Pages

Wednesday, April 20, 2011

ಅಂತಿಮ ಸತ್ಯ!

ಮೊನ್ನೆ ತಾನೇ ನನ್ನ ಅತ್ತೆಯವರು ದೈವಾಧೀನರಾದರು. ಅವರ ಅಂತಿಮ ಸಂಸ್ಕಾರದಲ್ಲಿ ನಾನೂ ಭಾಗಿಯಾಗಿದ್ದೆ. ಸುಮಾರು 5 ಎಕರೆಯಷ್ಟು ವಿಶಾಲವಾದ ರುದ್ರಭೂಮಿಯಲ್ಲಿ ಚಟ್ಟದ ಮೇಲೆ ಶವವನ್ನು ಮಲಗಿಸಿ ಅಂತಿಮ ವಿಧಿ-ವಿಧಾನಗಳನ್ನು ನಡೆಸುತ್ತಿದ್ದಾಗ ಮನದಾಳದಲ್ಲಿ ಮೂಡಿದ ಮಿಡಿತಗಳು ಹಲವಾರು.  ತಂದೆ-ತಾಯಿಯವರಿಗೆ ಮುದ್ದಿನ ಮಗಳಾಗಿ, ಸಹಜಾತರಿಗೆ ಸೋದರಿಯಾಗಿ, ಅನೇಕರಿಗೆ ಪ್ರಿಯ ಗೆಳತಿಯಾಗಿ, ಗಂಡನಿಗೆ ಅನುರೂಪಳಾದ ಸತಿಯಾಗಿ, ತನ್ನ ಮಕ್ಕಳಿಗೆ ಪ್ರೀತಿ-ವಾತ್ಸಲ್ಯದ ಮಡುವಾಗಿ, ತನ್ನ ಅತ್ತೆ-ಮಾವ, ಮೈದುನ-ನಾದಿನಿಯರಿಗೆ ಸಹಕಾರಿಯಾಗಿ, ಅಳಿಯಂದರಿಗೆ ಗೌರವ-ಲೇಪಿತ ಮಮತಾಮಯಿಯಾಗಿ ತುಂಬು ಬಾಳು ನಡೆಸಿದ್ದ ನನ್ನ ಅತ್ತೆ , ಎಲ್ಲರಂತೆ, ಕೊನೆಗೆ ಹೋಗುವಾಗ ಮಾತ್ರಾ ಏಕಾಕಿ!  ಕೇವಲ ಬೆರಳೆಣಿಕೆಯಷ್ಟು ಮಂದಿ ಅಂತಿಮ ಯಾತ್ರೆಗೆ   ಸಾಥ್  ನೀಡಿದವರು (ಅದೂ ಅಲ್ಲಿಯವರೆಗೆ ಮಾತ್ರಾ!!). ನಂತರದ ಪ್ರಯಾಣದ ಹಾದಿಯಲ್ಲಿ.....?

