Pages

Friday, May 27, 2011

ವೇದೋಕ್ತ ಜೀವನ ಪಥ - ಮಾನವಧರ್ಮ - 4

ಋಗ್ವೇದದ ಈ ಮಂತ್ರವನ್ನು ಗಮನಿಸಿರಿ:


ಪ್ರತ್ಯಾನ್ಮಾನಾದಧ್ಯಾ ಯೇ ಸಮಸ್ವರನ್ಶ್ಲೋಕಯಂತ್ರಾಸೋ ರಭಸಸ್ಯ ಮಂತವಃ |
ಅಪಾನಕ್ಷಾಸೋ ಬಧಿರಾ ಅಹಾಸತ ಋತಸ್ಯ ಪಂಥಾಂ ನ ತರಂತಿ ದುಷ್ಕೃತಃ ||
(ಋಕ್. ೯.೭೩.೬.)


     [ಯೇ] ಯಾರು [ಪ್ರತ್ಯಾತ್ ಮಾನಾತ್ ಅಧಿ] ಶಾಶ್ವತ ಪ್ರಮಾಣವಾದ ವೇದಜ್ಞಾನದ ಆಶ್ರಯದಲ್ಲಿ [ಆ ಸಂ ಅಸ್ವರನ್] ಎಲ್ಲೆಡೆಯಿಂದಲೂ ಒಳಿತಾಗಿ ಜ್ಞಾನವನ್ನು ಪಡೆದುಕೊಳ್ಳುತ್ತಾರೋ ಅವರು [ಶ್ಲೋಕ ಯಂತ್ರಾಸಃ] ವೇದಮಂತ್ರಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವವರೂ [ರಭಸಸ್ಯ ಮಂತವಃ] ಸರ್ವಶಕ್ತಿಮಾನ್ ಪ್ರಭುವನ್ನು ತಿಳಿದವರೂ ಆಗುತ್ತಾರೆ. [ಆಪಾನಕ್ಷಾಸಃ] ಜ್ಞಾನದೃಷ್ಟಿಯಿಂದ ಕುರುಡರೂ [ಬಧಿರಾಃ] ಕಿವುಡರೂ ಆದವರು [ಋತಸ್ಯ ಪಂಥಾಮ್] ಋತದ, ಈಶ್ವರೀಯ ವಿಧಾನದ, ಧರ್ಮದ ಮಾರ್ಗವನ್ನು [ಆಹಾಸತ] ತ್ಯಜಿಸುತ್ತಾರೆ. [ದುಷ್ಕೃತಃ] ದುಷ್ಕರ್ಮನಿರತರು [ನ ತರಮತಿ] ಪಾರುಗಾಣುವುದಿಲ್ಲ.

     ವೇದಗಳೇ ಶಾಶ್ವತವಾದ, ಸಾರ್ವಕಾಲಿಕವೂ, ಸಾರ್ವಭೌಮವೂ ಆದ ಸತ್ಯಶಾಶ್ತ್ರಗಳು. ಅದು ಬೋಧಿಸುವ ಮಾರ್ಗ ಋತದ ಮಾರ್ಗ, ಧರ್ಮದ ಮಾರ್ಗ. ವೇದಗಳ ನಿರ್ಮಲಜ್ಞಾನ ಪಡೆದು, ಜ್ಞಾನದಾಯಕ ಮಂತ್ರಗಳ ಮೇಲೆ ಅಧಿಕಾರ ಪಡೆದು, ಪ್ರಭು ಸಾಕ್ಷಾತ್ಕಾರವನ್ನೂ ಮಾಡಿಕೊಳ್ಳಬಹುದು. ಆದರೆ, ಜ್ಞಾನದ ಬೆಳಕನ್ನು ನೋಡಲಾರದ, ಜ್ಞಾನದ ಉಪದೇಶವನ್ನು ಕೇಳಲಾರದ, ಮೂಢಜನರು ಋತದ ಮಾರ್ಗವನ್ನು, ಧರ್ಮಪಥವನ್ನು ಬಿಟ್ಟುಬಿಡುತ್ತಾರೆ. ಅ0ತಹ ದುಷ್ಕರ್ಮಿಗಳು ಜೀವನದ ಪಥವನ್ನು ಎಂದಿಗೂ ಕಾಣಲಾರರು. ನಾವು ಈ ಅಧ್ಯಾಯದ ಪ್ರಾರಂಭದಲ್ಲಿಯೇ ಹೇಳಿರುವಂತೆ, ಧರ್ಮದ ಮಾರ್ಗ ಕೇವಲ ಇಹಕ್ಕೆ ಸಂಬಂಧಿಸಿದುದಲ್ಲ, ಕೇವಲ ಪರಕ್ಕೆ ಸಂಬಂಧಿಸಿದುದೂ ಅಲ್ಲ, ಜೀವನಕ್ಕೆ ಎರಡು ಮುಖಗಳಿವೆ, ಒಂದು ಚೇತನಾಂಗ, ಮತ್ತೊಂದು ಜಡಾಂಗ. ಚೇತನಾಂಗಕ್ಕೆ ಅಧ್ಯಾತ್ಮಿಕ ಪೋಷಣೆ ಬೇಕು, ಜಡಾಂಗಕ್ಕೆ ಭೌತಿಕ ಪೋಷಣೆ ಬೇಕು. ಇದರರ್ಥ ಆತ್ಮೋದ್ಧಾರಕ್ಕಾಗಿ ಸಾಧನೆಯನ್ನೂ, ದೇಹಪೋಷಣೆಗಾಗಿ ಲೌಕಿಕ ಕರ್ಮಗಳನ್ನೂ ನಡೆಯಿಸಿಕೊಂಡು ಹೋಗುವಂತಹ ಜೀವನಕ್ರಮವನ್ನು ಅವಲಂಬಿಸಬೇಕು. ಸಾಂಸಾರಿಕಾಭ್ಯುದಯ, ಪಾರಮಾರ್ಥಿಕೋತ್ಕರ್ಷ - ಎರಡನ್ನೂ ಸಾಧಿಸಿಕೊಡುವ ಜೀವನಪಥವೇ ಧರ್ಮ.
****************************************

2 comments:

  1. [ಸಾಂಸಾರಿಕಾಭ್ಯುದಯ, ಪಾರಮಾರ್ಥಿಕೋತ್ಕರ್ಷ - ಎರಡನ್ನೂ ಸಾಧಿಸಿಕೊಡುವ ಜೀವನಪಥವೇ ಧರ್ಮ]
    ಮನುಷ್ಯನಿಗೆ ಇನ್ನೇನು ತಾನೇ ಬೇಕು? ಅದ್ಭುತವಾದ ಚಿಂತನೆಗಳು.ಮುಂದುವರೆಯಲಿ ವೇದಚಿಂತನೆ.

    ReplyDelete
  2. :-)
    -ಕವೆಂ.ನಾಗರಾಜ್.

    ReplyDelete