Pages

Friday, April 15, 2011

ವೇದೋಕ್ತ ಜೀವನ ಪಥ - ಪರಮಾಣು ಸಂಘಾತವಾದ ಪ್ರಕೃತಿ ಸ್ವರೂಪ - 1

      ಸಹೃದಯರೇ, ಪಂ. ಸುಧಾಕರ ಚತುರ್ವೇದಿಯವರು ಭಗವಂತನ ಸ್ವರೂಪದ ಕುರಿತು ಹಾಗೂ ಜೀವಾತ್ಮದ ಸ್ವರೂಪ ಕುರಿತು ವೇದಗಳು ಏನು ಹೇಳುತ್ತವೆ ಎಂಬ ಬಗ್ಗೆ ತಿಳಿಸಿರುವುದನ್ನು ಓದಿರುವಿರಿ ಹಾಗೂ ಆ ವಿಷಯಗಳಲ್ಲಿ ಅರ್ಥಪೂರ್ಣ ಚರ್ಚೆಗಳನ್ನೂ ಮಾಡಿರುವಿರಿ. ಇನ್ನುಮುಂದೆ ಪರಮಾಣು ಸಂಘಾತವಾದ ಪ್ರಕೃತಿ ಸ್ವರೂಪ ಕುರಿತು ವೇದ ಏನು ಹೇಳುತ್ತದೆ ಎಂಬುದನ್ನು ಪಂಡಿತರ ಮಾತುಗಳಲ್ಲೇ ನೋಡೋಣ.