ಸಾವು ನಿಶ್ಚಿತ ಎಂಬುದು ಎಲ್ಲರೂ ಅರಿತ ಮಾತು. ಆದರೆ ಸಾಯುವತನಕವೂ ಎಲ್ಲರಿಗೂ ಅದು ಮರೆತ ಮಾತು! ಹಾಗಾಗಿ ಸಾವು ಎರಗುವವರೆಗೆ ನಮಗೆ ಸಾವಿನ ಪ್ರಜ್ಞೆ ಯಾವಾಗಲೂ ಬಹುತೇಕ ಬರುವುದೇ ಇಲ್ಲ. ಹಾಗಾಗಿಯೇ ಆ ಪ್ರಜ್ಞೆಯ ಅನುಪಸ್ಥಿತಿಯಲ್ಲಿ ನಾವು ಎಲ್ಲ ಲೌಕಿಕವಾದ ಮತ್ತು ಅಶಾಶ್ವತವಾದ ವಸ್ತು/ವಿಷಯ/ವ್ಯಕ್ತಿಗಳ ಬಗ್ಗೆಯೇ ವಿಚಾರ ಮಾಡುತ್ತಾ ನಮ್ಮ ಬಹುಮೂಲ್ಯ ಸಮಯವನ್ನು ಕಳೆದು ಬಿಡುತ್ತೇವೆ. ಮುಂದಿನ ಕ್ಷಣವೇ   ಸಾವು ಬರಬಹುದು ಎಂಬ ನಿರಂತರ ಪ್ರಜ್ಞೆ, ಬಹುಶ: ನಮ್ಮನ್ನು ಒಂದು ಉತ್ತಮ ಜೀವನಶೈಲಿಯತ್ತ ಒಯ್ಯಬಲ್ಲದು ಎನಿಸುತ್ತದೆ. ಏನೇ ಅಂದರೂ ಸಾವೇ ಅಂತಿಮವಾದ ಸತ್ಯ; ಉಳಿದೆಲ್ಲವೂ ಮಿಥ್ಯ. ಹಾಗಾಗಿ ಸತ್ಯಾನ್ವೇಷಣೆಗೆ ಹೆಚ್ಚು ಶ್ರಮ ಪಡಬೇಕಿಲ್ಲ. ನಮ್ಮ ಸುತ್ತಮುತ್ತ ಸಂಭವಿಸುವ ಸಾವುಗಳ ಅರಿವು ಮತ್ತು ನನಗೂ ಅದೊಂದು ದಿನ ಬಂದೇ ಬರುತ್ತದೆಂಬ ಅರಿವೇ ಅಂತಿಮ ಸತ್ಯ. ಪುರಂದರದಾಸರ ಈ ಕೃತಿಯನ್ನು ನೋಡಿ:

ಹಿಗ್ಗುವೆ ಯಾಕೊ ಈ ದೇಹಕ್ಕೆ ಹಿಗ್ಗುವೆ ಯಾಕೊ                             || ಪ ||

ಹಿಗ್ಗುವ ತಗ್ಗುವ ಮುಗ್ಗುವ ಕುಗ್ಗುವ
ಅಗ್ನಿಯೊಳಗೆ ಬಿದ್ದು ದಗ್ಧವಾಗೊ ದೇಹಕ್ಕೆ                                 || ಅ.ಪ.||

