Pages

Tuesday, February 8, 2011

ಒಂದು ಪುಟ್ಟ ಅನುಭವ

 ವೇದಸುಧೆಯ ಅಭಿಮಾನಿಗಳಲ್ಲಿ ನನ್ನ ಒಂದು ಪುಟ್ಟ ಅನುಭವವನ್ನು ಹಂಚಿಕೊಳ್ಳಬೇಕೆನಿಸುತ್ತಿದೆ. ವೇದಾಧ್ಯಾಯೀ ಸುಧಾಕರಶರ್ಮರ ಪರಿಚಯವು ನನಗೆ ಕಳೆದ ಮೂರು ವರ್ಷಗಳಿಂದೀಚೆಗೆ, ಅಷ್ಟೆ. ಅವರ ಒಡನಾಟ, ಮಾತುಕತೆ , ವೇದಮಂತ್ರಗಳಿಗೆ ಮನ ಮುಟ್ಟುವಂತೆ ಕೊಡುತ್ತಿದ್ದ ವಿವರಣೆ, ಎಲ್ಲಕ್ಕಿಂತ ಹೆಚ್ಚಾಗಿ "ವೇದ ಎಲ್ಲರಿಗಾಗಿ" ಎಂಬ ಅವರ ಸ್ಪಷ್ಟ ನಿಲುವು, ನನ್ನನ್ನು ಹೆಚ್ಚು ಹೆಚ್ಚು ಅವರ ಸಂಪರ್ಕಕ್ಕೆ ಬರುವಂತೆ ಮಾಡಿತು. ಆದರೆ ತಲೆ ತಲಾಂತರಗಳಿಂದ ನಡೆದುಕೊಂಡು ಬಂದಿರುವ ಆಚರಣೆಗಳ ಬಗ್ಗೆ ಅವರ ನಿಲುವು ನನಗೆ ಬಹಳ ಅಸಮಾಧಾನಕ್ಕೆ ಕಾರಣ ವಾಗುತ್ತಿತ್ತು. ನಮ್ಮ ಋಷಿಮುನಿಗಳು ಹಾಕಿಕೊಟ್ಟ ಮಾರ್ಗದಲ್ಲಿ ತಾನೇ ನಾವು ನಡೆಯುತ್ತಿರುವುದು, ಆದರೆ ಹಲವು ಆಚರಣೆಗಳನ್ನು ಶರ್ಮರು ಒಪ್ಪುವುದಿಲ್ಲವಲ್ಲ! ದೇವರ ಪೂಜೆಯ ವಿಚಾರದಲ್ಲಿಯೂ ನಮ್ಮ ನಂಬಿಕೆ ಯನ್ನು ಕೆಡಸಿ ಬಿಡುವರಲ್ಲಾ! ಹೀಗೆ ಆಲೋಚಿಸುತ್ತಾ ಅವರು ಕಂಡಾಗಲೆಲ್ಲಾ ವಿಪರೀತ ಚರ್ಚೆ ಮಾಡಲಾರಂಭಿಸಿದೆ. ಎಲ್ಲಕ್ಕೂ ಅವರ ಬಳಿ ನನ್ನ ಸಂದೇಹಗಳಿಗೆ ಸಮಾಧಾನಕೊಡುವ ಉತ್ತರ ವಿದ್ದರೂ  ಈ ವರಗೆ ನಾನು ಆಚರಿಸಿಕೊಂಡು ಬಂದಿದ್ದ ಹಲವಾರು ಆಚರಣೆಗಳನ್ನು ಸಮರ್ಥಿಸಿ ಅವರೊಡನೆ ಜಗಳದ ರೀತಿಯಲ್ಲೇ ಮೊ೦ಡುವಾದ ಮಾಡುತ್ತಿದ್ದೆ.ಆದರೆ ಅವರಾದರೋ ಸತ್ಯವನ್ನು ಬಿಟ್ಟು ಒಂದಿಂಚೂ ಆಚೀಚೆ ಕದಲದಾಗ ಅವರ ಮಾತಿನಲ್ಲಿ ನಂಬಿಕೆ ಬರುತ್ತಾ ಹೋಯ್ತು. ಆದರೆ ಒಂದು ಸಿಟ್ಟು ಕಾಡುತ್ತಿತ್ತು. ನಾನು ದೇವರ ಪೂಜೆ ಮಾಡುವುದರ ಬಗ್ಗೆಯೂ ನನ್ನ ನಂಬಿಕೆ ಸಡಿಲಿಸಿಬಿಟ್ಟರಲ್ಲಾ! ಎಂದು ಅವರೊಡನೆ ಮತ್ತೆ ಮತ್ತೆ ಕಾದಾಡಿದ್ದಾಯ್ತು.  ದೇವರ ಪೂಜೆಯಲ್ಲಿದ್ದ ನನ್ನ ನಂಬಿಕೆಯನ್ನೂ ನೀವು ಕೆಡಸಿ ಬಿಟ್ಟಿರಿ, ನನಗೆ ಪರ್ಯಾಯ ಮಾರ್ಗ ತೋರಿಸಲೂ ಇಲ್ಲವೆಂದು ಸಿಟ್ಟಾದೆ. ಆದರೆ ಶರ್ಮರು ಒಂದು ರಾತ್ರಿ ನಮ್ಮ ಮನೆಯಲ್ಲಿ ಮಲಗ ಬೇಕಾಯ್ತು. ಬೆಳಿಗ್ಗೆ ನಾನು ಆರು ಗಂಟೆಗೆ ಎದ್ದರೆ ಶರ್ಮರು ಆಗಲೇ ಸ್ನಾನ ಮುಗಿಸಿ ಸಂಧ್ಯೋಪಾಸನೆಯಲ್ಲಿ ನಿರತರಾಗಿ ಕಣ್ಮುಚ್ಚಿ ಕುಳಿತಿದ್ದಾರೆ. ಅಂದು ಅವರೆದುರು ನಾನು ಅರ್ಧಗಂಟೆ ಕುಳಿತೆ. ಅವರು ನನ್ನನ್ನುಗಮನಿಸಿರಲಿಲ್ಲ.ಅಂದು ನನಗೆ ಖಾತರಿಯಾಯ್ತು. ಶರ್ಮರು ನನಗೆ  ಒಂದು ಪರ್ಯಾಯ ಮಾರ್ಗವನ್ನು ಕೊಡುತ್ತಾರೆಂಬ ನಂಬಿಕೆ ಬಂತು.ಕಳೆದ ಎರಡುವಾರಗಳ ಹಿಂದೆ ಮತ್ತೊಂದು ಅವಕಾಶವು ದೊರೆಯಿತು. ಹಾಸನಜಿಲ್ಲೆಯ ದೊಡ್ದಮಗ್ಗೆ ಎಂಬ ಹಳ್ಳಿಯಲ್ಲಿ ನಡೆದ ವೇದೋಕ್ತ ಜೀವನ ಪಥ ಕಾರ್ಯಗಾರ. ಅದರಲ್ಲಿ ನಡೆದ ಅಗ್ನಿಹೋತ್ರ. ಅದರಹಿಂದಿನ ರಾತ್ರಿ ಮಿತ್ರರೊಬ್ಬರಿಗೆ ಅನಾರೊಗ್ಯದ ಪರಿಣಾಮವಾಗಿ ಇಡೀರಾತ್ರಿ ನಿದ್ರೆ ಇಲ್ಲದೆ ನಾನೂ ಕೂಡ ಬಳಲಿದ್ದೆ. ವಿಪರೀತವಾದ ತಲೆನೋವಿತ್ತು. ಅಂದು ಅಗ್ನಿಹೋತ್ರಕ್ಕೆ ನನ್ನನ್ನೂ ಕುಳಿತುಕೊಳ್ಳಲು ಶರ್ಮರು ಹೇಳಿದರು. ಅಗ್ನಿಹೋತ್ರ ಮುಗಿಯುವುದರೊಳಗೆ ಪ್ರತಿಶತ ೯೦ ಭಾಗ ತಲೆನೋವು ಮಾಯವಾಗಿತ್ತು. ಮನಸ್ಸೂ ಕೂಡ ಮುದಗೊಂಡಿತ್ತು. ಅಗ್ನಿಹೋತ್ರದ ಸರಳ ಆಚರಣೆ ಬಗ್ಗೆ  ಮತ್ತೊಮ್ಮೆ ಬರೆಯುವೆ. ಆಗ ಅದರ ವೀಡಿಯೋ ನಿಮಗಾಗಿ.