ಪರಮಾಣು ಸಂಘಾತವಾದ ಪ್ರಕೃತಿ ಸ್ವರೂಪ


     ಸೃಷ್ಟಿಯ ನಿಮಿತ್ತ ಕಾರಣ, ಮಹಾನ್ ವಿಶ್ವಚೇತನ, ಅಂದರೆ ಭಗವಂತನು. ಅವನು ಈ ಸೃಷ್ಟಿಯನ್ನು ರಚಿಸಿರುವುದು ಪರಿಚ್ಛಿನ್ನ ಚೇತನರಾದ ಜೀವಾತ್ಮರ ಸಲುವಾಗಿ. ಈ ವಿಷಯಗಳನ್ನು ವಿಸ್ತಾರವಾಗಿ ಅರಿತುದಾಯಿತು. ಈ ವಿಶ್ವಬ್ರಹ್ಮಾಂಡದ ಕಡೆ ಗಮನವಿತ್ತು ನೋಡಿದಾಗ, ಅಷ್ಟೇ ಸಿಕ್ಕುಗಟ್ಟಿದ ಮತ್ತೊಂದು ಪ್ರಶ್ನೆ ಉದ್ಭವಿಸುತ್ತದೆ. ಭಗವಂತನು ಚೇತನ ಜೀವಾತ್ಮರಿಗಾಗಿ ಸೃಷ್ಟಿಯನ್ನು ರಚಿಸಿದ, ಸರಿ. ಅದರೆ ಏತರಿಂದ ಸೃಜಿಸಿದ? ಕೆಲವು ಮತದವರು 'ಭಗವಂತ ಸೃಷ್ಟಿಯಾಗಲಿ ಎಂದ, ಸೃಷ್ಟಿಯಾಗಿ ಹೋಯಿತು' - ಎನ್ನುತ್ತಾರೆ. ಯಾರಿಗೆ ಹೇಳಿದ ಭಗವಂತ ಸೃಷ್ಟಿಯಾಗಿ ಹೋಗಲಿ ಎಂದು? ಶೂನ್ಯಕ್ಕೇನು? ಶೂನ್ಯ ಎಂದರೆ ಅಭಾವ, ಏನೂ ಇಲ್ಲದಿರುವಿಕೆ. ಅಭಾವದಿಂದ ಭಾವೋತ್ಪತ್ತಿ, ಅಸತ್‌ನಿಂದ ಸದುತ್ಪತ್ತಿ ಎಂದಿಗೂ ಆಗಲಾರದು. ಮಣ್ಣಿದ್ದರೆ ಮಡಕೆ, ನೂಲಿದ್ದರೆ ಬಟ್ಟೆ, ಮರದ ಹಲಗೆಗಳಿದ್ದರೆ ಕಾಲುಮಣೆ ಇದು ಸರಿ. ಕಾರಣವಿಲ್ಲದೆ ಕಾರ್ಯ ಉದ್ಭವಿಸಲಾರದು. ಶೂನ್ಯದಿಂದ ಮಡಕೆಯಾಗಲಾರದು, ಶೂನ್ಯದಿಂದ ಬಟ್ಟೆಯಾಗಲಾರದು, ಶೂನ್ಯದಿಂದ ಕಾಲುಮಣೆಯಾಗಲಾರದು. ಹೀಗಿರುವಾಗ ಇಷ್ಟು ದೊಡ್ಡ ಬ್ರಹ್ಮಾಂಡ ಶೂನ್ಯದಿಂದ ಆಗಿಹೋಯಿತೇ? ಕೆಲವರು 'ಭಗವಂತ ಸರ್ವಶಕ್ತ, ಅವನು ಏನು ಬೇಕಾದರೂ ಮಾಡಬಲ್ಲನು' ಎನ್ನುವುದುಂಟು. ಆದರೆ ವೈಜ್ಞಾನಿಕ ವಿಶ್ಲೇಷಣದ ಮುಂದೆ ಈ ವಾದ ಅರೆಕ್ಷಣವೂ ನಿಲ್ಲಲಾರದು. ಅಸಂಭವವಾದುದು ಎಂದಿಗೂ ಸಂಭವವಾಗಲಾರದು. 'ದೇವರು ಸರ್ವಶಕ್ತನಾದುದರಿಂದ ಅವನು ತಾನೇ ಎತ್ತಿ ಹಿಡಿಯಲಾರದ ವಸ್ತುವನ್ನು ರಚಿಸಬಲ್ಲನೇ?' - ಎಂದು ನಾವು ಪ್ರಶ್ನಿಸುತ್ತೇವೆ. 'ಓಹೋ, ರಚಿಸಬಲ್ಲ' ಎಂದು ನೀವು ಹೇಳಿದರೆ, 'ಅವನು ಆ ವಸ್ತುವನ್ನು ಎತ್ತಿ ಹಿಡಿಯಲಾರ, ಹೀಗೆ ಅವನ ಸರ್ವಶಕ್ತಿತ್ವ ಕುಂಠಿತವಾಯಿತು' - ಎಂದು ಒಪ್ಪಬೇಕಾಗುತ್ತದೆ. 'ರಚಿಸಲಾರ' ಎಂದರಂತೂ ಅವನ ಸರ್ವಶಕ್ತಿತ್ವಕ್ಕೆ ಚ್ಯುತಿ ಸ್ಪಷ್ಟ. 'ಭಗವಂತ ತನ್ನಂತಹ ಇನ್ನೊಬ್ಬ ಭಗವಂತನನ್ನು ಸೃಜಿಸಬಲ್ಲನೇ?' ಎಂದು ನಾವು ಪ್ರಶ್ನಿಸಿದರೆ ನೀವು 'ಇಲ್ಲ' ಎನ್ನಲೇಬೇಕಾಗುತ್ತದೆ. ಇದರ ತಾತ್ಪರ್ಯವೇನು? ಎಲ್ಲಾ ಮಾಡಬಲ್ಲ ಶಕ್ತಿಯಲ್ಲ ಸರ್ವಶಕ್ತಿ. ಬೇರೆಯವರ ಸಹಾಯವಿಲ್ಲದೆ ತನ್ನ ಗುಣ-ಕರ್ಮ-ಸ್ವಭಾವಕ್ಕನುಸಾರವಾಗಿ ಸೃಷ್ಟಿ-ಸ್ಥಿತಿ-ಲಯಗಳನ್ನು ಪ್ರವಾಹರೂಪದಲ್ಲಿ ಮಾಡುತ್ತಾ ಹೋಗುವುದೇ ಸರ್ವಶಕ್ತಿ - ಎಂಬುದೇ ಸಾಧುವಾದ, ತರ್ಕಬದ್ಧ ಹಾಗೂ ತಾತ್ವಿಕವಾದ ಪಕ್ಷ. ಭಗವಂತನೂ ಶೂನ್ಯದಿಂದ ಸೃಷ್ಟಿಯನ್ನು ರಚಿಸಲಾರನು.