ಸತಿ ಪುರುಷರು ಕೂಡಿ ರತಿಕ್ರೀಡೆಗಳ ಮಾಡಿ
ಪತನಾದ ಇಂದ್ರಿಯ ಪ್ರತಿಮೆಯ ದೇಹಕ್ಕೆ                                   

ಆಗದ ಭೋಗಗಳ ಆಗುಮಾಡುತಲಿದ್ದು
ರೋಗ ಬಂದರೆ ಬಿದ್ದು ಹೋಗುವ ದೇಹಕ್ಕೆ                                  

ಪರರ ಸೇವೆಯ ಮಾಡಿ ನರಕ ಭಾಜನನಾಗಿ
ಮರಳಿ ಮರಳಿ ಬಿದ್ದು ಉರುಳುವ ದೇಹಕ್ಕೆ                                   

ಸೋರುವುದೊಂಭತ್ತು ಬಾಗಿಲ ಮಲಗಳು
ನೀರಿಲ್ಲದಿದ್ದರೆ ನಾರುವ ದೇಹಕ್ಕೆ                                               

ಪುರಂದರವಿಠಲನ ಚರಣ ಕಮಲಕ್ಕೆ
ಎರಗದೆ ತಿರುಗುವ ಗರುವದ ದೇಹಕ್ಕೆ                                         

ಅಂತಕನ ದೂತರು ಬಂದು ಎಳೆದೊಯ್ಯುವಾಗ ಪಕ್ಕಕ್ಕೆ ಸರಿದು ದೂರಾಗುವವರೇ ಎಲ್ಲರೂ. ಬಂದದ್ದು ನಾನೊಬ್ಬನೇ - ಹೋಗಬೇಕಾದ್ದೂ ನಾನೊಬ್ಬನೇ. ಉಳಿದೆಲ್ಲವೂ ಜೀವನ ಪಯಣದ ಹಾದಿಯ ತಾತ್ಕಾಲಿಕ ಸಂಗಾತಿಗಳು ಅಷ್ಟೇ.  ಇರುವ ತನಕ  ಬಾಳುವ ಬಾಳಿನ ರೀತಿ ತನಗೂ ಮತ್ತು ತನ್ನನ್ನವಲಂಬಿಸಿದವರಿಗೂ ಸಹನೀಯವಾಗಿರುವಂತೆ ನೋಡಿಕೊಂಡು, ಕಮಲಜಲಪತ್ರಭಾವದಲ್ಲಿ ಶಾಶ್ವತ ಸತ್ಯವಾದ ಸಾವಿನ ನಿರಂತರ ಪ್ರಜ್ಞೆಯೊಂದಿಗೆ ನಡೆಯುವುದೇ ಸೂಕ್ತವೇನೋ?

6 comments:

  1. ನನಗೆ ಒಮ್ಮೊಮ್ಮೆ ಈ ವೇದಾಂತವೇ ಅರ್ಥವಾಗುಲ್ಲಾ. ಅಲ್ಲಾ, ನಾವು ಈಗ ಬದುಕಿದ್ದೇವಲ್ಲಾ, ಅದೇ ತಾನೇ ನಮಗೆ ಸರಿಯಾಗಿ ಯಥಾವತ್ತಾಗಿ ಗೊತ್ತಿರೋದು.