3 comments:

  1. ವೀಡಿಯೊ ನೋಡಿದೆ. ವೇದ ಎಲ್ಲರಿಗಾಗಿ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ, ಆದರೆ ವೇದಮಂತ್ರಗಳನ್ನು ಉಚ್ಚರಿಸಲು ಒಂದು ನಿಗದಿತವಾದ ಕ್ರಮವಿದೆ. ಆ ಒಂದು ಕ್ರಮದಿಂದಾಗಿಯೇ ವೇದಗಳು ಕೆಡದೆ ಮೂಲರೂಪದಲ್ಲಿಯೇ ನಮಗೆ ಇಂದು ಲಭ್ಯವಾಗಿದೆ. ಆದ್ದರಿಂದ ಸ್ಪಷ್ಟತೆಗೆ ಆದಷ್ಟು ಗಮನ ಕೊಡಿ ಎನ್ನುವುದು ನನ್ನ ವಿನಂತಿ.


    ಏನೇ ಆಗಲಿ ನಿಮ್ಮ ಪ್ರಯತ್ನ - ಕಾರ್ಯ ಸ್ತುತ್ಯರ್ಹವಾದುದು, ಅಭಿನಂದನೆಗಳು.

    ಅನಂತೇಶ ನೆಂಪು.

    ReplyDelete
  2. ಶ್ರೀ ಅನಂತೇಶ್,
    ನಮಸ್ತೆ.
    ನನಗೂ ಹಾಗೆಯೇ ಅನ್ನಿಸಿದೆ. ಏನೇ ಆಗಲೀ ಸ್ವರದ ಕಡೆ ಗಮನ ಬೇಕೇ ಬೇಕು.ಸಸ್ವರ ವೇದಮಂತ್ರೋಚ್ಛಾರ ಬಹಳ ಪರಿಣಾಮಕಾರಿ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

    ReplyDelete
  3. ಶರ್ಮರ ಮಾತು ಕೇಳಿದ ಮೇಲೆ ನನ್ನ ದೈನಂದಿನ ಪೂಜಾ ಕ್ರಮದಲ್ಲಿ ನನಗೂ ಲೋಪ ಕಾಣಿಸುತ್ತಿದೆ. ಆದರೆ ಯಾವುದನ್ನೂ ಗಡಿಬಿಡಿಯಲ್ಲಿ ಬದಲಾಯಿಸುವ ಅಭ್ಯಾಸ ಇಲ್ಲ ನನಗೆ. ಅದಕ್ಕೆ ಸರಿಯಾದ ಪೂಜಾ ವಿಧಾನ ತಿಳಿಯುವವರೆಗು ಈಗಿರುವಂತೆ ಮುಂದುವರೆಸಲು ನಿರ್ಧರಿಸಿದ್ದೇನೆ.

    ReplyDelete