     ಇನ್ನೊಂದು ಭ್ರಾಮಕ ವಾದವಿದೆ. ಅದನ್ನು 'ಅಭಿನ್ನ ನಿಮಿತ್ತೋಪಾದಾನ ಕಾರಣವಾದ' - ಎಂಬ ಉದ್ದವಾದ ಹೆಸರಿನಿಂದ ಕರೆಯುತ್ತಾರೆ. 'ಭಗವಂತನೇ ಈ ಜಗತ್ತಿಗೆ ನಿಮಿತ್ತ ಕಾರಣ, ಅವನೇ ಉಪಾದಾನ ಕಾರಣ. ಭಗವಂತನೇ ಜಗತ್ತನ್ನು ರಚಿಸುತ್ತಾನೆ, ಅವನೇ ಜಗತ್ತಾಗುತ್ತಾನೆ' - ಎನ್ನುವುದೇ ಆ ವಾದದ ಸಾರ. ಏನರ್ಥ ಇದಕ್ಕೆ? ಬ್ರಹ್ಮವೇ ಜೀವವಾಯಿತು ಅಥವಾ ಬ್ರಹ್ಮದಿಂದಲೇ ಜೀವೋತ್ಪತ್ತಿಯಾಯಿತು - ಎಂಬ ವಾದಕ್ಕೆ ವಿರುದ್ಧವಾಗಿ ನಾವು ಹಿಂದಿನ ಅಧ್ಯಾಯದಲ್ಲಿ ಎತ್ತಿದ್ದ ಆಕ್ಷೇಪಣೆಗಳನ್ನು ಪಾಠಕರು ಜ್ಞಾಪಿಸಿಕೊಳ್ಳಬಹುದು. 'ಬ್ರಹ್ಮ ಪೂರ್ಣತಃ ಜಡವಾಗಿ ಅದರಿಂದ ಜಗತ್ತಾಯಿತು' - ಎಂದರೆ, ಈಗ ಬ್ರಹ್ಮವಿಲ್ಲವೇ ಇಲ್ಲವೇ? - ಎಂಬ ಪ್ರಶ್ನೆ ಹುಟ್ಟುತ್ತದೆ. ಎರಡನೆಯದಾಗಿ, ಸಂಪೂರ್ಣ ಬ್ರಹ್ಮವೇ ಜಡವಾಗಿ ಹೋದ ಮೇಲೆ, ಚೇತನ ಉಳಿಯಲೇ ಇಲ್ಲ, ಆ ಜಡೀಭೂತ ಬ್ರಹ್ಮಕ್ಕೆ ಜಗದಾಕಾರ ಕೊಟ್ಟವರಾರು? ತನ್ನಷ್ಟಕ್ಕೆ ತಾನೇ ನಿಯಮಪೂರ್ವಕವಾಗಿ ಬೇರೆ ಸಾರ್ಥಕರೂಪ ತಾಳೂವುದು ಜಡಕ್ಕೆ ಸಾಧ್ಯವಿಲ್ಲವಷ್ಟೇ?. 'ಹಾಗಲ್ಲ, ಬ್ರಹ್ಮನ ಯಾವುದೋ ಒಂದು ಭಾಗ ಮಾತ್ರ ಜಡವಾಯಿತು, ಉಳಿದ ಚೇತನ ಭಾಗ ಜಗತ್ತಿಗೆ ನಿಮಿತ್ತ ಕಾರಣವಾಯಿತು' - ಎಂದರೆ, ಬ್ರಹ್ಮದ ಅಖಂಡತ್ವದ ಗತಿ ಏನಾಯಿತು? 'ಬ್ರಹ್ಮ ಪ್ರಜ್ಞಾನ, ಬ್ರಹ್ಮ ನಿರ್ವಿಕಾರ' - ಎಂಬ ಹೇಳಿಕೆಗಳಿಗೆ ಅರ್ಥವೇನುಳಿಯಿತು?