ಎಲ್ಲರೂ ಹುಟ್ಟುವಾಗಲೂ ಒಬ್ಬರೇ,ಸಾಯುವಾಗಲೂ ಒಬ್ಬರೇ. ಜೊತೆಜೊತೆಯಾಗಿ ಎರಡೂ ಅಸಾಧ್ಯದ ಮಾತು.ಆದರೂ ಇಲ್ಲಿ ಬದುಕ್ತೇವಲ್ಲಾ! ಅದು ನೂರು ವರ್ಷ. ಅದೇನು ಸಾಮಾನ್ಯವಾದ ಅವಧಿಯೇ? ಈ ಜೀವಿತಾವಧಿಯಲ್ಲಿ ನಾನೂ ಸಂತೋಷವಾಗಿ ಬದುಕಬೇಕು, ಬೇರೆಯವರನ್ನೂ ಬದುಕಲು ಬಿಡಬೇಕು. ಯಾರ ಸಂತೋಷಕ್ಕೂ ಅಡ್ಡಿಮಾಡದಿದ್ದರೆ ಅದಕ್ಕಿಂತ ದೊಡ್ದ ವಿಚಾರವಿಲ್ಲವೋ ಏನೋ!ಆದರೆ ಈ ಮಹತ್ವದ ಜೀವಿತಾವಧಿಯನ್ನು ಅದೊಂದು ಕನಸೆಂದೋ. ನೀರಿನ ಅಲೆಯಂತೆ ಎಂದೋ,, ಹೀಗೆ ಯಾವ್ಯಾವುದಕ್ಕೋ ಹೋಲಿಸಿ ಈ ಜೀವನ ಶಾಶ್ವತವಲ್ಲಾ, ನಾಳೆಯೇ ಸತ್ತು ಬಿಡಬಹುದು! ಅಂತೆಲ್ಲಾ ಹೇಳುತ್ತಾ ಈ ಜೀವನವನ್ನು ಬಲು ನಿಸ್ಸಾರವಾಗಿ ನೋಡುವಂತಹ ರೀತಿ , ಸರಿಯೇ?
    ನನ್ನ ದೃಷ್ಟಿಯಲ್ಲಿ ನಾವು ಬದುಕಿದ್ದೇವಲ್ಲಾ, ಅದು ನಮಗೆ ಗೊತ್ತಿರುವ ವಿಚಾರ, ಅಂದಮಾತ್ರಕ್ಕೆ ಹಿಂದೊಂದು ಜನ್ಮ ವಿತ್ತು , ಮುಂದೊಂದು ಜನ್ಮವಿರುತ್ತದೆಂಬ ಬಗ್ಗೆ ನನ್ನದೇನೂ ಭಿನ್ನಮತ ಇದೆಯೆಂದೇನೂ ಅಲ್ಲ. ಆದರೆ ನಾವು ಹುಟ್ಟಿದ್ದಾಗಿದೆ. ಒಂದು ದಿನ ಸಾಯುವುದೂ ನಿಶ್ಚಿತ. ಆದರೆ ನಾಳೆಯೇ ಸತ್ತು ಬಿಡುತ್ತೇನೆಂದು ಯಾಕೆ ಯೋಚಿಸಬೇಕು? ನಾನು ನೂರು ವರ್ಷ ಬದುಕ್ತೇನೆಂದು ಯೋಚಿಸೋಣ.ಸಾವು ನಮಗೆ ಗೊತ್ತಿಲ್ಲದಂತೆ ದಿಢೀರ್ ಬಂದರೆ ಬರಲಿ. ಸಾವಿಗೇಕೆ ಹೆದರ ಬೇಕು? ಆದರೆ ಬದುಕಿರಲು ಹೆದರುವುದು ಬೇಡ ಬದಲಿಗೆ ಆಸಕ್ತಿ ಇರಬೇಕು. ಜೀವನವನ್ನು ಆನಂದವಾಗಿ ಅನುಭವಿಸುತ್ತಾ, ಸುತ್ತಲ ಜನರೊಡನೆ ಸಂತೋಷವಾಗಿರುತ್ತಾ, ಸ್ವರ್ಗವನ್ನು ಇಲ್ಲೇ ಕಾಣಬೇಕೆಂಬುದು ನನ್ನಾಸೆ.ಏನಂತೀರಾ?

