Pages

Thursday, February 10, 2011

ಡಾ|| ವೀರೇಂದ್ರಹೆಗ್ಗಡೆಯವರಿಗೆ "ನಿಜವ ತಿಳಿಯೋಣ" ಸಿ.ಡಿ ಪರಿಚಯ

ಕಳೆದ ಶ್ರಾವಣ ಹುಣ್ಣಿಮೆಯ ದಿನ ಹಾಸನದ ಧರ್ಮಸ್ಥಳ ಆಯುರ್ವೇದ ಮಹಾವಿದ್ಯಾಲಯದಲ್ಲಿ ಸದ್ಭಾವನಾದಿನಕ್ಕೆ ನನ್ನನ್ನು ಆಹ್ವಾನಿಸಿದ್ದರು. ಅಲ್ಲಿ ನಾನು ಹಂಚಿಕೊಂಡ ನನ್ನ ತೊದಲ್ನುಡಿಗಳನ್ನು ಆಲಿಸಿದ ನನ್ನ ಮಿತ್ರರೊಬ್ಬರು ನಿಮ್ಮ ಮಾತುಗಳು ರೆಕಾರ್ಡ್ ಆಗಿವೆಯೇ? ಆಗಿದ್ದರೆ ಕೆಲವರಿಗೆ ಕೇಳಿಸಬೇಕು ಎಂದರು.ನನ್ನ ಕಿಸೆಯಲ್ಲಿದ್ದ ಮೊಬೈಲ್ ಧ್ವನಿಯನ್ನು ಸೆರೆಹಿಡಿದಿತ್ತು. ಈಗಾಗಲೇ ಒಮ್ಮೆ ವೇದಸುಧೆಯಲ್ಲಿ ಹಂಚಿಕೊಂಡಿದ್ದೆ. ನಿನ್ನೆ ಪುನ: ಧರ್ಮಸ್ಥಳ ಆಯುರ್ವೇದ ಮಹಾವಿದ್ಯಾಲಯಕ್ಕೆ ಭೇಟಿನೀಡುವ ಅವಕಾಶವು ಎದುರಾಯ್ತು. ಹಾಸನದಲ್ಲಿ ನಡೆಯಲಿರುವ ಪ್ರಾಂತಮಟ್ಟದ ಸಂಸ್ಕೃತ ಶಿಕ್ಷಕರ ಪ್ರಶಿಕ್ಷಣ ವರ್ಗವನ್ನು ಆಯುರ್ವೇದ ಮಹಾವಿದ್ಯಾಲದ ಹಾಸ್ಟೆಲ್ ನಲ್ಲಿ ನಡೆಸುವ ವಿಚಾರದಲ್ಲಿ ಅಲ್ಲಿಗೆ ಆಗಮಿಸಿದ್ದ ಧರ್ಮಾಧಿಕಾರಿಗಳೊಡನೆ ಮಾತನಾಡುವ ಸಂದರ್ಭ ಒದಗಿಬಂದಿತ್ತು. ಪ್ರಶಿಕ್ಷಣವರ್ಗವನ್ನು ತಮ್ಮ ಆಡಳಿತದ ಸಂಸ್ಥೆಯಲ್ಲಿ ನಡೆಸಲು ಧರ್ಮಾಧಿಕಾರಿಗಳು ಬಲು ಸಂತೋಷದಿಂದ ಒಪ್ಪಿಕೊಂಡು ಖಾಸಗಿಯಾಗಿ ಕೆಲವು ನಿಮಿಷಗಳು ಮಾತನಾಡಲು ಅವಕಾಶವನ್ನು ಕೊಟ್ಟಿದ್ದರು. ಡಾ|| ವೀರೇಂದ್ರ ಹೆಗ್ಗಡೆಯವರಿಗೆ ವೇದಸುಧೆಯ ಪರಿಚಯವನ್ನು ಮಾಡಿಕೊಟ್ಟಿದ್ದೇ ಅಲ್ಲದೆ ಮೊನ್ನೆ ವಾರ್ಷಿಕೋತ್ಸವದಲ್ಲಿ ಬಿಡುಗಡೆಯಾದ ಸಿ.ಡಿಯ ವಿವರ ತಿಳಿಸಿ ಅವರಿಗೆ ಸಮರ್ಪಿಸಲಾಯ್ತು. ಅಲ್ಲಿಂದ ಶ್ರವಣಬೆಳಗೊಳಕ್ಕೆ ಹೋಗಲಿದ್ದ ಡಾ|| ವೀರೇಂದ್ರ ಹೆಗ್ಗಡೆಯವರು ದಾರಿಯುದ್ದಕ್ಕೂ ಕಾರಿನಲ್ಲಿ ಕೇಳುವುದಾಗಿ ಹೇಳಿ ಕಾರ್ ಚಾಲಕರಿಗೆ ಸಿ.ಡಿಯನ್ನು ಕೊಟ್ಟು ಸೂಚನೆ ನೀಡಿದರು. ಅಲ್ಲಿಂದ ಹಿಂದಿರುಗಿದ ನಂತರ ನನ್ನ ಮಿತ್ರರೊಡನೆ ಮಾತನಾಡುವಾಗ ಸದ್ಭಾವನಾ ದಿನದ ನೆನಪಾಯ್ತು. ಅಂದಿನ ಮಾತುಗಳನ್ನು ಕೇಳಬೇಕಲ್ಲಾ, ಎಂದರು. ಅವರಿಗೆ ಕೇಳಿಸಿದ್ದನ್ನು ನಿಮಗೂ ಮತ್ತೊಮ್ಮೆ ಕೇಳಿಸುತ್ತಿರುವೆ. ಎಂದಿನಂತೆ ನಿಮ್ಮ ಅನಿಸಿಕೆಯು ಅಪೇಕ್ಷಣೀಯ.