     ನಿಜವಾಗಿ ಇಂತಹ ವಾದಗಳೆಲ್ಲಾ ಕೇವಲ ಭ್ರಾಂತಿವಿಲಾಸ ಮಾತ್ರ. ವೇದಗಳು ಸ್ಪಷ್ಟವಾಗಿ ಪರಮಾತ್ಮನು ಜಡವಾದ ಪ್ರಕೃತಿ ತತ್ವದಿಂದ ಜಗದ್ರಚನೆ ಮಾಡಿದನು ಎಂದು ಹೇಳುತ್ತವೆ.

. . . . . . . ಏನು ಹೇಳುತ್ತವೆ? ಮುಂದಿನ ಕಂತಿನಲ್ಲಿ ನೋಡೋಣ.

3 comments:

  1. ಇದನ್ನು ಒಪ್ಪುವುದು ಸ್ವಲ್ಪ ಕಷ್ಟವಾಗುತ್ತಿದೆ ನನಗೆ. ಜೀವಾತ್ಮ ಮತ್ತು ಪ್ರಕೃತಿ ಬ್ರಹ್ಮನಿಗಿಂತ ಬೇರೆಯದೇ ಆದ ಅಸ್ತಿತ್ವವುಳ್ಳವವಾಗಿದ್ದರೆ ಬ್ರಹ್ಮ ಸರ್ವವ್ಯಾಪಿ ಎನ್ನುವುದಕ್ಕೆ ಚ್ಯುತಿ ಬಂದಂತಾಯಿತು. ಯಾಕೆಂದರೆ ಬ್ರಹ್ಮ ಎಲ್ಲ ಕಡೆ ವ್ಯಾಪಿಸಿದ್ದಾನೆ ಎಂದಾದರೆ ಜೀವಾತ್ಮ ಮತ್ತು ಪ್ರಕೃತಿಗೆ ಪ್ರತ್ಯೇಕ ಅಸ್ತಿತ್ವ ಕಾಯ್ದುಕೊಳ್ಳಲು ಜಾಗವೆಲ್ಲಿದೆ!

    ನಾನು ಈ ಎರಡೂ ವಾದಗಳ ಬಗ್ಗೆ - ಬ್ರಹ್ಮ, ಜೀವಾತ್ಮ ಮತ್ತು ಪ್ರಕೃತಿಗಳು ಬೇರೆ ಬೇರೆ ಎನ್ನುವ ವಾದ ಮತ್ತು ಜೀವಾತ್ಮ ಮತ್ತು ಪ್ರಕೃತಿಗಳು ಬ್ರಹ್ಮನಿಂದ ಹುಟ್ಟಿದವು ಎನ್ನುವ ವಾದ - ಸಾಕಷ್ಟು ಯೋಚಿಸಿ ಒಂದು ನಿರ್ಧಾರಕ್ಕೆ ಬಂದಿದ್ದೇನೆ. ಅದೆಂದರೆ ಇವೆರಡನ್ನೂ ಪರಸ್ಪರ ವಿರುಧ್ಧ ಎಂದು ವಾದಿಸುವುದಕ್ಕಿಂತಲೂ "Different levels of realization" ಎಂದು ಭಾವಿಸುವುದು ಸೂಕ್ತ. ಯಾಕೆಂದರೆ ಇವೆರಡೂ ವಾದಗಳಲ್ಲಿ Loopholes ಗಳನ್ನು ಹುಡುಕಬಹುದು. ಆದ್ದರಿಂದ ಇಂತಹಾ ಸಂದರ್ಭದಲ್ಲಿ ರಾಜಿಯಾಗುವುದೇ ಸೂಕ್ತ. ಹೇಗಿದ್ದರೂ ನಾವು ಸರ್ವಜ್ಞರಲ್ಲ ತಾನೆ. ಸರ್ವವನ್ನೂ ಅರಿತವನು ಭಗವಂತ ಮಾತ್ರ. ಹಾಗಿದ್ದಲ್ಲಿ ಇಂತಹ ವಿಷಯಗಳನ್ನು ಇದಮಿಥ್ಥಂ ಎನ್ನುವ ಅವಶ್ಯಕತೆಯಿಲ್ಲ. ಭೌತವಿಜ್ಞಾನದಲ್ಲಿ ಬೆಳಕಿನ ರಚನೆ ಬಗ್ಗೆ ಅಧ್ಯಯನ ಮಾಡುವಾಗ Wave theory ಮತ್ತು Particle theory ಎಂಬೆರಡು ವಾದಗಳನ್ನು ಒಂದಕ್ಕೊಂದು ವಿರೋಧವಾಗದೆಯೇ ಒಪ್ಪಿಕೊಳ್ಳಲಾಗುತ್ತದಲ್ಲವೆ, ಹಾಗೆಯೇ ಇದು.