    ReplyDelete
  2. ಯಥಾ ದಾರುಶ್ಚ ದಾರುಶ್ಚ ಸಮಾಯೇತೇ ಮಹೋದಧೌ|
    ಸಮೇತ್ಯ ರು ವಿಯಾಯೇತೇ ತಾದೃಶೀ ಜೀವತಾಂ ಗತಿಃ||
    (ಮಹಾಭಾರತ)
    ದೊಡ್ಡ ನದಿಯೊಂದರಲ್ಲಿ (ಜೀವನದಿ) ಮರದ ದಿಮ್ಮಿಗಳು ತೇಲುತ್ತಾ ಹೋಗುತ್ತಿವೆ. ಯಾವುದೋ ಎರಡು ಬಳಿ ಬರುತ್ತವೆ, ಸ್ವಲ್ಪ ಕಾಲ ಜೊತೆಯಾಗಿ ಸಾಗಿ ಮತ್ತೆ ಬೇರೆಯಾಗುತ್ತವೆ. ಇನ್ಯಾವುದೋ ದಿಮ್ಮಿಯ ಜೊತೆ ಸ್ವಲ್ಪ ಕಾಲ ಪಯಣ, ಮತ್ತೆ ಬೇರ್ಪಡುವಿಕೆ, ಮುಂದೆ ಸಾಗುವಿಕೆ. ಸೇರ್ಪಡೆ, ಬೇರ್ಪಡೆ ಇದೇ ಜೀವನದಿಯಲ್ಲಿನ ಜೀವಿಗಳ ಪಯಣದ ರೀತಿ!
    ಶ್ರೀಧರ್ ಜೀ ನಿಮ್ಮ ಜೀವನ್ಮುಖೀ ಚಿಂತನೆ ಆದರಣೀಯ.
    ಸಜ್ಜನರ ವಿಚಾರದಲ್ಲಿ ಯಾವುದೇ ಸಮಸ್ಯೆಯಿಲ್ಲ.
    ದುಷ್ಟ ಸಂಸ್ಕಾರಗಳು ಪ್ರಧಾನವಾಗಿರುವ ನಮ್ಮ ಸಹಜೀವಿಗಳ ಮನಃಪರಿವರ್ತನೆಗೆ ದುಡಿಯುವಾಗಲೇ ಸ್ವಲ್ಪ ಆಳವಾದ ಜ್ಞಾನ ತಿಳಿವಳಿಕೆಗಳ, ಆಚರಣೆ, ಅನುಭವಗಳ ಅಗತ್ಯ ಬೀಳುವುದು. ಸತ್ಯದ ಅನ್ವೇಷಣೆ ನಮ್ಮ ಬಲವನ್ನು ಹೆಚ್ಚಿಸುತ್ತದೆ.
    ಸ್ಮಶಾನದಲ್ಲಿದ್ದಾಗಿನ ವೈರಾಗ್ಯ, ಸ್ಮಶಾನದಿಂದಾಚೆಗೆ ಬಂದಮೇಲೂ ಉಳಿದರೆ ಚೆನ್ನಲ್ಲವೇ? ಶವದಹನ, ಅಂತ್ಯೇಷ್ಟಿ ಸಂಸ್ಕಾರದಲ್ಲಿಯ ಮಂತ್ರಗಳು ಈ ನಿಟ್ಟಿನಲ್ಲಿ ತೀವ್ರ ಪರಿಣಾಮವನ್ನು ಬೀರುತ್ತವೆ. ವೇದೋಕ್ತ ರೀತ್ಯ, ಅರ್ಥಸಹಿತ ನಡೆಸಬೇಕು.
    -ಸುಧಾಕರ ಶರ್ಮಾ