3 comments:

  1. ಯಾರೂ ದುಃಖವನ್ನು ಅನುಭವಿಸದಿರಲಿ ಎಂಬ ನಿಮ್ಮ ಕಳಕಳಿಗೆ ತಲೆಬಾಗಿದ್ದೇನೆ.
    ವೈದ್ಯರು ಚಿಕಿತ್ಸಕರೇನೋ ಹೌದು ಆದರೆ ಅದಕ್ಕಿಂತ ಮೊದಲು ಬೋಧಕರು, ಶಿಕ್ಷಕರು ಎಂಬ ಮಾತು ಎಂದಿಗೂ ಸತ್ಯ.
    ಆಯುರ್ವೇದದ ಮೂಲ ವೇದಗಳಲ್ಲಿದೆ, ಋಷಿ ಮುನಿಗಳ ತಪಸ್ಸಿನ ಫಲ ವೇದ, ಆಯುರ್ವೇದ ಮೊದಲಾದವು.
    ಒಂದು ಮುಖ್ಯ ಪ್ರಶ್ನೆ. ಋಷಿ ಎಂದರೆ ಯಾರು? ಋಷಿಃ ಸ ಯೋ ಮನುರ್ಹಿತಃ|| (ಋಗ್ವೇದ.4.5.2.) - ಮನುಕುಲದ, ಸಕಲ ಜೀವರಾಶಿಗಳ ಹಿತವನ್ನು ಬಯಸುವವನೇ ಋಷಿ.
    ಆತ್ಮವತ್ ಸರ್ವಭೂತೇಷು - ಎಂಬ ನಿಮ್ಮ ನುಡಿ ಎಲ್ಲ ಮಾನವರೂ ಗಂಭೀರವಾಗಿ ಗ್ರಹಿಸಬೇಕಾದ್ದಿದೆ.

    ReplyDelete
  2. ನಿಮ್ಮ ಮಾತುಗಳು ನನಗೆ ನಿಜವಾದ ಪ್ರೇರಣೆ ನೀಡಿವೆ. ನಿಮಗೆ ಕೃತಜ್ಞ.

    ReplyDelete
  3. ಶ್ರೀಯುತ ಶರ್ಮರು ಹೇಳಿದ ಹಾಗೇ ಸಮಾಜದಲ್ಲಿ ಉನ್ನತ/ಜವಾಬ್ದಾರಿಯ ಸ್ಥಾನದಲ್ಲಿರುವವರು ಅರಿವಾಗಿ-ಗುರುವಾಗಿ ನಡೆದುಕೊಂಡರೆ, ಪರಕಾಯ ಪ್ರವೇಶದಂತೇ ಎಲ್ಲರ ಸ್ಥಾನದಲ್ಲಿ ತನ್ನನ್ನೇ ಕಂಡು ಆ ನಂತರ ಅದರ ಅನುಭವವನ್ನು ಪರರಿಗೆ ಆದರ್ಶವಾಗುವ ರೀತಿಯಲ್ಲಿ ಬೋಧಿಸಿದರೆ ಅದು ಉತ್ತಮ ಮಾರ್ಗವಾಗುತ್ತದೆ. ಹಿಂದೆಲ್ಲಾ ಮನೋರಂಜನೆಯ ಕಾರ್ಯಕ್ರಮಗಳಾದ ಸಿನಿಮಾ, ನಾಟಕಗಳ ಉದ್ದೇಶ: ಸಮಾಜಕ್ಕೆ ಹಿತನುಡಿಗಳನ್ನು ಕಥೆಗಳ ಮೂಲಕ ಸಾರುವುದಿತ್ತು, ಇಂದು ಅದು ಕ್ರೌರ್ಯ,ಕೊಲೆ-ಸುಲಿಗೆ-ದರೋಡೆ-ಮಾನಭಂಗ ಇತ್ಯಾದಿ ಬೇಡದ ವಿಷಯಗಳತ್ತ ಕೇಂದ್ರೀಕೃತವಾಗಿದೆ ಎಂಬುದು ವಿಷಾದಕರ.

    ದೊಡ್ಡವರ ದೊಡ್ಡಗುಣ ಇನ್ನೊಬ್ಬರಲ್ಲಿ ತಾನು ಹಲವು ಒಳ್ಳೆಯದನ್ನೂ ಕಂಡರೆ ಸ್ವೀಕರಿಸುವುದು--ಈ ನಿಟ್ಟಿನಲ್ಲಿ ಶ್ರೀ ವೀರೇಂದ್ರ ಹೆಗ್ಗಡೆಯವರು ತಮ್ಮತನವನ್ನು ಇಲ್ಲೂ ಪ್ರಕಟಿಸಿದ್ದಾರೆ-ಧ್ವನಿಮಾಲಿಕೆಯನ್ನು ಆಲಿಸಿದ್ದಾರೆ, ಅವರಿಗೆ ವೇದಸುಧೆಯ ಪರವಾಗಿ ಆಭಾರಿಗಳಾಗಿದ್ದೇವೆ, ವೇದಸುಧೆಯ ಈ ಕಾರ್ಯಕ್ಕೆ ನಿಮಗೆ ಇನ್ನೊಮ್ಮೆ ಮಿಕ್ಕೆಲ್ಲರ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳು ಅಭಿನಂದನೆಗಳು.

    ReplyDelete