    ಇದು ನನ್ನ ಮಟ್ಟಿಗಿನ ಅರಿವು. ಇದು ಬಾಲಿಶವೆನ್ನಿಸಿದರೆ ಕ್ಷಮೆಯಿರಲಿ.

    ReplyDelete
  2. ಸುಧಾಕರಶರ್ಮರಿಂದ ಇಷ್ಟೊಂದು ವಿಚಾರಗಳನ್ನು ಕೇಳಿದಮೇಲೂ ಪ್ರಕೃತಿ ಸ್ವರೂಪದ ಬಗ್ಗೆ ಬರೆದಿರುವ ಈ ಬರಹದ ವಿಚಾರ ನನ್ನ ತಲೆಒಳಗೆ ಹೋಗುತ್ತಿಲ್ಲ.ನಾನು ಕಷ್ಟಪಟ್ಟು ಅರ್ಥಮಾಡಿಕೊಳ್ಳುವ ಸಾಹಸ ಮಾಡಲಾರೆ. ಆದರೆ ಶರ್ಮರ ವಿವರಣೆಯಿಂದ ಒಂದಂಶವಂತೂ ಅರ್ಥವಾಗುತ್ತದೆ. ಅಂದರೆ ಈ ಪ್ರಕೃತಿಯು ಅನಾದಿ ಅಂತೆಯೇ ಅನಂತ ಕೂಡ.ಏನಿದ್ದರೂ ಕೆಲವು ರೂಪ ಪರಿವರ್ತನೆಗಳು ಸಾವಿರಾರು ವರ್ಷಗಳ ಅವಧಿಯಲ್ಲಿ ಆಗಬಹುದಷ್ಟೆ. ಅಂದರೆ ರೂಪ ಪರಿವರ್ತನೆಯಾಗುವುದಕ್ಕೆ ಭಗವಂತನು ಸಾಕ್ಷಿಯಾಗಿರಬಹುದೇ ಹೊರತೂ ಅವನು ಏನನ್ನೂ ಸೃಷ್ಟಿಸಿಲ್ಲ. ಎಲ್ಲವೂ ಅನಾದಿಯಿಂದಲೂ ಇತ್ತು.ಅನಂತವಾಗಿ ಇರುತ್ತದೆ.ಇಷ್ಟು ನನ್ನ ಅರಿವು. ಇನ್ನು ಹೆಚ್ಚು ಜಿಜ್ಞಾಸೆ ಮಾಡುವ ಸಾಮರ್ಥ್ಯ ನನಗಿಲ್ಲ. ಈ ನನ್ನ ಅರಿವು ಸರಿ ಇದೆಯೇ ಹೇಳಿ.