    ReplyDelete
  3. ವೇದಗಳಲ್ಲಿ ಈಗ ಬ್ರಾಹ್ಮಣರು ನಡೆಸುವ ಮರಣೋತ್ತರ ಕರ್ಮಾಂಗಗಳ ವಿವರಣೆ ಇದೆಯೇ??? ಇರಲಿಕ್ಕಿಲ್ಲ.

    ReplyDelete
  4. ಅತಿಥಿಗಳು
    ಜೀವಿಗಳಿವರು ಎಲ್ಲಿಂದ ಬಂದವರು
    ಬಂದದ್ದಾಯಿತು ಮತ್ತೆಲ್ಲಿ ಹೋಗುವರು |
    ಎಲ್ಲಿಂದ ಬಂದಿಹರಲ್ಲಿಗೇ ಹೋಗುವರು
    ಕೆಲದಿನ ನಮ್ಮೊಡನಿರುವರು ಮೂಢ ||

    ReplyDelete
  5. ಇರಲಿಕ್ಕಿಲ್ಲ ಎಂಬ ನಿಮ್ಮ ನಿರೀಕ್ಷೆ ಸರಿ!
    ಮರಣವಾಗಿದೆ.
    ಇತ್ತ ಮೃತ ಶರೀರ. ಅದನ್ನು ವಾಯುಮಾಲಿನ್ಯವಾಗದಂತೆ ಸುಟ್ಟು ಬೂದಿ ಮಾಡಿದರೆ ಅದರ ವಿಚಾರದಲ್ಲಿ ನಮ್ಮ ಕರ್ತವ್ಯ ಮುಗಿದಂತೆ. "ಭಸ್ಮಾಂತಂ ಶರೀರಮ್" (ವೇದ)
    ಅತ್ತ ಶರೀರವನ್ನು ತೊರೆದ ಜೀವಾತ್ಮ. ಅದು ಶರೀರದಲ್ಲಿದ್ದಾಗ, ಶರೀರದಲ್ಲಿದ್ದಾಗ ಮಾಡಿದ ಕರ್ಮಗಳನುಸಾರ ಪುನರ್ಜನ್ಮವನ್ನೋ, ಮೋಕ್ಷವನ್ನೋ ಪಡೆಯುತ್ತದೆ.
    ಅದರ ಕರ್ಮಗಳಿಗೆ ಅದೇ Responsible. ಈ ವಿಚಾರದಲ್ಲಿ ಯಾರೂ ಮೂಗು ಹಾಯಿಸಲು ಅವಕಾಶವೇ ಇಲ್ಲ. ಪಕ್ತಾರಂ ಪಕ್ವಃ ಪುನರಾವಿಶಾತಿ (ವೇದ) - ನಾವು ಮಾಡಿದ ಕರ್ಮಗಳ ಅಡುಗೆಯು ನಮ್ಮನ್ನು ಹುಡುಕಿಕೊಂಡು ಬರುತ್ತದೆ. ತಿನ್ನುವವರೆಗೂ ಬಿಡುವುದಿಲ್ಲ.
    ನಮ್ಮ ಪುಣ್ಯವನ್ನು ಬೇರೊಬ್ಬರ Accountಗೆ ಬದಲಾಯಿಸುವುದಾಗಲಿ, ಇಲ್ಲಿ ಚಪ್ಪಲಿ ದಾನ ಮಾಡಿದರೆ ಅವರಿಗೆ ಅಲ್ಲಿ (ಎಲ್ಲೋ ಕಂಡವರಿಲ್ಲ, ಕೇಳಿದವರಿಲ್ಲ, ಹೋದವರು ಒಂದು SMS ಕಳಿಸಿಲ್ಲ!!!) ಚಪ್ಪಲಿ ಸಿಗುತ್ತದೆ ಎಂಬುದೆಲ್ಲಾ ಪುರಾಣಗಳಲ್ಲಿ ಬಂದಿರುವ ಕಾಗಕ್ಕ ಗುಬ್ಬಕ್ಕನ ಕಥೆಗಳು. ಇಂತಹ ಪಿಂಡಪ್ರದಾನಗಳಾಗಲೀ, ತಿಥಿ-ಮತಿಗಳಾಗಲಿ ವೇದಗಳಲ್ಲಿ ಎಲ್ಲಿಯೂ ಹೇಳಲ್ಪಟ್ಟಿಲ್ಲ. ಇಂದು ಇವರು ವೈದಿಕವೆಂದು ಮಾಡುವ ಅಷ್ಟೂ 100% ಅವೈದಿಕ!!
    ಶ್ರಾದ್ಧ, ತರ್ಪಣ, ಪಿತೃಯಜ್ಞ ಎಂದೆಲ್ಲಾ ವೇದಗಳು ಹೇಳಿರುವುದು ಬದುಕಿರುವ ತಂದೆ-ತಾಯಿಗಳು, ಹಿರಿಯರ ವಿಚಾರದಲ್ಲಿ. ಶ್ರದ್ಧೆಯಿಂದ ಮಾಡಿದ ಸೇವೆಯೇ ಶ್ರಾದ್ಧ, ಬದುಕಿರುವವರಿಗೆ. ತೃಪ್ತಿಯಾಗುವಂತೆ ಮಾಡಿದ್ದೇ ತರ್ಪಣ, ಬದುಕಿರುವವರಿಗೆ.
    ಪಿತೃಗಳ ಸೇವೆಯನ್ನು ಅತ್ಯುತ್ತಮವಾಗಿ ಮಾಡುವುದೇ ಪಿತೃಯಜ್ಞ, ಬದುಕಿರುವವರಿಗೆ!!

