
"ಬಿನ್ನಹಕೆ ಬಾಯಿಲ್ಲವಯ್ಯ; ಅನಂತ ಅಪರಾಧ ನನ್ನಲ್ಲಿ ಇರಲಾಗಿ"
ಎಂಬ ದಾಸರ ವಾಣಿಯೂ ಏಕೋ ನೆನಪಾಗುತ್ತಿದೆಯಲ್ಲ....

ಹಾಂ, ಏಳು ವರುಷಗಳೇ ಕಳೆದರೂ ಈ ಕೃತಿ ಇನ್ನೂ ಗಣ್ಯರ ಗಮನಕ್ಕೆ ಬಂದಿಲ್ಲವೆಂದರೆ, ನಾನು ಮಾಡಿದ ಅಪರಾಧವೇನು ಎಂಬುದಾದರೂ ತಿಳಿಯಬಾರದೇ...? ಯಾಕೆಂದರೆ, ಇದೇ ಕೃತಿಯನ್ನು ಇತ್ತೀಚೆಗೆ ಇಂಗ್ಲೀಷ್ ನಲ್ಲೂ(ಸಂಪೂರ್ಣ ಉಚಿತ ಇ-ಪುಸ್ತಕ ಲಭ್ಯವಿದೆ The Message from Seven Hills) ಬರೆದು ಇನ್ನೊಂದು ಮಹಾಪರಾಧವನ್ನೇ ಮಾಡಿದೆನೇನೋ....(ನನ್ನ ಅಭಿಪ್ರಾಯದಲ್ಲಿ ಇಂಗ್ಲೀಷ್ ನಲ್ಲಿ ಇನ್ನಷ್ಟು ಮೌಲಿಕ ಅಂಶಗಳು ಮೂಡಿ ಬಂದಿದ್ದು ಅಚ್ಚರಿಯುಂಟು ಮಾಡಿದೆ; ಈಗ ಮತ್ತೊಮ್ಮೆ ಕನ್ನಡದಲ್ಲಿ ಬರೆಯುವ ಉತ್ಕಟೇಚ್ಛೆ ಯೂ ಇದೆ. ಈ ಪ್ರಯತ್ನದಲ್ಲಿ ನನಗೊಂದಿಷ್ಟು ಸಮಾಧಾನ ಸಿಕ್ಕಿರುವುದಂತೂ ನಿಜ).
ಅಷ್ಟಕ್ಕೂ, ನಮ್ಮ ಪುರಾಣ ಕಥೆಗಳಲ್ಲಿ ಇಲ್ಲದ ಹುಳುಕನ್ನು ಹೆಕ್ಕಿ ತೆಗೆದು ಪ್ರಚಾರಗಿಟ್ಟಿಸಿದವರಿಗೇನು ಕಡಿಮೆಯಿಲ್ಲವಲ್ಲ! ಆದರೆ, ಒಂದು ಪುರಾಣ ಕಥೆಯಲ್ಲಿ ಸಮಕಾಲೀನ ಜೀವನ ಮೌಲ್ಯಗಳನ್ನು ಶೋಧಿಸುವುದೆಂದರೆ ಅದು ಸುಲಭವೇನಲ್ಲವೆಂದರೆ ಉತ್ಪ್ರೇಕ್ಷೆಯಾಗಲಾರದು.
(ಸೂಚನೆ:ತಿದ್ದಿ ತಿದ್ದಿ ಬರೆದ ಬರಹವೇ ಅತ್ಯುತ್ತಮವಾಗುವುದು ಎಂದು ನಮ್ಮ ಹಿರಿಯ ಸಾಹಿತಿ ಶಿವರಾಮ ಕಾರಂತರು ಹೇಳಿದ್ದಾರೆ. ಈ ನನ್ನ ಪುರಾಣ ಕಥೆಯ ಬರವಣಿಗೆಯನ್ನು ಅದೆಷ್ಟು ಬಾರಿ ತಿದ್ದಿದ್ದೇನೆಯೋ ಆ ಸಪ್ತಗಿರಿಯೊಡೆಯ ಗೋವಿಂದನಿಗೆ ಅದೇನು ಪ್ರೀತಿಯೋ.. .)

No comments:

Post a Comment