    ReplyDelete
  3. ಮಹೇಶ ಪ್ರಸಾದರೆ!
    ಸರಳವಾದ್ದನ್ನು ಅಷ್ಟೊಂದು ಗೋಜಲು ಯಾಕೆ ಮಾಡಿಕೊಂಡಿರಿ!
    ನಿಮ್ಮ ಮಾತಿನಂತೆಯೇ ನಾವೇನೂ ಸರ್ವಜ್ಞರಲ್ಲ. ಆದರೆ ಅತ್ಯಂತ ಅಚ್ಚುಕಟ್ಟಾದ ಈ ಜಗತ್ತಿನ ರಚನೆಯ ಹಿಂದೆ ಸರ್ವಜ್ಞಶಕ್ತಿ ಒಂದು ಇರುವುದರ ಭಾಸವಾಗುತ್ತಿದೆ.
    ಜ್ಞಾನವೇ ಇಲ್ಲದ ಜಡ ಜಗತ್ತನ್ನೂ ನೋಡುತ್ತಿದ್ದೇವೆ.
    ಸಾರಾಂಶ -
    ಜಡಜಗತ್ತು ಸತ್ ಸ್ವರೂಪ
    ಜ್ಞಾನವುಳ್ಳ ಆದರೆ ಸರ್ವಜ್ಞವಲ್ಲದ್ದು ಸತ್ + ಚಿತ್ ಸ್ವರೂಪ
    ಸರ್ವಜ್ಞವಾಗಿರುವ ಆನಂದಸ್ವರೂಪವಾಗಿರುವ ಸತ್ + ಚಿತ್ + ಆನಂದ ಸ್ವರೂಪ.
    ಈ ಮೂರೂ ಪ್ರತ್ಯೇಕ. ಒಂದು ಇನ್ನೊಂದಾಗುವುದಾದರೆ ಅದು ರೂಪಾಂತರವಾಗುತ್ತದೆಯೇ ಹೊರತು ಪ್ರತ್ಯೇಕ ಅಸ್ತಿತ್ವ ಎನಿಸುವುದಿಲ್ಲ. ಅಷ್ಟೇ ಅಲ್ಲ ಇರುವುದು ಎಂದಿಗೂ ಇರುತ್ತದೆ, ಇಲ್ಲದ್ದು ಎಂದಿಗೂ ಇರುವುದಿಲ್ಲ.
    Matter/Energy/Entity can neither be created nor be destroyed!!
    ಹಾಗಾಗಿ ಈ ಮೂರೂ ಅನಾದಿ, ಅನಂತ, ಪ್ರತ್ಯೇಕ ಅಸ್ತಿತ್ವಗಳು.
    ಇಡೀ ಭೌತಿಕ ಜಗತ್ತು ಆಗಿರುವುದು ಪಂಚಭೂತಗಳಿಂದ. (ಆಧುನಿಕ ಭೌತವಿಜ್ಞಾನದ ಪ್ರಕಾರ 108+ Elements) ಆಕಾಶದ ಲಕ್ಷಣಗಳೇ ಬೇರೆ, ಪೃಥ್ವಿಯ ಲಕ್ಷಣಗಳೇ ಬೇರೆ. ಈ ಲಕ್ಷಣಗಳ ವ್ಯವಸ್ಥೆಯೇ ಸೃಷ್ಟಿ. ಈ ವ್ಯವಸ್ಥೆಗೆ ಮುಂಚೆ ಇದ್ದದ್ದು Some ethereal substance! ನಾವದನ್ನು ಮೂಲ ಪ್ರಕೃತಿ ಎಂದು ಗುರುತಿಸಿಕೊಳ್ಳಬಹುದು. ಅನಾದಿ, ಅನಂತ ಎನ್ನುವಾಗ, ಮೇಲೆ ಸತ್ ಸ್ವರೂಪ ಎನ್ನುವಾಗ we are referring to it. ಈ ಮೂಲಪ್ರಕೃತಿಯನ್ನು ಬಳಸಿಕೊಂಡು ಪಂಚಭೂತಗಳನ್ನೂ, ಭೌತಿಕ ಜಗತ್ತನ್ನೂ ರಚಿಸಿದ್ದು ಸಚ್ಚಿದಾನಂದ ಸ್ವರೂಪ. ಯಾರಿಗಾಗಿ ಎಂದಾಗ, ಸತ್ + ಚಿತ್ ಸ್ವರೂಪಕ್ಕೆ. ಏಕೆಂದರೆ, ಇದನ್ನು ಬಳಸಿಕೊಂಡು ಸಚ್ಚಿತ್ ಸ್ವರೂಪರು ಆನಂದವನ್ನು ಅನುಭವಿಸುವುದಕ್ಕೆ ಸಾಮರ್ಥ್ಯವನ್ನು ಪಡೆಯಲಿ ಎಂದು. ಸಚ್ಚಿತ್ ಸ್ವರೂಪರಾದ ನಾವೆಲ್ಲರೂ ಅಂತಿಮವಾಗಿ ಹುಡುಕುತ್ತಿರುವುದು ಈ ಆನಂದವನ್ನೇ ತಾನೇ?!
    ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ `ವೇದೋಕ್ತ ಜೀವನ ಪಥ'ದ ಮೊದಲ ನಾಲ್ಕು ಅಧ್ಯಾಯಗಳನ್ನು ಓದಿ ನೋಡಿ.

    ReplyDelete