    ReplyDelete
  6. 'ಸಾವಿಗೆ ಭಯ' ಬೇಡ, ಸಾವಿನ ಪ್ರಜ್ಞೆ ಇದ್ದರೆ ಚೆನ್ನ ಎನ್ನುವುದು ನನ್ನ ಅಭಿಪ್ರಾಯ. ಶ್ರೀ ಶರ್ಮಾಜಿಯವರು ಹೇಳಿದಂತೆ:"ಸ್ಮಶಾನದಲ್ಲಿದ್ದಾಗಿನ ವೈರಾಗ್ಯ, ಸ್ಮಶಾನದಿಂದಾಚೆಗೆ ಬಂದಮೇಲೂ ಉಳಿದರೆ ಚೆನ್ನಲ್ಲವೇ?". ಶವದಹನವಾದ ಕೂಡಲೇ ಅತ್ಯಲ್ಪ ಕಾಲದಲ್ಲೇ ನಾವೆಲ್ಲವನ್ನೂ (ಸಾವಿನ ಸತ್ಯವನ್ನೂ) ಮರೆತು ಎಂದಿನಂತೆ ಜೀವನ ಮುಂದುವರೆಸಿಬಿಡುತ್ತೇವೆ; ಹಾಗೆ ಮುಂದುವರೆಸುವ ಜೀವನಕ್ರಮದಲ್ಲಿ ಈ ಸಾವಿನ ಪ್ರಜ್ಞೆ ಬಹುಶ: ನಮ್ಮ ಕಡಿವಾಣವಿಲ್ಲದ ಆಸೆ, ಆಕಾಂಕ್ಷೆಗಳಿಗೆ, ಆಚಾರ-ವಿಚಾರಗಳಿಗೆ ಮತ್ತೆಲ್ಲ ಚಟುವಟಿಕೆಗಳಿಗೆ ಅರ್ಥಪೂರ್ಣ ದಿಸೆ ತೋರಿಸಬಹುದು ಎಂಬುದು ನನ್ನಂಬೋಣ. ಚಾಣಕ್ಕ್ಯ ನೀತಿಯಲ್ಲಿನ ಸುಭಾಷಿತ ಹೀಗಿದೆ: "ದೀಪೋ ಭಕ್ಷಯತೇ ಧ್ವಾಂತಂ ಕಜ್ಜಲಂ ಚ ಪ್ರಸೂಯತೇ | ಯದನ್ನಂ ಭಕ್ಷಯೇನ್ನಿತ್ಯಂ ಜಾಯತೇ ಕರ್ಮತಾದೃಶಮ್ || ಅಂದರೆ: ಮಾನವನು ತಾನು ಅಜರಾಮರನೆಂದು ಭಾವಿಸಿ ವಿಪುಲವಾಗಿ ವಿದ್ಯೆ ಕಲಿಯಬೇಕು, ಬಹುವಾಗಿ ಹಣ ಗಳಿಸಬೇಕು. ಆದರೆ ಸಾವು ಬಂದು ಜುಟ್ಟು ಹಿಡಿದಿದೆಯೋ ಎಂಬಂತಹ ಕಾತರತೆಯಿಂದ ಧರ್ಮವನ್ನು ಆಚರಿಸಬೇಕು. ಹಾಗಾಗಿ ಜೀವನ್ಮುಖಿಯಾಗಿರಬೇಕೆಂಬ ಬಗ್ಗೆ ನನ್ನೆರಡು ಮಾತಿಲ್ಲ.

    ಆ ಹೊತ್ತಿನಲ್ಲಿ ಮೂಡಿದ ನನ್ನ ಭಾವನೆಗಳು ಈ ಮೇಲಿನ ಹಿನ್ನೆಲೆಯಲ್ಲಿಯೇ. ಶ್ರಾದ್ಧಾದಿಗಳ ಬಗ್ಗೆ ಅನುಭವಗಳು, ನಂಬಿಕೆಗಳು ವೈಯುಕ್ತಿಕ. ಆ ಬಗ್ಗೆ ನನ್ನ ಜ್ಞಾನ ಅಲ್ಪ.

    ಸ್ಪಂದಿಸಿದ ಎಲ್ಲರಿಗೂ ಧನ್ಯವಾದಗಳು ಮತ್ತು ವಿಶೇಷವಾಗಿ ಶ್ರೀ ಶರ್ಮಾಜಿಯವರಿಗೆ ನನ್ನ ನ||ಗಳು.

    ReplyDelete